ನವ ದೆಹಲಿ: ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಇದರ ಪ್ರಕಾರ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿರ್ಬಂಧಿಸುವ ಕುರಿತು ಚಿಂತನೆ ನಡೆಸಿದೆ. ಈ ಪ್ರಸ್ತಾವನೆಯು ವಾಟ್ಸಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಆ್ಯಪ್ ಗಳನ್ನು ಒಳಗೊಂಡಿದ್ದು, ಡಿಜಿಟಲ್ ಜಗತ್ತಿನಲ್ಲಿ ಎಳೆಯ ಬಳಕೆದಾರರನ್ನು ರಕ್ಷಿಸುವ ಉದ್ದೇಶದಿಂದ ಚರ್ಚೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭಿಸಿದೆ.
ಕೇಂದ್ರ ಸರ್ಕಾರದ ಈ ನಿಯಮವು ಒಂದು ವೇಳೆ ಜಾರಿಗೆ ಬಂದಿದ್ದೇ ಆದಲ್ಲಿ ಪ್ರಮುಖ ಸಾಮಾಜಿಕ ಮಾಧ್ಯಮ ಮತ್ತು ಸಂವಹನ ವೇದಿಕೆಗಳನ್ನು ಮಕ್ಕಳು ಬಳಸುವ ವಿಧಾನಗಳಲ್ಲಿ ದೊಡ್ಡ ಬದಲಾವಣೆಗಳು ಬರಲಿವೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ವಯಸ್ಸಿನ ದೃಢೀಕರಣ, ಪೋಷಕರ ಒಳಗೊಳ್ಳುವಿಕೆ ಮತ್ತು ಈ ನಿಯಮವನ್ನು ಹೇಗೆ ಜಾರಿಗೊಳಿಸಬೇಕು ಎನ್ನುವ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಸಹ ನೀಡಬೇಕಾಗುತ್ತದೆ.
ಮಕ್ಕಳ ಆನ್ ಲೈನ್ ಸುರಕ್ಷತೆ ಮತ್ತು ಜವಾಬ್ದಾರಿಯುತ ಡಿಜಿಟಲ್ ಬಳಕೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಪ್ರಸ್ತಾವನೆ ಮುಂಚೂಣಿಯಲ್ಲಿದೆ. ಇದರೊಂದಿಗೆ ಸಾಮಾಜಿಕ ಮಾಧ್ಯಮಗಳು ಯುವ ಬಳಕೆದಾರರನ್ನು ಹೇಗೆ ಉತ್ತಮವಾಗಿ ರಕ್ಷಿಸುತ್ತದೆ ಎನ್ನುವುದನ್ನು ಕೂಡ ಪರಿಶೀಲಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಆಯಾ ದೇಶಗಳ ಸರ್ಕಾರಗಳು ಹೆಚ್ಚಿನ ಸಮೀಕ್ಷೆಯನ್ನು ಕೂಡ ನಡೆಸುತ್ತಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಸಧ್ಯದ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರವು ಇನ್ನೂ ಈ ಆಲೋಚನೆಯ ಆಧಾರದ ಮೇಲೆ ಪರಿಶೀಲನೆಯನ್ನು ನಡೆಸುತ್ತಿದ್ದು, ಯಾವುದೇ ರೀತಿಯ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅಧಿಕೃತವಾಗಿ ಪ್ರಕಟಣೆ ಹೊರಬಿದ್ದ ಮೇಲಷ್ಟೇ ನಿಯಮಕ್ಕೆ ಸಂಬಂಧಿಸಿದಂತೆ ನಿರ್ಧಾರವಾಗುತ್ತದೆ.







