Categories
ಶೃಂಗೇರಿ

ಕಿಗ್ಗಾ ಸಮೀಪ ಭೀಕರ ರಸ್ತೆ ಅಪಘಾತ,ವಿದ್ಯಾರ್ಥಿನಿ ಸಾವು

ಕಿಗ್ಗಾ ಸಮೀಪ ಭೀಕರ ರಸ್ತೆ ಅಪಘಾತ,ವಿದ್ಯಾರ್ಥಿನಿ ಸಾವು

* ಕಾರ್‌ಗೆ ಹಿಂದಿನಿಂದ ಗುದ್ದಿದ ಬೈಕ್,ರಸ್ತೆಗೆ ಬಿದ್ದ ವಿದ್ಯಾರ್ಥಿನಿ
* ತಂಗಿಯನ್ನು ಹಾಸ್ಟೆಲ್‌ಗೆ ಬಿಡಲು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ ಸಹೋದರ

NAMMMUR EXPRESS NEWS
ಶೃಂಗೇರಿ: ತಾಲೂಕಿನ ಮರ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಂಡಘಟ್ಟ ಗಣಪತಿಕಟ್ಟೆ ಮಧ್ಯೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಕಾಲೇಜು ಪ್ರಾರಂಭ ಹಿನ್ನೆಲೆ ತನ್ನ ತಂಗಿಯನ್ನು ಹಾಸ್ಟೆಲ್‌ಗೆ ಬಿಡುವ ಸಲುವಾಗಿ ಬೈಕ್‌ನಲ್ಲಿ ಸಹೋದರ ಕರೆದುಕೊಂಡು ಹೋಗುವಾಗ ಬೈಕ್ ಕಾರ್‌ವೊಂದಕ್ಕೆ ಹಿಂದಿನಿಂದ ಗುದ್ದಿದೆ ಈ ಸಂದರ್ಭ ಬೈಕ್‌ ಸವಾರ ಧಿಡೀರ್ ಬ್ರೇಕ್ ಹೊಡೆದಿದ್ದಾನೆ,ಪರಿಣಾಮ ಬೈಕ್‌ನ ಹಿಂದೆ ಕೂತಿದ್ದ ವಿದ್ಯಾರ್ಥಿನಿ ರಕ್ಷಿತಾ(17) ಚಿಮ್ಮಿ ರಸ್ತೆಗೆ ಬಿದ್ದಿದ್ದಾಳೆ. ರಸ್ತೆಗೆ ಬಿದ್ದ ರಕ್ಷಿತಾ‌ಗೆ ಗಂಭೀರ ಗಾಯವಾಗಿ ರಕ್ತ ಸುರಿದಿದೆ.ತಕ್ಷಣ ಆಸ್ಪತ್ರೆ ಕರೆದುಕೊಂಡು ಹೋದರಾದರೂ ವಿದ್ಯಾರ್ಥಿನಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಮರ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿತ್ತಲುಮನೆಕೊಡಿಗೆ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ತಪ್ಪೂ ಮಾಡದೆ,ಓದಿ ಕೆಲಸ ಸೇರಿ ಬದುಕಿ ಬಾಳ ಬೇಕಾದ ಯುವತಿಯ ಈ ಸಾವು ಸ್ಥಳೀಯರಲ್ಲಿ ತೀವ್ರ ಬೇಸರವನ್ನುಂಟುಮಾಡಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಪಂಜಾಬ್ ಫೈನಲ್‌ಗೆ ಎಂಟ್ರಿ,ಮುಂಬೈ ಮನೆಗೆ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಫೋರ್ಟ್ಸ್ ನ್ಯೂಸ್

ಐಪಿಎಲ್ -2025
* ಪಂಜಾಬ್ ಫೈನಲ್‌ಗೆ ಎಂಟ್ರಿ,ಮುಂಬೈ ಮನೆಗೆ
* ನಾಳೆ ಆರ್‌ಸಿಬಿ ಮತ್ತು ಪಂಜಾಬ್ ತಂಡಗಳ ನಡುವೆ ಫೈನಲ್ ಹಣಾಹಣಿ

NAMMMUR EXPRESS SPORTS NEWS
ಅಹಮದಾಬಾದ್: ಐಪಿಎಲ್ ಸೀಸನ್ 18 ರ ಕ್ವಾಲಿಫೈರ್​-2 ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಮುಂಬೈ ಇಂಡಿಯನ್ಸ್​ ತಂಡವನ್ನು ಮಣಿಸಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿತು.
ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದಿದ್ದ ಮಾಡು ಇಲ್ಲ ಮಡಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಮ್ಮ ಶಕ್ತಿಯನ್ನು ಪ್ರದರ್ಶಿಸಿತು. ನಾಯಕ ಶ್ರೇಯಸ್ ಅಯ್ಯರ್ (81*) ಭರ್ಜರಿ ಪ್ರದರ್ಶನದಿಂದಾಗಿ ತಂಡವು ಐಪಿಎಲ್ 2025ರ ಫೈನಲ್‌ಗೆ ಎಂಟ್ರಿ ಪಡೆದುಕೊಂಡಿದೆ.
ಮುಂಬೈ ನೀಡಿದ ಗುರಿಯನ್ನು ಬೆನ್ನತ್ತಿದ ಪಂಜಾಬ್​ ಆರಂಭಿಕ ಆಘಾತ ಎದುರಾಯ್ತು. ಪ್ರಭ್ಸಿಮ್ರಾನ್ 6 ರನ್‌ಗಳಿಸಿ ಪೆವಿಲಿಯನ್ ಸೇರಿದರು. ಆದರು ಪಂಜಾಬ್ ಆತ್ಮವಿಶ್ವಾಸದೊಂದಿಗೆ ಆಟವಾಡಿತು. ಬಳಿಕ ಇಂಗ್ಲಿಸ್ (38) ಕೆಲವು ಅದ್ಭುತ ಹೊಡೆತಗಳೊಂದಿಗೆ ಫ್ಯಾನ್ಸ್​ಗಳನ್ನು ರಂಜಿಸಿದರು. ಪ್ರಿಯಾಂಶ್ ಆರ್ಯ (20) ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಅಶ್ವನಿ ಬೌಲಿಂಗ್‌ನಲ್ಲಿ ವಿಕೆಟ್​ ಒಪ್ಪಿಸಿ ಹೊರ ನಡೆದರು. ಆರನೇ ಓವರ್‌ನಲ್ಲಿ ಅವರು ಔಟಾದಾಗ ಪಂಜಾಬ್ ಸ್ಕೋರ್ 55 ಆಗಿತ್ತು. ಎಂಟನೇ ಓವರ್‌ನಲ್ಲಿ ಇಂಗ್ಲಿಸ್ ಕೂಡ ಔಟಾದರೂ. ಈ ವೇಳೆ ಶ್ರೇಯಸ್ ಮತ್ತು ನೆಹಾಲ್ ವಧೇರಾ ಉತ್ತಮ ಬ್ಯಾಟಿಂಗ್ ಮೂಲಕ ಪಂಜಾಬ್ ತಂಡದ ಫೈನಲ್​ ಆಸೆಯನ್ನು ಜೀವಂತವಾಗಿರಿಸಿದರು.
ಪಂಜಾಬ್ 15 ಓವರ್‌ಗಳಲ್ಲಿ 147/3 ಸ್ಕೋರ್ ದಾಖಲಿಸಿ ಗೆಲುವಿನತ್ತ ಸಾಗುವ ಲಕ್ಷಣ ಕಾಣುತ್ತಿತ್ತು. ಆದರೆ ಮುಂದಿನ ಓವರ್‌ನಲ್ಲಿ ವಧೇರಾ ಔಟಾದರೂ ಮತ್ತು 17ನೇ ಓವರ್‌ನಲ್ಲಿ ಶಶಾಂಕ್ ಸಿಂಗ್​ ಕೂಡ ರನೌಟ್ ಬಲೆಗೆ ಬಿದ್ದರು. ಆದರೆ ಶ್ರೇಯಸ್ ಆತ್ಮವಿಶ್ವಾಸ ಕಳೆದುಕೊಳ್ಳದೆ ಬ್ಯಾಟಿಂಗ್ ಮುಂದುವರಿಸಿ ಪಂಜಾಬ್ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಕೊನೆಯ ಎರಡು ಓವರ್‌ಗಳಲ್ಲಿ ಪಂಜಾಬ್‌ ಗೆಲುವಿಗೆ 23 ರನ್‌ಗಳು ಬೇಕಾಗಿದ್ದವು. ಈ ವೇಳೆ ಅಯ್ಯರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಕೇವಲ ಆರು ಎಸೆತಗಳಲ್ಲಿ ಗೆಲುವನ್ನು ಖಚಿತ ಪಡಿಸಿದರು.
ಇದಕ್ಕೂ ಮೊದಲು, ಟಾಸ್ ಸೋತು ಬ್ಯಾಟಿಂಗ್​ ಮಾಡಿದ್ದ ಮುಂಬೈ ಪರ ಆರಂಭಿಕ ಆಟಗಾರ ಬೈರ್‌ಸ್ಟೋವ್ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದರು. ಅವರು ಅದ್ಭುತ ಇನ್ನಿಂಗ್ಸ್ ಮೂಲಕ ತಂಡಕ್ಕೆ ಬಲವಾದ ಅಡಿಪಾಯ ಹಾಕಿದರು. ಆದರೆ, ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಮತ್ತೊಬ್ಬ ಆರಂಭಿಕ ಆಟಗಾರ ರೋಹಿತ್ ಶರ್ಮಾ (8) ಈ ಬಾರಿ ಬೇಗನೆ ಪೆವಿಲಿಯನ್​ ಸೇರಿದರು.
ರೋಹಿತ್ ನಿರ್ಗಮನವು ಬೈರ್‌ಸ್ಟೋವ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅವರು ತಮ್ಮ ಆಕ್ರಮಣಕಾರಿ ಆಟದ ಮೂಲಕ ತಂಡದ ಸ್ಕೋರ್ ವೇಗವನ್ನು ಹೆಚ್ಚಿಸಿದರು. ಪವರ್‌ಪ್ಲೇ ಅಂತ್ಯದ ವೇಳೆಗೆ ಮುಂಬೈ ಸ್ಕೋರ್ 65/1 ಆಗಿತ್ತು.ಏಳನೇ ಓವರ್‌ನಲ್ಲಿ ಅಪಾಯಕಾರಿ ಬೈರ್‌ಸ್ಟೋವ್ ಅವರನ್ನು ಔಟ್ ಮಾಡುವ ಮೂಲಕ ವೈಶಾಖ್ ಮುಂಬೈಗೆ ಕೊಂಚ ಹಿನ್ನಡೆ ಉಂಟುಮಾಡಿದರು. ಬಳಿಕ ತಿಲಕ್​ ವರ್ಮಾ (44), ಸೂರ್ಯಕುಮಾರ್​ ಯಾದವ್​ (44) ನಮನ್​ಧೀರ್ (37) ಬ್ಯಾಟಿಂಗ್​ ಸಹಾಯದಿಂದ ಮುಂಬೈ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 203 ರನ್​ ಕಲೆಹಾಕಿತು.
ನಾಳೆ ಆರ್​ಸಿಬಿ ಮತ್ತು ಪಂಜಾಬ್​ ತಂಡಗಳು ಫೈನಲ್​ನಲ್ಲಿ ಮುಖಾಮುಖಿ ಆಗಲಿವೆ. ಎರಡೂ ತಂಡಗಳು ಚೊಚ್ಚಲ ಟ್ರೋಫಿಗಾಗಿ ಸೆಣಸಾಡಲಿವೆ.ಆರ್​ಸಿಬಿ ಟ್ರೋಫಿ ಗೆಲ್ಲುವ ಫೆವರೀಟ್​ ತಂಡವಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಚರ್ಚ್ ಅಲ್ಲಿ 125ನೇ ವರ್ಷದ ಸಂಭ್ರಮ!

