Categories
ಕ್ರಿಕೆಟ್ ಕ್ರೀಡಾ ಸುದ್ದಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲುವಿನತ್ತ ಹರಿಣಗಳು: ಕೇವಲ 69 ರನ್ ಬಾಕಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲುವಿನತ್ತ ಹರಿಣಗಳು: ಕೇವಲ 69 ರನ್ ಬಾಕಿ
* ತ್ಯಾಗ,ಹೋರಾಟವಿದ್ದರೆ ಮಾತ್ರ ಇಂಗ್ಲೆಂಡ್ ಸರಣಿ ಗೆಲ್ಲಬಹುದು: ಗಂಭೀರ್

NAMMMUR EXPRESS SPORTS NEWS
ಲಾರ್ಡ್ಸ್: ಆರಂಭಿಕ ಬ್ಯಾಟರ್‌ ಏಡೆನ್‌ ಮಾರ್ಕಂ ಮತ್ತು ನಾಯಕ ಟೆಂಬಾ ಬವುಮಾ ಅವರ ದಿಟ್ಟ ಬ್ಯಾಟಿಂಗ್‌ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟಿದೆ.
ಪಂದ್ಯದ ನಾಲ್ಕನೇ ದಿನವಾದ ಶನಿವಾರ ಬ್ಯಾಟಿಂಗ್‌ ಸ್ಥಿರತೆ ಕಾಯ್ದುಕೊಂಡಲ್ಲಿ 27 ವರ್ಷಗಳ ನಂತರ ಐಸಿಸಿ ಟ್ರೋಫಿ ಎತ್ತಿಹಿಡಿಯುವ ಅದ್ಭುತ ಅವಕಾಶ ಹರಿಣಗಳ ಪಾಲಿಗೆ ಒಲಿಯಲಿದೆ. 1998ರಲ್ಲಿ ಏಕದಿನ ಚಾಂಪಿಯನ್ಸ್‌ ಟ್ರೋಫಿ ಗೆದ್ದಿರುವುದನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾ, ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಹಲವು ವರ್ಷಗಳಿಂದಲೂ ಚೋಕರ್ಸ್‌ ಹಣೆಪಟ್ಟಿ ಕಟ್ಟಿಕೊಂಡಿರುವ ದಕ್ಷಿಣ ಆಫ್ರಿಕಾ, ಈಗ ಅದನ್ನು ಕಳಚುವ ಅದ್ಭುತ ಅವಕಾಶವನ್ನು ಹೊಂದಿದೆ.

* ಇನ್ನು ಬೇಕಿರುವುದು ಕೇವಲ 69 ರನ್
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶುಕ್ರವಾರ 282 ರನ್‌ಗಳ ಕಠಿಣ ಗುರಿ ಪಡೆದ ದಕ್ಷಿಣ ಆಫ್ರಿಕಾ, ದಿನದಾಟದ ಅಂತ್ಯಕ್ಕೆ 56 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿದೆ. ಐತಿಹಾಸಿಕ ಗೆಲುವಿಗೆ ಉಳಿದ 8 ವಿಕೆಟ್‌ಗಳಲ್ಲಿ 69 ರನ್‌ ಗಳಿಸಬೇಕಿದೆ. ಮಾರ್ಕಂ(102; 159 ಎಸೆತ, 11 ಫೋರ್‌) ಮತ್ತು ಬವುಮಾ (65*; 121 ಎಸೆತ, 5 ಫೋರ್‌) ಕ್ರೀಸ್‌ ಕಾಯ್ದುಕೊಂಡಿದ್ದಾರೆ.
ವೇಗಿಗಳಿಗೆ ಹೆಚ್ಚು ನೆರವಾಗುತ್ತಿರುವ ಪಿಚ್‌ನಲ್ಲಿ ರನ್‌ ಗಳಿಸಲು ಬ್ಯಾಟರ್‌ಗಳು ಹರಸಾಹಸ ಪಡುತ್ತಿದ್ದರೂ ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ ಏಡೆನ್‌ ಮಾಕ್ರಂ ಮತ್ತು ಕಾಲಿನ ಗಾಯದ ನಡುವೆಯೂ ತಂಡಕ್ಕೆ ಆಸರೆಯಾದ ಟೆಂಬಾ ಬವುಮಾ, ತಂಡದ ಹೋರಾಟಕ್ಕೆ ಬಲ ತುಂಬಿದರು. ಮಿಚೆಲ್‌ ಸ್ಟಾರ್ಕ್ ಸೇರಿ ಆಸೀಸ್‌ ವೇಗಿಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ 3ನೇ ವಿಕೆಟ್‌ಗೆ 143* ರನ್‌ಗಳ ಅತ್ಯುತ್ತಮ ಜತೆಯಾಟದ ನಿರ್ವಹಿಸಿದರು. 2 ರನ್‌ ಗಳಿಸಿದ್ದ ವೇಳೆ ಸ್ಮಿತ್‌ ಅವರಿಂದ ಜೀವದಾನ ಪಡೆದ ಬವುಮಾ, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು.

* ಬ್ಯಾಟಿಂಗ್‌ನಲ್ಲೂ ಆಸರೆಯಾದ ಸ್ಟಾರ್ಕ್
8 ವಿಕೆಟ್‌ಗೆ 114 ರನ್‌ಗಳಿಂದ 2ನೇ ಇನಿಂಗ್ಸ್‌ ಮುಂದುವರಿಸಿದ ಆಸ್ಪ್ರೇಲಿಯಾ, ಮಿಚೆಲ್‌ ಸ್ಟಾರ್ಕ್(58*; 136 ಎಸೆತ, 5 ಫೋರ್‌) ಅವರ ಜವಾಬ್ದಾರಿಯುತ ಅರ್ಧ ಶತಕದ ಬಲದಿಂದ ದಕ್ಷಿಣ ಆಫ್ರಿಕಾಕ್ಕೆ ಕಠಿಣ ಸವಾಲು ಒಡ್ಡಿತು. 2ನೇ ದಿನದಾಟದಂತ್ಯಕ್ಕೆ 16 ರನ್‌ ಗಳಿಸಿದ್ದ ಸ್ಟಾರ್ಕ್, 3ನೇ ದಿನ ವೇಗಿಗಳಾದ ಕಗಿಸೊ ರಬಾಡ ಮತ್ತು ಲುಂಗಿ ಎನ್‌ಗಿಡಿ ಅವರ ಮಾರಕ ದಾಳಿಯನ್ನು ಪ್ರಬಲವಾಗಿ ಎದುರಿಸಿದರು. 10ನೇ ವಿಕೆಟ್‌ಗೆ ಜೋಶ್‌ ಹೇಜಲ್‌ವುಡ್‌ ಜತೆ 59 ರನ್‌ಗಳ ಮಹತ್ವದ ಜೊತೆಯಾಟ ನಿರ್ವಹಿಸಿದ ಸ್ಟಾರ್ಕ್, ಆಸೀಸ್‌ಗೆ ಗೆಲುವಿನ ಭರವಸೆ ಮೂಡಿಸಿದರು.

* ತ್ಯಾಗ,ಹೋರಾಟವಿದ್ದರೆ ಮಾತ್ರ ಇಂಗ್ಲೆಂಡ್ ಸರಣಿ ಗೆಲ್ಲಬಹುದು: ಗಂಭೀರ್
ಲಂಡನ್: ನಾವು ತ್ಯಾಗ ಮಾಡಿದರೆ, ಹೋರಾಟ ಬಿಡದಿದ್ದರೆ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಸ್ಮರಣೀಯಗೊಳಿಸಬಹುದು ಎಂದು ಭಾರತದ ಕೋಚ್ ಗೌತಮ್ ಗಂಭೀರ್, ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಗುರುವಾರ ಅಭ್ಯಾಸದ ವೇಳೆ ಆಟಗಾರರ ಜೊತೆ ಮಾತನಾಡಿದ ಗಂಭೀರ್, ‘ಈ ಸರಣಿಯನ್ನು ನಾವು 2 ವಿಧದಲ್ಲಿ ನೋಡಬಹುದು. ಅತ್ಯಂತ ಅನುಭವಿಗಳಾದ ಮೂವರು ಆಟಗಾರರಿಲ್ಲದೆ ನಾವು ಈ ಸರಣಿ ಆಡುತ್ತಿದ್ದೇವೆ ಮತ್ತು ದೇಶಕ್ಕಾಗಿ ಏನಾದರೂ ಸಾಧಿಸಲು ನಮಗೆ ಸಿಕ್ಕ ಉತ್ತಮ ಅವಕಾಶ ಇದು. ಈ ತಂಡವನ್ನು ನೋಡುವಾಗ ಬದ್ಧತೆ, ಉದ್ವೇಗ ಕಂಡುಬರುತ್ತದೆ. ನಾವು ಏನಾದರೂ ತ್ಯಾಗ ಮಾಡಲು ಸಿದ್ದವಿದ್ದರೆ, ನಮ್ಮ ಆರಾಮದಾಯಕ ಬದುಕಿನಿಂದ ಆಚೆ ಬಂದರೆ, ಹೋರಾಡಿದರೆ ಈ ಸರಣಿ ಸ್ಮರಣೀಯಗೊಳಿಸಬಹುದು. ಪ್ರತಿ ದಿನ ಅಲ್ಲ, ಪ್ರತಿ ಅವಧಿ, ಪ್ರತಿ ಓವರ್, ಪ್ರತಿ ಎಸೆತದಲ್ಲೂ ನಾವು ಹೋರಾಡಬೇಕು ಎಂದು ಗಂಭೀರ್ ಹೇಳಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ -2025

