Categories
ರಾಷ್ಟ್ರೀಯ ವಾರ್ತೆ

ವಾಟ್ಸ್​ಆ್ಯಪ್ ಖಾತೆಗಳಿಗೂ ಬಂತು ನಿಯಮ!

ವಾಟ್ಸ್​ಆ್ಯಪ್ ಖಾತೆಗಳಿಗೂ ಬಂತು ನಿಯಮ!
– ಮಾಡಬಾರದ್ದು ಮಾಡಿದರೆ ವಾಟ್ಸ್​ಆ್ಯಪ್ ಆಗುತ್ತೆ ಬಂದ್!
– ಭಾರತದ 71ಲಕ್ಷ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್!

NAMMUR EXPRESS NEWS
ನವದೆಹಲಿ: ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ ಆ್ಯಪ್ ಕಳೆದ ನವೆಂಬರ್ ತಿಂಗಳಲ್ಲಿ ಬರೋಬ್ಬರಿ 71ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದ್ದು, 2021ರ ಬಳಕೆದಾರರ ಸುರಕ್ಷತ ಕಾಯಿದೆ 4ರ ಅಡಿಯಲ್ಲಿ ವಾಟ್ಸ್​ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕಳೆದ ವರ್ಷ ನವೆಂಬರ್ 1 ಮತ್ತು ನವೆಂಬರ್ 30 ರ ನಡುವೆ 71,96,000 ಖಾತೆಗಳನ್ನು ನಿಷೇಧಿಸಲಾಗಿದೆ. ವಾಟ್ಸ್​ಆ್ಯಪ್​ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರಿಂದ ಸ್ವೀಕರಿಸಿದ 8841 ಕುಂದು ಕೊರತೆಗಳ ಆಧಾರದ ಮೇಲೆ ಈ ಖಾತೆಗಳನ್ನು ನಿಷೇಧಿಸುವ ನಿರ್ಧಾರವನ್ನು ವಾಟ್ಸ್​ಆ್ಯಪ್ ತೆಗೆದುಕೊಂಡಿದೆ. ಇವುಗಳಲ್ಲಿ ಖಾತೆಗಳನ್ನು ನಿಷೇಧಿಸುವುದು ಅಥವಾ ಹಿಂದೆ ನಿಷೇಧಿತ ಖಾತೆಯನ್ನು ಪುನಃ ಸಕ್ರಿಯಗೊಳಿಸುವುದು ಸೇರಿದೆ.

ಬ್ಯಾನ್‌ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ. ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ವಾಟ್ಸ್​ಆ್ಯಪ್ ನಿಂದನೆಯನ್ನು ತಡೆಗಟ್ಟುವ ಕ್ರಮದಲ್ಲಿ ಮುಂಚೂಣಿಯಲ್ಲಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ವಾಟ್ಸ್ ಆ್ಯಪ್ ಮ್ಯಾನೇಜ್ಮೆಂಟ್ ಹೇಳಿದೆ.

ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್‌ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು. ಸಿಮ್ ಖರೀದಿಗೂ ಕಟ್ಟು ನಿಟ್ಟಿನ ನಿಯಮಗಳು ಬಂದಿದ್ದು, ಇದೀಗ ವಾಟ್ಸ್ ಆ್ಯಪ್ ನಿಯಮಗಳು ಹೀಗೆ ಬದಲಾಗಿದ್ದು ಸಮಾಜದ ಮತ್ತು ಜನರ ಮಾನಸಿಕ ಆರೋಗ್ಯಕ್ಕೆ ಸಕಾರಾತ್ಮಕವಾಗಿದೆ.

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ

ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ
– ಸಿಎಂ ಯೋಗಿ ಆದಿತ್ಯನಾಥ್ ಗೆ ಬಾಂಬ್ ಬೆದರಿಕೆ ಇ-ಮೇಲ್.!
-ಯುಪಿ ಪೊಲೀಸರಿಂದ ತನಿಖೆ!

NAMMUR EXPRESS NEWS
ನವದೆಹಲಿ: ಇನ್ನೇನು ಕೆಲ ದಿನಗಳಲ್ಲಿಯೇ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನೆರವೇರಲಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನಡುವೆ ಒಂದು ಸಂದೇಶವುಳ್ಳ ಇ-ಮೇಲ್ ಆತಂಕ ಸೃಷ್ಟಿಸುವಂತೆ ಮಾಡಿದೆ. ಹೌದು, ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಬಾಂಬ್ ದಾಳಿ ಮೂಲಕ ಸ್ಫೋಟಿಸುವ ಬೆದರಿಕೆಯ ಇ-ಮೇಲ್ ಒಂದು ಬಂದಿದೆ. ಈ ಸಂದೇಶದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಸ್‌ಟಿಎಫ್ ಎಡಿಜಿ ಅಮಿತಾಬ್ ಯಶ್ ಅವರ ಬಗ್ಗೆಯೂ ಬರೆಯಲಾಗಿದೆ. ಇ-ಮೇಲ್ ಕಳುಹಿಸಿದ ವ್ಯಕ್ತಿ ತನಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜೊತೆ ಸಂಬಂಧ ಇದೆ ಎಂದೂ ತಿಳಿಸಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಯುಪಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಆಕ್ಷೇಪಾರ್ಹ ಭಾಷೆಯನ್ನು ಬಳಸಿ ಭಾರತೀಯ ಕಿಸಾನ್ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ರವಾನಿದ್ದಾನೆ. ಇನ್ನು ಇ-ಮೇಲ್ ಕಳುಹಿಸಿದ ವ್ಯಕ್ತಿ ತನ್ನನ್ನು ಜುಬೈರ್ ಹುಸೇನ್ ಖಾನ್ ಎಂದು ಹೇಳಿಕೊಂಡಿದ್ದು, ಐಎಸ್‌ಐ ಜತೆಗೂ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ದೇವೇಂದ್ರ ತಿವಾರಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಹಿಂದೆಯೂ ಸಹ ಇಂತಹ ಬೆದರಿಕೆ ಮೇಲ್ ಬಂದಿರುವುದಾಗಿ ತಿವಾರಿ ತಿಳಿಸಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್, ಎಡಿಜಿ ಅಮಿತಾಬ ಯಶ್ ಹಾಗೂ ದೇವೇಂದ್ರ ತಿವಾರಿ ಅವರನ್ನು ಬೆದರಿಕೆ ಇ-ಮೇಲ್‌ನಲ್ಲಿ ಗೋಸೇವಕರು ಎಂದು ಬರೆದುಕೊಂಡಿದ್ದಾನೆ. ಬೆದರಿಕೆಯ ಇ-ಮೇಲ್ ಸಂದೇಶ ಕಳೆದ 2 ದಿನದ ಹಿಂದೆ ದೇವೇಂದ್ರ ಅವರ ಮೇಲ್ ಐಡಿಗೆ ಬಂದಿದೆ. ಉಳಿದ ಮಾಹಿತಿಗಳು ತನಿಖೆಯ ನಂತರವೇ ಲಭ್ಯವಾಗಬೇಕಿದೆ.

