Categories
ಹೊಸನಗರ

ನಿಟ್ಟೂರು ಗ್ರಾಪಂ ನಾಗೊಡಿ ಗ್ರಾಮಕ್ಕೆ ಜಲ ಭಾಗ್ಯ

ನಿಟ್ಟೂರು ಗ್ರಾಪಂ ನಾಗೊಡಿ ಗ್ರಾಮಕ್ಕೆ ಜಲ ಭಾಗ್ಯ
– ಜಲಜೀವನ್ ಮಿಷನ್ ಕಾಮಗಾರಿಯ ಭೂಮಿ ಪೂಜೆ
– ಸಾಗರ – ಹೊಸನಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು ಗುದ್ದಲಿ ಪೂಜೆ

NAMMUR EXPRESS NEWS
ಹೊಸನಗರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎಲ್ಲಾ ಕಡೆ ಯಶಸ್ವಿಯಾಗುತ್ತಿದೆ. ಈ ನಡುವೆ ಹೊಸನಗರ ತಾಲೂಕು ನಿಟ್ಟೂರು ಗ್ರಾಮ ಪಂಚಾಯಿತಿ ನಾಗೊಡಿ ಗ್ರಾಮದ ವ್ಯಾಪ್ತಿಯ ಬೇಳೂರಿನಲ್ಲಿ ಭಾನುವಾರ ಕುಡಿಯುವ ನೀರಿನ ಜಲಜೀವನ್ ಮಿಷನ್ ಕಾಮಗಾರಿಯ ಭೂಮಿ ಪೂಜೆಯನ್ನು ಸಾಗರ – ಹೊಸನಗರ ವಿಧಾನಸಭಾಕ್ಷೇತ್ರ ಶಾಸಕರಾದ ಗೋಪಾಲಕೃಷ್ಣ ಬೇಳೂರು ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಜೊತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು , ಊರಿನ ಗ್ರಾಮಸ್ಥರು ಎಲ್ಲರೂ ಉಪಸ್ಥಿತರಿದ್ದರು.
ಈ ಯೋಜನೆ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯಾಗಿದೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕಾರ್ಕಳ ಪರಶುರಾಮ ಥೀಮ್ ಪಾರ್ಕ್‌ ಪ್ರವೇಶ ಇಲ್ಲ!
– ಅ.9ರಿಂದ ನವೆಂಬರ್ ತಿಂಗಳ ಕೊನೆಯವರೆಗೆ ತಾತ್ಕಾಲಿಕವಾಗಿ ನಿಷೇಧ
– ಕುಂದಾಪುರ: ಸ್ಕೂಟರ್‌ನಲ್ಲಿ ಗೋ ಮಾಂಸ ಸಾಗಾಟ!
– ಮೂಡುಬಿದಿರೆ: ಬೈಕ್‌ಗೆ ಟಿಪ್ಪರ್ ಡಿಕ್ಕಿ: ಓರ್ವನ ಸಾವು
– ಕೋಟಾ: ದಲಿತ ಮಹಿಳೆ ಮೇಲೆ ಪೊಲೀಸ್ ದೌರ್ಜನ್ಯ
– ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮಹಿಳೆ ಸಾವು

NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕು ಯರ್ಲ ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಶುರಾಮ ಥೀಮ್ ಪಾರ್ಕ್‌ಗೆ ಹಾಗೂ ಸಾರ್ವಜನಿಕರ ಪ್ರವೇಶವನ್ನು ಅ.9 ರಿಂದ ನವೆಂಬರ್ ತಿಂಗಳ ಕೊನೆಯವರೆಗೆ ತಾತ್ಕಾಲಿಕವಾಗಿ ನಿಷೇಧಿಸಿ ಕಾರ್ಕಳ ತಹಶೀಲ್ದಾರ್ ಅವರು ಅದೇಶ ಹೊರಡಿಸಿದ್ದಾರೆ. ಈ ಥೀಮ್ ಪಾರ್ಕ್ ಕಳೆದ ಜನವರಿ 27 ರಂದು ಉದ್ಘಾಟನೆಗೊಂಡು ಸಾರ್ವಜನಿಕರು ಹಾಗೂ ಭದ್ರತಾ ಭೇಟಿಗೆ ತೆರೆದುಕೊಂಡಿತು, ಆದರೆ ಥೀಮ್ ಪಾರ್ಕ್‌ ಬಾಕಿ ಉಳಿದಿರುವ ಕಾಮಗಾರಿಯಲ್ಲಿ ಪರಶುರಾಮ ಮೂರ್ತಿಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ ಮತ್ತು ಮೂರ್ತಿಗೆ ತುಕ್ಕು ನಿರೋಧಕ ಲೇಪನ ಮತ್ತು ಇತರ ಮುಕ್ತ ಯದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನಕೂಲವಾಗುವಂತೆ ಪ್ರವೇಶವನ್ನು ನಿಷೇಧಿಸಲಾಗಿದೆ.

ಇದೀಗ ಕಾಮಗಾರಿ ಪೂರ್ಣಗೊಳ್ಳುವ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಮಾಣ ಕೇಂದ್ರದವರು ಈ ಕಾಲಾವಕಾಶವನ್ನು ಕೋರಿದ್ದಾರೆ, ಅದರಂತೆ ಅ.9 ರಿಂದ ನವೆಂಬರ್ ಕೊನೆಯವರೆಗೆ ಪರಶುರಾಮ ಥೀಮ್ ಪಾರ್ಕ್‌ಗೆ ಯಾವುದೇ ಸಾರ್ವಜನಿಕರ ಹಾಗೂ ಸಂಪರ್ಕದ ಭೇಟಿಯನ್ನು ನಿಷೇದಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರರ ಪ್ರಕಟಣೆಗೆ ಸೂಚನೆ ನೀಡಲಾಗಿದೆ.

ಸ್ಕೂಟರ್‌ನಲ್ಲಿ ಗೋ ಮಾಂಸ ಸಾಗಾಟ!

