Categories
ಚಿಕ್ಕಮಗಳೂರು

ಶೃಂಗೇರಿ 100 ಬೆಡ್ ಸರ್ಕಾರಿ ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮ

ಶೃಂಗೇರಿ 100 ಬೆಡ್ ಸರ್ಕಾರಿ ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮ

* ಆಹ್ವಾನ ಪತ್ರಿಕೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು,ಸದಸ್ಯರ ಹೆಸರೇ ಇಲ್ಲ
* ಸರಿಪಡಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ ನೀಡಿದ ಪ ಪಂ ಅಧ್ಯಕ್ಷ

NAMMMUR EXPRESS NEWS
ಶೃಂಗೇರಿ: ತಾಲೂಕು 100 ಬೆಡ್ ಆಸ್ಪತ್ರೆ ಕಾಮಗಾರಿ ಶಂಕುಸ್ಥಾಪನೆ ಜು.07 ರಂದು ನಡೆಯಲಿದ್ದು,ಈ ಕಾರ್ಯಕ್ರಮಕ್ಕೆ ರಾಜ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಆಗಮಿಸಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಹೆಸರು ಹಾಕದೇ ಅವಮಾನ ಮಾಡಲಾಗಿದೆ ಎಂದು ಶೃಂಗೇರಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಸರಿಪಡಿಸದೇ ಹೋದಲ್ಲಿ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರ ಹೆಸರು ಹಾಕದೇ ಚುನಾಯಿತ ಜನಪ್ರತಿನಿಧಿಗಳಿಗೆ ಅವಮಾನ ಮಾಡಲಾಗಿದೆ.ಹಿಂದುಳಿದ ವರ್ಗದಿಂದ ಬಂದು ಸಂವಿಧಾನದ ಚೌಕಟ್ಟಿನಲ್ಲಿಯೇ ಅಧ್ಯಕ್ಷನಾದ ನನ್ನ ಮತ್ತು ನನ್ನ ಸಹ ಸದಸ್ಯರುಗಳ ಹೆಸರನ್ನು ಕೈಬಿಟ್ಟು ತಾಲೂಕ್ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿದ್ದು,ಇದರ ಹಿಂದೆ ಕಾಂಗ್ರೆಸ್‌ನ ದ್ವೇಷದ ರಾಜ ಕಾರಣ ಕೆಲಸ ಮಾಡಿದಂತಿದೆ. ಇದನ್ನೆಲ್ಲ ಗಮನಿಸಿದರೆ ಕಾಂಗ್ರೆಸ್ ಕೆಳಸ್ತರದವರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂದು ತಿಳಿಯುತ್ತಿದೆ. ಈ ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸದಿದ್ದಲ್ಲಿ ಹೋರಾಟದ ಹಾದಿಯಲ್ಲಿ ಸಾಗಬೇಕಾಗುವುದು ಅನಿವಾರ್ಯವಾಗಲಿದೆ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ ಹೇಳಿದ್ದಾರೆ.

Categories
ತೀರ್ಥಹಳ್ಳಿ

ಮಳೆಗೆ ತೀರ್ಥಹಳ್ಳಿಯಲ್ಲಿ ಮೊದಲ ಬಲಿ!

ಮಳೆಗೆ ತೀರ್ಥಹಳ್ಳಿಯಲ್ಲಿ ಮೊದಲ ಬಲಿ!
– ಮೇಗರವಳ್ಳಿ ಬಳಿ ಹಳ್ಳದಲ್ಲಿ ಕೊಚ್ಚಿಹೋದ ವ್ಯಕ್ತಿ ಸಾವು
– ಹಳ್ಳ, ಹೊಳೆ ತುಂಬಿವೆ ಜನರೇ ಹುಷಾರ್

NAMMUR EXPRESS NEWS
ತೀರ್ಥಹಳ್ಳಿ: ಮಳೆಗೆ ತೀರ್ಥಹಳ್ಳಿಯಲ್ಲಿ ಮೊದಲ ಬಲಿಯಾಗಿದೆ.
ಮೇಗರವಳ್ಳಿ ಬಳಿ ಹಳ್ಳದಲ್ಲಿ ಕೊಚ್ಚಿಹೋದ ವ್ಯಕ್ತಿ ಸಾವು ಕಂಡಿದ್ದು, ಹಳ್ಳ, ಹೊಳೆ ತುಂಬಿವೆ ಜನರೇ ಎಚ್ಚರಿಕೆ ವಹಿಸಬೇಕಿದೆ.
ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಮನೆ, ಜಾನುವಾರು ಕೊಟ್ಟಿಗೆಗೆ ಹಾನಿ ಸಂಭವಿಸಿದೆ. ಬುಧವಾರ ಸಂಜೆ ಮೇಗರವಳ್ಳಿಯ ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿ ಹಳ್ಳದಲ್ಲಿ ಕೊಚ್ಚಿಹೋದ ಪರಿಣಾಮ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಹೆಗ್ಡೆಕೇರಿಯ ರಾಘವೇಂದ್ರ (40) ಎಂದು ಗುರಿತಿಸಲಾಗಿದೆ. ಮೃತದೇಹ ಗುರುವಾರ ಸಮೀಪದಲ್ಲೇ ಸಿಕ್ಕಿದೆ. ಮೃತ ವ್ಯಕ್ತಿ ಹೆಗ್ಡೆಕೇರಿ ನಿವಾಸಿಗಳಾದ ವೆಂಕಟೇಶ ಮತ್ತು ಪದ್ಮಾವತಿ ಅವರ ಏಕೈಕ ಪುತ್ರರಾಗಿದ್ದು ಗ್ರಾಮ ಹಾಗೂ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಭೇಟಿ

ತೀರ್ಥಹಳ್ಳಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಭೇಟಿ
– ಪೂಜ್ಯಪಾದ ಚಿಕಿತ್ಸಾಲಯದ ಡಾ.ಜೀವಂದರ್ ಜೈನ್ ಮನೆಯಲ್ಲಿ ಅತಿಥ್ಯ

