Categories
Uncategorized

• ಮೂಡಿಗೆರೆ: ವೃದ್ಧನ ಮೇಲೆ ಕಾಡುಕೋಣ ದಾಳಿ; ಸ್ಥಿತಿ ಗಂಭೀರ • ನರಸಿಂಹರಾಜಪುರ: ಮದ್ಯ ಸೇವಿಸಿ ಈಜಲು ತೆರಳಿದ್ದಯುವಕ ಸಾವು • ಶಿವಮೊಗ್ಗ: ಮಹಿಳೆಯ ಖಾಸಗಿ ವಿಡಿಯೋ ಚಿತ್ರೀಕರಣ; ಕೇಸ್

ಮೂಡಿಗೆರೆ: ವೃದ್ಧರೊಬ್ಬರ ಮೇಲೆ ಕಾಡುಕೋಣವೊಂದು ದಿಢೀರ್ ದಾಳಿ ನಡೆಸಿದ ಘಟನೆ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ. ನಂಜೇಗೌಡ ಎನ್ನುವವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕಾಡುಕೋಣದ ದಾಳಿಯಿಂದಾಗಿ ನಂಜೇಗೌಡ ಅವರ ಕೈ ಕಾಲು ಮತ್ತು ತೊಡೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಬಣಕಲ್ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿದ್ದಾರೆ ಎನ್ನಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸ್ಥಳಾಂತರಿಸಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.

•ನರಸಿಂಹರಾಜಪುರ: ಮದ್ಯ ಸೇವಿಸಿ ಈಜಲು ತೆರಳಿದ್ದ ಯುವಕ ಸಾವು

ನರಸಿಂಹರಾಜಪುರ: ಸ್ನೇಹಿತರೊಂದಿಗೆ ಈಜಲು ತೆರಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ, ಮಂಗಳವಾರದಂದು ಭೈರನಕಟ್ಟೆ ಸಮೀಪದ ಭದ್ರಾ ಹಿನ್ನೀರಿನಲ್ಲಿ ನಡೆದಿದೆ. ಈಜಲು ತೆರಳಿದ್ದ ಸಂದರ್ಭದಲ್ಲಿ ಯುವಕನು ಮದ್ಯಪಾನ ಮಾಡಿರುವುದೇ ಈ ದುರಂತಕ್ಕೆ ಕಾರಣವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಮೃತ ಯುವಕನನ್ನು ಶಿವಮೊಗ್ಗ ಮೂಲದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿ ನಿಖಿಲ್ ಆರ್ ಸಿಂಗ್ ಎಂದು ಗುರುತಿಸಲಾಗಿದೆ. ನಿಖಿಲ್ ಮತ್ತು ಆತನ ಇಬ್ಬರು ಸ್ನೇಹಿತರು ಸಂಜೆಯ ಹೊತ್ತು ಮದ್ಯ ಕೂಟವನ್ನು ನಡೆಸಿದ್ದು, ಬಳಿಕ ಭದ್ರ ಹಿನ್ನೀರಿನಲ್ಲಿ ಈಜಲು ತೆರಳಿದ್ದಾರೆ. ಆಗ ನಿಖಿಲ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿ ನಿಖಿಲ್ ನನ್ನು ಪತ್ತೆಹಚ್ಚಿದ್ದು, ಶವವಾಗಿ ಆತ ಕಂಡು ಬಂದಿದ್ದಾನೆ. ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಶಿವಮೊಗ್ಗ: ಮಹಿಳೆಯ ಖಾಸಗಿ ವಿಡಿಯೋ ಚಿತ್ರೀಕರಣ; ಕೇಸ್!

ಶಿವಮೊಗ್ಗ: ಮಹಿಳೆಯ ವಿಡಿಯೋ ತೆಗೆದು, ಆಕೆಯ ಖಾಸಗಿತನಕ್ಕೆ ಧಕ್ಕೆ ತಂದಿರುವುದಷ್ಟೇ ಅಲ್ಲದೆ, ಲೈಂಗಿಕ ದೌರ್ಜನ್ಯವನ್ನು ನಡೆಸಲು ಯತ್ನಿಸಿರುವ ಘಟನೆ ನಡೆದಿದೆ. ಮಹಿಳೆಯು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ, ಪರಿಚಿತ ವ್ಯಕ್ತಿಯೊಬ್ಬರು ಆಕೆಯ ಮನೆಯೊಳಗೆ ಪ್ರವೇಶಿಸಿದ್ದು, ಮಹಿಳೆಯು ಬಟ್ಟೆಯನ್ನು ಬದಲಾಯಿಸುತ್ತಿರುವ ಸಮಯದಲ್ಲಿ ಆ ವ್ಯಕ್ತಿಯು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿದ್ದಾನೆ.‌ ಬಳಿಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಸಹ ನಡೆಸಲು ಮುಂದಾಗಿದ್ದಾನೆ. ಆಗ ಮಹಿಳೆಯು ಪ್ರತಿರೋಧ ವ್ಯಕ್ತಪಡಿಸಿದಾಗ ಕುಟುಂಬದ ಸದಸ್ಯರಿಗೆ ಸಂಬಂಧಿಸಿದಂತೆ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದಷ್ಟೇ ಅಲ್ಲದೆ ಈ ಸನ್ನಿವೇಶ ನಡೆದ ನಂತರವೂ ವ್ಯಕ್ತಿಯು ಮಹಿಳೆಯನ್ನು ಹಿಂಬಾಲಿಸಿ ತೊಂದರೆ ನೀಡಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಬಳಿಕ ವ್ಯಕ್ತಿಯ ಜೊತೆಗೆ ಇನ್ನಿಬ್ಬರು ಸೇರಿಕೊಂಡು ಮಹಿಳೆಯ ಖಾಸಗಿ ವಿಡಿಯೋವನ್ನು ವಾಟ್ಸಪ್ ಗುಂಪಿನಲ್ಲಿ ಹಂಚಿ, ಆಕೆಯ ಗೌರವಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು. ದೂರಿನ ಆಧಾರದ ಮೇಲೆ ವ್ಯಕ್ತಿ ಮತ್ತು ಆತನ ಜೊತೆಗಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 74, 75, 78, 79, 351(2), 3(5) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(ಇ), 67ರ ಅಡಿಯಲ್ಲಿ ಶಿವಮೊಗ್ಗ ತಾಲ್ಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.