ಕುಂದಾಪುರ: ಸ್ಕೂಟರ್‌ನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಪ್ರಕರಣವನ್ನು ಕುಂದಾಪುರ ಪೊಲೀಸರು ಆನಗಳ್ಳಿ ಸಮೀಪ ಪತ್ತೆ ಮಾಡಿದ್ದಾರೆ. ಆನಗಳ್ಳಿ ಗ್ರಾಮದ ನಂದಿಕೇಶ್ವರ ದೇವಸ್ಥಾನ ಬಳಿ ಎಸ್‌ಐ ಪ್ರಸಾದ್‌ ಕುಮಾರ್ ನೇತೃತ್ವದ ಕುಂದಾಪುರ ಪೊಲೀಸರ ತಂಡ ತಪಾಸಣೆ ನಡೆಸುತ್ತಿದ್ದಾಗ ವ್ಯಕ್ತಿಯೊಬ್ಬ ಸ್ಕೂಟರ್‌ನಲ್ಲಿ ಬರುತ್ತಿದ್ದ ನಿಲ್ಲಿಸಲು ಹೇಳಿದಾಗ ಆತ ಪರಾರಿಯಾಗಿದ್ದು, ತಪಾಸಣೆ ನಡೆಸಿದಾಗ ಸ್ಫೋಟರ್‌ನಲ್ಲಿ ಸುಮಾರು 10 ಕೆ.ಜಿ. ಜಾನುವಾರು ಮಾಂಸ ಪತ್ತೆಯಾಗಿದೆ. ಆತ ಎಲ್ಲಿಂದಲೋ ಕಳವು ಮಾಡಿ ಮಾಂಸವನ್ನು ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗ ಪ್ರಭಾಕರ ಎಂಬುವರ ಮನೆಯ ಬಳಿ ಕೈ ಚೀಲದಲ್ಲಿ ದನದ ಮಾಂಸ ಪತ್ತೆಯಾಗಿದೆ, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಬೈಕ್‌ಗೆ ಟಿಪ್ಪರ್ ಡಿಕ್ಕಿ: ಓರ್ವ ಸಾವು

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗಂಜಿಮಠದ ಮುಚ್ಚಾರು ಕ್ರಾಸ್ ಬಳಿ ಅ. 6ರಂದು ಸಂಜೆ 6.45ಕ್ಕೆ ಮೂಡುಬಿದಿರೆಯಿಂದ ಕೈಕಂಬದ ಕಡೆಗೆ ಬರುತ್ತಿದ್ದ ಟಿಪ್ಪರ್ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ, ಗುರುಪುರ ಹೊಸಮನೆ ನಿವಾಸಿ ಸಚಿನ್ ಕುಮಾರ್ ಆಚಾರ್ಯ (33) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಚಿನ್ ಕುಮಾರ್ ಎಚ್‌ಡಿಎಫ್‌ಸಿ ಬ್ಯಾಂಕಿನ ಉದ್ಯೋಗಿಯಾಗಿದ್ದು, ಅವಿವಾಹಿತರಾಗಿದ್ದರು. ಸಂಜೆ ಕೆಲಸ ಮುಗಿಸಿ ಗುರುಪುರಕ್ಕೆ ಬರುತ್ತಿದ್ದಾಗ ಇವರ ಬೈಕನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಟಿಪ್ಪರ್ ಢಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಸಚಿನ್ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು.

ದಲಿತ ಮಹಿಳೆಯ ಮೇಲೆ ಪೊಲೀಸ್ ದೌರ್ಜನ್ಯ?

ಕೋಟ: ಈ ಹಿಂದೆ ಕೊರಗರ ವಿಚಾರದಲ್ಲಿ ಸುದ್ದಿಯಾಗಿದ್ದ ಕೋಟ ಪೊಲೀಸ್ ಠಾಣೆ ಇದೀಗ ದಲಿತ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ ಮತ್ತೊಮ್ಮೆ ಪೋಲಿಸ್‌ ದೌರ್ಜನ್ಯದ ಮೇಲೆ ಸುದ್ದಿಯಾಗಿದೆ. ಕೋಟ ಠಾಣೆಯ ಮಹಿಳಾ ಸಬ್ ಇನ್ಸಪೆಕ್ಟರ್ ಸುಧಾ ಪ್ರಭು ಅವರು ಕಿರಣ್ ಶೆಟ್ಟಿ ಎಂಬವರು ನೀಡಿದ ಕಳ್ಳತನದ ಸುಳ್ಳು ದೂರಿನ ಮೇರೆಗೆ ದಲಿತ ಬೋವಿ ಜಾತಿಯ ಮಹಿಳೆ ಆಶಾ ಮತ್ತು ಕುಲಾಲ ಜಾತಿಯ ಸುಜಾತಾ ಅವರನ್ನು ಕಳೆದ 3ರಂದು ಪೋಲಿಸ್ ಠಾಣೆಗೆ ಕರೆಸಿ ಲಾಠಿಯಿಂದ ಹೊಂದು, ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ನಡೆಸಿರುತ್ತಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.

ಹಲ್ಲೆಗೊಳಗಾದ ಸುಜಾತ ಮತ್ತು ಆಶಾ ಅವರು ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯ ಒಳರೋಗಿಯಾಗಿ ದಾಖಲಾಗಿದ್ದಾರೆ. ಬೂಟು ಕಾಲಿನ ಒಡೆತದಿಂದ ಎದೆ ಭಾಗಕ್ಕೆ ಬಲವಾದ ಪೆಟ್ಟಾಗಿದ್ದು ಎಕ್ಸರೇ ಮಾಡಿದಾಗ ಮೂಳೆ ಮುರಿತ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ವಿದ್ಯುತ್ ಶಾಕ್ ಹೊಡೆದು ಮಹಿಳೆ ಸಾವು

ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಮನೆಗೆ ಅಳವಡಿಸಿದ್ದ ಇನ್ವರ್ಟರ್ ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಘಟನೆ ವರದಿಯಾಗಿದೆ ಲಲಿತಾ ಮೃತ ದುರ್ದೈವಿ ಮಲಗುವ ವೇಳೆಯಲ್ಲಿ ಇನ್ವರ್ಟ‌್ರಗೆ ಪ್ಲಗ್ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತದರೂ ಅಷ್ಟಾಗಲೇ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಅರಳಸುರಳಿ ಘಟನೆ ನಿಗೂಢ!

