Categories
Uncategorized ಉಡುಪಿ ಕರಾವಳಿ ಕಾರ್ಕಳ ಕಾರ್ಯಕ್ರಮಗಳು ದಕ್ಷಿಣ ಕನ್ನಡ ಪುತ್ತೂರು ಮಂಗಳೂರು ಶಿಕ್ಷಣ

ಕ್ರೈಸ್ಟ್ ಕಿಂಗ್: ರಾಷ್ಟ್ರೀಯ ಹಿಂದಿ ದಿನಾಚರಣೆ..!!

ಕ್ರೈಸ್ಟ್ ಕಿಂಗ್: ರಾಷ್ಟ್ರೀಯ ಹಿಂದಿ ದಿನಾಚರಣೆ..!!
– ಎಲ್ಲಾ ಭಾಷೆಗಳಿಗೆ ತಮ್ಮದೇ ಆದ ಮಹತ್ವ : ಡಾ. ದೇವಕಿ ಪ್ರಸನ್ನ ಜಿ ಎಸ್
– ಹಿಂದಿ ಭಾಷೆಯಲ್ಲಿ ಪಾಂಡಿತ್ಯವಿದ್ದರೆ ಭಾರತ ದರ್ಶನಕ್ಕೆ ಯೋಗ್ಯ

NAMMUR EXPRESS NEWS
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಸಹಾಯಕ ಹಿಂದಿ ಪ್ರಾಧ್ಯಾಪಕಿ ಡಾ. ದೇವಕಿ ಪ್ರಸನ್ನ ಜಿ ಎಸ್ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಎಲ್ಲಾ ಭಾಷೆಗಳಿಗೆ ತಮ್ಮದೇ ಆದ ಮಹತ್ವವಿದೆ. ಭಾಷೆಗಳಲ್ಲಿ ಪರಿಪೂರ್ಣತೆಯಿದ್ದರೆ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಿಂದಿ ಭಾಷೆಯಲ್ಲಿ ಪಾಂಡಿತ್ಯವಿದ್ದರೆ ಭಾರತ ದರ್ಶನ ಮಾಡಿಕೊಳ್ಳಬಹುದು” ಎಂದು ಹೇಳಿ ಹಿಂದಿ ಭಾಷೆಯ ವ್ಯಾಕರಣ ವಿಶೇಷತೆಯ ಬಗ್ಗೆ ತಿಳಿ ಹೇಳಿದರು. ಕಾರ್ಯಕ್ರಮದ ಅಧ್ಯ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್ ಅವರು ಮಾತನಾಡಿ “ಯಾವುದೇ ಭಾಷೆಯನ್ನು ಕಲಿತಾಗ ಜೀವನದಲ್ಲಿ ಅನಿವಾರ್ಯ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರುತ್ತದೆ” ಎಂದು ಹೇಳಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ, ಹಿಂದಿ ಉಪನ್ಯಾಸಕಿ ಶ್ರೀಮತಿ ಶಾಹಿನಾ ಬಾನು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿಂದಿ ಉಪನ್ಯಾಸಕಿ ಶ್ರೀಮತಿ ಶಮೀನಾ ಅಮೀರ್ ಪ್ರಸ್ತಾವನೆಗೈದರೆ ವಿದ್ಯಾರ್ಥಿ ಬ್ರೋವಿನ್ ಅಗೇರಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಸುದೀಕ್ಷಾ ಸ್ವಾಗತಿಸಿ ಸ್ಲೀಟಾ ಪ್ರೀಮಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ ಶನ್ವಿತಾ ವಂದಿಸಿದರು.

Categories
cibercrime ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಪುತ್ತೂರು ಮಂಗಳೂರು ಮಾಹಿತಿ ಸುದ್ದಿ ಮುಲ್ಕಿ ರಾಜಕೀಯ ವ್ಯವಹಾರ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಕುಂದಾಪುರ: ಲೈಂಗಿಕ ಕಿರುಕುಳ: ಆರೋಪಿಗೆ ಜಾಮೀನು
* ಪುತ್ತೂರು: ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಪ್ರಾಣಾಪಾಯದಿಂದ ಪಾರು!
* ಮಂಗಳೂರು: ಮಾದಕ ವಸ್ತು ಮಾರಾಟ ಪ್ರಕರಣವನ್ನು ಭೇದಿಸಿದ ಪೊಲೀಸರು
* ಬಂಟ್ವಾಳ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
* ಬೆಳ್ತಂಗಡಿ: ನಿವೇಶನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಕುಂದಾಪುರ: ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನವೀನ್ ಚಂದ್ರ ಶೆಟ್ಟಿ ವಿರುದ್ಧ, ಮನೆಗೆ ಬಂದ ಮಹಿಳೆಯೊಬ್ಬಳ ಜೊತೆಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿತ್ತು. ಈತನ ಬಂಧನಕ್ಕಾಗಿ ಪ್ರತಿಭಟನೆಗಳು ನಡೆದಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನವೀನ್ ಚಂದ್ರ ರವಿಕಿರಣ್ ಎನ್ನುವ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ, ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.

* ಪುತ್ತೂರು: ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಪ್ರಾಣಾಪಾಯದಿಂದ ಪಾರು

ಪುತ್ತೂರು: ಶೀನಪ್ಪಾ ಗೌಡ ಎನ್ನುವ ವ್ಯಕ್ತಿಯು ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡು, ಪ್ರಾಣಾಪಾಯದಿಂದ ಪಾರಾದ ವಿಸ್ಮಯಕಾರಿ ಘಟನೆ ಪುತ್ತೂರಿನಲ್ಲಿ ನಡೆದಿದೆ. ಭಾನುವಾರದಂದು ಶೀನಪ್ಪ ಗೌಡರು ತಮ್ಮ ತೋಟಕ್ಕೆ ತೆರಳಿ, ಬಾಳೆಗೊನೆಯನ್ನು ತೆಗೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ, ನಾಗರಹಾವೊಂದು ಅವರ ಎಡಗಾಲಿನ ಹಿಂಭಾಗಕ್ಕೆ ಕಚ್ಚಿದ ಪರಿಣಾಮವಾಗಿ, ಶೀನಪ್ಪ ಗೌಡರು ಅಸ್ವಸ್ಥರಾಗಿದ್ದರು. ತಕ್ಷಣ ಮನೆಯವರು ಅವರನ್ನು ಪ್ರಥಮ ಚಿಕಿತ್ಸೆಗಾಗಿ ನೆಲ್ಯಾಡಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ಸಂದರ್ಭದಲ್ಲಿ ಶೀನಪ್ಪ ಗೌಡರು ವಿಷದ ಪ್ರಮಾಣದ ಏರಿಕೆಯಿಂದಾಗಿ ಪ್ರಜ್ಞಾ ಶೂನ್ಯರಾಗಿದ್ದರು. ಆದರ್ಶ ಆಸ್ಪತ್ರೆಯ ವೈದ್ಯರು ಅವರಿಗೆ ತುರ್ತು ಚಿಕಿತ್ಸೆಯನ್ನು ನೀಡಿ, ಸುಮಾರು 90 ಎಎಸ್‌ವಿ ಇಂಜೆಕ್ಷನ್ ನೀಡಿದ ಬಳಿಕ, ಶೀನಪ್ಪ ಗೌಡರಿಗೆ ಪ್ರಜ್ಞೆ ಬಂದಿದ್ದು, ಆ ಮೂಲಕ ಚೇತರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.‌

* ಮಂಗಳೂರು: ಮಾದಕ ವಸ್ತು ಮಾರಾಟ ಪ್ರಕರಣವನ್ನು ಭೇದಿಸಿದ ಪೊಲೀಸರು

ಮಂಗಳೂರು: ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸುವಲ್ಲಿ, ಮಂಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಂಬೈನಿಂದ ಮಾದಕ ವಸ್ತುಗಳನ್ನು ಆಮದು ಮಾಡಿಕೊಂಡು, ಮಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಸುಳಿವು ದೊರೆತ ಹಿನ್ನೆಲೆಯಲ್ಲಿ, ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಆರು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿದಾಗ, ಈಗಾಗಲೇ ತಮ್ಮ ಬಳಿ ಇದ್ದ ಕೊಕೇನ್ ಎಂಬ ಮಾದಕ ವಸ್ತುವನ್ನು ಮೂರು ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದೆ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಸಿಸಿಬಿ ಘಟಕದ ಉಪನಿರೀಕ್ಷಕರು ಭಾನುವಾರದಂದು ಮಂಗಳೂರಿನ ಸೆಂಟ್ರಲ್ ವೇರ್ ಹೌಸ್ ಬಳಿ ಸ್ಕೂಟರ್ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ, ಜಗನ್ನಾಥ್, ರಾಜೇಶ್ ಬಂಗೇರ ಮತ್ತು ವರುಣ್ ಗಾಣಿಗ ಅವರ ಮೇಲೆ ದಾಳಿ ನಡೆಸಿದ್ದಾರೆ. ಮೂವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಅವರನ್ನು ಕೂಡ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರು ಮಂದಿ ಆರೋಪಿಗಳಿಂದ ಸುಮಾರು 22.30 ಲಕ್ಷ ರೂಪಾಯಿ ಮೌಲ್ಯದ 111.83ಗ್ರಾಂ ಎಂಡಿಎಂಎ ಮತ್ತು 1.90 ಲಕ್ಷ ಮೌಲ್ಯದ 21.03 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ 8(ಸಿ), 21 (ಸಿ), 22 (ಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

* ಬಂಟ್ವಾಳ: ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ: ಕಳೆದ 10 ವರ್ಷಗಳ ಹಿಂದೆ ಅಕ್ಟೋಬರ್ ಏಳರಂದು ವಿಟ್ಲ ಪೇಟೆಯಲ್ಲಿ, ಜಗದೀಶ್ ಕಾಮತ್ ಎನ್ನುವ ವ್ಯಕ್ತಿಯ ಮೇಲೆ ಮೆಣಸಿನ ಪುಡಿ ಎರಚಿ, ದರೋಡೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯಾದ ಅಶ್ರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೆ 2016ರ ಜನವರಿ 23ರಂದು ಕೊಳ್ನಾಡು ಗ್ರಾಮದ ಮದ್ಯದಂಗಡಿಯ ಬಾಗಿಲು ಮುರಿದು, ಕಳ್ಳತನ ಮಾಡಿದ ಮತ್ತೊಂದು ಪ್ರಕರಣ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ 82 ಮತ್ತು 83 ವಾರೆಂಟ್ ಅನ್ನು ಜಾರಿಗೊಳಿಸಲಾಗಿತ್ತು. ಆದರೂ ಅಶ್ರಫ್ ಪೊಲೀಸರ ಕೈಗೆ ಸಿಗದೇ ಕಳೆದ ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಆತನನ್ನು ಮಂಜೇಶ್ವರದ ಕೂಳೂರಿನಲ್ಲಿ ಭಾನುವಾರದಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ‌ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅಶ್ರಫ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ.

