Categories
ಉಡುಪಿ ಕರಾವಳಿ

ವಿಷದ ಬಾಟಲಿಯನ್ನು ನುಂಗಿದ ನಾಗರ ಹಾವು!

ವಿಷದ ಬಾಟಲಿಯನ್ನು ನುಂಗಿದ ನಾಗರ ಹಾವು!
– ಹಾವನ್ನು ಕಾಪಾಡಿದ ಉರಗತಜ್ಞ ಗುರುರಾಜ್ ಸನಿಲ್

NAMMUR EXPRESS NEWS
ಉಡುಪಿ: ವಿಷದ ಬಾಟಲಿಯನ್ನು ನಾಗರಹಾವೊಂದು ನುಂಗಿ ಒದ್ದಾಡುತ್ತಿದ್ದ ಘಟನೆ ಉಡುಪಿ ಜಿಲ್ಲೆಯ ನೀರೆ ಬೈಲೂರಿನಲ್ಲಿ ನಡೆದಿದೆ. ಬಳಿಕ ಬಾಟಲಿಯನ್ನು ಸೇಫಾಗಿ ಹೊರತೆಗೆಯಲಾಯಿತು. ಕೃಷಿಸಂಬಂಧಿ ಕೆಲಸಕ್ಕೆಂದು ತಂದಿಟ್ಟ ವಿಷಯುಕ್ತ ಬಾಟಲಿಯನ್ನು ನಾಗರಹಾವು ನುಂಗಿತ್ತು. ತಕ್ಷಣ ಉಡುಪಿಯ ಉರಗತಜ್ಞ ಗುರುರಾಜ್ ಸನಿಲ್ ಗೆ ಕರೆ ಮಾಡಲಾಯಿತು. ಸ್ಥಳಕ್ಕೆ ಆಗಮಿಸಿದ ಗುರುರಾಜ್ ಸನಿಲ್ ಹಾವನ್ನು ಹಿಡಿದು ಪೂರ್ತಿ ಹೊಟ್ಟೆ ಸೇರಿದ್ದ ವಿಷದ ಬಾಟಲಿಯನ್ನು ಬಹಳ ಜಾಗರೂಕತೆಯಿಂದ ಹೊರ ತೆಗೆದಿದ್ದಾರೆ. ಬಳಿಕ ಸ್ಥಳೀಯರ ವಿನಂತಿಯ ಮೇರೆಗೆ ಹಾವನ್ನು ನೀರೆ ಬೈಲೂರು ಸಮೀಪದ ಕಾಡಿಗೆ ಬಿಡಲಾಗಿದೆ.

Categories
ಚಿಕ್ಕಮಗಳೂರು ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

– ಚಿಕ್ಕಮಗಳೂರು : ಭದ್ರಾ ನದಿಯಲ್ಲಿ ತೇಲಿದ ರುಂಡ ಕತ್ತರಿಸಿದ ಕುರಿಗಳ ಶವ!
– ಕೊಡಗು :ಕಾಡಾನೆ ದಾಳಿಯಿಂದ ವೃದ್ಧೆಯ ಕಾಲು ಮುರಿತ!
– ಗದಗ : ಚಿರತೆ ದಾಳಿಯಿಂದ ನಾಲ್ಕು ಜನರಿಗೆ ಗಾಯ!
– ಬೆಂಗಳೂರು : ಹೆಡ್ ಫೋನ್ ತಂದ ಕುತ್ತು..!
– ಸಕಲೇಶಪುರ : ಇಬ್ಬರ ಮೇಲೆ ಕಾಡಾನೆ ದಾಳಿ

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿ ಭದ್ರಾ ನದಿಯ ದಡದಲ್ಲಿ ಭಾರಿ ಪ್ರಮಾಣದ ವಾಮಾಚಾರ ನಡೆದಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಭದ್ರಾ ನದಿ ಹೆಬ್ಬಾಳೆ ಸೇತುವೆ ಬಳಿ ಘಟನೆ ನಡೆದಿದೆ. ವಾಮಾಚಾರಕ್ಕೆ ಕಪ್ಪು ಬಣ್ಣದ ಕುರಿ ಮೇಕೆಗಳನ್ನು ಬಲಿ ಕೊಡಲಾಗಿದೆ. ರುಂಡ ಮುಂಡ ಬೇರ್ಪಡಿಸಿದ ಏಳೆಂಟು ಕುರಿ- ಮೇಕೆಗಳ ಶವಗಳು ನದಿಯಲ್ಲಿ ತೇಲುತ್ತಿದ್ದು, ಇದನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ನದಿ ದಡದಲ್ಲಿ ವಾಮಾಚಾರಕ್ಕೆ ಬಳಸಿರುವ ವಸ್ತುಗಳು ಕಂಡುಬಂದಿವೆ. ಕೂದಲು, ಉಗುರು, ಮಣ್ಣಿನ ಬೊಂಬೆಗಳು, ರಕ್ತ, ನಿಂಬೆಹಣ್ಣು, ಕುಂಕುಮ ಇತ್ಯಾದಿ ವಾಮಾಚಾರಕ್ಕೆ ಬಳಸಿದ್ದು ಕಂಡುಬಂದಿದೆ. ತಡರಾತ್ರಿ ವೇಳೆ ಈ ಕೃತ್ಯ ನಡೆದಿದೆ. ಕಳಸ- ಹೊರನಾಡು ತೀರ್ಥಕ್ಷೇತ್ರಗಳಿಗೆ ಹೋಗುವ ಮುಖ್ಯರಸ್ತೆ ಬಳಿಯೇ ಕೃತ್ಯ ನಡೆದಿದ್ದು, ಯಾರ ಗಮನಕ್ಕೂ ಬಂದಿಲ್ಲ. ಸ್ಥಳೀಯ ನಿವಾಸಿಗಳಲ್ಲಿ ವಾಮಾಚಾರದ ಬಗ್ಗೆ ಆತಂಕ ಮೂಡಿದ್ದು, ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ನದಿಯಿಂದ ಮೇಕೆಗಳ ಶವ ಹೊರಕ್ಕೆ ತೆಗೆದಿದ್ದಾರೆ. ವಾಮಾಚಾರದ ರಹಸ್ಯ ಭೇದಿಸಲು ಮುಂದಾಗಿದ್ದಾರೆ.

ಕಾಡಾನೆ ದಾಳಿಯಿಂದ ವೃದ್ಧೆಯ ಕಾಲು ಮುರಿತ

ಕೊಡಗು: ಕೊಡಗಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಕಾಡಾನೆ ಅಟ್ಯಾಕ್‌ ಮಾಡಿದ್ದರಿಂದ ವೃದ್ಧೆಯ ಕಾಲು ಮುರಿದಿದೆ. ಚಿನ್ನೇನಹಳ್ಳಿಯ ವೆಂಕಟಮ್ಮ ಆನೆದಾಳಿಗೆ ಒಳಗಾದ ವಯೋವೃದ್ಧೆ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕಣಿವೆ ಸಮೀಪದ ಚಿನ್ನೇನಹಳ್ಳಿಯಲ್ಲಿ ಘಟನೆ ನಡೆದಿದೆ. ಇಂದು ಮುಂಜಾನೆ ವೆಂಕಟಮ್ಮ ಬಹಿರ್ದೆಸೆಗೆ ತೆರಳಿದಾಗ ಸಲಗ ದಿಢೀರನೆ ದಾಳಿ ನಡೆಸಿದೆ. ಗಾಯಾಳು ವೆಂಕಟಮ್ಮ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಚಿರತೆ ದಾಳಿಯಿಂದ ನಾಲ್ಕು ಜನರಿಗೆ ಗಾಯ

ಗದಗ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ನಾಲ್ಕು ಜನರ ಮೇಲೆ ಅಟ್ಯಾಕ್‌ ಮಾಡಿ ಗಾಯಗೊಳಿಸಿದೆ. ಜೀಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆಯಷ್ಟೇ ತೋಟದಲ್ಲಿ ಕೆಲಸ ಮಾಡುತ್ತಿದ್ದಾತನ‌ ಮೇಲೆ ದಾಳಿ ಮಾಡಿದ್ದ ಚಿರತೆ, ಸಂಜೆ ವೇಳೆ ಮತ್ತೆ‌ ನಾಲ್ಕು ಜನರ‌ ಮೇಲೆ ದಾಳಿ ನಡೆಸಿದೆ. ಅರಣ್ಯ ಸಿಬ್ಬಂದಿ ಸೇರಿದಂತೆ ಸ್ಥಳಿಯರ ಮೇಲೆ‌ ಎರಗಿದೆ. ದಾಳಿಗೊಳಗಾದವರು ಆಸ್ಪತ್ರೆಗೆ‌ ದಾಖಲಾಗಿದ್ದಾರೆ. ಅರಣ್ಯ‌ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಚಿರತೆ ಸೆರೆ ಹಿಡಿಯಲು‌ ಶತಾಯಗತಾಯ‌ ಪ್ರಯತ್ನ ನಡೆಸಿದ್ದಾರೆ. ಚಿರತೆ‌ ದಾಳಿಯಿಂದ ಸುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಹೆಡ್ ಫೋನ್ ತಂದ ಕುತ್ತು..!

