ತೀರ್ಥಹಳ್ಳಿ ಜಾತ್ರಾ ಮಹೋತ್ಸವಕ್ಕೆ ಚಾಲನೆ
– ಹೊಸ ಮೆಟ್ಟಿಲುಗಳ ಉದ್ಘಾಟನೆ!
– ರಥಬೀದಿ ಸಿಂಗಾರ!
– ಮಧ್ಯೆ ಮಳೆಯ ಅವಾಂತರ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಕ್ಕಿದೆ. ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಧ್ವಜಸ್ತಂಬಕ್ಕೆ ಅರ್ಚಕರು ಗರುಡನ ಕಟ್ಟುವ ಧಾರ್ಮಿಕ ಕಾರ್ಯಕ್ರಮದ ಮೂಲಕ ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿತು. ಈ ದಿನದಿಂದ ರಾಮೇಶ್ವರನ ಸನ್ನಿಧಿಯಲ್ಲಿ ವಿವಿಧ ಜಾತ್ರಾಮಹೋತ್ಸವದ ಕಾರ್ಯಕ್ರಮಗಳು ಜರಗಲಿವೆ. ಶೃಂಗೇರಿ ಪೀಠದ ಗುರುಗಳ ಮಾರ್ಗದರ್ಶನದಂತೆ ಇಂದು ದೇವಸ್ಥಾನದ ಮುಂಭಾಗದಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ಮೆಟ್ಟಿಲುಗಳ ಉದ್ಘಾಟನೆಯನ್ನು ಶಾಸಕ ಆರಗ ಜ್ಞಾನೇಂದ್ರ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಗೀತಾ ರಮೇಶ್, ಜಾತ್ರಾ ಸಮಿತಿಯ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಜಾತ್ರಾ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು. ನಾಳೆ ದಿನಾಂಕ 10ರ ಸಂಜೆ 5:00 ಗಂಟೆಗೆ ರಾಮ ಮಂಟಪದ ಹತ್ತಿರ ನಿರ್ಮಾಣಗೊಂಡಿರುವ ಕಿರು ಸೇತುವೆ ಉದ್ಘಾಟನಾ ಕಾರ್ಯಕ್ರಮವೂ ನಡೆಯಲಿದೆ.
ಈಗಾಗಲೇ ಜಾತ್ರೆಯ ಸಲುವಾಗಿ ಅಂಗಡಿ ಮುಗ್ಗಟ್ಟುಗಳುಸಜ್ಜುಗೊಳ್ಳುತ್ತಿವೆ. ಹಾಗೆಯೇ ಜಾತ್ರೆಯ ಆಕರ್ಷಣೆಯಲ್ಲಿ ಒಂದಾದ ಜೈಂಟ್ ವೀಲ್ ಹಾಗೂ ಇನ್ನಿತರ ಆಟೋಪಚಾರದ ಪರಿಕರಗಳನ್ನು ಬರದಿಂದ ಜೋಡಿಸುತ್ತಿದ್ದಾರೆ. ಜಾತ್ರೆಯ ಅತಿ ಮುಖ್ಯ ಭಾಗವಾದ ವಿದ್ಯುತ್ ಲೈಟಿಂಗ್ಸ್ ಅನ್ನು ದೇವಸ್ಥಾನದ ಸುತ್ತಮುತ್ತ ರಥ ಬೀದಿ ಹಾಗೂ ರಾಮ ಮಂಟಪ ಮತ್ತು ಸಿಟಿಯಲ್ಲಿ ಮಾಡುತ್ತಿದ್ದಾರೆ. ಜಾತ್ರೆಯ ಉಳಿದೆಲ್ಲ ಕೆಲಸ ಕಾರ್ಯಗಳನ್ನೂ ಜಾತ್ರಾ ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ಯುವಕರು ಅತ್ಯಂತ ಬರದಿಂದ ಮಾಡುತ್ತಿದ್ದಾರೆ. ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸೇತುವೆಗೆ ಸುಣ್ಣ ಬಣ್ಣ ಬಳಿದು ಅಲಂಕಾರ ಮಾಡಲು ಸಿದ್ಧಗೊಳ್ಳುತ್ತಿದೆ. ದೇವಸ್ಥಾನಗಳಲ್ಲೂ ಕೂಡ ಸಿದ್ಧತೆ ನಡೆಯುತ್ತಿದ್ದು ಎಲ್ಲೆಡೆ ಜಾತ್ರೆಯ ರಂಗು ಮೂಡಿದೆ.
ಇನ್ನು ಈ ಬಾರಿ ಜಾತ್ರೆಗೆ ಅತಿ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಜ.13 ರಂದು ತೆಪ್ಪೋತ್ಸವ ನಡೆಯುವ ಅಂಗವಾಗಿ ತುಂಗಾ ನದಿ ಸಮೀಪದಲ್ಲಿ ಅಯೋಧ್ಯೆ ರಾಮಮಂದಿರ ವಿನ್ಯಾಸದ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಇದು ಈ ಬಾರಿ ನೋಡುಗರನ್ನು ಆಕರ್ಷಿಸಲಿದೆ. ಈ ಮಧ್ಯೆ ತೀರ್ಥಹಳ್ಳಿಯಲ್ಲಿ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ಮಳೆಯೂ ಆಗಿತ್ತು. ಇದೇ ಹವಮಾನ ಮುಂದುವರಿಯುವ ವರದಿಯಂತೆಯೇ ಈ ದಿನ ನಗರದಾದ್ಯಂತ ಮಳೆಯಾಗುತ್ತಿದೆ. ಮಳೆಯಿಂದ ಜಾತ್ರೆಯ ಕೆಲಸ ಕಾರ್ಯಗಳಿಗೆ ಈಗ ಸ್ವಲ್ಪ ಅಡ್ಡಿಯಾದರೂ ಜನ ತಯಾರಿಯನ್ನು ಬರದಿಂದಲೇ ಮಾಡುತ್ತಿದ್ದಾರೆ.
