Categories
Uncategorized

ಭೂಮಿ ಹುಣ್ಣಿಮೆ ಹಬ್ಬದ ಸಂಭ್ರಮ! – ಭೂಮಿಗೆ ಸೀಮಂತ ಮಾಡುವ ಹಬ್ಬ: ಪೂಜೆ ಮಾಡಿದ ರೈತರು – ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ ಭಾಗದಲ್ಲಿ ಆಚರಣೆ

ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ ಭಾಗದಲ್ಲಿ ಹಲವು ಕಡೆ ರೈತರು ಭೂಮಿ ಹುಣ್ಣಿಮೆ ( ಸೀಗೆ ಹುಣ್ಣಿಮೆ ) ಹಬ್ಬವನ್ನು ಇಂದು ಸಡಗರ ಸಂಭ್ರಮದಿಂದ ಆಚರಿಸಿದರು.
ಭೂ ತಾಯಿ ಈ ಸಮಯದಲ್ಲಿ ಗರ್ಭಿಣಿಯಂತೆ ಬೆಳೆಗಳಿಂದ ಮೈ ತುಂಬಿಕೊಂಡಿರುತ್ತಾಳೆ. ಹೀಗಾಗಿ ರೈತರು ಭೂ ತಾಯಿಗೆ ಗರ್ಭಿಣಿಯ ಸ್ಥಾನದಲ್ಲಿಟ್ಟು ಆಕೆಗೆ ಸೀಮಂತ ಸಂಭ್ರಮದಂತೆ ಪೂಜೆ ಸಲ್ಲಿಸುತ್ತಾರೆ.
ಭೂ ತಾಯಿಯ ಬಯಕೆಗಳನ್ನು ಈಡೇರಿಸುವ ಸೀಮಂತದ ಸಂಭ್ರಮ, ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದಾಗಿದ್ದು, ಭೂ ತಾಯಿ ಗರ್ಭಿಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ 101 ಸೊಪ್ಪಿನ ಕುಡಿ ಪಲ್ಯ ಮಾಡಿ ಅನ್ನ ಮಿಶ್ರಿತ ಬಯಕೆ ಹಾಕುತ್ತಾರೆ.
ಭೂಮಿ ಹುಣ್ಣಿಮೆ ಮಲೆನಾಡಿನ ರೈತರ ಪಾಲಿಗೆ ಸಂಭ್ರಮದ ಹಬ್ಬ. ಮಲೆನಾಡಿನ ಸುತ್ತಮುತ್ತಲು ಭೂಮಿ ಹುಣ್ಣಿಮೆ ಹಬ್ಬ ಹೆಚ್ಚು ಆಚರಣೆಯಲ್ಲಿದೆ. ಅದರಲ್ಲೂ ಕೆಲವು ಭಾಗದಲ್ಲಿ ಈ ಹಬ್ಬ ಸಂಪ್ರದಾಯ ವಿಶಿಷ್ಟವಾಗಿದೆ.

ರಾತ್ರಿಯಿಂದ ಮುಂಜಾನೆವರೆಗೆ ಅಡುಗೆ… ಪೂಜೆ..!

ಭೂಮಿ ಹುಣ್ಣಿಮೆಯಲ್ಲಿ ಹಳ್ಳಿಯ ಭಾಗದ ಮಹಿಳೆಯರು ರಾತ್ರಿ ಸಮಯದಲ್ಲಿ ಅಡುಗೆ ಮಾಡುತ್ತಾರೆ. ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಹಲವು ತರಕಾರಿಗಳು, ಸೊಪ್ಪುಗಳನ್ನು ಹಾಕಿ ಬೇಯಿಸಿ ಹಚ್ಚಂಬಲಿ ತಯಾರಿ ಮಾಡುತ್ತಾರೆ. ಹಚ್ಚಂಬಲಿಯನ್ನು ಬುಟ್ಟಿಯಲ್ಲಿ ಇರಿಸಿಕೊಂಡು, ಪೂಜೆಯಾದ ಬಳಿಕ ಗದ್ದೆಯ ತುಂಬೆಲ್ಲ ಬೀರಲಾಗುತ್ತದೆ. ಆ ಸಂದರ್ಭದಲ್ಲಿ ‘ಹಚ್ಚಂಬಲಿ.. ಹಾಲಂಬಲಿ…ಬೇಲಿ ಮೇಲೆ ಇರುವ ದಾರ ಹಿರೇಕಾಯಿ ಭೂಮಿ ತಾಯಿ ಊಟ ಮಾಡೇ” ಎಂದು ಹಾಡುತ್ತ ಹಚ್ಚಂಬಲಿಯನ್ನು ಬೀರಲಾಗುತ್ತದೆ. ಈ ಸಂಪ್ರದಾಯ ಹಿಂದಿನ ಕಾಲದಿಂದಲೂ ಬಂದಿರುವುದರಿಂದ ಎಲ್ಲಾ ಆಚರಣೆಗಿಂತ ವಿಭಿನ್ನವಾಗಿದೆ.

ಎಲ್ಲೆಡೆ ಶ್ರದ್ದಾ ಭಕ್ತಿಯಿಂದ ಹಬ್ಬದ ಆಚರಣೆ

ಆಧುನಿಕತೆಯಿಂದಾಗಿ ನಮ್ಮ ಅನೇಕ ಸಾಂಪ್ರದಾಯಿಕ ಆಚರಣೆಗಳು ಮೂಲೆಗೆ ಸರಿಯುತ್ತಿದ್ದರೂ ಭೂಮಿ ಹುಣ್ಣಿಮೆ ಹಬ್ಬದ ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿವೆ. ಈ ಹಬ್ಬದ ಆಚರಣೆಗಳು ನಿಸರ್ಗಕ್ಕೆ ಹತ್ತಿರವಾಗಿದೆ. ಕರಾವಳಿ, ಮಧ್ಯ ಕರ್ನಾಟಕ ಸೇರಿ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ.

