ನಟ ದರ್ಶನ್ ಫಾರ್ಮ್ ಹೌಸ್ ಮ್ಯಾನೇಜರ್ ಆತ್ಮಹತ್ಯೆ !
– ಸಾಯುವ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಪತ್ತೆ
– ಶೆಡ್‌ನಲ್ಲಿ ಇನ್ನೂ ಹಲವರ ರಕ್ತದ ಕಲೆ ಪತ್ತೆ!
– ದಿನ ದಿನಕ್ಕೂ ರೋಚಕತೆ ಪಡೆಯುತ್ತಿದೆ ಕೇಸ್!
NAMMUR EXPRESS NEWS
ಬೆಂಗಳೂರು : ಕಾಣೆಯಾಗಿದ್ದ ನಟ ದರ್ಶನ್ ಫಾರ್ಮ್ ಹೌಸ್ ಮ್ಯಾನೇಜರ್ ಶ್ರೀಧರ್ ಎಂಬಾತನ ಶವ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಆದ್ರೆ ಈತ ಏಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ಬಗ್ಗೆ ಈಗ ಉಹಾಪೋಹ ಶುರುವಾಗಿದೆ.
ನಟ ದರ್ಶನ್ ಫಾರ್ಮ್ ಹೌಸ್ ಮ್ಯಾನೇಜರ್ ಶ್ರೀಧರ್ (35) ವಿಷ ಸೇವಿಸಿ ಏಪ್ರಿಲ್ 17 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಕೀಟನಾಶಕ ಸೇವನೆ ಮಾಡಿ ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಆತ ಸಾಯುವ ಮುನ್ನ ಬರೆದಿಟ್ಟಿದ್ದು, ಇದೀಗ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇಂದು ಸ್ಥಳ ಮಹಜರಿಗಾಗಿ ದರ್ಶನ್ ಸೇರಿದಂತೆ ಇತರೆ ಆರೋಪಿಗಳನ್ನು ಮೈಸೂರಿಗೆ ಕರೆದುಕೊಂಡು ಹೋಗಲಾಗುತ್ತಿದೆ.
ಶೆಡ್‌ನಲ್ಲಿ ಇನ್ನೂ ಹಲವರ ರಕ್ತದ ಕಲೆ ಪತ್ತೆ!: ತನಿಖೆ
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೆಸ್ಟ್ ಆಗಿರುವ ನಟ ದರ್ಶನ್ ವಿಚಾರಣೆಯ ಜೊತೆಜೊತೆಗೇ, ಹಲ್ಲೆ ನಡೆಸಲಾಗಿರುವ ಪಟ್ಟಣಗೆರೆಯ ಶೆಡ್‌ನ ಬಗ್ಗೆ ಇನ್ನಷ್ಟು ಸತ್ಯಗಳು ಅನಾವರಣವಾಗುತ್ತಿವೆ. ಶೆಡ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧವಿಲ್ಲದ ಇನ್ನಷ್ಟು ಮಂದಿಯ ರಕ್ತದ ಕಲೆಗಳು ಪತ್ತೆಯಾಗಿದ್ದು, ಇನ್ನಷ್ಟು ಹಲ್ಲೆ- ಕೊಲೆ ಪ್ರಕರಣಗಳು ಇಲ್ಲಿ ನಡೆದಿರಬಹುದು ಎಂಬ ತರ್ಕಕ್ಕೆ ಪುಷ್ಟಿ ನೀಡಿವೆ. ದರ್ಶನ್ ಮತ್ತು ಗ್ಯಾಂಗ್‌ನ ಕರಾಳ ಹಿನ್ನೆಲೆಗೆ ಈ ಶೆಡ್‌ನಲ್ಲಿ ಸಿಗುತ್ತಿರುವ ಸಾಕ್ಷ್ಯಗಳು ಮತ್ತಷ್ಟು ಪೂರಕವಾಗಲಿವೆ. ಪಟ್ಟಣಗೆರೆ ಶೆಡ್‌ನಲ್ಲಿ ವಿಧಿವಿಜ್ಞಾನ ಪರಿಶೀಲನೆಗೆ ಎಫ್‌ಎಸ್‌ಎಲ್ ಟೀಮ್ ಹೋದಾಗ ಬೇರೆಯವರ ರಕ್ತದ ಕಲೆಗಳು ಸಿಕ್ಕಿದ್ದು, ಇವು ಯಾರವು ಎಂದು ಪತ್ತೆ ಹಚ್ಚುವ ತಲೆನೋವು ಕೂಡ ಎಸ್‌ಐಟಿ ಹೆಗಲೇರಿದೆ.