NAMMUR EXPRESS NEWS
ತೀರ್ಥಹಳ್ಳಿ: ಕಾರ್ಯಕ್ರಮ ನಿಮಿತ್ತ ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಪರಮ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಪೂಜ್ಯಪಾದ ಚಿಕಿತ್ಸಾಲಯದ ಡಾ.ಜೀವಂದರ್ ಜೈನ್ ಮನೆಯಲ್ಲಿ ಅತಿಥ್ಯ ಸ್ವೀಕಾರ ಮಾಡಿದರು. ಕಳೆದ ಮಂಗಳವಾರ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತೀರ್ಥಹಳ್ಳಿ ಪೂಜ್ಯಪಾದ ಚಿಕಿತ್ಸಾಲಯದ ಡಾ.ಜೀವಂದರ್ ಜೈನ್ ರವರ ಮನೆಗೆ ಭೇಟಿ ನೀಡಿ ಅತಿಥ್ಯ ಸ್ವೀಕರಿಸಿ ತೆರಳಿದರು. ಈ ಸಂಧರ್ಭದಲ್ಲಿ ಡಾII ಜೀವಂಧರ್ ಜೈನ್, ಶ್ರೀಮತಿ ಪ್ರತಿಮಾ ಜೀವಂಧರ್ ಜೈನ್, ಡಾII ಶುಶ್ರೂತ್ ಜೈನ್ ಡಾII ಸಾಧಿತಾ ಜೈನ್ ಪೂಜ್ಯರ ಆತ್ಮೀಯರಾದ ಶಶಿಧರ್ ಹಂದೆ ಉಪಸ್ತಿತರಿದ್ದರು.

Categories
ಉಡುಪಿ

ಕೋಟದಲ್ಲಿ ವೈದ್ಯರ ಮನೆಗೆ ನುಗ್ಗಿ ಗೃಹೋಪಯೋಗಿ ವಸ್ತುಗಳ ಮೇಲೆ ಕನ್ನ ಹಾಕಿದ ಖದೀಮರು..!

ಕೋಟದಲ್ಲಿ ವೈದ್ಯರ ಮನೆಗೆ ನುಗ್ಗಿ ಗೃಹೋಪಯೋಗಿ ವಸ್ತುಗಳ ಮೇಲೆ ಕನ್ನ ಹಾಕಿದ ಖದೀಮರು..!

NAMMUR EXPRESS NEWS
ಕೋಟ: ವೈದ್ಯರೊಬ್ಬರ ಮನೆಯ ಬಾಗಿಲನ್ನು ಒಡೆದು ಒಳಗೆ ನುಗ್ಗಿದ ಖದೀಮರು ಗೃಹೋಪಯೋಗಿ ವಸ್ತುಗಳನ್ನು ಕಳ್ಳತನಗೈದ ಘಟನೆ ಕೋಟದ ಸಾಸ್ತಾನ ಸಮೀಪ ಪಾಂಡೇಶ್ವರದಲ್ಲಿ ನಡೆದಿದೆ‌. ಇಲ್ಲಿನ ಆದರ್ಶ ಐಸ್ ಪ್ಲಾಂಟ್ ಬಳಿಯ ನಿವಾಸಿ ಡಾ.‌ಸುರೇಶ್ ಶೆಟ್ಟಿ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ.
ಎ.ಸಿ, ಫ್ರಿಡ್ಜ್, ಕುಕ್ಕರ್ ಇತ್ಯಾದಿ ಗೃಹ ಬಳಕೆಯ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮನೆಯ ಮಾಲಕರು ಮನೆಯಲ್ಲಿ ಇಲ್ಲದೆ ಹೊರ ಜಿಲ್ಲೆಯಲ್ಲಿದ್ದ ಕಾರಣ ಅದನ್ನೇ ದುರುಪಯೋಗೊಡಿಸಿಕೊಂಡು ಕಳ್ಳರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಚಿಕ್ಕಮಗಳೂರು

ಕೊಪ್ಪ ಬಾಲಕಿಯರ ಆತ್ಮಹತ್ಯೆ: ನ್ಯಾಯಕ್ಕಾಗಿ ಹೋರಾಟ

ಕೊಪ್ಪ ಬಾಲಕಿಯರ ಆತ್ಮಹತ್ಯೆ: ನ್ಯಾಯಕ್ಕಾಗಿ ಹೋರಾಟ
– ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ..? ಪೋಸ್ಟರ್ ಅಭಿಯಾನ
– ಪೊಲೀಸ್ ತನಿಖೆ ಏನಾಗ್ತಿದೆ…? ಏನಿದು ಸ್ಟೋರಿ..?

NAMMUR EXPRESS NEWS
ಕೊಪ್ಪ: ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಮೊರಾರ್ಜಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಇದೀಗ ಭಾರಿ ಹೋರಾಟಕ್ಕೆ ವೇದಿಕೆ ಸೃಷ್ಟಿ ಮಾಡಿದ್ದು ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ..? ಎಂಬ ಪೋಸ್ಟರ್ ಅಭಿಯಾನ ಶುರುವಾಗಿದೆ.
“2023 ರಲ್ಲಿ ಅಮೂಲ್ಯ.. 2025ರಲ್ಲಿ ಶಮಿತಾ… 2026ಕ್ಕೆ ಯಾರು ???..” ಎಂದು ಪೋಸ್ಟರ್ ಅಭಿಯಾನ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದೂ ಆಡಳಿತದ ಮೇಲೆ ಬೆಟ್ಟು ಮಾಡಿ ತೋರಿಸುತ್ತಿದೆ.
ಹಾಸ್ಟೆಲ್ ಅಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆ ಭಾರಿ ಪ್ರಮಾಣದ ಆಕ್ರೋಶಕ್ಕೆ ಕಾರಣವಾಗಿದೆ.
ಆತ್ಮಹತ್ಯೆ ಬಳಿಕ ಇದೀಗ ಶಿವಮೊಗ್ಗ ವಿಧಿ ವಿಧಾನ ತಜ್ಞರು ಪ್ರಕರಣದ ನಿಖರತೆ ಬಗ್ಗೆ ಮಾಹಿತಿ ನೀಡಲಿದ್ದು ಕೊಪ್ಪ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕಿ ಮನೆಯವರು ಈ ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಮೂಲ್ಯ ಆತ್ಮಹತ್ಯೆ ಮಾಡಿಕೊಂಡ ಜಾಗ ಆತ್ಮಹತ್ಯೆಗೆ ಪ್ರೇರಣೆ ನೀಡುವಂತಿದ್ದು ಅದನ್ನು ಏಕೆ ಸರಿಪಡಿಸಲಿಲ್ಲ ಎಂಬ ಬಗ್ಗೆ ಇದೀಗ ಪ್ರಶ್ನೆ ಎದ್ದಿದೆ.

