Categories
ಮಲ್ನಾಡ್

ಕೊಪ್ಪದಲ್ಲಿ 9ನೇ ಕ್ಲಾಸ್ ಹುಡುಗಿ ಆತ್ಮಹತ್ಯೆ!!

ಟಾಪ್ ನ್ಯೂಸ್ ಮಲ್ನಾಡ್

ಕೊಪ್ಪದಲ್ಲಿ 9ನೇ ಕ್ಲಾಸ್ ಹುಡುಗಿ ಆತ್ಮಹತ್ಯೆ!!
– ಶಾಲೆಯ ವಸತಿ ನಿಲಯದಲ್ಲಿ ಘಟನೆ: ತನಿಖೆ ಶುರು

– ಸೊರಬ: ಮದುವೆಗೆ ಮುನ್ನ ಗರ್ಭಿಣಿ, ಮಗಳ ಕೊಲೆಗೆ ಯತ್ನಿಸಿದ ತಂದೆ!
– ಹೊಸನಗರ: ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು
– ತೀರ್ಥಹಳ್ಳಿ: 2 ದಿನದ ಬಳಿಕ ಹೆಚ್ಚಾಯ್ತು ಮಳೆ!

NAMMUR EXPRESS NEWS
ಕೊಪ್ಪ: ನೇಣು ಬಿಗಿದುಕೊಂಡು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ. ಕೊಪ್ಪ ತಾಲೂಕಿನ ಬೊಮ್ಮಲಾಪುರದ ಹೊಕ್ಕಳಿಕೆ ಮೂಲದ ವಿದ್ಯಾರ್ಥಿನಿ ಶಮಿತ ಮೃತ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.
ಕೊಪ್ಪದ ಮೊರಾರ್ಜಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಚೂಡಿದಾರ್ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮದುವೆಗೆ ಮುನ್ನ ಗರ್ಭಿಣಿ, ಮಗಳ ಕೊಲೆಗೆ ಯತ್ನಿಸಿದ ತಂದೆ!

ಮದುವೆಗೂ ಮುನ್ನವೇ ಮಗಳು ಗರ್ಭಿಣಿಯಾಗಿದ್ದಾಳೆ ಎಂಬ ವಿಷಯದಲ್ಲಿ ಮರ್ಯಾದೆಗೆ ಅಂಜಿ ಮಗಳನ್ನ ತಂದೆಯೇ ಕೊಲೆ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಗ್ರಾಮದಲ್ಲಿ ನಡೆದಿದೆ.
ಪುತ್ರಿ ಗರ್ಭಿಣಿಯಾದ ವಿಷಯ ವಿಷಯ ತಿಳಿದ ತಂದೆ ಧರ್ಮಾನಾಯ್ಕ ಸಿಟ್ಟಾಗಿದ್ದರು. ಆಸ್ಪತ್ರೆಗೆ ಹೋಗೋಣವೆಂದು ಹೇಳಿ ಪತ್ನಿ ಹಾಗೂ ಮಗಳನ್ನ ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರು ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದರು.ಅರಣ್ಯ ಪ್ರದೇಶದಲ್ಲಿ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪತ್ನಿ ಮಗಳನ್ನ ಸಾಯಿಸ ಬೇಡಿ ಎಂದು ಪತಿ ಧರ್ಮನಾಯ್ಕರ ಕಾಲಿಗೆ ಬಿದ್ದಿದ್ದಾರೆ. ಕಾಲಿಗೆ ಬಿದ್ದರೂ ಪತಿ ಒಪ್ಪಿಕೊಳ್ಳಲಿಲ್ಲ. ಈ ವೇಳೆ ಮಗಳು ಪ್ರಜ್ಞೆತಪ್ಪಿ ಬಿದ್ದಿದ್ದಾಳೆ.
ಪ್ರಜ್ಞೆ ತಪ್ಪಿದ ಮಗಳನ್ನ ಸತ್ತಿದ್ದಾಳೆ ಎಂದು ಭಾವಿಸಿ ತಂದೆ ತಾಯಿ ಊರಕಡೆ ಹೊರಟಿದ್ದಾರೆ. ನಂತರ ಪ್ರಜ್ಞೆ ಬಂದ ಯುವತಿ ಕಾಡಿನಿಂದ ರಸ್ತೆಯ ವರೆಗೆ ನಡೆದುಕೊಂಡು ಬಂದು ಸ್ಥಳೀಯರ ಸಹಾಯದಿಂದ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾಳೆ. ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ಹೊಸನಗರ: ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು

ಹೊಸನಗರ ; ವಿಕೃತ ಮನಸ್ಥಿತಿಯ ಪಾಪಿಗಳು ಮೇಯಲು ಬಿಟ್ಟ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತೋಟದಕೊಪ್ಪ ಗ್ರಾಮದ ವಿಜಾಪುರ ಎಂಬಲ್ಲಿ ಶನಿವಾರ ನಡೆದಿದೆ.
ಹಸುವಿನ ಮಾಲೀಕ ನವೀನ್ ಎಂಬುವರು ಹೊಸನಗರ ಠಾಣೆಯಲ್ಲಿ ದೂರು ನೀಡಿದ್ದು, ‘ಎಂದಿನಂತೆ ನಮ್ಮ ದನಗಳನ್ನು ಮೇಯಲು ಬಿಟ್ಟಿದ್ದು ಶನಿವಾರ ಸಂಜೆ 4:30ರ ಸುಮಾರಿಗೆ ಊರಿನ ಜನರು ಫೋನ್ ಕರೆ ಮಾಡಿ, ನಿಮ್ಮ ದನದ ಕೆಚ್ಚಲಿನಲ್ಲಿ ರಕ್ತ ಸೋರುತ್ತಿರುವುದಾಗಿ ವಿಷಯ ತಿಳಿಸಿದ್ದು ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದಾಗ 9 ವರ್ಷ ಪ್ರಾಯದ ಕರು ಹಾಕಿದ ಮಲೆನಾಡು ಗಿಡ್ಡ ತಳಿಯ ನಮ್ಮ ದನದ ಕೆಚ್ಚಲಿನಿಂದ ರಕ್ತ ಸೋರುತ್ತಿರುವುದು ಕಂಡು ಬಂದಿದ್ದು ಯಾರೋ ದನದ ಕೆಚ್ಚಲು ಕೊಯ್ದಿರುವ ಬಗ್ಗೆ ಅನುಮಾನ ಬಂದಿದೆ. ನಂತರ ಗ್ರಾಮಸ್ಥರ ಸಹಾಯದಿಂದ ದನವನ್ನು ಮನೆಗೆ ಕರೆತಂದು ಪಶು ವೈದ್ಯರಿಂದ ಹೊಲಿಗೆ ಹಾಕಿಸಿ ಚಿಕಿತ್ಸೆ ಕೊಡಿಸಿದ್ದೇವೆ’.
ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀರ್ಥಹಳ್ಳಿ: 2 ದಿನದ ಬಳಿಕ ಹೆಚ್ಚಾಯ್ತು ಮಳೆ..!

ಮೂರು ದಿನದ ಬಳಿಕ ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಶನಿವಾರ ರಾತ್ರಿಯಿಂದ ಮಳೆ ಜೋರಾಗಿದೆ. ಕೊಪ್ಪ, ಶೃಂಗೇರಿ ಭಾಗದಲ್ಲಿ ಕೂಡ ಮಳೆ ಹೆಚ್ಚಾಗಿದೆ.