ತೀರ್ಥಹಳ್ಳಿ ಚರ್ಚ್ ಅಲ್ಲಿ 125ನೇ ವರ್ಷದ ಸಂಭ್ರಮ!
– ಪ್ರತಿಭಾ ಪುರಸ್ಕಾರ ಹಾಗೂ‘ಕಾರ್ಮಿಕರ ಹಾಗೂ ಪುರುಷರ ಜ್ಯೂಬಿಲಿ’ ಆಚರಣೆ ಕಾರ್ಯಕ್ರಮ.
– ಶೀಘ್ರದಲ್ಲೇ ತೀರ್ಥಹಳ್ಳಿಯಲ್ಲಿ ಕಾರ್ಮಿಕರ ಬೆಂಬಲಕ್ಕಾಗಿ ಸಹಾಯ ಕೇಂದ್ರ ಆರಂಭ

NAMMUR EXPRESS NEWS
ತೀರ್ಥಹಳ್ಳಿ: ಪಟ್ಟಣದ ಲೂರ್ದುಮಾತೆಯ ದೇವಾಲಯವು ತನ್ನ 125ನೇ ವರ್ಷದ ಜ್ಯೂಬಿಲಿ ವರ್ಷದ ಆಚರಣೆಯ ಸಂಭ್ರಮದಲ್ಲಿದ್ದು, ವರ್ಷಪೂರ್ತಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಲೂರ್ದುಮಾತೆಯ ದೇವಾಲಯದಲ್ಲಿ ಕಾರ್ಮಿಕರ ಹಾಗೂ ಪುರುಷರ ಜ್ಯೂಬಿಲಿ ದಿನವನ್ನಾಗಿ ಅಚರಿಸಲಾಯಿತು. ಇದೇ ಸಮಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಧರ್ಮಕೇಂದ್ರದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನಡೆಸಲಾಯಿತು.

ದೇವಾಲಯದ ‘ಕಥೋಲಿಕ್ ಅಸೋಸಿಯೇಷನ್’ ಮತ್ತು ‘ಕಾರ್ಮಿಕ ಹಾಗೂ ನ್ಯಾಯನೀತಿ ಆಯೋಗ’ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ‘ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ, ಶಿವಮೊಗ್ಗ’ ಸಂಘಟನೆಯು ಸಹಯೋಗ ನೀಡಿತು. ನಂತರ ಸೆಂಟ್ ಮೇರಿಸ್ ಶಾಲೆಯ ಸಭಾಂಗಣದಲ್ಲಿ ‘ಕಾರ್ಮಿಕರ ಹಾಗೂ ಪುರುಷರ ಜ್ಯೂಬಿಲಿ’ ಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಕಾರ್ಮಿಕರಿಗೆ ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಲೂರ್ದುಮಾತೆಯ ದೇವಾಲಯದ ಗುರುಗಳಾದ ವೀರೇಶ್ ವಿಕ್ಟರ್ ಮೋರಸ್ ಮಾತನಾಡಿ ಸಭೆಗೆ ಎಷ್ಟು ಜನರು ಬಂದಿದ್ದರು ಎನ್ನುವುದಕ್ಕಿಂತ ಎಷ್ಟು ಜನಕ್ಕೆ ಇದರಿಂದ ಒಳಿತಾಯಿತು ಎನ್ನುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಮಾಹಿತಿ ಕಾರ್ಯಗಾರ ನಡೆಸಿಕೊಟ್ಟ ‘ಕಾರ್ಮಿಕ ಹಾಗೂ ನ್ಯಾಯನೀತಿ ಆಯೋಗ’ ದ ವಿನ್ಸಂಟ್ ಡಿ’ಮೆಲ್ಲೋ ರವರು ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ, ಕಾರ್ಮಿಕ ಇಲಾಖೆ ವತಿಯಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು. ‘ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ, ಶಿವಮೊಗ್ಗ’ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಸುಂದರ್ ಬಾಬು ರವರು, ಕಾರ್ಮಿಕರು ಸಂಘಟಿತರಾಗಬೇಕಾದ ಕುರಿತ ಮಹತ್ವವನ್ನು ತಿಳಿಸಿದರು ಹಾಗೂ ಶೀಘ್ರದಲ್ಲೇ ತೀರ್ಥಹಳ್ಳಿಯಲ್ಲಿ ಕಾರ್ಮಿಕರ ಬೆಂಬಲಕ್ಕಾಗಿ ಸಹಾಯ ಕೇಂದ್ರವನ್ನು ತೆರೆಯುವ ವ್ಯಕ್ತ ಪಡಿಸಿದರು. ಅರ್ಹ ಕಾರ್ಮಿಕರಿಗೆ ಟೂಲ್ ಕಿಟ್, ಮಹಿಳಾ ಮೆಡಿಕಲ್ ಕಿಟ್ ಹಾಗೂ ಕ್ಯಾಲೆಂಡರ್ ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ಮೂಡಬಿದ್ರಿಯ ಎಂ.ಐ.ಟಿ ಯಲ್ಲಿ ಅಸೋಸಿಯೇಟ್ ಪ್ರೊಫೇಸರ್ ಆಗಿರುವ ತೀರ್ಥಹಳ್ಳಿಯವರೇ ಆದ ಡಾ|| ಸಂತೋಷ್ ಶೆಟ್ಟಿಯವರುನ್ನು ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಹಾಯಕ ಗುರುಗಳಾದ ವಂ.ಫಾ|| ಮಿಲ್ಟನ್, ‘ಕಥೋಲಿಕ್ ಅಸೋಸಿಯೇಷನ್’ ಅಧ್ಯಕ್ಷರಾದ ಅನಿಲ್ ಡಿ’ಸೋಜ, ‘ಕಾರ್ಮಿಕ ಹಾಗೂ ನ್ಯಾಯನೀತಿ ಆಯೋಗ’ ದ ಸಂಯೋಜಕರಾದ ಜಯಂತ್ ಡ್ಯಾನಿಯೆಲ್, ಪಾಲನಾ ಪರಿಷತ್ ಕಾರ್ಯದರ್ಶಿಗಳಾದ ಓವಿನ್ ಡಿ’ಸೋಜ, ಪೃಥ್ವಿರಾಜ್ ರೋಡ್ರಿಗಸ್ ಹಾಗೂ ಇತರ ಪದಾಧಿಕಾರಿಗಳು, ‘ಶ್ರಮಶಕ್ತಿ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ-ತೀರ್ಥಹಳ್ಳಿ ಸಂಘಟನೆ’ಯ ಆಧ್ಯಕ್ಷರಾದ ರವಿ, ಕಾರ್ಯದರ್ಶಿಗಳಾದ ವಿನಯ್ ಆಚಾರಿ ಉಪಸ್ಥಿತರಿದ್ದರು.