* ಬೆಳ್ತಂಗಡಿ: ನಿವೇಶನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ.

ಬೆಳ್ತಂಗಡಿ: ಪ್ರವೀಣ್ ಭಂಡಾರಿ ಮತ್ತು ಶಾಂತ ಎಂಬ ಇಬ್ಬರು ವ್ಯಕ್ತಿಗಳು, ನಿವೇಶನ ಪರವಾನಿಗೆ ಮಾಡಿಸಿ ಕೊಡುವುದಾಗಿ ನಂಬಿಸಿ, 45 ಲಕ್ಷ ರೂಪಾಯಿ ಲಪಟಾಯಿಸಿದ ಘಟನೆ ನಡೆದಿದೆ. ಪ್ರವೀಣ್ ಭಂಡಾರಿ ಶಾಂತ ಅವರಿಂದ ಒಟ್ಟು 4೦ ಸೈಂಟ್ಸ್ ಜಾಗವನ್ನು ಖರೀದಿಸಿ, ಅದನ್ನು ವಿಶ್ವನಾಥ ರೈ ಎನ್ನುವವರಿಗೆ ಮಾರಾಟ ಮಾಡುವುದಾಗಿ ತಿಳಿಸಿ, 45 ಲಕ್ಷ ರೂಪಾಯಿ ಪಡೆದುಕೊಂಡಿದ್ದು, ಮೂರು ತಿಂಗಳ ಒಳಗಾಗಿ ದಾಖಲೆಗಳನ್ನು ಸರಿಪಡಿಸಿ ಬರೆದುಕೊಡುವುದಾಗಿ ಕಳೆದ ವರ್ಷ ಕರಾರುಪತ್ರ ಮಾಡಿಕೊಂಡಿದ್ದರು. ಅತ್ತ ನಿವೇಶನವನ್ನು ಮಾರಾಟ ಮಾಡದೆ, ಈ ಕಡೆ ಹಣವನ್ನೂ ಹಿಂತಿರುಗಿಸದೆ ವಿಶ್ವನಾಥ ರೈ ಅವರನ್ನು ವಂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವನಾಥ ರೈ ಅವರು ಪ್ರವೀಣ್ ಭಂಡಾರಿ ಮತ್ತು ಶಾಂತ ವಿರುದ್ಧ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.‌ ದೂರಿನ ಆಧಾರದ ಮೇಲೆ ಶನಿವಾರದಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Categories
ಅಪರಾಧ ಉಡುಪಿ ಕರಾವಳಿ ಕಾರ್ಕಳ ದಕ್ಷಿಣ ಕನ್ನಡ ಪುತ್ತೂರು ಮಂಗಳೂರು ಮಾಹಿತಿ ಸುದ್ದಿ ಮುಲ್ಕಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಬಂಟ್ವಾಳ: ಈಜಲು ಹೋದ ನಾಲ್ವರು ಮಕ್ಕಳು ನೀರು ಪಾಲು; ಓರ್ವನ ಸಾವು

* ಮಂಗಳೂರು: ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಸೈಬರ್ ಅಪರಾಧ

* ಕಾಪು: ಪಡುಬಿದ್ರಿ ವ್ಯಕ್ತಿ ನಾಪತ್ತೆ

* ಪುತ್ತೂರು: ಅಕ್ರಮ ಕೆಂಪುಕಲ್ಲು ಸಾಗಾಟ ಆರೋಪಿಗಳಿಗೆ ಜಾಮೀನು

* ಸುಳ್ಯ: ಚೆಕ್ ಅಮಾನ್ಯ; ಆರೋಪಿ ಬಂಧನ

* ಬೆಳ್ತಂಗಡಿ: ತಿಮರೋಡಿಗೆ ಎರಡನೇ ನೋಟಿಸ್ ಜಾರಿ

* ಉಡುಪಿ: ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ

* ಬ್ರಹ್ಮಾವರ: ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೂಳೆಗಳು ಪತ್ತೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

•ಬಂಟ್ವಾಳ: ಈಜಲು ಹೋದ ನಾಲ್ವರು ಮಕ್ಕಳು ನೀರು ಪಾಲು; ಓರ್ವನ ಸಾವು

ಬಂಟ್ವಾಳ: ಕಳೆದ ಹತ್ತು ವರ್ಷಗಳ ಹಿಂದೆ ಕಪ್ಪು ಕಲ್ಲು ತೆಗೆಯಲೆಂದು ರಚಿಸಿದ ಹೊಂಡದಲ್ಲಿ, ನಾಲ್ವರು ಬಾಲಕರು ಈಜಾಡಲು ತೆರಳಿ ನೀರಿನ ಪಾಲಾಗಿರುವ ಘಟನೆ, ಭಾನುವಾರದಂದು ಕುಳ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ನಡೆದಿದೆ. ಇದರಲ್ಲಿ ಪುತ್ತೂರಿನ ಕಬಕ ಗ್ರಾಮದ ನಿವಾಸಿ ಅಜ್ಮಾನ್ ಬಿನ್ ಹಸೈನಾರ್ ಎನ್ನುವ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಸಂದರ್ಭದಲ್ಲಿ ವಿಟ್ಲದ ಕಂದಾಯ ನಿರೀಕ್ಷಕರಾದ ರವಿ ಎಂ ಎನ್ ಮತ್ತು ಗ್ರಾಮಾಡಳಿತ ಅಧಿಕಾರಿಗಳಾದ ಅನಿಲ್ ಪೂಜಾರಿ ಅವರು ಸ್ಥಳಕ್ಕೆ ಭೇಟಿ ನೀಡಿದರು. ಬಾಲಕನ ಮೃತದೇಹವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮಂಗಳೂರು: ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಸೈಬರ್ ಅಪರಾಧ.

ಮಂಗಳೂರು: ಹೆಚ್ಚಿನ ಹಣದ ಆಮಿಷಕ್ಕೆ ಒಳಗಾಗಿ, ತಮ್ಮ ಇದ್ದ ಹಣವನ್ನೂ ಕಳೆದುಕೊಳ್ಳುವ ಮೂಲಕ, ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಎಷ್ಟೇ ಜಾಗೃತಿ ವಹಿಸಿದರು ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಜನವರಿಯಿಂದ ಜುಲೈವರೆಗೆ ಮಂಗಳೂರು ವ್ಯಾಪ್ತಿಯಲ್ಲಿ 15.51 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ 78.64 ಲಕ್ಷದಷ್ಟು ಹಣವು ಅಪರಿಚಿತರ ಪಾಲಾಗಿದೆ ಎಂಬ ವರದಿ ಹೊರಬಂದಿದೆ. ಈ ಮೂಲಕ ಮಂಗಳೂರಿನಲ್ಲಿ 77 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 60 ಸೈಬರ್ ಪ್ರಕರಣಗಳು ದಾಖಲಾಗಿವೆ. ಇಡೀ ರಾಜ್ಯದ್ಯಂತ ಸುಮಾರು 8,620 ಸೈಬರ್ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಇದರಲ್ಲಿ 861 ಕೋಟಿಯಷ್ಟು ಹಣ ವಂಚನೆಗೆ ಒಳಗಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಇಡೀ ಕರ್ನಾಟಕದಲ್ಲಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಸೈಬರ್ ಅಪರಾಧಗಳು ನಡೆದಿವೆ ಎನ್ನುವ ಮಾಹಿತಿ ಲಭಿಸಿದೆ. ಮುಖ್ಯವಾಗಿ ಆನ್ ಲೈನ್ ಹೂಡಿಕೆ, ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ ಅಪರಿಚಿತರು ಜನರನ್ನು ವಂಚಿಸುತ್ತಿದ್ದಾರೆ. ಅದರಲ್ಲೂ ವಾಟ್ಸಾಪ್ ಮತ್ತು ಟೆಲಿಗ್ರಾಂ ಲಿಂಕ್ ಅನ್ನು ಕಳುಹಿಸುವ ಮೂಲಕ ಹಣವನ್ನು ದೋಚುವ ಪ್ರಕರಣಗಳು ಹೆಚ್ಚಾಗಿವೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಅರುಣ್ ಕೆ ಅವರು “ಪೊಲೀಸ್ ಇಲಾಖೆಯ ವತಿಯಿಂದ ಸೈಬರ್ ವಂಚನೆಗೆ ಸಂಬಂಧಿಸಿದಂತೆ ವಿವಿಧ ರೀತಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಆದರೂ, ಜನರು ಅಧಿಕ ಹಣವನ್ನು ಗಳಿಸುವ ದುರಾಸೆಯಿಂದ ತಮ್ಮಲ್ಲಿರುವ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸೈಬರ್ ವಂಚನೆಯ ಸ್ವರೂಪಗಳು ಕೂಡ ಬದಲಾಗಿವೆ. ಮೊದಲು ವಂಚಕರು ಸಾರ್ವಜನಿಕರ ಖಾತೆಗೆ ಕನ್ನ ಹಾಕುತ್ತಿದ್ದರು, ಇದೀಗ ಜನರೇ ಅಪರಿಚಿತರ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತಿರುವುದು ಕಂಡುಬಂದಿದೆ. ಇನ್ನಾದರೂ ಜನರು ತಮ್ಮ ದುರಾಸೆಯನ್ನು ಬಿಟ್ಟು ಜಾಗೃತರಾಗಿರಬೇಕು. ಆಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು” ಎಂದು ತಿಳಿಸಿದ್ದಾರೆ.

* ಕಾಪು: ಪಡುಬಿದ್ರಿ ವ್ಯಕ್ತಿ ನಾಪತ್ತೆ

ಕಾಪು: ಬಡಾ ಗ್ರಾಮದ ನಿವಾಸಿಯಾದ ಉಮರಬ್ಬ ಎಂಬ ವ್ಯಕ್ತಿಯು ನಾಪತ್ತೆಯಾಗಿರುವ ಸಂಗತಿ ಭಾನುವಾರ ನಡೆದಿದೆ. ರಿಪ್ಪನ್ ಪೇಟೆಯಲ್ಲಿ ನಡೆಯುತ್ತಿದ್ದ ಈದ್ ಮಿಲಾದ್ ಹಬ್ಬದ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ತಿಳಿಸಿ, ಉಚ್ಚಿಲ ಬಸ್ ನಿಲ್ದಾಣಕ್ಕೆ ತೆರಳಿದ್ದು, ಬಳಿಕ ರಿಪ್ಪನ್ ಪೇಟೆಗೂ ಹೋಗದೆ ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಮರಬ್ಬ ಅವರ ಕುರಿತು ಮಾಹಿತಿ ತಿಳಿದುಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.

