ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಕಿಚ್ಚು!
– ಪಾದಯಾತ್ರೆ, ಇಂದು ಅಹೋರಾತ್ರಿ ಧರಣಿ
– ರೈತರ ಪ್ರತಿಭಟನೆ: ತಾಲೂಕು ಕಚೇರಿ ಎದುರು ಹೋರಾಟ
NAMMUR EXPRESS NEWS
ತೀರ್ಥಹಳ್ಳಿ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ತುಂಗಾ ನದಿ ವರ್ಷವೆಲ್ಲಾ ಹರಿಯುವುದನ್ನು ಬಲತ್ಕಾರವಾಗಿ ತಡೆಯಲಾಗುತ್ತಿದೆ. ಇದರಿಂದ ನದಿ, ಪರಿಸರ, ನದಿ ಆಶ್ರಿತ ರೈತರು ಹಾಗೂ ತೀರ್ಥಹಳ್ಳಿ ಪಟ್ಟಣದ ಮಹಾಜನತೆ ಮುಂದಿನ ದಿನದಲ್ಲಿ ವೇದನೆ ಅನುಭವಿಸುವಂತಾಗುತ್ತದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ 38 ಗ್ರಾಮ ಪಂಚಾಯಿತಿಗಳಿದ್ದು, 36 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರನ್ನು ಭೀಮನಕಟ್ಟೆಯ ಒಂದೇ ಸ್ಥಳದಿಂದ ನೀರೆತ್ತುವ ಆಲೋಚನೆ ನಡೆದಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಚಳುವಳಿಯ ರೂಪ ಪಡೆದಿದೆ. ಇದರ ಮುಂದುವರಿದ ಭಾಗವಾಗಿ ದಿನಾಂಕ 16-10-2023 ರ ಸೋಮವಾರದಂದು ತೀರ್ಥಹಳ್ಳಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಲಿದೆ. ತಾಲ್ಲೂಕು ಕಛೇರಿ ಆವರಣದಲ್ಲಿ ಬೆಳಿಗ್ಗೆ 10-00 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಭೀಮನ ಸಂಗಮದಿಂದ ಹೋರಾಟ ಶುರುವಾಗಿದೆ. ರೈತರು, ವಿವಿಧ ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ದಾರೆ. ನದಿಯ ಎರಡೂ ದಡದಲ್ಲಿ ನೂರಾರು ವರ್ಷಗಳಿಂದ ಗ್ರಾಮಾಂತರ ಹಾಗೂ ಪಟ್ಟಣದ ರೈತರು ತೋಟಗಳನ್ನು ಮತ್ತು ವಿವಿಧ ಬೇಸಾಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಬೇಸಿಗೆಯಲ್ಲಿ ಜಮೀನು ಒಣ ನಾಶವಾಗುವ ಆತಂಕ ಎದುರಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯ ಮಾರ್ಚ್ನಿಂದ ಮೇ ವರೆಗೆ ತುಂಗಾ ನದಿ ಹರಿವು ಸಂಪೂರ್ಣ ಬತ್ತಿ ಹೋಗುತ್ತಿದ್ದು, ಇರುವ ಅಲ್ಪಸಲ್ಪ ನೀರೇ ನಮಗೆ ಕುಡಿಯಲು ಮತ್ತು ತೋಟಗಳನ್ನು ಉಳಿಸಿಕೊಳ್ಳಲು, ಬಳಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ಪ್ರಸ್ತುತ ಯೋಜನೆ ಕಾರ್ಯಗತವಾದರೆ ಅದಕ್ಕಾಗಿ ಅಳವಡಿಸುವ ಬೃಹತ್ ಪಂಪು ಹಾಗೂ ಭಾರೀ ಗಾತ್ರದ ಪೈಪ್ ಲೈನ್ ಗಳಿಗಾಗಿ ನೂರಾರು ಕಿ.ಮೀ. ಜೆ.ಸಿ.ಬಿ. ಯಂತ್ರಗಳಿಂದ ಭೂಮಿಯ ಅಗೆತ ಮಾಡುವುದರಿಂದಾಗಿ ಭಾರೀ ಪ್ರಮಾಣದ ಹೂಳು, ಮಣ್ಣು, ಮರಳು ನದಿಗಳಿಗೆ ಸೇರಿ ನದಿ ಪಾತ್ರ ಅಳಿಸಿ ಹೋಗಿ ಭಾರೀ ಪ್ರಮಾಣದ ಪರಿಸರ, ಅರಣ್ಯ ನಾಶವಾಗುವ ಜೊತೆಗೆ ಜನ ಜೀವನಕ್ಕೂ ಸ೦ಕಷ್ಟಗಳು ಎದುರಾಗಲಿದೆ. ನದಿ ಪಾತ್ರಗಳಲ್ಲಿ ರೈತರು ಕೃಷಿ ಮತ್ತು ಪ್ರಶಾಂತತೆಯ ವಾತಾವರಣವನ್ನು ಸೃಷ್ಟಿಸಿಕೊಂಡಿದ್ದಾರೆ. ಎರಡೂ ಭಾಗದಲ್ಲಿ ಹಸರೀಕರಣಕ್ಕೆ ಒತ್ತು ನೀಡಿದ್ದಾರೆ. ನೈಜ ಅರಣ್ಯಕ್ಕೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎನ್ನುವ ವಾತಾವರಣ ಸೃಷ್ಟಿಸಿದ್ದಾರೆ. ಆದರೆ ಇವುಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ವಾತಾವರಣವಿದೆ.