Categories
ಬೆಂಗಳೂರು

ಗೃಹ ಆರೋಗ್ಯ ಇಂದಿನಿಂದ ರಾಜ್ಯಾದ್ಯಂತ ವಿಸ್ತರಣೆ..!!

ಗೃಹ ಆರೋಗ್ಯ ಇಂದಿನಿಂದ ರಾಜ್ಯಾದ್ಯಂತ ವಿಸ್ತರಣೆ..!! 
– ನಿಮ್ಮ ಮನೆ ಬಾಗಿಲಲ್ಲೇ ಇನ್ನು ಆರೋಗ್ಯ ಪರೀಕ್ಷೆ
– ಪ್ರತಿ ಸಿಬ್ಬಂದಿ, ಪ್ರತಿದಿನ ಸುಮಾರು 15 ಮನೆಗಳ ಪರಿಶೀಲನೆ

NAMMUR EXPRESS NEWS
ಬೆಂಗಳೂರು : ರಾಜ್ಯದಲ್ಲಿ ಮನೆ ಮನೆಗೂ ಭೇಟಿ ನೀಡಿ 30 ವರ್ಷ ಮೇಲ್ಪಟ್ಟವರ ಸಾಂಕ್ರಾಮಿಕ ಅಲ್ಲದ ರೋಗಗಳ ತಪಾಸಣೆ ನಡೆಸುವುದು, ಔಷಧ ವಿತರಣೆ, ಅಗತ್ಯ ಚಿಕಿತ್ಸೆಗೆ ಸಹಕರಿಸುವ ‘ಗೃಹ ಆರೋಗ್ಯ’ ಯೋಜನೆ ಸೋಮವಾರದಿಂದ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಸೋಮವಾರ ವಿಕಾಸಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಜನೆ ಕುರಿತು ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸುವ ಜೊತೆಗೆ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೋಲಾರ ಜಿಲ್ಲೆಯಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ತೀರ್ಮಾನಿಸಲಾಗಿದೆ.

ಗೃಹ ಆರೋಗ್ಯ: ಮನೆ-ಮನೆಗೆ ತೆರಳಿ 30 ವರ್ಷ ಮೇಲ್ಪಟ್ಟವರ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ನಡೆಸಿ ರೋಗ ತಪಾಸಣೆ ಜತೆಗೆ ರೋಗ ಪೀಡಿತರಿಗೆ ಉಚಿತ ಔಷಧ ವಿತರಿಸಲಾಗುವುದು. ಈ ಮೂಲಕ ಅಕಾಲಿಕ ಮರಣ ತಡೆಯುವುದು ಯೋಜನೆಯ ಮುಖ್ಯ ಉದ್ದೇಶ. ಇದಕ್ಕಾಗಿ ಉಚಿತ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ, ಅಂತಹ ರೋಗಿಗಳನ್ನು ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೆ ತಂದು ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಸಹಾಯದಿಂದ ಮನೆ ಬಾಗಿಲಿಗೆ ತೆರಳಿ ತಪಾಸಣೆ ನಡೆಸುತ್ತಾರೆ. ಕಾಯಿಲೆಯನ್ನು ಮೊದಲೇ ಪತ್ತೆ ಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಈ ಕಾರ್ಯಕ್ರಮ ಆರಂಭದ ಹಿಂದಿನ ಉದ್ದೇಶ. ಈ ಕಾರ್ಯಕ್ರಮವನ್ನು ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿ ಮೈಸೂರು ಸೇರಿ ಇತರ ಜಿಲ್ಲೆಗಳಿಗೂ ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

100 ಕೋಟಿ ರು. ವೆಚ್ಚದಲ್ಲಿ ವಿಸ್ತರಣೆ: 2025-26ನೇ ಸಾಲಿನ ಬಜೆಟ್‌ನಲ್ಲಿ ಆರು ಸಾಂಕ್ರಾಮಿಕವಲ್ಲದ ರೋಗಗಳನ್ನು (ಎನ್‌ಸಿಡಿ) ಪರೀಕ್ಷಿಸಲು ಮತ್ತು ಚಿಕಿತ್ಸೆ ನೀಡಲು ರಾಜ್ಯಾದ್ಯಂತ ₹100 ಕೋಟಿ ವೆಚ್ಚದಲ್ಲಿ ‘ಗೃಹ ಆರೋಗ್ಯ’ ಯೋಜನೆ ವಿಸ್ತರಿಸಲು ಪ್ರಸ್ತಾಪಿಸಲಾಗಿತ್ತು. ಇದೀಗ 14 ರೋಗಗಳ ತಪಾಸಣೆಗೆ ನಿರ್ಧರಿಸಲಾಗಿದೆ. ರಾಜ್ಯದ ಜನಸಂಖ್ಯೆಯ ಶೇ.26.9ಕ್ಕೂ ಅಧಿಕ ಮಂದಿ ರಕ್ತದ ಒತ್ತಡ, ಶೇ.15.6 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಜತೆಗೆ ಬಾಯಿ ಕ್ಯಾನ್ಸರ್‌, ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಗ್ರಾಮೀಣ ಸಮುದಾಯಗಳು ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಿರ್ಲಕ್ಷಿಸುತ್ತಿದ್ದು, ಈ ಬಗ್ಗೆ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ 30 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳ ರಕ್ತದೊತ್ತಡ ಮತ್ತು ಮಧುಮೇಹದ ಮಟ್ಟ ಪರಿಶೀಲಿಸುತ್ತಾರೆ. ಪ್ರತಿ ಸಿಬ್ಬಂದಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ಪ್ರತಿದಿನ ಸುಮಾರು 15 ಮನೆಗಳನ್ನು ಪರಿಶೀಲಿಸುತ್ತಾರೆ. ಈ ಭೇಟಿಗಳ ಸಮಯದಲ್ಲಿ ಮೌಖಿಕ, ಗರ್ಭಕಂಠದ ಮತ್ತು ಸ್ತನ ಕ್ಯಾನ್ಸರ್‌ಗಳ ಮೌಲ್ಯಮಾಪನಗಳನ್ನು ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Categories
ಬೆಂಗಳೂರು

ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಸೇವಿಸಿ ಉಗಿದರೆ ಬೀಳುತ್ತೆ ದಂಡ..!!

ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಸೇವಿಸಿ ಉಗಿದರೆ ಬೀಳುತ್ತೆ ದಂಡ..!! 
– 21 ವರ್ಷದೊಳಗಿನವರಿಗೆ ತಂಬಾಕು ಪದಾರ್ಥ ಮಾರಾಟ ನಿಷೇಧ
– ತಂಬಾಕು ಉತ್ಪನ್ನಗಳ ಕಾಯ್ದೆಗೆ ರಾಷ್ಟ್ರಪತಿ ಒಪ್ಪಿಗೆ

NAMMUR EXPRESS NEWS
ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಪದಾರ್ಥಗಳ ಬಳಕೆ ನಿಷೇಧಿಸುವ ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ, ವಾಣಿಜ್ಯ ಉತ್ಪಾದನೆ, ಸರಬರಾಜು, ವಿತರಣೆ ವಿನಿಮಯ) ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದು, ಅದರಂತೆ ರಾಜ್ಯಪತ್ರ ಪ್ರಕಟಿಸಲಾಗಿದೆ. ತಿದ್ದುಪಡಿ ಕಾಯ್ದೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವಷ್ಟೇ ಅಲ್ಲದೆ ಹೊಗೆ ರಹಿತ ತಂಬಾಕು ಪದಾರ್ಥಗಳನ್ನು ಸೇವಿಸಿ, ಉಗಿಯುವುದನ್ನೂ ನಿಷೇಧಿಸಲಾಗಿದೆ. ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆಗೆ ₹200 ಇದ್ದ ದಂಡದ ಮೊತ್ತವನ್ನು ₹1 ಸಾವಿರಕ್ಕೆ ಹೆಚ್ಚಿಸಲಾಗಿದೆ. 21 ವರ್ಷದೊಳಗಿನವರಿಗೆ ತಂಬಾಕು ಪದಾರ್ಥ ಮಾರಾಟ ನಿಷೇಧ, ಉಪಹಾರ ಗೃಹ, ಪಬ್‌, ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಬ್ಯಾನ್‌ ಮಾಡಲಾಗಿದೆ. ನಿಯಮ ಮೀರಿ ಹುಕ್ಕಾ ಬಾರ್‌ ತೆರೆದರೆ ಕನಿಷ್ಠ ₹50 ಸಾವಿರದಿಂದ ₹1 ಲಕ್ಷವರೆಗೆ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಬೆಲ್ಲದ ನಾಡು, ಕಲೆಗಳ ಬೀಡು, ಕಲಾವಿದರ ತವರು ಎನಿಸಿದ ಮಹಾಲಿಂಗಪುರದಲ್ಲಿ ದಶಕದ ಹಿಂದೆ (೧೩ ವರ್ಷಗಳ ಹಿಂದೆ) ನಿರ್ಮಾಣವಾದ ರಂಗಮಂದಿರ ಪಾಳು ಬಿದ್ದಿದೆ. ಕಲಾವಿದರ ಕಲೆಗೆ ಆಸರೆಯಾಗಬೇಕಿದ್ದ ರಂಗಮಂದಿರ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿದೆ. ಖ್ಯಾತ ಕಲಾವಿದೆ, ಕ್ಷೇತ್ರದ ಶಾಸಕಿ ಉಮಾಶ್ರೀ ಅವರ ಕಾಳಜಿಯಿಂದ ₹3.20 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು 2022ರ ಮಾರ್ಚ್‌ 12ರಂದು ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಆಗಿದ್ದ ಉಮಾಶ್ರೀಯವರೇ ಉದ್ಘಾಟಿಸಿದ್ದರು. ಸುವ್ಯವಸ್ಥಿತವಾದ 110 ಆಸನ ಹೊಂದಿದ್ದು, ಪಾರಿಜಾತ ಕಲಾವಿದೆ ಕೌಜಲಗಿ ನಿಂಗಮ್ಮ ಹೆಸರಿನಲ್ಲಿ ತಲೆ ಎತ್ತಿದ್ದ ಈ ರಂಗ ಮಂದಿರದ ಸ್ಥಿತಿ ನೋಡಿ ಕಲಾವಿದರು ತಲೆ ತಗ್ಗಿಸುವಂತಾಗಿದೆ. ಅವ್ಯವಸ್ಥೆಗಳ ಆಗರ: ಕಟ್ಟಡಕ್ಕೆ ಕಾಂಪೌಂಡ್ ಹಾಗೂ ಸಿಬ್ಬಂದಿಯ ಕಾವಲು ಇಲ್ಲದೆ ಬೇಕಾಬಿಟ್ಟಿ ಬಳಕೆಯಾಗಿ ಹಾಳಾಗುತ್ತಿದೆ. ರಾತ್ರಿ ಕುಡುಕರ ಅಡ್ಡೆಯಾಗಿದ್ದು, ಎಲ್ಲಿ ನೋಡಿದರಲ್ಲಿ ಸಾರಾಯಿ ಬಾಟಲ್‌, ಪೌಚ್‌ಗಳು ಕಂಡುಬರುತ್ತವೆ. ಗುಟ್ಕಾ ಚೀಟಿ ತಿಂದು ಉಗುಳಿ ಜೊತೆಗೆ ಎಸೆದು ಹೋಗಿದ್ದಾರೆ. ಆವರಣದಲ್ಲಿ ಗಿಡಗಂಟಿಗಳು ಬೆಳೆದು ಶೌಚಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಕಿಡಿಗೇಡಿಗಳು ಕಿಟಕಿಯ ಗಾಜು ಒಡೆದು ಹಾಕಿದ್ದಾರೆ. ನಾಮಫಲಕದ ಅಕ್ಷರಗಳು ಉದುರಿ ಬಿದ್ದಿವೆ. ಹೀಗೆಯೇ ಬಿಟ್ಟರೆ ಕಟ್ಟಡವೇ ಉದುರಿ ಬೀಳುವ ಸ್ಥಿತಿ ತಲುಪುವುದರಲ್ಲಿ ಸಂದೇಹವಿಲ್ಲ.

Categories
ತೀರ್ಥಹಳ್ಳಿ

ಕೋಣಂದೂರು ಜೆಸಿಐಗೆ ಹಲವು ಪ್ರಶಸ್ತಿ ಗರಿ..!

ಕೋಣಂದೂರು ಜೆಸಿಐಗೆ ಹಲವು ಪ್ರಶಸ್ತಿ ಗರಿ..!
– ವಾರ್ಷಿಕ ವಲಯ ಸಮ್ಮೇಳನ 2025ರಲ್ಲಿ ಅವಿನಾಶ್ ಕುಕ್ಕನಕೊಡಿಗೆ ನೇತೃತ್ವದಲ್ಲಿ ಪ್ರಶಸ್ತಿ ಸ್ವೀಕಾರ
– ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಘಟಕ

NAMMUR EXPRESS NEWS
ಕೋಣಂದೂರು: ಜೆಸಿಐ ಇಂಡಿಯಾ ವಲಯ 24ರ ಹೂವಿನ ಹಡಗಲಿಯಲ್ಲಿ ನಡೆದ ಮಧ್ಯ ವಾರ್ಷಿಕ ವಲಯ ಸಮ್ಮೇಳನ 2025ರ ಸಮಾರಂಭದಲ್ಲಿ ಜೆಸಿಐ ಕೋಣಂದೂರು ಸೃಷ್ಟಿ ತಂಡಕ್ಕೆ ವಲಯದ ಅತ್ಯುತ್ತಮ ಜೆಸಿಐ ತಂಡ ಪ್ರಶಸ್ತಿ ಲಭಿಸಿದೆ.
ಕಾರ್ಯಕ್ರಮದಲ್ಲಿ ಹಲವು ಪ್ರಶಸ್ತಿಗಳನ್ನು ಜೆಸಿಐ ಕೋಣಂದೂರು ಸೃಷ್ಟಿ ತಂಡ ಗಳಿಸಿದ್ದು,ಬೆಳವಣಿಗೆ ಮತ್ತು ಅಭಿವೃದ್ಧಿ ಘಟಕ ಪ್ರಶಸ್ತಿ , ರಾಷ್ಟ್ರೀಯ ತರಬೇತಿ ದಿನದ ಗುರುತಿಸುವಿಕೆಯ ಪ್ರಶಸ್ತಿ ,ಉತ್ತಮ ತರಬೇತಿ ಪ್ರಶಸ್ತಿ, ಉತ್ತಮ ಘಟಕ ಅಧ್ಯಕ್ಷ ಪ್ರಶಸ್ತಿ, ಉತ್ತಮ ಘಟಕ ಕಾರ್ಯದರ್ಶಿ ಪ್ರಶಸ್ತಿ, ಸದಸ್ಯತ್ವ ಹೆಚ್ಚಳಿಕೆಯಲ್ಲಿ ಉತ್ತಮ ಪ್ರಶಸ್ತಿ, ಹಾಗೂ ಅನೇಕ ಕಾರ್ಯಕ್ರಮಗಳು ಮಾಡಿರುವ ಕುರಿತು ಪ್ರಶಸ್ತಿಯನ್ನು ನೀಡಿ ಜೆಸಿಐ ಕೋಣಂದೂರು ಸೃಷ್ಟಿ ತಂಡವನ್ನು ಗೌರವಿಸಿದ್ದಾರೆ ಈ ಒಂದು ಕಾರ್ಯಕ್ರಮದಲ್ಲಿ ಜೆ ಸಿ ಐ ಅಧ್ಯಕ್ಷರಾದ ಅವಿನಾಶ್ ಕುಕ್ಕನಕೊಡಿಗೆ ,ಕಾರ್ಯದರ್ಶಿ ಸುನೀತ್. ಖಜಾಂಚಿ ಅಶ್ವಥ್. ಸದಸ್ಯರಾದ ರಾಹುಲ್, ಭರತ್, ಸುನಿಲ್, ದರ್ಶನ್ ಪಾಲ್ಗೊಂಡಿದ್ದರು

