Categories
ಉಡುಪಿ

ಕಾಪು : ಮೂಳೂರು ಪರಿಸರದಲ್ಲಿ ಈ ಬಾರಿಯೂ ಮತ್ತೆ ಕಡಲ್ಕೊರೆತ

ಕಾಪು: ಮೂಳೂರು ಪರಿಸರದಲ್ಲಿ ಈ ಬಾರಿಯೂ ಮತ್ತೆ ಕಡಲ್ಕೊರೆತ 

NAMMUR EXPRESS NEWS
ಕಾಪು: ಕಾಪು ಪುರಸಭಾ ವ್ಯಾಪ್ತಿಯ ಮೂಳೂರು ಪರಿಸರದಲ್ಲಿ ಈ ಬಾರಿಯೂ ಮತ್ತೆ ಕಡಲ್ಕೊರೆತ ಕಾಣಿಸಿಕೊಂಡಿದೆ.
ಕಾಪು ಪಡು ಮೂಳೂರು ತೊಟ್ಟಂ ಮತ್ತು ಮೂಳೂರು ಲಕ್ಷ್ಮೀ ನಾರಾಯಣ ಭಜನಾ ಮಂದಿರದ ನಡುವಿನ ಸುಮಾರು ಒಂದು ಕಿ. ಮೀ. ಉದ್ದದ ಕರಾವಳಿ ತೀರದ ಎರಡು ಮೂರು ಕಡೆಗಳಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿದೆ. ಬೃಹತ್ ಅಲೆಗಳು ದಡಕ್ಕೆ ಮತ್ತು ತಡೆಗೋಡೆಗೆ ಅಪ್ಪಳಿಸುತ್ತಿದ್ದು ಈ ಪ್ರದೇಶಗಳಲ್ಲಿ ಹಿಂದೆ ನಿರ್ಮಿಸಿರುವ ತಡೆಗೋಡೆ, ಕಡಲು ವಿಸ್ತಾರಗೊಳ್ಳದಂತೆ ಅಡ್ಡಲಾಗಿ ಜೋಡಿಸಿರುವ ಕಲ್ಲುಗಳನ್ನು ಆಹುತಿ ಪಡೆಯುತ್ತಾ ಮುನ್ನುಗ್ಗಿ ಸಾಗಿಬರುತ್ತಿದೆ.
ಬೃಹತ್ ಅಲೆಗಳ ಕಾರಣದಿಂದಾಗಿ ಫಿಷರೀಸ್ ರಸ್ತೆಯಿಂದ ಪಡುಭಾಗದಲ್ಲಿರುವ ವೆಂಕು ಬಾಯಿ, ಅಪ್ಪಿ ಮರಕಾಲ್ತಿ, ತಾರಾವತಿ ಶ್ರೀಯಾನ್, ಶಾರದಾ ಕೋಟ್ಯಾನ್, ಸಂತೋಷ್ ಕುಮಾರ್, ಸುಮತಿ ಕಾಂಚನ್ ಎಂಬವರಿಗೆ ಸೇರಿದ ಮನೆ, ತೋಟ ಮತ್ತು ಖಾಲಿ ಜಾಗವು ತೀರಾ ಅಪಾಯದಲ್ಲಿವೆ. ಹತ್ತಾರು ತೆಂಗಿನಮರಗಳು ಸಮುದ್ರದ ಒಡಲು ಸೇರಲು ಸಿದ್ಧವಾಗಿರುವಂತೆ ಕಾಣುತ್ತಿದೆ.

Categories
ಅಪಘಾತ

ಬಸ್ ನಡುವೆ ಭೀಕರ ಅಪಘಾತ!

ಬಸ್ ನಡುವೆ ಭೀಕರ ಅಪಘಾತ!

* ಓರ್ವ ಮಹಿಳೆ ಸಾವು, ಇಪ್ಪತ್ತು ಮಂದಿಗೆ ಗಾಯ
– ಸುಳ್ಯದ ಅರಂತೋಡಿನ ಉದಯನಗರದ ಬಳಿ ಘಟನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಸುಳ್ಯ: ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ತಾಲ್ಲೂಕಿನ ಅರಂತೋಡಿನ ಉದಯನಗರದ ಬಳಿಯ ತಿರುವಿನಲ್ಲಿ ಮಂಗಳೂರಿನಿಂದ ಮಡಿಕೇರಿಗೆ ಹಾಗೂ ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಎರಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಗಳ‌ ನಡುವೆ ಶುಕ್ರವಾರ ಸಂಜೆಯ ವೇಳೆಗೆ ಅಪಘಾತ ಸಂಭವಿಸಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದು, ಇಪ್ಪತ್ತು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.‌ ಮಡಿಕೇರಿಯ ಕುಶಾಲನಗರದ ಗುಡ್ಡೆಹೊಸೂರು ನಿವಾಸಿ ಭಾರತಿ ಮೃತಪಟ್ಟ ಮಹಿಳೆ. ಗಾಯಗೊಂಡ ಪ್ರಯಾಣಿಕರನ್ನು ಸುಳ್ಯದ ಖಾಸಗಿ ಆಸ್ಪತ್ರೆಗು ಹಾಗೂ ತೀವ್ರ ಗಾಯಗೊಂಡ ಇಬ್ಬರು ಪ್ರಯಾಣಿಕರನ್ನು ಮಂಗಳೂರಿನ ಆಸ್ಪತ್ರೆಗು ದಾಖಲಿಸಲಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ,‌ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದು ಮಳೆಯ ಪರಿಣಾಮವಾಗಿ ಚಾಲಕನಿಗೆ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

Categories
ತೀರ್ಥಹಳ್ಳಿ

ಯಕ್ಷಭೂಮಿ ತೀರ್ಥಹಳ್ಳಿ ಇವರ ಮೂರನೇ ವರ್ಷದ ವಾರ್ಷಿಕೋತ್ಸವ

– ವಾರ್ಷಿಕೋತ್ಸವದ ಪ್ರಯುಕ್ತ “ಶಿವ ಕಲ್ಯಾಣ” ಯಕ್ಷಗಾನ
– ಗೋಪಾಲಗೌಡ ರಂಗಮಂದಿರದಲ್ಲಿ ಯಕ್ಷಗಾನ ನಡೆಯಲಿದ್ದು ಉಚಿತ ಪ್ರವೇಶ

