ಗಣಪತಿ ಬಂದ ಗಣೇಶ..!
– ಎಲ್ಲರೂ ಪೂಜಿಸುವ ಗಣೇಶನಿಗೆ ಜೈ
– ಪ್ರತಿ ಮನೆ ಮನೆಯಲ್ಲೂ ಹಬ್ಬದ ಸಂಭ್ರಮ
NAMMUR EXPRESS NEWS
ಪ್ರಥಮ ಪೂಜಿತ ಅಷ್ಟೇ ಅಲ್ಲದೆ, ಎಲ್ಲರ ಪಾಲಿನ ಪ್ರೀತಿಯ ದೇವರು ಗಣಪತಿ. ಅದರಲ್ಲೂ ಮಕ್ಕಳಿಗೆ ಗಣೇಶ ಎಂದರೆ ಒಂದು ರೀತಿ ಸ್ನೇಹಿತನ ಹಾಗೆ. ತಂದೆ ತಾಯಿಗಳು ತಮ್ಮ ಮಕ್ಕಳ ತುಂಟಾಟದಲ್ಲಿ ಕೃಷ್ಣನನ್ನು ಕಾಣುವಂತೆ, ತಿಂಡಿ ತಿನಿಸುಗಳ ವಿಚಾರಕ್ಕೆ ಬಂದಾಗ ಮಕ್ಕಳಲ್ಲಿ ಗಣೇಶನನ್ನು ಕಾಣುವುದು ಸಹಜ.
ಮೂರ್ತಿಗಳಲ್ಲಿ ಮತ್ತು ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ವಿವಿಧ ಬಗೆಯ ಗಣೇಶನನ್ನು ಮತ್ತು ಆತನ ಕಾರ್ಯವೈಖರಿಗಳನ್ನು ನೋಡುವುದೇ ಒಂದು ಸೊಗಸು. ಅಂತಹ ಕಡೆಗಳಲ್ಲಿ ಆತ ದೇವರಾಗುವ ಬದಲು, ನಮ್ಮನಿಮ್ಮೆಲ್ಲರಂತೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕಣ್ಣಿಗೆ ಗೋಚರಿಸುತ್ತಾನೆ. ಅದಕ್ಕಾಗಿಯೇ ಪುಟಾಣಿ ಮಕ್ಕಳಿಗೆ ಮೂಷಿಕವಾಹನನನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಇಂತಹ ಮುದ್ದು ಗಣಪನ ಆಗಮನಕ್ಕಾಗಿ ಎಲ್ಲೆಡೆ ಪೂಜೆಗಿಂತ ಹೆಚ್ಚಾಗಿ, ತಿಂಡಿ ತಿನಿಸುಗಳ ತಯಾರಿ ಭರದಿಂದ ಸಾಗಿದೆ.
ಗಣೇಶ ಚತುರ್ಥಿ ಎನ್ನುವುದು ಒಂದರ್ಥದಲ್ಲಿ ಗಣಪತಿಯ ಹುಟ್ಟುಹಬ್ಬವೆಂದೇ ಹೇಳಬಹುದು. ಒಂದೊಂದು ಕಥೆಗಳಲ್ಲಿ ಒಂದೊಂದು ರೀತಿಯಲ್ಲಿ ಗಣೇಶನನ್ನು ಬಿಂಬಿಸಲಾಗಿದೆ. ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಗಣಪತಿಯ ತಾಯಿ ಅಂಬಿಕೆ. ಇನ್ನೊಂದು ಕಥೆಯ ಪ್ರಕಾರ ಪಾರ್ವತಿಯ ಮೈಯಿಂದ ಜನಿಸಿದವನು ಈ ಗಣೇಶ. ಮತ್ತೊಂದು ಕಥೆಯಲ್ಲಿ ಗಣಪತಿಯು ಸ್ವರ್ಣಗೌರಿಯ ಮಾನಸ ಪುತ್ರ ಎನಿಸಿಕೊಂಡಿದ್ದಾನೆ. ಇನ್ನು ಜನಪದರ ಪ್ರಕಾರ ಗಣೇಶ ಚತುರ್ಥಿಯ ರೀತಿಯೇ ವಿಭಿನ್ನ. ‘ ಶಿವನು ಭಿಕ್ಷಕ್ಕೆ ಬಂದ ನೀಡು ಬಾರೆ’ ಎಂಬ ಜನಪದ ಗೀತೆಯಲ್ಲಿ ಕೊನೆಯದಾಗಿ ಒಂದು ಸಾಲು ಬರುತ್ತದೆ ‘ಗೌರಿ ಮನಸ ಬಿಟ್ಟಿರಲಾರನಂತೆ ಕಾಣೆ’ ಎಂದು ಶಿವನು ತನ್ನ ಮಡದಿಯ ಮೇಲೆ ಇಟ್ಟಿರುವ ಮೋಹವನ್ನು ಕುರಿತು ಈ ರೀತಿ ತಿಳಿಸಲಾಗಿದೆ. ಆ ಸಾಲಿಗೂ ಈ ಹಬ್ಬಕ್ಕೂ ಒಂದು ರೀತಿಯಲ್ಲಿ ಅವಿನಾಭಾವ ಸಂಬಂಧವಿದೆ ಎಂದೇ ಹೇಳಬಹುದು. ಏಕೆಂದರೆ ಕೈಲಾಸದಿಂದ ತನ್ನ ತವರುಮನೆಗೆ ಹೋಗಿ ಬರುವುದಾಗಿ ಗೌರಿಯು ಭೂಲೋಕಕ್ಕೆ ಆಗಮಿಸುತ್ತಾಳೆ. ಆಗ ಶಿವನು ವಿರಹ ವೇದನೆಯಿಂದ ಬಳಲುತ್ತಾನೆ. ಆಕೆಯನ್ನು ಕ್ಷಣ ಕೂಡ ಬಿಟ್ಟಿರುವುದು ಶಿವನಿಂದ ಸಾಧ್ಯವಾಗುವುದಿಲ್ಲ. ಮರುದಿನ ತನ್ನ ಮುದ್ದಿನ ಮಗನಾದ ಗಣೇಶನನ್ನು ಕರೆದು, ತಾಯಿಯನ್ನು ಮರಳಿ ಕರೆತರುವಂತೆ ಹೇಳಿ ಭೂಲೋಕಕ್ಕೆ ಕಳುಹಿಸಿಕೊಡುತ್ತಾನೆ. ಗಣಪತಿಯು ತನ್ನ ಅಜ್ಜಿಯ ಮನೆಗೆ ಸಂತೋಷ ಮತ್ತು ಸಂಭ್ರಮದಿಂದ ಆಗಮಿಸುತ್ತಾನೆ. ಮುದ್ದಿನ ಮತ್ತು ಆಹಾರಪ್ರಿಯ ಮೊಮ್ಮಗನ ಆಗಮನದಿಂದ ಗೌರಿಯ ತವರುಮನೆಯ ಸಂಭ್ರಮ ಇಮ್ಮಡಿಸುತ್ತದೆ. ಮೊಮ್ಮಗ ಬಯಸಿದ ಎಲ್ಲಾ ರೀತಿಯ ತಿಂಡಿ ತಿನಿಸುಗಳನ್ನು ಮಾಡಿ, ಬಡಿಸಿ ಆತನನ್ನು ತೃಪ್ತಿಪಡಿಸುತ್ತಾರೆ. ಜೊತೆಗೆ ಅಕ್ಕಪಕ್ಕದ ಮನೆಯವರು ತಮ್ಮ ಮನೆಗೆ ಆಹ್ವಾನಿಸಿ, ತಿಂಡಿಪೋತ ಗಣೇಶನಿಗೆ ವಿವಿಧ ಬಗೆಯ ಪದಾರ್ಥಗಳನ್ನು ತಿನ್ನಿಸಿ, ಸಂತೋಷಪಡಿಸುತ್ತಾರೆ. ಉಂಡು ತಿಂದು ಖುಷಿಪಟ್ಟ ಗಣಪತಿಯು ಬಳಿಕ ತನ್ನ ತಾಯಿಯನ್ನು ಕರೆದುಕೊಂಡು ಕೈಲಾಸಕ್ಕೆ ತೆರಳುತ್ತಾನೆ ಎನ್ನುವುದಾಗಿದೆ. ಹೀಗಾಗಿ ಭೂಲೋಕದ ಮುದ್ದಿನ ಮಗುವಿನ ಆಗಮನಕ್ಕಾಗಿ ಎಲ್ಲೆಡೆ ಸಂಭ್ರಮದ ತಯಾರಿ ನಡೆಯುತ್ತದೆ ಎನ್ನುವುದು ವಾಡಿಕೆ. ಮಗಳು ಮತ್ತು ಆಕೆಯ ಮಗುವನ್ನು ಮರಳಿ ಕಳುಹಿಸಿಕೊಡುವಾಗ ನೋವುಂಟಾಗುವುದು ಸಹಜ. ಅದೇ ರೀತಿಯ ಭಾವ ಗಣೇಶನನ್ನು ಕಳುಹಿಸಿಕೊಡುವಾಗ ಎಲ್ಲರ ಮನದಲ್ಲೂ ಉಂಟಾಗುವುದನ್ನು ಕಾಣಬಹುದಾಗಿದೆ. ಹಬ್ಬದ ಆಚರಣೆಯ ರೀತಿ, ಸಂಪ್ರದಾಯ ಮತ್ತು ಮಹತ್ವ ಏನೇ ಇದ್ದರೂ, ಸಾಮಾನ್ಯ ಮನುಷ್ಯರ ಪಾಲಿಗೆ ಹೆಚ್ಚಾಗಿ ಆಪ್ತವಾಗುವುದು ಈ ರೀತಿಯ ಸಂಗತಿ ಎಂದೇ ಹೇಳಬಹುದು. ದೇವರನ್ನು ಮನುಷ್ಯನ ಭಾವನೆಗಳಿಗೆ ಪೂರಕವಾಗಿ ನೋಡುವ ರೀತಿಯೇ ವಿಭಿನ್ನ.
ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯಗಳು




