Categories
robbery ಅಪಘಾತ ಅಪರಾಧ ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಯಾವ ತಾಲೂಕಲ್ಲಿ ಏನೇನ್ ಆಯ್ತು?

ಕರಾವಳಿ ಯಾವ ತಾಲೂಕಲ್ಲಿ ಏನೇನ್ ಆಯ್ತು?

* ಕಾಪು: ಹೊಟೇಲೊಂದರ ಬಳಿ ಬೈಕ್ ಗೆ ಬಸ್ ಡಿಕ್ಕಿ
* ಬೈಂದೂರು: ಗ್ರಾಹಕನ ಹೆಸರಿನಲ್ಲಿ ಚಿನ್ನಾಭರಣ ಕಳುವು
* ಮಂಗಳೂರು: ಬಾಲ ಕಾರ್ಮಿಕರ ರಕ್ಷಣೆ
* ಪುತ್ತೂರು: ದನ ಮಾರಾಟ ಮಾಡಿರುವ ವ್ಯಕ್ತಿ ವಿರುದ್ಧ ಕೇಸ್!
* ಬೆಳ್ತಂಗಡಿ: ಜೀಪ್ ಮತ್ತು ಸ್ಕೂಟರ್ ನಡುವೆ ಅಪಘಾತ
* ಬ್ರಹ್ಮಾವರ: ಕರಿಮಣಿ ಸರ ಕದ್ದು ಕಳ್ಳ ಪರಾರಿ
* ಸುಳ್ಯ: ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾಪು: ಶಿಬಿನ್ ಎನ್ನುವ ವ್ಯಕ್ತಿಯು ಬೈಕ್ ನಲ್ಲಿ ಪಡುಬಿದ್ರಿಯತ್ತ ಸಾಗಲು ಆರಾಫಾ ಹೊಟೇಲ್ ಬಳಿ ಬಂದ ಸಂದರ್ಭದಲ್ಲಿ, ಬಸ್ ಒಂದು ಢಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರದಂದು ನಡೆದಿದೆ. ಶಿಬಿನ್ ಗಾಯಗೊಂಡಿದ್ದು, ಆತನನ್ನು ಸೂರತ್ಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಪ್ರವೇಶಿಸುತ್ತಿರುವ ಸಮಯದಲ್ಲಿ ಈ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬೈಂದೂರು: ಗ್ರಾಹಕನ ಹೆಸರಿನಲ್ಲಿ ಚಿನ್ನಾಭರಣ ಕಳುವು

ಬೈಂದೂರು: ಪುರುಷೋತ್ತಮ ಎಂಬ ಹೆಸರಿನ ವ್ಯಕ್ತಿಯು, ಸೋಮವಾರದಂದು ಚಿನ್ನಾಭರಣವನ್ನು ಖರೀದಿಸುವ ನೆಪದಲ್ಲಿ ಆಭರಣ ಅಂಗಡಿಯವೊಂದಕ್ಕೆ ಬಂದು, ಚಿನ್ನಾಭರಣ ಕಳುವು ಮಾಡಿರುವ ಘಟನೆ ಉಪ್ಪುಂದ ಗ್ರಾಮದ ಧನಲಕ್ಷ್ಮೀ ಜ್ಯುವೆಲರಿ ಅಂಗಡಿಯಲ್ಲಿ ನಡೆದಿದೆ. ತಾನು ದೊಡ್ಡ ಮೊತ್ತದ ಆಭರಣಗಳನ್ನು ಖರೀದಿಸುವುದಾಗಿ ಮಾಲೀಕರಿಗೆ ನಂಬಿಸಿ, ಎರಡು ಚಿನ್ನದ ಬಳೆಗಳನ್ನು ಮತ್ತು ಒಂದು ನೆಕ್ಲೇಸ್ ಅನ್ನು ತೆಗೆದಿರಿಸಿ, ಮನೆಯಿಂದ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದಾನೆ. ಸಂಜೆ ಮರಳಿ ಬಂದ ಪುರುಷೋತ್ತಮ 5,00,000 ಮೌಲ್ಯದ 50 ಗ್ರಾಂ ಚಿನ್ನಾಭರಣಕ್ಕೆ ಬಿಲ್ ಮಾಡಿಸಿ, ಕಾರಿನಲ್ಲಿ ಇಟ್ಟಿರುವ ಹಣವನ್ನು ತರುವುದಾಗಿ ಹೇಳಿ, ಆಭರಣದ ಚೀಲದ ಸಮೇತ ಹೊರಬಂದು, ಕಾರಿನಲ್ಲಿ ಪರಾರಿಯಾಗಿದ್ದಾನೆ. ಮಾಲೀಕರು ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕಾರ್ಯಪ್ರವೃತ್ತರದ ಬೈಂದೂರು, ಗಂಗೊಳ್ಳಿ ಮತ್ತು ಕುಂದಾಪುರದ ಪೊಲೀಸರು ಸಿಸಿ ಕ್ಯಾಮೆರಾ ಮಾಹಿತಿಯ ಆಧಾರದ ಮೇಲೆ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ನಿರತರಾದರು. ಬಳಿಕ ಬೈಂದೂರಿನ ಪೊಲೀಸರು ಪುರುಷೋತ್ತಮನನ್ನು ಕುಂದಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಅರಾಟೆ ಸೇತುವೆಯ ಬಳಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಪುರುಷೋತ್ತಮನನ್ನು ವಿಚಾರಣೆ ನಡೆಸಿದಾಗ, ಆತ ಮೂಲತಃ ಬೆಂಗಳೂರಿನವನು, ಪತ್ನಿ ಬೀಜೂರು ಗ್ರಾಮದವರು ಎಂದು ತಿಳಿದುಬಂದಿದ್ದು, ಪುರುಷೋತ್ತಮ ಕೊಲ್ಲೂರು ಸೇರಿದಂತೆ ಮೊದಲಾದ ಕಡೆಗಳಲ್ಲಿ ಉದ್ಯಮವನ್ನು ನಡೆಸುತ್ತಿದ್ದು, ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಕೃತ್ಯವನ್ನು ಎಸಗಿರುವುದಾಗಿ ತಿಳಿಸಿದ್ದಾನೆ. ಈ ಸಂದರ್ಭದಲ್ಲಿ ಆತ ಕಳುವು ಮಾಡಿದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು ಎನ್ನುವ ಸಂಗತಿ ತಿಳಿದುಬಂದಿದೆ.

* ಮಂಗಳೂರು: ಬಾಲ ಕಾರ್ಮಿಕರ ರಕ್ಷಣೆ

ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿನ ಫಿಶ್ ಕಟ್ಟಿಂಗ್ ಘಟಕದ ಮೇಲೆ ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹತ್ತು ಜನ ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ, ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದ್ದು, ಬಳಿಕ ಕಾವೂರಿನ ಶಾಂತಿನಗರದಲ್ಲಿರುವ ಬಾಲಕಿಯರ ಬಾಲಮಂದಿರದಲ್ಲಿ ಪುನರ್ವಸತಿಯ ವ್ಯವಸ್ಥೆಯನ್ನು ಮಾಡಿಕೊಡಲಾಯಿತು. ಕಾರ್ಯಾಚರಣೆಯ ಸಮಯದಲ್ಲಿ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ್, ಕಾರ್ಮಿಕ ಅಧಿಕಾರಿ ಕುಮಾರ್ ಬಿ. ಆರ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ರಾಜಶೇಖರ ರೆಡ್ಡಿ, ಯೋಜನಾ ನಿರ್ದೇಶಕರಾದ ಶ್ರೀನಿವಾಸ್ ನಾಯಕ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿಗಳು ಕೈಜೋಡಿಸಿದ್ದರು ಎನ್ನಲಾಗಿದೆ.‌

* ಪುತ್ತೂರು: ದನ ಮಾರಾಟ ಮಾಡಿರುವ ವ್ಯಕ್ತಿ ವಿರುದ್ಧ ಕೇಸ್!

ಪುತ್ತೂರು: ದನವನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪುತ್ತೂರು ನಗರದ ಪೊಲೀಸ್ ಠಾಣೆಯ ಎಸ್ ಐ ಆಂಜನೇಯ ರೆಡ್ಡಿ ಮತ್ತು ಅವರ ತಂಡ ಸಂಪ್ಯ ಕಡೆಯಿಂದ ಕಬಕ ಕಡೆಗೆ ಪಿಕಪ್ ವಾಹನವನ್ನು ಅಡ್ಡಗಟ್ಟಿ, ಪರಿಶೀಲನೆ ನಡೆಸಿದಾಗ ವಾಹನದೊಳಗೆ ದನವನ್ನು ಕಟ್ಟಿ ಹಾಕಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪರವಾನಿಗೆ ಕೂಡ ಇರಲಿಲ್ಲ. ದನವನ್ನು ತಿಂಗಳಾಡಿ ಗಟ್ಟಿಮನೆ ಪ್ರದೇಶದ ಪೂವಪ್ಪ ಎನ್ನುವ ವ್ಯಕ್ತಿಯಿಂದ ಹದಿನೇಳು ಸಾವಿರ ರೂಪಾಯಿಗೆ ಖರೀದಿಸಿ, ಕೆದಿಲದ ಮನೆಯೊಂದರಲ್ಲಿ ಮಾಂಸ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು, ಪಿಕಪ್ ಚಾಲಕ ಮಾಹಿತಿ ನೀಡಿರುವ ಸಂಗತಿ ತಿಳಿದುಬಂದಿದೆ.‌ ದನವನ್ನು ಪೊಲೀಸರು ರಕ್ಷಿಸಿದ್ದು, ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಅಬ್ದುಲ್ ಕರೀಂ ಕೆದಿಲ, ಅಬ್ದುಲ್ ಜಮೀರ್ ಕೆದಿಲ ಮತ್ತು ಅವರಿಗೆ ದನವನ್ನು ಮಾರಾಟ ಮಾಡಿರುವ ಪೂವಪ್ಪನ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬೆಳ್ತಂಗಡಿ: ಜೀಪ್ ಮತ್ತು ಸ್ಕೂಟರ್ ನಡುವೆ ಅಪಘಾತ