* ಪುತ್ತೂರು: ಅಕ್ರಮ ಕೆಂಪುಕಲ್ಲು ಸಾಗಾಟ ಆರೋಪಿಗಳಿಗೆ ಜಾಮೀನು.

ಪುತ್ತೂರು: ಮಾಡ್ನೂರು ಗ್ರಾಮದ ಸಾರಕರೆ ಸೇತುವೆಯ ಬಳಿ, ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣವನ್ನು ಎದುರಿಸುತ್ತಿರುವ ಇಬ್ಬರು ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಸೆಪ್ಟೆಂಬರ್ ಆರರಂದು ಅನುಮಾನ ಬಂದ ಕಾರಣ, ಪೊಲೀಸರು ಲಾರಿಯನ್ನು ಪರಿಶೀಲಿಸಿದಾಗ, ದಾಖಲೆಗಳು ನಕಲಿಯಾಗಿದ್ದರ ಕುರಿತು ಲಾರಿ ಮತ್ತು ಅದರಲ್ಲಿನ ಸ್ವತ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಸವಣೂರು ಗ್ರಾಮದ ಪರಮೇಶಪ್ಪ ಲಮಾಣಿ ಮತ್ತು ಸುಳ್ಯದ ಜಾಲ್ಸೂರು ಗ್ರಾಮದ ಪ್ರಕಾಶ್ ಅವರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳ ಪರ ವಕೀಲರಾದ ಅರಿಯಡ್ಕ ಉದಯಶಂಕರ ಶೆಟ್ಟಿ, ಕೃಷ್ಣವೇಣಿ, ರಾಕೇಶ್ ಮಸ್ಕರೆನ್ಹಸ್ ಮತ್ತು ಅವರು ವಾದ ಮಂಡಿಸಿದುದರ ಹಿನ್ನೆಲೆಯಲ್ಲಿ ಪುತ್ತೂರಿನ ಐದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿಗಳಿಗೆ ನಿರೀಕ್ಷಣ ಜಾಮೀನನ್ನು ಮಂಜೂರು ಮಾಡಿದೆ.

* ಸುಳ್ಯ: ಚೆಕ್ ಅಮಾನ್ಯ; ಆರೋಪಿ ಬಂಧನ

ಸುಳ್ಯ: ತಿರುಮಲೆ ನಿವಾಸಿ ಪುರುಷೋತ್ತಮ ಎನ್ನುವವರು ಸುಳ್ಯದ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಸಾಲವನ್ನು ಪಡೆದುಕೊಂಡಿದ್ದು, ಅದನ್ನು ಮರುಪಾವತಿಸಲು ನೀಡಿದ ಚೆಕ್ ಅಮಾನ್ಯಗೊಂಡಿದ್ದು, ಸೊಸೈಟಿಯವರು ದೂರು ನೀಡಿದ ಹಿನ್ನೆಲೆಯಲ್ಲಿ, ಸುಳ್ಯದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪುರುಷೋತ್ತಮ ಒಮ್ಮೆ ಮಾತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದು, ಬಳಿಕ ಸಮನ್ಸ್ ಮತ್ತು ವಾರೆಂಟ್ ಅನ್ನು ನ್ಯಾಯಾಲಯವು ನೀಡಿದ್ದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪುರುಷೋತ್ತಮನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

* ಬೆಳ್ತಂಗಡಿ: ತಿಮರೋಡಿಗೆ ಎರಡನೇ ನೋಟಿಸ್ ಜಾರಿ

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮಹೇಶ್ ಶೆಟ್ಟಿ ತಿಮರೋಡಿಗೆ, ಇದೀಗ ನ್ಯಾಯಾಲಯ ಮತ್ತೊಂದು ನೋಟಿಸ್ ಅನ್ನು ಜಾರಿಗೊಳಿಸಿದೆ. ಸೆಪ್ಟೆಂಬರ್ ಹದಿನಾರರಂದು ತಿಮರೋಡಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರದಂದು ಮಹೇಶ್ ಶೆಟ್ಟಿ ಮನೆಗೆ ತೆರಳಿದ ಸಂದರ್ಭದಲ್ಲಿ, ಆತ ನಾಪತ್ತೆಯಾಗಿದ್ದು, ಮೊಬೈಲ್ ಕೂಡ ಸ್ವಿಚ್ ಆಫ್ ಬರುತ್ತಿತ್ತು. ಹೀಗಾಗಿ ಪೊಲೀಸರು ಸೆಪ್ಟೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಮನೆಯ ಗೋಡೆಗೆ ನೋಟಿಸ್ ಅಂಟಿಸಿ ಬಂದಿದ್ದರು. ಈ ಕಾರಣಕ್ಕಾಗಿ ತಿಮರೋಡಿ ಸೆಪ್ಟೆಂಬರ್ 21ರಂದು ವಿಚಾರಣೆಗೆ ಹಾಜರಾಗಲು ಅಸಾಧ್ಯ ಎಂದು, ಆಪ್ತರ ಮೂಲಕ ತನಿಖಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಸೆಪ್ಟೆಂಬರ್ 25ರಂದು ವಿಚಾರಣೆಗೆ ಹಾಜರಾಗುವಂತೆ ಎರಡನೇ ನೋಟಿಸ್ ಅನ್ನು ಮನೆಯ ಗೋಡೆಗೆ ಅಂಟಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಕಳೆದ ತಿಂಗಳ 26ರಂದು ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ಮನೆಯಲ್ಲಿ ಪರಿಶೀಲನೆ ನಡೆಸಿದಾಗ, ಆತನ ಮನೆಯಲ್ಲಿ ಪರವಾನಿಗೆರಹಿತ ಎರಡು ತಲವಾರು ಹಾಗೂ ಒಂದು ಬಂದೂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಎರಡನೇ ನೋಟಿಸ್ ನೀಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ವಿಚಾರಣೆಯ ಬಳಿಕ ಪ್ರಕರಣವು ಮತ್ತೊಂದು ತಿರುವು ಪಡೆದುಕೊಳ್ಳಬಹುದೇ ಎಂಬ ಅನುವಾದಗಳು ವ್ಯಕ್ತವಾಗಿದೆ.

* ಉಡುಪಿ: ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ

ಉಡುಪಿ: ಗೋಪಾಲಾಚಾರ್ ಎನ್ನುವ ವ್ಯಕ್ತಿಯ ಖಾತೆಯಿಂದ ಸೆಪ್ಟೆಂಬರ್ ಹದಿನಾರರಂದು ಹಣವನ್ನು ವರ್ಗಾಯಿಸಿಕೊಂಡ ಘಟನೆ ನಡೆದಿದೆ. “ನನಗೆ ತಿಳಿಯದಂತೆ ನನ್ನ ಆಕ್ಸಿಸ್ ಬ್ಯಾಂಕ್ ಖಾತೆಯಿಂದ 18.000 ರೂಪಾಯಿ ಹಾಗೂ ಕರ್ನಾಟಕ ಬ್ಯಾಂಕ್ ಖಾತೆಯಿಂದ 40,000 ರೂಪಾಯಿ ಆನ್ ಲೈನ್ ಮುಖಾಂತರ ವರ್ಗಾಯಿಸಿಕೊಂಡಿದ್ದಾರೆ” ಎಂದು ಗೋಪಾಲಾಚಾರ್ ಅವರು ಉಡುಪಿ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ.

* ಬ್ರಹ್ಮಾವರ: ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೊಬ್ಬರ ತಲೆಬುರುಡೆ ಮತ್ತು ಮೂಳೆಗಳು ನಡೂರು ಗ್ರಾಮದ ನೆಕ್ಕರ್ಕ ಬಳಿಯ ಅರಣ್ಯ ಪ್ರದೇಶವೊಂದರಲ್ಲಿ ಪತ್ತೆಯಾಗಿದೆ. ಮರದ ಕೊಂಬೆಗೆ ಟವೆಲನ್ನು ಕಟ್ಟಿರುವುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ತಿಂಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಅಪಘಾತ ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ಪುತ್ತೂರು ಬೆಳ್ತಂಗಡಿ ಮಂಗಳೂರು ಮಾಹಿತಿ ಸುದ್ದಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಉಡುಪಿ: ಮಣಿಪಾಲದ ಕಾಲೇಜಿನಲ್ಲಿ ಮಾರಾಮಾರಿ; ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ

* ಬೆಳ್ತಂಗಡಿ: ಕರಿಮಣಿ ಸರ ಕದ್ದ ವ್ಯಕ್ತಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು

* ಬಂಟ್ವಾಳ: ಸಾರಿಗೆ ಬಸ್ ಮತ್ತು ಕಾರ್ ನಡುವೆ ಢಿಕ್ಕಿ

* ಪುತ್ತೂರು: ಗಂಧದ ಮರ ಕಳ್ಳನ ಸೆರೆ

* ಕುಂದಾಪುರ: ಕಳೆನಾಶಕ ಸೇವಿಸಿ ಅಸ್ತವ್ಯಸ್ತವಾಗಿದ್ದ ವ್ಯಕ್ತಿ ಸಾವು

* ಕಾರ್ಕಳ: ಆನ್ ಲೈನ್ ಗೇಮ್ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಉಡುಪಿ: ಮಣಿಪಾಲದ ಕಾಲೇಜಿನಲ್ಲಿ ಮಾರಾಮಾರಿ; ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ

ಉಡುಪಿ: ಮಣಿಪಾಲದ ಕಾಲೇಜ್ ವೊಂದರ ವಿದ್ಯಾರ್ಥಿಗಳು ಮಧ್ಯಾಹ್ನ ಊಟಕ್ಕೆ ಹೊರಟ ಸಂದರ್ಭದಲ್ಲಿ, ಪರಸ್ಪರ ಹೊಡೆದಾಡಿಕೊಂಡ ಘಟನೆ ಗುರುವಾರದಂದು ನಡೆದಿರುವುದು ಬೆಳಕಿಗೆ ಬಂದಿದೆ. ರಾಜ್ ಗಿರೀಶ್ ಮತ್ತು ಸಾತ್ವಿಕ್ ಎಂಬ ವಿದ್ಯಾರ್ಥಿಗಳು ಊಟಕ್ಕೆ ಹೋಗಲು ಕಾಲೇಜಿನಿಂದ ಹೊರಬರುತ್ತಿದ್ದಂತೆ, ರಾಜ್ ವೀರ್ ಸಿಂಗ್, ವಿಕ್ರಮ್ ವೀರ್ ಸಿಂಗ್ ಮತ್ತು ಎರಡನೇ ವರ್ಷದ ವಿದ್ಯಾರ್ಥಿ ಕ್ರಿಶ್ ಆ ಇಬ್ಬರು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ್ದಾರೆ. ರಾಜ್ ವೀರ್ ಸಿಂಗ್ ರಾಜ್ ಗಿರೀಶ್ ನನ್ನು ಮೊದಲಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಆತನ ಸ್ಕೂಟಿಯ ಕೀ ಅನ್ನು ಕಿತ್ತುಕೊಂಡು, ಶೋಷಿಸಿದ್ದಾನೆ. ನಂತರ ಸಾತ್ವಿಕ್ ನತ್ತ ಗಮನಹರಿಸಿ, ಅವನನ್ನು ಕೊಲ್ಲುವ ಉದ್ದೇಶದಿಂದ, ಆತನ ಕೈ ಕಾಲು ಮತ್ತು ಭುಜದ ಮೇಲೆ ದಾಳಿ ನಡೆಸಿ, ನೆಲಕ್ಕೆ ತಳ್ಳಿ, ಬಲವಾಗಿ ಒದ್ದು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮವಾಗಿ ಸಾತ್ವಿಕ್ ನ ಎಡಭುಜದ ಮೂಳೆ ಮುರಿದಿದ್ದು, ಕೈ ಮೇಲಕ್ಕೆ ಎತ್ತಲಾರದಷ್ಟು ಗಂಭೀರ ಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಾತ್ವಿಕ್ ನ ಸ್ನೇಹಿತನಾದ ರಾಜ್ ಗಿರೀಶ್ ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ, ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬೆಳ್ತಂಗಡಿ: ಕರಿಮಣಿ ಸರ ಕದ್ದ ವ್ಯಕ್ತಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು.