ಇಂತಹ ಕೇಂದ್ರೀಕರಣ ಯೋಜನೆಯಿಂದ ಅವಲಂಬಿತ ಗ್ರಾಮಾಂತರ ಮತ್ತು ಪಟ್ಟಣದ ಜನತೆ ಅನೇಕ ವೈಫಲ್ಯಗಳಿ೦ದ ಬಸವಳಿಯಬೇಕಾಗುತ್ತದೆ.
ತೀರ್ಥಹಳ್ಳಿಯಂತಹ ಹೆಚ್ಚು ಮಳೆ ಬೀಳುವ ಮಲೆನಾಡಿನ ಜನತೆ ಜಲಮೂಲಗಳ ಅಭಿವೃದ್ಧಿ ಪದೇ ಇದ್ದು, ತಾತ್ಕಾಲಿಕ ನೀರನ್ನು ಬಲತ್ಕಾರದಿಂದ ಪೂರೈಸುವದರಿಂದ ಭಾರೀ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಪ್ರಕೃತಿಯ ಪ್ರತಿಕ್ರಿಯೆಯನ್ನು ನಿಲ್ಲಿಸಿರುವ ವಾತಾವರಣ ಸೃಷ್ಟಿಯಾಗಿದೆ. ಪ್ರಕೃತಿ ಜೊತೆಗೆ ಮನುಷ್ಯನ ಸಂಬಂಧ ಕೂಡ ಹಳಸಿದೆ. ಪ್ರಾಕೃತಿಕ ಸಂಪತ್ತಿನ ಮೇಲೆ ಖಾಸಗಿ ತೂಗುತ್ತಿದೆ. ಪ್ರಕೃತಿಯ ಸೊಬಗು ಚಿತ್ರಗಳಿಗೆ ಸೀಮಿತವಾಗತೊಡಗಿದೆ. ಕಳೆದ 10 ವರ್ಷಗಳಲ್ಲಿ ಎರಡು ಭಾರಿ ಭೀಕರ ಬರಗಾಲ ಬಂದ ಉದಾಹರಣೆ ನಮ್ಮ ಮುಂದಿದೆ. ನೀರಿಗಾಗಿ, ಜಲಕ್ಕಾಗಿ ಕಾದಾಟ ಪ್ರಾರಂಭವಾಗಿದೆ.
ಸಿಬ್ಬಲಗುಡ್ಡೆಯಂತಹ ಪುರಾಣ ಪ್ರಸಿದ್ಧ ಸ್ಥಳಗಳ ನದಿಪಾತ್ರದ ಜಲಚರಗಳ ಪರಿಸ್ಥಿತಿ ಎತ್ತ ಸಾಗುತ್ತಿದೆ. ಭೂ ಸವಕಳಿಯಿಂದ ಬೇಸಿಗೆಯಲ್ಲಿ ಆಳ ನೋಡಲಾಗದ ಆಳದ ಗುಂಡಿಗಳು ಮಾಯವಾಗತೊಡಗಿದೆ. ಅನೇಕ ವರ್ಷಗಳಿಂದ ಭೀಮನಕಟ್ಟೆ ಕೆಳಭಾಗದ ರೈತರ ನೀರಿನ ಭವಣೆ ಹಾಗೂ ಪಟ್ಟಣದವರ ನದಿ ಪಾತ್ರದ ವಾತಾವರಣ ಮಾಯವಾಗತೊಡಗಿದೆ. ಕಣ್ಣ ಮುಂದೆ ಬೃಹತ್ ಯೋಜನೆ ಭಾಗದಂತೆ ಮಂಡಗದ್ದೆ, ಶಿಂಗನದಿದರೆ ಯೋಜನೆ ನೆಲಕಚ್ಚಿದೆ. ಪಟ್ಟಣದ ಕುಡಿಯುವ ನೀರಿನ ಯೋಜನೆಯು ತನ್ನ ನೈಜ ಸ್ವರೂಪ ಕಳೆದುಕೊಳ್ಳುವ ಲಕ್ಷಣ ಎದುರಾಗಲಿದೆ. ತಾಲ್ಲೂಕಿನ ಮಹಾಜನತೆ ಮುಂದಾಗುವ ಅನಾಹುತ ಅರಿತು ಎಚ್ಚರಗೊಂಡು ಈ ಅಭಿಯಾನದಲ್ಲಿ ತಮ್ಮನ್ನು, ತಮ್ಮವರನ್ನು ತೊಡಗಿಸಬೇಕಾಗಿ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಹಾಗೂ ತುಂಗಾ ನದಿ ಹರಿವುದನ್ನು ಉಳಿಸಿ ಅಭಿಯಾನ, ಭೀಮನಕಟ್ಟೆ, ತೀರ್ಥಹಳ್ಳಿ ಸರ್ವರನ್ನು ಕೋರಿದೆ.