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ -2025
* ಬೆಂಗಳೂರು ಕಾಲ್ತುಳಿತ ಪ್ರಕರಣ, ಆರ್‌ಸಿಬಿ ಸಿಬ್ಬಂದಿಗಳಿಗೆ ಜಾಮೀನು

NAMMMUR EXPRESS SPORTS NEWS
* ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ -2025
ಕ್ರಿಕೆಟ್ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 212 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡ ಹೀನಾಯ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಮಾರಕ ದಾಳಿಗೆ ಬೆದರಿದ ಆಫ್ರಿಕಾ ತಂಡ ಕೇವಲ 138 ರನ್‌ಗಳಿಗೆ ಆಲೌಟ್ ಆಗಿದೆ. ಹೀಗಾಗಿ ಕಾಂಗರೂ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 74 ರನ್‌ಗಳ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ಪರ ಕಮ್ಮಿನ್ಸ್ ಆರು ವಿಕೆಟ್‌ಗಳನ್ನು ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ ಎರಡು ಮತ್ತು ಜೋಶ್ ಹೇಜಲ್‌ವುಡ್ ಒಂದು ವಿಕೆಟ್ ಪಡೆದರು. ಇತ್ತ ಆಫ್ರಿಕಾ ಪರ ನಾಲ್ವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು.
ದಕ್ಷಿಣ ಆಫ್ರಿಕಾ ಪರ ಡೇವಿಡ್ ಬೆಡಿಂಗ್‌ಹ್ಯಾಮ್ ಅತ್ಯಧಿಕ 45 ರನ್ ಗಳಿಸಿದರೆ, ನಾಯಕ ಟೆಂಬಾ ಬವುಮಾ 36 ರನ್ ಗಳಿಸಿ ಔಟಾದರು. ರಯಾನ್ ರಿಕಲ್ಟನ್ 16 ಮತ್ತು ಕೈಲ್ ವೆರ್ರೆಯ್ನ್ 13 ರನ್‌ಗಳ ಕೊಡುಗೆ ನೀಡಿದರು. ಮೊದಲ ದಿನದಾಟದಂತ್ಯಕ್ಕೆ 43 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾದ ಇನ್ನಿಂಗ್ಸ್ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ನಾಯಕ ಬವುಮಾ ಮತ್ತು ಬೆಡಿಂಗ್ಹ್ಯಾಮ್ ಐದನೇ ವಿಕೆಟ್‌ಗೆ 64 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದರೆ ಈ ಪಾಲುದಾರಿಕೆ ಮುರಿದ ತಕ್ಷಣ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಕುಸಿಯಿತು. ದಕ್ಷಿಣ ಆಫ್ರಿಕಾ ಪರ, ವಿಯಾನ್ ಮುಲ್ಡರ್ ಆರು, ಟ್ರಿಸ್ಟಾನ್ ಸ್ಟಬ್ಸ್ ಎರಡು, ಕೇಶವ್ ಮಹಾರಾಜ್ ಏಳು ಮತ್ತು ಕಗಿಸೊ ರಬಾಡ ಒಂದು ರನ್ ಗಳಿಸಿದರೆ ಐಡೆನ್ ಮಾರ್ಕ್ರಾಮ್ ಮತ್ತು ಮಾರ್ಕೊ ಯಾನ್ಸೆನ್​ಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ.

* ಕಮ್ಮಿನ್ಸ್ ದಾಖಲೆ
ಇತ್ತ ಆಸ್ಟ್ರೇಲಿಯಾ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ನಾಯಕ ಪ್ಯಾಟ್ ಕಮ್ಮಿನ್ಸ್ 6 ವಿಕೆಟ್‌ ಉರುಳಿಸಿದರು. ಈ ಮೂಲಕ ಕಮ್ಮಿನ್ಸ್ ಈ ಆವೃತ್ತಿಯಲ್ಲಿ ಆರನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಅಷ್ಟೇ ಅಲ್ಲ, ಕಮ್ಮಿನ್ಸ್ ಪ್ರಸ್ತುತ ಡಬ್ಲ್ಯೂಟಿಸಿ ಸೈಕಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ. ಅವರು 2023-25ರ ಆವೃತ್ತಿಯಲ್ಲಿ ಇದುವರೆಗೆ 79 ವಿಕೆಟ್‌ಗಳನ್ನು ಕಬಳಿಸಿದ್ದು ಈ ಮೂಲಕ ಭಾರತದ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿದ್ದಾರೆ.

* ಬೆಂಗಳೂರು ಕಾಲ್ತುಳಿತ ಪ್ರಕರಣ, ಆರ್‌ಸಿಬಿ ಸಿಬ್ಬಂದಿಗಳಿಗೆ ಜಾಮೀನು
ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್‌ ಕುಮಾರ್, ಶಮಂತ್ ಮಾವಿನಕೆರೆಗೆ ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಆರೋಪಿಗಳು ಪಾಸ್ ಪೋರ್ಟ್ ವಶಕ್ಕೆ ನೀಡುವಂತೆ ನ್ಯಾ.ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ಷರತ್ತು ಬದ್ಧ, ಮಧ್ಯಂತರ ಜಾಮೀನು ನೀಡಿದೆ.
ಪ್ರಕರಣದಲ್ಲಿ ತಮ್ಮನ್ನು ಬಂಧಿಸಿದ ಪೊಲೀಸರ ಕ್ರಮ ಕಾನೂನು ಬಾಹಿರವಾಗಿದ್ದು, ಕೂಡಲೆ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ನಾಲ್ವರು ಆರ್​ಸಿಬಿ ಸಿಬ್ಬಂದಿ ಅರ್ಜಿ ಸಲ್ಲಿಸಿದ್ದರು. ಆರ್​ಸಿಬಿ ಮಾರ್ಕೆಟಿಂಗ್​ ಹೆಡ್ ನಿಖಿಲ್​ ಸೋಸಲೆ, ಡಿಎನ್​ಎ ಎಂಟರ್​ಟೈನ್​ಮೆಂಟ್​ ನೆಟ್​ವರ್ಕ್​​ನ ನಿರ್ದೇಶಕ ಸುನೀಲ್​ ಮ್ಯಾಥ್ಯೂ, ಡಿಎನ್​ಎ ಮ್ಯಾನೇಜರ್​ ಕಿರಣ್​ ಕುಮಾರ್ ಮತ್ತು ಸಮಂತ್​ ಮಾವಿನಕೆರೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಮಧ್ಯಂತರ ಮನವಿ ಕುರಿತ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್​.ಆರ್​ ಕೃಷ್ಣ ಕುಮಾರ್ ಅವರ ಪೀಠ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಐಸಿಸಿ ಹಾಲ್ ಆಫ್‌ಗೆ ಎಂ.ಎಸ್ ಧೋನಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಐಸಿಸಿ ಹಾಲ್ ಆಫ್‌ಗೆ ಎಂ.ಎಸ್ ಧೋನಿ
* ಕಾಲ್ತುಳಿತ ಘಟನೆಗೆ ಸರ್ಕಾರವೇ ಕಾರಣ – ಆರ್‌ಸಿಬಿಯಿಂದ ಚಾರ್ಜ್‌ಶೀಟ್

NAMMMUR EXPRESS SPORTS NEWS
ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ವಿಶ್ವದ 7 ಆಟಗಾರರಿಗೆ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹಾಲ್ ಆಫ್ ಫೇಮ್ ಗೌರವ ನೀಡಿದೆ. ಧೋನಿ ಅವರ ನಾಯಕತ್ವದ ಗುಣಗಳು ಹಾಗೂ ಕ್ರಿಕೆಟ್​ಗೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಅವರನ್ನು ಹಾಲ್ ಆಫ್ ಫೇಮ್​ ಪಟ್ಟಿಗೆ ಸೇರಿಸಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ಇದರೊಂದಿಗೆ ಐಸಿಸಿ ಹಾಲ್ ಆಫ್ ಫೇಮ್‌ ಗೌರವಕ್ಕೆ ಪಾತ್ರರಾದ 11ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.

* ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಧೋನಿ ಸಾಧನೆ
ಮಹೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್​ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಅದರಲ್ಲೂ ಐಸಿಸಿ ಟೂರ್ನಿಯ ಮೂರು ಪ್ರಶಸ್ತಿಗಳನ್ನು ಪಡೆದ ಏಕೈಕ ಕ್ಯಾಪ್ಟನ್ ಧೋನಿ. 2007 ರಲ್ಲಿ ಧೋನಿ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಅಲ್ಲದೆ 2011 ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಧೋನಿ ಪ್ರಮುಖ ಪಾತ್ರವಹಿಸಿದ್ದರು.
ಅಲ್ಲದೆ ಟೀಮ್ ಇಂಡಿಯಾ ಪರ 538 ಪಂದ್ಯಗಳನ್ನಾಡಿರುವ ಧೋನಿ ಒಟ್ಟು 17266 ರನ್ ಕಲೆಹಾಕಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ 26ನೇ ಸ್ಥಾನ ಅಲಂಕರಿಸಿದ್ದಾರೆ. ಈ ಎಲ್ಲಾ ಸಾಧನೆಗಾಗಿ ಮಹೇಂದ್ರ ಸಿಂಗ್ ಧೋನಿಗೆ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ.

