Categories
ರಾಜ್ಯ

ಅಂಬೇಡ್ಕರ್‌ ಜಯಂತಿ ಸಾರ್ವತ್ರಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ

ಅಂಬೇಡ್ಕರ್‌ ಜಯಂತಿ ಸಾರ್ವತ್ರಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ

* ಭಾರತದಾದ್ಯಂತ ಎಲ್ಲಾ ಕೈಗಾರಿಕಾ ಹಾಗೂ ಕೇಂದ್ರ ಸರ್ಕಾರಿ ಕಛೇರಿಗಳಿಗೆ ರಜೆ
* ಎಕ್ಸ್‌ ಮೂಲಕ ಸಂತಸ ವ್ಯಕ್ತಪಡಿಸಿದ ಬಿಜೆಪಿ ಮತ್ತು ಜೆಡಿಎಸ್ ನಾಯಕರು

NAMMUR EXPRESS NEWS
ದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಏ.14 ರಂದು ದೇಶದಾದ್ಯಂತ ಸಾರ್ವತ್ರಿಕ ರಜೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಭಾರತದಾದ್ಯಂತ ಕೈಗಾರಿಕಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಏಪ್ರಿಲ್ 14 ರಂದು ರಜೆ ಘೋಷಿಸಲು ನಿರ್ಧರಿಸಲಾಗಿದ್ದು,ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು/ಇಲಾಖೆಗಳು ಮೇಲಿನ ನಿರ್ಧಾರವನ್ನು ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲು ಸೂಚನೆ ನೀಡಲಾಗಿದೆ.

ಕೇಂದ್ರದ ನಿರ್ಧಾರಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಂತಸ
ಇನ್ನೂ ಈ ಬಗ್ಗೆ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದು, ಏಪ್ರಿಲ್ 14, 2025 ರಂದು ಎಲ್ಲಾ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ರಾಷ್ಟ್ರವ್ಯಾಪಿ ರಜಾದಿನವೆಂದು ಘೋಷಿಸುವ ನಿರ್ಧಾರವು ಡಾ. ಬಿ.ಆರ್. ಅಂಬೇಡ್ಕರ್ ಅವರ ಅಪಾರ ಕೊಡುಗೆಗಳಿಗೆ ಅರ್ಹವಾದ ಗೌರವವಾಗಿದೆ. ಈ ಚಿಂತನಶೀಲ ನಿರ್ಧಾರವನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ಡಾ. ಅಂಬೇಡ್ಕರ್ ಅವರ ಸಮಾನತೆ, ನ್ಯಾಯ ಮತ್ತು ಸಬಲೀಕರಣದ ದೃಷ್ಟಿಕೋನವು ನಮ್ಮ ರಾಷ್ಟ್ರವನ್ನು ರೂಪಿಸುತ್ತಲೇ ಇದೆ. ನಮ್ಮ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸುವ ಈ ಅರ್ಥಪೂರ್ಣ ಕಾರ್ಯಕ್ಕಾಗಿ ಗೌರವಾನ್ವಿತ ಪ್ರಧಾನಿ ಮೋದಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಈ ದೇಶದ ಪ್ರಜಾಪ್ರಭುತ್ವವನ್ನು ಹುಟ್ಟುಹಾಕಿದ ಮಹಾತ್ಮ, ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಂಕ ಏಪ್ರಿಲ್ 14 ರಂದು ಸಾರ್ವತ್ರಿಕ ರಜೆಯನ್ನು ಪ್ರಧಾನಿ ನರೇಂದ್ರ ಮೋದಿಜೀಯವರ ನೇತೃತ್ವದ ಕೇಂದ್ರ ಸರ್ಕಾರ ಘೋಷಿಸಿರುವ ನಿರ್ಧಾರ ಅತ್ಯಂತ ಸ್ವಾಗತಾರ್ಹ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಆಶಯ ಹಾಗೂ ಸಮ ಸಮಾಜದ ಕನಸನ್ನು ನನಸಾಗಿಸಲು, ಭಾರತೀಯ ಜನತಾ ಪಕ್ಷ ಮತ್ತು, ಎಂದೆಂದಿಗೂ ಬದ್ಧವಾಗಿದೆ ಎನ್ನಲು ಹೆಮ್ಮೆಯಿದೆ ಎಂದು ವಿ.ಸೋಮಣ್ಣ ಪೋಸ್ಟ್ ಮಾಡಿದ್ದಾರೆ.

ರಾಷ್ಟ್ರೀಯ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ರಜೆ ಘೋಷಣೆ
ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವನ್ನು ತಮ್ಮ ಆಡಳಿತದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದಿರುವುದು ಹೆಮ್ಮೆಯ ವಿಚಾರ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ರಾಷ್ಟ್ರೀಯ ಗೌರವವನ್ನು ಸಮರ್ಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಜಯಂತಿಯಂದು ಭಾರತಾದ್ಯಂತ ಎಲ್ಲಾ ಕೈಗಾರಿಕಾ ಸಂಸ್ಥೆಗಳು ಸೇರಿದಂತೆ, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಕಚೇರಿಗಳಿಗೂ ಸಾರ್ವತ್ರಿಕ ರಜೆ ಘೋಷಿಸಿರುವುದು ಅತ್ಯಂತ ಅರ್ಥಪೂರ್ಣ ಹಾಗೂ ಅಭಿನಂದನಾ ಪೂರ್ವಕ ನಿರ್ಧಾರವಾಗಿದೆ.
ಡಾ. ಅಂಬೇಡ್ಕರ್ ಅವರ ಜಯಂತಿ ಅವರ ಸ್ಮರಣೆ ಹಾಗೂ ಆಚರಣೆಗಾಗಿ ಮಾತ್ರ ಸೀಮಿತಗೊಳ್ಳದೆ ಆ ದಿನದಂದು ಅವರ ಮಹಾನ್ ಪರಿಶ್ರಮದಿಂದ ರೂಪುಗೊಂಡ ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬ ಪ್ರಜೆಯೂ ಅಂಬೇಡ್ಕರ್ ಅವರನ್ನು ಭಕ್ತಿ ಹಾಗೂ ಅಭಿಮಾನದಿಂದ ಗೌರವಿಸುವ ದಿನವಾಗಲಿ, ಭಾರತದ ಚರಿತ್ರೆಯ ಸುವರ್ಣಾಕ್ಷರಗಳಲ್ಲಿ ಏಪ್ರಿಲ್ 14 ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಶ್ರೇಷ್ಠತೆಯನ್ನು ವಿಶ್ವ ಮೆಚ್ಚುವ ಹೆಮ್ಮೆಯ ದಿನವಾಗಲಿ ಎಂದು ಸಂಕಲ್ಪ ತೊಡೋಣ ಎಂದು ಬಿ.ವೈ ವಿಜಯೇಂದ್ರ ಟ್ವೀಟ್‌ ಮಾಡಿದ್ದಾರೆ.

Categories
ಕರಾವಳಿ

ಕರಾವಳಿಯಲ್ಲಿ ಯುಗಾದಿ ಆಚರಣೆಗೆ ಎಲ್ಲೆಡೆ ಸಿದ್ಧತೆ!

ಕರಾವಳಿಯಲ್ಲಿ ಯುಗಾದಿ ಆಚರಣೆಗೆ ಎಲ್ಲೆಡೆ ಸಿದ್ಧತೆ!

