Categories
inspiration ಪ್ರತಿಭೆಗಳು ಮಲ್ನಾಡ್ ರಾಜ್ಯ ಶಿವಮೊಗ್ಗ

ಯುವ ಸ್ಫೂರ್ತಿ ದರ್ಶನ್ ಗರ್ತಿಕೆರೆ

ಯುವ ಸ್ಫೂರ್ತಿ ದರ್ಶನ್ ಗರ್ತಿಕೆರೆ
ಪ್ರಸಿದ್ಧ ಐಎಎಸ್ ತರಬೇತುದಾರ ಈ ಮಲೆನಾಡ ಹುಡುಗ
ಐಎಎಸ್ ದರ್ಶನ ಅಕಾಡೆಮಿ ಸ್ಥಾಪಿಸಿ ಅನೇಕರಿಗೆ ತರಬೇತಿ

ರಾಜಧಾನಿಯಲ್ಲಿ ಐಎಎಸ್ ದರ್ಶನ ಅಕಾಡೆಮಿ ಎಂಬ ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರ ಸ್ಥಾಪಿಸಿ ಅನೇಕರಿಗೆ ತರಬೇತಿ ನೀಡುತ್ತಿರುವ ದರ್ಶನ್ ಗರ್ತಿಕೆರೆ ಯುವಜನತೆಗೆ ಸ್ಫೂರ್ತಿ ಆಗಿದ್ದಾರೆ. ದರ್ಶನ್ ಗರ್ತಿಕೆರೆ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗರ್ತಿಕೆರೆ ಎಂಬ ಗ್ರಾಮದವರು. ತಂದೆ ಜಿ.ಎಂ.ಚಂದ್ರಶೇಖರ ತಾಯಿ ಆಶಾ. ದರ್ಶನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಮ್ಮಚ್ಚಿಯಲ್ಲು, ಪ್ರೌಢ ಶಿಕ್ಷಣವನ್ನು ಕೋಣಂದೂರಿನ ನ್ಯಾಷನಲ್ ಹೈಸ್ಕೂಲಿನಲ್ಲು, ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಗರ್ತಿಕೆರೆಯ ಅಮೃತ ಕಾಲೇಜಿನಲ್ಲು ಪಡೆದುಕೊಂಡರು.

ಬಿಎಸ್ ಸಿ (ಸಿಬಿಜಡ್)ಪದವಿಯನ್ನು ಉಡುಪಿಯ ಎಂಜಿಎಂ ಕಾಲೇಜಿನಿಂದ ಗಳಿಸಿದರು. ವಿನೀತ್ ಎಂಬ ಉಪನ್ಯಾಸಕರು ದರ್ಶನ್ ಅವರಿಗೆ ಐಎಎಸ್ ಪರೀಕ್ಷೆ ಕುರಿತು ಪರಿಚಯಿಸಿ, ಅದಕ್ಕೆ ಸಂಬಂಧಿಸಿದಂತೆ ಉತ್ತಮ ಮಾರ್ಗದರ್ಶನ ನೀಡಿದರು. ದರ್ಶನ್ ಅವರು ಯುಪಿಎಸ್ ಸಿ ಮುಗಿದ ಬಳಿಕ ಇಂದಿರಾಗಾAಧಿ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಒಂದೇ ಬಾರಿಗೆ ಮಾನವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವ ನಿಟ್ಟಿನಲ್ಲ ಅಧ್ಯಯನಶೀಲರಾಗಿದ್ದಾರೆ.

ನಮ್ಮೂರ್ ಎಕ್ಸ್ಪ್ರೆಸ್ ಮಲ್ನಾಡ್ ಐಕಾನ್ ಪ್ರಶಸ್ತಿ-2024
ದರ್ಶನ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಮತ್ತು ಆಳ್ವಾಸ್ ಶಿಕ್ಷಣ ಸಮಿತಿಯಿಂದ ಸನ್ಮಾನ ಲಭಿಸಿದೆ. ಶಿಕ್ಷಣ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಗುರುತಿಸಿ ನಮ್ಮೂರ್ ಎಕ್ಸ್ ಪ್ರೆಸ್ ದಶಮಾನೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ ಮಲೆನಾಡೋತ್ಸವ-2025ರಲ್ಲಿ ಮಲ್ನಾಡ್ ಐಕಾನ್ ಪ್ರಶಸ್ತಿ-2024 ನೀಡಿ ಗೌರವಿಸಲಾಗಿದೆ

ಬಡ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ತರಬೇತಿ
ದರ್ಶನ್ ಅವರು ಐಎಎಸ್ ಪರೀಕ್ಷೆಗೆ ತಜ್ಞ ತರಬೇತುದಾರರಾಗಿ ದೇಶದ ಅನೇಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಐಎಎಸ್ ದರ್ಶನ ಎಂಬ ಸಂಸ್ಥೆಯಲ್ಲಿ ಕರ್ತವ್ಯ ನಿರತರಾಗಿದ್ದಾರೆ. ಹಾಗೆಯೇ ಪುತ್ತೂರಿನ ವಿವೇಕಾನಂದ ಐಎಎಸ್ ಅಧ್ಯಯನ ಕೇಂದ್ರ ಸೇರಿದಂತೆ, ವಿವಿಧ ಐಎಎಸ್ ಅಧ್ಯಯನ ಕೇಂದ್ರಗಳಿಗೆ ತೆರಳಿ ತರಗತಿಗಳನ್ನು ತೆಗೆದುಕೊಳ್ಳುವುದಿದೆ. ಇವರ ಐಎಎಸ್ ದರ್ಶನ ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ವರ್ಷಕ್ಕೆ ಕೇವಲ ಹತ್ತು ಸಾವಿರ ರೂಪಾಯಿ ಮಾತ್ರ ಶುಲ್ಕವನ್ನು ಪಾವತಿಸಿ, ಅಧ್ಯಯನ ನಡೆಸುತ್ತಿದ್ದಾರೆ. ಇನ್ನೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಉಚಿತವಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಪುತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಯುಟ್ಯೂಬ್ ವಾಹಿನಿಯಲ್ಲಿ ಉಚಿತವಾಗಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡುತ್ತಿದ್ದು, ತರಗತಿಗಳನ್ನು ಕೂಡ ನಡೆಸುತ್ತಿದ್ದಾರೆ.

ಕನ್ನಡದಲ್ಲಿ ಐಎಎಸ್ ಜಾಗೃತಿ ಮೂಡಿಸುವ ಕಾಯಕ!
ಐಎಎಸ್ ನಲ್ಲಿ ಕನ್ನಡಿಗರು ಸ್ಥಾನಗಳನ್ನು ಪಡೆಯಬೇಕು ಎಂಬ ಹಂಬಲದಿಂದ ಪರೀಕ್ಷೆಗಳ ಕುರಿತು ಅನೇಕ ಉಪನ್ಯಾಸಗಳನ್ನು ನೀಡುವ ಮೂಲಕ, ಅದರ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇವರು ಐಎಎಸ್ ದರ್ಶನ ಎಂಬ ತಮ್ಮದೇ ತರಬೇತಿ ಸಂಸ್ಥೆಯ ಮೂಲಕ, 250ಕ್ಕೂ ಹೆಚ್ಚಿನ ಬೇರೆ ಬೇರೆ ಅವಧಿಗಳಲ್ಲಿ ಐಎಎಸ್ ಅಷ್ಟೇ ಅಲ್ಲದೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಇದರಿಂದ 40.000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಾಭವಾಗಿದೆ.

Categories
ತೀರ್ಥಹಳ್ಳಿ ಪ್ರತಿಭೆಗಳು ಪ್ರಶಸ್ತಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿ: ಸಜನಾಗೆ ಸಮಾಜಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ

ತೀರ್ಥಹಳ್ಳಿ: ಸಜನಾಗೆ ಸಮಾಜಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ
•ಆಟೋ ಚಾಲಕನ ಮಗಳಿಗೆ ಒಲಿದ ಐದು ಚಿನ್ನದ ಪದಕಗಳು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ತೀರ್ಥಹಳ್ಳಿ: ಕುವೆಂಪು ವಿಶ್ವವಿದ್ಯಾನಿಲಯದ 35ನೇ ಘಟಿಕೋತ್ಸವ ಕಾರ್ಯಕ್ರಮವು ಬುಧವಾರದಂದು ನಡೆದಿದ್ದು, ಸಾವಿರಾರು ಜನ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದು, ನೂರಾರು ವಿದ್ಯಾರ್ಥಿಗಳು ತಮ್ಮ ಪರಿಶ್ರಮ ಮತ್ತು ಶೈಕ್ಷಣಿಕ ಸಾಧನೆಯ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಈ ಸಂದರ್ಭದಲ್ಲಿ ತೀರ್ಥಹಳ್ಳಿ ಮೂಲದ ಆಟೋ ಚಾಲಕರ ಮಗಳಾದ ಎಸ್. ಸಜನಾ ಅವರು ಸಮಾಜಶಾಸ್ತ್ರ ವಿಭಾಗದಲ್ಲಿ 2024-25ನೇ ಸಾಲಿನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಐದು ಚಿನ್ನದ ಪದಕಗಳಿಗೆ ಕೊರಳೊಡ್ಡಿ, ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ. ಸಜನಾ ಅವರು ರಂಜದಕಟ್ಟೆಯ ನಿವಾಸಿಯಾದ ಶ್ರೀಮತಿ ಸವಿತಾ ಮತ್ತು ಆಟೋ ಚಾಲಕರಾದ ಶ್ರೀನಿವಾಸ್ ಅವರ ಪುತ್ರಿಯಾಗಿದ್ದಾರೆ.

Categories
ಚಿಕ್ಕಮಗಳೂರು ಮಲ್ನಾಡ್ ಶೃಂಗೇರಿ

ಜೀವರಾಜ್ ಈಗ ಶೃಂಗೇರಿ ಶಾಸಕರು!

ಜೀವರಾಜ್ ಈಗ ಶೃಂಗೇರಿ ಶಾಸಕರು!
– 4ನೇ ಬಾರಿಗೆ ಶಾಸಕರಾಗಿ ಅಧಿಕಾರ ಸ್ವೀಕಾರ
– ಜನ ನಾಯಕನಿಗೆ ಸಿಕ್ಕ ಶಾಸಕ ಸ್ಥಾನ

8 ವರ್ಷಗಳ ರಾಜಕೀಯ ವಿರಾಮದ ಬಳಿಕ ಮತ್ತೆ ಜೀವರಾಜ್ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಅಂಚೆ ಮತ ಎಣಿಕೆಯಲ್ಲಿ ಗೆದ್ದ ಜೀವರಾಜ್ ವಿಧಾನ ಸೌಧದಲ್ಲಿ ಬುಧವಾರ ಸಂಜೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ವೇಳೆ ಪಕ್ಷದ ನಾಯಕರಾದ ಆರ್.ಅಶೋಕ್ ಸೇರಿ ಶೃಂಗೇರಿ ಕ್ಷೇತ್ರದ ಹಲವರು ನಾಯಕರು, ಕಾರ್ಯಕರ್ತರು ಇದ್ದರು.
ವಿಧಾನ ಸೌಧ ಪ್ರವೇಶ ವೇಳೆ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ಜೀವರಾಜ್ ಕೊಠಡಿಗೆ ತೆರಳಿದರು. ಇಡೀ ಶೃಂಗೇರಿ ಕ್ಷೇತ್ರದಲ್ಲಿ ಸಂತಸ ಕಂಡು ಬರುತ್ತಿದೆ.

ನೂತನ ಶಾಸಕರಿಗೆ ಶುಭಾಶಯಗಳು

Categories
ಬೆಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ಟಾಪ್ 3 ನ್ಯೂಸ್

ಟಾಪ್ 3 ನ್ಯೂಸ್

ಬೆಂಗಳೂರಿಗೆ ಮೇ 10ಕ್ಕೆ ಪ್ರಧಾನಿ ಆಗಮನ!
– ರವಿಶಂಕರ್ ಗುರೂಜಿ ಅವರ 70ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿ
– ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆ; ಆರೋಪಿಗಳ ಬಂಧನ
– ಪತ್ನಿ, ಮಕ್ಕಳಿಗೆ ಜೀವನಾoಶ: ಕೋರ್ಟ್ ಮಹತ್ವದ ತೀರ್ಪು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರೂಜಿ ಅವರ 70ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮೇ 10ರ ಭಾನುವಾರದಿಂದ ಮೇ 25ರ ಸೋಮವಾರದವರೆಗೆ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಪ್ರಯುಕ್ತ ಮೊದಲ ದಿನವಾದ ಮೇ 10ರ ಭಾನುವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಸಾಂಪ್ರದಾಯಿಕ ಕಲೆಗಳಿಂದ ಶೃಂಗಾರಗೊಂಡಿರುವ ಆರ್ಟ್ ಆಫ್ ಲಿವಿಂಗ್ ನ ನೂತನ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ

•ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆ; ಆರೋಪಿಗಳ ಬಂಧನ

ಶಿವಮೊಗ್ಗ: ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದರ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಪ್ರಶ್ನಿಸಿದ್ದರಿಂದ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ, ಗಾಂಧಿ ಬಜಾರ್ ನಲ್ಲಿ ನಡೆದಿದೆ. ಪೂರ್ವ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ ಮತ್ತು ಸಿಪಿಸಿ ಸಂತೋಷ್ ಅವರು ಬೆಳಿಗ್ಗೆ ಗಾಂಧಿ ಬಜಾರಿನಲ್ಲಿ, ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದಾರೆ. ಆಗ ಪೊಲೀಸರು ತಡೆದು ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಯ್ಯದ್ ಮುಜಾಮಿಲ್ ರಸ್ತೆಯ ನಡುವೆಯೇ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ್ದಾನೆ.‌