NAMMUR EXPRESS NEWS
ತೀರ್ಥಹಳ್ಳಿ : ಯಕ್ಷಗಾನ ಅಧ್ಯಯನ ಕೇಂದ್ರ ಯಕ್ಷಭೂಮಿ
ತೀರ್ಥಹಳ್ಳಿ (ರಿ) ಇವರ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ” ಶಿವ ಕಲ್ಯಾಣ ” ಎಂಬ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ. ಇಂದು ಸಂಜೆ 6:30 ಕ್ಕೆ ಗೋಪಾಲಗೌಡ ರಂಗಮಂದಿರದಲ್ಲಿ ಯಕ್ಷಗಾನ ನಡೆಯಲಿದ್ದು ಉಚಿತ ಪ್ರವೇಶ ಇರಲಿದೆ. ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರವು ಕಳೆದ ಮೂರು ವರ್ಷಗಳಿಂದ ತೀರ್ಥಹಳ್ಳಿ ಶಾಲಾ ಕಾಲೇಜು ಮತ್ತು ರಾಜ್ಯ ರಾಷ್ಟ್ರಮಟ್ಟದ ರಂಗ ಶಿಕ್ಷಣ ಕೇಂದ್ರಗಳಿಗೆ ತರಬೇತಿ ನೀಡುತ್ತಾ ಬಂದಿದೆ. ಇಂದು ಸಂಜೆ 6:30 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ತೀರ್ಥಹಳ್ಳಿ ತಾಲೂಕಿನ ಹಿರಿಯ ತಾಳಮದ್ದಳೆ ಅರ್ಥಧಾರಿಗಳಾದ ದರಲಗೋಡು ಕೃಷ್ಣ ಜೋಯಿಸ್, ಮಂಗಳಗಾರು ರಮೇಶ್ ಆಚಾರ್ಯ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಯಕ್ಷಗಾನ ಅಭಿಮಾನಿಗಳು, ಹಾಗೂ ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಲು ಮನವಿ ಮಾಡಲಾಗಿದೆ.

Categories
ಚಿಕ್ಕಮಗಳೂರು

ಗುಂಡಿ ತಪ್ಪಿಸಲು ಹೋಗಿ ದೊಡ್ಡ ಗುಂಡಿಗೆ ಬಿದ್ದ ಬಸ್, ಸ್ಟೇರಿಂಗ್ ಕಟ್

ಗುಂಡಿ ತಪ್ಪಿಸಲು ಹೋಗಿ ದೊಡ್ಡ ಗುಂಡಿಗೆ ಬಿದ್ದ ಬಸ್, ಸ್ಟೇರಿಂಗ್ ಕಟ್

* ಕೊಪ್ಪ ತಾಲೂಕಿನ ಸೀಗೋಡಿನಲ್ಲಿ ಘಟನೆ, ಹಲವರಿಗೆ ಗಾಯ
* ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಆಂಬುಲೈನ್ಸ್ ಇಲ್ಲದೇ ಪರದಾಟ

NAMMMUR EXPRESS NEWS
ಜಯಪುರ/ಬಾಳೆಹೊನ್ನೂರು: ಬೆಂಗಳೂರಿಂದ ಶೃಂಗೇರಿಗೆ ಬರುತ್ತಿದ್ದ ಪ್ರವಾಸಿಗರ ಬಸ್‌ವೊಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕೊಪ್ಪ ತಾಲ್ಲೂಕಿನ ಸೀಗೋಡು ಬಳಿ ನಡೆದಿದೆ.
ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 17 ಸ್ನೇಹಿತರು ಶೃಂಗೇರಿ, ಆಗುಂಬೆ ಕಡೆಗೆ ಪ್ರವಾಸಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಬಾಳೆಹೊನ್ನೂರು ಸಮೀಪ ಸೀಗೋಡಿನಲ್ಲಿ ಬಸ್ ರಸ್ತೆಯಲ್ಲಿನ ದೊಡ್ಡ ಗುಂಡಿ ಇಳಿದಿದ್ದರಿಂದ ಸ್ಟೇರಿಂಗ್ ಕಟ್ ಆಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು ಬಸ್ ರಸ್ತೆ ಪಕ್ಕದ ದೊಡ್ಡ ಗುಂಡಿಗೆ ಪಲ್ಟಿಯಾಗಿದೆ.
ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆಂಬುಲೈನ್ಸ್ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಯಿತು,ನಂತರ ಖಾಸಗಿ ವಾಹನದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಗುಂಡಿಗೆ ಬಿದ್ದ ಪರಿಣಾಮ ಬಸ್ ಸಂಪೂರ್ಣ ಜಖ್ಖಂಗೊಂಡಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದು ದಿನೇ ದಿನೇ ಅಪಘಾತಗಳು ಸಂಭವಿಸಿ ಜೀವಹಾನಿಯಾಗುತ್ತಿದೆ. ಮೊನ್ನೆಯಷ್ಟೇ ಎನ್.ಆರ್ ಪುರ ತಾಲೂಕಿನ ಮಡಬೂರಿನಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಸವಾರ ಮೃತಪಟ್ಟಿದ್ದರು.ಕ್ಷೇತ್ರದ ಎಲ್ಲಾ ರಸ್ತೆಗಳ ಪರಿಸ್ಥಿತಿ ಇದೇ ಆಗಿದ್ದು ದೊಡ್ಡ ದೊಡ್ಡ ಗುಂಡಿಗಳಿಂದ ಕೂಡಿದೆ. ಇದರಿಂದ ರಸ್ತೆಯಲ್ಲಿ ಸಾಗುವುದು ತುಂಬಾ ಕಷ್ಟಕರವಾಗಿದೆ,ಈ ಸಮಸ್ಯೆಗೆ ಅಧಿಕಾರಿಗಳಾಗಲಿ, ಶಾಸಕರಾಗಲಿ ಸ್ಪಂದಿಸುತ್ತಿಲ್ಲ ಇನ್ನಾದರೂ ಈ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಸರಿಪಡಿಸುವಂತೆ ಜನರು ಶಾಸಕರು ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Categories
ಕರಾವಳಿ