– ಎಲ್ಲೆಡೆ ಖರೀದಿ ಭರಾಟೆಯ ರಂಗು!
– ಬಿಸಿಲಿನ ಝಳದ ನಡುವೆಯೂ ಹಬ್ಬದ ಸಂಭ್ರಮ

NAMMUR EXPRESS NEWS
ಭಾರತೀಯರಿಗೆ ಹೊಸ ವರ್ಷದ ಸಂಕೇತ ಯುಗಾದಿ ಹಬ್ಬದ ಸಂಭ್ರಮ, ದಕ್ಷಿಣಕನ್ನಡ ಜಿಲ್ಲಾದ್ಯಂತ ಜೋರಾಗಿದೆ. ಕಳೆದ ವರ್ಷಗಳ ಕಹಿ ಅನುಭವಗಳು ಕಳೆದು ಬೆಲ್ಲದ ಸಿಹಿಯು ಬಾಳಿಗೆ ಸಿಗಲೆಂಬ ಆರೈಕೆಯೊಂದಿಗೆ ಯುಗಾದಿ ಆಚರಣೆಗೆ ಎಲ್ಲೆಡೆ ಸಿದ್ಧತೆ ನಡೆಯುತ್ತಿದೆ. ಇದರೊಂದಿಗೆ ಖರೀದಿ ಭರಾಟೆಯೂ ಜೋರಾಗಿದೆ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ… ಹಾಡಿನೊಂದಿಗೆ ಯುಗಾದಿ ಆಚರಣೆ ಮತ್ತು ಹೊಸ ವರ್ಷ ಸ್ವಾಗತಕ್ಕೆ ಎಲ್ಲೆಡೆ ಸಿದ್ದತೆ ನಡೆಯುತ್ತಿದೆ. ಉಷ್ಣತೆಯ ಬಿಸಿಲಿನ ಝಳದ ನಡುವೆಯೂ ಹಬ್ಬದ ಸಂಭ್ರಮ, ಸಡಗರ ಕಾಣುತ್ತಿದೆ. ಪೇಟೆಬೀದಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಒಂದೆಡೆ ಬಿಸಿಲು, ಮತ್ತೊಂದೆಡೆ ಬೆಲೆ ಏರಿಕೆಯ ಬಿಸಿ ಹಬ್ಬದ ಸಂಭ್ರಮದಲ್ಲಿರುವ ಜನರನ್ನು ತಟ್ಟಿದೆ.
ಯುಗಾದಿ ಹಬ್ಬದ ಮುನ್ನಾ ದಿನವಾದ ಮಾ. 29 ಶನಿವಾರ(ಇಂದು) ನಗರದ ಎಲ್ಲ ರಸ್ತೆಗಳು, ಅಂಗಡಿ-ಮುಂಗಟ್ಟುಗಳು ಗಿಜಿಗುಡುತ್ತಿದೆ. ಬೆಲೆ ಏರಿಕೆ ನಡುವೆಯೂ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಮಂಗಳೂರು, ಉಡುಪಿ ಮುಖ್ಯ ರಸ್ತೆ, ಪೇಟೆ ಬೀದಿ ಹಾಗೂ ಮಾರುಕಟ್ಟೆ ಪ್ರದೇಶ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ. ಹೂವು, ಹಣ್ಣು, ತರಕಾರಿಗಳ ಮಾರಾಟ ಭರಾಟೆ ಕೂಡ ಕಂಗೊಳಿಸುತ್ತಿದೆ.

ಹಿಂದಿನ ದಿನವೇ ತಯಾರಿ ಮಾಡಿ ಸಂಭ್ರಮಿಸುತ್ತಿರುವ ಕರಾವಳಿ ಜನ!

ಹಿಂದೂ ಸಂಪ್ರಾದಾಯದ ಪ್ರಕಾರ ನೂತನ ವರ್ಷಾಚರಣೆ ಯುಗಾದಿ ಹಬ್ಬದಲ್ಲಿ ಹೂವು,ಹಣ್ಣು, ತರಕಾರಿ, ಪೂಜೆ ಸಾಮಗ್ರಿಗಳ ಬೆಲೆ ಹೆಚ್ಚಾಗುತ್ತದೆ. ಇದನ್ನು ನೋಡಿದರೆ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದೇನೋ ತಿಳಿಯದು ಮಂಗಳೂರಿನಲ್ಲಿ ಹೆಚ್ಚಾಗಿ ಯುಗಾದಿ ಹಬ್ಬವನ್ನು ಸರಳವಾಗಿಯೇ ಆಚರಿಸುತ್ತಾರೆ ಆದರೆ ಈ ಸರಳತೆಯ ಮಧ್ಯೆ ಹಬ್ಬದ ಸಂಭ್ರಮಕ್ಕೇನು ಕೊರತೆಯಿಲ್ಲ.
ಸಿರಿವಂತರು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರೆ ಬಡವರು ತಮ್ಮ ಮಟ್ಟಕ್ಕೆ ಆಚರಿಸುತ್ತಾರೆ.
ಪ್ರತಿ ದಿನವು ಹಬ್ಬಗಳು ಬರುವುದಿಲ್ಲ. ಹೀಗಾಗಿ ಹಬ್ಬಕ್ಕಾಗಿ ಹಿಂದಿನ ಕೆಲವು ದಿನಗಳಿಂದಲೇ ಹಬ್ಬಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಸಂಭ್ರಮ ಮೆರೆಯುತ್ತಾರೆ ನಮ್ಮ ಕರಾವಳಿ ಜನ.

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್ !!