ಆಗ ಸ್ಥಳಕ್ಕೆ ಆಗಮಿಸಿದ ಜಬಿವುಲ್ಲಾ ಎನ್ನುವ ವ್ಯಕ್ತಿಯು ಸಯ್ಯದ್ ಮುಜಾಮಿಲ್ ಜೊತೆಗೆ ಸೇರಿಕೊಂಡು “ನಾವು ಹೆಲ್ಮೆಟ್ ಹಾಕುವುದಿಲ್ಲ. ನೀವು ಏನು ಮಾಡುತ್ತೀರಾ?”ಎಂದು ಅವಾಚ್ಯ ಶಬ್ದಗಳಿಂದ ಬೈದು, ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ಸಮವಸ್ತ್ರದಲ್ಲಿದ್ದ ಅಧಿಕಾರಿಗಳನ್ನು ದೂಡಿ, ಸರ್ಕಾರಿ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಬೈಕ್ ಕೀ ಅನ್ನು ಕಿತ್ತುಕೊಂಡಿದ್ದರಿಂದ, ಆರೋಪಿಗಳು ಪೊಲೀಸರಿಗೆ ಬೆದರಿಕೆ ಹಾಕಿ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಪರಿಣಾಮವಾಗಿ ಪೊಲೀಸರು ಸಯ್ಯದ್ ಮುಜಾಮಿಲ್ ಮತ್ತು ಜಬಿವುಲ್ಲಾ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪತ್ನಿ, ಮಕ್ಕಳಿಗೆ ಜೀವನಾoಶ: ಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಪುರುಷನೊಬ್ಬ ಎರಡನೇ ವಿವಾಹವಾದರೆ ಮೊದಲ ಪತ್ನಿಗೆ ಮತ್ತು ಆಕೆಯ ಮಕ್ಕಳ ಜೊತೆಗೆ ಪುರುಷನ ವೃದ್ಧ ತಾಯಿಯಿದ್ದರೆ ಅವರಿಗೆ ಜೀವನಾಂಶ ನೀಡಲು ಹಣವಿಲ್ಲವೆಂದು ಹೇಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಉಚ್ಚ ನ್ಯಾಯಾಲಯವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಕೌಟುಂಬಿಕ ನ್ಯಾಯಾಲಯವು ನೀಡಿದ್ದ ಮಾಸಿಕ 30.000 ರೂಪಾಯಿ ಜೀವನಾಂಶದ ಆದೇಶವನ್ನು ಎತ್ತಿ ಹಿಡಿದಿರುವ ನ್ಯಾಯಪೀಠವು ತನ್ನ ಪತ್ನಿ ಮತ್ತು ವೃದ್ಧ ತಾಯಿಯನ್ನು ಸಲಹುವುದು ಪುರುಷನ ಕಾನೂನಾತ್ಮಕ ಜವಾಬ್ದಾರಿಯಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ.

ಮೊದಲ ಪತ್ನಿ ಮತ್ತವರ ಮಕ್ಕಳಿಗೆ ಮಾಸಿಕ 30.000 ರೂಪಾಯಿಗಳಷ್ಟು ಹಣವನ್ನು ಪರಿಹಾರದ ರೂಪದಲ್ಲಿ ನೀಡಬೇಕೆಂದು ಕೌಟುಂಬಿಕ ನ್ಯಾಯಾಲಯವು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಪುರುಷರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಕೆ.ಬಿ.ಗೀತಾ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ ಎನ್ನುವ ಮಾಹಿತಿ ಲಭಿಸಿದೆ‌.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಅಕ್ರಮ ಮರಳು ಕ್ವಾರಿಯಲ್ಲೇ ಸೀಸ್ ಮಾಡಿದ ಶಾಸಕರು!

ಅಕ್ರಮ ಮರಳು ಕ್ವಾರಿಯಲ್ಲೇ ಸೀಸ್ ಮಾಡಿದ ಶಾಸಕರು!
– ದಬ್ಬಣಗದ್ದೆ ಕ್ವಾರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರಗ
– ಗಣಿ ಇಲಾಖೆ, ತಾಲೂಕು ಆಡಳಿತದಿಂದ ತಂಡ ರಚನೆ
– ದಬ್ಬಣಗದ್ದೆ, ಹುಣಸವಳ್ಳಿ ಸೇರಿ ನೂರಾರು ಕಡೆ ಕಳ್ಳ ಮರಳು!
– ರಾಜಕಾರಣಿಗಳು, ಪ್ರಭಾವಿಗಳೇ ಇಲ್ಲಿ ಬ್ರೋಕರ್ಸ್!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತುಂಗಾ, ಮಾಲತಿ, ಕುಶಾವತಿ ಸೇರಿ ತಾಲೂಕಿನ ಹಳ್ಳ,. ಕೊಳ್ಳಗಳಲ್ಲೂ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇದೀಗ ಅಕ್ರಮದ ವಿರುದ್ಧ ತಾಲೂಕು ಆಡಳಿತ ಮತ್ತು ಶಾಸಕರು ಸಮರ ಸಾರಿದ್ದಾರೆ. ತೀರ್ಥಹಳ್ಳಿ ತಾಲೂಕಿನ ದಬ್ಬಣಗದ್ದೆಯಲ್ಲಿ ಸಾವಿರಾರು ಲೋಡ್ ಮರಳು ಅಕ್ರಮವಾಗಿ ಹೊಡೆಯಲಾಗಿದೆ. ಗಣಿ ಮತ್ತು ಇತರೆ ಇಲಾಖೆ ಅಧಿಕಾರಿಗಳು ನೇರವಾಗಿ ಶಾಮೀಲು ಆಗಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದು, ಸ್ಥಳದಲ್ಲೇ ಜೇಸಿಬಿ, ಲಾರಿಗಳನ್ನು ಹಿಡಿಯಲಾಗಿದೆ. ಸರ್ಕಾರಕ್ಕೆ ಯಾವುದೇ ಟ್ಯಾಕ್ಸ್ ಅಥವಾ ರಾಯಲ್ಟಿ ಕಟ್ಟದೆ ಇಲ್ಲಿ ಅಕ್ರಮ ಮರಳು ದಂಧೆ ನಡೆಸಲಾಗುತ್ತಿದೆ.

ಶಿವಮೊಗ್ಗ ಭಾಗಕ್ಕೆ ನೂರಾರು ಲಾರಿಗಳು ಹೋಗುತ್ತಿದ್ದು, ಸ್ಥಳೀಯರಿಗೂ ಮರಳು ಸಿಗುತ್ತಿಲ್ಲ. ಪರ್ಮಿಟ್ ಇಲ್ಲದೆ ನೂರಾರು ಲೋಡ್ ಮರಳು ಹೇಗೆ ಸಾಗಣೆ ಆಗುತ್ತಿದೆ ಎಂದು ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ದಾರೆ. ಇನ್ನು ಬಹುತೇಕ ಕ್ವಾರೆಗಳಲ್ಲಿ ಯಾವುದೇ ಲೈಸೆನ್ಸ್ ಇಲ್ಲದೆ ಮರಳು ಸಾಗಣೆ ಮಾಡಲಾಗುತ್ತಿದೆ. ಇನ್ನು ಸರ್ಕಾರಿ ಕೆಲಸದ ಹೆಸರಲ್ಲೂ ಅನೇಕ ಕಡೆ ಮರಳು ಕಳ್ಳ ಸಾಗಣೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Categories
ಉಡುಪಿ ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಕಡಬ: ಆಸ್ತಿ ವಿಚಾರವಾಗಿ ಮಹಿಳೆ ಮೇಲೆ ಆ್ಯಸಿಡ್ ದಾಳಿಗೆ ಯತ್ನ
• ಉಡುಪಿ: ಅಕ್ರಮ ಜಾನುವಾರು ಸಾಗಾಟ; ಇಬ್ಬರ ಬಂಧನ
• ಮಂಗಳೂರು: ಇಬ್ಬರು ಮಕ್ಕಳ ಸಾವಿಗೆ ಮನನೊಂದು ತಾಯಿ ಆತ್ಮಹತ್ಯೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

