Categories
Uncategorized

•ಕಾರ್ಕಳ: ಕಾಂಗ್ರೆಸ್ ಕಾರ್ಯಕರ್ತಗೆ ಕೊಲೆ ಬೆದರಿಕೆ; ಆರೋಪಿ ಬಂಧನ •ಪುತ್ತೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೊಟ್ಯಂತರ ರೂ.ವಂಚನೆ •ಮಂಗಳೂರು: ಅನೈತಿಕ ಸಂಬಂಧದ ಶಂಕೆ; ಪತ್ನಿ ಕೊಂದ ಪತಿ!

ಕಾರ್ಕಳ: ಕಾಂಗ್ರೆಸ್ ನ ಯುವ ನಾಯಕನಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿರುವ ಆರೋಪಿಯನ್ನು ಬಂಧಿಸಿರುವ ಘಟನೆ, ಭಾನುವಾರದಂದು ತಡರಾತ್ರಿ ನಡೆದಿದೆ. ಯೋಗೀಶ್ ಆಚಾರ್ಯ ಎನ್ನುವವರಿಗೆ ಹೆಬ್ರಿ ತಾಲ್ಲೂಕಿನ ಚಾರ ಗ್ರಾಮದ ಕೃಷ್ಣ ನಾಯ್ಕ ಎನ್ನುವಾತ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ “ಕಾಂಗ್ರೆಸ್ಸಿಗರು ಮುಸ್ಲಿಮರಿಗೆ ಹುಟ್ಟಿದವರು” ಎಂದು ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ಎರಡೂ ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸರು ಕೃಷ್ಣ ನಾಯ್ಕನನ್ನು ಬಂಧಿಸಿದರು . ಘಟನೆಗೆ ಸಂಬಂಧಿಸಿದಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧನಕ್ಕೆ ಒಳಪಡುತ್ತಿದ್ದಂತೆ ಅನಾರೋಗ್ಯದ ನೆಪವೊಡ್ಡಿ ಕೃಷ್ಣ ನಾಯ್ಕ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ

•ಪುತ್ತೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ

ಪುತ್ತೂರು: ವ್ಯಕ್ತಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಘಟನೆ ನಡೆದಿದೆ. ತಮ್ಮನ್ನು ಮುಂಬೈ ಪೊಲೀಸರು ಹಾಗೂ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಗಳು ವ್ಯಕ್ತಿಯು ಪೆಹಲ್ಲಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣವನ್ನು ವರ್ಗಾವಣೆ ಮಾಡಿರುವುದಾಗಿ ಆರೋಪಿಸಿ, ಭಯವನ್ನು ಹುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಆರೋಪಿಗಳು ವ್ಯಕ್ತಿಗೆ ವಾಟ್ಸಾಪ್ ವಿಡಿಯೋ ಕರೆಗಳನ್ನು ಮಾಡಿ, ನಿರಂತರವಾಗಿ ಬೆದರಿಕೆ ಹಾಕಿರುವುದಷ್ಟೇ ಅಲ್ಲದೆ, ಅವರ ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ ಹಣದ ದೃಢೀಕರಣದ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್ ಟಿಜಿಎಸ್ ಮೂಲಕ ಹಣವನ್ನು ವರ್ಗಾಯಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದನ್ನು ನಿಜವೆಂದು ನಂಬಿದ ವ್ಯಕ್ತಿಯು ಸೆಪ್ಟೆಂಬರ್ 2ರಿಂದ ಅಕ್ಟೋಬರ್ 6ರವರೆಗೆ ಹಂತಹಂತವಾಗಿ 1.31.50.000 ರೂಪಾಯಿಗಳನ್ನು ಆರೋಪಿಗಳು ಸೂಚಿಸಿರುವಂತಹ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಬಳಿಕ ವ್ಯಕ್ತಿಗೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದರ ಅರಿವಾಗಿ, ಸೈಬರ್ ಅಪರಾಧ ಸಹಾಯವಾಣಿಯಾದ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ವ್ಯಕ್ತಿಯು ನೀಡಿದ ದೂರಿನ ಆಧಾರದ ಮೇಲೆ ಸೈಬರ್ ವಂಚಕರ ವಿರುದ್ಧ ಅಪರಾಧ ಕ್ರಮ 42/2026ರ ಅನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(ಸಿ), 66(ಡಿ), ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ದಕ್ಷಿಣ ಕನ್ನಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

•ಮಂಗಳೂರು: ಅನೈತಿಕ ಸಂಬಂಧದ ಶಂಕೆ; ಪತ್ನಿಯನ್ನು ಕೊಂದ ಪತಿ

ಮಂಗಳೂರು: ಪತ್ನಿಯು ಅನೈತಿಕ ಸಂಬಂಧವನ್ನು ಹೊಂದಿರುವ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ಪತಿಯು ಆಕೆಯನ್ನು ಕೊಂದ ಘಟನೆ, ಭಾನುವಾರದಂದು ಕಾವೂರು ಉರುಂದಾಡಿ ಗುಡ್ಡೆ ಎನ್ನುವಲ್ಲಿ ನಡೆದಿದೆ. ಶಿವಲಿಂಗಪ್ಪ ಮಾದರ ಎನ್ನುವ ವ್ಯಕ್ತಿಯು ಮೂಲತಃ ವಿಜಯಪುರ ಜಿಲ್ಲೆಯವರಾಗಿದ್ದು, ಪತ್ನಿ ಸೋನಾಲಿ ಅವರೊಂದಿಗೆ ಕಾವೂರು ಉರುಂದಾಡಿ ಗುಡ್ಡೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ತನ್ನ ಪತ್ನಿ ಸೋನಾಲಿಗೆ ಮತ್ತೊಬ್ಬರೊಂದಿಗೆ ಅನೈತಿಕ ಸಂಬಂಧ ಇರುವುದಾಗಿ ಶಿವಲಿಂಗಪ್ಪ ಅನುಮಾನಗೊಂಡಿದ್ದು, ಈ ವಿಚಾರವಾಗಿ ಅವರ ನಡುವೆ ಹಲವಾರು ಬಾರಿ ಜಗಳ ನಡೆದಿತ್ತು ಎನ್ನುವ ಮಾಹಿತಿ ಲಭಿಸಿದೆ. ಅದೇ ರೀತಿ ಭಾನುವಾರ ಕೂಡ ಶಿವಲಿಂಗಪ್ಪ ಮತ್ತು ಸೋನಾಲಿ ನಡುವೆ ಕಲಹ ಏರ್ಪಟ್ಟಿದ್ದು, ಅದು ಮಿತಿಮೀರಿ ಶಿವಲಿಂಗಪ್ಪ ಚಾಕುವಿನಿಂದ ಸೋನಾಲಿ ಅವರ ಕುತ್ತಿಗೆಗೆ ಇರಿದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಸೋನಾಲಿ ಅವರು ತೀವ್ರ ರಕ್ತಸ್ರಾವದಿಂದ ಮೃತಪಟ್ಟರು ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶಿವಲಿಂಗಪ್ಪನನ್ನು ಬಂಧಿಸಿ, ತನಿಖೆಯನ್ನು ಕೈಗೊಂಡಿದ್ದಾರೆ.

Categories
Uncategorized

ರೈಲ್ವೆ ಸಚಿವರಿಗೆ ಆರಗ ಮನವಿ ಪತ್ರ! – ಶಿವಮೊಗ್ಗ- ತಾಳಗುಪ್ಪ ನಡುವಿನ ಅರಸಾಳು ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಪಟ್ಟು – ಶೃಂಗೇರಿ ರೈಲು ಮಾರ್ಗ ತೀರ್ಥಹಳ್ಳಿ ಮೂಲಕ ಸಾಗಲಿ…

ಶಿವಮೊಗ್ಗ/ ತೀರ್ಥಹಳ್ಳಿ: ಹೊಸನಗರ ತಾಲೂಕು ಅರಸಾಳು ರೈಲ್ವೆ ನಿಲ್ದಾಣದಲ್ಲಿ ಚಲಿಸುವ ಎಲ್ಲಾ ರೈಲುಗಳು ನಿಲುಗಡೆ ಮತ್ತು ತೀರ್ಥಹಳ್ಳಿಗೆ ರೈಲು ಮಾರ್ಗ ಒದಗಿಸುವ ಬಗ್ಗೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ರೈಲ್ವೆ ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.
ಶಿವಮೊಗ್ಗ ತಾಳಗುಪ್ಪ ನಡುವಿನ ಅರಸಾಳು ರೈಲ್ವೆ ನಿಲ್ದಾಣದ ಮೂಲಕ ಸಂಚರಿಸುವ ಎಲ್ಲಾ ರೈಲುಗಳು ಸದರಿ ರೈಲು ನಿಲ್ದಾಣದಲ್ಲಿ ನಿಲುಗಡೆಗೊಳ್ಳುತ್ತಿಲ್ಲ. ರೈಲು ನಿಲ್ದಾಣದ ಆಸು-ಪಾಸಿನ ಹಾಗೂ ಹೊಸನಗರ ತಾಲೂಕಿನ ಪೂರ್ಣಭಾಗ ತೀರ್ಥಹಳ್ಳಿ ತಾಲ್ಲೂಕಿನ ಅರ್ಧ ಭಾಗದ ಜನರಿಗೆ ಈ ರೈಲ್ವೆ ನಿಲ್ದಾಣ ಪ್ರಯಾಣಿಸಲು ಹೆಚ್ಚು ಅನುಕೂಲಕರವಾಗಿದೆ. ಆದ್ದರಿಂದ ಈ ರೈಲು ನಿಲ್ದಾಣದ ಮೂಲಕ ಸಂಚರಿಸುವ ಎಲ್ಲಾ ರೈಲುಗಳಿಗೂ ನಿಲುಗಡೆಗೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಈ ಮೂಲಕ ಕೋರಲಾಗಿದೆ.
ಶಿವಮೊಗ್ಗ ಜಿಲ್ಲೆಯ ರೈಲು ಸಂಚಾರ ಇತಿಹಾಸದಲ್ಲಿ ಅರಸಾಳು ರೈಲು ನಿಲ್ದಾಣಕ್ಕೆ ತನ್ನದೇ ಆದ ವಿಶೇಷ ಹಿನ್ನೆಲೆ ಇದ್ದು ದಿವಂಗತ ಹಾಗೂ ಕನ್ನಡದ ಸುಪ್ರಸಿದ್ಧ ನಟ ಶಂಕರ್ ನಾಗರ ಮಾಲ್ಗುಡಿ ಡೇಸ್ ಚಿತ್ರೀಕರಣ ಗೊಂಡಂತಹ ಪ್ರಸಿದ್ದ ರೈಲು ನಿಲ್ದಾಣವಾಗಿದೆ. ಇದೀಗ ಬಹಳ ದೊಡ್ಡ ಸಂಖ್ಯೆಯ ಪ್ರಯಾಣಿಕರು ಈ ರೈಲು ನಿಲ್ದಾಣದ ಮೂಲಕ ತೆರಳಿ ಆಗಮಿಸುತ್ತಿದ್ದು ಸಾವಿರಾರು ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಎಲ್ಲಾ ಕಾರಣಕ್ಕಾಗಿ ಈ ಕೂಡಲೇ ಅಧಿಕಾರಿಗಳಿಗೆ ನಿಲ್ದಾಣದ ಮೂಲಕ ತೆರಳುವ ಎಲ್ಲಾ ರೈಲುಗಳಿಗೂ ನಿಲುಗಡೆಗೆ ಸೂಚಿಸಬೇಕೆಂದು ವಿನಂತಿಸಲಾಗಿದೆ.

ಶೃಂಗೇರಿ ರೈಲು ಮಾರ್ಗ ತೀರ್ಥಹಳ್ಳಿ ಮೂಲಕ ಸಾಗಲಿ…

ಇನ್ನು ದೇಶದ ಪ್ರಸಿದ್ದ ಮತ್ತು ಶ್ರದ್ದೆಯ ಧಾರ್ಮಿಕ ಸ್ಥಳ ಶಂಕರಾಚಾರ್ಯರ ಶೃಂಗೇರಿಗೆ ಶಿವಮೊಗ್ಗದಿಂದ ರೈಲು ಸಂಚಾರ ಮಾರ್ಗವನ್ನು ಪ್ರಾರಂಭಿಸುವ ಯೋಜನೆ ಪ್ರಸ್ತಾವನೆಯಲ್ಲಿದ್ದು ಶಿವಮೊಗ್ಗ ಶೃಂಗೇರಿ ನಡುವಿನ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿ ಆರಗ ಜ್ಞಾನೇಂದ್ರ ವಿನಂತಿ ಮಾಡಿದ್ದಾರೆ. ಸದರಿ ರೈಲು ಮಾರ್ಗವನ್ನು ತೀರ್ಥಹಳ್ಳಿಯ ಮೂಲಕ ಹಾದುಹೋಗುವಂತೆ ಕ್ರಮವಹಿಸಬೇಕೆಂದು ಈ ಮೂಲಕ ಮನವಿ ಮಾಡಲಾಗಿದೆ.
ಮಲೆನಾಡಿನ ಮೂಲಸೆಲೆಯಂತಿರುವ ತೀರ್ಥಹಳ್ಳಿಯು ಕೂಡ ಪ್ರಸಿದ್ಧ ಯಾತ್ರಾಸ್ಥಳಗಳನ್ನು ಹೊಂದಿದ್ದು ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿ,ಕುಂದಾದ್ರಿ ತೀರ್ಥಹಳ್ಳಿಗೆ ಸಮೀಪವಿರುವ ಕೊಡಚಾದ್ರಿ ಪ್ರಕೃತಿ ಸೊಬಗಿನ ಆಗುಂಬೆ ಜೈನರ ಪ್ರಸಿದ್ದ ಯಾತ್ರಾ ಸ್ಥಳ ಹುಂಬುಜಾ ಸೇರಿದಂತೆ ಹಲವು ಧಾರ್ಮಿಕ ಐತಿಹಾಸಿಕ ಸ್ಥಳಗಳು ತೀರ್ಥಹಳ್ಳಿಯಲ್ಲಿದ್ದು ರೈಲು ಸಂಚಾರ ಆರಂಭವಾದಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. ಶಾಂತವೇರಿ ಗೋಪಾಲ ಗೌಡರು ಕಡಿದಾಳ್ ಮಂಜಪ್ಪರಂತಹ ಆದರ್ಶ ನಾಯಕರು ಪ್ರತಿನಿಧಿಸಿದ್ದ ತೀರ್ಥಹಳ್ಳಿ ಕ್ಷೇತ್ರದ ಮೂಲಕ ರೈಲು ಮಾರ್ಗವನ್ನು ಶೃಂಗೇರಿಗೆ ತೆಗೆದುಕೊಂಡು ಹೋಗುವುರಿಂದ ಗೋಪಾಲಗೌಡರ ಅಭಿಮಾನಿಯಾಗಿರುವ ನಿಮ್ಮಿಂದ ಅವರಿಗೆ ಗೌರವ ಸಲ್ಲಿಸುವ ಕಾರ್ಯ ಆಗಬೇಕೆಂದು ಕೋರುತ್ತೇನೆ ಎಂದು ಮನವಿ ಸಲ್ಲಿಸಿದ್ದಾರೆ.

Categories
Uncategorized

ಪೊಲೀಸರಿಗೆ ‘ಕರ್ತವ್ಯ ಆ್ಯಪ್‌’ ತಲೆನೋವು! – ನಿಗದಿತ ಸ್ಥಳದ ಲಾಗ್‌ಇನ್‌, ಲಾಗ್‌ ಔಟ್‌ ತೆಗೆಯಬೇಕು – ಹಾಜರಾತಿ ವ್ಯವಸ್ಥೆಗೆ ಆರಂಭದಲ್ಲೇ ಅಸಮಾಧಾನ

ಪೊಲೀಸ್‌ ಇಲಾಖೆಯಲ್ಲಿ ಹಾಜರಾತಿ ನಿರ್ವಹಣೆಗಾಗಿ ಪರಿಚಯಿಸಲಾಗಿರುವ ‘ಕರ್ತವ್ಯ ಆ್ಯಪ್‌’ ಆರಂಭದಿಂದಲೇ ಸಿಬ್ಬಂದಿ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸಮಯಪಾಲನೆ ಮತ್ತು ಹಾಜರಾತಿ ದಾಖಲಿಸುವ ಉದ್ದೇಶ ಹೊಂದಿರುವ ಈ ವ್ಯವಸ್ಥೆ, ಪೊಲೀಸರ ಅನಿಶ್ಚಿತ ಕರ್ತವ್ಯದ ಸ್ವರೂಪಕ್ಕೆ ಎಷ್ಟರಮಟ್ಟಿಗೆ ಹೊಂದಿಕೆಯಾಗುತ್ತದೆ ಎಂಬ ಚರ್ಚೆ ಶುರುವಾಗಿದೆ. ಬೇರೆ ಇಲಾಖೆಗಳ ಸರಕಾರಿ ಕಚೇರಿಗಳಲ್ಲಿ ನಿಗದಿತ ಸಮಯಕ್ಕೆ ಕೆಲಸ ಮುಗಿಯಬಹುದು. ಆದರೆ, ಪೊಲೀಸರ ಕರ್ತವ್ಯ ಹಾಗಲ್ಲ. ಅಪಘಾತ, ಅಪರಾಧ, ಗಲಭೆ, ಬಂದೋಬಸ್ತ್ ಸೇರಿ ತುರ್ತು ಸಂದರ್ಭಗಳು ಯಾವಾಗ ಬೇಕಾದರೂ ಎದುರಾಗಬಹುದು. ಹೀಗಾಗಿ ನಿಗದಿತ ಶಿಫ್ಟ್‌ ಮುಗಿದ ಬಳಿಕವೂ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಕರೆಯುವ ಮತ್ತು ಹೋಗುವ ಅನಿವಾರ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಹಾಜರಾತಿ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದು ಪೊಲೀಸ್‌ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.

