Categories
ಅಪಘಾತ ಉಡುಪಿ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಪುತ್ತೂರು ಬೆಳ್ತಂಗಡಿ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಬೆಳ್ತಂಗಡಿ: 5 ತಲೆಬುರುಡೆ, 113 ಮೂಳೆಗಳು ಪತ್ತೆ!
* ಮಂಗಳೂರು: ರಸ್ತೆ ಅಪಘಾತದಲ್ಲಿ ಇಂಜಿನಿಯರ್ ಸಾವು
* ಕುಂದಾಪುರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ
* ಉಡುಪಿ: ರಂಗಭೂಮಿ ಕಲಾವಿದ ಗೋಪಾಲಣ್ಣ ಇನ್ನಿಲ್ಲ
* ಬಂಟ್ವಾಳ: ದುಬಾರಿ ಬೆಲೆಯ ನಾಯಿ ಕೊಂದ ನೆರೆಮನೆಯವರು!
* ಭಟ್ಕಳ: ಅರಣ್ಯದಲ್ಲಿ ಜಾನುವಾರುಗಳ ಮೂಳೆ ಪತ್ತೆ
* ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ನದಿ ತೀರದಲ್ಲಿರುವ ಬಂಗ್ಲೆಗುಡ್ಡಕ್ಕೆ ಎಸ್ಐಟಿ ತಂಡವು ಪ್ರವೇಶಿಸಿದ್ದು, ತನಿಖಾಧಿಕಾರಿಗಳಾದ ಜಿತೇಂದ್ರ ದಯಾಮ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಸೋಕೋ ತಂಡ, ಕಂದಾಯ ಇಲಾಖೆ ಮತ್ತು ಪಂಚಾಯತ್ ಸಿಬ್ಬಂದಿಗಳು ಗುರುವಾರದಂದು ಸುಮಾರು ಏಳು ಗಂಟೆಗಳ ಕಾಲ ಹದಿಮೂರು ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದ ಐದು ಕಡೆ ಮಹಜರು ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಐದು ತಲೆಬುರುಡೆ, 113 ಮೂಳೆಗಳು ಲಭಿಸಿದ್ದು, ಸೌಜನ್ಯಳ ಮಾವ ವಿಠ್ಠಲ ಗೌಡ ಅವರು ನೀಡಿದ ಹೇಳಿಕೆ ನಿಜವಿರಬಹುದೆಂಬ ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ ಪಾಯಿಂಟ್ 11ರ ಸುತ್ತಮುತ್ತ ನೆಲದ ಮೇಲೆ ಮಾನವನ ಮೂಳೆಯೊಂದಿಗೆ ಬಟ್ಟೆಗಳು ಸಹ ಕಂಡುಬಂದಿದೆ. ಇದೀಗ ಲಭ್ಯವಾಗಿರುವ ಮೂಳೆಗಳನ್ನು ಪೈಪ್ ಗಳಲ್ಲಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲು ಮಣ್ಣಿನ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

* ಮಂಗಳೂರು: ರಸ್ತೆ ಅಪಘಾತದಲ್ಲಿ ಇಂಜಿನಿಯರ್ ಸಾವು

ಮಂಗಳೂರು: ಬಾರೆಬೈಲು ನಿವಾಸಿ ರಾಮಚಂದ್ರ ಎನ್ನುವವರ ಪುತ್ರ ಕೌಶಿಕ್ ಎನ್ನುವ ಇಂಜಿನಿಯರ್ ಯುವಕನು ಬುಧವಾರ ಮಧ್ಯಾಹ್ನ ಬುಲೆಟ್ ಬೈಕ್ ನಲ್ಲಿ ಹೋಗುತ್ತಿದ್ದಾಗ, ಆಟೊವೊಂದು ಢಿಕ್ಕಿ ಹೊಡೆದುದರ ಪರಿಣಾಮವಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ, ವಿಮಾನ ನಿಲ್ದಾಣ ರಸ್ತೆಯ ಯೆಯ್ಯಾಡಿ ಜಂಕ್ಷನ್ ನಲ್ಲಿ ನಡೆದಿದೆ.ಢಿಕ್ಕಿ ಹೊಡೆದ ತೀವ್ರತೆಗೆ ಕೌಶಿಕ್ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದರಿಂದ, ತಲೆಗೆ ಗಂಭೀರವಾದ ಗಾಯಗಳಾಗಿ ಮೃತಪಟ್ಟ ಎನ್ನಲಾಗಿದೆ. ರಾಮಚಂದ್ರ ಅವರು ವಿಜಯವಾಣಿ ಪತ್ರಿಕೆಯ ಏಜೆಂಟ್ ಆಗಿದ್ದು, ಕೌಶಿಕ್ ಕೂಡ ಇಂಜಿನಿಯರ್ ವೃತ್ತಿಯ ಜೊತೆಗೆ, ಮನೆಗಳಿಗೆ ಹಾಲು ಮತ್ತು ಪತ್ರಿಕೆ ಹಾಕುವ ಕಾರ್ಯವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕುಂದಾಪುರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ

ಕುಂದಾಪುರ: ಅಕ್ರಮವಾಗಿ ಇಸ್ಪೀಟ್ ಆಟ ನಡೆಸುತ್ತಿದ್ದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕಿಯಾದ ಚಂದ್ರಕಲಾ ಪತ್ತಾರ್ ಮತ್ತು ಪೊಲೀಸರು ದಾಳಿ ನಡೆಸಿದ ಘಟನೆ, ಗುಲ್ವಾಡಿ ಗ್ರಾಮದ ಅರೆಕಲ್ಲು ಹುಣಸೆ ಮನೆಯಲ್ಲಿ ನಡೆದಿದೆ. ಕಾರ್ಕಳದ ಸಮರ್ಥ್, ತಗ್ಗರ್ಸೆಯ ಪ್ರವೀಣ್, ಮಂಗಳೂರಿನ ಪ್ರದೀಪ್ ಮತ್ತು ಗುಲ್ವಾಡಿಯ ನಿಸಾರ್ ಶೇಖ್ ಅವರನ್ನು ಬಂಧಿಸಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಈ ಸಂದರ್ಭದಲ್ಲಿ ಬಂಧಿತ ಆರೋಪಿಗಳ ಬಳಿ ಇದ್ದ 11.620 ನಗದು ಹಣ, ನಾಲ್ಕು ಮೊಬೈಲ್ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

* ಉಡುಪಿ: ರಂಗಭೂಮಿ ಕಲಾವಿದ ಗೋಪಾಲಣ್ಣ ಇನ್ನಿಲ್ಲ

ಉಡುಪಿ: ಭಾರತೀಯ ಜೀವವಿಮಾ ನಿಗಮದ ಉದ್ಯೋಗಿಯಾಗಿದ್ದ, ರಂಗಭೂಮಿ ಕಲಾವಿದರಾಗಿ ತಮ್ಮನ್ನು ತೊಡಗಿಸಿಕೊಂಡ ಗೋಪಾಲಣ್ಣ ಅವರು ಗುರುವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾದರು. 1990ರಲ್ಲಿ ರಂಗಭೂಮಿ ಸಂಸ್ಥೆಯ ಸದಸ್ಯರಾಗಿ, 1995 ರಿಂದ 2000ದ ವರೆಗೆ ಆಡಳಿತ ಮಂಡಳಿಯ ಸದಸ್ಯರಾಗಿ, ಬಳಿಕ ಇತ್ತೀಚಿನವರೆಗೂ ಆಡಳಿತ ಮಂಡಳಿಯ ಗೌರವ ಸಲಹಾ ಸಮಿತಿಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದರು. ಅಲ್ಲದೆ ತುಳುಕೂಟ, ಯಕ್ಷಗಾನ ಕಲಾರಂಗ ಹಾಗೂ ಇತರೆ ಸಂಸ್ಕೃತಿಕ ಸಂಸ್ಥೆಗಳ ಅವಿಭಾಜ್ಯ ಅಂಗವಾಗಿದ್ದರು. ಮೃತರ ಅಂತಿಮ ವಿಧಿ ವಿಧಾನಗಳು ಬ್ರಹ್ಮಗಿರಿಯ ಬಾಲ ಭವನದ ರಾಮಣ್ಣ ಶೆಟ್ಟಿ ಕಾಂಪೌಂಡ್ ನಲ್ಲಿರುವ ಅವರ ಸ್ವಗೃಹದಲ್ಲಿ ನೆರವೇರಿತು ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

* ಬಂಟ್ವಾಳ: ದುಬಾರಿ ಬೆಲೆಯ ನಾಯಿಯನ್ನು ಕೊಂದ ನೆರೆಮನೆಯವರು.