Categories
ರಾಷ್ಟ್ರೀಯ ವಾರ್ತೆ

ಅಯೋಧ್ಯೆಗೆ ಕರ್ನಾಟಕದ ಕಾಣಿಕೆ!

ಅಯೋಧ್ಯೆಗೆ ಕರ್ನಾಟಕದ ಕಾಣಿಕೆ!
– ಮೈಸೂರಿನ ಶಿಲ್ಪಿ ಕೆತ್ತಿದ ಶ್ರೀರಾಮ ವಿಗ್ರಹ!
– ಹೆಚ್ ಡಿ ಕೋಟೆಯ ಕಲ್ಲು ಬಳಕೆ!

NAMMUR EXPRESS NEWS
ಬೆಂಗಳೂರು: ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು ಇದೇ ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಈ ಘಳಿಗೆಗಾಗಿ ದೇಶ ವಿದೇಶಗಳೂ ಎದುರು ನೋಡುತ್ತಿವೆ. ಇಂತಹ ಪುಣ್ಯ ಕ್ಷೇತ್ರಕ್ಕೆ ನಮ್ಮ ಕರ್ನಾಟಕದಿಂದಲೂ ಕಾಣಿಕೆ ಮತ್ತು ಅಳಿಲು ಸೇವೆಗಳನ್ನು ಸಲ್ಲಿಸಲಾಗಿದೆ. ಇದೀಗ ಆ ಸೇವೆಯೊಂದಿಗೆ ಅತ್ಯುತ್ತಮ ಸೇರ್ಪಡೆಯಾಗಿ ಕರ್ನಾಟಕದ ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ್ ಶ್ರೀ ರಾಮಮಂದಿರದ ರಾಮನ ಮೂರ್ತಿಯನ್ನು ಕೆತ್ತಿರುವುದು! ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ. ಶ್ರೀರಾಮ ವಿಗ್ರಹದ ಕೆತ್ತನೆಗೆ ಬಳಸಲಾದ ಕಲ್ಲು ಕೂಡ ನಮ್ಮ ಕರ್ನಾಟಕದ ಹೆಚ್ ಡಿ ಕೋಟೆಯದು ಎಂಬುದು ಅತ್ಯಂತ ಹೆಮ್ಮೆಯ ಮತ್ತು ಸಂತಸದ ಸಂಗತಿಯಾಗಿದೆ.

ಶ್ರೀರಾಮನ ಭಂಟ ಹನುಮ ಜನಿಸಿದ ನೆಲ ಕರ್ನಾಟಕ. ಇಲ್ಲಿಂದಲೇ ಮೂರ್ತಿಯ ಕೆತ್ತನೆಯಾಗಿರುವುದು ಭಾವನಾತ್ಮಕವಾಗಿ ಇನ್ನಷ್ಟು ಹತ್ತಿರವಾಗಿದೆ. ಅಂತರಾಷ್ಟ್ರೀಯ ಗಮನ ಸೆಳೆದ ಕೇದಾರನಾಥದ ಆದಿ ಶಂಕರಚಾರ್ಯ, ದೆಹಲಿಯ ಇಂಡಿಯಾ ಗೇಟ್ ಬಳಿಯ ಸುಭಾಷ್ ಚಂದ್ರ ಬೋಸ್, ಇದೀಗ ಅಯೋಧ್ಯೆಯ ಬಾಲ ರಾಮನ ಮೂರ್ತಿಯ ವಿಗ್ರಹ ರೂಪಿಸಿ, ರಾಜ್ಯಕ್ಕೆ ಶ್ರೇಷ್ಠ ಕೀರ್ತಿ ತಂದ ಶಿಲ್ಪಿ ಯೋಗಿರಾಜ್ ಹಾಗೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾದ ಅವರ ತಂಡದವರಿಗೆ ಇಡೀ ಕನ್ನಡ ನೆಲ ಅಭಿನಂದಿಸುತ್ತದೆ.

Categories
ರಾಷ್ಟ್ರೀಯ ವಾರ್ತೆ

ಮಹರ್ಷಿ ವಾಲ್ಮೀಕಿ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದ ಉದ್ಘಾಟನೆ

ಮಹರ್ಷಿ ವಾಲ್ಮೀಕಿ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದ ಉದ್ಘಾಟನೆ
– ವಂದೇ ಮಾತರಂ ರೈಲುಗಳ ಸಂಚಾರಕ್ಕೆ ಚಾಲನೆ!