ಏನಿದು ಕರ್ತವ್ಯ ಆ್ಯಪ್‌?

ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ ಅಡಿಯಲ್ಲಿ ಕರ್ತವ್ಯ ಆ್ಯಪ್‌ ಕಾರ್ಯನಿರ್ವಹಿಸುತ್ತದೆ. ಸರಕಾರಿ ನೌಕರರು ಮೊಬೈಲ್‌ ಮೂಲಕ ಹಾಜರಾತಿ ದಾಖಲಿಸಲು ನೆರವಾಗುತ್ತದೆ. ಆ್ಯಪ್‌ನಲ್ಲಿನ ಚೆಕ್‌ಇನ್‌, ಚೆಕ್‌ಔಟ್‌ ಮತ್ತು ಸ್ಥಳದ ಮಾಹಿತಿ ಆಧಾರಿತ ದಾಖಲಾಗುತ್ತವೆ.

ಯಾವುದೇ ಪೊಲೀಸ್‌ ಸಿಬ್ಬಂದಿ ನಿಗದಿಯಂತೆ ಕೇವಲ 8 ಗಂಟೆ ಕೆಲಸ ಮಾಡುವುದಿಲ್ಲ ಎಂಬುದು ಇಲಾಖೆಯ ಮೇಲಧಿಕಾರಿಗಳಿಗೂ ಕೂಡ ತಿಳಿದಿದೆ. ಇನ್ನು ದಿನಕ್ಕೆ 12ರಿಂದ 14 ಗಂಟೆಗಳವರೆಗೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇದೀಗ ಆ್ಯಪ್‌ ಮಾಡಿದರೆ, ನಮ್ಮ ನಿಗದಿತ ಕೆಲಸದ ಅವಧಿ ಮತ್ತು ಹೆಚ್ಚುವರಿ ಕರ್ತವ್ಯದ ಲೆಕ್ಕಾಚಾರದಲ್ಲಿ ಸ್ಪಷ್ಟತೆ ನೀಡಿ ಎಂಬುದು ಪೊಲೀಸ್‌ ಸಿಬ್ಬಂದಿ ಮಾತಾಗಿದೆ. ಗಸ್ತು, ಬಂದೋಬಸ್ತ್ ಹಾಗೂ ಕ್ಷೇತ್ರಮಟ್ಟದ ಕಾರ್ಯಾಚರಣೆ ವೇಳೆ ಚೆಕ್‌ಇನ್‌, ಚೆಕ್‌ಔಚ್‌ ಮಾಡಲು ತೊಂದರೆಯಾಗುವ ಆತಂಕವೂ ಇದೆ ಎಂದು ಪೊಲೀಸ್‌ ಸಿಬ್ಬಂದಿ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸ್‌ ಸಿಬ್ಬಂದಿ ಸೇರಿ ಅಧಿಕಾರಿಗಳಿಗೆ ನಿಗದಿತ ಸ್ಥಳದ ಲಾಗ್‌ ಇನ್‌ ಅಂದರೆ, ಕರ್ತವ್ಯಕ್ಕೆ ಹಾಜರಾಗುವ ಸ್ಥಳ ತೋರಿಸಲಾಗಿದೆ. ಇನ್ನು ಅದೇ ಸ್ಥಳಕ್ಕೆ ಮರು ಆಗಮಿಸಿ ಲಾಗ್‌ ಓಟ್‌ ಮಾಡಬೇಕು. ಇದು ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಂಕಷ್ಟ ಹೆಚ್ಚಳ ಮಾಡಿದೆ. ಬೆಳಗ್ಗೆ ಎದ್ದ ಕೂಡಲೇ ಗಸ್ತು, ಬಂದೋಬಸ್ತ್, ಅಪರಾಧ ತನಿಖೆ, ಕಾನೂನು ಸುವ್ಯವಸ್ಥೆ ಹಾಗೂ ತುರ್ತು ಘಟನೆಗಳ ನಿರ್ವಹಣೆಯಿಂದ ಹಲವು ಬಾರಿ ಕಚೇರಿಗೆ ಆಗಮಿಸುವುದು ಕಷ್ಟವಾಗುತ್ತದೆ. ಇನ್ನು ದೊಡ್ಡ ಕಾರ್ಯಕ್ರಮಗಳ ಬಂದೋಬಸ್ತ್, ವಿವಿಐಪಿ ಭದ್ರತೆ, ಅಪರಾಧಿಗಳ ಹಿಂದೆ ಓಡಾಟದ ವೇಳೆ ಹಲವು ದಿನ ಕಚೇರಿಯಿಂದ ದೂರ ಇರಬೇಕಾಗುತ್ತದೆ. ಇಂತಹ ವೇಳೆ ಆ್ಯಪ್‌ನಲ್ಲಿ ಗೈರು ಹಾಜರಿ ನಮೂದಾಗುತ್ತಿದೆ. ಸಧ್ಯ ಆ್ಯಪ್‌ ಯೂಸ್‌ ಮಾಡದಿದ್ದರು, ಸಂಬಳ ಕಡಿತ ಆಗುತ್ತಿಲ್ಲ. ಆದರೆ, ಮುಂದೊಂದು ದಿನ ಆ್ಯಪ್‌ ಲೆಕ್ಕಕ್ಕೆ ತೆಗೆದುಕೊಂಡರೆ ನಮ್ಮ ಸಂಬಳ ಕೈಸೇರುವುದು ದುಸ್ತರ ಎನ್ನುತ್ತಾರೆ ಸಿಬ್ಬಂದಿ.

Categories
Uncategorized

•ಕಡೂರು: ಬಸ್ -ಬೈಕ್ ನಡುವೆ ಅಪಘಾತ; ಇಬ್ಬರು ಯುವಕರ ಸಾವು •ಹೊಸನಗರ: ನೀರು ತುಂಬಲು ಹೋಗಿ, ಕೆರೆಗೆ ಬಿದ್ದು ವ್ಯಕ್ತಿ ಸಾವು •ಶಿವಮೊಗ್ಗ: ತೋಟಕ್ಕೆ ಬಿದ್ದ ಅನಾಮದೇಯ ಕಾರು: ದೂರು ದಾಖಲು

ಕಡೂರು: ಬಸ್ ಮತ್ತು ಬೈಕ್ ನ ನಡುವೆ ರಸ್ತೆ ಅಪಘಾತ ಸಂಭವಿಸಿರುವ ಘಟನೆ ಭಾನುವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 2೦6ರಲ್ಲಿ ಪಲ್ಸ್ ಕ್ಲಬ್ ಮುಂಭಾಗದಲ್ಲಿ ನಡೆದಿದೆ.
ಇಬ್ಬರು ಯುವಕರು ಬೈಕ್ ನಲ್ಲಿ ಬಿಡುವಾಲದಿಂದ ಬ್ಯಾಗಡೇಹಳ್ಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಬೀರೂರು ಕಡೆಯಿಂದ ಅತಿ ವೇಗವಾಗಿ ಬರುತ್ತಿದ್ದ ಸಾರಿಗೆ ಬಸ್ ಬೈಕ್ ಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಯುವಕರ ತಲೆ, ಮುಖ ಮತ್ತು ಮೈಕೈಗಳಿಗೆ ಗಂಭೀರ ರೀತಿಯ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಮೃತ ಯುವಕರನ್ನು ಬ್ಯಾಗಡೇಹಳ್ಳಿ ಗ್ರಾಮದ ಅಜಯ್ ಬಿ.ಎಸ್. ಮತ್ತು ಗಿರೀಶ್ ಎಂದು ಗುರುತಿಸಲಾಗಿದೆ.