ಕಳೆದ ವರ್ಷ ಜು.27ರಂದು ವಿದ್ಯಾರ್ಥಿನಿಯೊಬ್ಬಳು ಶೌಚಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ರೀತಿ ಮತ್ತೊಬ್ಬ ವಿದ್ಯಾರ್ಥಿನಿಯೂ ನೇಣಿಗೆ ಶರಣಾಗಿದ್ದು.. ಕೊಪ್ಪದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏನಾಗ್ತಿದೆ..? ಯಾವ ಸಮಸ್ಯೆ ಕಾಡ್ತಿದೆ.? ಹೊಣೆ ಯಾರದ್ದು.? ತಪ್ಪು ಯಾರದ್ದು.? ಮಕ್ಕಳಿಗೆ ರಕ್ಷಣೆ ಇಲ್ವಾ ಎಂಬ ಅನುಮಾನ ಮೂಡಿದೆ ಎಂದು ಪೋಸ್ಟ‌ರ್ ಅಭಿಯಾನ ಆರಂಭಿಸಿದ್ದಾರೆ.

ಪೋಸ್ಟರ್ ನಲ್ಲಿ ಏನಿದೆ?:

“ಘಟನೆ ಬಗ್ಗೆ ಮಧ್ಯರಾತ್ರಿ 12 ಗಂಟೆಗೆ ಗೊತ್ತಾಗಿತ್ತು ಎಂದು ವಿದ್ಯಾರ್ಥಿಗಳು ಹಾಗೂ ಕೆಲವು ಸಿಬ್ಬಂದಿ ವರ್ಗದವರು ಹೇಳುತ್ತಾರೆ, ಕೆಲವು ಸಿಬ್ಬಂದಿ ವರ್ಗದವರು ಹೇಳುತ್ತಾರೆ ರಾತ್ರಿ 03 ಗಂಟೆಗೆ ಗೊತ್ತಾಗಿದೆ ಎಂದು!!!. ಆದರೆ ಪೋಷಕರಿಗೆ ತಿಳಿಸಿದ್ದು ಮಾತ್ರ ಬೆಳಗ್ಗಿನ ಜಾವ 06 ಗಂಟೆಗೆ.. ಇಷ್ಟುವಿಳಂಬ ಯಾಕಾಯಿತು?… ಸಾಕ್ಷಿ ನಾಶ ಮಾಡುವ ಹುನ್ನಾರವೇ???.. ಕೊಪ್ಪದ ಮೊರಾರ್ಜಿ ವಸತಿ ಶಾಲೆಗೆ ಸಂಬಂಧಪಟ್ಟ ಸಿಬ್ಬಂದಿ ವರ್ಗದವರೇ, ಅಧಿಕಾರಿಗಳೇ, ಜನಪ್ರತಿನಿದಿಗಳೇ ಉತ್ತರ ಕೊಡಿ… ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ..????”

“2023 ರಲ್ಲಿ ಅಮೂಲ್ಯ.. 2025ರಲ್ಲಿ ಶಮಿತಾ… 2026 ಕ್ಕೆ ಯಾರು???…

ಕೊಪ್ಪದ ಮೊರಾರ್ಜಿ ವಸತಿ ಶಾಲೆಗೆ ಸಂಬಂಧಪಟ್ಟ ಸಿಬ್ಬಂದಿ ವರ್ಗದವರೇ, ಅಧಿಕಾರಿಗಳೇ, ಜನಪ್ರತಿನಿದಿಗಳೇ ಉತ್ತರ ಕೊಡಿ… ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ…????”

ಆತ್ಮಹತ್ಯೆ ಹಿಂದೆ ಹತ್ತಾರು ಅನುಮಾನ!

“2023 ರಲ್ಲಿ ಅಮೂಲ್ಯ..??? 2025ರಲ್ಲಿ ಶಮಿತಾ…???? 7ರಿಂದ-8 ಶೌಚ ಗೃಹ ಒಟ್ಟಿಗೆ ಸರದಿ ಸಾಲಿನಲ್ಲಿ ಇದ್ದರೂ ಕೂಡ ಒಂದೇ ಶೌಚ ಗೃಹದ ಕಬ್ಬಿಣದ ರಾಡಿಗೆ (ಇಬ್ಬರು ಸಹ) ನೇಣು ಬಿಗಿದುಕೊಂಡಿರುವ, ಜೊತೆಗೆ ಇಬ್ಬರು ಕೂಡ ನೇಣು ಹಾಕಿಕೊಳ್ಳುವಾಗ ಸಭೆ ಸಮಾರಂಭಕ್ಕೆ ಹೋಗುವ ರೀತಿಯಲ್ಲಿ ಉಡುಗೆ-ತೊಡುಗೆಯನ್ನು ಹಾಕಿರುವ ದೃಶ್ಯ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ???? ಕೊಪ್ಪದ ಮೊರಾರ್ಜಿ ವಸತಿ ಶಾಲೆಗೆ ಸಂಬಂಧ ಪಟ್ಟ ಸಿಬ್ಬಂದಿ ವರ್ಗದವರೇ, ಅಧಿಕಾರಿಗಳೇ, ಜನಪ್ರತಿನಿದಿಗಳೇ ಉತ್ತರ ಕೊಡಿ… ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ವಾ..????” ಎಂಬ ಪೋಸ್ಟರ್ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದಾರೆ. ಈ ಹಿಂದೆ ನಡೆದ ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷವೇ ಆ ಬಾಗಿಲನ್ನು ತೆಗೆದು ಬದಲಿ ವ್ಯವಸ್ಥೆ ಮಾಡಿದ್ದರೆ ಇದಕ್ಕೆ ಅವಕಾಶವಾಗುತ್ತಿರಲಿಲ್ಲ. ಬೇರೆ ಇಲಾಖೆಗಳಲ್ಲಿ ವರ್ಗಾವಣೆ ಆಗುವ ಮೊದಲೇ ಅಧಿಕಾರಿಗಳ ನೇಮಕವಾಗಿರುತ್ತದೆ. ಆದರೆ ಇಲ್ಲಿನ ಮುರಾರ್ಜಿ ವಸತಿ ಶಾಲೆಗೆ ವಾರ್ಡನ್ ಇಲ್ಲ. ಇರುವ ಶಿಕ್ಷಕರೇ ವಾರ್ಡನ್‌ನಂತೆ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಸುರಕ್ಷತೆ ನೀಡುವಲ್ಲಿ ಎಡವಿದ ಪರಿಣಾಮ ಇಂತಹ ಘಟನೆಗಳು ಮರುಕಳಿಸುತ್ತಿವೆ. ಶಾಸಕರು, ಅಧಿಕಾರಿಗಳು ಎಚ್ಚೆತ್ತು ವಾರ್ಡನ್ ನೇಮಕ ಮಾಡಬೇಕು.