Categories
ಹೆಲ್ತ್ ಎಕ್ಸ್ಪ್ರೆಸ್

ಆರೋಗ್ಯ ಎಕ್ಸ್ ಪ್ರೆಸ್! | ಹಿಮ್ಮಡಿ ಕಾಲು ಒಡೆದಿದ್ರೆ, ಒಂದೇ ವಾರದಲ್ಲಿ ಗುಣಪಡಿಸಲು ಇದನ್ನು ಟ್ರೈ ಮಾಡಿ

ಆರೋಗ್ಯ ಎಕ್ಸ್ ಪ್ರೆಸ್!

ಹಿಮ್ಮಡಿ ಕಾಲು ಒಡೆದಿದ್ರೆ, ಒಂದೇ ವಾರದಲ್ಲಿ ಗುಣಪಡಿಸಲು ಇದನ್ನು ಟ್ರೈ ಮಾಡಿ

NAMMUR EXPRESS NEWS
ಸರಿಯಾಗಿ ಹಣ್ಣಾದ ಎರಡು ಬಾಳೆಹಣ್ಣನ್ನು ಒಂದು ಬೌಲ್ ಅಲ್ಲಿ ಕಿವುಚಿಕೊಂಡು ಪಾದಗಳಿಗೆ, ಬೆರಳುಗಳ ಮಧ್ಯೆ ಹಾಗೂ ಹಿಮ್ಮಡಿ ಸೇರಿದಂತೆ ಪಾದದ ಎಲ್ಲಾ ಭಾಗಗಳಿಗೆ ಚೆನ್ನಾಗಿ ಉಜ್ಜಿಕೊಳ್ಳಿ.. ಪ್ರತಿದಿನ ಮಲಗುವ ಮುನ್ನ ಈ ಕ್ರಮವನ್ನು ಅನ್ವಯಿಸುವುದರಿಂದ ಪಾದದ ಆರೋಗ್ಯ ಉತ್ತಮವಾಗಿರುತ್ತದೆ.
ಪಾದವು ದೇಹ ನಿಲ್ಲುವುದಕ್ಕೆ ಅನುಕೂಲ ಕಲ್ಪಿಸುವ ಒಂದು ಅಂಗ. ಪಾದದಲ್ಲಿ ಇರುವ ಪ್ರತಿಯೊಂದು ಬೆರಳು, ಹಿಮ್ಮಡಿಯು ವಿಶೇಷ ಚಕ್ರಗಳನ್ನು ಒಳಗೊಂಡಿದ್ದು, ಅವು ದೇಹದ ಆರೋಗ್ಯಕ್ಕೆ ಅನುವುಮಾಡಿಕೊಡುತ್ತವೆ. ನೆಲದ ಸ್ಪರ್ಶವನ್ನು ಸದಾ ಪಡೆದುಕೊಳ್ಳುವ ಪಾದಗಳಿಗೆ ಧೂಳು, ಕೊಳಕು ಹಾಗೂ ಅನಾಹುತಗಳು ಉಂಟಾಗುವುದು ಸಾಮಾನ್ಯವಾದ ಸಂಗತಿ. ಈ ಹಿನ್ನೆಲೆಯಲ್ಲಿಯೇ ಪಾದಗಳು ಬಿರುಕು ಹಾಗೂ ನೋವು ಉಂಟಾಗುತ್ತವೆ. ಅವು ನಡೆಯುವಾಗ ಹಾಗೂ ಮಲಗಿರುವಾಗ ಸಾಕಷ್ಟು ನೋವನ್ನು ಉಂಟುಮಾಡುವುದು. ಅಲ್ಲದೆ ನೋಡುಗರಿಗೂ ಒಂದು ಬಗೆಯ ಶುಚಿತ್ವ ಇಲ್ಲ ಎನ್ನುವ ಭಾವನೆಯನ್ನು ಮೂಡಿಸುವುದು.
ಪಾದವು ತಕ್ಷಣಕ್ಕೆ ಯಾರಿಗೂ ಕಾಣಿಸದೆ ಇರುವ ಅಂಗ ಆಗಿರಬಹುದು, ಆದರೆ ಅದರ ರಕ್ಷಣೆ ಹಾಗೂ ಕಾಳಜಿಯನ್ನು ಅಗತ್ಯವಾಗಿ ಕೈಗೊಳ್ಳಬೇಕು. ಇಲ್ಲವಾದರೆ ಹಿಮ್ಮಡಿ ಒಡೆತ ಅಥವಾ ಸೀಳು ಶಾಶ್ವತವಾಗಿ ಉಳಿದುಕೊಳ್ಳುವುದು. ಪಾದಗಳಲ್ಲಿ ತೇವಾಂಶದ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಅವು ಧೂಳು ಮತ್ತು ಗಾಳಿಗೆ ಹೆಚ್ಚು ಕಾಲ ತೆರೆದೇ ಇರುವುದರಿಂದ ಹಿಮ್ಮಡಿಯ ಆರೋಗ್ಯವು ಬಹುಬೇಗ ಹಾಳಾಗುತ್ತದೆ. ಸದಾ ಕಾಲ ಮಣ್ಣಿನಿಂದ ಕೂಡಿರುವ ಹಿಮ್ಮಡಿಯ ಬಿರುಕು ಕೆಲವೊಮ್ಮೆ ನಮಗೆ ಮುಜುಗರವನ್ನುಂಟುಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

* ಜೇನು ಮತ್ತು ಸಕ್ಕರೆ ಸ್ಕ್ರಬ್‌

ವಾರದಲ್ಲಿ ಎರಡು ಬಾರಿ ಒಂದು ಚಮಚ ಜೇನಿಗೆ ಒಂದು ಸಕ್ಕರೆ ಹಾಕಿ ಐದೈದು ನಿಮಿಷ ಸ್ಕ್ರಬ್‌ ಮಾಡಿ. ನಂತರ ಕಾಲುಗಳನ್ನು ಹದ ಬಿಸಿ ನೀರಿನಲ್ಲಿ ತೊಳೆದು, ಟವಲ್‌ನಿಂದ ಒರೆಸಿ ಪೆಟ್ರೋಲಿಯಂ ಜೆಲ್ಲಿ ಹಚ್ಚಿ. ಪೆಟ್ರೋಲಿಯಂ ಜೆಲ್ಲಿಯನ್ನು ಪ್ರತೀದಿನ ಹಚ್ಚಿದರೆ ಬಿರುಕು ಉಂಟಾಗುವುದಿಲ್ಲ.

* ಪೆಟ್ರೋಲಿಯಂ ಜೆಲ್ಲಿ ಮತ್ತು ಗ್ಲಿಸರಿನ್‌

ಪೆಟ್ರೋಲಿಯಂ ಜೆಲ್ಲಿ ಜತೆಗೆ ಸ್ವಲ್ಪ ಗ್ಲಿಸರಿನ್‌ ಹಚ್ಚಿದರೆ ಮತ್ತಷ್ಟು ಒಳ್ಳೆಯದು. ರಾತ್ರಿ ಮಲಗುವಾಗ ಕಾಲು-ಕೈಗಳಿಗೆ ಗ್ಲಿಸರಿನ್‌ ಹಚ್ಚಿ ಮಲಗಿದರೆ ಕೈ-ಕಾಲಿನ ತ್ವಚೆ ಮೇಲೆ ಬಿಳಿ-ಬಿಳಿ ಉಂಟಾಗುವುದಿಲ್ಲ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ? 
– ಪರಶಿವನ ದೆಸೆಯಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರಿಗೆ ಖರ್ಚುಗಳು ಹೆಚ್ಚಾಗಬಹುದು. ಕುಟುಂಬದ ಹಿರಿಯರು ಹಣಕ್ಕೆ ಸಂಬಂಧಿಸಿದ ಅಮೂಲ್ಯ ಸಲಹೆಗಳನ್ನು ನೀಡಬಹುದು. ಪ್ರೇಮ ಜೀವನದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಹೆಚ್ಚಿನ ಬಿಡುವಿನ ಸಮಯ ಇರುವುದರಿಂದ, ನಕಾರಾತ್ಮಕ ಆಲೋಚನೆಗಳು ಇಂದು ನಿಮ್ಮನ್ನು ಕಾಡಬಹುದು. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ.