ಬಂಟ್ವಾಳ: ಡೋಲ್ಫಿ ಡಿಸೋಜ ಎನ್ನುವವರಿಗೆ ಸೇರಿದ್ದ, ಸಾಕು ನಾಯಿಯೊಂದನ್ನು ಕೊಂದ ಘಟನೆ ಕಳ್ಳಿಗೆ ಗ್ರಾಮದ ನೆತ್ತರಕೆರೆ ಎನ್ನುವಲ್ಲಿ ಗುರುವಾರ ನಡೆದಿದೆ. ಬುಧವಾರದಿಂದ ಕಾಣೆಯಾಗಿದ್ದ ನಾಯಿಯನ್ನು ಡಿಸೋಜಾ ಅವರು ಹುಡುಕುತ್ತಿದ್ದರು, ಆದರೆ ಗುರುವಾರ ಬೆಳಿಗ್ಗೆ ನೋಡಿದಾಗ ಅದನ್ನು ಕೊಂದು, ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಪರಿಶೀಲನೆ ನಡೆಸಿದಾಗ ನೆರೆಮನೆಯವರು ದೊಣ್ಣೆಯಿಂದ ಹೊಡೆದು, ಹಲ್ಲೆ ಮಾಡಿ ಕೊಂದು, ಹೂತು ಹಾಕಿರುವ ವಿಚಾರ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಡೋಲ್ಫಿ ಡಿಸೋಜಾ ಅವರು ನೆರೆಮನೆಯವರಾದ ಯತಿನ್ ಪೂಜಾರಿ ಮತ್ತು ಯತೀಶ್ ಪೂಜಾರಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಭಟ್ಕಳ: ಕಳೆದ ಕೆಲವು ದಿನಗಳ ಹಿಂದೆ ಉಪವಲಯದ ಅರಣ್ಯಾಧಿಕಾರಿಗಳಾದ ಮಾರುತಿ ಸೊರಗಾಂವಿ ಅವರು ಮುಗ್ಗುಂ ಕಾಲೋನಿಯ ಗುಡ್ಡದ ಅರಣ್ಯ ಪ್ರದೇಶವೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕಟಾವು ಮಾಡಿ, ಚರ್ಮ ಮತ್ತು ಎಲುಬುಗಳು ಸೇರಿದಂತೆ ಮೂಳೆಗಳನ್ನು ಸಹ ಅರಣ್ಯ ಪ್ರದೇಶದಲ್ಲಿ ರಾಶಿ ಹಾಕಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020ರ ಕಾಲಂ 4, 12 ಸೇರಿದಂತೆ ಹಲವು ವಿಧಿಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಯಿತು. ಇದಕ್ಕೆ ಸಂಬಂಧಿಸಿದಂತೆ ಬುಧವಾರದಂದು ಡಿವೈಎಸ್ ಪಿ ಮಹೇಶ್ ಅವರ ಮಾರ್ಗದರ್ಶನದಲ್ಲಿ, ಪಿಐ ದಿವಾಕರ್ ನೇತೃತ್ವದಲ್ಲಿ ಪಿಎಸ್ಐ ನವೀನ್ ನಾಯ್ಕ, ಪಿಎಸ್ಐ ತಿಮ್ಮಪ್ಪ, ಠಾಣೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳು, ಅಕ್ರಮ ಚಟುವಟಿಕೆಗಳ ಆರೋಪಿಗಳಾದ ಮೊಹಮ್ಮದ್ ಸಮಾನ್, ಮೊಹಮ್ಮದ್ ರಾಹೀನ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನಗಳು ಮತ್ತು ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.

•ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ

ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ರೀತಿಯ ಅಪಘಾತ ಸಂಭವಿಸಿದ ಘಟನೆ, ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಡೆದಿದೆ. ಇದರ ಪರಿಣಾಮವಾಗಿ ವಿಜಯಪುರ ಮೂಲದ ಮುದ್ದೇಬಿಹಾಳ ಗ್ರಾಮದ ಟ್ಯಾಂಕರ್ ಚಾಲಕ ಶರಣಪ್ಪ ಸಂಗಪ್ಪ ಕೋಳೂರು ಮತ್ತು ಬಸ್ ಪ್ರಯಾಣಿಕ ಅಂಕೋಲಾ ತಾಲ್ಲೂಕಿನ ಕೇಣಿ ಗ್ರಾಮದ ಭಾಸ್ಕರ ಪಾಂಡುರಂಗ ಗಾಂವಕರ್ ಅವರು ಮೃತಪಟ್ಟಿದ್ದಾರೆ. ಬಸ್ ಚಾಲಕರಾದ ಕಮಲಾಕರ ಸಾತು ನಾಯ್ಕ, ನಿರ್ವಾಹಕ ನಾರಾಯಣ ನಾಯ್ಕ, ಪ್ರಯಾಣಿಕರಾದ ಶಿಕ್ಷಕಿಯಾದ ವೀಣಾ ನಾಯಕ,ಪ್ರಜ್ಞಾ ನಾಯ್ಕ, ಸಾವಿತ್ರಿ ಗೌಡ, ಶ್ರೀಧರ್, ರಾಧಾಕೃಷ್ಣ ನಾಯ್ಕ, ವಿದ್ಯಾರ್ಥಿಗಳಾದ ಸಾನ್ವಿ ನಾಯ್ಕ, ರಕ್ಷಾ ಬಾನಾವಳಿ, ಬೀರಪ್ಪ ನಾಯ್ಕ ಅವರು ಗಾಯಗೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

Categories
ದಕ್ಷಿಣ ಕನ್ನಡ

ಧರ್ಮಸ್ಥಳ ಕೇಸ್: ವಿಚಾರಣೆ ಮತ್ತಷ್ಟು ಟ್ವಿಸ್ಟ್!

ಧರ್ಮಸ್ಥಳ ಕೇಸ್: ವಿಚಾರಣೆ ಮತ್ತಷ್ಟು ಟ್ವಿಸ್ಟ್!
– ಹಿಂದೆ ವಿಚಾರಣೆ ನಡೆಸಿದವರ ಮರು ವಿಚಾರಣೆ
– ಕಿಡ್ನಾಪ್ ನೋಡಿದ್ದೆ ಎಂದ ಮಂಡ್ಯದ ಮಹಿಳೆ ಕೂಡ ವಿಚಾರಣೆ!
– ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಕರ್ನಾಟಕದ ಮಠಾಧೀಶರು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತ್ಯಕ್ಷದರ್ಶಿಗಳು ಹೇಳಿಕೆಗಳನ್ನು ನೀಡಲು ಬರುತ್ತಿರುವುದರಿಂದ, ಕೂಲಂಕಷವಾಗಿ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ, ಎಸ್ಐಟಿ ತಂಡದಿಂದ ವಿಚಾರಣೆ ಇನ್ನೂ ಮುಂದುವರಿದಿದೆ. ಇದರೊಂದಿಗೆ 2012ರಲ್ಲಿ ಸೌಜನ್ಯಳ ಅತ್ಯಾಚಾರಕ್ಕೆ ಸಂಬಂಧಿಸಿದ ಸಂಗತಿಯ ಕುರಿತು ಕೂಡ ಎಸ್ಐಟಿ ವಿಚಾರಣೆಯನ್ನು ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಅತ್ಯಾಚಾರ ವಿಚಾರದಲ್ಲಿ ಆರೋಪಮುಕ್ತರಾಗಿದ್ದ ಉದಯ್ ಜೈನ್, ಧೀರಜ್ ಕೆಲ್ಲ ಮತ್ತು ಮಲ್ಲಿಕ್ ಜೈನ್ ಗೆ ಎಸ್ಐಟಿ ಕರೆ ನೀಡಿದ್ದು, ಉದಯ್ ಜೈನ್ ಬುಧವಾರದಂದು ಎಸ್ಐಟಿ ಮುಂದೆ ಹಾಜರಾಗಿ, ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಮಂಡ್ಯದ ಚಿಕ್ಕಕೆಂಪಮ್ಮ ಎಂಬ ಮಹಿಳೆಯು “ಸೌಜನ್ಯ ಅತ್ಯಾಚಾರ ನಡೆದ ದಿನ ನಾನು ಧರ್ಮಸ್ಥಳಕ್ಕೆ ತೆರಳಿದ್ದೆ. ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದು, ಪೂಜೆಯನ್ನು ಸಲ್ಲಿಸಿ, ಪ್ರಕೃತಿ ಚಿಕಿತ್ಸಾಲಯದತ್ತ ಹೋಗುತ್ತಿದ್ದ ಸಂದರ್ಭದಲ್ಲಿ, ಹುಡುಗಿಯೊಬ್ಬಳನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನಾನು ಕಂಡೆ” ಎಂದು ಎಸ್ಐಟಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ, ಆಕೆಯನ್ನು ಕೂಡ ಪ್ರತ್ಯಕ್ಷದರ್ಶಿ ಎಂದು ಪರಿಗಣಿಸಿ, ವಿಚಾರಣೆಗೆ ಕರೆಯಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಕರ್ನಾಟಕದ ಮಠಾಧೀಶರು