• ಕಡಬ: ಆಸ್ತಿ ವಿಚಾರವಾಗಿ ಮಹಿಳೆ ಮೇಲೆ ಆ್ಯಸಿಡ್ ದಾಳಿಗೆ ಯತ್ನ

ಕಡಬ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಲಹ ಏರ್ಪಟ್ಟು ವ್ಯಕ್ತಿಯೊಬ್ಬರು ಮಹಿಳೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ, ಕಳೆದೆರಡು ದಿನಗಳ ಹಿಂದೆ ಐತ್ತೂರು ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಕಲಹ ಏರ್ಪಟ್ಟಿದ್ದು, ಅದು ವಿಕೋಪಕ್ಕೆ ತಿರುಗಿ, ವ್ಯಕ್ತಿಯು ಮನೆಯ ಸುತ್ತಲೂ ಪೆಟ್ರೋಲ್ ಸುರಿದು, ಬಳಿಕ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಜೀವಂತ ದಹನ ಮಾಡಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಜೀವಭಯದಿಂದ ಮಹಿಳೆ ಮತ್ತು ಮಕ್ಕಳು ಜೋರಾಗಿ ಕಿರುಚಿಕೊಂಡಿದ್ದಾರೆ.

ಪರಿಣಾಮವಾಗಿ ಅಕ್ಕಪಕ್ಕದ ಮನೆಗಳಲ್ಲಿದ್ದ ಜನರು ಧಾವಿಸಿ ಬಂದಿರುವುದರಿಂದ ಎದುರಾಗಬಹುದಾಗಿದ್ದ ಭಾರಿ ಪ್ರಮಾಣದ ಅವಘಡ ಕೂದಲೆಳೆಯ ಅಂತರದಿಂದ ತಪ್ಪಿ ಹೋಗಿದೆ ಎನ್ನಲಾಗಿದೆ. ಎದುರಾದ ಸನ್ನಿವೇಶದಿಂದಾಗಿ ಆಘಾತಕ್ಕೆ ಒಳಗಾಗಿದ್ದ ಮಹಿಳೆಯನ್ನು ತಕ್ಷಣ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸಧ್ಯಕ್ಕೆ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ ಎನ್ನುವ ಸಂಗತಿ ತಿಳಿದುಬಂದಿದೆ.

• ಉಡುಪಿ: ಅಕ್ರಮ ಜಾನುವಾರು ಸಾಗಾಟ; ಇಬ್ಬರ ಬಂಧನ

ಉಡುಪಿ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ, ಮಂಗಳವಾರದಂದು ನಡೆದಿದೆ. ಕಸಾಯಿಖಾನೆಯಲ್ಲಿ ಮಾಂಸ ಮಾಡಲು ಪೆರ್ಡೂರು ಕಡೆಯಿಂದ ಹಿರಿಯಡ್ಕದ ಕಡೆಗೆ ಬೊಲೆರೋ ಟೆಂಪೋ ಗೂಡ್ಸ್ ವಾಹನದಲ್ಲಿ ನಾಲ್ಕು ಜಾನುವಾರುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಪಕ್ಕಾಲು ಹೆಬ್ಬಾರು ಸೇತುವೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಚರಂಡಿಗೆ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನಾಲ್ಕು ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಮಂಗಳೂರು: ಇಬ್ಬರು ಮಕ್ಕಳ‌ ಸಾವಿಗೆ ಮನನೊಂದು ತಾಯಿ ಆತ್ಮಹತ್ಯೆ

ಮಂಗಳೂರು: ಮಕ್ಕಳಿಬ್ಬರ ಸಾವಿಗೆ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಬಂಗ್ರ ಕೂಳೂರಿನಲ್ಲಿ ನಡೆದಿದೆ. ಸಂಧ್ಯಾ ಎನ್ನುವವರ ಪುತ್ರ ಒಂದುವರೆ ವರ್ಷದ ಮಗು ಕಿಡ್ನಿ ವೈಫಲ್ಯದಿಂದಾಗಿ ಮೃತಪಟ್ಟಿತ್ತು. ಕಳೆದ ಒಂದು ವರ್ಷದ ಹಿಂದೆ ಮಗಳು ಕೂಡ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಇದರಿಂದಾಗಿ ಸಂಧ್ಯಾ ಅವರು ತೀವ್ರವಾಗಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಈ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಅನುಮಾನ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ ಮಲ್ನಾಡ್ ರಾಜ್ಯ ಶಿವಮೊಗ್ಗ

ರಾಜ್ಯ ಕಂಡ ಅಪರೂಪದ ರಾಜಕಾರಣಿ ಕಿಮ್ಮನೆ ರತ್ನಾಕರ್

ರಾಜ್ಯ ಕಂಡ ಅಪರೂಪದ ರಾಜಕಾರಣಿ ಕಿಮ್ಮನೆ ರತ್ನಾಕರ್

– ವಕೀಲರಾಗಿ, ರಾಜಕಾರಣಿಯಾಗಿ ನೊಂದವರಿಗೆ ಬೆಳಕು
– ಮಲೆನಾಡ ಆಗ್ರ ಪಂಕ್ತಿ ನಾಯಕರಲ್ಲಿ ಕಿಮ್ಮನೆ ಒಬ್ಬರು

ವೃತ್ತಿಯಲ್ಲಿ ವಕೀಲರಾಗಿ, ರಾಜಕೀಯ ಕ್ಷೇತ್ರದಲ್ಲಿ ದಕ್ಷತೆಯಿಂದ ಜನರ ನಂಬಿಕೆ ಗಳಿಸಿದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್. ರಾಜ್ಯ ಕಂಡ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರು. ಶಿಕ್ಷಣ ಸಚಿವರಾಗಿ, ಕಾಂಗ್ರೆಸ್ ವಕ್ತಾರರಾಗಿ, ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ, ಮಲೆನಾಡ ಅಗ್ರ ಪಂಕ್ತಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ,ಸಾರ್ವಜನಿಕ ಸೇವೆಯನ್ನು ಬಹಳ ಮುಖ್ಯವಾಗಿ ನೋಡಿಕೊಂಡು, ರಾಜ್ಯದ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ವಕೀಲರಾಗಿ ಸೇವೆ ಸಲ್ಲಿಸುತ್ತಲೇ ಜನರ ಪ್ರೀತಿ ಗಳಿಸಿ ಮಾದರಿ ಜನ ನಾಯಕರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ 1951ರಲ್ಲಿ ಕಿಮ್ಮನೆಯಲ್ಲಿ ಜನಿಸಿದ ಇವರು, ತಮ್ಮ ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮತ್ತು ಪದವಿಯನ್ನು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. 1966ರಲ್ಲಿ ಬಿ.ಎಮ್.ಎಸ್ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದಾರೆ.

