ಕರಾವಳಿ ಟಾಪ್ ನ್ಯೂಸ್
• ಕಾರ್ಕಳ: ಪೆಟ್ರೋಲ್ ಸೋರಿಕೆಯಿಂದ ಬೂದಿಯಾದ ಕಾರ್
• ಮೂಡಬಿದರೆ: ಮುಸುಕುಧಾರಿಗಳಿಂದ ಹಸುಗಳ ಕಳ್ಳತನ
• ಕುಂದಾಪುರ: ಮೀನಿನ ವಾಹನ ಚಾಲಕನ ಆತ್ಮಹತ್ಯೆ
• ಬೆಳ್ತಂಗಡಿ: ಯೂಟ್ಯೂಬರ್ ಸಮೀರ್ ಗೆ ನೋಟಿಸ್
• ಉಡುಪಿ: ಮಾದಕ ವಸ್ತು ಮಾರಾಟಗಾರರ ವಿರುದ್ಧ ಗೂಂಡಾ ಕಾಯ್ದೆ
• ಬಂಟ್ವಾಳ: ಪಾರ್ಟ್ ಟೈಮ್ ಕೆಲಸದ ಹೆಸರಿನಲ್ಲಿ ವಂಚನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಕಾರ್ಕಳ: ಪೆಟ್ರೋಲ್ ಸೋರಿಕೆಯಿಂದ ಬೂದಿಯಾದ ಕಾರ್
ಕಾರ್ಕಳ: ಬಂಗ್ಲೆ ಗುಡ್ಡೆ ಅಯಾನ್ ಎನ್ನುವವರು ಮೂಡಬಿದರೆ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ, ಕಾರಿನಿಂದ ಪೆಟ್ರೋಲ್ ಸೋರಿಕೆ ಉಂಟಾದ ಪರಿಣಾಮವಾಗಿ, ಕಾರ್ ಉರಿದು ಬೂದಿಯಾದ ಘಟನೆ ಸಾಣೂರು ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ನಡೆದಿದೆ. ಅಯಾನ್ ಅವರು ಕಾರನ್ನು ವ್ಯಕ್ತಿಯೊಬ್ಬರಿಂದ ಖರೀದಿಸಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ನಂದಿಸಿದ್ದಾರೆ.
• ಮೂಡಬಿದರೆ: ಮುಸುಕುಧಾರಿಗಳಿಂದ ಹಸುಗಳ ಕಳ್ಳತನ
ಮೂಡಬಿದರೆ: ಕಾರಿನಲ್ಲಿ ಮೂಡಬಿದರೆ ಕಡೆಯಿಂದ ಹೋಗುತ್ತಿದ್ದ ಮುಸುಕುಧಾರಿಗಳು ಪುನಃ ಹಿಂತಿರುಗಿ ಬಂದು, ಸರ್ವೋದಯ ಫ್ರೆಂಡ್ಸ್ ಕ್ಲಬ್ ನ ಕಟ್ಟಡದ ಬಳಿ ಮಲಗಿದ್ದ, ಬಲರಾಮ ಎನ್ನುವವರಿಗೆ ಸೇರಲ್ಪಟ್ಟ ಎರಡು ಹಸುಗಳನ್ನು ಕಳ್ಳತನ ಮಾಡಿರುವ ಸಂಗತಿ ಸಿಸಿಟಿವಿಯ ಮೂಲಕ ಬೆಳಕಿಗೆ ಬಂದಿದೆ. ಮಲಗಿದ್ದ ಹಸುಗಳಿಗೆ ಏನೋ ತಿನ್ನಲು ನೀಡಿ, ಅವುಗಳ ಕುತ್ತಿಗೆಗೆ ಹಗ್ಗವನ್ನು ಬಿಗಿದು, ಎಳೆದುಕೊಂಡು ಹೋಗಿ ಕಾರಿನಲ್ಲಿ ಎತ್ತಿಹಾಕಿ, ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ಕಾರ್ಯತತ್ಪರರಾಗಿದ್ದಾರೆ.