ಚಿಕ್ಕಮಗಳೂರು ಟಾಪ್ ನ್ಯೂಸ್ !!
* ಕರ್ತವ್ಯ ಲೋಪ ಆರೋಪ ಪಿ.ಡಿ.ಓ ಅಮಾನತು
* ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ
* ಅಂಧ ಮಕ್ಕಳ ಶಾಲೆಗೆ ಅನುದಾನ ಕೊಡಲು ಶ್ರಮಿಸುತ್ತೇನೆ – ಟಿ.ಡಿ ರಾಜೇಗೌಡ
NAMMUR EXPRESS NEWS
* ಕರ್ತವ್ಯ ಲೋಪ ಆರೋಪ ಪಿ.ಡಿ.ಓ ಅಮಾನತು
ಶೃಂಗೇರಿ: ತಾಲೂಕಿನ ಮರ್ಕಲ್ ಗ್ರಾಮ ಪಂಚಾಯಿತಿಯ ಪಿಡಿಒ ರಘುವೀರ್ ರವರನ್ನು ಕರ್ತವ್ಯಲೋಪದ ಆರೋಪದ ಹಿನ್ನೆಲೆ ಅಮಾನತು ಮಾಡಿ ಜಿಲ್ಲಾ ಪಂಚಾಯತ್‌ ಸಿ.ಇ.ಓ ಕೀರ್ತನಾ ಆದೇಶಿಸಿದ್ದಾರೆ. ಪಿ.ಡಿ.ಓ ವಿರುದ್ಧ ಹಲವು ಪಂಚಾಯತ್ ಸದಸ್ಯರು ಹಲವು ಆರೋಪಗಳನ್ನು ಮಾಡಿದ್ದರು. ಈ ಕುರಿತು ಶೃಂಗೇರಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ರವರು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.
ಮೇಲ್ನೋಟಕ್ಕೆ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಪಿ.ಡಿ.ಓ ರಘುವೀರ್ ರವರನ್ನು ಸೇವೆಯಿಂದ ವಜಾಗೊಳಿಸಿ ಚಿಕ್ಕಮಗಳೂರು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೀರ್ತನಾ ಆದೇಶಿಸಿದ್ದಾರೆ. ಮರ್ಕಲ್ ಗ್ರಾಮ ಪಂಚಾಯಿತಿಯ ನಾಲ್ವರು ಸದಸ್ಯರು ಇತ್ತೀಚಿಗಷ್ಟೇ ಪಿ.ಡಿ.ಓ ಹಾಗೂ ಅಧ್ಯಕ್ಷರ ನಡೆ ಖಂಡಿಸಿ ಅಹೋರಾತ್ರಿ ಪ್ರತಿಭಟನೆಗೆ ನಡೆಸಿದ್ದರು. ಪಂಚಾಯಿತಿಯಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಲಂಚಗುಳಿತನ ಸೇರಿದಂತೆ ಹಲವು ಆರೋಪಗಳನ್ನು ಸದಸ್ಯರು ಮಾಡಿದ್ದರು. ಕಾಮಗಾರಿಗಳ ಕುರಿತು ಪಿ.ಡಿ.ಓ ಹಾಗೂ ಅಧ್ಯಕ್ಷರ ಬಳಿ ಸ್ಪಷ್ಟಿಕರಣ ಕೇಳಿದಾಗ ಉಡಾಫೆ ಉತ್ತರ ನೀಡುತ್ತಿದಾರೆಂದು ಪಂಚಾಯತ್ ಸದಸ್ಯರು ಆರೋಪಿಸಿದ್ದರು.
* ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ
ಚಿಕ್ಕಮಗಳೂರು : ಕೇಂದ್ರ ಸರ್ಕಾರದ ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ ನಗರದಲ್ಲಿ ಮುಸ್ಲಿಮರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ತಮ್ಮ ಕೈಗಳಿಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸಿದರು.
ಮುಸ್ಲಿಮ್ ಸಂಘಟನೆಗಳು ಹಾಗೂ ರಾಜ್ಯದ ಮುಸ್ಲಿಮ್ ಪರ್ಸನಲ್ ಬೋರ್ಡ್‌ನಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಮಸೀದಿಗಳಲ್ಲೂ ಶುಕ್ರವಾರದ ವಿಶೇಷ ನಮಾಜ್ ಸಂದರ್ಭದಲ್ಲಿ ಸಣ್ಣ ಮಕ್ಕಳಿಂದ ವೃದ್ಧರವರೆಗೂ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ ಸಲ್ಲಿಸಿದರು.
ನಗರದ ದುಬೈ ನಗರದ ಫಿರ್ ದೋಸ್ ಮಸೀದಿಯಲ್ಲಿ ಕಪ್ಪು ಪಟ್ಟಿ ಧರಿಸಿ, ವಕ್ಫ್‌ ತಿದ್ದುಪಡಿ ಮಸೂದೆ ಜಾರಿಯಾಗದಂತೆ ಆಗ್ರಹಿಸಿದ ಮುಖಂಡರು, ನಾಗರಿಕರು, ಯಾವುದೇ ಕಾರಣಕ್ಕೂ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ನಿಲ್ಲಿಸಬೇಕು, ತಪ್ಪಿದಲ್ಲಿ ರಮಝಾನ್ ಹಬ್ಬದ ನಂತರ ನಿರಂತರ ಪ್ರತಿಭಟನೆಯ ಮೂಲಕ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು. ನಗರದ ಮಕ್ಕ ಮಸೀದಿಯ ಗುರುಗಳಾದ ಆಶ್ರಫ್ ಹಜರತ್, ನಗರಸಭೆ ಸದಸ್ಯ ಶಾದಾಬ್ ಪ್ರತಿಭಟನೆಯ ನೇತೃತ್ವವಹಿಸಿದ್ದರು
* ಅಂಧ ಮಕ್ಕಳ ಶಾಲೆಗೆ ಅನುದಾನ ಕೊಡಲು ಶ್ರಮಿಸುತ್ತೇನೆ – ಟಿ.ಡಿ ರಾಜೇಗೌಡ
ಚಿಕ್ಕಮಗಳೂರು: ಅಂಧ ಮಕ್ಕಳ ಪಾಠಶಾಲೆ 1996 ರಲ್ಲಿ ಆರಂಭಗೊಂಡಿದ್ದು, ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕರು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ ಹೇಳಿದರು.
ಅವರು ನಗರದ  ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿಯವರಿಗೆ ಗೌರವ ಸಮರ್ಪಣಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಧ ಮಕ್ಕಳ ವಸತಿಯುತ ಪಾಠಶಾಲೆಯಲ್ಲಿ ಉಚಿತ ಊಟ, ವಸತಿ, ಶಿಕ್ಷಣ, ವೈದ್ಯಕೀಯ ಸೇವೆ, ಸಮವಸ್ತ್ರ, ಶಿಕ್ಷಣ ಸಾಮಾಗ್ರಿಗಳನ್ನು ಉಚಿತವಾಗಿ ಪಡೆದು ಹಲವು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಅಧ್ಯಕ್ಷರು ನೀಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ತಾವು ಮತ್ತು ಶಾಸಕ ಹೆಚ್.ಡಿ ತಮ್ಮಯ್ಯ, ಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಮತ್ತು ಶಿಕ್ಷಣ ಸಚಿವರನ್ನು ಭೇಟಿಮಾಡಿ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ತಾವು ಜಿ.ಪಂ ಅಧ್ಯಕ್ಷರಾಗಿದ್ದಾಗ ಬರುತ್ತಿದ್ದ ಟಿ.ಎ, ಡಿ.ಎ ಹಣವನ್ನು ಈ ಶಾಲೆಗೆ ನೀಡುತ್ತಿದ್ದೆ, ಮುಂದೆ ವೈಯಕ್ತಿಕವಾಗಿ 1 ಲಕ್ಷ ರೂ ದೇಣಿಗೆ ನೀಡುವ
ಜೊತೆಗೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ 10 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದ ಅವರು, ಈ ರೀತಿ ದೇವರ ಕೆಲಸ ಮಾಡುತ್ತಿರುವ ಡಾ. ಜೆ.ಪಿ ಕೃಷ್ಣಗೌಡ ಮತ್ತು ಅವರ ತಂಡಕ್ಕೆ ಶುಭ ಹಾರೈಸುವೆ ಎಂದರು.
Categories
ಉಡುಪಿ

ಉಡುಪಿ: ಶಾಲಾ ವಾಹನಕ್ಕೆ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ!

ಉಡುಪಿ ಟಾಪ್ ನ್ಯೂಸ್

ಉಡುಪಿ: ಶಾಲಾ ವಾಹನಕ್ಕೆ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ!

– ಉಡುಪಿ: ಕಾರು- ದ್ವಿಚಕ್ರ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರು ಮೃತ್ಯು!
– ಕಾರ್ಕಳ: ಅಕ್ರಮ ದನ ‌ಸಾಗಾಟದ ಆರೋಪ – ಇಬ್ಬರ ಮೇಲೆ ಹಲ್ಲೆ!

NAMMUR EXPRESS NEWS
ಉಡುಪಿ: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಂತಲ್ ನಗರದ ಸಮೀಪ ಶಾಲಾ ವಾಹನವೊಂದಕ್ಕೆ ಇಕೋ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಾ.29 ರಂದು ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಶಾಲಾ ಮಕ್ಕಳ ವಾಹನ ಮಣಿಪುರ ಕಡೆಗೆ ಬರುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ಇಕೋ ಕಾರು ಶಾಲಾ ವಾಹನಕ್ಕೆ ಡಿಕ್ಕಿ (Accident) ಹೊಡೆದಿದೆ ಎನ್ನಲಾಗಿದೆ. ಅಪಘಾತದ ಪರಿಣಾಮ ಇಕೋ ಕಾರ್ ನಲ್ಲಿದ್ದ ತಂದೆ ಮಗ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

– ಉಡುಪಿ: ಕಾರು- ದ್ವಿಚಕ್ರ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರು ಮೃತ್ಯು!

ಉಡುಪಿ: ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಬಳ್ಳೂರು ಎಂಬಲ್ಲಿ ನಡೆದಿದೆ.
ಮೃತರನ್ನು ದ್ವಿಚಕ್ರ ವಾಹನ ಸವಾರರಾದ ರಾಜೀವ ಶೆಟ್ಟಿ (55) ಹಾಗೂ ಸುಧೀರ ದೇವಾಡಿಗ (35) ಎಂದು ಗುರುತಿಸಲಾಗಿದೆ.
ಕಂಡೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಬನ್ನೂರು ಸಮೀಪದ ಬಿ.ಎಚ್.ನಿಂದ ಕಂಡೂರಿನತ್ತ ತೆರಳುತ್ತಿದ್ದ ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿದ್ದು, ಇದರ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಸವಾರರಿಬ್ಬರು ದೂರಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಹಾಗೂ ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣೆ ಪೊಲೀಸರು ಹಾಗೂ ಹೈವೇ ಪಟ್ರೋಲ್ ಸಿಬ್ಬಂದಿ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಕಾರ್ಕಳ: ಅಕ್ರಮ ದನ ‌ಸಾಗಾಟದ ಆರೋಪ – ಇಬ್ಬರ ಮೇಲೆ ಹಲ್ಲೆ!

ಕಾರ್ಕಳ: ಅಕ್ರಮ ದನ‌ಸಾಗಾಟದ ಆರೋಪದಲ್ಲಿ ಬಜರಂಗದಳ‌ ಕಾರ್ಯಕರ್ತರು ಇಬ್ಬರಿಗೆ ಗಂಭೀರ ಹಲ್ಲೆ ನಡೆಸಿರುವ ಘಟನೆ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳುವಾಯಿಯಲ್ಲಿ ಸಂಭವಿಸಿದೆ.
ಮೂಡುಬಿದಿರೆ ಮೂಲದ ಅಬ್ದುಲ್ ರಹಿಮಾನ್ ಮತ್ತು ಕೂಸಪ್ಪ ಪೂಜಾರಿ ಗಂಭೀರವಾಗಿ ಹಲ್ಲೆಗೀಡಾದವರು ಎಂದು ತಿಳಿಯಲಾಗಿದೆ. ಅವರನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಬ್ದುಲ್ ರಹಿಮಾನ್ ಮತ್ತು ಕೂಸಪ್ಪ ಅವರು ಹೈಬ್ರೀಡ್ ಹಸುವನ್ನು ಕೃತಕ ಗರ್ಭಧಾರಣೆಗೆಂದು ವಾಹನವೊಂದರಲ್ಲಿ ಕಾರ್ಕಳದ ತಮ್ಮ ಪರಿಚಯದವರ ಮನೆಯಿಂದ ಮೂಡುಬಿದಿರೆಗೆ ತರುವಾಗ ಬೆಳುವಾಯಿ ಎಂಬಲ್ಲಿ ವಾಹನಕ್ಕೆ ಅಡ್ಡಗಟ್ಟಿದ ಬಜರಂಗದಳದ ಕಾರ್ಯಕರ್ತರು ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಾನೂನು ಪ್ರಕಾರ ದಾಖಲೆ ಪತ್ರಗಳನ್ನು ಇಟ್ಟುಕೊಂಡು ಹಸು ಸಾಗಾಟ ಮಾಡುತ್ತಿರುವುದಾಗಿ ಹೇಳಿದರೂ, ಹಬ್ಬಕ್ಕೆ ಕಡಿಯಲು ಕೊಂಡುಹೋಗುತ್ತಿರುವುದಾಗಿ ಹೇಳಿ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Categories
ರಾಜ್ಯ

ಬೆಂಗಳೂರು : ರಾಜ್ಯದ ಮೊದಲ ಟ್ರಾಫಿಕ್ ಸಿಗ್ನಲ್ ಆರಂಭಿಸಿದ್ದ ಗರುಡಾಚಾರ್ ನಿಧನ..!!

ಟಾಪ್ 4 ನ್ಯೂಸ್ ಕರ್ನಾಟಕ

ಬೆಂಗಳೂರು : ರಾಜ್ಯದ ಮೊದಲ ಟ್ರಾಫಿಕ್ ಸಿಗ್ನಲ್ ಆರಂಭಿಸಿದ್ದ ಗರುಡಾಚಾರ್ ನಿಧನ..!!
– ಬೆಳಗಾವಿ : ಮಾನಕ್ಕೆ ಹೆದರಿ ಸೈಬ‌ರ್ ಖದೀಮರಿಗೆ 6 ಲಕ್ಷ ರು. ಹಣ ಕೊಟ್ಟಿದ್ದ ದಂಪತಿ ಆತ್ಮಹತ್ಯೆ..!!
– ಚಿತ್ರದುರ್ಗ: ಟಿಟಿ ವಾಹನ ಪಲ್ಟಿಯಾಗಿ ಮೂವರು ಸಾವು..!!
– ಮೈಸೂರು: ಕೆರೆಯಲ್ಲಿ ಹಸು ತೊಳೆಯಲು ಹೋಗಿದ್ದ ಮೂವರು ನೀರುಪಾಲು ..!!

NAMMUR EXPRESS NEWS
ಬೆಂಗಳೂರು : ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ, ಶಾಸಕ ಉದಯ್ ಗರುಡಾಚಾರ್ ಅವರ ತಂದೆ ಬಿ.ಎನ್.ಗರುಡಾಚಾರ್ (96) ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಬಸವನಗುಡಿ ನಿವಾಸದಲ್ಲಿ ಮುಂಜಾನೆ ಸುಮಾರು 3 ಗಂಟೆಗೆ ವಯೋಸಹಜವಾಗಿ ಮೃತಪಟ್ಟಿದ್ದು, ಶನಿವಾರ ಸಂಜೆ ಸುಮಾರು 4 ಗಂಟೆಗೆ ವಿಲ್ಸನ್ ಗಾರ್ಡನ್‌ ಸ್ಮಶಾನದಲ್ಲಿ ಅಂತ್ಯ ಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯದ ನಾಗಮಂಗಲ ತಾಲೂಕು ಬಿಂಡಿಗನವಿಲೆ ಗ್ರಾಮದ ಗರುಡಾಚಾ‌ರ್ ಐಪಿಎಸ್ ಅಧಿಕಾರಿಯಾಗಿ ಸುದೀರ್ಘ ಕಾಲ ಕಾರ್ಯ ನಿರ್ವಹಿಸಿದ್ದರು. ಬೆಂಗಳೂರು ಜಿಲ್ಲೆಯ ಎಸ್ಪಿ, ಬೆಂಗಳೂರು ನಗರದ ಡಿಸಿಪಿಯಾಗಿ ಸುಮಾರು 8 ವರ್ಷ ಕಾರ್ಯನಿರ್ವಹಿಸಿದ್ದರು. ನಂತರ ನಗರ ಪೊಲೀಸ್ ಆಯುಕ್ತರಾಗಿ 4 ವರ್ಷ ಕೆಲಸ ಮಾಡಿದ್ದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ 3 ವರ್ಷ 8 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಗರುಡಾಚಾರ್ 1963ರಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸ್ ಉಪ ಆಯುಕ್ತರಾಗಿದ್ದ ವೇಳೆ ಕಾರ್ಪೊರೇಷನ್ ವೃತ್ತದಲ್ಲಿ ರಾಜ್ಯದ ಮೊದಲ ಟ್ರಾಫಿಕ್ ಸಿಗ್ನಲ್ ಪ್ರಾರಂಭಿಸಿದ್ದರು.
ಕಾರ್ಯದಕ್ಷತೆ ಮೆಚ್ಚಿ ಸರ್ಕಾರ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಿವೃತ್ತ ಐಪಿಎಸ್ ಅಧಿಕಾರಿಯನ್ನು ಕೆಎಟಿ ಸದಸ್ಯರನ್ನಾಗಿ ನೇಮಿಸಿತ್ತು.ಸುದೀರ್ಘ ಸೇವೆ, ಪ್ರಾಮಾಣಿಕತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಪ್ರಶಸ್ತಿ-ಪುರಸ್ಕಾರಳಿಗೆ ಭಾಜನರಾಗಿದ್ದರು.

– ಬೆಳಗಾವಿ : ಮಾನಕ್ಕೆ ಹೆದರಿ ಸೈಬ‌ರ್ ಖದೀಮರಿಗೆ 6 ಲಕ್ಷ ರು. ಹಣ ಕೊಟ್ಟಿದ್ದ ದಂಪತಿ ಆತ್ಮಹತ್ಯೆ..!!

ಬೆಳಗಾವಿ : ಸೈಬರ್ ಖದೀಮರು ತಾವು ಪೊಲೀಸರೆಂದು ವೃದ್ದ ದಂಪತಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು, ಹಣ ಕೊಡದಿದ್ದರೆ ನಿಮ್ಮ ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ ಪರಿಣಾಮ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರತ್ (83) ಮತ್ತು ಪಾವಿಯಾ (79) ಮೃತ ದಂಪತಿ. ದಂಪತಿಗೆ 1 ತಿಂಗಳಿಂದ ಬೆದರಿಕೆ ಹಾಕುತ್ತಿದ್ದ ಸೈಬ‌ರ್ ಖದೀಮರ ಖಾತೆಗೆ ಹೆದರಿ ವೃದ್ಧ ದಂಪತಿ 6 ಲಕ್ಷ ವರ್ಗಾವಣೆ ಮಾಡಿದ್ದಾರೆ. ಆದರೂ ಖದೀಮರು ಮತ್ತೆ ಹಣ ನೀಡುವಂತೆ ಪೀಡಿಸಿದ್ದರಿಂದ ಬೇಸತ್ತು ನಿದ್ರೆ ಮಾತ್ರೆ ಸೇವಿಸಿ ಪಾವಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಪತಿ ಡಿಯಾಗೋ ಡೆತ್ ನೋಟ್ ಬರೆದಿಟ್ಟು ಚಾಕುವಿನಿಂದ ಕತ್ತು ಕೊಯ್ದು ಕೊಂಡು ಜೀವ ಕಳೆದುಕೊಂಡಿದ್ದಾರೆ. ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

– ಚಿತ್ರದುರ್ಗ: ಟಿಟಿ ವಾಹನ ಪಲ್ಟಿಯಾಗಿ ಮೂವರು ಸಾವು..!!

ಚಿತ್ರದುರ್ಗ: ಟಿಟಿ ವಾಹನ ಪಲ್ಟಿಯಾಗಿ ಮೂವರು ಜನರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಶಂಕರಿಬಾಯಿ(65), ಕುಮಾರ ನಾಯ್ಕ್(46) ಮತ್ತು ಶ್ವೇತಾ(38) ಮೃತರು. ಐವರಿಗೆ ಗಂಭೀರ ಗಾಯಗಳಾಗಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

– ಮೈಸೂರು: ಕೆರೆಯಲ್ಲಿ ಹಸು ತೊಳೆಯಲು ಹೋಗಿದ್ದ ಮೂವರು ನೀರುಪಾಲು ..!!

ಮೈಸೂರು: ಕೆರೆಯಲ್ಲಿ ಹಸು ತೊಳೆಯಲು ಹೋಗಿದ್ದ ಮೂವರು ನೀರುಪಾಲಾಗಿರುವಂತಹ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಮಳ್ಳಿಯಲ್ಲಿ ನಡೆದಿದೆ. ಮುದ್ದೇಗೌಡ(48), ಬಸವೇಗೌಡ(45), ವಿನೋದ್(17) ಮೃತರು. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹಬ್ಬ ಹಿನ್ನೆಲೆ ಹಸುಗಳನ್ನು ತೊಳೆಯಲು ವಿನೋದ್ ಕೆರೆಗೆ ಹೋಗಿದ್ದರು. ಈ ವೇಳೆ ವಿನೋದ್‌ನನ್ನು ಹಸು ಕೆರೆಗೆ ಎಳೆದೊಯ್ದಿದೆ. ಆತನ ರಕ್ಷಣೆಗೆ ಮುದ್ದೇಗೌಡ ಮತ್ತು ಬಸವೇಗೌಡ ಕೆರೆಗೆ ಇಳಿದಿದ್ದಾರೆ. ಆದರೆ ಈಜು ಬಾರದೆ ನೀರಿನಲ್ಲಿ ಮುಳುಗಿ ಮೂವರೂ ಸಾವನ್ನಪ್ಪಿದ್ದಾರೆ.

Categories
ತೀರ್ಥಹಳ್ಳಿ

ನಾಗಪ್ಪ ಪಿಎಚ್ ಅವರಿಗೆ ರಾಷ್ಟ್ರೀಯ ಭಾವೈಕ್ಯತೆ ರಾಷ್ಟ್ರೀಯ ರತ್ನ ಪ್ರಶಸ್ತಿ

ನಾಗಪ್ಪ ಪಿಎಚ್ ಅವರಿಗೆ ರಾಷ್ಟ್ರೀಯ ಭಾವೈಕ್ಯತೆ ರಾಷ್ಟ್ರೀಯ ರತ್ನ ಪ್ರಶಸ್ತಿ
– ತೀರ್ಥಹಳ್ಳಿಯ ಸರ್ಕಾರಿ ಬಾಲಿಕಾ ಪ.ಪೂ ಕಾಲೇಜಿನ ಉಪ ಪ್ರಾಂಶುಪಾಲರು ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆ
– ಏ.7 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ (ರಿ) ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಇವರ ಸಹಯೋಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳಿಗೆ 2025- 26 ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಭಾವೈಕ್ಯತೆ ರಾಷ್ಟ್ರೀಯ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಏಪ್ರಿಲ್ 7 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಜೆ ಸಿ ರಸ್ತೆಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಸರ್ಕಾರಿ ಬಾಲಿಕಾ ಪ.ಪೂ ಕಾಲೇಜಿನ ಉಪ ಪ್ರಾಂಶುಪಾಲರಾದ ನಾಗಪ್ಪ ಪಿಎಚ್ ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಆಗಮಿಸಲಿದ್ದಾರೆ. ಅತ್ಯುತ್ತಮ ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ನಮ್ಮ ತೀರ್ಥಹಳ್ಳಿಯ ನಾಗಪ್ಪ ಪಿಎಚ್ ಉಪ ಪ್ರಾಂಶುಪಾಲರು ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲಾ ಇವರು ಕನ್ನಡ ಭಾಷೆ ಹಾಗೂ ಕನ್ನಡ ಶಿಕ್ಷಕರ ಪರವಾಗಿ ಹತ್ತಾರು ಕನ್ನಡ ಪರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಕರ್ನಾಟಕ ಚಾರಿಟಬಲ್ ಟ್ರಸ್ಟ್ ನಾಗಪ್ಪ ಪಿ.ಎಚ್ ಅವರು ಸಮಾಜ ಸೇವೆ ಸಲ್ಲಿಸಿರುವ ಸೇವೆಗಳನ್ನು ಗುರುತಿಸಿ ಅವರಿಗೆ ಗೌರವಪೂರ್ವಕವಾಗಿ 2025- 26 ನೇ ಸಾಲಿನ ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದು ನಮ್ಮ ತೀರ್ಥಹಳ್ಳಿಗೆ ಒಂದು ಹೆಮ್ಮೆಯ ಸಂಗತಿಯಾಗಿದೆ. ನಮ್ಮೂರ್ ಎಕ್ಸ್ಪ್ರೆಸ್ ಕಡೆಯಿಂದ ಇವರಿಗೆ ಅಭಿನಂದನೆಗಳು.