ಮೂಲ ಸೌಕರ್ಯ ಇಲ್ಲ… ಗಮನಿಸಲೂ ಇಲ್ಲ..

ಮುಖ್ಯವಾಗಿ ಈ ವಸತಿ ಶಾಲೆಯಲ್ಲಿ ಸಿಸಿ ಕ್ಯಾಮೆರಾದ ವ್ಯವಸ್ಥೆ ಸೆಕ್ಯೂರಿಟಿ, ಮಹಿಳಾ ವಾರ್ಡನ್, ರಾತ್ರಿ ಒಂದು ಸುತ್ತು ಪೋಲಿಸ್ ಬೀಟ್, ದೂರು ಪೆಟ್ಟಿಗೆ, ಕೌನ್ಸೆಲಿಂಗ್, ಪೋಷಕರೊಂದಿಗೆ ಸಭೆ ಈ ವ್ಯವಸ್ಥೆಯನ್ನು ಮಾಡಬೇಕು. ಅಲ್ಲದೆ ಪದೇ ಪದೇ ಇಂಥ ಘಟನೆ ನಡೆಯುತ್ತಿದೆ. ಆದರೂ ಕೂಡ ಅಧಿಕಾರಿಗಳು ಗಮನ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾವಿಗೆ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದು ಪೋಸ್ಟರ್ ಅಭಿಯಾನ ಶುರುವಾಗಿದೆ.

Categories
ಕರಾವಳಿ

ಉಡುಪಿ: ಉಸ್ತುವಾರಿ ಕಾರ್ಯದರ್ಶಿಯಾಗಿ ರೋಹಿಣಿ ಸಿಂಧೂರಿ

ಕರಾವಳಿ ಟಾಪ್ ನ್ಯೂಸ್

* ಉಡುಪಿ: ಉಸ್ತುವಾರಿ ಕಾರ್ಯದರ್ಶಿಯಾಗಿ ರೋಹಿಣಿ ಸಿಂಧೂರಿ
* ಮಂಗಳೂರು: ಧರ್ಮಸ್ಥಳ ಮಂಗಳೂರಿಗೆ ಇಂದಿನಿಂದ ರಾಜಹಂಸ
* ಬಂಟ್ವಾಳ: ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಪಟ್ಟು
* ಪುತ್ತೂರು: ವೇಶ್ಯಾವಾಟಿಕೆ ಪ್ರಕರಣ ಬಯಲು: ಏನಿದು ಕೇಸ್..?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ರಾಜ್ಯ ಸರ್ಕಾರವು ರಾಜ್ಯದ ಅಭಿವೃದ್ಧಿ ಯೋಜನೆಗಳ ಜಾರಿ ಮತ್ತು ಪರಿಶೀಲನೆಗೆ, ಅನಿರೀಕ್ಷಿತ ತಪಾಸಣೆ ಮತ್ತು ಅದರ ಕುರಿತ ಪರಿಶೀಲನೆ ಹೀಗೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿತ್ತು. ಇದೀಗ ರೋಹಿಣಿ ಸಿಂಧೂರಿ ಅವರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಈ ಕ್ಷಣದಿಂದ ಅಧಿಕಾರವನ್ನು ವಹಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿದೆ. ಈ ಹಿಂದೆ ರೋಹಿಣಿ ಸಿಂಧೂರಿ ಅವರು ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರದ ಕಾರ್ಯದರ್ಶಿ ಆಗಿದ್ದರು.

ಮಂಗಳೂರು: ಧರ್ಮಸ್ಥಳ ಮಂಗಳೂರಿಗೆ ಇಂದಿನಿಂದ ರಾಜಹಂಸ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಂಗಳೂರು ವಿಭಾಗದ ಎರಡನೇ ಘಟಕದಿಂದ ಧರ್ಮಸ್ಥಳ ಮತ್ತು ಮಂಗಳೂರಿಗೆ ರಾಜಹಂಸ ಬಸ್ಸಿಗೆ ಇಂದಿನಿಂದ ಚಾಲನೆ ನೀಡಿದೆ. ಪ್ರಯಾಣದ ದರ 110ರೂಪಾಯಿ ನಿಗದಿಯಾಗಿದ್ದು. ಬಿ.ಸಿ.ರಸ್ತೆ, ಬಂಟ್ವಾಳ, ಕಾರಿಂಜ ಕ್ರಾಸ್, ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮಾರ್ಗದ ಮೂಲಕ ಸಂಚರಿಸುತ್ತದೆ. ರಾಜಹಂಸವು ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬೆಳಿಗ್ಗೆ ಆರುವರೆ, ಏಳು, ಎಂಟುವರೆ, ಒಂಭತ್ತು, ಹನ್ನೊಂದುಕಾಲು ಮಧ್ಯಾಹ್ನ ಹನ್ನೆರಡುಕಾಲು, ಎರಡುವರೆ, ಮೂರುವರೆ ಸಂಜೆ ಐದುವರೆ ಮತ್ತು ಆರುವರೆಗೆ ಹೊರಡಲಿದೆ. ಅದೇ ರೀತಿ ಧರ್ಮಸ್ಥಳದಿಂದ ಮಂಗಳೂರಿಗೆ ಬೆಳಿಗ್ಗೆ ಆರುವರೆ, ಏಳು, ಒಂಭತ್ತು, ಒಂಭತ್ತುಕಾಲು, ಹನ್ನೊಂದುವರೆ, ಮಧ್ಯಾಹ್ನ ಹನ್ನೆರಡು, ಎರಡುಮುಕ್ಕಾಲು, ಮೂರುವರೆ, ನಾಲ್ಕುವರೆ ಮತ್ತು ಸಂಜೆ ಐದುವರೆಗೆ ಹೊರಡುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಬಂಟ್ವಾಳ: ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಪಟ್ಟು

ಬಂಟ್ವಾಳ: ವಿಧಾನ ಪರಿಷತ್ತಿನ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆ ಗ್ರಾಮದ ಬಳಿಯ ಬೆಂಜನಪದವು ಸರ್ಕಾರಿ ಪ್ರೌಢಶಾಲೆಯ ಸಮೀಪದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಿಸಲು ಮಂಜೂರಾದ ಹತ್ತು ಕೋಟಿ ಅನುದಾನವನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಕೋರಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಪತ್ರ ಬರೆದಿದ್ದಾರೆ. ಶಾಲೆಯ ಸಮೀಪದಲ್ಲಿ ಒಟ್ಟು 5. 25 ಎಕರೆ ಸ್ಥಳದಲ್ಲಿ ಆಟದ ಮೈದಾನ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಹತ್ತು ಕೋಟಿ ಅನುದಾನವನ್ನು ರಾಜ್ಯ ಸರ್ಕಾರವು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅನುದಾನ ಮಾಡಿತ್ತು. ಆದರೆ ಈ ಮೊತ್ತವನ್ನು ಇನ್ನೂ ಬಿಡುಗಡೆಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದ್ದು, ತಾಲ್ಲೂಕು ಮಟ್ಟದ ವಿದ್ಯಾರ್ಥಿಗಳ ಆಟ ಮತ್ತು ಶಾರೀರಿಕ ತರಬೇತಿ ಸಂಬಂಧಿತ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಿಚಾರವನ್ನು ಸಂಬಂಧಿತ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಹಣವನ್ನು ಬಿಡುಗಡೆಗೊಳಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.

ಪುತ್ತೂರು: ವೇಶ್ಯಾವಾಟಿಕೆ ಪ್ರಕರಣ ಬಯಲು: ಏನಿದು ಕೇಸ್..?

ಪುತ್ತೂರು: ಸಾಮೆತ್ತಡ್ಕ ನಿವಾಸಿ ವಿಲ್ಫ್ರೆಡ್ ಎಂಬ ವ್ಯಕ್ತಿಯು ತನ್ನ ಮನೆಯ ಸಮೀಪದ ಕಟ್ಟಡವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾನೆ ಎಂಬ ಮಾಹಿತಿ ದೊರೆತ ಆಧಾರದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತು ನಿರೀಕ್ಷಕರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಾಲಂ 143(2) ಮತ್ತು ಅನೈತಿಕ ಸಾಗಾಣಿಕೆ ತಡೆ ಕಾಯ್ದೆ 1956ರ ಕಾಲಂ 3,4 ಮತ್ತು 5(3)ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯವು ಜುಲೈ ಹದಿನೈದರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Categories
ವಿಶೇಷ ಸುದ್ದಿ

ಮುಂಗಾರು ಮಳೆಗೆ ಕಾಡುವ ಮಣ್ಣಿನ ದಾರಿ

ಮುಂಗಾರು ಮಳೆಗೆ ಕಾಡುವ ಮಣ್ಣಿನ ದಾರಿ

ತುಳುನಾಡಿನ ಹಸಿರು ಗದ್ದೆಯಲ್ಲಿ ಸಾಗುವ ಮಣ್ಣಿನ ರಸ್ತೆಯು ಕೇವಲ ಸಂಚಾರದ ಮಾರ್ಗವಲ್ಲ, ಅದು ಈ ನೆಲದ ನಾಡುನುಡಿಗಳ, ನೆನಪುಗಳ, ಸಂಸ್ಕೃತಿಯ ಹೃದಯಸ್ಪರ್ಶಿ ಹೆಜ್ಜೆಗುರುತು. ಮಳೆ ಬರುವ ಮುನ್ನ ಎದೆ ತುಂಬಿಕೊಳ್ಳುವ ಆ ಕಬ್ಬಿಣದ ಸುಗಂಧ, ಮಣ್ಣಿನ ಮೇಲೆ ಕಿರಿದಾದ ಆ ಕಚ್ಚಾ ದಾರಿಯು ಮನಸ್ಸಿನ ನುಡಿಬೆರಳಲ್ಲಿ ಜಾಡು ಬಿತ್ತುತ್ತದೆ.
ಗದ್ದೆಯ ನಡುವೆಯೇ ಕಾಣುವ ಆ ಹಳೆಯ ಮನೆ… ಮಣ್ಣಿನಲ್ಲಿ ಕಟ್ಟಲ್ಪಟ್ಟಂತಿರುವ ನೆನೆಯುವ ನೆನಪಿನ ಗುಡಿಸಿಲು. ಅದರ ಬುಡಕೆ ಬಿದ್ದ ಗೋಡೆಗಳಲ್ಲಿ ಸಮಯದ ಕಥೆಗಳಿರುತ್ತವೆ — ಅಜ್ಜಿ ಹೆಜ್ಜೆಯ ಚಪ್ಪಳ ಧ್ವನಿ, ತಾತನ ಹಾಡಿನ ಎದೆಗುಂಡಿ, ಮಳೆ ಬಿದ್ದಾಗ ಒಳಚರಂಡಿಯ ಬಬಲಾ ಧ್ವನಿ. ಮಳೆಗಾಲದಲ್ಲಿ ಮನೆ ಎದುರು ಜಲದ ಹೆಜ್ಜೆಗಳನ್ನು ಬಿಡುವ ಆ ಬಾಲ್ಯ ಸ್ಮೃತಿಗಳು ಮನಸ್ಸಿನ ಪುಟಗಳನ್ನೆ ತೆರೆದುಹಾಕುತ್ತವೆ.
ಮರದ ಕೊಂಬೆಯ ಮೇಲೆ ನೀರು ಹನಿ ಆಗಿ ರುಳಿಯುವ ಧ್ವನಿ, ಕೊಳದ ತೀರದಲ್ಲಿ ಆಟವಾಡುವ ಹುಡುಗರ ಕೂಗು, ಗದ್ದೆಯ ನಡುವೆ ಬಿತ್ತನೆ ಮಾಡುತ್ತಿರುವ ಮಹಿಳೆಯರ ಹಾಡು — ಎಲ್ಲವೂ ಒಟ್ಟಾಗಿ ಒಂದು ಭಾವನಾತ್ಮಕ ಹೂವಿನಂಥ ಅನುಭವವನ್ನು ಕೊಡುತ್ತವೆ.
“ಧೋ” ಎಂದರೆ ಆಕಾಶ ತನ್ನ ಮನಸ್ಸನ್ನು ಬಿಡುವಂತೆ ಮಳೆ ಸುರಿಯುತ್ತದೆ. ಅಲ್ಲಿ ಈ ಹಸಿರು ಹೊಲಗಳು ಆ ಮಳೆಯೊಳಗೆ ನಾಟಿಕೊಳಗೆ ತೊಳೆದ ಕನಸುಗಳೆನಿಸುತ್ತವೆ. ಮಣ್ಣಿನ ರಸ್ತೆಯು ಆ ಮಳೆ ನೀರನ್ನು ಒಗ್ಗೂಡಿಸಿ ಮತ್ತೆ ಮತ್ತೆ ತೋರುವಂತೆಯೇ ಹಳೆಯ ನೆನಪನ್ನೂ ಪುನರಾವೃತ್ತಿಸುತ್ತದೆ. ಮಣ್ಣು ಒದ್ದೆಯಾದರೂ ಮನಸ್ಸು ಚಿಗುರುತ್ತದೆ.
ಅಂತಹುದು ತುಳುನಾಡಿನ ಭೂಮಿ. ಇಲ್ಲಿ ಮಳೆಗಾಲ ಎಚ್ಚರಿಕೆಗೊಂದು ಹಾಡು. ಇಲ್ಲಿ ಮನೆಗೊಮ್ಮೆ ನೋಡಿದರೆ ಅದು ಕಾಡಿಗೊಂದು ಕವಿತೆ. ಇಲ್ಲಿ ಮಣ್ಣಿನ ರಸ್ತೆ ತಾತನ ಕಥೆಯಂತೆ, ಆನಂದದ ನೆನಪಿನಂತೆ, ಶುದ್ಧ ಸಾಂಸ್ಕೃತಿಕ ಪರಂಪರೆಯ ದೀಪದಂತೆ ಹೊಳೆಯುತ್ತದೆ.
ಈ ಮಣ್ಣಿನ ಮಧ್ಯೆ, ಈ ಹಸಿರಿನ ಹಿತದಲ್ಲಿ, ನಾವು ಜೀವನವನ್ನೇ ಮತ್ತೆ ಹೊಸದು ಮಾಡಿಕೊಳ್ಳುತ್ತೇವೆ.

ರಾಂ ಅಜೆಕಾರು ಕಾರ್ಕಳ 

Categories
ಕರಾವಳಿ ಮಲ್ನಾಡ್

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ
– 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
– ಜುಲೈ 9 ರಂದು ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ

NAMMUR EXPRESS NEWS
ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಅಬ್ಬರ ಮುಂದುವರಿದಿದೆ. ಇಂದು ಕೂಡಾ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದ್ದು, ಹಲವೆಡೆ ಶಾಲೆ ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಕ್ಕೆ ಇಂದು ಆರೆಂಜ್ ಅಲರ್ಟ್ ಕೊಡಲಾಗಿದೆ. ಅಲ್ಲದೆ ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಭಾರಿ ಮಳೆ ಅಬ್ಬರಿಸಲಿದ್ದು, ಆರೆಂಜ್ ಅಲರ್ಟ್ ಕೊಡಲಾಗಿದೆ. ಬೀದರ್, ಧಾರವಾಡ ಕಲಬುರ್ಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.

ನಾಳೆಯಿಂದ ಜುಲೈ 9 ರವರೆಗೂ, ಐದು ದಿನ ಕರಾವಳಿಗೆ ಭರ್ಜರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೆಳಗಾವಿ, ಧಾರವಾಡಕ್ಕೂ ಜುಲೈ 9 ರವರೆಗೆ ಅಲರ್ಟ್ ಮುಂದುವರಿಯಲಿದೆ. ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ಕಲಬುರ್ಗಿ, ಗದಗ, ಬೀದರ್ ಜಿಲ್ಲೆಗಳಿಗೆ ಮುಂದಿನ 2 ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಈ ಬಗ್ಗೆ ಮಾತನಾಡಿದ, ಹವಾಮಾನ ವಿಜ್ಞಾನಿ ಸಿಎಸ್ ಪಾಟೀಲ್ ಮಾತನಾಡಿ, ಪೂರ್ವ ಅರಬ್ಬೀ ಸಮುದ್ರದ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕರಾವಳಿಯಲ್ಲಿ ಟ್ರಫ್ ಇರುವ ಕಾರಣ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಹಲವು ಕಡೆ ಮಳೆಯಾಗುತ್ತಿದೆ.

Categories
ತೀರ್ಥಹಳ್ಳಿ

ಭಾರೀ ಮಳೆ: ಮುಳುಗುವ ಹಂತದಲ್ಲಿ ರಾಮ ಮಂಟಪ!

ಭಾರೀ ಮಳೆ: ಮುಳುಗುವ ಹಂತದಲ್ಲಿ ರಾಮ ಮಂಟಪ!
– ತೀರ್ಥಹಳ್ಳಿ ತಾಲೂಕಿನಾದ್ಯಂತ ಶಾಲಾ ಕಾಲೇಜಿಗೆ ರಜೆ
– ಮಳೆ ಕಾರಣ ಜನ ಜೀವನ ಅಸ್ತವ್ಯಸ್ತ
– ಹೊಸ ನಗರ ತಾಲೂಕಲ್ಲಿ ಕೂಡ ರಜೆ ಘೋಷಣೆ

NAMMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಾದ್ಯಂತ ನಿರಂತರವಾಗಿ ಮಳೆ
ಸುರಿಯುತ್ತಿರುವುದರಿಂದ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಗುರುವಾರ ಬೆಳಿಗ್ಗೆ ಹೊತ್ತಿಗೆ ಕೆಲವೇ ಅಡಿ ಬಾಕಿ ಇದ್ದು ತುಂಗಾ ನದಿಯ ರಾಮ ಮಂಟಪ ಮುಳುಗುವ ಹಂತದಲ್ಲಿದೆ.
ತೀರ್ಥಹಳ್ಳಿಯಲ್ಲಿ ರಾಮ ಮಂಟಪ ಮುಳುಗಿದರೆ ಅತೀ ಹೆಚ್ಚು ಮಳೆ ಬಂದಿದೆ ಎಂದರ್ಥ. ಕಳೆದ 2 ದಿನದಿಂದ ಭಾರೀ ಮಳೆ ಆಗುತ್ತಿದೆ.

ಶಾಲಾ ಕಾಲೇಜುಗಳಿಗೆ ರಜೆ!

ಮುಂಜಾಗೃತಾ ಕ್ರಮವಾಗಿ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ, ಪದವಿ ಕಾಲೇಜುಗಳಿಗೆ 3-7-2025 ರ ಗುರುವಾರ ರಜೆಯನ್ನು ಘೋಷಿಸಿ ತಹಸೀಲ್ದಾರ್ ರಂಜಿತ್‌ ಆದೇಶ ಹೊರಡಿಸಿದ್ದಾರೆ.
ಕಳೆದ 24 ಗಂಟೆಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದು ಇದರಿಂದ ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆಯಾಗುವ ಮುನ್ಸೂಚನೆಯಿಂದ,ತಾಲೂಕಿನ ಎಲ್ಲಾ ಹಳ್ಳಕೊಳ್ಳಗಳು ತಂಬಿ ಹರಿಯುತ್ತಿದ್ದು ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ದೃಷ್ಠಿಯಿಂದ ರಜೆ ಘೋಷಿಸಲಾಗಿದೆ. ಈಗ ನೀಡಿರುವ ರಜೆಯನ್ನು ಮುಂದಿನ ಶನಿವಾರದಂದು ಸರಿಪಡಿಸಿಕೊಳ್ಳಲು ತಿಳಿಸಲಾಗಿದೆ.
ಮಳೆ ವೇಳೆ ಕೆಲಸ ಮಾಡುವಾಗ ಎಚ್ಚರ. ಭಾರೀ ಗಾಳಿ ಮಳೆ ಕಾರಣ ಕೆಲಸ ಮಾಡುವಾಗ ಎಚ್ಚರ. ಭಾರೀ ಮಳೆ ಕಾರಣ ನದಿ ತೀರ, ಹಳ್ಳಗಳ ಬಳಿ ಹೋಗಬೇಡಿ.