ಮಂಗಳೂರು : ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಅಮಾನತು

ಕರಾವಳಿ ಟಾಪ್ ನ್ಯೂಸ್

* ಮಂಗಳೂರು : ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಅಮಾನತು
* ಪುತ್ತೂರು: ವಂಚನೆಗೆ ಒಳಗಾಗಿ, ಮಗುವಿಗೆ ಜನ್ಮ ನೀಡಿದ ಯುವತಿ!
* ಮಲ್ಪೆ: ಕಡಲ ತೀರದಲ್ಲಿ ಕಸದ ರಾಶಿ; ಮೀನುಗಾರರಿಂದ ಆಕ್ಷೇಪ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಮಂಗಳೂರು: ಮಂಗಳೂರಿನ ಆರ್ ಟಿಒ ಕಛೇರಿಯ ಮೂವರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ.‌ ಬೆಲೆ ಬಾಳುವ ಕಾರಿನ ನೋಂದಣಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. 1. 96.95.000 ರೂಪಾಯಿ ಬೆಲೆ ಬಾಳುವ ಕಾರನ್ನು 32.15.000 ಬೆಲೆಗೆ ನಕಲಿ ನೋಂದಣಿ ಮಾಡಿಸಲಾಗಿದ್ದು, ಇದಕ್ಕೆ ಆರ್ ಟಿಒ ಅಧಿಕಾರ ಮತ್ತು ಸಿಬ್ಬಂದಿಗಳು ಕೂಡ ಬೆಂಬಲಿಸಿದ್ದಾರೆ. ಶಿವಮೊಗ್ಗ ವಿಭಾಗದ ಉಪ ಆಯುಕ್ತರ ಮಾಹಿತಿಯ ಮೇರೆಗೆ ನೋಂದಣಿ ಅರ್ಜಿ ಸಲ್ಲಿಸಿದ ನೀಲಪ್ಪ, ಅರ್ಜಿಯನ್ನು ಪರಿಶೀಲಿಸಿದ ರೇಖಾ ಮತ್ತು ಅರ್ಜಿಯನ್ನು ಅನುಮೋದಿಸಿದ ಸರಸ್ವತಿ ಅವರನ್ನು ಬೆಂಗಳೂರಿನ ಆಯುಕ್ತರು ಅಮಾನತುಗೊಳಿಸಿದ್ದಾರೆ. ಇಲಾಖೆಯ ವಿಚಾರಣೆಯನ್ನು ಬಾಕಿ ಇರಿಸಿಕೊಂಡು ನೀಲಪ್ಪ ಅವರನ್ನು ಶಿವಮೊಗ್ಗಕ್ಕೆ, ರೇಖಾ ಅವರನ್ನು ಚಿಕ್ಕಮಗಳೂರಿಗೆ ಮತ್ತು ಸರಸ್ವತಿ ಅವರನ್ನು ಬೆಂಗಳೂರು ಉತ್ತರದ ಆರ್ ಟಿಒ ಕಛೇರಿಗೆ ವರ್ಗಾಯಿಸಲಾಗಿದೆ.

ಪುತ್ತೂರು: ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಯುವತಿ ಆಕೆಯ ಸಹಪಾಠಿಯಾದ ಬಿಜೆಪಿ ಮುಖಂಡನ ಪುತ್ರನಿಂದ ವಂಚನೆಗೊಳಗಾಗಿ, ಗರ್ಭವತಿಯಾಗಿದ್ದು ಇದೀಗ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಮಗುವಿಗೆ ಜನ್ಮ ನೀಡಿರುವ ವಿಚಾರ ತಿಳಿದುಬಂದಿದೆ. ಈಗಾಗಲೇ ಆರೋಪಿಯು ನಾಪತ್ತೆಯಾಗಿದ್ದು, ಆತನ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಲ್ಪೆ: ಉಡುಪಿ ಜಿಲ್ಲೆಯ ಪ್ರಸಿದ್ಧ ಕಡಲ ತೀರ ಮಲ್ಪೆ. ಇದಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ಸಮಸ್ಯೆಗಳು ತಲೆದೋರಿದೆ.‌ ಸರ್ಕಾರ ಮೀನುಗಾರರಿಗೆ ಹೊಸ ದೋಣಿಗಳ ನಿರ್ಮಾಣಕ್ಕೆ ಒಂದು ಸಾವಿರ ಸಾಧ್ಯತಾ ಪತ್ರ ವಿತರಣೆಗೆ ಅವಕಾಶ ಕಲ್ಪಿಸಿದ್ದು ಇದಕ್ಕೆ ಮೀನುಗಾರರಿಂದಲೇ ವಿರೋಧ ವ್ಯಕ್ತವಾಗಿದೆ.‌ಕುಂದಾಪುರದ ಮೊಗವೀರ ಭವನದಲ್ಲಿ ನಡೆದ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಆಡಳಿತ ಮಂಡಳಿಯ ಸಭೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮತ್ಸ್ಯ ಕ್ಷಾಮ ತಲೆದೋರಿದ್ದು, ಮೀನುಗಾರಿಕೆ ಶೇಕಡಾ ಐವತ್ತರಷ್ಟು ಕುಂಠಿತವಾಗಿದೆ. ಹೀಗಾಗಿ ಅರ್ಧದಷ್ಟು ದೋಣಿಗಳನ್ನು ಮಾತ್ರ ಬಳಸಲಾಗುತ್ತಿರುವುದರಿಂದ ಹೊಸ ದೋಣಿಗಳ ನಿರ್ಮಾಣಕ್ಕೆ ಸರ್ಕಾರ ನೀಡುವ ಸಾಧ್ಯತಾ ಪತ್ರಗಳನ್ನು ಮುಂದಿನ ಐದು ವರ್ಷಗಳ ಕಾಲ ನೀಡಬಾರದೆಂದು ಆಗ್ರಹ ಪಡಿಸಿದ್ದಾರೆ.
ಮಲ್ಪೆ ಕಡಲ ತೀರ ಮಳೆಯ ಪರಿಣಾಮದಿಂದ ಕಸದ ತೊಟ್ಟಿಯಂತಾಗಿದೆ. ಜನರು ಎಸೆದು ಹೋದ ಪ್ಲಾಸ್ಟಿಕ್ ಬಾಟಲಿ, ಚಪ್ಪಲಿ, ತಿನಿಸುಗಳ ಪ್ಯಾಕೆಟ್, ಬಟ್ಟೆ ಮೊದಲಾದ ತ್ಯಾಜ್ಯಗಳನ್ನು ನೀರಿಗೆ ಎಸೆದಿದ್ದು, ಪರಿಸರ ಮಾಲಿನ್ಯ ಉಂಟಾಗುವಂತೆ ಮಾಡಿದ್ದಾರೆ. ಇದರ ಪರಿಣಾಮವಾಗಿ ಈಗ ಮಳೆಯ ರಭಸಕ್ಕೆ ನೀರಲ್ಲಿ ಅಡಗಿದ್ದ ತ್ಯಾಜ್ಯಗಳೆಲ್ಲ ತೀರಕ್ಕೆ ಬಂದು ಸಮುದ್ರ ಎನ್ನುವುದು ಕಸದ ಆಗರವಾಗಿದೆ. ಹಿಂದೆ ಅಭಿವೃದ್ಧಿ ಪ್ರಾಧಿಕಾರ ಸ್ವಚ್ಛತೆಯನ್ನು ನಿರ್ವಹಿಸುತ್ತಿತ್ತು.‌ಈಗ ಇದು ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಅಧಿಕಾರಿಗಳಾದ ನಿದೀಶ್ ಹೋರ್ತಿ ಅವರು ಇನ್ನಷ್ಟೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಿದೆ. ಮಳೆಯ ರಭಸಕ್ಕೆ ಕಸ ಕಡ್ಡಿ‌ ಮರದ ತುಂಡು, ಪ್ಲಾಸ್ಟಿಕ್ ಎಲ್ಲಾ ತೀರಕ್ಕೆ ಬಂದು ನಿಲ್ಲುತ್ತವೆ. ಹೀಗಾಗಿ ಮಳೆಯ ತೀವ್ರತೆ ಕಡಿಮೆಯಾದ ಬಳಿಕ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.

Categories
ಚಿಕ್ಕಮಗಳೂರು

2 ತಿಂಗಳು ಭಾರೀ ಮಳೆ ಕಾಫಿನಾಡಿನಾದ್ಯಂತ ಹೈ ಆಲರ್ಟ್!

2 ತಿಂಗಳು ಭಾರೀ ಮಳೆ ಕಾಫಿನಾಡಿನಾದ್ಯಂತ ಹೈ ಆಲರ್ಟ್!
* ಅಧಿಕಾರಿಗಳು ಅಲರ್ಟ್ ಆಗಿರಿ,ಮುಂಜಾಗ್ರತ ಕ್ರಮ ಕೈಗೊಳ್ಳಿ
* ಅಂಗನವಾಡಿ ಹಾಗೂ ಶಾಲೆ ಕಟ್ಟಡಗಳ ಫಿಟ್‌ನೆಸ್ ಪರೀಕ್ಷಿಸಿ – ಕೃಷ್ಣಭೈರೇಗೌಡ

NAMMMUR EXPRESS NEWS
ಚಿಕ್ಕಮಗಳೂರು: ಮುಂದಿನ ಎರಡು ತಿಂಗಳು ಭಾರೀ ಮಳೆಯಾಗುವ ಸಾಧ್ಯತೆ ಇದ್ದರಿಂದ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳಬೇಕು. ಎಲ್ಲಾ ಅಧಿಕಾರಿಗಳು ಹೈ ಅಲರ್ಟ್‌ ಆಗಿರಬೇಕು ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದೇ ಪದೇ ಭೂ ಕುಸಿತ ಉಂಟಾಗುವ ಪ್ರದೇಶದಲ್ಲಿ ವಾಸವಾಗಿರುವ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಬೇಕು. ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳ ಕಟ್ಟಡಗಳ ಫಿಟ್‌ನೆಸ್‌ ಪರಿಶೀಲನೆ ನಡೆಸಬೇಕು ಎಂದರು.
ಮುಂಗಾರು ಮಳೆ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಪ್ರತಿ ವರ್ಷ ಮಳೆಗಾಲದ ಸಂದರ್ಭ ದಲ್ಲಿ ಭೂ ಕುಸಿತ ಉಂಟಾಗುವ ಸ್ಥಳಗಳಿಗೆ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ (ಜಿಎಸ್‌ಐ) ತಂಡ ಭೇಟಿ ನೀಡಿತ್ತು. ಇದರ ಜತೆಗೆ ಹೊಸದಾಗಿ ಕೆಲವೆಡೆ ಭೂ ಕುಸಿತ ಉಂಟಾಗಿದೆ. ಅಂತಹ ಪ್ರದೇಶಗಳನ್ನು ಗುರುತು ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ, ಪಂಚಾಯತ್ ಇಲಾಖೆಗೆ ಒ‍ಳಪಡುವ ರಸ್ತೆ ಹಾಗೂ ಸಂಪರ್ಕ ರಸ್ತೆಗಳ ಮಾಹಿತಿ ಕ್ರೋಡಿಕರಿಸಿ ಮೊದಲ ಆದ್ಯತೆ ಮೇಲೆ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಭೂ ಕುಸಿತ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ವಿವರಿಸಿದರು.
ಎಲ್ಲಲ್ಲಿ ರಸ್ತೆ ಹಾಳಾಗಿದೆಯೋ ಅದರ ವರದಿಯನ್ನು ಸಿದ್ಧಪಡಿಸಿ ಕಳುಹಿಸಿಕೊಟ್ಟರೆ ಒಂದು ತಿಂಗಳೊಳಗೆ ಮಂಜೂರಾತಿ ನೀಡಲಾಗುವುದು. ಬಳಿಕ ಟೆಂಡರ್‌ ಪ್ರಕ್ರಿಯೆ ಆರಂಭಿಸಬೇಕು. ನಂತರ ಹಣ ಬಿಡುಗಡೆಯಾದ ನಂತರ ಕಾಮಗಾರಿ ಆರಂಭಿಸಬೇಕು. ಇದಕ್ಕೆ ರಾಜ್ಯದ 6 ಜಿಲ್ಲೆಗಳಿಗೆ ₹400 ಕೋಟಿ ರು. ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ವಿಪತ್ತು ನಿರ್ವಹಣೆಗೆ ಕೊಡುತ್ತಿರುವ ಹಣವನ್ನು ಅದೇ ವರ್ಷದಲ್ಲೇ ಬಳಕೆ ಮಾಡಬೇಕು. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಫ್‌) ನಿಯಮ ಕಡ್ಡಾಯವಾಗಿ ಪಾಲನೆ ಮಾಡಬೇಕು. ರಸ್ತೆಗಳ ಗುಂಡಿ ಮುಚ್ಚಲು ಕೊಟ್ಟ ಹಣ ಅದೇ ಉದ್ದೇಶಕ್ಕೆ ಬಳಕೆ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

* ಪೋಡಿಗೆ ಹಿನ್ನಡೆ, ಕಛೇರಿಯಲ್ಲೇ ಕುಳಿತು ನಕ್ಷೆ ತಯಾರಿ ಆರೋಪ
ಜಿಲ್ಲೆಯಲ್ಲಿ ಹಲವು ಪೋಡಿ ಪ್ರಕರಣಗಳು ನನೆಗುದಿಗೆ ಬಿದ್ದಿವೆ. ಅವುಗಳನ್ನು ಇತ್ಯರ್ಥಪಡಿಸಲು ಆಗುತ್ತಿಲ್ಲ ಎಂಬ ವಿಷಯ ಚರ್ಚೆಗೆ ಬಂದಾಗ ಚಿಕ್ಕಮಗಳೂರು ಡಿಎಫ್‌ಒ ರಮೇಶ್‌ಬಾಬು ಮಾತನಾಡಿ, ಮೀಸಲು ಅರಣ್ಯದಿಂದ 100 ಮೀ. ವ್ಯಾಪ್ತಿ ಯೊಳಗೆ ಕಂದಾಯ ಭೂಮಿ ಇದ್ದರೂ ಪೋಡಿಗೆ ಅವಕಾಶ ಇರುವುದಿಲ್ಲ. ಒಂದು ಎಕರೆ ಪ್ರದೇಶದಲ್ಲಿ 10ಕ್ಕಿಂತ ಹೆಚ್ಚು ಮರಗಳು ಇದ್ದರೆ ಆ ಜಮೀನು ಕೂಡ ಪೋಡಿ ಮಾಡಲು ಅವಕಾಶ ಇಲ್ಲ ಎಂದು ಹೇಳುತ್ತಿದ್ದಂತೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡೆ ನಕ್ಷೆ ಸಿದ್ಧಪಡಿಸುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