ಈ ಹಿಂದೆ ಇದೇ ಶೆಡ್‌ನಲ್ಲಿ ದರ್ಶನ್, ತನ್ನ ಇತರ ವಿರೋಧಿಗಳನ್ನೂ ಕರೆಸಿ ಹಲ್ಲೆ ನಡೆಸುತ್ತಿದ್ದುದರ ಬಗ್ಗೆ ಪುಕಾರುಗಳಿವೆ. ಬಂಧಿತ ಆರೋಪಿಗಳಲ್ಲೇ ಹಲವರು ಈ ವಿಚಾರ ಬಾಯ್ದಿಟ್ಟಿದ್ದಾರೆ. ಹೀಗಾಗಿ, ವಿನಯ್ ಆಂಡ್ ಗ್ಯಾಂಗ್‌ನಿಂದ ಈ ಶೆಡ್‌ನಲ್ಲಿ ರೇಣುಕಾಸ್ವಾಮಿ ಅಲ್ಲದೆ ಬೇರೆಯವರ ಮೇಲೆಯೂ ಹಲ್ಲೆ ನಡೆದಿತ್ತು; ವ್ಯವಹಾರದ ವಿಚಾರವಾಗಿ ಹಲವರ ಮೇಲೆ ಹಲ್ಲೆ ಮಾಡಿದ್ದರ ಬಗ್ಗೆಯೂ ಇದೀಗ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈಗ ರೇಣುಕಾಸ್ವಾಮಿಯ ರಕ್ತದ ಕಲೆಗಳಲ್ಲದೆ, ಮೂರರಿಂದ ನಾಲ್ಕು ತಿಂಗಳ ಹಿಂದಿನ ಬ್ಲಡ್ ಗುರುತುಗಳು ಕೂಡ ಪತ್ತೆಯಾಗಿವೆ. ಆದರೆ ಹಲ್ಲೆಗೊಳಗಾದ ಬಗ್ಗೆ ಯಾರೂ ಸಹ ದೂರು ನೀಡಲು ಮುಂದೆ ಬಂದಿಲ್ಲ. ಹಲ್ಲೆಗೊಳಗಾಗಿದ್ದರೂ ದರ್ಶನ್‌ಗೆ ಹೆದರಿಕೊಂಡು ಸುಮ್ಮನಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆಯೂ ಆರೋಪಿಗಳನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಕನ್ನಡ ಚಿತ್ರ ನಿರ್ಮಾಪಕರು ಕೂಡ ಇಲ್ಲಿ ಗೂಸಾ ತಿಂದಿದ್ದಾರೆ ಎಂಬುದು ಬಯಲಾಗಿದೆ. ನಟ ದರ್ಶನ್ ಎಷ್ಟೋ ಮಂದಿಗೆ ಇಲ್ಲೇ ಹಲ್ಲೆ ಮಾಡಿ, 2ರಿಂದ 3 ದಿನಗಳ ಕಾಲ ಇಲ್ಲೇ ಇರಿಸಿಕೊಳ್ಳುತ್ತಿದ್ದ. ಕಳಿಸಿಕೊಡುವಾಗ ಬ್ಯಾಂಡೇಜ್ ಹಾಕಿಸಿ ಕೈಗೆ ಹಣ ಕೊಟ್ಟು ಕಳುಹಿಸುತ್ತಿದ್ದ ಎಂದು ಕೆಲವರು ಇದೀಗ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ದರ್ಶನ್ ಕಾರು ಇಲ್ಲಿಗೆ ಆಗಾಗ ಬಂದು ಹೋಗುತ್ತಿದ್ದುದನ್ನು ಕೆಲವು ಸ್ಥಳೀಯರು ಗಮನಿಸಿದ್ದಾರೆ.
ಪ್ರಮುಖ ಸಾಕ್ಷಿಗಳೇ ನಾಶ, ಸಿಸಿಟಿವಿ ರೆಕಾರ್ಡ್ ಡಿಲೀಟ್
ರೇಣುಕಾ ಸ್ವಾಮಿ ಮರ್ಡರ್ ನಂತರ ಆಸುಪಾಸಿನ ಸ್ಥಳಗಳಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ಎಲ್ಲ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.
ಕೊಲೆಯ ಬಳಿಕ, ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನ ಹಾಗೂ ಹಲ್ಲೆ ನಡೆದ ಪಟ್ಟಣಗೆರೆಯ ಶೆಡ್‌ನ ದೃಶ್ಯಗಳನ್ನು ಡಿಲೀಟ್ ಮಾಡಿಸಲಾಗಿದೆ. ಆರೋಪಿಗಳು ಕಳೆದ ಒಂದು ವರ್ಷದ ಸಿಸಿ ಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳೇ ಕೊಲೆಯ ಪ್ರಮುಖ ಸಾಕ್ಷಿ ಆಗಲಿವೆ ಎಂಬ ಹಿನ್ನೆಲೆಯಲ್ಲಿ, ಇವುಗಳನ್ನು ಪೂರ್ತಿಯಾಗಿ ಡಿಲೀಟ್ ಮಾಡಲು ಆರೋಪಿಗಳು ಅಪರಾಧ ಪರಿಣಿತರ ಸಲಹೆ ಪಡೆದೇ ಈ ಕೃತ್ಯ ಎಸಗಿದ್ದಾರೆ ಎಂದು ತರ್ಕಿಸಲಾಗಿದೆ. ರೇಣುಕಾಸ್ವಾಮಿ ಕೊಲೆಯ ಮೊದಲಿನ ಹಾಗೂ ನಂತರದ ಎಲ್ಲಾ ಸಿಸಿ ಕ್ಯಾಮರಾ ದೃಶ್ಯಗಳನ್ನು ಡಿಲೀಟ್ ಮಾಡಿಸಿದ್ದಾರೆ.