Categories
Uncategorized

ಹಳ್ಳಿಗಳ ಬ್ಯಾಂಕುಗಳಲ್ಲಿ ಕನ್ನಡೇತರ ಸಿಬ್ಬಂದಿ: ಜನರ ಪರದಾಟ! – ಬ್ಯಾಂಕ್ ವಿಲೀನವಾಗಿದ್ದೆ ದೊಡ್ಡ ಸಮಸ್ಯೆ!: ಗ್ರಾಹಕರಿಗೆ ತೊಂದರೆ – ಕನ್ನಡ ಬರಲ್ಲ.. ಹೇಳೋಕೆ ಆಗಲ್ಲ: ಸಮಸ್ಯೆ ಯಾರಿಗೆ ಹೇಳೋದು?

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕನ್ನಡವೇ ಪ್ರಧಾನವಾಗಿದ್ದು, ಅಲ್ಲಿನ ನಿವಾಸಿಗಳು ಅನಕ್ಷರಸ್ಥರು, ರೈತರು, ಕೃಷಿ ಕಾರ್ಮಿಕರೇ ಆಗಿದ್ದಾರೆ. ಆದರೆ ಇದೀಗ ಅನೇಕ ರಾಷ್ಟ್ರೀಯ ಬ್ಯಾಂಕ್ ಸಿಬ್ಬಂದಿಗಳು ಕನ್ನಡೇತರರಾಗಿರುವುದರಿಂದ ಸ್ಥಳೀಯರು ತಮ್ಮ ಬ್ಯಾಂಕ್ ಕೆಲಸಗಳನ್ನು ಮಾಡಿಕೊಳ್ಳಲು ಪರದಾಡುವಂತಾಗಿದೆ.
ಸಾಮಾನ್ಯ ಜನರಿಗೆ ಅನುಕೂಲವಾಗಲೆಂದು ಗ್ರಾಮೀಣ ಭಾಗಗಳಲ್ಲಿ ಬ್ಯಾಂಕ್ ಗಳನ್ನು ತೆರೆಯಲಾಗಿದ್ದು, ಇತರೆ ರಾಷ್ಟ್ರೀಯ ಬ್ಯಾಂಕ್ ಗಳಿಗೆ ಹೋಲಿಸಿದರೆ ಹಳ್ಳಿಗಾಡಿನ ಜನರಿಗೆ ಗ್ರಾಮೀಣ ಬ್ಯಾಂಕ್ ಗಳ ಸೇವೆಯಿಂದ ಹೆಚ್ಚು ಪ್ರಯೋಜನವಾಗಿದೆ. ಆದರೆ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಗೆ ಕನ್ನಡ ಬರಲ್ಲ, ಜನರಿಗೆ ಕನ್ನಡ ಬಿಟ್ಟು ಬೇರೆ ಬರಲ್ಲ. ಆದ್ದರಿಂದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಕೂಡಲೇ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ನಿಯಮ ಮಾಡಿ ಆಯಾ ರಾಜ್ಯದಲ್ಲಿ ಆಯಾ ರಾಜ್ಯದ ಭಾಷೆ ಬರುವ ಸಿಬ್ಬಂದಿ ನೇಮಕಾತಿ ಮಾಡಿದಲ್ಲಿ ಬ್ಯಾಂಕಿಗೂ ಒಳ್ಳೆಯದು… ಗ್ರಾಹಕರಿಗೂ ಕೂಡ ಒಳ್ಳೆಯದು ಎಂಬ ಅಗ್ರಹ ಜನರಿಂದ ವ್ಯಕ್ತವಾಗಿದೆ.

ಬ್ಯಾಂಕ್ ವಿಲೀನವಾಗಿದ್ದೆ ದೊಡ್ಡ ಸಮಸ್ಯೆ!