ಬೆಳ್ತಂಗಡಿ: ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಕರಿಮಣಿ ಸರವನ್ನು ಎಳೆದುಕೊಂಡು, ಕಳ್ಳತನ ಮಾಡಿದ್ದ ಆರೋಪಿಯಾದ ಉಮೇಶ್ ಗೌಡನನ್ನು ಅದೇ ದಿನ ಬೆಳ್ತಂಗಡಿ ಪೊಲೀಸರು ಬಂಧಿಸಿ, ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಾದ ಬೆಳ್ತಂಗಡಿ ಪೊಲೀಸ್ ನಿರೀಕ್ಷಕರಾದ ಸುಬ್ಟಾಪುರ ಮಠ್ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.ಇದರ ಹಿನ್ನೆಲೆಯಲ್ಲಿ ಶುಕ್ರವಾರದಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆರೋಪಗಳು ಸಾಬೀತಾಗಿದ್ದು, ಉಮೇಶ್ ಗೌಡನಿಗೆ ಮೂರು ವರ್ಷಗಳ ಕಾಲ ಕಠಿಣ ಕಾರಾಗೃಹ ವಾಸ, 20,000 ರೂಪಾಯಿ ದಂಡವನ್ನು ವಿಧಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಆರೋಪಿಗೆ ಶಿಕ್ಷೆಯನ್ನು ನೀಡುವಲ್ಲಿ ಸ್ಥಳ ಮಹಜರು ಪಿಎಸ್ಐ ಮುರಳೀಧರ್ ನಾಯ್ಕ, ತನಿಖಾ ಸಹಾಯಕರಾದ ಎಎಸ್ಐ ಕುಲಾಜ್ಯೋತಿ ತಿಲಕ್, ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಬ್ಬಂದಿ ಸತೀಶ್ ಅವರು ಭಾಗಿಯಾಗಿದ್ದರು.

* ಬಂಟ್ವಾಳ: ಸಾರಿಗೆ ಬಸ್ ಮತ್ತು ಕಾರ್ ನಡುವೆ ಢಿಕ್ಕಿ

ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಉಜಿರಂಡಿ ಪಲ್ಕೆಯ ಪಲ್ಲದಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ಕಾರ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಶನಿವಾರದಂದು ನಡೆದಿದೆ. ಇದರ ಪರಿಣಾಮವಾಗಿ ಕಾರು ಪೂರ್ತಿಯಾಗಿ ನುಜ್ಜುಗುಜ್ಜಾಗಿದ್ದು, ಚಾಲಕ ಮತ್ತು ಅದರಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರನ್ನು ಕಾವಳಮೂಡೂರು ಗ್ರಾಮದ ಧನುಷ್ ಹಾಗೂ ಪರಾರ್ದೊಟ್ಟು ನಿವಾಸಿ ದೀಕ್ಷಿತ್ ಎಂದು ಗುರುತಿಸಲಾಗಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿಯ ರಭಸಕ್ಕೆ ಸಾರಿಗೆ ಬಸ್ ನ ಮುಂದಿನ ಭಾಗದ ಗಾಜು ಸಂಪೂರ್ಣ ಪುಡಿಯಾಗಿದ್ದು, ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯವು ಸಹ ಆಗದೇ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು ಎನ್ನಲಾಗಿದೆ.

* ಪುತ್ತೂರು: ಗಂಧದ ಮರ ಕಳ್ಳನ ಸೆರೆ

ಪುತ್ತೂರು: ಕೇರಳ ಮೂಲದ ಚಂದ್ರನ್ ಗಂಧದ ಮರದ ಸಾಗಾಟ ಅಪರಾಧಕ್ಕೆ ಸಂಬಂಧಿಸಿದಂತೆ, ಕಳೆದ 55 ವರ್ಷಗಳಿಂದ ತಲೆಮರಿಸಿಕೊಂಡಿದ್ದು, ವಾರೆಂಟ್ ಅಪರಾಧಿ ಆಗಿರುವ ಈತನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರನ್ ಮತ್ತು ಇನ್ನೋರ್ವ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆದರೆ ಜಾಮೀನು ದೊರೆತ ಬಳಿಕ ಚಂದ್ರನ್ ಪರಾರಿಯಾಗಿದ್ದ ಎಂದು ಹೇಳಲಾಗಿದೆ. ಇದೀಗ ಎರಡನೇ ಆರೋಪಿಯಾದ ಮತ್ತು ತಲೆಮರೆಸಿಕೊಂಡಿದ್ದ ಚಂದ್ರನ್ ನನ್ನು ಪುತ್ತೂರಿನ ಪೊಲೀಸರು ಕೇರಳದಲ್ಲಿ ಸೆರೆಹಿಡಿದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

* ಕುಂದಾಪುರ: ಕಳೆನಾಶಕ ಸೇವಿಸಿ ಅಸ್ತವ್ಯಸ್ತವಾಗಿದ್ದ ವ್ಯಕ್ತಿ ಸಾವು

ಕುಂದಾಪುರ: ಅಸೋಡಿ ಗ್ರಾಮದ ನಿವಾಸಿಯಾದ ಭಾಸ್ಕರ್ ಮೊಗವೀರ ಎನ್ನುವ ವ್ಯಕ್ತಿಯು, ಕಳೆದ ತಿಂಗಳ 27ನೇ ತಾರೀಖಿನಂದು ತೋಟಕ್ಕೆ ಹಾಕುವ ಕೀಟನಾಶಕದಂತಹ ವಿಷದ ಪದಾರ್ಥವನ್ನು ಸೇವಿಸಿ ಅಸ್ತವ್ಯಸ್ತಗೊಂಡಿದ್ದರು. ಕೂಡಲೇ ಅವರನ್ನು ಕೊಟೇಶ್ವರದ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 22 ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಭಾಸ್ಕರ್ ಅವರು, ಗುಣಮುಖರಾಗದ ಹಿನ್ನೆಲೆಯಲ್ಲಿ ಅವರನ್ನು ಬುಧವಾರದಂದು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ, ನಂತರ ಮನೆಗೆ ಕರೆತರಲಾಯಿತು. ಚಿಕಿತ್ಸೆ ಫಲಕಾರಿಯಾಗದ ಕಾರಣ ಭಾಸ್ಕರ್ ಅವರು ಶನಿವಾರ ನಸುಕಿನ ಜಾವ ಮೃತಪಟ್ಟರು ಎನ್ನುವ ಸಂಗತಿ ಮೂಲಗಳಿಂದ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕಾರ್ಕಳ: ಆನ್ ಲೈನ್ ಗೇಮ್ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ.

ಕಾರ್ಕಳ: ಗಂಜಿಮಠದ ನಿವಾಸಿ ನಜೀರ್ ಎನ್ನುವ ವ್ಯಕ್ತಿಯು, ಆನ್ ಲೈನ್ ಗೇಮ್ ಹೆಸರಿನಲ್ಲಿ ಸಾರ್ವಜನಿಕರನ್ನು ಮೋಸಗೊಳಿಸುತ್ತಿದ್ದ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಗ್ರಾಮಾಂತರ ಠಾಣೆಯ ಪಿಎಸ್ಐ ನಜೀರ್ ನನ್ನು ಬಂಧಿಸಿದ್ದಾರೆ. ನಜೀರ್ ಬೆಳ್ಮಣ್ ಗ್ರಾಮದಲ್ಲಿ ಆನ್ ಲೈನ್ ಆಟವನ್ನು ಆಡುತ್ತಾ, ಬೇರೆಯವರಿಗೂ ಆ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿಕೊಡುತ್ತಿದ್ದ ಎನ್ನಲಾಗಿದೆ. ನಜೀರ್ ನನ್ನು ಬಂಧಿಸಿದ ಸಂದರ್ಭದಲ್ಲಿ, ಆತನ ಬಳಿಯಿದ್ದ 30,000 ರೂಪಾಯಿ ಹಣವನ್ನು ವಶಪಡಿಸಿಕೊಂಡು, ಮೊಬೈಲ್ ಅನ್ನು ಪರಿಶೀಲಿಸಿದಾಗ, ವೆಬ್ ಸೈಟ್ ಲಿಂಕ್ ಮತ್ತು ಆ್ಯಪ್ ಬಳಸಿ ಆನ್ ಲೈನ್ ಬೆಟ್ಟಿಂಗ್ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಜೀರ್ ವಿರುದ್ಧ ಕಾರ್ಕಳದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Categories
ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಪುತ್ತೂರು ಬೆಳ್ತಂಗಡಿ ಮಂಗಳೂರು

ಕಂಬಳ ಅಭಿಮಾನಿಗಳಿಗೆ ಗುಡ್ ನ್ಯೂಸ್..!!