Categories
ವಿಶೇಷ ಸುದ್ದಿ

“ಮಾತುಗಳಿಲ್ಲದ ಪ್ರೀತಿ ಮತ್ತು ತೃಪ್ತಿಯ ನಿಶಬ್ದ ಸ್ಪರ್ಶ ಹೃದಯವೊಂದರ ದೊಡ್ಡ ಪಾಠ”

“ಮಾತುಗಳಿಲ್ಲದ ಪ್ರೀತಿ ಮತ್ತು ತೃಪ್ತಿಯ ನಿಶಬ್ದ ಸ್ಪರ್ಶ: ಹೃದಯವೊಂದರ ದೊಡ್ಡ ಪಾಠ”

ಸಂಜೆ ಸಮಯ. ಕುಡಿದ ಮಳೆ ಹನಿಗಳು ಬೀಳುತ್ತಿದ್ದವು. ರಸ್ತೆಯ ಬದಿಯಲ್ಲಿ ಚಳಿಯಲ್ಲಿ ಕಂಪಿಸುತ್ತ ನಿಂತಿದ್ದ ಒಂದು ನಾಯಿ… ಎದೆಯೊಳಗೆ ತೀವ್ರ ಹಸಿವಿನ ಹೊತ್ತೊತ್ತಿರುವ ಉರಿ. ತನ್ನ ಬಾಯಲ್ಲಿ ಬಡತನ, ಎದೆಯಲ್ಲಿ ನಿರಾಶೆ, ಕಣ್ಣಲ್ಲಿ ಮಾತ್ರ ಭರವಸೆ ಇತ್ತು—ಯಾರಾದರೂ ದಯೆ ತೋರಿಸಬಹುದೆಂಬುದು!
ಅದೇ ಸಂದರ್ಭದಲ್ಲಿ, ಶಾಲೆಯಿಂದ ಹಿಂದಿರುಗುತ್ತಿದ್ದ ಹತ್ತು-ಹನ್ನೆರಡು ವರ್ಷದ ಹುಡುಗನ ಕೈಯಲ್ಲಿ ಬಿಸಿಯ ಬಜ್ಜಿಯ ಹೊದಿಕೆ. ತನ್ನ ಜೋಲೆಗೆ ಕೈ ಹಾಕಿದಂತೆ ಎದೆಯಲ್ಲಿ ಏನೋ ತಟತಟಿಸಿತು ಅವನಿಗೆ. ಆ ನಾಯಿಯ ಕಣ್ಣು ಅವನನ್ನು ಕಟ್ಟಿ ಹಾಕಿದವು. ಹೌದು, ಭಯವಿಲ್ಲದ ಪ್ರೀತಿ, ಮಾತಿಲ್ಲದ ಬೇಡಿಕೆ, ಕಿವಿಗೂಟ್ಟುವ ಮೌನ ಕ್ರಂದನೆ!
ಆ ಹುಡುಗ ಅದೊಂದು ಕ್ಷಣದೂ ವಿಳಂಬವಿಲ್ಲದೇ ಬಜ್ಜಿ ಪುಡಿಯೊಂದನ್ನು ತನ್ನ ಕೈಯಿಂದ ತೆಗೆಯುತ್ತಾ ನಾಯಿಗೆ ತೋರಿಸುತ್ತಾನೆ. ಆದರೆ ಹುಡುಗನನ್ನು ಕಂಡು ನಾಯಿ ತುಂಟತನದಿಂದ ತುಳಿದು ಬರುವುದಿಲ್ಲ. ಬದಲು ತಾನೊಂದು ಬಿಕ್ಕಟ್ಟಿನ ಕದೆಯಲ್ಲಿರುವಂತಹ ಬಡವರ ತಾಳ್ಮೆಯ ನೋಟವಿಟ್ಟು, ತನ್ನ ಮುಂದಿನ ಎರಡೂ ಕಾಲುಗಳನ್ನು ಎತ್ತಿ ನಿಂತು ತಾನು ತಿಂಡಿಗೆ ಅರ್ಹ ಎಂಬುದನ್ನು ತೋರಿಸಲು ಯತ್ನಿಸುತ್ತದೆ.
ಅದು ಮನುಷ್ಯನಂತೆ ಕೈ ಜೋಡಿಸಿದ ಹಾವಭಾವ. ಏನು ಕೇಳುತ್ತಿದ್ದೆ ಎನ್ನುವುದನ್ನು ಮೂಕವಾಗಿ ಅಳಿದು ಹೇಳುವ ಪ್ರಭಾವ. ಹುಡುಗನ ಮನಸ್ಸು ತೊಳಲಾಯ್ತು. ತಾನು ತಿಂದರೆ ತೃಪ್ತಿ, ಆದರೆ ಈ ನಾಯಿಗೆ ನೀಡಿದರೆ ಸಂತೋಷ… ಹೀಗಾಗಿ ತನ್ನ ಬಜ್ಜಿ ಪೂರ್ಣವಾಗಿ ಅದಕ್ಕೇ ನೀಡಿದ.
ನಾಯಿ ಮೃದುವಾಗಿ ತಿಂಡಿಯನ್ನು ಸ್ವೀಕರಿಸುತ್ತ, ತನ್ನ ಕೂದಲನ್ನು ನಕ್ಕು ಹುಡುಗನ ಕೈ ಮೇಲೆ ಮೃದುವಾಗಿ ತಲೆ ಕೆಳಗಿಟ್ಟಿತು. ನಿಶಬ್ದ ಧನ್ಯವಾದದ ಸ್ಪರ್ಶ!
ಇದು ಪುಟ್ಟ ಸನ್ನಿವೇಶ. ಆದರೆ ಇಲ್ಲಿ ಮನುಷ್ಯತ್ವ ಜಯಿಸಿದ್ದೆ. ಒಂದು ನಾಯಿ ಮಾತ್ರವಲ್ಲ, ನಾವು ಎಷ್ಟೊಮ್ಮೆ ಮನುಷ್ಯರ ಪ್ರೀತಿಗೆ ಹಸಿವಾಗಿರುತ್ತೇವೆ. ಅದು ಊಟವಲ್ಲ, ಮನಸ್ಸಿನ ಬಡತನವಲ್ಲ… ಇದು ಒಂದು ಹೃದಯದಿಂದ ಹೊರಟ ನಿಸ್ವಾರ್ಥ ಪಾಠ.

ರಾಂ ಅಜೆಕಾರು ಕಾರ್ಕಳ 

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಸೂರ್ಯ ದೇವನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ವೃತ್ತಿಪರ ಜೀವನದಲ್ಲಿ ಏರಿಳಿತಗಳು ಇರುತ್ತವೆ. ಕೆಲಸದ ಬಗ್ಗೆ ಅಸಡ್ಡೆ ತೋರಬೇಡಿ. ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ. ಹಣವನ್ನು ಎಚ್ಚರಿಕೆಯಿಂದ ವ್ಯವಹರಿಸಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿಪರ ಜೀವನದಲ್ಲಿ ಪ್ರಮುಖ ಸಾಧನೆಗಳನ್ನು ಸಾಧಿಸಲಾಗುತ್ತದೆ. ಆದರೆ, ಕೆಲಸದ ಒತ್ತಡವೂ ಹೆಚ್ಚಾಗುತ್ತದೆ. ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಿ.