ಬರೆಯಲು ಬಾರದ ಅನಕ್ಷರಸ್ಥರಿಗೆ ಸ್ವತಃ ಬ್ಯಾಂಕ್ ಸಿಬ್ಬಂದಿಗಳೇ ಸಹಾಯ ಮಾಡುವುದು, ಸ್ವಲ್ಪ ಹೆಚ್ಚು ಕಡಿಮೆಯಾದರೂ ತಾಳ್ಮೆಗೆಡದೆ ಕಾಗದ ಪತ್ರಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡುವುದು ಮಾಡುತ್ತಿದ್ದರು. ಆದರೆ, ಗ್ರಾಮೀಣ ಬ್ಯಾಂಕ್ ಗಳನ್ನೆಲ್ಲ ವಿಲೀನಗೊಳಿಸಿದರ ಪರಿಣಾಮವಾಗಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಾತ್ರ ಅಸ್ತಿತ್ವದಲ್ಲಿದೆ. ಹೀಗಾಗಿ ಈ ಬ್ಯಾಂಕ್ ಗೆ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ದೇಶದ ಯಾವುದೇ ರಾಜ್ಯದ ಶಾಖೆಗಳಿಂದ ವರ್ಗಾಯಿಸಬಹುದು ಎನ್ನುವ ನಿಯಮ ಜಾರಿಗೆ ಬಂದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.

ಕನ್ನಡ ಬರಲ್ಲ.. ಹೇಳೋಕೆ ಆಗಲ್ಲ…!

ಹಳ್ಳಿಗಳ ಬ್ಯಾಂಕಿಗೆ ವರ್ಗವಾಗಿ ಬಂದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕನ್ನಡದಲ್ಲಿ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗ್ರಾಹಕರು ತಮ್ಮ ಬ್ಯಾಂಕ್ ಸೇವೆಗಳನ್ನು‌ ಪಡೆಯಲು ಸಂವಹನದ ಅಡಚಣೆಯಿಂದಾಗಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ದನಿ ಎತ್ತಬೇಕು ಕನ್ನಡ ಪರ ಸಂಘಟನೆಗಳು!

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಬಸನಗೌಡ ಪೊಲೀಸ ಪಾಟೀಲ ಮಾತನಾಡಿ, “ಕರ್ನಾಟಕದ ಹೆಸರಿನ ಬ್ಯಾಂಕ್ ಗಳಲ್ಲಿ ಕನ್ನಡ ಬಲ್ಲ ಅಧಿಕಾರಿಗಳೇ ಇಲ್ಲವೆಂದರೆ ಹೇಗೆ? ಈ ಸಮಸ್ಯೆಯನ್ನು ಸರಿಪಡಿಸಲು ಆಡಳಿತ ಮಂಡಳಿ ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಎಲ್ಲಾ ಬ್ಯಾಂಕುಗಳ ಕೇಂದ್ರ ಕಛೇರಿಯ ಬಳಿ ಪ್ರತಿಭಟನೆಯನ್ನು ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಜನ.. ತೊಂದರೆಗೊಳಗಾದವರು ಹೇಳೋದು ಏನು?

