Categories
Uncategorized

ಮೂವರು ಬಿಜೆಪಿ ನಾಯಕರನ್ನು ಕೊಲ್ಲಲು ಸ್ಕೆಚ್: ಶಂಕಿತ ಉಗ್ರರು ಅರೆಸ್ಟ್! – ಯತ್ನಾಳ್, ಸಿಟಿ ರವಿ, ಪ್ರತಾಪ್ ಸ್ಕೆಚ್: ಚಿಕ್ಕಬಳ್ಳಾಪುರದಲ್ಲಿ ಮೂವರ ಬಂಧನ ತೃತೀಯ ಲಿಂಗಿಗಳಿಂದ ಕಿರುಕುಳ; 112ಕ್ಕೆ ಕರೆ: – ಹಣ ವಸೂಲಿ, ಕಿರಿಕಿರಿ ಮಾಡಿದ್ರೆ ಬರ್ತಾರೆ ಪೊಲೀಸರು! ಪೋನ್‌ಪೇ ಮೂಲಕ ಲಂಚ: ಚೆಕ್ ಮಾಡಿದ ಲೋಕಾಯುಕ್ತರು! – ಸರ್ಕಾರಿ ನೌಕರರ ಡಿಜಿಟಲ್ ಬ್ಯಾಂಕಿಂಗ್ ಕೂಡ ಪರಿಶೀಲನೆ

ಚಿಕ್ಕಬಳ್ಳಾಪುರ: ಬಿಜೆಪಿ ಪಕ್ಷದ ಮೂವರು ಪ್ರಭಾವಿ ನಾಯಕರನ್ನು ಕೊಲ್ಲಲು ಯೋಜನೆ ಸಿದ್ಧಗೊಂಡಿದ್ದಂತಹ ಸತ್ಯ ಇದೀಗ ಬಯಲಾಗಿದೆ. ಟೆಲಿಗ್ರಾಂ ಗ್ರೂಪ್ ನಲ್ಲಿ ಇದರ ಕುರಿತು ಚರ್ಚೆ ನಡೆಸಲಾಗಿತ್ತು ಎನ್ನುವ ಮಾಹಿತಿ ಲಭಿಸಿದೆ. ಹಾಗಾದರೆ ಆ ಮೂವರು ನಾಯಕರು ಯಾರು ಎನ್ನುವ ಕುತೂಹಲ ಮತ್ತು ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಆದರೆ, ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೊದಲೇ ಶಂಕಿತ ಉಗ್ರನೊಬ್ಬ ಪೊಲೀಸರ ಕೈಗೆ ಸಿಲುಕಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ ಸಂಚು ರೂಪಿಸಿದ ಬಾಪೂಜಿನಗರದ ನಿವಾಸಿ ಶಬ್ಬೀರ್ ಎನ್ನುವವನನ್ನು ಪೊಲೀಸರು ಬಂಧಿಸಿದ್ದಾರೆ. ಮಾಹಿತಿಯ ಪ್ರಕಾರ ಟೆಲಿಗ್ರಾಂ ನಲ್ಲಿ ಭಯೋತ್ಪಾದಕರ ಗುಂಪನ್ನು ರಚಿಸಿ, ಅದರಲ್ಲಿ ವಿಧ್ವಂಸಕ ಕೃತ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿ ಪಕ್ಷದ ಮೂವರು ನಾಯಕರನ್ನು ಮುಗಿಸುವ ಕುರಿತು ಅದರಲ್ಲಿಯೇ ಮಾತುಕತೆ ನಡೆಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಮುಸ್ಲಿಂ ವಿರೋಧಿಗಳನ್ನು ಮುಗಿಸಬೇಕು ಎಂದು ಚರ್ಚಿಸಿದ ಉಗ್ರರು ಬಸವಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ ಮತ್ತು ಪ್ರತಾಪ್ ಸಿಂಹ ಸೇರಿದಂತೆ ಹಲವರನ್ನು ಕೊಲೆಗೈಯ್ಯುವ ಹುನ್ನಾರ ನಡೆಸಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಶಬ್ಬೀರ್ ಹೊಸಕೋಟೆಯ ಇಬ್ಬರನ್ನು ಮತ್ತು ಹಾಸನದ ಒಬ್ಬರನ್ನು ತಮ್ಮ ಗುಂಪಿಗೆ ಸೇರಿಸಿದ್ದು, ಇನ್ನು ನಾಲ್ಕು ಜನರನ್ನು ಸೇರಿಸಬೇಕೆಂದು ಆಲೋಚಿಸಿದ್ದನು ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಬಂಧಿತ ಶಬ್ಬೀರ್ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಈ ಗುಂಪಿಗೆ ಸೇರ್ಪಡೆಗೊಂಡಿದ್ದು, ಪಿಯುಸಿಯಲ್ಲಿ ಫೇಲ್ ಆಗಿದ್ದು, ಗಾಂಜಾ ಸೇವನೆ ಕೂಡ ಮಾಡುತ್ತಿದ್ದ. ಈತನಿಗೆ ಗುಂಪಿನ ಅಡ್ಮಿನ್ ಆರು ತಿಂಗಳ ಕಾಲ ಗನ್ ತರಬೇತಿ ಕೊಡಿಸುವುದಾಗಿ ತಿಳಿಸಿದ್ದನು ಎನ್ನಲಾಗಿದೆ. ಅಲ್ಲದೆ ಶ್ರೀಮಂತ ವ್ಯಕ್ತಿಗಳನ್ನು ಅಪಹರಣ ಮಾಡಿ, ಹಣವನ್ನು ಹೊಂದಿಸಿ ಭಯೋತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಧರಿಸಿದ್ದರು. ಇದೀಗ ಶಬ್ಬೀರ್ ವಿರುದ್ಧ ಬಿಎನ್ಎಸ್ 113ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಗುಂಪಿನಲ್ಲಿರುವ ಸದಸ್ಯರಿಗಾಗಿ ಪೊಲೀಸರು ದೇಶದ ಮೂಲೆ ಮೂಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತೃತೀಯ ಲಿಂಗಿಗಳಿಂದ ಕಿರುಕುಳ; 112ಕ್ಕೆ ಕರೆ:
– ಹಣ ವಸೂಲಿ, ಕಿರಿಕಿರಿ ಮಾಡಿದ್ರೆ ಬರ್ತಾರೆ ಪೊಲೀಸರು!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲೂ ತೃತೀಯ ಲಿಂಗಿಗಳ ಕಿರುಕುಳ ಹೆಚ್ಚಳವಾಗಿದ್ದು, ಕಾನೂನುಬಾಹಿರ ಚಟುವಟಿಕೆ, ಹಣಕ್ಕಾಗಿ ಬೆದರಿಕೆ ಹಾಕುವುದು, ಸಾವಿರಾರು ರೂಪಾಯಿಗಳಷ್ಟು ಹಣವನ್ನು ವಸೂಲಿ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ತೃತೀಯ ಲಿಂಗಿಗಳ ಕಿರುಕುಳದಿಂದ ಮುಕ್ತಿ ದೊರಕಿಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಖಡಕ್ ಮಾರ್ಗಸೂಚಿಯನ್ನು ಹೊರಡಿಸಿದೆ.
ಟ್ರಾಫಿಕ್ ಸಿಗ್ನಲ್ ಗಳು, ಮಾರುಕಟ್ಟೆಗಳು, ಸಮಾರಂಭಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಲವಂತವಾಗಿ ಹಣ ವಸೂಲಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಒಂದು ವೇಳೆ ತೃತೀಯ ಲಿಂಗಿಗಳು ಇದಕ್ಕೂ ಮೀರಿ ಹಣಕ್ಕಾಗಿ ಬಲವಂತಪಡಿಸಿದ್ದಲ್ಲಿ ಅಥವಾ ಬೆದರಿಕೆ ಹಾಕಿದ್ದಲ್ಲಿ ತಕ್ಷಣ ಪೊಲೀಸರು ಕ್ರಮವನ್ನು ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಠಾಣೆಗಳಿಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ. ಹಾಗೆಯೇ ತೃತಿಯ ಲಿಂಗಿಗಳಿಂದ ಕಿರುಕುಳಕ್ಕೆ ಒಳಗಾದವರು ತಕ್ಷಣ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಈ ಮೂಲಕ ಸೂಚಿಸಲಾಗಿದೆ.

ಪೋನ್‌ಪೇ ಮೂಲಕ ಲಂಚ: ಚೆಕ್ ಮಾಡಿದ ಲೋಕಾಯುಕ್ತರು!
– ಸರ್ಕಾರಿ ನೌಕರರ ಡಿಜಿಟಲ್ ಬ್ಯಾಂಕಿಂಗ್ ಕೂಡ ಪರಿಶೀಲನೆ

ಬೆಳಗಾವಿ:ಹೆಚ್ಚಿನ ಸಂಬಳ ಹಿನ್ನೆಲೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಉಪಲೋಕಾಯುಕ್ತರು ಒಂದು ಲಕ್ಷಕ್ಕಿಂತ ಹಣ ಹೇಗೆ ಬಂತು ಎಂದು ಫೋನ್‌ಪೇ ಚೆಕ್ ಮಾಡಿದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿರುವ ಪುರಸಭೆ ಕಾರ್ಯಾಲಯದಲ್ಲಿ ನಡೆದಿದೆ.
ನನ್ನ ಮಗಳು ಹಣ ಹಾಕಿದ್ದು ಎಂದ ಅಧಿಕಾರಿ. ಇನ್ನೊಬ್ಬ ಅಧಿಕಾರಿ 1 ಲಕ್ಷಕ್ಕಿಂತ ಹಣ ಇನ್‌ಕಮಿಂಗ್. ಅಧಿಕಾರಿಗಳ ವಿರುದ್ಧ ಕೆಂಡಾಮಂಡಳಾದ ಉಪಲೋಕಾಯುಕ್ತ ವೀರಪ್ಪ ಎರಡು ವರ್ಷದ ಎಲ್ಲ ಅಧಿಕಾರಿಗಳ ವೇತನದ ಮಾಹಿತಿ ನೀಡಲು ಸೂಚಿಸಿದ್ದಾರೆ.
ರಾಜ್ಯದಲ್ಲಿ ಲಂಚ, ಭ್ರಷ್ಟಾಚಾರ ಹೆಚ್ಚಿದ್ದು ಈ ನಿಟ್ಟಿನಲ್ಲಿ ಲೋಕಾಯುಕ್ತರ ನಡೆಗೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗಿದೆ.

Categories
Uncategorized

•ಕಡೂರು: ತೆಂಗಿನ ಸಸಿಗಳ ವಿಚಾರಕ್ಕೆ ಅಳಿಯನನ್ನು ಕೊಂದ ಮಾವ! •ಚಿಕ್ಕಮಗಳೂರು: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳುವು •ಶಿವಮೊಗ್ಗ: ಮಣಿಪಾಲದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ •ತೀರ್ಥಹಳ್ಳಿ: ಅರಣ್ಯ ಪಾಲಕನ ಮನೆಯಲ್ಲೇ ಅಕ್ರಮ ನಾಟಾ ಪತ್ತೆ

ಕಡೂರು: ಕುಟುಂಬಕ್ಕೆ ಸಂಬಂಧಿಸಿದ ಕಲಹ ಕೊಲೆಯಲ್ಲಿ ಅಂತ್ಯ ಕಂಡ ಘಟನೆ, ಪಂಚನಹಳ್ಳಿ ಸಮೀಪದ ಆಲದಹಳ್ಳಿ ತಾಂಡ್ಯಾದಲ್ಲಿ ನಡೆದಿದೆ. ತಾಂಡ್ಯಾದ ನಿವಾಸಿಯಾದ ದೇವರಾಜ್ ನಾಯ್ಕ ಕೌಟುಂಬಿಕ ಕಲಹದ ಹಿನ್ನೆಲೆಯಿಂದಾಗಿ ಪತ್ನಿಯಿಂದ ದೂರವಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದನು. ಆದರೂ ಆಗಾಗ ತನ್ನ ಮಾವನಾದ ರಾಜಾನಾಯ್ಕನ ಜೊತೆ ಜಗಳ ಮಾಡುತ್ತಿದ್ದನು ಎನ್ನಲಾಗಿದೆ.‌ ಈ ದ್ವೇಷದಿಂದ ದೇವರಾಜ ರಾಜಾನಾಯ್ಕನ ತೋಟಕ್ಕೆ ತೆರಳಿದ್ದು, ಅಲ್ಲಿದ್ದ ಎರಡು ತೆಂಗಿನ ಸಸಿಗಳನ್ನು ಮಚ್ಚಿನಿಂದ ಕಡಿದು ನಾಶಗೊಳಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ರಾಜಾನಾಯ್ಕ ದೇವರಾಜ್ ನ ಕೈಯ್ಯಲ್ಲಿದ್ದ ಮಚ್ಚನ್ನು ಕಸಿದುಕೊಂಡು, ಆತನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ದೇವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದು, ಆರೋಪಿಯಾದ ರಾಜನಾಯ್ಕನನ್ನು ಬಂಧಿಸಿದ್ದಾರೆ. ಬಳಿಕ ದೇವರಾಜ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

•ಚಿಕ್ಕಮಗಳೂರು: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳುವು

ಚಿಕ್ಕಮಗಳೂರು: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಇಬ್ಬರು ದುಷ್ಕರ್ಮಿಗಳು ಅಪಹರಿಸಿರುವ ಘಟನೆ, ಹಿರೇಮಗಳೂರು ರೈಲ್ವೆ ಮೇಲ್ಸೇತುವೆಯ ಸಮೀಪದಲ್ಲಿ ನಡೆದಿದೆ. ಗಂಗಮ್ಮ ಎನ್ನುವ ಮಹಿಳೆಯು ಗೌಡನಹಳ್ಳಿಯ ನಿವಾಸಿಯಾಗಿದ್ದು, ಪರಿಚಯದವರಾದ ಲಲಿತಾ ಮತ್ತು ನಿಂಗಮ್ಮ ಎನ್ನುವವರೊಂದಿಗೆ ಹಿರೇಮಗಳೂರಿಗೆ ಮದುವೆಗೆ ತೆರಳಿದ್ದು, ಮಧ್ಯಾಹ್ನ ಮದುವೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಸನ್ನಿವೇಶ ಎದುರಾಗಿದೆ. ಗಂಗಮ್ಮ ಅವರು ಹಿರೇಮಗಳೂರು ರೈಲ್ವೆ ಮೇಲ್ಸೇತುವೆಯಿಂದ ಸ್ವಲ್ಪ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಆಗಮಿಸಿದ ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸಿದ್ದು, ಗಂಗಮ್ಮ ಅವರ ಬಳಿ ಬಂದು ನಿಂತಿದ್ದಾರೆ.‌ ಬಳಿಕ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯು ಇದ್ದಕ್ಕಿದ್ದ ಹಾಗೆ ಗಂಗಮ್ಮ ಅವರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಮತ್ತು ಕರಿಮಣಿ ಸರವನ್ನು ಕಿತ್ತುಕೊಂಡಿದ್ದಾನೆ ಎನ್ನಲಾಗಿದೆ. ಆಘಾತಕ್ಕೆ ಒಳಗಾದ ಗಂಗಮ್ಮ ಅವರು ತನ್ನ ನೆರವಿಗಾಗಿ ಕೂಗಿಕೊಂಡಿದ್ದು, ಆರೋಪಿಗಳು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಗಂಗಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದು, 11ಗ್ರಾಂ ತೂಕದ ಚಿನ್ನದ ಸರ ಮತ್ತು 6 ಚಿನ್ನದ ಗುಂಡುಗಳು ಸೇರಿ ಒಟ್ಟು 1.04 ಲಕ್ಷ ರೂಪಾಯಿಗಳಷ್ಟು ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

•ಶಿವಮೊಗ್ಗ: ಮಣಿಪಾಲದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಶಿವಮೊಗ್ಗ: ಮಣಿಪಾಲದ ಎಂಐಟಿ ಕಾಲೇಜಿನಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಸೆಪ್ಟೆಂಬರ್ 22ರ ಮಂಗಳವಾರದಂದು ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿಯನ್ನು ಶಿವಮೊಗ್ಗದ ವಿನೋಬನಗರ ನಿವಾಸಿ ಸಮರ್ಥ್ ಆರ್ ಪಾಟೀಲ್ ಎಂದು ಗುರುತಿಸಲಾಗಿದೆ. ವ್ಯಾಸಂಗದ ನಿಮಿತ್ತ ಮಣಿಪಾಲದಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ವಾಸವಾಗಿದ್ದ ಸಮರ್ಥ್, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ವೈಯಕ್ತಿಕ ಕಾರಣದಿಂದಾಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಅನುಮಾನ ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದ್ದು, ನಿಖರವಾದ ಕಾರಣ ಏನೆನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

•ತೀರ್ಥಹಳ್ಳಿ: ಅರಣ್ಯ ಪಾಲಕನ ಮನೆಯಲ್ಲೇ ನಾಟಾ ಪತ್ತೆ

ತೀರ್ಥಹಳ್ಳಿ: ಅರಣ್ಯವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಹೊತ್ತಿರುವಂತಹ ವಾಚರ್ ಮನೆಯಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ನಾಟಾ ಪತ್ತೆಯಾಗಿರುವ ವಿಷಾದಕರ ಸಂಗತಿಯೊಂದು ಮುಂಡುವಳ್ಳಿ ಗ್ರಾಮದ ಶಾಂತಿಕೆರೆ ವ್ಯಾಪ್ತಿಯ ಮೃಗವಧೆಯಲ್ಲಿ ನಡೆದಿದೆ. ಸರ್ವೆ ನಂಬರ್ 188 ಪ್ರದೇಶದಲ್ಲಿ ಮರಗಳನ್ನು ಅಕ್ರಮವಾಗಿ ಕಡಿದು, ಅವುಗಳನ್ನು ನಾಟಾವಾಗಿ ಪರಿವರ್ತಿಸಿ ಸಂಗ್ರಹಿಸಿಡಲಾಗಿದೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಂಚಾರಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆಯನ್ನು ನಡೆಸಿದಾಗ ಎಂಪಿಎಂ ನಡುತೋಪಿನ ಅರಣ್ಯ ವಲಯದಲ್ಲಿ ವಾಚರ್ ಆಗಿ ಕಾರ್ಯನಿರ್ವಹಿಸುತ್ತಿರುವ ಫಿಲಿಪ್ ಡಿಸೋಜಾ ಅವರ ತೋಟದ ಮನೆಯಲ್ಲಿ ಹೊನ್ನೆ, ಮತ್ತಿ, ಬೋಗಿ ಸೇರಿದಂತೆ ವಿವಿಧ ಜಾತಿಯ ಮರಗಳ ನಾಟಾಗಳು ಸಂಗ್ರಹಗೊಂಡಿರುವುದು ಪತ್ತೆಯಾಗಿದೆ.‌ ನಾಟಾಗಳ ನಿಖರ ಪ್ರಮಾಣ, ಮರಗಳ ಜಾತಿ, ಮಾರುಕಟ್ಟೆ ದರ ಮತ್ತು ಅವುಗಳ ಮೂಲಗಳ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಫಿಲಿಪ್ ಡಿಸೋಜಾ ವಿರುದ್ಧ ಶಿವಮೊಗ್ಗದ ಡಿಎಫ್ಓ ಅವರಿಗೆ ದೂರು ನೀಡಲಾಗಿದ್ದು, ದೂರಿನ ಆಧಾರದ ಮೇಲೆ ಸಂಚಾರಿ ಅರಣ್ಯಾಧಿಕಾರಿಗಳ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಟ್ಟ ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ.

