Categories
Uncategorized

ತೀರ್ಥಹಳ್ಳಿಯಲ್ಲಿ ನಾಳೆ ನಾರಾಯಣ ಗುರು ಜಯಂತಿ – ಸಮಾಜ ಬಾಂಧವರ ಬೃಹತ್ ಸಮಾವೇಶಕ್ಕೆ ಭಾರೀ ಸಿದ್ಧತೆ –  ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವ ನಿರೀಕ್ಷೆ

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಅದ್ದೂರಿ ಜಯಂತಿ ಹಾಗೂ ಸಮಾಜ ಬಾಂಧವರ ಬೃಹತ್ ಕಾರ್ಯಕ್ರಮ ಅ. 24ರಂದು ನಡೆಯಲಿದೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಅದ್ದೂರಿ ಹಾಗೂ ಅರ್ಥ ಪೂರ್ಣವಾಗಿ ಏರ್ಪಡಿಸಲಾಗುತ್ತಿದೆ. ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ ಜಿಲ್ಲೆಯ ಈಡಿಗ ಹಾಗೂ ಬಿಲ್ಲವ ಸಮಾಜ ಬಾಂಧವರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಈಡಿಗ ಹಾಗೂ ಬಿಲ್ಲವ ಸಮುದಾಯದ ಬಿ.ಕೆ.ಹರಿಪ್ರಸಾದ್, ಸಚಿವ ಎಸ್.ಮಧು ಬಂಗಾರಪ್ಪ, ಪ್ರಮುಖ ನಾಯಕರಾದ ಕೋಟಾ ಶ್ರೀನಿವಾಸಪೂಜಾರಿ, ವಿ.ಸುನೀಲ್ ಕುಮಾರ್, ಬೇಳೂರು ಗೋಪಾಲಕೃಷ್ಣ, ಉಮಾನಾಥ್ ಕೋಟ್ಯಾನ್ ಮುಂತಾದ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೇರು ಸಮಾಜವಾದಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸಮಾರಂಭದಲ್ಲಿ ಗೌರವಿಸಲಾಗುವುದು.

ಸಮಾಜದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ

ದಿವ್ಯ ಸಾನಿಧ್ಯ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿ ಯವರು ವಹಿಸುತ್ತಿದ್ದಾರೆ, ಕಾರ್ತಿಕೇಯ ಪೀಠದ ಶ್ರೀ ಶ್ರೀ ಯೋಗೇಂದ್ರ ಅವದೂತರು, ಸಿಗಂದೂರು ಚೌಡೇಶ್ವರಿ ದೇವಾಲಯ ಧರ್ಮದರ್ಶಿ ರಾಮಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ.

ಬೃಹತ್ ಮೆರವಣಿಗೆ ಬಳಿಕ ಸಭಾ ಕಾರ್ಯಕ್ರಮ

ಅಕ್ಟೋಬ‌ರ್ 24ರ ಶನಿವಾರ ಬೆಳಿಗ್ಗೆ 9:00 ಗಂಟೆಗೆ ಕುಶಾವತಿ ನೆಹರು ಪಾರ್ಕ್ ಮುಂಭಾಗದಿಂದ ಬೃಹತ್ ಮೆರವಣಿಗೆ ಆರಂಭಗೊಂಡು ಸುವರ್ಣ ಸಂಸ್ಕೃತಿ ಭವನದ ಆವರಣದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು , ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಪ್ರತಿ ಮನೆಯಿಂದಲೂ ಸಮಾಜ ಬಾಂಧವರು ಆಗಮಿಸಲಿದ್ದಾರೆ. ತೀರ್ಥಹಳ್ಳಿಯ ಪಟ್ಟಣ ಹಾಗೂ ಎಲ್ಲಾ ಗ್ರಾಮದಿಂದ ಸಮುದಾಯದವರು ಆಗಮಿಸಲಿದ್ದಾರೆ.

ಈಡಿಗ ಹಾಗೂ ಬಿಲ್ಲವ ಸಮಾಜದ ಸರ್ವರನ್ನು ಸ್ವಾಗತಿಸಲಾಗಿದೆ

Categories
Uncategorized

ತೀರ್ಥಹಳ್ಳಿಯಲ್ಲಿ ವಿಜಯ ದಶಮಿ, ಆಯುಧ ಪೂಜೆ ಸಂಭ್ರಮ! – 3 ದಿನವೂ ಎಲ್ಲೆಡೆ ಪೂಜೆ: ಮನೆ ಮನೆಯಲ್ಲೂ ಸಡಗರ – ವಾಹನ, ಅಂಗಡಿ, ಮನೆ, ಕಚೇರಿ, ಕಾರ್ಖಾನೆ ಪೂಜೆ – ಇಂದು ಅದ್ದೂರಿ ಮೆರವಣಿಗೆ: ಸಂಜೆ ವಿಜಯ ದಶಮಿ

ತೀರ್ಥಹಳ್ಳಿ ತಾಲೂಕಿನಲ್ಲಿ ದಸರಾ ಹಬ್ಬದ ಸಡಗರ ಮನೆ ಮಾಡಿದೆ. ವಿಜಯ ದಶಮಿಯ ಇಂದು ರಾಮೇಶ್ವರ ದೇವರ ಮೆರವಣಿಗೆ, ಸ್ತಬ್ದ ಚಿತ್ರಗಳ ಮೆರವಣಿಗೆ ನಡೆಯಲಿದೆ.
ಸೋಮವಾರ, ಮಂಗಳವಾರ ಆಯುಧ ಪೂಜೆ, ಅಂಗಡಿ ಪೂಜೆಗಳನ್ನು ಮಾಡಲಾಗಿದೆ. ಮನೆಯವರು ನೆರೆಯವರ ಸೇರಿ ಎಲ್ಲೆಡೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ವಾಹನ ಸ್ಟಾಂಡ್, ವಾಹನಗಳು, ಅಂಗಡಿಗಳು, ಗ್ಯಾರೇಜ್ ಗಳಲ್ಲಿ ಸೇರಿ ಕಾರ್ಖಾನೆ, ಶೋ ರೂಂಗಳಲ್ಲಿ ಕೂಡ ಪೂಜೆ ನಡೆದಿದೆ. ಆಟೋ, ಬಸ್ ಇತರೆ ವಾಹನಗಳನ್ನು ಅಲಂಕಾರ ಮಾಡಲಾಗಿತ್ತು. ಕೆ. ಇ. ಬಿ, ವರ್ಕ್ ಶಾಪ್, ನೀರು ಸಂಗ್ರಹಣಾ ಕೇಂದ್ರ ಸೇರಿ ಎಲ್ಲೆಡೆ ಪೂಜೆ ಮಾಡಲಾಗಿದೆ.
ವಿಜಯ ದಶಮಿ ಮೆರವಣಿಗೆಗೆ ಭಾರೀ ಜನ ಸೇರುವ ನಿರೀಕ್ಷೆ ಇದೆ.