ಬ್ಯಾಂಕುಗಳ ಶಾಖೆಗಳಲ್ಲಿ ಕನ್ನಡಬಾರದ ಅಧಿಕಾರಿಗಳಿದ್ದರೆ, ನಾವು ಹೇಳಿದ್ದು ಅವರಿಗೆ ಗೊತ್ತಾಗುವುದಿಲ್ಲ. ಅವರ ಮಾತು ನಮಗೆ ಅರ್ಥವಾಗುವುದಿಲ್ಲ. ಇದರಿಂದಾಗಿ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಕನ್ನಡಬಾರದ ಸಿಬ್ಬಂದಿಗಳಿಂದಾಗಿ ಗ್ರಾಹಕರು ಮತ್ತು ಅಧಿಕಾರಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೀಗಾಗಿ ಕೇವಲ ಕರ್ನಾಟಕ ಮೂಲದವರನ್ನು ಮಾತ್ರ ರಾಜ್ಯದ ಶಾಖೆಗಳಿಗೆ ನೇಮಿಸುವ ನಿಟ್ಟಿನಲ್ಲಿ ವರ್ಗಾವಣೆ ನೀತಿಯನ್ನು ಬದಲಾಯಿಸಬೇಕು, ಇಲ್ಲವೆಂದಾದರೆ ಇತರೆ ಭಾಗಗಳಿಂದ ವರ್ಗವಾಗಿ ಕರ್ನಾಟಕಕ್ಕೆ ಆಗಮಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸಬೇಕು. ಬ್ಯಾಂಕ್ ಆಡಳಿತ ಮಂಡಳಿ ಈ ಬಗ್ಗೆ ತಕ್ಷಣ ಗಮನಿಸಬೇಕು ಎಂಬುದು ಕೋಟಿ ಕೋಟಿ ಕನ್ನಡಿಗರ ಅಗ್ರಹ.

Categories
Uncategorized

ಬಂದ್ ಇಲ್ಲ…ಬ್ಯಾಂಕ್ ಸೇವೆಗೆ ಅಡಚಣೆ ಇಲ್ಲ…! – ಬ್ಯಾಂಕ್ ಮುಷ್ಕರವನ್ನು ಮುಂದೂಡಿದ ಬ್ಯಾಂಕ್ ನೌಕರರು – ಎಲ್ಲಾ ಬ್ಯಾಂಕ್ ಶಾಖೆಗಳು ಎಂದಿನಂತೆ ಸೇವೆ

ಬೆಂಗಳೂರು/ನವದೆಹಲಿ: ಸೆಪ್ಟೆಂಬರ್ 28ರ ಸೋಮವಾರದಿಂದ ಸೆಪ್ಟೆಂಬರ್ 30ರ ಬುಧವಾರದವರೆಗೆ ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರ ನಡೆಯಲಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರದಂದು ಕೂಡ ಬ್ಯಾಂಕ್ ಕಾರ್ಯನಿರ್ವಹಣೆ ಮಾಡಿತು. ಆದರೆ, ಇದೀಗ ಬಂದ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 28ರ ಸೋಮವಾರದಿಂದ ಪ್ರಾರಂಭಗೊಳ್ಳಬೇಕಿದ್ದ ಬ್ಯಾಂಕ್ ಮುಷ್ಕರವು ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ.
ಭಾರತೀಯ ಬ್ಯಾಂಕ್ ಗಳ ಸಂಘ ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನಡುವೆ ಮಹತ್ವಪೂರ್ಣವಾದ ಮಾತುಕತೆ ನಡೆದಿದ್ದು, ಅದು ಯಶಸ್ವಿಗೊಂಡ ಹಿನ್ನೆಲೆಯಲ್ಲಿ, ಅಂದರೆ ಮಾತುಕತೆಯಿಂದ ಬ್ಯಾಂಕ್ ನೌಕರರಿಗೆ ಸಕಾರಾತ್ಮಕ ಫಲಿತಾಂಶ ದೊರೆತಿರುವ ಪರಿಣಾಮವಾಗಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸೋಮವಾರದಿಂದ ಎಲ್ಲಾ ಬ್ಯಾಂಕ್ ಶಾಖೆಗಳು ಮತ್ತು ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ದೇಶದ ಮತ್ತು ರಾಜ್ಯದ ವಿವಿಧ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಅಧಿಕೃತ ಮಾಹಿತಿಯನ್ನು ನೀಡಿದೆ. ಹೀಗಾಗಿ ಗ್ರಾಹಕರು ತಮ್ಮ ಬ್ಯಾಂಕ್ ಕೆಲಸಗಳನ್ನು ಮಾಡಿಕೊಳ್ಳಲು ಶಾಖೆಗಳಿಗೆ ಭೇಟಿ ನೀಡಲು ಯಾವುದೇ ರೀತಿಯ ಸಮಸ್ಯೆ ಇಲ್ಲ.

Categories
Uncategorized

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಹತ್ವದ ಸುತ್ತೋಲೆ! – ಗ್ರಾಮ ಪಂಚಾಯತ್ , ತಾಪಂ, ಜಿಪಂ ಚುನಾವಣೆ – ಅಕ್ಟೋಬರ್ ಕೊನೆಯ ವಾರದಲ್ಲಿ ಘೋಷಣೆ ಸಾಧ್ಯತೆ – ಮೀಸಲಾತಿ ಹಂಚಿಕೆ ಮತ್ತು ವಾರ್ಡ್ ಮರುವಿಂಗಡಣೆ ಪೂರ್ಣ

ಬೆಂಗಳೂರು: ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಕರ್ನಾಟಕ ಚುನಾವಣಾ ಆಯೋಗವು ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಗವು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರೊಂದಿಗೆ ಸಾಲುಸಾಲಾಗಿ ಸಭೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ.
ರಾಜ್ಯದಲ್ಲಿ 5950 ಗ್ರಾಮ ಪಂಚಾಯಿತಿಗಳಿದ್ದು, 2020 ಡಿಸೆಂಬರ್ ತಿಂಗಳಿನಲ್ಲಿ, ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿಯ ಸಾರ್ವತ್ರಿಕ ಚುನಾವಣೆಗಳು ನಡೆದಿದ್ದವು. ನಂತರ ಕೋವಿಡ್, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಭರಾಟೆ, ಸಾವು, ಅತಿವೃಷ್ಟಿ ಅನಾವೃಷ್ಟಿ ಸೇರಿದಂತೆ ಹಲವಾರು ಕಾರಣಗಳಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಇದೀಗ ಬಹುತೇಕ ಪಂಚಾಯಿತಿಗಳ ಅಧಿಕಾರಾವಧಿ ಮುಕ್ತಾಯಗೊಂಡು ಬಹಳ ದಿನಗಳೇ ಆಗಿವೆ.‌
ಕೇವಲ ಗ್ರಾಮ ಪಂಚಾಯಿತಿ ಅಷ್ಟೇ ಅಲ್ಲದೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳು ಕೂಡ ಹಲವಾರು ವರ್ಷಗಳಿಂದ ಬಾಕಿ ಇದ್ದು, ಇದಕ್ಕೆ ಸಂಬಂಧಿಸಿದಂತಹ ಮೀಸಲಾತಿ ಹಂಚಿಕೆ ಮತ್ತು ವಾರ್ಡ್ ಮರುವಿಂಗಡಣೆಯನ್ನು ಸರ್ಕಾರವು ಪೂರ್ಣಗೊಳಿಸಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಎಸ್ಐಆರ್ ಚಟುವಟಿಕೆಗಳು ಕೂಡ ಈಗಾಗಲೇ ಪೂರ್ಣಗೊಂಡಿದ್ದು, ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಅಂತಿಮ ಮತದಾರರ ಪಟ್ಟಿ ಬಿಡುಗಡೆಗೊಳ್ಳಲಿದ್ದು, ಇದಾದ ಬಳಿಕ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಆಯೋಗವು ತೀರ್ಮಾನಿಸಿದೆ.‌