Categories
Uncategorized

ಕಸ್ತೂರಿ ರಂಗನ್ ವರದಿ ಕುರಿತು ಆಕ್ಷೇಪಣೆ ಸಲ್ಲಿಸಲು 2 ದಿನಗಳು ಮಾತ್ರ ಬಾಕಿ! – 360 ಗ್ರಾಮಗಳ1435 ರೈತರಿಗೆ ಆನ್ಲೈನ್ ಆಕ್ಷೇಪಣೆ ಸಲ್ಲಿಸಿದ ಶೃಂಗೇರಿ ರೈತ ಒಕ್ಕೂಟ -ಇನ್ನೂ ಆಕ್ಷೇಪಣೆ ಸಲ್ಲಿಸದೇ ಇರುವ ರೈತ ಬಾಂಧವರು ತಕ್ಷಣ ಸಲ್ಲಿಸಿ: ವಿಶ್ವನಾಥ್ ಗದ್ದೆಮನೆ

ಶಿವಮೊಗ್ಗ/ ಚಿಕ್ಕಮಗಳೂರು: ಮಲೆನಾಡಿಗೆ ಮರಣ ಶಾಸನವಾದ ಕಸ್ತೂರಿ ರಂಗನ್ ವರದಿಗೆ ಆಕ್ಷೆಪಣೆ ಸಲ್ಲಿಸಲು ಇನ್ನು 2 ದಿನ ಮಾತ್ರ ಬಾಕಿ ಇದೆ.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಆನ್‍ಲೈನ್ ವ್ಯವಸ್ಥೆಯ ಮೂಲಕ 360 ಗ್ರಾಮಗಳ 1435 ರೈತರು ತಮ್ಮ ಆಕ್ಷೇಪಣೆಯನ್ನು ಯಶಸ್ವಿಯಾಗಿ ಸಲ್ಲಿಸಿದ್ದಾರೆ.
ಇನ್ನೂ ಆಕ್ಷೇಪಣೆ ಸಲ್ಲಿಸದೇ ಇರುವ ರೈತ ಬಾಂಧವರು ತಕ್ಷಣವೇ ಈ ವ್ಯವಸ್ಥೆಯ ಸದುಪಯೋಗವನ್ನು ಪಡೆದುಕೊಂಡು ತಮ್ಮ ಧ್ವನಿಯನ್ನು ಎತ್ತಬೇಕಾಗಿ ವಿನಂತಿ ಮಾಡಲಾಗಿದೆ.

ಆಕ್ಷೇಪಣೆ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಬಳಸಿ
raithaokkuta.com/register-objection

ಸಹಾಯಕ್ಕಾಗಿ ಕರೆ ಮಾಡಿ : 9345661210 / 9342361210 ಅಥವಾ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಛೇರಿಗೆ ಭೇಟಿ ನೀಡಿ.

-ವಿಶ್ವನಾಥ್ ಗದ್ದೆಮನೆ
ಅಧ್ಯಕ್ಷರು, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ

Categories
Uncategorized

•ಉಡುಪಿ: ಬೆಂಕಿಗಾಹುತಿಯಾದ ಸಿಟಿ ಬಸ್ •ಸುಳ್ಯ: ಆಟೋ ಮತ್ತು ಕಾರಿನ ನಡುವೆ ಅಪಘಾತ •ಕುಂದಾಪುರ: ಪತ್ನಿಯಿಂದಲೇ ಪತಿಯ ಕೊಲೆ •ಮಂಗಳೂರು: ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

ಉಡುಪಿ: ಶ್ರೀಕೃಷ್ಣ ಪ್ರಸಾದ್ ಎನ್ನುವ ಹೆಸರಿನ ಸಿಟಿ ಬಸ್ ಒಂದು ಬೆಂಕಿಗಾಹುತಿಯಾದ ಘಟನೆ, ಶುಕ್ರವಾರದಂದು ಮಣಿಪುರ ಪಂಚಾಯತ್ ವ್ಯಾಪ್ತಿಯ ದೆಂದೂರುಕಟ್ಟೆಯ ಎಂಆರ್ ಪಿಎಲ್ ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಮೂಡುಬೆಳ್ಳೆ-ಕಾರ್ಕಳ ಮಾರ್ಗದಲ್ಲಿ ಸಂಚಾರಿಸುತ್ತಿದ್ದ ಬಸ್ ಅನ್ನು ಎಂದಿನಂತೆ ಗುರುವಾರ ರಾತ್ರಿ ಪೆಟ್ರೋಲ್ ಪಂಪ್ ನ ಬಳಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ 3:30ರ ಸುಮಾರಿಗೆ ಬಸ್ ನಲ್ಲಿ ಇದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡಿದ್ದು, ಅದು ತೀವ್ರವಾಗಿ ಆವರಿಸಿಕೊಂಡ ಪರಿಣಾಮವಾಗಿ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಬಸ್ ಸಮೀಪದಲ್ಲಿ ಟೆಂಪೋ ಒಂದನ್ನು ನಿಲ್ಲಿಸಿದ್ದರಿಂದ ಅದಕ್ಕೂ ಸ್ವಲ್ಪ ಬೆಂಕಿ ವ್ಯಾಪಿಸಿದ್ದು, ಸೆಕ್ಯೂರಿಟಿ ಗಾರ್ಡ್ ಮತ್ತು ಸ್ಥಳದಲ್ಲಿದ್ದ ಪೆಟ್ರೋಲ್ ಪಂಪ್ ನ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಅದರ ಸಮೀಪದಲ್ಲೇ ಮತ್ತೊಂದು ಬಸ್ ನಿಲ್ಲಿಸಲಾಗಿದ್ದು, ಅದಕ್ಕೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಅಲ್ಲದೆ ಪೆಟ್ರೋಲ್ ಪಂಪ್ ಗೆ ಬೆಂಕಿ ವ್ಯಾಪಿಸದ ಕಾರಣ ಎದುರಾಗಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. ಬಸ್ ಗೆ ಬೆಂಕಿ ತಗುಲಲು ಕಾರಣವೇನೆಂಬುದು ನಿಖರವಾಗಿ ತಿಳಿದುಬಂದಿಲ್ಲ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆಯನ್ನು ನಡೆಸಿದರು. ಬಸ್ ಬೆಂಕಿಯ ತೀವ್ರತೆಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದರಿಂದ ಸುಮಾರು 10 ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.

•ಸುಳ್ಯ: ಆಟೋ ಮತ್ತು ಕಾರಿನ ನಡುವೆ ರಸ್ತೆ ಅಪಘಾತ ಸಂಭವಿಸಿರುವ ಘಟನೆ, ಅಡ್ಕಾರ್ ಬಳಿ ನಡೆದಿದೆ. ಪರಿಣಾಮವಾಗಿ ಆಟೋ ಚಾಲಕನ ಕಾಲಿಗೆ ಗಂಭೀರ ರೀತಿಯ ಗಾಯವಾಗಿದ್ದು, ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

•ಕುಂದಾಪುರ: ಪತ್ನಿಯಿಂದಲೇ ಪತಿ ಕೊಲೆ

ಕುಂದಾಪುರ: ಪತ್ನಿಯೇ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ, ದುಬೈನ ಶಾರ್ಜಾದಲ್ಲಿ ನಡೆದಿದೆ. ಸುಮಾರು ಎರಡು ತಿಂಗಳ ಹಿಂದೆ ಪತ್ನಿಯು ತನ್ನ ಪತಿಯ ದೇಹವನ್ನು ಹತ್ತಕ್ಕೂ ಹೆಚ್ಚು ಭಾಗ ತುಂಡುಗಳಾಗಿ ಕತ್ತರಿಸಿ, ಭೀಕರವಾಗಿ ಕೊಲೆಗೈದು, ಅದನ್ನು ಚೀಲದೊಳಗೆ ತುಂಬಿಸಿ, ಕಾರಿನಲ್ಲಿರಿಸಿ ಮಗನೊಂದಿಗೆ ಪರಾರಿಯಾಗಿದ್ದಳು ಎನ್ನಲಾಗಿದೆ. ಮೃತ ದುರ್ದೈವಿಯನ್ನು ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದೆ. ಪ್ರಕಾಶ್ ಕುಂದರ್ ಅವರ ಸಾವಿನ ಸಂಗತಿ ತಿಳಿಯುತ್ತಿದ್ದಂತೆ ಅವರ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿ, ಅವರ ಸಹಕಾರದಿಂದ ಮೃತದೇಹವನ್ನು ಪತ್ತೆ ಹಚ್ಚಿ, ಅಲ್ಲಿನ ನಿಯಮಾನುಸಾರ ಪ್ರಕ್ರಿಯೆಗಳನ್ನು ನಡೆಸಿ, ದುಬೈನಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣದಿಂದ ಶುಕ್ರವಾರದಂದು ಹುಟ್ಟೂರಿಗೆ ತರಲಾಯಿತು ಎನ್ನುವ ಮಾಹಿತಿ ಲಭಿಸಿದೆ. ಬಳಿಕ ಪ್ರಕಾಶ್ ಕುಂದರ್ ಅವರ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