ಧರ್ಮಸ್ಥಳ ಪ್ರಕರಣ ಸ೦ಬ೦ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕರ್ನಾಟಕ ಸ್ವಾಮೀಜಿಗಳು ಭೇಟಿಯಾಗಿದ್ದಾರೆ. ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ. ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿ ನೇತೃತ್ವದ ಸನಾತನ ಸಂತ ನಿಯೋಗವು ದೆಹಲಿಗೆ ತೆರಳಿ ಖುದ್ದು ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿ ವಿವಿಧ ಪೀಠಗಳ 8 ಸ್ವಾಮೀಜಿಗಳ ನಿಯೋಗದಲ್ಲಿದ್ದರು. ಧರ್ಮಸ್ಥಳ ಪ್ರಕರಣದ ಎಲ್ಲಾ ಬೆಳವಣಿಗೆಗಳನ್ನ ನಾನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಧರ್ಮಸ್ಥಳ ಪ್ರಕರಣ ಬಗ್ಗೆ ಕ್ಯಾಬಿನೆಟ್ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

Categories
ದಕ್ಷಿಣ ಕನ್ನಡ

ಹಿಂದೂ ದೇವಾಲಯಗಳ ಟಾರ್ಗೆಟ್ ಧರ್ಮಸ್ಥಳದಲ್ಲಿ ಸಿಡಿದೆದ್ದ ಬಿಜೆಪಿ

ಹಿಂದೂ ದೇವಾಲಯಗಳ ಟಾರ್ಗೆಟ್ ಧರ್ಮಸ್ಥಳದಲ್ಲಿ ಸಿಡಿದೆದ್ದ ಬಿಜೆಪಿ

* ಧರ್ಮದ ಉಳಿವಿಗಾಗಿ ಹೋರಾಟ ಎಂಬ ಘೋಷವಾಕ್ಯದಡಿ ಸಮಾವೇಶ
* ಬುರುಡೆ ಪ್ರಕರಣದ ತನಿಖೆಯನ್ನು NIA ಗೆ ವಹಿಸುವಂತೆ ಆಗ್ರಹ
* ಸೌಜನ್ಯ ಪ್ರಕರಣ ಮರುತನಿಖೆಗೆ ಸುಪ್ರಿಂಗೆ ಹೋದರೆ ಸಂಪೂರ್ಣ ಖರ್ಚು ಬಿಜೆಪಿ ಭರಿಸಲಿದೆ – ಬಿವೈವಿ

NAMMMUR EXPRESS NEWS
ಧರ್ಮಸ್ಥಳ: ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಖಂಡಿಸಿ ಹಾಗೂ ಧರ್ಮಸ್ಥಳ ಬುರುಡೆ ಪ್ರಕರಣದ ಸಂಪೂರ್ಣ ತನಿಖೆ ಎನ್‌ಐಎಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ ಸೋಮವಾರ ಧರ್ಮಸ್ಥಳ ಚಲೋ ನಡೆಸಿ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶವನ್ನು ನಡೆಸಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಧರ್ಮಸ್ಥಳ ಚಲೋ ಹಾಗೂ ಸಮಾವೇಶ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಯಿತು.
ಧರ್ಮದೆಡೆಗೆ ನಮ್ಮ ನಡಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಈ ಬೃಹತ್ ಸಮಾವೇಶದಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಹಾಗೂ ಧರ್ಮಸ್ಥಳ ಮಂಜುನಾಥಸ್ವಾಮಿಯ ಭಕ್ತರು ಭಾಗಿಯಾಗಿ ಧರ್ಮಸ್ಥಳ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಧರ್ಮಸ್ಥಳದ ಬುರುಡೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹಿಸಿದರು.
ಬಿಜೆಪಿಯ ಬಹುತೇಕ ನಾಯಕರು ಹಾಗೂ ಕಾರ್ಯಕರ್ತರುಗಳು ಭಾನುವಾರ ರಾತ್ರಿಯಿಂದಲೇ ಧರ್ಮಸ್ಥಳದತ್ತ ಹೆಜ್ಜೆ ಹಾಕಿದ್ದು, ಬೆಳಿಗ್ಗೆಯೇ ಮಾಜಿ ಸಚಿವ, ಶಾಸಕ ಗೋಪಾಲಯ್ಯ, ಎಸ್.ಆರ್. ವಿಶ್ವನಾಥ್, ರಾಮಮೂರ್ತಿ, ಸತೀಶ್‌ರೆಡ್ಡಿ, ರವಿಸುಬ್ರಹ್ಮಣ್ಯ, ಉದಯ ಗರುಡಾಚಾರ್, ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಸೇರಿದಂತೆ ಬೆಂಗಳೂರು ಹಾಗೂ ರಾಜ್ಯದ ಹಲವು ಬಿಜೆಪಿ ಶಾಸಕರುಗಳ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರುಗಳು ತಂಡೋಪ ತಂಡವಾಗಿ ನೂರಾರು ವಾಹನಗಳಲ್ಲಿ ಧರ್ಮಸ್ಥಳಕ್ಕೆ ಆಗಮಿಸಿ ಮಧ್ಯಾಹ್ನ ನಡೆದ ಧರ್ಮ ಸಮಾವೇಶದಲ್ಲಿ ಭಾಗಿಯಾದರು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕರುಗಳಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರರೆಡ್ಡಿ, ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ. ಮೋಹನ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್, ಮಾಜಿ ಸಚಿವರುಗಳಾದ ಸಿ.ಟಿ. ರವಿ, ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ, ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಸೇರಿದಂತೆ ಬಿಜೆಪಿಯ ಬಹುತೇಕ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳು ಈ ಧರ್ಮ ಸಮಾವೇಶದಲ್ಲಿ ಭಾಗಿಯಾಗಿ ಧರ್ಮಸ್ಥಳ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿದರಲ್ಲದೆ, ಬುರುಡೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಧರ್ಮ ಸಮಾವೇಶಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಎಲ್ಲ ನಾಯಕರು, ಶಾಸಕರುಗಳು ಬೆಳಿಗ್ಗೆಯೇ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಖಂಡಿಸಿ ಬಿಜೆಪಿ ಈಗ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಿದ್ದು, ಇಂದಿನ ಧರ್ಮಸ್ಥಳ ಚಲೋ ಮತ್ತು ಸಮಾವೇಶದ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳದ ಪರ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿದೆ.
ಧರ್ಮಸ್ಥಳಕ್ಕೆ ಆಗಮಿಸಿದ ಸಾವಿರಾರು ಬಿಜೆಪಿ ಕಾರ್ಯಕರ್ತರಿಗೆ ಊಟ ಉಪಚಾರ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸಮಾವೇಶದಲ್ಲಿ ಭಾಗಿಯಾದ ಪ್ರತಿಯೊಬ್ಬರೂ ಧರ್ಮಸ್ಥಳ ವಿರುದ್ಧ ನಡೆದಿರುವ ಷಡ್ಯಂತ್ರವನ್ನು ಖಂಡಿಸಿ, ಧರ್ಮಸ್ಥಳದ ಪರ ನಾವಿದ್ದೇವೆ ಎಂಬ ಘೋಷಣೆಗಳನ್ನು ಕೂಗಿದರು.

* ಸೌಜನ್ಯ ಪ್ರಕರಣ ಮರುತನಿಖೆಗೆ ಸುಪ್ರಿಂಗೆ ಹೋದರೆ ಸಂಪೂರ್ಣ ಖರ್ಚು ಬಿಜೆಪಿ ಭರಿಸಲಿದೆ – ಬಿವೈವಿ
ಬಿಜೆಪಿ ಸಮಾವೇಶ ಮುಗಿಯುತ್ತಿದ್ದಂತೆ ಸೌಜನ್ಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ನೀಡಿ ಸೌಜನ್ಯ ತಾಯಿ ಕುಸುಮಾವತಿ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಸೌಜನ್ಯ ಹೋರಾಟದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಬಿವೈ ವಿಜಯೇಂದ್ರ ಮುಂದೆ ನನ್ನ ಮಗಳ ಸಾವಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಕಣ್ಣೀರು ಹಾಕಿರುವ ಘಟನೆ ಕೂಡ ನಡೆದಿದೆ.
ಈ ಸಂದರ್ಭದಲ್ಲಿ ಸೌಜನ್ಯ ಕುಟುಂಬ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದರೆ ಹೋರಾಟದ ಖರ್ಚು ಬಿಜೆಪಿ ಭರಿಸಲಿದೆ ಎಂದು ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ ಎನ್ನಲಾಗಿದೆ.

Categories
ದಕ್ಷಿಣ ಕನ್ನಡ

*ಧರ್ಮಸ್ಥಳ ಪ್ರಕರಣ: ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ*

*ಧರ್ಮಸ್ಥಳ ಪ್ರಕರಣ: ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ* 

**“ಏನನ್ನೂ ಮುಚ್ಚಿಟ್ಟಿಲ್ಲ, ವ್ಯವಸ್ಥಿತ ಪಿತೂರಿ ನಡೆಯುತ್ತಿದೆ”**

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೆಗ್ಗಡೆ ಅವರು, “ಧರ್ಮಸ್ಥಳದ ಬಗ್ಗೆ ಗೊಂದಲ ಮೂಡಿಸಲಾಗುತ್ತಿದೆ. ಎಸ್‌ಐಟಿ ತನಿಖೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಸತ್ಯ ಹೊರಬರುತ್ತದೆ ಎಂಬ ವಿಶ್ವಾಸವಿದೆ,” ಎಂದು ಸ್ಪಷ್ಟಪಡಿಸಿದರು.

ಅವರು ಮುಂದುವರೆದು, **“ಸೌಜನ್ಯ ಪ್ರಕರಣದಲ್ಲಿ ಸರ್ಕಾರಕ್ಕೆ ತಕ್ಷಣ ಮಾಹಿತಿ ನೀಡಿದ್ದೇ ಅಪರಾಧಿಯನ್ನು ಪತ್ತೆಹಚ್ಚುವಂತೆ ಮಾಡಿತು. ಆದರೆ, ನಮ್ಮ ಕುಟುಂಬದವರು ದೇಶದಲ್ಲೇ ಇಲ್ಲದಿದ್ದಾಗಲೂ ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಯಿತು. ನಮಗೆ ಅನಾವಶ್ಯಕವಾಗಿ ಈ ಪ್ರಕರಣಕ್ಕೆ ಎಳೆದು ತರಲಾಗಿದೆ,”** ಎಂದು ಬೇಸರ ವ್ಯಕ್ತಪಡಿಸಿದರು.

ತನಿಖೆಗೆ ಸಂಪೂರ್ಣ ಸಹಕರಿಸಲು ತಾವು ಸಿದ್ಧರಿರುವುದಾಗಿ ಹೆಗ್ಗಡೆ ಹೇಳಿದರು. “ನಾವು ಏನನ್ನೂ ಮುಚ್ಚಿಟ್ಟಿಲ್ಲ. ಯಾವುದೇ ತನಿಖೆಯನ್ನು ಸ್ವಾಗತಿಸುತ್ತೇವೆ. ಅಂತಿಮ ವರದಿ ಹೊರಬರುವ ತನಕ ಕಾಯುತ್ತಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದರು.

**ಅಪಪ್ರಚಾರದ ವಿರುದ್ಧ ಆಕ್ರೋಶ**
ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಸುಳ್ಳು ಪ್ರಚಾರದ ವಿರುದ್ಧ ಹೆಗ್ಗಡೆ ಆಕ್ರೋಶ ವ್ಯಕ್ತಪಡಿಸಿದರು. “ಕೆಲವರು ಸಾಮಾಜಿಕ ಜಾಲತಾಣಗಳನ್ನು ಬಳಸಿ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ದೇವಸ್ಥಾನ ಹಾಗೂ ಧಾರ್ಮಿಕ ನಂಬಿಕೆಗಳಿಂದ ಅವರನ್ನು ದೂರ ಮಾಡುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸುಳ್ಳು ಸಂದೇಶಗಳಿಂದ ಯುವಕರ ಮನಸ್ಸು ಕಲುಷಿತಗೊಳ್ಳುತ್ತಿದೆ, ಇದು ಅತ್ಯಂತ ಖೇದಕರ,” ಎಂದು ಅಭಿಪ್ರಾಯಪಟ್ಟರು.

**ಬೆಂಬಲದ ಹೆಜ್ಜೆ ಹಿಂದೆ ಹಾಕುವಂತೆ ಕರೆ**
ರಾಜ್ಯಾದ್ಯಂತದಿಂದ ಸಾವಿರಾರು ಜನ ಧರ್ಮಸ್ಥಳಕ್ಕೆ ಬರಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಸಿದ ಹೆಗ್ಗಡೆ, “ನಾನು ಬೇಡವೆಂದು ಹೇಳುತ್ತಿದ್ದೇನೆ. ಪ್ರಕರಣದ ಸತ್ಯ ಶೀಘ್ರದಲ್ಲೇ ಬಹಿರಂಗವಾಗಲಿದೆ. ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂಬ ವಿಶ್ವಾಸವಿದೆ,” ಎಂದು ಸ್ಪಷ್ಟನೆ ನೀಡಿದರು.

Categories
ದಕ್ಷಿಣ ಕನ್ನಡ

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

* SIT ಮುಂದೆ ಸತ್ಯ ಒಪ್ಪಿಕೊಂಡನಾ ಅನಾಮಧೇಯ ಮುಸುಕುಧಾರಿ?
* ಸಿ ಎಂ 24 ಕೊಲೆ ಮಾಡಿದ್ದಾರೆ ಎಂದ ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಸಾಧ್ಯತೆ

NAMMMUR EXPRESS NEWS
ಧರ್ಮಸ್ಥಳ: ರಾಜ್ಯ ಹಾಗೂ ದೇಶಾದ್ಯಂತ ತೀವ್ರ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿರುವ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ‘ಬುರುಡೆ’ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ನೇತ್ರಾವತಿ ನದಿ ದಡದಲ್ಲಿ ಮಹಿಳೆಯರು,ಯುವತಿಯರು ಸೇರಿದಂತೆ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿ ಕಳೆದ 15 ದಿನಗಳಿಂದ ಶೋಧ ಕಾರ್ಯಕ್ಕೆ ಕಾರಣನಾಗಿದ್ದ ಸಾಕ್ಷಿದಾರ ಎಸ್ ಟಿಐ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಆತ ತೋರಿಸಿದ 17 ಜಾಗಗಳ ಪೈಕಿ ಕೇವಲ 2 ಜಾಗಗಳಲ್ಲಿ ಮಾನವ ಅಸ್ಥಿಪಂಜರ ಪತ್ತೆ ನಂತರ ವಿಶೇಷ ತನಿಖಾ ತಂಡ (SIT)ಅಧಿಕಾರಿಗಳು ಶೋಧ ಕಾರ್ಯ ಸ್ಥಗಿತಗೊಳಿಸಿ, ಕಳೆದ ಎರಡು ದಿನಗಳಿಂದ ಸಾಕ್ಷಿ-ದೂರುದಾರನ ತೀವ್ರ ವಿಚಾರಣೆ ನಡೆಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
FSL ವರದಿ ಬರೋವರೆಗೂ ಸಮಾಧಿ ಶೋಧಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸದನದಲ್ಲಿ ತಿಳಿಸಿದ್ದಾರೆ.

* ಅನಾಮಿಕ ದೂರದಾರ SIT ಮುಂದೆ ಹೇಳಿದ್ದೇನು?
2014ರ ನಂತರ ತಮಿಳುನಾಡಿನಲ್ಲಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತ್ತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ನನ್ನನ್ನು ಕೇಳಿತ್ತು. ನಾನು ಕಾನೂನು ಪ್ರಕಾರವೇ ಶವಗಳನ್ನು ಹೂತಿರುವುದಾಗಿ ಹೇಳಿದ್ದೆ. ಆದರೆ ಈ ಗುಂಪು ತಪ್ಪು ಹೇಳಿಕೆ ನೀಡುವಂತೆ ಒತ್ತಡ ಹಾಕಿತ್ತು. 2023ರ ಡಿಸೆಂಬರ್ ನಲ್ಲಿ ತಮಿಳುನಾಡಿನಿಂದ ಗುಂಪು ನನನ್ನು ಕರೆತಂದಿತು. ಕೋರ್ಟ್ ಮುಂದೆ ಹೇಳಿಕೆ ನೀಡಲು ಭಯ ಆಗುತಿತ್ತು. ಮಹಿಳೆ (ಸುಜಾತ ಭಟ್) ದೂರಿನ ನಂತರ ಪೊಲೀಸರು ಹಾಗೂ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಧೈರ್ಯ ಬಂದಿತು. ಆ ಮಹಿಳೆಯೇ ನನ್ನಲ್ಲಿ ಧೈರ್ಯ ತುಂಬಿದರು. ಹೀಗಾಗಿ ನಾನು ಬಂದೆ ಎಂದು ಹೇಳಿರುವುದಾಗಿ ಮಾಹಿತಿ ಲಭ್ಯವಾಗುತ್ತಿದೆ.
ಆ ಗುಂಪು ಬುರುಡೆ ತಂದು ಹೇಳಿದ ರೀತಿ ನಡೆದುಕೊಂಡೆ. ಪೊಲೀಸರ ಮುಂದೆ ಏನು ಹೇಳಬೇಕು ಎಂದು ಮೂವರು ಪ್ರತಿನಿತ್ಯ ಹೇಳಿಕೊಡುತ್ತಿದ್ದರು. ಅದೇ ರೀತಿಯಲ್ಲಿ ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ಮಾಸ್ಕ್ ಮ್ಯಾನ್ SIT ಅಧಿಕಾರಿಗಳ ಮುಂದೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ದೂರುದಾರನ ಹೇಳಿಕೆಯನ್ನು ಎಸ್ಐಟಿ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

* ಸಿ ಎಂ 24 ಕೊಲೆ ಮಾಡಿದ್ದಾರೆ ಎಂದ ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಸಾಧ್ಯತೆ
ಸಿಎಂ ಸಿದ್ದರಾಮಯ್ಯ 24 ಕೊಲೆಗಳನ್ನು ಮಾಡಿದ್ದಾರೆ ಎಂದಿದ್ದ ಮಹೇಶ್ ಶೆಟ್ಟಿ ತಿಮ್ಮರೋಡಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಆತನ ವಿರುದ್ಧ ಒಂದೇ ದಿನದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ಕೂಡಲೇ ಮಹೇಶ್ ಶೆಟ್ಟಿ ತಿಮರೋಡಿಯ ಮೇಲೆ ಎಫ್‌ಐಆರ್ ದಾಖಲಿಸಿ ಬಂಧನ ಮಾಡುವಂತೆ ಸದನದಲ್ಲಿಯೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ’24 ಕೊಲೆಗಳನ್ನು ಮಾಡಿದ್ದಾರೆ’ ಎಂದು ಹೇಳಿಕೆ ನೀಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಬಿಎನ್‌ಎಸ್ ಕಾಯ್ದೆಯಡಿ ಅವಹೇಳನೆ ಮಾಡಿದ ಆರೋಪದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
ಗೃಹ ಸಚಿವರು ನೀಡಿರುವ ಸೂಚನೆಯ ಮೇರೆಗೆ, ಪೊಲೀಸರು ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಬಂಧನವಾಗುವ ಸಾಧ್ಯತೆಯಿದೆ.

* ಹಳೇ ಪ್ರಕರಣಗಳ ಪರಿಶೀಲನೆ
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಸೂಚನೆ ಹೊರಬೀಳುತ್ತಿದ್ದಂತೆಯೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ತಿಮರೋಡಿ ವಿರುದ್ಧದ ಹಳೆಯ ಪ್ರಕರಣಗಳನ್ನು ಕೆದಕುತ್ತಿದ್ದಾರೆ. ಅವರ ಹಿಂದಿನ ಹೇಳಿಕೆಗಳು ಮತ್ತು ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಕಾನೂನು ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಬಿಎನ್ಎಸ್ ಕಾಯ್ದೆಯಡಿ (ಭಾರತೀಯ ನ್ಯಾಯ ಸಂಹಿತೆ) ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Categories
ದಕ್ಷಿಣ ಕನ್ನಡ

ತಿಮರೋಡಿ, ಮಟ್ಟಣ್ಣನವರ್, ಸಮೀರ್ ವಿರುದ್ಧ ಕೇಸ್..!!

ತಿಮರೋಡಿ, ಮಟ್ಟಣ್ಣನವರ್, ಸಮೀರ್ ವಿರುದ್ಧ ಕೇಸ್..!!
– ನೇತ್ರಾವತಿ ನದಿ ಸಮೀಪದ ಅರಣ್ಯದಲ್ಲಿ ಪತ್ತೆಯಾಗದ ಕುರುಹು
– 4 ಯ್ಯೂಟ್ಯೂಬರ್‌ಗಳ ಮೇಲೆ ಹಲ್ಲೆ, ಹಲ್ಲೆಗೊಳಗಾದವರುವ ಖಾಸಗಿ ಆಸ್ಪತ್ರೆಗೆ ದಾಖಲು

NAMMUR EXPRESS NEWS
ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ನಡೆದ ಅಸ್ಥಿಪಂಜರ ಶೋಧ ಕಾರ್ಯಾಚರಣೆಯ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಗಿರೀಶ್ ಮಟ್ಟಣನವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಯೂಟ್ಯೂಬರ್ ಸಮೀರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದಾಖಲಾದ ಸೆಕ್ಷನ್‌ಗಳು ಮತ್ತು ಆರೋಪಿಗಳು:

ಬೆಳ್ತಂಗಡಿ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 115(2), 189(2), 191(2), 351(2), 352, 190 ಅಡಿ ಎಫ್ ಐ ಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಗಿರೀಶ್ ಮಟ್ಟಣನವರ್ (ಎ1), ಮಹೇಶ್ ಶೆಟ್ಟಿ ತಿಮರೋಡಿ (ಎ2), ಯೂಟ್ಯೂಬರ್ ಸಮೀರ್ (ಎ3), ಜಯಂತ್ (ಎ4) ಮತ್ತು ಇತರರ ಹೆಸರನ್ನು ಉಲ್ಲೇಖಿಸಲಾಗಿದೆ.

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ದೂರುದಾರ ನೀಡಿದ ದೂರಿನಂತೆ ನಡೆಯುತ್ತಿರುವ ತನಿಖೆಯಲ್ಲಿ ಬುಧವಾರ ನೇತ್ರಾವತಿ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ಅಗೆಯುವ ಕಾರ್ಯ ನಡೆದಿದ್ದು ಈ ಸ್ಥಳದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಇನ್ನೊಂದೆಡೆ ನೇತ್ರಾವತಿಯ ಪಾಂಗಳ ಪ್ರದೇಶದಲ್ಲಿ ನಾಲ್ಕು ಮಂದಿ ಯ್ಯೂಟ್ಯೂಬರ್‌ಗಳ ಮೇಲೆ ಅಪರಿಚಿತರು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಕುಡ್ಲ ರ್‍ಯಾಂಪೇಜ್‌ನ ಅಜಯ್‌ ಅಂಚನ್‌, ಕ್ಯಾಮರಾಮನ್‌ ಹಾಗೂ ಅಭಿಷೇಕ್‌, ವಿಜಯ್‌ ಎಂಬ ಇನ್ನಿಬ್ಬರು ಯ್ಯೂಟ್ಯೂರ್‌ಗಳ ಮೇಲೆ ಹಲ್ಲೆ ನಡೆಸಲಾಗಿದೆ.

ಹಲ್ಲೆ ನಡೆದ ಬಗ್ಗೆ ಮಾಹಿತಿ ಲಭ್ಯವಾಗಿ ಪೊಲೀಸರು ಸ್ಥಳಕ್ಕೆ ಧಾವಿಸಿದ ವೇಳೆ ಹಲ್ಲೆ ನಡೆಸಿದವರು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಪರಿಸ್ಥಿತಿ ಹತೋಟಿಗೆ ತರಲು ಲಘು ಲಾಠಿ ಚಾರ್ಜ್‌ ನಡೆಸಿದ್ದಾರೆ. ಹಲ್ಲೆಗೊಳಗಾದ ಯೂಟ್ಯೂಬರ್‌ಗಳು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಎಸ್‌ಐಟಿ ತಂಡ ಸಾಕ್ಷಿ ದೂರುದಾರನೊಂದಿಗೆ ನೇತ್ರಾವತಿ ಸ್ನಾನಘಟ್ಟದ ಸಮೀಪಕ್ಕೆ ಆಗಮಿಸಿತು. ಆತ ಗುರುತಿಸಿದ್ದ 13ನೇ ಸ್ಥಳವನ್ನು ಅಗೆಯದೆ ಸಮೀಪವೇ ಇರುವ ಬಂಗ್ಲೆಗುಡ್ಡೆಯ ಅರಣ್ಯಕ್ಕೆ ಗುರುತಿಸದ ಸ್ಥಳಕ್ಕೆ ತೆರಳಿದರು. ರಸ್ತೆಯಿಂದ ಸುಮಾರು 200 ಮೀ. ದೂರದಲ್ಲಿ ಸಾಕ್ಷಿ ದೂರುದಾರ ತೋರಿಸಿದ ಹೊಸ ಜಾಗದಲ್ಲಿ ಬುಧವಾರ ಅಗೆಯುವ ಕಾರ್ಯ ನಡೆಸಲಾಯಿತು. ಆದರೆ ಇಲ್ಲಿ ಯಾವುದೇ ಅವಶೇಷಗಳು, ಗುರುತುಗಳು ಪತ್ತೆಯಾಗಿಲ್ಲ. ಸಂಜೆ 4.30ರ ಸುಮಾರಿಗೆ ತಂಡ ಕಾರ್ಯಾಚರಣೆ ಮುಗಿಸಿ ಹಿಂತಿರುಗಿತು.

– 13ನೇ ಸ್ಥಳದಲ್ಲಿ ನಡೆಯದ ಶೋಧ ಕಾರ್ಯ

ಸಾಕ್ಷಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿ ಬುಧವಾರ ಅಗೆಯುವ ಕಾರ್ಯ ನಡೆಯಬೇಕಾಗಿತ್ತು. ಆದರೆ ಈ ಸ್ಥಳದ ಸಮೀಪ ಕಿಂಡಿ ಅಣೆಕಟ್ಟು,ವಿದ್ಯುತ್‌ ಪರಿವರ್ತಕ ಇತ್ಯಾದಿ ಇದ್ದು, ಇಲ್ಲಿ ಕಾರ್ಯಾಚರಣೆ ನಡೆಸುವುದು ಸವಾಲಿನ ಕೆಲಸವಾಗಿದೆ. ಇದಕ್ಕೆ ಸಣ್ಣ ನೀರಾವರಿ ಇಲಾಖೆ, ಮೆಸ್ಕಾಂನ ಸಹಕಾರ ಬೇಕಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಇಲ್ಲಿ ಶೋಧ ಕಾರ್ಯ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಗುರುವಾರ 13ನೇ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತದೆಯೇ ಎಂಬ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.

– ಎಸ್‌ಐಟಿ ಕಚೇರಿಯಲ್ಲಿ ಸಭೆ

ಎಸ್‌ಐಟಿ ತಂಡದ ಮುಖ್ಯಸ್ಥ ಪ್ರಣವ್‌ ಕುಮಾರ್‌ ಮೊಹಾಂತಿ, ಡಿಜಿಪಿ ಅನುಚೇತ್‌ ಸೇರಿದಂತೆ ಎಸ್‌ಐಟಿ ತಂಡ, ಎಸಿ ಸ್ಟೆಲ್ಲಾ ವರ್ಗಿಸ್‌, ಸಂಬಂಧಪಟ್ಟ ಅಗತ್ಯ ಇಲಾಖೆಯ ಅಧಿಕಾರಿಗಳ ಸಭೆ ಬುಧವಾರ ಬೆಳಗ್ಗೆ ಹಾಗೂ ಸಂಜೆ ಎಸ್‌ಐಟಿ ಕಚೇರಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

Categories
ದಕ್ಷಿಣ ಕನ್ನಡ

6ನೇ ಜಾಗದಲ್ಲಿ ಅಸ್ತಿ ಪಂಜರ ಪತ್ತೆ!.. ಇದೀಗ ಮತ್ತೊಂದು ಸಸ್ಪೆನ್ಸ್!

6ನೇ ಜಾಗದಲ್ಲಿ ಅಸ್ತಿ ಪಂಜರ ಪತ್ತೆ!.. ಇದೀಗ ಮತ್ತೊಂದು ಸಸ್ಪೆನ್ಸ್!
– ಧರ್ಮಸ್ಥಳ ವಿವಾದದಲ್ಲಿ ಅನಾಮಿಕನೇ ಕಳ್ಳ ಎಂದ ಗ್ರಾಪಂ ಅಧ್ಯಕ್ಷ
– ಚಿನ್ನ, ವಸ್ತು ದೋಚಿ ಈಗ ನಾಟಕ: ಹೆಚ್ಚಿದ ಕುತೂಹಲ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸುಳ್ಳೋ ಸತ್ಯವೋ ಎಂಬ ನೂರಾರು ಚರ್ಚೆ, ಎಸ್ ಐ ಟಿ ತನಿಖೆ ನಡುವೆ ಇದೀಗ 6ನೇ ಜಾಗದಲ್ಲಿ ಅಸ್ತಿ ಪಂಜರ ಪತ್ತೆ ಆಗಿದೆ.
ಮತ್ತೊಂದು ಕುತೂಹಲಕಾರಿ ಬೆಳವಣಿಗೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹಾಗೂ ಪ್ರಸ್ತುತ ವಕೀಲರಾಗಿರುವ ಕೇಶವ ಗೌಡ ಅವರು ನೀಡಿರುವ ಹೇಳಿಕೆ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ಅನಾಮಿಕ ವ್ಯಕ್ತಿ ಯಾರು ಎನ್ನುವುದು ಇಡೀ ಧರ್ಮಸ್ಥಳಕ್ಕೆ ಈಗ ಗೊತ್ತಾಗಿದೆ. ಆತ ನಟೋರಿಯಸ್ ಕೆಲಸ ಮಾಡಿದ್ದರಿಂದ, ಕ್ಷೇತ್ರದಿಂದಲೇ ಉಚ್ಚಾಟನೆಯಾಗಿದ್ದ. ಸಾವಿರಾರು ಜನರು ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದರು, ಅನೇಕ ಸಮಸ್ಯೆಗಳಿಂದ ನೊಂದಿದ್ದ ಅವರು ಇಲ್ಲಿ ತಮ್ಮ ಜೀವನವನ್ನು ಅಂತ್ಯ ಮಾಡಿಕೊಳ್ಳುತ್ತಿದ್ದರು.‌ ಆ ಸಂದರ್ಭದಲ್ಲಿ ಶವವನ್ನು ಸಂಸ್ಕಾರ ಮಾಡುವುದೇ ಬಹಳ ಕಷ್ಟಕರ ವಿಚಾರವಾಗಿತ್ತು.‌ ಅನಾಮಿಕ ವ್ಯಕ್ತಿಯು ಶವವನ್ನು ಸಂಸ್ಕಾರ ಮಾಡುವ ಸಂದರ್ಭದಲ್ಲಿ, ತೀರಿಕೊಂಡವರ ಬಳಿ ಇದ್ದ ಹಣ ಒಡವೆಗಳನ್ನು ಕದಿಯುತ್ತಿದ್ದ. ಹೀಗಾಗಿ 2014 ರಿಂದ ಅನಾಮಿಕ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಈ ಸಂಗತಿಗಳ ಹಿಂದೆ ಒಬ್ಬ ವ್ಯಕ್ತಿಯ ಕೈವಾಡವಿದ್ದು, ಅದು ಯಾರು ಎನ್ನುವುದು ಚೆನ್ನಾಗಿ ಗೊತ್ತಿದೆ. ಕ್ಷೇತ್ರದ ಮೇಲೆ ಆರೋಪ ಹೊರೆಸುವವರಿಗೆ ದೇವರು ತಕ್ಕ ಪಾಠವನ್ನು ಕಲಿಸುತ್ತಾನೆ ಎನ್ನುವ ಮಾತುಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Categories
ದಕ್ಷಿಣ ಕನ್ನಡ

ಧರ್ಮಸ್ಥಳ ಕೇಸ್: ಕೊನೆಗೂ ಎಸ್.ಐ.ಟಿ ರಚಿಸಿದ ಸರ್ಕಾರ!

ಧರ್ಮಸ್ಥಳ ಕೇಸ್: ಕೊನೆಗೂ ಎಸ್.ಐ.ಟಿ ರಚಿಸಿದ ಸರ್ಕಾರ!
– ಸಿಗುತ್ತಾ ಧರ್ಮಸ್ಥಳ ಕೇಸಿಗೆ ಬಿಗ್ ಟ್ವಿಸ್ಟ್: ತನಿಖೆ ಶೀಘ್ರ ಶುರು
– ಸೌಜನ್ಯ ಕೇಸ್ ಕೂಡ ತನಿಖೆ?: ಭಾರೀ ಕುತೂಹಲ

NAMMUR EXPRESS NEWS
ಮಂಗಳೂರು: ಧರ್ಮಸ್ಥಳದ ಸುತ್ತಮುತ್ತಲು ನಡೆದಿವೆ ಎನ್ನಲಾದ ನೂರಾರು ಕೊಲೆ, ಅಸಹಜ ಸಾವು, ಅತ್ಯಾಚಾರ ಶಂಕೆ ಹಾಗೂ ಶವಗಳನ್ನು ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಕೊನೆಗೂ ಎಸ್‌ಐಟಿ ರಚನೆ ಮಾಡಿದೆ. ಈ ಮೂಲಕ ಧರ್ಮಸ್ಥಳ ಕೇಸಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ನಾಲ್ವರು ಐಪಿಎಸ್ ಅಧಿಕಾರಗಳು ಈ ವಿಶೇಷ ತನಿಖಾ ತಂಡದಲ್ಲಿದ್ದಾರೆ. ಈ ತಂಡದಲ್ಲಿ ಅನುಚೇತ್, ಜಿತೇಂದ್ರ ಕುಮಾ‌ರ್ ಸೌಮ್ಯಲತಾ ಇದ್ದಾರೆ. ಸದ್ಯದಲ್ಲೇ ಈ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ಶುರು ಮಾಡಲಿದೆ.

ಅಸಹಜ ಸಾವುಗಳ ವರದಿ ಕೇಳಿದ್ದ ಮಹಿಳಾ ಆಯೋಗ, SIT ರಚನೆಗೆ ಸಿಎಂಗೆ ಪತ್ರ

ಧರ್ಮಸ್ಥಳದ ಸುತ್ತಮುತ್ತಲು ಸಂಭವಿಸಿರುವ ಎನ್ನಲಾದ ಸಾವುಗಳ ಆರೋಪಗಳಿಗೆ ಸಂಬಂಧಿಸಿ ಕೂಲಂಕಷ ತನಿಖೆಗೆ ಎಸ್‌ಐಟಿ ರಚನೆ ಮಾಡುವಂತೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಪತ್ರ ಬರೆದಿದ್ದರು.
ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಹಲವು ಹೆಣಗಳನ್ನು ಹೂತು ಹಾಕಿರುವುದಾಗಿ ಸಾಕ್ಷಿ ದೂರುದಾರನೋರ್ವ ನೀಡಿರುವ ಹೇಳಿಕೆಗಳ ಆಧಾರದಲ್ಲಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದರು.
ಇದಲ್ಲದೇ ಕಳೆದ 20 ವರ್ಷಗಳ ಈ ವ್ಯಾಪ್ತಿಯಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ, ನಾಪತ್ತೆ, ಕೊಲೆ, ಅಸಜಹ ಸಾವು, ಅತ್ಯಾಚಾರ ಪ್ರಕರಣಗಳ ಕುರಿತಂತೆ ವರದಿ ನೀಡುವಂತೆಯೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಿಗೆ ಒಂದು ವಾರದ ಗಡುವನ್ನು ಮಹಿಳಾ ಆಯೋಗವು ಪತ್ರದ ಮೂಲಕ ನೀಡಿತ್ತು.
ಇತ್ತೀಚೆಗೆ ಮಾಜಿ ಪೌರಕಾರ್ಮಿಕ ಎನ್ನಲಾದ ಓರ್ವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ದಶಕಗಳ ಹಿಂದೆ ಅನೇಕ ಕೊಲೆಗಳನ್ನು ಮಾಡಿದವರು ನನ್ನನ್ನು ಬಲಿಪಶು ಮಾಡಿದ್ದಾರೆ. ಒತ್ತಾಯಪೂರ್ವಕವಾಗಿ ಮೃತದೇಹಗಳನ್ನು ಹೂತು ಹಾಕುವಂತೆ ಮಾಡಿದ್ದಾರೆ. ನನಗೆ ಒತ್ತಾಯ ಮಾಡಿದ್ದವರು ಧರ್ಮಸ್ಥಳದ ದೇವಸ್ಥಾನ ಆಡಳಿತ ಮಂಡಳಿಗೆ ಸೇರಿದವರು ಎಂದು ಈ ವ್ಯಕ್ತಿ ಆರೋಪಿಸಿದ್ದರಂತೆ.

‘ಯಾರೋ ಹೇಳಿದ ಮಾತ್ರಕ್ಕೆ SIT ರಚಿಸಲು ಸಾಧ್ಯವಿಲ್ಲ’

ಯಾರೋ ಹೇಳಿದರು ಅಂದ ಕಾರಣಕ್ಕೆ ದಿಢೀರ್ ಎಸ್ ಐ ಟಿ ರಚನೆ ಮಾಡಲು ಆಗುವುದಿಲ್ಲ ಎಂದು ಇತ್ತೀಚೆಗೆ ಮೈಸೂರಿನಲ್ಲಿ ಸಿಎಂ ಹೇಳಿಕೆ ನೀಡಿದ್ದರು. ಇದೀಗ ಪ್ರಕರಣಕ್ಕೆ ಭಾರೀ ತಿರುವು ಸಿಗುವ ಸಾಧ್ಯತೆ ಇದೆ.

Categories
ದಕ್ಷಿಣ ಕನ್ನಡ

ಮಣ್ಣುಗುಂಡಿಯಲ್ಲಿ ಗುಡ್ಡ ಕುಸಿತ – ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಮಣ್ಣುಗುಂಡಿಯಲ್ಲಿ ಗುಡ್ಡ ಕುಸಿತ – ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಕಡಬ (ದ.ಕ.): ಇಂದು ಬೆಳಿಗ್ಗೆ ಭಾರಿ ಮಳೆಯ ಕಾರಣದಿಂದ ಕಡಬ ತಾಲೂಕಿನ ಮಣ್ಣುಗುಂಡಿ ಬಳಿ ಗುಡ್ಡ ಕುಸಿತ ಸಂಭವಿಸಿದೆ. ಪರಿಣಾಮವಾಗಿ *ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ (NH-75)*ಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಗುಡ್ಡ ಕುಸಿತದಿಂದ ಮಣ್ಣು, ಬಂಡೆಗಳು ಹಾಗೂ ಮರಗಳು ರಸ್ತೆ ಮೇಲೆ ಬಿದ್ದು, ಎರಡೂ ದಿಕ್ಕಿನಲ್ಲಿ ವಾಹನಗಳು ಅಡಕಿ ನಿಂತಿವೆ. ಇದು ಪ್ರಯಾಣಿಕರು ಹಾಗೂ ಚಾಲಕರಿಗೆ ತೀವ್ರ ತೊಂದರೆಯನ್ನೇಂಟಿಸಿದೆ.

ಘಟನೆಯ ಮಾಹಿತಿ ದೊರಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮತ್ತು ಪುನರ್‌ವಸತಿ ತಂಡಗಳು ಜೆಸಿಬಿ ಬಳಸಿ ಮಣ್ಣು ತೆರವು ಕಾರ್ಯ ಆರಂಭಿಸಿದ್ದಾರೆ. ಕೆಲ ಗಂಟೆಗಳಲ್ಲಿ ಸಂಚಾರ ಪುನಾರಂಭ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಇದು ಮೂರನೇ ಬಾರಿಗೆ ಗುಡ್ಡ ಕುಸಿತ ಸಂಭವಿಸುತ್ತಿರುವುದರಿಂದ ಪರಿಸರ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅವೈಜ್ಞಾನಿಕ ಗುಡ್ಡ ಕಡಿತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಭದ್ರತಾ ದೃಷ್ಟಿಯಿಂದ ವಾಹನಗಳನ್ನು ಧರ್ಮಸ್ಥಳ – ಕುಕ್ಕೇ – ಸುಬ್ರಹ್ಮಣ್ಯ ಮಾರ್ಗಗಳಿಗೆ ಮರುಮಾರ್ಗಿಸಲಾಗಿದೆ. ಅವಶ್ಯಕ ಸೇವೆಗಳನ್ನು ಹೊರತುಪಡಿಸಿ, ಈ ಮಾರ್ಗದಲ್ಲಿ ಪ್ರಯಾಣ ತಪ್ಪಿಸಲು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಇಲಾಖೆ ತಿಳಿಸಿದೆ.

Categories
ದಕ್ಷಿಣ ಕನ್ನಡ

ವಾಣಿಜ್ಯ ವಿಭಾಗದಲ್ಲಿ ಮೂಡಬಿದರೆ ಎಕ್ಸಲೆಂಟ್ ಸೂಪರ್!

ವಾಣಿಜ್ಯ ವಿಭಾಗದಲ್ಲಿ ಮೂಡಬಿದರೆ ಎಕ್ಸಲೆಂಟ್ ಸೂಪರ್!
– ಎಕ್ಸಲೆಂಟ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಉದ್ಘಾಟನೆ
– ವಿದ್ಯೆ ಜತೆಗೆ ಅನುಭವ ಜೀವನ ರೂಪಿಸುತ್ತದೆ: ಸದಾನಂದ ನಾವುಡ
– ವಾಣಿಜ್ಯ ವಿಭಾಗದಲ್ಲಿ ಅನೇಕ ಹೊಸತು: ಯುವರಾಜ ಜೈನ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮೂಡಬಿದರೆ: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ವಾಣಿಜ್ಯ ವಿಭಾಗದಲ್ಲಿ ಮೂಡಬಿದರೆ ಎಕ್ಸಲೆಂಟ್ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ.
ಇತ್ತೀಚೆಗೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉದ್ಘಾಟನಾ ಸಮಾರಂಭವು ನೆರವೇರಿತು.
ಉದ್ಘಾಟನೆಯನ್ನು ನಡೆಸಿಕೊಟ್ಟು ಮಾತನಾಡಿದ ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್ ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜೆಸಿಐ ರಾಷ್ಟ್ರೀಯ ತರಬೇತುದಾರರಾದ ಸದಾನಂದ ನಾವುಡರು “ನಾನು ಶಾಲಾ ಕಾಲೇಜುಗಳಲ್ಲಿ ಕಲಿತ ವಿದ್ಯೆಗಿಂತ, ಅನುಭವದಿಂದ ಕಲಿತ ವಿದ್ಯೆಯೇ ನನ್ನ ಜೀವನದಲ್ಲಿ ಹೆಚ್ಚು ಸಹಾಯಕ್ಕೆ ಬಂದಿತು.‌ ಆ ಅನುಭವವೇ ನನ್ನನ್ನು ಉದ್ಯಮಿಯನ್ನಾಗಿಸಿತು. ಪ್ರತಿಯೊಬ್ಬರು ಸ್ವಂತ ಉದ್ಯೋಗ ಅಥವಾ ಉದ್ದಿಮೆಯನ್ನು ಆರಂಭಿಸಬೇಕಾದರೆ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಯಾರು ಅದಕ್ಕೆ ಮುಂದಾಗುತ್ತಾರೋ ಅಂತವರಿಗೆ ಮಾತ್ರ ಯಶಸ್ಸು ಸಾಧ್ಯ. ಪ್ರಾರಂಭದಲ್ಲಿ ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ, ಎಡವುತ್ತಾರೆ. ಆ ತಪ್ಪುಗಳನ್ನು ತಿದ್ದಿಕೊಂಡಾಗ ಮಾತ್ರ ಮುಂದೆ ಸಾಧಿಸಲು, ಯಶಸ್ಸನ್ನು ಹೊಂದಲು ಸಾಧ್ಯ. ಸೋತಾಗ ಕುಗ್ಗಬಾರದು ಮತ್ತೆ ಎದ್ದು ನಿಲ್ಲುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಹಾಗೆಯೇ ಕಾಲಕ್ಕೆ ತಕ್ಕಂತೆ ನಮ್ಮ ಯೋಚನೆಗಳನ್ನು ಉದ್ಯಮ ಕ್ಷೇತ್ರದಲ್ಲಿ ಬದಲಾಯಿಸಿಕೊಳ್ಳುತ್ತಾ ಬರಬೇಕು. ಸೃಜನಶೀಲತೆಯನ್ನು ಮೊದಲಿಗೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಅಂದುಕೊಂಡದ್ದನ್ನು ಪಡೆಯಲು ಸಾಧ್ಯ.‌ ವಾಣಿಜ್ಯ ವಿಭಾಗದ ಚಟುವಟಿಕೆಗಳನ್ನು ನೋಡಿದರೆ ಮುಂದೆ ನೀವು ಸ್ವಂತ ಉದ್ದಿಮೆಯನ್ನು ಸ್ಥಾಪಿಸಲು ಇದು ಖಂಡಿತವಾಗಿ ನೆರವಾಗುತ್ತದೆ ಎಂಬ ನಂಬಿಕೆ ನನ್ನಲ್ಲಿ ಮೂಡಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯುವರಾಜ ಜೈನ್ ಅವರು “ನಮ್ಮ ಕಾಲೇಜಿನ ವಾಣಿಜ್ಯ ವಿಭಾಗವು ಸಂಸ್ಥೆಯ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದೆ. ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಮತ್ತು ಅದು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಮತ್ತು ಕೌಶಲ್ಯತೆಯನ್ನು ಅಭಿವೃದ್ಧಿಪಡಿಸುವಲ್ಲಿ ಖಂಡಿತವಾಗಿ ನೆರವಾಗುತ್ತದೆ” ಎಂದು ಹೇಳಿದರು.
ಜೋರಮ್ಮ ಹೋಂ ಪ್ರಾಡಕ್ಟ್ಸ್ ನ ಸ್ಥಾಪಕರು ಮತ್ತು ಈ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಶೇಖ್ ಸಾಹಿಲ್, ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿ ಜೈನ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಶಾಂತ ಶೆಟ್ಟಿ, ವಾಣಿಜ್ಯ ಸಂಘದ ಅಧ್ಯಕ್ಷರಾದ ಶ್ರಾವಣಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.