ಕರಾವಳಿ ರಸ್ತೆ ಸರಿ ಇಲ್ಲ: ಅಪಘಾತಕ್ಕೆ ದಿನ ನಿತ್ಯ ಬಲಿ!
* ಕಾಪು: ರಸ್ತೆ ಅಪಘಾತ; ಬೈಕ್ ಸವಾರ ಸಾವು
* ಬಂಟ್ವಾಳ: ಸಿಸಿ ಕ್ಯಾಮೆರಾದ ಡಿವಿಆರ್ ಸುಟ್ಟು ಹಾಕಿದ ಅಪ್ರಾಪ್ತರು
* ಸುಳ್ಯ: ಹೃದಯಾಘಾತದಿಂದ ಆಟೋ ಚಾಲಕ ಸಾವು
* ಪುತ್ತೂರು: ಆ್ಯಂಬುಲೆನ್ಸ್ ಗೆ ಅಡ್ಡಿಪಡಿಸಿದ ಕಾರು ಚಾಲಕ
* ಕುಂದಾಪುರ: ಹಣ ನೀಡದೆ ಚಿನ್ನಾಭರಣ ಕಳ್ಳತನ
* ಯಲ್ಲಾಪುರ: ಕಾರಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾಪು: ಬೈಕ್ ಗೆ ವಾಹನವೊಂದು ಬಂದು ಢಿಕ್ಕಿ ಹೊಡೆದು, ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರ ಬಡಾ ಗ್ರಾಮದ ಬಳಿ ನಡೆದಿದೆ. ವಾಹನ ರಭಸವಾಗಿ ಢಿಕ್ಕಿ ಹೊಡೆದ ಪರಿಣಾಮವಾಗಿ, ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಮಡಂತ್ಯಾರು ಮಾಲಾಡಿ ನಿವಾಸಿ ರಮೇಶ್ ಹೆಗ್ಡೆ ಎನ್ನಲಾಗಿದ್ದು, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಪ್ರಯುಕ್ತ ಸಂತೆಗೆ ವ್ಯಾಪಾರಕ್ಕೆಂದು ಬಂದಿದ್ದಾಗ ಈ ಘಟನೆ ಸಂಭವಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.
* ಬಂಟ್ವಾಳ: ಸಿಸಿ ಕ್ಯಾಮೆರಾದ ಡಿವಿಆರ್ ಅನ್ನು ಸುಟ್ಟು ಹಾಕಿದ ಅಪ್ರಾಪ್ತರು
ಬಂಟ್ವಾಳ: ಪುಣಚ ಗ್ರಾಮದ ನಿವಾಸಿಯಾದ ಆನಂದ ಗೌಡ ಎನ್ನುವವರು, ತಮ್ಮ ಪತ್ನಿಯ ಹೆಸರಿನಲ್ಲಿ ನಡೆಸುತ್ತಿರುವ ಕಾರ್ಖಾನೆಯ ಇಂಟರ್ ಲಾಕ್ ಘಟಕಕ್ಕೆ ಬಂದ ಇಬ್ಬರು ಅಪ್ರಾಪ್ತ ಬಾಲಕರು, ಅಲ್ಲಿದ್ದ ಸಿಸಿ ಕ್ಯಾಮೆರಾ ಹಾಳು ಮಾಡಿ, ಅದರ ಡಿವಿಆರ್ ಅನ್ನು ಸುಟ್ಟು ಹಾಕಿ, ದೇವರ ಫೋಟೋವನ್ನು ಹಾಳು ಮಾಡಿದ ಘಟನೆ ವಿಟ್ಲದಲ್ಲಿ ನಡೆದಿದೆ. ಡಿವಿಆರ್ ಸುಟ್ಟು ಹೋಗಿದ್ದರೂ, ಮಾಲೀಕರ ಮೊಬೈಲ್ ಗೆ ಸಿಸಿ ಕ್ಯಾಮೆರಾ ಸಂಪರ್ಕ ಅಳವಡಿಕೆ ಆಗಿದ್ದ ಕಾರಣ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಯಿತು. ವಿಟ್ಲದ ಪೊಲೀಸರು ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಸೆರೆ ಹಿಡಿದು, ಅವರ ಪೋಷಕರ ಸಮಕ್ಷಮದಲ್ಲಿ ವಿಚಾರಣೆ ನಡೆಸಿದಾಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
* ಸುಳ್ಯ: ಹೃದಯಾಘಾತದಿಂದ ಆಟೋ ಚಾಲಕ ಸಾವು
ಸುಳ್ಯ: ಬೊಳಿಯಮಜಲು ನಿವಾಸಿ ಅನಿಲ್ ಜೈನ್ ಎನ್ನುವವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಟ್ಟಿಪಳ್ಳದಲ್ಲಿ ನಡೆದಿದೆ. ಅನಿಲ್ ಜೈನ್ ಆಟೋ ಚಾಲಕರಾಗಿದ್ದು, ಶಾಸ್ತ್ರಿ ವೃತ್ತದ ಬಳಿ, ಸರದಿಯಲ್ಲಿ ತಮ್ಮ ಆಟೋವನ್ನು ನಿಲ್ಲಿಸಿ, ಬಾಡಿಗೆಗೆ ತೆರಳುತ್ತಿದ್ದರು. ಮತ್ತು ಸ್ನೇಹ ಸಂಗಮ ಆಟೋ ಚಾಲಕರ ಸಂಘದ ಅಧ್ಯಕ್ಷರು ಕೂಡ ಆಗಿದ್ದರು. ಮನೆಯಲ್ಲಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅನಿಲ್ ಅವರನ್ನು, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ.
