ರಾಜ್ಯಕ್ಕೆ ಶುಭ ದಿನ: ಸಿಗಂದೂರು ಸೇತುವೆ ಉದ್ಘಾಟನೆ!
– ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ ಹಾಜರ್
– ಸಾವಿರಾರು ಸಮ್ಮುಖದಲ್ಲಿ ಸಾರ್ವಜನಿಕ ಕಾರ್ಯಕ್ರಮ
– ಸೇತುವೆ ಮೇಲೆ ಜನವೋ ಜನ… ಸೆಲ್ಫಿ ಅಬ್ಬರ!
NAMMUR EXPRESS NEWS
ಶಿವಮೊಗ್ಗ: ಶರಾವತಿ ನದಿಯ ಹಿನ್ನೀರಿಗೆ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗುವಂತಹ ಐತಿಹಾಸಿಕ ಸಂಪರ್ಕ ಸೇತುವೆಯೊಂದು ಇಂದು ರಾಷ್ಟ್ರಕ್ಕೆ ಸಮರ್ಪಣೆಯಾಗಿದೆ.
ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯಿಂದ ನಿರ್ಮಿತವಾದ, 2.25 ಕಿ.ಮೀ. ಉದ್ದದ, ಸುಮಾರು ₹423.00 ಕೋಟಿ ಅನುದಾನದಲ್ಲಿ ಸಿದ್ಧಗೊಂಡಿರುವ ದೇಶದ ಎರಡನೇ ಅತಿ ದೊಡ್ಡ ಕೇಬಲ್ ಆಧಾರಿತ “ಅಂಬಾರಗೋಡ್ಲು – ಕಳಸವಳ್ಳಿ – ಸಿಗಂಧೂರು ಕೊಲ್ಲೂರು” (ಸ್ಥಳೀಯವಾಗಿ ಹೊಳೆಬಾಗಿಲು ಸೇತುವೆ) ಸಂಪರ್ಕ ಸೇತುವೆಯನ್ನು ಕೇಂದ್ರ ಭೂ ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿ ಅವರು, ಕೇಂದ್ರ ಆಹಾರ ನಾಗರಿಕ ಸರಬರಾಜು ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸೇರಿ ರಾಷ್ಟ್ರಕ್ಕೆ ಸಮರ್ಪಿಸಿದರು. ಸಂಸದ ರಾಘವೇಂದ್ರ ಅವರು ಜೊತೆಗಿದ್ದು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕನಸಿನ ಯೋಜನೆ, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ನವರ ಸಂಕಲ್ಪದ ಫಲ ಮತ್ತು ಎಲ್ಲರ ನಿಸ್ವಾರ್ಥ ಪ್ರೀತಿ, ಆಶೀರ್ವಾದದ ಬಲದಿಂದ ಈ ಐತಿಹಾಸಿಕ ಘಟನೆಗೆ ನಮ್ಮ ಮಲೆನಾಡು ಸಾಕ್ಷಿಯಾಗಿದೆ.
ಸಿಗಂದೂರು ಸೇತುವೆ ಉದ್ಘಾಟನೆ ಬಳಿಕ ಸಾಗರದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆದಿದ್ದು, ಸಾವಿರಾರು ಮಂದಿ ಭಾಗಿಯಾದರು. ಸಾಗರದಲ್ಲಿ ಎಲ್ಲೆಲ್ಲೂ ಈ ಸಂಭ್ರಮದ ಬ್ಯಾನರ್, ಫ್ಲೆಕ್ಸ್ ಕಂಡು ಬಂದವು.
ಕಾರ್ಯಕ್ರಮದಲ್ಲಿ ಯಾವುದೇ ಶಿಸ್ಟಾಚಾರ ಉಲ್ಲಂಘನೆ ಆಗಿಲ್ಲ.. ಸಿಎಂ ಸಿದ್ದರಾಮಯ್ಯ ಅವರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ ಎಂದು ಬಿ. ವೈ ರಾಘವೇಂದ್ರ ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಸೇತುವೆ ಪ್ರವಾಸದ ತಾಣವಾದಂತಿದೆ. ಇದೀಗ ಸೋಮವಾರ ಸಾವಿರಾರು ಜನ ಸೇತುವೆ ನೋಡಲು ಆಗಮಿಸಿದ್ದರು.