•ಹೊಸನಗರ: ಪಂಪ್ ಸೆಟ್ ಗೆ ನೀರು ತುಂಬಲು ಹೋಗಿ ವ್ಯಕ್ತಿ ಸಾವು

ಹೊಸನಗರ:‌ ಕೃಷಿಕರೊಬ್ಬರು ಪಂಪ್ ಸೆಟ್ ಗೆ ನೀರು ತುಂಬಲು ಹೋಗಿ, ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಭಾನುವಾರದಂದು ರಿಪ್ಪನ್ ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಲಗ್ರಾಮದಲ್ಲಿ ನಡೆದಿದೆ. ಪಂಪ್ ಸೆಟ್ ನ ಫುಟ್ ಬಾಲ್ ಗೆ ನೀರು ತುಂಬಲು ತೆರಳಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಇದನ್ನು ಗಮನಿಸಿದ ರಮೇಶ್ ಅವರ ಮನೆಯವರು ತಕ್ಷಣ ಅವರನ್ನು ನೀರಿನಿಂದ ಮೇಲಕ್ಕೆ ಕರೆತಂದು, ಚಿಕಿತ್ಸೆಗಾಗಿ ಅವರನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ರಮೇಶ್ ಅವರನ್ನು ಪರೀಕ್ಷಿಸಿದ ವೈದ್ಯರು, ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಶಿವಮೊಗ್ಗ: ತೋಟಕ್ಕೆ ಬಿದ್ದ ಕಾರು:

ಶಿವಮೊಗ್ಗ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ರಸ್ತೆಯ ಪಕ್ಕದಲ್ಲಿದ್ದ ತೋಟಕ್ಕೆ ನುಗ್ಗಿರುವ ಘಟನೆ ನಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ 112ಕ್ಕೆ ತುರ್ತು ಸೇವಾ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳಿಗೆ ಏನಾದರೂ ಅಪಾಯ ಸಂಭವಿಸಿರಬಹುದೇ ಎಂದು ಪರಿಶೀಲನೆ ನಡೆಸುವಾಗ, ಕಾರಿನಲ್ಲಿ ಯಾರು ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಅಚ್ಚರಿಯನ್ನುಂಟು ಮಾಡಿದೆ. ಅಲ್ಲದೆ ಕಾರಿನಲ್ಲಿ ದೊರೆತ ದಾಖಲೆಗಳಿಂದ ಸ್ಥಳೀಯರು ಮತ್ತು ಸಿಬ್ಬಂದಿಗಳು ಕಾರಿನ ಮಾಲೀಕರಿಗೆ ಕರೆ ಮಾಡಿದಾಗ ಅವರು ಫೋನ್ ಅನ್ನು ಸ್ವೀಕರಿಸಲಿಲ್ಲ. ಕಾರಿನ ಮಾಲೀಕನ ಈ ರೀತಿಯ ವರ್ತನೆಯಿಂದ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
Uncategorized

ಹುತಾತ್ಮ ಯೋಧನ ಪತ್ನಿ ಈಗ ಕರ್ನಾಟಕದ ರಾಜ್ಯಪಾಲರು! – ಡಾ.ಸುಧಾ ಯಾದವ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕ – ಅತಿ ಶೀಘ್ರದಲ್ಲೇ ಡಾ.ಸುಧಾ ಯಾದವ್ ಪ್ರಮಾಣ ಸ್ವೀಕಾರ – ಮಾಜಿ ಸಂಸದೆಗೆ ಒಲಿದ ಕರುನಾಡ ಅತ್ಯುನ್ನತ ಹುದ್ದೆ

ಬೆಂಗಳೂರು: ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಹಲವಾರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿ ಪಕ್ಷದ ಹಿರಿಯ ನಾಯಕಿ ಹಾಗೂ ಮಾಜಿ ಸಂಸದರಾದ ಡಾ.ಸುಧಾ ಯಾದವ್ ಅವರು ನೇಮಕಗೊಂಡಿದ್ದಾರೆ. ಕರ್ನಾಟಕದ ಪ್ರಸ್ತುತ ರಾಜ್ಯಪಾಲರಾಗಿರುವ ಥಾವರ್ ಸಿಂಗ್ ಗೆಹ್ಲೋಟ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿರುವ ಕಾರಣದಿಂದಾಗಿ, ಅವರ ಸ್ಥಾನಕ್ಕೆ ಸುಧಾ ಯಾದವ್ ಅವರನ್ನು ಅವರ ಶೈಕ್ಷಣಿಕ ಅರ್ಹತೆ, ಆಡಳಿತಾತ್ಮಕ ಅನುಭವ ಮತ್ತು ಸಂಘಟನಾ ಚಾಕಚಕ್ಯತೆಯ ಆಧಾರದ ಮೇಲೆ ನೇಮಿಸಲಾಗಿದೆ. ಅತಿ ಶೀಘ್ರದಲ್ಲೇ ಡಾ.ಸುಧಾ ಯಾದವ್ ಅವರು ಬೆಂಗಳೂರಿನಲ್ಲಿ ನೂತನ ರಾಜ್ಯಪಾಲರಾಗಿ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.‌
ಡಾ.ಸುಧಾ ಯಾದವ್ ಅವರು ಮೂಲತಃ ಹರಿಯಾಣ ರಾಜ್ಯದವರಾಗಿದ್ದು, ಬಿಜೆಪಿ ಪಕ್ಷದ ಪ್ರಮುಖ ನಾಯಕಿ, ಮಾಜಿ ಸಂಸದೆಯಾಗಿ ಅಷ್ಟೇ ಅಲ್ಲದೆ, ಪ್ರಸ್ತುತ ಭಾರತೀಯ ಜನತಾ ಪಕ್ಷದ ಅತ್ಯುನ್ನತ ನಿರ್ಧಾರವನ್ನು ಕೈಗೊಳ್ಳುವಂತಹ ಸಂಸ್ಥೆಯಾಗಿರುವ ಬಿಜೆಪಿ ಸಂಸದೀಯ ಮಂಡಳಿಯ ಹಾಗೂ ಕೇಂದ್ರ ಚುನಾವಣೆ ಸಮಿತಿಯ ಸದಸ್ಯರು ಕೂಡ ಆಗಿದ್ದಾರೆ. ಮಾಹಿತಿಯ ಪ್ರಕಾರ ಸುಷ್ಮಾ ಸ್ವರಾಜ್ ಅವರ ನಂತರ ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿಗೆ ನೇಮಕಗೊಂಡ ಎರಡನೇ ಮಹಿಳೆ ಇವರಾಗಿದ್ದಾರೆ.
ಹರಿಯಾಣ ರಾಜ್ಯದ ರೇವಾರಿ ಜಿಲ್ಲೆಯ ಮೋತ್ಲಾ ಕಲಾನ್ ಗ್ರಾಮದಲ್ಲಿ ಜನಿಸಿದ ಸುಧಾ ಯಾದವ್ ಅವರು, ರೂರ್ಕಿ ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಗಳಿಸಿದವರಾಗಿದ್ದು, 1992ರಲ್ಲಿ ಅದೇ ಸಂಸ್ಥೆಯಿಂದ ರಸಾಯನಶಾಸ್ತ್ರ ವಿಷಯದಲ್ಲೇ ಪಿಎಚ್ ಡಿ ಪದವಿಯನ್ನು ಪಡೆದಿರುವಂತಹ ವಿದ್ವಾಂಸರಾಗಿದ್ದಾರೆ. ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವ ಮೊದಲು ಇವರು ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಗಡಿ ಭದ್ರತಾ ಪಡೆಯ ಡೆಪ್ಯೂಟಿ ಕಮಾಂಡೆಂಟ್ ಆಗಿದ್ದಂತಹ ಮತ್ತು 1999ರಲ್ಲಿ ನಡೆದಂತಹ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದಂತಹ ಸುಖ್ ಬೀರ್ ಸಿಂಗ್ ಯಾದವ್ ಅವರು ಡಾ.ಸುಧಾ ಯಾದವ್ ಅವರ ಪತಿಯಾಗಿದ್ದಾರೆ. ಸುಖ್ ಬೀರ್ ಸಿಂಗ್ ಯಾದವ್ ಅವರ ವೀರಮರಣದ ಬಳಿಕ ಸುಧಾ ಯಾದವ್ ಅವರನ್ನು ರಾಜಕೀಯಕ್ಕೆ ಕರೆತರುವಲ್ಲಿ ಅಂದಿನ ಹರಿಯಾಣ ಬಿಜೆಪಿ ಪಕ್ಷದ ಉಸ್ತುವಾರಿಗಳಾಗಿದ್ದ ಹಾಗೂ ಭಾರತದ ಈಗಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಮಹತ್ವದ ಪಾತ್ರವನ್ನು ವಹಿಸಿದರು ಎನ್ನಲಾಗಿದೆ. ಬಳಿಕ ಸುಧಾ ಯಾದವ್ ಅವರ ಸೇವೆಯನ್ನು, ಕರ್ತವ್ಯನಿಷ್ಠೆಯನ್ನು ಅಪಾರವಾಗಿ ಮೆಚ್ಚಿಕೊಂಡ ಪಕ್ಷವು, 1999ರಲ್ಲಿ ಅವರಿಗೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿತು. ಚುನಾವಣೆಯಲ್ಲಿ ಗೆದ್ದ ಸುಧಾ ಯಾದವ್ ಅವರು ಸಂಸತ್ ಅನ್ನು ಪ್ರವೇಶಿಸಿದರು, ಬಳಿಕ ರಾಜಕೀಯ ಕ್ಷೇತ್ರದಲ್ಲಿ ಹಂತಹಂತವಾಗಿ ಬೆಳೆದ ಅವರು ಕೇಂದ್ರ ಸರ್ಕಾರದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ, 2015ರಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ ಸೇವೆಯನ್ನು ಸಲ್ಲಿಸಿದರು. 2022ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಪಕ್ಷದ ಅತ್ಯುನ್ನತ ನೀತಿ ನಿರೂಪಣಾ ಸಮಿತಿಯಾದ ಸಂಸದೀಯ ಮಂಡಳಿಗೆ ಡಾ.ಸುಧಾ ಯಾದವ್ ಅವರನ್ನು ಸೇರ್ಪಡೆಗೊಳಿಸಿದರು. ಇದೀಗ ಡಾ. ಸುಧಾ ಯಾದವ್ ಅವರ ರಾಜಕೀಯ ಸೇವೆಯನ್ನು ಗುರುತಿಸಿ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡುವ ಮೂಲಕ, ಅವರಿಗೆ ಮತ್ತೊಂದು ಅತ್ಯುನ್ನತ ಸ್ಥಾನವನ್ನು ಕಲ್ಪಿಸಿ ಕೊಟ್ಟಂತಾಗಿದೆ.