** ವೃಷಭ ರಾಶಿ :
ಇಂದು ವೃಷಭ ರಾಶಿಯ ಜನರಿಗೆ ತಾಳ್ಮೆಯ ಕೊರತೆ ಇರುತ್ತದೆ. ಲಾಭದ ಅವಕಾಶಗಳು ದೊರೆಯುತ್ತವೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಸಾಕಷ್ಟು ಶ್ರಮ ಇರುತ್ತದೆ. ಆದಾಯದಲ್ಲಿ ಅಡಚಣೆ ಉಂಟಾಗಬಹುದು, ವೆಚ್ಚಗಳು ಹೆಚ್ಚಾಗುತ್ತವೆ. ನೀವು ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬಹುದು. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇರುತ್ತದೆ.

** ಮಿಥುನ ರಾಶಿ :
ಇಂದು ಆತ್ಮವಿಶ್ವಾಸ ಕಡಿಮೆಯಾಗಲಿದೆ. ಆದರೆ ಶಾಂತವಾಗಿರಿ. ರುಚಿಕರವಾದ ಆಹಾರದಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ಆರೋಗ್ಯದ ಬಗ್ಗೆ ಎಚ್ಚರವಿರಲಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ, ಸ್ನೇಹಿತರ ಸಹಾಯದಿಂದ ನೀವು ಆಸ್ತಿಯಲ್ಲಿ ಹೂಡಿಕೆ ಮಾಡಬಹುದು. ಸಂಗ್ರಹವಾದ ಸಂಪತ್ತಿನಲ್ಲಿ ಇಳಿಕೆ ಕಂಡುಬರುತ್ತದೆ, ಬರವಣಿಗೆಯಿಂದ ಆದಾಯ, ಬೌದ್ಧಿಕ ಕೆಲಸ ಇರಬಹುದು. ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

** ಕರ್ಕಾಟಕ ರಾಶಿ :
ಇಂದು ಆರ್ಥಿಕವಾಗಿ, ದಿನವು ಉತ್ತಮವಾಗಿರುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ, ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಅತಿಯಾದ ಕೋಪವನ್ನು ತಪ್ಪಿಸಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಕುಟುಂಬದ ಹಿರಿಯ ಸದಸ್ಯರಿಂದ ನಿಮಗೆ ಹಣಕಾಸಿನ ಪ್ರಯೋಜನಗಳು ಸಿಗಬಹುದು, ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆ ಹೋಗಬಹುದು. ನಿಮ್ಮ ಸಹೋದರರಿಂದ ನಿಮಗೆ ಬೆಂಬಲ ಸಿಗುತ್ತದೆ.

** ಸಿಂಹ ರಾಶಿ :
ಇಂದು ನೀವು ಮಾನಸಿಕ ಒತ್ತಡದಿಂದ ಪರಿಹಾರವನ್ನು ಪಡೆಯುತ್ತೀರಿ. ನಿಮ್ಮ ಭವಿಷ್ಯವನ್ನು ಸಮೃದ್ಧಗೊಳಿಸಲು ನೀವು ಹಿಂದೆ ಮಾಡಿದ್ದ ಹೂಡಿಕೆ ಯಾವುದೇ ಹಣವು ಇಂದು ಫಲ ನೀಡುತ್ತದೆ. ವ್ಯವಹಾರವನ್ನು ವಿಸ್ತರಿಸುವ ಯೋಜನೆಗಳು ನಿಜವಾಗುತ್ತವೆ, ನಿಮ್ಮ ಸಹೋದರರಿಂದ ನಿಮಗೆ ಬೆಂಬಲ ಸಿಗುತ್ತದೆ ಆದರೆ ಬಹಳಷ್ಟು ಕಠಿಣ ಪರಿಶ್ರಮ ಇರುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳು ಇರುತ್ತವೆ.

** ಕನ್ಯಾ ರಾಶಿ :
ಇಂದು ನಿಮ್ಮ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ನಿರಾಶೆ ಮತ್ತು ಅತೃಪ್ತಿಯ ಭಾವನೆಗಳು ಇರುತ್ತವೆ, ಆತ್ಮವಿಶ್ವಾಸದ ಕೊರತೆ ಇರುತ್ತದೆ. ನೀವು ಅಧ್ಯಯನದಲ್ಲಿ ಆಸಕ್ತಿ ಹೊಂದಿರುತ್ತೀರಿ, ಆದರೆ ಕುಟುಂಬ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಸಿಗುತ್ತವೆ, ಆಸ್ತಿ ವಿಸ್ತರಿಸಬಹುದು. ನಿಮ್ಮ ತಾಯಿಯಿಂದ ನಿಮಗೆ ಬೆಂಬಲ ಸಿಗುತ್ತದೆ, ಖರ್ಚು ಹೆಚ್ಚಾಗುತ್ತದೆ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗುತ್ತದೆ.

** ತುಲಾ ರಾಶಿ :
ಇಂದು ತುಲಾ ರಾಶಿಯ ಜನರು ನಿಮ್ಮ ತಾಳ್ಮೆ ಕಡಿಮೆಯಾಗುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಮಾತಿನ ಪ್ರಭಾವ ಹೆಚ್ಚಾಗುತ್ತದೆ, ನೀವು ಧಾರ್ಮಿಕ ಸತ್ಸಂಗಿ ಕಾರ್ಯಕ್ರಮಕ್ಕೆ ಹೋಗಬೇಕಾಗಬಹುದು. ನಿಮ್ಮ ಜೀವನಶೈಲಿಯಲ್ಲಿ ನಿಮಗೆ ಅನಾನುಕೂಲವಾಗುತ್ತದೆ. ಸಿಹಿ ಆಹಾರದತ್ತ ಒಲವು ಹೆಚ್ಚಾಗುತ್ತದೆ. ಆಸ್ತಿಯಿಂದ ಆದಾಯ ಹೆಚ್ಚಾಗಬಹುದು, ಉದ್ಯೋಗದಲ್ಲಿ ಸ್ಥಳ ಬದಲಾವಣೆ ಸಾಧ್ಯ.

** ವೃಶ್ಚಿಕ ರಾಶಿ :
ಇಂದು ಆತ್ಮವಿಶ್ವಾಸದ ಕೊರತೆ ಇರುತ್ತದೆ ಆದರೆ ಕುಟುಂಬದಿಂದ ಬೆಂಬಲ ಸಿಗುತ್ತದೆ. ನೀವು ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಹೋಗಬೇಕಾಗಬಹುದು. ಆಹಾರದ ಬಗ್ಗೆ ಜಾಗರೂಕರಾಗಿರಿ, ಆರೋಗ್ಯಕ್ಕೆ ತೊಂದರೆಯಾಗಬಹುದು. ಹಳೆಯ ಸ್ನೇಹಿತನ ಸಹಾಯದಿಂದ ಉದ್ಯೋಗಾವಕಾಶಗಳು ಸಿಗಬಹುದು. ನಿಮ್ಮ ಇಚ್ಛೆಗೆ ವಿರುದ್ಧವಾಗಿ ಕೆಲಸದ ಕ್ಷೇತ್ರದಲ್ಲಿ ಬೆಳವಣಿಗೆ ಸಾಧ್ಯ.