* ಖರಾಬ್ ಜಾಗ ಸೇರಿಸಿ ಲೇಔಟ್ ಮಾಡಿ ಮಾರಾಟ
ತರೀಕೆರೆ ಶಾಸಕ ಶ್ರೀನಿವಾಸ್‌ ಮಾತನಾಡಿ, ಸರ್ಕಾರದಿಂದ ಮಂಜೂರಾದ ಜಮೀನು ಹಲವು ಮಂದಿ ಸಾಗುವಳಿ ಮಾಡುತ್ತಿಲ್ಲ ಎಂತಹ ಜಮೀನುಗಳನ್ನು ಪತ್ತೆ ಹಚ್ಚಿ ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಲು ಮೀಸಲಿಡಬೇಕೆಂದು ಹೇಳಿದಾಗ ಸಚಿವರು ಒಪ್ಪಿಗೆ ಸೂಚಿಸಿದರು. ಅಜ್ಜಂಪುರ ಪಟ್ಟಣದ ಸಮೀಪದಲ್ಲಿ ವ್ಯಕ್ತಿಯೋರ್ವರು 4 ಎಕರೆ ಬಿ ಖರಾಬ್‌ ಜಾಗ ಸೇರಿಸಿಕೊಂಡು ಲೇಔಟ್ ಮಾಡಿ ಸೈಟ್‌ಗಳನ್ನು ಮಾರಾಟ ಮಾಡಿದ್ದಾರೆ. ಸರ್ಕಾರಿ ಜಾಗವನ್ನು ಪೋಡ್‌ ಮಾಡಿ ಹಂಚಿಕೆ ಮಾಡಲಾಗಿದೆ ಎಂದು ಶಾಸಕ ಶ್ರೀನಿವಾಸ್‌ ಸಭೆ ಗಮನಕ್ಕೆ ತಂದಾಗ, ಭೂ ಪರಿವರ್ತನೆ ರದ್ದುಪಡಿಸಿ, ಖರಾಬ್‌ ಜಾಗವನ್ನು ಸರ್ಕಾರದ ವಶಕ್ಕೆ ತೆಗೆದು ಕೊಳ್ಳಬೇಕೆಂದು ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.
ಹಲವು ವರ್ಷಗಳ ಹಿಂದೆ ಸರ್ಕಾರ ಭೂಹೀನರಿಗೆ ಜಮೀನು ಮಂಜೂರು ಮಾಡಿದೆ. ಕಾಲ ಕ್ರಮೇಣ ಅದು ಪೋಡ್‌ ಆಗಿಲ್ಲ. ಇದರಿಂದ ಬಹಳಷ್ಟು ಜನರಿಗೆ ತೊಂದರೆಯಾಗಿದೆ. ಕಷ್ಟ ಕಾಲದಲ್ಲಿ ಜಮೀನು ಮಾರಾಟ ಮಾಡಲು ಆಗುತ್ತಿಲ್ಲ. ಹಾಗಾಗಿ ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಪೋಡ್‌ ಮಾಡಬೇಕು ಎಂದು ಹೇಳಿದರು. ಸಭೆಯಲ್ಲಿ ಕಡೂರು ಶಾಸಕ ಆನಂದ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್‌ ಕಟಾರಿಯಾ, ಜಿಪಂ ಸಿಇಓ ಕೀರ್ತನಾ, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಇದ್ದರು.
* ಕಂದಾಯ ಗ್ರಾಮ ಗುರುತಿಗೆ ಹಿನ್ನೆಡೆ,ಅಧಿಕಾರಿಗಳಿಗೆ ಎಚ್ಚರಿಕೆ
ಮಲೆನಾಡಿನ ತಾಲೂಕುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಂದಾಯ ಗ್ರಾಮಗಳ ಗುರುತಿಸುವಿಕೆ ಕೆಲಸ ಆಗಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರ ಹಾಕಿದರು. ಬಡವರ ಕೆಲಸ ಮಾಡಲು ನಿಮಗೆ ಇಷ್ಟ ಇಲ್ಲ. ಹಾಗಾಗಿ ಕಂದಾಯ ಗ್ರಾಮಗಳ ಗುರುತಿಸುವ ಕೆಲಸ ಸಕಾಲದಲ್ಲಿ ನಿಮ್ಮಿಂದ ಆಗಿಲ್ಲ ಎಂದು ತಹಸೀಲ್ದಾರ್‌ ರನ್ನು ತರಾಟೆ ತೆಗೆದುಕೊಂಡರು. ಕೆಲವು ಸರ್ವೆ ನಂಬರ್‌ಗಳು ಸೊಪ್ಪಿನಬೆಟ್ಟ, ಅರಣ್ಯ ವ್ಯಾಪ್ತಿಯಲ್ಲಿ ಇರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಶೃಂಗೇರಿ ತಹಸೀಲ್ದಾರ್‌ ಅನೂಪ್‌ ಹೇಳಿದರು. ಇ- ಆಫೀಸ್‌ ಕಡ್ಡಾಯವಾಗಿ ಮಾಡಲೇಬೇಕು, ಅದ್ದರಿಂದ ಎಲ್ಲ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್ ಲೋಡ್‌ ಮಾಡಬೇಕು ಎಂದು ಹೇಳಿದ ಸಚಿವರು, ಮೂಡಿಗೆರೆ ತಾಲೂಕು ಕಚೇರಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗಿಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಧೋರಣೆ ಮುಂದುವರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Categories
ಉಡುಪಿ

ಕಲಾವಿದ ಮಹೇಶ್ ಮರ್ಣೆ ಅವರು ಎಸ್ಪಿ ಹರಿರಾಮ್ ಶಂಕರ್ ಗೆ ಭಾವಚಿತ್ರ ನೀಡಿ ಶುಭ ಹಾರೈಸಿದರು.

ಕಲಾವಿದ ಮಹೇಶ್ ಮರ್ಣೆ ಅವರು ಎಸ್ಪಿ ಹರಿರಾಮ್
ಶಂಕರ್ ಗೆ ಭಾವಚಿತ್ರ ನೀಡಿ ಶುಭ ಹಾರೈಸಿದರು.