Categories
ರಾಷ್ಟ್ರೀಯ ವಾರ್ತೆ

ರಾಜ್ಯದ ಕಾರ್ಮಿಕರಿಗೆ ಸಿಹಿ ಸುದ್ದಿ!

ರಾಜ್ಯದ ಕಾರ್ಮಿಕರಿಗೆ ಸಿಹಿ ಸುದ್ದಿ!

– ನರೇಗಾ ಕಾರ್ಮಿಕರಿಗೆ 349/-ರೂ. ಗಳಿಂದ 370/- ರೂ.ಗಳಿಗೆ ಹೆಚ್ಚಳ
– ಕೂಲಿ ಹೆಚ್ಚಿಸಿದ ಕೇಂದ್ರ ಸರ್ಕಾರ!

NAMMUR EXPRESS NEWS
ನವದೆಹಲಿ: ನರೇಗಾ ಯೋಜನೆಯಡಿ ನೀಡುತ್ತಿದ್ದ ಕೂಲಿಯು 370/- ರೂ.ಗೆ ಹೆಚ್ಚಳವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ತಿಳಿಸಿದ್ದಾರೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ನೀಡುತ್ತಿರುವ 349/-ರೂ. ಗಳಿಂದ 370/- ರೂ.ಗಳಿಗೆ ಹೆಚ್ಚಿಸಲಾಗಿದೆ. ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ನೀಡಲಾಗುವುದು. ಏ.1ರಿಂದ ಅನ್ವಯವಾಗುವಂತೆ ಪಾವತಿಸಲು ಕೇಂದ್ರ ಸರ್ಕಾರ ಆದೇಶ ನೀಡಿದೆ.
ಗ್ರಾಮದ ಬಡ ಕೂಲಿ ಕಾರ್ಮಿಕರು ನಮೂನೆ-6ರಲ್ಲಿ ಅರ್ಜಿಯನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಿ, ಕೂಲಿ ಕೆಲಸವನ್ನು ತಮ್ಮ ಗ್ರಾಮದಲ್ಲೇ ಪ್ರತಿ ಕುಟುಂಬವು 100 ದಿನಗಳವರೆಗೆ ನರೇಗಾ ಕೆಲಸದಲ್ಲಿ ಭಾಗವಹಿಸುವಂತೆ ಅವರು ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ವಿಶೇಷ ಮಾರಾಟೋತ್ಸವ

ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ವಿಶೇಷ ಮಾರಾಟೋತ್ಸವ
– ಮಾರ್ಚ್ 26 ರಿಂದ 30ರವರೆಗೆ ಯುಗಾದಿ, ರಂಜಾನ್ ಹಬ್ಬದ ಆಫರ್
– ಬಹುಮಾನಗಳ ಜೊತೆಗೆ ವಿಶೇಷ ಆಫರ್ ಕೂಡ ಲಭ್ಯ

NAMMUR EXPRESS NEWS
ತೀರ್ಥಹಳ್ಳಿ : ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಹಾಗೂ ನ್ಯಾಷನಲ್ ಸಿಲ್ವರ್ಸ್ ಅಂಡ್ ವಾಚ್ ಗಳ ಕಡೆಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷವಾಗಿ ಮಾರ್ಚ್ 26 ರಿಂದ 30 ರವರೆಗೆ ಮಾರಾಟೋತ್ಸವ ನಡೆಯುತ್ತಿದೆ. ಸಾಕಷ್ಟು ರಿಯಾಯಿತಿಯ ಜೊತೆಗೆ ಬಹುಮಾನಗಳು ಕೂಡ ಲಭ್ಯ. ವಾಚ್ ಗಳ ಮೇಲೆ ಶೇ. 10ರಷ್ಟು ರಿಯಾಯಿತಿ FLAT ಎಲ್ಲಾ ಬ್ರಾಂಡ್ ಗಳಿಗೂ ಕೂಡ ಅನ್ವಯ, ಬೆಳ್ಳಿ ಸಾಮಾಗ್ರಿಗಳು ಹತ್ತು ಸಾವಿರ ರಿಯಾಯಿತಿ ಪ್ರತಿ ಕೆಜಿಗೆ, ಚಿನ್ನಾಭರಣ 35 % ರಿಯಾಯಿತಿ ಮಜೂರಿ ವೆಚ್ಚದಲ್ಲಿ, ವಜ್ರಭರಣವನ್ನು ಖರೀದಿ ಮಾಡುತ್ತೀರಾ ಎಂದರೆ 10,000 ರಿಯಾಯಿತಿ ಪ್ರತಿ ಕ್ಯಾರಟ್ ಗೆ ನೀವು ಚಿನ್ನ, ಬೆಳ್ಳಿ, ವಜ್ರ, ವಾಚ್ ಗಳನ್ನು ಖರೀದಿ ಮಾಡಿದರೆ ಉಚಿತ ಕೊಡುಗೆಯನ್ನು ಕೂಡ ನೀಡಲಾಗುತ್ತದೆ, ಆದರೆ 10,000 ಮೇಲ್ಪಟ್ಟ ಖರೀದಿಗೆ ಮಾತ್ರ ಅನ್ವಯವಾಗುತ್ತದೆ. ನೀವು ಕೂಡ ಈ ಮಾರಾಟೋತ್ಸವದಲ್ಲಿ ಭಾಗವಹಿಸಿ ಉಚಿತವಾಗಿ ಬಹುಮಾನಗಳನ್ನು ಪಡೆಯಿರಿ. ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಹಾಗೂ ನ್ಯಾಷನಲ್ ಸಿಲ್ವರ್ಸ್ ಅಂಡ್ ವಾಚ್ ವಿಶೇಷ ಕೊಡುಗೆ.

Categories
ಮಂಗಳೂರು

ಬೆಳ್ತಂಗಡಿ: ಅಣ್ಣನಿಂದಲೇ ಬಾಲಕಿಗೆ ಲೈಂಗಿಕ ಕಿರುಕುಳ!

ಮಂಗಳೂರು ಟಾಪ್ ನ್ಯೂಸ್!

ಬೆಳ್ತಂಗಡಿ: ಅಣ್ಣನಿಂದಲೇ ಬಾಲಕಿಗೆ ಲೈಂಗಿಕ ಕಿರುಕುಳ!

