Categories
ದಕ್ಷಿಣ ಕನ್ನಡ

ಧರ್ಮಸ್ಥಳ ಅನನ್ಯ ಕೇಸ್: 22 ವರ್ಷಗಳ ಬಳಿಕ ಮತ್ತೆ ದೂರು!

ಧರ್ಮಸ್ಥಳ ಅನನ್ಯ ಕೇಸ್: 22 ವರ್ಷಗಳ ಬಳಿಕ ಮತ್ತೆ ದೂರು!
– ಮಗಳ ಅಸ್ತಿ ಪಂಜರ ಬೇಕು ಎಂದು ಪೊಲೀಸ್ ಠಾಣೆಗೆ ದೂರು
– ಮಗಳ ಹುಡುಕಿ ಬಂದ ನನ್ನ ತಲೆಗೆ ಹೊಡೆದು ಕೋಮಾಕ್ಕೆ ಹೋಗಿದ್ದೆ

NAMMUR EXPRESS NEWS
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಪ್ರಕರಣಕ್ಕೆ ಇದೀಗ ಮರು ಜೀವ ಬಂದಿದೆ. 22 ವರ್ಷಗಳ ಹಿಂದಿನ ಕೇಸ್ ಇದೀಗ ಮತ್ತೆ ಚಾಲನೆಗೆ ಬರುವ ಸಾಧ್ಯತೆ ಇದ್ದು ಆಕೆಯ ತಾಯಿ ನನ್ನ ಮಗಳ ಅಸ್ತಿ ಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

2003ರಲ್ಲಿ ತನ್ನ ಸ್ನೇಹಿತರೊಂದಿಗೆ ಬಂದಿದ್ದ ಹುಡುಗಿ ಸಿಗಲೇ ಇಲ್ಲ!

ಸುಜಾತ ಭಟ್ ಎಂಬ ಮಹಿಳೆಯು 22 ವರ್ಷಗಳ ಹಿಂದೆ ಅಂದರೆ 2003ರಲ್ಲಿ ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿದ್ದ, ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳು ಅನನ್ಯ ಭಟ್ ಆ ಬಳಿಕ ಮನೆಗೆ ಮರಳಿ ಬಾರದೆ, ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ, ಬಳಿಕ ತಮ್ಮ ವಕೀಲರಾದ ಮಂಜುನಾಥ್ ಎನ್ನುವವರೊಂದಿಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ವರಿಷ್ಠಾಧಿಕಾರಿಗಳ ಬಳಿ ತಮ್ಮ ಮಗಳ ನಾಪತ್ತೆಗೆ ಸಂಬಂಧಿಸಿದಂತೆ ವಿವರವನ್ನು ನೀಡಿ, ನ್ಯಾಯವನ್ನು ಕೋರಿದರು. ಅವರ ಆದೇಶದ ಮೇರೆಗೆ ಧರ್ಮಸ್ಥಳದ ಸಬ್ ಇನ್ಸ್ಪೆಕ್ಟರ್ ಆದ ಸಮರ್ಥ್ ಗಾಣಿಗೇರ್ ಅವರ ಬಳಿ ದೂರು ನೀಡಿದರು. ದೂರನ್ನು ಸ್ವೀಕರಿಸಿದ ಪೊಲೀಸರು ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ತಮ್ಮ ಮಗಳ ಅಸ್ತಿ ಬೇಕು ಎಂದ ತಾಯಿ!

ಧರ್ಮಸ್ಥಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳನ್ನು ಸುಜಾತ ಭಟ್ ಕೂಡ ವೀಕ್ಷಿಸಿದರು. ಅಲ್ಲಿ ಹೂತು ಹಾಕಲಾಗಿದ್ದ ಕಳೆಬರಗಳನ್ನು ಕಂಡು ಅವರಿಗೆ ತಮ್ಮ ಮಗಳ ನೆನಪು ಕಾಡಿದೆ.‌ ಜೊತೆಗೆ ಆಕೆಗೂ ಈ ಸ್ಥಿತಿಗೆ ಎದುರಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಿ ತನ್ನ ಮಗಳ ಅಸ್ಥಿಪಂಜರ ಸ್ಥಿತಿಯಲ್ಲಿರುವ ದೇಹವನ್ನು ಡಿಎನ್ಎ ಪರೀಕ್ಷೆಯ ಮೂಲಕ ದೃಢಪಡಿಸಿ, ತನಗೆ ಒಪ್ಪಿಸಬೇಕು. ನರಳಿರುವ ಆಕೆಯ ಆತ್ಮಕ್ಕೆ ನಮ್ಮ ಸಂಪ್ರದಾಯದಂತೆ ಸರಿಯಾದ ರೀತಿಯಲ್ಲಿ ಸಂಸ್ಕಾರವನ್ನು ನಡೆಸಿ ಮುಕ್ತಿ ಕಾಣಿಸಬೇಕು, ನಾನು ಯಾರ ಮೇಲೂ ಅನುಮಾನ ಪಡುತ್ತಿಲ್ಲ, ಯಾರನ್ನು ದ್ವೇಷಿಸುತ್ತಿಲ್ಲ ನನಗೆ ನನ್ನ ಮಗಳ ಮೃತ ದೇಹ ದೊರೆತರೆ ಸಾಕು ಎಂದು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮಗಳ ಹುಡುಕಿ ಬಂದ ನನ್ನ ತಲೆಗೆ ಹೊಡೆದು ಕೋಮಾಕ್ಕೆ ಹೋಗಿದ್ದೆ

