Categories
ಕಾರ್ಯಕ್ರಮಗಳು ಕ್ರೀಡಾ ಸುದ್ದಿ ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹೊಸನಗರ

ಯುವ ದಸರಾ, ಮಹಿಳಾ ದಸರಾ ರಂಗು!

ಯುವ ದಸರಾ, ಮಹಿಳಾ ದಸರಾ ರಂಗು!
– ಕೆಸರು ಗದ್ದೆಯಲ್ಲಿ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ಗಿರಗಿಟ್ಲೆ
– ತೀರ್ಥಹಳ್ಳಿ ತಾಲ್ಲೂಕಿನ ಕಲಾವಿದರಿಂದ/ಕಲಾ ತಂಡಗಳಿಂದ ಅರ್ಜಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ರಂಗು ಜೋರಾಗಿದೆ. ಈ ಬಾರಿ ಯುವುದೇ ಪಕ್ಷ ಭೇದ ಇಲ್ಲದೆ ಸಮಾನವಾಗಿ ದಸರಾ ಆಯೋಜಕರ ಆಯ್ಕೆ ಆಗಿದೆ. ಇದೇ ಮೊದಲು ಎಂಬಂತೆ ಯುವದಸರ / ಮಹಿಳಾ ದಸರಾ ಆಯೋಜಿಸಲಾಗಿದೆ.

ಪುರುಷರಿಗೆ ಮತ್ತು‌ ಮಹಿಳೆಯರಿಗೆ ಕೆಸರು ಗದ್ದೆಯಲ್ಲಿ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ಗಿರಗಿಟ್ಲೆ ಆಟವನ್ನು ಏರ್ಪಡಿಸಲಾಗಿದೆ, ಆಸಕ್ತರು 9+2 ಜನರ ತಂಡದ ಹೆಸರನ್ನು ಮೊದಲೆ ನೊಂದಾಯಿಸಬೇಕು, ಸೆಪ್ಟೆಂಬರ್ 28, ಭಾನುವಾರ, ಸ್ಥಳ ಕುರುವಳ್ಳಿ ಮಟನ್ ಶಾಪ್ ಎದುರಿನ ಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದೆ.
ಹೆಸರು ನೊಂದಾಯಿಸಲು ಸಂಪರ್ಕಿಸಿ
ಮಹಿಳೆಯರು: ನಯನ ಶೆಟ್ಟಿ ಹಾಗೂ ಜ್ಯೋತಿ ದಿಲೀಪ್
ಪುರುಷರು: ಶಿವು ಹೊದಲ ಹಾಗೂ ಪ್ರೇಮ್ ಯಡೂರು, ಅಂಜೂರ ಕುಡುಮಲ್ಲಿಗೆ ಇವರಲ್ಲಿ ನೊಂದಾಯಿಸಲು ಕೋರಲಾಗಿದೆ.

ದಸರಾ ಉತ್ಸವ ಸಮಿತಿ: ಸಾಂಸ್ಕೃತಿಕ ಸಮಿತಿ

ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವರ ದಸರಾ ಉತ್ಸವವನ್ನು ಅತ್ಯಂತ ವೈಭವಯುತವಾಗಿ ನಡೆಸಲು ಸಮಿತಿಯು ತೀರ್ಮಾನಿಸಲಾಗಿದೆ. ಕುಶಾವತಿ ನೆಹರು ಪಾರ್ಕ್‌ ನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ತೀರ್ಥಹಳ್ಳಿ ತಾಲ್ಲೂಕಿನ ಕಲಾವಿದರಿಂದ/ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಯಕ್ಷಗಾನ ಸೇರಿದಂತೆ ಮತ್ತಿತರ ನೃತ್ಯ ಕಲಾ ಪ್ರಕಾರದ ತಂಡಗಳು / ಕಲಾವಿದರು ಶ್ರೀಮತಿ ಆಶಾ ಡೇನಿಯಲ್‌ (9482009404), ಶ್ರೀ ಶಿವಕುಮಾರ್‌ ಟಿ. ಆರ್.‌ (9663500592) ಇವರಲ್ಲಿ ಹೆಸರು ನೋಂದಾಯಿಸಬೇಕು. ಜಾನಪದ ಸಂಗೀತ, ಶಾಸ್ರ್ತೀಯ ಸಂಗೀತ, ಸುಗಮ ಸಂಗೀತ ಸೇರಿದಂತೆ ಗಾಯನ ಕಾರ್ಯಕ್ರಮ ನೀಡುವ ಕಲಾವಿದರು ಶ್ರೀ ಅಂಬುತೀರ್ಥ ರಾಘವೇಂದ್ರ (7676415042) ಇವರಲ್ಲಿ ಹೆಸರು ನೋಂದಾಯಿಸಬೇಕು. ಕಾರ್ಯಕ್ರಮ ನೀಡಲು ಆಸಕ್ತಿ ಹೊಂದಿದ ಕಲಾ ತಂಡ / ಕಲಾವಿದರು ತಮ್ಮ ಕಲಾಪ್ರಕಾರದ ವಿಡಿಯೋ ತುಣುಕು, ಕಲಾವಿದರ ಮಾಹಿತಿ ಹಾಗೂ ಕಲಾ ಪ್ರಕಾರದ ಮಾಹಿತಿಯನ್ನು ಕಡ್ಡಾಯವಾಗಿ ನೀಡತಕ್ಕದ್ದು. ಹೆಸರು ನೋಂದಾಯಿಸಲು ಕಡೇಯ ದಿನಾಂಕ 23.09.2025. ಕಲಾ ತಂಡಗಳ/ಕಲಾವಿದರ ಆಯ್ಕೆಯ ವಿವರಗಳನ್ನು ದಿನಾಂಕ 24.09.2025ರಂದು ತಿಳಿಸಲಾಗುವುದು. ಗೀತಾ ರಮೇಶ್ , ಜ್ಯೋತಿ ಮೋಹನ್‌, ಚೇತನ್.‌ ಜಿ. ಇವರನ್ನು ಸಂಪರ್ಕಿಸಿ 8618893484.

Categories
ಉಡುಪಿ ಕರಾವಳಿ ಕಾರ್ಕಳ ಕ್ರೀಡಾ ಸುದ್ದಿ ಮಂಗಳೂರು

ಕುಸ್ತಿ: ರಾಜ್ಯ ಮಟ್ಟಕ್ಕೆ ಆಯ್ಕೆ ಆದ ಜನತಾ ಕಾಲೇಜು ವಿದ್ಯಾರ್ಥಿ!

ಕುಸ್ತಿ: ರಾಜ್ಯ ಮಟ್ಟಕ್ಕೆ ಆಯ್ಕೆ ಆದ ಜನತಾ ಕಾಲೇಜು ವಿದ್ಯಾರ್ಥಿ!
– ಕಾಲೇಜು ಹಾಗೂ ಕುಟುಂಬದ ಅಭಿನಂದನೆಗಳು
– ಹ್ಯಾಂಡ್ ಬಾಲ್ ಕ್ರೀಡೆಯಲ್ಲೂ ಸಾಧನೆ

NAMMUR EXPRESS NEWS
ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಉಡುಪಿ ಇವರ ಆಸರೆಯಲ್ಲಿ ಜಿಲ್ಲಾಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟವು ಜನತಾ ಪಿ ಯು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.