ಕಂಬಳ ಅಭಿಮಾನಿಗಳಿಗೆ ಗುಡ್ ನ್ಯೂಸ್..!!
– ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ
– ರಾಜ್ಯ ಸರ್ಕಾರ ನಿರ್ಧಾರ? ಶೀಘ್ರ ಘೋಷಣೆಯಾಗುವ ಸಾಧ್ಯತೆ

NAMMUR EXPRESS NEWS
ಮಂಗಳೂರು: ಕಂಬಳ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ನಿರ್ಧರಿಸಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಹೇಳಲಾಗಿದೆ. ಕಂಬಳ ಕ್ರೀಡೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ ಘೋಷಣೆಯಾದರೆ ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ ಸಿಗುವ ಸೌಲಭ್ಯಗಳು ಕಂಬಳ ಕ್ರೀಡೆಗೂ ಅನ್ವಯವಾಗಲಿದೆ. ಕಂಬಳಕ್ಕೆ ಒಂದೆಡೆ ರಾಜ್ಯದ ಮಾನ್ಯತೆಯ ಸಿದ್ದತೆ ಅಂತಿಮ ಹಂತದಲ್ಲಿದ್ದರೆ, ಇನ್ನೊಂದೆಡೆ ಕಂಬಳ ಅಸೋಸಿಯೇಶನ್ ನೇಮಕ ಪಟ್ಟಿಯನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಈ ಸಮಿತಿ ಅಧ್ಯಕ್ಷರೇ ಕಂಬಳ ಅಸೋಸಿಯೇಶನ್‌ಗೆ ಅಧ್ಯಕ್ಷರಾಗಿದ್ದು, ಉಳಿದಂತೆ ಗೌರವ ಸಲಹೆಗಾರರು, ಸದಸ್ಯರು ಸೇರಿದಂತೆ 13 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಸ್ಥಳೀಯ ಗ್ರಾಮೀಣ ಕರಕುಶಲ ಕುಶಲಕರ್ಮಿಗಳಿಂದ ತಯಾರಿಸಿದ ಕೈ ಬಟ್ಟೆಗಳು ಕಂಬಳ ಅಸೋಸಿಯೇಶನ್‌ ಸ್ಥಾಪನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಧನ, ವಿಶೇಷ ಅನುದಾನ, ಓಟಗಾರರು, ಕೋಣದ ಮಾಲೀಕರು, ಇತರರಿಗೆ ಸೌಲಭ್ಯ ದೊರೆಯಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ಕಂಬಳ ಅಸೋಸಿಯೇಶನ್‌ಗೆ ಬೈಲಾ ಸಿದ್ಧಪಡಿಸುತ್ತಿದೆ.

Categories
ಅಪಘಾತ ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಪುತ್ತೂರು ಬೆಳ್ತಂಗಡಿ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಬೆಳ್ತಂಗಡಿ: 5 ತಲೆಬುರುಡೆ, 113 ಮೂಳೆಗಳು ಪತ್ತೆ!
* ಮಂಗಳೂರು: ರಸ್ತೆ ಅಪಘಾತದಲ್ಲಿ ಇಂಜಿನಿಯರ್ ಸಾವು
* ಕುಂದಾಪುರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ
* ಉಡುಪಿ: ರಂಗಭೂಮಿ ಕಲಾವಿದ ಗೋಪಾಲಣ್ಣ ಇನ್ನಿಲ್ಲ
* ಬಂಟ್ವಾಳ: ದುಬಾರಿ ಬೆಲೆಯ ನಾಯಿ ಕೊಂದ ನೆರೆಮನೆಯವರು!
* ಭಟ್ಕಳ: ಅರಣ್ಯದಲ್ಲಿ ಜಾನುವಾರುಗಳ ಮೂಳೆ ಪತ್ತೆ
* ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ನದಿ ತೀರದಲ್ಲಿರುವ ಬಂಗ್ಲೆಗುಡ್ಡಕ್ಕೆ ಎಸ್ಐಟಿ ತಂಡವು ಪ್ರವೇಶಿಸಿದ್ದು, ತನಿಖಾಧಿಕಾರಿಗಳಾದ ಜಿತೇಂದ್ರ ದಯಾಮ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಸೋಕೋ ತಂಡ, ಕಂದಾಯ ಇಲಾಖೆ ಮತ್ತು ಪಂಚಾಯತ್ ಸಿಬ್ಬಂದಿಗಳು ಗುರುವಾರದಂದು ಸುಮಾರು ಏಳು ಗಂಟೆಗಳ ಕಾಲ ಹದಿಮೂರು ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದ ಐದು ಕಡೆ ಮಹಜರು ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಐದು ತಲೆಬುರುಡೆ, 113 ಮೂಳೆಗಳು ಲಭಿಸಿದ್ದು, ಸೌಜನ್ಯಳ ಮಾವ ವಿಠ್ಠಲ ಗೌಡ ಅವರು ನೀಡಿದ ಹೇಳಿಕೆ ನಿಜವಿರಬಹುದೆಂಬ ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ ಪಾಯಿಂಟ್ 11ರ ಸುತ್ತಮುತ್ತ ನೆಲದ ಮೇಲೆ ಮಾನವನ ಮೂಳೆಯೊಂದಿಗೆ ಬಟ್ಟೆಗಳು ಸಹ ಕಂಡುಬಂದಿದೆ. ಇದೀಗ ಲಭ್ಯವಾಗಿರುವ ಮೂಳೆಗಳನ್ನು ಪೈಪ್ ಗಳಲ್ಲಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲು ಮಣ್ಣಿನ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

* ಮಂಗಳೂರು: ರಸ್ತೆ ಅಪಘಾತದಲ್ಲಿ ಇಂಜಿನಿಯರ್ ಸಾವು

ಮಂಗಳೂರು: ಬಾರೆಬೈಲು ನಿವಾಸಿ ರಾಮಚಂದ್ರ ಎನ್ನುವವರ ಪುತ್ರ ಕೌಶಿಕ್ ಎನ್ನುವ ಇಂಜಿನಿಯರ್ ಯುವಕನು ಬುಧವಾರ ಮಧ್ಯಾಹ್ನ ಬುಲೆಟ್ ಬೈಕ್ ನಲ್ಲಿ ಹೋಗುತ್ತಿದ್ದಾಗ, ಆಟೊವೊಂದು ಢಿಕ್ಕಿ ಹೊಡೆದುದರ ಪರಿಣಾಮವಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ, ವಿಮಾನ ನಿಲ್ದಾಣ ರಸ್ತೆಯ ಯೆಯ್ಯಾಡಿ ಜಂಕ್ಷನ್ ನಲ್ಲಿ ನಡೆದಿದೆ.ಢಿಕ್ಕಿ ಹೊಡೆದ ತೀವ್ರತೆಗೆ ಕೌಶಿಕ್ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದರಿಂದ, ತಲೆಗೆ ಗಂಭೀರವಾದ ಗಾಯಗಳಾಗಿ ಮೃತಪಟ್ಟ ಎನ್ನಲಾಗಿದೆ. ರಾಮಚಂದ್ರ ಅವರು ವಿಜಯವಾಣಿ ಪತ್ರಿಕೆಯ ಏಜೆಂಟ್ ಆಗಿದ್ದು, ಕೌಶಿಕ್ ಕೂಡ ಇಂಜಿನಿಯರ್ ವೃತ್ತಿಯ ಜೊತೆಗೆ, ಮನೆಗಳಿಗೆ ಹಾಲು ಮತ್ತು ಪತ್ರಿಕೆ ಹಾಕುವ ಕಾರ್ಯವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕುಂದಾಪುರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ

ಕುಂದಾಪುರ: ಅಕ್ರಮವಾಗಿ ಇಸ್ಪೀಟ್ ಆಟ ನಡೆಸುತ್ತಿದ್ದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕಿಯಾದ ಚಂದ್ರಕಲಾ ಪತ್ತಾರ್ ಮತ್ತು ಪೊಲೀಸರು ದಾಳಿ ನಡೆಸಿದ ಘಟನೆ, ಗುಲ್ವಾಡಿ ಗ್ರಾಮದ ಅರೆಕಲ್ಲು ಹುಣಸೆ ಮನೆಯಲ್ಲಿ ನಡೆದಿದೆ. ಕಾರ್ಕಳದ ಸಮರ್ಥ್, ತಗ್ಗರ್ಸೆಯ ಪ್ರವೀಣ್, ಮಂಗಳೂರಿನ ಪ್ರದೀಪ್ ಮತ್ತು ಗುಲ್ವಾಡಿಯ ನಿಸಾರ್ ಶೇಖ್ ಅವರನ್ನು ಬಂಧಿಸಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಈ ಸಂದರ್ಭದಲ್ಲಿ ಬಂಧಿತ ಆರೋಪಿಗಳ ಬಳಿ ಇದ್ದ 11.620 ನಗದು ಹಣ, ನಾಲ್ಕು ಮೊಬೈಲ್ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

* ಉಡುಪಿ: ರಂಗಭೂಮಿ ಕಲಾವಿದ ಗೋಪಾಲಣ್ಣ ಇನ್ನಿಲ್ಲ

ಉಡುಪಿ: ಭಾರತೀಯ ಜೀವವಿಮಾ ನಿಗಮದ ಉದ್ಯೋಗಿಯಾಗಿದ್ದ, ರಂಗಭೂಮಿ ಕಲಾವಿದರಾಗಿ ತಮ್ಮನ್ನು ತೊಡಗಿಸಿಕೊಂಡ ಗೋಪಾಲಣ್ಣ ಅವರು ಗುರುವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾದರು. 1990ರಲ್ಲಿ ರಂಗಭೂಮಿ ಸಂಸ್ಥೆಯ ಸದಸ್ಯರಾಗಿ, 1995 ರಿಂದ 2000ದ ವರೆಗೆ ಆಡಳಿತ ಮಂಡಳಿಯ ಸದಸ್ಯರಾಗಿ, ಬಳಿಕ ಇತ್ತೀಚಿನವರೆಗೂ ಆಡಳಿತ ಮಂಡಳಿಯ ಗೌರವ ಸಲಹಾ ಸಮಿತಿಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದರು. ಅಲ್ಲದೆ ತುಳುಕೂಟ, ಯಕ್ಷಗಾನ ಕಲಾರಂಗ ಹಾಗೂ ಇತರೆ ಸಂಸ್ಕೃತಿಕ ಸಂಸ್ಥೆಗಳ ಅವಿಭಾಜ್ಯ ಅಂಗವಾಗಿದ್ದರು. ಮೃತರ ಅಂತಿಮ ವಿಧಿ ವಿಧಾನಗಳು ಬ್ರಹ್ಮಗಿರಿಯ ಬಾಲ ಭವನದ ರಾಮಣ್ಣ ಶೆಟ್ಟಿ ಕಾಂಪೌಂಡ್ ನಲ್ಲಿರುವ ಅವರ ಸ್ವಗೃಹದಲ್ಲಿ ನೆರವೇರಿತು ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

* ಬಂಟ್ವಾಳ: ದುಬಾರಿ ಬೆಲೆಯ ನಾಯಿಯನ್ನು ಕೊಂದ ನೆರೆಮನೆಯವರು.