NAMMUR EXPRESS NEWS
ನವದೆಹಲಿ: ಡಿಸೆಂಬರ್ 30ರ ಶನಿವಾರ, ಐತಿಹಾಸಿಕ ಹಿನ್ನೆಲೆಯ ಧಾರ್ಮಿಕ ಕ್ಷೇತ್ರ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನಲೆಯಲ್ಲಿ ಅದಕ್ಕೂ ಮೊದಲು ಅಯೋಧ್ಯೆಗೆ ಸುಲಭ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಾಲ್ಮೀಕಿ ಇಂಟರ್ನ್ಯಾಷನಲ್ ಏರ್ಪೋರ್ಟ್ ನ ಉದ್ಘಾಟನೆಯನ್ನು ಅಯೋಧ್ಯ ಧಾಮದಲ್ಲಿ ಇಂದು ನೆರವೇರಿಸಲಿದ್ದಾರೆ. ಆಧುನಿಕ ತಂತ್ರಜ್ಞಾನದ ಜೊತೆಗೆ ಭಾರತೀಯ ಪರಂಪರೆಯನ್ನು ಹೊದ್ದು ನಿಂತ ವಿಮಾನ ನಿಲ್ದಾಣವನ್ನು ನೋಡುವುದೇ ಆನಂದವಾಗಿದೆ. ಇದೇ ಡಿ.30 ರ ಈ ದಿನ ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳೂರು‌ ಮಡಗಾಂವ್ ವಂದೇ ಭಾರತ್ ಎಕ್ಸ್​ಪ್ರೆಸ್ ಸೇರಿದಂತೆ 6 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಭಾರತ್ ಎಕ್ಸ್​ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಈಗಾಗಲೇ ನಡೆದಿದ್ದು, ಯಶಸ್ವಿಯಾಗಿದೆ. ರೈಲಿನ ಆರಂಭಿಕ ಸಂಚಾರಕ್ಕೆ ದಕ್ಷಿಣ ರೈಲ್ವೆ ವಲಯವು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಂಗಳೂರು ಮಡಗಾಂವ್ ರೈಲು 320 ಕಿಮೀ ಓಡಾಟ ಮಾಡಿದ್ದು, ಯಾವುದೇ ಸಮಸ್ಯೆಗಳು ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ಮಡಗಾಂವ್ ಸಂಚಾರದ ನಡುವೆ ಉಡುಪಿ ಮತ್ತು ಕಾರವಾರದಲ್ಲಿ ಎರಡು ನಿಲುಗಡೆಗಳು ಇರಲಿವೆ. ದೆಹಲಿಯಿಂದ ಕತ್ರಾ, ದೆಹಲಿಯಿಂದ ಲಕ್ನೋ ಮೂಲಕ ಅಯೋಧ್ಯೆ, ದೆಹಲಿಯಿಂದ ಚಂಡೀಗಢ ಮಾರ್ಗವಾಗಿ ಸಾಗಲಿದೆ. *ಬೆಂಗಳೂರು – ಕೊಯಮತ್ತೂರು ವಂದೇ ಭಾರತ್ ಎಕ್ಸ್​ಪ್ರೆಸ್​ಗಳಿಗೂ ಡಿಸೆಂಬರ್ 30ರಂದು ಚಾಲನೆ ದೊರೆಯಲಿದೆ. ಬೆಂಗಳೂರು – ಕೊಯಮತ್ತೂರು ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸಹ ಇತ್ತೀಚೆಗೆ ಯಶಸ್ವಿ ಪ್ರಾಯೋಗಿಕ ಸಂಚಾರ ನಡೆಸಿತ್ತು.

Categories
ರಾಷ್ಟ್ರೀಯ ವಾರ್ತೆ

ಕೈಯಲ್ಲಿ ಕೇಸರಿ ಧ್ವಜ, ಬಾಯಲ್ಲಿ ರಾಮ ನಾಮ..!

ಕೈಯಲ್ಲಿ ಕೇಸರಿ ಧ್ವಜ, ಬಾಯಲ್ಲಿ ರಾಮ ನಾಮ..!
– ಅಯೋಧ್ಯೆಗೆ ಹೊರಟ ಭಕ್ತೆ ಶಬನಂ ಶೇಖ್..!

NAMMUR EXPRESS NEWS
ಮನಸ್ಸಿನಿಂದ ದೇವರ ಹುಡುಕುವವನಿಗೆ ಜಾತಿ, ಧರ್ಮ ಅಡ್ಡಿಯಾಗದು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದು ಇತಿಹಾಸಿದಲ್ಲೂ ರುಜುವಾತಾಗಿದೆ. ಈಗ ಮತ್ತೆ ಇಂತಹದ್ದೆ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನೇನು ಕೆಲ ದಿನಗಳಲ್ಲೇ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ರಾಮನ ಕಣ್ತುಂಬಿಕೊಳ್ಳಲು ಇಡೀ ಭಕ್ತ ಸಮೂಹ ತುದಿಗಾಲಲ್ಲಿ ನಿಂತಿದೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಮುಂಬರುವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 22 ರಂದು ದೇವಾಲಯವನ್ನು ಅನಾವರಣಗೊಳಿಸಲಿದ್ದು, ಅದರ ಪವಿತ್ರ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಇರಿಸಲಾಗಿದೆ. ರಾಮಮಂದಿರ ಟ್ರಸ್ಟ್‌ನಿಂದ ಸಾವಿರಾರು ಗಣ್ಯರಿಗೆ ಆಹ್ವಾನ ಬಂದಿದ್ದು,

ಸಿದ್ಧತೆಗಳು ಭರದಿಂದ ಸಾಗಿವೆ. ಈ ಉತ್ಸಾಹದ ನಡುವೆ, ಮುಂಬೈನಿಂದ ಬಂದ ಮುಸ್ಲಿಂ ಯುವತಿ ಭಗವಾನ್ ರಾಮನ ದರ್ಶನಕ್ಕಾಗಿ ಹಂಬಲಿಸುತ್ತಾ ಅಯೋಧ್ಯೆಗೆ ಯಾತ್ರೆ ಆರಂಭಿಸಿರುವುದು ಭಾರೀ ಸದ್ದು ಮಾಡ್ತಿದೆ. ಇದು ಧರ್ಮಗಳ ಆಚೆಗಿನ ಭಕ್ತಿಯ ಸಾರವಾಗಿದೆ. ಆಕೆ ರಾಮನ ಭಕ್ತಿಯಾಗಿದ್ದು, ಬರೋಬ್ಬರಿ 1,425 ಕಿ.ಮೀ ದೂರ ಸಾಗಿ ರಾಮನ ದರ್ಶನ ಪಡೆಯಲು ಮುಂದಾಗಿದ್ದಾಳೆ. ರಾಮನ ಕಟ್ಟಾ ಭಕ್ತಿ ಮತ್ತು ಸ್ವಯಂ ಘೋಷಿತ ಸನಾತನಿ ಶಬನಂ ಶೇಖ್ ಅವರು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಶ್ರೀರಾಮನ ಬ್ಯಾನ‌ರ್ ಹಿಡಿದು ನೂರು ಕಿಲೋಮೀಟ‌ರ್ ದಾಟಿದ್ದಾರೆ. ದಾರಿಯುದ್ದಕ್ಕೂ ಶ್ರೀರಾಮನ ಭಕ್ತರೊಂದಿಗೆ ಆಕೆ ಮುಖಾಮುಖಿ ಮಾತುಕತೆ ಹಾಗೂ ದಾರಿಯುದ್ದಕ್ಕೂ ಆಕೆಯ ಜೈಶ್ರೀರಾಮ್ ಘೋಷಣೆಯ ವಿಡಿಯೋಗಳು ಈಗ ವೈರಲ್ ಆಗ್ತಿವೆ. ಈ ಎಲ್ಲಾ ವಿಡಿಯೋಗಳನ್ನು ಹಾಗೂ ಆಕೆ ಭೇಟಿಯಾದ ಭಕ್ತರ ಕುರಿತಾದ ವಿಚಾರಗಳನ್ನು ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಆಕೆ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ಕೇಳಿಬಂದಿದೆ.