ಸೆ.29ಕ್ಕೆ ರಾಜ್ಯದ ಚುನಾವಣಾ ಆಯೋಗದ ಮಹತ್ವದ ಸಭೆ

ರಾಜ್ಯದ ಚುನಾವಣಾ ಆಯೋಗವು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಬಿರುಸಿನ ಚಟುವಟಿಕೆ ನಡೆಸಿದ್ದು, ಸಂಬಂಧಿತ ಅಧಿಕಾರಿಗಳಿಗೆ ಸುತ್ತೋಲೆ ಮತ್ತು ಸೂಚನಾ ಪತ್ರವನ್ನು ಹೊರಡಿಸಿದೆ. ಇದರೊಂದಿಗೆ ಆಯೋಗದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 29ರ ಮಂಗಳವಾರದಂದು ಮಹತ್ವಪೂರ್ಣವಾದ ವಿಡಿಯೋ ಸಂವಾದ ಸಭೆಯನ್ನು ಕೂಡ ಏರ್ಪಡಿಸಿದೆ. ಇದಕ್ಕೆ ಬೆಳಗಾವಿ ವಿಭಾಗ, ಕಲಬುರಗಿ ವಿಭಾಗ ಸೇರಿದಂತೆ ರಾಜ್ಯದ ಆಯಾ ಜಿಲ್ಲಾಧಿಕಾರಿಗಳ ಕಛೇರಿಯಿಂದಲೇ ಸಭೆಗೆ ಹಾಜರಾಗುವಂತೆ ಆದೇಶಿಸಲಾಗಿದೆ.

ಮತಗಟ್ಟೆ ಸಿದ್ಧತೆಗೆ ಕ್ರಮ

ಚುನಾವಣೆಗೆ ಆಯೋಗವು ಮತಗಟ್ಟೆ ಮತ್ತು ಮತಪೆಟ್ಟಿಗೆಗಳ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ನಮೂನೆ 1ರಿಂದ 4ರ ಪ್ರಕಾರ ಮತ ಪೆಟ್ಟಿಗೆಗಳ ವಿವರಗಳನ್ನು ಒದಗಿಸುವುದು, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವಂತಹ ಮತಗಟ್ಟೆಗಳ ನಿಖರ ಮಾಹಿತಿಯನ್ನು ಪರಿಶೀಲಿಸುವುದು, ಸಾರ್ವತ್ರಿಕ ಚುನಾವಣೆಯನ್ನು ಸುಗಮವಾಗಿ ನಡೆಸಲು ಜಿಲ್ಲಾವಾರು ಬೇಕಾಗುವಂತಹ ಒಟ್ಟು ಮತಪೆಟ್ಟಿಗೆಗಳ ಲೆಕ್ಕಚಾರ ಕೈಗೊಳ್ಳುವುದು, ದಾಸ್ತಾನಿನಲ್ಲಿರುವ ಮತಪೆಟ್ಟಿಗೆಗಳ ಹೊರತಾಗಿ ಇನ್ನೂ ಎಷ್ಟು ಮತಪೆಟ್ಟಿಗೆಗಳ ಕೊರತೆ ಇದೆ ಎನ್ನುವುದನ್ನು ಗಮನಿಸುವುದು, ಹಾಳಾಗಿರುವ ಅಥವಾ ದುರಸ್ತಿಗೆ ಬಂದಿರುವಂತಹ ಮತಪೆಟ್ಟಿಗೆಗಳನ್ನು ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಹಲವಾರು ಬಗೆಯ ತಯಾರಿಗಳನ್ನು ಚುನಾವಣಾ ಆಯೋಗವು ಕೈಗೊಂಡಿದೆ.
ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣಾ ದಿನಾಂಕವನ್ನು ಆಯೋಗವು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ.

Categories
Uncategorized

ದಸರಾದಂತೆ ಕುರುವಳ್ಳಿ ಗಣಪತಿಗೆ ಅದ್ದೂರಿ ತೆರೆ! – 50 ವರ್ಷದ ಸಂಭ್ರಮದಲ್ಲಿ ತಾಲೂಕಿಗೆ ಮಾದರಿ ಕಾರ್ಯಕ್ರಮ – ಮೆರವಣಿಗೆಯಲ್ಲಿ ತೀರ್ಥಹಳ್ಳಿ ದೇಗುಲಗಳ ದರ್ಶನದ ಟ್ಯಾಬ್ಲೋ – ಸೇತುವೆಗೆ ಬೆಳಕಿನ ಅಲಂಕಾರ: ಕ್ರೇನ್ ಮೂಲಕ ಗಣಪತಿ ವಿಸರ್ಜನೆ