* ಪುತ್ತೂರು: ಆ್ಯಂಬುಲೆನ್ಸ್ ಗೆ ಅಡ್ಡಿಪಡಿಸಿದ ಕಾರು ಚಾಲಕ
ಪುತ್ತೂರು: ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಗೆ, ಮುಂದಿನಿಂದ ಬರುತ್ತಿದ್ದ ಕಾರಿನ ಚಾಲಕ ಅಡ್ಡಪಡಿಸಿದ ಘಟನೆ ಗುಂಡ್ಯಾ ಬಳಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಗುತ್ತಿತ್ತು ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆ್ಯಂಬುಲೆನ್ಸ್ ಚಾಲಕ ಹನೀಫ್ ಅವರು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ, ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, 6,000 ರೂಪಾಯಿ ದಂಡ ವಿಧಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರು ಚಾಲಕನ ನಡೆವಳಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
* ಕುಂದಾಪುರ: ಹಣ ನೀಡದೆ ಚಿನ್ನಾಭರಣ ತೆಗೆದುಕೊಂಡು ಹೋದ ಆರೋಪಿಯ ಬಂಧನ
ಕುಂದಾಪುರ: ಹೊಸಂಗಡಿಯ ಶ್ರೀಕೃಷ್ಣ ಜ್ಯುವೆಲ್ಲರಿ ಎಂಬ ಅಂಗಡಿಯಲ್ಲಿ ಸಂತೋಷ್ ಎನ್ನುವ ವ್ಯಕ್ತಿಯು, ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಕಾರಿನಲ್ಲಿ ಬಂದು ಗಿಫ್ಟ್ ನೀಡಲು ಬೇಕೆಂದು 30,000 ರೂಪಾಯಿ ಮೌಲ್ಯದ ಎರಡು ಚಿನ್ನದ ಉಂಗುರಗಳನ್ನು ಖರೀದಿಸಿದ್ದು, ಹಣವನ್ನು ನೆಟ್ ಮೂಲಕ ಕಳುಹಿಸಿರುವುದಾಗಿ ತೋರಿಸಿ, ಉಂಗುರಗಳನ್ನು ತೆಗೆದುಕೊಂಡು ಹೋಗಿದ್ದ. ಆದರೆ ಅಂಗಡಿಯ ಖಾತೆಗೆ ಸಂತೋಷ್ ಕಳುಹಿಸಿದ ಹಣ ಜಮೆಯಾಗದ ಕಾರಣ, ಅಂಗಡಿಯ ಮಾಲೀಕರು ಸಂತೋಷ್ ಗೆ ಕರೆ ಮಾಡಿ ಕೇಳಿದಾಗ, ಆತ ನಾಳೆ ಕೊಡುವುದಾಗಿ ತಿಳಿಸಿದ್ದ. ಆದರೆ ಇಷ್ಟು ತಿಂಗಳುಗಳು ಕಳೆದರೂ, ಇನ್ನೂ ಮರುಪಾವತಿಸಿಲ್ಲ ಎಂದು ಆಭರಣ ಅಂಗಡಿಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಮಾಸೆಬೈಲು ಪೊಲೀಸರು ಕಾರ್ಯಾಚರಣೆ ನಡೆಸಿದಾಗ, ತಲೆಮರೆಸಿಕೊಂಡಿದ್ದ ಆರೋಪಿ ಸೆರೆ ಸಿಕ್ಕಿದ್ದು, ಆತನ ಹೆಸರು ಸಂತೋಷ್ ಅಲ್ಲ ಪ್ರವೀಣ್ ಎನ್ನುವುದು ತಿಳಿದುಬಂದಿದೆ. ಆರೋಪಿಯನ್ನು ಕಳೆದೆರಡು ದಿನಗಳ ಹಿಂದೆ ಬಂಧಿಸಿದ್ದು, ಆತನ ಬಳಿಯಿದ್ದ ಕಾರು ಮತ್ತು ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
* ಯಲ್ಲಾಪುರ: ಕಾರಿಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ
ಯಲ್ಲಾಪುರ: ಕುಮಟಾ ಕಡೆಗೆ ಸಾಗುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕ ಢಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ, ಆಕಸ್ಮಿಕವಾಗಿ ಬೆಂಕಿ ತಗುಲಿ, ಕಾರು ಸಂಪೂರ್ಣ ಸುಟ್ಟುಹೋದ ಘಟನೆ ಇಡಗುಂದಿ ಸಮೀಪದ ಶೇಡಿಕೆರೆ ಕ್ರಾಸ್ ಬಳಿ ಮಂಗಳವಾರ ನಡೆದಿದೆ. ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿದರೂ, ಕಾರು ಅಷ್ಟೊತ್ತಿಗಾಗಲೇ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಆದರೆ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಅಪಾಯ ಸಂಭವಿಸದೆ, ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಅವಘಡದಿಂದ ಕೆಲವು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು.