•ಮಂಗಳೂರು: ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

ಮಂಗಳೂರು: ಡೇಟಾ ಎಂಟ್ರಿ ವರ್ಕ್ ಫ್ರಮ್ ಹೋಂ ಕೆಲಸದ ಆಸೆಗೆ ಯುವತಿಯೊಬ್ಬಳು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಸೆಪ್ಟೆಂಬರ್ 11ರ ಶುಕ್ರವಾರದಂದು ಯುವತಿಯ ವಾಟ್ಸಪ್ ಗೆ ಅಪರಿಚಿತ ಸಂಖ್ಯೆಯಿಂದ ಮೆಸೇಜ್ ಬಂದಿದ್ದು, ಸಂದೇಶವನ್ನು ಕಳುಹಿಸಿದ ವ್ಯಕ್ತಿಯು ತಾನು ಮೇಘಾ ಕಂಪನಿಯ ಎಚ್ಆರ್ ಎಂದು ಗುರುತಿಸಿಕೊಂಡಿದ್ದಾನೆ. ಬಳಿಕ ತಮ್ಮಲ್ಲಿ ಡೇಟಾ ಎಂಟ್ರಿಗೆ ಸಂಬಂಧಿಸಿದಂತೆ ವರ್ಕ್ ಫ್ರಮ್ ಹೋಂ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ. ಮಾಹಿತಿ ನೀಡಿದ ನಂತರ ಯುವತಿಗೆ ಟೆಲಿಗ್ರಾಂ ಲಿಂಕ್ ಕಳುಹಿಸಿದ್ದು, ಯುವತಿಯು ಅದನ್ನು ತೆರೆದು, ಗ್ರೂಪ್ ಒಂದಕ್ಕೆ ಸೇರಿಕೊಂಡಿದ್ದಾಳೆ. ಆಗ ಅಪರಿಚಿತ ವ್ಯಕ್ತಿಯು 20 ಟಾಸ್ಕ್ ಗಳನ್ನು ಪೂರ್ಣಗೊಳಿಸಿದ್ದಲ್ಲಿ 200 ರೂಪಾಯಿ ನೀಡಲಾಗುವುದು ಎಂದು ನಂಬಿಸಿದ್ದಾನೆ. ಅಲ್ಲದೆ ಮೊದಲ ದಿನ ಯುವತಿಯು 20 ಟಾಸ್ಕ್ ಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅವಳ ಖಾತೆಗೆ 200 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಆಕೆಗೆ ಕೆಲಸದ ಕುರಿತು ಭರವಸೆ ಮೂಡಿ ಅದನ್ನೇ ಮುಂದುವರಿಸಲು ನಿರ್ಧರಿಸಿದ್ದಾಳೆ. ಮರುದಿನ ಯುವತಿಗೆ 13 ಟಾಸ್ಕ್ ಗಳನ್ನು ನೀಡಲಾಗಿದ್ದು, ಯುವತಿಗೆ ಅಂದು ಟಾಸ್ಕ್ ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ. ಆಗ ಅಮರ್ಜಿತ್ ಕುಮಾರ್ ಎನ್ನುವ ಹೆಸರಿನ, ಟೆಲಿಗ್ರಾಂ ಅನ್ನು ಬಳಸುತ್ತಿದ್ದ ವ್ಯಕ್ತಿಯು ಯುವತಿಗೆ ಕರೆ ಮಾಡಿ ಟಾಸ್ಕ್ ಗಳನ್ನು ಮುಂದುವರಿಸುವಂತೆ ಉತ್ತೇಜನ ನೀಡಿದ್ದಾನೆ. ಆತನ ಸೂಚನೆಯಂತೆ ಯುವತಿಯು ಆರಂಭದಲ್ಲಿ 3000 ರೂಪಾಯಿ ಹಣವನ್ನು ಯುಪಿಐ ಮೂಲಕ ವರ್ಗಾಯಿಸಿದ್ದಳು ಎನ್ನುವ ಮಾಹಿತಿ ಲಭಿಸಿದೆ. ಆದರೆ ಯುವತಿಯು ಟಾಸ್ಕ್ ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಾಳೆ. ಇದಕ್ಕೆ ಪ್ರತಿಯಾಗಿ ಅಪರಿಚಿತ ವ್ಯಕ್ತಿಗಳು ಹಣವನ್ನು ಹಿಂಪಡೆಯಬೇಕಾದರೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಸೂಚಿಸಿದ್ದಾರೆ. ತನ್ನ ಹಣವನ್ನು ಹಿಂತೆಗೆದುಕೊಳ್ಳಲು ಈ ರೀತಿ ಅನುಸರಿಸಬೇಕೇನೊ ಎಂದು ನಂಬಿದ ಯುವತಿಯು ಸೆಪ್ಟೆಂಬರ್ 12ರ ಶನಿವಾರದಿಂದ ಸೆಪ್ಟೆಂಬರ್ 17ರ ಗುರುವಾರದವರೆಗೆ ಸುಮಾರು 9.33.866 ರೂಪಾಯಿಗಳಷ್ಟು ಹಣವನ್ನು ವರ್ಗಾಯಿಸಿದ್ದಾಳೆ. ಇಷ್ಟಾದರೂ ತನ್ನ ಹಣ ಮರಳಿ ಸಿಗದಿದ್ದರಿಂದ ತಾನು ಆನ್ ಲೈನ್ ವರ್ಕ್ ಫ್ರಮ್ ಹೋಂ ಸ್ಕ್ಯಾಮ್ ಗೆ ಒಳಗಾಗಿರುವ ಕುರಿತು ಅರಿವು ಮೂಡಿದೆ. ಈ ಹಿನ್ನೆಲೆಯಲ್ಲಿ ಯುವತಿಯು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಸಿಇಎನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣ ವರ್ಗಾವಣೆಗೊಂಡ ಬ್ಯಾಂಕ್ ಖಾತೆಗಳ ಕುರಿತು ತನಿಖೆಯನ್ನು ಕೈಗೊಳ್ಳಲಾಗಿದೆ.

Categories
Uncategorized

6 ತಿಂಗಳಲ್ಲಿ 10 ಲಕ್ಷ ಹೊಸ ಪಡಿತರ ಚೀಟಿ! – ಎಣ್ಣೆ , ಬೇಳೆ ವಿತರಣೆ ಜತೆಗೆ ಹೊಸ ನಿಯಮ – ಅರ್ಹ ಕುಟುಂಬಗಳಿಗೆ ಚೀಟಿ, ಅನರ್ಹರಿಗೆ ಕ್ಯಾನ್ಸಲ್

ನವದೆಹಲಿ: ಪಡಿತರ ಚೀಟಿಯ ವಿತರಣೆಗೆ ಸಂಬಂಧಿಸಿದಂತೆ ರಾಜ್ಯದ ಆಹಾರ ಸಚಿವರಾದ ರಿಜ್ವಾನ್ ಅರ್ಷದ್ ಅವರು ಘೋಷಣೆಯೊಂದನ್ನು ಹೊರಡಿಸಿದ್ದಾರೆ. ಇದರ ಪ್ರಕಾರ ಮುಂದಿನ ಆರು ತಿಂಗಳಲ್ಲಿ 10 ಲಕ್ಷ ಹೊಸ ಪಡಿತರ ಚೀಟಿಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ.
ಮಾಧ್ಯಮಗಳ ಜತೆ ಮಾತನಾಡಿದ ರಿಜ್ವಾನ್ ಅರ್ಷದ್ ಅವರು “ಪಡಿತರ ವ್ಯಾಪ್ತಿಯಿಂದ ಬಹಳ ಕುಟುಂಬಗಳು ಹೊರಕ್ಕೆ ಉಳಿದಿದ್ದು, ಅರ್ಹ ಕುಟುಂಬಗಳಿಗೆ ಪಡಿತರ ಚೀಟಿಯನ್ನು ವಿತರಿಸಲಾಗುವುದು. ಜೊತೆಗೆ, ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ಅನರ್ಹ ಕುಟುಂಬಗಳ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು. ಇದರೊಂದಿಗೆ ಸಾರ್ವಜನಿಕರು ಕೆಲಸದ ನಡುವೆ ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮೊಬೈಲ್ ಮೂಲಕವೇ ಕುಟುಂಬದ ಸದಸ್ಯರ ಮುಖಚಾರ್ಯೆಯನ್ನು ಬಳಸಿ ಇ-ಕೆವೈಸಿ ಮಾಡಿಕೊಳ್ಳುವ ಸೌಲಭ್ಯವನ್ನು ಕೆಲವೇ ದಿನಗಳಲ್ಲಿ ಜಾರಿಗೊಳಿಸಲಾಗುವುದು.
ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಕುಟುಂಬಗಳ ಪಡಿತರ ಫಲಾನುಭವಿಗಳಿಗೆ ಅನ್ನಭಾಗ್ಯದ 5ಕೆಜಿ ಅಕ್ಕಿಯ ಜೊತೆಗೆ ಇಂದಿರಾ ಆಹಾರ ಕಿಟ್ ನೀಡಲು ಕರೆಯಲಾಗಿದ್ದ ಟೆಂಡರ್ ಅನ್ನು ರದ್ದುಪಡಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಕುಟುಂಬಗಳ ಪ್ರತಿ ಫಲಾನುಭವಿಗೆ 10ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇಂದಿರಾ ಕಿಟ್ ಮೂಲಕ ರಾಜ್ಯದ ಪಾಲಿನ ಅಕ್ಕಿಯ ಜೊತೆಗೆ ದ್ವಿದಳ ಧಾನ್ಯ, ಅಡುಗೆ ಎಣ್ಣೆ ಮತ್ತಿತರ ವಸ್ತುಗಳನ್ನು ವಿತರಿಸಲು ಉದ್ದೇಶಸಲಾಗಿತ್ತು. ಆದರೆ, ಟೆಂಡರ್ ನ ಪ್ರಕ್ರಿಯೆಯಲ್ಲಿ ವೈಜ್ಞಾನಿಕತೆ ಇರಲಿಲ್ಲ. ಕಿಟ್ ಗಳನ್ನು ವಿತರಿಸುವ ಕಂಪನಿಗಳಿಗೆ ಯಾವುದೇ ಹೊಣೆಗಾರಿಕೆಯನ್ನು ಕೂಡ ನಿಗದಿಪಡಿಸಲಾಗಿರಲಿಲ್ಲ. ಮುಖ್ಯವಾಗಿ ಅಡುಗೆ ಎಣ್ಣೆಯನ್ನು ತಯಾರಿಸುವಂತಹ ಸಂಸ್ಥೆಗಳನ್ನು ಒಳಗೊಂಡಂತೆ ಉತ್ಪಾದಕರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡಬೇಕೆನ್ನುವ ನಿಟ್ಟಿನಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