** ವೃಷಭ ರಾಶಿ :
ಇಂದು ನೀವು ಹಣಕಾಸಿನ ವಿಷಯಗಳಲ್ಲಿ ಅದೃಷ್ಟಶಾಲಿಯಾಗಿರುತ್ತೀರಿ. ಹಣ ಗಳಿಸಲು ನಿಮಗೆ ಅನೇಕ ಅವಕಾಶಗಳು ಸಿಗುತ್ತವೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ದಿನ. ಕಚೇರಿಯಲ್ಲಿ ಕೆಲಸದ ಹೆಚ್ಚುವರಿ ಜವಾಬ್ದಾರಿಯನ್ನು ನೀವು ಪಡೆಯುತ್ತೀರಿ. ವೃತ್ತಿಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುತ್ತದೆ. ಜನರು ನಿಮ್ಮ ಕೆಲಸದಿಂದ ಪ್ರೇರಿತರಾಗುತ್ತಾರೆ. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ.

** ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಇಂದು ಹಣಕಾಸಿನ ಲಾಭಕ್ಕಾಗಿ ಹೊಸ ಅವಕಾಶಗಳು ಸಿಗುತ್ತವೆ. ಕಚೇರಿಯಲ್ಲಿ ನಿಮ್ಮ ಕೆಲಸದಿಂದ ಬಾಸ್ ಪ್ರಭಾವಿತರಾಗುತ್ತಾರೆ. ಕಚೇರಿಯಲ್ಲಿನ ಎಲ್ಲಾ ಕೆಲಸಗಳನ್ನು ಹೆಚ್ಚಿನ ಜವಾಬ್ದಾರಿಯೊಂದಿಗೆ ನಿರ್ವಹಿಸಿ. ಇದು ವೃತ್ತಿಜೀವನದ ಬೆಳವಣಿಗೆಗೆ ಅನೇಕ ಸುವರ್ಣ ಅವಕಾಶಗಳನ್ನು ನೀಡುತ್ತದೆ. ಸಂಪತ್ತು ಮತ್ತು ಆಸ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿ ನಿಮಗೆ ಸಿಗುತ್ತದೆ.

** ಕರ್ಕಾಟಕ ರಾಶಿ :
ಇಂದು ಕಟಕ ರಾಶಿಯವರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ವೃತ್ತಿಪರ ಜೀವನದ ಸಮಸ್ಯೆಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಹಳೆಯ ಹೂಡಿಕೆಗಳಿಂದ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ಮನೆಯಲ್ಲಿ ಒತ್ತಡದ ವಾತಾವರಣವಿರುತ್ತದೆ. ಕುಟುಂಬ ಕಾರ್ಯಗಳ ಸಮಯದಲ್ಲಿ ಉದ್ವಿಗ್ನತೆ ಹೆಚ್ಚಾಗಬಹುದು.

** ಸಿಂಹ ರಾಶಿ :
ಇಂದು ನೀವು ಹಳೆಯ ಹೂಡಿಕೆಗಳಿಂದ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ. ಹಣದ ಒಳಹರಿವು ಹೆಚ್ಚಾಗುತ್ತದೆ. ನೀವು ವೃತ್ತಿಜೀವನದಲ್ಲಿ ಅಪೇಕ್ಷಿತ ಯಶಸ್ಸನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗೆ ಕುಟುಂಬ ಸಮಾರಂಭದಲ್ಲಿ ಭಾಗವಹಿಸುತ್ತೀರಿ. ಪ್ರಯಾಣದ ಸಾಧ್ಯತೆಗಳು ಇರುತ್ತವೆ. ನಿಮ್ಮ ವೃತ್ತಿಜೀವನದ ಗುರಿಗಳನ್ನು ಸಾಧಿಸುವ ಮಹತ್ವಾಕಾಂಕ್ಷೆಯನ್ನು ನೀವು ಹೊಂದಿರುತ್ತೀರಿ. ಕೆಲವರು ಹೊಸ ಆಸ್ತಿಯನ್ನು ಖರೀದಿಸಲು ಯೋಜಿಸಬಹುದು.

** ಕನ್ಯಾ ರಾಶಿ :
ಇಂದು ನೀವು ಆರ್ಥಿಕ ವಿಷಯಗಳಲ್ಲಿ ಅದೃಷ್ಟಶಾಲಿಯಾಗುತ್ತೀರಿ. ವೃತ್ತಿಪರ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುತ್ತದೆ. ಮನೆಯಲ್ಲಿ ಕುಟುಂಬದಿಂದ ಬೆಂಬಲವನ್ನು ಪಡೆಯುತ್ತೀರಿ. ನೀವು ಕುಟುಂಬ ಸದಸ್ಯರೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು. ಹೊಸ ಆಸ್ತಿಯನ್ನು ಖರೀದಿಸುವ ಅವಕಾಶಗಳು ಇರುತ್ತವೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ನೀವು ಹೆಚ್ಚಿನ ಉತ್ಸಾಹದಿಂದ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

** ತುಲಾ ರಾಶಿ :
ಇಂದು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇಂದು ಉತ್ತಮ ದಿನ. ವೃತ್ತಿಪರ ಜೀವನದಲ್ಲಿ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ಹೊಸ ಯೋಜನೆಯ ಜವಾಬ್ದಾರಿಯನ್ನು ನೀವು ಪಡೆಯುತ್ತೀರಿ. ನೀವು ಯಶಸ್ಸಿನ ಮೆಟ್ಟಿಲು ಹತ್ತುತ್ತೀರಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ.

** ವೃಶ್ಚಿಕ ರಾಶಿ :
ಇಂದು ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಹಳೆಯ ಹೂಡಿಕೆಗಳಿಂದ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯದ ಮೇಲೆ ಗಮನಹರಿಸಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಉತ್ತಮ ದಿನ. ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಫಿಟ್‌ನೆಸ್‌ನತ್ತ ಗಮನಹರಿಸಿ. ಕೆಲಸಕ್ಕೆ ಸಂಬಂಧಿಸಿದಂತೆ ದೀರ್ಘ ಪ್ರಯಾಣದ ಸಾಧ್ಯತೆಗಳಿವೆ.

** ಧನಸ್ಸು ರಾಶಿ :
ವೃತ್ತಿ ಪ್ರಗತಿಗೆ ಹಲವು ಅವಕಾಶಗಳಿವೆ. ವ್ಯವಹಾರದಲ್ಲಿ ಲಾಭ ಇರುತ್ತದೆ. ವೃತ್ತಿಪರ ಜೀವನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸಿ. ಇಂದು ಕಚೇರಿಯಲ್ಲಿ ನಿಮ್ಮ ನೆಟ್‌ವರ್ಕಿಂಗ್ ಹೆಚ್ಚಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳಿ. ಸಂಶೋಧನೆ ಮಾಡದೆ ಹೂಡಿಕೆ ಮಾಡಬೇಡಿ. ಆದಾಯವನ್ನು ಹೆಚ್ಚಿಸಲು ಹೊಸ ಆಯ್ಕೆಗಳನ್ನು ನೋಡಿ. ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ಮುಕ್ತವಾಗಿ ವ್ಯಕ್ತಪಡಿಸಿ.