Categories
Uncategorized

ಕರುನಾಡಿನ ನಾಡಹಬ್ಬ ದಸರಾ ಸಂಭ್ರಮ ಶುರು! – ದಸರಾ ಆಚರಣೆ ವಿಶೇಷ ಏನು…? ಇತಿಹಾಸ ಏನು? – ಮೈಸೂರು ಸೇರಿ ರಾಜ್ಯದ ಎಲ್ಲೆಡೆ ದಸರಾ ಸಂಭ್ರಮ – ಸಮಸ್ತ ಜನತೆಗೆ ದಸರಾ ಹಬ್ಬದ ಶುಭಾಶಯಗಳು

ನವರಾತ್ರಿ ಎಂದು ಮತ್ತೊಂದು ಹೆಸರಿನಿಂದ ಕರೆಯಲ್ಪಡುವ ದಸರಾ ಹಬ್ಬವು ಭಾರತದಾದ್ಯಂತ ಹಲವು ರೂಪಗಳಲ್ಲಿ ಆಚರಿಸಲಾಗುತ್ತದೆ. ನವರಾತ್ರಿ ಮತ್ತು ದಸರಾ ಎನ್ನುವುದು ಒಂದೇ ಅರ್ಥವನ್ನು ನೀಡುತ್ತದೆ. ನವರಾತ್ರಿ ಎಂದರೆ 9 ರಾತ್ರಿಗಳು ಮತ್ತು ದಸರಾ ಎಂದರೆ ದಶ+ಹರಾ ಅಂದರೆ 10 ರಾತ್ರಿಗಳು ಎನ್ನುವ ಅರ್ಥವನ್ನು ನೀಡುತ್ತದೆ.
ಈ ಬಾರಿಯ ದಸರಾ ಹಬ್ಬವು ಅಕ್ಟೋಬರ್ 11ರ ಭಾನುವಾರದಿಂದ ಪ್ರಾರಂಭಗೊಂಡು ಅಕ್ಟೋಬರ್ 20ರ ಮಂಗಳವಾರದವರೆಗೆ ಆಚರಿಸಲ್ಪಡುತ್ತಿದೆ. ಕಡೆಯ ಎರಡು ದಿನಗಳನ್ನು ಮಹಾನವಮಿ ಮತ್ತು ವಿಜಯದಶಮಿ ಎಂದು ಕರೆದು, ಒಂಭತ್ತನೇ ದಿನವಾದ ಮಹಾನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ. ಮತ್ತು ಹತ್ತನೇ ದಿನವಾದ ವಿಜಯದಶಮಿಯಂದು ವಿಜಯದ ಸಂಕೇತವಾಗಿ ವಿಶೇಷ ಪೂಜೆ ಪುನಸ್ಕಾರಗಳ ಮೂಲಕ ದೇವಿಯನ್ನು ಆರಾಧಿಸಲಾಗುತ್ತದೆ.

ಕರ್ನಾಟಕದಲ್ಲಿ ವಿಶೇಷ ಆಚರಣೆ

ನವರಾತ್ರಿ ಅಥವಾ ದಸರಾವನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಕೆಲವೆಡೆ ಆಚರಿಸಲಾಗುತ್ತದೆ.ಕರ್ನಾಟಕದ ಪಾಲಿಗೆ ಇದು ನಾಡಹಬ್ಬವೇ ಆಗಿದೆ. ಸಂಸ್ಕೃತಿ, ಸಂಪ್ರದಾಯ, ಪುರಾಣ, ಇತಿಹಾಸ ಎಲ್ಲವನ್ನು ಒಳಗೊಂಡ ಹಬ್ಬವಾಗಿ ನವರಾತ್ರಿ ಅಥವಾ ದಸರಾ ಅತ್ಯಂತ ವೈಭವದಿಂದ ಮತ್ತು ಸಡಗರದಿಂದ ಆಚರಿಸಲಾಗುತ್ತದೆ.

ದಸರಾ ಇತಿಹಾಸ ಏನು..?

ಪಾಂಡವರು ತಮ್ಮ ಅಜ್ಞಾತವಾಸದ ಸಂದರ್ಭದಲ್ಲಿ ಆಯುಧಗಳನ್ನು ಶಮಿವೃಕ್ಷದಲ್ಲಿ ಅಂದರೆ ಬನ್ನಿ ಮರದಲ್ಲಿ ಅಡಗಿಸಿಟ್ಟಿರುತ್ತಾರೆ. ಅವರು ಅಜ್ಞಾತವಾಸವನ್ನು ಮುಗಿಸಿಕೊಂಡು ಬಂದು ತಮ್ಮ ಆಯುಧಗಳನ್ನು ತೆಗೆದುಕೊಂಡ ದಿನವೇ ಮಹಾನವಮಿ ಮತ್ತು ವಿಜಯದಶಮಿ ಎಂದು ಹೇಳಲಾಗುತ್ತದೆ. ಮಹಾನವಮಿ ಮತ್ತು ವಿಜಯದಶಮಿಯಂದು ಪರಸ್ಪರ ಬನ್ನಿ ಎಲೆಗಳನ್ನು ಹಂಚಿಕೊಳ್ಳುವ ಮೂಲಕ ಬದುಕು ಬಂಗಾರವಾಗಲಿ ಎಂದು ಹಾರೈಸುವುದು ಇದೇ ಕಾರಣಕ್ಕಾಗಿ.

ಪೌರಾಣಿಕ ಹಿನ್ನೆಲೆ ಏನು..?

ಪೌರಾಣಿಕವಾಗಿ ಮತ್ತೊಂದು ಹಿನ್ನೆಲೆಯಲ್ಲಿ ನೋಡುವುದಾದರೆ ಚಾಮುಂಡೇಶ್ವರಿಯು ಎಂಟು ದಿನಗಳ ಕಾಲ ವಿವಿಧ ಅವತಾರಗಳನ್ನು ತಾಳಿ ಮಹಿಷಾಸುರನೊಂದಿಗೆ ಕಾದಾಡಿ, ಅಂತಿಮವಾಗಿ ಮಹಾನವಮಿಯಂದು ಆತನನ್ನು ವಧಿಸುತ್ತಾಳೆ. ಆಕೆಯ ಗೆಲುವನ್ನು ಸಂಭ್ರಮಿಸಿದ ದಿನವೇ ವಿಜಯದಶಮಿ ಎಂದು ಹೇಳಲಾಗುತ್ತದೆ.
ಹಾಗೆಯೇ ಐತಿಹಾಸಿಕವಾಗಿ ನೋಡುವುದಾದರೆ ಚಾಮುಂಡೇಶ್ವರಿಯು ಮೈಸೂರು ರಾಜಮನೆತನದ ಕುಲದೇವತೆಯಾಗಿದ್ದು, ತವರು ಮನೆಯಲ್ಲಿ ಹಬ್ಬವನ್ನು ಆಚರಿಸಲು, ಚಾಮುಂಡಿ ಬೆಟ್ಟದಿಂದ ಮೈಸೂರು ಅರಮನೆಗೆ ಆಗಮಿಸುತ್ತಾಳೆ.