2003ರಲ್ಲಿ ನಾನು ಕೊಲ್ಕತ್ತಾದಲ್ಲಿದ್ದೆ. ಮಗಳನ್ನು ಕಷ್ಟ ಪಟ್ಟುಓದಿಸಿ ಮಣಿಪಾಲದಲ್ಲಿ ವೈದ್ಯಕೀಯ ಪದವಿ ಮಾಡುತ್ತಿದ್ದಳು. ಆಕೆ ಧರ್ಮಸ್ಥಳದಲ್ಲಿ ನಾಪತ್ತೆ ಆದಳು. ಆಕೆಯನ್ನು ಹುಡುಕಿ ಬಂದಾಗ ನನ್ನ ಮೇಲೆ ಅಟ್ಯಾಕ್ ಆಯಿತು. ನಾನು 3 ತಿಂಗಳು ಕೋಮಾಕ್ಕೆ ಹೋಗಿದ್ದೆ. ಈಗ ನನ್ನ ಮಗಳಿದ್ದರೆ ನನ್ನ ನೋಡಿಕೊಳ್ಳುತ್ತಿದ್ದಳು. ಈಗ ನನಗೆ ನ್ಯಾಯ ಬೇಕು ಎಂದರು.

Categories
ದಕ್ಷಿಣ ಕನ್ನಡ

ಎ.ಐ ಮೂಲಕ ಸುಳ್ಳು ಮಾಹಿತಿ ಸೃಷ್ಠಿಸಿ ವಿಡಿಯೋ ಪ್ರಸಾರ

ಎ.ಐ ಮೂಲಕ ಸುಳ್ಳು ಮಾಹಿತಿ ಸೃಷ್ಠಿಸಿ ವಿಡಿಯೋ ಪ್ರಸಾರ

* ಯ್ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಪ್ರಕರಣ, ಬಂಧನ ಸಾಧ್ಯತೆ
* ಸುಳ್ಳು ವಿಡಿಯೋ ಪ್ರಸಾರ ಮಾಡಿ ಜನರು ಉದ್ರೇಕಗೊಳ್ಳುವಂತೆ ಪ್ರಚೋದನೆ ಆರೋಪ

NAMMUR EXPRESS NEWS
ಧರ್ಮಸ್ಥಳ: ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತು ಹಾಕಿರುವುದರ ಬಗ್ಗೆ ಸಾಕ್ಷಿ ದೂರುದಾರ ನೀಡಿರುವ ದೂರಿನ ಬಗ್ಗೆ ಎ.ಐ ಮೂಲಕ ಕಾಲ್ಪನಿಕವಾಗಿ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನು ಒಳಗೊಂಡಿರುವ ವೀಡಿಯೋ ಬಹಿರಂಗಪಡಿಸಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಬಗ್ಗೆ ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರರು ತನ್ನ ದೂರಿನಲ್ಲಿ ಹಾಗೂ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿರುವ ಮಾಹಿತಿಗಳನ್ನು ಹೊರತುಪಡಿಸಿ ಸಾಕ್ಷಿ ದೂರುದಾರರ ಬಗ್ಗೆ ಹಾಗೂ ಪ್ರಕರಣದ ಬಗ್ಗೆ ಇತರ ಹೆಚ್ಚಿನ ಮಾಹಿತಿಯಿರುವ ಕಾಲ್ಪನಿಕವಾಗಿ ಎ.ಐ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳಿರುವ ವೀಡಿಯೋವನ್ನು ಯುಟ್ಯೂಬ್ ನಲ್ಲಿ ಪ್ರಸಾರ ಮಾಡಿ ಉದ್ದೇಶ ಪೂರ್ವಕವಾಗಿ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡಿರುವ ಹಿನ್ನಲೆಯಲ್ಲಿ ಸಮೀರ್ ಎಂಡಿ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕಲಂ 192,240,353(1)(b)ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಿಸಿರುವುದಾಗಿ ದ.ಕ ಜಿಲ್ಲಾ ಪೊಲೀಸ್ ಎಸ್ ಪಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಸಮೀರ್ ಎಂ.ಡಿ ಹಿಂದೆಯೂ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ AI ತಂತ್ರಜ್ಞಾನದ ಕಾಲ್ಪನಿಕ ವರದಿ ಮಾಡಿ ಬಹಳ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಮೀರ್ ಎಂ.ಡಿ ಬಂಧನವಾಗೋ ಸಾಧ್ಯತೆಯಿದೆ.