Categories
Uncategorized

ರಾಷ್ಟ್ರಮಟ್ಟದ ಕರಾಟೆಯಲ್ಲಿ ತೀರ್ಥಹಳ್ಳಿ ವಿದ್ಯಾರ್ಥಿಗಳ ಸಾಧನೆ – ತೀರ್ಥಹಳ್ಳಿಯ ಎಂ.ಜೆ. ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್‌ ವಿದ್ಯಾರ್ಥಿಗಳು – ಬ್ರಹ್ಮಾವರದಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್

ತೀರ್ಥಹಳ್ಳಿ: ಬ್ರಹ್ಮಾವರದ ಎಸ್.ಎಂ.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ಅ.25ರಂದು ನಡೆದ ರಾಷ್ಟ್ರಮಟ್ಟದ ವಿಕೆ ಬುಡೋಕನ್ ಟ್ರೋಫಿ–2026 ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ತೀರ್ಥಹಳ್ಳಿಯ ಎಂ.ಜೆ. ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್‌ನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ಪ್ರಶಸ್ತಿ ವಿಜೇತರ ವಿವರ ಹೀಗಿದೆ:

1. ಅಚಿಂತ್ಯ ಜಿ. ಭಟ್ (Achintya G. Bhat) – ಕುಮಿಟೆ ಪ್ರಥಮ ಸ್ಥಾನ, ಕಟಾ ಪ್ರಥಮ ಸ್ಥಾನ.
2. ಅಜ್ರಾ ಇಲ್ಹಾಮ್ (Azra Ilham) – ಕುಮಿಟೆ ಪ್ರಥಮ ಸ್ಥಾನ, ಕಟಾ ಪ್ರಥಮ ಸ್ಥಾನ.
3. ಕ್ಲಿಯೋನ್ ಫ್ಯಾಬಿಯೊ ಮಾರ್ಟಿಸ್ (Cleon Fabio Martis) – ಕುಮಿಟೆ ಪ್ರಥಮ ಸ್ಥಾನ, ಕಟಾ ಪ್ರಥಮ ಸ್ಥಾನ.
4. ಅಭಿನವ್ (Abhinav) – ಕುಮಿಟೆ ಪ್ರಥಮ ಸ್ಥಾನ, ಕಟಾ ದ್ವಿತೀಯ ಸ್ಥಾನ.
5. ಅರ್ಫಾ ಜಿಖ್ರಾ (Arfa Zikhra) – ಕುಮಿಟೆ ಪ್ರಥಮ ಸ್ಥಾನ, ಕಟಾ ತೃತೀಯ ಸ್ಥಾನ.
6. ಮನಿತ್ ಜೆ. (Manith J.) – ಕುಮಿಟೆ ಪ್ರಥಮ ಸ್ಥಾನ, ಕಟಾ ತೃತೀಯ ಸ್ಥಾನ.
7. ಆರ್ಯನ್ ಅಚ್ಚುತ ನಾಯಕ್ (Aryan Achutha Nayak) – ಕುಮಿಟೆ ಪ್ರಥಮ ಸ್ಥಾನ, ಕಟಾ ತೃತೀಯ ಸ್ಥಾನ.
8. ಧೀಮಂತ್ ಡಿ. ರಾವ್ (Dheemanth D. Rao) – ಕುಮಿಟೆ ಪ್ರಥಮ ಸ್ಥಾನ.
9. ಅಯ್ಮಾನ್ ಖಲಾತ್ ಶರೀಫ್ (Ayman Khalath Shariff) – ಕುಮಿಟೆ ತೃತೀಯ ಸ್ಥಾನ.

ವಿದ್ಯಾರ್ಥಿಗಳ ಈ ಸಾಧನೆಗೆ ಅವರ ನಿರಂತರ ಅಭ್ಯಾಸ, ಶಿಸ್ತು ಮತ್ತು ಪರಿಶ್ರಮವೇ ಪ್ರಮುಖ ಕಾರಣವಾಗಿದೆ. ಈ ಯಶಸ್ಸಿಗೆ ಎಂ.ಜೆ. ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್‌ನ ಮುಖ್ಯಸ್ಥರಾದ ಮಹಾಬಲ ಜೋಯಿಸ್ ಅವರು ಹರ್ಷ ವ್ಯಕ್ತಪಡಿಸಿ, ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Categories
Uncategorized

ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿ – ಎಲ್ಲೆಡೆ ವಾಲ್ಮೀಕಿ ಜಯಂತಿ ಆಚರಣೆ: ಗುರುಗಳಿಗೆ ಗೌರವ – ಕದಿಯುತ್ತಿದ್ದ ವ್ಯಕ್ತಿ ಮಹಾತ್ಮನಾದ ಮಾದರಿ ಯಶೋಗಾಥೆ

ವಾಲ್ಮೀಕಿ ಜಯಂತಿಯನ್ನು ದೇಶದಲ್ಲಿ ಆಚರಣೆ ಮಾಡಲಾಗುತ್ತಿದೆ. ವಾಲ್ಮೀಕಿ ಗುರುಗಳ ಆದರ್ಶಗಳನ್ನು ಪಾಲಿಸೋಣ. ಸರ್ಕಾರಿ ಕಾರ್ಯಕ್ರಮವಾಗಿ ಎಲ್ಲೆಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ವಾಲ್ಮೀಕಿ ಗುರುಗಳು ಯಾರು…?

ಭಾರತದ ಮೊದಲ ಮಹಾಕಾವ್ಯವಾದ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ. ವಾಲ್ಮೀಕಿ ಅವರ ಮೂಲ ಹೆಸರು ರತ್ನಾಕರ. ಮಹರ್ಷಿಗಳಾಗುವ ಮೊದಲು ಅವರು ಬೇಡ ಮತ್ತು ಕಾಡಿನಲ್ಲಿ ಸಂಚರಿಸುವವರ ಬಳಿಯಲ್ಲಿನ ವಸ್ತುಗಳನ್ನು ದೋಚುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ನಾರದ ಮಹರ್ಷಿಗಳ ಉಪದೇಶದಿಂದ ಜ್ಞಾನೋದಯವಾಗಿ, ತಪಸ್ಸಿನಲ್ಲಿ ನಿರತರಾದರು. ಹಲವಾರು ವರ್ಷಗಳ ಕಾಲ ತಪಸ್ಸನ್ನು ಆಚರಿಸಿದ್ದರ ಫಲವಾಗಿ ಅವರ ಸುತ್ತಮುತ್ತ ಹುತ್ತ ಬೆಳೆದುಕೊಂಡಿತು. ಸಂಸ್ಕೃತದಲ್ಲಿ ಹುತ್ತಕ್ಕೆ ವಲ್ಮೀಕ ಎಂದು ಕರೆಯುತ್ತಾರೆ. ಹೀಗಾಗಿ ಅವರಿಗೆ ವಾಲ್ಮೀಕಿ ಎನ್ನುವ ಹೆಸರು ಬಂದಿತು. ಮತ್ತೊಂದು ಮಾಹಿತಿಯ ಪ್ರಕಾರ ಪ್ರದೇಶವೊಂದು ಹುತ್ತಗಳಿಂದ ಕೂಡಿದ್ದರಿಂದ ಆ ಗ್ರಾಮಕ್ಕೆ ವಲ್ಮೀಕ ಎನ್ನುವ ಹೆಸರಿತ್ತು. ಆ ಗ್ರಾಮದಲ್ಲಿ ರತ್ನಾಕರ ಜನಿಸಿದ್ದರಿಂದ ಮುಂದೆ ಅವರಿಗೆ ವಾಲ್ಮೀಕಿ ಎನ್ನುವ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಹೀಗೆ ಬೇಡ ಮತ್ತು ಕಳ್ಳನಾಗಿದ್ದ ರತ್ನಾಕರ ವಾಲ್ಮೀಕಿ ಮಹರ್ಷಿಯಾಗಿ ರೂಪುಗೊಂಡರು.
ಒಮ್ಮೆ ತಮಸಾ ನದಿ ತೀರದಲ್ಲಿ ಜೋಡಿ ಗಿಳಿಗಳು ಹಾರಾಡಿಕೊಂಡಿದ್ದಾಗ ಬೇಡನೊಬ್ಬ ಗಂಡು ಗಿಳಿಯನ್ನು ಕೊಂದನು. ಆಗ ಹೆಣ್ಣು ಗೆಳೆಯ ವೇದನೆಯನ್ನು ಕಂಡು ವಾಲ್ಮೀಕಿ ಮಹರ್ಷಿಗಳಿಗೆ ಅತಿಯಾದ ದುಃಖ ಮತ್ತು ಸಂಕಟ ಉಂಟಾಗಿ ಆ ಬೇಡನಿಗೆ “ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ ಯತ್ಕೌಂ ಚಮಿಥುನಾದೇಕಮವಧೀಃ ಕಾಮಮೋಹಿತಂ” ಎಂದು ಶಾಪ ನೀಡುತ್ತಾರೆ. ಈ ಹೃದಯ ವಿದ್ರಾವಕ ಸನ್ನಿವೇಶವೇ ವಾಲ್ಮೀಕಿ ಮಹರ್ಷಿಗಳಿಗೆ ಮಹಾಕಾವ್ಯ ರಾಮಾಯಣದ ರಚನೆಗೆ ಪ್ರೇರಣೆ ನೀಡಿತು.
ವಾಲ್ಮೀಕಿ ಮಹರ್ಷಿಗಳ ಕುರಿತು “ಕೂಜಂತಂ ರಾಮ ರಾಮೇತಿ ಮಧುರ ಮಧುರಾಕ್ಷರಂ ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ” ಎನ್ನುವ ಶ್ಲೋಕವಿದೆ. ಅಲ್ಲದೆ 1300 ವರ್ಷಗಳ ಹಿಂದೆ ಚೆನ್ನೈನ ತಿರುವಣ್ಣಿಯೂರಿನಲ್ಲಿ ವಾಲ್ಮೀಕಿ ಮಹರ್ಷಿಗಳಿಗೆ ದೇವಾಲಯವನ್ನು ಸಹ ನಿರ್ಮಿಸಲಾಗಿದೆ.