Categories
Uncategorized

•ಬೆಳ್ತಂಗಡಿ: ನದಿಯಲ್ಲಿ ಮುಳುಗಿ ಯುವಕ ಸಾವು •ಬಂಟ್ವಾಳ: ಚೂರಿ ಇರಿತ; ಆರೋಪಿಗಳ ಬಂಧನ •ಉಳ್ಳಾಲ: ಓವರಟೇಕ್:ಇಬ್ಬರು ಯುವಕರ ದುರ್ಮರಣ

ಬೆಳ್ತಂಗಡಿ: ನದಿಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ, ಮಂಗಳವಾರದಂದು ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಎನ್ನುವಲ್ಲಿ ನಡೆದಿದೆ. ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನ ಮಾಡಲು ತೆರಳಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೃತ ಯುವಕನನ್ನು ಕೌಕ್ರಾಡಿ ಗ್ರಾಮದ ಮೂಡುಬೈಲ್ ನಿವಾಸಿ ಕೀರ್ತನ್ ಎಂದು ಗುರುತಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಸ್ಥಳೀಯರು ತಕ್ಷಣ ಕೀರ್ತನ್ ಅವರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

•ಬಂಟ್ವಾಳ: ಚೂರಿ ಇರಿತ; ಆರೋಪಿಗಳ ಬಂಧನ

ಬಂಟ್ವಾಳ: ಯುವಕನೊಬ್ಬನಿಗೆ ಚೂರಿಯಿಂದ ಇರಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಸಂಗಬೆಟ್ಟು ನಿವಾಸಿ ಪ್ರಕಾಶ್ ಎನ್ನುವವರು ತಮ್ಮ 5 ಜನ ಸ್ನೇಹಿತರೊಂದಿಗೆ ಸಿದ್ದಕಟ್ಟೆ ಜಂಕ್ಷನ್ ನಲ್ಲಿ ನಿಂತಿದ್ದ ಸಂದರ್ಭದಲ್ಲಿ, ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಆರೋಪಿಗಳು ಪ್ರಕಾಶ್ ಅವರನ್ನು ತಮ್ಮ ಸಮೀಪಕ್ಕೆ ಕರೆದಿದ್ದಾರೆ. ಪ್ರಕಾಶ್ ಅವರ ಹತ್ತಿರ ಹೋಗುತ್ತಿದ್ದಂತೆ ಆರೋಪಿಗಳು ಒಟ್ಟುಗೂಡಿ ಪ್ರಕಾಶ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಆರೋಪಿಗಳ ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ತನ್ನ ಬಳಿಯಿದ್ದ ಚೂರಿಯಿಂದ ಪ್ರಕಾಶ್ ಗೆ ಹಲವಾರು ಬಾರಿ ಇರಿದು ಗಾಯಗೊಳಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ಅವರ ಸಹೋದರ ಗಣೇಶ್ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಅಕ್ಷಿತ್, ಕಿರಣ್ ಅಲಿಯಾಸ್ ರಂಜು, ಅಜಿತ್, ಧನುಷ್, ಸಂತೋಷ್ ಮತ್ತು ರಾಜು ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

•ಉಳ್ಳಾಲ: ಓವರ್ ಟೇಕ್ ಗೆ ಇಬ್ಬರು ಯುವಕರ ಧಾರುಣ ಸಾವು

ಉಳ್ಳಾಲ: ಓವರ್ ಟೇಕ್ ಮಾಡಲು ಹೋಗಿ ಇಬ್ಬರು ಯುವಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ, ಸೋಮವಾರದಂದು ಬೋಲಿಯಾರ್ ನಲ್ಲಿ ನಡೆದಿದೆ. ಬೋಳಿಯಾರ್ ಕಡೆಯಿಂದ ಮುಡಿಪು ಕಡೆಗೆ ಇಬ್ಬರು ಯುವಕರು ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಪಿಕ್ ಅಪ್ ವಾಹನವೊಂದು ಬೈಕ್ ಗೆ ಬಲವಾಗಿ ಢಿಕ್ಕಿ ಹೊಡೆದ ಪರಿಣಾಮವಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮವಾಗಿ ಬೈಕ್ ಸವಾರನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಕಂಬ ಮುರಿದು ಬಿದ್ದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಯಿತಾದರೂ, ಓರ್ವ ಯುವಕ ಆಸ್ಪತ್ರೆ ತಲುಪುವುದರ ಒಳಗಾಗಿ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಯುವಕ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಮೃತ ಯುವಕರನ್ನು ಕಿನ್ಯಾ ಗ್ರಾಮದ ಉಕ್ಕುಡ ನಿವಾಸಿಗಳಾದ ಮೊಹಮ್ಮದ್ ಅರ್ಫಾಝ್ ಮತ್ತು ಮೊಹಮ್ಮದ್ ಜುನೈದ್ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸುತಿದ್ದಂತೆ ಪಿಕಪ್ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ.‌

Categories
Uncategorized

ಅ.25ಕ್ಕೆ ಉಚಿತ ಶ್ರವಣ ತಪಾಸಣೆ ಶಿಬಿರ – ಲಯನ್ಸ್ ಕ್ಲಬ್ ತೀರ್ಥಹಳ್ಳಿ ವತಿಯಿಂದ ಆಯೋಜನೆ – ಶ್ರವಣ ಯಂತ್ರಕ್ಕೆ ಸಹಾಯಧನ: ಸರ್ವರಿಗೂ ಸ್ವಾಗತ