ರಾಜಕೀಯ ವೃತ್ತಿ ಜೀವನ

ಕಿಮ್ಮನೆ ರತ್ನಾಕರ್ ರವರು 1978 ಮತ್ತು 1983ರಲ್ಲಿ ತಾಲೂಕು ಮಂಡಳಿ ಸದಸ್ಯರಾಗಿ ಹಾಗೂ 1982 ಮತ್ತು 2005ರಲ್ಲಿ
ತೀರ್ಥಹಳ್ಳಿಯ ಲಾ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು. 2008 ರಿಂದ 2013 ರವರೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದಿಂದ ಕರ್ನಾಟಕದ ವಿಧಾನಸಭಾ ಸದಸ್ಯರಾಗಿದ್ದರು. 2013ರಲ್ಲಿ ಕೆಜೆಪಿಯ ಆರ್.ಎಂ ಮಂಜುನಾಥ ಗೌಡ ಅವರನ್ನು 1343 ಮತಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ವಿಧಾನಸಭೆಯ ಸದಸ್ಯರಾಗುವುದರೊಂದಿಗೆ 2013 ರಿಂದ 2016 ರವರೆಗೆ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದರು.

2018ರಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ ವಿರುದ್ಧ 21,679 ಮತಗಳಿಂದ ಸೋತರು. ಶಿಕ್ಷಣ ಸಚಿವರಾಗಿ ಅನೇಕ ಯೋಜನೆ ಕರ್ನಾಟಕದ ಮಾಜಿ ಸಚಿವರು ಹಾಗೂ ವೃತ್ತಿಪರ ವಕೀಲರಾಗಿರುವ ಕಿಮ್ಮನೆ ರತ್ನಾಕರ್ ರವರು ಶಿಕ್ಷಣವನ್ನು ಆಧುನೀಕರಿಸಲು ಡಿಸೆಂಬರ್ 20, 2015ರಂದು ಉಚಿತ ರೋಬೋಮೇಟ್ ಅಪ್ಲಿಕೇಷನನ್ನು ಉದ್ಘಾಟಿಸಿದರು. ಶಾಲೆಗಳಲ್ಲಿ ಇರುವ ಅಭದ್ರತೆಗಳನ್ನು ಗಮನಿಸಿದ ಇವರು ಎಲ್ಲಾ ಶಾಲೆಗಳಲ್ಲಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆದೇಶಿಸಿದರು. ಅಧಿಕಾರಕ್ಕೆ ಬರುತ್ತಿದ್ದಂತೆ ಶಿಕ್ಷಣ ಇಲಾಖೆಯ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಾದ ವಿದ್ಯುತ್, ಶೌಚಾಲಯ, ಆಟದ ಮೈದಾನ, ಕುಡಿಯುವ ನೀರಿನ ಸೌಲಭ್ಯವನ್ನು ನೀಡಲು ಕ್ರಮ ಕೈಗೊಳ್ಳುವುದರೊಂದಿಗೆ, ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಮುದಾಯದ ಜನರಿಗೆ ಸೌಲಭ್ಯಗಳನ್ನು ಒದಗಿಸಲು ಹೊಸ ಹೊಸ ಯೋಜನೆ ಮಾಡಿದರು. ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ದ ಸಮರ ಸಾರಿದ್ದರು.

ರಾಜಕೀಯದಲ್ಲಿ ತಮ್ಮ ಶ್ರದ್ಧೆ, ಪ್ರಾಮಾಣಿಕತೆ

ನ್ಯಾಯಬದ್ಧ ಮತ್ತು ದಿಟ್ಟ ನಾಯಕತ್ವದಿಂದ ಗುರುತಿಸಿಕೊಂಡು ತಮ್ಮ ಕ್ಷೇತ್ರದ ಮತ್ತು ರಾಜ್ಯದ ಜನರಿಗೆ ಅಭಿವೃದ್ಧಿಯ ಹೊಸ ಆಯಾಮಗಳನ್ನು ನೀಡಲು ನಿರಂತರ ಪ್ರಯತ್ನಿಸುತ್ತಿರುವ ಕಿಮ್ಮನೆ ಅವರು ರಾಜ್ಯ ಕಂಡ ಅಪರೂಪದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇವರ ರಾಜಕೀಯ ಸೇವೆಗೆ ನೂರಾರು ಗೌರವಗಳು ಸಂದಿವೆ.

ಸಿ.ಎಂ ಆಗುವ ಅರ್ಹತೆ ಉಳ್ಳ ನಾಯಕ!

ರಾಜ್ಯದಲ್ಲಿ ಸಿಎಂ ಆಗುವ ಅರ್ಹತೆ ಉಳ್ಳ ಒಕ್ಕಲಿಗ ನಾಯಕರಲ್ಲಿ ಕಿಮ್ಮನೆ ರತ್ನಾಕರ್ ಕೂಡ ಒಬ್ಬರು. ಈ ಬಗ್ಗೆ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿಕೆ ನೀಡಿದ್ದಾರೆ.

Categories
ಬೆಂಗಳೂರು ಮಾಹಿತಿ ಸುದ್ದಿ ರಾಜ್ಯ ಶಿಕ್ಷಣ

ಶಾಲಾ-ಕಾಲೇಜುಗಳಲ್ಲಿ ಅಶ್ಲೀಲ ನೃತ್ಯಕ್ಕೆ ಬ್ರೇಕ್!

ಶಾಲಾ-ಕಾಲೇಜುಗಳಲ್ಲಿ ಅಶ್ಲೀಲ ನೃತ್ಯಕ್ಕೆ ಬ್ರೇಕ್!
– ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿಯಮ ಮೀರಂಗಿಲ್ಲ
– ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರಿಗೆ ಜವಾಬ್ದಾರಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ​ಶಾಲಾ-ಕಾಲೇಜುಗಳ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲ ನೃತ್ಯಕ್ಕೆ ಶಿಕ್ಷಣ ಇಲಾಖೆ ಬ್ರೇಕ್ ಹಾಕಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ವೇದಿಕೆಗಳು ಸಿನಿಮಾಗಳ ಐಟಂ ಡ್ಯಾನ್ಸ್, ದ್ವಂದ್ವಾರ್ಥದ ಹಾಗೂ ಅಶ್ಲೀಲ ಹಾಡುಗಳ ಪ್ರದರ್ಶನದ ತಾಣವಾಗಿ ಬದಲಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿತ್ತು. ವಿದ್ಯಾರ್ಥಿಗಳ ಎಳೆಯ ಮನಸ್ಸಿನ ಮೇಲೆ ಇದು ಬೀರುವ ನಕಾರಾತ್ಮಕ ಪ್ರಭಾವವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು, ಇದೀಗ ಇಂತಹ ಅಸಭ್ಯ ಪ್ರದರ್ಶನಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೆ ಶಾಲಾ, ಕಾಲೇಜು ಪ್ರಿನ್ಸಿಪಾಲ್ ಹಾಗೂ ಆಡಳಿತ ಮಂಡಳಿ ಈ ಬಗ್ಗೆ ಸೂಚನೆ ನೀಡಲಾಗಿದೆ.