** ಧನಸ್ಸು ರಾಶಿ :
ಇಂದು ನಿಮಗೆ ಸಂತೋಷದಿಂದ ತುಂಬಿದ ದಿನವಾಗಿರುತ್ತದೆ. ಆದರೆ ಅತಿಯಾದ ಕೋಪವನ್ನು ತಪ್ಪಿಸಿ, ತಾಯಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ನೀವು ಕೆಲಸದಲ್ಲಿ ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು, ಆದಾಯ ಹೆಚ್ಚಾಗುತ್ತದೆ. ಜೀವನ ಪರಿಸ್ಥಿತಿಗಳು ತೊಂದರೆದಾಯಕವಾಗಬಹುದು, ನಿಮಗೆ ಅಧಿಕಾರಿಗಳ ಬೆಂಬಲ ಸಿಗುತ್ತದೆ. ನೀವು ಕುಟುಂಬದ ಬೆಂಬಲವನ್ನು ಸಹ ಪಡೆಯುತ್ತೀರಿ, ಬಟ್ಟೆ ಇತ್ಯಾದಿಗಳ ಮೇಲಿನ ವೆಚ್ಚಗಳು ಹೆಚ್ಚಾಗಬಹುದು.

** ಮಕರ ರಾಶಿ :
ಇಂದು ನೀವು ಹೂಡಿಕೆ ಮಾಡುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸಬಹುದು. ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ನೀವು ಪಡೆಯುತ್ತೀರಿ. ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಲಕ್ಷಣಗಳಿವೆ. ಆರ್ಥಿಕವಾಗಿ ದಿನವು ಉತ್ತಮವಾಗಿರುತ್ತದೆ. ಪ್ರಯಾಣವು ಫಲಪ್ರದವಾಗಿರುತ್ತದೆ. ವ್ಯವಹಾರದಲ್ಲಿ ಪ್ರಗತಿಗೆ ನಿಮಗೆ ಹೊಸ ಅವಕಾಶಗಳು ಸಿಗುತ್ತವೆ

** ಕುಂಭ ರಾಶಿ :
ಇಂದು ಕುಂಭ ರಾಶಿಯವರ ಮಾತಿನಲ್ಲಿ ಕಠಿಣತೆಯ ಭಾವನೆಗಳು ಇರುತ್ತವೆ, ಮಾತಿನಲ್ಲಿ ಸಂಯಮದಿಂದಿರಿ. ಬಟ್ಟೆ ಇತ್ಯಾದಿಗಳ ಕಡೆಗೆ ಒಲವು ಹೆಚ್ಚಾಗುತ್ತದೆ. ತಾಯಿಯೊಂದಿಗೆ ಅಭಿಪ್ರಾಯ ವ್ಯತ್ಯಾಸಗಳಿರಬಹುದು ಆದರೆ ಹಣದ ಲಾಭವೂ ಇರುತ್ತದೆ. ಸಂಚಿತ ಸಂಪತ್ತು ಹೆಚ್ಚಾಗಲಿದೆ, ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ನಿಮಗೆ ಸಿಗಲಿದೆ. ಪ್ರಗತಿಯ ಹಾದಿ ಸುಗಮವಾಗಲಿದೆ. ಸಂಚಿತ ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ.

** ಮೀನ ರಾಶಿ :
ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ, ಆದರೆ ಸ್ವಯಂ ನಿಯಂತ್ರಣ ಹೊಂದಿರಿ. ಬಹಳಷ್ಟು ಸೋಮಾರಿತನ ಇರುತ್ತದೆ, ಮನೆ ಮತ್ತು ಕುಟುಂಬದ ಸೌಕರ್ಯಗಳು ವಿಸ್ತರಿಸುತ್ತವೆ. ಜೀವನ ಸಂಗಾತಿಯೊಂದಿಗೆ ಬಿರುಕು ಉಂಟಾಗಬಹುದು. ಕೆಲಸದ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯ, ಸಾಕಷ್ಟು ಕಠಿಣ ಪರಿಶ್ರಮ ಇರುತ್ತದೆ. ನಿಮ್ಮ ತಾಯಿಯ ಬೆಂಬಲ ಮತ್ತು ಸಹಕಾರ ನಿಮಗೆ ಸಿಗುತ್ತದೆ. ಲಾಭದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.

Categories
ತೀರ್ಥಹಳ್ಳಿ

ಒಂಟಿ ಸಲಗ ಎನ್.ಆರ್ ಪುರದಿಂದ ತೀರ್ಥಹಳ್ಳಿಗೆ ಎಂಟ್ರಿ!

ಒಂಟಿ ಸಲಗ ಎನ್.ಆರ್ ಪುರದಿಂದ ತೀರ್ಥಹಳ್ಳಿಗೆ ಎಂಟ್ರಿ! 
* ಗುತ್ತಿಯಡೇಹಳ್ಳಿ ಸಮೀಪ ಆನೆ ಪ್ರತ್ಯಕ್ಷ, ಅಲ್ಲಿಂದ ತೀರ್ಥಹಳ್ಳಿಗೆ
* ರೇಡಿಯೋ ಕಾಲರ್ ಅಳವಡಿಸಿದ ಆನೆ: ಜನರಿಗೆ ಭಯ

NAMMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಮಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಿಗ್ಗೆ ಮುಡುಬದಲ್ಲಿ ಕಾಣಿಸಿಕೊಂಡಿದ್ದ ಆನೆ ಶನಿವಾರ ಕುಚ್ಚಲು, ಮಳಗಾರು ಬಳಿ ಕಾಣಿಸಿಕೊಂಡಿತ್ತು. ಶನಿವಾರ ರಾತ್ರಿ ಸೀಕೆ, ಕಾವೇರಿ, ಬೈಲುಬಡಿಗೆ, ಕುಡುವಳ್ಳಿ, ಮಳಗಾರು ಸಮೀಪ ಓಡಾಟ ಆರಂಭಿಸಿದೆ. ಇದೀಗ ಭಾನುವಾರ ಬೆಳಗ್ಗೆ ಗುಡ್ಡೆಕೊಪ್ಪದಲ್ಲಿ ಕಾಣಿಸಿಕೊಂಡಿದೆ.
ಅರಣ್ಯ ಇಲಾಖೆ ಆನೆ ಬಂದ ದಾರಿಯ ಮೂಲಕ ಭದ್ರಾ ಅಭಯಾರಣ್ಯಕ್ಕೆ ಅಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ. ತೀರ್ಥಹಳ್ಳಿ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಸಂಚರಿಸುವ ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕಿದೆ. ಗ್ರಾಮೀಣ ಭಾಗದಲ್ಲಿ ಓಡಾಡುವ ಪ್ರತಿಯೊಬ್ಬರು ವಿನಾಕಾರಣ ಮನೆಯಿಂದ ಹೊರಗೆ ಹೋಗದಂತ ಕಟ್ಟೆಚ್ಚರ ನೀಡಲಾಗಿದೆ. ಆನೆ ಬಂದ ದಾರಿಯನ್ನು ಹುಡುಕುತ್ತಲಿದ್ದು ಯಾವುದೇ ಕಾರಣಕ್ಕೆ ಆನೆಗೆ ತೊಂದರೆ ನೀಡದಂತೆ ಸಾರ್ವಜನಿಕರಲ್ಲಿ ಅರಣ್ಯ ಇಲಾಖೆ ಮನವಿ ಮಾಡಿದೆ.
ಈ ಆನೆಯು ಎನ್.ಆರ್ ಪುರ ತಾಲೂಕು ಮುತ್ತಿನ ಕೊಪ್ಪ ವ್ಯಾಪ್ತಿಯಲ್ಲಿ ಎರಡು ದಿನ ಓಡಾಡಿ ಆತಂಕ ಸೃಷ್ಟಿಸಿತ್ತು ಈಗ ಅಲ್ಲಿಂದ ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಕುಚ್ಚಲು ಸಮೀಪ ಕಾಣಿಸಿಕೊಂಡಿದ್ದ ಕಾಡಾನೆ ಇದೀಗ ಆರಗದ ಕಲ್ಲುಂಡಿ ಸಮೀಪ ಕಾಣಿಸಿಕೊಂಡಿದೆ. ಬೆಳಗಿನ ಜಾವ ಓಡಾಟ ಆರಂಭಿಸಿರುವ ಆನೆ ಸುಮಾರು 50 ಕಿ.ಮೀ. ಕ್ರಮಿಸಿದೆ.
ಆನೆಗೆ ರೇಡಿಯೋ ಕಾಲರ್ ಅಳವಡಿಸಿದ್ದು ಆನೆ ನಡೆದ ದಾರಿಗಳ ಬಗ್ಗೆ ಅರಣ್ಯ ಇಲಾಖೆಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿದೆ. ಆದರೆ ರೇಡಿಯೋ ಕಾಲರ್ ಅಪ್ಡೇಟ್ ವಿಚಾರದಲ್ಲಿ ತೀರಾ ವಿಳಂಬವಾಗಿದ್ದು ಮೂರು, ನಾಲ್ಕು ಗಂಟೆಗಳಿಗೊಮ್ಮೆ ಮಾತ್ರ ಅಪ್ಡೇಟ್ ಆಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿದೆ.
ಈಗ ಭದ್ರ ಅಭಯಾರಣ್ಯ ವ್ಯಾಪ್ತಿಯಿಂದ ತಪ್ಪಿಸಿಕೊಂಡ ಸುಮಾರು 15 ವರ್ಷದ ಈ ಗಂಡಾನೆ ಸಕಲೇಶಪುರದಲ್ಲಿ ಈಚೆಗೆ ಕಂಡುಬಂದಿತ್ತು. ಅಲ್ಲದೇ ಆನೆಯ ಕಾಲ್ತುಳಿತಕ್ಕೂ ಜನ ಸತ್ತಿದ್ದಾರೆಂಬ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಮೂಡಿಗೆರೆ, ಸಕಲೇಶಪುರ ಭಾಗದಲ್ಲಿ ಹಿಡಿದ ಪುಂಡಾನೆಗಳನ್ನು ಭದ್ರಾ ಆಭಯಾರಣ್ಯಕ್ಕೆ ತಂದು ಬಿಡಲಾಗುತ್ತಿದ್ದು ಅದನ್ನು ಸರಿಯಾಗಿ ವನ್ಯಜೀವಿ ವಿಭಾಗದ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪುಂಡಾಟದ ಆನೆ ಊರಿಗೆ ನುಗ್ಗುತ್ತಿದ್ದರು ವನ್ಯಜೀವಿ ಅರಣ್ಯ ಸಿಬ್ಬಂದಿಗಳು ಹಿಮ್ಮೆಸುವಲ್ಲಿ ಸೋಲುತ್ತಿದ್ದು,ಜೊತೆಗೆ ಉಡಾಫೆ ಧೋರಣೆ ಮುಂದುವರೆಸಿದ್ದಾರೆಂದು ಹೇಳಲಾಗುತ್ತಿದೆ.