ತೀರ್ಥಹಳ್ಳಿ: ಲಯನ್ಸ್ ಕ್ಲಬ್ ತೀರ್ಥಹಳ್ಳಿ ಇವರ ನೇತೃತ್ವದಲ್ಲಿ ಈಶ್ವರ್ ಮಲ್ಪೆ ತಂಡದವರ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣಾ ಕಾರ್ಯಕ್ರಮವನ್ನು 25 ಅಕ್ಟೋಬರ್ 2026ರ ಭಾನುವಾರದಂದು ಬೆಳಿಗ್ಗೆ 10:೦೦ ಗಂಟೆಯಿಂದ ಸಂಜೆ 5:00ರವರೆಗೆ ಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ‌.
ಈಗಾಗಲೇ ಈಶ್ವರ್ ಮಲ್ಪೆ ತಂಡದವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಇದೀಗ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯಮಾಡುವ ಉದ್ದೇಶದಿಂದಾಗಿ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ.
ಟೀಮ್ ಈಶ್ವರ್ ಮಲ್ಪೆ ಸಂಸ್ಥೆಯಿಂದ ಶ್ರವಣ ಯಂತ್ರಕ್ಕೆ ಆಗುವ ಶೇಕಡ 40ರಷ್ಟು ವೆಚ್ಚವನ್ನು ಮೊತ್ತವನ್ನು ಭರಿಸಲಾಗುತ್ತಿದೆ. ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ. ಹಿರಿಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಶಿಬಿರದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ತಮ್ಮ ಹೆಸರನ್ನು ಕರೆ ಮಾಡಿ ನೋಂದಾಯಿಸಿಕೊಳ್ಳಬೇಕೆಂದು, ಶ್ರವಣ ಪರೀಕ್ಷೆಯ ಯಾವುದಾದರೂ ಹಳೆಯ ವರದಿಗಳು ಇದ್ದಲ್ಲಿ ಅದನ್ನು ಜೊತೆಗೆ ತೆಗೆದುಕೊಂಡು ಬರಬೇಕೆಂದು, ನೋಂದಾಯಿಸಿಕೊಳ್ಳುವ ಮೊದಲ 20 ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಶಿಬಿರದಲ್ಲಿ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಭಾಗವಹಿಸುತ್ತಾರೆ. ಸರ್ವರನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀನಾಥ್ ಜೋಯ್ಸ್ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Categories
Uncategorized

ರಾಜ್ಯದಲ್ಲಿ ಎಸ್ಐಆರ್ ಅಂತಿಮ ಪಟ್ಟಿ ಅ.27ಕ್ಕೆ ಪ್ರಕಟ – ಅಂತಿಮ ಹಂತಕ್ಕೆ ತಲುಪಿದ ಮತದಾರರ ಪಟ್ಟಿಯ ಪರಿಷ್ಕರಣೆ – ನಿಮ್ಮ ಹೆಸರಿದೆಯಾ..?… ಇನ್ನು ಒಂದೇ ಕಡೆ ಮತಪಟ್ಟಿಯಲ್ಲಿ ಹೆಸರು

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯು ಅಂತಿಮ ಹಂತವನ್ನು ತಲುಪಿದ್ದು, ಒಟ್ಟು 43.82 ಲಕ್ಷ ನೊಟೀಸ್ ಗಳ ಪೈಕಿಯಲ್ಲಿ 19‌.365 ನೊಟೀಸ್ ಗಳ ಪರಿಶೀಲನೆ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಛೇರಿಯಿಂದ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವ ನೊಟೀಸ್ ಪ್ರಕ್ರಿಯೆಗೆ ಅಕ್ಟೋಬರ್ 22ರ ಗುರುವಾರ ಅಂತಿಮ ದಿನವಾಗಿದ್ದು, ಮತದಾರರ ಅಂತಿಮ ಪಟ್ಟಿಯನ್ನು ಅಕ್ಟೋಬರ್ 27ರ ಮಂಗಳವಾರ ಪ್ರಕಟಗೊಳ್ಳಲಿದೆ ಎನ್ನಲಾಗಿದೆ. ಈಗಾಗಲೇ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಅಡಿಯಲ್ಲಿ ಒಟ್ಟು 24.46.803 ಅರ್ಜಿ ನಮೂನೆಗಳು ಸ್ವೀಕೃತವಾಗಿದ್ದು, ನಮೂನೆ-6ರಲ್ಲಿ 10.07.392 ಅರ್ಜಿಗಳು, ನಮೂನೆ-6ಎ ನಲ್ಲಿ 4777 ಅರ್ಜಿಗಳು, ನಮೂನೆ-7ರಲ್ಲಿ 1.55.109 ಅರ್ಜಿಗಳು, ನಮೂನೆ-8ರಲ್ಲಿ 12.79.525 ಅರ್ಜಿಗಳು ಬಂದಿದ್ದು, ನಮೂನೆ-8ರಲ್ಲಿ ಅತಿ ಹೆಚ್ಚಿನ ಅರ್ಜಿಗಳು ಬಂದಿವೆ ಎನ್ನಲಾಗಿದೆ.
ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಅಳಿಸಲು ನಮೂನೆ-7ರಲ್ಲಿ ಅರ್ಜಿ ಸಲ್ಲಿಕೆಯ ಪ್ರಮಾಣ ಅಧಿಕವಾಗಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಅರ್ಜಿ ಸಲ್ಲಿಕೆಯ ನಿಯಮಗಳ ಕುರಿತು ಸ್ಪಷ್ಟನೆ ನೀಡಿದೆ. ಅಲ್ಲದೆ ಈ ಕ್ರಮವು ಆಧಾರರಹಿತ ಅಥವಾ ಪುನರಾವರ್ತಿತ ಆಕ್ಷೇಪಣೆಗಳನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದ್ದರೂ ಕೂಡ, ನಿಜವಾದ ದೂರುಗಳನ್ನು ಸಲ್ಲಿಸಲು ಬಯಸುವ ಅರ್ಹ ಮತದಾರರ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ ಅನುಷ್ಠಾನಗೊಳಿಸುವುದು ಮುಖ್ಯವಾಗಿದೆ.
ಮತದಾರರ ನೋಂದಣಿ ನಿಯಮಗಳು, 1960ರ ಪ್ರಕಾರ ನಮೂನೆ-7ರಲ್ಲಿ ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಚುನಾವಣಾ ನೋಂದಣಿ ಅಧಿಕಾರಿಗಳು ಹೊಂದಿದ್ದಾರೆ. ಇದರ ಪ್ರಕಾರ ಅರ್ಜಿಯಲ್ಲಿ ಮುಖ್ಯವಾಗಿ ಬೇಕಾಗಿರುವಂತಹ ವಿವರಗಳಿವೆಯೇ, ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿಯ ಸಹಿ ಇದೆಯೇ ಮತ್ತು ನೀಡಿರುವ ಮಾಹಿತಿಯು ಮತದಾರರ ಪಟ್ಟಿಯಲ್ಲಿರುವ ಮಾಹಿತಿಗೆ ಹೊಂದಾಣಿಕೆಯಾಗುತ್ತದೆಯೆ ಎನ್ನುವುದನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಹಾಗೆಯೇ ಇತ್ಯರ್ಥಪಡಿಸಲಾಗಿರುವಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ವ್ಯಕ್ತಿಗಳಿಗೆ ನೊಟೀಸ್ ಅನ್ನು ನೀಡುವ ಮೂಲಕ, ಅವರಿಂದ ಹೇಳಿಕೆಗಳನ್ನು ಪಡೆದುಕೊಂಡು ಅವುಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ಭಾಗಗಳಲ್ಲಿ ಇರುವಂತಹ ಮತದಾರರ ಹಕ್ಕುಗಳು, ದಾಖಲೆಗಳ ಪರಿಶೀಲನೆ, ಹೆಸರುಗಳ ಸೇರ್ಪಡೆ ಮತ್ತು ಅಳಿಸುವಿಕೆ, ಚುನಾವಣಾ ಪಟ್ಟಿಗಳ ವಿಶ್ವಾಸಾರ್ಹತೆಯ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ಕರ್ನಾಟಕದ ವಿಚಾರದಲ್ಲಿ ಅಂತಿಮ ಮತದಾರರ ಪಟ್ಟಿ ಎನ್ನುವುದು ಕೇವಲ ಆಡಳಿತಾತ್ಮಕ ದಾಖಲೆಯಾಗಿರದೆ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಖಚಿತಪಡಿಸುವ ಪ್ರಮುಖ ಆಧಾರವಾಗಿದೆ ಎಂದು ತಿಳಿಸಲಾಗಿದೆ.