ಬೆಂಗಳೂರು: ಯುವಕನೊಬ್ಬ ಇಯರ್‌ಫೋನ್ ಹಾಕೊಂಡು ರೈಲ್ವೇ ಟ್ರ್ಯಾಕ್ ಮೇಲೆ ನಡೀತಿರೋವಾಗ, ರೈಲು ಬಂದು ಡಿಕ್ಕಿ ಹೊಡೆದು, ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಬೆಂಗಳೂರಿನ ಯಲಹಂಕ ಬಳಿ ನಡೆದಿದೆ. ಈತ 19 ವರ್ಷದ ಬಿ ಟೆಕ್ ವಿದ್ಯಾರ್ಥಿ ಶಿವ ಸೂರ್ಯ ಎಂದು ಗುರುತಿಸಲಾಗಿದೆ. ಈತ ಇಯರ್‌ಫೋನ್ ಧರಿಸಿ ಮ್ಯೂಸಿಕ್ ಕೇಳುತ್ತಿದ್ದ ಕಾರಣವೋ ಅಥವಾ ಮೊಬೈಲ್‌ನಲ್ಲಿ ಮಾತನಾಡುತಿದ್ದ ಕಾರಣವೋ ರೈಲು ಹತ್ತಿರ ಬಂದ್ರೂ, ಅದರ ಸೌಂಡ್ ಕೇಳದೆ ಈ ಅಪಘಾತ ಸಂಭವಿಸಿರಬಹುದು ಎಂದು ರೈಲ್ವೇ ಪೋಲೀಸರು ಹೇಳಿದ್ದಾರೆ. ಕಿವಿಯಲ್ಲಿ ಇಯರ್‌ಫೋನ್ ಪ್ಲಗ್ ಇನ್ ಮಾಡಿಕೊಂಡ ಸ್ಥಿತಿಯಲ್ಲೇ ಈತನ ಮೃತದೇಹ ಪತ್ತೆಯಾಗಿದೆ.

ಇಬ್ಬರ ಮೇಲೆ ಕಾಡಾನೆ ದಾಳಿ; ಪರಿಸ್ಥಿತಿ ಚಿಂತಾಜನಕ

ಸಕಲೇಶಪುರ: ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಕೂಲಿ ಕಾರ್ಮಿಕನೋರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ. ತಾಲೂಕಿನ ಹೆಬ್ಬನಹಳ್ಳಿ ಸಮೀಪದ ಲಕ್ಕುಂದದಲ್ಲಿ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನಿಂದ ಕೂಲಿ ಕೆಲಸ ಮಾಡಲು ಆಗಮಿಸಿದ್ದ ರಮೇಶ್ (34) ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಮತ್ತೊರ್ವ ಶಾಶ್ವತ (34) ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಪಟ್ಟಣದ ಕ್ರಾರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಕಾಡಾನೆ ಹಾಗೂ ಮಾನವ ಸಂಘರ್ಷ ಮತ್ತೆ ಆರಂಭವಾಗಿರುವುದು ಜನರನ್ನು ಆತಂಕಕ್ಕೆ ತಳ್ಳಿದೆ.

Categories
ಬೆಂಗಳೂರು ರಾಜ್ಯ

ಫ್ರೀ ಬಸ್‌ ಎಫೆಕ್ಟಾ?

ಫ್ರೀ ಬಸ್‌ ಎಫೆಕ್ಟಾ?
– ಫ್ರೀ ಬಸ್‌ನಲ್ಲಿ ಮುಂದುವರಿದ ಕಿತ್ತಾಟ, ಹೆಣ್ಮಕ್ಕಳ ಚಪ್ಪಲಿ ಫೈಟಿಂಗ್‌!
– ಆಧಾರ್‌ ಕಾರ್ಡ್‌ ತೋರಿಸಮ್ಮ ಎಂದ ಲೇಡಿ ಕಂಡಕ್ಟರ್‌ ಮುಖವನ್ನೇ ಪರಚಿದಳು!
– ಜಸ್ಟ್‌ ಮುಟ್ಟಿದ್ದಕ್ಕೆ ವಿದ್ಯಾರ್ಥಿನಿಯ ಕಪಾಳಕ್ಕೆ ಭಾರಿಸಿದ ಕಂಡಕ್ಟರ್‌!

NAMMUR EXPRESS NEWS
ಬೆಂಗಳೂರು: ಫ್ರೀ ಬಸ್‌ ಎಫೆಕ್ಟ್‌ನಿಂದಾಗಿ ಹೆಣ್ಮಕ್ಕಳ ಹೊಡಿಬಡಿ ಮುಂದುವರಿದಿದೆ. ಕೆಲವೆಡೆ ಕಂಡಕ್ಟರ್‌ ಹಾಗೂ ಪ್ರಯಾಣಿಕರ ನಡುವೆ ವಾರ್‌ ನಡೆದರೆ, ಇತ್ತ ಮಹಿಳೆಯರು ಸೀಟು ವಿಚಾರದಿಂದ ಹಿಡಿದು ಕಿಟಕಿವರೆಗೆ ಕಿತ್ತಾಟ ಮುಂದುವರಿದಿದೆ. ಶಕ್ತಿ ಯೋಜನೆಯ ಸೈಡ್‌ ಎಫೆಕ್ಟ್‌ ಏನೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಸದ್ಯ ಫುಲ್ ರಷ್ ಆದ ಬಸ್‌ನಲ್ಲಿ ಮಹಿಳೆಯರಿಬ್ಬರು ಚಪ್ಪಲಿಯಲ್ಲಿ ಬಡಿದಾಡಿಕೊಂಡಿದ್ದಾರೆ. ಕಿಟಕಿ ತೆರಯುವ ವಿಚಾರಕ್ಕೆ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೆಜೆಸ್ಟಿಕ್‌ನಿಂದ ಪೀಣ್ಯಾ ಮಾರ್ಗವಾಗಿ ಹೊರಟ್ಟಿದ್ದ ಬಸ್‌ನಲ್ಲಿ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ರಾಜಾಜಿನಗರ ಸಮೀಪಿಸುವಾಗ ಕಿಟಕಿ ತೆಗೆಯುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿದ್ದಾರೆ. ಈ ವೇಳೆ ಚಪ್ಪಲಿ, ಶೂ ನಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಅವರ ಹೊಡೆದಾಟವನ್ನು ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆಯಿಡಿದಿದ್ದಾರೆ. ವಿಸ್ತಾರ ನ್ಯೂಸ್‌ಗೆ ಮಹಿಳೆಯರ ಚಪ್ಪಲಿ ಫೈಟ್‌ನ ವಿಡಿಯೋ ಲಭ್ಯವಾಗಿದೆ. ಇವರಿಬ್ಬರ ಗಲಾಟೆಯನ್ನು ಬಿಡಿಸಲು ಇತರೆ ಪ್ರಯಾಣಿಕರು ಮುಂದಾದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ. ಕಂಡಕ್ಟರ್‌ ಮಧ್ಯ ಪ್ರವೇಶದ ಬಳಿಕ ಗಲಾಟೆ ತಣ್ಣಗೆ ಆಗಿತ್ತು. ಮಹಿಳೆಯರಿಬ್ಬರ ಗಲಾಟೆಗೆ ಸಹ ಪ್ರಯಾಣಿಕರು ಛೀಮಾರಿ ಹಾಕಿದ್ದರು.

 ಆಧಾರ್‌ ಕಾರ್ಡ್‌ ತೋರಿಸಮ್ಮ ಎಂದ ಲೇಡಿ ಕಂಡಕ್ಟರ್‌ ಮುಖವನ್ನೇ ಪರಚಿದಳು!

ಬೆಂಗಳೂರು : ಯುವತಿಯೊಬ್ಬಳು ಬಿಎಂಟಿಸಿ ಬಸ್‌ನ ಮಹಿಳಾ ಕಂಡಕ್ಟರ್‌ಗೆ ಹಲ್ಲೆ ನಡೆಸಿದ್ದಳು. ಬೆಂಗಳೂರಿನ ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ ನಡೆದಿತ್ತು. ಮೊನಿಷಾ ಎಂಬಾಕೆ ಬಿಎಂಟಿಸಿ ಕಂಡಕ್ಟರ್‌ ಸುಕನ್ಯಾ ಎಂಬುವವರಿಗೆ ಹಲ್ಲೆ ನಡೆಸಿದ್ದಳು. ಮತ್ತಿಕೆರೆ ಬಜಾಜ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಮೊನಿಷಾ ಬೆಳಗ್ಗೆ 9:45ಕ್ಕೆ ಬಿಎಂಟಿಸಿ ಬಸ್‌ ಏರಿದ್ದಳು. ಈ ವೇಳೆ ಕಂಡಕ್ಟರ್‌ ಸುಕನ್ಯಾ ಟಿಕೆಟ್‌ ಕೊಡುವ ಮುನ್ನ ಆಧಾರ್‌ ಕಾರ್ಡ್‌ ತೋರಿಸುವಂತೆ ಕೇಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮೊನಿಷಾಳ ಉಗುರು ಸುಕನ್ಯಾರ ಮುಖಕ್ಕೆ ಪರಚಿದೆ.

ನಂತರ ಇಬ್ಬರ ನಡುವೆ ಕಿತ್ತಾಟ ಶುರುವಾಗಿತ್ತು. ಇತರೆ ಪ್ರಯಾಣಿಕರು ಇವರಿಬ್ಬರ ಕಿತ್ತಾಟವನ್ನು ಬಿಡಿಸಲು ಮುಂದಾದರೂ ಸಾಧ್ಯವಾಗಿಲ್ಲ. ಇಬ್ಬರು ಆರೋಪ-ಪ್ರತ್ಯಾರೋಪವನ್ನು ಮಾಡಿಕೊಂಡಿದ್ದರು. ಕಂಡಕ್ಟರ್‌ ಸುಕನ್ಯಾ ಅವರೇ ಮೊದಲು ಹೊಡೆದಿದ್ದು, ಆಕಸ್ಮಿಕವಾಗಿ ಬೆರಳು ಅವರ ಮುಖಕ್ಕೆ ಪರಚಿದೆ ಅಷ್ಟೇ ಎಂದಿದ್ದರು. ಇತ್ತ ಇವರಿಬ್ಬರ ಜಗಳ ತರಾಕಕ್ಕೇರುತ್ತಿದ್ದಂತೆ ರಸ್ತೆ ಮಧ್ಯೆ ಬಸ್‌ ನಿಲ್ಲಿಸಲಾಗಿತ್ತು. ನಂತರ ಸಹ ಪ್ರಯಾಣಿಕರು ಯುವತಿಗೆ ತರಾಟೆ ತೆಗೆದುಕೊಂಡಿದ್ದರು

ಜಸ್ಟ್‌ ಮುಟ್ಟಿದ್ದಕ್ಕೆ ವಿದ್ಯಾರ್ಥಿನಿಯ ಕಪಾಳಕ್ಕೆ ಭಾರಿಸಿದ ಕಂಡಕ್ಟರ್‌!

ಧಾರವಾಡ: ತಾಳ್ಮೆ ಕಳೆದುಕೊಂಡ ಬಸ್‌ ಕಂಡಕ್ಟರ್‌ವೊಬ್ಬ ವಿದ್ಯಾರ್ಥಿನಿಯ ಕಪಾಳಕ್ಕೆ ಭಾರಿಸಿರುವ ಘಟನೆ ಧಾರವಾಡದ ಕೆಲಗೇರಿ ಬಡಾವಣೆ ಬಳಿ ನಡೆದಿತ್ತು. ಕೆಲಗೇರಿ ನಿವಾಸಿಯಾದ ಪ್ರಕೃತಿ ಎಂಬಾಕೆಗೆ ಕಂಡಕ್ಟರ್‌ ಕಪಾಳಮೋಕ್ಷ ಮಾಡಿದ್ದರು. ಸಾಧನಕೆರೆಯಲ್ಲಿ ಶಾಲೆಯಿಂದ ಮರಳಿ ಮನೆಗೆ ವಾಪಸ್‌ ಬರುವಾಗ ಈ ಘಟನೆ ನಡೆದಿತ್ತು. ಧಾರವಾಡದಿಂದ ಮುಗದ ಗ್ರಾಮಕ್ಕೆ ಬಸ್‌ವೊಂದು ತೆರಳುತಿತ್ತು. ರಶ್‌ ಇದ್ದ ಬಸ್ಸಿನಲ್ಲಿ ಕಂಡಕ್ಟರ್‌ ಹಣವನ್ನು ಎಣಿಸಲು ಮುಂದಾಗಿದ್ದರು. ಈ ವೇಳೆ ಅಚಾನಕ್‌ ಆಗಿ ವಿದ್ಯಾರ್ಥಿನಿ ಪ್ರಕೃತಿಯ ಬ್ಯಾಗ್‌ ಕಂಡಕ್ಟರ್‌ಗೆ ಟಚ್‌ ಆಗಿತ್ತು.

ಆಗ ಕಂಡಕ್ಟರ್‌ ಕೈಯಲ್ಲಿದ್ದ ಟಿಕೆಟ್‌ ಹಣವು ಕೆಳಗೆ ಬಿದ್ದಿತ್ತು. ಇದರಿಂದ ಕೆರಳಿ ಕೆಂಡವಾದ ಕಂಡಕ್ಟರ್‌ ಸಿಟ್ಟಿನಲ್ಲಿ ವಿದ್ಯಾರ್ಥಿನಿಯ ಕಪಾಳಕ್ಕೆ ಹೊಡೆದಿದ್ದರು. ಕಂಡಕ್ಟರ್‌ ಹೊಡೆತಕ್ಕೆ ಕೆನ್ನೆ ಮೇಲೆ ಬರೆ ಬಿದ್ದಿತ್ತು. ನೋವಿನಿಂದ ಬಸ್‌ ಇಳಿದ ಬಾಲಕಿ ಬಿಕ್ಕಿ ಬಿಕ್ಕಿ ಅತ್ತಿದ್ದಳು. ಬಾಲಕಿಗೆ ಕಂಡಕ್ಟರ್ ಕಪಾಳ ಮೋಕ್ಷ ಮಾಡಿದ್ದಕ್ಕೆ ಆಕ್ರೋಶಗೊಂಡ ಪಾಲಕರು ಹಾಗೂ ಗ್ರಾಮಸ್ಥರು ದಿಢೀರ್‌ ಪ್ರತಿಭಟನೆ ನಡೆಸಿದ್ದರು. ಕಂಡಕ್ಟರ್ ವರ್ತನೆಗೆ ಕಿಡಿಕಾರಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದರು. ಕಂಡಕ್ಟರ್ ಇಲ್ಲಿಗೆ ಬಂದು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದರು. ಬಳಿಕ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದರು. ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಬಂದ ಕಂಡಕ್ಟರ್‌ ಪಾಲಕರ ಬಳಿ ಕ್ಷಮೆ ಕೇಳಿದ್ದರಿಂದ ಪ್ರಕರಣವು ಸುಖಾಂತ್ಯ ಕಂಡಿತ್ತು.

Categories
ತೀರ್ಥಹಳ್ಳಿ ರಾಜ್ಯ ಶಿವಮೊಗ್ಗ

ಅಪೆಕ್ಸ್‌ ಬ್ಯಾಂಕ್‌ಗೆ ಆ‌ರ್.ಎಂ.ಎಂ: ಮತ್ತೆ ಅಧ್ಯಕ್ಷಗಿರಿ?

ಅಪೆಕ್ಸ್‌ ಬ್ಯಾಂಕ್‌ಗೆ ಆ‌ರ್.ಎಂ.ಎಂ: ಮತ್ತೆ ಅಧ್ಯಕ್ಷಗಿರಿ?
– ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರ ಸ್ಥಾನಕ್ಕೆ ವಿಜಯ್ ದೇವ್ ರಾಜೀನಾಮೆ
– ಮಂಜುನಾಥ ಗೌಡ ನಾಮ ನಿರ್ದೇಶನ: ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ

NAMMUR EXPRESS NEWS
ತೀರ್ಥಹಳ್ಳಿ: ನಿಗಮ ಮಂಡಳಿ ಒಂದು ಸುತ್ತು ಮುಗಿಯುತ್ತಿದ್ದಂತೆ ಇನ್ನಷ್ಟು ಪ್ರಮುಖ ಹುದ್ದೆಗಳ ನೇಮಕಕ್ಕೆ ಸರ್ಕಾರ ಮುಂದಾಗಿದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಸಹಕಾರಿ ನಾಯಕ ಡಾ.ಆ‌ರ್.ಎಂ.ಮಂಜುನಾಥ ಗೌಡ ಅವರನ್ನು ಅಪೆಕ್ಸ್‌ ಬ್ಯಾಂಕ್ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿಕೊಳ್ಳಲು ಅಪೆಕ್ಸ್‌ ಬ್ಯಾಂಕ್‌ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಸರ್ಕಾರದ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮಂಜುನಾಥ ಗೌಡ ಪ್ರಭಾವಿ ನಾಯಕ. ಜತೆಗೆ ಡಿಕೆಶಿ ಆಪ್ತ ವಲಯದಲ್ಲಿ ಇದ್ದಾರೆ. ಹೀಗಾಗಿ ಈ ಬೆಳವಣಿಗೆ ಮಹತ್ವ ಪಡೆದಿದೆ.

ವಿಜಯ ದೇವ್ ರಾಜೀನಾಮೆ

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಬಸವಾನಿ ವಿಜಯದೇವ್ ಈ ಹಿಂದೆ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರಾಗಿ ನಾಮನಿರ್ದೇಶನಗೊಂಡಿದ್ದರು. ಅವರು ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಖಾಲಿ ಉಳಿದಿತ್ತು. ಮಂಜುನಾಥ ಗೌಡ ಅವರ ನಿರ್ದೇಶಕ ಸ್ಥಾನ ಐದು ವರ್ಷಗಳ ಅವಧಿಗೆ ಇರುತ್ತದೆ. ಈ ಹಿಂದೆ ಅವರು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿದ್ದರು. ಈಗ ನಿರ್ದೇಶಕರಾಗಿ ನಾಮ ನಿರ್ದೇಶನಗೊಂಡಿದ್ದಾರೆ.ಹೀಗಾಗಿ ಅಧ್ಯಕ್ಷ ಸ್ಥಾನದಲ್ಲಿ ಕೂರುವ ಎಲ್ಲಾ ಸಾಧ್ಯತೆಗಳು ಇವೆ.

Categories
ಬೆಂಗಳೂರು ರಾಜ್ಯ

ಶೀಘ್ರದಲ್ಲಿ ತೆರೆಯಲಿದೆ ಹಗಲು ರಾತ್ರಿ ಹೋಟೆಲ್!

ಶೀಘ್ರದಲ್ಲಿ ತೆರೆಯಲಿದೆ ಹಗಲು ರಾತ್ರಿ ಹೋಟೆಲ್!
– ಬ್ರಾಂಡ್ ಬೆಂಗಳೂರು ಕಾರ್ಯಕ್ರಮದಡಿ ಹೊಸ ಯೋಜನೆ
– ರಾಜ್ಯದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನ ಬಂದ್

NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಶೀಘ್ರದಲ್ಲೇ ದಿನದ 24 ಗಂಟೆಯೂ ತೆರೆದಿರುತ್ತವೆ. ಮಹತ್ವಾಕಾಂಕ್ಷೆಯ ಬ್ರಾಂಡ್ ಬೆಂಗಳೂರು ಕಾರ್ಯಕ್ರಮದಡಿ ಟೆಕ್-ಕ್ಯಾಪಿಟಲ್‌ನ ಇಮೇಜ್ ಹೆಚ್ಚಿಸುವುದು ಇದರ ಗುರಿಯಾಗಿದೆ. ಆದರೆ ಅದರ ಜತೆ ಆಗುವ ಸಾಧಕ ಬಾಧಕಗಳ ಬಗ್ಗೆಯೂ ಚರ್ಚೆ ನಡೆಯಬೇಕಿದೆ. ಬ್ರಾಂಡ್ ಬೆಂಗಳೂರು ಕಾರ್ಯಕ್ರಮದಡಿ ಟೆಕ್-ಕ್ಯಾಪಿಟಲ್‌ನ ಇಮೇಜ್ ಹೆಚ್ಚಿಸುವುದು ಇದರ ಗುರಿಯಾಗಿದೆ. ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳನ್ನು ದಿನದ 24 ಗಂಟೆ ತೆರೆಯಲು ಅವಕಾಶ ನೀಡಬೇಕು ಎಂಬುದು ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್‌ನ ಬಹಳ ದಿನಗಳ ಬೇಡಿಕೆ ಬಾಕಿ ಉಳಿದಿದೆ. ಈ ಹಿಂದೆ ಬಿಜೆಪಿ ರಾಜ್ಯ ಸರ್ಕಾರ ಇದನ್ನು ಒಪ್ಪಿಕೊಂಡಿದ್ದರೂ, ಭದ್ರತಾ ಕಾರಣಗಳಿಂದ ಯಾವುದೇ ದೃಢ ನಿರ್ಧಾರ ಕೈಗೊಂಡಿರಲಿಲ್ಲ.

ಸಂಘದ ಸದಸ್ಯರೊಂದಿಗೆ ಶನಿವಾರ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರು. ಡಿಸಿಎಂ ಅವರನ್ನು ಭೇಟಿ ಮಾಡಿ ನಗರದಲ್ಲಿ 24 ಗಂಟೆಗಳ ಕಾಲ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಶಿವಕುಮಾರ್ ನಮ್ಮ ಬೇಡಿಕೆ ಆಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದು ವಾರ ಅಥವಾ 10 ದಿನಗಳಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೊರೆಂಟ್‌ಗಳು ದಿನದ 24 ಗಂಟೆ ತೆರೆಯಲು ಅನುಮತಿ ನೀಡುವ ಆದೇಶ ಹೊರಬೀಳಬಹುದುಎಂದು ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 24,000 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಹೋಟೆಲ್‌ಗಳಿವೆ, ಅವುಗಳಲ್ಲಿ ಶೇ. 10 ರಷ್ಟು ಹೋಟೆಲ್ ಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲು ಸಿದ್ಧವಾಗಿವೆ. ರಾತ್ರಿ 10 ಗಂಟೆಯ ನಂತರ ಹೋಟೆಲ್‌ಗಳನ್ನು ತೆರೆಯಲು ಪೊಲೀಸರ ವಿರೋಧದ ಕುರಿತು ಮಾತನಾಡಿದ ರಾವ್, ನಮ್ಮ ಬೇಡಿಕೆಯು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನೌಕರರು, ಆಟೋ ಮತ್ತು ಕ್ಯಾಬ್ ಚಾಲಕರು ಮತ್ತು ಇತರರಿಗೆ ಸಹಾಯ ಮಾಡಲಿದ್ದು, ಬ್ರಾಂಡ್ ಬೆಂಗಳೂರು ಉಪಕ್ರಮಕ್ಕೆ ಪೂರಕವಾಗಲಿದೆ ಎಂದು ಶಿವಕುಮಾರ್ ಭಾವಿಸಿದ್ದಾರೆ ಎಂದರು.