ಉಡುಪಿಯ ನೂತನ ಎಸ್ಪಿ ಆಗಿ ಅಧಿಕಾರ ಸ್ವೀಕರಿಸಿರುವ ಹರಿರಾಮ್ ಶಂಕರ್ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಮಹೇಶ್ ಮರ್ಣೆ ಯವರು ಅಶ್ವತ ಎಲೆಯಲ್ಲಿ ರಚಿಸಿದ ಭಾವಚಿತ್ರವನ್ನು ನೀಡಿ ಶುಭ ಹಾರೈಸಿದರು ಜೊತೆಯಲ್ಲಿ ಧಾರ್ಮಿಕ ಮಾರ್ಗದರ್ಶಕರಾದ ಸಂತೋಷ್ ಆಚಾರ್ಯ ಉಡುಪಿ ಅವರು ಉಪಸ್ಥಿತರಿದ್ದರು.

Categories
ವಿಶೇಷ ಸುದ್ದಿ

ಅಮ್ಮನ ಮಡಿಲು ಸೇರುವ ಮುಗ್ಧ ಕರುವಿನ ತವಕ

ಅಮ್ಮನ ಮಡಿಲು ಸೇರುವ ಮುಗ್ಧ ಕರುವಿನ ತವಕ –

ಒಂದು ನಿಶ್ಶಬ್ದ ಬೆಳಗಿನ ಜಾವ. ಗವಿಯ ಒಳಗಿಂದ ಹೊರಹಾಕಿರುವ ಒಂದು ಪುಟ್ಟ ತಲೆ. ಬಾಗಿಲಿನ ಅಂಚಿನಿಂದ ಜಗತ್ತಿನತ್ತ ತಿರುಗಿರುವ ಆ ಕಣ್ಣುಗಳಲ್ಲಿ ನಿಷ್ಕಲ್ಮಷ ಭಾವ, ಅಪಾರ ಕುತೂಹಲ, ಮತ್ತು ಆತ್ಮೀಯತೆಯ ಹಸಿರು ನೋಟಗಳು ಛಾಯಾಚಿತ್ರದಂತೆ ಬಿಂಬಿಸುತ್ತವೆ.
ಅದು ಕರು – ಗಾವಿಯ ದಯೆಯ ಲಾಲನೆ, ಬದುಕಿನ ಹೊಸ ಪ್ರಥಮ ಹೆಜ್ಜೆ ಇಟ್ಟಿರುವ ಜೀವದ ಶುಭಾರಂಭ. ಆ ಕಣ್ಣುಗಳು ಪ್ರಶ್ನೆಗಳಿಂದ ತುಂಬಿರುವಂತಹವು. ಜಗತ್ತಿಗೆ ಹೊಸಬಳಾಗಿ ಬಂದಿರುವ ಈ ಪ್ರಾಣಿಗೆ ತಾಯಿ ಎಂಬ ಒಡನಾಟವೇ ಮೊದಲ ವಿಶ್ವ. ತಾಯಿಯ ಮೈಸ್ಪರ್ಶ, ಹಾಲಿನ ಉಸಿರಾಟ, ಮಡಿಲಿನ ಮುದ್ದಾಟ – ಇವುಗಳೇ ಇದರ ಪಾಠಗಳೂ, ಭದ್ರತೆಯ ಪ್ರತೀಕಗಳೂ.
ಅಮ್ಮನ ಮೊಣಕೈಚಾಚಿದ ಮಾಂಸಪೇಶಿಯ ಮೇಲೆ ತಲೆ ಇಟ್ಟಕೂಡಲೇ ಈ ಪುಟ್ಟ ಕರು ಭದ್ರತೆಯ ನವಿಲುಕುಡಿ ಹೊಗೆಯದಂತಾಗುತ್ತದೆ. ಮಡಿಲಿನ ತಂಪು, ಉಸಿರಿನ ಶಬ್ದ, ತಾಯಿಯ ನರಳಿಕೆಯ ದಾರಿಯಲ್ಲಿ ಹೃದಯದ ತಾಳವನ್ನು ಪಟಪಟ ಕಲಿಯುತ್ತದೆ. ಇದು ಕೇವಲ ಪ್ರಾಣಿಯ ಸಂಬಂಧವಲ್ಲ – ಇದು ಜೀವದಿಂದ ಜೀವಕ್ಕೆ ಸರ್ಪಸುತ್ತುವ ಪ್ರೀತಿಯ ಶುದ್ಧತೆಯ ಸಂಕೇತ.
ಅಮ್ಮನು ಮೀಸಲಿಟ್ಟ ಎದೆಯೊಳಗಿನ ಹಾಲು – ಕರು ಮಾತ್ರವಲ್ಲ, ನೈಸರ್ಗಿಕ ಲಾಲನೆಗೂ ಆವಶ್ಯಕ. ಇದು ಕೃಷಿಕನ ಬದುಕಿನ ಅವಿಭಾಜ್ಯ ಅಂಗವೂ ಹೌದು. ಗದ್ದೆಗಳ ನಡುವಿನ ಈ ಸಂಬಂಧ, ತುಳುನಾಡಿನ ಮಣ್ಣಿನೊಳಗಿನ ಹೃದಯಸ್ಪರ್ಶಿಯ ಬದುಕಿನ ಕಥೆಯಾಗಿದೆ.
ಈ ಭಾವಚಿತ್ರ ಕೇವಲ ಒಂದು ದೃಶ್ಯವಲ್ಲ – ಇದು ಜೀವನದ ನವೋದಯ, ಮುಗ್ಧತೆಯ ಪ್ರಾರಂಭ, ಪ್ರೇಮದ ಮೊದಲ ಪಾಠ. ಅಮ್ಮನ ಮಡಿಲು ಸೇರುವ ಈ ಕ್ಷಣ, ಪ್ರತಿಯೊಬ್ಬನಿಗೂ ಆತ್ಮಸ್ಪರ್ಶಿ ಅನುಭವವಾಗಿ ಉಳಿಯುತ್ತದೆ.

ರಾಂ ಅಜೆಕಾರು
ಕಾರ್ಕಳ 

Categories
ರಾಜ್ಯ

ಗಗನಕ್ಕೇರುತ್ತಿದೆ ಕೊಬ್ಬರಿ ಬೆಲೆ,ಒಂದೇ ದಿನದಲ್ಲಿ 3 ಸಾವಿರ ಏರಿಕೆ

ಗಗನಕ್ಕೇರುತ್ತಿದೆ ಕೊಬ್ಬರಿ ಬೆಲೆ,ಒಂದೇ ದಿನದಲ್ಲಿ 3 ಸಾವಿರ ಏರಿಕೆ

* ಸೋಮವಾರ 26 ಸಾವಿರ,ಗುರುವಾರ 29 ಸಾವಿರ ಬೆಲೆ
* ಉತ್ತರ ಭಾರತದಲ್ಲಿ ಇಳುವರಿ ಕಡಿಮೆ, ಬೇಡಿಕೆ ಹೆಚ್ಚಳ

NAMMMUR EXPRESS NEWS
ತಿಪಟೂರು: ಕಳೆದ ಸೋಮವಾರದ ಹರಾಜಿನಲ್ಲಿ 26 ಸಾವಿರ ರೂ. ದಾಟಿದ್ದ ಕೊಬ್ಬರಿ ಬೆಲೆ ಗುರುವಾರ ನಡೆದ ಹರಾಜಿನಲ್ಲಿ ಬರೋಬ್ಬರಿ 29 ಸಾವಿರ ರೂ. ಹೊಸ ದಾಖಲೆ ಬರೆದಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಮೂರು ಸಾವಿರ ಏರಿಕೆ ಕಂಡು ಮತ್ತೊಂದು ದಾಖಲೆ ಬರೆದಿದೆ.
ವಾರದಲ್ಲಿಎರಡು ದಿನ ಸೋಮವಾರ ಮತ್ತು ಗುರುವಾರ ಮಾತ್ರ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜು ನಡೆಯುತ್ತದೆ. ಕಳೆದ ಎರಡು ತಿಂಗಳಿನಿಂದ ಪ್ರತಿ ಹರಾಜಿನಲ್ಲಿಯೂ 200 ರಿಂದ 500 ರೂ. ಏರಿಕೆ ಕಾಣುತ್ತಿದ್ದ ಕೊಬ್ಬರಿ ಬೆಲೆ ಕಳೆದ ಸೋಮವಾರವಷ್ಟೇ ಒಂದೇ ದಿನ ಎರಡು ಸಾವಿರ ರೂ. ಏರಿಕೆ ಕಂಡು 26 ಸಾವಿರ ದಾಟಿತ್ತು. ಈಗ ಗುರುವಾರ ನಡೆದ ಹರಾಜಿನಲ್ಲಿ ಒಂದೇ ದಿನ ಮೂರು ಸಾವಿರ ಏರಿಕೆ ಕಂಡು 29,118 ರೂ. ಮುಟ್ಟಿತು. ಇದರಿಂದ ಕೇವಲ ಎರಡು ತಿಂಗಳಿನಲ್ಲಿ ಕ್ವಿಂಟಾಲ್‌ ಕೊಬ್ಬರಿ ಬೆಲೆ ಬರೋಬ್ಬರಿ 11 ಸಾವಿರ ರೂ.ಗಳಷ್ಟು ಏರಿಕೆ ಕಂಡು ಎಂದೂ ಕಂಡರಿಯದ ದಾಖಲೆ ಬರೆದಿದೆ.

* ಉತ್ತರ ಭಾರತದಲ್ಲಿ ಇಳುವರಿ ಕಡಿಮೆ,ಬೇಡಿಕೆ ಹೆಚ್ಚಳ
ಉತ್ತರ ಭಾರತದಿಂದ ಕೊಬ್ಬರಿ ಬೇಡಿಕೆ ಹೆಚ್ಚುತ್ತಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕೊಬ್ಬರಿ ಇಳುವರಿ ಕಡಿಮೆಯಾಗಿರುವುದೂ, ತಮಿಳುನಾಡು ಮತ್ತು ಕೇರಳಕ್ಕೆ ಹೆಚ್ಚು ಕೊಬ್ಬರಿ ಹೋಗುತ್ತಿರುವುದೂ ಇಷ್ಟು ಬೆಲೆ ಏರಲು ಕಾರಣವಾಗಿದೆ.
ಮಾರುಕಟ್ಟೆಯಲ್ಲಿಯಥೇಚ್ಛವಾಗಿ ನಡೆಯುತ್ತಿದ್ದ ಸೆಕೆಂಡ್ಸ್‌ ದಂಧೆಗೆ ಕಡಿವಾಣ ಹಾಕಿದ್ದೂ ಸಹ ಇಷ್ಟು ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಹಿಂದೆಂದೂ ಕಾಣದ ಕೊಬ್ಬರಿ ಬೆಲೆ ಪಡೆಯುತ್ತಿರುವ ತೆಂಗು ಬೆಳೆಗಾರ ತನ್ನ ಬಳಿಯಿರುವ ಸ್ವಲ್ಪ ಕೊಬ್ಬರಿಗೂ ಉತ್ತಮ ಬೆಲೆ ಪಡೆದುಕೊಂಡು ಸಂತಸಗೊಂಡಿದ್ದಾನೆ.
ಇತ್ತೀಚಿನ ದಿನಗಳಲ್ಲೇ ಗುರುವಾರ ಅತ್ಯಂತ ಕಡಿಮೆ ಎನ್ನಬಹುದಾದ ಕೊಬ್ಬರಿ ಮಾರುಕಟ್ಟೆಗೆ ಬಂದಿತ್ತು. ಕೇವಲ 5,904 ಚೀಲ ಅಂದರೆ 2,538 ಕ್ವಿಂಟಾಲ್‌ ಕೊಬ್ಬರಿ ಮಾರುಕಟ್ಟೆಗೆ ಬಂದಿತ್ತು. ಕಳೆದ ಸೋಮವಾರ 7795 ಚೀಲ (3351 ಕ್ವಿಂಟಾಲ್‌) ಕೊಬ್ಬರಿ ಬಂದಿದ್ದರೆ, ಇದು ಗುರುವಾರ ಮತ್ತಷ್ಟು ಇಳಿಕೆಯಾಗಿತ್ತು.
ಗುರುವಾರದ ಬೆಲೆ ಏರಿಕೆಗೆ ಕೊಬ್ಬರಿ ಕಡಿಮೆ ಬಂದಿದ್ದೂ ಪ್ರಮುಖ ಕಾರಣವಾಗಿದೆ. ಇದೇ ರೀತಿ ಬೇಡಿಕೆ ಮುಂದುವರಿದರೆ, ಹಾಗೂ ಕೊಬ್ಬರಿ ಬರಯುವುದು ಕಡಿಮೆಯಾದರೆ ಕೊಬ್ಬರಿ ಬೆಲೆ ಮತ್ತಷ್ಟು ದಾಖಲೆ ಬರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Categories
ದಿನ ರಾಶಿ ಭವಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಆಂಜನೇಯ ಸ್ವಾಮಿಯ ಕೃಪೆಯಿಂದ ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿಮ್ಮ ಜೀವನದಲ್ಲಿ ಕೆಲವು ಅಪಾಯಗಳು ಸಹ ಎದುರಾಗಬಹುದು. ಆದರೆ ಹೆದರಬೇಡಿ, ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ನಿಮಗೆ ಇಂದು ಸಿಗುವ ಹೊಸ ಅವಕಾಶಗಳಿಂದ ಖಂಡಿತ ಯಶಸ್ಸು ಸಿಗಲಿದೆ. ಹಣಕಾಸಿನ ಪರಿಸ್ಥಿತಿಯು ಬಲವಾಗಿರುತ್ತದೆ. ಆದರೆ ಇಂದು, ನಿಮ್ಮ ಸಹೋದರ ಸಹೋದರಿಯರ ನಡುವೆ ಹಣದ ವಿವಾದಗಳು ಹೆಚ್ಚಾಗಬಹುದು.