ತೀರ್ಥಹಳ್ಳಿ ಅರಳಸುರಳಿ ಘಟನೆ ನಿಗೂಢ!
– ಮನೆಯ ರೂಮಲ್ಲಿ ಮೂವರು ಸಾವು: ಅಸ್ತಿ ಕಲಹಕ್ಕೆ ಮನ ನೊಂದಿತ್ತೆ ಕುಟುಂಬ?
– ಆ ರಾತ್ರಿ… ಮುಂಜಾನೆ ನಡೆದಿದ್ದೇನು..?.. ಪೊಲೀಸರು ಹೇಳಿದ್ದೇನು?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಕೆಕೋಡ್ ಕುಟುಂಬದ ಮೂವರ ಸಾವು ಈಗ ಹಲವು ಪ್ರಶ್ನೆಗಳನ್ನು ಬಿಟ್ಟು ಹೋಗಿದೆ. ಹಿರಿಯರಾದ ಅರ್ಚಕ ವೃತ್ತಿಯಲ್ಲಿದ್ದ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನ (55), ಹಿರಿಯ ಪುತ್ರ ಶ್ರೀರಾಮ್ (30) ಸಾವನ್ನಪ್ಪಿದ್ದಾರೆ. ಇನ್ನೋರ್ವ ಪುತ್ರ ಭರತ್ (28) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ಭರತ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಹೇಳಿಕೆ ಮೇಲೆ ಎಲ್ಲವೂ ನಿಂತಿದೆ. ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ ಘಟನೆ ನೂರೆಂಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ರಾತ್ರಿ ಅಥವಾ ಮುಂಜಾನೆ ನಡೆದಿದ್ದೇನು ಎಂಬುದು ಪೊಲೀಸ್ ತನಿಖೆಯಿಂದ ಮಾತ್ರ ಗೊತ್ತಾಗಬೇಕಿದೆ.

ಪೊಲೀಸ್ ಉನ್ನತ ಅಧಿಕಾರಿಗಳು ಹೇಳಿದ್ದೇನು?

ಭಾನುವಾರ ಬೆಳಗ್ಗೆ 6 ರಿಂದ 6.30ರ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯ ಕೋಣೆಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ. ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ ಘಟನೆ ನಡೆದ ಅರ್ಧಗಂಟೆಯೊಳಗೆ ತೀರ್ಥಹಳ್ಳಿಯಿಂದ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಭರತ ಎಂಬುವನಿಗೆ ಶೇಕಡ 40 ರಿಂದ 50ರಷ್ಟು ಸುಟ್ಟ ಗಾಯಗಳಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಭರತ್ ಅವರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ದಾವಣಗೆರೆಯಿಂದ ಪೋರೆನ್ಸಿಕ್ ತಜ್ಞರ ತಂಡ, ಸೀನ್ ಆಫ್ ಕ್ರೈಮ್ ಆಫೀಸರ್ಸ್ ತಂಡ ಹಾಗೂ ಡಾಗ್ ಸ್ಕ್ಯಾಡ್ ಆಗಮಿಸಿದೆ. ಸ್ಥಳದಲ್ಲಿ ಕೆಲವೊಂದು ಮಾಹಿತಿ ಸಿಕ್ಕಿದೆ, ಗಾಯಾಳು ಭರತ ಸಹ ಕೆಲವೊಂದು ಮಾಹಿತಿ ನೀಡಿದ್ದಾರೆ. ಈಗಲೇ ಯಾವುದೇ ನಿರ್ಧಾರಕ್ಕೆ ಬರಲಾಗದು. ತನಿಖೆ ಪೂರ್ಣಗೊಂಡ ನಂತರವಷ್ಟೇ ಸ್ಪಷ್ಟ ಕಾರಣ ತಿಳಿಯಲಿದೆ ಎಂದರು.

ದೊಡ್ಡ ಮಟ್ಟದ ಅಡಿಕೆ ಉದ್ಯಮ ಕಾರಣ ಆಯ್ತಾ?

ಶಾಸಕ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಕೆಕೋಡು ಕುಟುಂಬದವರು ತಮಗೆ ತುಂಬಾ ಬೇಕಾದವರು. ಸುಮಾರು 10 ಎಕರೆ ಅಡಿಕೆ ತೋಟವಿದೆ. ಆರ್ಥಿಕವಾಗಿ ಅನುಕೂಲವಾಗಿದ್ದರು. ಆದರೂ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರು ಸುಟ್ಟು ಕರಕಲಾಗಿದ್ದು ಮೃತದೇಹದ ಗುರುತು ಸಿಗದ ಪರಿಸ್ಥಿತಿ ಇದೆ. ಇನ್ನೊಬ್ಬನ ದೇಹ ಶೇ.50ರಷ್ಟು ಸುಟ್ಟ ಗಾಯವಾಗಿದೆ ಎಂದು ತಿಳಿಸಿದರು.

ಕೆಕೋಡ ಕುಟುಂಬದ ಪಾ.ರಾ.ಕೃಷ್ಣಮೂರ್ತಿ ಅವರು ಆರ್‌ಎಸ್‌ಎಸ್‌ ಪ್ರಚಾರಕರಾಗಿದ್ದಾರೆ. ದೆಹಲಿಯಲ್ಲಿ ಪ್ರಚಾರಕರಾಗಿದ್ದರು. ಈಗ ಬೆಂಗಳೂರಿನಲ್ಲಿದ್ದಾರೆ. ಸುಮಾರು 35 ವರ್ಷದಿಂದ ಪರಿಚಿತ ಕುಟುಂಬ. ರಾಘವೇಂದ್ರ ಅವರ ಸಹೋದರರೆಲ್ಲ ಹೊರಗಿದ್ದಾರೆ. ಒಬ್ಬರು ವೈದ್ಯರು, ಮತ್ತೊಬ್ಲೂ ದೂರಸಂಪರ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಘವೆಂದ್ರ ಅವರ ಪುತ್ರ ದೊಡ್ಡ ಮಟ್ಟದಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿದ್ದರು ಎಂದರು. ಘಟನೆ ಕುರಿತು ತನಿಖೆ ನಡೆಯುತ್ತಿದೆ. ಎಫ್‌ಎಸ್ಎಎಲ್ ಮತ್ತು ತಜ್ಞರ ತಂಡ ಸ್ಥಳಕ್ಕೆ ಆಗಮಿಸುತ್ತಿದೆ. ಪೊಲೀಸರ ತನಿಖೆಯಿಂದಷ್ಟೆ ನಿಖರ ಕಾರಣ ಗೊತ್ತಾಗಲಿದೆ ಎಂದು

Categories
ಮಾಹಿತಿ

ಸಾಲ ಮಾಡಿ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್.!

ಸಾಲ ಮಾಡಿ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್.!
– ರಿಸರ್ವ್ ಬ್ಯಾಂಕಿನಿಂದ ಮಹತ್ವದ ನಿರ್ಧಾರ
-ಬ್ಯಾಂಕುಗಳು ತಪ್ಪು ಮಾಡಿದರೆ 50 ಸಾವಿರ ದಂಡ!