ಮೈಸೂರಲ್ಲಿ ದಸರಾಗೆ ಚಾಲನೆ…ಲಕ್ಷ ಲಕ್ಷ ಜನ ಭೇಟಿ!

1610ರಲ್ಲಿ ಮೈಸೂರಿನ ಮೊದಲ ಒಡೆಯರ್ ಆದ ರಾಜ ಒಡೆಯರ್ ಅವರ ಆಡಳಿತದ ಅವಧಿಯಲ್ಲಿ ಶ್ರೀರಂಗಪಟ್ಟಣದ ಕಾವೇರಿ ನದಿಯ ಉತ್ತರ ದಿಕ್ಕಿನ ಗೌರಿಕಡುವೆ ಎನ್ನುವಲ್ಲಿ ಮೊದಲಿಗೆ ನವರಾತ್ರಿ ಅಥವಾ ದಸರಾ ಹಬ್ಬಕ್ಕೆ ಮೈಸೂರು ಪ್ರಾಂತ್ಯದಲ್ಲಿ ಚಾಲನೆ ನೀಡಲಾಯಿತು. ಇದು ಮೂಲತಃ ವಿಜಯನಗರ ಸಾಮ್ರಾಜ್ಯದಿಂದ ಆಚರಣೆಗೆ ಬಂದಂತಹ ಒಂದು ಪದ್ಧತಿಯಾಗಿದೆ.‌ 1799 ರಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಸಮಯದಿಂದ ಈ ಹಬ್ಬವು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾವಣೆಗೊಂಡಿತು.
ಮೈಸೂರು ದಸರಾವನ್ನು ನೋಡಲು ಕೇವಲ ರಾಜ್ಯದ ವಿವಿಧ ಭಾಗಗಳಿಂದ ಅಷ್ಟೇ ಅಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಈ ದಸರಾ ಅಥವಾ ನವರಾತ್ರಿ ಹಬ್ಬವು ಕರ್ನಾಟಕದಲ್ಲಿ ಸರ್ಕಾರ ಮತ್ತು ರಾಜಮನೆತನದ ಸಮ್ಮಿಶ್ರ ಹಬ್ಬವಾಗಿ ಆಚರಿಸಲ್ಪಡುತ್ತದೆ. ಅಂದರೆ 9 ದಿನಗಳ ಕಾಲ ಅರಮನೆಯಲ್ಲಿ ಖಾಸಗಿ ದರ್ಬಾರ್, ರಾಜಮನೆತನದ ಪದ್ಧತಿಯಂತೆ ಧಾರ್ಮಿಕ ಆಚರಣೆಗಳು ಪೂಜೆ ಪುನಸ್ಕಾರಗಳು ನಡೆದರೆ, ಅರಮನೆಯ ಹೊರಭಾಗದಲ್ಲಿ ಸರ್ಕಾರದ ಅಧಿಪತ್ಯದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ವಿಜಯದಶಮಿಯಂದು 750ಕೆಜಿ ತೂಕದ ಚಿನ್ನದ ಮಂಟಪದಲ್ಲಿ ನಾಡದೇವತೆಯಾದ ಚಾಮುಂಡೇಶ್ವರಿಯನ್ನು ಕುಳ್ಳಿರಿಸಿ, ಆನೆಯ ಮೇಲೆ ಇರಿಸಿ, ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಮೆರವಣಿಗೆ ಮಾಡಲಾಗುತ್ತದೆ. ಆಗ ನಾಡದೇವಿ ಚಾಮುಂಡೇಶ್ವರಿಗೆ ಕುಶಾಲ ತೋಪು ಮತ್ತು ಸರ್ಕಾರದ ಅಧಿಕಾರಿಗಳಿಂದ ಪುಷ್ಪಾರ್ಚನೆಯ ಮೂಲಕ ವಂದನೆಗಳನ್ನು ಸಲ್ಲಿಸಲಾಗುತ್ತದೆ.
ದಸರಾ ಅಥವಾ ನವರಾತ್ರಿ ಭಾರತದಾದ್ಯಂತ ತಮ್ಮ ಪರಂಪರೆಗೆ ಅನುಸಾರವಾಗಿ ಆಚರಿಸುವ ಸಂಗೀತ, ಸಾಹಿತ್ಯ, ಸಂಸ್ಕೃತಿ, ಕಲೆ, ಆಯುಧಗಳ ರೂಪಕವಾಗಿ, ಎರಡು ವಿಭಿನ್ನ ಭಾವಗಳ ಅಂದರೆ ಒಂದೆಡೆ ಶಾಂತಿ ಮತ್ತೊಂದೆಡೆ ಕ್ರಾಂತಿ ಎರಡನ್ನೂ ಒಳಗೊಂಡ ಅತ್ಯಂತ ವಿಶಿಷ್ಟ ಶೈಲಿಯ ಹಬ್ಬವಾಗಿ ಇದು ಪರಿಣಮಿಸಿದೆ. ರಾಜ್ಯದ ಪ್ರತಿ ಊರಲ್ಲಿ ದಸರಾ ರಂಗು ಶುರುವಾಗಿದೆ.

ಸಮಸ್ತ ಜನತೆಗೆ ದಸರಾ ಶುಭಾಶಯಗಳು

Categories
Uncategorized

ಸರ್ಕಾರಿ ಶಾಲಾ ಕಾಲೇಜು, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! – ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗೆ 7.5ರಷ್ಟು ವಿಶೇಷ ಮೀಸಲಾತಿ – ಸರ್ಕಾರಿ ಶಾಲೆ, ಕಾಲೇಜಲ್ಲಿ ಓದಿದವರಿಗೆ ಇನ್ನು ಮುಂದೆ ಚಾನ್ಸ್

ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ಶಾಲಾ-ಕಾಲೇಜು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಹಿ ಸುದ್ಧಿಯೊಂದನ್ನು ನೀಡಿದೆ. ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಮಹತ್ವದ ಆದೇಶವನ್ನು ಹೊರಡಿಸಿದ್ದು, ಇದರಲ್ಲಿ ಗ್ರಾಮೀಣ ಭಾಗದ ಹಾಗೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಶೇಕಡ 7.5ರಷ್ಟು ವಿಶೇಷ ಸಮತಲ ಮೀಸಲಾತಿಯನ್ನು ಕಲ್ಪಿಸುವಂತೆ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಹಿಂದೆ ಸರ್ಕಾರವು ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ ನಿಯಮಗಳು-2026ರ ಅನ್ವಯ ರೂಪಿಸಿ, 17 ಸೆಪ್ಟೆಂಬರ್ 2026ರ ಗುರುವಾರದಂದು ಕರಡು ಅಧಿಸೂಚನೆ ಹೊರಡಿಸಿ, ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳಿಗೆ ಆಹ್ವಾನವನ್ನು ನೀಡಲಾಗಿತ್ತು. ಇದೀಗ ಸಲ್ಲಿಕೆಯಾಗಿರುವಂತಹ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಶೀಲಿಸಿದ್ದು, 8 ಅಕ್ಟೋಬರ್ 2026ರ ಗುರುವಾರದಂದು ನಿಯಮ 9ರಲ್ಲಿ ತಿದ್ದುಪಡಿಯನ್ನು ತಂದು, ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಇದೀಗ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಅದು ಪ್ರಕಟಗೊಂಡಿದೆ. ಈ ಅಧಿಸೂಚನೆ ಪ್ರಕಾರ ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆಯ ವ್ಯಾಪ್ತಿಯಲ್ಲಿರುವಂತಹ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳ ಸೀಟಿನಲ್ಲಿ ಶೇಕಡ 7.5ರಷ್ಟು ಸೀಟುಗಳನ್ನು ಮೀಸಲಿರಿಸಬೇಕಿದೆ.
ರಾಜ್ಯ ಸರ್ಕಾರದ ಈ ನಿರ್ಣಯದಿಂದಾಗಿ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ ಉನ್ನತ ವೃತ್ತಿಪರ ಕೋರ್ಸ್ ಗಳನ್ನು ಪಡೆಯಲು ಒಳ್ಳೆಯ ಪ್ರೋತ್ಸಾಹ ಮತ್ತು ಸಮಾನ ಅವಕಾಶ ದೊರಕಿದಂತಾಗಿದೆ ಎನ್ನುವ ಅಭಿಪ್ರಾಯಗಳು ಸಾರ್ವಜನಿಕರಿಂದ ವ್ಯಕ್ತವಾಗಿದೆ.