ರಾಜ್ಯದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನ ಬಂದ್

ಬೆಂಗಳೂರು: ರಾಜ್ಯದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಅವುಗಳ ಪರ ಜಾಹೀರಾತು, ಸೇವನೆಗೆ ಪ್ರಚೋದನೆ ಮತ್ತು ಸಂಗ್ರಹಣೆ ನಿಷೇಧಿಸಿ ಆರೋಗ್ಯ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಸಾರ್ವಜನಿಕರ ಆರೋಗ್ಯ ಕಾಪಾ ಡಲು ಸಂವಿಧಾನದ 47ನೇ ವಿಧಿಯಲ್ಲಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರ ಬಳಸಿ ಈ ಆದೇಶ ಹೊರಡಿಸಿದೆ. ತಂಬಾಕು ಅಥವಾ ನಿಕೋಟಿನ್‌ ಒಳಗೊಂಡ ಹುಕ್ಕಾ, ತಂಬಾಕು ರಹಿತ ಮತ್ತು ನಿಕೋಟಿನ್‌ ರಹಿತ ಹುಕ್ಕಾ, ಸ್ವಾದಭರಿತ, ಮೊಲಾಸಿಸ್‌, ಶಿಶಾ ಒಳಗೊಂಡ ಹುಕ್ಕಾಗಳನ್ನು ನಿಷೇಧಿಸಲಾಗಿದೆ.

ಆದೇಶ ಉಲ್ಲಂಘಿಸಿದವರ ವಿರುದ್ಧ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಗಳ (ಕೋಟ್ಪಾ) ಕಾಯ್ದೆ, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ ಅಗ್ನಿ ನಿಯಂತ್ರಣ ಮತ್ತು ಸುರಕ್ಷತಾ ಕಾಯ್ದೆಗಳ ಅಡಿ ಕ್ರಮ ಜರುಗಿಸುವುದಾಗಿ ಆದೇಶದಲ್ಲಿ ತಿಳಿಸಿದೆ. ‘ಕೋಟ್ಪಾ ಕಾಯ್ದೆಯಡಿ ಹುಕ್ಕಾವನ್ನು ತಂಬಾಕು ಎಂದು ಪರಿಗಣಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ. ಮಕ್ಕಳು ಮತ್ತು ವಿದ್ಯಾರ್ಥಿ ಗಳಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ಕಾಯ್ದೆ ಅಡಿಯಲ್ಲಿ ನಿಕೋಟಿನ್‌ ಅನ್ನು ವಿಷ ಎಂದು ಪರಿಗಣಿಸಲಾಗಿದೆ’ ಎಂಬ ವಿವರಣೆ ಆದೇಶದಲ್ಲಿದೆ.

Categories
ಚಿಕ್ಕಮಗಳೂರು ಮಲ್ನಾಡ್ ಶಿವಮೊಗ್ಗ

ಟಾಪ್ ನ್ಯೂಸ್ ಮಲ್ನಾಡ್

ಮಕ್ಕಳಿಗೆ ಬೈಕ್ ಕೊಟ್ಟರೆ ಹುಷಾರ್!
– ಶಿವಮೊಗ್ಗ: ಬಾಲಕನಿಗೆ ಬೈಕ್ ಕೊಟ್ಟ ಅಪ್ಪನಿಗೆ 30 ಸಾವಿರ ದಂಡ!
– ಶಿಕಾರಿಪುರ: ಚೂರಿ ಇರಿತ: ಇಬ್ಬರು ಅರೆಸ್ಟ್?
– ಚಿಕ್ಕಮಗಳೂರು: ಲಂಚ ತೆಗೆದುಕೊಂಡು ಸಿಕ್ಕಿಬಿದ್ದ ಸರ್ಕಾರಿ ಅಧಿಕಾರಿ!
– ಮಲೆನಾಡಲ್ಲಿ ಹೆಚ್ಚಾಗುತ್ತಿದೆ ಮಂಗನ ಕಾಯಲೆ!

NAMMUR EXPRESS NEWS
ಶಿವಮೊಗ್ಗ; ಚಾಲನಾ ಪರವಾನಗಿ (ಲೈಸೆನ್ಸ್) ಇಲ್ಲದಿದ್ದರೂ ಅಪ್ರಾಪ್ತ ವಯಸ್ಸಿನ ಮಗನಿಗೆ ಚಾಲನೆ ಮಾಡಲು ಸ್ಕೂಟರ್ ಕೊಟ್ಟಿದ್ದ ತಾಯಿಗೆ ಇಲ್ಲಿನ 3ನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ ₹30 ಸಾವಿರ ದಂಡ ವಿಧಿಸಿದೆ. ಕಳೆದ ಜನವರಿ 30ರಂದು ಪೂರ್ವ ಸಂಚಾರ ಠಾಣೆಯ ಪಿಎಸ್ಐ ನವೀನ್ ಕುಮಾರ್ ಮಠಪತಿ ನಗರದ ಎಸ್ ಪಿಎಂ ರಸ್ತೆಯ ಕೋಟೆ ಆಂಜನೇಯನ ದೇವಾಲಯದ ಹತ್ತಿರ ವಾಹನ ತಪಾಸಣೆ ಮಾಡುವಾಗ 17 ವರ್ಷದ ಬಾಲಕ ವಾಹನ ಚಾಲನಾ ಪರವಾನಗಿ ಇಲ್ಲದೆ ಸ್ಕೂಟರ್ ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದ. ಈ ಸಂಬಂಧ ವಾಹನದ ಮಾಲೀಕರಾದ ಬಾಲಕನ ತಾಯಿಯ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಿದ್ದರು. ಆರೋಪ ಪಟ್ಟಿ ಪರಿಶೀಲಿಸಿದ ನ್ಯಾಯಾಧೀಶರು ದಂಡ ವಿಧಿಸಿ ಆದೇಶಿಸಿದ್ದಾರೆ.

ಮಲೆನಾಡಲ್ಲಿ ಹೆಚ್ಚುತ್ತಿದೆ ಮಂಗನ ಕಾಯಲೆ!

ಚಿಕ್ಕಮಗಳೂರು: ಮಂಗನ ಕಾಯಿಲೆ (ಕೆಎಫ್‍ಡಿ) ದೃಢಪಟ್ಟಿದ್ದ ಶೃಂಗೇರಿ ತಾಲ್ಲೂಕಿನ ಧರೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕ ಸುಬ್ಬಯ್ಯ ಗೌಡ ಮಣಿಪಾಲ್‍ನ ಆಸ್ಪತ್ರೆಯಲ್ಲಿ ಇತ್ತೀಚಿಗೆ ನಿಧನರಾದ ಘಟನೆ ನಡುವೆ ಮಲೆನಾಡಲ್ಲಿ ಮಂಗನ ಕಾಯಲೆ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಲೆ ಉಲ್ಬಣ ಆಗುತ್ತಿದೆ. ಈ ಹಿನ್ನೆಲೆ ಆಡಳಿತ ಕೂಡ ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ ಕೆಲವು ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.

ಲಂಚ: ಕೆಎಸ್​ಆರ್​ಟಿಸಿ ವಿಭಾಗ ನಿಯಂತ್ರಕ ಅರೆಸ್ಟ್!

ಚಿಕ್ಕಮಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಚಿಕ್ಕಮಗಳೂರು ಕೆಎಸ್​ಆರ್​ಟಿಸಿ ವಿಭಾಗ ನಿಯಂತ್ರಕ ಬಸವರಾಜು ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚಿಕ್ಕಮಗಳೂರಿನಿಂದ ಕಡೂರು ಡಿಪೋಗೆ ವರ್ಗಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲೇ ಬಸ್ ಚಾಲಕನಿಂದ 10 ಸಾವಿರ ರೂ. ಲಂಚ ಸ್ವೀಕರಿಸುವಾಗ ಬಸವರಾಜು ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನಲೆ ಚಾಲಕ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಚಾಲಕ ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಬಸವರಾಜುನನ್ನು ಬಂಧಿಸಿದ್ದಾರೆ.