ಪನ್ನಗ ವೈ ಪಿ
ಕುಸ್ತಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹ್ಯಾಂಡ್ ಬಾಲ್ ಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕುಸ್ತಿ ಪಂದ್ಯಾಟದಲ್ಲಿ ಪನ್ನಗ ವೈ ಪಿ ಪ್ರಥಮ ಸ್ಥಾನದ ಜೊತೆಗೆ ಚಿನ್ನದ ಪದಕವನ್ನು ಕೂಡ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಕೂಡ ಕುಸ್ತಿ ಪಂದ್ಯಾಟದಲ್ಲಿ ಬೆಳ್ಳಿಯ ಪದಕದ ಜೊತೆಗೆ ದ್ವಿತೀಯ ಸ್ಥಾನ ಕೂಡ ಪಡೆದುಕೊಂಡಿದ್ದಾರೆ.

ಇವನು ಸುಗುಣ ಕೆ ವಿ ರಂಜದಕಟ್ಟೆ ಇವರ ಮಗ ಪನ್ನಗ ವೈ ಪಿ ಇವರಿಗೆ
ಕಾಲೇಜು ಹಾಗೂ ಕುಟುಂಬದವರು ವತಿಯಿಂದ ಅಭಿನಂದನೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

UAE ವಿರುದ್ಧ ಜಯಗಳಿಸಿದ ಭಾರತ ಏಷ್ಯಾಕಪ್‌ನಲ್ಲಿ ಶುಭಾರಂಭ

UAE ವಿರುದ್ಧ ಜಯಗಳಿಸಿದ ಭಾರತ ಏಷ್ಯಾಕಪ್‌ನಲ್ಲಿ ಶುಭಾರಂಭ

* ಅಬ್ಬರಿಸಿದ ಬೌಲರ್ಸ್ 57 ರನ್‌ಗೆ ಆಲೌಟ್ ಆದ UAE
* ಕುಲ್‌ದೀಪ್ 4,ದುಬೆ 3 ವಿಕೆಟ್,4.1 ಓವರ್‌ನಲ್ಲೇ ಗುರಿ ಬೆನ್ನಟ್ಟಿದ ಭಾರತ

ಏಷ್ಯಾಕಪ್ -2025
NAMMMUR EXPRESS SPORTS NEWS
ದುಬೈ: ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ UAE ವಿರುದ್ಧ 9 ವಿಕೆಟ್‌ಗಳ ಜಯಗಳಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಬೌಲರ್‌ಗಳು ಉತ್ತಮ ಆರಂಭ ನೀಡಿ ಆತಿಥೇಯ ತಂಡವನ್ನು 57 ರನ್‌ಗಳಿಗೆ ಕಟ್ಟಿಹಾಕಿದರು. ಯುಎಇ ತಂಡವು 13.1 ಓವರ್ ನಲ್ಲಿ 57 ರನ್‌ಗಳಿಗೆ ಸರ್ವಪತನಗೊಂಡಿತು. ಭಾರತದ ಪರ ಕುಲದೀಪ್ ಯಾದವ್ 4 ವಿಕೆಟ್‌ಗಳನ್ನು ಕಬಳಿಸಿದರೇ, ಶಿವಂ ದುಬೆ 3, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ 1-1 ವಿಕೆಟ್‌ಗಳನ್ನು ಪಡೆದಿದರು.
ಅತ್ಯಂತ ಕಡಿಮೆ ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ, ಕೇವಲ 4.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ 9 ವಿಕೆಟ್ ಗೆಲುವು ತನ್ನದಾಗಿಸಿಕೊಂಡಿತು. ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 30 ರನ್ ಗಳಿಸಿದರೆ, ಶುಭ್ ಮನ್ ಗಿಲ್ 9 ಎಸೆತಗಳಲ್ಲಿ 20 ರನ್ ಸೂರ್ಯ ಕುಮಾರ್ ಯಾದವ್ 2 ಎಸೆತಗಳಲ್ಲಿ 7 ರನ್ ಗಳಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಇಂಗ್ಲೆಂಡ್ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ ಭಾರತಕ್ಕೆ ಜಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಇಂಗ್ಲೆಂಡ್ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ ಭಾರತಕ್ಕೆ ಜಯ
* ದಾಖಲೆ ನಿರ್ಮಿಸಿದ ನಾಯಕಿ ಸೃತಿ ಮಂಧಾನ

NAMMMUR EXPRESS SPORTS NEWS
ಇಂಗ್ಲೆಂಡ್: ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ನಡೆಯುತ್ತಿರುವ ಐದುಪಂದ್ಯಗಳ ಟಿ20 ಸರಣಿಯ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಭಾರತ ಮಹಿಳಾ ತಂಡ ಬರೋಬ್ಬರಿ 97 ರನ್​ಗಳ ದಾಖಲೆಯ ಗೆಲುವು ದಾಖಲಿಸಿದೆ. ಭಾರತ ನೀಡಿದ 210 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ವನಿತಾ ಪಡೆ, ಸ್ಮೃತಿ ಪಡೆಯ ಮಾರಕ ದಾಳಿಗೆ ತತ್ತರಿಸಿ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ ಕೇವಲ 113 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ನಾಯಕಿ ನ್ಯಾಟ್ ಸಿವರ್-ಬ್ರಂಟ್ ಏಕಾಂಗಿ ಹೋರಾಟ ನೀಡಿ 66 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗಲಿಲ್ಲ. ಇತ್ತ ಭಾರತದ ಪರ ನಾಯಕಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿದರೆ, ಭಾರತದ ಪರ ಚೊಚ್ಚಲ ಪಂದ್ಯವನ್ನಾಡಿದ ಶ್ರೀ ಚರಣಿ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

* ಅತ್ಯಧಿಕ ಟಿ-20 ಸ್ಕೋರ್ ದಾಖಲು
ಇದೇ ವೇಳೆ ನಾಯಕಿ ಮಂಧಾನ ಕೇವಲ 51 ಎಸೆತಗಳಲ್ಲಿ ತಮ್ಮ ಮೊದಲ ಟಿ20 ಅಂತರ್ರಾಷ್ಟ್ರೀಯ ಶತಕ ಪೂರೈಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಅರ್ಧಶತಕದಂಚಿನಲ್ಲಿ ಎಡವಿದ ಹರ್ಲೀನ್ ಡಿಯೋಲ್ 43 ರನ್ ಗಳಿಸಿ ಔಟಾದರು. ಡಿಯೋಲ್ ವಿಕೆಟ್ ಪತನದ ಬಳಿಕ ಬಂದ ಕೆಳ ಕ್ರಮಾಂಕದ ಬ್ಯಾಟರ್​ಗಳಿಗೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ಸ್ಮೃತಿ ಅವರ ಸ್ಫೋಟಕ ಶತಕದಿಂದಾಗಿ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್‌ಗಳಿಗೆ 210 ರನ್ ಗಳಿಸಿ ಇಂಗ್ಲೆಂಡ್ ವಿರುದ್ಧ ಎರಡನೇ ಅತ್ಯಧಿಕ ಮತ್ತು ಅತ್ಯಧಿಕ ಟಿ20 ಸ್ಕೋರ್ ದಾಖಲಿಸಿತು. ಇಂಗ್ಲೆಂಡ್ ಪರ, ವೇಗಿ ಲಾರೆನ್ ಬೆಲ್ 27 ರನ್‌ಗಳಿಗೆ 3 ವಿಕೆಟ್ ಪಡೆದರು.

* ದಾಖಲೆ ನಿರ್ಮಿಸಿದ ನಾಯಕಿ ಸೃತಿ ಮಂಧಾನ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿದ್ದಾರೆ. ಇದು ಅಂತರ್ರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಸ್ಮೃತಿ ಅವರ ಚೊಚ್ಚಲ ಶತಕವಾಗಿದೆ. ಈ ಶತಕದೊಂದಿಗೆ ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಮಂಧಾನ ಪಾತ್ರರಾಗಿದ್ದಾರೆ.ಇದೀಗ ಟಿ20 ಕ್ರಿಕೆಟ್​ನಲ್ಲಿ ಶತಕ ಸಿಡಿಸಿರುವ ಸ್ಮೃತಿ ಮಂಧಾನ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ 11 ಶತಕಗಳು ಮತ್ತು ಟೆಸ್ಟ್‌ನಲ್ಲಿ 2 ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ ಐದನೇ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ರಾಹುಲ್- ಪಂತ್ ಶತಕ, ಇಂಗ್ಲೆಂಡ್​ ಗೆಲುವಿಗೆ 371 ರನ್‌ಗಳ ಟಾರ್ಗೆಟ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ರಾಹುಲ್- ಪಂತ್ ಶತಕ, ಇಂಗ್ಲೆಂಡ್​ ಗೆಲುವಿಗೆ 371 ರನ್‌ಗಳ ಟಾರ್ಗೆಟ್
* ರಾಹುಲ್ ದಾಖಲೆ ಮುರಿದ ರಾಹುಲ್

NAMMMUR EXPRESS SPORTS NEWS
ಇಂಗ್ಲೆಂಡ್: ಲೀಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ 364 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಇಂಗ್ಲೆಂಡ್‌ ಗೆಲುವಿಗೆ 371 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ತಂಡದ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಆರಂಭಿಕ ಕೆಎಲ್ ರಾಹುಲ್ ಮತ್ತು ಉಪನಾಯಕ ರಿಷಭ್ ಪಂತ್ ಶತಕ ಬಾರಿಸುವ ಮೂಲಕ ತಂಡವನ್ನು 370 ರನ್‌ಗಳಿಗೆ ಕೊಂಡೊಯ್ದರು. ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ, ಪಂತ್ ಮತ್ತು ರಾಹುಲ್ ನಾಲ್ಕನೇ ವಿಕೆಟ್‌ಗೆ 195 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ಪಂತ್ ಮತ್ತು ರಾಹುಲ್ ವಿಕೆಟ್ ಒಪ್ಪಿಸಿದ ನಂತರ ಭಾರತದ ಇನ್ನಿಂಗ್ಸ್ ನಿಧಾನವಾಗಿ ಸಾಗಿದ್ದಲ್ಲದೆ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು.

* ರಾಹುಲ್- ಪಂತ್ ಶತಕ, ಬೃಹತ್ ಮೊತ್ತದ ಗುರಿ ನೀಡಿದ ಟೀಂ ಇಂಡಿಯಾ
90 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟವನ್ನು ಮುಗಿಸಿದ್ದ ಟೀಂ ಇಂಡಿಯಾ, ಇಲ್ಲಿಂದ ನಾಲ್ಕನೇ ದಿನದಾಟವನ್ನು ಮುಂದುವರೆಸಿತು. ಆದರೆ ತಂಡವು ನಾಯಕ ಶುಭಮನ್ ಗಿಲ್ ಬೇಗನೆ ವಿಕೆಟ್ ಕಳೆದುಕೊಂಡರು. ಇದರ ನಂತರ, ಪಂತ್ ಮತ್ತು ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ಬೌಲರ್‌ಗಳು ವಿಕೆಟ್‌ಗಾಗಿ ಕಾಯುವಂತೆ ಮಾಡಿದರು. ಟೀ ಬ್ರೇಕ್‌ಗೂ ಮೊದಲು 118 ರನ್‌ ಬಾರಿಸಿದ್ದ ಪಂತ್ ವಿಕೆಟ್ ಒಪ್ಪಿಸಿದರು. ಇದರ ನಂತರ, ರಾಹುಲ್ ಇನ್ನಿಂಗ್ಸ್ ನಿಭಾಯಿಸಿದರಾದರೂ ಅವರು ಕೂಡ 137 ರನ್ ಬಾರಿಸಿ ಔಟಾದರು. ರಾಹುಲ್ ಪೆವಿಲಿಯನ್‌ಗೆ ಹಿಂತಿರುಗಿದ ತಕ್ಷಣ, ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಲು ಪ್ರಾರಂಭಿಸಿದರು.
ದಿನದ ಮೊದಲ ಎರಡು ಸೆಷನ್‌ಗಳಲ್ಲಿ ರಾಹುಲ್ ಮತ್ತು ಪಂತ್ ಜೋಡಿ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತು. ಆದರೆ ಟೀ ಬ್ರೇಕ್‌ನ ನಂತರ, ರಾಹುಲ್ ಔಟಾದ ತಕ್ಷಣ ಭಾರತದ ಇನ್ನಿಂಗ್ಸ್ ಕುಸಿಯಿತು. 84 ನೇ ಓವರ್‌ನಲ್ಲಿ ಬ್ರೈಡನ್ ಕಾರ್ಸೆ ಎಸೆತದಲ್ಲಿ ರಾಹುಲ್ ವಿಕೆಟ್ ಒಪ್ಪಿಸಿದರು. ಆಗ ಟೀಂ ಇಂಡಿಯಾದ ಸ್ಕೋರ್ 333 ರನ್‌ಗಳಾಗಿತ್ತು. ಇದರ ನಂತರ, ತಂಡದ ಸ್ಕೋರ್‌ಗೆ ಕೇವಲ 2 ರನ್‌ಗಳನ್ನು ಸೇರಿಸುವುದರೊಳಗೆ ಕರುಣ್ ನಾಯರ್ ಕೂಡ ಔಟಾದರು. ನಂತರ ಶಾರ್ದೂಲ್ ಠಾಕೂರ್ ಕೂಡ 349 ರನ್‌ಗಳಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. ಅದೇ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಔಟಾದರು. ಅಂತಿಮವಾಗಿ ಟೀಂ ಇಂಡಿಯಾ 364 ರನ್‌ಗಳಿಗೆ ಆಲೌಟ್ ಆಯಿತು. ಅಂದರೆ, ಭಾರತ ಕೇವಲ 31 ರನ್‌ಗಳಿಗೆ ತನ್ನ ಕೊನೆಯ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

* ರಾಹುಲ್ ದಾಖಲೆ ಮುರಿದ ರಾಹುಲ್
ತಾಳ್ಮೆಯುತ ಬ್ಯಾಟಿಂಗ್​ನೊಂದಿಗೆ 202 ಎಸೆತಗಳಲ್ಲಿ ಶತಕ ಪೂರೈಸಿದ ರಾಹುಲ್ ವಿಶೇಷ ದಾಖಲೆ ಬರೆದರು. ಅದು ಕೂಡ ಲೆಜೆಂಡ್‌ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಅಂದರೆ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದು 2 ಶತಕ ಬಾರಿಸಿದ ಏಷ್ಯನ್ ಬ್ಯಾಟರ್ ಎಂಬ ದಾಖಲೆಯೊಂದು ರಾಹುಲ್ ದ್ರಾವಿಡ್ ಹೆಸರಿನಲ್ಲಿತ್ತು. ಈ ದಾಖಲೆಯನ್ನು ಇದೀಗ ಕೆ.ಎಲ್​ ರಾಹುಲ್ ಮುರಿದಿದ್ದಾರೆ.ಕೆಎಲ್ ರಾಹುಲ್ ಆಂಗ್ಲರ ನಾಡಿನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಈವರೆಗೆ 3 ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್‌ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಏಷ್ಯನ್ ಓಪನರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ 247 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 18 ಫೋರ್​ಗಳೊಂದಿಗೆ 137 ರನ್ ಬಾರಿಸಿದರು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಲೀಡ್ಸ್ ಮೊದಲ ಟೆಸ್ಟ್ ಇನ್ನಿಂಗ್ಸ್ ಮುನ್ನಡೆಯಲ್ಲಿ ಭಾರತ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಲೀಡ್ಸ್ ಮೊದಲ ಟೆಸ್ಟ್ ಇನ್ನಿಂಗ್ಸ್ ಮುನ್ನಡೆಯಲ್ಲಿ ಭಾರತ
* ಬೌಲಿಂಗ್‌ನಲ್ಲಿ ಬೂಮ್ರಾ ಕಮಾಲ್ 5 ವಿಕೆಟ್ , ಹೊಸ ದಾಖಲೆ ಸೃಷ್ಟಿ

NAMMMUR EXPRESS SPORTS NEWS
ಇಂಗ್ಲೆಂಡ್: ಲೀಡ್ಸ್ ಮೈದಾನದಲ್ಲಿ ಆರಂಭವಾಗಿರುವ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್‌ನ ಎರಡನೇ ದಿನದ ಅಂತ್ಯದವರೆಗೆ 3 ವಿಕೆಟ್‌ಗಳ ನಷ್ಟಕ್ಕೆ 209 ರನ್ ಗಳಿಸಿದ್ದ ಇಂಗ್ಲೆಂಡ್, ಮೂರನೇ ದಿನದ ಮೊದಲ ಸೆಷನ್‌ನಲ್ಲಿಯೂ ವೇಗವಾಗಿ ರನ್ ಗಳಿಸಿತು. ದಿನದ ಮೊದಲ ಸೆಷನ್‌ನಲ್ಲಿ ಇಂಗ್ಲೆಂಡ್ 118 ರನ್‌ಗಳನ್ನು ಗಳಿಸಿತು. ಭಾರತ ನಿನ್ನೆಯ ಶತಕವೀರ ಓಲಿ ಪೋಪ್ (106 ರನ್, 137 ಎಸೆತ, 14 ಬೌಂಡರಿ) ಮತ್ತು ಇಂಗ್ಲೆಂಡ್ ನಾಯಕಿ ಬೆನ್ ಸ್ಟೋಕ್ಸ್ (20) ಅವರ ವಿಕೆಟ್‌ಗಳನ್ನು ಬೆಳಗಿನ ಅವಧಿಯಲ್ಲಿ ಕಬಳಿಸಿತು. ಊಟದ ವಿರಾಮದ ವೇಳೆಗೆ, ಇಂಗ್ಲೆಂಡ್ 5 ವಿಕೆಟ್‌ಗಳ ನಷ್ಟಕ್ಕೆ 327 ರನ್ ಗಳಿಸಿತ್ತು.
ಎರಡನೇ ಅವಧಿಯಲ್ಲಿಯೂ ಇಂಗ್ಲೆಂಡ್ ತನ್ನ ಬಲವಾದ ಪ್ರದರ್ಶನವನ್ನು ಮುಂದುವರಿಸಿತು. ಹ್ಯಾರಿ ಬ್ರೂಕ್ ಶತಕವನ್ನು ತಪ್ಪಿಸಿಕೊಂಡಿದ್ದು 99 ರನ್‌ಗಳಿಗೆ ಔಟಾದರು. ಜೇಮೀ ಸ್ಮಿತ್ 40 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 38 ಮತ್ತು ಬ್ರೈಡನ್ ಕಾರ್ಸೆ 22 ರನ್ ಗಳಿಸಿದರು. ಭಾರತವು ಎರಡನೇ ಹೊಸ ಚೆಂಡಿನ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್‌ನ ಕೆಳ ಕ್ರಮಾಂಕವು ಭಾರತೀಯ ಬೌಲರ್‌ಗಳನ್ನು ಬಹಳಷ್ಟು ತೊಂದರೆಗೊಳಿಸಿತು. ಎರಡನೇ ಅವಧಿಯಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಸಹ ಸುಲಭವಾಗಿ ಬೌಂಡರಿಗಳನ್ನು ಗಳಿಸಿದರು ಮತ್ತು 23.4 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 138 ರನ್ ಗಳಿಸಿದರು. ಭಾರತದ ಪರ ಬುಮ್ರಾ 5 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 3 ಮತ್ತು ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.

* ಬೌಲಿಂಗ್‌ನಲ್ಲಿ ಬೂಮ್ರಾ ಕಮಾಲ್ 5 ವಿಕೆಟ್ , ಹೊಸ ದಾಖಲೆ ಸೃಷ್ಟಿ
ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಐದು ವಿಕೆಟ್ ಗೊಂಚಲು ಪಡೆದು ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್‌ನ ಎರಡನೇ ದಿನದ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಎರಡನೇ ದಿನದ ಆಟದ ಅಂತ್ಯದ ವೇಳೆಗೆ ಬುಮ್ರಾ ಐದು ವಿಕೆಟ್‌ಗಳನ್ನು ಕಬಳಿಸಿ ದೊಡ್ಡ ಸಾಧನೆ ಮಾಡಿದರು.
ಜಸ್ಪ್ರೀತ್ ಬುಮ್ರಾ ಭಾರತೀಯ ತಂಡದ ಅನುಭವಿ ಬೌಲರ್ ಮತ್ತು ವೇಗದ ಬೌಲಿಂಗ್ ದಾಳಿಯ ರೂವಾರಿ. ಬುಮ್ರಾ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು. ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರ ಪಾತ್ರ ಮಹತ್ವದ್ದಾಗಿದ್ದು, ಮೊದಲ ಪಂದ್ಯದಲ್ಲಿ ಅವರು ಇದನ್ನು ಸಾಬೀತುಪಡಿಸಿದ್ದಾರೆ. ಬೂಮ್-ಬೂಮ್ ಬುಮ್ರಾ ಅವರ ಮ್ಯಾಜಿಕ್ ಲೀಡ್ಸ್‌ನಲ್ಲಿ ಕಂಡುಬಂದಿದ್ದು ದೊಡ್ಡ ಸಾಧನೆ ಮಾಡಿದ್ದಾರೆ.
ಜಸ್ಪ್ರೀತ್ ಬುಮ್ರಾ SENA ದೇಶಗಳಲ್ಲಿ ಅಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಏಷ್ಯನ್ ಬೌಲರ್ ಆಗಿದ್ದಾರೆ. ಈ ವಿಷಯದಲ್ಲಿ ಜಸ್ಪ್ರೀತ್ ಬುಮ್ರಾ ಪಾಕಿಸ್ತಾನದ ಮಾಜಿ ಬೌಲರ್ ವಾಸಿಮ್ ಅಕ್ರಮ್ ಅವರ ದಾಖಲೆಯನ್ನು ಮುರಿದಿದ್ದಾರೆ. ಬುಮ್ರಾ ಈಗ ಸೆನಾ ದೇಶಗಳಲ್ಲಿ 149 ವಿಕೆಟ್‌ಗಳನ್ನು ಪಡೆದಿದ್ದರೆ ಅಕ್ರಮ್ ಈ ದೇಶಗಳಲ್ಲಿ 146 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ, ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ 141 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ವೇಗದ ಬೌಲರ್ ಇಶಾಂತ್ ಶರ್ಮಾ 130 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಇಂಗ್ಲೆಂಡ್ ಟೆಸ್ಟ್ ಸರಣಿ ಉತ್ತಮ ಪ್ರದರ್ಶನದತ್ತ ಭಾರತ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಇಂಗ್ಲೆಂಡ್ ಟೆಸ್ಟ್ ಸರಣಿ ಉತ್ತಮ ಪ್ರದರ್ಶನದತ್ತ ಭಾರತ
* ಸರಣಿಯಲ್ಲಿ ಮೂವರು ಕನ್ನಡಿಗರು, ಮರುಕಳಿಸಿದ ಇತಿಹಾಸ