ಸರ್ಕಾರಿ ರಜೆ ಘೋಷಣೆ ಮಾಡಿದ ಸರ್ಕಾರ!

ವಾಲ್ಮೀಕಿ ಮಹರ್ಷಿಗಳ ಕಾಲ ಕ್ರಿಸ್ತಪೂರ್ವ 500 ಎಂದು ಹೇಳಲಾಗುತ್ತದೆ. ಅವರು ಆಶ್ವೀಜ ಮಾಸದ ಶುದ್ಧ ಹುಣ್ಣಿಮೆಯಂದು ಪ್ರಚೇತಸ ಮತ್ತು ರತುನವ್ವ ದಂಪತಿಗಳ ಮಗನಾಗಿ ಜನಿಸಿದರು. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಈ ವರ್ಷ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 26ರ ಸೋಮವಾರದಂದು ಭಾರತದಾದ್ಯಂತ ಆಚರಿಸಲಾಗುತ್ತಿದೆ.
ಮಹರ್ಷಿ ವಾಲ್ಮೀಕಿಗಳ ಜಯಂತಿಯನ್ನು ಮಿಥಿಯ ಲೆಕ್ಕದಲ್ಲಿ ಆಚರಿಸುವುದರಿಂದ, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ದಿನಾಂಕ ಮತ್ತು ತಿಂಗಳು ಪ್ರತಿ ವರ್ಷ ಬದಲಾಗುತ್ತಿರುತ್ತದೆ. ವಾಲ್ಮೀಕಿ ಜಯಂತಿಯನ್ನು ಮುಖ್ಯವಾಗಿ ಸರ್ಕಾರಿ ಶಾಲಾ-ಕಾಲೇಜು ಮತ್ತು ಕಛೇರಿಗಳಲ್ಲಿ ಆಚರಿಸಲಾಗುತ್ತದೆ. 2011ನೇ ವರ್ಷದಿಂದ ರಾಜ್ಯ ಸರ್ಕಾರವು ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆಯನ್ನು ಸಹ ಘೋಷಿಸಿದೆ.

Categories
Uncategorized

ಮೂಡಿಗೆರೆ: ಕಾರು-ಬೈಕ್ ಢಿಕ್ಕಿ; ಯುವಕ ಸಾವು ಚಿಕ್ಕಮಗಳೂರು: ರಸ್ತೆಗೆ ಅಡ್ಡ ಕಟ್ಟಿದ್ದ ಹಗ್ಗ ಸಿಲುಕಿ ಸ್ಕೂಟರ್ ಸವಾರ ಸಾವು •ತೀರ್ಥಹಳ್ಳಿ: ಕಾರು ಪಲ್ಟಿ; ಧರೆಗುರುಳಿದ ವಿದ್ಯುತ್ ಕಂಬ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ •ಮೂಡಿಗೆರೆ: ಕಾರು-ಬೈಕ್ ಢಿಕ್ಕಿ; ಯುವಕ ಸಾವು

•ಮೂಡಿಗೆರೆ: ಆಟೋ ಮತ್ತು ಬೈಕ್ ನ ನಡುವಿನ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ, ಭಾನುವಾರದಂದು ಹಳೆಕೋಟೆ ಗ್ರಾಮದ ವೃತ್ತದ ಬಳಿ ನಡೆದಿದೆ. ಯುವಕ ಬೆಳಿಗ್ಗೆ 11:00ಗಂಟೆಯ ಸುಮಾರಿಗೆ ಮೂಡಿಗೆರೆಯಿಂದ ಹಳೆಕೋಟೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಆಟೋವೊಂದು ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಯುವಕ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಅವರನ್ನು ಮಹಾತ್ಮ ಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಯುವಕನನ್ನು ಪರೀಕ್ಷಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು ಎನ್ನುವ ಮಾಹಿತಿ ಲಭಿಸಿದೆ. ಮೃತ ಯುವಕನನ್ನು ಹಳೆಕೋಟೆ ಗ್ರಾಮದ ನಿವಾಸಿ, ಬಿಳಗುಳದ ಅಗ್ರಿ ಮಾರ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಚಿಕ್ಕಮಗಳೂರು: ರಸ್ತೆಗೆ ಅಡ್ಡ ಕಟ್ಟಿದ್ದ ಹಗ್ಗ ಸಿಲುಕಿ ಸ್ಕೂಟರ್ ಸವಾರ ಸಾವು