** ಮಕರ ರಾಶಿ :
ಇಂದು ಮಕರ ರಾಶಿಯವರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅಪಾರ ಯಶಸ್ಸು ಸಿಗುತ್ತದೆ. ಆದಾಯ ಹೆಚ್ಚಾಗುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಮಾಡಿದ ಕೆಲಸವು ನಿರೀಕ್ಷೆಗಿಂತ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಡುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕೆಲವರು ಪಿತ್ರಾರ್ಜಿತ ಆಸ್ತಿಯನ್ನು ದುರಸ್ತಿ ಮಾಡಬಹುದು. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಇಂದು ಹೆಚ್ಚಾಗುತ್ತದೆ.

** ಕುಂಭ ರಾಶಿ :
ಇಂದು ವ್ಯವಹಾರದಲ್ಲಿ ಲಾಭವಿರುತ್ತದೆ. ವ್ಯವಹಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ವೃತ್ತಿಪರ ಜೀವನದಲ್ಲಿ ಬಡ್ತಿ ಅಥವಾ ಹೆಚ್ಚಳವಿರುತ್ತದೆ. ನೀವು ಕಿರಿಯ ಸಹೋದರರಿಗೆ ಅಥವಾ ಆಪ್ತ ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಅವಕಾಶಗಳಿವೆ. ಕಚೇರಿಯಲ್ಲಿ ನೆಟ್‌ವರ್ಕಿಂಗ್ ಹೆಚ್ಚಾಗುತ್ತದೆ. ನೀವು ಹೊಸ ಜನರನ್ನು ಭೇಟಿಯಾಗುತ್ತೀರಿ. ಬಾಸ್ ನಿಮ್ಮ ಕೆಲಸವನ್ನು ಹೊಗಳುತ್ತಾರೆ.

** ಮೀನ ರಾಶಿ :
ಇಂದು ಅದೃಷ್ಟವು ಪ್ರತಿ ಕೆಲಸದಲ್ಲೂ ಮೀನ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ನಿಮಗೆ ಹೊಸ ಉದ್ಯೋಗದ ಅವಕಾಶ ಸಿಗುತ್ತದೆ. ಕುಟುಂಬದ ಬೆಂಬಲದೊಂದಿಗೆ ನೀವು ಯಶಸ್ಸಿನ ಏಣಿಯನ್ನು ಏರುತ್ತೀರಿ. ಹಳೆಯ ಆಸ್ತಿಯನ್ನು ಮಾರಾಟ ಮಾಡುವ ಅಥವಾ ಬಾಡಿಗೆಗೆ ನೀಡುವ ಮೂಲಕ ನೀವು ಹಣವನ್ನು ಗಳಿಸುವಿರಿ. ಆಧ್ಯಾತ್ಮಿಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸುವುದು ಸಾಧ್ಯ.

Categories
ಕರಾವಳಿ

ಕೋಮುಗಲಭೆ, ಡ್ರಗ್ಸ್: ಉನ್ನತ ವಿದ್ಯಾಭ್ಯಾಸಕ್ಕೆ ಕಿರಿಕಿರಿ!?

ಕೋಮುಗಲಭೆ, ಡ್ರಗ್ಸ್: ಉನ್ನತ ವಿದ್ಯಾಭ್ಯಾಸಕ್ಕೆ ಕಿರಿಕಿರಿ!?
– ವಿದ್ಯಾಭ್ಯಾಸಕ್ಕೆ ಕರಾವಳಿ ತೊರೆದು, ಬೆಂಗಳೂರು ಮೈಸೂರು ಸೇರುತ್ತಿರುವ ವಿದ್ಯಾರ್ಥಿಗಳು: ಡಾ. ಪರಮೇಶ್ವರ್
– ಕರಾವಳಿ ಭಾಗದಲ್ಲಿ ಶಾಂತಿಗಾಗಿ ಹಲವು ಪ್ಲಾನ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು/ ಉಡುಪಿ: ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಹೆಚ್ಚಾಗುತ್ತಿರುವ ಕೋಮುಗಲಭೆಯಿಂದಾಗಿ ಮತ್ತು ಡ್ರಗ್ಸ್ ಯುವ ಜನತೆಯ ಕೈಗೆ ಸುಲಭವಾಗಿ ಸಿಗುತ್ತಿರುವ ಬೆಳವಣಿಗೆ ಇದೀಗ ಕರಾವಳಿ ಪೋಷಕ ರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಗಳಿಂದ ಪೋಷಕರು ಹಾಗೂ ಸೂಕ್ಷ್ಮ ಮನಸ್ಸಿನ ಯುವಜನತೆಯಲ್ಲಿ ಆತಂಕ ಮೂಡಿರುವ ಪರಿಣಾಮದಿಂದಾಗಿ ವಿದ್ಯಾಭ್ಯಾಸಕ್ಕಾಗಿ ಮಂಗಳೂರು, ಉಡುಪಿ ಬಿಟ್ಟು ಬೆಂಗಳೂರು ಮೈಸೂರುಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ತಿಳಿಸಿದ್ದಾರೆ.
ಕರಾವಳಿ ಭಾಗದಲ್ಲಿನ ಇಂತಹ ಘಟನೆಗಳಿಂದ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಪರಿಸ್ಥಿತಿ ಹದಗೆಡುತ್ತಿದೆ.‌ ಶಿವಮೊಗ್ಗದಂತಹ ಶಾಂತತೆಯಿರುವ ಜಿಲ್ಲೆಯ ಮೇಲೂ ಇದರ ಬಿಸಿ ತಟ್ಟುತ್ತಿರುವುದು ವಿಷಾದನೀಯ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಕರಾವಳಿ ಭಾಗದಲ್ಲಿ ಸೌಹಾರ್ದತೆಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ಮುಖಂಡರ ಜೊತೆ ಸಭೆಗಳನ್ನು ನಿರಂತರವಾಗಿ ನಡೆಸಬೇಕು ಮತ್ತು ವಿಷದ ಬೀಜ ಬಿತ್ತುವ, ದ್ವೇಷ ಹುಟ್ಟಿಸುವಂತಹ ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು ಆಗ ಮಾತ್ರ ಅಲ್ಲಿನ ಜನರು ಮತ್ತು ಮುಖ್ಯವಾಗಿ ಯುವಜನಾಂಗ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಡಾ.ಜಿ.ಪರಮೇಶ್ವರ ಅವರು ರಾಜ್ಯ ಪೊಲೀಸ್ ಪ್ರಧಾನ ಕಛೇರಿಯಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಪೊಲೀಸ್ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Categories
ಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಗೊಂದಲ..!!

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಗೊಂದಲ..!!
– ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆಲವರ ಹೆಸರು ಮುಂಚೂಣಿ
– ವಿಜಯೇಂದ್ರ ಆಯ್ಕೆ ಪ್ರಕ್ರಿಯೆ ನಿಧಾನವಾಗಲು ಏನು ಕಾರಣ

NAMMUR EXPRESS NEWS
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆ ವಿಚಾರವಾಗಿ ಸಾಕಷ್ಟು ಗೊಂದಲಗಳು ಮುಂದುವರಿದಿದೆ. ಹಾಲಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರನ್ನೇ ಮುಂದುವರಿಸುವ ಬಗ್ಗೆ ಪಕ್ಷದಲ್ಲಿ ಕೆಲವರ ವಿರೋಧಗಳಿವೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲು ಹೈಕಮಾಂಡ್ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಹೈಕಮಾಂಡ್ ನಾಯಕರ ಈ ನಡೆಗೆ ಕೆಲವೊಂದು ಕಾರಣಗಳು ಇವೆ. ಅದರಲ್ಲೂ ವಿಜಯೇಂದ್ರ ವಿರುದ್ಧ ರಾಜ್ಯ ಬಿಜೆಪಿ ನಾಯಕರಲ್ಲಿ ಕೆಲವರಿಗೆ ಅಸಮಾಧಾನ ಇದೆ. ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಅಷ್ಟಕ್ಕೂ ವಿಜಯೇಂದ್ರ ಅವರ ವಿರುದ್ಧ ಇರುವ ಅಸಮಾಧಾನಗಳೇನು?

* ಬಿವೈ ವಿಜಯೇಂದ್ರ ವಿರುದ್ಧದ ಪ್ರಮುಖ ಆರೋಪ ಕುಟುಂಬ ರಾಜಕಾರಣವಾಗಿದೆ. ರಾಜ್ಯ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ನಾಯಕತ್ವವನ್ನು ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಕುಟುಂಬ ರಾಜಕಾರಣ ವಿಜಯೇಂದ್ರ ಅವರಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಬಿಜೆಪಿ ಕುಟುಂಬ ರಾಜಕೀಯದ ವಿರುದ್ಧ ನಿಲುವು ಹೊಂದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಮಾಡುತ್ತಿದೆ. ಹೀಗಿರುವಾಗ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವುದು ಸರಿಯಲ್ಲ ಎಂಬ ಅಭಿಪ್ರಾಯ ಇದೆ.

* ಬಿವೈ ವಿಜಯೇಂದ್ರ ಅವರು ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಇದೆ. ಪಕ್ಷದಲ್ಲಿ ಸಂಘಟನೆ ಮತ್ತು ಹೋರಾಟ ರೂಪಿಸುವ ಸಂದರ್ಭದಲ್ಲಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಹಿರಿಯರ ಸಲಹೆ ಸೂಚನೆಗೆ ಕಿವಿಯಾಗುವುದಿಲ್ಲ. ಹಿರಿಯರನ್ನು ಕಡೆಗಣಿಸಿ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬ ಆರೋಪ ಮಾಡಲಾಗುತ್ತಿದೆ. ಕೆಲವು ಹಿರಿಯ ನಾಯಕರು ಈ ಬಗ್ಗೆ ಹೈಕಮಾಂಡ್ ಗಮನಕ್ಕೂ ತಂದಿದ್ದಾರೆ. ಇದು ವಿಜಯೇಂದ್ರ ಅವರಿಗೆ ಹಿನ್ನಡೆ ಉಂಟು ಮಾಡಿದೆ.

* ಬಿವೈ ವಿಜಯೇಂದ್ರ ಅವರಿಗೆ ಅನುಭವದ ಕೊರತೆ ಇದೆ. ಅಲ್ಲದೆ ಹಿರಿತನ ಇಲ್ಲ ಎಂಬ ಆರೋಪ ಇದೆ. ಬಿಜೆಪಿಯಲ್ಲಿ ರಾಜಕೀಯ ಹಿನ್ನಲೆ ಹೊಂದಿದ್ದರೂ ವಿಜಯೇಂದ್ರ ಅವರು ಕೇವಲ ಒಂದು ಬಾರಿ ಶಾಸಕರಾಗಿದ್ದಾರೆ. ಹೀಗಾಗಿ ಅವರಿಗೆ ಪಕ್ಷ ಸಂಘಟನೆಯ ಅನುಭವ ಇಲ್ಲ. ಪಕ್ಷದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಿರಿಯರಿದ್ದು, ಅವರಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ಇದೆ. ಹಿರಿಯನ ಮತ್ತು ಅನುಭವನ ಕೊರತೆಯು ವಿಜಯೇಂದ್ರಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಅಲ್ಲಗಳೆಯುವ ಹಾಗಿಲ್ಲ.

* ವಿಜಯೇಂದ್ರ ವಿರುದ್ಧ ಕೇಳಿ ಬಂದಿರುವ ಪ್ರಮುಖ ಆರೋಪ ಇದಾಗಿದೆ. ವಿಜಯೇಂದ್ರ ಅವರು ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪವಾಗಿದೆ. ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ಪದೇ ಪದೇ ಈ ಆರೋಪವನ್ನು ಮಾಡುತ್ತಿದ್ದರು. ಅದರೆ ಇದೀಗ ಅತೃಪ್ತ ಬಣವೂ ಇದೇ ಅರೋಪವನ್ನು ಮಾಡುತ್ತಿದೆ. ಆದರೆ ವಿಜಯೇಂದ್ರ ಇದನ್ನು ನಿರಾಕರಿಸಿದ್ದಾರೆ.

* ಸಂಘ ನಿಷ್ಠರ ವಿಶ್ವಾಸ ಗೆಲ್ಲುವಲ್ಲಿ ವಿಫಲ
ಪಕ್ಷ ಸಂಘಟನೆ ಮತ್ತು ನಾಯಕತ್ವದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅತ್ಯಗತ್ಯ. ಆದರೆ ವಿಜಯೇಂದ್ರ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲವು ಸಂದರ್ಭದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಆರೋಪ ಇದೆ. ಅಷ್ಟೇ ಅಲ್ಲದೆ, ಸಂಘ ನಿಷ್ಠರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ಇದು ಅವರ ಹಿನ್ನಡೆಗೆ ಕಾರಣ ಎಂಬುವುದು ಆರೋಪವಾಗಿದೆ.

Categories
ಉಡುಪಿ ಕಾರ್ಕಳ

ಕ್ರಿಯೇಟಿವ್ ಸ್ಪೂರ್ತಿ ಮಾತು ಸರಣಿಯ 9ನೇ ಆವೃತ್ತಿಯ ಕಾರ್ಯಕ್ರಮ

ಕ್ರಿಯೇಟಿವ್ ಸ್ಪೂರ್ತಿ ಮಾತು ಸರಣಿಯ 9ನೇ ಆವೃತ್ತಿಯ ಕಾರ್ಯಕ್ರಮ
– ಜ್ಞಾನಕ್ಕಾಗಿ ಓದಿದ ಓದು ಶಾಶ್ವತ – ಶ್ರೀ ಕೆ. ರಾಜೇಂದ್ರ ಭಟ್ ಅವರ ಪ್ರೇರಣಾದಾಯಕ ಮಾತುಗಳು
– ವಿದ್ಯಾರ್ಥಿಗಳಿಗೆ ದೈನಂದಿನ ಜೀವನದಲ್ಲಿ ಅನುಸರಿಸಬಹುದಾದ 10 ಸ್ಪೂರ್ತಿದಾಯಕ ಅಂಶ

NAMMUR EXPRESS NEWS
ಕಾರ್ಕಳ: “ಪರೀಕ್ಷೆಗೋಸ್ಕರ ಮಾತ್ರ ಓದಿದ ಓದು ಅಲ್ಪಕಾಲಿಕ, ಆದರೆ ಜ್ಞಾನಕ್ಕಾಗಿ ಓದಿದ ಓದು ಶಾಶ್ವತವಾಗಿರುತ್ತದೆ,” ಎಂದು ಖ್ಯಾತ ವಕ್ತಾರರು ಹಾಗೂ ರಾಷ್ಟ್ರೀಯ ಮಟ್ಟದ ಜೆಸಿಐ ತರಬೇತುದಾರರಾದ ಶ್ರೀ ಕೆ. ರಾಜೇಂದ್ರ ಭಟ್ ಹೇಳಿದರು.
ಕ್ರಿಯೇಟಿವ್ ಕಾಲೇಜು, ಕಾರ್ಕಳದ ನವೀನ ತತ್ವದ ಆಧಾರದ ಮೇಲೆ ರೂಪುಗೊಂಡಿರುವ ಕ್ರಿಯೇಟಿವ್ ಸ್ಪೂರ್ತಿ ಮಾತು ಸರಣಿಯ 9ನೇ ಆವೃತ್ತಿಯ ಕಾರ್ಯಕ್ರಮವು “ಕಲಿಯುವುದು ಒಂದು ಹಬ್ಬ – ಸಂಭ್ರಮಿಸೋಣ” ಎಂಬ ಶೀರ್ಷಿಕೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಉತ್ಸಾಹದಿಂದ ನಡೆಯಿತು.

ಶ್ರೀ ಭಟ್ ಅವರು ತಮ್ಮ ಉಜ್ವಲ ಭಾಷಣದಲ್ಲಿ, ಇಂದಿನ ವಿದ್ಯಾರ್ಥಿಗಳ ಓದು ಪರೀಕ್ಷಾ ಮಿತಿಯಲ್ಲೇ ಸೀಮಿತವಾಗಿರುವುದರಿಂದ, ಅವರು ಓದಿದ ವಿಷಯಗಳನ್ನು ಶೀಘ್ರವೇ ಮರೆತು ಹೇಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. “ಜ್ಞಾನಕೋಸ್ಕರ ಓದಿದಾಗ ಮಾತ್ರ ಅದರ ಸಾರ್ಥಕತೆ ಬಿಂಬಿಸುತ್ತದೆ,” ಎಂದು ಅವರು ಸಲಹೆ ನೀಡಿದರು.

ಸ್ಫೂರ್ತಿ ಹೇಗೆ ಸೃಷ್ಟಿಸಬೇಕು ಎಂಬ ಕುರಿತು, ಅವರು ವಿದ್ಯಾರ್ಥಿಗಳಿಗೆ ದೈನಂದಿನ ಜೀವನದಲ್ಲಿ ಅನುಸರಿಸಬಹುದಾದ 10 ಸ್ಪೂರ್ತಿದಾಯಕ ವಿಧಾನಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದರು. “ಶರೀರದ ಒಳಗಿನಿಂದ ಎನರ್ಜಿ ಸೃಷ್ಟಿಸಿದಾಗ ಮಾತ್ರ ನಿಜವಾದ ಸ್ಪೂರ್ತಿ ಮೂಡುತ್ತದೆ. ಮೌನ ಓದಿನಿಂದ ಹಲವಾರು ಪ್ರಯೋಜನಗಳು ಇವೆ,” ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಸ್ಮಾರ್ಟ್ ವರ್ಕ್ ಮಾಡಬೇಕು, ಎಂದರೆ ಕಡಿಮೆ ಶ್ರಮದಿಂದ ಹೆಚ್ಚು ಫಲ ದೊರೆಯುವ ರೀತಿಯಲ್ಲಿ ಆಸಕ್ತಿಯಿಂದ ಕೆಲಸ ಮಾಡುವುದರ ಮಹತ್ವವನ್ನೂ ಅವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ, ಸಹ ಸಂಸ್ಥಾಪಕರಾದ ಶ್ರೀ ಅಶ್ವತ್ ಎಲ್. ಅವರನ್ನು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ನಿಲಯ ಪಾಲಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಪ್ರಿಯಾಂಕ ಕಾರ್ಯಕ್ರಮ ನಿರೂಪಣೆ ಹಾಗೂ ಪ್ರಾರ್ಥನೆ, ವಂದನೆ ನಡೆಸಿದರು.

Categories
ಕುಂದಾಪುರ

ಎಕ್ಸಲೆಂಟ್ ಕಾಲೇಜಿನಲ್ಲಿ “ಕಾನೂನು ಅರಿವು ಮತ್ತು ನಶಾ ಮುಕ್ತ ಭಾರತ” ಕುರಿತಂತೆ ಅರಿವು ಮೂಡಿಸುವ ಕಾರ್ಯಗಾರ

ಎಕ್ಸಲೆಂಟ್ ಕಾಲೇಜಿನಲ್ಲಿ “ಕಾನೂನು ಅರಿವು ಮತ್ತು ನಶಾ ಮುಕ್ತ ಭಾರತ” ಕುರಿತಂತೆ ಅರಿವು ಮೂಡಿಸುವ ಕಾರ್ಯಗಾರ

ಕುಂದಾಪುರ: ಇಂದಿನ ಯುವಜನತೆ ಮಾದಕ ದ್ರವ್ಯಗಳ ಬಲೆಗೆ ಸಿಲುಕದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಜೂನ್ 27ರಂದು ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಮತ್ತು ಹೈಸ್ಕೂಲ್ ಸಂಯುಕ್ತ ಆಶ್ರಯದಲ್ಲಿ “ಕಾನೂನು ಅರಿವು ಮತ್ತು ನಶಾಮುಕ್ತ ಭಾರತ” ಎಂಬ ಶೀರ್ಷಿಕೆಯಡಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೋಟ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ರಾಘವೇಂದ್ರ ಸಿ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾದಕ ವಸ್ತುಗಳ ದುರ್ಪಯೋಗದ ಪರಿಣಾಮಗಳು ಹೇಗಿರುತ್ತವೆ ಎಂಬುದನ್ನು ನಿಜ ಜೀವನದ ಉದಾಹರಣೆಗಳ ಮೂಲಕ ವಿವರಿಸಿದರು. “ನಶೆಗೆ ಒಳಗಾಗುವ ಯುವಕರು ತಮ್ಮ ಜೀವನವನ್ನಷ್ಟೇ ನಾಶಮಾಡುವುದಿಲ್ಲ, ತಮ್ಮ ಕುಟುಂಬಕ್ಕೂ ಕಷ್ಟವನ್ನುಂಟುಮಾಡುತ್ತಾರೆ,” ಎಂದು ಅವರು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಅವರು ವಹಿಸಿ, ವಿದ್ಯಾರ್ಥಿಗಳಿಂದ ನಶಾ ವಿರೋಧಿ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದರು. ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ. ಆಚಾರ್ಯ ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾಪ್ರಾರ್ಥನೆ ಉಪನ್ಯಾಸಕರಾದ ಶ್ರೀನಿವಾಸ್ ವೈದ್ಯ ಅವರು ನೆರವೇರಿಸಿದರು.

Categories
ಚಿಕ್ಕಮಗಳೂರು ಬೆಂಗಳೂರು ಹಾಸನ

ಕಾಫಿನಾಡು ಜನತೆಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೇ ಇಲಾಖೆ

ಕಾಫಿನಾಡು ಜನತೆಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೇ ಇಲಾಖೆ

* ಚಿಕ್ಕಮಗಳೂರಿನಿಂದ ತಿರುಪತಿ ರೈಲು ಸಂಚಾರಕ್ಕೆ ಕೇಂದ್ರ ಅಸ್ತು
* ಹೊಸ ರೈಲಿಗಾಗಿ ಸಂಸದ ಕೋಟಾ ನಿರಂತರ ಪ್ರಯತ್ನ,ಎಲ್ಲರ ಅಭಿನಂದನೆ
* ರೈಲಿನ ಮಾರ್ಗ, ಸಮಯ,ಎಲ್ಲೆಲ್ಲಿ ನಿಲುಗಡೆ ಇಲ್ಲಿದೆ ಮಾಹಿತಿ

NAMMMUR EXPRESS NEWS
ಬೆಂಗಳೂರು: ತಿರುಪತಿಗೆ ಹೋಗುವ ಭಕ್ತರಿಗೆ ಕೇಂದ್ರ ರೈಲ್ವೇ ಇಲಾಖೆ ಗುಡ್​ ನ್ಯೂಸ್​ ನೀಡಿದೆ. ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ. ಚಿಕ್ಕಮಗಳೂರಿನಿಂದ ತಿರುಪತಿ ನೂತನ ರೈಲಿನ ಸಂಪೂರ್ಣ ವಿವರ ಇಲ್ಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ವಿ. ಸೋಮಣ್ಣ, ತಿರುಪತಿಯ ಶ್ರೀ ವೆಂಕಟೇಶ್ವರನ ದರ್ಶನಕ್ಕಾಗಿ ಪ್ರಯಾಣಿಸುವ ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ವಾರದ ರೈಲಿನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿ ಗುರುವಾರ ತಿರುಪತಿಯಿಂದ ಹಾಗೂ ಪ್ರತಿ ಶುಕ್ರವಾರ ಚಿಕ್ಕಮಗಳೂರಿನಿಂದ ಈ ರೈಲು ಹೊರಡಲಿದೆ. ಮಲೆನಾಡು, ತುಮಕೂರು, ಬೆಂಗಳೂರು ಹಾಗೂ ಕೋಲಾರ ಭಾಗದ ಜನತೆ ಈ ವಾರದ ರೈಲಿನ ಸೌಲಭ್ಯ ಪಡೆದುಕೊಳ್ಳುವಂತೆ ಸಚಿವರು ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು – ತಿರುಪತಿ ನೂತನ ರೈಲು ಸೇವೆಗಾಗಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ನಿರಂತರ ಪ್ರಯತ್ನ ಮಾಡುತ್ತಿದ್ದರು. ಸಚಿವ ವಿ.ಸೋಮಣ್ಣ ಸೇರಿದಂತೆ ಕೇಂದ್ರ ರೈಲ್ವೆ ಅಧಿಕಾರಿಗಳು,ಇಲಾಖೆಯ ಅಧಿಕಾರಿಗಳೊಡನೆ ನಿರಂತರ ಸಭೆಗಳನ್ನು ನಡೆಸಿ ಕೊನೆಗೆ ನೂತನ ರೈಲ್ವೇ ಸಂಪರ್ಕವನ್ನು ಜಿಲ್ಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸಂಸದರಿಗೆ ಎಲ್ಲೆಡೆಯಿಂದ ಅಭಿನಂದನೆಗಳು ಹರಿದುಬರುತ್ತಿದೆ.

* ನೂತನ ರೈಲಿನ ವಿವರ ಹೀಗಿದೆ
ತಿರುಪತಿ to ಚಿಕ್ಕಮಗಳೂರು (ರೈಲು ಸಂಖ್ಯೆ 17423): ಈ ರೈಲು ಪ್ರತಿ ಗುರುವಾರ ರಾತ್ರಿ 09 ಗಂಟೆಗೆ ತಿರುಪತಿಯಿಂದ ಹೊರಡಲಿದ್ದು, ಮರುದಿನ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಚಿಕ್ಕಮಗಳೂರು ತಲುಪಲಿದೆ.

ಚಿಕ್ಕಮಗಳೂರು-ತಿರುಪತಿ (ರೈಲು ಸಂಖ್ಯೆ 17424): ಈ ರೈಲು ಪ್ರತಿ ಶುಕ್ರವಾರ ಸಂಜೆ 05:30 ಚಿಕ್ಕಮಗಳೂರಿನಿಂದ ಹೊರಡಲಿದ್ದು, ಶನಿವಾರ ಬೆಳಿಗ್ಗೆ 07:40ಕ್ಕೆ ತಿರುಪತಿ ತಲುಪಲಿದೆ.

* ನಿಲ್ದಾಣಗಳು ಹೀಗಿವೆ
ಚಿತ್ತೂರು, ಕಟ್ಟಾಡಿ, ಕುಪ್ಪಂ, ಬಂಗಾರಪೇಟೆ, ವೈಟ್‌ಫೀಲ್ಡ್, ಕೆ ಆರ್ ಪುರಂ, ಎಸ್‌ಎಂವಿಬಿ ಬೆಂಗಳೂರು, ಚಿಕ್ಕ ಬಾಣಾವರ, ತುಮಕೂರು, ತಿಪಟೂರು, ಅರಸೀಕೆರೆ, ದೇವನೂರು, ಬಿರೂರು, ಕಡೂರು, ಬಿಸಲೇಹಳ್ಳಿ, ಸಕರಾಯಪಟ್ಟಣ.

Categories
ಶಿವಮೊಗ್ಗ

ಕಾಂಗ್ರೆಸ್ ನಾಯಕ ರಮೇಶ್ ಶಂಕರಘಟ್ಟ ಅವರಿಗೆ ಮಹತ್ವದ ಹೊಣೆ!

ಕಾಂಗ್ರೆಸ್ ನಾಯಕ ರಮೇಶ್ ಶಂಕರಘಟ್ಟ ಅವರಿಗೆ ಮಹತ್ವದ ಹೊಣೆ!
– ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನೂತನ ಅಧ್ಯಕ್ಷರಾಗಿ ಆಯ್ಕೆ
– ತವರು ಊರು ಶಂಕರಘಟ್ಟದಲ್ಲಿ ಅದ್ದೂರಿ ಸ್ವಾಗತ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರ ಹಾಗೂ ಭದ್ರಾವತಿ ತಾಲ್ಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಶಂಕರಘಟ್ಟದ ಎಂ ರಮೇಶ್ ಇವರನ್ನು ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ರಾಜ್ಯಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ಶಿಕ್ಷಣ ಸಚಿವರಾದ ಎಸ್ ಮಧುಬಂಗಾರಪ್ಪನವರು ಈ ನೇಮಕ ಮಾಡಿದ್ದಾರೆ.
ರಮೇಶ್ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯನ್ನು ಪಡೆದುಕೊಂಡು, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಬಾರಿಯು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರಲ್ಲದೇ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು.
ಈ ಹಿಂದೆ ಅಧ್ಯಕ್ಷರಾಗಿದ್ದ ರಮೇಶ್ ಇಕ್ಕೇರಿಯವರನ್ನು ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಿದ ಹಿನ್ನಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ರಮೇಶ್ ಇವರನ್ನು ನೇಮಿಸಲಾಗಿದೆ. ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರು ಆದೇಶದ ಪ್ರತಿಯನ್ನು ರಮೇಶ್ ರವರಿಗೆ ನೀಡಿ ಈ ಕೂಡಲೇ ಅಧಿಕಾರ ಸ್ವೀಕರಿಸಿ ಪಕ್ಷದ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಸೂಚಿಸಿದರು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಬಲ್ಕೀಸ್ ಬಾನು, ಹಾಪ್ ಕಾಮ್ಸ್ ಅಧ್ಯಕ್ಷರಾದ ವಿಜಯಕುಮಾರ್(ದನಿ) ಮೊದಲಾದವರು ಇದ್ದರು.

ಭವ್ಯ ಸ್ವಾಗತ ಕೋರಿದ ಕಾಂಗ್ರೆಸ್ ಕಾರ್ಯಕರ್ತರು

ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾಗಿ ನೇಮಕವಾದ ಎಂ.ರಮೇಶ್ ಇವರನ್ನು ಶಂಕರಘಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭವ್ಯ ಸ್ವಾಗತಿಸಿದರು. ಶಂಕರಘಟ್ಟಕ್ಕೆ ಆಗಮಿಸಿದ ಅಧ್ಯಕ್ಷರನ್ನು ಭದ್ರಾ ಡ್ಯಾಂ ಬಳಿಯಿಂದ ಬೈಕ್ ರ್ಯಾಲಿಯ ಮೂಲಕ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ವರೆಗೆ ಕರೆತಂದು ನಿಮಿಷಾಂಭ ಕನ್ವೆನ್ಷನ್ ಹಾಲ್ ನಲ್ಲಿ ನೆಡದ ಸಮಾರಂಭದಲ್ಲಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಮುರುಗೇಶ್,ಇಂದೂದರ್, ರುದ್ರೇಶ್ ,ನಂದೀಶ್, ಶ್ರೀಕಾಂತ್, ಶಶಿ,ಬಾಬು ಸಿಂಗನಮನೆ ಹಾಗೂ ತಾವರಘಟ್ಟ ಗ್ರಾಮಪಂಚಾಯಿತಿ ಸದಸ್ಯರು ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರುಗಳು ಭಾಗವಹಿಸಿದ್ದರು.

Categories
ದಕ್ಷಿಣ ಕನ್ನಡ

ಮಜೂರು: ಸುತ್ತಮುತ್ತಲಿನ ಹಲವು ಮನೆಗಳ ನೀರು ಕಲುಷಿತ- ಗ್ರಾಮಸ್ಥರಲ್ಲಿ ಆತಂಕ

ಮಜೂರು: ಸುತ್ತಮುತ್ತಲಿನ ಹಲವು ಮನೆಗಳ ನೀರು ಕಲುಷಿತ- ಗ್ರಾಮಸ್ಥರಲ್ಲಿ ಆತಂಕ

NAMMUR EXPRESS NEWS
ಮಜೂರು: ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸುತ್ತಮುತ್ತಲಿನ ಹಲವು ಮನೆಗಳ ನೀರು ಕಲುಷಿತಗೊಂಡಿದ್ದು ಗ್ರಾಮಸ್ಥರು ಆತಂಕಿತರಾಗಿದ್ದಾರೆ.
ಉಮ್ಮರ್ ಸಾಹೇಬ್, ಅಮಣಿ ಪಾಣಾರ, ಸಂಕ್ರಾಯ ಆಚಾರ್ಯ, ರುಕ್ಮಿಣಿ ಭಟ್, ಮಾಲಿನಿ ರಾವ್, ಸೂರ್ಯ ಮೇಸ್ತ್ರಿ, ಸುಬ್ರಾಯ ಭಟ್, ಹಯವದನ ಪುರಾಣಿಕ್, ಸಂಜೀವ ದೇವಾಡಿಗ, ಹರಿದಾಸ್ ಭಟ್ ಅವರ ಮನೆಯ ಬಾವಿಯ ನೀರು ಸಂಪೂರ್ಣ ಕಲುಷಿತಗೊಂಡಿದೆ.
ಕಲುಷಿತ ಗೊಂಡಿರುವ ನೀರು ಕುಡಿಯುವುದಕ್ಕೆ ಮಾತ್ರವಲ್ಲದೇ ದಿನಬಳಕೆಗೆ ಬಳಸುವುದೂ ಕಷ್ಟಸಾಧ್ಯವೆಂಬಂತಾಗಿದೆ. ಹಾಗಾಗಿ ಎಲ್ಲಾ ಮನೆಯವರೂ ಪಕ್ಕದಲ್ಲೇ ಇರುವ ಬಾವಿಯ ನೀರನ್ನು ಕುಡಿಯುವುದಕ್ಕೆ ಮತ್ತು ಗ್ರಾಮ ಪಂಚಾಯತ್ ನೀಡುವ ನಳ್ಳಿ ನೀರನ್ನು ಇತರ ಕೆಲಸಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳುತ್ತಿದ್ದಾರೆ.
ಬಾವಿ ನೀರು ಕಲುಷಿತಗೊಂಡಿರುವ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗ್ರಾ. ಪಂ. ಮತ್ತು ಆರೋಗ್ಯ ಇಲಾಖೆ ಸಿಬಂದಿಗಳು ಎರಡೆರಡು ಬಾರಿ ಭೇಟಿ ನೀಡಿ, ನೀರನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ.
ನೀರಿನಲ್ಲಿ ಅಮೋನಿಯಾ ಅಂಶ ಅಂಶ ಪತ್ತೆಯಾಗಿದೆ.
ಬಾವಿಯ ನೀರು ಕಲುಷಿತವಾಗಿರುವ ಬಗ್ಗೆ ಪರೀಕ್ಷೆಗಾಗಿ ಖಾಸಗಿಯಾಗಿ ಪ್ರಯೋಗಾಲಯಕ್ಕೆ ತಂದಿದ್ದು ಅದನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಪರೀಕ್ಷೆಗೊಳಪಟ್ಟಿರುವ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳು ಅಮೋನಿಯಾ ಅಂಶಗಳು ಪತ್ತೆಯಾಗಿವೆ. ಕೊಳೆತ ವಾಸನೆ ಹೆಚ್ಚಿದ್ದು, ಬಾವಿ ನೀರು ಕೆಸರಿನ ರಾಡಿಯಂತಾಗಿರುವುದು ಪತ್ತೆಯಾಗಿದೆ. ಮಳೆಗಾಲದಲ್ಲಿ ಸಂಗ್ರಹವಾಗುವ ನೀರು ಒಂದೆರಡು ದಿನದ ಬಳಿಕ ಶುಚಿಯಾಗಬೇಕಿದ್ದು ಇಲ್ಲಿ ಬಾವಿಯ ನೀರು ಯಾವ ಕಾರಣಕ್ಕೆ ಹೀಗಾಗಿದೆ ಎನ್ನುವುದನ್ನು ಪತ್ತೆ ಹಚ್ಚ ಬೇಕಿದ್ದು ಅತ್ಯಾಧುನಿಕ ತಂತ್ರಜ್ಣಾನದಲ್ಲಿ ನೀರನ್ನು ಪರಿಶೀಲಿಸುವ ಅಗತ್ಯತೆ ಕಂಡು ಬರುತ್ತಿದೆ ಎಂದು ಖಾಸಗಿ ಪ್ರಯೋಗಾಲಯ ತಜ್ಣರು, ಉಡುಪಿ ಡಾ| ಅವಿಲಾ ಡಿ ಸೋಜ ಹೇಳಿದ್ದಾರೆ.