Categories
ದಕ್ಷಿಣ ಕನ್ನಡ

ಮಜೂರು: ಸುತ್ತಮುತ್ತಲಿನ ಹಲವು ಮನೆಗಳ ನೀರು ಕಲುಷಿತ- ಗ್ರಾಮಸ್ಥರಲ್ಲಿ ಆತಂಕ

ಮಜೂರು: ಸುತ್ತಮುತ್ತಲಿನ ಹಲವು ಮನೆಗಳ ನೀರು ಕಲುಷಿತ- ಗ್ರಾಮಸ್ಥರಲ್ಲಿ ಆತಂಕ

NAMMUR EXPRESS NEWS
ಮಜೂರು: ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸುತ್ತಮುತ್ತಲಿನ ಹಲವು ಮನೆಗಳ ನೀರು ಕಲುಷಿತಗೊಂಡಿದ್ದು ಗ್ರಾಮಸ್ಥರು ಆತಂಕಿತರಾಗಿದ್ದಾರೆ.
ಉಮ್ಮರ್ ಸಾಹೇಬ್, ಅಮಣಿ ಪಾಣಾರ, ಸಂಕ್ರಾಯ ಆಚಾರ್ಯ, ರುಕ್ಮಿಣಿ ಭಟ್, ಮಾಲಿನಿ ರಾವ್, ಸೂರ್ಯ ಮೇಸ್ತ್ರಿ, ಸುಬ್ರಾಯ ಭಟ್, ಹಯವದನ ಪುರಾಣಿಕ್, ಸಂಜೀವ ದೇವಾಡಿಗ, ಹರಿದಾಸ್ ಭಟ್ ಅವರ ಮನೆಯ ಬಾವಿಯ ನೀರು ಸಂಪೂರ್ಣ ಕಲುಷಿತಗೊಂಡಿದೆ.
ಕಲುಷಿತ ಗೊಂಡಿರುವ ನೀರು ಕುಡಿಯುವುದಕ್ಕೆ ಮಾತ್ರವಲ್ಲದೇ ದಿನಬಳಕೆಗೆ ಬಳಸುವುದೂ ಕಷ್ಟಸಾಧ್ಯವೆಂಬಂತಾಗಿದೆ. ಹಾಗಾಗಿ ಎಲ್ಲಾ ಮನೆಯವರೂ ಪಕ್ಕದಲ್ಲೇ ಇರುವ ಬಾವಿಯ ನೀರನ್ನು ಕುಡಿಯುವುದಕ್ಕೆ ಮತ್ತು ಗ್ರಾಮ ಪಂಚಾಯತ್ ನೀಡುವ ನಳ್ಳಿ ನೀರನ್ನು ಇತರ ಕೆಲಸಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳುತ್ತಿದ್ದಾರೆ.
ಬಾವಿ ನೀರು ಕಲುಷಿತಗೊಂಡಿರುವ ಬಗ್ಗೆ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗ್ರಾ. ಪಂ. ಮತ್ತು ಆರೋಗ್ಯ ಇಲಾಖೆ ಸಿಬಂದಿಗಳು ಎರಡೆರಡು ಬಾರಿ ಭೇಟಿ ನೀಡಿ, ನೀರನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ.
ನೀರಿನಲ್ಲಿ ಅಮೋನಿಯಾ ಅಂಶ ಅಂಶ ಪತ್ತೆಯಾಗಿದೆ.
ಬಾವಿಯ ನೀರು ಕಲುಷಿತವಾಗಿರುವ ಬಗ್ಗೆ ಪರೀಕ್ಷೆಗಾಗಿ ಖಾಸಗಿಯಾಗಿ ಪ್ರಯೋಗಾಲಯಕ್ಕೆ ತಂದಿದ್ದು ಅದನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಪರೀಕ್ಷೆಗೊಳಪಟ್ಟಿರುವ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳು ಅಮೋನಿಯಾ ಅಂಶಗಳು ಪತ್ತೆಯಾಗಿವೆ. ಕೊಳೆತ ವಾಸನೆ ಹೆಚ್ಚಿದ್ದು, ಬಾವಿ ನೀರು ಕೆಸರಿನ ರಾಡಿಯಂತಾಗಿರುವುದು ಪತ್ತೆಯಾಗಿದೆ. ಮಳೆಗಾಲದಲ್ಲಿ ಸಂಗ್ರಹವಾಗುವ ನೀರು ಒಂದೆರಡು ದಿನದ ಬಳಿಕ ಶುಚಿಯಾಗಬೇಕಿದ್ದು ಇಲ್ಲಿ ಬಾವಿಯ ನೀರು ಯಾವ ಕಾರಣಕ್ಕೆ ಹೀಗಾಗಿದೆ ಎನ್ನುವುದನ್ನು ಪತ್ತೆ ಹಚ್ಚ ಬೇಕಿದ್ದು ಅತ್ಯಾಧುನಿಕ ತಂತ್ರಜ್ಣಾನದಲ್ಲಿ ನೀರನ್ನು ಪರಿಶೀಲಿಸುವ ಅಗತ್ಯತೆ ಕಂಡು ಬರುತ್ತಿದೆ ಎಂದು ಖಾಸಗಿ ಪ್ರಯೋಗಾಲಯ ತಜ್ಣರು, ಉಡುಪಿ ಡಾ| ಅವಿಲಾ ಡಿ ಸೋಜ ಹೇಳಿದ್ದಾರೆ.