NAMMMUR EXPRESS SPORTS NEWS
ಲೀಡ್ಸ್: ಲೀಡ್ಸ್‌ನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಹೆಡಿಂಗ್ಲೆಯಲ್ಲಿ ಆರಂಭಗೊಂಡಿದೆ.
ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಭಾರತ ತಂಡ ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ. ದಿನದಾಟದಂತ್ಯಕ್ಕೆ ಟೀಂ ಇಂಡಿಯಾ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 359 ರನ್ ಕಲೆಹಾಕಿದೆ. ಶತಕ ಸಿಡಿಸಿರುವ ನಾಯಕ ಶುಭ್​ಮನ್ ಗಿಲ್ ಹಾಗೂ ಉಪನಾಯಕ ರಿಷಭ್ ಪಂತ್ ಅಜೇಯರಾಗಿ ಉಳಿದಿದ್ದು, ಎರಡನೇ ದಿನಕ್ಕೆ ತಮ್ಮ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಪರ 2 ಶತಕಗಳು ದಾಖಲಾಗಿದ್ದು, ನಾಯಕ ಗಿಲ್ ಅಜೇಯ ಶತಕ ಸಿಡಿಸಿದರೆ, ಆರಂಬಿಕ ಯಶಸ್ವಿ ಜೈಸ್ವಾಲ್ ಕೂಡ 101 ರನ್​ಗಳ ಇನ್ನಿಂಗ್ಸ್ ಆಡಿದರು. ಕನ್ನಡಿಗ ಕೆಎಲ್ ರಾಹುಲ್ ಕೂಡ 42 ರನ್​ಗಳ ಅಮೂಲ್ಯ ಕಾಣಿಕೆ ನೀಡಿದರು.

* ಯಂಗ್ ಇಂಡಿಯಾ ಆಟಕ್ಕೆ ಹೈರಾಣಾದ ಆಂಗ್ಲರು
ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭ್​ಮನ್ ಗಿಲ್ ಮೂರನೇ ವಿಕೆಟ್​ಗೆ ಶತಕದ ಜೊತೆಯಾಟವನ್ನು ಆಡಿ ತಂಡದ ಮೊತ್ತವನ್ನು 200 ರನ್​ಗಳ ಗಡಿ ದಾಟಿಸಿದರು. ಈ ಹಂತದಲ್ಲಿ ಯಶಸ್ವಿ ಜೈಸ್ವಾಲ್ ತಮ್ಮ ಟೆಸ್ಟ್ ವೃತ್ತಿಜೀವನದ 5ನೇ ಶತಕವನ್ನು ಪೂರ್ಣಗೊಳಿಸಿದರು. ಜೈಸ್ವಾಲ್ ತಮ್ಮ ಇನ್ನಿಂಗ್ಸ್​ನಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ನಾಯಕನ ಜವಾಬ್ದಾರಿಯುವ ಆಟವನ್ನು ಮುಂದುವರೆಸಿದ ಗಿಲ್, ಉಪನಾಯಕ ರಿಷಭ್ ಪಂತ್ ಜೊತೆಗೂಡಿ ಆಂಗ್ಲ ಬೌಲರ್​ಗಳನ್ನು ಹೈರಾಣಾಗಿಸಿದರು.
ಪಂತ್ – ಗಿಲ್ ಇವರಿಬ್ಬರು ಮೊದಲ ದಿನದಾಟ ಮುಗಿಯುವ ವೇಳೆಗೆ ಅಜೇಯರಾಗಿ ಉಳಿದಿದಲ್ಲದೆ ತಂಡವನ್ನು 359 ರನ್​ಗಳಿಗೆ ಕೊಂಡೊಯ್ದಿದ್ದಾರೆ. ಈ ಸಮಯದಲ್ಲಿ ನಾಯಕ ಗಿಲ್, 140 ಎಸೆತಗಳಲ್ಲಿ 14 ಬೌಂಡರಿ ಸಹಿತ ತಮ್ಮ ಟೆಸ್ಟ್ ವೃತ್ತಿಜೀವನದ 6ನೇ ಶತಕವನ್ನು ಪೂರೈಸಿದರೆ, ಇತ್ತ ಉಪನಾಯಕ ರಿಷಭ್ ಪಂತ್ ಕೂಡ ಅಜೇಯ ಅರ್ಧಶತಕ ದಾಖಲಿಸಿದರು. ಈ ಮೂಲಕ ಪಂತ್ ಟೆಸ್ಟ್‌ನಲ್ಲಿ 3000 ರನ್​ಗಳನ್ನು ಸಹ ಪೂರ್ಣಗೊಳಿಸಿದರು. ಈ ಜೋಡಿ 4ನೇ ವಿಕೆಟ್​ಗೆ ಅಜೇಯ 138 ರನ್​ಗಳ ಜೊತೆಯಾಟವನ್ನಾಡಿದ್ದು, ನಾಯಕ ಗಿಲ್ 127 ರನ್ ಹಾಗೂ ಉಪನಾಯಕ ರಿಷಬ್ ಪಂತ್ 65 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

* ಸರಣಿಯಲ್ಲಿ ಮೂವರು ಕನ್ನಡಿಗರು ಮರುಕಳಿಸಿದ 23 ವರ್ಷದ ಇತಿಹಾಸ
ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂವರು ಕನ್ನಡಿಗರು ಕಣಕ್ಕಿಳಿದಿದ್ದಾರೆ. ಇದರೊಂದಿಗೆ 23 ವರ್ಷಗಳ ಹಳೆಯ ಇತಿಹಾಸವೊಂದು ಪುನರಾವರ್ತನೆಯಾದಂತಾಗಿದೆ.
ಭಾರತದ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಬರೋಬ್ಬರಿ 23 ವರ್ಷಗಳ ಬಳಿಕ ಮೂವರು ಕನ್ನಡಿಗರು ಜೊತೆಯಾಗಿ ಕಣಕ್ಕಿಳಿದಿದ್ದಾರೆ. ಲೀಡ್ಸ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್​ನಲ್ಲಿ ಕರ್ನಾಟಕದ ಕೆಎಲ್ ರಾಹುಲ್, ಕರುಣ್ ನಾಯರ್ ಹಾಗೂ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದು, ಈ ಮೂಲಕ 2 ದಶಕಗಳ ಬಳಿಕ ಕರುನಾಡ ತ್ರಿಮೂರ್ತಿಗಳು ಟೀಮ್ ಇಂಡಿಯಾ ಪರ ಜೊತೆಯಾಗಿ ಕಣಕ್ಕಿಳಿದಂತಾಗಿದೆ.
ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ಮೂವರು ಕನ್ನಡಿಗರು ಜೊತೆಯಾಗಿ ಕಣಕ್ಕಿಳಿದದ್ದು 2002ರಲ್ಲಿ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾವಗಲ್ ಶ್ರೀನಾಥ್ ಜೊತೆಯಾಗಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕರ್ನಾಟಕದ ಮೂವರು ಆಟಗಾರರು ಭಾರತದ ಪರ ಒಟ್ಟಿಗೆ ಟೆಸ್ಟ್ ಪಂದ್ಯವಾಡಿರಲಿಲ್ಲ.
ಇದೀಗ ಬರೋಬ್ಬರಿ 23 ವರ್ಷಗಳ ಬಳಿಕ ಕರ್ನಾಟಕದ ಮೂವರು ಆಟಗಾರರು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಟೆಸ್ಟ್ ತಂಡದಲ್ಲಿ ಕರುನಾಡ ಕಲಿಗಳು ಮತ್ತೆ ಛಾಪು ಮೂಡಿಸಲು ಹೊರಟಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಇಂದಿನಿಂದ ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ: ಲೀಡ್ಸ್ ಟೆಸ್ಟ್ ಗೆಲ್ಲುತ್ತಾ ಭಾರತ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಇಂದಿನಿಂದ ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ: ಲೀಡ್ಸ್ ಟೆಸ್ಟ್ ಗೆಲ್ಲುತ್ತಾ ಭಾರತ
* ತಂಡದಲ್ಲಿ ದಿಗ್ಗಜ ಆಟಗಾರರಿಲ್ಲ,ಅನುಭವಿ ಬೌಲರ್‌ಗಳಿಲ್ಲ