NAMMUR EXPRESS NEWS
ದೇಶದಲ್ಲಿ ವಿವಿಧ ಬ್ಯಾಂಕುಗಳು ಗ್ರಾಹಕರಿಗೆ ಸಾಲ ಸೌಲಭ್ಯವನ್ನು ನೀಡುತ್ತದೆ. ಬ್ಯಾಂಕುಗಳು ಗ್ರಾಹಕರಿಗೆ ವೈಯಕ್ತಿಕ ಸಾಲ, ಗೃಹಸಾಲ ಸೇರಿದಂತೆ ವಾಹನ ಸಾಲಗಳನ್ನು ನೀಡುತ್ತದೆ.ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಸಾಲಗಳ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುತ್ತಿದೆ. ಸಾಲ ನೀಡುವ ಬ್ಯಾಂಕುಗಳಿಗೆ ಹೊಸ ಹೊಸ ನಿಯಮವನ್ನು ನೀಡುತ್ತಿದೆ. ಬ್ಯಾಂಕುಗಳಲ್ಲಿ ಸಾಲ ಪಡೆದವರು ಹೆಚ್ಚಿನ ತೊಂದರೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ. ಬ್ಯಾಂಕುಗಳು ನೀಡುವ ವಾಹನ ಸಾಲ ಸಾಮಾನ್ಯವಾಗಿ ವಾಹನಗಳನ್ನು ಖರೀದಿಸುವಾಗ ಆರ್ಥಿಕ ಸಮಸ್ಯೆ ಎದುರಾಗುವುದು ಸಹಜ. ಈ ಸಮಯದಲ್ಲಿ ಜನರು ಲೋನ್ ಪಡೆಯಲು ಮುಂದಾಗುತ್ತಾರೆ.

ವಾಹನಗಳ ಮೇಲೆ ಕೆಲವು ಹಣಕಾಸಿನ ಯೋಜನೆಗಳನ್ನು ವಿವಿಧ ಬ್ಯಾಂಕ್ ಗಳು ನೀಡುತ್ತದೆ. ಬ್ಯಾಂಕುಗಳು ನೀಡುವ ವಾಹನ ಸಾಲದ ಮೂಲಕ ಸಾಕಷ್ಟು ಜನರು ವಾಹನಗಳನ್ನು ಖರೀದಿಸುತ್ತಾರೆ. ಇನ್ನು ಬ್ಯಾಂಕ್ ನಿಂದ ಸಾಲ ಪಡೆದ ಮೇಲೆ ಸಾಲ ಪಡೆದವರು ಕಾಲಾನುಕ್ರಮ ಸಾಲವನ್ನು ಕಟ್ಟಬೇಕು. ಸಾಲ ಕಟ್ಟದೆ ಇದ್ದರೆ ಬ್ಯಾಂಕ್ ಸಾಲ ಪಡೆದವರ ಮೇಲೆ ಕ್ರಮ ಕೈಗೊಳ್ಳುತ್ತದೆ. ಇದೀಗ ವಾಹನಗಳ ಮೇಲೆ ಸಾಲ ಮಾಡಿದವರಿಗೆ ಹೈಕೋರ್ಟ್ ನಿಂದ ಗುಡ್ ನ್ಯೂಸ್ ಲಭಿಸಿದೆ. ಬ್ಯಾಂಕ್ ನ ಮೂಲಕ ಸಾಲ ಪಡೆದವರ ವಾಹನದ ಲೋನ್ ಗಳಿಗೆ ಸರಿಯಾದ ಸಮಯಕ್ಕೆ EMI ಪಾವತಿಸಬೇಕು. EMI ಪಾವತಿ ನಿಗದತ ಸಮಯ ದೊಳಗೆ ಆಗದಿದ್ದರೆ, ಸಾಲಗಾರರ ವಾಹನಗಳನ್ನು ಬಲವಂತವಾಗಿ ಬ್ಯಾಂಕ್ ಗಳು ವಶಪಡಿಸಿಕೊಳ್ಳುತ್ತದೆ. ಇದಕ್ಕಾಗಿ ಬ್ಯಾಂಕ್ ರಿಕವರಿ ಎಜೇಂಟ್ ಗಳನ್ನೂ ಬಳಸಿಕೊಳ್ಳುತ್ತದೆ. ಈ ಕುರಿತು ಹೈಕೊರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ.

ಇನ್ನುಮುಂದೆ ಬ್ಯಾಂಕುಗಳು ಗಳು ರಿಕವರಿ ಏಜೆಂಟ್ ಗಳನ್ನೂ ಬಳಸುವಂತಿಲ್ಲ. ನ್ಯಾಯಮೂರ್ತಿಗಳಾದ ರಾಜೀವ್ ರಂಜನ್ ಪ್ರಸಾದ್ ಅವರು ಬ್ಯಾಂಕ್ ಗಳಿಗೆ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ರಿಕವರಿ ಎಜೇಂಟ್ ಗಳು ವಾಹನಗಳನ್ನು ವಶಪಡಿಸಿಕೊಳ್ಳುವುದು ಕಾನೂನುಬಾಹಿರ ಮತ್ತು ಜೀವನೋಪಾಯದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮೇ 19 ರಂದು ತೀರ್ಪು ನೀಡಿದ್ದಾರೆ. ಹಾಗೆಯೆ ಅಂತಹ ರಿಕವರಿ ಏಜೆಂಟ್ ಗಳ ವಿರುದ್ಧ FIR ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಬ್ಯಾಂಕುಗಳು ಇಂತಹ ತಪ್ಪು ಮಾಡಿದರೆ 50 ಸಾವಿರ ದಂಡ

ಇನ್ನು ತಪ್ಪಿತಸ್ಥ ಬ್ಯಾಂಕ್ ಗಳು ಮತ್ತು ಹಣಕಾಸು ಕಂಪನಿಗಳಿಗೆ ತಲಾ 50 ಸಾವಿರ ರೂ. ದಂಡವನ್ನು ಹೈಕೋರ್ಟ್ ವಿಧಿಸಿದೆ. ರಿಟ್ ಅರ್ಜಿಗಳ ಬ್ಯಾಚ್ ಅನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ಪ್ರಸಾದ್, ಗ್ರಾಹಕರು ಇಎಂಐ ಪಾವತಿಸಲು ಡೀಫಾಲ್ಟ್ ಮಾಡಿದರೆ ವಾಹನವನ್ನು ವಶಪಡಿಸಿಕೊಳ್ಳಲು ಬ್ಯಾಂಕ್ ಗಳು ಮತ್ತು ಹಣಕಾಸು ಕಂಪನಿಗಳು ರಿಕವರಿ ಏಜೆಂಟ್ ಗಳ ಸೇವೆಗಳನ್ನು ಬಳಸಲಾಗುವುದಿಲ್ಲ ಎಂದು ಆದೇಶ ನೀಡಲಾಗಿದೆ

Categories
ತೀರ್ಥಹಳ್ಳಿ

ತೀರ್ಥಹಳ್ಳಿ: ಮನೆಯ ರೂಮಲ್ಲಿ ಬೆಂಕಿಗೆ ಮೂವರು ಬಲಿ, ಓರ್ವ ಗಂಭೀರ!