ಇದು ಕೇವಲ ಒಂದು ಆಡಳಿತಾತ್ಮಕ ನಿಯಮವಲ್ಲ, ಬದಲಾಗಿ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಟ್ಟಿರುವ ಅತ್ಯಂತ ಸಂವೇದನಾಶೀಲ ಹೆಜ್ಜೆ ಎಂದು ಸರ್ಕಾರ ಹೇಳಿದೆ. ಶಾಲೆಗಳು ಕೇವಲ ಅಕ್ಷರ ಕಲಿಸುವ ಕೇಂದ್ರಗಳಲ್ಲ; ಅವು ಸಂಸ್ಕಾರ, ನೈತಿಕತೆ ಹಾಗೂ ಉನ್ನತ ವ್ಯಕ್ತಿತ್ವ ವಿಕಸನದ ದೇಗುಲಗಳು. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ರೀಲ್ಸ್ ಮತ್ತು ಟ್ರೆಂಡಿಂಗ್ ಹಾಡುಗಳ ಪ್ರಭಾವದಿಂದ ಮಕ್ಕಳು ಬೇಗನೆ ಆಕರ್ಷಿತರಾಗುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ತಾವು ನೋಡುವುದನ್ನೇ ಸರಿಯೆಂದು ನಂಬಿ ಅನುಕರಿಸಲು ಪ್ರಯತ್ನಿಸುತ್ತಾರೆ. ಅಶ್ಲೀಲ ನೃತ್ಯಗಳು ಮಕ್ಕಳ ಮುಗ್ಧತೆಯನ್ನು ಕಸಿದುಕೊಳ್ಳುವುದಲ್ಲದೆ, ಅವರಲ್ಲಿ ಮಹಿಳೆಯರ ಮತ್ತು ಕಲೆಯ ಬಗ್ಗೆ ತಪ್ಪು ಕಲ್ಪನೆಗಳನ್ನು ಮೂಡಿಸುತ್ತವೆ.

ಶಿಕ್ಷಣ ಇಲಾಖೆಯ ಈ ನಡೆಯು, ಮಕ್ಕಳನ್ನು ಇಂತಹ ಸಾಂಸ್ಕೃತಿಕ ಮಾಲಿನ್ಯದಿಂದ ಪಾರುಮಾಡಿ, ಅವರಲ್ಲಿ ಕಲೆಯ ಬಗೆಗಿನ ನೈಜ ಸೌಂದರ್ಯಪ್ರಜ್ಞೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ​ಈ ಆದೇಶದ ಅರ್ಥ ಶಾಲಾ ವಾತಾವರಣದಿಂದ ಮನರಂಜನೆಯನ್ನೇ ಕಿತ್ತುಕೊಳ್ಳುವುದಲ್ಲ; ಬದಲಾಗಿ ‘ಸಂಸ್ಕೃತಿಯೊಂದಿಗೆ ಮನರಂಜನೆ’ಗೆ ಒತ್ತು ನೀಡುವುದಾಗಿದೆ. ನಮ್ಮ ನಾಡಿನಲ್ಲಿ ಯಕ್ಷಗಾನ, ಜಾನಪದ, ಶಾಸ್ತ್ರೀಯ ನೃತ್ಯಗಳು, ಮೌಲ್ಯಾಧಾರಿತ ಗೀತೆಗಳು ಹಾಗೂ ನಾಟಕಗಳ ದೊಡ್ಡ ಪರಂಪರೆಯೇ ಇದೆ. ಇವುಗಳನ್ನು ವೇದಿಕೆಯ ಮೇಲೆ ತರುವುದರಿಂದ ಮಕ್ಕಳಲ್ಲಿ ತಮ್ಮ ಬೇರುಗಳ ಬಗ್ಗೆ ಹೆಮ್ಮೆ ಮೂಡುತ್ತದೆ ಹಾಗೂ ಅವರ ಸೃಜನಶೀಲತೆಗೆ ಒತ್ತು ಸಿಗುತ್ತದೆ. ಕೇವಲ ಕ್ಷಣಿಕ ಚಪ್ಪಾಳೆಗಾಗಿ ಅಸಭ್ಯವಾಗಿ ಕುಣಿಯುವ ಬದಲು, ಕೌಶಲ್ಯಪೂರ್ಣವಾಗಿ ಪ್ರತಿಭೆಯನ್ನು ಪ್ರದರ್ಶಿಸಲು ಇದು ನಾಂದಿಯಾಗಲಿದೆ.

​ಶಿಕ್ಷಣ ಇಲಾಖೆಯ ಈ ಆದೇಶ ಕೇವಲ ಕಾಗದದಲ್ಲಿ ಉಳಿಯಬಾರದು. ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಇದನ್ನು ಜವಾಬ್ದಾರಿಯಿಂದ ಒಪ್ಪಿಕೊಂಡು ಜಾರಿಗೊಳಿಸಬೇಕು. ಕಲೆಯೆಂದರೆ ಕೇವಲ ದೇಹದ ಪ್ರದರ್ಶನವಲ್ಲ, ಅದು ಅಂತಃಕರಣದ ಶುದ್ಧ ಅಭಿವ್ಯಕ್ತಿ ಎಂಬುದನ್ನು ಮಕ್ಕಳಿಗೆ ಪ್ರೀತಿಯಿಂದ ಅರ್ಥೈಸಬೇಕಾಗಿದೆ. ಶಾಲಾ ವೇದಿಕೆಗಳು ಮತ್ತೊಮ್ಮೆ ಶುದ್ಧ ಕಲೆ, ನೈಜ ಸಂಸ್ಕೃತಿ ಹಾಗೂ ಆರೋಗ್ಯಕರ ಮನರಂಜನೆಯ ತಾಣಗಳಾಗಿ ಅರಳಲಿ ಎಂಬುದು ಈ ಆದೇಶದ ಉದ್ದೇಶವಾಗಿದೆ.

Categories
ಚಿಕ್ಕಮಗಳೂರು ಬೆಂಗಳೂರು ರಾಜ್ಯ

ಟಾಪ್ 3 ನ್ಯೂಸ್ ಕರ್ನಾಟಕ

ಟಾಪ್ 3 ನ್ಯೂಸ್ ಕರ್ನಾಟಕ

ಮಗಳ ಮೇಲೆ ಕಣ್ಣು ಹಾಕಿದವನ ಕೊಂದ ತಂದೆ!
– ಚಿಕ್ಕಮಗಳೂರು: ಎಸಿಎಫ್ ಮನೆ ಮುಂದೆ ವಾಮಾಚಾರ!
– ಮಕ್ಕಳ ಬಗ್ಗೆ ಹುಷಾರು: ವಿದ್ಯುತ್ ಶಾಕ್ ಗೆ ಬಾಲಕಿ ಬಲಿ!