* ಕಾಲ್ತುಳಿತ ಘಟನೆಗೆ ಸರ್ಕಾರವೇ ಕಾರಣ – ಆರ್‌ಸಿಬಿಯಿಂದ ಚಾರ್ಜ್‌ಶೀಟ್
ಬೆಂಗಳೂರಿನ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಡಿಎನ್ಎ ಎಂಟರ್​ಟೈನ್ಮೆಂಟ್ ನೆಟ್​ವರ್ಕ್ ಪ್ರೈವೇಟ್ ಲಿಮಿಟೆಡ್ ಮತ್ತು ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್​​ ಹೈಕೋರ್ಟ್​​ ಗೆ ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಿವೆ. ಅದರಲ್ಲೂ ಡಿಎನ್ಎ ಎಂಟರ್​ಟೈನ್ಮೆಂಟ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂನ ಕಾರ್ಯಕ್ರಮದ ಪ್ಲ್ಯಾನ್ ಸರ್ಕಾರ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (KSCA) ನದ್ದು. ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಸರ್ಕಾರವೇ ಕರೆ ಕೊಟ್ಟಿತ್ತು ಎಂದು ರಿಟ್ ಅರ್ಜಿಯಲ್ಲಿ ಸ್ಫೋಟಕ ಅಂಶಗಳನ್ನು ಉಲ್ಲೇಖಿಸಿದೆ.
ಭಾರತ ಟಿ20 ವಿಶ್ವಕಪ್ ಗೆದ್ದಾಗ ಮುಂಬೈನಲ್ಲಿ ವಿಕ್ಟರಿ ಪರೇಡ್ ನಡೆಸಲಾಗಿತ್ತು.DNA ಆಯೋಜಿಸಿದ್ದ ಪರೇಡ್​ ನಲ್ಲಿ 3 ಲಕ್ಷ ಜನರಿದ್ದರೂ ಯಾವುದೇ ಅವಘಡಗಳಾಗಿರಲಿಲ್ಲ. ವಾಂಖೆಡೆ ಸ್ಟೇಡಿಯಂನ ಪ್ರೇಕ್ಷಕರ ಸಾಮರ್ಥ್ಯ 32,000 ಇದ್ರೂ ಸಮಸ್ಯೆ ಆಗಿರಲಿಲ್ಲ ಎಂದು ಡಿಎನ್ಎ ಎಂಟರ್​ಟೈನ್ಮೆಂಟ್ ಎಂದು ಹೈಕೋರ್ಟ್ ಗೆ ತಿಳಿಸಿದೆ.
ಆರ್‌ಸಿಬಿ ವಿಕ್ಟರಿ ಪರೇಡ್ ನಡೆಸಲು ಅನುಮತಿಗಾಗಿ ಜೂನ್ 3ರಂದು ಪತ್ರ ಬರೆಯಲಾಗಿತ್ತು. ತೆರೆದ ಬಸ್​ ನಲ್ಲಿ ಪರೇಡ್ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರು. ರಾಜ್ಯ ಸರ್ಕಾರ ವಿಧಾನಸೌಧದ ಮುಂದೆ ಕಾರ್ಯಕ್ರಮಕ್ಕೆ ನಿರ್ಧರಿಸಿತು.ಪೊಲೀಸರು ವಿಧಾನಸೌಧದ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಿದರು. ಎಂ.ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಗತ್ಯವಿದ್ದಷ್ಟು ಪೊಲೀಸರು ಇರಲಿಲ್ಲ. ಡಿಎನ್ಎ ಸಂಸ್ಥೆಯಿಂದಲೇ 584 ಖಾಸಗಿ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಬಂಧನಕ್ಕೆ ಆದೇಶಿಸಿದೆ ಎಂದು ಆರೋಪಿಸಿದೆ.
ಸಿಎಂ ಸೂಚನೆ ಮೇರೆಗೆ DNA ಸಂಸ್ಥೆಯ ಇಬ್ಬರು ಸಿಬ್ಬಂದಿ ಬಂಧಿಸಲಾಗಿದೆ. ಘಟನೆ ದಿನ ಪೊಲೀಸರಿಗೆ 2,450 ಆಹಾರ ಪೊಟ್ಟಣ ಸಿದ್ಧಪಡಿಸಲಾಗಿತ್ತು. ಆದರೆ ಪೊಲೀಸರು ಕಡಿಮೆ ಸಂಖ್ಯೆಯಲ್ಲಿ ಇದ್ದುದರಿಂದ ಜೂನ್ 4ರಂದು ಮಧ್ಯಾಹ್ನ 600 ಆಹಾರ ಪೊಟ್ಟಣ ಮಾತ್ರ ಸ್ವೀಕರಿಸಿದರು. ರಾತ್ರಿ ಭೋಜನಕ್ಕೆ ಮಾತ್ರ 2,450 ಆಹಾರ ಪೊಟ್ಟಣ ಸ್ವೀಕರಿಸಿದರು. ಮಧ್ಯಾಹ್ನ 3.30ಕ್ಕೆ ಗೇಟ್ ತೆರೆದ ಬಳಿಕವೂ ಅಭಿಮಾನಿಗಳ ದಟ್ಟಣೆ ಇತ್ತು. ಬಳಿಕ ಬಂದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರಿಂದ ಕಾಲ್ತುಳಿತವಾಗಿದೆ ಎಂದು ಡಿಎನ್​ಎ ತನ್ನ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದೆ.
ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂನ ಕಾರ್ಯಕ್ರಮದ ಪ್ಲ್ಯಾನ್ ಸರ್ಕಾರ, KSCAನದ್ದು. ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಸರ್ಕಾರವೇ ಕರೆ ಕೊಟ್ಟಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಚರ್ಚಿಸಿ ಕ್ಷಣಕ್ಷಣದ ಪ್ಲ್ಯಾನ್ ರೂಪಿಸಿದ್ದರು. ಸರ್ಕಾರ ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದಲೇ ಕಾಲ್ತುಳಿತವಾಗಿದೆ. ಲಕ್ಷಾಂತರ ಜನ ವಿಧಾನಸೌಧಕ್ಕೆ ಬಂದು, ಸ್ಟೇಡಿಯಂಗೂ ಬಂದಿದ್ದೇ ಈ ಘಟನೆ ಕಾರಣ ಎಂದು ತಿಳಿಸಿದೆ.

Categories
ಕ್ರೀಡಾ ಸುದ್ದಿ

ಆಂಗ್ಲರ ನಾಡಲ್ಲಿ ಪ್ರಾಕ್ಟೀಸ್ ಶುರುಮಾಡಿದ ಟೀಂ ಇಂಡಿಯಾ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಆಂಗ್ಲರ ನಾಡಲ್ಲಿ ಪ್ರಾಕ್ಟೀಸ್ ಶುರುಮಾಡಿದ ಟೀಂ ಇಂಡಿಯಾ
* ರೋಲ್ಯಾಂಡ್ ಗ್ಯಾರೋಸ್​ನಲ್ಲಿ ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್

NAMMMUR EXPRESS SPORTS NEWS
* ಆಂಗ್ಲರ ನಾಡಲ್ಲಿ ಪ್ರಾಕ್ಟೀಸ್ ಶುರುಮಾಡಿದ ಟೀಂ ಇಂಡಿಯಾ
ಇಂಗ್ಲೆಂಡ್: ಜೂನ್ 20 ರಿಂದ ಇಂಗ್ಲೆಂಡ್‌ ವಿರುದ್ಧ ಆರಂಭವಾಗಲಿರುವ 5 ಟೆಸ್ಟ್ ಪಂದ್ಯಗಳ ಸರಣಿಯೊಂದಿಗೆ ಟೀಂ ಇಂಡಿಯಾದ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕೂಡ ಆರಂಭವಾಗಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್​ನಿಂದ ನಿವೃತ್ತರಾದ ನಂತರ, ಶುಭ್​ಮನ್ ಗಿಲ್ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ನೋಡಲು ಎಲ್ಲರೂ ಕಾತುರರಾಗಿದ್ದಾರೆ. ಈಗಾಗಲೇ ಭಾರತ ಯುವ ಪಡೆ ಇಂಗ್ಲೆಂಡ್​ಗೆ ತೆರಳಿದ್ದು, ತರಬೇತಿಯನ್ನು ಸಹ ಪ್ರಾರಂಭಿಸಿದೆ.
ಲಾರ್ಡ್ಸ್ ಒಳಾಂಗಣ ತರಬೇತಿ ಕೇಂದ್ರದಲ್ಲಿ ಅಭ್ಯಾಸ
ಜೂನ್ 6 ರಂದು ಲಂಡನ್ ತಲುಪಿದ ಭಾರತ ತಂಡದ ಆಟಗಾರರು ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದ ಒಳಾಂಗಣ ತರಬೇತಿ ಕೇಂದ್ರದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಈ ವೇಳೆ ತಂಡದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಕೋಚ್ ಮೋರ್ನೆ ಮಾರ್ಕೆಲ್ ಅವರೊಂದಿಗೆ ದೀರ್ಘಕಾಲ ಮಾತನಾಡುತ್ತಿರುವುದು ಕಂಡುಬಂತು. ಈ ಪ್ರವಾಸದಲ್ಲಿ ಬುಮ್ರಾ ಅವರ ಪ್ರದರ್ಶನವು ಟೀಂ ಇಂಡಿಯಾಕ್ಕೆ ಬಹಳ ಮುಖ್ಯವಾಗಲಿದೆ. ಬುಮ್ರಾ ಅವರಲ್ಲದೆ, ಈ ಪ್ರವಾಸದಲ್ಲಿ ಭಾರತೀಯ ತಂಡವು ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಅರ್ಶ್ದೀಪ್ ಸಿಂಗ್ ಅವರಂತಹ ವೇಗದ ಬೌಲರ್‌ಗಳನ್ನು ಹೊಂದಿರುತ್ತದೆ.
ಹೆಡಿಂಗ್ಲಿಯಲ್ಲಿ ಮೊದಲ ಟೆಸ್ಟ್
ಇಂಗ್ಲೆಂಡ್ ಪ್ರವಾಸದಲ್ಲಿ, ಭಾರತ ತಂಡವು ಜೂನ್ 20 ರಂದು ಹೆಡಿಂಗ್ಲಿ ಮೈದಾನದಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಇದರ ನಂತರ, ಟೀಂ ಇಂಡಿಯಾ ಜುಲೈ 2 ರಿಂದ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಮೂರನೇ ಟೆಸ್ಟ್ ಪಂದ್ಯ ಜುಲೈ 10 ರಿಂದ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಅದೇ ಸಮಯದಲ್ಲಿ, ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಿಂದ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆಯಲಿದ್ದು, ಈ ಟೆಸ್ಟ್ ಸರಣಿಯು ಜುಲೈ 31 ರಿಂದ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ.