ಹೊಸ ನಗರ ತಾಲೂಕಲ್ಲಿ ಕೂಡ ರಜೆ ಘೋಷಣೆ

ಭಾರೀ ಮಳೆ ಕಾರಣ ಹೊಸನಗರ ತಾಲೂಕಿನ ಶಾಲೆ ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರು ರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರ ಆತ್ಮವಿಶ್ವಾಸ ಕಡಿಮೆಯಾಗುತ್ತದೆ, ಮನೆಯ ಸೌಕರ್ಯಗಳು ವಿಸ್ತರಿಸುತ್ತವೆ, ಪೋಷಕರು ನಿಮ್ಮನ್ನು ಬೆಂಬಲಿಸುತ್ತಾರೆ. ಬಟ್ಟೆ ಇತ್ಯಾದಿಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ಸಂಗ್ರಹವಾದ ಸಂಪತ್ತು ಕಡಿಮೆಯಾಗಬಹುದು. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ, ಮಕ್ಕಳ ಸಂತೋಷ ಹೆಚ್ಚಾಗುತ್ತದೆ. ಆದಾಯದಲ್ಲಿ ಇಳಿಕೆ ಮತ್ತು ವೆಚ್ಚಗಳಲ್ಲಿ ಹೆಚ್ಚಳದ ಪರಿಸ್ಥಿತಿ ಇರಬಹುದು.

** ವೃಷಭ ರಾಶಿ :
ಇಂದು ಶೈಕ್ಷಣಿಕ ಕೆಲಸ ಮತ್ತು ಗೌರವ ಹೆಚ್ಚಾಗುತ್ತದೆ. ಸ್ವಭಾವತಃ ಕಿರಿಕಿರಿ ಇರಬಹುದು, ಆದರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸದ ಬಗ್ಗೆ ಉತ್ಸಾಹ ಮತ್ತು ಉತ್ಸಾಹ ಇರುತ್ತದೆ. ಉದ್ಯೋಗ ಮತ್ತು ಕೆಲಸದ ಕ್ಷೇತ್ರದಲ್ಲಿ ವಿಸ್ತರಣೆ ಇರಬಹುದು. ಸ್ಥಳ ಬದಲಾವಣೆಯ ಸಾಧ್ಯತೆಯೂ ಇದೆ. ಅಧಿಕಾರಿಗಳು ನಿಮ್ಮನ್ನು ಬೆಂಬಲಿಸುತ್ತಾರೆ, ಕೆಲಸದ ಕ್ಷೇತ್ರದಲ್ಲಿ ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ. ಧಾರ್ಮಿಕ ಸ್ಥಳಗಳಲ್ಲಿ ಸತ್ಸಂಗ ಕಾರ್ಯಕ್ರಮಗಳಿಗೆ ನೀವು ಹೋಗಬಹುದು.

** ಮಿಥುನ ರಾಶಿ :
ಇಂದು ನಿಮಗೆ ತಾಯಿಯ ಬೆಂಬಲ ಸಿಗುತ್ತದೆ. ಮಾತಿನಲ್ಲಿ ಸಂಯಮದಿಂದಿರಿ. ಮಾತಿನಲ್ಲಿ ಕಠಿಣತೆಯ ಭಾವನೆ ಇರುತ್ತದೆ, ಸಂಗ್ರಹವಾದ ಸಂಪತ್ತಿನಲ್ಲಿ ಇಳಿಕೆ ಕಂಡುಬರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸಂದರ್ಶನಗಳು ಇತ್ಯಾದಿಗಳು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತವೆ. ಕುಟುಂಬದಲ್ಲಿ ಧಾರ್ಮಿಕ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ವಾಹನ ಸೌಕರ್ಯ ಹೆಚ್ಚಾಗಲಿದೆ.

** ಕರ್ಕಾಟಕ ರಾಶಿ :
ಇಂದು ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ, ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಮಕ್ಕಳ ಸೌಕರ್ಯ ಹೆಚ್ಚಾಗುತ್ತದೆ, ಅತಿಯಾದ ಕೋಪವನ್ನು ತಪ್ಪಿಸಿ. ಉನ್ನತ ಶಿಕ್ಷಣ ಮತ್ತು ಸಂಶೋಧನೆ ಇತ್ಯಾದಿಗಳಿಗಾಗಿ ವಿದೇಶಕ್ಕೆ ವಲಸೆ ಹೋಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಸ್ಥಳ ಬದಲಾವಣೆಯೂ ಸಾಧ್ಯ. ನಿಮ್ಮ ಸಂಗಾತಿಯ ಬೆಂಬಲ ಸಿಗುತ್ತದೆ.

** ಸಿಂಹ ರಾಶಿ :
ಇಂದು ಮನಸ್ಸಿನಲ್ಲಿ ನಿರಾಶೆ ಮತ್ತು ಅತೃಪ್ತಿಯ ಭಾವನೆಗಳು ಇರುತ್ತವೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ, ಶತ್ರುಗಳನ್ನು ಜಯಿಸಲಾಗುತ್ತದೆ. ಕುಟುಂಬದಲ್ಲಿ ಮಹಿಳೆಯಿಂದ ಹಣ ಪಡೆಯುವ ಸಾಧ್ಯತೆಗಳಿವೆ, ಸಹೋದರರೊಂದಿಗೆ ದೂರವಾಗಬಹುದು. ಸಂಭಾಷಣೆಯಲ್ಲಿ ಸಂಯಮದಿಂದಿರಿ, ಮಾತಿನಲ್ಲಿ ಕಠಿಣ ಭಾವನೆಗಳು ಇರುತ್ತವೆ. ಖರ್ಚುಗಳು ಹೆಚ್ಚಾಗಬಹುದು.