ಬೆಳ್ತಂಗಡಿ: ಹರ್ಷಿತ್ ಎನ್ನುವ ವ್ಯಕ್ತಿಯು ಬಿ.ಸಿ.‌ರಸ್ತೆಯಿಂದ ಪುಂಜಾಲುಕಟ್ಟೆ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಬೈಕ್ ನಿಯಂತ್ರಣ ತಪ್ಪಿ ಜೀಪ್ ಗೆ ಢಿಕ್ಕಿ ಹೊಡೆದಿರುವ ಘಟನೆ ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಪಿಲಾತಬೆಟ್ಟು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅವರು, ಇಲಾಖೆಯ ಬೊಲೆರೋ ಜೀಪ್ ನ ಚಾಲಕನೊಂದಿಗೆ ಮಂಗಳೂರು ಕಡೆಗೆ ಹೋಗುತ್ತಿದ್ದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಹರ್ಷಿತ್ ಜೀಪ್ ಗೆ ಢಿಕ್ಕಿ ಹೊಡೆದು, ಬೈಕ್ ಸಹಿತವಾಗಿ ರಸ್ತೆಗೆ ಬಿದ್ದಿರುವ ಪರಿಣಾಮವಾಗಿ ತಲೆಗೆ ಪೆಟ್ಟು ಬಿದ್ದಿದ್ದು, ಅವರನ್ನು ಆ್ಯಂಬುಲೆನ್ಸ್ ಮೂಲಕ ತುಂಬೆಯ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕಳುಹಿಸಲಾಯಿತು ಎನ್ನುವ ಮಾಹಿತಿ ಲಭಿಸಿದೆ.

* ಬ್ರಹ್ಮಾವರ: ಕರಿಮಣಿ ಸರ ಕದ್ದು ಕಳ್ಳ ಪರಾರಿ

ಬ್ರಹ್ಮಾವರ: ರಮಾಬಾಯಿ ಎನ್ನುವ ಉಪ್ಪೂರು ಗ್ರಾಮದ ಮಹಿಳೆಯು ಕಳೆದೆರಡು ದಿನಗಳ ಹಿಂದೆ, ಸಾಮಗ್ರಿಗಳನ್ನು ಕೊಂಡು ಮನೆಗೆ ಹಿಂತಿರುಗುತ್ತಿದ್ದ ಸಮಯದಲ್ಲಿ, ಕರಿಮಣಿ ಕಳುವಾಗಿರುವ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ವ್ಯಕ್ತಿಗಳಲ್ಲಿ, ಹಿಂದೆ ಕುಳಿತಿದ್ದ ವ್ಯಕ್ತಿಯು ರಮಾಬಾಯಿಯ ಕುತ್ತಿಗೆಯಲ್ಲಿದ್ದ ಸುಮಾರು 4.5 ಪವನ್ ತೂಕದ ಕರಿಮಣಿ ಸರವನ್ನು ಎಳೆದುಕೊಂಡಿದ್ದಾನೆ. ಬಳಿಕ ಇನ್ನೊಬ್ಬ ವ್ಯಕ್ತಿಯು ಕೂಡಲೇ ಬೈಕ್ ಅನ್ನು ವೇಗವಾಗಿ ಓಡಿಸಿಕೊಂಡು ಹೋಗುವ ಮೂಲಕ ಇಬ್ಬರು ಪರಾರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಮಾಬಾಯಿಯವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಸುಳ್ಯ: ನೇಣು ಬಿಗಿದುಕೊಂಡು ವೃದ್ಧ ಆತ್ಮಹತ್ಯೆ

ಸುಳ್ಯ: ವೃದ್ಧ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ದೇವಚಳ್ಳ ಗ್ರಾಮದ ದೇವ ಎನ್ನುವಲ್ಲಿ ನಡೆದಿದೆ. ಮೃತ ವೃದ್ಧ ಬಾಬು ಆಚಳ್ಳಿ ಎನ್ನುವವರಾಗಿದ್ದು, ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.‌ ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆಯನ್ನು ನಡೆಸಿದ್ದಾರೆ.

Categories
cibercrime ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಪುತ್ತೂರು ಮಂಗಳೂರು ಮಾಹಿತಿ ಸುದ್ದಿ ಮುಲ್ಕಿ ರಾಜಕೀಯ ವ್ಯವಹಾರ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಕುಂದಾಪುರ: ಲೈಂಗಿಕ ಕಿರುಕುಳ: ಆರೋಪಿಗೆ ಜಾಮೀನು
* ಪುತ್ತೂರು: ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಪ್ರಾಣಾಪಾಯದಿಂದ ಪಾರು!
* ಮಂಗಳೂರು: ಮಾದಕ ವಸ್ತು ಮಾರಾಟ ಪ್ರಕರಣವನ್ನು ಭೇದಿಸಿದ ಪೊಲೀಸರು
* ಬಂಟ್ವಾಳ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
* ಬೆಳ್ತಂಗಡಿ: ನಿವೇಶನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಕುಂದಾಪುರ: ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನವೀನ್ ಚಂದ್ರ ಶೆಟ್ಟಿ ವಿರುದ್ಧ, ಮನೆಗೆ ಬಂದ ಮಹಿಳೆಯೊಬ್ಬಳ ಜೊತೆಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿತ್ತು. ಈತನ ಬಂಧನಕ್ಕಾಗಿ ಪ್ರತಿಭಟನೆಗಳು ನಡೆದಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನವೀನ್ ಚಂದ್ರ ರವಿಕಿರಣ್ ಎನ್ನುವ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ, ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.

* ಪುತ್ತೂರು: ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಪ್ರಾಣಾಪಾಯದಿಂದ ಪಾರು

ಪುತ್ತೂರು: ಶೀನಪ್ಪಾ ಗೌಡ ಎನ್ನುವ ವ್ಯಕ್ತಿಯು ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡು, ಪ್ರಾಣಾಪಾಯದಿಂದ ಪಾರಾದ ವಿಸ್ಮಯಕಾರಿ ಘಟನೆ ಪುತ್ತೂರಿನಲ್ಲಿ ನಡೆದಿದೆ. ಭಾನುವಾರದಂದು ಶೀನಪ್ಪ ಗೌಡರು ತಮ್ಮ ತೋಟಕ್ಕೆ ತೆರಳಿ, ಬಾಳೆಗೊನೆಯನ್ನು ತೆಗೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ, ನಾಗರಹಾವೊಂದು ಅವರ ಎಡಗಾಲಿನ ಹಿಂಭಾಗಕ್ಕೆ ಕಚ್ಚಿದ ಪರಿಣಾಮವಾಗಿ, ಶೀನಪ್ಪ ಗೌಡರು ಅಸ್ವಸ್ಥರಾಗಿದ್ದರು. ತಕ್ಷಣ ಮನೆಯವರು ಅವರನ್ನು ಪ್ರಥಮ ಚಿಕಿತ್ಸೆಗಾಗಿ ನೆಲ್ಯಾಡಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ಸಂದರ್ಭದಲ್ಲಿ ಶೀನಪ್ಪ ಗೌಡರು ವಿಷದ ಪ್ರಮಾಣದ ಏರಿಕೆಯಿಂದಾಗಿ ಪ್ರಜ್ಞಾ ಶೂನ್ಯರಾಗಿದ್ದರು. ಆದರ್ಶ ಆಸ್ಪತ್ರೆಯ ವೈದ್ಯರು ಅವರಿಗೆ ತುರ್ತು ಚಿಕಿತ್ಸೆಯನ್ನು ನೀಡಿ, ಸುಮಾರು 90 ಎಎಸ್‌ವಿ ಇಂಜೆಕ್ಷನ್ ನೀಡಿದ ಬಳಿಕ, ಶೀನಪ್ಪ ಗೌಡರಿಗೆ ಪ್ರಜ್ಞೆ ಬಂದಿದ್ದು, ಆ ಮೂಲಕ ಚೇತರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.‌

* ಮಂಗಳೂರು: ಮಾದಕ ವಸ್ತು ಮಾರಾಟ ಪ್ರಕರಣವನ್ನು ಭೇದಿಸಿದ ಪೊಲೀಸರು

ಮಂಗಳೂರು: ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸುವಲ್ಲಿ, ಮಂಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಂಬೈನಿಂದ ಮಾದಕ ವಸ್ತುಗಳನ್ನು ಆಮದು ಮಾಡಿಕೊಂಡು, ಮಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಸುಳಿವು ದೊರೆತ ಹಿನ್ನೆಲೆಯಲ್ಲಿ, ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಆರು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿದಾಗ, ಈಗಾಗಲೇ ತಮ್ಮ ಬಳಿ ಇದ್ದ ಕೊಕೇನ್ ಎಂಬ ಮಾದಕ ವಸ್ತುವನ್ನು ಮೂರು ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದೆ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಸಿಸಿಬಿ ಘಟಕದ ಉಪನಿರೀಕ್ಷಕರು ಭಾನುವಾರದಂದು ಮಂಗಳೂರಿನ ಸೆಂಟ್ರಲ್ ವೇರ್ ಹೌಸ್ ಬಳಿ ಸ್ಕೂಟರ್ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ, ಜಗನ್ನಾಥ್, ರಾಜೇಶ್ ಬಂಗೇರ ಮತ್ತು ವರುಣ್ ಗಾಣಿಗ ಅವರ ಮೇಲೆ ದಾಳಿ ನಡೆಸಿದ್ದಾರೆ. ಮೂವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಅವರನ್ನು ಕೂಡ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರು ಮಂದಿ ಆರೋಪಿಗಳಿಂದ ಸುಮಾರು 22.30 ಲಕ್ಷ ರೂಪಾಯಿ ಮೌಲ್ಯದ 111.83ಗ್ರಾಂ ಎಂಡಿಎಂಎ ಮತ್ತು 1.90 ಲಕ್ಷ ಮೌಲ್ಯದ 21.03 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ 8(ಸಿ), 21 (ಸಿ), 22 (ಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