Categories
ದಕ್ಷಿಣ ಕನ್ನಡ

ಅಪಾಯದ ಮಟ್ಟ ತಲುಪಿದ ನೇತ್ರಾವತಿ ನದಿ

* ಅಪಾಯದ ಮಟ್ಟ ತಲುಪಿದ ನೇತ್ರಾವತಿ ನದಿ

* 28. 5 ರಷ್ಟು ಎತ್ತರದಲ್ಲಿ ಹರಿಯುತ್ತಿದ್ದಾಳೆ ನೇತ್ರಾವತಿ

ನಮ್ಮೂರ ಎಕ್ಸ್ ಪ್ರೆಸ್ ನ್ಯೂಸ್

ಉಪ್ಪಿನಂಗಡಿ: ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿ ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟ ತಲುಪಿದೆ. ಕುಮಾರಧಾರ ನೀರಿಗಿಂತ ಅಧಿಕ ಪ್ರಮಾಣದ ಹರಿವು ಈ ನದಿಯಲ್ಲಿ ಕಂಡುಬಂದಿದೆ. ಸಹಸ್ರಲಿಂಗೇಶ್ವರ ಮತ್ತು ಮಹಾಕಾಳಿ ದೇವಾಲಯದ ಬಳಿ ಇರುವ 36 ಮೆಟ್ಟಿಲುಗಳಲ್ಲಿ ಸುಮಾರು 27 ಮೆಟ್ಟಿಲುಗಳು ಈಗಾಗಲೇ ನದಿಯ ನೀರಿನಲ್ಲಿ ಮುಳುಗಿ ಹೋಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ನೇತ್ರಾವತಿ ನದಿಯ ಅತಿಯಾದ ರಭಸದಿಂದಾಗಿ ದೇವಾಲಯದ ಹಿಂದಿನಿಂದ ಹರಿದು ಬಂದು ನೇತ್ರಾವತಿಯನ್ನು ಸಂಗಮಿಸುತ್ತಿದ್ದ ಕುಮಾರ ಧಾರ ನದಿಯ ಸರಾಗವಾದ ಹರಿಯುವಿಕೆಗೆ ತಡೆಯುಂಟಾಗಿ ಕಸ, ಕಡ್ಡಿ, ಪ್ಲಾಸ್ಟಿಕ್ ಬಾಟಲಿಗಳಂತ ತ್ಯಾಜ್ಯ ವಸ್ತುಗಳು ಹಳೆಯ ಸೇತುವೆ ಬಳಿ ಸಂಗ್ರಹಗೊಳ್ಳುವಂತಾಗಿದೆ. ಇವುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ ಅವರ ನೇತೃತ್ವದಲ್ಲಿ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡವು ದೇವಾಲಯದ ಬಳಿ ಬೀಡುಬಿಟ್ಟಿದೆ.

Categories
ದಕ್ಷಿಣ ಕನ್ನಡ

ಬೆಳ್ತಂಗಡಿ: ಕಪಿಲೆಯ ರೌದ್ರಾವತಾರ..! 

ಬೆಳ್ತಂಗಡಿ: ಕಪಿಲೆಯ ರೌದ್ರಾವತಾರ..! 
– ದೇವಾಲಯವನ್ನು ಸುತ್ತುವರಿದ ನದಿ ನೀರು
– ಕರಾವಳಿಯಲ್ಲಿ ಮಳೆ ಅಬ್ಬರ: ದೇಗುಲಗಳಿಗೆ ಜನ ಕಡಿಮೆ

NAMMUR EXPRESS NEWS
ಬೆಳ್ತಂಗಡಿ ತಾಲ್ಲೂಕಿನ ಪುಣ್ಯ ಕ್ಷೇತ್ರವಾದ ಶಿಶಿಲ ಈಗ ಎಂದಿನಂತಿರದೇ ನೀರಿನ ನಡುವೆ ನಿರ್ಮಿಸಲ್ಪಟ್ಟ ದೇವಾಲಯದಂತಾಗಿದೆ.‌ ಕಾರಣ ಜೂನ್ 25ರ ಬುಧವಾರದಂದು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕಪಿಲಾ ನದಿಯು ತುಂಬಿ ಅಪಾಯದ ಮಟ್ಟ ತಲುಪಿದೆ. ನದಿಗೆ ಸಮೀಪದಲ್ಲೇ ಕಟ್ಟಿದ ವೆಂಟೆಡ್ ಅಣೆಕಟ್ಟು ಕೂಡ ಮುಳುಗಡೆಯಾಗಿರುವ ಪರಿಣಾಮ ಕಪಿಲೆಯು ರೌದ್ರ ನರ್ತನ ಮಾಡುತ್ತಾ ಶಿಶಿಲ ದೇವಾಲಯವನ್ನು ಆವರಿಸಿದ್ದಾಳೆ.ಇದೇ ರೀತಿ ಮಳೆ ಮುಂದುವರಿದರೆ ಮುಂದಿನ ಪರಿಸ್ಥಿತಿ ಏನು ಎಂಬ ಚಿಂತೆ ಸುತ್ತಮುತ್ತಲಿನ ಜನರಲ್ಲಿ ಮನೆಮಾಡಿದೆ.
ಕರಾವಳಿ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಭಕ್ತರ ಸಂಖ್ಯೆ ಕೂಡ ಕಡಿಮೆ ಆಗಿದೆ. ಧರ್ಮಸ್ಥಳ, ಉಡುಪಿ, ಕೊಲ್ಲೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.

Categories
ದಕ್ಷಿಣ ಕನ್ನಡ

ಉಪ್ಪಿನಂಗಡಿ ಕುಮಾರಧಾರ ನದಿ ದಡದಲ್ಲಿ ದೈತ್ಯ ಮೊಸಳೆ ಪ್ರತ್ಯಕ್ಷ!

ಉಪ್ಪಿನಂಗಡಿ ಕುಮಾರಧಾರ ನದಿ ದಡದಲ್ಲಿ ದೈತ್ಯ ಮೊಸಳೆ ಪ್ರತ್ಯಕ್ಷ!

* ಸ್ಥಳೀಯರು, ಮಕ್ಕಳಲ್ಲಿ ಆತಂಕ!