ಶಿಕಾರಿಪುರದಲ್ಲಿ ಚೂರಿ ಇರಿತ: ಇಬ್ಬರ ಬಂಧನ

ಶಿಕಾರಿಪುರ: ಪಟ್ಟಣದ ದೊಡ್ಡಪೇಟೆಯಲ್ಲಿ ವೇಗವಾಗಿ ಬೈಕ್ ಚಲಾಯಿಸಿದ್ದನ್ನು ಆಕ್ಷೇಪಿಸಿದ ವಿಚಾರಕ್ಕೆ ವಾಗ್ವಾದ ನಡೆದು ಯುವಕನಿಗೆ ಚಾಕು ಇರಿಯಲಾಗಿದೆ. ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ದೊಡ್ಡಪೇಟೆ ನಿವಾಸಿ, ಕುಮದ್ವತಿ ಕಾಲೇಜಿನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಸುಶೀಲ್ (23) ಚಾಕು ಇರಿತಕ್ಕೊಳಗಾದವರು. ಮುಬಾರಕ್‌ ಹಾಗೂ ಜೀಶಾನ್‌ ಬಂಧಿತರು.ಸುಶೀಲ್‌ಗೆ ಬೇರೆ ಕೋಮಿನ ನಾಲ್ವರು ಯುವಕರ ತಂಡ ಮಂಗಳವಾರ ರಾತ್ರಿ ಚಾಕುವಿನಿಂದ ಇರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

Categories
ಬೆಂಗಳೂರು ರಾಜ್ಯ

ರಾಜ್ಯ ಮಟ್ಟದ ಮೊದಲ ಜನಸ್ಪಂದನ ಕಾರ್ಯಕ್ರಮ

ರಾಜ್ಯ ಮಟ್ಟದ ಮೊದಲ ಜನಸ್ಪಂದನ ಕಾರ್ಯಕ್ರಮ
-ವಿಧಾನಸೌಧದ ಮುಂಭಾಗದಲ್ಲಿ ಭರ್ಜರಿ ಸಿದ್ಧತೆ
-ವಿಧಾನಸೌಧದ ಎದುರು ಬೆಳಗ್ಗಿನಿಂದಲೇ ಜನ

NAMMUR EXPRESS NEWS
ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಜನಸ್ಪಂದನ ಕಾರ್ಯಕ್ರಮ ರಾಜಧಾನಿಯ ವಿಧಾನಸೌಧದ ಎದುರು ನಡೆಯುತ್ತಿದ್ದು, ರಾಜ್ಯಮಟ್ಟದ ಮೊದಲ ಜನಸ್ಪಂದನ ಕಾರ್ಯಕ್ರಮ ಇದಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ಭರ್ಜರಿ ಸಿದ್ಧತೆ ಮಾಡಲಾಗಿದ್ದು, ಬೆಳಗ್ಗಿನಿಂದಲೇ ಜನ ಜಮಾಯಿಸಿದ್ದಾರೆ. “ನನ್ನ ಜನ ನನ್ನ ಅಭಿಮಾನ” ಎಂಬ ಶೀರ್ಷಿಕೆ ಅಡಿ ಕಾರ್ಯಕ್ರಮ ನಡೆಯುತ್ತಿದ್ದು, ಇಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಅಹವಾಲು ಸಲ್ಲಿಸಲು ಬರುವ 8 ಸಾವಿರಕ್ಕೂ ಹೆಚ್ಚು ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ದೂರದ ಊರುಗಳಿಂದ ಬರುವ ಜನರಿಗೆ ಉಚಿತ ಬಸ್ ವ್ಯವಸ್ಥೆ, ಮೆಜೆಸ್ಟಿಕ್ ಬಸ್ ಮತ್ತು ರೈಲು ನಿಲ್ದಾಣಕ್ಕೆ ತೆರಳಲು ಉಚಿತ ವ್ಯವಸ್ಥೆ, ಕುಡಿಯುವ ನೀರು, ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ಪ್ರಮುಖ ಜನರ ಸಮಸ್ಯೆ ಆಲಿಸಲು ವಿವಿಧ ಇಲಾಖೆಗಳ ಮುಖ್ಯಸ್ಥರು, ಕಾರ್ಯದರ್ಶಿಗಳ ಹಾಜರಿಗೆ ಸೂಚನೆ ನೀಡಲಾಗಿದೆ. ಬೃಹತ್ ಸಂಖ್ಯೆಯಲ್ಲಿ ಅಹವಾಲು ಸಲ್ಲಿಸಲು ಜನ ಆಗಮಿಸುವ ಹಿನ್ನೆಲೆಯಲ್ಲಿ ವಿಧಾನಸೌಧದ ಬೃಹತ್ ಮೆಟ್ಟಿಲುಗಳ, ಉತ್ತರದಲ್ಲಿ ಜರ್ಮನ್ ಟೆಂಟ್ ಹಾಕಲಾಗುತ್ತದೆ. ಜನರು ಆನ್ ಲೈನ್ ಮೂಲಕವೂ ಅಹವಾಲು ದಾಖಲಿಸಬಹುದು. 1902ಕ್ಕೆ ಕರೆ ಮಾಡಿ ನೋಂದಣಿ ಮಾಡಿಸಬೇಕು. ನೇರವಾಗಿ ಬರುವವರು ಆಧಾರ್ ಕಾರ್ಡ್, ಪಡಿತರ ಚೀಟಿ ತರಲು ಮನವಿ ಮಾಡಲಾಗಿದೆ. ಕಂದಾಯ, ಆಹಾರ, ಇಂಧನ, ಬಿಬಿಎಂಪಿ, ಬಿಡಿಎ, ಗ್ರಾಮೀಣಾಭಿವೃದ್ಧಿ ಮತ್ತಿತರ 36 ಇಲಾಖೆಗಳಿಗೆ ಪ್ರತ್ಯೇಕ ಕೌಂಟರ್ ಮಾಡಲಾಗಿದೆ. ಜನ ಮುಂಜಾನೆಯಿಂದಲೇ ವಿಧಾನ ಮುಂದೆ ಆಗಮಿಸುತ್ತಿದ್ದು, ತಮ್ಮ ತಮ್ಮ ಸಮಸ್ಯೆಗಳು ಇರುವ ಇಲಾಖೆಗಳ ಕೌಂಟರ್‌ಗಳಿಗೆ ಬಂದು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ‌‌‌‌.

ಪ್ರತಿ ಮೂರು ತಿಂಗಳಿಗೊಮ್ಮೆ ಜನಸ್ಪಂದನ ನಡೆಸಲು ಸಿಎಂ ತೀರ್ಮಾನಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಗಿತ್ತು. ಇಂದಿನ ಜನಸ್ಪಂದನ ನೋಡಲು ವಿಧಾನಸೌಧದಲ್ಲಿ 20 ಎಲ್‌ಇಡಿ ಸ್ಕ್ರೀನ್‌ಗಳ ಅಳವಡಿಕೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಖುದ್ದು ಕೌಂಟರ್‌ಗಳಿಗೆ ತೆರಳಿ ಅಹವಾಲು ಆಲಿಸುವ ವ್ಯವಸ್ಥೆಯೂ ಇದೆ. ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸಿಎಂ ತಾಕೀತು ಮಾಡಲಿದ್ದಾರೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ವಿಟ್ಲದ ಯುವಕನ ಮನೆ ಮುಂದೆ ಧರಣಿಗೆ ಕೂತ ಉತ್ತರಭಾರತದ ಯುವತಿ!
– ಉಪ್ಪಿನಂಗಡಿ : ಸರಕಾರಿ ಸಂಘಕ್ಕೆ ಲಕ್ಷಾಂತರ ರೂ ವಂಚನೆ!
– ಮದುವೆ ಮನೆಯಲ್ಲಿ ಲಕ್ಷಾಂತರ ರೂ ಮೌಲ್ಯದ ಬ್ಯಾಗ್ ಕಳವು!
– ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಅಂದರ್!

NAMMUR EXPRESS NEWS
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೇಪು ಗ್ರಾಮದ ಅಡ್ಯನಡ್ಕದ ಯುವಕನೊಬ್ಬನ ಮನೆಯ ಮುಂದೆ ಉತ್ತರ ಭಾರತ ಮೂಲದ ಜಲಂದ‌ರ್ ನ ಯುವತಿಯೊಬ್ಬಳು ಧರಣಿ ನಡೆಸಿದ ಘಟನೆ ಮಂಗಳವಾರ ವರದಿಯಾಗಿದೆ. ಈಕೆ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಂದರ್ಭ ಅಡ್ಯನಡ್ಕದ ಯುವಕನ ಪರಿಚಯವಾಗಿ ಪ್ರೇಮ ಬೆಳೆದು, ಹಣಕಾಸಿನ ವ್ಯವಹಾರಗಳೂ ನಡೆದಿದೆ ಎನ್ನಲಾಗಿದೆ. ಮಂಗಳವಾರ ಯುವಕನ ಮನೆಯ ಮುಂದೆ ಬಂದ ಸಂತ್ರಸ್ತ ಯುವತಿ, ಯುವಕನನ್ನು ತನಗೆ ಒಪ್ಪಿಸುವಂತೆ ಪಟ್ಟು ಹಿಡಿದಿದ್ದಾಳೆ. ಸ್ಥಳದಲ್ಲಿ ಜನರೂ ಜಮಾಯಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಸ್ಥಳದಲ್ಲಿ ಎರಡು ಸಮುದಾಯದ ಜನರು ಸೇರಿದ್ದರಿಂದಾಗಿ ಪೊಲೀಸರು ಭದ್ರತೆ ಒದಗಿಸಿದರು.