* ಬಂಟ್ವಾಳ: ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ: ಕಳೆದ 10 ವರ್ಷಗಳ ಹಿಂದೆ ಅಕ್ಟೋಬರ್ ಏಳರಂದು ವಿಟ್ಲ ಪೇಟೆಯಲ್ಲಿ, ಜಗದೀಶ್ ಕಾಮತ್ ಎನ್ನುವ ವ್ಯಕ್ತಿಯ ಮೇಲೆ ಮೆಣಸಿನ ಪುಡಿ ಎರಚಿ, ದರೋಡೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯಾದ ಅಶ್ರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೆ 2016ರ ಜನವರಿ 23ರಂದು ಕೊಳ್ನಾಡು ಗ್ರಾಮದ ಮದ್ಯದಂಗಡಿಯ ಬಾಗಿಲು ಮುರಿದು, ಕಳ್ಳತನ ಮಾಡಿದ ಮತ್ತೊಂದು ಪ್ರಕರಣ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ 82 ಮತ್ತು 83 ವಾರೆಂಟ್ ಅನ್ನು ಜಾರಿಗೊಳಿಸಲಾಗಿತ್ತು. ಆದರೂ ಅಶ್ರಫ್ ಪೊಲೀಸರ ಕೈಗೆ ಸಿಗದೇ ಕಳೆದ ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಆತನನ್ನು ಮಂಜೇಶ್ವರದ ಕೂಳೂರಿನಲ್ಲಿ ಭಾನುವಾರದಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ‌ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅಶ್ರಫ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ.

* ಬೆಳ್ತಂಗಡಿ: ನಿವೇಶನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ.

ಬೆಳ್ತಂಗಡಿ: ಪ್ರವೀಣ್ ಭಂಡಾರಿ ಮತ್ತು ಶಾಂತ ಎಂಬ ಇಬ್ಬರು ವ್ಯಕ್ತಿಗಳು, ನಿವೇಶನ ಪರವಾನಿಗೆ ಮಾಡಿಸಿ ಕೊಡುವುದಾಗಿ ನಂಬಿಸಿ, 45 ಲಕ್ಷ ರೂಪಾಯಿ ಲಪಟಾಯಿಸಿದ ಘಟನೆ ನಡೆದಿದೆ. ಪ್ರವೀಣ್ ಭಂಡಾರಿ ಶಾಂತ ಅವರಿಂದ ಒಟ್ಟು 4೦ ಸೈಂಟ್ಸ್ ಜಾಗವನ್ನು ಖರೀದಿಸಿ, ಅದನ್ನು ವಿಶ್ವನಾಥ ರೈ ಎನ್ನುವವರಿಗೆ ಮಾರಾಟ ಮಾಡುವುದಾಗಿ ತಿಳಿಸಿ, 45 ಲಕ್ಷ ರೂಪಾಯಿ ಪಡೆದುಕೊಂಡಿದ್ದು, ಮೂರು ತಿಂಗಳ ಒಳಗಾಗಿ ದಾಖಲೆಗಳನ್ನು ಸರಿಪಡಿಸಿ ಬರೆದುಕೊಡುವುದಾಗಿ ಕಳೆದ ವರ್ಷ ಕರಾರುಪತ್ರ ಮಾಡಿಕೊಂಡಿದ್ದರು. ಅತ್ತ ನಿವೇಶನವನ್ನು ಮಾರಾಟ ಮಾಡದೆ, ಈ ಕಡೆ ಹಣವನ್ನೂ ಹಿಂತಿರುಗಿಸದೆ ವಿಶ್ವನಾಥ ರೈ ಅವರನ್ನು ವಂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವನಾಥ ರೈ ಅವರು ಪ್ರವೀಣ್ ಭಂಡಾರಿ ಮತ್ತು ಶಾಂತ ವಿರುದ್ಧ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.‌ ದೂರಿನ ಆಧಾರದ ಮೇಲೆ ಶನಿವಾರದಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Categories
cibercrime ಅಪಘಾತ ಉಡುಪಿ ಕರಾವಳಿ ಕುಂದಾಪುರ ಚಿಕ್ಕಮಗಳೂರು ದಕ್ಷಿಣ ಕನ್ನಡ ಬೆಂಗಳೂರು ಮಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ನೀವೂ ಒದಲೇಬೇಕು.. ಈ ಟಾಪ್ 4 ನ್ಯೂಸ್

ನೀವೂ ಒದಲೇಬೇಕು.. ಈ ಟಾಪ್ 4 ನ್ಯೂಸ್

– ಇನ್ಫೋಸಿಸ್‌ ಮುಖ್ಯಸ್ಥೆ ಸುಧಾಮೂರ್ತಿಗೂ ಸೈಬ‌ರ್ ವಂಚನೆಗೆ ಯತ್ನ!
– ಸುಧಾಕರ್ ಪತ್ನಿಗೆ ಡಿಜಿಟಲ್‌ ಅರೆಸ್ಟ್ ಮಾಡಿ 14 ಲಕ್ಷ ಕಿತ್ತ ವಂಚಕರು!
– ಚಿತ್ರದುರ್ಗ: ಚಲಿಸುತ್ತಿದ್ದ ಕಾರಿಗೆ ಬೆಂಕಿ: ಕಾರು ಚಾಲಕ ಸಜೀವ ದಹನ
– ಮೊಟ್ಟೆ ಗಂಟಲಲ್ಲಿ ಸಿಲುಕಿ ವ್ಯಕ್ತಿ ದುರ್ಮರಣ!

NAMMUR EXPRESS NEWS
ಬೆಂಗಳೂರು: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಗೂ ಸೈಬ‌ರ್ ವಂಚಕರು ಕಾಟಕೊಟ್ಟಿದ್ದಾರೆ. ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಎಂದು ವಂಚನೆಗೆ ಯತ್ನಿಸಿರುವಂತ ಘಟನೆ ನಡೆದಿದೆ. ಈ ಮೂಲಕ ಇದೀಗ ಸೈಬರ್ ವಂಚನೆ ಎಲ್ಲರಿಗೂ ಆಗುತ್ತೆ ಎಂಬ ಆತಂಕ ಎದುರಾಗಿದೆ. ಇನ್ನೂ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಯವರ ವೈಯಕ್ತಿಕ ಮಾಹಿತಿ ಪಡೆಯಲು ಸೈಬರ್ ವಂಚಕ ಯತ್ನಿಸಿದ್ದಾನೆ. ಅಲ್ಲದೇ ನಿಮ್ಮ ನಂಬರ್ ಗೆ ಅಶ್ಲೀಲ ವೀಡಿಯೋ ಕಳಿಸಲಾಗ್ತಿದೆ. ಅದನ್ನು ನಿಲ್ಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ. ಹೀಗಾಗಿ ಸೈಬರ್ ವಂಚಕನ ವಿರುದ್ಧ ದೂರು ನೀಡಲಾಗಿದೆ.

ಸುಧಾಕರ್ ಪತ್ನಿಗೆ ಡಿಜಿಟಲ್‌ ಅರೆಸ್ಟ್ ಮಾಡಿ 14 ಲಕ್ಷ ಕಿತ್ತ ವಂಚಕರು!

ಸೈಬರ್ ಕಳ್ಳರು ಮಾಜಿ ಸಚಿವ ಹಾಲಿ ಸಂಸದ ಸುಧಾಕರ್ ಅವರ ಪತ್ನಿಗೆ ಮೋಸ ಮಾಡಿದ್ದಾರೆ. ಆಗಸ್ಟ್ 26ರಂದು ಡಾ. ಪ್ರೀತಿ ಸುಧಾಕರ್ ಬೆಳಿಗ್ಗೆ 9:30ಕ್ಕೆ ಕರೆ ಬಂದಿತ್ತು. ನಾವು ಮುಂಬೈ ಸೈಬರ್ ಡಿಪಾರ್ಟ್ಮೆಂಟ್ ನಿಂದ ಮಾತನಾಡ್ತಿರೋದು. ನಿಮ್ಮ ದಾಖಲೆಗಳನ್ನ ಸದ್ಭತ್ ಖಾನ್ ಎಂಬ ಅಪರಿಚಿತ ಬಳಸಿಕೊಂಡಿದ್ದಾನೆ. ನಿಮ್ಮ ಹೆಸ್ರಲ್ಲಿ ಕ್ರೆಡಿಡ್ ಕಾರ್ಡ್ ಮಾಡಿಸಿ ಇಲ್ಲಿಗಲ್ ಟ್ರಾನ್ಸಾಕ್ಷನ್ ನಡೆಸಿದ್ದಾನೆ ವಿದೇಶಕ್ಕೆ ಕಾನೂಬಾಗಿರ ಚಟುವಟಿಕೆ ನಡೆಸಲು ಜನರನ್ನ ಕಳುಹಿಸಿದ್ದಾನೆ. ಸದ್ಬತ್ ಖಾನ್ ನ ಅರೆಸ್ಟ್ ಮಾಡಲಾಗಿದ್ದು, ಆತನ ಹೇಳಿಕೆಯಲ್ಲಿ ನಿಮ್ಮ ಹೆಸರಿನ ದಾಖಲೆಯಿದೆ. ವಿಚಾರಣೆ ನಡೆಸೋದಕ್ಕೆ ವಿಡಿಯೋ ಕಾಲ್ ಮಾಡಿದ್ದೀವಿ. ನಿಮ್ಮ ದಾಖಲೆ ಹಾಗೂ ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ನಿಮ್ಮ ಅಕೌಂಟ್ ಇಲ್ಲಿಗಲ್ ಆಗಿದ್ದು ಹಣ ಹಾಕಿ ಎಂದು ಬೆದರಿಕೆ. ಪ್ರೀತಿ ಅವರಿಂದ 14 ಲಕ್ಷ ಹಣ ಹಾಕಿಸಿಕೊಂಡ ವಂಚಕರು RBI ರೂಲ್ಸ್ ಪರಿಶೀಲನೆ ಮಾಡಿ 45 ನಿಮಿಷದಲ್ಲಿ ವಾಪಸ್ ಹಾಕೋದಾಗಿ ಹೇಳಿಕೆ ನೀಡಿದ್ದಾರೆ. ಪ್ರೀತಿ ಸುಧಾಕರ್​​ರಿಂದ 14 ಲಕ್ಷ ಹಣವನ್ನ ಆರ್ ಟಿಜಿಎಸ್ ಮಾಡಿಸಿಕೊಂಡ ವಂಚಕರು. ಹಣ ಹಾಕಿದ ನಂತರ ವಂಚನೆಯಾರೋದು ಪತ್ತೆಯಾಗಿದೆ
ಪ್ರೀತಿ ಸುಧಾಕರ್ ನೀಡಿದ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ದಾಖಲಾಗಿದೆ.