** ಕನ್ಯಾ ರಾಶಿ :
ಇಂದು ದಿನಚರಿ ಅಸ್ತವ್ಯಸ್ತವಾಗಿರುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸುತ್ತದೆ, ಸ್ವಯಂ ನಿಯಂತ್ರಣದಲ್ಲಿರಿ. ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಶೈಕ್ಷಣಿಕ ಮತ್ತು ಬೌದ್ಧಿಕ ಕೆಲಸಗಳಿಂದಾಗಿ ಖ್ಯಾತಿ ಮತ್ತು ಗೌರವ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಶಾಂತಿ ಇರುತ್ತದೆ, ವಾಹನ ಸೌಕರ್ಯಗಳು ಹೆಚ್ಚಾಗುತ್ತವೆ. ನೀವು ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬಹುದು.

** ತುಲಾ ರಾಶಿ :
ಇಂದು ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಆತ್ಮವಿಶ್ವಾಸವೂ ಪೂರ್ಣವಾಗಿರುತ್ತದೆ. ತಾಯಿಯ ಆರೋಗ್ಯವನ್ನು ನೋಡಿಕೊಳ್ಳಿ. ಕುಟುಂಬದ ಬೆಂಬಲವನ್ನು ನೀವು ಪಡೆಯುತ್ತೀರಿ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ, ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಆಸ್ತಿ ನಿರ್ವಹಣೆಗೆ ಖರ್ಚುಗಳು ಹೆಚ್ಚಾಗಬಹುದು. ಸಂಗಾತಿಗೆ ಆರೋಗ್ಯ ಸಮಸ್ಯೆಗಳಿರಬಹುದು, ವೈದ್ಯಕೀಯ ಕೆಲಸದಲ್ಲಿ ಖರ್ಚುಗಳು ಹೆಚ್ಚಾಗಬಹುದು.

** ವೃಶ್ಚಿಕ ರಾಶಿ :
ಇಂದು ಮಾನಸಿಕ ಶಾಂತಿ ಇರುತ್ತದೆ, ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಆದರೆ ಸ್ವಯಂ ನಿಯಂತ್ರಣದಲ್ಲಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ, ತಾಯಿಯಿಂದ ಹಣ ಪಡೆಯುವ ಸಾಧ್ಯತೆಗಳಿವೆ. ವೈವಾಹಿಕ ಸಂತೋಷ ಹೆಚ್ಚಾಗುತ್ತದೆ, ಸ್ನೇಹಿತರ ಸಹಾಯದಿಂದ ಉದ್ಯೋಗಾವಕಾಶಗಳು ಸಿಗಬಹುದು. ಆದಾಯ ಹೆಚ್ಚಾಗುತ್ತದೆ, ಆದರೆ ನೀವು ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು.

** ಧನಸ್ಸು ರಾಶಿ :
ಇಂದು ಮಾತಿನಲ್ಲಿ ಕಠೋರತೆಯ ಪರಿಣಾಮ ಹೆಚ್ಚಾಗುತ್ತದೆ, ಮನಸ್ಸಿನಲ್ಲಿ ನಿರಾಶೆಯ ಭಾವನೆಗಳು ಉದ್ಭವಿಸಬಹುದು. ತಾಯಿಯ ಬೆಂಬಲ ನಿಮಗೆ ಸಿಗುತ್ತದೆ, ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯ, ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಬಟ್ಟೆ ಮತ್ತು ಆಭರಣಗಳ ಕಡೆಗೆ ಒಲವು ಇರುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ, ನೀವು ಹಳೆಯ ಸ್ನೇಹಿತನನ್ನು ಭೇಟಿಯಾಗಬಹುದು.

** ಮಕರ ರಾಶಿ :
ಇಂದು ಮಾನಸಿಕ ಶಾಂತಿ ಇರುತ್ತದೆ. ಆದರೆ ಅತಿಯಾದ ಕೋಪವನ್ನು ತಪ್ಪಿಸಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ, ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ಸಾಧ್ಯತೆಗಳಿವೆ, ನಿಮ್ಮ ಇಚ್ಛೆಗೆ ವಿರುದ್ಧವಾಗಿ ಕೆಲವು ಹೊಸ ಕಾರ್ಯಗಳ ಜವಾಬ್ದಾರಿಯನ್ನು ನೀವು ಪಡೆಯಬಹುದು. ಕೆಲಸದ ಸ್ಥಳದಲ್ಲಿ ಸಾಕಷ್ಟು ಶ್ರಮವಹಿಸಬೇಕಾಗುತ್ತದೆ, ಮಕ್ಕಳು ತೊಂದರೆ ಅನುಭವಿಸುತ್ತಾರೆ.

** ಕುಂಭ ರಾಶಿ :
ಇಂದು ಆಸ್ತಿಯಿಂದ ಆದಾಯ ಹೆಚ್ಚಾಗಬಹುದು, ನಿಮ್ಮ ತಾಯಿಯಿಂದ ಹಣ ಪಡೆಯಬಹುದು. ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ಸಾಧ್ಯತೆಗಳಿವೆ, ಸ್ಥಳ ಬದಲಾವಣೆಯೂ ಸಾಧ್ಯ. ಕೆಲಸದ ಸ್ಥಳದಲ್ಲಿ ಸಾಕಷ್ಟು ಶ್ರಮವಹಿಸಬೇಕಾಗುತ್ತದೆ, ಆದಾಯ ಹೆಚ್ಚಾಗುತ್ತದೆ. ಮಕ್ಕಳಿಗೆ ಆರೋಗ್ಯ ಸಮಸ್ಯೆಗಳಿರಬಹುದು, ಧಾರ್ಮಿಕ ಚಟುವಟಿಕೆಗಳಿಗೆ ಖರ್ಚುಗಳು ಹೆಚ್ಚಾಗಬಹುದು.

** ಮೀನ ರಾಶಿ :
ಇಂದು ಸ್ವಯಂ ನಿಯಂತ್ರಣದಲ್ಲಿರಿ, ತಾಳ್ಮೆ ಕಡಿಮೆಯಾಗುತ್ತದೆ. ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷದ ಭಾವನೆಗಳು ಇರುತ್ತವೆ, ಆದರೆ ಸಂಭಾಷಣೆಯಲ್ಲಿ ಸಂಯಮದಿಂದಿರಿ, ಅತಿಯಾದ ಕೋಪವನ್ನು ತಪ್ಪಿಸಿ. ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ, ನೀವು ಸಂಶೋಧನಾ ಕೆಲಸ ಇತ್ಯಾದಿಗಳಿಗಾಗಿ ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ನಿಮಗೆ ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ.