Categories
Uncategorized

ಮೂಡಿಗೆರೆ: ಮದುವೆಗೆ ಕೆಲವೇ ದಿನ: ಯುವಕ ಆತ್ಮಹತ್ಯೆ ಮೂಡಿಗೆರೆ: ಮದುವೆಗೆ ಕೆಲವೇ ದಿನ: ಯುವಕ ಆತ್ಮಹತ್ಯೆ! ಚಿಕ್ಕಮಗಳೂರು: ಚಿನ್ನ ದೋಚಿ ಪ್ರಿಯಕರನಿಗೆ ನೀಡುತ್ತಿದ್ದ ನಕಲಿ ಪೊಲೀಸ್! ಶಿವಮೊಗ್ಗ: ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ ಹೊಸನಗರ: ಆತ್ಮಹತ್ಯೆಗೆ ಶರಣಾದ ಇಂಜಿನಿಯರ್ ತೀರ್ಥಹಳ್ಳಿ: ಗಾಳಿಗೆ ಮನೆಯ ಮೇಲೆ ಮರ ಬಿದ್ದು ಮನೆ ಧ್ವಂಸ ಶಿವಮೊಗ್ಗ: ಹೋಟೆಲ್ ಮೇಲೆ ದಾಳಿ: ಅವಧಿ ಮೀರಿದ ಹಾಲು..!

ಮೂಡಿಗೆರೆ: ಕಳೆದ ತಿಂಗಳು ಮದುವೆ ನಿಶ್ಚಯವಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಯುವಕನನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 25ಕ್ಕೆ ಅಭಿಷೇಕ್ ಅವರ ವಿವಾಹ ನಿಶ್ಚಯವಾಗಿದ್ದು, ಎರಡೂ ಕುಟುಂಬದವರು ಅತ್ಯಂತ ಸಂಭ್ರಮದಿಂದ ಮದುವೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಆದರೆ ಅಭಿಷೇಕ್ ಕಳೆದ ನಾಲ್ಕು ದಿನಗಳ ಹಿಂದೆ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಗೆ ಪ್ರಯತ್ನಿಸಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಅಭಿಷೇಕ್ ನನ್ನು ಮೂಡಿಗೆರೆ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಯಿತು. ಆದರೆ, ಫಲಕಾರಿಯಾಗದೆ ಅಭಿಷೇಕ್ ಸಾವನ್ನಪ್ಪಿದರು ಎನ್ನುವ ಸಂಗತಿ ತಿಳಿದುಬಂದಿದೆ. ಅಭಿಷೇಕ್ ಅವರ ಆತ್ಮಹತ್ಯೆಗೆ ಕಾರಣವೇನೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಭಿಷೇಕ್ ಕುಟುಂಬ ಮತ್ತು ಹೆಣ್ಣಿನ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