ಚಲಿಸುತ್ತಿದ್ದ ಕಾರಿಗೆ ಬೆಂಕಿ: ಕಾರು ಚಾಲಕ ಸಜೀವ ದಹನ!

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಅರಳಿಕಟ್ಟೆ ಬಳಿ ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಚಾಲನೆ ಮಾಡುತ್ತಿದ್ದ ಚಾಲಕ ಸಜೀವ ದಹನವಾಗಿರುವ ಘಟನೆ ನಡೆದಿದೆ.
ಕಾರು ಚಾಲನೆ ಮಾಡುತ್ತಿದ್ದ ಸಿದ್ದೇಶ್ವರ್ ಮೃತಪಟ್ಟಿದ್ದಾನೆ. ಕಾರಿನಲ್ಲಿ ಊರಿಗೆ ವಾಪಾಸ್ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ಸಿದ್ದೇಶ್ವರ್ ಸಜೀವ ದಹನವಾಗಿದ್ದು, ಧಗ ಧಗ ಒತ್ತಿ ಉರಿಯುತ್ತಿದ್ದ ಬೆಂಕಿ ನಂದಿಸಲು ಸ್ಥಳಿಯರ ಹರಸಾಹಸ ಪಟ್ಟಿದ್ದಾರೆ. ಬೆಂಕಿ ನಂದಿಸುವಷ್ಟರಲ್ಲಿ ಅರಳಿಕಟ್ಟೆ ಗ್ರಾಮದ ಸಿದ್ದೇಶ್ವರ್ ಸುಟ್ಟು ಕರಕಲುವಾಗಿದ್ದಾನೆ. ಸ್ಥಳಕ್ಕೆ ಐಮಂಗಲ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮಕ್ಕಳ ಬಗ್ಗೆ ಹುಷಾರು.. ಸಮುದ್ರದ ಅಲೆಗೆ ಬಾಲಕ ಬಲಿ!

ಭಟ್ಕಳ: ಸಮುದ್ರದ ಭಾರೀ ಅಲೆಗಳ ಅಬ್ಬರಕ್ಕೆ ಎಂಟು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್‌ನಲ್ಲಿ ಸೋಮವಾರ ನಡೆದಿದೆ.
ಬೆಂಗಳೂರಿನ ಬಿದರಹಳ್ಳಿಯ ನಿವಾಸಿ ಕೆ. ರವಿ ರೆಡ್ಡಿ ಅವರ ಕಿರಿಯ ಮಗ ಕೃತಿಕ್ (8) ಮೃತಪಟ್ಟ ಬಾಲಕ. ರವಿ ರೆಡ್ಡಿ ಅವರು ತಮ್ಮ ಕುಟುಂಬ ಸಮೇತ ರವಿವಾರ ರಾತ್ರಿ ಮುರುಡೇಶ್ವರಕ್ಕೆ ಆಗಮಿಸಿ ತಂಗಿದ್ದರು. ಸೋಮವಾರ ಬೆಳಿಗ್ಗೆ ದೇವಸ್ಥಾನದ ಎಡಬದಿಯ ಕಡಲ ತೀರದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಅನಿರೀಕ್ಷಿತವಾಗಿ ದೊಡ್ಡ ಅಲೆಯೊಂದು ಅಪ್ಪಳಿಸಿದೆ ಎಂದು ತಿಳಿದು ಬಂದಿದೆ.
ಅಲೆಯ ಸೆಳೆತಕ್ಕೆ ಇಬ್ಬರು ಸಮುದ್ರಕ್ಕೆ ಕೊಚ್ಚಿಹೋಗಿದ್ದರು. ಅಲೆಯಲ್ಲಿ ಸಿಲುಕಿ ಅಸ್ವಸ್ಥಗೊಂಡ ವಸಂತಾ ಕೆ. (27) ಅವರು ಆ‌ರ್.ಎನ್‌.ಎಸ್. ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಕೃತಿಕ್ ಅವರು ಮುಳುಗಿ ಸಾವನ್ನಪ್ಪಿದ್ದಾರೆ.

ಮೊಟ್ಟೆ ಗಂಟಲಲ್ಲಿ ಸಿಲುಕಿ ವ್ಯಕ್ತಿ ದುರ್ಮರಣ!

ಕಾಸರಗೋಡು: ಮೊಟ್ಟೆ ಆಮಲೆಟ್ ತಿನ್ನುತ್ತಿದ್ದ ವೇಳೆ ಗಂಟಲಲ್ಲಿ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟ ದಾರುಣ ಘಟನೆ ಬದಿಯಡ್ಕದಲ್ಲಿ ನಡೆದಿದೆ.
ಬದಿಯಡ್ಕ ಚುಳ್ಳಿಕ್ಕಾನ ನಿವಾಸಿ, ಪ್ರಸಕ್ತ ಬಾರಡ್ಕದಲ್ಲಿ ವಾಸವಿದ್ದ ವಿನ್ಸೆಂಟ್ ಕ್ರಾಸ್ತಾ(52) ಮೃತಪಟ್ಟವರು. ಸಂಜೆ ಮನೆ ಸಮೀಪದ ಗೂಡಂಗಡಿಯಿಂದ ಆಮ್ಮೆಟ್ ಸೇವಿಸುತ್ತಿದ್ದಾಗ ಘಟನೆ ನಡೆದಿದೆ.
ಆಮೈಟ್ ಗಂಟಲಲ್ಲಿ ಸಿಲುಕಿ ಒದ್ದಾಡುತ್ತಿದ್ದ ವಿನ್ಸೆಂಟ್ ರನ್ನು ತಕ್ಷಣ ಕುಂಬಳೆಯ ಆಸ್ಪತ್ರೆಗೆ ಕರೆದೊಯ್ಯಲಾಗಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Categories
ಅಪಘಾತ ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ಪುತ್ತೂರು ಬೆಳ್ತಂಗಡಿ ಮಂಗಳೂರು ಮಾಹಿತಿ ಸುದ್ದಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಉಡುಪಿ: ಮಣಿಪಾಲದ ಕಾಲೇಜಿನಲ್ಲಿ ಮಾರಾಮಾರಿ; ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ

* ಬೆಳ್ತಂಗಡಿ: ಕರಿಮಣಿ ಸರ ಕದ್ದ ವ್ಯಕ್ತಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು

* ಬಂಟ್ವಾಳ: ಸಾರಿಗೆ ಬಸ್ ಮತ್ತು ಕಾರ್ ನಡುವೆ ಢಿಕ್ಕಿ

* ಪುತ್ತೂರು: ಗಂಧದ ಮರ ಕಳ್ಳನ ಸೆರೆ

* ಕುಂದಾಪುರ: ಕಳೆನಾಶಕ ಸೇವಿಸಿ ಅಸ್ತವ್ಯಸ್ತವಾಗಿದ್ದ ವ್ಯಕ್ತಿ ಸಾವು

* ಕಾರ್ಕಳ: ಆನ್ ಲೈನ್ ಗೇಮ್ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಉಡುಪಿ: ಮಣಿಪಾಲದ ಕಾಲೇಜಿನಲ್ಲಿ ಮಾರಾಮಾರಿ; ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ

ಉಡುಪಿ: ಮಣಿಪಾಲದ ಕಾಲೇಜ್ ವೊಂದರ ವಿದ್ಯಾರ್ಥಿಗಳು ಮಧ್ಯಾಹ್ನ ಊಟಕ್ಕೆ ಹೊರಟ ಸಂದರ್ಭದಲ್ಲಿ, ಪರಸ್ಪರ ಹೊಡೆದಾಡಿಕೊಂಡ ಘಟನೆ ಗುರುವಾರದಂದು ನಡೆದಿರುವುದು ಬೆಳಕಿಗೆ ಬಂದಿದೆ. ರಾಜ್ ಗಿರೀಶ್ ಮತ್ತು ಸಾತ್ವಿಕ್ ಎಂಬ ವಿದ್ಯಾರ್ಥಿಗಳು ಊಟಕ್ಕೆ ಹೋಗಲು ಕಾಲೇಜಿನಿಂದ ಹೊರಬರುತ್ತಿದ್ದಂತೆ, ರಾಜ್ ವೀರ್ ಸಿಂಗ್, ವಿಕ್ರಮ್ ವೀರ್ ಸಿಂಗ್ ಮತ್ತು ಎರಡನೇ ವರ್ಷದ ವಿದ್ಯಾರ್ಥಿ ಕ್ರಿಶ್ ಆ ಇಬ್ಬರು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ್ದಾರೆ. ರಾಜ್ ವೀರ್ ಸಿಂಗ್ ರಾಜ್ ಗಿರೀಶ್ ನನ್ನು ಮೊದಲಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಆತನ ಸ್ಕೂಟಿಯ ಕೀ ಅನ್ನು ಕಿತ್ತುಕೊಂಡು, ಶೋಷಿಸಿದ್ದಾನೆ. ನಂತರ ಸಾತ್ವಿಕ್ ನತ್ತ ಗಮನಹರಿಸಿ, ಅವನನ್ನು ಕೊಲ್ಲುವ ಉದ್ದೇಶದಿಂದ, ಆತನ ಕೈ ಕಾಲು ಮತ್ತು ಭುಜದ ಮೇಲೆ ದಾಳಿ ನಡೆಸಿ, ನೆಲಕ್ಕೆ ತಳ್ಳಿ, ಬಲವಾಗಿ ಒದ್ದು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮವಾಗಿ ಸಾತ್ವಿಕ್ ನ ಎಡಭುಜದ ಮೂಳೆ ಮುರಿದಿದ್ದು, ಕೈ ಮೇಲಕ್ಕೆ ಎತ್ತಲಾರದಷ್ಟು ಗಂಭೀರ ಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಾತ್ವಿಕ್ ನ ಸ್ನೇಹಿತನಾದ ರಾಜ್ ಗಿರೀಶ್ ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ, ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬೆಳ್ತಂಗಡಿ: ಕರಿಮಣಿ ಸರ ಕದ್ದ ವ್ಯಕ್ತಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು.