NAMMMUR EXPRESS SPORTS NEWS
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯ ಲೀಡ್ಸ್‌ನಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಪಾಲಿಗೆ ಈ ಪಂದ್ಯ ಅತಿ ಮುಖ್ಯವಾಗಿದೆ. ಏಕೆಂದರೆ ಟೀಂ ಇಂಡಿಯಾ ಕಳೆದ ಬಾರಿ 2021 ರ ಪ್ರವಾಸದಲ್ಲಿ ಇದೇ ಮೈದಾನದಲ್ಲಿ ಪಂದ್ಯವನ್ನಾಡಿ ಆ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲು ಅನುಭವಿಸಿತ್ತು. ಹೀಗಾಗಿ ಕಳೆದ ಬಾರಿಯ ಹೀನಾಯ ಸೋಲನ್ನು ಮರೆತು ಗಿಲ್ ಪಡೆ ಕಣಕ್ಕಿಳಿಬೇಕಿದೆ. ಆದಾಗ್ಯೂ ಯುವ ಆಟಗಾರರೇ ತುಂಬಿರುವ ಟೀಂ ಇಂಡಿಯಾ ಲೀಡ್ಸ್ ಟೆಸ್ಟ್‌ನಲ್ಲಿ ಯಶಸ್ವಿಯಾಗುತ್ತಾ ಎಂಬುದೇ ಪ್ರಶ್ನೆ. ಏಕೆಂದರೆ ಲೀಡ್ಸ್‌ನಲ್ಲಿ ಟೀಂ ಇಂಡಿಯಾ ಕೊನೆಯ ಬಾರಿಗೆ ಆಡಿದಾಗ ತಂಡದಲ್ಲಿದ್ದ 6 ಲೆಜೆಂಡರಿ ಆಟಗಾರರು ಈಗ ತಂಡದಲಿಲ್ಲ.

* ದಿಗ್ಗಜರೇ ತಂಡದಲಿಲ್ಲ,ಅನುಭವಿ ವೇಗಗಳು ಇಲ್ಲ
ಕಳೆದ ಬಾರಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತಹ ಬ್ಯಾಟ್ಸ್‌ಮನ್‌ಗಳು ಲೀಡ್ಸ್ ಟೆಸ್ಟ್‌ನಲ್ಲಿ ಆಡಿದ್ದರು. ಆದರೆ ಈ ಬಾರಿ ಈ ನಾಲ್ವರು ಶ್ರೇಷ್ಠ ಆಟಗಾರರು ತಂಡದಲ್ಲಿಲ್ಲ. ಪೂಜಾರ, ರಹಾನೆಗೆ ಬಹಳ ಸಮಯದಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇತ್ತ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಮೊದಲೇ ಟೆಸ್ಟ್​ಗೆ ನಿವೃತ್ತ ಘೋಷಿಸಿದರು. ಕೊನೆಯ ಬಾರಿಗೆ ರೋಹಿತ್ ಮತ್ತು ವಿರಾಟ್ ಲೀಡ್ಸ್ ಟೆಸ್ಟ್‌ನಲ್ಲಿ ಆಡಿದಾಗ ಇಬ್ಬರ ಪ್ರದರ್ಶನವೇನು ಹೇಳಿಕೊಳ್ಳುವಂತಿರಲಿಲ್ಲ. ರೋಹಿತ್ ಶರ್ಮಾ 105 ಎಸೆತಗಳನ್ನು ಎದುರಿಸಿ ಮೊದಲ ಇನ್ನಿಂಗ್ಸ್​ನಲ್ಲಿ 19 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 59 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 55 ರನ್ ಗಳಿಸಿ ಔಟಾಗಿದ್ದರು.
ಇನ್ನು ಬೌಲರ್​ಗಳ ಬಗ್ಗೆ ನೋಡುವುದಾದರೆ ಕಳೆದ ಲೀಡ್ಸ್ ಟೆಸ್ಟ್‌ನಲ್ಲಿ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಅವರಂತಹ ಇಬ್ಬರು ಅತ್ಯುತ್ತಮ ಬೌಲರ್‌ಗಳು ತಂಡದಲ್ಲಿ ಆಡಿದ್ದರು. ಈಗ ಇಬ್ಬರೂ ಟೀಂ ಇಂಡಿಯಾದಿಂದ ಹೊರಗಿದ್ದಾರೆ. ಇಶಾಂತ್ ಶರ್ಮಾ ಬಹಳ ಸಮಯದಿಂದ ಟೀಂ ಇಂಡಿಯಾದಿಂದ ಹೊರಗಿದ್ದರೆ, ಮೊಹಮ್ಮದ್ ಶಮಿ ಕಳಪೆ ಫಿಟ್‌ನೆಸ್‌ನಿಂದ ತಂಡದಿಂದ ಹೊರಗಿದ್ದಾರೆ.
ಇವೆಲ್ಲದರ ಮಧ್ಯೆ ತಂಡದಲ್ಲಿ ಈ ಅನುಭವಿ ಆಟಗಾರರ ಅಲಭ್ಯತೆಯ ಮಧ್ಯೆ ಭಾರತ ತಂಡ ಲೀಡ್ಸ್‌ನಲ್ಲಿ ಹೇಗೆ ಆಡಲಿದೆ ಎಂಬ ಪ್ರಶ್ನೆ ಎದುರಾಗಿದೆ.ನಾಯಕ ಶುಭ್​ಮನ್ ಗಿಲ್ ಈಗ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಆಡಲಿದ್ದಾರೆ. ಮತ್ತೊಂದೆಡೆ, ಕೆಎಲ್ ರಾಹುಲ್ ಮತ್ತು ಜೈಸ್ವಾಲ್ ಇಬ್ಬರೂ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಬುಮ್ರಾ, ಸಿರಾಜ್ ಹೊರತುಪಡಿಸಿ, ಬೌಲಿಂಗ್ ಜವಾಬ್ದಾರಿ ಪ್ರಸಿದ್ಧ್ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್ ಅವರ ಕೈಯಲ್ಲಿರುತ್ತದೆ. ಒಟ್ಟಾರೆಯಾಗಿ, ತಂಡವೇನೋ ಬಲಿಷ್ಠವಾಗಿದೆಯಾದರೂ ಅನುಭವದ ಕೊರತೆಯಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ನಾಳೆಯಿಂದ ಆರಂಭವಾಗಲಿರೋ ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ನಾಳೆಯಿಂದ ಆರಂಭವಾಗಲಿರೋ ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿ
* ವಿರಾಟ್ ಕೊಹ್ಲಿ ಮನೆಯಲ್ಲಿ 2 ಗಂಟೆಗಳ ಕಾಲ ಮೀಟಿಂಗ್

