ಕಿಗ್ಗಾದಲ್ಲಿ ಜಿಲ್ಲಾ ಮಟ್ಟದ ಜಾರುಗಂಬ ಸ್ಪರ್ಧೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ
* ವಿಶ್ವ ಹಿಂದೂ ಪರಿಷದ್ ಬಜರಂಗದ ಕಿಗ್ಗಾ ಘಟಕದಿಂದ ಜಿಲ್ಲಾಮಟ್ಟದ ಸ್ಪರ್ಧೆ ಆಯೋಜನೆ
* ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ,ಸಾರ್ವಜನಿಕರಿಗೆ ದೇಶಭಕ್ತಿ ಗೀತೆ ಸ್ಪರ್ಧೆ
* ದಿಕ್ಸೂಚಿ ಭಾಷಣಕ್ಕೆ ಕುಮಾರಿ ಹಾರಿಕಾ ಮಂಜುನಾಥ್ ಆಗಮನ,ಜಾರುಗಂಬ ಹೇಗಿರತ್ತೆ?
NAMMMUR EXPRESS NEWS
ಶೃಂಗೇರಿ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಿಗ್ಗಾ ಘಟಕ ಶೃಂಗೇರಿ ಪ್ರಖಂಡ ಇದರ ವತಿಯಿಂದ ಆ.24 ರ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಕಿಗ್ಗಾದ ಶ್ರೀಅಭಿನವ ರಮಾನಂದ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಮಟ್ಟದ ಜಾರುಗಂಬ ಸ್ಪರ್ಧೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿಶ್ವ ಹಿಂದೂ ಪರಿಷದ್ ಸಂಸ್ಥಾಪನಾ ದಿನ ಹಾಗೂ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಿರುವ 4 ನೇ ವರ್ಷದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗ್ರಾಮೀಣ ಜಾನಪದ ಕ್ರೀಡೆ ಜಾರುಗಂಬ ಸ್ಪರ್ಧೆ ಆಯೋಜಿಸಿದ್ದು ಜೊತೆಗೆ ಕಿಗ್ಗಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರಿಗೆ 6 ವರ್ಷದೊಳಗಿನ ಮಕ್ಕಳಿಗೆ ಹಾಗೂ 6 ರಿಂದ 10 ವರ್ಷದೊಳಗಿನ ಮಕ್ಕಳಿಗೆ ರಾಧಾಕೃಷ್ಣ ಛದ್ಮವೇಷ ಸ್ಪರ್ಧೆ ಇದ್ದು,10 ವರ್ಷ ಮೇಲ್ಪಟ್ಟ ಎಲ್ಲರಿಗೂ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಜಾರುಗಂಬ ವಿಜೇತರಿಗೆ 8,888/-ರೂಗಳ ನಗದು ಬಹುಮಾನ ಹಾಗೂ ಆರ್ಷಕ ಟ್ರೋಫಿ ನೀಡಲಾಗುವುದು ಹಾಗೂ ರಾಧಾಕೃಷ್ಣ ವೇಷ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ, ಟ್ರೋಫಿ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ವಿ ಸೂ: ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಗೆ ಕಿಗ್ಗಾ ಗ್ರಾ ಪಂ ವ್ಯಾಪ್ತಿಯ ಸ್ಪರ್ಧಿಗಳು ತಮ್ಮ ಹೆಸರನ್ನು ಎರಡು ದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
* ಸಭಾ ಕಾರ್ಯಕ್ರಮಕ್ಕೆ ಹಿಂದೂ ಫೈರ್ ಬ್ರಾಂಡ್ ಹಾರಿಕಾ ಮಂಜುನಾಥ್
ಕಾರ್ಯಕ್ರಮದಲ್ಲಿ ಆಯೋಜಿಸಿರುವ ಸಭಾ ಕಾರ್ಯಕ್ರಮಕ್ಕೆ ದಿಕ್ಸೂಚಿ ಭಾಷಣಕಾರರಾಗಿ ಪ್ರಖರ ಬಾಲ ವಾಗ್ಮಿ,ಹಿಂದೂ ಫೈರ್ ಬ್ರಾಂಡ್ ಕುಮಾರಿ ಹಾರಿಕಾ ಮಂಜುನಾಥ್ ಆಗಮಿಸಲಿದ್ದು ಉಳಿದಂತೆ ಜಿಲ್ಲೆಯ ಸಂಘಟನೆಯ ಎಲ್ಲಾ ಪ್ರಮುಖರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಕ್ಕೆ ನೂರಾರು ಜನ ಸೇರುವ ನಿರೀಕ್ಷೆಯಿದ್ದು ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದೆ.