ಬಂಟ್ವಾಳ: ಡೋಲ್ಫಿ ಡಿಸೋಜ ಎನ್ನುವವರಿಗೆ ಸೇರಿದ್ದ, ಸಾಕು ನಾಯಿಯೊಂದನ್ನು ಕೊಂದ ಘಟನೆ ಕಳ್ಳಿಗೆ ಗ್ರಾಮದ ನೆತ್ತರಕೆರೆ ಎನ್ನುವಲ್ಲಿ ಗುರುವಾರ ನಡೆದಿದೆ. ಬುಧವಾರದಿಂದ ಕಾಣೆಯಾಗಿದ್ದ ನಾಯಿಯನ್ನು ಡಿಸೋಜಾ ಅವರು ಹುಡುಕುತ್ತಿದ್ದರು, ಆದರೆ ಗುರುವಾರ ಬೆಳಿಗ್ಗೆ ನೋಡಿದಾಗ ಅದನ್ನು ಕೊಂದು, ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಪರಿಶೀಲನೆ ನಡೆಸಿದಾಗ ನೆರೆಮನೆಯವರು ದೊಣ್ಣೆಯಿಂದ ಹೊಡೆದು, ಹಲ್ಲೆ ಮಾಡಿ ಕೊಂದು, ಹೂತು ಹಾಕಿರುವ ವಿಚಾರ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಡೋಲ್ಫಿ ಡಿಸೋಜಾ ಅವರು ನೆರೆಮನೆಯವರಾದ ಯತಿನ್ ಪೂಜಾರಿ ಮತ್ತು ಯತೀಶ್ ಪೂಜಾರಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಭಟ್ಕಳ: ಕಳೆದ ಕೆಲವು ದಿನಗಳ ಹಿಂದೆ ಉಪವಲಯದ ಅರಣ್ಯಾಧಿಕಾರಿಗಳಾದ ಮಾರುತಿ ಸೊರಗಾಂವಿ ಅವರು ಮುಗ್ಗುಂ ಕಾಲೋನಿಯ ಗುಡ್ಡದ ಅರಣ್ಯ ಪ್ರದೇಶವೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕಟಾವು ಮಾಡಿ, ಚರ್ಮ ಮತ್ತು ಎಲುಬುಗಳು ಸೇರಿದಂತೆ ಮೂಳೆಗಳನ್ನು ಸಹ ಅರಣ್ಯ ಪ್ರದೇಶದಲ್ಲಿ ರಾಶಿ ಹಾಕಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020ರ ಕಾಲಂ 4, 12 ಸೇರಿದಂತೆ ಹಲವು ವಿಧಿಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಯಿತು. ಇದಕ್ಕೆ ಸಂಬಂಧಿಸಿದಂತೆ ಬುಧವಾರದಂದು ಡಿವೈಎಸ್ ಪಿ ಮಹೇಶ್ ಅವರ ಮಾರ್ಗದರ್ಶನದಲ್ಲಿ, ಪಿಐ ದಿವಾಕರ್ ನೇತೃತ್ವದಲ್ಲಿ ಪಿಎಸ್ಐ ನವೀನ್ ನಾಯ್ಕ, ಪಿಎಸ್ಐ ತಿಮ್ಮಪ್ಪ, ಠಾಣೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳು, ಅಕ್ರಮ ಚಟುವಟಿಕೆಗಳ ಆರೋಪಿಗಳಾದ ಮೊಹಮ್ಮದ್ ಸಮಾನ್, ಮೊಹಮ್ಮದ್ ರಾಹೀನ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನಗಳು ಮತ್ತು ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.

•ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ

ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ರೀತಿಯ ಅಪಘಾತ ಸಂಭವಿಸಿದ ಘಟನೆ, ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಡೆದಿದೆ. ಇದರ ಪರಿಣಾಮವಾಗಿ ವಿಜಯಪುರ ಮೂಲದ ಮುದ್ದೇಬಿಹಾಳ ಗ್ರಾಮದ ಟ್ಯಾಂಕರ್ ಚಾಲಕ ಶರಣಪ್ಪ ಸಂಗಪ್ಪ ಕೋಳೂರು ಮತ್ತು ಬಸ್ ಪ್ರಯಾಣಿಕ ಅಂಕೋಲಾ ತಾಲ್ಲೂಕಿನ ಕೇಣಿ ಗ್ರಾಮದ ಭಾಸ್ಕರ ಪಾಂಡುರಂಗ ಗಾಂವಕರ್ ಅವರು ಮೃತಪಟ್ಟಿದ್ದಾರೆ. ಬಸ್ ಚಾಲಕರಾದ ಕಮಲಾಕರ ಸಾತು ನಾಯ್ಕ, ನಿರ್ವಾಹಕ ನಾರಾಯಣ ನಾಯ್ಕ, ಪ್ರಯಾಣಿಕರಾದ ಶಿಕ್ಷಕಿಯಾದ ವೀಣಾ ನಾಯಕ,ಪ್ರಜ್ಞಾ ನಾಯ್ಕ, ಸಾವಿತ್ರಿ ಗೌಡ, ಶ್ರೀಧರ್, ರಾಧಾಕೃಷ್ಣ ನಾಯ್ಕ, ವಿದ್ಯಾರ್ಥಿಗಳಾದ ಸಾನ್ವಿ ನಾಯ್ಕ, ರಕ್ಷಾ ಬಾನಾವಳಿ, ಬೀರಪ್ಪ ನಾಯ್ಕ ಅವರು ಗಾಯಗೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

Categories
robbery ಅಪಘಾತ ಉಡುಪಿ ಕರಾವಳಿ ಪುತ್ತೂರು ಬೆಳ್ತಂಗಡಿ ಮಂಗಳೂರು ಮುಲ್ಕಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಪುತ್ತೂರು: ಚಾರಣಕ್ಕೆ ಹೋದ ಯುವಕನಿಗೆ ಹೃದಯಾಘಾತ

* ಭಟ್ಕಳ: ದೇವಾಲಯದಲ್ಲಿ ಕಳ್ಳತನ

* ಮಂಗಳೂರು: ಗೋ ಕಳ್ಳತನ ಪ್ರಕರಣ; ಆರೋಪಿಗಳು ಸೆರೆ

* ಸುಳ್ಯ: ಮೂರು ವಾಹನಗಳ ನಡುವೆ ಸರಣಿ ಅಪಘಾತ

* ಉಡುಪಿ: ಮನೆಯಲ್ಲಿದ್ದ ವಜ್ರ ಮತ್ತು ಚಿನ್ನಾಭರಣ ಕಳುವು

* ಕುಂದಾಪುರ: ವ್ಯವಹಾರಸ್ಥನ ಆತ್ಮಹತ್ಯೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಪುತ್ತೂರು: ಚಾರಣಕ್ಕೆ ಹೋದ ಯುವಕನಿಗೆ ಹೃದಯಾಘಾತ

ಪುತ್ತೂರು: ಮನೋಜ್ ಎನ್ನುವ ಯುವಕನು ತನ್ನ ಸ್ನೇಹಿತರೊಂದಿಗೆ ಚಾರಣಕ್ಕೆಂದು ಹೋದ ಸಂದರ್ಭದಲ್ಲಿ, ಹೃದಯಾಘಾತವಾಗಿ ಮೃತಪಟ್ಟ ಘಟನೆ ಕೊಣಾಜೆಕಲ್ಲುವಿನಲ್ಲಿ ನಡೆದಿದೆ. ಕೊಣಾಜೆಕಲ್ಲು ಗುಡ್ಡದ ಎತ್ತರವಾದ ಪ್ರದೇಶಕ್ಕೆ ಹೋಗುವಾಗ ಎದೆ ನೋವು ಕಾಣಿಸಿಕೊಂಡಿದ್ದು, ಮನೋಜ್ ಅಲ್ಲಿಯೇ ವಿಶ್ರಾಂತಿ ಪಡೆಯಲು ಕುಳಿತುಕೊಂಡಿದ್ದಾರೆ. ಇದೇ ವೇಳೆ ಹೃದಯಾಘಾತ ಸಂಭವಿಸಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ತೆರಳಿದ್ದ ಸ್ನೇಹಿತರು ಎಷ್ಟೇ ಉಪಚರಿಸಿದರು ಪ್ರಯೋಜನವಾಗಲಿಲ್ಲ. ಎದೆ ನೋವು ಕಾಣಿಸಿಕೊಂಡ ಕೆಲವೇ ನಿಮಿಷಗಳೊಳಗೆ ಸಾವನ್ನಪ್ಪಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

* ಭಟ್ಕಳ: ದೇವಾಲಯದಲ್ಲಿ ಕಳ್ಳತನ

ಭಟ್ಕಳ: ಸೋಮವಾರ ರಾತ್ರಿ ಶ್ರೀಶೇಡಬರಿ ಜಟಕಾ ಮಹಾಸತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದು, ಬಟ್ಟೆ ಲೋಟ ಮುಚ್ಚಿದ ಹುಂಡಿಯೊಡೆದು ಕಾಣಿಕೆ ಹಣವನ್ನು ಕದ್ದುಕೊಂಡು ಹೋಗಿರುವುದು ಸಿಸಿಟಿವಿ ಮೂಲಕ ಕಂಡುಬಂದಿದ್ದು, ಇವರನ್ನು ಕೇವಲ 24 ಗಂಟೆಗಳ ಒಳಗಾಗಿ ಭಟ್ಕಳದ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಶಿರಾಲಿಯ ಅಮೀರ್ ಹಸನ್ ಬ್ಯಾರಿ ಮತ್ತು ಮೊಹಮ್ಮದ್ ಇಮ್ರಾನ್ ಅಬ್ದುಲ್ ಗಫರ್ ಎಂದು ಗುರುತಿಸಲಾಗಿದೆ. ಪ್ರಕರಣ ಕುರಿತು ವಿಚಾರ ತಿಳಿಯುತ್ತಿದ್ದಂತೆ ದೇವಸ್ಥಾನದ ಆಡಳಿತ ಸಮಿತಿಯವರು ಭಟ್ಕಳದ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ವಿಚಾರಣೆಯ ಸಮಯದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಸುಳಿವು ದೊರೆತು, ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎನ್ನಲಾಗಿದೆ.‌ ಈ ಸಂದರ್ಭದಲ್ಲಿ ಆರೋಪಿಗಳಿಂದ 1.80 ಲಕ್ಷ ರೂಪಾಯಿ ನಗದು ಹಣ ಮತ್ತು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