NAMMMUR EXPRESS SPORTS NEWS
ಲಂಡನ್: ಜೂನ್ 20 ರಿಂದ ಲೀಡ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ರೋಮಾಂಚಕಾರಿ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಕಠಿಣ ಪ್ರವಾಸದಲ್ಲಿ ಯುವ ಆಟಗಾರ ಶುಭ್​ಮನ್ ಗಿಲ್ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಶುಭ್​ಮನ್ ಗಿಲ್ ಅವರನ್ನು ಈ ಸ್ವರೂಪದಲ್ಲಿ ಭಾರತದ ನಾಯಕರನ್ನಾಗಿ ಮಾಡಲಾಗಿದೆ. ಅದೇ ಸಮಯದಲ್ಲಿ, ರಿಷಭ್ ಪಂತ್ ಅವರಿಗೆ ಉಪನಾಯಕನ ಸ್ಥಾನ ಸಿಕ್ಕಿದೆ. ರೋಹಿತ್ ಶರ್ಮಾ ನಿವೃತ್ತಿಯ ನಂತರ, ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು.
ಇಂಗ್ಲೆಂಡ್‌ನ ಪ್ರಮುಖ ಸರಣಿಗೆ ಮೊದಲು ಇಬ್ಬರೂ ಅನುಭವಿ ಆಟಗಾರರ ನಿವೃತ್ತಿ ಭಾರತಕ್ಕೆ ಆಘಾತವನ್ನುಂಟು ಮಾಡಿತು. ಸದ್ಯ ಭಾರತದ ಯುವ ತಂಡ ಇಂಗ್ಲೆಂಡ್ ತಲುಪಿದ್ದು, ಇಲ್ಲಿ ಕಠಿಣ ಅಭ್ಯಾಸ ಮಾಡುತ್ತಿದೆ. ಅವರು ಇಂಟ್ರಾ-ಸ್ಕ್ವಾಡ್ ಪಂದ್ಯಗಳನ್ನು ಸಹ ಆಡಿದ್ದಾರೆ. ವಿರಾಟ್ ಕೊಹ್ಲಿ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿದ್ದಾರೆ. ಐಪಿಎಲ್ ಆಡಿದ ನಂತರ ಕೊಹ್ಲಿ ಲಂಡನ್‌ಗೆ ತೆರಳಿದ್ದಾರೆ.

* ವಿರಾಟ್ ಕೊಹ್ಲಿ ಮನೆಯಲ್ಲಿ ಗಿಲ್,ಪಂತ್ ಜೊತೆ 2 ಗಂಟೆಗಳ ಕಾಲ ಮೀಟಿಂಗ್
ನಿವೃತ್ತಿಯ ಹೊರತಾಗಿಯೂ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸರಣಿಯ ಮೇಲೆ ನಿಗಾ ಇಟ್ಟಿದ್ದಾರೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ಗೆ ಕೆಲವು ದಿನಗಳ ಮೊದಲು, ಹೊಸ ಟೆಸ್ಟ್ ನಾಯಕ ಶುಭ್​ಮನ್ ಗಿಲ್, ಉಪನಾಯಕ ರಿಷಭ್ ಪಂತ್ ಮತ್ತು ಇತರ ಕೆಲವು ಆಟಗಾರರನ್ನು ಲಂಡನ್‌ನಲ್ಲಿರುವ ತಮ್ಮ ಮನೆಗೆ ಆಹ್ವಾನಿಸಿದ್ದಾರೆ ಎಂದು ಹೇಳಿಕೊಳ್ಳುವ ರೆವ್‌ಸ್ಪೋರ್ಟ್ಜ್‌ನ ವಿಡಿಯೋ ವರದಿಯಿಂದ ಇದು ಸ್ಪಷ್ಟವಾಗಿದೆ. ಸೋಮವಾರ ಕೆಂಟ್‌ನಲ್ಲಿ ನಡೆದ ಇಂಟ್ರಾ-ಸ್ಕ್ವಾಡ್ ಪಂದ್ಯ ಮುಗಿದ ನಂತರ ಭಾರತ ತಂಡಕ್ಕೆ ಒಂದು ದಿನದ ರಜೆ ಇತ್ತು. ಈ ಸಂದರ್ಭ ಆಟಗಾರರು ಕೊಹ್ಲಿಯನ್ನು ಭೇಟಿ ಮಾಡಲು ಲಭ್ಯವಿದ್ದರು.
ಈ ಸಭೆ ಯಾವುದರ ಬಗ್ಗೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿಲ್ಲ. ಮುಂಬರುವ ಸರಣಿಯ ಬಗ್ಗೆ ಅಥವಾ ಗಿಲ್ ಮತ್ತು ಪಂತ್ ಯುವ ತಂಡವನ್ನು ಹೇಗೆ ಮುನ್ನಡೆಸಬಹುದು ಎಂಬುದರ ಬಗ್ಗೆ ಇದು ನಡೆದಿರಬಹುದು ಎಂದು ಊಹಿಸಲಾಗಿದೆ. ಆದಾಗ್ಯೂ, ಚರ್ಚೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಎಂದು ತಿಳಿದುಬಂದಿದೆ. ಭಾರತ ತಂಡವು ಇಂದು ಲೀಡ್ಸ್ ತಲುಪುವ ನಿರೀಕ್ಷೆಯಿದೆ, ಅಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ತಂಡವನ್ನು ಭೇಟಿಯಾಗಲಿದ್ದಾರೆ.

* ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ
ಭಾರತ-ಇಂಗ್ಲೆಂಡ್ ಸರಣಿ ಆರಂಭಕ್ಕೆ 2 ದಿನಗಳ ಮೊದಲು, ಮತ್ತೊಬ್ಬ ಆಟಗಾರ ಇದ್ದಕ್ಕಿದ್ದಂತೆ ಟೀಮ್ ಇಂಡಿಯಾವನ್ನು ಪ್ರವೇಶಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ವೇಗಿ ಹರ್ಷಿತ್ ರಾಣಾ ಭಾರತೀಯ ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾರೆ. ಜೂನ್ 20 ರಿಂದ ಲೀಡ್ಸ್‌ನಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ರಾಣಾ ಅವರನ್ನು 18 ಸದಸ್ಯರ ತಂಡದಲ್ಲಿ ಈ ಮೊದಲು ಆಯ್ಕೆ ಮಾಡಿರಲಿಲ್ಲ. ಆದರೆ ಮಂಗಳವಾರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಮೊದಲ ಟೆಸ್ಟ್ ನಂತರ ಅವರು ತಂಡದಲ್ಲಿಯೇ ಇರುತ್ತಾರೋ ಇಲ್ಲವೋ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. 23 ವರ್ಷದ ದೆಹಲಿ ವೇಗದ ಬೌಲರ್ ಅವರನ್ನು ಭಾರತ ಎ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು.

Categories
ಕ್ರೀಡಾ ಸುದ್ದಿ

ಚೋಕರ್ಸ್ ಹಣೆಪಟ್ಟಿ ಕಿತ್ತಗಸೆದು ಚಾಂಪಿಯನ್ಸ್ ಪಟ್ಟಕ್ಕೇರಿದ ದ‌.ಆಫ್ರಿಕಾ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಚೋಕರ್ಸ್ ಹಣೆಪಟ್ಟಿ ಕಿತ್ತಗಸೆದು ಚಾಂಪಿಯನ್ಸ್ ಪಟ್ಟಕ್ಕೇರಿದ ದ‌.ಆಫ್ರಿಕಾ
* 27 ವರ್ಷಗಳ ಬರ ನೀಗಿಸಿಕೊಂಡ ದಕ್ಷಿಣ ಆಫ್ರಿಕಾ