Categories
ರಾಷ್ಟ್ರೀಯ ವಾರ್ತೆ

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೊರೊನಾ ವೈರಸ್..!

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೊರೊನಾ ವೈರಸ್..!
– ಮತ್ತೆ ಕೋವಿಡ್ ಲಸಿಕೆ ಹಾಕಿಸಬೇಕಾ?
– 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಕ್ರಮವಾಗಿ 3ನೇ ಡೋಸ್

NAMMUR EXPRESS NEWS
ನವದೆಹಲಿ: ದಿನದಿಂದ ದಿನಕ್ಕೆ ಕೊರೋನಾ ಪೀಡಿತರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಈ ಮಧ್ಯೆ ಪ್ರಪಂಚದಾದ್ಯಂತ ಆತಂಕವನ್ನು ಸೃಷ್ಟಿಸುತ್ತಿರುವ ಕೊರೋನಾ ವೈರಸ್‌ನ ಹೊಸ ಉಪ-ವೇರಿಯಂಟ್ JN.1 ಭಾರತವನ್ನು ಪ್ರವೇಶಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಮೊದಲು ಕೇರಳದಲ್ಲಿ ವರದಿಯಾದ ನಂತರ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ವೇಗವಾಗಿ ಹರಡುತ್ತಿದ್ದು, ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡುವಂತೆ ಸೂಚನೆ ನೀಡಿದೆ. ಸದ್ಯಕ್ಕೆ ಬೂಸ್ಟ‌ರ್ ಡೋಸ್ ಅಥವಾ ನಾಲ್ಕನೇ ಲಸಿಕೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಡಿಯಾ SARS-COV-2 ಜೀನೋಮಿಕ್ಸ್ ಕನ್ಫೋರ್ಟಿಯಂ ಮುಖ್ಯಸ್ಥ ಡಾ. ಎನ್.ಕೆ. ಅರೋರಾ, ಹೊಸ ಉಪ-ವೇರಿಯಂಟ್‌ಗಳ ಹೊರ ಹೊಮ್ಮುವಿಕೆಯ ನಂತರ, ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿರುವ ಡಾ.ಅರೋರಾ, ’60 ವರ್ಷ ಮೇಲ್ಪಟ್ಟವರು ಅಥವಾ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮಾತ್ರ ಮುನ್ನೆಚ್ಚರಿಕೆ ಕ್ರಮವಾಗಿ ಮೂರನೇ ಡೋಸ್ ತೆಗೆದುಕೊಳ್ಳಬಹುದು. ಆದರೆ ಪ್ರಸ್ತುತ ಜನ ಸಾಮಾನ್ಯರಿಗೆ ನಾಲ್ಕನೇ ಡೋಸ್ ಅಗತ್ಯವಿಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು, ‘ಓಮಿಕ್ರಾನ್‌ನ ಈ ಹೊಸ ರೂಪಾಂತರದಿಂದ ವರದಿಯಾದ ಪ್ರಕರಣಗಳು ಹೆಚ್ಚು ಗಂಭೀರವಾಗಿಲ್ಲ ಮತ್ತು ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಬೇಕಾಗಿಲ್ಲ. JN.1 ಉಪವಿಭಾಗದ ಲಕ್ಷಣಗಳು ಜ್ವರ, ಸ್ರವಿಸುವ ಮೂಗು, ಕೆಮ್ಮು, ಕೆಲವೊಮ್ಮೆ ಅತಿಸಾರ ಮತ್ತು ತೀವ್ರವಾದ ದೇಹದ ನೋವುಗಳನ್ನು ಒಳಗೊಂಡಿರುತ್ತದೆ. ಇದು ಸಾಮಾನ್ಯವಾಗಿ ಒಂದು ವಾರದೊಳಗೆ ವಾಸಿಯಾಗುತ್ತದೆ. ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೇ ರಾಜ್ಯಗಳಿಗೆ ಪರೀಕ್ಷೆಯನ್ನು ಹೆಚ್ಚಿಸುವಂತೆ ಸೂಚಿಸಿದೆ. ಭಾನುವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಒಂದೇ ದಿನದಲ್ಲಿ 656 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗಿವೆ.

Categories
ರಾಷ್ಟ್ರೀಯ ವಾರ್ತೆ

ಇನ್ಮುಂದೆ ಸುಲಭವಾಗಿ ಸಿಗಲ್ಲ ಆಧಾರ್‌ ಕಾರ್ಡ್..!

ಇನ್ಮುಂದೆ ಸುಲಭವಾಗಿ ಸಿಗಲ್ಲ ಆಧಾರ್‌ ಕಾರ್ಡ್..!
– ಕಠಿಣ ನಿಯಮ ಜಾರಿ: ಆಧಾರ್ ವಿವರ ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸುವುದು ಕಡ್ಡಾಯ
– ಏನಿದು ಹೊಸ ನಿಯಮ… ಇಲ್ಲಿದೆ ಡೀಟೇಲ್ಸ್..!

NAMMUR EXPRESS NEWS
ನವದೆಹಲಿ: ಇನ್ನು ಮುಂದೆ ರಾಜ್ಯ ಸರ್ಕಾರವು ಆಧಾರ್ ನೋಂದಣಿಯ ಸಂಪೂರ್ಣ ಪರಿಶೀಲನೆ ನಡೆಸಲಿದೆ. ಈ ಕಾರ್ಯಕ್ಕಾಗಿ, ರಾಜ್ಯ ಸರ್ಕಾರವು ಜಿಲ್ಲಾ ಮತ್ತು ಉಪ-ವಿಭಾಗೀಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳು ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರ್‌ಗಳನ್ನು ನೇಮಿಸುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟವರು ನಿಗದಿಪಡಿಸಿದ ಕೇಂದ್ರಗಳಲ್ಲಿ ಆಧಾ‌ರ್ ಕಾರ್ಡ್ ಪಡೆಯಬಹುದು. ಪ್ರತಿ ಜಿಲ್ಲೆಯ ಮುಖ್ಯ ಅಂಚೆ ಕಚೇರಿ ಮತ್ತು ಯುಐಡಿಎಐ ನಿರ್ದಿಷ್ಟಪಡಿಸಿದ ಇತರ ಆಧಾರ್ ಕೇಂದ್ರಗಳಲ್ಲಿಯೂ ಈ ಸೌಲಭ್ಯ ದೊರೆಯಲಿದೆ. ಆಧಾ‌ರ್ ಅರ್ಜಿಗಳನ್ನು ಸೇವಾ ಪೋರ್ಟಲ್ ಸ್ವೀಕರಿಸುವ ಮೊದಲು ಡೇಟಾ ಗುಣಮಟ್ಟ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಎಲ್ಲ ಅಪ್ಲಿಕೇಷನ್‌ನ ಪರಿಶೀಲನೆಯನ್ನು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮೇಲ್ವಿಚಾರಣೆ ನಡೆಸುತ್ತಾರೆ.

ಅನುಮತಿ ಪಡೆದ 180 ದಿನಗಳಲ್ಲಿ ಆಧಾ‌ರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಐಡಿಎಐ ಅಧಿಕಾರಿ ಪ್ರಶಾಂತ್‌ ಕುಮಾರ್ ಸಿಂಗ್ ಮಾತನಾಡಿ, “ಇತ್ತೀಚೆಗೆ ಹೊರಡಿಸಲಾದ ನಿರ್ದೇಶನಗಳು ಮೊದಲ ಬಾರಿಗೆ ಆಧಾರ್ ಕಾರ್ಡ್ ಪಡೆಯುವ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಅನ್ವಯವಾಗುತ್ತದೆ’ ಎಂದು ತಿಳಿಸಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಈ ಬದಲಾವಣೆ ಮಾಡಲಾಗಿದೆ. ಈ ರೀತಿಯ ವೆರಿಫಿಕೇಶನ್ ಪ್ರಕ್ರಿಯೆ ಮೊದಲ ಬಾರಿಗೆ ಆಧಾರ್ ಮಾಡಿಸುತ್ತಿರುವ 18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಅನ್ವಯ. ಒಮ್ಮೆ ಈ ಪ್ರಕ್ರಿಯೆ ಮೂಲಕ ಆಧಾರ್ ಕಾರ್ಡ್ ಮಾಡಿಸಿದ ಬಳಿಕ ಅವರು ಆಧಾ‌ರ್ ಅಪ್‌ಡೇಟ್‌ ಇತ್ಯಾದಿ ಕಾರ್ಯಗಳನ್ನು ಮಾಮೂಲಿಯಾಗಿಯೇ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. ಆಧಾ‌ರ್ ಕಾರ್ಡ್‌ನಲ್ಲಿ ತಮ್ಮ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ನವೀಕರಿಸಬಹುದಾದ ಕಾಲವಕಾಶವನ್ನು ಇತ್ತೀಚೆಗೆ ಯುಐಡಿಎಐ ಮತ್ತೊಮ್ಮೆ ವಿಸ್ತರಿಸಿದೆ.

“ಆಧಾರ್ ಕಾರ್ಡ್‌ನ ಮಾಹಿತಿಯನ್ನು ಉಚಿತವಾಗಿ ನವೀಕರಿಸಬಹುದಾದ ಸೌಲಭ್ಯವನ್ನು ಇನ್ನೂ 3 ತಿಂಗಳು ವಿಸ್ತರಿಸಲಾಗಿದೆ. ಅಂದರೆ 2024ರ ಮಾರ್ಚ್ 14ರವರೆಗೆ ಉಚಿತ ನವೀಕರಣಕ್ಕೆ ಅವಕಾಶವಿದೆ” ಎಂದು ತಿಳಿಸಿದೆ. ಈ ಸೇವೆಯು ಹಿಂದಿನಂತೆ ಮೈ ಆಧಾ‌ರ್ ಪೋರ್ಟಲ್ ನಲ್ಲಿ ಮಾತ್ರ ಉಚಿತವಾಗಿದ್ದು, ಆಧಾರ್ ಕೇಂದ್ರಗಳಲ್ಲಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಮುಂತಾದ ವಿವರಗಳನ್ನು ನವೀಕರಿಸಬಹುದು. 2024ರ ಮಾರ್ಚ್ 14ರ ನಂತರ ನೀವು ಶುಲ್ಕ ಪಾವತಿಸಿ ಅಪ್‌ಡೇಟ್ ಮಾಡಬೇಕಾಗುತ್ತದೆ ಎಂದು ಯುಐಡಿಎಐ ತಿಳಿಸಿದೆ. ಯುಐಡಿಎಐ ಪ್ರಜೆಗಳು ತಮ್ಮ ಆಧಾರ್ ವಿವರಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ.