* ರೋಲ್ಯಾಂಡ್ ಗ್ಯಾರೋಸ್​ನಲ್ಲಿ ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಪ್ಯಾರಿಸ್​: ರೋಲ್ಯಾಂಡ್ ಗ್ಯಾರೋಸ್​ ಮೈದಾನದಲ್ಲಿ ನಡೆದ ಫ್ರೆಂಚ್ ಓಪನ್ ಫೈನಲ್​ನಲ್ಲಿ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಕಾರ್ಲೋಸ್ ಅಲ್ಕರಾಝ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಇದು ಕ್ಲೇ ಕೋರ್ಟ್​ನಲ್ಲಿ 22 ವರ್ಷದ ಅಲ್ಕರಾಝ್ ಅವರ 2ನೇ ಪ್ರಶಸ್ತಿ ಎಂಬುದು ವಿಶೇಷ.
ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲ ಸೆಟ್ ಅನ್ನು ಯಾನಿಕ್ ಸಿನ್ನರ್ 4-6 ಅಂತರದಿಂದ ಗೆದ್ದುಕೊಂಡಿದ್ದರು. ದ್ವಿತೀಯ ಸೆಟ್​ನಲ್ಲಿ ಅಲ್ಕರಾಝ್ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರೂ ಅಂತಿಮವಾಗಿ 6-7 ಅಂತರದಿಂದ ಸೋಲೊಪ್ಪಿಕೊಂಡರು.
ಆದರೆ ಮೂರನೇ ಸೆಟ್​ನಲ್ಲಿ ಅತ್ಯುತ್ತಮ ಸರ್ವ್​ಗಳ ಮೂಲಕ ಗಮನ ಸೆಳೆದ ಕಾರ್ಲೋಸ್ ಅಲ್ಕರಾಝ್ 6-4 ಅಂತರದಿಂದ ಯಾನಿಕ್ ಸಿನ್ನರ್​ಗೆ ಸೋಲುಣಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ನಡೆದ ಎರಡು ಸೆಟ್​ಗಳು ರಣರೋಚಕ ಕಾಳಗಕ್ಕೆ ಸಾಕ್ಷಿಯಾಯಿತು. ದಾಳಿಗೆ ಪ್ರತಿದಾಳಿ ಎಂಬಂತೆ ಕಂಡು ಬಂದ 4ನೇ ಸೆಟ್ ಅನ್ನು ಅಲ್ಕರಾಝ್ 7-6 ಗೆದ್ದುಕೊಂಡರು.
ಆದಾಗ್ಯೂ ಕೊನೆಯ ಸೆಟ್​ನಲ್ಲಿ ತನ್ನ ಅನುಭವವನ್ನು ಧಾರೆಯೆರೆದ ಯಾನಿಕ್ ಸಿನ್ನರ್ ಕಾರ್ಲೊಸ್ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು. ಆದರೆ ಅಂತಿಮ ಸುತ್ತಿನಲ್ಲಿ ಛಲದಂಕ ಮಲ್ಲನಂತೆ ಚಲಿಸಿದ ಕಾರ್ಲೋಸ್ ಅಲ್ಕರಾಝ್ 7-6 ಅಂತರದಿಂದ ಗೆದ್ದುಕೊಂಡರು.
ಈ ಮೂಲಕ 4-6, 6-7 (4), 6-4, 7-6 (3), 7-6 (2) ಸೆಟ್​ಗಳ ಅಂತರದ ಮೂಲಕ ಯಾನಿಕ್ ಸಿನ್ನರ್​ಗೆ ಸೋಲುಣಿಸಿ ಕಾರ್ಲೋಸ್ ಅಲ್ಕರಾಝ್ ಎರಡನೇ ಬಾರಿ ಫ್ರೆಂಚ್ ಓಪನ್​ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
* ಹೊಸ ಇತಿಹಾಸ ಸೃಷ್ಠಿ
ಈ ಬಾರಿಯ ಫ್ರೆಂಚ್ ಓಪನ್ ಫೈನಲ್ ಪಂದ್ಯ ನಡೆದದ್ದು ಬರೋಬ್ಬರಿ 5 ಗಂಟೆ 29 ನಿಮಿಷಗಳು. ಅಂದರೆ ರೋಲ್ಯಾಂಡ್ ಗ್ಯಾರೋಸ್​ನಲ್ಲಿ ನಡೆದ ಈ ಯುಗದ ಅತ್ಯಂತ ದೀರ್ಘಾವಧಿಯ ಫೈನಲ್ ಪಂದ್ಯ ಇದಾಗಿದೆ. ಇದಕ್ಕೂ ಮುನ್ನ ಓಪನ್ ಯುಗದಲ್ಲಿ ಅತಿ ದೀರ್ಘಾವಧಿಯ ಫ್ರೆಂಚ್ ಓಪನ್ ಫೈನಲ್ ನಡೆದದ್ದು 1982 ರಲ್ಲಿ. ಅಂದು ಮ್ಯಾಟ್ಸ್ ವಿಲಾಂಡರ್ ಹಾಗೂ ಗಿಲ್ಲೆರ್ಮೊ ವಿಲಾಸ್ 4 ಗಂಟೆ 47 ನಿಮಿಷಗಳ ಫೈನಲ್ ಮ್ಯಾಚ್ ಆಡಿ ಇತಿಹಾಸ ನಿರ್ಮಿಸಿದ್ದರು.
ಈ ಬಾರಿ ಇಟಲಿಯ ಯಾನಿಕ್ ಸಿನ್ನರ್ ಹಾಗೂ ಸ್ಟೇನ್​ನ ಕಾರ್ಲೋಸ್ ಅಲ್ಕರಾಝ್ ನಡುವೆ ಕಂಡು ಬಂದ ಫೈನಲ್ ಪಂದ್ಯವು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಈ ಇತಿಹಾಸದೊಂದಿಗೆ ಅಲ್ಕರಾಝ್ ಫ್ರೆಂಚ್ ಓಪನ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್‌ನ ಹೆಸರು ರಿವೀಲ್

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್‌ನ ಹೆಸರು ರಿವೀಲ್
* ಇಂಗ್ಲೆಂಡ್ ಲಯನ್ಸ್ ವಿರುದ್ಧ ಟೆಸ್ಟ್,ರಾಹುಲ್ ಮೇಲೆ ಕಣ್ಣು

NAMMMUR EXPRESS SPORTS NEWS
ಇಂಗ್ಲೆಂಡ್ ಪ್ರವಾಸದಲ್ಲಿ ಈಗಾಗಲೇ ಭಾರತ ತನ್ನ ಅದೃಷ್ಟ ಪರೀಕ್ಷೆಯನ್ನು ಆರಂಭಿಸಿದೆ. ಈ ವೇಳೆ ಭಾರತ ಎ ತಂಡ ಇಂಗ್ಲೆಂಡ್ ಲಯನ್ಸ್ ತಂಡದ ವಿರುದ್ಧ 2 ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಈ ಟೂರ್ನಿ ಮುಗಿದ ಬಳಿಕ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್‌ ಸರಣಿ ಆರಂಭವಾಗಲಿದೆ. ಈ ಟೆಸ್ಟ್‌ ಸರಣಿಗೆ ಭಾರತದ ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಹಾಗೂ ಇಂಗ್ಲೆಂಡ್‌ನ ವೇಗಿ ಜೇಮ್ಸ್‌ ಆಂಡರ್ಸನ್‌ ಹೆಸರನ್ನು ಇಡಲಾಗಿದೆ. ಇವರಿಬ್ಬರ ಹೆಸರಿನಲ್ಲಿ ನಡೆಯುವ ಟ್ರೋಫಿಯನ್ನು ಜೂನ್‌ 20ರಂದು ರಿವೀಲ್‌ ಮಾಡಲಾಗುತ್ತದೆ.
ಸಚಿನ್‌ ತೆಂಡೂಲ್ಕರ್‌ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. ಇವರು ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರ. ಸಚಿನ್ 1989 ರಿಂದ 2013ರ ವರೆಗೆ 200 ಟೆಸ್ಟ್‌ ಪಂದ್ಯವನ್ನು ಆಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್‌ ಆಂಡರ್ಸನ್‌. ಇವರು ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್. ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ 704 ವಿಕೆಟ್‌ ಪಡೆದ ಸಾಧಕ. ಇವರು ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅಲ್ಲದೆ ಈಗ ಇವರು ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಇವರು ಇನ್ನು ಕೌಂಟಿ ಕ್ರಿಕೆಟ್‌ ಆಡುತ್ತಿರುವುದನ್ನು ಕಾಣಬಹುದಾಗಿದೆ.