NAMMUR EXPRESS NEWS
ಉಪ್ಪಿನಂಗಡಿ: 34 ನೆಕ್ಕಿಲಾಡಿಯಲ್ಲಿ ಕುಮಾರಧಾರ ನದಿ ದಡದಲ್ಲಿ ಮೊಸಳೆಯೊಂದು ಪತ್ತೆಯಾಗಿದ್ದು, ಮೊಸಳೆ ನೋಡಲು ಹೋದವರನ್ನು ಕಂಡು ಮೊಸಳೆಯು ಬಾಯಗಳಿಸಿ ಆಕ್ರಮಣಕಾರಿಯಂತೆ ಇವರ ಕಡೆ ನೋಡಿ ನದಿ ನೀರಿಗೆ ಇಳಿದು ಹೋದ ಘಟನೆ ಇಂದು ಸಂಜೆ ನಡೆದಿದೆ.
ಇಲ್ಲಿನ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರ ನದಿಗಿಳಿಯುವ ದಾರಿಯ ಬಳಿ ನದಿ ದಡದಲ್ಲಿ ಮೊಸಳೆಯು ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ನದಿ ದಡದಲ್ಲಿ ಏನೋ ಮಲಗಿದೆ ಎಂದು ಮಕ್ಕಳು ಸ್ಥಳೀಯ ನಿವಾಸಿಗಳಾದ ಅಝೀಝ್ ಪಿ.ಟಿ. ಹಾಗೂ ಇತರರಲ್ಲಿ ತಿಳಿಸಿದ್ದು, ಅವರು ಅದೇನೆಂದು ನೋಡಲು ಹೋದಾಗ ಮೊಸಳೆಯು ನದಿ ದಡದಲ್ಲಿ ವಿಶ್ರಾಂತಿ ಪಡೆಯುವುದು ಕಂಡು ಬಂತು.
ಇವರು ಸ್ವಲ್ಪ ಹತ್ತಿರಕ್ಕೆ ಹೋದಾಗ ಮೊಸಳೆ ಆಕ್ರಮಣಕಾರಿಯಂತೆ ಇವರ ಕಡೆ ನೋಡಿದ್ದು ಮತ್ತೆ ನದಿ ನೀರಿಗೆ ಇಳಿದು ನಾಷ್ಠೆಯಾಗಿದೆ. ಎರಡು ವರ್ಷಗಳ ಹಿಂದೆ ಪಂಜಳದ ನೇತ್ರಾವತಿ ನದಿಯಲ್ಲಿಯೂ ದೊಡ್ಡ ಮೊಸಳೆಗಳೆರಡು ಪ್ರತ್ಯಕ್ಷವಾಗಿದ್ದವು. ಕಳೆದ ವರ್ಷ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂ ಬಳಿಯೂ ನೇತ್ರಾವತಿ ನದಿ ದಡದಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ನದಿಯಲ್ಲಿ ಮೊಸಳೆಯಿರುವುದು ನದಿಗೆ ಮೀನು ಬೇಟೆಗೆಂದು ಹೋಗುವವರಲ್ಲಿ ಆತಂಕ ಸೃಷ್ಟಿಸಿದೆ.
ಒಂದೆಡೆ ನದಿಯಲ್ಲಿ ಮೊಸಳೆಯು ಕಾಣಿಸಿಕೊಂಡರೆ ಕೆಲವು ದಿನಗಳ ಹಿಂದೆ ನದಿಯಲ್ಲಿ ನೀರು ಕಡಿಮೆ ಇದ್ದ ಸಂದರ್ಭ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಬಳಿಯ ನೇತ್ರಾವತಿ ನದಿಯಲ್ಲಿ ಕಡವಿನ ಬಾಗಿಲ ಸಮೀಪ ಸುಮಾರು 10ರಷ್ಟಿದ್ದ ನೀರು ನಾಯಿಗಳ ಹಿಂಡು ಕಾಣಿಸಿಕೊಂಡಿತ್ತು ಎಂದು ಉಪ್ಪಿನಂಗಡಿಯ ಪ್ರವಾಹ ರಕ್ಷಣಾ ತಂಡದ ನೇತೃತ್ವ ವಹಿಸಿರುವ ಗೃಹ ರಕ್ಷಕದಳದ ಸಿಬ್ಬಂದಿ ದಿನೇಶ್ ಬಿ. ತಿಳಿಸಿದ್ದಾರೆ.
ಕಳೆದೆರಡು ವರ್ಷಗಳ ಹಿಂದೆ ಸರಕಾರದ ವತಿಯಿಂದ ನದಿಗೆ ಮೀನಿನ ಮರಿಗಳನ್ನು ಹಾಕಲಾಗಿದ್ದು, ಅವುಗಳು ಈಗ ಬೆಳೆದು ದೊಡ್ಡದಾಗಿವೆ. ಮೀನು ಹೇರಳವಾಗಿರು ಕಾರಣ ಇದೀಗ ನೀರು ನಾಯಿಗಳು ಅದರ ಬೇಟೆಗೆ ನದಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.

Categories
ದಕ್ಷಿಣ ಕನ್ನಡ

ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆ ವೇಣೂರು ಪ್ರಾರಂಭೋತ್ಸವ

ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆ ವೇಣೂರು ಪ್ರಾರಂಭೋತ್ಸವ
– ಸಂಭ್ರಮದಿಂದ ಮಕ್ಕಳನ್ನು ಬರ ಮಾಡಿಕೊಂಡ ಶಿಕ್ಷಕರು
– ಆಡಳಿತ ಮಂಡಳಿಯ ಸದಸ್ಯರು ಹಾಜರ್