ಮದುವೆ, ವಾಸಸ್ಥಾನ ಬದಲಾವಣೆ ಇತ್ಯಾದಿ ಜೀವನ ಘಟನೆಗಳಿಂದ ವ್ಯಕ್ತಿ ಹೆಸರು ಮತ್ತು ವಿಳಾಸದಂತಹ ಮೂಲಭೂತ ಜನಸಂಖ್ಯಾ ವಿವರಗಳನ್ನು ಬದಲಾಯಿಸಬೇಕಾಗಬಹುದು. ವಿಳಾಸ ಮತ್ತು ಮೊಬೈಲ್ ಸಂಖ್ಯೆ ಹೊಸ ಸ್ಥಳಗಳಿಗೆ ವಲಸೆ ಹೋದಾಗ ಬದಲಾಗಬಹುದು. ಇದರ ಜತೆಗೆ ಮಕ್ಕಳ ಆಧಾ‌ರ್ ವಿವರಗಳನ್ನು ನವೀಕರಿಸಲು ಸರ್ಕಾರ ಈಗ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈ ಮಾರ್ಗಸೂಚಿಗಳ ಪ್ರಕಾರ, ಮಗುವಿಗೆ 15 ವರ್ಷ ವಯಸ್ಸಾದಾಗ ನವೀಕರಣಕ್ಕಾಗಿ ಎಲ್ಲ ಬಯೋಮೆಟ್ರಿಕ್‌ಗಳನ್ನು ಒದಗಿಸಬೇಕು.

Categories
ರಾಷ್ಟ್ರೀಯ ವಾರ್ತೆ

ಎಚ್ಚರಿಕೆ! ಕಿವುಡ ಹುಚ್ಚ ಕುಂಟ ಎಂಬ ಪದ ಬಳಸುವುಂತಿಲ್ಲ!

ಎಚ್ಚರಿಕೆ! ಕಿವುಡ ಹುಚ್ಚ ಕುಂಟ ಎಂಬ ಪದ ಬಳಸುವುಂತಿಲ್ಲ!
– ರಾಜಕಾರಣಿಗಳಿಗೆ ಎಚ್ಚರಿಕೆ ನೀಡಿದ ಚುನಾವಣಾ ಆಯೋಗ
– ಅಂಗವೈಕಲ್ಯ ವ್ಯಕ್ತಿಗಳ ಹಕ್ಕು ಕಾಯ್ದೆ ಅಡಿ ಕ್ರಮ

NAMMUR EXPRESS NEWS
ಹೊಸದಿಲ್ಲಿ: ರಾಜಕಾರಣಿಗಳು, ಅಭ್ಯರ್ಥಿಗಳು ಅಂಗವಿಕಲರಿಗೆ (ಶಾರೀರಿಕ ನ್ಯೂನತೆ ಉಳ್ಳವರು) ಅವಮಾನ ಉಂಟಾಗುವಂತಹ ಪದ/ವಾಕ್ಯಗಳನ್ನು ಸಾರ್ವಜನಿಕ ಭಾಷಣಗಳಲ್ಲಿ ಬಳಸಬಾರದು. ಹಾಗೊಂದು ವೇಳೆ ಬಳಸಿದರೆ ಅದನ್ನು ಅಂಗವಿಕಲರಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ದೇಶದ ಎಲ್ಲ ರಾಜಕೀಯ ಪಕ್ಷಗಳು, ರಾಜಕಾರಣಿಗಳಿಗೆ ಈ ಮೂಲಕ ಸಭ್ಯ ಭಾಷೆಯನ್ನು ಬಳಸಬೇಕೆಂದು ಎಚ್ಚರಿಕೆ ನೀಡಿದೆ. ಒಂದು ವೇಳೆ ಬಳಸಿದರೆ “ಅಂಗವೈಕಲ್ಯಗಳನ್ನುಳ್ಳ ವ್ಯಕ್ತಿಗಳ ಹಕ್ಕು ಕಾಯ್ದೆಯ 92ರ ವಿಧಿಯನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ತಿಳಿಸಿದೆ. ರಾಜಕೀಯ ಪಕ್ಷಗಳು ಅಂಗವಿಕಲರನ್ನು ಪಕ್ಷದ ಸದಸ್ಯರು, ಕಾರ್ಯಕರ್ತರನ್ನಾಗಿ ತೆಗೆದುಕೊಳ್ಳಬೇಕು. ಆ ಮೂಲಕ ಅವರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೆಗೆದು ಹಾಕಬೇಕು, ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ಎಲ್ಲ ಪ್ರಚಾರ ಸಾಮಗ್ರಿಗಳನ್ನು (ಭಾಷಣಗಳು, ಸಾಮಾಜಿಕ ತಾಣಗಳಲ್ಲಿನ ಪೋಸ್ಟ್ ಗಳು, ಜಾಹೀರಾತು, ಮಾಧ್ಯಮ ಪ್ರಕಟನೆಗಳು) ಮೊದಲು ಆಂತರಿಕ ಪರಿಶೀಲನೆಗೊಳಪಡಿಸಬೇಕು ಎಂದು ಆಯೋಗ ಹೇಳಿದೆ.

ಯಾವ್ಯಾವ ಪದಗಳಿಗೆ ನಿರ್ಬಂಧ?

ಎಲ್ಲ ಕಡೆ ಸಾಮಾನ್ಯವಾಗಿ ಬಳಸುವಂತಹ ಮೂಗ, ಹುಚ್ಚ, ಕುರುಡ, ಕಿವುಡ, ಕುಂಟ… ಈ ರೀತಿಯ ಪದಗಳನ್ನು ಬಳಸ ಬಾರದೆಂದು ಹೇಳಲಾಗಿದೆ

Categories
ರಾಷ್ಟ್ರೀಯ ವಾರ್ತೆ

45 ದಿನ ಪರಿಮಳ ಸೂಸುವ 108 ಅಡಿ ಉದ್ದದ ಊದುಬತ್ತಿ!

45 ದಿನ ಪರಿಮಳ ಸೂಸುವ 108 ಅಡಿ ಉದ್ದದ ಊದುಬತ್ತಿ!
– ಅಯೋಧ್ಯೆ ರಾಮನಿಗೆ ತನ್ನ ಕಾಣಿಕೆ ನೀಡಿದ ಭಕ್ತ
– ಅಯೋಧ್ಯೆಗೆ ದೇಶದ ವಿವಿಧ ಕಡೆಯಿಂದ 1,000 ರೈಲು!