* ಕ್ರಿಕೆಟ್ ದಿಗ್ಗಜರಿಗೆ ಗೌರವ
ಸಚಿನ್‌ ತೆಂಡೂಲ್ಕರ್ ಹಾಗೂ ಜೇಮ್ಸ್ ಆಂಡರ್ಸನ್‌ ಸತತ 14 ವರ್ಷ ಎದುರಾಳಿಗಳಾಗಿ ಆಡಿದ್ದಾರೆ. ಇನ್ನು ಟೆಸ್ಟ್‌ನಲ್ಲಿ ಯಾವೊಬ್ಬ ಬೌಲರ್‌ ತೆಂಡೂಲ್ಕರ್‌ ಅವರನ್ನು ಔಟ್ ಮಾಡಿದಷ್ಟು ಬಾರಿ ಜೇಮ್ಸ್ ಔಟ್ ಮಾಡಿದ್ದಾರೆ. ಈ ರೀತಿಯಾಗಿ ಮಾಜಿ ಆಟಗಾರರ ಹೆಸರನ್ನು ಇಟ್ಟು ಟ್ರೋಫಿಗೆ ಗೌರವಿಸು ಕಾರ್ಯ ಕಳೆದ ವರ್ಷದಿಂದ ಆರಂಭವಾಯಿತು. ಕಳೆದ ವರ್ಷ ಇಂಗ್ಲೆಂಡ್, ನ್ಯೂಜಿಲೆಂಡ್ ಪ್ರವಾಸ ಬೆಳೆಸಿದ್ದಾಗ ಕ್ರೋವ್-ಥಾರ್ಪ್ ಎಂಬ ಹೆಸರಿನಲ್ಲಿ ಟ್ರೋಫಿಯನ್ನು ಆಡಿಸಲಾಯಿತು. ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್‌ ಮಾರ್ಟಿನ್ ಕ್ರೋವ್ ಮತ್ತು ಇಂಗ್ಲೆಂಡ್‌ನ ಗ್ರಹಾಂ ಥೋರ್ಪ್ ಅವರಿಗೆ ಈ ಮೂಲಕ ಗೌರವ ಸೂಚಿಸಲಾಗಿತ್ತು. ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯನ್ನು ಈ ಹಿಂದೆ ಪಟೌಡಿ ಟ್ರೋಫಿ ಎಂದು ಕರೆಯಲಾಗಿತ್ತು. ಕಳೆದ ವರ್ಷ ನಡೆದಿದ್ದ ಸರಣಿಯನ್ನು ಇಂಗ್ಲೆಂಡ್ ಗೆದ್ದು ಬೀಗಿತ್ತು. ಕಳೆದ ಬಾರಿ ಕೋವಿಡ್‌ ಸಮಯದಲ್ಲಿ ನಡೆದಿದ್ದ ಸರಣಿ ಡ್ರಾ ಆಗಿತ್ತು.

* ಇಂಗ್ಲೆಂಡ್ ಲಯನ್ಸ್ ವಿರುದ್ಧ ಟೆಸ್ಟ್, ರಾಹುಲ್ ಮೇಲೆ ಕಣ್ಣು
ನಾರ್ಥಾಂಪ್ಟನ್ ನಲ್ಲಿ ಭಾರತ “ಎ” ಹಾಗೂ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಕಾದಾಟ ನಡೆಯಲಿದೆ. ಈ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರರು ಮೈದಾನ ಪ್ರವೇಶಿಸಲಿದ್ದಾರೆ. ಉಭಯ ತಂಡಗಳ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಹೀಗಾಗಿ ಈ ಟೆಸ್ಟ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದ ಬಳಿಕ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಟೆಸ್ಟ್‌ ಪಂದ್ಯಗಳ ಸರಣಿ ನಡೆಯಲಿದೆ. ಈ ವೇಳೆ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಆಡಲಿದೆ.ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡಿದ್ದ ಕೆಎಲ್ ರಾಹುಲ್‌ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಆಡಲಿದ್ದಾರೆ. ಟೆಸ್ಟ್‌ ತಂಡಕ್ಕೂ ಮುನ್ನ ಅಭ್ಯಾಸ ನಡೆಸಲು ಕನ್ನಡಿಗ ರಾಹುಲ್‌ ಇಂಗ್ಲೆಂಡ್‌ ತಲುಪಿದ್ದಾರೆ. ಹೀಗಾಗಿ ಈ ಆಟಗಾರನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಟೀಮ್ ಇಂಡಿಯಾ ಮೊದಲ ಟೆಸ್ಟ್‌ ಪಂದ್ಯವನ್ನು ಜೂನ್‌ 20 ರಿಂದ ಆರಂಭವಾಗಲಿದೆ. ಈ ಬಾರಿ ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾವನ್ನು ಶುಭಮನ್‌ ಗಿಲ್‌ ಮುನ್ನಡೆಸಲಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಕೋಚ್ ಗಂಭೀರ್,ನಾಯಕ ಗಿಲ್ ಸುದ್ದಿಗೋಷ್ಠಿ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಕೋಚ್ ಗಂಭೀರ್,ನಾಯಕ ಗಿಲ್ ಸುದ್ದಿಗೋಷ್ಠಿ
* ಬೆಂಗಳೂರು ದುರಂತದ ಬಗ್ಗೆ ಗಂಭೀರ್ ಹೇಳಿದ್ದೇನು?

NAMMMUR EXPRESS SPORTS NEWS
ಮುಂಬೈ: ಐಪಿಎಲ್ ಸೀಸನ್ ಮುಗಿಯುತ್ತಿದ್ದಂತೆ, ಈಗ ಎಲ್ಲರ ಕಣ್ಣುಗಳು ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸದ ಮೇಲೆ ಇವೆ. ಜೂನ್ 5 ಅಥವಾ 6 ರಂದು ಮಧ್ಯರಾತ್ರಿ ಭಾರತ ತಂಡ ಇಂಗ್ಲೆಂಡ್‌ಗೆ ತೆರಳಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಾಗಿದೆ. ಆದರೆ ಜೂನ್ 20 ರಂದು ಪ್ರಾರಂಭವಾಗುವ ಈ ಸರಣಿಗೆ ಮೊದಲು, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನೂತನ ನಾಯಕ ಶುಭ್​ಮನ್ ಗಿಲ್, ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದರು. ಈ ವೇಳೆ ಗಂಭೀರ್, ಇಂಗ್ಲೆಂಡ್‌ನಲ್ಲಿ 1000 ರನ್ ಗಳಿಸಿದರೂ ಗೆಲುವು ಖಚಿತವಾಗುವುದಿಲ್ಲ ಎಂದು ಹೇಳಿ, ತಂಡಕ್ಕೆ ಪ್ರವಾಸಕ್ಕೂ ಮುಂಚೆಯೇ ಎಚ್ಚರಿಕೆ ನೀಡಿದ್ದಾರೆ.ಗಿಲ್ ತಮ್ಮ ನಾಯಕತ್ವ ಶೈಲಿಯಿಂದ ಹಿಡಿದು ಟೀಂ ಇಂಡಿಯಾದ ಸಿದ್ಧತೆಗಳವರೆಗೆ ಎಲ್ಲದರ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ, ಗಿಲ್ ತಮ್ಮ ನಾಯಕತ್ವ ಶೈಲಿಯಿಂದ ಹಿಡಿದು ಟೀಂ ಇಂಡಿಯಾದ ಸಿದ್ಧತೆಗಳವರೆಗೆ ಎಲ್ಲದರ ಬಗ್ಗೆ ಮಾತನಾಡಿದರು.
ಗೆಲ್ಲಲು 20 ವಿಕೆಟ್‌ಗಳು ಬೇಕು
ಮತ್ತೊಂದೆಡೆ, ಕೋಚ್ ಗೌತಮ್ ಗಂಭೀರ್ ಇಂಗ್ಲೆಂಡ್‌ನಲ್ಲಿ ಗೆಲುವು ಸಾಧಿಸುವುದು ಎಷ್ಟು ಕಷ್ಟವಾಗುತ್ತದೆ ಎಂಬುದರ ಕುರಿತು ತಮ್ಮದೇ ಆದ ಶೈಲಿಯಲ್ಲಿ ಸ್ಪಷ್ಟವಾಗಿ ಮಾತನಾಡಿದರು. ಟೀಂ ಇಂಡಿಯಾದೊಂದಿಗೆ ಆಟಗಾರನಾಗಿ 2-3 ಬಾರಿ ಇಂಗ್ಲೆಂಡ್ ಪ್ರವಾಸ ಮಾಡಿರುವ ಗೌತಮ್ ಗಂಭೀರ್, ‘ಇಂಗ್ಲೆಂಡ್‌ನಲ್ಲಿನ ಪರಿಸ್ಥಿತಿಗಳು ತುಂಬಾ ಕಷ್ಟಕರವಾಗಿರುತ್ತದೆ. ಅಲ್ಲಿ ಕೇವಲ ರನ್ ಗಳಿಸುವುದರಿಂದ ಗೆಲುವು ಖಚಿತವಾಗುವುದಿಲ್ಲ . ಇಂಗ್ಲೆಂಡ್‌ನಲ್ಲಿ, ನೆಲ ಮಾತ್ರವಲ್ಲ, ಆಕಾಶವೂ ದೊಡ್ಡ ಪಾತ್ರವನ್ನು ವಹಿಸುತ್ತದೆ. ಅಲ್ಲಿ 1000 ರನ್ ಗಳಿಸಿದರೂ ಗೆಲುವು ಖಚಿತವಾಗುವುದಿಲ್ಲ. ನೀವು 20 ವಿಕೆಟ್‌ಗಳನ್ನು ಪಡೆದರೆ ಮಾತ್ರ ಗೆಲ್ಲಬಹುದು’ ಎಂದು ಹೇಳಿದರು.