* ಮಂಗಳೂರು: ಗೋಕಳ್ಳತನ ಪ್ರಕರಣ; ಆರೋಪಿಗಳು ಸೆರೆ

ಮಂಗಳೂರು: ಸೆಪ್ಟೆಂಬರ್ 13ರ ಶನಿವಾರದಂದು ಅಡ್ಯಾರ್ ನ ತಜಿಪೋಡಿ ಎನ್ನುವಲ್ಲಿ, ಉಮೇಶ್ ಆಳ್ವಾ ಅವರ ಅಂಗಳದಿಂದ ಜರ್ಸಿ ಹಸುವನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಬುಧವಾರದಂದು ಆರೋಪಿಗಳನ್ನು ಪತ್ತೆ ಹಚ್ಚಿ, ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಅಡ್ಯಾರ್ ನ ಶಾಬಾಜ್ ಅಹಮ್ಮದ್, ವಳಚ್ಚಿಲ್ ನ ಖಾದರ್ ಮೊಹಮ್ಮದ್ ಮತ್ತು ಅರ್ಕುಳ ವಳಚ್ಚಿಲ್ ನ ಮೊಹಮ್ಮದ್ ಸುಹಾನ್ ಎಂದು ಗುರುತಿಸಲಾಗಿದೆ. ಹಾಗೂ ಜೀವಂತ ದನವನ್ನು ಪತ್ತೆಹಚ್ಚಲಾಗಿದೆ. ವಿಚಾರಣೆಯ ಬಳಿಕ ಶಾಬಾಜ್ ಮತ್ತು ಸುಹಾನ್ ದನವನ್ನು ಕಳ್ಳತನ ಮಾಡಿ, ಅದನ್ನು ಖಾದರ್ ಮೊಹಮ್ಮದ್ ಗೆ ಮಾರಾಟ ಮಾಡಿದ್ದರು. ಖಾದರ್ ಅದನ್ನು ಮಾಂಸ ಮಾಡಲು ಖರೀದಿಸಿದ್ದ ಎನ್ನುವ ಸಂಗತಿ ತಿಳಿದುಬಂದಿದೆ.‌

* ಸುಳ್ಯ: ಮೂರು ವಾಹನಗಳ ನಡುವೆ ಸರಣಿ ಅಪಘಾತ

ಸುಳ್ಯ: ಸುಳ್ಯದಿಂದ ಪೈಚಾರು ಕಡೆಗೆ ಹೋಗುತ್ತಿದ್ದ ಮೂರು ವಾಹನಗಳ ನಡುವೆ, ಮಾಣಿ ಮೈಸೂರು ಹೆದ್ದಾರಿಯಲ್ಲಿ ಬುಧವಾರದಂದು ಸರಣಿ ಅಪಘಾತ ನಡೆದಿದೆ. ಮುಂದೆ ಇದ್ದ ಕಾರ್ ತಾಂತ್ರಿಕ ಸಮಸ್ಯೆಯಿಂದಾಗಿ ಇದ್ದಕ್ಕಿದ್ದಂತೆ ರಸ್ತೆಯ ನಡುವೆ ನಿಂತುಬಿಟ್ಟಿದ್ದು, ಅದರ ಹಿಂದೆ ಇದ್ದ ಆಟೋ ಕಾರಿಗೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಆಟೋದ ಹಿಂದೆ ಇದ್ದ ಬುಲೆಟ್ ಬೈಕ್ ನಿಯಂತ್ರಣ ತಪ್ಪಿ ಆಟೋಗೆ ಗುದ್ದಿದೆ. ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸದಿದ್ದರೂ, ಬೈಕ್ ಸವಾರನ ಕಾಲಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತು ಮೂರು ವಾಹನಗಳು ಜಖಂಗೊಂಡಿವೆ ಎನ್ನುವ ಮಾಹಿತಿ ಲಭಿಸಿದೆ.

* ಉಡುಪಿ: ಮನೆಯಲ್ಲಿದ್ದ ವಜ್ರ ಮತ್ತು ಚಿನ್ನಾಭರಣ ಕಳುವು

ಉಡುಪಿ: ಅನಾರೋಗ್ಯಪೀಡಿತ ಮಹಿಳೆಯನ್ನು ನೋಡಿಕೊಳ್ಳಲು ಬಂದಿದ್ದ ದಾದಿಯೊಬ್ಬಳು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ಅಜ್ಜರಕಾಡು ವಸತಿ ಸಮುಚ್ಚಯವೊಂದರಲ್ಲಿ ನಡೆದಿದೆ. ಕಳೆದೆರಡು ತಿಂಗಳ ಹಿಂದೆ ನಾಗಮಾಲಿನಿ ಎನ್ನುವ ಮಹಿಳೆಯನ್ನು ನೋಡಿಕೊಳ್ಳಲು ಜಸಿಂತಾ ಎಂಬ ಹೆಸರಿನ ದಾದಿಯಯೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈಕೆ ಪರ್ಸ್ ವೊಂದರಲ್ಲಿ ಇಟ್ಟಿದ್ದ, 20 ಗ್ರಾಂ ತೂಕದ ಚಿನ್ನ ಮತ್ತು ವಜ್ರದ ಹರಳುಗಳನ್ನು ಹೊಂದಿರುವ ಸುಮಾರು ಎಂಟು ಲಕ್ಷ ಮೌಲ್ಯದ ಬಳೆ, 44 ಗ್ರಾಂ ತೂಕದ ಸುಮಾರು ಏಳು ಲಕ್ಷ ರೂಪಾಯಿಯಷ್ಟು ಬೆಲೆಬಾಳುವ ವಜ್ರದ ಪದಕವುಳ್ಳ ಚಿನ್ನದ ಸರವನ್ನು ಲಪಟಾಯಿಸಿದ್ದು.‌ ಒಟ್ಟು 15 ಲಕ್ಷ ರೂಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಸಂಬಂಧಿತ ವ್ಯಕ್ತಿಗಳು ದೂರಿನಲ್ಲಿ ತಿಳಿಸಿದ್ದಾರೆ.

* ಕುಂದಾಪುರ: ವ್ಯವಹಾರಸ್ಥನ ಆತ್ಮಹತ್ಯೆ

ಕುಂದಾಪುರ: ಉದಯ ಚಾತ್ರ ಎಂಬ ವ್ಯಾಪಾರಸ್ಥರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ, ಕಮಲಶಿಲೆ ಗ್ರಾಮದ ಬರೆಗುಂಡಿಯಲ್ಲಿ ನಡೆದಿದೆ. ಮಿತಭಾಷಿಯಾಗಿದ್ದ ಉದಯ್ ಅವರು ಎಲ್ಲರೊಂದಿಗೂ ಬೆರೆಯುವ ಮೂಲಕ ಜನಾನುರಾಗಿಯಾಗಿದ್ದರು ಎನ್ನಲಾಗಿದೆ. ಬುಧವಾರದಂದು ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ತಂದೆ ತಾಯಿ ಮತ್ತು ಪತ್ನಿಯೊಂದಿಗೆ ಪಾಲ್ಗೊಂಡಿದ್ದು, ಬಳಿಕ ತಮ್ಮ ಕೆಲಸಕ್ಕೆ ಹೋಗುವುದಾಗಿ ಹೇಳಿ ಅಲ್ಲಿಂದ ತೆರಳಿದ್ದರು. ಆದರೆ ಅವರು ಕೆಲಸಕ್ಕೆ ಹೋಗದೆ, ನೇರವಾಗಿ ಮನೆಗೆ ಬಂದು, ಮಹಡಿಯಲ್ಲಿರುವ ಕೋಣೆಯೊಂದಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಭೆಯನ್ನು ಮುಗಿಸಿ ತಂದೆ ತಾಯಿ ಮತ್ತು ಪತ್ನಿ ಮನೆಗೆ ಮರಳಿದಾಗ, ಹೊರಗಡೆ ಉದಯ್ ಅವರ ಕಾರು ನಿಂತಿರುವುದು ಕಂಡುಬಂದಿದೆ.‌ ಆದರೆ ಮನೆಯಬೀಗ ತೆರೆದಿರಲಿಲ್ಲ. ಬಳಿಕ ಮನೆಯ ಸುತ್ತಮುತ್ತ ಹುಡುಕಾಡಿ, ನಂತರ ಬೀಗ ತೆರೆದು ಒಳಗಡೆ ಹೋಗಿ ಪರಿಶೀಲನೆ ನಡೆಸಿದಾಗ,ಉದಯ್ ಅವರು ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಉದಯ್ ಅವರು ಚಾತ್ರ ಎಂಟರ್ಪ್ರೈಸಸ್ ಅಂಗಡಿಯನ್ನು ನಡೆಸುತ್ತಿದ್ದು, ವ್ಯವಹಾರ ಕೂಡ ಚೆನ್ನಾಗಿಯೇ ಇತ್ತು.‌ ಎಲ್ಲರೊಂದಿಗೆ ಬೆರೆಯುತ್ತಿದ್ದ ಕಾರಣ ಜನರ ಪ್ರೀತಿಗೂ ಪಾತ್ರರಾಗಿದ್ದರು.‌ ಆದರೂ ಈ ರೀತಿ ಮಾಡಿಕೊಳ್ಳಲು ಕಾರಣ ಏನೆಂಬುದು ತಿಳಿದುಬಂದಿಲ್ಲ. ಪತಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪತ್ನಿ ಅಕ್ಷರ ಚಾತ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories
ಪುತ್ತೂರು

ಪುತ್ತೂರಿನ ಹುಲಿ ರಾಧಣ್ಣ ಇನ್ನಿಲ್ಲ..!

ಪುತ್ತೂರಿನ ಹುಲಿ ರಾಧಣ್ಣ ಇನ್ನಿಲ್ಲ..!
– ಹುಲಿ ಕುಣಿತದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದ ಕಲಾವಿದ
– ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಕರಾವಳಿ ಜನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಪುತ್ತೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಪಿಲಿ(ಹುಲಿ) ರಾಧಣ್ಣ ಎಂದೇ ಖ್ಯಾತರಾಗಿದ್ದ, ರಾಧಾಕೃಷ್ಣ ಶೆಟ್ಟಿ ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಹುಲಿ ಕುಣಿತದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳ ಮೂಲಕ, ವಿಶಿಷ್ಟ ಶೈಲಿಯನ್ನು ತಂದುಕೊಟ್ಟ ಹೆಸರಿಗೆ ಇವರು ಖ್ಯಾತರಾಗಿದ್ದರು. ಯಾವುದೇ ವಿಶೇಷ ಆಚರಣೆಯ ಸಂದರ್ಭದಲ್ಲಿ, ಅದಕ್ಕೆ ಧಕ್ಕೆಬಾರದಂತೆ ವೇಷ ಹಾಕಿ ಕುಣಿಯುವುದು ಇವರ ವಿಶಿಷ್ಟತೆಯಾಗಿತ್ತು. ಸುಮಾರು 65 ವರ್ಷಗಳ ಹಿಂದೆ ಹುಲಿ ಕುಣಿತಕ್ಕೆ ಇದ್ದವರು ಇಬ್ಬರೇ ಹುಲಿಗಳು. ಒಬ್ಬರು ಹುಲಿ ಸಂಕಪ್ಪಣ್ಣ ಮತ್ತು ಹುಲಿ ಗಂಗಣ್ಣ. ಹುಲಿ ಸಂಕಪ್ಪಣ್ಣ ಅವರ ಮಗನೇ ಹುಲಿ ರಾಧಣ್ಣ. 30 ವರ್ಷಗಳ ಕಾಲ ಹುಲಿ ವೇಷದಲ್ಲಿ ಕುಣಿದಿದ್ದ ಸಂಕಪ್ಪಣ್ಣ ಅವರು, ತಮ್ಮ ಮಗ ರಾಧಾಕೃಷ್ಣನನ್ನು 9ನೇ ವಯಸ್ಸಿಗೆ ಹುಲಿಯ ವೇಷ ತೊಡಿಸಿ, ಕುಣಿಸಿದರು. ಹೀಗಾಗಿ ರಾಧಾಕೃಷ್ಣ ಅವರು ಮೊದಲ ಹುಲಿಮರಿ(ಕಿನ್ನಿ ಪಿಲಿ) ಎಂದು ಪುತ್ತೂರಿನ ಸುತ್ತಮುತ್ತಲ ಜನರಿಂದ ಕರೆಸಿಕೊಳ್ಳುವ ಮೂಲಕ ಈ ಕ್ಷೇತ್ರದಲ್ಲಿ ಖ್ಯಾತನಾಮರಾದರು. ಅವರ ನಿಧನಕ್ಕೆ ಎಲ್ಲೆಡೆ ಶ್ರದ್ಧಾಂಜಲಿ ಕೇಳಿ ಬರುತ್ತಿದೆ.