• ಕುಂದಾಪುರ: ಮೀನಿನ ವಾಹನ ಚಾಲಕನ ಆತ್ಮಹತ್ಯೆ
ಕುಂದಾಪುರ: ಮೀನಿನ ವಾಹನದ ಚಾಲಕರಾಗಿದ್ದ, ಕಂದಾವರ ಗ್ರಾಮದ ನಿಖಿಲ್ ಎನ್ನುವವರು, ವೈಯಕ್ತಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಮತ್ತು ಪುತ್ರಿ ತಮ್ಮ ಕೆಲಸದ ನಿಮಿತ್ತ ರಾಣೆಬೆನ್ನೂರಿಗೆ ತೆರಳಿದ್ದ ಸಂದರ್ಭದಲ್ಲಿ, ನೇಣು ಬಿಗಿದುಕೊಂಡಿದ್ದಾರೆ ಎಂದು ನಿಖಿಲ್ ಅವರ ತಂದೆ ವೆಂಕಟೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ವೆಂಕಟೇಶ್ ಅವರ ದೂರಿನ ಆಧಾರದ ಮೇಲೆ, ನಿಖಿಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಬೆಳ್ತಂಗಡಿ: ಯೂಟ್ಯೂಬರ್ ಸಮೀರ್ ಗೆ ನೋಟಿಸ್
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನ ಕುರಿತು ಕಾಲ್ಪನಿಕ ಮಾಹಿತಿಗಳನ್ನು ಕೂಡಿಟ್ಟು, ವೀಡಿಯೋ ಮಾಡಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸಮೀರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂರು ಬಾರಿ ನೋಟಿಸ್ ನೀಡಿದ್ದರೂ, ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಆಗಸ್ಟ್ 21 ರಂದು ಆತನನ್ನು ಬೆಂಗಳೂರು ಬಾಡಿಗೆ ಮನೆಯಿಂದ ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ, ಅದೇ ದಿನ ಸಂಜೆ ಮಂಗಳೂರು ನ್ಯಾಯಾಲಯದಿಂದ ನಿರೀಕ್ಷಣ ಜಾಮೀನು ಪಡೆದುಕೊಂಡಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಹೀಗಾಗಿ ನ್ಯಾಯಾಲಯವು ಪೊಲೀಸರ ವಿಚಾರಣೆಗೆ ಹಾಜರಾಗಬೇಕು ಮತ್ತು ಸಾಕ್ಷಿಗಳನ್ನು ನಾಶ ಮಾಡಬಾರದು ಎಂಬ ಷರತ್ತನ್ನು ವಿಧಿಸಿದೆ. ಅದಕ್ಕೆ ಅನುಗುಣವಾಗಿ ಆಗಸ್ಟ್ 23ರ ಶನಿವಾರದಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಇಲ್ಲವೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅವರ ಕಚೇರಿಗೆ ಸ್ವತಃ ಹಾಜರಾಗಿ ವಿಚಾರಣೆ ಎದುರಿಸಬೇಕೆಂದು ಆದೇಶಿಸಿದೆ.
•ಉಡುಪಿ: ಮಾದಕ ವಸ್ತು ಮಾರಾಟಗಾರರ ವಿರುದ್ಧ ಗೂಂಡಾ ಕಾಯ್ದೆ
ಉಡುಪಿ: ಕುಖ್ಯಾತ ಗರುಡ ಗ್ಯಾಂಗ್ ನ ಸದಸ್ಯನಾದ ಕಬೀರ್ ಹುಸೇನ್ ಮತ್ತು ಡ್ರಗ್ಸ್ ಜಾಲದಲ್ಲಿ ಸತತವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಕೃಷ್ಣ ವಿರುದ್ಧ ಜಿಲ್ಲೆಯಲ್ಲೇ ಮೊದಲ ಬಾರಿಗೆ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿದ್ದ ಆರೋಪಿಗಳು ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಕುಖ್ಯಾತ ಆರೋಪಿಗಳ ವಿರುದ್ಧ ಎನ್ ಡಿ ಪಿ ಎಸ್ ಅಡಿಯಲ್ಲಿ ಗೂಂಡಾ ಕಾಯ್ದೆಯ ಆದೇಶವನ್ನು ಉಚ್ಚ ನ್ಯಾಯಾಲಯವು ಸ್ಥಿರೀಕರಿಸಿದೆ. ಈಗಾಗಲೇ ಕಬೀರ್ ಹುಸೇನ್ ವಿರುದ್ಧ 2005ನೇ ಸಾಲಿನಿಂದ, ಇಲ್ಲಿಯವರೆಗೆ ಒಟ್ಟು 17 ಪ್ರಕರಣಗಳು ದಾಖಲಾಗಿದೆ ಮತ್ತು ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕೃಷ್ಣ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ ಎನ್ನುವ ಮಾಹಿತಿ ತಿಳಿದುಬಂದಿದೆ.
• ಬಂಟ್ವಾಳ: ಪಾರ್ಟ್ ಟೈಮ್ ಕೆಲಸದ ಹೆಸರಿನಲ್ಲಿ ವಂಚನೆ
ಬಂಟ್ವಾಳ: ಮೆಲ್ವಿಟ ಕ್ರಾಸ್ತಾ ಎಂಬ ಮಹಿಳೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪಾರ್ಟ್ ಟೈಮ್ ಕೆಲಸದ ಕುರಿತು ಬಂದ ಜಾಹೀರಾತನ್ನು ವೀಕ್ಷಿಸಿದ್ದಾರೆ. ದಿನಕ್ಕೆ ಐದರಿಂದ ಎಂಟು ಸಾವಿರ ರೂಪಾಯಿ ದುಡಿಯಬಹುದು ಎಂಬುದನ್ನು ಗಮನಿಸಿ, ಲಿಂಕ್ ಅನ್ನು ಒತ್ತಿದ್ದಾರೆ. ಆಗ ಅಪರಿಚಿತ ವ್ಯಕ್ತಿಗಳು ಪ್ರಾರಂಭದಲ್ಲಿ ಹಣ ಹಾಕಬೇಕೆಂದು ತಿಳಿಸಿದ್ದಾರೆ. ಅದರಂತೆ ಮೆಲ್ವಿಟ ಅವರ ಖಾತೆಗಳಿಗೆ ಒಟ್ಟು 4,28,200 ರೂಪಾಯಿಯನ್ನು ಕಳುಹಿಸಿದ್ದಾರೆ. ಅದನ್ನು ವಿತ್ ಡ್ರಾ ಮಾಡಲು ಪುನಃ ಹಣವನ್ನು ಹಾಕಬೇಕೆಂದು ಅಪರಿಚಿತರು ತಿಳಿಸಿದ್ದಾರೆ. ಆಗ ಮೆಲ್ವಿಟ ತಾನು ವಂಚನೆಗೆ ಒಳಗಾಗಿರುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.