NAMMMUR EXPRESS SPORTS NEWS
ಲಾರ್ಡ್ಸ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಆರಂಭವಾಗಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮೂರನೇ ಆವೃತ್ತಿಯ ಫೈನಲ್​ ಪಂದ್ಯ ನಾಲ್ಕೇ ದಿನಕ್ಕೆ ಬಹುನಿರೀಕ್ಷಿತ ಫಲಿತಾಂಶದೊಂದಿಗೆ ಅಂತ್ಯಗೊಂಡಿದೆ. ಒಂದೆಡೆ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ ಕಿರೀಟ ಪಡೆಯುವ ಆಸೆಯೊಂದಿಗೆ ಆಸ್ಟ್ರೇಲಿಯಾ ತಂಡ ಲಾರ್ಡ್ಸ್ ಅಂಗಳಕ್ಕಿಳಿದಿದ್ದರೆ, ಮತ್ತೊಂದೆಡೆ ಚೊಚ್ಚಲ ಟೆಸ್ಟ್ ಚಾಂಪಿಯನ್‌ ಪಟ್ಟ ಹಾಗೆಯೇ ಬಹು ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವ ಗುರಿಯೊಂದಿಗೆ ಬಂದಿದ್ದ ದಕ್ಷಿಣ ಆಫ್ರಿಕಾ ತಂಡಗಳು ಎದುರಾಗಿದ್ದವು. ಬಲಿಷ್ಠ ಆಟಗಾರರಿಂದಲೇ ತುಂಬಿ ತುಳುಕುತ್ತಿದ್ದ ಉಭಯ ತಂಡಗಳು ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಬೌಲರ್‌ಗಳ ಪಾರುಪತ್ಯದಲ್ಲೇ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಜಯ ಗಳಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಈ ಮೂಲಕ ಚೋಕರ್ಸ್ ಹಣೆಪಟ್ಟಿ ಕಿತ್ತೆಸೆದು ಚಾಂಪಿಯನ್ಸ್ ಪಟ್ಟ ಮುಡಿಗೇರಿಸಿಕೊಂಡಿತು.

* ಮಾರ್ಕ್ರಾಮ್- ಬವುಮಾ ಶತಕದ ಜೊತೆಯಾಟ
ಆಸ್ಟ್ರೇಲಿಯಾ ನೀಡಿದ 282 ರನ್‌ಗಳ ಗುರಿ ಬೆನ್ನಟ್ಟಿದ ಆಫ್ರಿಕಾಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಯಾನ್ ರಿಕಲ್ಟನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲ್ಲು ಸಾಧ್ಯವಾಗದೆ ಕೇವಲ ಮೂರನೇ ಓವರ್‌ನಲ್ಲಿ ಪೆವಿಲಿಯನ್‌ ಸೇರಿಕೊಂಡರು. ಇದಾದ ನಂತರ ಜೊತೆಯಾದ ಮಾರ್ಕ್ರಾಮ್ ಹಾಗೂ ವಿಯಾನ್ ಮುಲ್ಡರ್ ಅರ್ಧಶತಕದ ಜೊತೆಯಾಟವನ್ನಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ವಿಯಾನ್ ಮುಲ್ಡರ್ ಅವರ ಇನ್ನಿಂಗ್ಸ್ 27 ರನ್ ಗಳಿಗೆ ಅಂತ್ಯವಾಯಿತು. ಆ ಬಳಿಕ ಜತೆಯಾದ ಐಡೆನ್ ಮಾರ್ಕ್ರಾಮ್ ಹಾಗೂ ಟೆಂಬಾ ಬವುಮಾ ಶತಕದ ಜೊತೆಯಾಟವಾಡಿ ತಂಡವನ್ನು 200 ರನ್​ಗಳ ಗಡಿ ದಾಟಿಸಿದಲ್ಲದೆ ಮೂರನೇ ದಿನದಾಟವನ್ನು ಅಜೇಯವಾಗಿ ಮುಗಿಸಿದ್ದರು.

* ಗೆಲುವಿನ ಶತಕ ಸಿಡಿಸಿದ ಮಾರ್ಕ್ರಾಮ್
ನಾಲ್ಕನೇ ದಿನದಾಟದಲ್ಲಿ ಈ ಇಬ್ಬರೇ ನಿಂತು ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಾಯಕ ಬವುಮಾ ಕೇವಲ 1 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಟ್ರಿಸ್ಟಾನ್ ಸ್ಟಬ್ಸ್ ಕೂಡ 8 ರನ್​ಗಳಿಗೆ ಸುಸ್ತಾದರು. ಈ ಹಂತದಲ್ಲಿ ಆಸೀಸ್ ಪರ ಪಂದ್ಯವಿದ್ದಂತೆ ಕಂಡಿತ್ತು. ಆದರೆ ಮೂರನೇ ದಿನದಾಟದಲ್ಲಿ ಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದ ಐಡೆನ್ ಮಾರ್ಕ್ರಾಮ್ ನಾಲ್ಕನೇ ದಿನವೂ ಅದೇ ಜವಾಬ್ದಾರಿಯುತ ಬ್ಯಾಟಿಂಗ್‌ ಮುಂದುವರೆಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು.

* 27 ವರ್ಷಗಳ ಬರ ನೀಗಿಸಿಕೊಂಡ ಆಫ್ರಿಕಾ
ಗೆಲುವಿಗೆ ಇನ್ನು 6 ರನ್ ಬೇಕಾಗಿದ್ದಾಗ ಮಾರ್ಕ್ರಾಮ್ ವಿಕೆಟ್ ಪತನವಾಯಿತು. ಕೊನೆಯದಾಗಿ ಕೈಲ್ ವೆರ್ರೆನ್ ಅವರ ಬ್ಯಾಟ್‌ನಿಂದ ಗೆಲುವಿನ ರನ್ ಬಂದ ತಕ್ಷಣ, ಲಾರ್ಡ್ಸ್ ಡ್ರೆಸ್ಸಿಂಗ್ ಕೋಣೆಯಲ್ಲಿದ್ದ ದಕ್ಷಿಣ ಆಫ್ರಿಕಾದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ, ಕ್ರೀಡಾಂಗಣದಲ್ಲಿ ಹಾಜರಿದ್ದ ಪ್ರತಿಯೊಬ್ಬ ದಕ್ಷಿಣ ಆಫ್ರಿಕಾದ ಅಭಿಮಾನಿ ಮತ್ತು ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳು ಭಾವುಕರಾದರು. ಈ ಗೆಲುವಿನೊಂದಿಗೆ ಪ್ರತಿ ಐಸಿಸಿ ಈವೆಂಟ್​ನಲ್ಲೂ ಗೆಲುವಿನ ಸನಿಹಕ್ಕೆ ಬಂದು ಎಡವುತ್ತಿದ್ದ ಆಫ್ರಿಕಾ ತಂಡ ಕೊನೆಗೂ ಚೋಕರ್ಸ್​ ಹಣೆ ಪಟ್ಟಿಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಯಿತು. ಇದು ಮಾತ್ರವಲ್ಲದೆ 27 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದ ಸಾಧನೆ ಮಾಡಿತು. ಈ ಹಿಂದೆ ಆಫ್ರಿಕಾ ತಂಡ 1998 ರಲ್ಲಿ ಚಾಂಪಿಯನ್ಸ್ ಟ್ರೋಫಿ (ಐಸಿಸಿ ನಾಕೌಟ್ ಟ್ರೋಫಿ) ರೂಪದಲ್ಲಿ ತನ್ನ ಕೊನೆಯ ಐಸಿಸಿ ಪ್ರಶಸ್ತಿಯನ್ನು ಗೆದ್ದಿತ್ತು. ಅಲ್ಲಿಂದ ಇಲ್ಲಿಯವರೆಗೆ ಆಫ್ರಿಕಾ ತಂಡಕ್ಕೆ ಹಲವು ಅವಕಾಶಗಳು ಸಿಕ್ಕವಾದರೂ ಅವನ್ನು ಪ್ರಶಸ್ತಿಯಾಗಿ ಪರಿವರ್ತಿಸುವಲ್ಲಿ ಆಫ್ರಿಕಾ ಎಡವಿತ್ತು.