Categories
ಪುತ್ತೂರು

ಪುತ್ತೂರು ಮಾಳಿಗೆ ಡಾಕ್ಟರ್ ಇನ್ನಿಲ್ಲ..!

ಪುತ್ತೂರು ಮಾಳಿಗೆ ಡಾಕ್ಟರ್ ಇನ್ನಿಲ್ಲ..!
– ಬಡವರು, ನಿರ್ಗತಿಕರಿಗೆ ವೈದ್ಯಕೀಯ ಸೇವೆ ಉಚಿತವಾಗಿ ನೀಡಿದ ವೈದ್ಯ
– ಧಾರ್ಮಿಕ, ಕಲೆ, ಸಮಾಜ ಸೇವೆಯಲ್ಲಿ ಕೂಡ ಹೆಸರು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಮಾಳಿಗೆ ಡಾಕ್ಟರ್ ಇದೀಗ ನೆನಪು ಮಾತ್ರ. ಪುತ್ತೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖ್ಯಾತಿ ಪಡೆದಿದ್ದ, ಶತಾಯುಷಿ ಡಾ. ಮುದ್ರಾಜೆ ರಾಮಚಂದ್ರ ಭಟ್ ಅವರು ಸೋಮವಾರ ರಾತ್ರಿ ಹೃದಯಘಾತದಿಂದ ನಿಧನನರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನೂರು ವರ್ಷಗಳನ್ನು ಇವರು ಪೂರೈಸಿದ್ದರು.‌
ಉಪ್ಪಿನಂಗಡಿ ಸುತ್ತಮುತ್ತ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದ ಅವರು, ಹಿಂದಿನ ಕಾಲದಲ್ಲಿ ಸರ್ಕಾರದ ನಿಯಮದಂತೆ ಇಳಂತಿಲ್ಲ, ನೆಲ್ಯಾಡಿ, ಶಿರಾಡಿ ಮೊದಲಾದ ಕಡೆ ಪ್ರತಿವಾರ ಸೈಕಲ್ ನಲ್ಲಿ ತೆರಳಿ, ಅಲ್ಲಿನ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದರು. ಉಪ್ಪಿನಂಗಡಿಯ ಹಳೆ ಬಸ್ ಸ್ಟ್ಯಾಂಡ್ ಪಕ್ಕದ ಕಟ್ಟಡವೊಂದರ, ಮೊದಲ ಮಹಡಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದರಿಂದ ಜನರ ಬಾಯಲ್ಲಿ ಇವರು ಮಾಳಿಗೆ ಡಾಕ್ಟರ್ ಎಂದೇ ಹೆಸರುಗಳಿಸಿದರು. ಬಡಜನರಿಗೆ ಉಚಿತ ಚಿಕಿತ್ಸೆ ಮತ್ತು ಔಷದೋಪಚಾರವನ್ನು ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ಕೇವಲ ವೈದ್ಯರಾಗಿ ಅಷ್ಟೇ ಅಲ್ಲದೆ ಶ್ರೀಲಕ್ಷ್ಮೀ ನಾರಾಯಣ ಸಂಗೀತ ಶಾಲೆಯ ಅಧ್ಯಕ್ಷರಾಗಿ, ಶ್ರೀಸಹಸ್ರಲಿಂಗ ಮಹಾಕಾಳಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಇನ್ನು ಹಲವಾರು ಸಂಘ ಸಂಸ್ಥೆಗಳಿಗೆ ಸಹಕಾರವನ್ನು ನೀಡುವ ಮೂಲಕ, ಧಾರ್ಮಿಕ ಸೇವೆ ಮತ್ತು ಕಲಾ ಸೇವೆಯಲ್ಲೂ ನಿರತರಾಗಿದ್ದರು.

Categories
ಪುತ್ತೂರು

ಸುಳ್ಯ, ಪುತ್ತೂರು ಭಾರೀ ಮಳೆ: ಅಡಿಕೆ ಕೊಳೆ..!

ಸುಳ್ಯ, ಪುತ್ತೂರು ಭಾರೀ ಮಳೆ: ಅಡಿಕೆ ಕೊಳೆ..!
– ಕರಾವಳಿಯಲ್ಲೂ ಈ ವರ್ಷ ಅತ್ಯಂತ ಹೆಚ್ಚು ಮಳೆ
– ಅಡಿಕೆ ಔಷಧಿ ಸಿಂಪಡಿಸಲು ಮಳೆಯ ಅಡ್ಡಿ…!

ನಮ್ಮೂರ್ ಎಕ್ಸ್ ಪ್ರೆಸ್ ಕರಾವಳಿ
ಸುಳ್ಯ/ಪುತ್ತೂರು: ಈ ಸಲ ಮಳೆಯ ಆರ್ಭಟದಿಂದಾಗಿ, ಕರಾವಳಿ ಭಾಗದ ಕೆಲವು ಪ್ರದೇಶಗಳಲ್ಲಿ ವಾರದೊಳಗಾಗಿ ಅಡಿಕೆ ಮರಗಳೇ ಖಾಲಿಯಾಗಿ ಬಿಡುವ ಆತಂಕ ಸೃಷ್ಟಿಯಾಗಿದೆ. ಕರಾವಳಿ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಅದರೆ ಇಲ್ಲಿ ಈಗ ಅಡಿಕೆಗೆ ರೋಗ ಭೀತಿ ಎದುರಾಗಿದೆ.
ಔಷಧಿಯನ್ನು ಸಿಂಪಡಿಸಲು ಮಳೆಯು ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಕೊಳೆರೋಗ ಉಲ್ಬಣಗೊಳ್ಳುತ್ತಿದೆ. ದಿನಕಳೆದಂತೆ ಕೊಳೆರೋಗ ಪೀಡಿತ ಅಡಿಕೆ ಮರಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಬೆಳೆಗಾರರಲ್ಲಿ ಭಯವನ್ನುಂಟು ಮಾಡಿದೆ. ಹೀಗಾಗಿ ಉಳಿದ ಮರಗಳನ್ನು ಉಳಿಸಿಕೊಳ್ಳುವಲ್ಲಿ ಅಡಿಕೆ ಬೆಳೆಗಾರರು ಶ್ರಮಪಡುತ್ತಿದ್ದಾರೆ. ಒಮ್ಮೆ ಔಷಧಿಯನ್ನು ಸಿಂಪಡಿಸಿದರೆ ಮೂವತ್ತೈದರಿಂದ ನಲವತ್ತು ದಿನಗಳ ಒಳಗಾಗಿ ಮತ್ತೊಮ್ಮೆ ಸಿಂಪಡಿಸಬೇಕಾಗುತ್ತದೆ. ಆದರೆ ಮಳೆ ಕಡಿಮೆಯಾದ ಸಂದರ್ಭದಲ್ಲಿ, ಒಂದು ಕಡೆ ಕೆಲವು ಮರಗಳಿಗೆ ಸಿಂಪಡಿಸಿದರೆ ಮತ್ತು ಕೆಲವು ಮರಗಳಿಗೆ ಔಷಧಿಯನ್ನು ಸಿಂಪಡಿಸುವ ಮೊದಲೇ ಮಳೆ ಪುನಃ ಪ್ರಾರಂಭವಾಗುತ್ತದೆ. ಅಲ್ಲದೆ ಮಳೆ ಜಿನುಗುತ್ತಲೇ ಇರುವುದರಿಂದ, ಔಷಧಿಯನ್ನು ಸಿಂಪಡಿಸಿದರೂ ಅವುಗಳಿಗೆ ತಾಗದೆ ಪ್ರಯೋಜನವಿಲ್ಲದಂತಾಗಿದೆ
ಅಡಿಕೆ ಪ್ರಮುಖ ಬೆಳೆ ಆಗಿರುವ ಸುಳ್ಯ, ಪುತ್ತೂರು ಭಾಗದಲ್ಲಿ ಈ ಬಾರಿ ಅಡಿಕೆ ಕೊಳೆ ರೋಗ ಹೆಚ್ಚಾಗುವ ಆತಂಕ ಎದುರಾಗಿದೆ.
ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥರಾದ ವಿನಾಯಕ ಹೆಗ್ಡೆ ಅವರು ಕೊಳೆ ರೋಗ ಹರಡುವ ಕಾಲ ಇದಾಗಿದ್ದು, ಗಾಳಿಯಿಂದ ಮತ್ತಷ್ಟು ಹರಡುವ ಸಾಧ್ಯತೆ ಎದುರಾಗಿದೆ. ಮೆಟಾಲಾಕ್ಸಿಲ್ 35 ಅನ್ನು 1.5 ಗ್ರಾಂ ನಷ್ಟು ಪ್ರತಿ ಒಂದು ಲೀಟರ್ ನೀರಿಗೆ ಸೇರಿಸಿ ಗೊನೆಗೆ ಸಿಂಪಡಿಸಬೇಕು, ಸ್ವಲ್ಪ ದಿನದ ನಂತರ ಬೋರ್ಡೋ ದ್ರಾವಣವನ್ನು ಸಿಂಪಡಿಸಿದರೆ ಕೊಳೆರೋಗ ಬಾರದಂತೆ ತಡೆಗಟ್ಟಬಹುದು ಎಂಬ ಸಲಹೆಯನ್ನು ನೀಡಿದ್ದಾರೆ.