** ವೃಷಭ ರಾಶಿ :
ಇಂದು ನೀವು ನಿಮ್ಮ ಪರಿಶ್ರಮದ ಫಲವನ್ನು ಪಡೆಯಬಹುದು. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶವಿರುತ್ತದೆ. ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಲು ಹಿಂಜರಿಯಬೇಡಿ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಮೆಚ್ಚಿ ಹೋಗಳಬಹುದು. ಇಂದು, ನಿಮ್ಮ ಜೀವನದಲ್ಲಿ ಅನೇಕ ರೋಚಕ ತಿರುವುಗಳಿರುತ್ತವೆ.

** ಮಿಥುನ ರಾಶಿ :
ಇಂದು ನಿಮಗೆ ಸಂತೋಷ, ಸಮೃದ್ಧಿ ಹೆಚ್ಚಳದ ಹೆಚ್ಚಳವಾಗುವ ಸಾಧ್ಯತೆಗಳಿವೆ. ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯಬಹುದು. ನಿಮ್ಮ ವೃತ್ತಿ ಜೀವನದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗಲಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆಗಳಿವೆ.

** ಕರ್ಕಾಟಕ ರಾಶಿ :
ಇಂದು ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮಗೆ ಭೌತಿಕ ಸೌಕರ್ಯಗಳು ಮತ್ತು ಸಂಪತ್ತು ಹೆಚ್ಚಾಗಬಹುದು. ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುವ ಲಕ್ಷಣಗಳಿವೆ. ಮನೆಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಬಹುದು. ಮನೆ ನಿರ್ವಹಣೆಗೆ ಹಣ ಖರ್ಚು ಮಾಡಬಹುದು. ಕೆಲಸದ ಸ್ಥಳದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ.

** ಸಿಂಹ ರಾಶಿ :
ಇಂದು ನಿಮಗೆ ತುಂಬಾ ಶುಭ ದಿನವಾಗಲಿದೆ. ಶತ್ರುಗಳ ಮೇಲೆ ಜಯ ದೊರೆಯಲಿದೆ. ಕೆಲಸದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ. ಬಹಳ ದಿನಗಳಿಂದ ನಿಮಗೆ ಬರಬೇಕಿದ್ದ ಹಣ ವಾಪಸ್ ಬರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನೀವು ವೃತ್ತಿಪರ ಯಶಸ್ಸನ್ನು ಪಡೆಯುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಅಡಚಣೆ ಉಂಟಾಗಬಹುದು. ಹೊಸ ಕೆಲಸಗಳನ್ನು ಪೂರ್ಣಗೊಳಿಸಲು ನೀವು ಕಚೇರಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕಾಗಬಹುದು.

** ಕನ್ಯಾ ರಾಶಿ :
ಇಂದು ನಿಮಗೆ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ನೀವು ಐಷಾರಾಮಿ ಜೀವನವನ್ನು ಅನುಭವಿಸಲಿದ್ದೀರಿ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಕೆಲಸದ ಸ್ಥಳದಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಇಂದು, ಹೊಸ ಆದಾಯದ ಮೂಲದಿಂದ ಧನ ಲಾಭವಿದೆ.

** ತುಲಾ ರಾಶಿ :
ಇಂದು ತುಲಾ ರಾಶಿಯವರ ಮಾತಿನಲ್ಲಿ ಸೌಮ್ಯತೆ ಇರುತ್ತದೆ. ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಪೋಷಕರ ಆರೋಗ್ಯದ ಕಡೆ ಗಮನ ಕೊಡಿ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಇಂದು, ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು.

** ವೃಶ್ಚಿಕ ರಾಶಿ :
ಇಂದು ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸಗಳಿಂದ ಹಣಕಾಸಿನ ಲಾಭದ ಹೊಸ ಮೂಲಗಳು ಸೃಷ್ಟಿಯಾಗಬಹುದು. ನೀವು ಪಿತ್ರಾರ್ಜಿತ ಆಸ್ತಿ ಪಡೆಯಬಹುದು. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇಂದು, ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು. ಭರವಸೆ ಮತ್ತು ಹತಾಶೆಯ ಭಾವನೆ ಇರುತ್ತದೆ.

** ಧನಸ್ಸು ರಾಶಿ :
ಇಂದು ನಿಮಗೆ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ದೊರೆಯಬಹುದು. ಕೆಲಸದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಸ್ವೀಕರಿಸುತ್ತೀರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗ ಬದಲಾವಣೆಯ ಸೂಚನೆಗಳಿವೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಆದಾಯ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ, ಆದರೆ ವೃತ್ತಿಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಸಹ ಕಂಡುಬರುತ್ತವೆ.

** ಮಕರ ರಾಶಿ :
ಇಂದು ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿವೆ. ಆದಾಯದ ಹೆಚ್ಚಳದ ಹೊಸ ಮೂಲಗಳು ಸೃಷ್ಟಿಯಾಗಬಹುದು, ಆದರೆ ಅತಿಯಾದ ಖರ್ಚುಗಳಿಂದ ಮನಸ್ಸು ತೊಂದರೆಗೊಳಗಾಗಬಹುದು. ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ.

** ಕುಂಭ ರಾಶಿ :
ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ವೃತ್ತಿ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕಚೇರಿ ರಾಜಕೀಯದಿಂದ ದೂರವಿರಿ ಮತ್ತು ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಈ ಹೊಸ ಜವಾಬ್ದಾರಿಗಳು ನಿಮ್ಮ ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳನ್ನು ಹೆಚ್ಚಿಸುತ್ತದೆ.

** ಮೀನ ರಾಶಿ :
ಇಂದು ನಿಮ್ಮ ಭಾವನೆಗಳಲ್ಲಿ ಏರುಪೇರಾಗಬಹುದು. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಖರ್ಚುಗಳ ಬಗ್ಗೆ ಇಂದು ಹೆಚ್ಚು ಚಿಂತೆ ಮಾಡಬಹುದು. ಚಿಂತೆಯಿಂದಾಗಿ ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.