ತೀರ್ಥಹಳ್ಳಿ: ಮನೆಯ ರೂಮಲ್ಲಿ ಬೆಂಕಿಗೆ ಮೂವರು ಬಲಿ, ಓರ್ವ ಗಂಭೀರ!
– ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಸಮೀಪ ಕೆಕೋಡ್ ಎಂಬಲ್ಲಿ ಘಟನೆ
– ಒಬ್ಬರನ್ನು ಒಬ್ಬರು ಹಿಡಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಬೆಂಕಿಯ ಕೆನ್ನಾಲಿಗೆಗೆ ಮೂವರು ಸಜೀವ ದಹನವಾಗಿದ್ದಾರೆ. ಇನ್ನೋರ್ವ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆ ಆತ್ಮಹತ್ಯೆಯೋ ಆಕಸ್ಮಿಕವೋ ಇನ್ನು ತಿಳಿದು ಬರಬೇಕಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಸಮೀಪ ಕೆಕೋಡ್ ಎಂಬಲ್ಲಿ ಘಟನೆ ನಡೆದಿದೆ. ಈ ಬೆಂಕಿ ದುರಂತದಲ್ಲಿ ಕುಟುಂಬದ ಹಿರಿಯರಾದ ಅರ್ಚಕ ವೃತ್ತಿಯಲ್ಲಿದ್ದ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನ (55), ಹಿರಿಯ ಪುತ್ರ ಶ್ರೀರಾಮ್ (30) ಸಾವನ್ನಪ್ಪಿದ್ದಾರೆ. ಇನ್ನೋರ್ವ ಪುತ್ರ ಭರತ್ (28) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ಭರತ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ ಘಟನೆ ನೂರೆಂಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಆರ್. ಸಿ ಸಿಮನೆಯ ಒಳಗಿನ ಕೋಣೆಯೊಳಗೆ ಕಟ್ಟಿಗೆಗಳನ್ನು ಹಾಗೂ ಮನೆಯ ಎಲ್ಲಾ ವಸ್ತುಗಳನ್ನು ಒಂದೇ ಕಡೆ ಇಟ್ಟುಕೊಂಡು, ಒಟ್ಟಿಗೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿಯಿಲ್ಲ. ಏನಾಗಿದೆ ಎಂಬುದರ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟತೆ ನೀಡಬೇಕಿದೆ.

ಶಾಸಕರು ಸೇರಿ ನೂರಾರು ಮಂದಿ ಭೇಟಿ

ಎಲ್ಲರೂ ಹಿಡಿದುಕೊಂಡು ಆತ್ಮಹತ್ಯೆಗೆ ಮುಂದಾದರೇ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಜಾಗದಲ್ಲಿ ನೂರಾರು ಮಂದಿ ಸೇರಿದ್ದು ಶಾಸಕ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಚಂದವಳ್ಳಿ ಸೋಮಶೇಖರ್, ಕುಕ್ಕೆ ಪ್ರಶಾಂತ್ ಸೇರಿ ಅನೇಕರು ಸ್ಥಳದಲ್ಲಿದ್ದಾರೆ.

Categories
ತೀರ್ಥಹಳ್ಳಿ ಮಲ್ನಾಡ್

ಮಲೆನಾಡಿನ ತಾಲೂಕುಗಳಲ್ಲಿ ನೆಟ್ವರ್ಕ್ ಡಮಾರ್!

ಮಲೆನಾಡಿನ ತಾಲೂಕುಗಳಲ್ಲಿ ನೆಟ್ವರ್ಕ್ ಡಮಾರ್!
– ಬಿಎಸ್ಎನ್ಎಲ್,ಜಿಯೋ , ಏರ್ಟೆಲ್ ಎಲ್ಲಾ ನೆಟ್ವರ್ಕ್ ಸಮಸ್ಯೆ
– ಪಟ್ಟಣದಲ್ಲೂ ಕೂಡ ನೆಟ್ವರ್ಕ್ ಇಲ್ಲ: ಗ್ರಾಹಕರ ಆಕ್ರೋಶ

NAMMUR EXPRESS NEWS
ತೀರ್ಥಹಳ್ಳಿ/ ಶೃಂಗೇರಿ: ಮಲೆನಾಡಿನ ಪ್ರತಿಯೊಂದು ತಾಲೂಕುಗಳಲ್ಲಿ ಹಳ್ಳಿ ಹಳ್ಳಿಗಳಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ ಹಳ್ಳಿಗಳಲ್ಲಂತೂ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಹೆಚ್ಚಾಗಿದೆ ಒಬ್ಬರಿಂದ ಒಬ್ಬರಿಗೆ ಕರೆ ಮಾಡಬೇಕು ಅಥವಾ ಯಾವುದಾದರೂ ತೊಂದರೆಯನ್ನು ಎದುರಿಸುತ್ತಾ ಆರೋಗ್ಯದ ಸಮಸ್ಯೆ ಆಗಿರಬಹುದು ಬೇರೆ ಬೇರೆ ಸಮಸ್ಯೆಗಳು ಇದ್ದರೆ ಅಂತವರಿಗೆ ನಾವು ಏನಾದರೂ ಕರೆ ಮಾಡಬೇಕು ಎಂದರೆ ಈ ನೆಟ್ವರ್ಕ್ಗಳ ಸಮಸ್ಯೆಯಿಂದ ತುಂಬಾ ತೊಂದರೆಗಳು ಎದುರಾಗುತ್ತವೆ.