NAMMUR EXPRESS NEWS
ವೇಣೂರಿನ ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 2 ರಂದು ವಿದ್ಯಾರ್ಥಿಗಳನ್ನು ಪ್ರೀತಿಪೂರ್ವಕವಾಗಿ ಶಾಲೆಗೆ ಸ್ವಾಗತಿಸಲಾಯಿತು .
ಎಕ್ಸಲ್ ಆಂಗ್ಲ ಮಾಧ್ಯಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಪುಷ್ಪಾರ್ಚನೆ ಹಾಗೂ ಗೊಂಬೆ ನೃತ್ಯದ ಮೂಲಕ ಸ್ವಾಗತಿಸಲಾಯಿತು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಸಹನ, ಶೈಕ್ಷಣಿಕ ಸಂಯೋಜಕರಾದ ಕು.ನಿಶಾ, ಶ್ರೀಮತಿ ಶ್ರುತಿ, ಆಡಳಿತಧಿಕಾರಿ ಶ್ರೀ ಶಾಂತಿರಾಜ್ ಜೈನ್, ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಸುಜಾತ ವಿದ್ಯಾ ದೇಗುಲಕ್ಕೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವೇಣೂರಿನ ವಿದ್ಯೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿದ್ದ ಗೌರವಾನ್ವಿತ ಕೆ ಎಸ್ ಹೆಗ್ಡೆ ಯವರು ‘ ಬದುಕಿನಲ್ಲಿ ಗಳಿಸುವ ಬಹಳ ದೊಡ್ಡ ಸಂಪತ್ತು ಅಂದರೆ ವಿದ್ಯೆ. ಅಂಥ ವಿದ್ಯೆಯನ್ನು ಕಲಿಯಲು ಯೋಗ್ಯ ಶಾಲೆಯನ್ನು ಆರಿಸಿಕೊಂಡ ತಮಗೆ ಶುಭವಾಗಲಿ ‘ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಸುಜಾತರವರು ವಿದ್ಯಾರ್ಥಿಗಳಿಗೆ ಶಾಲಾ ನೀತಿ ನಿಯಮಗಳನ್ನು ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಲಾಯಿತು ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು,ಎಲ್ಲಾ ಸಿಬ್ಬಂದಿವರ್ಗದವರು, ಪೋಷಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

Categories
ದಕ್ಷಿಣ ಕನ್ನಡ

ನಮ್ಮ ಆಳ್ವರು ನಮ್ಮ ಹೆಮ್ಮೆ!

ನಮ್ಮ ಆಳ್ವರು ನಮ್ಮ ಹೆಮ್ಮೆ!

– ದೇಶದ ಟಾಪ್ ಶಿಕ್ಷಣ ಸಂಸ್ಥೆ ಕಟ್ಟಿದ ಡಾ.ಎಂ.ಮೋಹನ ಆಳ್ವ!
– ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ಹೊಸ ಬದುಕು ಕೊಟ್ಟ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ
* ಡಾ.ಎಂ.ಮೋಹನ ಆಳ್ವ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು

NAMMUR EXPRESS NEWS
ದಕ್ಷಿಣ ಕನ್ನಡ ಜಿಲ್ಲೆಯ ಮಿಜಾರುಗುತ್ತು ಮನೆತನದಲ್ಲಿ ಜನಿಸಿದ ಡಾ.ಎಂ.ಮೋಹನ ಆಳ್ವರದ್ದು ಬಹುಮುಖ ಪ್ರತಿಭಾನ್ವಿತ ವ್ಯಕ್ತಿತ್ವ. ಈ ಕಾಲಮಾನದ ಮಹಾನ್ ಸಾಂಸ್ಕೃತಿಕ ರಾಯಭಾರಿ. 70ರ ಹರೆಯದಲ್ಲೂ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಮಾದರಿಯಾದವರು.
1952 ಮೇ 31ರಂದು ಮಿಜಾರುಗುತ್ತು ಆನಂದ ಆಳ್ವ ಮತ್ತು ತಾಯಿ ಸುಂದರಿ ಆಳ್ವ ಅವರ ಪುತ್ರನಾಗಿ ಜನಿಸಿದ ಮೋಹನ್‌ ಆಳ್ವ ವೃತ್ತಿಯಲ್ಲಿ ವೈದ್ಯರಾದರೂ ಕ್ರೀಡೆ, ಜಾನಪದ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ಕಲೆ, ಸಂಸ್ಕೃತಿಗಾಗಿ ಬದುಕನ್ನೇ ಮುಡಿಪಾಗಿಸಿದ್ದು, ಭಾರತೀಯ ಕಲೆ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

– ಕೇವಲ ಎರಡು ಕೋರ್ಸಿನಲ್ಲಿ ಆರಂಭವಾಗಿ ಇದೀಗ 20,000 ಕ್ಕೂ ಮಿಕ್ಕಿದ ವಿದ್ಯಾರ್ಥಿಗಳ  ಸಂಗಮ!

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದೇಶದಲ್ಲಿಯೇ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಆಳ್ವಾಸ್ ನುಡಿಸಿರಿ, ವಿರಾಸತಿನಂತಹ ಕಾರ್ಯಕ್ರಮಗಳು ದಾಖಲೆ, ವೈಶಿಷ್ಟ್ಯತೆಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಮನ ಸೆಳೆದಿದೆ.
1995ರಿಂದ ಇವರು ಆರಂಭಿಸಿದ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮೂಲಕ ಕೇವಲ 28 ವಿದ್ಯಾರ್ಥಿಗಳೊಂದಿಗೆ ಎರಡು ಕೋರ್ಸ್ ಗಳಲ್ಲಿ ಆರಂಭ ಕಂಡ ಆಳ್ವಾ ಸ್ ಕಾಲೇಜು ಈಗ ತನ್ನ ಆವರಣದಲ್ಲಿ 20,000 ಕ್ಕೂ ಮಿಕ್ಕಿದ ವಿದ್ಯಾರ್ಥಿಗಳ ಸಂಗಮವಾಗಿದೆ. ಇದೆಲ್ಲದರ ಜೊತೆಗೆ ತಮ್ಮ ಪ್ರವೃತ್ತಿಯನ್ನೆಲ್ಲಾ ನಿರಂತರ ವಿಸ್ತರಿಸಿಕೊಂಡು ಸಾಹಿತ್ಯ, ಕಲೆ, ಸಂಸ್ಕೃತಿ ಹೀಗೆ ಸಾಮಾಜಿಕ, ಸಾಂಸ್ಕೃ ತಿಕವಾಗಿ ಗುರುತಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಪ್ರೇಮ, ಸಾಂಸ್ಕೃ ತಿಕ ಸಂಘಟನೆ, ಶಿಸ್ತು, ಸೌಂದರ್ಯ ಪ್ರಜ್ಞೆ, ಸಮಯ ಪ್ರಜ್ಞೆ ಹೀಗೆ ಸೃಜನಶೀಲತೆಯ ವಿಸ್ತಾರ ಬಹುದೊಡ್ಡದು. ವಿರಾಸತ್, ನುಡಿಸಿರಿಗಳ ಮೂಲಕ ಒಂದೆಡೆ ಹಾಗೂ ಇನ್ನೊಂದೆಡೆ ಶಿಕ್ಷಣ ಆರೋಗ್ಯ ಕ್ರೀಡೆ ಹೀಗೆ ಬಹುಮುಖೀ ಸಾಧಕರಾಗಿದ್ದಾರೆ.

– ಸಾವಿರಾರು ಗೌರವ, ಸನ್ಮಾನ: ನಮ್ಮ ಹೆಮ್ಮೆ

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ, ಬೆಳಗಾವಿ ಕನ್ನಡ ಶ್ರೀ ಪ್ರಶಸ್ತಿ, ಮಂಗಳೂರು ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಮೋಹನ್ ಆಳ್ವ ಅವರಿಗೆ ಸಂದಿವೆ.

Categories
ದಕ್ಷಿಣ ಕನ್ನಡ

ಎಕ್ಸೆಲ್ ಗುರುವಾಯನಕೆರೆಯಲ್ಲಿ ನರ್ಸರಿ, ಎಲ್ ಕೆ ಜಿ, ಯು ಕೆಜಿ ಹಾಗೂ 1ನೇ ತರಗತಿ ಪ್ರಾರಂಭ

ಎಕ್ಸೆಲ್ ಗುರುವಾಯನಕೆರೆಯಲ್ಲಿ ನರ್ಸರಿ, ಎಲ್ ಕೆ ಜಿ, ಯು ಕೆಜಿ ಹಾಗೂ 1ನೇ ತರಗತಿ ಪ್ರಾರಂಭ
– ಪಿಯು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಸಂಸ್ಥೆ
– ಎಕ್ಸೆಲ್ – ಬೆಳಕು: ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಹಾಗೂ ಪದವಿ ಪೂರ್ವ ಶಿಕ್ಷಣದಲ್ಲಿ ರಾಜ್ಯ – ರಾಷ್ಟ್ರಮಟ್ಟದಲ್ಲಿ ಅನನ್ಯ ಸ್ಥಾನ ಗಳಿಸಿಕೊಂಡ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಈ ಶೈಕ್ಷಣಿಕ ವರ್ಷದಿಂದ ನರ್ಸರಿ, ಎಲ್ ಕೆ ಜಿ, ಯು ಕೆ ಜಿ ಹಾಗೂ ಆಂಗ್ಲ ಮಾಧ್ಯಮದ ಒಂದನೆಯ ತರಗತಿ ಪ್ರಾರಂಭಗೊಳ್ಳಲಿದೆ.
ಆಯಾ ಕ್ಷೇತ್ರಗಳಲ್ಲಿ 20 ವರ್ಷಗಳಿಗೂ ಮೀರಿದ ಅನುಭವ ಇರುವ ಶಿಕ್ಷಕರು ಬೋಧಿಸಲಿದ್ದಾರೆ. ಆಕರ್ಷಕ ತರಗತಿ ಕೋಣೆ, ಮಕ್ಕಳ ವಯೋಮಾನಕ್ಕೆ ಸೂಕ್ತ ಪೀಠೋಪಕರಣಗಳು, ಆಟಿಕೆ ವಸ್ತುಗಳು, ಆಟದೊಂದಿಗೆ ಪಾಠ, ಆಂಗ್ಲ ಭಾಷಾ ಪ್ರಾವೀಣ್ಯತೆ, ಭಾರತೀಯ ಸಂಸ್ಕೃತಿಯ ಮೈಗೊಡಿಸುವಿಕೆ, ನಾಡು – ನುಡಿಯ ಅಭಿಮಾನ ಸೇರಿದಂತೆ ಮಗುವಿನ ಸರ್ವತೋಮುಖ ಬೆಳವಣಿಗೆಯೆ ಧ್ಯೇಯವಾಗಿ ಶಾಲೆ ನಿರಂತರ ಚಟುವಟಿಕೆಯ ಕೇಂದ್ರವಾಗಿ ಮುನ್ನಡೆಯಲಿದೆ . ಬೆಳ್ತಂಗಡಿ ಹಾಗೂ ಆಸುಪಾಸಿನ ಹೆತ್ತವರ ಬೇಡಿಕೆಗೆ ಸ್ಪಂದಿಸಿ, ವೇಣೂರಿನಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ನಡೆಸುವುದರ ಜೊತೆಗೆ, ಗುರುವಾಯನಕೆರೆಯಲ್ಲೂ ನೂತನ ಶಾಲೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9880899769 , 9900626441 ಸಂಪರ್ಕಿಸಲು ಕೋರಲಾಗಿದೆ.