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ವ್ಯಕ್ತಿಯನ್ನು, ಆಕೆಯ ತಂದೆಯೇ ಹತ್ಯೆ ಮಾಡಿದ ಪ್ರಕರಣವು ಬೆಂಗಳೂರಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಗಳ ಸುರಕ್ಷತೆಗಾಗಿ ತಂದೆಯೊಬ್ಬನು ಕಾನೂನನ್ನು ಕೈಗೆತ್ತಿಕೊಂಡ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ. ಬಾಗಲಕೋಟೆ ಮೂಲದ ರಮೇಶ್ ಎಂಬಾತ ದುಬೈನಿಂದ ವಾಪಸ್ಸಾದ ಬಳಿಕ ತನ್ನ ಸಂಬಂಧಿಕರ ಅಪ್ರಾಪ್ತ ಮಗಳ ಮೇಲೆ ಕಣ್ಣಿಟ್ಟಿದ್ದನೆಂಬ ಆರೋಪ ಕೇಳಿಬಂದಿದೆ. “ನಿನ್ನನ್ನೇ ಮದುವೆಯಾಗುತ್ತೇನೆ” ಎಂದು ಆಕೆಯನ್ನು ನಿರಂತರವಾಗಿ ಕಾಡುತ್ತಿದ್ದನು ಎನ್ನಲಾಗಿದೆ. ಈ ಬಗ್ಗೆ ಪೋಷಕರು ನೀಡಿದ ದೂರಿನ ಮೇರೆಗೆ, ರಮೇಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆತ ಜೈಲಿಗೂ ಹೋಗಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.

ಜೈಲಿನಿಂದ ಹೊರಬಂದ ಬಳಿಕವೂ ತನ್ನ ವರ್ತನೆಯನ್ನು ಬದಲಿಸದ ರಮೇಶ್, ಮತ್ತೆ ಯುವತಿಯನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿಯ ತಂದೆ ಈರಯ್ಯ, ತನ್ನ ಸಂಬಂಧಿಕರಾದ ಚಿನ್ನಯ್ಯ, ಚೇತನ್ ಮತ್ತು ಚರಣ್ ಜೊತೆಗೂಡಿ ಕಠಿಣ ನಿರ್ಧಾರಕ್ಕೆ ಬಂದಿದ್ದಾನೆ. ಆರೋಪಿಗಳು ರಮೇಶ್‌ನನ್ನು ಸ್ನೇಹಪೂರ್ವಕವಾಗಿ ಊಟಕ್ಕೆ ಆಹ್ವಾನಿಸಿದ್ದಾರೆ. ಬಳಿಕ ಮದ್ಯಪಾನ ಮಾಡಿಸಿದ ನಂತರ, ಅವನು ಅಮಲಿನಲ್ಲಿದ್ದಾಗ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸಲು ಶವವನ್ನು ಯಲಹಂಕದ ಅಲ್ಲಾಳಸಂದ್ರ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು.

ರಾಜಕಾಲುವೆಯಲ್ಲಿ ಶವ ಪತ್ತೆಯಾದ ನಂತರ ಯಲಹಂಕ ಪೊಲೀಸರು ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿ ಮತ್ತು ಮೊಬೈಲ್ ಲೊಕೇಶನ್ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ. ತಂದೆ ಸೇರಿದಂತೆ ನಾಲ್ವರು ಆರೋಪಿಗಳು ಈಗ ಪೊಲೀಸ್ ವಶದಲ್ಲಿದ್ದಾರೆ. “ಮಗಳ ರಕ್ಷಣೆಗಾಗಿ ತಂದೆ ಮಾಡಿದ ಈ ಕ್ರಮ ಸರಿಯೇ? ಅಥವಾ ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪೇ?” ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಘಟನೆ ನ್ಯಾಯ, ಕಾನೂನು ಮತ್ತು ಭಾವನೆಗಳ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿದೆ.

ಚಿಕ್ಕೋಡಿ: ವಿದ್ಯುತ್ ಶಾಕ್ ಗೆ ಬಾಲಕಿ ಬಲಿ!

ಚಿಕ್ಕೋಡಿ: ವಿದ್ಯುತ್ ತಗುಲಿ 9 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ, ಮಂಗಳವಾರ ಸಂಜೆ ಇಂಗಳಿ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ , ವಿದ್ಯುತ್ ತಂತಿಯ ಮೇಲೆ ಸ್ಕಿಪ್ಪಿಂಗ್ ಹಗ್ಗ ಬಿದ್ದಿರುವುದನ್ನು ಕಂಡು, ಅದನ್ನು ತೆಗೆದುಕೊಳ್ಳಲೆಂದು ಮೇಲೆ ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಈ ದುರ್ಘಟನೆ ನಡೆದಿದೆ. ಪರಿಣಾಮವಾಗಿ ಬಾಲಕಿಯು ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಮೃತ ಬಾಲಕಿಯನ್ನು ಇಂಗಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೂರನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸಾನ್ವಿ ಕಾಂಬಳೆ ಎಂದು ಗುರುತಿಸಲಾಗಿದೆ. ಆಘಾತಕ್ಕೆ ಒಳಗಾದ ತಕ್ಷಣ ಸಾನ್ವಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು: ಎಸಿಎಫ್ ಮನೆ ಮುಂದೆ ವಾಮಾಚಾರ!

ಚಿಕ್ಕಮಗಳೂರು: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮನೆ ಮುಂದೆ ವಾಮಾಚಾರ ನಡೆದಿದೆ. ಎಸಿಎಫ್ ಜೀಪ್ ಡ್ರೈವರ್ ಮೇಲೂ ವಾಮಾಚಾರ ಪ್ರಯೋಗವಾಗಿದ್ದು, ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಘಟನೆ ನಡೆದಿದೆ. ಎಸಿಎಫ್ ಮೋಹನ್ ಹಾಗೂ ಅವರ ಜೀಪ್ ಚಾಲಕ ಮೇಲೆ ಪ್ರಯೋಗ ಮಾಡಲಾಗಿದೆ. ಮನೆಯ ಗೇಟ್ ಬಳಿ ಎಸಿಎಫ್ ಮೋಹನ್, ಜೀಪ್ ಚಾಲಕನ ಫೋಟೋ ಇಟ್ಟು ವಾಮಾಚಾರ ಮಾಡಿದ್ದು ಮಣ್ಣಿನ ಮಡಕೆಯೊಳಗೆ ಇಬ್ಬರ ಫೋಟೋ ಇಟ್ಟು, ಅರಿಶಿನ-ಕುಕುಂಕುಮ ಹಾಕಿ ಮಡಕೆ ಒಡೆದ ಕಿಡಿಗೇಡಿಗಳ ನಡೆ ಅಚ್ಚರಿ ಮೂಡಿಸಿದೆ. ಕಚೇರಿಯ ಸಿಬ್ಬಂದಿ ಮೇಲೆ ಅನುಮಾನ ಎಂದು ಎಸಿಎಫ್ ದೂರಿನಡಿ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Categories
inspiration ಆರೋಗ್ಯ ಮಲ್ನಾಡ್ ರಾಜ್ಯ