ಚಿಕ್ಕಮಗಳೂರು: ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗವು ಮಾಂಜಾ ದಾರದ ರೀತಿಯಲ್ಲಿ ಸಿಲುಕಿ, ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ, ತೇಗೂರು ಗ್ರಾಮದಲ್ಲಿ ನಡೆದಿದೆ. ವ್ಯಕ್ತಿಯು ಹೆಂಡತಿಯೊಂದಿಗೆ ಸ್ಕೂಟರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ, ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಗೆ ಟಿಂಬರ್ ಮರಗಳನ್ನು ತುಂಬಿಸಿದ್ದು, ಅವುಗಳಿಗೆ ಕಟ್ಟಲಾಗಿದ್ದ ಹಗ್ಗ ಸಿಲುಕಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ಮೊಹಮ್ಮದ್ ಗೌಸ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

•ತೀರ್ಥಹಳ್ಳಿ: ಕಾರು ಪಲ್ಟಿ; ಧರೆಗುರುಳಿದ ವಿದ್ಯುತ್ ಕಂಬ

ತೀರ್ಥಹಳ್ಳಿ: ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ, ಕಳೆದೆರಡು ದಿನಗಳ ಹಿಂದೆ 23ನೇ ಮೈಲಿಕಲ್ಲಿನಲ್ಲಿ ನಡೆದಿದೆ. ಕುಟುಂಬ ಒಂದು ಕುಪ್ಪಳ್ಳಿಯಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಹಾಜರಾಗಿದ್ದು, ಅದು ಮುಗಿದ ಬಳಿಕ ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಕಾರಿನ ಹಿಂಬದಿಯ ಟೈರ್ ಪಂಚರ್ ಆದುದೇ ಈ ಅವಘಡಕ್ಕೆ ಕಾರಣವಾಗಿದೆ. ತಕ್ಷಣ ಸ್ಥಳೀಯರು ಕಾರು ಪ್ರಯಾಣಿಕರ ನೆರವಿಗೆ ಬಂದಿದ್ದು, ಪಲ್ಟಿಯಾಗಿದ್ದ ಕಾರನ್ನು ನಿಲ್ಲಿಸಿ, ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳನ್ನು ಉಪಚರಿಸಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಮಕ್ಕಳು ಸೇರಿದಂತೆ ನಾಲ್ಕು ಜನರಿದ್ದು, ಒಂದು ಮಗುವಿನ ಕೈಗೆ ಫ್ಯಾಕ್ಚರ್ ಆಗಿದೆ, ಜೊತೆಗೆ ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ಧರೆಗುರುಳಿದೆ ಎನ್ನುವ ಮಾಹಿತಿ ಲಭಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಅಧಿಕಾರಿಗಳು ಮತ್ತು ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ.

Categories
Uncategorized

ಕುಂದಾಪುರ: ಕುಂದಾಪುರ ತಾಲೂಕಿನ ಶಾನಾಡಿ ಮದಗದ ಕೊರಗ
ಕಾಲೋನಿಯಲ್ಲಿ ವಿಶೇಷ ಚೇತನ (ವಿಕಲಾಂಗ) ಮಗಳನ್ನು ಕೊಲೆ ಮಾಡಿದ ತಾಯಿಯೊಬ್ಬರು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹತ್ಯೆಗೊಳಗಾದ ಬಾಲಕಿಯನ್ನು ಶಾನಾಡಿ ನಿವಾಸಿ ಸುಧಾಕರ ಕೊರಗ ಎಂಬುವರ ಪುತ್ರಿ ಸುಪ್ರತಿ (14) ಎಂದು ಗುರುತಿಸಲಾಗಿದೆ. ಮಗಳನ್ನು ಕೊಂದ ಬಳಿಕ ಜೀವ ತೆತ್ತ ತಾಯಿಯನ್ನು ನೇತ್ರಾವತಿ (40) ಎಂದು ಗುರುತಿಸಲಾಗಿದೆ. ಸುಧಾಕರ ಕೊರಗ ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ಪೋಷಿಸುತ್ತಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗುವಿದ್ದು, 14 ವರ್ಷದ ಪುತ್ರಿ ಸುಪ್ರತಿ ಹುಟ್ಟಿನಿಂದಲೇ ತೀವ್ರ ಸ್ವರೂಪದ ವೈಕಲ್ಯದಿಂದ ಬಳಲುತ್ತಿದ್ದಳು. ನಡೆಯಲು ಹಾಗೂ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಮಗಳನ್ನು ತಾಯಿ ನೇತ್ರಾವತಿಯವರೇ ಸಂಪೂರ್ಣ ಆರೈಕೆ ಮಾಡುತ್ತಿದ್ದರು. ಭಾನುವಾರ ಬೆಳಿಗ್ಗೆ ಸುಧಾಕರ ಅವರು ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ನೇತ್ರಾವತಿಯವರು ಮನೆಯಲ್ಲಿದ್ದ ಕತ್ತಿಯಿಂದ ಮಗಳ ಕುತ್ತಿಗೆ ಸೀಳಿ ಕೊಲೆ ಮಾಡಿದ್ದು, ತದನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

•ಕುಂದಾಪುರ: ರಸ್ತೆ ಅಪಘಾತಕ್ಕೆ ಆರ್ ಎಸ್ ಎಸ್ ನಾಯಕ ಬಲಿ!

ಕುಂದಾಪುರ: ಭೀಕರ ರಸ್ತೆ ಅಪಘಾತದಲ್ಲಿ ಸೈಕಲ್ ಸವಾರ ಸಾವನ್ನಪ್ಪಿರುವ ಘಟನೆ, ಸೋಮವಾರದಂದು ರಾಷ್ಟ್ರೀಯ ಹೆದ್ದಾರಿ 66ರ ಕೋಟ ಜಂಕ್ಷನ್ ನಲ್ಲಿ ನಡೆದಿದೆ. ಕೋಟ ಜಂಕ್ಷನ್ ಬಳಿ ಸೈಕಲ್ ನಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ, ಕುಂದಾಪುರದತ್ತ ಅತಿವೇಗವಾಗಿ ತೆರಳುತ್ತಿದ್ದ ಕಾರು ಸೈಕಲ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಸೈಕಲ್ ನಿಂದ ರಸ್ತೆಗೆ ಎಸೆಯಲ್ಪಟ್ಟ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ಆರ್ ಎಸ್ಎಸ್ ಮುಖಂಡ ಗುರುದಾಸ್ ಶೆಣೈ ಎಂದು ಗುರುತಿಸಲಾಗಿದೆ. ಕಾರು ಚಾಲಕ ಪ್ರದೀಪ್ ಕಾಂಚನ್ ಅವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

•ಪುತ್ತೂರು: ವಿದ್ಯಾರ್ಥಿನಿ ನಾಪತ್ತೆ

ಪುತ್ತೂರು: ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ, ವಾಣಿಜ್ಯ ವಿಭಾಗದಲ್ಲಿ ಪ್ರಥಮ ವರ್ಷದ ಪಿಯುಸಿಯನ್ನು ವ್ಯಾಸಂಗ ಮಾಡುತ್ತಿರುವ ಹಾಗೂ ವಿನಾಯಕ ಸ್ಟೋರ್ಸ್ ಎನ್ನುವ ಅಂಗಡಿಯನ್ನು ನಡೆಸುತ್ತಿರುವ ವ್ಯಕ್ತಿಯ ಮಗ ಶ್ರೀವತ್ಸ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ ಅಕ್ಟೋಬರ್ 22ರ ಬೆಳಿಗ್ಗೆ ಬಸ್ ನ ಮೂಲಕ ಕಾಲೇಜಿಗೆ ತೆರಳುವುದಾಗಿ ಮನೆಯವರಿಗೆ ತಿಳಿಸಿ, ಸಮವಸ್ತ್ರ ಧರಿಸಿ ಹೊರಟ ಶ್ರೀವತ್ಸ ಮರಳಿ ಮನೆಗೆ ಬಂದಿಲ್ಲ. ಆತನ ಪೋಷಕರು ಮಗ ಸ್ನೇಹಿತರ ಮನೆಗೆ ತೆರಳಿರಬಹುದು ಎಂದು ಭಾವಿಸಿ ಕಾಯುತ್ತಿದ್ದರೆ ಶ್ರೀವತ್ಸ ಮನೆಗೆ ಬಂದಿಲ್ಲ ಎನ್ನಲಾಗಿದೆ. ಅಲ್ಲದೆ ಕಳೆದ 15 ದಿನಗಳ ಹಿಂದೆ ಅಜ್ಜಿ ಕಮಲ ಅವರ ಖಾತೆಯಿಂದ ಶ್ರೀವತ್ಸ ಹಣ ತೆಗೆದಿದ್ದು, ಈ ಕುರಿತು ವಿಚಾರಿಸಿದಾಗ ಶ್ರೀವತ್ಸ ಬೇಸರಗೊಂಡ ಎನ್ನುವ ಸಂಗತಿ ತಿಳಿದುಬಂದಿದೆ. ನಾಪತ್ತೆಗೆ ಸಂಬಂಧಿಸಿದಂತೆ ಶ್ರೀವತ್ಸ ಅವರ ತಂದೆ ಎಡಮಂಗಲ ಪೊಯ್ಯತ್ತೂರು ನಿವಾಸಿ ನಾರಾಯಣ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದು, ಮಗನನ್ನು ಹುಡುಕಿ ಕೊಡುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

•ಬಂಟ್ವಾಳ: ಹೆರಿಗೆಗೆ ತೆರಳಿದ್ದ ಪತ್ನಿಯನ್ನು ಕರೆಸಿಕೊಂಡು ಕೊಲೆ!

ಬಂಟ್ವಾಳ: ಪತ್ನಿಯನ್ನು ಕೊಂದು, ವಿಷಯವನ್ನು ಮುಚ್ಚಿಟ್ಟ ಬೆಳಗಾವಿ ಮೂಲದ ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಸುನೀತಾ ದೇಸಂಗಿ ಎನ್ನುವ ಯುವತಿಯು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿಯಾದ ಸಂಜೀವ್ ಕುಮಾರ್ ಎನ್ನುವವರೊಂದಿಗೆ ವಿವಾಹವಾಗಿದ್ದರು. ಸಂಜೀವ್ ಕುಮಾರ್ ಅವರು ಬಂಟ್ವಾಳದ ವಗ್ಗ ಎನ್ನುವಲ್ಲಿ ನೆಲೆಸಿದ್ದರಿಂದ ಸುನೀತಾ ದೇಸಂಗಿ ಕೂಡ ಅಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ. ದಂಪತಿಗಳ ನಡುವೆ ಹಲವು ಬಾರಿ ಕಲಹ ಏರ್ಪಟ್ಟಿದ್ದು, ಸಂಬಂಧಿಕರು ಸಂಧಾನ ಮಾಡಿಸಿದ್ದರು ಎನ್ನುವ ಮಾಹಿತಿ ಲಭಿಸಿದೆ. ಇತ್ತೀಚಿಗೆ ಸುನೀತಾ ದೇಸಂಗಿಯವರು ಹೆರಿಗೆಯ ನಿಮಿತ್ತ ತವರುಮನೆಗೆ ತೆರಳಿದ್ದು, ಅಕ್ಟೋಬರ್ 4ರಂದು ಸಂಜೀವ್ ಕುಮಾರ್ ಆಕೆಯನ್ನು ಪುನಃ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಅಕ್ಟೋಬರ್ 22ರ ಗುರುವಾರದಂದು ಸುನೀತಾ ದೇಸಂಗಿ ಅವರು ತನ್ನ ಅಣ್ಣ ಅರುಣ್ ಅವರಿಗೆ ಕರೆ ಮಾಡಿ ಪತಿ ಮಾನಸಿಕ ಕಿರುಕುಳ ನೀಡುತ್ತಿದ್ದು, ಹಲ್ಲೆಯನ್ನು ಕೂಡ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. ಮರುದಿನ ಸಂಜೀವ್ ಕುಮಾರ್ ಅರುಣ್ ಅವರಿಗೆ ಕರೆ ಮಾಡಿ, ಸುನೀತಾ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿಸಿದ್ದಾರೆ. ಅರುಣ್ ಅವರು ಆಸ್ಪತ್ರೆಗೆ ಬಂದು ನೋಡಿದಾಗ ಸುನಿತಾ ದೇಸಂಗಿ ಅವರು ಮೃತಪಟ್ಟಿದ್ದು, ಅವರ ದೇಹದ ಮೇಲೆ ಹಲ್ಲೆ ನಡೆಸಿದ ಗಾಯಗಳು ಕಂಡುಬಂದಿವೆ.

•ಸುಳ್ಯ: ಭೀಕರ ರಸ್ತೆ ಅಪಘಾತ; ಬಾಲಕ ಸಾವು

ಸುಳ್ಯ: ಲಾರಿ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಘಟನೆ, ಭಾನುವಾರದಂದು ಮಾಣಿ-ಮೈಸೂರು ಹೆದ್ದಾರಿಯ ಗೂನಡ್ಕ ಶಾಲೆಯ ಬಳಿ ನಡೆದಿದೆ. ಮಡಿಕೇರಿ ಕಡೆಯಿಂದ ಸುಳ್ಯದತ್ತ‌ ಆಗಮಿಸುತ್ತಿದ್ದ ಲಾರಿಗೆ ಸ್ಥಳಾವಕಾಶವನ್ನು ನೀಡಲು ಕಾರನ್ನು ಬದಿಗೆ ಸರಿಸಲು ಹೋದ ಸಂದರ್ಭದಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿ ಒಟ್ಟು ಐದು ಜನರು ಪ್ರಯಾಣಿಸುತ್ತಿದ್ದು, ಅಪಘಾತದ ಪರಿಣಾಮವಾಗಿ ತನುಷ್ ಎನ್ನುವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ವಿನುತ್ತಾಶ್ರೀ ಮತ್ತು ರತ್ನ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಾಲಕ ನಾರಾಯಣ ಮತ್ತು ನಾಲ್ಕು ವರ್ಷದ ಹೆಣ್ಣು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
Uncategorized

ಜನವರಿಯಲ್ಲಿ ಜಿಪಂ, ತಾಪಂ ಚುನಾವಣೆ..?! – ಡಿಸೆಂಬರ್ ಎರಡನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ – 3 ಪಕ್ಷಗಳಿಂದ ಭಾರೀ ಕಸರತ್ತು: ಚುನಾವಣಾ ಆಯೋಗ ಸಜ್ಜು

ಶಿವಮೊಗ್ಗ: ಕಳೆದ ಹಲವಾರು ವರ್ಷಗಳಿಂದ ಬಾಕಿ ಉಳಿದಿರುವಂತಹ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳು ಪುನಃ 2027ರ ಜನವರಿ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ್ ಖಂಡ್ರೆ ಅವರು “ರಾಜ್ಯದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವಂತಹ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಸಚಿವ ಸಂಪುಟವು ತೀರ್ಮಾನಿಸಿದ್ದು, ಡಿಸೆಂಬರ್ ಎರಡನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟವಾಗಲಿದೆ.
ಜನವರಿ ಮೊದಲನೇ ಅಥವಾ ಎರಡನೇ ವಾರದಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ. ಚುನಾವಣೆಗೆ ಸಂಬಂಧಿಸಿದಂತೆ 3 ಪ್ರಮುಖ ರಾಜಕೀಯ ಪಕ್ಷಗಳು ಈಗಾಗಲೇ ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ. ಮೀಸಲಾತಿ ಅಧಿಸೂಚನೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅಕ್ಟೋಬರ್ 19ರ ಸೋಮವಾರದವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸುಮಾರು 1800 ಆಕ್ಷೇಪಣಾ ಅರ್ಜಿಗಳು ಸ್ವೀಕೃತವಾಗಿವೆ. ಒಂದು ವಾರದ ಒಳಗಾಗಿ ಈ ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

Categories
Uncategorized

5 ದಿನದ ಹಿಂದೆ ಮದುವೆಯಾಗಿದ್ದವ ಅಪಘಾತಕ್ಕೆ ಬಲಿ! – ಶೃಂಗೇರಿಯ ಮೆಣಸೆಯಲ್ಲಿ ಸಾರಿಗೆ ಬಸ್ ಮತ್ತು ಬೈಕ್ ಭೀಕರ ಅಪಘಾತ – ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ಭಸ್ಮ

ಶೃಂಗೇರಿ: ಮನುಷ್ಯನಿಗೆ ಸಾವು ಯಾವ ರೂಪದಲ್ಲಾದರೂ ಬರಬಹುದು ಎನ್ನುವ ಮಾತು ಜಲಜನಿತವಾಗಿದೆ. ಆದರೆ ಯುವಕನೊಬ್ಬನ ಪಾಲಿಗೆ ಯಮನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ರೂಪದಲ್ಲಿ ಬಂದಿರುವ ಹೃದಯ ವಿದ್ರಾವಕ ಘಟನೆ, ಸೋಮವಾರದಂದು ಮೆಣಸೆ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಬಸ್ ಮತ್ತು ಬೈಕ್ ನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇದರ ಪರಿಣಾಮವಾಗಿ ಬೈಕ್ ಸವಾರನಾದ ಯುವಕ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಮೃತ ದುರ್ದೈವಿಯನ್ನು ಕುಂಚೇಬೈಲ್ ಸಮೀಪದ ಹೊಸನಗರ ಸೈಟ್ ನಿವಾಸಿ, ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ನಾಗರಾಜ್ ಕುಲಾಲ್ ಎಂದು ಗುರುತಿಸಲಾಗಿದೆ.

5 ದಿನದ ಹಿಂದೆ ಮದುವೆಯಾಗಿದ್ದವ ಅಪಘಾತಕ್ಕೆ ಬಲಿ!

ನಾಗರಾಜ್ ಕುಲಾಲ್ ಅವರ ವಿವಾಹವು ಕಳೆದ ಐದು ದಿನಗಳ ಹಿಂದೆಯಷ್ಟೇ ನಡೆದಿದ್ದು, ಮದುವೆ ಮುಗಿದ ಸಂಭ್ರಮದಲ್ಲಿದ್ದ ಮನೆ ಈಗ ಸೂತಕದ ವಾತಾವರಣದಿಂದ ಕೂಡಿ, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.

Categories
Uncategorized

ಅ.28ಕ್ಕೆ ತೀರ್ಥಹಳ್ಳಿಯಲ್ಲಿ ಮ್ಯಾರಥಾನ್ಸ್ – ಏಷಿಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಸ್ನೇಹ ಶಾನುವಳ್ಳಿ, ಪ್ರೋ ಕಬಡ್ಡಿ ಸ್ಟಾರ್ ಆಟಗಾರ ಗಗನ್ ಗೌಡ ಆಗಮನ – ತೀರ್ಥಹಳ್ಳಿ ತಾಲೂಕಿನ ಆಟಗಾರರಿಗೆ ಸ್ವಾಗತ

ತೀರ್ಥಹಳ್ಳಿ: ಮಲ್ನಾಡ್ ಕೆರಿಯರ್ ಅಕಾಡೆಮಿ ವತಿಯಿಂದ ಅಕ್ಟೋಬರ್ 28ರ ಬುಧವಾರದಂದು ಬೆಳಿಗ್ಗೆ 6:30ಕ್ಕೆ ಸರ್ಕಾರಿ (ಕೃಷಿ ಮೇಳ ) ಮೈದಾನದಲ್ಲಿ ತೀರ್ಥಹಳ್ಳಿ ಮ್ಯಾರಥಾನ್ಸ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಏಷಿಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಸ್ನೇಹ ಶಾನುವಳ್ಳಿ ಮತ್ತು ಪ್ರೋ ಕಬಡ್ಡಿ ಸ್ಟಾರ್ ಆಟಗಾರ ಗಗನ್ ಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪುರುಷ ಮತ್ತು ಮಹಿಳಾ ಪಂದ್ಯಾವಳಿಯಲ್ಲಿ 14 ವರ್ಷದ ಒಳಗಿನ ಕ್ರೀಡಾಪಟುಗಳಿಗೆ ಎರಡು ಕಿಲೋಮೀಟರ್, 19 ವರ್ಷದ ಒಳಗಿನ ಕ್ರೀಡಾಪಟುಗಳಿಗೆ 5 ಕಿಲೋಮೀಟರ್, 19 ರಿಂದ 35 ವರ್ಷದ ಒಳಗಿನ ಕ್ರೀಡಾಪಟುಗಳಿಗೆ ಆರು ಕಿಲೋಮೀಟರ್ ಮತ್ತು 35 ವರ್ಷ ವಯೋಮಿತಿಯವರಿಗೆ ಒಂದು ತಂಡದಲ್ಲಿ ಮೂರು ಸದಸ್ಯರನ್ನು ಒಳಗೊಂಡಂತೆ 3 ಕಿಲೋಮೀಟರ್ ವರೆಗೆ ರನ್ನಿಂಗ್ ಅನ್ನು ಆಯೋಜಿಸಲಾಗಿದೆ.
ಮೊದಲ ಬಹುಮಾನವಾಗಿ ರನ್ನಿಂಗ್ ಟ್ರ್ಯಾಕ್ ಸೂಟ್, ಎರಡನೇ ಬಹುಮಾನವಾಗಿ ರನ್ನಿಂಗ್ ಶೂಸ್ ಮತ್ತು ಮೂರನೇ ಬಹುಮಾನವಾಗಿ ಅಪ್ಪರ್ ಅನ್ನು ನೀಡಲಾಗುತ್ತಿದೆ. 35 ವರ್ಷ ವಯೋಮಾನದೊಳಗಿನ 3 ಕಿ.ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡದ ಮೂವರೂ ಸದಸ್ಯರಿಗೆ ಅಪ್ಪರ್ ಅನ್ನು ನೀಡಲಾಗುತ್ತದೆ.
ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಟೀಶರ್ಟ್ ಮತ್ತು ಪದಕವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ಕ್ರೀಡಾಪಟುಗಳು 120 ರೂಪಾಯಿ ಪ್ರವೇಶ ಶುಲ್ಕದೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8277538876, 9731657783, 8971684136.

ತೀರ್ಥಹಳ್ಳಿ ತಾಲೂಕಿನ ಎಲ್ಲಾ ಕ್ರೀಡಾಪಟುಗಳಿಗೆ ಸುಸ್ವಾಗತ

Categories
Uncategorized

3 ದಿನ ಭಾರೀ ಮಳೆ ಅಲರ್ಟ್! – ಹಲವು ಜಿಲ್ಲೆಗಳಿಗೆ ಮುನ್ಸೂಚನೆ: ಅಡಿಕೆ ರೈತರಿಗೆ ಸಂಕಷ್ಟ – ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ

ಬೆಂಗಳೂರು: ರಾಜ್ಯದಲ್ಲಿ 3 ದಿನ ಮಳೆ ಅಲರ್ಟ್ ನೀಡಲಾಗಿದೆ.
ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಗುರುವಾರದಂದು ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಪರಿಣಾಮವಾಗಿ ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಕೊಡಗು, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆಯು ತಿಳಿಸಿದೆ. ಗುರುವಾರ ಕರಾವಳಿ, ಮಲೆನಾಡು ಭಾಗದಲ್ಲಿ ಅನೇಕ ಕಡೆ ಮಳೆಯಾಗಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು, ವಾಹನ ಸವಾರರು ಜಾಗರೂಕರಾಗಿ ಸಂಚರಿಸಬೇಕೆಂದು ಹವಾಮಾನ ಇಲಾಖೆಯು ಸಾರ್ವಜನಿಕರಿಗೆ ಸೂಚನೆಯನ್ನು ನೀಡಿದೆ.

 

ಅಡಿಕೆ ಸುಲಿಯುವ ಯಂತ್ರಕ್ಕಾಗಿ ವಿ ಟೆಕ್ ಇಂಜಿನಿಯರ್ಸ್ ಎಲ್ಲರ ಆಯ್ಕೆ

Categories
Uncategorized

ಬಿಪಿಎಲ್ ಕಾರ್ಡ್ ಹೊಸ ನಿಯಮ…ನೀವು ಮಾಡಿಸಲೇಬೇಕು! – ಬಿಪಿಎಲ್ ಕಾರ್ಡ್ ಆದಾಯದ ಮಿತಿ 3 ಲಕ್ಷಕ್ಕೆ ಏರಿಕೆ – ಇ-ಕೆವೈಸಿ ದೃಢೀಕರಣದ ಗಡುವು ನವೆಂಬರ್ 10ಕ್ಕೆ ವಿಸ್ತರಣೆ

ಬೆಂಗಳೂರು: ಇ-ಕೆವೈಸಿ ದೃಢೀಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ಗಡುವನ್ನು ನವೆಂಬರ್ 10ರ ಮಂಗಳವಾರದವರೆಗೆ ವಿಸ್ತರಿಸಲಾಗಿದೆ. ಅದಕ್ಕೂ ಮೊದಲು ಅಕ್ಟೋಬರ್ 20ರ ಮಂಗಳವಾರ ಕೊನೆಯ ದಿನವೆಂದು ಹೇಳಲಾಗಿತ್ತು. ಇ-ಕೆವೈಸಿ ಮಾಡಿಸಿದ 1.15.87.298 ಫಲಾನುಭವಿಗಳ ಜೊತೆಗೆ, ಇದುವರೆಗೂ ಒಂದು ಬಾರಿಯೂ ಇ-ಕೆವೈಸಿ ಮಾಡಿಸದ 3.82 ಲಕ್ಷಕ್ಕೂ ಹೆಚ್ಚಿನ ಹಾಗೂ ಐದು ವರ್ಷ ಮೇಲ್ಪಟ್ಟು ಇ-ಕೆವೈಸಿ ಮಾಡಿಸಿದ 54.27 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳು ಇ-ಕೆವೈಸಿ ಅನ್ನು ದೃಢಪಡಿಸಬೇಕಿದೆ ಎಂದು ಆಹಾರ ಇಲಾಖೆಯು ತಿಳಿಸಿದೆ.
ಸಾರ್ವಜನಿಕರು ‘ಅನ್ನಸೇವೆ’ ಮೊಬೈಲ್ ಅಪ್ಲಿಕೇಶನ್ ಮುಖಾಂತರ ಖುದ್ದಾಗಿ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ‘ಆಹಾರ’ ತಂತ್ರಾಂಶದ ಮೂಲಕ ಇ-ಕೆವೈಸಿ ಅನ್ನು ಮಾಡಿಸಬೇಕು, ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆಯು ಸ್ಪಷ್ಟಪಡಿಸಿದೆ. ಕರ್ನಾಟಕ ಮೂಲದ ಶಿಕ್ಷಣ, ಉದ್ಯೋಗದ ನಿಮಿತ್ತ ಹೊರರಾಜ್ಯಗಳಲ್ಲಿ ವಾಸವಾಗಿರುವ ಕರ್ನಾಟಕ ಮೂಲದ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅನುಕೂಲವಾಗಲೆಂದು ‘ಅನ್ನ ಸೇವೆ’ ಆ್ಯಪ್ ಅನ್ನು ಬಿಡುಗಡೆಗೊಳಿಸಲಾಗಿದ್ದು, ಇದನ್ನು ದೇಶಾದ್ಯಂತ ವಿಸ್ತರಿಸಲಾಗಿದೆ. ಹೊರರಾಜ್ಯಗಳಲ್ಲಿ ವಾಸವಾಗಿರುವ ಕನ್ನಡಿಗರು ಅಂದರೆ ರಾಜ್ಯದ ಪಡಿತರ ಚೀಟಿದಾರರು ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಇ-ಕೆವೈಸಿ ಅನ್ನು ಪೂರ್ಣಗೊಳಿಸುವಂತೆ ಆಹಾರ ಇಲಾಖೆಯು ವಿನಂತಿಸಿಕೊಂಡಿದೆ.‌

– ಬಿಪಿಎಲ್ ಕಾರ್ಡ್ ಆದಾಯದ ಮಿತಿ 3 ಲಕ್ಷಕ್ಕೆ ಏರಿಕೆ

ಬೆಂಗಳೂರು: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ವಿಶೇಷ ಸುದ್ಧಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಪಡೆಯಲು ಅಗತ್ಯವಾಗಿರುವಂತಹ ಆದಾಯದ ಮಿತಿಯನ್ನು 1.20 ಲಕ್ಷದಿಂದ 3ಲಕ್ಷಕ್ಕೆ ಹೆಚ್ಚಿಸುವ ನಿರ್ಧಾರವನ್ನು ಕರ್ನಾಟಕ ಆಡಳಿತಾತ್ಮಕ ಸುಧಾರಣೆ ಆಯೋಗ-2ರ ಶಿಫಾರಸಿನ ಮೇರೆಗೆ ಕೈಗೊಂಡಿದೆ. ಒಂದೆಡೆ ಆದಾಯದ ಮಿತಿಯನ್ನು 3 ಲಕ್ಷಕ್ಕೆ ಸಡಿಲಗೊಳಿಸಲಾಗಿದ್ದರೂ, ಅನರ್ಹರನ್ನು ತಡೆಗಟ್ಟುವ ಭೌತಿಕ ಮಾನದಂಡಗಳನ್ನು ಸರ್ಕಾರವು ಕಟ್ಟುನಿಟ್ಟಾಗಿ ಮುಂದುವರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕುಟುಂಬದಲ್ಲಿ ಯಾವುದೇ ಸದಸ್ಯರು ತಮ್ಮ ಸ್ವಂತ ಬಳಕೆಗೆ ಕಾರು ಅಥವಾ ಯಾವುದೇ ನಾಲ್ಕು ಚಕ್ರದ ವಾಹನವನ್ನು ಹೊಂದಿದ್ದಾದಲ್ಲಿ ಅಂತಹವರು ಬಿಪಿಎಲ್ ಪಡಿತರ ಚೀಟಿಗೆ ಅನರ್ಹರಾಗಿರುತ್ತಾರೆ. ಅಲ್ಲದೆ ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಬಳಸುವಂತಹ ಆಟೋ, ಟ್ಯಾಕ್ಸಿ ಮತ್ತು ವಾಣಿಜ್ಯ ವಾಹನಗಳಿಗೆ ನಿಯಮಾನುಸಾರವಾಗಿ ಈ ವಿಚಾರದಲ್ಲಿ ವಿನಾಯಿತಿಯನ್ನು ನೀಡಲಾಗುತ್ತದೆ. ಹಾಗೆಯೇ ಕುಟುಂಬದ ಯಾವುದೇ ಸದಸ್ಯರು ಆದಾಯ ತೆರಿಗೆ ಅಥವಾ ಜಿಎಸ್‌ಟಿ ಅನ್ನು ಪಾವತಿಸುತ್ತಿದ್ದಲ್ಲಿ ಅಂತಹವರಿಗೂ ಬಿಪಿಎಲ್ ಪಡಿತರ ಚೀಟಿ ಸೌಲಭ್ಯ ದೊರೆಯುವುದಿಲ್ಲ. ಇದರೊಂದಿಗೆ ಕೇಂದ್ರ, ರಾಜ್ಯ ಸರ್ಕಾರಿ ನೌಕರರು, ಅರೆ ಸರ್ಕಾರಿ ಹಾಗೂ ಪೀಂಚಣಿದಾರರು, ಸರ್ಕಾರ ನಿಗದಿಪಡಿಸಿರುವಂತಹ ಮಿತಿಗಿಂತ ಹೆಚ್ಚಿನ ಜಮೀನು ಅಥವಾ ನಗರ ಪ್ರದೇಶಗಳಲ್ಲಿ ವಿಸ್ತಾರವಾದ ಸ್ವಂತ ಮನೆ, ವಾಣಿಜ್ಯ ಮಳಿಗೆಯನ್ನು ಹೊಂದಿರುವವರು ಕೂಡ ಬಿಪಿಎಲ್ ಪಡಿತರ ಚೀಟಿಗೆ ಅನರ್ಹರಾಗಿರುತ್ತಾರೆ. ಆದರೆ, ಪಡಿತರ ಚೀಟಿಗಳ ಪರಿಶೀಲನೆಯ ಸಂದರ್ಭದಲ್ಲಿ ಆದಾಯದ ಮಾನದಂಡದ ಕಾರಣಕ್ಕಾಗಿ ಯಾವುದೇ ಬಿಪಿಎಲ್ ಪಡಿತರ ಚೀಟಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸ್ಪಷ್ಟಪಡಿಸಿದ್ದು, ಇದರ ಬದಲಿಗೆ ಅನರ್ಹ ಅಥವಾ ಮಾನದಂಡಗಳನ್ನು ಮೀರಿರುವಂತಹ ಚೀಟಿಗಳನ್ನು ತಾತ್ಕಾಲಿಕವಾಗಿ ಎಪಿಎಲ್ ಪಡಿತರ ಚೀಟಿಗೆ ವರ್ಗಾಯಿಸಲಾಗುತ್ತದೆ ಎಂದು ಈ ಮೂಲಕ ತಿಳಿಸಲಾಗಿದೆ. ಈಗಾಗಲೇ ಹೊಸ ಮಾರ್ಗಸೂಚಿಗಳು ಮತ್ತು ಸಚಿವ ಸಂಪುಟದ ಅಧಿಕೃತ ಅನುಮೋದನೆಯ ಪ್ರಕ್ರಿಯೆಗಳು ಅಂತಿಮ ಹಂತವನ್ನು ತಲುಪಿದ್ದು, ಅತಿ ಶೀಘ್ರದಲ್ಲಿಯೇ ಈ ಹೊಸ ನಿಯಮಗಳು ಸಂಪೂರ್ಣವಾಗಿ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.