Categories
Uncategorized

ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ – ರಾಜ್ಯದಲ್ಲೇ ಮಾದರಿ ಗಣೇಶೋತ್ಸವ: ಶಾಂತಿಯುತ ಆಚರಣೆ – ಪಕ್ಷಬೇಧ ಮರೆತು ಎಲ್ಲಾ ನಾಯಕರು ಒಟ್ಟಾಗಿ ಭಾಗಿ – ಸಾಮಾಜಿಕ ಜಾಲ ತಾಣಗಳಲ್ಲಿ ಶಿವಮೊಗ್ಗ ಗಣಪತಿ ಹವಾ!

ಶಿವಮೊಗ್ಗ: ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಕಾರ್ಯಕ್ರಮ ಶನಿವಾರ ಬೆಳಗಿನ ಜಾವ ಮುಕ್ತಾಯಗೊಂಡಿದೆ.
ಶುಕ್ರವಾರ ರಾತ್ರಿಯಿಡೀ ಸಾಗಿದ ಮೆರವಣಿಗೆಗೆ ಬೆಳಗಿನ ಜಾವ 5ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಣಪತಿ ವಿಗ್ರಹವನ್ನು ಭೀಮನ ಮಡುವಿನಲ್ಲಿ ವಿಸರ್ಜನೆ ಮಾಡುವ ಮೂಲಕ ತೆರೆ ಬಿದ್ದಿದೆ.‌ ಇಡೀ ಶಿವಮೊಗ್ಗ ಜನ ಈ ಉತ್ಸವದಲ್ಲಿ ಭಾಗಿಯಾಗಿದ್ದಾರೆ.
ಆರಾಧ್ಯ ದೈವವನ್ನು ಸಾವಿರಾರು ಭಕ್ತರು ಭಾವಪೂರ್ಣವಾಗಿ ಬೀಳ್ಕೊಟ್ಟಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು ಹರ ಹರ ಮಹಾದೇವ, ಭಾರತ್ ಮಾತಾ ಕಿ ಜೈ ಮೊದಲಾದ ಘೋಷಣೆಗಳನ್ನು ಕೂಗುತ್ತಾ ಉತ್ಸಾಹವನ್ನು ಇಮ್ಮಡಿಗೊಳಿಸಿದರು.

ಮಲೆನಾಡ ಮಡಿಲಲ್ಲಿ ವಿವಿಧ ಕಲಾಕೃತಿ

ಶಿವಮೊಗ್ಗದ ಹಿಂದೂ ಸಂಘಟನಾ ಮಹಾಮಂಡಳಿಯ ಗಣಪತಿ ಉತ್ಸವಕ್ಕೆ ಸಾಂಸ್ಕೃತಿಕ ಸ್ವರೂಪವನ್ನು ನೀಡಲಾಗಿತ್ತು. ಅಮೀರ್ ಅಹಮದ್ ವೃತ್ತದಲ್ಲಿ ಸಿಂಹಾರೂಢ ಛತ್ರಪತಿ ಶಿವಾಜಿ ಆಯುಧ ಪ್ರಧಾನ ಕಲಾಕೃತಿಯನ್ನು ನಿರ್ಮಿಸುವುದರ ಜೊತೆಗೆ, ನಗರದ ಪ್ರಮುಖ ರಸ್ತೆಗಳನ್ನು ಮತ್ತು ಮಹದ್ವಾರಗಳನ್ನು ವಿವಿಧ ಬಗೆಯ ವಿದ್ಯುತ್ ದೀಪಗಳಿಂದ ಮತ್ತು ವಿವಿಧ ಕಲಾಕೃತಿಗಳಿಂದ ಅಲಂಕರಿಸಲಾಗಿತ್ತು. ಇದನ್ನು ವೀಕ್ಷಿಸಲೆಂದೇ ಜಿಲ್ಲೆಯ ನಾನಾ ಭಾಗಗಳಿಂದ ಜನಸ್ತೋಮವೇ ಹರಿದುಬಂದಿತ್ತು.‌

ಜಾನಪದ.. ಡಾನ್ಸ್ ಡಾನ್ಸ್..!

ಮೆರವಣಿಗೆಯ ಹುಮ್ಮಸ್ಸನ್ನು ಮತ್ತಷ್ಟು ಉತ್ತೇಜಿಸಲು ಜನಪದ ಸೊಗಡಿನ ಡೊಳ್ಳು, ನಾಸಿಕ್ ವಾದ್ಯ, ಚಂಡೆ ಮತ್ತು ಆಧುನಿಕತೆಯ ರೂಪಕವಾದ ಡಿಜೆ ಜೊತೆಗೂಡಿದವು.‌ ನಗರದ ಗಲ್ಲಿಗಲ್ಲಿಗಳಿಂದ ಜನರು ಆಗಮಿಸಿ ರಾಜಬೀದಿ ಉತ್ಸವವನ್ನು ಕುಟುಂಬ ಸಮೇತರಾಗಿ ಕಣ್ತುಂಬಿಕೊಂಡರು. ಸಾಮಾಜಿಕ ಜಾಲ ತಾಣಗಳಲ್ಲಿ ಶಿವಮೊಗ್ಗ ಗಣಪತಿ ಭಾರೀ ವೈರಲ್ ಆಗಿದೆ.

ಪಟಾಕಿ.. ಚಿತ್ತಾರ… ಪಕ್ಷಬೇಧ ಮರೆತು ಭಾಗಿ

ಶಿವಮೊಗ್ಗ ಶಾಸಕ ಚನ್ನಬಸಪ್ಪ, ಪ್ರಮುಖ ನಾಯಕರಾದ ರಾಘವೇಂದ್ರ, ಅರುಣ್, ಡಾ.ಧನಂಜಯ ಸರ್ಜಿ, ಈಶ್ವರಪ್ಪ, ಯೋಗೀಶ್, ಮಂಜುನಾಥ್ ಗೌಡ, ಶ್ರೀಕಾಂತ್, ಪ್ರಸನ್ನ ಕುಮಾರ್, ಕಾಂತೇಶ್ ಸೇರಿ ಬಹುತೇಕ ನಾಯಕರು, ಮುಖಂಡರು ಈ ಹಬ್ಬದಲ್ಲಿ ಭಾಗಿಯಾಗಿದ್ದರು.

Categories
Uncategorized

ಸೌಜನ್ಯ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್: ಎಸ್‌ಐಟಿ ರಚನೆ! – ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರ ನಿರ್ಧಾರ – ಶಶಿಕುಮಾರ್ ನೇತೃತ್ವದಲ್ಲಿ ಐವರು ಅಧಿಕಾರಿಗಳ ವಿಶೇಷ ತಂಡ ರಚನೆ – 3 ತಿಂಗಳ ಒಳಗೆ ವರದಿ ಸಲ್ಲಿಸಲು ಸೂಚನೆ: ಏನಾಗುತ್ತೆ..?

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದೆ.
ಪ್ರಕರಣದ ಸಮಗ್ರ ಮರು ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ಈ 5 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಇದೇ ವೇಳೆ ಪ್ರಕರಣದಲ್ಲಿ ಸಂತೋಷ್ ರಾವ್ ಈಗಾಗಲೇ ವಿಚಾರಣೆ ಎದುರಿಸಿ ಸೆಷನ್ಸ್ ಕೋರ್ಟ್‌ನಿಂದ ಖುಲಾಸೆಯಾಗಿರುವ ಹಿನ್ನೆಲೆಯಲ್ಲಿ, ಅವರ ವಿರುದ್ಧ ಇದೇ ಪ್ರಕರಣದಲ್ಲಿ ಮತ್ತೊಮ್ಮೆ ತನಿಖೆ ಅಥವಾ ವಿಚಾರಣೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಹೊಸ SIT ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಿ, ಸಂಬಂಧಪಟ್ಟ ನ್ಯಾಯಾಲಯಕ್ಕೆ ಕಾನೂನು ಪ್ರಕಾರ ಪೊಲೀಸ್ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ತನಿಖೆಯನ್ನು ಯಾವುದೇ ವ್ಯಕ್ತಿ ಅಥವಾ ಹಿಂದಿನ ಆದೇಶದಲ್ಲಿನ ಅಭಿಪ್ರಾಯಗಳಿಂದ ಪ್ರಭಾವಿತರಾಗದೆ ಸ್ವತಂತ್ರವಾಗಿ ನಡೆಸಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.