– – ಬಂಟ್ವಾಳ : ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ: ಗ್ರಾ. ಪಂ ಸದಸ್ಯ ಅರೆಸ್ಟ್!
– ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಗಂಭೀರ ಗಾಯ

NAMMUR EXPRESS NEWS
ಬೆಳ್ತಂಗಡಿ: ಬಾಲಕಿಗೆ ದೊಡ್ಡಮ್ಮನ ಮಗ ಮನೆಯಲ್ಲಿ ಕಿರುಕುಳ ನೀಡುತ್ತಿದ್ದ ಘಟನೆ ಬೆಳ್ತಂಗಡಿ ತಾಲೂಕು ಸುರಿಮೊಗ್ರು ಗ್ರಾಮದಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.
ಸುಕ್ಕೇರಿ ಮೊಗ್ರು ಹಿರಿಯ ಪ್ರಾಥಮಿಕ ಸಹಶಿಕ್ಷಕಿ ಒಬ್ಬರಿಗೆ ತನ್ನ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು, ಬಾಲಕಿಯನ್ನು ವಿಚಾರಣೆ ನಡೆಸಿದಾಗ ದೊಡ್ಡಮ್ಮನ ಮಗ ದೇವರ ಗುಡ್ಡೆಯ ಮನೆಯಲ್ಲಿ ಹಾಗೂ ಮೂರು ಸಲ ಕುತ್ತೂರಿನ ಅಜ್ಜನ ಮನೆಯಲ್ಲಿ ದೌರ್ಜನ್ಯ ಎಸಗಿರುವ ಬಗ್ಗೆ ತಿಳಿಸಿದ್ದಳು.
ಬಳಿಕ ಬಾಲಕಿಯ ತಾಯಿಗೆ ತಿಳಿಸಿದ್ದು, ವೇಣೂರು ಪೊಲೀಸ್ ಠಾಣೆಯಲ್ಲಿ ಮಾ.26ರಂದು ದೂರು ದಾಖಲಾಗಿದೆ.

– ಬಂಟ್ವಾಳ : ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ: ಗ್ರಾ. ಪಂ ಸದಸ್ಯ ಅರೆಸ್ಟ್!

ಬಂಟ್ವಾಳ : ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿ, ಬಸ್ಸಿನಿಂದ ಇಳಿದು ಪರಾರಿಯಾಗುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಮತ್ತೆ ಬಸ್ಸಿಗೆ ಹತ್ತಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.
ಆರೋಪಿಯನ್ನು ನಾವೂರ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಯಾನೆ ಮೋನು ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ನೀಡಿದ ದೂರಿನಂತೆ ಉದ್ದೇಶ ಪೂರ್ವಕವಾಗಿ ಕಿರುಕುಳ ನೀಡಿದ ಆರೋಪದಲ್ಲಿ ಆತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಗಂಭೀರ ಗಾಯ

ಪುತ್ತೂರು: ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ ಘಟನೆ ಪುತ್ತೂರು (ಪುತ್ತೂರು) ಪಡೀಲ್ ಸಮೀಪ ಮಾ. 28ರಂದು ರಾತ್ರಿ ನಡೆದಿದೆ.
ಗಂಭೀರ ತೊಂದರೆ ಜೊಮ್ಯಾಟೊ ಡೆಲಿವರಿ ಬಾಯ್ ನಿತ್ಯಾನಂದ ಎಂದು ತಿಳಿದು ಬಂದಿದೆ. ಸ್ಥಳೀಯರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಸಂಚಾರಿ ಠಾಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Categories
ರಾಜ್ಯ

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಒಂಟಿ ದಂತವಿದ್ದ ಕಾಡಾನೆ ಕಳೇಬರ ಪತ್ತೆ..!!

ಟಾಪ್ 5 ನ್ಯೂಸ್ ಕರ್ನಾಟಕ

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಒಂಟಿ ದಂತವಿದ್ದ ಕಾಡಾನೆ ಕಳೇಬರ ಪತ್ತೆ..!!
– ರಾಯಚೂರು: ನಕಲಿ ಚಿನ್ನದ ಮೇಲೆ ಸಾಲ ಪಡೆದು 10 ಕೋಟಿ ವಂಚಿಸಿದ ಮ್ಯಾನೇಜರ್..!!
– ಶಿವಮೊಗ್ಗ : ಅಂಕಪಟ್ಟಿ ತಿದ್ದಿ ಮೆಸ್ಕಾಂನಲ್ಲಿ ಕೆಲಸ ಪಡೆದುಕೊಂಡಿದ್ದ ಇಬ್ಬರಿಗೆ ಜೈಲು ಶಿಕ್ಷೆ..!!
– ರಾಯಚೂರು: ಸಾವಿನಲ್ಲಿಯೂ ಒಂದಾದ ದಂಪತಿ.!!
– ಕೊಡಗು : ಒಂದೇ ಕುಟುಂಬ ನಾಲ್ಕು ಜನರನ್ನು ಹತ್ಯೆಗೈದ ರಾಕ್ಷಸ..!!

NAMMUR EXPRESS NEWS
ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ವ್ಯಾಪ್ತಿಯ ಹೆಜ್ಜೆಯ ವಲಯದಲ್ಲಿ ಸುಮಾರು 50 ವರ್ಷ ಪ್ರಾಯದ ಒಂಟಿ ದಂತ ಹೊಂದಿದ್ದ ಸಲಗ ಸಾವನ್ನಪ್ಪಿದೆ. ಆನೆಯು ಕಳೆದ ಮೂರು ದಿನಗಳ ಹಿಂದೆಯೇ ಮೃತಪಟ್ಟಿದ್ದು ತೇಗೂರು ಗುಡ್ಡ ಬೇಟೆ ನಿಗ್ರಹ ಪಡೆಯ ಸಿಬ್ಬಂದಿ ಅರಣ್ಯ ಗಸ್ತು ತಿರುಗುವಾಗ ಆನೆಯ ಕಳೇಬರ ಪತ್ತೆಯಾಗಿದೆ. ಕಳೆದ ಎರಡು ವರ್ಷದಿಂದ ಆನೆಯ ಹಿಂಬದಿ ಎಡಗಾಲು ಡೊಂಕಾಗಿ ಕುಂಟುತ್ತ ಆರಣ್ಯದಲ್ಲಿ ಆಹಾರ ಅರಸುತ್ತಿತ್ತು ಎನ್ನಲಾಗಿದೆ. ಪ್ರಕಾಶ್ ನೇತೃತ್ವದ ಪಶು ವೈದ್ಯರ ತಂಡ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದೆ. ಅದರ ಹೊಟ್ಟೆಯಲ್ಲಿ ಯಾವುದೇ ಆಹಾರ ಕಂಡುಬಂದಿಲ್ಲ. ಹೀಗಾಗಿ ಆನೆ ಸಹಜವಾಗಿ ಸಾವನ್ನಪ್ಪಿದೆ ಎನ್ನಲಾಗಿದೆ. ಸರ್ಕಾರದ ಆದೇಶದ ಅನ್ವಯ ಆನೆಯ ದಂತವನ್ನು ತೆಗೆದು ಆನೆಯ ಕಳೇಬರ ಅಲ್ಲಿಯೇ ಬಿಡಲಾಗಿದೆ.

– ರಾಯಚೂರು: ನಕಲಿ ಚಿನ್ನದ ಮೇಲೆ ಸಾಲ ಪಡೆದು 10 ಕೋಟಿ ವಂಚಿಸಿದ ಮ್ಯಾನೇಜರ್..!!