Categories
Uncategorized

ತೀರ್ಥಹಳ್ಳಿ: ಸ್ತಬ್ದ ಚಿತ್ರಗಳ ಮೆರವಣಿಗೆ ನೋಡಲು ಜನವೋ ಜನ! – ವಿಜಯ ದಶಮಿ ಅಂಗವಾಗಿ ದೇವರ ಮೆರವಣಿಗೆ – ಸಂಜೆ ಕುಶಾವತಿ ಪಾರ್ಕ್ ಅಲ್ಲಿ ಸಾಂಸ್ಕೃತಿಕ ವೈಭವ – ಸಾವಿರಾರು ಜನರಿಂದ ಬನ್ನಿ ಮಂಟಪದಲ್ಲಿ ಬನ್ನಿ ಪೂಜೆಗೆ ಸಜ್ಜು

ತೀರ್ಥಹಳ್ಳಿ: ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವರ ದಸರಾ ಮಹೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯುತ್ತಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಸ್ತಬ್ದ ಚಿತ್ರಗಳ ಮೆರವಣಿಗೆಯನ್ನು ಜನ ವೀಕ್ಷಣೆ ಮಾಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್ ರಂಜಿತ್, ಪ್ರಮುಖರಾದ ಸೊಪ್ಪುಗುಡ್ಡೆ ರಾಘವೇಂದ್ರ, ರತ್ನಾಕರ್ ಶೆಟ್ಟಿ, ಸಂದೇಶ್ ಜವಳಿ, ಅಮರ ನಾಥ ಶೆಟ್ಟಿ ಸೇರಿ ಪ್ರಮುಖರು ಹಾಜರಿದ್ದರು.
ಮೆರವಣಿಗೆ ಕುಶಾವತಿ ಪಾರ್ಕ್ ಹೋಗಲಿದ್ದು ಅಲ್ಲಿ ಬನ್ನಿ ಪೂಜೆ ನಡೆಯಲಿದೆ. ಸಾವಿರಾರು ಜನ ಬನ್ನಿ ಕಡಿದು ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಹುಲಿ ಹೆಜ್ಜೆ ಹುಲಿ ವೇಷ ಸ್ಪರ್ಧೆ ನಡೆಯಲಿದೆ.

Categories
Uncategorized

ಕೊಪ್ಪ: ಅಪರಿಚಿತ ವಾಹನ ಢಿಕ್ಕಿ ಹೊಡೆದು, ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ, ಶನಿವಾರದಂದು ತೀರ್ಥಹಳ್ಳಿ-ಕೊಪ್ಪ ಮುಖ್ಯ ರಸ್ತೆಯ ಚಿಕ್ಕನಕೊಡಿಗೆ ಸಮೀಪ ನಡೆದಿದೆ. ವ್ಯಕ್ತಿಯು ಗಡಿಕಲ್ ನಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ಗಡಿಕಲ್ ನಿವಾಸಿ ಸಿದ್ಧಯ್ಯ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ಪರಿಣಾಮವಾಗಿ ಸಿದ್ಧಪ್ಪ ಅವರ ತಲೆ ಮತ್ತು ಕಾಲಿಗೆ ಗಂಭೀರ ರೀತಿಯ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಅವರನ್ನು ಸಮೀಪದ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಯಿತಾದರೂ ಸಿದ್ಧಪ್ಪ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು ಎನ್ನುವ ಮಾಹಿತಿ ಲಭಿಸಿದೆ. ಅಪಘಾತ ನಡೆದ ಕೂಡಲೇ ವಾಹನ ಚಾಲಕ ಪರಾರಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿದ್ಧಪ್ಪ‌ ಅವರ ಸಂಬಂಧಿಕರಾದ ಮಂಜುನಾಥ್ ಟಿ. ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಶಿವಮೊಗ್ಗ: ಬೆಳಗಿನ ವಾಯುವಿಹಾರದ ಸಂದರ್ಭದಲ್ಲಿ ಹೃದಯಾಘಾತ

ಶಿವಮೊಗ್ಗ: ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ, ಶನಿವಾರದಂದು ನೆಹರೂ ಕ್ರೀಡಾಂಗಣದಲ್ಲಿ ನಡೆದಿದೆ.‌ ಮೃತ ದುರ್ದೈವಿಯನ್ನು ನೂರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಇವರು ಪ್ರತಿದಿನ ನೆಹರೂ ಕ್ರೀಡಾಂಗಣದಲ್ಲಿ ವಾಕ್ ಮಾಡುತ್ತಿದ್ದರು ಮತ್ತು ಯೋಗದಲ್ಲೂ ಕೂಡ ತೊಡಗಿದ್ದರು ಎನ್ನುವ ಮಾಹಿತಿ ಲಭಿಸಿದೆ. ಅದೇ ರೀತಿ ಎಂದಿನ ಹಾಗೆ ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಕುಸಿದುಬಿದ್ದ ನೂರ್ ಮೊಹಮ್ಮದ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ ನೂರ್ ಮೊಹಮ್ಮದ್ ಅವರು ಕಳೆದ 15:20 ದಿನಗಳಿಂದ ಸುಸ್ತು ಎಂದು ಹೇಳುತ್ತಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಮೆಕ್ಕಾ ಯಾತ್ರೆಯನ್ನು ಮುಗಿಸಿಕೊಂಡು ಬಂದ ಅವರು ತೀವ್ರ ಪ್ರಮಾಣದ ಮಧುಮೇಹಕ್ಕೆ ಒಳಗಾಗಿದ್ದು, ಇನ್ಸುಲಿನ್ ಪಡೆಯುತ್ತಿದ್ದರು. ಸಕ್ಕರೆ ಪ್ರಮಾಣದಲ್ಲಿ ದಿಢೀರ್ ಕುಸಿತ ಕಂಡುಬಂದಿದ್ದರಿಂದ ಈ ದುರಂತ ಸಂಭವಿಸಿರಬಹುದು ಎನ್ನಲಾಗಿದೆ.