– ಸರಕಾರಿ ಸಂಘಕ್ಕೆ ಲಕ್ಷಾಂತರ ರೂ ವಂಚನೆ !

ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದು ಸಹಕಾರಿ ಸಂಘಗಳಿಗೆ ಲಕ್ಷಗಟ್ಟಲೆ ರೂಪಾಯಿ ವಂಚನೆ ಎಸಗಿದ ಬಗ್ಗೆ ಇಬ್ಬರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರು ದೂರು ನೀಡಿದ ಮೇರೆಗೆ ಈ ಪ್ರಕರಣವನ್ನು ದಾಖಲಿಸಲಾಗಿದೆ.

ಜ. 27ರಂದು ಮಧ್ಯಾಹ್ನ ಆರೋಪಿಗಳಾದ ನೆಲ್ಯಾಡಿ ಗ್ರಾಮದವರು ಎನ್ನಲಾಗಿರುವ ಕಡಬ ನಿವಾಸಿ ಸೆಬಾಸ್ಟಿಯನ್ ಮತ್ತು ಕೇರಳ ಮೂಲದ ಡಾನಿಶ್ ಎಂಬವರು ಸಂಘಕ್ಕೆ ಬಂದಿದ್ದು. ಮೇಲ್ನೋಟಕ್ಕೆ ನಕಲಿ ಎಂದು ಕಂಡು ಬಾರದಂತಹ ಒಟ್ಟು 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಸಂಘದಲ್ಲಿ ಅಡಮಾನವಿರಿಸಿ, ಸಂಘದಿಂದ 1.40 ಲಕ್ಷ ರೂಪಾಯಿ ಸಾಲವಾಗಿ ಪಡೆದು ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ನೆಲ್ಯಾಡಿ ಮಾತ್ರವಲ್ಲದೆ, ಕಡಬ ಮತ್ತು ಉಪ್ಪಿನಂಗಡಿಯ ಸಹಕಾರಿ ಸಂಘಗಳಿಗೂ ಇವರು ವಂಚಿಸಿ ಲಕ್ಷಗಟ್ಟಲೆ ರೂಪಾಯಿ ಪಂಗನಾಮ ಹಾಕಿರುವುದಾಗಿ ಆರೋಪಿಸಲಾಗಿದೆ. ಉಪ್ಪಿನಂಗಡಿಯ ಒಡಿಯೂರು ಸಹಕಾರಿ ಸಂಘದಲ್ಲಿ 1.70 ಲಕ್ಷ ರೂ. ಸಾಲ, ಕಡಬದ ಅಲಂಕಾರು ಒಕ್ಕಲಿಗ ಸಹಕಾರಿ ಸಂಘಗಳಲ್ಲೂ ನಕಲಿ ಚಿನ್ನ ಅಡವಿಟ್ಟು 1.35 ಲಕ್ಷ ರೂ. ಸಾಲ ಪಡೆದಿರುವುದಾಗಿ ಆರೋಪಿಸಲಾಗಿದೆ.

ವಿವಿಧ ಸಹಕಾರಿ ಸಂಘಗಳಿಂದ ದೂರುಗಳು ಬಂದಿರುವರಿಂದ ಈ ಪ್ರಕರಣದಲ್ಲಿ ಸಹಕಾರಿ ಸಂಘಗಳ ಚಿನ್ನಾಭರಣ ಪರಿಶೀಲನಾಗಾರರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಕಡಬ,ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ವಂಚನಾ ಪ್ರಕರಣಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರಿದಿದೆ.

– ಮದುವೆ ಮನೆಯಲ್ಲಿ ಲಕ್ಷಾಂತರ ರೂ ಮೌಲ್ಯದ ಸೊತ್ತುಯಿದ್ದ ಭ್ಯಾಗ್ ಕಳವು!

ಬ್ರಹ್ಮಾವರ : ಮದುಮಕ್ಕಳ ಜೊತೆ ಪೋಟೋ ತೆಗೆಸಿ ಬರುವದರಲ್ಲಿ ಕುರ್ಚಿಯ ಮೇಲಿಟ್ಟ ಲಕ್ಷಾಂತರ ಮೌಲ್ಯದ ಸೊತ್ತುಗಳಿದ್ದ ಬ್ಯಾಗ್ ನ್ನು ಕಳ್ಳನೊಬ್ಬ ಎಗರಿಸಿದ ಘಟನೆ ಬ್ರಹ್ಮಾವರದ ಶ್ಯಾಮಿಲಿ ಶನಾಯ ಹಾಲ್‌ನಲ್ಲಿ ನಡೆದಿದೆ. ನೀಲಾವರದ ಜಯಶ್ರೀ ಸುರೇಶ್ ಎಂಬವರ ಮಗಳ ಮದುವೆ ಆರತಕ್ಷತೆ ಸಮಾರಂಭ ಬ್ರಹ್ಮಾವರ ಶ್ಯಾಮಿಲಿ ಶನಾಯ ಹಾಲ್‌ನಲ್ಲಿ ನಡೆದಿದ್ದು, ಈ ವೇಳೆ ಜಯಶ್ರೀ ತನ್ನ ಕೈಯಲ್ಲಿದ್ದ ಬ್ಯಾಗನ್ನು ಹಾಲ್ ಕುರ್ಚಿಯ ಮೇಲೆ ಇಟ್ಟು ಮಗಳೊಂದಿಗೆ ಫೋಟೋ ತೆಗೆಸಿದ್ದರು. ಬಳಿಕ ಬಂದು ನೋಡಿದಾಗ ಬ್ಯಾಗ್ ಕಳವಾಗಿರುವುದು ಕಂಡುಬಂತು. ಬ್ಯಾಗ್‌ನಲ್ಲಿ 2,40,000 ರೂ. ಮೌಲ್ಯದ ನಗದು ಹಾಗೂ ವಸ್ತುಗಳಿದ್ದವು ಎಂದು ತಿಳಿದುಬಂದಿದೆ. ಸಿಸಿಟಿವಿ ಫೂಟೇಜ್‌ನಲ್ಲಿ ಕಪ್ಪು ಶರ್ಟ್‌ನ ಹುಡುಗ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದನ್ನು ಸೆರೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ!

ಮಂಗಳೂರು: ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಕೇಂದ್ರ ಉಪ- ವಿಭಾಗ ಆ್ಯಂಟಿ ಡ್ರಗ್ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅತ್ತಾವರದ ಆದಿತ್ಯ ಕೆ (29), ಅಡ್ಯಾರ್ ಪದವು ನಿವಾಸಿ ರೋಹನ್ ಸಿಲ್ವೇರಾ ಬಂಧಿತರು. ಬಂಧಿತರಿಂದ ಸುಮಾರು ರೂ 50,000 ಮೌಲ್ಯದ 27 ಗ್ರಾಂ ಹೈಡೋವೀಡ್ ಗಾಂಜಾ, ಸುಮಾರು ರೂ 1,00,000 ಮೌಲ್ಯದ 2 ಕೆಜಿ 95 ಗ್ರಾಂನ ಗಾಂಜಾ, ರೂ. 8000 ಮೌಲ್ಯದ ಗಾಂಜಾ ಆಪ್ ಆಯಿಲ್, ರೂ,16,800 ಮೌಲ್ಯದ ಎಲ್.ಎಸ್.ಡಿ ಸ್ಟಾಂಫ್. ಡಿಜಿಟಲ್ ತೂಕ ಮಾಪನಗಳು-2, ಕೃತ್ಯಕ್ಕೆ ಬಳಸಿದ ರೂ 90,000 ಮೌಲ್ಯದ ಎರಡು ಮೊಬೈಲ್ ಫೋನ್ ಮತ್ತು ರೂ 20 ಲಕ್ಷ ಮೌಲ್ಯದ ಕಪ್ಪು ಬಣ್ಣದ ಹುಂಡೈ ಕಂಪೆನಿಯ ವರ್ನ ಮಾಡೆಲ್ ನ ಕಾರು- 1 ಮತ್ತು ಇತರ ಸೊತ್ತುಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.