NAMMUR EXPRESS NEWS
ಅಯೋಧ್ಯೆ: ದೇಶವೇ ಕಾಯುತ್ತಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಭಾರಿ ಸಿದ್ಧತೆ ನಡೆಸುತ್ತಿದೆ. ಈ ನಡುವೆ ರಾಮಭಕ್ತರೊಬ್ಬರು ಐದೂವರೆ ಲಕ್ಷ ರೂಪಾಯಿ ವೆಚ್ಚ ವ್ಯಯಿಸಿ ತಯಾರಿಸಿದ ಬೃಹತ್ ಅಗರಬತ್ತಿ ಇದೀಗ ಗಮನ ಸೆಳೆಯುತ್ತಿದೆ. ಸುಮಾರು ಅಯೋಧ್ಯೆಗೆ ಸುಮಾರು 45 ದಿನ ಪರಿಮಳ ಸೂಸುವ 108 ಅಡಿ ಉದ್ದದ ಊದುಬತ್ತಿಯನ್ನು ಭಕ್ತನೊಬ್ಬ ಕಾಣಿಕೆಯಾಗಿ ನೀಡಿದ್ದಾನೆ. ವಡೋದರದ ರಾಮ ಭಕ್ತನೊಬ್ಬ ಮಾಡಿದ ಭವ್ಯವಾದ, ಭಾರವಾದ ಧೂಪದ್ರವ್ಯವು ತನ್ನ ಪರಿಮಳವನ್ನು ಅಯೋಧ್ಯೆಯಲ್ಲಿ ಹರಡಲು ಸಿದ್ಧವಾಗುತ್ತಿದೆ. ರಾಮಮಂದಿರ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಈ ಧೂಪದ್ರವ್ಯವನ್ನು ಬಳಸಲಾಗುವುದು. ವಡೋದರದ ತರ್ಸಾಲಿ ಮೂಲದ ವಿಹಾಭಾಯಿ ಭರ್ವಾಡ್ ಅವರು ವೃತ್ತಿಯಲ್ಲಿ ಕೃಷಿಕರು ಮತ್ತು ಜಾನುವಾರು ಸಾಕಣೆದಾರರಾಗಿದ್ದಾರೆ.

ರಾಮನನ್ನು ಬಹಳ ಭಕ್ತಿಯಿಂದ ಪೂಜಿಸುತ್ತಾರೆ. ರಾಮಮಂದಿರ ಉದ್ಘಾಟನೆ ನಿಮಿತ್ತ ಬೃಹತ್ ಧೂಪದ್ರವ್ಯವನ್ನು ಸಿದ್ಧಪಡಿಸುತ್ತಿದ್ದಾರೆ. ಇದು 108 ಅಡಿ ಉದ್ದ ಮತ್ತು ನಾಲ್ಕೂವರೆ ಅಡಿ ಅಗಲದ ಬೃಹತ್ ಬತ್ತಿಯಾಗಿದೆ. ಡಿಸೆಂಬರ್ ಅಂತ್ಯದಲ್ಲಿ ವಡೋದರಾದಿಂದ ಅಯೋಧ್ಯೆಗೆ ಬೃಹತ್ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. 108 ಅಡಿ ಉದ್ದದ ಈ ಧೂಪದ್ರವ್ಯವನ್ನು ಅಯೋಧ್ಯೆಗೆ ಸಾಗಿಸಲು ಸುಮಾರು ನಾಲ್ಕೂವರೆ ಲಕ್ಷ ರೂಪಾಯಿ ವೆಚ್ಚವಾಗಲಿದೆಯಂತೆ. ವಡೋದರದ ತಾರ್ಸಾಲಿಯಲ್ಲಿರುವ ವಿಹಾಭಾಯಿ ಅವರ ಮನೆಯ ಸಮೀಪ ತೆರೆದ ಮೈದಾನದಲ್ಲಿ ನಿರ್ಮಿಸುತ್ತಿರುವ ಬೃಹತ್ ಧೂಪದ್ರವ್ಯವನ್ನು ಸಿದ್ಧಪಡಿಸಿದ ನಂತರ ನವಲಖಿ ಮೈದಾನಕ್ಕೆ ಕೊಂಡೊಯ್ಯಲಾಗುತ್ತದೆ. ವಡೋದರಾದಿಂದ ಅಯೋಧ್ಯೆಗೆ ಸುಮಾರು 1,800 ಕಿ.ಮೀ ದೂರವಿದೆ. ಅಗರಬತ್ತಿಗಳ ಸಾಗಣೆಗೆ ವಿಶೇಷ ಟ್ರೇಲರ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ಒಮ್ಮೆ ಬೆಳಗಿಸಿದರೆ 45 ದಿನಗಳ ಕಾಲ ನಿರಂತರವಾಗಿ ಸುಗಂಧ ಸೂಸುತ್ತದೆ.

ಅಗರಬತ್ತಿ ತಯಾರಿಸಲು ಬಳಸಲಾದ ವಸ್ತುಗಳು:

ಹಸುವಿನ ತುಪ್ಪ 91 ಕೆಜಿ, 376 ಕೆಜಿ ಗುಗ್ಗಿಲ್, 280 ಕೆಜಿ ಬಾರ್ಲಿ, 280 ಕೆಜಿ ಎಳ್ಳು, 376 ಕೆಜಿ ಒಣ ಕೊಬ್ಬರಿ ಪುಡಿ, 425 ಕೆಜಿ ಯಜ್ಞ ಸಾಮಗ್ರಿ ಬಳಸಲಾಗಿದೆ. ಒಟ್ಟು 3400 ಕೆ.ಜಿ ತೂಕದ ಈ ಅಗರಬತ್ತಿಯನ್ನು ಸಿದ್ಧಪಡಿಸಲಾಗಿದೆ. ಇದರ ತಯಾರಿಕೆಗೆ ಒಟ್ಟು 3428 ಕೆಜಿ ವಸ್ತುಗಳನ್ನು ಬಳಸಲಾಗಿದೆ. ಬಿಸಿಲು ಮತ್ತು ಬಿಸಿ ವಾತಾವರಣದಲ್ಲಿ ಹೊರಾಂಗಣದಲ್ಲಿ ತಯಾರಿಸಲಾಗುತ್ತಿದೆ.