* ಆನೆ ನಡೆದ ದಾರಿ
ಮುತ್ತಿನಕೊಪ್ಪದ ಮೂಲಕ ತುಂಗಾ ನದಿ ದಾಟಿ ಮುಡುಬ ಪೆಟ್ರೋಲ್ ಬಂಕ್, ಉಳ್ಳೂರು ಘಟ್ಟ, ಮಣಿವೆ, ಉಳ್ಳೂರು, ಕುಚ್ಚಲು, ಬಾಳೇಗುಡ್ಡ ಕಾಡಿನಲ್ಲಿ ನಿದ್ರೆ, ಹಿರೇಬೈಲು, ಸೀಕೆ, ಕಾನಳ್ಳಿ, ದಾನಸಾಲೆ, ಹೊಸಬೀಡು, ಏಳುಮನೆ ಮಾರ್ಗ, ಕೋಣಂದೂರು, ಅರಳಸುರಳಿ, ನೊಣಬೂರು, ಗುಡ್ಡಕೊಪ್ಪ, ಕಲ್ಲುಂಡಿ, ಪಟಮಕ್ಕಿ. ಇದೀಗ ಗುಡ್ಡೆಕೊಪ್ಪ ಬಳಿ ಕಾಣಿಸಿಕೊಂಡಿದೆ.

Categories
ಚಿಕ್ಕಮಗಳೂರು

ಅಕ್ರಮ ಗೋಸಾಗಾಟ ಎನ್.ಆರ್ ಪುರದಲ್ಲಿ ಇಬ್ಬರ ಬಂಧನ

ಅಕ್ರಮ ಗೋಸಾಗಾಟ ಎನ್.ಆರ್ ಪುರದಲ್ಲಿ ಇಬ್ಬರ ಬಂಧನ 

* ಹಲವು ದಿನಗಳಿಂದ ಇದೇ ವಾಹನದ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಬಜರಂಗದಳ
* ಬಜರಂಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಪೊಲೀಸರಿಂದ ತಪಾಸಣೆ
NAMMMUR EXPRESS NEWS
ಎನ್.ಆರ್ ಪುರ: ಹಲವು ದಿನಗಳಿಂದ ಅಕ್ರಮ ಗೋಸಾಗಾಟ ನಡೆಸುತ್ತಿದ್ದ ವಾಹನವನ್ನು ಇಂದು ತಪಾಸಣೆ ನಡೆಸಿ ಗೋಸಾಗಾಟ ಮಾಡುತ್ತಿದ್ದ ವಾಹನ ಮತ್ತು ಇಬ್ಬರನ್ನು ಬಂಧಿಸಿರುವ ಘಟನೆ ತಾಲೂಕಿನ ಬಿ ಎಚ್ ಕೈಮರದಲ್ಲಿ ನಡೆದಿದೆ.
ಸದ್ಯದ ಮಾಹಿತಿ ಪ್ರಕಾರ ಗೋವುಗಳನ್ನು ತಾಲೂಕಿನ ದಾವಣದಿಂದ ತರೀಕೆರೆಗೆ ಸಾಗಿಸಲಾಗುತ್ತಿತ್ತು, ಬಜರಂಗದಳ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಎನ್‌.ಆರ್ ಪುರ ಪೊಲೀಸರು ಬಿ.ಎಚ್ ಕೈಮರದಲ್ಲಿ ವಾಹನ ತಡೆದು ತಪಾಸಣೆ ನಡೆಸಿರುತ್ತಾರೆ, ಈ ಸಂದರ್ಭದಲ್ಲಿ ವಾಹನದಲ್ಲಿ ಗೋಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ವಾಹನದಲ್ಲಿ 6 ಗೋವುಗಳಿದ್ದು ಅವುಗಳನ್ನು ರಕ್ಷಿಸಲಾಗಿದೆ.
ತಾಲೂಕಿನ ದಾವಣ ಮಂಜು ಎಂಬುವವನು ಅನೇಕ ದಿನಗಳಿಂದ ಅಕ್ರಮ ಗೋಸಾಗಾಟದಲ್ಲಿ ತೊಡಗಿದ್ದು,ಈ ಕೃತ್ಯದಲ್ಲಿ ಇವರ ಮೇಲೆ ಬಜರಂಗದಳ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿದ್ದು,ಕೂಡಲೇ ದಾವಣ ಮಂಜುವನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಪೊಲೀಸ್ ಇಲಾಖೆಗೆ ಎನ್.ಆರ್ ಪುರ ಬಜರಂಗದಳ ಒತ್ತಾಯಿಸಿದೆ.

* ಸ್ಥಳೀಯ ಕಸಾಯಿಖಾನೆ ಗೋವುಗಳ ಸಾಗಾಟದ ಅನುಮಾನ 
ತಾಲೂಕಿನಲ್ಲಿ ನಿರಂತರ ನಡೆಯುತ್ತಿರುವ ಅಕ್ರಮ ಗೋಸಾಗಾಟವು ಯಾವುದೇ ಭಯವಿಲ್ಲದೇ ಸಾಗುತ್ತಿದೆ. ಇಂದು ನಡೆಸಲಾಗುತ್ತಿದ್ದ ಗೋಸಾಗಾಟ ಸ್ಥಳೀಯ ಕಸಾಯಿಖಾನೆಯೊಂದಕ್ಕೆ ಗೋವುಗಳನ್ನು ಪೂರೈಸಲಾಗುತ್ತಿತ್ತು ಎಂಬ ಹಲವು ಅನುಮಾನಗಳನ್ನು ಎನ್.ಆರ್ ಪುರ ಬಜರಂಗದಳ ವ್ಯಕ್ತಪಡಿಸಿದೆ. ಕಳೆದೆರಡು ದಿನಗಳಿಂದ ಕೆಲವರ ಚಲನವಲನಗಳನ್ನು ಗಮನಿಸಿದ ಬಜರಂಗದಳ ಕಾರ್ಯಕರ್ತರು ಹಾಗೂ ಬಂಧಿತ ಆರೋಪಿಯು ಸ್ಥಳೀಯ ವ್ಯಕ್ತಿಯೋರ್ವರಿಗೆ ಮಾಡಿದ ಮೊಬೈಲ್ ಕಾಲ್‌ನ ಆಧಾರದ ಮೇಲೆ ಬಜರಂಗದಳದ ಕಾರ್ಯಕರ್ತರು ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆಗೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.