ರಾಯಚೂರು: ಬೇನಾಮಿ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ನಕಲಿ ಚಿನ್ನವನ್ನೇ ಅಡವಿಟ್ಟು ಅದರ ಮೇಲೆ ಸಾಲ ಪಡೆದ ಮ್ಯಾನೇಜರ್ 10 ಕೋಟಿ ವಂಚಿಸಿದ ಘಟನೆ ನಗರದ ಮಹಾರಾಷ್ಟ್ರ ಬ್ಯಾಂಕ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನಗರದ ಬ್ಯಾಂಕ್ ಆಫ್‌ ಮಹಾರಾಷ್ಟ್ರ ಶಾಖೆಯ ವ್ಯವಸ್ಥಾಪಕ(ಮ್ಯಾನೇಜರ್) ಕೆ.ನರೇಂದ್ರರೆಡ್ಡಿ ಎಂಬುವವರು ಬೇನಾಮಿ ಹೆಸರುಗಳಲ್ಲಿ 105 ಖಾತೆಗಳನ್ನು ತೆರೆದು ಆ ಖಾತೆಗಳ ಮೂಲಕ ನಕಲಿ ಚಿನ್ನವನ್ನು ಅಡವಿಟ್ಟು ಸುಮಾರು 10.97 ಕೋಟಿಯಷ್ಟು ಸಾಲವನ್ನು ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ಲೆಕ್ಕಪರಿಶೋಧನೆ ಸಂದರ್ಭದಲ್ಲಿ ಪತ್ತೆಯಾಗಿದೆ. ನಕಲಿ ಗೋಲ್ಡ್ ಲೋನ್ ಖಾತೆಗಳಿಂದ 8 ಸಂಬಂಧಿಕರ ಆಕೌಂಟ್‌ಗೆ ಹಣ ವರ್ಗಾಮಾಡಿದ್ದು, ಹಿಂದಿನ ಬ್ಯಾಂಕ್‌ನ ಸಹೋದ್ಯೋಗಿ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿದ್ದು ವಂಚನೆ ಬಯಲು ಆಗುತ್ತಿದ್ದಂತೆ ಬ್ಯಾಂಕ್‌ನಿಂದ ಮ್ಯಾನೇಜ‌ರ್ ಕೆ.ನರೇಂದ್ರ ರೆಡ್ಡಿ ಪರಾರಿಯಾಗಿದ್ದಾನೆ.

– ಶಿವಮೊಗ್ಗ :ಅಂಕಪಟ್ಟಿ ತಿದ್ದಿ ಮೆಸ್ಕಾಂನಲ್ಲಿ ಕೆಲಸ ಪಡೆದುಕೊಂಡಿದ್ದ ಇಬ್ಬರಿಗೆ ಜೈಲು ಶಿಕ್ಷೆ..!!

ಶಿವಮೊಗ್ಗ: ಅಂಕಪಟ್ಟಿ ತಿದ್ದುಪಡಿ ಮಾಡಿ ಮೆಸ್ಕಾಂ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2016ರಲ್ಲಿ ಗಣೇಶ್ ಗೌಡ ಬಿ.ಜಿ ಮತ್ತು ಬಿ.ಬಿ. ಗಿರೀಶ್ ಇವರು ಕರ್ತವ್ಯಕ್ಕೆ ವರದಿ ಮಾಡಿಕೊಂಡಾಗ, ಎಸ್ಸೆಸ್ಸೆಲ್ಸಿ ಮೂಲ ಅಂಕಪಟ್ಟಿಯ ಬದಲಾಗಿ ಜೆರಾಕ್ಸ್ ಅಂಕಪಟ್ಟಿ ಸಲ್ಲಿಸಿ ವಂಚಿಸಿದ್ದು, ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಹಾಗೂ ಪಿಎಸ್‌ಐ ಇಮ್ರಾನ್ ಬೇಗ್, ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕರಾದ ಕಿರಣ್ ಕುಮಾರ್ ಹಾಗೂ ರಂಜಿತ್ ಕುಮಾರ್ ಪ್ರಕರಣದ ವಾದ ಮಂಡಿಸಿದ್ದು, ನ್ಯಾಯಾಧೀಶರಾದ ಶಿವಕುಮಾರ್ ಜಿ.ಎನ್. ಅವರು ಆರೋಪಿಗಳ ವಂಚನೆ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ತಲಾ 4 ಸಾವಿರ ದಂಡ ಹಾಗೂ 6 ತಿಂಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

– ರಾಯಚೂರು: ಸಾವಿನಲ್ಲಿಯೂ ಒಂದಾದ ದಂಪತಿ..!!

ರಾಯಚೂರು: ಜೀವನದಲ್ಲಿ ಬಾಳ ಸಂಗಾತಿಯಾಗಿ ಜೀವನ ಸಾಗಿಸಿದ್ದ ದಂಪತಿ ಸಾವಿನಲ್ಲೂ ಒಂದಾಗಿರುವ ಅಪರೂಪದ ಪ್ರಸಂಗ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ನಡೆದಿದೆ. ಪತ್ನಿ ಮೃತಪಟ್ಟು ಕೆಲವೇ ಗಂಟೆಗಳಲ್ಲೇ ಪತಿಯೂ ಪ್ರಾಣ ಬಿಟ್ಟಿದ್ದಾರೆ. ಕಳೆದ ಒಂದು ತಿಂಗಳಿಂದ ಬಿ.ಅಮರಮ್ಮ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದು, ಗುರುವಾರ ರಾತ್ರಿ ನಿಧನರಾದರು. ಈ ಸುದ್ದಿ ತಿಳಿದ ಪತಿ ಬಿ.ರಾಜಶೇಖರ ಆತ್ಮಸ್ಥೆರ್ಯ ಕಳೆದುಕೊಂಡಿದ್ದಾರೆ. ಅವರಿಗೂ ಆರೋಗ್ಯ ಸಮಸ್ಯೆ ಇತ್ತು. ಶುಕ್ರವಾರ ಬೆಳಗಿನ ಜಾವ ಅವರು ಕೂಡ ಪ್ರಾಣ ಬಿಟ್ಟಿದ್ದಾರೆ. ಅವರಿಗೆ ಪುತ್ರ, ಪುತ್ರಿ ಇದ್ದು, ಶುಕ್ರವಾರ ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

– ಕೊಡಗು : ಒಂದೇ ಕುಟುಂಬ ನಾಲ್ಕು ಜನರನ್ನು ಹತ್ಯೆಗೈದ ರಾಕ್ಷಸ..!!

ಕೊಡಗು : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ, ಪುತ್ರಿ, ಅತ್ತೆ ಮಾವನನ್ನು ಹತ್ಯೆಗೈದಿರುವ ಭೀಕರ ಘಟನೆ ನಡೆದಿದೆ. ಕೇರಳ ಮೂಲದ ಗಿರೀಶ್ (35) ಎಂಬಾತ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ. ಬೇಗೂರಿನ ತನ್ನ ಮನೆಯಲ್ಲಿದ್ದ ಪತ್ನಿ ನಾಗಿ (30), ಪುತ್ರಿ ಕಾವೇರಿ (5), ಮಾವ ಜೇನು ಕುರುಬರ ಕರಿಯ(75), ಅತ್ತೆ ಗೌರಿ(70 ಯನ್ನು ಕತ್ತಿಯಿಂದ ಕತ್ತರಿಸಿ ಅಮಾನವೀಯ ಕೃತ್ಯವೆಸಗಿದ್ದಾನೆ. ಸುಮಾರು 7 ವರ್ಷಗಳ ಹಿಂದೆ ಗಿರೀಶ್ ಹಾಗೂ ನಾಗಿ ವಿವಾಹವಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರ್ಮಿಕರಾಗಿರುವ ದಂಪತಿ ತಮ್ಮ ಪುತ್ರಿಯೊಂದಿಗೆ ಇತ್ತೀಚಿಗೆ ಬೇಗೂರಿನ ಮಾವನ ಮನೆಗೆ ಬಂದು ವಾಸವಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಗಿರೀಶ್ ಪತ್ತೆಗೆ ಪೊಲೀಸರು ಕಾರ್ಯಚರಣೆ ಕೈಗೊಂಡಿದ್ದಾರೆ.