ಕೆಲವೊಂದಿಷ್ಟು ಭಾಗಗಳಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್, ಜಿಯೋ ನೆಟ್ವರ್ಕ್ ಮತ್ತು ಏರ್ಟೆಲ್ ನೆಟ್ವರ್ಕ್ ಸಮಸ್ಯೆಗಳಿಂದ ಜನರು ಪರದಾಡುವಂತಹ ಪರಿಸ್ಥಿತಿಗಳು ಬಂದುಬಿಟ್ಟಿದೆ. ಹಾಗೆಯೇ ತಾಲೂಕುಗಳಲ್ಲೂ ಕೂಡ ಪಟ್ಟಣಗಳಲ್ಲಂತೂ ನೆಟ್ವರ್ಕ್ ಇಲ್ಲದಂತಹ ಪರಿಸ್ಥಿತಿ ಬಂದಿದೆ. ನೆಟ್ವರ್ಕ್ ಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಇಲ್ಲಿರುವಂತಹ ಟವರ್ ಗಳು ಕೂಡ ಯಾವುದು ಸಂಪರ್ಕ ಇಲ್ಲದಂತಾಗಿದೆ. ಇದರಿಂದ ಜನರು ತುಂಬಾ ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಇದರ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂಬುದು ಜನರ ಆಕ್ರೋಶವಾಗಿದೆ.

ಹೊಸನಗರದಲ್ಲಿ ನೆಟ್ವರ್ಕ್ ಇಲ್ಲವೇ ಇಲ್ಲ!

ಹೊಸನಗರ ತಾಲೂಕಲ್ಲಿ ನೆಟ್ವರ್ಕ್ ಇಲ್ಲದೆ ಜನ ರೋಸಿ ಹೋಗಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ನೆಟ್ವರ್ಕ್ ಸಿಗದೆ ಜನ ಪರದಾಟ ನಡೆಸುತ್ತಿದ್ದಾರೆ. ಸರ್ಕಾರ, ಜನ ಪ್ರತಿನಿಧಿಗಳು ಈ ಬಗ್ಗೆ ಗಮನಿಸಬೇಕಿದೆ.

Categories
ಬೆಂಗಳೂರು

ರಾಜಧಾನಿ ಪಟಾಕಿ ಅವಘಡಕ್ಕೆ 12 ಮಂದಿ ಬಲಿ!

ರಾಜಧಾನಿ ಪಟಾಕಿ ಅವಘಡಕ್ಕೆ 12 ಮಂದಿ ಬಲಿ!
– ಆನೇಕಲ್ ತಾಲೂಕು ಅತ್ತಿಬೆಲೆ ಪಟಾಕಿ ಅಂಗಡಿಯಲ್ಲಿ ಘಟನೆ
– ಸಾವಿನ ಸಂಖ್ಯೆ ಹೆಚ್ಚಳ: ಸ್ಥಳಕ್ಕೆ ಪೊಲೀಸ್ ತಂಡ

NAMMUR EXPRESS NEWS
ಬೆಂಗಳೂರು: ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಕಿ ಮಳಿಗೆ ಒಂದರಲ್ಲಿ ಸಂಭವಿಸಿದ ಭಾರೀಬೆಂಕಿ ಅವಘಡದಲ್ಲಿ ಈವರೆಗೆ 12 ಮಂದಿ ಸಜೀವ ದಹನ ಆಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟು 20 ಕಾರ್ಮಿಕರ ಪೈಕಿ ನಾಲ್ವರು ಪಾರಾಗಿದ್ದಾರೆ. ಅವರಲ್ಲಿ 12 ಜನ ಮೃತಪಟ್ಟಿದ್ದು, ಉಳಿದವರಿಗಾಗಿ ಹುಡುಕಾಟ ಮುಂದುವರೆದಿದೆ. ಪಟಾಕಿ ಮಳಿಗೆಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಪಟಾಕಿ ಮಳಿಗೆ ಹೊತ್ತಿ ಉರಿದಿದೆ. ಬಾನೆತ್ತರಕ್ಕೆ ಬೆಂಕಿಯ ಹೊಗೆ ಆವರಿಸಿದ್ದು, ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಕರ್ನಾಟಕ ತಮಿಳುನಾಡು ಗಡಿಯ ಅತ್ತಿಬೆಲೆ ಬಳಿಯ ಬಾಲಾಜಿ ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಕಸ್ಮಿಕವಾಗಿ ಬೆಂಕಿ ತಗುಲಿದ್ದು, ವಾಹನದಿಂದ ಪಟಾಕಿ ಆನ್‌ಲೋಡ್ ಮಾಡುವಾಗ ದುರ್ಘಟನೆ ನಡೆದಿದ್ದು, ಗೋಡನ್ ವರೆಗೂ ವ್ಯಾಪಿಸಿ ಬೆಂಕಿ ಜ್ವಾಲೆ ಹೆಚ್ಚಾಗಿದೆ. ಎರಡು ವಾಹನಗಳು ಸುಟ್ಟು ಕರಕಲಾಗಿದ್ದು, ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ 6 ಜಿಲ್ಲಾ ಪಂಚಾಯತ್, 13 ತಾಲೂಕು ಪಂಚಾಯತ್

ತೀರ್ಥಹಳ್ಳಿಯಲ್ಲಿ 6 ಜಿಲ್ಲಾ ಪಂಚಾಯತ್, 13 ತಾಲೂಕು ಪಂಚಾಯತ್
– ಗರಿಗೆದರಿದ ರಾಜಕೀಯ : ಯಾರಿಗೆ ಸಿಗುತ್ತೆ ಸೀಟು? ಯಾರಿಗೆ ಸಿಗುತ್ತೆ ಮೀಸಲಾತಿ
– ಹಳ್ಳಿ ಹಳ್ಳಿಯಲ್ಲೂ ರಾಜಕೀಯ ಚುರುಕು