– ಪುತ್ತೂರು: ನವವಿವಾಹಿತೆ ನೇಣಿಗೆ ಶರಣು!

ಪುತ್ತೂರು: ನವವಿವಾಹಿತೆಯೊಬ್ಬರು ನೇಣು ಬಿಗಿದು ಪತಿಯ ಮನೆಯಲ್ಲಿ ಆತ್ಯಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕುರಿಯ ಗಡಾಜೆ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮ್ಮಣ್ಣ ಗೌಡ ಮತ್ತು ಪುಷ್ಪ ದಂಪತಿ ಪುತ್ರಿ ಶೋಭಾ (26) ನೇಣಿಗೆ ಶರಣಾದವರು. ಶೋಭಾ ಅವರನ್ನು ಕಳೆದ ಒಂದೂವರೆ ತಿಂಗಳ ಹಿಂದೆ ಪುತ್ತೂರು ಕುರಿಯ ಗಡಾಜೆ ರೋಹಿತ್ ರವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ಕಾರಣ ತನಿಖೆಯಿಂದ ತಿಳಿಯಬೇಕಾಗಿದೆ.

Categories
ಸಿನಿಮಾ

ಸ್ಯಾಂಡಲ್‌ವುಡ್‌ ನಟಿಯಾಗುವ ಆಸೆ ಇದ್ಯಾ?

ಸ್ಯಾಂಡಲ್‌ವುಡ್‌ ನಟಿಯಾಗುವ ಆಸೆ ಇದ್ಯಾ?
– ನಿಮ್ಮೂರಲ್ಲೇ ಆಡಿಷನ್ ಶುರು…!
– ಇಲ್ಲಿದೆ ಫುಲ್ ಡಿಟೇಲ್ಸ್

NAMMUR EXPRESS NEWS
ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಹೌದು. ಸ್ಯಾಂಡಲ್‌ವುಡ್‌ನಲ್ಲಿ ನಟಿಸುವ ಅವಕಾಶ ಇದಾಗಿದ್ದು, ಹಲವು ಕಡೆಗಳಲ್ಲಿ ಆಡಿಷನ್ ನಡೆಯಲಿದೆ. ಈ ಆಡಿಷನ್ ನಲ್ಲಿ ಭಾಗವಹಿಸಿ ನಿಮ್ಮ ಅದೃಷ್ಟವನ್ನು ಕಂಡುಕೊಳ್ಳಬಹುದಾಗಿದೆ. ಇದರಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ವಿಜೇತರಾಗಿ ನೀವೂ ಬಣ್ಣದ ಲೋಕಕ್ಕೆ ಎಂಟ್ರಿಯಾಗುವ ಅದೃಷ್ಟವಂತೆಯೂ ಆಗಿರಬಹುದು.

ಅಂದಹಾಗೆ, ಕರ್ನಾಟಕದ 16 ಜಿಲ್ಲೆಗಳಲ್ಲಿ ಆಡಿಷನ್ ನಡೆಯಲಿದ್ದು, ಇಲ್ಲಿ ಸೆಲೆಕ್ಟ್ ಆದವರಿಗೆ ರಿಯಾಲಿಟಿ ಷೋನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಅಲ್ಲಿ ಕೆಲವೊಂದು ಸ್ಪರ್ಧೆಗಳನ್ನು ಎದುರಿಸಿ, ಜಯಶೀಲರಾದರೆ ನೀವೂ ಆಗಬಹುದು ಸ್ಯಾಂಡಲ್ ವುಡ್ ತಾರೆ. ಹಾಗಿದ್ದರೆ 16 ರಂದು ಯಾವ ಜಿಲ್ಲೆಗಳಲ್ಲಿ ಯಾವಾಗ ಆಡಿಷನ್ ನಡೆಯಲಿದೆ

ಮಾಹಿತಿ ಇಲ್ಲಿದೆ ನೋಡಿ:

ಇದೇ ಫೆಬ್ರುವರಿ 10 ಮತ್ತು 11 ಬೆಂಗಳೂರು ಮತ್ತು ಬೆಳಗಾವಿ, 11 ಭಾನುವಾರ ಮೈಸೂರು ಮತ್ತು ಹುಬ್ಬಳ್ಳಿ, 12 ಸೋಮವಾರ ಹಾಸನ ಮತ್ತು ಬಾಗಲಕೋಟೆ, 13 ಮಂಗಳವಾರ ಚಿಕ್ಕಮಗಳೂರು ಮತ್ತು ಕಲಬುರಗಿ, 14ನೇ ತಾರೀಖು ಮಡಿಕೇರಿ, 15ರಂದು ಬಳ್ಳಾರಿ, 16ರ ಶುಕ್ರವಾರ ಮಂಗಳೂರು ಮತ್ತು ಕೊಪ್ಪಳ, 17 ಶನಿವಾರ ಉಡುಪಿ ಮತ್ತು ದಾವಣಗೆರೆ, 18 ಭಾನುವಾರ ಶಿವಮೊಗ್ಗ ಮತ್ತು ಚಿತ್ರದುರ್ಗ ಇಷ್ಟು ಕಡೆಗಳಲ್ಲಿ ಆಡಿಷನ್ ನಡೆಯಲಿದೆ.

ಅಂದಹಾಗೆ ಆಸಕ್ತರು ಮಾಡಬೇಕಿರುವುದು ಇಷ್ಟು:

18ರಿಂದ 28 ವರ್ಷದ ಯುವತಿಯರಿಗೆ ಈ ಛಾನ್ಸ್ ಇದೆ. ಆಸಕ್ತರು ತಮ್ಮ ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಅಡ್ರೆಸ್ ಪ್ರೊಫ್ ಜೆರಾಕ್ಸ್ ಜೊತೆ ಆಡಿಷನ್‌ಗೆ ಬರಬೇಕು. ನಿಮ್ಮ ಆಯಕ್ಟಿಂಗ್ ವಿಡಿಯೋಗಳನ್ನು 9513516200ಕ್ಕೆ ವಾಟ್ಸ್‌ಆಯಪ್ ಮಾಡುವಂತೆ ಜೀ ವಾಹಿನಿ ಹೇಳಿದೆ. ನೀವೂ ಕೂಡ ಚಂದನವನದ ಮಹಾನಟಿಯಾಗೋಕೆ ಶುರುವಾಗಿದೆ ಆಡಿಷನ್ ಎನ್ನುವ ಮೂಲಕ ಜೀ ವಾಹಿನಿ ಪ್ರೊಮೋ ರಿಲೀಸ್ ಮಾಡಿದೆ.

Categories
ಶಿವಮೊಗ್ಗ

ಕುಕ್ಕೆ ಪ್ರಶಾಂತ್ ಅವರಿಗೆ ರಾಘವೇಂದ್ರ ಅಭಿನಂದನೆ

ಕುಕ್ಕೆ ಪ್ರಶಾಂತ್ ಅವರಿಗೆ ರಾಘವೇಂದ್ರ ಅಭಿನಂದನೆ
– ನೂತನ ಯುವ ಮೋರ್ಚಾ ಜಿಲ್ಲಾಧ್ಯಕ್ಷರಿಗೆ ಕಿವಿಮಾತು
– ಶಿಕಾರಿಪುರ ಬಿಜೆಪಿ ನಾಯಕರ ಜೊತೆ ಮಾತುಕತೆ

NAMMUR EXPRESS NEWS
ಶಿಕಾರಿಪುರ: ನೂತನವಾಗಿ ಶಿವಮೊಗ್ಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ತೀರ್ಥಹಳ್ಳಿಯ ಕುಕ್ಕೆ ಪ್ರಶಾಂತ್ ಅವರನ್ನು ಶಿವಮೊಗ್ಗ ಸಂಸದರಾದ ಬಿ. ವೈ ರಾಘವೇಂದ್ರ ಹಾಗೂ ಶಿಕಾರಿಪುರ ತಾಲೂಕಿನ ಯುವ ಮೋರ್ಚಾ ಅಧ್ಯಕ್ಷರು ಮತ್ತು ಕಾರ್ಯಕರ್ತರು ಅಭಿನಂದಿಸಿದರು. ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕು ಯುವ ಮೋರ್ಚಾ ಬಲಗೊಳಿಸಲು ಈಗಾಗಲೇ ಸಂಘಟನೆ ನಡೆಯುತ್ತಿದೆ.