ಎಕ್ಸೆಲ್ – ಬೆಳಕು: ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಪಿಯು ಬೋರ್ಡ್ ಪರೀಕ್ಷೆ, NEET, JEE- IIT, CET, NDA ಪರೀಕ್ಷೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಎಕ್ಸೆಲ್ ವಿದ್ಯಾಸಂಸ್ಥೆ, ಗುರುವಾಯನಕೆರೆ, ಬೆಳ್ತಂಗಡಿ, ದ.ಕ- ಕಳೆದ ವರ್ಷಗಳಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು AIIMS ಗೆ ಕಳುಹಿಸಿದ ಸವಿನೆನಪಿಗಾಗಿ, ಓದುವ ಹಂಬಲ ಉಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಸಮಾಜಮುಖಿ ಹೆಜ್ಜೆಯನ್ನಿಟ್ಟಿದೆ. ಗುಣಮಟ್ಟದ ಶಿಕ್ಷಣಕ್ಕೆ ಹಂಬಲಿಸುವ ಯುವಪೀಳಿಗೆಗೆ ಹಣವೊಂದು ಅಡಚಣೆ ಆಗಬಾರದು ಎನ್ನುವುದು ಈ ಯೋಜನೆಯ ಆಶಯವಾಗಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕವನ್ನು ಸಂಪೂರ್ಣವಾಗಿ ವಿನಾಯ್ತಿಗೊಳಿಸಲಾಗುವುದು ಅಥವಾ ವಿಷೇಶವಾದ ವಿದ್ಯಾರ್ಥಿವೇತನವನ್ನು ನೀಡಲಾಗುವುದು.
ಆಸಕ್ತರು ಈ ಕೆಳಗಿನ ವಾಟ್ಸಾಪ್ ಸಂಖ್ಯೆಗೆ ಮೆಸೇಜ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯಲ್ಲಿ ವಿದ್ಯಾರ್ಥಿಯ ಹೆಸರು, ವಿಳಾಸ ದೂರವಾಣಿ ಸಂಖ್ಯೆ, ಶಾಲೆಯ ಹೆಸರು ಮತ್ತು ಆಧಾರ್ ಕಾರ್ಡ್ ಫೋಟೋವನ್ನು ಮೆಸೇಜ್ ಮೂಲಕ ಕಳುಹಿಸತಕ್ಕದ್ದು.

ವಾಟ್ಸಾಪ್ ಸಂಖ್ಯೆ – 8867242769, 8867146086

Categories
ದಕ್ಷಿಣ ಕನ್ನಡ

ಸುಳ್ಯದಲ್ಲಿ ಆನೆಗಳ ಕಾದಾಟ

ಸುಳ್ಯದಲ್ಲಿ ಆನೆಗಳ ಕಾದಾಟ
– ಕಾದಾಟದಲ್ಲಿ ಸಾವು ಶಂಕೆ, ಗಂಡಾನೆಯ ಮೃತದೇಹ ಪತ್ತೆ
– ಆನೆಯ ದೇಹದಲ್ಲಿ ತಿವಿದು, ಗಾಯಗೊಂಡು ರಕ್ತಸ್ರಾವವಾಗಿರುವ ಗುರುತು

NAMMUR EXPRESS NEWS
ಸುಳ್ಯ:
ಗಂಡಾನೆಯ ಮೃತದೇಹವೊಂದು ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಮತ್ತು ಕೇರಳ ಗಡಿ ಭಾಗದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಎರ್ಕಲ್ಪಾಡಿಯಲ್ಲಿ ನಡೆದಿದೆ. ಮಂಡೆಕೋಲು ರಿಸರ್ವ್ ಫಾರೆಸ್ಟ್‌ನಲ್ಲಿ ಸ್ಥಳೀಯರಿಗೆ ಕಾಡಾನೆ ಮೃತದೇಹ ಕಂಡುಬಂದಿದ್ದು, ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕಾದಾಟದಲ್ಲಿ ಸಾವು ಶಂಕೆ

ಮೃತ ಆನೆ ಹಾಗೂ ಬೇರೆ ಗಂಡು ಕಾಡಾನೆಗಳ ನಡುವೆ ಕಾದಾಟ ನಡೆದು ಇದರಿಂದ ತೀವ್ರ ರಕ್ತಸ್ರಾವಗೊಂಡು ಆನೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.  ಆನೆಯ ದೇಹದಲ್ಲಿ ತಿವಿದು, ಗಾಯಗೊಂಡು ರಕ್ತಸ್ರಾವವಾಗಿರುವ ಗುರುತು ಕಂಡುಬಂದಿದೆ. ಅರಣ್ಯ ಭಾಗದ ಬೇರೆ ಕಡೆಯಲ್ಲಿ ಕಾದಾಟ ನಡೆದಿದ್ದು, ಇಲ್ಲಿ ಬಂದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್‌. ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಭೇಟಿ ನೀಡಿದ್ದಾರೆ. ಸುಳ್ಯ ಪಶುವೈದ್ಯಾಧಿಕಾರಿ  ಡಾ| ನಿತಿನ್ ಪ್ರಭು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ರಾತ್ರಿಯಾಗಿರುವ ಹಿನ್ನೆಲೆಯಲ್ಲಿ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ, ಇನ್ನಿತರ ಕಾರ್ಯಗಳನ್ನು ಜ.27ರಂದು ನಡೆಸಲಾಗುವುದು ಎಂದು ಅರಣ್ಯಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.