ಎಸ್‌ಐಟಿ ತಂಡದಲ್ಲಿರುವ ಅಧಿಕಾರಿಗಳು ಯಾರು ಯಾರು?

ಎನ್. ಶಶಿಕುಮಾರ್, ಐ.ಪಿ.ಎಸ್. (ಪೊಲೀಸ್ ಮಹಾನಿರೀಕ್ಷಕರು) – ಮುಖ್ಯಸ್ಥರು, ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಐ.ಪಿ.ಎಸ್. (ಪೊಲೀಸ್ ಕಮಿಷನರ್, ಮಂಗಳೂರು ನಗರ) – ಸದಸ್ಯರು, ನಿಶಾ ಜೇಮ್ಸ್, ಐ.ಪಿ.ಎಸ್. (ಪೊಲೀಸ್ ಅಧೀಕ್ಷಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು) – ಸದಸ್ಯರು, ಲೋಕೇಶ್ ಜಗಲಸಾರ್, ಐ.ಪಿ.ಎಸ್. (ಪೊಲೀಸ್ ಅಧೀಕ್ಷಕರು, ಸಿ.ಐ.ಡಿ, ಬೆಂಗಳೂರು) – ಸದಸ್ಯರು, ವೆಂಕಟೇಶ್ ಪ್ರಸನ್ನ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ) – ಸದಸ್ಯರು. ಈ ವಿಶೇಷ ತನಿಖಾ ತಂಡವನ್ನು ಕರ್ನಾಟಕ ರಾಜ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಕಲಂ 2(1)(ಯು) ಅಡಿಯಲ್ಲಿ ರಚಿಸಿ ಆದೇಶಿಸಲಾಗಿದೆ.

Categories
Uncategorized

ಗೃಹಲಕ್ಷ್ಮಿ ಹಣ ಬರಲು ಗಂಡನ ಆಧಾರ್ ಲಿಂಕ್ ಕಡ್ಡಾಯ! – ಯೋಜನೆಗೆ ಹೊಸ ನಿಯಮ ಬಿಡುಗಡೆ: ಮತ್ತೆ ಸರ್ವೇ ಶುರುವಾಗುತ್ತೆ – ಮಹಿಳೆಯರು ನೀಡುವ ಬ್ಯಾಂಕ್ ಖಾತೆಗೆ ಸಾಲದ ಲಿಂಕ್ ಇರಬಾರದು

ಬೆಂಗಳೂರು : ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮೀ ಯೋಜನೆ’ಯ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಫಲಾನುಭವಿ ಮಹಿಳೆಯರು ಪತಿಯ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಸೂಚಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸಿದ ಮಹಿಳೆಯ ಆಧಾರ್ ಕಾರ್ಡ್ ಮಾತ್ರವಲ್ಲದೆ ಆಕೆಯ ಪತಿಯ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಮಹಿಳೆಯರು ನೀಡುವ ಬ್ಯಾಂಕ್ ಖಾತೆಗೆ ಯಾವುದೇ ರೀತಿಯ ಸಾಲದ ಲಿಂಕ್ ಇರಬಾರದು. ಒಂದು ವೇಳೆ ಸಾಲ ಇರುವ ಖಾತೆಯನ್ನು ನೀಡಿದ್ದರೆ ಅಥವಾ ಆಧಾರ್ ಕಾರ್ಡ್‍ನಲ್ಲಿರುವ ಹೆಸರು ಮತ್ತು ವಿಳಾಸದಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಸಹ ಪ್ರತಿ ತಿಂಗಳು ಬರುವ 2ಸಾವಿರ ರೂ.ನಗದು ವರ್ಗಾವಣೆ ತಕ್ಷಣವೇ ಸ್ಥಗಿತಗೊಳ್ಳಲಿದೆ. ಜತೆಗೆ, ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನೆಗಾಗಿ ಸರಕಾರ ವಿಶೇಷ ತನಿಖಾ ತಂಡ ಅಥವಾ ಗಣತೀದಾರರನ್ನು ನಿಯೋಜಿಸಲಿದೆ. ಈ ಅಧಿಕಾರಿಗಳು ನೇರವಾಗಿ ಫಲಾನುಭವಿಗಳ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಕೇವಲ ದಾಖಲೆಗಳ ಪರಿಶೀಲನೆ ಮಾತ್ರವಲ್ಲದೆ, ಮಹಿಳೆಯರ ಮುಖದ ಗುರುತು ಹಿಡಿಯುವ ‘ಫೇಶಿಯಲ್ ದೃಢೀಕರಣ’ ಹಾಗೂ ಜಿಪಿಎಸ್ ಆಧಾರಿತ ಮನೆ ಫೋಟೋವನ್ನು ಸ್ಥಳದಲ್ಲೇ ಅಪ್‍ಲೋಡ್ ಮಾಡಿಕೊಳ್ಳಲಿದ್ದಾರೆ.

ಪ್ರಕ್ರಿಯೆ ಯಾವಾಗ?

ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡ ತಕ್ಷಣವೇ ಈ ಮರುಪರಿಶೀಲನಾ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಈಗಾಗಲೇ ಈ 17 ಪ್ರಶ್ನೆಗಳ ಹೊಸ ಅರ್ಜಿ ನಮೂನೆ ಮುಖ್ಯಮಂತ್ರಿಗಳ ಕಚೇರಿಯಿಂದ ಅಂತಿಮ ಒಪ್ಪಿಗೆ ಸಿಗಬೇಕಾಗಿದ್ದು, ಮುಖ್ಯಮಂತ್ರಿ ಒಪ್ಪಿಗೆ ನೀಡಿದ ತಕ್ಷಣವೇ ಅಧಿಕಾರಿಗಳು ಪ್ರಕ್ರಿಯೆ ಕೈಗೆತ್ತಿಕೊಳ್ಳಲಿದ್ದಾರೆ. ತೆರಿಗೆ ಪಾವತಿದಾರರು ಮತ್ತು ಸರಕಾರಿ ನೌಕರರನ್ನು ಯೋಜನೆಯಿಂದ ಹೊರಗಿಡಲು ಈ ಕ್ರಮ ಕೈಗೊಳ್ಳಲಾಗಿದೆ.

Categories
Uncategorized

– ತೀರ್ಥಹಳ್ಳಿ: ಪೆಟ್ರೋಲ್ ಬೆಂಕಿಗೆ ನುಗ್ಗಿ ಆಯಿಲ್, ಹಣ ಕದ್ದ ಕಳ್ಳರು! • ಮೂಡಿಗೆರೆ: ಬಸ್ ಮತ್ತು ಸ್ಕೂಟಿ ಭೀಕರ ಅಪಘಾತ; ಸವಾರ ಸಾವು • ಚಿಕ್ಕಮಗಳೂರು: ವಿದ್ಯುತ್ ಶಾಕ್ ಬೆದರಿ ಪರಾರಿಯಾದ ಒಂಟಿ ಸಲಗ • ಶಿವಮೊಗ್ಗ: ಲಂಚ ಪಡೆವಾಗ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ •ಸೊರಬ: ದೇವಾಲಯಗಳ ಕಾಣಿಕೆಹುಂಡಿ ಕಳ್ಳತನ; ಆರೋಪಿ ಬಂಧನ

ತೀರ್ಥಹಳ್ಳಿ: ತೀರ್ಥಹಳ್ಳಿ ಕೊಪ್ಪ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್ ನಲ್ಲಿ ಆಯಿಲ್ ರೂಮಿನ ಮಾಡಿನ ಶೀಟನ್ನು ಕೊರೆದು ಕಳ್ಳರು ಒಳನುಗ್ಗಿ ಆಯಿಲ್ ಬಾಕ್ಸ್ಗಳು ಹಾಗೂ ನಗದು ಹಣವನ್ನೂ ಕೊಂಡೊಯ್ದಿದ್ದಾರೆ.
ಆಯಿಲ್ ರೂಮಿನ ಕೊಠಡಿಯ ಕಿಟಕಿಯ ಗ್ಲಾಸು ಒಡೆದು ಆಫೀಸು ರೂಮಿಗೂ ನುಗ್ಗಿದ ಕಳ್ಳರು ಕಂಪ್ಯೂಟರ್ ಹಾಗೂ ಪೋಡಕ್ಟ್ ಬರುವ ಸಿಸ್ಟಮ್ ಗಳನ್ನೂ ಡ್ಯಾಮೇಜ್ ಮಾಡಿರುವುದರಿಂದ ಬಂಕಿನಲ್ಲಿ ಗ್ರಾಹಕರಿಗೆ ಇಂಧನವನ್ನೂ ಪೂರೈಸದಂತಾಗಿದೆ. ಆಫೀಸ್ ರೂಮಿನ ಸಿಸಿ ಕ್ಯಾಮರಾದ ಮೇಲೆ ಕಳ್ಳ ಬಟ್ಟೆಯೊಂದನ್ನು ಹಾಕಿದ್ದಾನೆ. ಬಂಕಿನ ಮಾಲೀಕರಾದ ಗೌತಮ್ ಕೊಳಾವರ ಅವರು ಈ ಸಂಬಂಧ ತೀರ್ಥಹಳ್ಳಿ ಪೋಲಿಸರಲ್ಲಿ ದೂರು ನೀಡಿ ಶೀಘ್ರ ಕಳ್ಳರನ್ನು ಪತ್ತೆ ಹಚ್ಚುವಂತೆ ವಿನಂತಿಸಿದ್ದಾರೆ. ಪೆಟ್ರೋಲ್ ಬಂಕ್ ವಿತರಕರ ಸಂಘದವರು ಕೂಡ ಕಳ್ಳರನ್ನು ಶೀಘ್ರ ಪತ್ತೆ ಹಚ್ಚುವಂತೆ ಪೋಲಿಸರಿಗೆ ಕೋರಿದ್ದಾರೆ.

•ಮೂಡಿಗೆರೆ: ಸಾರಿಗೆ ಬಸ್ ಮತ್ತು ಸ್ಕೂಟಿ ಅಪಘಾತ; ಸವಾರ ಸಾವು

ಮೂಡಿಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಗೆ ಸ್ಕೂಟಿ ಢಿಕ್ಕಿ ಹೊಡೆದ ಘಟನೆ, ಶುಕ್ರವಾರದಂದು ಗೋಣಿಬೀಡು ಸಮೀಪದ ಕಸ್ಕೇಬೈಲ್ ಎನ್ನುವಲ್ಲಿ ನಡೆದಿದೆ. ಮೂಡಿಗೆರೆಗೆ ತೆರಳುತ್ತಿದ್ದ ಸಾರಿಗೆ ಬಸ್ ಎದುರಿಗೆ ಸ್ಕೂಟಿ ವೇಗವಾಗಿ ಮತ್ತು ಆಜಾಗರೂಕತೆಯಿಂದ ಬಂದ ಪರಿಣಾಮವಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮವಾಗಿ ಸ್ಕೂಟಿಯನ್ನು ಚಲಾಯಿಸುತ್ತಿದ್ದ ಕಮ್ಮರಗೋಡು ಮೂಲದ ಸವಾರ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

•ಚಿಕ್ಕಮಗಳೂರು: ವಿದ್ಯುತ್ ಶಾಕ್ ಗೆ ಬೆದರಿ ಪರಾರಿಯಾದ ಒಂಟಿ ಸಲಗ

ಚಿಕ್ಕಮಗಳೂರು: ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದ ಘಟನೆ, ಬಸವರಹಳ್ಳಿ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ರಸ್ತೆಯಲ್ಲಿ ರಾಜಾರೋಷವಾಗಿ ಹೆಜ್ಜೆ ಹಾಕುತ್ತಿದ್ದ ಒಂಟಿ ಸಲಗವು, ಬಳಿಕ ರಸ್ತೆಯನ್ನು ದಾಟಿ ಪಕ್ಕದಲ್ಲಿದ್ದ ಕಾಫಿ ತೋಟಕ್ಕೆ ನುಗ್ಗಲು ಪ್ರಯತ್ನಿಸಿದೆ. ಆಗ ತೋಟದ ರಕ್ಷಣೆಗೆಂದು ಹಾಕಲಾಗಿದ್ದ ಸೋಲಾರ್ ಬೇಲಿಯತ್ತ ಸಾಗಿ, ಅದನ್ನು ಮುಂಭಾಗದ ಕಾಲುಗಳಿಂದ ಮುರಿದು ಹಾಕಲು ಪ್ರಯತ್ನಿಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸೋಲಾರ್ ಬೇಲಿಯು ಭದ್ರವಾಗಿದ್ದು, ಶಾಕ್ ಕೂಡ ಹೊಡೆದ ಪರಿಣಾಮವಾಗಿ ಒಂಟಿ ಸಲಗದ ಯೋಜನೆ ವಿಫಲವಾಗಿದೆ. ಆದ್ದರಿಂದ ಸೋಲಾರ್ ಬೇಲಿಯಿಂದ ಹಿಂದೆ ಸರಿದು, ತಾನು ಮೊದಲಿದ್ದ ಸ್ಥಳಕ್ಕೆ ಹಿಂತಿರುಗಲು ರಾಜ್ಯ ಹೆದ್ದಾರಿಯಲ್ಲೇ ಹೆಜ್ಜೆ ಹಾಕಿದೆ ಎನ್ನುವ ಮಾಹಿತಿ ಲಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಮತ್ತು ಕಾಫಿ ಬೆಳೆಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

•ಶಿವಮೊಗ್ಗ: ಲೋಕಾಯುಕ್ತರ ಬಲೆಗೆ ಬಿದ್ದ ಅಗ್ನಿಶಾಮಕ ಅಧಿಕಾರಿ

ಶಿವಮೊಗ್ಗ: ನಿರಾಪೇಕ್ಷಣಾ ಪತ್ರವನ್ನು ನೀಡಲು ಅಗ್ನಿಶಾಮಕ ಅಧಿಕಾರಿ 1ಲಕ್ಷ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಡೆದಿದೆ. ಶಿಕಾರಿಪುರದ ಖಾಸಗಿ ಶಾಲೆಯ ನೂತನ ಕಟ್ಟಡಕ್ಕೆ ಅಗ್ನಿಶಾಮಕ ಇಲಾಖೆಯಿಂದ ನಿರಪೇಕ್ಷಣ ಪತ್ರವನ್ನು ನೀಡಬೇಕಾದಂತಹ ಸಂದರ್ಭದಲ್ಲಿ ಅದರ ಅಧಿಕಾರಿಯಾದ ಅಶೋಕ್ ಕುಮಾರ್ ಅವರು 1ಲಕ್ಷ ರೂಪಾಯಿಗಳ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕಾರಿಪುರದ ಅನೂಪ್ ಎನ್ನುವವರು ಲೋಕಾಯುಕ್ತ ಪೊಲೀಸರಿಗೆ ದೂರನ್ನು ನೀಡಿದ್ದರು. ದೂರಿನ ಆಧಾರದ ಮೇಲೆ ಎಸ್ ಪಿ ಆ್ಯಂಟನಿ ಜಾನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ವೀರಬಸಪ್ಪ, ರುದ್ರೇಶ್ ಮತ್ತು ಲೋಕಾಯುಕ್ತ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿ, ಅನೂಪ್ ಅವರಿಂದ ಅಶೋಕ್ ಕುಮಾರ್ 1ಲಕ್ಷ ರೂಪಾಯಿ ಹಣವನ್ನು ಲಂಚವಾಗಿ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ 1ಲಕ್ಷ ರೂಪಾಯಿ ಹಣವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ.‌ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

•ಸೊರಬ: ದೇವಾಲಯಗಳ ಕಾಣಿಕೆ ಹುಂಡಿ ಕಳ್ಳತನ; ಆರೋಪಿ ಬಂಧನ

ಸೊರಬ: ಕುಂಬತ್ತಿ ದುರ್ಗಾಂಬ ದೇವಸ್ಥಾನದಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ.‌ ಆಗಸ್ಟ್ 26ರಂದು ನಡೆದ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ, ಸಿಪಿಐ ಮಹಾಂತೇಶ್ ಕಂಬಿ ಅವರ ಮೇಲ್ವಿಚಾರಣೆಯಲ್ಲಿ, ಪಿಎಸ್ಐ ನವೀನ್ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ವಿನಯ್ ಅವರನ್ನು ಒಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.‌ ಇದೀಗ ತಂಡವು ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಶಿಕಾರಿಪುರದ ಪುಣೆದಹಳ್ಳಿ ನಿವಾಸಿಯಾದ ರಾಕೇಶ್ ಎಂದು ಗುರುತಿಸಲಾಗಿದೆ.

Categories
Uncategorized

•ಪುತ್ತೂರು: ಅಕ್ರಮ ಜಾನುವಾರು ಸಾಗಾಟ •ಕಾರ್ಕಳ: ಜುಗಾರಿ ಅಡ್ಡೆ ಮೇಲೆ ದಾಳಿ •ಬ್ರಹ್ಮಾವರ: ಲಕ್ಷಾಂತರ ರೂಪಾಯಿ ವಂಚನೆ; •ಕುಂದಾಪುರ: ಕೋಟಿತೀರ್ಥ ಕೆರೆಗೆ ಹಾರಿ ಯುವಕ ಆತ್ಮಹತ್ಯೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ •ಪುತ್ತೂರು: ಅಕ್ರಮ ಜಾನುವಾರು ಸಾಗಾಟ

ಪುತ್ತೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ, ಬುಧವಾರದಂದು ಪಡುಮನ್ನೂರು ಗ್ರಾಮದ ಪದಡ್ಕ ಎನ್ನುವಲ್ಲಿ ನಡೆದಿದೆ. ಪರವಾನಿಗೆ ರಹಿತವಾಗಿ ಪಿಕಪ್ ವಾಹನ ಒಂದರಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಪದಡ್ಕ ಜಂಕ್ಷನ್ ಬಳಿ ವಾಹನವನ್ನು ಬೆನ್ನಟ್ಟಿದಾಗ ಪರವಾನಿಗೆಯ ಜೊತೆಗೆ ವೈದ್ಯಾಧಿಕಾರಿಗಳ ಪ್ರಮಾಣ ಪತ್ರ ಕೂಡ ಇಲ್ಲದಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪಿಕಪ್ ವಾಹನ ಚಾಲಕ ಕುಂಟಾರು ಆಡೂರು ಮಿಂಚಿನಪದವು ನಿವಾಸಿ ಸೀತಾರಾಮ ಮಣಿಯಾಣಿ, ಮುಳ್ಳೇರಿಯ ಕುಂಟಾರು ಪೆರಿಕೊಚ್ಚಿ ನಿವಾಸಿ ಕೇಲು ಮಣಿಯಾಣಿ ಮತ್ತು ಪಿಕಪ್ ವಾಹನದ ಮಾಲೀಕನ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಕಾರ್ಕಳ: ಮಟ್ಕಾ ಜುಗಾರಿ ಅಡ್ಡೆ ಮೇಲೆ ದಾಳಿ