ಅಯೋಧ್ಯೆಗೆ ದೇಶದ ವಿವಿಧ ಕಡೆಯಿಂದ 1,000 ರೈಲು!

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಮೊದಲ 100 ದಿನಗಳ ಕಾಲ ಅಯೋಧ್ಯೆಗೆ ದೇಶದ ವಿವಿಧ ಭಾಗಗಳಿಂದ 1000 ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ.
ಜ.22ರಂದು ಮಂದಿರದ ಉದ್ಘಾಟನೆ ನಡೆಯಲಿದೆ.
ಜ.19ರಿಂದ ಈ ರೈಲುಗಳ ಕಾರ್ಯಾಚರಣೆ ಆರಂಭವಾಗಲಿದೆ. ಅಯೋಧ್ಯೆ ರೈಲು ನಿಲ್ದಾಣ ವನ್ನು ನವೀಕರಿಸಲಾಗುತ್ತಿದ್ದು, ದಿನಕ್ಕೆ 50 ಸಾವಿರ ಜನರು ಸಂಚರಿಸುವ ಸಾಮರ್ಥ ಹೊಂದಲಿದೆ.

ಎಲ್ಲೆಲ್ಲಿಂದ ರೈಲು?

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತಾ, ನಾಗುರ, ಲಖನೌ ಮತ್ತು ಜಮ್ಮು ಸೇರಿದಂತೆ ವಿವಿಧ ನಗರ ಗಳಿಂದ ಅಯೋಧ್ಯೆಗೆ ರೈಲುಗಳು ಸಂಚರಿ ಸಲಿವೆ. ರಾಮನ ದರ್ಶನ ಮಾಡಿ ಇದೇ ರೈಲುಗಳಲ್ಲಿ ಭಕ್ತರು ಮರಳಬಹುದು.

Categories
ರಾಷ್ಟ್ರೀಯ ವಾರ್ತೆ

ಕರೋನಾ ಆತಂಕದಲ್ಲಿದ್ದವರಿಗೆ ಗುಡ್‌ ನ್ಯೂಸ್

ಕರೋನಾ ಆತಂಕದಲ್ಲಿದ್ದವರಿಗೆ ಗುಡ್‌ ನ್ಯೂಸ್
-ರೂಪಾಂತರಿ ʻJN.1ʼ ಹೆಚ್ಚು ಅಪಾಯಕಾರಿಯಲ್ಲ
– ವಿಶ್ವ ಸಂಸ್ಥೆಯಿಂದ ಮಾಹಿತಿ: ಯಾವ ಸ್ಥಿತಿಯಲ್ಲಿದೆ ಕರೋನಾ?

NAMMUR EXPRESS NEWS
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ(WHO) ಜೆಎನ್ .1 ಕೋವಿಡ್ ಸ್ಟ್ರೈನ್’ನ್ನ “ಆಸಕ್ತಿಯ ರೂಪಾಂತರ” ಎಂದು ವರ್ಗೀಕರಿಸಿದೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಹೇಳಿದೆ. ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ, ಜೆಎನ್ .1 ರಿಂದಾಗುವ ಸಾರ್ವಜನಿಕ ಅಪಾಯ ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ. ಹೀಗಾಗಿ ಭಯ ಪಡಬೇಕಿಲ್ಲ. ಜಾಗೃತಿ ವಹಿಸಬೇಕಿದೆ JN.1 ಎಂಬುದು BA.2.86ರ ಭಾಗವಾಗಿದ್ದು ರೂಪಾಂತರಿ ಎಂದು ವರ್ಗೀಕರಿಸಲಾಗಿದೆ. ಪ್ರಸ್ತುತ ಲಸಿಕೆಗಳು, JN.1 ಮತ್ತು COVID-19 ವೈರಸ್‌ ನ ಭಾಗಗಳಿಂದ ಸಂಭವಿಸಬಹುದಾದ ಯಾವುದೇ ಸಾವು ಮತ್ತು ತುರ್ತುಸ್ಥಿತಿಗಳಿಗೆ ಚಿಕಿತ್ಸೆ ನೀಡುತ್ತವೆ ಎಂದು ಯುನೈಟೆಡ್ ನೇಷನ್ಸ್ ಏಜೆನ್ಸಿ ಹೇಳಿದೆ.

ಏಜೆನ್ಸಿಯ ಇತ್ತೀಚಿನ ವರದಿಯ ಪ್ರಕಾರ, ಡಿಸೆಂಬರ್ 8 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸುಮಾರು 15% ರಿಂದ 29% ರಷ್ಟು ಪ್ರಕರಣಗಳಲ್ಲಿ ಸಬ್‌ವೇರಿಯಂಟ್ JN.1 ರಷ್ಟಿದೆ ಎಂದು U.S. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ಈ ತಿಂಗಳ ಆರಂಭದಲ್ಲಿ ಹೇಳಿದೆ. ಪ್ರಸ್ತುತ ಚಲಾವಣೆಯಲ್ಲಿರುವ ಇತರ ರೂಪಾಂತರಗಳಿಗೆ ಹೋಲಿಸಿದರೆ JN.1 ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನು ಒಡ್ಡುವುದಿಲ್ಲ ಎಂದು ಹೇಳಿದೆ. ಸಿಡಿಸಿ ಪ್ರಕಾರ, ಸೆಪ್ಟೆಂಬರ್‌ನಲ್ಲಿ US ನಲ್ಲಿ JN.1 ಅನ್ನು ಮೊದಲು ಪತ್ತೆ ಮಾಡಲಾಯಿತು. ಕಳೆದ ವಾರ, ಕೋವಿಡ್ ಸಬ್‌ವೇರಿಯಂಟ್‌ನ ಏಳು ಸೋಂಕುಗಳನ್ನು ಚೀನಾ ಪತ್ತೆ ಮಾಡಿದೆ.