•ತೀರ್ಥಹಳ್ಳಿ: ಬಸ್ ನಿಲ್ದಾಣದ ಮೇಲೆ ಉರುಳಿಬಿದ್ದ ಮರ

ತೀರ್ಥಹಳ್ಳಿ: ಮಳೆ ಮತ್ತು ತೀವ್ರ ಗಾಳಿಯಿಂದಾಗಿ ಬಸ್ ನಿಲ್ದಾಣದ ಮೇಲೆ ಮರವೊಂದು ಉರುಳಿ ಬಿದ್ದಿರುವ ಘಟನೆ ಇತ್ತೀಚಿಗೆ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಚಿಕಟ್ಟೆ ಎನ್ನುವಲ್ಲಿ ನಡೆದಿದೆ. ಕೆಲವು ಜನ ನಾಗರಿಕರು ಸಂಜೆ ತಮ್ಮ ವಾಯುವಿಹಾರವನ್ನು ಮುಗಿಸಿಕೊಂಡು ಎಂದಿನಂತೆ ವಿಶ್ರಾಂತಿ ಪಡೆದುಕೊಳ್ಳಲು ತಂಗುದಾಣಕ್ಕೆ ತೆರಳಿದ್ದು, ಅವರು ಅಲ್ಲಿಂದ ಎದ್ದು ಹೋದ ಕೆಲವೇ ನಿಮಿಷಗಳಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ಬಾರಿ ಅವಘಡ ಒಂದು ತಪ್ಪಿದಂತಾಗಿದೆ.

•ಶಿಕಾರಿಪುರ: ಯುವ ಇಂಜಿನಿಯರ್ ಆತ್ಮಹತ್ಯೆ

ಶಿಕಾರಿಪುರ: ಯುವ ಇಂಜಿನಿಯರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ, ಚನ್ನಕೇಶವ ನಗರದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಅನ್ವಿತ್ ಸಾಗರ್ ಎಂದು ಗುರುತಿಸಲಾಗಿದೆ. ಅನ್ವಿತ್ ಅವರು ಶನಿವಾರದಂದು ತಮ್ಮ ಪೋಷಕರೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ, ಮನೆಗೆ ಮರಳಿದ್ದು, ಬಳಿಕ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಅನ್ವಿತ್ ಸಾಗರ್ ಅವರ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

Categories
Uncategorized

ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ! – ಅ.22ರವರೆಗೆ ಮಳೆ: ಒಂದು ವಾರದಿಂದ ಹಲವೆಡೆ ಮಳೆ – ಬರದಿಂದ ಕಂಗಾಲಾಗಿದ್ದ ಜನತೆಗೆ ಕೊಂಚ ನಿಟ್ಟುಸಿರು

ಬೆಂಗಳೂರು: ವಾಯುಭಾರ ಕುಸಿತ ಮತ್ತು ಈಶಾನ್ಯ ಮಾರುತಗಳ ಆಗಮನದ ಪರಿಣಾಮವಾಗಿ ಅಕ್ಟೋಬರ್ 22ರ ಗುರುವಾರದವರೆಗೆ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆ ಸಂಭವಿಸುವ ಸಾಧ್ಯತೆ ಇರುವುದರಿಂದ ಈ ಭಾಗಗಳಿಗೆ ಸಂಬಂಧಿಸಿದಂತಹ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಅನ್ನು ಘೋಷಿಸಿದೆ. ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುವ ಸಂಭವ ಇರುವುದರಿಂದ ಕಡಲ ತೀರದಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಮೀನುಗಾರರು ಮತ್ತು ಸಮುದ್ರ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಭಾನುವಾರದಂದು ಮಲೆನಾಡು ಮತ್ತು ಕರಾವಳಿ ಈ ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿತ್ತು. ಮಳೆ ನಿರೀಕ್ಷೆಯಲ್ಲಿದ್ದವರಿಗೆ ಸಂತಸ ತಂದಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅಕ್ಟೋಬರ್ 22ರ ಗುರುವಾರದವರೆಗೆ ಮಳೆಯ ಅಬ್ಬರ ಮುಂದುವರೆಯಲಿದ್ದು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ರಾಮನಗರ ಜಿಲ್ಲೆಗಳಿಗೆ ಗುಡುಗು ಸಹಿತ ಮಳೆಯಾಗಲಿದ್ದು ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ಕೈಗೊಳ್ಳದೆ ಮುನ್ನೆಚ್ಚರಿಕೆ ವಹಿಸುವಂತೆ ಯೆಲ್ಲೋ ಅಲರ್ಟ್ ನ ಎಚ್ಚರಿಕೆ ನೀಡಿದೆ.

Categories
Uncategorized

•ಕುಂದಾಪುರ: ಫಿನಾಯಿಲ್ ಸೇವಿಸಿ ಗೃಹಿಣಿ ಆತ್ಮಹತ್ಯೆಗೆ ಯತ್ನ •ಸುಳ್ಯ: ಮೀನು ಹಿಡಿಯಲು ಹೋಗಿ, ವಿದ್ಯುತ್ ಶಾಕ್ ಗೆ ಒಳಗಾದ ಇಬ್ಬರು ಯುವಕರ ಸಾವು •ಮಂಗಳೂರು: ಚೂರಿಯಿಂದ ಇರಿದು ಕೊಲ್ಲಲು ಯತ್ನ

ಕುಂದಾಪುರ: ಪತಿಯ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ, ಗಂಗೊಳ್ಳಿಯಲ್ಲಿ ನಡೆದಿದೆ. ಆಲೂರಿನ ನಿವಾಸಿಯಾದ ಜಯಶ್ರೀ ಎನ್ನುವವರು 2024ರ ನವೆಂಬರ್ ತಿಂಗಳಿನಲ್ಲಿ ಅಮಾಸೆಬೈಲು ತಪ್ಲು ನಿವಾಸಿಯಾದ ಪ್ರಕಾಶ್ ಆಚಾರ್ಯ ಎನ್ನುವವರೊಡನೆ ವಿವಾಹವಾಗಿದ್ದರು. ಮದುವೆಯ ಬಳಿಕ ಪ್ರಕಾಶ್ ತನ್ನ ಸಹೋದರ ಪ್ರಭಾಕರ್ ಮತ್ತು ತಂಗಿ ಪ್ರಶಾಂತಿ ಅವರೊಂದಿಗೆ ಸೇರಿಕೊಂಡು ಜಯಶ್ರೀ ಅವರಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಪ್ರಕಾಶ್ ನಿನಗೆ ಮಕ್ಕಳಾದರೆ ನಾನು ನಿನ್ನನ್ನು ನೋಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಇದನ್ನು ಜಯಶ್ರೀ ತನ್ನ ತವರು ಮನೆಯವರಿಗೆ ಹೇಳಿದಾಗ ಪ್ರಕಾಶ್ ಜಯಶ್ರೀ ಅವರಿಂದ ಮೊಬೈಲ್ ಅನ್ನು ಕಸಿದುಕೊಂಡು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಜಯಶ್ರೀ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಪ್ರಕಾಶ್ ಆರು ತಿಂಗಳುಗಳ ಕಾಲ ಮನೆಗೆ ಬಾರದೆ ದೂರವಿದ್ದನು ಎನ್ನುವ ಮಾಹಿತಿ ಲಭಿಸಿದೆ. ದಾಂಪತ್ಯ ಕಲಹಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳ ಹಿಂದೆಯಷ್ಟೇ ಜಯಶ್ರೀ ಮತ್ತು ಪ್ರಕಾಶ್ ಆಚಾರ್ಯ ಅವರ ಕುಟುಂಬದ ನಡುವೆ ಮಾತುಕತೆ ನಡೆದಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಪ್ರಕಾಶ್ ತಾನು ಜಯಶ್ರೀ ಜೊತೆಗೆ ಸಂಸಾರ ಮಾಡುವುದಿಲ್ಲ ಎಂದು ತಿಳಿಸಿ ಆಕೆಗೆ ಮಾನಸಿಕ ಕಿರುಕುಳ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಜಯಶ್ರೀ ಅವರು ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಕ್ಷಣ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ, ಚಿಕಿತ್ಸೆ ನೀಡಿದರ ಪರಿಣಾಮವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಯಶ್ರೀ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.

•ಸುಳ್ಯ: ಮೀನು ಹಿಡಿಯಲು ಹೋಗಿ ವಿದ್ಯುತ್ ಶಾಕ್ ಗೆ ಒಳಗಾದ ಇಬ್ಬರು ಯುವಕರ ಸಾವು

ಸುಳ್ಯ: ವಿದ್ಯುತ್ ಆಘಾತಕ್ಕೆ ಒಳಗಾಗಿ ಇಬ್ಬರು ಯುವಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ, ಸೋಮವಾರದಂದು ಕಲ್ಮಡ್ಕದಲ್ಲಿ ನಡೆದಿದೆ. ಹೊಳಲ್ಕೆರೆ ಎನ್ನುವ ತೋಡಿನಲ್ಲಿ ತಡರಾತ್ರಿಯಲ್ಲಿ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ, ಮಧುಸೂದನ್ ಭಟ್ ಎನ್ನುವವರ ತೋಟದಿಂದ ವಿದ್ಯುತ್ ಪ್ರವಹಿಸಿದ ಪರಿಣಾಮವಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೊದಲಿಗೆ ಮೂವರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದು, ತಕ್ಷಣ ಆಘಾತದಿಂದ ಎಚ್ಚೆತ್ತುಕೊಂಡ ಬಾಲಕ ತನ್ನ ಸಂಬಂಧಿಕರಿಗೆ ಈ ವಿಚಾರವನ್ನು ತಿಳಿಸಿದ್ದಾನೆ ಎನ್ನಲಾಗಿದೆ. ಮಾಹಿತಿ ದೊರೆಯುತಿದ್ದಂತೆ ಬಾಲಕನ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ, ವಿದ್ಯುತ್ ಆಘಾತಕ್ಕೆ ತೀವ್ರವಾಗಿ ಒಳಗಾಗಿದ್ದ ಇಬ್ಬರು ಯುವಕರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಆದರೆ ಯುವಕರನ್ನು ಪರೀಕ್ಷಿಸಿದ ವೈದ್ಯರು, ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮೃತ ಯುವಕರನ್ನು ಕಲ್ಮಡ್ಕದ ಭರತ್ ಮತ್ತು ಗುರುವಾಯನಕೆರೆಯ ಗಣೇಶ್ ಎಂದು ಗುರುತಿಸಲಾಗಿದೆ. ಬಾಲಕ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಅನಧಿಕೃತವಾಗಿ ತೋಟದಲ್ಲಿ ವಿದ್ಯುತ್ ಅಳವಡಿಸಿರುವ ಹಿನ್ನೆಲೆಯಲ್ಲಿ ಮಧುಸೂದನ್ ಭಟ್ ಅವರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಮಂಗಳೂರು: ಚೂರಿಯಿಂದ ಇರಿದು ಕೊಲ್ಲಲು ಯತ್ನ

ಮಂಗಳೂರು: ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದು ಕೊಲ್ಲಲು ಯತ್ನಿಸಿದ ಘಟನೆ, ಕಳೆದೆರಡು ದಿನಗಳ ಹಿಂದೆ ಲೇಡಿಗೋಷನ್ ಬಳಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ನೆಕ್ರಾಜೆಯ ಸಿರಾಜ್ ಎನ್ನುವವರು ಲೇಡಿಗೋಷನ್ ಆಸ್ಪತ್ರೆಯ ಬಳಿಯ ಬಸ್ ನಿಲ್ದಾಣದಲ್ಲಿ ಮೊಬೈಲ್ ನೋಡುತ್ತಾ ಕುಳಿತಿದ್ದ ಸಂದರ್ಭದಲ್ಲಿ, ಅಲ್ಲಿಗೆ ಆಗಮಿಸಿದ ಅಪರಿಚಿತ ವ್ಯಕ್ತಿ ಮಲೆಯಾಳಿ ಭಾಷೆಯಲ್ಲಿ ಸಿರಾಜ್ ನನ್ನು “ಏನು ಮಾಡುತ್ತಿದ್ದೀಯಾ?” ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಪ್ರತಿಯಾಗಿ ಸಿರಾಜ್ ಮೊಬೈಲ್ ನೋಡುತ್ತಾ ಕುಳಿತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಆಗ ಅಪರಿಚಿತ ವ್ಯಕ್ತಿ ಸ್ವಲ್ಪ ಮೊಬೈಲ್ ಕೊಡು ಎಂದು ಕೇಳಿದ್ದಾನೆ. ಸಿರಾಜ್ ಇಲ್ಲ ಎಂದು ನಿರಾಕರಿಸಿದಕ್ಕೆ ಅಪರಿಚಿತ ವ್ಯಕ್ತಿ ಸಿರಾಜ್ ನಿಗೆ ಮೊಬೈಲ್ ಕೊಡದಿದ್ದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಸಿರಾಜ್ ಫೋನ್ ಕೊಡದೇ ಇದ್ದುದರಿಂದ ಅಪರಿಚಿತ ವ್ಯಕ್ತಿ ತನ್ನ ಬಳಿಯಿದ್ದ ಚೂರಿಯಿಂದ ಸಿರಾಜ್ ನನ್ನು ಇರಿದು ಕೊಲ್ಲಲು ಯತ್ನಿಸಿದ್ದಾನೆ. ಸಿರಾಜ್ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರೂ ಕೂಡ ಚಾಕು ಸಿರಾಜ್ ಅವರ ಎಡಬದಿಗೆ ತಾಗಿ ಮೂಗು ಹರಿದಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಅಪರಿಚಿತ ವ್ಯಕ್ತಿ ಮತ್ತೊಮ್ಮೆ ಚೂರಿಯಿಂದ ಇರಿಯಲು ಯತ್ನಿಸಿದಾಗ ಸಿರಾಜ್ ಅವರ ಬಲಗೈಗೆ ಚೂರಿ ತಾಗಿ ಗಾಯವಾಗಿದೆ. ಇದನ್ನು ಗಮನಿಸಿದ ಜನರು ತಕ್ಷಣ ಸಿರಾಜ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಕೊಲೆ ಮಾಡಲು ಯತ್ನಿಸಿದ ಆರೋಪಿಯನ್ನು ಇರ್ಷಾದ್ ಅಲೆಮಾರಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯಾದ ಇರ್ಷಾದ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Categories
Uncategorized

ತೀರ್ಥಹಳ್ಳಿ ದಸರಾ ಮೆರವಣಿಗೆಗೆ ಭಾರೀ ಪ್ಲಾನ್! – 20 ಲಕ್ಷ ವೆಚ್ಚದಲ್ಲಿ ಅದ್ದೂರಿ ದಸರಾಗೆ ಸಜ್ಜು: 4 ದಿನ ಕಾರ್ಯಕ್ರಮ – ವಿಜಯದಶಮಿಯಂದು ಅದ್ದೂರಿ ದಸರಾ ಮೆರವಣಿಗೆ

ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾಗೆ ಅದ್ದೂರಿ ಸಿದ್ಧತೆ ನಡೆದಿದೆ. 4 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.
ಶಾಸಕ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಹಲವು ಸಂಚಾಲಕ ನೇತೃತ್ವದಲ್ಲಿ ದಸರಾ ಕಾರ್ಯಕ್ರಮ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ದಸರಾ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.
ದಸರಾ ಮುಖ್ಯ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಈ ಬಗ್ಗೆ
ತೀರ್ಥಹಳ್ಳಿಯ ಮಯೂರ ಹೋಟೆಲ್ ಸಭಾಂಗಣದಲ್ಲಿ ಮಾಹಿತಿ ನೀಡಿ, ಅ.21ರಂದು ವಿಜಯದಶಮಿಯಂದು ಅದ್ದೂರಿಯಾಗಿ ದಸರಾ ಮೆರವಣಿಗೆ ನಡೆಯಲಿದೆ.
ಶಾಸಕ ಆರಗ ಜ್ಞಾನೇಂದ್ರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಲು ತಿಳಿಸಿದ್ದಾರೆ..

ಈ ಬಾರಿ ಏನೆಲ್ಲಾ ಕಾರ್ಯಕ್ರಮ ಇರುತ್ತೆ..!?

17 -10-2026 ರ ಶನಿವಾರ ಬೆಳಗ್ಗೆ 10 ಗಂಟೆಗೆ ಯುವ ದಸರಾ ಕಾರ್ಯಕ್ರಮ ನಡೆಯಲಿದೆ.. ತುಂಗಾ ತೀರದ ಮರಳು ಗುಡ್ಡೆಯ ಮೇಲೆ ಯುವಕರಿಗೆ ಹಾಗೂ ಮಹಿಳೆಯರಿಗೆ ರೋಮಾಂಚನಕಾರಿ ಆಟೋಟ ಸ್ಪರ್ಧೆಗಳು ನಡೆಯಲಿದೆ. ಪ್ರಮುಖವಾಗಿ ಹಗ್ಗ ಜಗ್ಗಾಟ, ಮೂರು ಕಾಲಿನ ಓಟ, ಗಿರಿಗಟ್ಲೆ ಸೇರಿ ಹಲವು ಆಟೋಟ ಸ್ಪರ್ಧೆಗಳು ನಡೆಯಲಿದೆ.. ಇದರ ಜೊತೆಗೆ ಆಕರ್ಷಕ ಡಿಜೆ ಮತ್ತು ರೈನ್ ಡಾನ್ಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ..
17-10-2026 ರ ಶನಿವಾರ ಬೆಳಗ್ಗೆ 11 ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ್ ಜಿಲ್ಲಾ ಕವಿಗೋಷ್ಠಿ ನಡೆಯಲಿದೆ. ಸಂಜೆ 6:30 ಕ್ಕೆ ತೀರ್ಥಹಳ್ಳಿಯಲ್ಲಿ ಪ್ರಥಮ ಬಾರಿ ತೀರ್ಥಹಳ್ಳಿಯ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಸರಾ ಕಿರುಚಿತ್ರೋತ್ಸವ ಹಾಗೂ ಸಂವಾದ ನಡೆಯಲಿದೆ..

18-10-2026 ರ ಭಾನುವಾರ ಸಂಜೆ 6:30 ಕ್ಕೆ , ಕುಶಾವತಿಯ ಪಾರ್ಕ್ ನಲ್ಲಿ ಮಹಿಳಾ ದಸರಾ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನಡೆಯಲಿದೆ..

ಕುಣಿತಾ ಭಜನೆ – ಪ್ರೇಮ ಅರಳಸುರಳಿ ಮತ್ತು ತಂಡ
ಯೋಗ ನೃತ್ಯ – ಭಾರತೀಯ ಯೋಗ ಸಮಿತಿ, ಬಾಳೆಬೈಲು
ನೃತ್ಯ ರೂಪಕ– ರಾಜರಾಜೇಶ್ವರಿ ನೃತ್ಯ ಕಲಾ ಕೇಂದ್ರ(ರಿ.)
ಭರತನಾಟ್ಯ – ಮಾರ್ಗ ನೃತ್ಯ ಶಾಲೆ, ಹುಂಚದಕಟ್ಟೆ
ನೃತ್ಯ ರೂಪಕ ಸರ್ವಜ್ಞ ತಂಡ, ಮೇಲಿನಕುರುವಳ್ಳಿ
ನವದುರ್ಗೆಯರ ದೃಶ್ಯಾವಳಿ – ಪ್ಲಾನೆಟ್ ಪಿಟ್ ನೆಸ್,
ಪ್ರಹಸನ – ಸುಮ ಮತ್ತು ತಂಡ, ತೀರ್ಥಹಳ್ಳಿ
ಫ್ಯಾಷನ್ ಷೋ – ದೇಶದ ವಿವಿಧ ಭಾಗಗಳ ಫ್ಯಾಷನ್ ಷೋ
ಯಕ್ಷ ನೃತ್ಯ – ಅರ್ನಿ ಮತ್ತು ತಂಡ,
ಹೆಣ್ಣು ಹುಲಿ ಹೆಜ್ಜೆ ನಿಹಾರಿಕಾ ಮತ್ತು ತಂಡ