* ಬೆಂಗಳೂರು ಘಟನೆ ಬಗ್ಗೆ ಗಂಭೀರ್ ಹೇಳಿದ್ದೇನು ??
ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ತಂಡದ ವಿಜಯೋತ್ಸವ ಮೆರವಣಿಗೆಗೂ ಮುನ್ನ ಸಂಭವಿಸಿದ ಕಾಲ್ತುಳಿತದ ಘಟನೆ ಬಗ್ಗೆ ಮಾತನಾಡಿದ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ವಿಷಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಗಂಭೀರ್, ‘ಗೆಲುವಿನ ನಂತರ ಇಂತಹ ರೋಡ್ ಶೋಗಳು ನಡೆಯಬಾರದು ಎಂದು ಹೇಳಿದ್ದಾರೆ. ಏಕೆಂದರೆ ಆಚರಣೆಗಳಿಗಿಂತ ಜೀವಗಳು ಮುಖ್ಯ. ನನಗೆ ರೋಡ್ ಶೋಗಳಲ್ಲಿ ನಂಬಿಕೆ ಇಲ್ಲ. ನಾನು ಆಡುತ್ತಿದ್ದಾಗ ಮತ್ತು ನಾವು ಟಿ20 ವಿಶ್ವಕಪ್ ಗೆದ್ದಾಗಲೂ, ನಾನು ಈ ರೋಡ್ ಶೋಗೆ ಬೆಂಬಲ ನೀಡಿರಲಿಲ್ಲ. ಜನರ ಜೀವಗಳು ಹೆಚ್ಚು ಮುಖ್ಯ. ಬೆಂಗಳೂರಿನಲ್ಲಿ ನಡೆದದ್ದು ನೋವಿನ ಸಂಗತಿ ಎಂದರು.
ಕಾಲ್ತುಳಿತಲ್ಲಿ ಪ್ರಕರಣದಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ, ಸಾವನ್ನಪ್ಪಿದವರ ಕುಟುಂಬಗಳಿಗೆ ಆರ್​ಸಿಬಿ ಫ್ರಾಂಚೈಸಿ ಸಹಾಯ ಹಸ್ತ ಚಾಚಿದ್ದು, 10 ಲಕ್ಷ ರೂ ಪರಿಹಾರ ಘೋಷಿಸಿದೆ. ಅಲ್ಲದೆ ಈ ವಿಚಾರವಾಗಿ ಆರ್‌ಸಿಬಿ ವಿರುದ್ಧ ಪ್ರಕರಣವೂ ದಾಖಲಾಗಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಭರ್ಜರಿ ಸ್ವಾಗತ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಭರ್ಜರಿ ಸ್ವಾಗತ
* ರಾಜ್ಯಸರ್ಕಾರದಿಂದ ಗೌರವ,ಚಿನ್ನಸ್ವಾಮಿ ಸ್ಟೇಡಿಯಂ‌ನಲ್ಲಿ ಗೆಲುವಿನ ಸಂಭ್ರಮಾಚರಣೆ

NAMMMUR EXPRESS SPORTS NEWS
ಬೆಂಗಳೂರು: ಸತತ 18 ವರ್ಷಗಳ ಪ್ರಯತ್ನದ ನಂತರ ಐಪಿಎಲ್ ಕಪ್ ಜಯಿಸಿ ತವರಿಗೆ ಮರಳಿದ ಆರ್​ಸಿಬಿ ಕ್ರಿಕೆಟ್ ತಂಡಕ್ಕೆ ಬೆಂಗಳೂರಿನಲ್ಲಿ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆತಿದೆ. ಗುಜರಾತ್​​ನ ಅಹ್ಮದಾಬಾದ್​​ನಿಂದ ಬೆಂಗಳೂರಿನ ಹೆಚ್​ಎಎಲ್​ಗೆ ಬಂದಿಳಿದ ಆರ್​ಸಿಬಿ ಆಟಗಾರರನ್ನು ಸರ್ಕಾರದ ಪರವಾಗಿ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಿಸಿದರು. ಆರ್​ಸಿಬಿ ಆಟಗಾರರನ್ನು ವಿಶೇಷ ಬಸ್ಸುಗಳಲ್ಲಿ ವಿಧಾನಸೌಧಕ್ಕೆ ಕರೆದುಕೊಂಡು ಹೋಗಲಾಯಿತು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಟಗಾರರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ನಂತರ ವಿಧಾನಸೌಧದಿಂದ ಆಟಗಾರರನ್ನು ನೇರವಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 6 ಗಂಟೆಗೆ ಸಂಭ್ರಮಾಚರಣೆ ನಡೆಯಿತು. ಆಟಗಾರರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಧಾನಸೌಧದ ವರರೆಗೆ ಬಸ್ಸಿನಲ್ಲಿ ಬರುವಾಗಲಿ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನ ಅಭಿಮಾನಿಗಳು ನಿಂತು ಸ್ವಾಗತಿಸಿ,ಶುಭಕೋರಿದರು ಈ ಸಮಯದಲ್ಲಿ ಟ್ರೋಫಿ ಹಿಡಿದು ವಾಹನದ ಮುಂದೆಯೇ ಕುಳಿತ ವಿರಾಟ್ ಕೊಹ್ಲಿ ಅಭಿಮಾನಿಗಳತ್ತ ಟ್ರೋಫಿ ತೋರಿಸಿ ಗೆಲುವಿನ ಕ್ರೆಡಿಟ್ ತಿಳಿಸಿದರು.

* ಅನ್ನದಾನ- ಸಿಹಿ ಹಂಚಿಕೆ,ಹೋಮ-ಹವನ ವಿಶೇಷ ಪೂಜೆ
ಆರ್‌ಸಿಬಿ ಗೆಲ್ಲುತ್ತಿದ್ದಂತೆ ರಾಜ್ಯದ ಹಲವೆಡೆ ಹೊಟೆಲ್‌ಗಳು, ಪಬ್‌ಗಳಲ್ಲಿ ಉಚಿತವಾಗಿ ಆಹಾರ ಮತ್ತು ಪಾನೀಯಗಳನ್ನು ನೀಡಲಾಗುತ್ತಿದೆ. ಇನ್ನೂ ಕೆಲವೆಡೆ ಹೋಳಿಗೆ, ಲಾಡು ಕೂಡ ಹಂಚಲಾಯಿತು. ಇದಲ್ಲದೆ ಬೆಂಗಳೂರಿನ ರಾಜಾಜಿನಗರ, ಇಂದಿರಾನಗರ, ಬಸವೇಶ್ವರನಗರ, ನಾಗರಬಾವಿ, ರಾಜರಾಜೇಶ್ವರಿನಗರ, ಸದಾಶಿವನಗರ, ಕೋರಮಂಗಲ, ಎಚ್‌.ಎಸ್‌ಆರ್ ಲೇಔಟ್, ಹೆಬ್ಬಾಳ, ಕೆಆರ್ ಪುರಂ, ಮಹದೇವಪುರ ಸೇರಿದಂತೆ ನಗರದ ವಿವಿಧೆಡೆ ಬಿರಿಯಾನಿ ಕೂಡ ಉಚಿತವಾಗಿ ವಿತರಿಸಲಾಯಿತು.
ಆರ್‌ಸಿಬಿ ಗೆಲ್ಲುತ್ತಿದ್ದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರು ಹರಕೆ ಕೂಡ ತೀರಿಸಿದ್ದಾರೆ. ತೆಂಗಿನಕಾಯಿ ಒಡೆದು ವಿಶೇಷ ಹೋಮ-ಹವನಗಳನ್ನು ಕೂಡ ಮಾಡಲಾಗಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಆರ್. ಸಿ. ಬಿ ವಿಜಯೋತ್ಸವ…! 18 ವರ್ಷದ ಕನಸು ಈ ಸಲ ಕಪ್ ನಮ್ದಾಯ್ತು

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* 18 ವರ್ಷದ ಕನಸು ಈ ಸಲ ಕಪ್ ನಮ್ದಾಯ್ತು
* ಆರ್‌ಸಿಬಿ ಸಂಘಟಿತ ಹೋರಾಟ, ಪಂಜಾಬ್ ವಿರುದ್ಧ ರೋಚಕ ಜಯ
* ಅಭಿಮಾನಿಗಳು ಫುಲ್ ಖುಷ್,ನೆಕ್ಟ್ಸ್‌ ಲೆವೆಲ್ ಸೆಲೆಬ್ರೇಷನ್

NAMMMUR EXPRESS SPORTS NEWS
ಅಹಮದಾಬಾದ್: ರಜತ್ ಪಾಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ 6 ರನ್‌ಗಳಿಂದ ರೋಚಕ ಗೆಲುವು ಸಾಧಿಸಿ, ತನ್ನ 18 ವರ್ಷಗಳ ಐಪಿಎಲ್ ಟ್ರೋಫಿಯ ಕನಸನ್ನು ನನಸಾಗಿಸಿದೆ. ತಂಡವು ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ, ತನ್ನ ಮೊದಲ ಐಪಿಎಲ್ ಟೈಟಲ್ ಗೆದ್ದುಕೊಂಡಿದೆ.ಈ ಮೂಲಕ ತನ್ನ ಜಯವನ್ನು ತಂಡದ ಶ್ರೇಷ್ಠ ಆಟಗಾರ,ಸತತ 18 ವರ್ಷಗಳು ತಂಡವನ್ನು ಮುನ್ನಡೆಸಿದ ಹಾಗೂ ಒಂದೇ ತಂಡದಲ್ಲಿದ್ದು ಟ್ರೋಫಿಗಾಗಿ ಕಾಯುತ್ತಿದ್ದ ವಿರಾಟ್ ಕೊಹ್ಲಿ ಹಾಗೂ ತಂಡದ ಗೆಲುವಿಗಾಗಿ ಹಾರೈಸಿ ಪ್ರತಿಬಾರಿಯು ಈ ಸಲ ಕಪ್ ನಮ್ದೆ ಎಂದು ತಂಡವನ್ನು ಹುರಿದುಂಬಿಸುತ್ತಿದ್ದ,ತಂಡ ಕಪ್ ಗೆಲ್ಲದಿದ್ದಾಗಲು ತಂಡದ ಜೊತೆ ನಿಂತು ಬೆನ್ನು ತಟ್ಟಿದ ಅಭಿಮಾನಿಗಳಿಗೆ,ತಂಡದ ಎಲ್ಲಾ ಸದಸ್ಯರಿಗೂ ಅರ್ಪಿಸಿದೆ.
ಅದ್ಭುತ ಪ್ರದರ್ಶನ ನೀಡಿ, ತನ್ನ ಮೊದಲ ಐಪಿಎಲ್ ಟೈಟಲ್ ಗೆದ್ದುಕೊಂಡಿದೆ.ಅದ್ಭುತ ಪ್ರದರ್ಶನ ನೀಡಿ, ತನ್ನ ಮೊದಲ ಐಪಿಎಲ್ ಟೈಟಲ್ ಗೆದ್ದುಕೊಂಡಿದೆ.ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್‌ ಕಿಂಗ್ಸ್, ಆರ್‌ಸಿಬಿಯನ್ನು 20 ಓವರ್‌ಗಳಲ್ಲಿ 190/9 ರನ್‌ಗಳಿಗೆ ಕಟ್ಟಿಹಾಕಿತು. ಪಿಬಿಕೆಎಸ್‌ನ ಅರ್ಶದೀಪ್ ಸಿಂಗ್ (3/40) ಮತ್ತು ಕೈಲ್ ಜೇಮಿಸನ್ (3/48) ತಮ್ಮ ಅದ್ಭುತ ಬೌಲಿಂಗ್‌ನಿಂದ ಆರ್‌ಸಿಬಿಯ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಆರ್‌ಸಿಬಿಯ ಪರ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 43 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರ‌ರ್ ಆಗಿ ಹೊರಹೊಮ್ಮಿದರು. ಆದರೆ, ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡ ಆರ್‌ಸಿಬಿ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಯಿತು.
ಚೇಸಿಂಗ್‌ನಲ್ಲಿ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 184/7 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿಯ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ (2/38) ಮತ್ತು ಕೃನಾಲ್ ಪಾಂಡ್ಯ (2/17) ತಮ್ಮ ಮಾಂತ್ರಿಕ ಬೌಲಿಂಗ್‌ನಿಂದ ಪಿಬಿಕೆಎಸ್ ಬ್ಯಾಟಿಂಗ್ ಲೈನ್ ಅಪ್ ನ್ನು ನಿಯಂತ್ರಿಸಿದರು. ಈ ರೋಚಕ ಗೆಲುವಿನೊಂದಿಗೆ, ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದೆ.

ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಆರ್​​ಸಿಬಿ ಬಾಯ್ಸ್​​
ಐಪಿಎಲ್- 2025ರ ಫೈನಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​​ ವಿರುದ್ಧ ಗೆದ್ದು ಬೀಗಿದ ರಾಯಲ್​ ಚಾಲೇಂಜರ್ಸ್​​ ಬೆಂಗಳೂರು ತಂಡ ಇಂದು ತನ್ನ ತವರು ಬೆಂಗಳೂರಿಗೆ ಆಗಮಿಸುತ್ತಿದೆ. ಇಂದು ಮಧ್ಯಾಹ್ನ ಆರ್​​ಸಿಬಿ ಬಾಯ್ಸ್​​ ರಾಜ್ಯ ರಾಜಧಾನಿಗೆ ಎಂಟ್ರಿಯಾಗುತ್ತಿದ್ದು, ವಿಜಯ ಯಾತ್ರೆ ನಡೆಸಲಿದ್ದಾರೆ. ಈಗಾಗಲೇ ವಿಜಯಯಾತ್ರೆಗೆ ಮತ್ತು ಆರ್​​ಸಿಬಿ ಬಾಯ್ಸ್​​ ಸ್ವಾಗತಕ್ಕೆ ಎಲ್ಲಾ ತಯಾರಿ ಮಾಡಲಾಗಿದೆ. ಇನ್ನು ತಂಡದ ಗೆಲುವಿನ ಕ್ಷಣಕ್ಕೆ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್,ಕ್ರಿಸ್ ಗೇಲ್ ಸಾಕ್ಷಿಯಾದರು. ವಿರಾಟ್‌ರನ್ನು ತಬ್ಬಿ ತಮ್ಮದೇ ಶೈಲಿಯ ಸೆಲೆಬ್ರೇಷನ್ ಆಚರಿಸಿದರು.

* ಆರ್‌ಸಿಬಿ ಗೆಲುವಿಗೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು
ಈ ಸಲ ಕಪ್​ ನಮ್ದೇ ಅಲ್ಲ, ಈ ಸಲ ಕಪ್​ ನಮ್ದು. 2008 ರಿಂದ 2025 ಅಂದರೆ 18 ವರ್ಷ. ಸುದೀರ್ಘ 18 ವರ್ಷಗಳ ಪ್ರಯಾಣದ ಅಮರ ಪ್ರೇಮದ ಯಾತ್ರೆ. ಈ ಪ್ರಯಾಣದಲ್ಲಿ ಅನುಭವಿಸಿದ ಅವಮಾನ, ಟೀಕೆ, ಹಿಂಸೆ ಅದೆಷ್ಟೋ. ಪ್ರತಿಷ್ಠೆ, ಆತ್ಮಾಭಿಮಾನಕ್ಕೆ ಧಕ್ಕೆಯಾದರೂ ಆರ್​​ಸಿಬಿ ​​ಫ್ಯಾನ್ಸ್ ಡೋಂಟ್​ಕೇರ್​​ ಅಂದಿದ್ರು​. ನಮ್ಮ ಆರ್​​ಸಿಬಿ ನಮ್ಮ ಹೆಮ್ಮೆ ಎಂದಿದ್ದರು. ಇಂತ ಅಲ್ಟಿಮೇಟ್​ ಕನಸು ನನಸಾಗಿದೆ. ಕೊನೆಗೂ ಆರ್​ಸಿಬಿ ಐಪಿಎಲ್​ ಟ್ರೋಫಿಗೆ ಮುತ್ತಿಟ್ಟಿದೆ. ಅಭಿಮಾನಿಗಳ ಸಂಭ್ರಮ ಅಂತೂ ನೆಕ್ಸ್ಟ್​ ಲೆವೆಲ್​ನಲ್ಲಿತ್ತು.
ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫೈನಲ್​ ಪಂದ್ಯ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಸಿಲಿಕಾನ್ ಸಿಟಿ ಬೆಂಗಳೂರು, ಮೈಸೂರು, ಶಿವಮೊಗ್ಗ,ಚಿಕ್ಕಮಗಳೂರು ಬೆಳಗಾವಿ, ರಾಯಚೂರು, ಕಲಬುರಗಿ, ಧಾರವಾಡ, ದಾವಣಗೆರೆ, ಮಂಡ್ಯ, ರಾಮನಗರ, ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಹಲವೆಡೆ ಲೈವ್‌ ಸ್ಕ್ರೀನ್‌ನಲ್ಲಿ ಪಂದ್ಯ ವೀಕ್ಷಿಸಿದ ಫ್ಯಾನ್ಸ್‌ ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ಸೆಲೆಬ್ರೇಟ್ ಮಾಡಿದರು.
ಆರ್​ಸಿಬಿ ಸ್ಟಾರ್​ ವಿರಾಟ್ ಕೊಹ್ಲಿ ಪಂದ್ಯ ಗೆಲ್ಲುವ ಹಂತದಲ್ಲಿದ್ದಾಗ ಮೈದಾನದಲ್ಲಿ ಅಳುವುದನ್ನು ಕಂಡು ಹಲವು ಅಭಿಮಾನಿಗಳು ಕಣ್ಣೀರಿಟ್ಟರು. ಏಕೆಂದರೆ ಆರ್​ಸಿಬಿ ತಂಡದಲ್ಲಿ ಕಳೆದ 18 ವರ್ಷಗಳಿಂದ ಕೊಹ್ಲಿ ಶ್ರಮವಹಿಸಿದ್ದಾರೆ. ಹೀಗಾಗಿ ಟ್ರೋಫಿ ಕೈಗೆ ಬರುತ್ತಿದೆಯಲ್ಲ ಎಂದು ಕೊಹ್ಲಿ ಭಾವನೆಗೆ ಸಿಕ್ಕಿ ಕಣ್ಣೀರು ಸುರಿದರು. ಈ ಎಲ್ಲಾ ಭಾವನೆಗಳೂ ಒಂದಾಗಿ ಅಭಿಮಾನದ ಹಬ್ಬದ ಆಚರಣೆಗೆ ರಾತ್ರಿ ಇಡೀ ಕರುನಾಡು ಸಾಕ್ಷಿಯಾಯಿತು.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಇಂದು ಆರ್‌ಸಿಬಿ ಮತ್ತು ಪಂಜಾಬ್ ನಡುವೆ ಐಪಿಎಲ್ -2025 ರ ಫೈನಲ್ ಪಂದ್ಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ -2025
* ಇಂದು ಆರ್‌ಸಿಬಿ ಮತ್ತು ಪಂಜಾಬ್ ನಡುವೆ ಐಪಿಎಲ್ -2025 ರ ಫೈನಲ್ ಪಂದ್ಯ
* ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್ ಇಲವೆನ್,ಯಾರ ಮೇಲೆ ಹೆಚ್ಚು ನಿರೀಕ್ಷೆ