* ಹೇಗಿರುತ್ತೆ ಜಾರುಗಂಬ ಸ್ಪರ್ಧೆ, ತಯಾರಿ ಹೇಗೆ
ಪ್ರಸಿದ್ಧ ಜಾನಪದ ಕ್ರೀಡೆಗಳಲ್ಲಿ ಒಂದಾದ ಜಾರುಗಂಬ ಸ್ಪರ್ಧೆಯು ಶ್ರೀಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ಜಾನಪದ ಕ್ರೀಡೆಯು ಕಣ್ಮರೆಯಾಗುತ್ತಿದ್ದು ಇದನ್ನು ಉಳಿಸುವ,ಈಗಿನ ಯುವ ಜನತೆಗೆ ಹಾಗೂ ಸಮಾಜಕ್ಕೆ ಪರಿಚಯಿಸುವ ಹಾಗೂ ಇದರಲ್ಲಿ ಭಾಗವಹಿಸುವ ಕಾರ್ಯವನ್ನು ಬಜರಂಗದಳ ಕಿಗ್ಗಾ ಘಟಕ ಮಾಡುತ್ತಿದೆ.
ಈ ಸ್ಪರ್ಧೆ ಹೇಗಿರುತ್ತೆ ಎನ್ನುವುದನ್ನು ನೋಡೋದಾದರೆ ಸುಮಾರು 35-40 ಅಡಿ ಉದ್ದದ ಅಡಿಕೆ ಕಂಬವನ್ನು ನಯವಾಗಿ ಸಿದ್ಧಗೊಳಿಸಲಾಗುತ್ತದೆ. ನಂತರ ಪ್ರಾರ್ಥಿಸಿ ನಿಲ್ಲಿಸಿದ ಕಂಬಕ್ಕೆ ಜಾರಲು ಸಹಕಾರಿಯಾಗುವಂತೆ ಬಳಪದ ಕಲ್ಲಿನ ಪುಡಿ,ಬಾಳೆಹಣ್ಣು,ಸಾಸಿವೆ ಹಾಗೂ ಎಣ್ಣೆಯ ಮಿಶ್ರಣವನ್ನು ಕಂಬದ ಮೇಲಿನಿಂದ ಕೆಳಗಿನವರೆಗೂ 2-3ಬಾರಿ ಸವರಲಾಗುತ್ತದೆ. ಈಗ ಕಂಬ ಮುಟ್ಟಿದರೂ ಜಾರುವ ಹಂತಕ್ಕೆ ಬಂದಿರುತ್ತದೆ. ಕಂಬದ ಮೇಲ್ತುದಿಯಲ್ಲಿ ಹಣ್ಣು,ಕಾಯಿ ಮತ್ತು ಸ್ಪರ್ಧೆಯ ಬಹುಮಾನವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಹೂವಿನಿಂದ ಅಲಂಕರಿಸಿ ತೂಗಿ ಹಾಕಲಾಗಿರುತ್ತದೆ. ಯಾವ ಸ್ಪರ್ಧಿ ಜಾರುವ ಕಂಬವನ್ನು ತಮ್ಮ ವಿವಿಧ ಪಟ್ಟುಗಳ ಸಹಾಯದಿಂದ ಏರಿ ಮೇಲಿರಿಸಿರುವ ಬಹುಮಾನದ ಗಂಟನ್ನು ತೆಗೆದವರೋ ಅವರು ವಿಜೇತರಾಗುತ್ತಾರೆ ಅವರಿಗೆ ನಿಗದಿಪಡಿಸಿದ ಬಹುಮಾನ ನೀಡಲಾಗುವುದು.
ಆಯೋಜಕರಿಂದ ಮೊದಲೇ ನಿಗದಿ ಪಡಿಸಿದ ನಗದು ಬಹುಮಾನದೊಂದಿಗೆ ಸ್ಪರ್ಧೆ ನೋಡಲು ಬಂದ ಪ್ರೇಕ್ಷರು,ಸ್ಪರ್ಧಾಳುಗಳ ಅಭಿಮಾನಿಗಳು ಸ್ಪರ್ಧಿಗಳು ಗುರಿ ತಲುಪಿದಲ್ಲಿ ವೈಯಕ್ತಿಕ ಬಹುಮಾನದ ಮೊತ್ತವನ್ನು ಘೋಷಿಸುತ್ತಾರೆ ಕೊನೆಯಲ್ಲಿ ಆ ಮೊತ್ತವನ್ನು ಸೇರಿ ನಿಗದಿತ ಬಹುಮಾನ ಮೊತ್ತವನ್ನು ಕೊಡಲಾಗುತ್ತದೆ. ಕೆಲವೊಮ್ಮೆ ನಿಗದಿತ ನಗದು ಬಹುಮಾನಕ್ಕಿಂತ ದುಪ್ಪಟ್ಟಾಗುವ ಸಾಧ್ಯತೆಯೂ ಇರುತ್ತದೆ. ಒಟ್ಟಾರೆ ಜಾರುಗಂಬ ಏರಿ ಜಾರಿ ಜಾರಿ ಕೆಳಗೆ ಬಂದು ಹಲವು ಪ್ರಯತ್ನಗಳ ನಂತರ ಗುರಿ ತಲುಪಿ ಗೆದ್ದು ಸಂಭ್ರಮಿಸುವ ಆ ಆಟವನ್ನು ನೋಡುವುದೇ ಒಳ್ಳೆಯ ಮಜಾ.