ಕಾರ್ಕಳ: ಮಟ್ಕಾ ಜುಗಾರಿ ನಡೆಸುತ್ತಿದ್ದ ವಾಣಿಜ್ಯ ಸಂಕೀರ್ಣ ಕಟ್ಟಡವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ, ಕಸಬ ಗ್ರಾಮದ ಕಲ್ಲೊಟ್ಟೆ- ಪತ್ತೊಂಜಿಕಟ್ಟೆ ಬಳಿ ನಡೆದಿದೆ. ಸಾಗರ್ ಎನ್ನುವ ವ್ಯಕ್ತಿಯು ಮಟ್ಕಾ ಜುಗಾರಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ದಾಳಿ ನಡೆಸಿದಾಗ ಆತ ಕಾರ್ಕಳ ತಾಲ್ಲೂಕಿನ ಸುತ್ತಮುತ್ತಲಿನ ಭಾಗಗಳಲ್ಲಿ ಮಟ್ಕಾ ಅಷ್ಟೇ ಅಲ್ಲದೆ ಗಾಂಜಾ ಕೂಡ ಮಾರಾಟ ಮಾಡುತ್ತಿದ್ದ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಸಾಗರ್ ಬಳಿ ಇದ್ದ 3440ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಪಡಿಸಿದ್ದಾರೆ.

•ಬ್ರಹ್ಮಾವರ: ಲಕ್ಷಾಂತರ ರೂಪಾಯಿ ವಂಚನೆ

ಬ್ರಹ್ಮಾವರ: ಸಾಲವನ್ನು ನೀಡುವುದಾಗಿ ನಂಬಿಸಿ, 7 ಲಕ್ಷ ರೂಪಾಯಿ ಪಡೆದುಕೊಂಡು ವಂಚಿಸಿದ ಹಿನ್ನೆಲೆಯಲ್ಲಿ, ವಿನಯ್ ಕುಮಾರ್ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ವಾರಂಬಳ್ಳಿಯಲ್ಲಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ. ಆರೋಪಿಯು ಬೀಜಾಡಿಯಲ್ಲಿರುವ ತನ್ನ ಏಕದಂತ ಸೌಹಾರ್ದ ಸಹಕಾರಿ ಸಂಘದಲ್ಲಿ 5 ಲಕ್ಷ ರೂಪಾಯಿಗಳಷ್ಟು ಠೇವಣಿ ಇಟ್ಟಲ್ಲಿ, 15ಲಕ್ಷ ರೂಪಾಯಿ ಸಾಲ ನೀಡುವುದಾಗಿ ವಿನಯ್ ಕುಮಾರ್ ಅವರಿಗೆ ತಿಳಿಸಿದ್ದ ಎನ್ನಲಾಗಿದೆ. ಹೀಗಾಗಿ ವಿನಯ್ ಕುಮಾರ್ ಅವರು ಸಹಕಾರಿಯ ಸದಸ್ಯತ್ವವನ್ನು ಪಡೆದುಕೊಂಡು 5ಲಕ್ಷ ರೂಪಾಯಿಗಳಷ್ಟು ಠೇವಣಿ ಇರಿಸಿ, ರಸೀದಿ ಮತ್ತು ಬಾಂಡ್ ಗಳನ್ನು ಪಡೆದುಕೊಂಡಿದ್ದರು ಎನ್ನುವ ಮಾಹಿತಿ ಲಭಿಸಿದೆ. ಬಳಿಕ ಆರೋಪಿಯು 15ಲಕ್ಷ ಸಾಲವನ್ನು ನೀಡದೆ ಠೇವಣಿ ಇರಿಸಿದ್ದ 5ಲಕ್ಷ ರೂಪಾಯಿ ಮತ್ತು ಹೆಚ್ಚುವರಿಯಾಗಿ ಪಡೆದ 2 ಲಕ್ಷ ರೂಪಾಯಿ ಸೇರಿ ಒಟ್ಟು 7ಲಕ್ಷ ರೂಪಾಯಿಗಳನ್ನು ಹಿಂತಿರುಗಿಸದೆ ವಂಚಿಸಿದ್ದಾರೆ. ಪರಿಣಾಮವಾಗಿ ವಿನಯ್ ಕುಮಾರ್ ಅವರಿಗೆ ಏನು ಮಾಡಲು ತೋಚದೆ, ಮಾನಸಿಕವಾಗಿ ನೊಂದು ಕಳೆದ ವರ್ಷ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗನ ಸಾವಿನ ನಂತರ ವಿನಯ್ ಕುಮಾರ್ ಅವರ ಪೋಷಕರು ಆರೋಪಿಗೆ ಕರೆ ಮಾಡಿ ಹಣವನ್ನು ಹಿಂತಿರುಗಿಸು ಎಂದು ಕೇಳಿದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಿನಯ್ ಕುಮಾರ್ ಅವರ ತಾಯಿಯು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಮತ್ತು ನ್ಯಾಯಾಲಯದ ನಿರ್ದೇಶನದಂತೆ ಅಪರಾಧ ಕ್ರಮ 82/2026 ಭಾರತೀಯ ನ್ಯಾಯ ಸಂಹಿತೆ ಕಲಂ 108, 351 ಮತ್ತು 352ರ ಅಡಿಯಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

•ಕುಂದಾಪುರ: ಕೋಟಿತೀರ್ಥ ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಕುಂದಾಪುರ: ಯುವಕನೊಬ್ಬ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಬುಧವಾರದಂದು ಕೋಟೇಶ್ವರದಲ್ಲಿ ನಡೆದಿದೆ. ಮೃತ ಯುವಕನನ್ನು ಹೊದ್ರಾಳಿ ಕೊಳನಕಟ್ಟೆ ನಿವಾಸಿ, ಕುಂದಾಪುರದ ಹೆಂಚಿನ ಕಾರ್ಖಾನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪದ್ಮನಾಭ ಆಚಾರ್ಯ ಎಂದು ಗುರುತಿಸಲಾಗಿದೆ. ಪದ್ಮನಾಭ ಅವರು ಕಳೆದ ನಾಲ್ಕು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು, ಮಂಗಳವಾರದಂದು ಬೆಳಿಗ್ಗೆ ಮನೆಯಿಂದ ಹೊರಟವರು ರಾತ್ರಿಯವರೆಗೂ ಮನೆಗೆ ಹಿಂತಿರುಗಿ ಬಂದಿರಲಿಲ್ಲ ಎನ್ನಲಾಗಿದೆ. ಇದರಿಂದ ಆತಂಕಕ್ಕೆ ಒಳಗಾದ ಪದ್ಮನಾಭ ಅವರ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ದೇವಸ್ಥಾನದ ಸಮೀಪದಲ್ಲಿ ಅವರ ದ್ವಿಚಕ್ರ ವಾಹನ ಮತ್ತು ಕೋಟಿತೀರ್ಥ ಪುಷ್ಕರಣಿಯ ಮೆಟ್ಟಿಲ ಮೇಲೆ ಅವರ ಚಪ್ಪಲಿ ಹಾಗೂ ಟೋಪಿ ಪತ್ತೆಯಾಯಿತು ಎನ್ನುವ ಮಾಹಿತಿ ಲಭಿಸಿದೆ. ಹೀಗಾಗಿ ಪದ್ಮನಾಭ ಅವರು ಕೆರೆಗೆ ಹಾರಿರುವ ಕುರಿತು ಅನುಮಾನ ವ್ಯಕ್ತವಾಯಿತು. ವಿಚಾರ ತಿಳಿದ ತಕ್ಷಣ ಬುಧವಾರ ಬೆಳಿಗ್ಗೆ ಸ್ಥಳೀಯರಾದ ಸುಧೀರ್ ಕುಮಾರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಮತ್ತು ಸತ್ಯನಾರಾಯಣ ಮಂಜ ಮೊದಲಾದವರು ದೋಣಿಯ ಸಹಾಯದಿಂದ ಶೋಧನಾ ಕಾರ್ಯವನ್ನು ಕೈಗೊಂಡರು ಎನ್ನುವ ಸಂಗತಿ ತಿಳಿದುಬಂದಿದೆ. ಆಗ 9:೦೦ಗಂಟೆಯ ಸುಮಾರಿಗೆ ಪದ್ಮನಾಭ ಅವರ ಮೃತದೇಹ ಪುಷ್ಕರಣಿಯಲ್ಲಿ ಕಂಡುಬಂದಿದ್ದು, ಮುಳುಗು ತಜ್ಞರಾದ ಈಶ್ವರ ಮಲ್ಪೆ ಮತ್ತು ಅವರ ತಂಡವು ಸ್ಥಳೀಯ ಈಜುಗಾರರ ಸಹಕಾರದೊಂದಿಗೆ ಮೃತದೇಹವನ್ನು ಮೇಲಕ್ಕೆ ತಂದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.