ಬೆಳ್ತಂಗಡಿ: ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಕರಿಮಣಿ ಸರವನ್ನು ಎಳೆದುಕೊಂಡು, ಕಳ್ಳತನ ಮಾಡಿದ್ದ ಆರೋಪಿಯಾದ ಉಮೇಶ್ ಗೌಡನನ್ನು ಅದೇ ದಿನ ಬೆಳ್ತಂಗಡಿ ಪೊಲೀಸರು ಬಂಧಿಸಿ, ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಾದ ಬೆಳ್ತಂಗಡಿ ಪೊಲೀಸ್ ನಿರೀಕ್ಷಕರಾದ ಸುಬ್ಟಾಪುರ ಮಠ್ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.ಇದರ ಹಿನ್ನೆಲೆಯಲ್ಲಿ ಶುಕ್ರವಾರದಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆರೋಪಗಳು ಸಾಬೀತಾಗಿದ್ದು, ಉಮೇಶ್ ಗೌಡನಿಗೆ ಮೂರು ವರ್ಷಗಳ ಕಾಲ ಕಠಿಣ ಕಾರಾಗೃಹ ವಾಸ, 20,000 ರೂಪಾಯಿ ದಂಡವನ್ನು ವಿಧಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಆರೋಪಿಗೆ ಶಿಕ್ಷೆಯನ್ನು ನೀಡುವಲ್ಲಿ ಸ್ಥಳ ಮಹಜರು ಪಿಎಸ್ಐ ಮುರಳೀಧರ್ ನಾಯ್ಕ, ತನಿಖಾ ಸಹಾಯಕರಾದ ಎಎಸ್ಐ ಕುಲಾಜ್ಯೋತಿ ತಿಲಕ್, ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಬ್ಬಂದಿ ಸತೀಶ್ ಅವರು ಭಾಗಿಯಾಗಿದ್ದರು.

* ಬಂಟ್ವಾಳ: ಸಾರಿಗೆ ಬಸ್ ಮತ್ತು ಕಾರ್ ನಡುವೆ ಢಿಕ್ಕಿ

ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಉಜಿರಂಡಿ ಪಲ್ಕೆಯ ಪಲ್ಲದಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ಕಾರ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಶನಿವಾರದಂದು ನಡೆದಿದೆ. ಇದರ ಪರಿಣಾಮವಾಗಿ ಕಾರು ಪೂರ್ತಿಯಾಗಿ ನುಜ್ಜುಗುಜ್ಜಾಗಿದ್ದು, ಚಾಲಕ ಮತ್ತು ಅದರಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರನ್ನು ಕಾವಳಮೂಡೂರು ಗ್ರಾಮದ ಧನುಷ್ ಹಾಗೂ ಪರಾರ್ದೊಟ್ಟು ನಿವಾಸಿ ದೀಕ್ಷಿತ್ ಎಂದು ಗುರುತಿಸಲಾಗಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿಯ ರಭಸಕ್ಕೆ ಸಾರಿಗೆ ಬಸ್ ನ ಮುಂದಿನ ಭಾಗದ ಗಾಜು ಸಂಪೂರ್ಣ ಪುಡಿಯಾಗಿದ್ದು, ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯವು ಸಹ ಆಗದೇ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು ಎನ್ನಲಾಗಿದೆ.

* ಪುತ್ತೂರು: ಗಂಧದ ಮರ ಕಳ್ಳನ ಸೆರೆ

ಪುತ್ತೂರು: ಕೇರಳ ಮೂಲದ ಚಂದ್ರನ್ ಗಂಧದ ಮರದ ಸಾಗಾಟ ಅಪರಾಧಕ್ಕೆ ಸಂಬಂಧಿಸಿದಂತೆ, ಕಳೆದ 55 ವರ್ಷಗಳಿಂದ ತಲೆಮರಿಸಿಕೊಂಡಿದ್ದು, ವಾರೆಂಟ್ ಅಪರಾಧಿ ಆಗಿರುವ ಈತನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರನ್ ಮತ್ತು ಇನ್ನೋರ್ವ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆದರೆ ಜಾಮೀನು ದೊರೆತ ಬಳಿಕ ಚಂದ್ರನ್ ಪರಾರಿಯಾಗಿದ್ದ ಎಂದು ಹೇಳಲಾಗಿದೆ. ಇದೀಗ ಎರಡನೇ ಆರೋಪಿಯಾದ ಮತ್ತು ತಲೆಮರೆಸಿಕೊಂಡಿದ್ದ ಚಂದ್ರನ್ ನನ್ನು ಪುತ್ತೂರಿನ ಪೊಲೀಸರು ಕೇರಳದಲ್ಲಿ ಸೆರೆಹಿಡಿದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

* ಕುಂದಾಪುರ: ಕಳೆನಾಶಕ ಸೇವಿಸಿ ಅಸ್ತವ್ಯಸ್ತವಾಗಿದ್ದ ವ್ಯಕ್ತಿ ಸಾವು

ಕುಂದಾಪುರ: ಅಸೋಡಿ ಗ್ರಾಮದ ನಿವಾಸಿಯಾದ ಭಾಸ್ಕರ್ ಮೊಗವೀರ ಎನ್ನುವ ವ್ಯಕ್ತಿಯು, ಕಳೆದ ತಿಂಗಳ 27ನೇ ತಾರೀಖಿನಂದು ತೋಟಕ್ಕೆ ಹಾಕುವ ಕೀಟನಾಶಕದಂತಹ ವಿಷದ ಪದಾರ್ಥವನ್ನು ಸೇವಿಸಿ ಅಸ್ತವ್ಯಸ್ತಗೊಂಡಿದ್ದರು. ಕೂಡಲೇ ಅವರನ್ನು ಕೊಟೇಶ್ವರದ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 22 ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಭಾಸ್ಕರ್ ಅವರು, ಗುಣಮುಖರಾಗದ ಹಿನ್ನೆಲೆಯಲ್ಲಿ ಅವರನ್ನು ಬುಧವಾರದಂದು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ, ನಂತರ ಮನೆಗೆ ಕರೆತರಲಾಯಿತು. ಚಿಕಿತ್ಸೆ ಫಲಕಾರಿಯಾಗದ ಕಾರಣ ಭಾಸ್ಕರ್ ಅವರು ಶನಿವಾರ ನಸುಕಿನ ಜಾವ ಮೃತಪಟ್ಟರು ಎನ್ನುವ ಸಂಗತಿ ಮೂಲಗಳಿಂದ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕಾರ್ಕಳ: ಆನ್ ಲೈನ್ ಗೇಮ್ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ.

ಕಾರ್ಕಳ: ಗಂಜಿಮಠದ ನಿವಾಸಿ ನಜೀರ್ ಎನ್ನುವ ವ್ಯಕ್ತಿಯು, ಆನ್ ಲೈನ್ ಗೇಮ್ ಹೆಸರಿನಲ್ಲಿ ಸಾರ್ವಜನಿಕರನ್ನು ಮೋಸಗೊಳಿಸುತ್ತಿದ್ದ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಗ್ರಾಮಾಂತರ ಠಾಣೆಯ ಪಿಎಸ್ಐ ನಜೀರ್ ನನ್ನು ಬಂಧಿಸಿದ್ದಾರೆ. ನಜೀರ್ ಬೆಳ್ಮಣ್ ಗ್ರಾಮದಲ್ಲಿ ಆನ್ ಲೈನ್ ಆಟವನ್ನು ಆಡುತ್ತಾ, ಬೇರೆಯವರಿಗೂ ಆ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿಕೊಡುತ್ತಿದ್ದ ಎನ್ನಲಾಗಿದೆ. ನಜೀರ್ ನನ್ನು ಬಂಧಿಸಿದ ಸಂದರ್ಭದಲ್ಲಿ, ಆತನ ಬಳಿಯಿದ್ದ 30,000 ರೂಪಾಯಿ ಹಣವನ್ನು ವಶಪಡಿಸಿಕೊಂಡು, ಮೊಬೈಲ್ ಅನ್ನು ಪರಿಶೀಲಿಸಿದಾಗ, ವೆಬ್ ಸೈಟ್ ಲಿಂಕ್ ಮತ್ತು ಆ್ಯಪ್ ಬಳಸಿ ಆನ್ ಲೈನ್ ಬೆಟ್ಟಿಂಗ್ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಜೀರ್ ವಿರುದ್ಧ ಕಾರ್ಕಳದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Categories
ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಪುತ್ತೂರು ಬೆಳ್ತಂಗಡಿ ಮಂಗಳೂರು

ಕಂಬಳ ಅಭಿಮಾನಿಗಳಿಗೆ ಗುಡ್ ನ್ಯೂಸ್..!!

ಕಂಬಳ ಅಭಿಮಾನಿಗಳಿಗೆ ಗುಡ್ ನ್ಯೂಸ್..!!
– ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ
– ರಾಜ್ಯ ಸರ್ಕಾರ ನಿರ್ಧಾರ? ಶೀಘ್ರ ಘೋಷಣೆಯಾಗುವ ಸಾಧ್ಯತೆ

NAMMUR EXPRESS NEWS
ಮಂಗಳೂರು: ಕಂಬಳ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ನಿರ್ಧರಿಸಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಹೇಳಲಾಗಿದೆ. ಕಂಬಳ ಕ್ರೀಡೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ ಘೋಷಣೆಯಾದರೆ ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ ಸಿಗುವ ಸೌಲಭ್ಯಗಳು ಕಂಬಳ ಕ್ರೀಡೆಗೂ ಅನ್ವಯವಾಗಲಿದೆ. ಕಂಬಳಕ್ಕೆ ಒಂದೆಡೆ ರಾಜ್ಯದ ಮಾನ್ಯತೆಯ ಸಿದ್ದತೆ ಅಂತಿಮ ಹಂತದಲ್ಲಿದ್ದರೆ, ಇನ್ನೊಂದೆಡೆ ಕಂಬಳ ಅಸೋಸಿಯೇಶನ್ ನೇಮಕ ಪಟ್ಟಿಯನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಈ ಸಮಿತಿ ಅಧ್ಯಕ್ಷರೇ ಕಂಬಳ ಅಸೋಸಿಯೇಶನ್‌ಗೆ ಅಧ್ಯಕ್ಷರಾಗಿದ್ದು, ಉಳಿದಂತೆ ಗೌರವ ಸಲಹೆಗಾರರು, ಸದಸ್ಯರು ಸೇರಿದಂತೆ 13 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಸ್ಥಳೀಯ ಗ್ರಾಮೀಣ ಕರಕುಶಲ ಕುಶಲಕರ್ಮಿಗಳಿಂದ ತಯಾರಿಸಿದ ಕೈ ಬಟ್ಟೆಗಳು ಕಂಬಳ ಅಸೋಸಿಯೇಶನ್‌ ಸ್ಥಾಪನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಧನ, ವಿಶೇಷ ಅನುದಾನ, ಓಟಗಾರರು, ಕೋಣದ ಮಾಲೀಕರು, ಇತರರಿಗೆ ಸೌಲಭ್ಯ ದೊರೆಯಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ಕಂಬಳ ಅಸೋಸಿಯೇಶನ್‌ಗೆ ಬೈಲಾ ಸಿದ್ಧಪಡಿಸುತ್ತಿದೆ.

Categories
ಅಪಘಾತ ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಪುತ್ತೂರು ಬೆಳ್ತಂಗಡಿ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಬೆಳ್ತಂಗಡಿ: 5 ತಲೆಬುರುಡೆ, 113 ಮೂಳೆಗಳು ಪತ್ತೆ!
* ಮಂಗಳೂರು: ರಸ್ತೆ ಅಪಘಾತದಲ್ಲಿ ಇಂಜಿನಿಯರ್ ಸಾವು
* ಕುಂದಾಪುರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ
* ಉಡುಪಿ: ರಂಗಭೂಮಿ ಕಲಾವಿದ ಗೋಪಾಲಣ್ಣ ಇನ್ನಿಲ್ಲ
* ಬಂಟ್ವಾಳ: ದುಬಾರಿ ಬೆಲೆಯ ನಾಯಿ ಕೊಂದ ನೆರೆಮನೆಯವರು!
* ಭಟ್ಕಳ: ಅರಣ್ಯದಲ್ಲಿ ಜಾನುವಾರುಗಳ ಮೂಳೆ ಪತ್ತೆ
* ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ನದಿ ತೀರದಲ್ಲಿರುವ ಬಂಗ್ಲೆಗುಡ್ಡಕ್ಕೆ ಎಸ್ಐಟಿ ತಂಡವು ಪ್ರವೇಶಿಸಿದ್ದು, ತನಿಖಾಧಿಕಾರಿಗಳಾದ ಜಿತೇಂದ್ರ ದಯಾಮ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಸೋಕೋ ತಂಡ, ಕಂದಾಯ ಇಲಾಖೆ ಮತ್ತು ಪಂಚಾಯತ್ ಸಿಬ್ಬಂದಿಗಳು ಗುರುವಾರದಂದು ಸುಮಾರು ಏಳು ಗಂಟೆಗಳ ಕಾಲ ಹದಿಮೂರು ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದ ಐದು ಕಡೆ ಮಹಜರು ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಐದು ತಲೆಬುರುಡೆ, 113 ಮೂಳೆಗಳು ಲಭಿಸಿದ್ದು, ಸೌಜನ್ಯಳ ಮಾವ ವಿಠ್ಠಲ ಗೌಡ ಅವರು ನೀಡಿದ ಹೇಳಿಕೆ ನಿಜವಿರಬಹುದೆಂಬ ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ ಪಾಯಿಂಟ್ 11ರ ಸುತ್ತಮುತ್ತ ನೆಲದ ಮೇಲೆ ಮಾನವನ ಮೂಳೆಯೊಂದಿಗೆ ಬಟ್ಟೆಗಳು ಸಹ ಕಂಡುಬಂದಿದೆ. ಇದೀಗ ಲಭ್ಯವಾಗಿರುವ ಮೂಳೆಗಳನ್ನು ಪೈಪ್ ಗಳಲ್ಲಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲು ಮಣ್ಣಿನ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

* ಮಂಗಳೂರು: ರಸ್ತೆ ಅಪಘಾತದಲ್ಲಿ ಇಂಜಿನಿಯರ್ ಸಾವು

ಮಂಗಳೂರು: ಬಾರೆಬೈಲು ನಿವಾಸಿ ರಾಮಚಂದ್ರ ಎನ್ನುವವರ ಪುತ್ರ ಕೌಶಿಕ್ ಎನ್ನುವ ಇಂಜಿನಿಯರ್ ಯುವಕನು ಬುಧವಾರ ಮಧ್ಯಾಹ್ನ ಬುಲೆಟ್ ಬೈಕ್ ನಲ್ಲಿ ಹೋಗುತ್ತಿದ್ದಾಗ, ಆಟೊವೊಂದು ಢಿಕ್ಕಿ ಹೊಡೆದುದರ ಪರಿಣಾಮವಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ, ವಿಮಾನ ನಿಲ್ದಾಣ ರಸ್ತೆಯ ಯೆಯ್ಯಾಡಿ ಜಂಕ್ಷನ್ ನಲ್ಲಿ ನಡೆದಿದೆ.ಢಿಕ್ಕಿ ಹೊಡೆದ ತೀವ್ರತೆಗೆ ಕೌಶಿಕ್ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದರಿಂದ, ತಲೆಗೆ ಗಂಭೀರವಾದ ಗಾಯಗಳಾಗಿ ಮೃತಪಟ್ಟ ಎನ್ನಲಾಗಿದೆ. ರಾಮಚಂದ್ರ ಅವರು ವಿಜಯವಾಣಿ ಪತ್ರಿಕೆಯ ಏಜೆಂಟ್ ಆಗಿದ್ದು, ಕೌಶಿಕ್ ಕೂಡ ಇಂಜಿನಿಯರ್ ವೃತ್ತಿಯ ಜೊತೆಗೆ, ಮನೆಗಳಿಗೆ ಹಾಲು ಮತ್ತು ಪತ್ರಿಕೆ ಹಾಕುವ ಕಾರ್ಯವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕುಂದಾಪುರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ

ಕುಂದಾಪುರ: ಅಕ್ರಮವಾಗಿ ಇಸ್ಪೀಟ್ ಆಟ ನಡೆಸುತ್ತಿದ್ದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕಿಯಾದ ಚಂದ್ರಕಲಾ ಪತ್ತಾರ್ ಮತ್ತು ಪೊಲೀಸರು ದಾಳಿ ನಡೆಸಿದ ಘಟನೆ, ಗುಲ್ವಾಡಿ ಗ್ರಾಮದ ಅರೆಕಲ್ಲು ಹುಣಸೆ ಮನೆಯಲ್ಲಿ ನಡೆದಿದೆ. ಕಾರ್ಕಳದ ಸಮರ್ಥ್, ತಗ್ಗರ್ಸೆಯ ಪ್ರವೀಣ್, ಮಂಗಳೂರಿನ ಪ್ರದೀಪ್ ಮತ್ತು ಗುಲ್ವಾಡಿಯ ನಿಸಾರ್ ಶೇಖ್ ಅವರನ್ನು ಬಂಧಿಸಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಈ ಸಂದರ್ಭದಲ್ಲಿ ಬಂಧಿತ ಆರೋಪಿಗಳ ಬಳಿ ಇದ್ದ 11.620 ನಗದು ಹಣ, ನಾಲ್ಕು ಮೊಬೈಲ್ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

* ಉಡುಪಿ: ರಂಗಭೂಮಿ ಕಲಾವಿದ ಗೋಪಾಲಣ್ಣ ಇನ್ನಿಲ್ಲ

ಉಡುಪಿ: ಭಾರತೀಯ ಜೀವವಿಮಾ ನಿಗಮದ ಉದ್ಯೋಗಿಯಾಗಿದ್ದ, ರಂಗಭೂಮಿ ಕಲಾವಿದರಾಗಿ ತಮ್ಮನ್ನು ತೊಡಗಿಸಿಕೊಂಡ ಗೋಪಾಲಣ್ಣ ಅವರು ಗುರುವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾದರು. 1990ರಲ್ಲಿ ರಂಗಭೂಮಿ ಸಂಸ್ಥೆಯ ಸದಸ್ಯರಾಗಿ, 1995 ರಿಂದ 2000ದ ವರೆಗೆ ಆಡಳಿತ ಮಂಡಳಿಯ ಸದಸ್ಯರಾಗಿ, ಬಳಿಕ ಇತ್ತೀಚಿನವರೆಗೂ ಆಡಳಿತ ಮಂಡಳಿಯ ಗೌರವ ಸಲಹಾ ಸಮಿತಿಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದರು. ಅಲ್ಲದೆ ತುಳುಕೂಟ, ಯಕ್ಷಗಾನ ಕಲಾರಂಗ ಹಾಗೂ ಇತರೆ ಸಂಸ್ಕೃತಿಕ ಸಂಸ್ಥೆಗಳ ಅವಿಭಾಜ್ಯ ಅಂಗವಾಗಿದ್ದರು. ಮೃತರ ಅಂತಿಮ ವಿಧಿ ವಿಧಾನಗಳು ಬ್ರಹ್ಮಗಿರಿಯ ಬಾಲ ಭವನದ ರಾಮಣ್ಣ ಶೆಟ್ಟಿ ಕಾಂಪೌಂಡ್ ನಲ್ಲಿರುವ ಅವರ ಸ್ವಗೃಹದಲ್ಲಿ ನೆರವೇರಿತು ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

* ಬಂಟ್ವಾಳ: ದುಬಾರಿ ಬೆಲೆಯ ನಾಯಿಯನ್ನು ಕೊಂದ ನೆರೆಮನೆಯವರು.

ಬಂಟ್ವಾಳ: ಡೋಲ್ಫಿ ಡಿಸೋಜ ಎನ್ನುವವರಿಗೆ ಸೇರಿದ್ದ, ಸಾಕು ನಾಯಿಯೊಂದನ್ನು ಕೊಂದ ಘಟನೆ ಕಳ್ಳಿಗೆ ಗ್ರಾಮದ ನೆತ್ತರಕೆರೆ ಎನ್ನುವಲ್ಲಿ ಗುರುವಾರ ನಡೆದಿದೆ. ಬುಧವಾರದಿಂದ ಕಾಣೆಯಾಗಿದ್ದ ನಾಯಿಯನ್ನು ಡಿಸೋಜಾ ಅವರು ಹುಡುಕುತ್ತಿದ್ದರು, ಆದರೆ ಗುರುವಾರ ಬೆಳಿಗ್ಗೆ ನೋಡಿದಾಗ ಅದನ್ನು ಕೊಂದು, ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಪರಿಶೀಲನೆ ನಡೆಸಿದಾಗ ನೆರೆಮನೆಯವರು ದೊಣ್ಣೆಯಿಂದ ಹೊಡೆದು, ಹಲ್ಲೆ ಮಾಡಿ ಕೊಂದು, ಹೂತು ಹಾಕಿರುವ ವಿಚಾರ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಡೋಲ್ಫಿ ಡಿಸೋಜಾ ಅವರು ನೆರೆಮನೆಯವರಾದ ಯತಿನ್ ಪೂಜಾರಿ ಮತ್ತು ಯತೀಶ್ ಪೂಜಾರಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಭಟ್ಕಳ: ಕಳೆದ ಕೆಲವು ದಿನಗಳ ಹಿಂದೆ ಉಪವಲಯದ ಅರಣ್ಯಾಧಿಕಾರಿಗಳಾದ ಮಾರುತಿ ಸೊರಗಾಂವಿ ಅವರು ಮುಗ್ಗುಂ ಕಾಲೋನಿಯ ಗುಡ್ಡದ ಅರಣ್ಯ ಪ್ರದೇಶವೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕಟಾವು ಮಾಡಿ, ಚರ್ಮ ಮತ್ತು ಎಲುಬುಗಳು ಸೇರಿದಂತೆ ಮೂಳೆಗಳನ್ನು ಸಹ ಅರಣ್ಯ ಪ್ರದೇಶದಲ್ಲಿ ರಾಶಿ ಹಾಕಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020ರ ಕಾಲಂ 4, 12 ಸೇರಿದಂತೆ ಹಲವು ವಿಧಿಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಯಿತು. ಇದಕ್ಕೆ ಸಂಬಂಧಿಸಿದಂತೆ ಬುಧವಾರದಂದು ಡಿವೈಎಸ್ ಪಿ ಮಹೇಶ್ ಅವರ ಮಾರ್ಗದರ್ಶನದಲ್ಲಿ, ಪಿಐ ದಿವಾಕರ್ ನೇತೃತ್ವದಲ್ಲಿ ಪಿಎಸ್ಐ ನವೀನ್ ನಾಯ್ಕ, ಪಿಎಸ್ಐ ತಿಮ್ಮಪ್ಪ, ಠಾಣೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳು, ಅಕ್ರಮ ಚಟುವಟಿಕೆಗಳ ಆರೋಪಿಗಳಾದ ಮೊಹಮ್ಮದ್ ಸಮಾನ್, ಮೊಹಮ್ಮದ್ ರಾಹೀನ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನಗಳು ಮತ್ತು ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.

•ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ

ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ರೀತಿಯ ಅಪಘಾತ ಸಂಭವಿಸಿದ ಘಟನೆ, ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಡೆದಿದೆ. ಇದರ ಪರಿಣಾಮವಾಗಿ ವಿಜಯಪುರ ಮೂಲದ ಮುದ್ದೇಬಿಹಾಳ ಗ್ರಾಮದ ಟ್ಯಾಂಕರ್ ಚಾಲಕ ಶರಣಪ್ಪ ಸಂಗಪ್ಪ ಕೋಳೂರು ಮತ್ತು ಬಸ್ ಪ್ರಯಾಣಿಕ ಅಂಕೋಲಾ ತಾಲ್ಲೂಕಿನ ಕೇಣಿ ಗ್ರಾಮದ ಭಾಸ್ಕರ ಪಾಂಡುರಂಗ ಗಾಂವಕರ್ ಅವರು ಮೃತಪಟ್ಟಿದ್ದಾರೆ. ಬಸ್ ಚಾಲಕರಾದ ಕಮಲಾಕರ ಸಾತು ನಾಯ್ಕ, ನಿರ್ವಾಹಕ ನಾರಾಯಣ ನಾಯ್ಕ, ಪ್ರಯಾಣಿಕರಾದ ಶಿಕ್ಷಕಿಯಾದ ವೀಣಾ ನಾಯಕ,ಪ್ರಜ್ಞಾ ನಾಯ್ಕ, ಸಾವಿತ್ರಿ ಗೌಡ, ಶ್ರೀಧರ್, ರಾಧಾಕೃಷ್ಣ ನಾಯ್ಕ, ವಿದ್ಯಾರ್ಥಿಗಳಾದ ಸಾನ್ವಿ ನಾಯ್ಕ, ರಕ್ಷಾ ಬಾನಾವಳಿ, ಬೀರಪ್ಪ ನಾಯ್ಕ ಅವರು ಗಾಯಗೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

Categories
ಕುಂದಾಪುರ

ಎಕ್ಸಲೆಂಟ್ ಕುಂದಾಪುರ: ಶಟಲ್ ಬ್ಯಾಡ್ಮಿಂಟನ್ ದಿಯಾ ನಾಯರ್ ರಾಜ್ಯ ಮಟ್ಟಕ್ಕೆ ಆಯ್ಕೆ.

ಎಕ್ಸಲೆಂಟ್ ಕುಂದಾಪುರ: ಶಟಲ್ ಬ್ಯಾಡ್ಮಿಂಟನ್ ದಿಯಾ ನಾಯರ್ ರಾಜ್ಯ ಮಟ್ಟಕ್ಕೆ ಆಯ್ಕೆ.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಡುಪಿ ಜಿಲ್ಲೆ ಭಂಡಾರ್‌ಕಾರ್ಸ್ ಪದವಿ ಪೂರ್ವ ಕಾಲೇಜು, ಕುಂದಾಪುರ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಜಂಟಿಯಾಗಿ ದಿನಾಂಕ ೨೯-೦೮-೨೦೨೫ರಂದು ಆಯೋಜಿಸಿರುವ ಉಡುಪಿ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ೨೦೨೫ರ ಪಂದ್ಯಾಟದಲ್ಲಿ ನಮ್ಮ ಕಾಲೇಜಿನ ಹೆಮ್ಮೆಯ ಶಟಲ್ ಬ್ಯಾಡ್ಮಿಂಟನ್ ಪಟುವಾದ ದಿಯಾ ನಾಯರ್‌ರವರು ಜಿಲ್ಲಾ ಮಟ್ಟದಲ್ಲೂ ಅತ್ಯುತ್ತಮ ಪ್ರದರ್ಶನದೊಂದಿಗೆ ಮುಂದಿನ ರಾಜ್ಯ ಮಟ್ಟದಲ್ಲಿ ನಡೆಯುವ ಶಟಲ್ ಬ್ಯಾಡ್ಮಿಂಟನ್‌ಗೆ ಆಯ್ಕೆಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸಾಧನೆಗೈದ ವಿದ್ಯಾರ್ಥಿನಿಗೆ ಸಂಸ್ಥೆಯ ಆಡಳಿತಮಂಡಳಿಯವರು, ಪ್ರಾಂಶುಪಾಲರು, ಶಿಕ್ಷಕ – ಶಿಕ್ಷಕೇತರ ವೃಂದದವರು ಅಭಿನಂದನೆ ಸಲ್ಲಿಸಿ, ಈ ಅದ್ಬುತ ಸಾಧನೆಯೊಂದಿಗೆ ರಾಜ್ಯಮಟ್ಟದಲ್ಲೂ ವಿಜೇತಳಾಗಿ ರಾಷ್ಟ್ರೀಯ ತಂಡಕ್ಕೆ ಪ್ರತಿನಿಧಿಸುವಂತಾಗಲಿ ಎಂದು ಶುಭ ಹಾರೈಸಿದರು.

Categories
ಕುಂದಾಪುರ

ಕಂದಮ್ಮಿಗಳೊಂದಿಗೆ ಕುಂದಾಪ್ರ ಕನ್ನಡದ ವರ್ಣಮಯೋತ್ಸವ – ಗ್ರ್ಯಾವಿಟಿ ಶಾಲೆ ನಡೂರಿನಲ್ಲಿ ಹಳ್ಳಿ ಸವಿಯೋತ್ಸವ

ಕಂದಮ್ಮಿಗಳೊಂದಿಗೆ ಕುಂದಾಪ್ರ ಕನ್ನಡದ ವರ್ಣಮಯೋತ್ಸವ – ಗ್ರ್ಯಾವಿಟಿ ಶಾಲೆ ನಡೂರಿನಲ್ಲಿ ಹಳ್ಳಿ ಸವಿಯೋತ್ಸವ

ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಾಲೆ ನಡೂರು.
ವಿಶ್ವು ಕುಂದಾಪ್ರ ಕನ್ನಡ ದಿನಾಚರಣೆಯನ್ನು ಪುಟಾಣಿಗಳೊಂದಿಗೆ ವರ್ಣಮಯವಾಗಿ ಆಚರಿಸಲಾಯ್ತು. ಪ್ರಾದೇಶಿಕತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಗೌರವ ಮೂಡುವಂತೆ ಕಾರ್ಯಕ್ರಮವನ್ನು ಆಯೋಜಿಸಲಾಯ್ತು. ಹಳ್ಳಿಯ ಆರೋಗ್ಯಕರ ಪತ್ರೊಡೆ, ಮಣ್ಣಿ (ಹಾಲ್ಬಾಯಿ) ಹುರುಳಿ ಸಾರು, ಅಕ್ಕಿ ಉಂಡೆ, ಗೋಧಿ ಪಾಯಸ, ಚಟ್ನಿ , ಪಲ್ಯ ಮುಂತಾದ ಖಾದ್ಯಗಳನ್ನು ವಿದ್ಯಾರ್ಥಿಗಳು, ಸಿಬ್ಬಂಧಿಗಳು ಸವಿದರು. ಗ್ರಾಮೀಣ ಬದುಕಿನ ಚಿತ್ರಿಸುವ ಅನೇಕ ಸ್ಪರ್ಧೆ ಹಾಗೂ ಚಟುವಟಿಗಳನ್ನು ಏರ್ಪಡಿಸಲಾಯ್ತು. ಕುಂದಾಪ್ರದ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲಾಯ್ತು.
ಈ ಸಂದರ್ಭ ಅಧ್ಯಕ್ಷರಾದ ಮನೋಹರ ಹೆಗ್ಡೆ, ಕಾರ್ಯದರ್ಶಿ ಪಾವನಾ ಎಮ್. ಹೆಗ್ಡೆ. ವಿಭಾಗೀಯ ಮುಖ್ಯಸ್ಥೆಯರಾದ ಶ್ರೀಮತಿ ಸಂಗೀತ ಅಡಿಗ, ಶ್ರೀಮತಿ ಸರಸ್ವತಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿಯ ಸದಸ್ಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿದರು. ಎಲ್ಲಾ ಶಿಕ್ಷಕಿ ಹಾಗೂ ಶಿಕ್ಷಕೇತರ ಸಿಬ್ಬಂಧಿಗಳು ಸಹಕರಿಸದರು.

Categories
ಕುಂದಾಪುರ

ಬದಲಾಗಲಿದೆ ಮೂಕಾಂಬಿಕಾ ಎಕ್ಸ್‌ಪ್ರೆಸ್ ರೈಲು!?

ಬದಲಾಗಲಿದೆ ಮೂಕಾಂಬಿಕಾ ಎಕ್ಸ್‌ಪ್ರೆಸ್ ರೈಲು!?
– ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಅವರಿಗೆ ಸಂಸದ ರಾಘವೇಂದ್ರ ಮನವಿ
– ಗಂಗೊಳ್ಳಿ- ಕುಂದಾಪುರ ಸೇತುವೆ ನಿರ್ಮಾಣಕ್ಕೆ ಪ್ಲಾನ್?

NAMMUR EXPRESS NEWS
ಕುಂದಾಪುರ: ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವರಾದ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ವಾರಕ್ಕೊಮ್ಮೆ ಇರುವ ರೈಲು ಸಂಖ್ಯೆ 10215/10216 ರೈಲನ್ನು ಮೂಕಾಂಬಿಕಾ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಿ ದಿನಂಪ್ರತಿ ಸೇವೆ ನೀಡುವಂತೆ ಮನವಿ ಮಾಡಲಾಯಿತು.
ಇದರೊಂದಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಮೂಲಸೌಲಭ್ಯ ಅಭಿವೃದ್ಧಿ, ಬಿಜೂರು ರೈಲು ನಿಲ್ದಾಣ ಹಾಗೂ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕ ಮೆಮು, ಮತ್ಸ್ಯಗಂಧ ಹಾಗೂ ಪಂಚಗಂಗಾ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಮನವಿ ಮಾಡಲಾಯಿತು.
ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶಿವಮೊಗ್ಗ ಸಂಸದ ರಾಘವೇಂದ್ರ ತಿಳಿಸಿದ್ದಾರೆ.

ಗಂಗೊಳ್ಳಿ- ಕುಂದಾಪುರ ‘ಸೇತುವೆ ಪುನ‌ರ್ ನಿರ್ಮಿಸಲು ಮನವಿ

ಕುಂದಾಪುರ: ಗಂಗೊಳ್ಳಿ- ಕುಂದಾಪುರ ಸೇತುವೆ ನಿರ್ಮಾಣ ಹಾಗೂ ಶಿಥಿಲವಾಗಿರುವ ಅರಾಟೆ ಸೇತುವೆ ಪುನರ್ ನಿರ್ಮಾಣ ಮಾಡುವಂತೆ ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಗಂಗೊಳ್ಳಿಯಿಂದ ಕುಂದಾಪುರ ಕೂಗಳತೆಯ ದೂರದಲ್ಲಿದ್ದರೂ ಸೇತುವೆಯ ಸಂಪರ್ಕವಿಲ್ಲದೆ ಸುಮಾರು 18 ಕಿ.ಮೀ. ಸುತ್ತಿ ಬಳಸಿ ಕುಂದಾಪುರ ತಲುಪಬೇಕಾಗಿದೆ. ಗ್ರಾಮಸ್ಥರಿಗೆ ತುರ್ತು ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ. ಸೇತುವೆಯ ನಿರ್ಮಾಣದಿಂದ ವಾಣಿಜ್ಯ ವಹಿವಾಟಿಗೂ ಅನುಕೂಲ. ಬಹುಕಾಲದ ಬೇಡಿಕೆಯಾದ ಗಂಗೊಳ್ಳಿ ಕುಂದಾಪುರ ಸೇತುವೆ ಪ್ರಸ್ತಾವಕ್ಕೆ ಅನುಮೋದನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-66 ರಲ್ಲಿನ ಅರಾಟೆ ಸೇತುವೆ ಶಿಥಿಲಗೊಂಡಿದ್ದು, ಹಲವಾರು ತಿಂಗಳುಗಳಿಂದ ಚತುಷ್ಪಥದಲ್ಲಿ ಸಂಚರಿಸಬೇಕಾದ ವಾಹನಗಳು ದ್ವಿಪಥದಲ್ಲಿ ಸಂಚಾರ ಮಾಡುತ್ತಿವೆ. ಆದಷ್ಟು ಶೀಘ್ರ ಹಳೆಯ ಅರಾಟೆ ಸೇತುವೆ ಪುನ‌ರ್ ನಿರ್ಮಾಣ ಆಗಬೇಕು. ಬೈಂದೂರು ತಾಲ್ಲೂಕು ಕಚೇರಿ ಬಳಿ ಅಂಡ‌ರ್ ಪಾಸ್ ನಿರ್ಮಿಸಲು ಹಾಗೂ ಒತ್ತಿನೆಣೆ ರಾಘವೇಂದ್ರ ಮಠದವರೆಗೆ ಸರ್ವಿಸ್ ರಸ್ತೆ ನಿರ್ಮಿಸಲು ಕ್ರಮ ಎಂದು ಸಚಿವರು ಮನವಿ ಮಾಡಿದ್ದಾರೆ.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದರು, ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Categories
ಕುಂದಾಪುರ

ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷರಿಗೆ ಪ್ರಶಸ್ತಿಯ ಗರಿ

ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷರಿಗೆ ಪ್ರಶಸ್ತಿಯ ಗರಿ
– ಗಣೇಶ್ ಮೊಗವೀರ ಅವರಿಗೆ ಡಾ. ಶ್ಯಾಮ್ ಸುಂದರ್ ಮುಖರ್ಜಿ ಪ್ರಶಸ್ತಿ
– ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ

NAMMUR EXPRESS NEWS
ಕುಂದಾಪುರ: ಪ್ರತಿಷ್ಠಿತ ಟೊಪ್ನೆಟೆಕ್ ಫೌಂಡೇಶನ್ ವತಿಯಿಂದ ನೀಡಲಾಗುವ ರಾಷ್ಟ್ರಮಟ್ಟದ ಡಾ. ಶ್ಯಾಮ್ ಸುಂದರ್ ಮುಖರ್ಜಿ ಪ್ರಶಸ್ತಿಯನ್ನು, ಈ ಬಾರಿ ಕುಂದಾಪುರ ತಾಲ್ಲೂಕಿನ ಹೆಮ್ಮಾಡಿಯ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಮತ್ತು ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ ಅವರಿಗೆ ನೀಡಿ ಗೌರವಿಸಲಾಗಿದೆ.
ಮುಂಬೈನ ಪ್ರಸಿದ್ಧ ತಾಜ್ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ, 2025 ನೇ ಸಾಲಿನ ಈ ಪ್ರಶಸ್ತಿಯನ್ನು ಗಣೇಶ ಮೊಗವೀರ ಅವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರಕಟವಾದ ಸಂದರ್ಭದಲ್ಲಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಗಣೇಶ್ ಮೊಗವೀರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.