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನಲ್ಲಿ ವಿಧಾನಸಭಾ ಚುನಾವಣೆ ಈಗಾಗಲೇ ಮುಗಿದಿದೆ. ಇನ್ನೂ ಲೋಕಸಭೆ ಚುನಾವಣೆಗೆ ಈಗ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯ ರಂಗು ಗರಿಗೆದರಿದೆ. ಈಗಾಗಲೇ ಸರ್ಕಾರ ಮತ್ತು ಚುನಾವಣೆ ಆಯೋಗ ಚುನಾವಣೆ ನಡೆಸಲು ಸಿದ್ದತೆಯನ್ನ ನಡೆಸಿದ್ದು ಕ್ಷೇತ್ರ ಪುನರ್ ವಿಂಗಡಣೆ ಜೊತೆಗೆ ಮತದಾನ ಪಟ್ಟಿಯನ್ನು ಅಂತಿಮಗೊಳಿಸುತ್ತಿದೆ. ಈ ನಡುವೆ ತೀರ್ಥಹಳ್ಳಿಗೆ ಈ ಬಾರಿ 2 ಜಿಲ್ಲಾ ಪಂಚಾಯತ್ ಸ್ಥಾನವನ್ನು ಹೆಚ್ಚುವರಿಯಾಗಿ ನೀಡಿದ್ದು. 13 ತಾಲೂಕ್ ಪಂಚಾಯತ್ ಸ್ಥಾನವನ್ನು ನೀಡಲಾಗಿದೆ, ಒಟ್ಟು 6 ಜಿಲ್ಲಾ ಪಂಚಾಯತ್ ಸ್ಥಾನವು ತೀರ್ಥಹಳ್ಳಿಗೆ ಲಭಿಸಿದೆ. ಹೀಗಾಗಿ ಯಾರಿಗೆ ಮೀಸಲಾತಿ ಬರುತ್ತೆ, ಯಾವ ಯಾವ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಯಾರಿಗೆ ಸ್ಥಾನ ಸಿಗುತ್ತೆ. ತಾಲೂಕ್ ಪಂಚಾಯಿತಿಗಳಲ್ಲಿ ಯಾರಿಗೆ ಅವಕಾಶ ಆಗುತ್ತೆ ಎಂದು ಈಗಾಗಲೇ ಮುಖಂಡರು ಕಾದು ಕುಳಿತಿದ್ದಾರೆ.

ಒಂದೇ ಕುರ್ಚಿಗೆ ಮ್ಯೂಸಿಕಲ್ ಚೇರ್!

ಮೀಸಲಾತಿ ಪ್ರಕಟವಾದರೆ ಭರ್ಜರಿ ಸಿದ್ಧತೆ ನಡೆಯಲಿದ್ದು, ಒಂದೇ ಕ್ಷೇತ್ರಕ್ಕೆ ಹತ್ತಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಇದ್ದಾರೆ. ಹೀಗಾಗಿ ರಾಜಕೀಯದಲ್ಲಿ ತೀರ್ಥಹಳ್ಳಿ ರಾಜಕೀಯದಲ್ಲಿ ಈಗಾಗಲೇ ಬಿರುಸಿನ ಚಟುವಟಿಕೆ ನಡೆಯುತ್ತಿದೆ.

Categories
ತೀರ್ಥಹಳ್ಳಿ ಶಿವಮೊಗ್ಗ

ಅರ್.ಎಂ ಮನೆಗೆ ಕಿಮ್ಮನೆ ಭೇಟಿ!

ಅರ್.ಎಂ ಮನೆಗೆ ಕಿಮ್ಮನೆ ಭೇಟಿ!
– ಮಂಜುನಾಥ ಗೌಡ ಪತ್ನಿ ಅರೋಗ್ಯ ವಿಚಾರಣೆ
– ದಾಳಿ ಮಾಡಿ ಖಾಲಿ ಕೈಯಲ್ಲಿ ಹೋದ್ರಾ ಇಡಿ?

NAMMUR EXPRESS NEWS
ಶಿವಮೊಗ್ಗ/ ತೀರ್ಥಹಳ್ಳಿ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಕಾಂಗ್ರೆಸ್ ನಾಯಕರಾದ ಡಾ ಆರ್ ಎಂ ಮಂಜುನಾಥ ಗೌಡ ಅವರ ಕರಕುಚ್ಚಿ ನಿವಾಸಕ್ಕೆ ಮಾಜಿ ಶಿಕ್ಷಣ ಸಚಿವ, ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಮಂಜುನಾಥ ಗೌಡ ಪತ್ನಿ ಆಶಾ ಮಂಜುನಾಥ ಗೌಡ ಅವರ ಜತೆ ಮಾತುಕತೆ ನಡೆಸಿದರು. ಈ ವೇಳೆ ಕಲ್ಲುಕೊಪ್ಪ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ, ಕರಕುಚ್ಚಿ ಲೋಕೇಶ್ ಮೇಲಿನಕುರುವಳ್ಳಿ ಗ್ರಾ ಪ ಅಧ್ಯಕ್ಷರಾದ ಬಂಡೆ ವೆಂಕಟೇಶ್, ಕಾಂಗ್ರೆಸ್ ಮುಖಂಡರು ಹಣಗೆರೆ ಗ್ರಾಪಂ ಮಾಜಿ ಅಧ್ಯಕ್ಷರಾದ ಕೆರೆಹಳ್ಳಿ ರಾಮಪ್ಪ ಅವರು ಇದ್ದರು.

ಖಾಲಿ ಕೈಯಲ್ಲಿ ಹೋದ್ರಾ ಇಡಿ?

ಮಂಜುನಾಥ ಗೌಡ ಅವರ ಕರಕುಚ್ಚಿ, ಶಿವಮೊಗ್ಗ, ತೀರ್ಥಹಳ್ಳಿ ಬೆಂಗಳೂರು ಮನೆಗಳ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ಖಾಲಿ ಕೈ ಅಲ್ಲಿ ಹೋಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಶಿಕ್ಷಣ ಇಲಾಖೆ ರಾಜ್ಯಕ್ಕೆ ಮಾದರಿ!

ತೀರ್ಥಹಳ್ಳಿ ಶಿಕ್ಷಣ ಇಲಾಖೆ ರಾಜ್ಯಕ್ಕೆ ಮಾದರಿ!
– 8ನೇ ತರಗತಿ ವಿದ್ಯಾರ್ಥಿಗಳಿಗೆ ಎನ್ಎಂಎಂಎಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ
– ದಸರಾ ರಜೆಯ 3 ದಿನ ವಿಶೇಷ ತರಬೇತಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಈ ಬಾರಿ ದಸರಾ ರಜೆಯ ಮೊದಲ ಮೂರು ದಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಎನ್ಎಂಎಂಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಮೊದಲನೇ ಹಂತದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದೆ.  ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಗಳಿಸಿ, ವಿಷಯವಾರು ಗುಣಮಟ್ಟದ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಅತ್ಯುನ್ನತ ಶ್ರೇಣಿಯನ್ನು ಪಡೆದಿರುವ ತೀರ್ಥಹಳ್ಳಿ ತಾಲೂಕಿನ ಶಿಕ್ಷಣ ಇಲಾಖೆ ಇದೀಗ ಮತ್ತೊಂದು ಸಾಧನೆಗೆ ಮುನ್ನುಡಿ ಬರೆಯಲು ಹೊರಟಿದೆ.