NAMMMUR EXPRESS SPORTS NEWS
ಐಪಿಎಲ್ 2025: ಐಪಿಎಲ್ ಸೀಸನ್ -18 ರ ಫೈನಲ್‌ಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಪಂದ್ಯ ನಡೆಯಲಿದೆ. ಆರ್‌ಸಿಬಿ ತಂಡ ಆರಂಭದಿಂದಲೂ ಉತ್ತಮ ಫಾರ್ಮ್‌ನಲ್ಲಿದ್ದು, 19 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್ ಎರಡೂ ವಿಭಾಗವೂ ಅತ್ಯಂತ ಬಲಿಷ್ಠವಾಗಿ ಕಾಣುತ್ತಿದೆ. ಆದರೂ ಫೈನಲ್ ಪಂದ್ಯಕ್ಕೆ ಗೇಮ್ ಫಿನಿಶರ್ ಟಿಮ್ ಡೇವಿಡ್ ಲಭ್ಯರಿರುತ್ತಾರೋ, ಇಲ್ಲವೋ ಎಂಬುದೇ ಅಭಿಮಾನಿಗಳ ಗೊಂದಲವನ್ನು ಹೆಚ್ಚಿಸಿದೆ.

* ಟಿಮ್ ಡೇವಿಡ್ ಮೇಲೆ ಎಲ್ಲರ ಕಣ್ಣು
ತಂಡದ ಸ್ಫೋಟಕ ಆಲ್‌ರೌಂಡರ್ ಟಿಮ್ ಡೇವಿಡ್ ಅವರ ಇಂಜ್ಯುರಿ ಆರ್‌ಸಿಬಿಗೆ ಆತಂಕದ ವಿಷಯವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಲೀಗ್ ಪಂದ್ಯದಲ್ಲಿ ಗಾಯಗೊಂಡಿದ್ದ ಡೇವಿಡ್, ಅಂದಿನಿಂದ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡಿಲ್ಲ. ಆದಾಗ್ಯೂ ಫೈನಲ್ ಪಂದ್ಯಕ್ಕೆ ಅವರು ಲಭ್ಯವಾಗುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಡೇವಿಡ್ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ ನಾಯಕ ರಜತ್ ಪಾಟಿದರ್, ಡೇವಿಡ್​ ವೈದ್ಯಕೀಯ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿದ್ದಾರೆ. ಪಂದ್ಯ ಆರಂಕ್ಕೂ ಮುನ್ನ ಅಧಿಕಾರಿಗಳು ಡೇವಿಡ್ ಲಭ್ಯತೆಯ ಬಗ್ಗೆ ನಮಗೆ ಮಾಹಿತಿ ನೀಡಲಿದ್ದಾರೆ. ಅಲ್ಲಿಯವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಒಂದು ವೇಳೆ ಟಿಮ್ ಡೇವಿಡ್ ಫಿಟ್ ಆಗದಿದ್ದರೆ ಲಿಯಾಮ್ ಲಿವಿಂಗ್‌ಸ್ಟೋನ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮುಂದುವರೆಯಲಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.

* ಯಾವೆಲ್ಲ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ, ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್ ಮತ್ತು ಕೆಲವು ಆಯ್ದ ಆಟಗಾರರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ವಿರಾಟ್ ಈ ಸೀಸನ್‌ನಲ್ಲಿ ಹೆಚ್ಚು ರನ್ ಗಳಿಸಿದವರಾಗಿದ್ದರೆ, ಜೋಶ್ ಹೇಜಲ್‌ವುಡ್ ಇದುವರೆಗೆ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭುವನೇಶ್ವರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು ಪಂಜಾಬ್ ವಿರುದ್ಧ ಇದುವರೆಗೆ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಈ ಮೂವರ ಪ್ರದರ್ಶನ ತಂಡಕ್ಕೆ ನಿರ್ಣಾಯಕವಾಗಲಿದೆ.

* ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್ ಇವಲೆವೆನ್

ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ , ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್/ ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ.

ಇಂಪ್ಯಾಕ್ಟ್ ಪ್ಲೇಯರ್; ಮಯಾಂಕ್

ಅಗರ್ವಾಲ್ಪಂಜಾಬ್ ಕಿಂಗ್ಸ್‌ ಸಂಭಾವ್ಯ ಪ್ಲೇಯಿಂಗ್ XI:

ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಓಮರ್ಜಾಯ್, ಕೈಲ್ ಜೇಮಿಸನ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

ಇಂಪ್ಯಾಕ್ಟ್ ಪ್ಲೇಯರ್; ಪ್ರಭ್​ಸಿಮ್ರಾನ್ ಸಿಂಗ್

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಈ ಸಲ ಕಪ್ ನಮ್ದೇ…!..ಆರ್. ಸಿ. ಬಿ ಫ್ಯಾನ್ ಖುಷ್..!

ಈ ಸಲ ಕಪ್ ನಮ್ದೇ…!..ಆರ್. ಸಿ. ಬಿ ಫ್ಯಾನ್ ಖುಷ್..!
– ರಾಜ್ಯದ ಎಲ್ಲೆಡೆ ಪೂಜೆ, ಪ್ರಾರ್ಥನೆ: ಅಭಿಮಾನಿಗಳ ಕಾತುರ
– 18 ವರ್ಷದ ಬಳಿಕ ನಮ್ ತಂಡ ಗೆಲ್ಲುತ್ತೆ..!

NAMMUR EXPRESS NEWS
ಈ ಸಲ ಕಪ್ ನಮ್ದೇ…!..ಆರ್. ಸಿ. ಬಿ ಫ್ಯಾನ್ ಖುಷ್ ಆಗಿದ್ದು, ರಾಜ್ಯದ ಎಲ್ಲೆಡೆ ಪೂಜೆ, ಪ್ರಾರ್ಥನೆ ಶುರುವಾಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ದಿನಕ್ಕೆ ಕ್ಷಣಗಣನೆ ಆರಂಭ ಆಗಿದೆ.
18 ವರ್ಷದ ಬಳಿಕ ನಮ್ ತಂಡ ಗೆಲ್ಲುತ್ತೆ ಎಂಬ ಹುಮ್ಮಸ್ಸಲ್ಲಿ ಅಭಿಮಾನಿಗಳಿದ್ದಾರೆ.
ಐಪಿಎಲ್ ಪಂದ್ಯ ಮಂಗಳವಾರ ಮುಕ್ತಾಯಗೊಳ್ಳುತ್ತದೆ. ಹದಿನೆಂಟು ವರ್ಷಗಳ ಬಳಿಕ ಫೈನಲ್ ಗೆ ಬಂದ ರಾಯಲ್ ಚಾಲೆಂಜರ್ಸ್‌ ತಂಡ ಇದೀಗ ಕೋಟಿ ಕೋಟಿ ಕನ್ನಡಿಗರ ಆಸೆ ಈಡೇರಿಸಲು ಸಿದ್ದವಾಗಿದೆ.
ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಹೈವೋಲ್ವೇಜ್ ಪಂದ್ಯ ನಡೆಯಲಿದೆ. ಈಗಾಗಲೇ ಭಾರೀ ಟ್ರೆಂಡ್ ಸೆಟ್ ಆಗಿದೆ.

ಗೆದ್ದ ತಂಡಕ್ಕೆ ಸಿಗುವ ಹಣ ಎಷ್ಟು?

ಕ್ರಿಕೆಟ್ ಕಿಂಗ್ ಕೊಹ್ಲಿಯ ಜೆರ್ಸಿ ಸಂಖ್ಯೆ ಹದಿನೆಂಟಾಗಿದ್ದು ಈ ಬಾರಿ ಹದಿನೆಂಟು ವರ್ಷದ ನಂತರವೇ ಆರ್ ಸಿಬಿ ಫೈನಲ್ಸ್ ನಲ್ಲಿ ಅಬ್ಬರಿಸುತ್ತಿದೆ. ಈ ಬಾರಿಯ ಐಪಿಎಲ್ ನಲ್ಲಿ ಗೆದ್ದ ತಂಡಕ್ಕೆ ಬಹುಮಾನವಾಗಿ ಇಪ್ಪತ್ತು ಕೋಟಿ ರೂ. ತನ್ನದಾಗಲಿದೆ.

ಎಲ್ಲೆಡೆ ಪ್ರಾರ್ಥನೆ… ಶುಭ ಹಾರೈಕೆ…! 

ಕರುನಾಡು ಮಾತ್ರವಲ್ಲದೆ ದೇಶದಲ್ಲಿ ಆರ್.ಸಿ.ಬಿ ಹವಾ ಶುರುವಾಗಿದೆ. ಎಲ್ಲೆಡೆ ಪ್ರಾರ್ಥನೆ ಮೊಳಗುತ್ತಿದೆ. ರಾಜಕಾರಣಿಗಳು ಸೇರಿ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.