19-10-2026 ರ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಯೋಜಿತ ಸಾಂಸ್ಕೃತಿಕ ಸೌರಭ ಎಂಬ ಕಾರ್ಯಕ್ರಮ ನಡೆಯಲಿದೆ.. ನಾಡಿನ ವಿವಿಧ ಪ್ರಸಿದ್ಧ ಗಾಯಕರಿಂದ ಸಂಗೀತ ಕಾರ್ಯಕ್ರಮ, ಜಾನಪದ ಕಲಾ ತಂಡಗಳಿಂದ ಜಾನಪದ ಜಾತ್ರೆ, ನೃತ್ಯ ವೈವಿಧ್ಯ, ಸೇರಿದಂತೆ ಹಲವಾರು ಆಕರ್ಷಕ ಕಾರ್ಯಕ್ರಮಗಳು ನಡೆಯಲಿದೆ..

20-10-26 ರ ಮಂಗಳವಾರ ಸಂಜೆ ಕುಶಾವತಿ ಪಾರ್ಕ್ ನಲ್ಲಿ ಸಾಂಸ್ಕೃತಿಕ ವೈಭವ ಎಂಬ ಕಾರ್ಯಕ್ರಮ ಸ್ಥಳೀಯ ಕಲಾವಿದರಿಂದ ನಡೆಯಲಿದೆ..

1.ಬ್ರಹ್ಮಲಿಂಗೇಶ್ವರ ಮಹಾತ್ಮೆ ರೂಪಕ ಸೃಷ್ಟಿ ಕಲಾ ತಂಡ(ರಿ.) ಮೇಲಿನಕುರುವಳ್ಳಿ
2. ಶ್ರೀ ದೇವಿ ಸ್ತುತಿ- ಸುಮುಖ ಸಂಗೀತ ನೃತ್ಯ ಶಾಲೆ(ರಿ.), ತೀರ್ಥಹಳ್ಳಿ
3. ಕನ್ನಡ ಚಿತ್ರಗೀತೆಗಳ ಝಲಕ್- ಸ್ಥಳೀಯ ಗಾಯಕರಿಂದ
4. ಸಾಕ್ಸೋಫೋನ್ ಜುಗಲ್ ಬಂದಿ- ಗುರುಪ್ರಸಾದ್ ದೇವಾಡಿಗ ಮತ್ತು ಶ್ವೇತಾ ದೇವಾಡಿಗ, ತೀರ್ಥಹಳ್ಳಿ
5. ನೃತ್ಯ ಕಾರ್ಯಕ್ರಮ- ಡಾನ್ಸ್ ಪ್ಯಾಲೇಸ್ , ತೀರ್ಥಹಳ್ಳಿ
6. ಶಾಸ್ತ್ರೀಯ ನೃತ್ಯ – ಸ್ಮೃತಿ ಕಲಾ ಶರಧಿ (ರಿ.) ಬೆಜ್ಜವಳ್ಳಿ
7. ಯಕ್ಷಗಾನ ಕಾರ್ಯಕ್ರಮ – ಶ್ರೀ ಗುತ್ಯಮ್ಮ ಯಕ್ಷಗಾನ ಮತ್ತು ಜಾನಪದ ಕಲಾ ಕೇಂದ್ರ(ರಿ.) ತೀರ್ಥಹಳ್ಳಿ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಕಾರ್ಯಕ್ರಮ.

21-10-2026 ರ ಬುಧವಾರ ಮಧ್ಯಾಹ್ನ 2 ಗಂಟೆಗೆ ರಾಮೇಶ್ವರ ದೇವಸ್ಥಾನದ ಆವರಣದಿಂದ ಚಾಮುಂಡೇಶ್ವರಿ ದೇವಿಯ ಅಂಬಾರಿಯೊಂದಿಗೆ ಶ್ರೀ ರಾಮೇಶ್ವರ ಪಲ್ಲಕ್ಕಿ ಉತ್ಸವ. ಆಕರ್ಷಕ ಸ್ತಬ್ಧಚಿತ್ರಗಳು, ಕರ್ನಾಟಕದ ಸುಪ್ರಸಿದ್ಧ ಜಾನಪದ ಕಲಾ ತಂಡಗಳ ಕಣ್ಮನ ಸೆಳೆಯುವ ರಾಜಬೀದಿ ಉತ್ಸವ ನಡೆಯಲಿದೆ..

ಸಂಜೆ 5:30ಕ್ಕೆ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ನಿರ್ದೇಶನದ ನೃತ್ಯನಿಕೇತನ ಕೊಡವೂರು ಉಡುಪಿ ಕಲಾವಿದರಿಂದ ನೃತ್ಯಸಿಂಚನ ಹಾಗೂ “ನವದುರ್ಗೆ ನೃತ್ಯರೂಪಕ’ ಕಾರ್ಯಕ್ರಮ ನಡೆಯಲಿದೆ..

ಮೆರವಣಿಗೆ ಕುಶಾವತಿಯ ನೆಹರು ಉದ್ಯಾನವನ ತಲುಪಿ ಧಾರ್ಮಿಕ ಕಾರ್ಯಕ್ರಮಗಳು ಸಂಜೆ 07:15ಕ್ಕೆ ಸಭಾ ಕಾರ್ಯಕ್ರಮ-ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಅಭಿನಂದನೆ ಹಾಗೂ 8 ಗಂಟೆಗೆ ಹುಲಿ ಹೆಜ್ಜೆ ನಡೆಯಲಿದೆ ಎಂದರು..
ಪತ್ರಿಕಾಗೋಷ್ಠಿಯಲ್ಲಿ ಸಂದೇಶ್ ಜವಳಿ,ಅಮರಾನಾಥ್ ಶೆಟ್ಟಿ,ಲಯನ್ ಪಾಂಡುರಂಗ, ಶಚಿಂದ್ರ ಹೆಗಡೆ, ಸುಶೀಲಾ ಶೆಟ್ಟಿ, ಅನಿಲ್ ವಿಧಾತ, ಸೇರಿದಂತೆ ಹಲವರು ಉಪಸ್ಥಿತರಿದ್ದರು..