ತೀರ್ಥಹಳ್ಳಿಯ ಶಾಲಾ ಶಿಕ್ಷಣ ಇಲಾಖೆಯ ಉತ್ಸಾಹಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ತಾಲೂಕಿನ 8ನೇ ತರಗತಿ ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರೌಢ ಶಾಲೆಗಳಲ್ಲಿ ನೋಂದಣಿ ಮಾಡಿಸಿ ಆ ಎಲ್ಲ ವಿದ್ಯಾರ್ಥಿಗಳಿಗೆ ತಾಲೂಕಿನ ಸಂಪನ್ಮೂಲ ಪ್ರೌಢಶಾಲಾ ಸಹ ಶಿಕ್ಷಕರಿಂದ ತರಬೇತಿ ಕಾರ್ಯಗಾರವನ್ನು ಆಯೋಜಿಸಿ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಉತ್ತೀರ್ಣರಾಗುವ ಮೂಲಕ ಯಶಸ್ವಿಯಾಗಲು ಯೋಜನೆ ರೂಪಿಸಿ ಈಗಾಗಲೇ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಜೊತೆ ಸಮಾಲೋಚನಾ ಸಭೆ ನಡೆಸಿ ಶಿಕ್ಷಕರ ಸಹಮತವನ್ನು ಪಡೆದುಕೊಂಡಿದ್ದಾರೆ. ಭೌಗೋಳಿಕ ಪ್ರದೇಶಗಳಿಗೆ ತಕ್ಕಂತೆ ಹೋಬಳಿವಾರು ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಮೇಗರವಳ್ಳಿ, ತೀರ್ಥಹಳ್ಳಿ, ಕೋಣಂದೂರು, ಕಟ್ಟೆ ಹಕ್ಕಲು ,ಮಾಳುರು ಪದವಿಪೂರ್ವ ಕಾಲೇಜುಗಳ ಪ್ರೌಢಶಾಲಾ ವಿಭಾಗದಲ್ಲಿ ತರಬೇತಿ ನಡೆಯಲಿದೆ.

ಏನಿದು ಎನ್.ಎಂ.ಎಂ.ಎಸ್ ಪರೀಕ್ಷೆ ?

ನ್ಯಾಷನಲ್ ಮೀನ್ಸ್- ಕಮ್- ಮೆರಿಟ್ ವಿದ್ಯಾರ್ಥಿವೇತನ ಪರೀಕ್ಷೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಈ ಪರೀಕ್ಷೆಯನ್ನು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಪ್ರತಿ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ,ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಯ ಶಾಲೆಗಳಲ್ಲಿ 8 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಗುವುದು.
ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ 9ನೇ ತರಗತಿಯಿಂದ ಪ್ರತಿ ತಿಂಗಳಿಗೆ ರೂ 1000ದಂತೆ ವರ್ಷಕ್ಕೆ 12 ಸಾವಿರ ರೂ ಗಳಂತೆ ದ್ವಿತೀಯ ಪಿಯುಸಿವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಏಳನೇ ತರಗತಿಯಲ್ಲಿ ಶೇಕಡ 55 ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿ ಮತ್ತು ಅವರ ಪೋಷಕರ ಆದಾಯ ಎಲ್ಲಾ ಮೂಲಗಳಿಂದ ವಾರ್ಷಿಕ ವರಮಾನ 3.5 ಲಕ್ಷ ಮೀರಿರದ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ಪರೀಕ್ಷೆಯ ಸ್ವರೂಪ ಹೇಗಿರುತ್ತದೆ..?

ಈ ಪರೀಕ್ಷೆಯಲ್ಲಿ ಎರಡು ಪ್ರಶ್ನೆ ಪತ್ರಿಕೆಗಳಿದ್ದು ಮಾನಸಿಕ ಸಾಮರ್ಥ್ಯ ಪರೀಕ್ಷೆ ಮತ್ತು ವ್ಯಾಸಂಗ ಪ್ರವೃತ್ತಿ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಎಂಟನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಲು ಈ ಪರೀಕ್ಷೆ ನಡೆಯುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ವಿದ್ಯಾರ್ಥಿ ವೇತನದ ಮೂಲಕ ಪ್ರೇರೇಪಿಸಲಾಗುತ್ತದೆ.

ಡಿ.17ಕ್ಕೆ ಪರೀಕ್ಷೆ ಮಾಡಲು ಸಿದ್ಧತೆ

ಡಿಸೆಂಬರ್ 17ರ ಭಾನುವಾರದಂದು ಈ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಿದ್ಧತೆಗಾಗಿ ಅಕ್ಟೋಬರ್ 8 ರಿಂದ 3 ದಿನಗಳ ಮೊದಲ ಹಂತದ ತರಬೇತಿ ಕಾರ್ಯಗಾರ ನಡೆಯಲಿದ್ದು ದಸರಾ ರಜೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಲು ಅಣಿಗೊಳಿಸಲಾಗುತ್ತದೆ. ತಾಲೂಕಿನ ಶಾಲಾ ಶಿಕ್ಷಣ ಇಲಾಖೆಯು ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಎರಡು ಮೂರು ಹಂತದಲ್ಲಿ ತರಬೇತಿ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು.

ನೋಂದಣಿ ಕಡ್ಡಾಯ
ಈ ಕೋಚಿಂಗ್ ಕ್ಲಾಸ್ ಗಳನ್ನು ನುರಿತ ಶಿಕ್ಷಕರಿಂದ ಆಯೋಜನೆ ಮಾಡಲಾಗಿದ್ದು ಈ ಪರೀಕ್ಷೆಗೆ ತಾಲೂಕಿನ ಎಲ್ಲ ನೊಂದಾಯಿಸಿದ ಮಕ್ಕಳು ಕಡ್ಡಾಯವಾಗಿ ಹಾಜರಾಗುವಂತೆ ಪೋಷಕರು ಸಹಕರಿಸುವಂತೆ ಕೋರಿದೆ.

ಗಣೇಶ್
ಕ್ಷೇತ್ರ ಶಿಕ್ಷಣಾಧಿಕಾರಿಗಳು,
ತೀರ್ಥಹಳ್ಳಿ ತಾಲೂಕು