Categories
Uncategorized

ಮೊಬೈಲ್ ಸೌಂಡ್ ಜಾಸ್ತಿ ಹಾಕಿದ್ರೆ ಬಸ್ಸಿಂದ ಇಳಿಸ್ತಾರೆ..! – ಸರ್ಕಾರಿ ಬಸ್ಸುಗಳಲ್ಲಿ ಮೊಬೈಲ್ ಲೌಡ್ ಸ್ಪೀಕರ್ ನಿಷೇಧ – ಬಿ.ಎಂ.ಟಿ.ಸಿ, ಕೆ.ಎಸ್ ಆರ್ ಟಿ ಸಿ, ಮೆಟ್ರೋದಲ್ಲಿ ನಿಯಮ

ಬೆಂಗಳೂರು: ಬಸ್ ಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.
ಬೆಂಗಳೂರು ಮಹಾನಗರ ಪಾಲಿಕೆ ಬಸ್ ಗಳಲ್ಲಿ ಪ್ರಯಾಣಿಸುವವರು ಮೊಬೈಲ್ ನಲ್ಲಿ ಲೌಡ್ ಸ್ಪೀಕರ್ ಹಾಕಿಕೊಂಡು ಮಾತನಾಡುವುದು, ಜೋರಾಗಿ ಶಬ್ಧವನ್ನಿಟ್ಟುಕೊಂಡು ಹಾಡು ಕೇಳುವುದು, ರೀಲ್ಸ್ ನೋಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮವನ್ನು ಮೀರಿ ಈ ರೀತಿ ವರ್ತಿಸಿ ಸಹ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡಿದರೆ ಅಂತಹ ವ್ಯಕ್ತಿಗಳನ್ನು ಬಸ್ ನಿಂದ ಯಾವುದೇ ಮುಲಾಜಿಲ್ಲದೆ ಕೆಳಗಿಳಿಸುವಂತೆ ಬಸ್ ನ ನಿರ್ವಾಹಕರಿಗೆ ಸಂಸ್ಥೆಯ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಬಸ್ಸಲ್ಲಿ ಕೂಡ ಈ ನಿಯಮ ಇದೆ.
ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮೊಬೈಲ್ ನಲ್ಲಿ ಲೌಡ್ ಸ್ಪೀಕರ್ ಹಾಕಿಕೊಂಡು ಮಾತನಾಡುವುದು, ಜೋರಾಗಿ ಹಾಡು ಕೇಳುವುದು, ಯೂಟ್ಯೂಬ್ ವಿಡಿಯೋ, ರೀಲ್ಸ್ ಗಳನ್ನು ಹಾಕಿಕೊಂಡು ನೋಡುವ ಮೂಲಕ ಇತರ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುವುದನ್ನು ನಿಷೇಧಿಸಲಾಗಿದ್ದು, ಇದನ್ನು ಬೆಂಗಳೂರು ಮಹಾನಗರ ಪಾಲಿಕೆ ಬಸ್ ಗಳಲ್ಲೂ ನಿಯಮ ಬದ್ಧವಾಗಿ ಅಳವಡಿಸಲು ರಾಜ್ಯ ರಸ್ತೆ ಸಾರಿಗೆ ನಿಗಮವು ನಿರ್ಣಯವನ್ನು ಕೈಗೊಂಡಿದೆ.

Categories
Uncategorized

•ಸಾಗರ: ಈಜಲು ತೆರಳಿದ್ದ ಬಾಲಕರು ನೀರು ಪಾಲು •ಶೃಂಗೇರಿ: ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಸಾವು •ಕೊಪ್ಪ: ಅತ್ಯಾಚಾರ ಪ್ರಕರಣ; ಸತೀಶ್ ಪಾತ್ರಿ ಅರೆಸ್ಟ್ •ಭದ್ರಾವತಿ: ಭೀಕರ ರಸ್ತೆ ಅಪಘಾತ; ಎಳೆದೊಯ್ದ ಕಾರು

ಸಾಗರ: ದಸರಾ ರಜೆ ಮತ್ತು ಬಿಸಿಲಿನ ಬೇಗೆಯ ಹಿನ್ನೆಲೆಯಿಂದಾಗಿ ಶಾಲಾ ಮಕ್ಕಳು ನೀರಿನಲ್ಲಿ ಆಡಲು ಹೋಗಿ ಸಾವನ್ನಪ್ಪುತ್ತಿರುವ ಘಟನೆ, ಕಳೆದ ವಾರದಿಂದ ಮಲೆನಾಡು ಭಾಗದಲ್ಲಿ ಹೆಚ್ಚಳಗೊಂಡಿದೆ.
ಶೃಂಗೇರಿಯಲ್ಲಿ ದಸರಾಗೆ ಬಂದ ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಸಾವು ಕಂಡಿರುವ ಘಟನೆ ಮಾಸುವ ಮುನ್ನ ಸಾಗರದ ಹೊಸಕೆರೆಯಲ್ಲಿ ಈಜಲು ಹೋಗಿ, ಇಬ್ಬರು ಬಾಲಕರು ನೀರುಪಾಲಾಗಿ ಸಾವನ್ನಪ್ಪಿರುವ ಘಟನೆ ಶಿರೂರು ಆಲಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕರನ್ನು ಆಲಳ್ಳಿ ಮುಳಕೇರಿ ನಿವಾಸಿಯಾದ ಲೇಖನ್ ಮತ್ತು ಅದೇ ಗ್ರಾಮದ ಮತ್ತೊಂದು ಭಾಗದ ನಿವಾಸಿಯಾದ ಪುನೀತ್ ಎಂದು ಗುರುತಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಪೊಲೀಸರ ಸಮ್ಮುಖದಲ್ಲಿ ಶೋಧನಾ ಕಾರ್ಯವನ್ನು ಕೈಗೊಂಡು, ಬಾಲಕರ ಮೃತದೇಹವನ್ನು ಮೇಲಕ್ಕೆ ತಂದು ಬಳಿಕ ಮರಣೋತ್ತರ ಪರೀಕ್ಷೆಗಾಗಿ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳು ಹೊರಗಡೆ ತೆರಳುವ ಸಂದರ್ಭದಲ್ಲಿ ಪೋಷಕರು ನಿರ್ಲಕ್ಷ್ಯಿಸದೆ ಎಚ್ಚರಿಕೆ ವಹಿಸಬೇಕು ಮತ್ತು ಮಕ್ಕಳು ಕೂಡ ಉಡಾಫೆಯಿಂದ ವರ್ತಿಸದೇ ತಮ್ಮ ಮಿತಿಯಲ್ಲೇ ನಡೆದುಕೊಂಡರೆ ಸಂಭವಿಸಬಹುದಾದ ಇಂತಹ ದುರಂತಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟಬಹುದಾಗಿದೆ

•ಶೃಂಗೇರಿ: ವಿದ್ಯಾರ್ಥಿ ನದಿಯಲ್ಲಿ ಮುಳುಗಿ ಸಾವು

ಶೃಂಗೇರಿ: ದಸರಾ ಹಬ್ಬದ ಪ್ರಯುಕ್ತ ದೇವರ ದರ್ಶನಕ್ಕೆಂದು ಆಗಮಿಸಿದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ, ತುಂಗಾ ನದಿಯ ಪಾರ್ಕಿಂಗ್ ಲಾಟ್ ಸಮೀಪದಲ್ಲಿ ನಡೆದಿದೆ. ಶಾರದಾಂಬೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಲು ಪೋಷಕರೊಂದಿಗೆ ಆಗಮಿಸಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ನದಿಯಲ್ಲಿ ಸ್ನಾನ ಮುಗಿಸಿ ದಡಕ್ಕೆ ಬಂದಿದ್ದು, ಮತ್ತೆ ನೀರಿಗೆ ಇಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಆಗ ನದಿಯಲ್ಲಿದ್ದ ಮಹಿಳೆಯೊಬ್ಬರು ಯುವಕನು ನೀರಿನಲ್ಲಿ ಮುಳುಗಿ ಹೋಗುತ್ತಿರುವುದನ್ನು ಗಮನಿಸಿ, ಸ್ಥಳೀಯರಿಂದ ನೆರವನ್ನು ಪಡೆಯಲು ಜೋರಾಗಿ ಕಿರುಚಿಕೊಂಡಿದ್ದಾರೆ. ಆದರೆ, ಸ್ಥಳೀಯರು ನದಿಯ ಬಳಿ ತಲುಪುವುದರ ಒಳಗೆ ಯುವಕ ನೀರಿನಲ್ಲಿ ಮುಳುಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶೃಂಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧನಾ ಕಾರ್ಯವನ್ನು ಕೈಗೊಂಡರು. ಜೊತೆಗೆ ಮೃತದೇಹವನ್ನು ಪತ್ತೆ ಹಚ್ಚಲು ಈಶ್ವರ್ ಮಲ್ಪೆ ಅವರ ನೇತೃತ್ವದ ತಂಡವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತು. ಸತತ ಕಾರ್ಯಾಚರಣೆಯ ಬಳಿಕ ಯುವಕನ ಮೃತದೇಹವನ್ನು ಪತ್ತೆ ಹಚ್ಚಿ, ದಡಕ್ಕೆ ತಂದು ಬಳಿಕ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಯುವಕನನ್ನು ಕೋಲಾರ ಜಿಲ್ಲೆಯ ಮಾಲೂರು ಮೂಲದ ರಾಘವೇಂದ್ರ ಪೂಜಾರಿ ಎಂದು ಗುರುತಿಸಲಾಗಿದೆ. ಇದೇ ಸ್ಥಳದಲ್ಲಿ ಈ ಹಿಂದೆ ಕೂಡ ಕೆಲವರು ಮುಳುಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಈ ದುರಂತಗಳು ಮತ್ತೆ ಸಂಭವಿಸದಂತೆ ತಡೆಗಟ್ಟಲು, ಅಪಾಯಕಾರಿ ಸ್ಥಳದಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸುವುದರ ಜೊತೆಗೆ, ಅಗತ್ಯವಿದ್ದಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಸಾರ್ವಜನಿಕರು ತಾಲ್ಲೂಕು ಆಡಳಿತಕ್ಕೆ ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಕೊಪ್ಪ: ಅತ್ಯಾಚಾರ ಪ್ರಕರಣ; ಸತೀಶ್ ಪಾತ್ರಿ ಅರೆಸ್ಟ್

ಕೊಪ್ಪ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ಸತೀಶ್ ಪಾತ್ರಿಯನ್ನು, ಪೊಲೀಸರು ಬೆಂಗಳೂರಿನ ಜೆ.ಪಿ.ನಗರದಲ್ಲಿ ಪತ್ತೆ ಹಚ್ಚಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸತೀಶ್ ಪಾತ್ರಿ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆಯನ್ನು ಕೈಗೊಂಡಾಗ, ಆತ ಬೆಂಗಳೂರಿನಲ್ಲಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಆತ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ ಎನ್ನಲಾಗಿದೆ. ಇದೀಗ ಬೆಂಗಳೂರಿನ ಜೆ.ಪಿ. ನಗರದಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಪೊಲೀಸ್ ಠಾಣೆಗೆ ಸತೀಶ್ ಪಾತ್ರಿಯನ್ನು ಕರೆತಂದಿರುವ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಇದೀಗ ಲಭಿಸಿದೆ.

•ಭದ್ರಾವತಿ: ಭೀಕರ ರಸ್ತೆ ಅಪಘಾತ; ಎಳೆದೊಯ್ದ ಕಾರು

ಭದ್ರಾವತಿ: ಬೈಕ್ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಘಟನೆ, ಭಾನುವಾರದಂದು ಉಂಬ್ಳೆಬೈಲು ರಸ್ತೆಯ ಮೂಲೆಕಟ್ಟೆ ಬಳಿ ನಡೆದಿದೆ. ಹೋಮ್ ಗಾರ್ಡ್ ಸಿಬ್ಬಂದಿಗಳಿಬ್ಬರು ಬೈಕ್ ನಲ್ಲಿ ರಾತ್ರಿ ಪಾಳಿಯ ಕರ್ತವ್ಯಕ್ಕೆ ಬೊಮ್ಮನಕಟ್ಟೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಎದುರಿನಿಂದ ವೇಗವಾಗಿ ಬಂದ ಕಾರೊಂದು ಬೈಕ್ ಗೆ ಬಲವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮವಾಗಿ ಬೈಕ್ ಸಮೇತ ಹೋಮ್ ಗಾರ್ಡ್ ಸ್ವಲ್ಪ ದೂರದ ತನಕ ಕಾರಿನಿಂದ ಎಳೆದೊಯ್ಯಲ್ಪಟ್ಟಿದ್ದಾರೆ. ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದರಿಂದ ಹೋಮ್ ಗಾರ್ಡ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅಪಘಾತ ಸಂಭವಿಸುತ್ತಿದ್ದಂತೆ ಕಾರಿನ ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಮೃತ ಸಿಬ್ಬಂದಿಯನ್ನು ಸಂಗಯ್ಯ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಹೋಮ್ ಗಾರ್ಡ್ ಸಿಬ್ಬಂದಿಯಾದ ಮುರಳಿ ಅವರು ಸಹ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.

.

Categories
Uncategorized

ರೋಗಿ ಶವ ಒಪ್ಪಿಸದೇ ಶುಲ್ಕಕ್ಕೆ ಸತಾಯಿಸಿದ್ರೆ ಕೇಸ್! – ಆಸ್ಪತ್ರೆಗಳ ಅಮಾನವೀಯತೆಗೆ ಸರ್ಕಾರದ ಖಡಕ್ ಕ್ರಮ – ಆಸ್ಪತ್ರೆ ಶುಲ್ಕ ವಸೂಲಿಗಾಗಿ ಶವ ಒತ್ತೆಯಾಗಿಟ್ಟುಕೊಳ್ಳುವಂತಿಲ್ಲ! – ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ ಲೂಟಿ: ಜನ ಕಂಗಾಲು

ಬೆಂಗಳೂರು: ಆಸ್ಪತ್ರೆಗಳಲ್ಲಿ ಸಾವನ್ನಪ್ಪುವ ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಾನವೀಯ ದೃಷ್ಟಿಯಿಂದ ಹೊಸ ನಿಯಮವನ್ನು ಜಾರಿಗೆ ತಂದಿದೆ.
ನಿಯಮದ ಪ್ರಕಾರ ಅಪಘಾತ ಅಥವಾ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ವ್ಯಕ್ತಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದೇ ಆದಲ್ಲಿ ವ್ಯಕ್ತಿಯ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸದೇ ಆಸ್ಪತ್ರೆಯ ಶುಲ್ಕ ವಸೂಲಿಗಾಗಿ ಶವವನ್ನು ಒತ್ತೆಯಾಗಿಟ್ಟುಕೊಳ್ಳುವುದನ್ನು ಕಾನೂನುಬಾಹಿರಗೊಳಿಸಲಾಗಿದೆ. ಹೀಗಾಗಿ ವ್ಯಕ್ತಿಯು ಮೃತಪಟ್ಟ ತಕ್ಷಣ ಅವರ ದೇಹವನ್ನು ಸಂಬಂಧಿಕರಿಗೆ ಒಪ್ಪಿಸುವುದು ಕಡ್ಡಾಯಗೊಳ್ಳಲಿದೆ. ಯಾವುದೇ ವ್ಯಕ್ತಿಯಾಗಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ ಮೊದಲಿಗೆ ಅವರ ಮೃತದೇಹವನ್ನು ಕೂಡಲೇ ವಾರಸುದಾರರಿಗೆ ಹಸ್ತಾಂತರಿಸಿ, ಬಳಿಕ ಚಿಕಿತ್ಸೆಯ ವೆಚ್ಚವನ್ನು ಪಾವತಿಸಿಕೊಳ್ಳಬೇಕೆಂದು ಈ ನಿಯಮದಲ್ಲಿ ಅಳವಡಿಸಲಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.

ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ ಲೂಟಿ: ಜನ ಕಂಗಾಲು

ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ ಲೂಟಿಗೆ ಜನ ಕಂಗಾಲು ಆಗಿದ್ದಾರೆ. ಸರ್ಕಾರ ಯಾವುದೇ ಲಂಚ ತೆಗೆದುಕೊಳ್ಳದೆ ಈ ಸಮಸ್ಯೆ ನಿವಾರಣೆ ಮಾಡಿ ಜನರ ಆರೋಗ್ಯದ ಜತೆ ಚೆಲ್ಲಾಟ ಆಡುವ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳಬೇಕಿದೆ. ಎಷ್ಟೋ ಪ್ರಕರಣದಲ್ಲಿ ರೋಗಿಯ ಬಗ್ಗೆ ನಿರ್ಲಕ್ಷ, ಮತ್ತು ಸಾವಿಗೆ ಕಾರಣ ಆಗಿರುವ ಉದಾಹರಣೆಗಳಿವೆ. ಆಸ್ಪತ್ರೆಗಳ ವಿರುದ್ಧ ಪ್ರಕರಣ ದಾಖಲಿಸುವ ಕೆಲಸ ಆಗಬೇಕಿದೆ.