ಮಿಲ್ಲೆಕ್ಸ್ ಸಂಸ್ಥಾಪಕ ಅನಿಲ್ ಜೋಯ್ಸ್

ಮಿಲ್ಲೆಕ್ಸ್ ಸಂಸ್ಥಾಪಕ ಅನಿಲ್ ಜೋಯ್ಸ್
ಬೆಂಗಳೂರಲ್ಲಿ ಲಕ್ಷ ಲಕ್ಷ ಸಂಬಳದ ಕೆಲಸಬಿಟ್ಟು ಹಳ್ಳಿಯಲ್ಲೇ ರಾಷ್ಟ್ರೀಯ ಮಟ್ಟದ ಬ್ರಾಂಡ್ ಕಟ್ಟಿದ ಸಾಧಕ

ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಹುದ್ದೆ ತ್ಯಜಿಸಿ ಹುಟ್ಟಿದ ಊರಲ್ಲೇ ಏನಾದರೂ ಮಾಡಬೇಕು ಎಂದು ಊರು ಬಸ್ಸು ಹತ್ತಿದ ಯುವಕ ಇಂದು 25 ಕೋಟಿ ವ್ಯವಹಾರದ ಒಡೆಯ. ಜತೆಗೆ ಹಳ್ಳಿಯಲ್ಲೇ ನೂರಾರು ಜನರಿಗೆ ಉದ್ಯೋಗ ಕೊಟ್ಟ ಉದ್ಯೋಗದಾತ. ಸಿರಿಧಾನ್ಯ, ಉತ್ತಮ ಪೋಷಕಾಂಶವುಳ್ಳ ಆಹಾರ ತಯಾರು ಮಾಡುವ ಕಂಪನಿ ಸಂಸ್ಥಾಪಕ. ಹೌದು. ಅನಿಲ್ ಜೋಯಿಸ್ ಈ ಸಾಧಕ ಉದ್ಯಮಿ. ಮಿಲ್ಲೆಕ್ಸ್ ಎಂಬ ಬ್ರಾಂಡ್ ಕಟ್ಟಿದ ಸಾಧಕ. ಅನಿಲ್ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಮ್ಮರಡಿಯಲ್ಲಿ ಜನಿಸಿದರು. ಇವರದು ಕೃಷಿ ಮತ್ತು ಉದ್ಯಮದ ಕುಟುಂಬವಾಗಿತ್ತು.

ಇಂಜಿನಿಯರ್ ಪದವೀಧರರಾದ ಅನಿಲ್ ಅವರು, ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ 13 ವರ್ಷಗಳ ಕಾಲ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದರು. ಲಕ್ಷ ಲಕ್ಷ ವೇತನದ ಹುದ್ದೆಯನ್ನು ತ್ಯಜಿಸಿ, ನಮ್ಮತನವನ್ನು ಉಳಿಸಿಕೊಳ್ಳುವ ಮೂಲಕ, ಸ್ವಾವಲಂಬಿ ಜೀವನ ನಡೆಸಬೇಕು, ನಮ್ಮವರಿಗಾಗಿ ದುಡಿಯಬೇಕು ಎಂಬ ಉದ್ದೇಶದಿಂದ ಹುಟ್ಟೂರಿಗೆ ಹಿಂತಿರುಗಿ, ತಂದೆಯ ಹಿಟ್ಟಿನ ಗಿರಣಿಯನ್ನು ಪ್ರೇರಣೆಯಾಗಿಸಿಕೊಂಡು ಸಣ್ಣ ಪ್ರಮಾಣದ ಆಹಾರ ಸಂಬ0ಧಿ ಉದ್ಯಮವನ್ನು ಎರಡು ಲಕ್ಷ ರೂಪಾಯಿ ಬಂಡವಾಳದೊ0ದಿಗೆ ಮಿಲೆಕ್ಸ್ ಎಂಬ ಹೆಸರಿನಲ್ಲಿ 2019ರಲ್ಲಿ ಆರಂಭಿಸಿದರು.
ಉತ್ತಮ ಗುಣಮಟ್ಟದ, ಆರೋಗ್ಯಕರ, ದೇಸಿ ಆಹಾರವನ್ನು ಜಗತ್ತಿಗೆ ವಿತರಿಸುವ ಗುರಿಯನ್ನು ಹೊಂದಿರುವ ಈ ಉದ್ಯಮ ಇಂದು ಇಪ್ಪತ್ತೈದು ಕೋಟಿ ವಹಿವಾಟು ಹೊಂದಿದೆ.ಈ ಉದ್ಯಮದಿಂದ ಮಲೆನಾಡಿನ ಹಲವಾರು ಯುವಕರು ಮತ್ತು ಮಹಿಳೆಯರಿಗೆ ಉದ್ಯೋಗಾವಕಾಶ ದೊರೆಯುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ದಾರಿಯಾಗಿದೆ.

ಪತಿಯ ಉದ್ಯಮಕ್ಕೆ ಪತ್ನಿ ಸಾಥ್!
ಪತ್ನಿ ಮಧುರಾ ಅನಿಲ್ ಅವರು ಗಣಿತಶಾಸ್ತ್ರ ಸ್ನಾತಕೋತ್ತರ ವಿಷಯದಲ್ಲಿ, ಉತ್ತಮ ಅಂಕಗಳನ್ನು ಪಡೆಯುವ ಮೂಲಕ ವಿಶ್ವವಿದ್ಯಾನಿಲಯದಲ್ಲಿ ಐದನೇ ಸ್ಥಾನವನ್ನು ಪಡೆದಿದ್ದು, ಶಿಕ್ಷಕ ವೃತ್ತಿ ತ್ಯಜಿಸಿ ಪತಿಯೊಂದಿಗೆ ಕೈಜೋಡಿಸಿದ್ದಾರೆ. ಇವರು ತಮ್ಮ ಉದ್ಯಮದ ನಿರ್ದೇಶಕರಾಗಿ ರೂಪುಗೊಂಡಿದ್ದಾರೆ. ಪ್ರಸ್ತುತ ಅನಿಲ್ ಅವರು ಕಮ್ಮರಡಿಯಲ್ಲಿನ ತಮ್ಮ ಸಮಾನಮ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮಾಲಿಕರಾಗಿದ್ದು, ಆಹಾರ ಪೂರೈಕೆಯಲ್ಲಿ ಪತ್ನಿಯೊಂದಿಗೆ ಕರ್ತವ್ಯ ನಿರತರಾಗಿದ್ದಾರೆ.

ಉದ್ಯಮ ಕ್ಷೇತ್ರದಲ್ಲಿನ ಅನಿಲ್ ಅವರ ಸಾಧನೆಯನ್ನು ಗುರುತಿಸಿ ನಮ್ಮೂರ್ ಎಕ್ಸ್ ಪ್ರೆಸ್ ದಶಮಾನೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ ಮಲೆನಾಡೋತ್ಸವ-2025ರಲ್ಲಿ ಮಲ್ನಾಡ್ ಬ್ಯೂಸಿನೆಸ್ ಅಚೀವರ್ಸ್ ಪ್ರಶಸ್ತಿ- 2024 ನೀಡಿ ಗೌರವಿಸಲಾಗಿದೆ. ಇನ್ನು ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.