•ಚಿಕ್ಕಮಗಳೂರು: ಚಿನ್ನಾಭರಣಗಳನ್ನು ದೋಚಿ ಪ್ರಿಯಕರನಿಗೆ ನೀಡುತ್ತಿದ್ದ ನಕಲಿ ಪಿಎಸ್ಐ

ಚಿಕ್ಕಮಗಳೂರು: ತಾನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂದು ನಂಬಿಸಿ, ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣವನ್ನು ಲಪಟಾಯಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಆರೋಪಿಯನ್ನು ನಿವೇದಿತಾ ಗೌಡ ಎಂದು ಗುರುತಿಸಲಾಗಿದೆ. ಮೂಲತಃ ರಾಮದುರ್ಗದವಳಾದ ನಿವೇದಿತಾ ಚಿಕ್ಕಮಗಳೂರಿನಲ್ಲಿ ಕೆಫೆಯನ್ನು ನಡೆಸುತ್ತಿದ್ದು, ಅಲ್ಲಿಗೆ ಆಗಮಿಸುತ್ತಿದ್ದ ಯುವಕರು ಮತ್ತು ಮಹಿಳೆಯರನ್ನು ತನ್ನ ಅಕ್ರಮ ಚಟುವಟಿಕೆಗೆ ಗುರಿಯಾಗಿಸಿ, ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಮೋಸದ ಜಾಲ ಬೀಸಿದ್ದಳು ಎನ್ನಲಾಗಿದೆ. ಅಷ್ಟೇ ಅಲ್ಲದೆ ಬೆಂಗಳೂರಿನ ರಾಜಗೋಪಾಲನಗರ ಠಾಣೆಯ ಪಿಎಸ್ಐ ಆಗಿದ್ದು ರಜೆಯ ಮೇಲೆ ಊರಿಗೆ ಬಂದಿದ್ದೇನೆಂದು ತಿಳಿಸಿ, ಪೊಲೀಸರ ರೀತಿಯಲ್ಲಿ ಕಟಿಂಗ್ ಮಾಡಿಸಿಕೊಂಡು ವೇಷ ತೊಟ್ಟು ನಂಬಿಕೆ ಬರುವ ಪ್ರೀತಿಯಲ್ಲಿ ವರ್ತಿಸುತ್ತಿದ್ದಳು. ಬಳಿಕ ಕೆಫೆಗೆ ಆಗಮಿಸುವ ಗ್ರಾಹಕರು ಶ್ರೀಮಂತರಾಗಿದ್ದರೆ ಅವರ ಐಷಾರಾಮಿ ಕಾರುಗಳನ್ನು ತನ್ನ ಓಡಾಟಕ್ಕೆ ಬಳಸುತ್ತಿದ್ದಳು ಎನ್ನುವ ಮಾಹಿತಿ ಲಭಿಸಿದೆ. ಕೇವಲ ಚಿಕ್ಕಮಗಳೂರು ಜಿಲ್ಲೆ ಮಾತ್ರವಲ್ಲದೆ ಹಲವು ಜಿಲ್ಲೆಗಳಲ್ಲಿ 25ಕ್ಕೂ ಹೆಚ್ಚಿನ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾಳೆ ಎನ್ನುವ ಸಂಗತಿ ತಿಳಿದುಬಂದಿದೆ. ಅಲ್ಲದೆ ತಾನು ಸಾರ್ವಜನಿಕರನ್ನು ವಂಚಿಸಿ ಗಳಿಸಿದ ಹಣ ಮತ್ತು ಆಭರಣಗಳನ್ನು ತನ್ನ ಪ್ರಿಯಕರನಾದ ದೇವುಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದಳು ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಈಕೆಯ ಬಲೆಗೆ ಬಿದ್ದು ವಂಚಿತರಾದ 20ಕ್ಕೂ ಹೆಚ್ಚು ಜನರು ದೂರು ನೀಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಬಸವನಹಳ್ಳಿ ಮತ್ತು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇದರ ಆಧಾರದ ಮೇಲೆ ಪೊಲೀಸರು ತೀವ್ರ ಕಾರ್ಯಚರಣೆಯನ್ನು ನಡೆಸಿ, ನಿವೇದಿತಾ ಗೌಡಾಳನ್ನು ಬಂಧಿಸಿದ್ದು, ಆಕೆಯ ಪ್ರಿಯಕರ ದೇವುಗಾಗಿ ಹುಡುಕಾಟ ನಡೆಸಿದ್ದಾರೆ.

•ಶಿವಮೊಗ್ಗ: ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

ಶಿವಮೊಗ್ಗ: ಖಾಸಗಿ ಇನ್ಸ್ಟಿಟ್ಯೂಟ್ ಆಫ್ ಬಿಎಸ್ ಸಿ ನರ್ಸಿಂಗ್ ಕಾಲೇಜಿನಲ್ಲಿ ಆಹಾರವನ್ನು ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಸೋಮವಾರದಂದು ನಡೆದಿದೆ. ಆಹಾರವನ್ನು ಸೇವಿಸಿ ಸುಮಾರು 40 ಜನ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಸರ್ಜಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು ಎನ್ನಲಾಗಿದೆ. ವಿದ್ಯಾರ್ಥಿಗಳು ಆಹಾರದ ಕಳಪೆ ಗುಣಮಟ್ಟದ ಬಗ್ಗೆ ಪ್ರಾಂಶುಪಾಲರಿಗೆ ಹಲವಾರು ಬಾರಿ ದೂರು ನೀಡಿದ್ದರೂ ಕೂಡ ಅವರು ಗಮನಹರಿಸದೆ ನಿರ್ಲಕ್ಷ್ಯ ವಹಿಸಿದುದೇ ಈ ಅನಾಹುತಕ್ಕೆ ಕಾರಣವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

•ಹೊಸನಗರ: ಆತ್ಮಹತ್ಯೆಗೆ ಶರಣಾದ ಇಂಜಿನಿಯರ್

ಹೊಸನಗರ: ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಿಪ್ಪನ್ ಪೇಟೆ ಯುವಕನೊಬ್ಬ ಬೆಂಗಳೂರಿನಲ್ಲಿ ತನ್ನ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಭಾನುವಾರದಂದು ನಡೆದಿದ್ದು ಇಂದು ತಿಳಿದುಬಂದಿದೆ.‌ ಮೃತ ಯುವಕನನ್ನು ಕಮ್ಮಚ್ಚಿ ಗ್ರಾಮದ ದೀಕ್ಷಿತ್ ಎಂದು ಗುರುತಿಸಲಾಗಿದೆ. ದೀಕ್ಷಿತ್ ಅವರಿಗೆ ಕಳೆದ ತಿಂಗಳಷ್ಟೇ ವಿವಾಹವಾಗಿದ್ದು, ಮದುವೆಯ ಸಂಭ್ರಮ ತಣ್ಣಗಾಗುವ ಮೊದಲೇ, ಸಾವಿನ ಸುದ್ದಿ ಸಿಡಿಲಿನಂತೆ ಬಂದೆರಗಿದೆ. ದೀಕ್ಷಿತ್ ಅವರ ಸಾವಿಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಕುರಿತು ಪೊಲೀಸರು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ಹೋಟೆಲ್ ಮೇಲೆ ದಾಳಿ: ಅವಧಿ ಮೀರಿದ ಹಾಲು ಪತ್ತೆ!

ಶಿವಮೊಗ್ಗ: ಶಿವಮೊಗ್ಗದಲ್ಲಿ ಮುಂದುವರಿದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿಯಲ್ಲಿ ಅನೇಕ ನಾನ್ ವೆಜ್ ಹೊಟೇಲ್ ಗಳ ಮೇಲೆ ದಿಢೀರ್ ದಾಳಿ ಮಾಡಲಾಗಿದೆ. ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದಲ್ಲಿ ದಾಳಿ ಮಾಡಿದ್ದು, ತಾಜ್, ಬ್ರೈಟ್ ನಾನ್ ವೆಜ್ ಹೋಟೆಲ್ ಗಳ ಮೇಲೆ ದಾಳಿ, ಪರಿಶೀಲನೆ ನಡೆಸಿದಾಗ ಅವಧಿ ಮೀರಿದ ಹಾಲು, ಅಸ್ವಚ್ಚತೆ ಪತ್ತೆಯಾಗಿದೆ. ಜತೆಗೆ ಕಳಪೆ ಗುಣಮಟ್ಟದ ಅಡುಗೆ ಎಣ್ಣೆ ಬಳಸುತ್ತಿರೋದು ಪತ್ತೆ ಆಗಿದೆ. ಆಹಾರ ಪದಾರ್ಥಗಳಿಗೆ ರಾಸಾಯನಿಕ ಬಣ್ಣ ಬಳಸಿದ್ರೆ ಕ್ರಮದ ಎಚ್ಚರಿಕೆ ನೀಡಿದ ಎಸಿ ಡಾ. ಮೈತ್ರಿ 15 ದಿನದೊಳಗೆ ಸರಿಪಡಿಸಿಕೊಳ್ಳಲು ಎಚ್ಚರಿಕೆ ನೀಡಿದ್ದಾರೆ.

ಗಾಳಿಗೆ ಮನೆಯ ಮೇಲೆ ಮರ ಬಿದ್ದು ಮನೆ ಧ್ವಂಸ

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸಮೀಪ ಗ್ಯಾದಿಗೆರೆ ಎಂಬಲ್ಲಿ ಭಾರೀ ಗಾಳಿಯ ಅಬ್ಬರಕ್ಕೆ ಅಭಿಷೇಕ್ ಅವರ ಮನೆಯ ಮೇಲೆ ಮರ ಬಿದ್ದು ಮನೆಗೆ ತೀವ್ರ ಹಾನಿಯಾಗಿದೆ. ಘಟನೆಯಿಂದ ಮನೆಯ ಮೇಲ್ಛಾವಣಿ ಸೇರಿದಂತೆ ಹಲವು ಭಾಗಗಳು ಧ್ವಂಸಗೊಂಡಿದ್ದು, ಕುಟುಂಬಕ್ಕೆ ಅಪಾರ ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಹಾನಿಗೊಳಗಾದ ಕುಟುಂಬ ಅತ್ಯಂತ ಕಡು ಬಡವರಾಗಿದ್ದು ಈ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.