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಗಣೇಶೋತ್ಸವದಲ್ಲಿ ಅದ್ದೂರಿ ಕಾರ್ಯಕ್ರಮ, ಮೆರವಣಿಗೆ, ಅಲಂಕಾರ, ಬೆಳಕಿನ ಅಲಂಕಾರದ ಮೂಲಕ 50ನೇ ವರ್ಷದ ಅದ್ದೂರಿ ಗಣೇಶೋತ್ಸವ ಮಾಡಿದ ಕುರುವಳ್ಳಿ ಗಣಪತಿ ಇದೀಗ ಅದ್ದೂರಿ ತೆರೆ ಕಂಡಿದೆ.
ತೀರ್ಥಹಳ್ಳಿಯಲ್ಲಿ ದಸರಾವನ್ನೇ ನೆನಪಿಸಿದ ಕುರುವಳ್ಳಿ ಗಣಪತಿಯು ಶನಿವಾರ ವಿಸರ್ಜನೆ ಮೂಲಕ ಐತಿಹಾಸಿಕ ಪುಟ ಸೇರಿದೆ.

ಮೆರವಣಿಗೆಯಲ್ಲಿ ತೀರ್ಥಹಳ್ಳಿ ದೇಗುಲಗಳ ದರ್ಶನದ ಟ್ಯಾಬ್ಲೋ

50ನೇ ವರ್ಷದ ಅದ್ದೂರಿ ಗಣೇಶೋತ್ಸವದ ರಾಜಬೀದಿ ಉತ್ಸವದಲ್ಲಿ ಜನಸಾಗರವೇ ಸೇರಿತ್ತು. ಮೆರವಣಿಗೆಯಲ್ಲಿ ತೀರ್ಥಹಳ್ಳಿ ದೇಗುಲಗಳ ದರ್ಶನದ ಟ್ಯಾಬ್ಲೋ, ಸೇತುವೆಗೆ ಬೆಳಕಿನ ಅಲಂಕಾರ, ಕ್ರೇನ್ ಮೂಲಕ ಗಣಪತಿ ವಿಸರ್ಜನೆ ಗಮನ ಸೆಳೆಯಿತು.
ಐದು ದಶಕಗಳ ಸಂಭ್ರಮಕ್ಕೆ ಸಾಕ್ಷಿಯಾದ ಕುರುವಳ್ಳಿ ಗಣಪತಿಯ ರಾಜಬೀದಿ ಉತ್ಸವ ಹಾಗೂ ವಿಸರ್ಜನಾ ಮೆರವಣಿಗೆ ಇಡೀ ತೀರ್ಥಹಳ್ಳಿ ಜನರ ಗಮನ ಸೆಳೆಯಿತು.
ಯುವಕ ಸಂಘ ಕುರುವಳ್ಳಿಯ ಅಧ್ಯಕ್ಷ ಅನಿಲ್, ಕಾರ್ಯದರ್ಶಿ ಕುರುವಳ್ಳಿ ನಾಗರಾಜ್ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ನಡೆದ 50ನೇ ವರ್ಷದ ಗಣೇಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಗಮನ ಸೆಳೆದ ಟ್ಯಾಬ್ಲೋ, ಕಲಾ ತಂಡಗಳು!

ತೀರ್ಥಹಳ್ಳಿ ಮಾರಿಕಾಂಬ ದೇವಸ್ಥಾನ, ಶ್ರೀ ರಾಮೇಶ್ವರ ದೇವಸ್ಥಾನ ಹಾಗೂ ಕುರುವಳ್ಳಿ ಸೇತುವೆ, ರಾಮಮಂಟಪ, ಆಕರ್ಷಕ ಟ್ಯಾಬ್ಲೋಗಳಾದ ಗೊರಿಲ್ಲಾ, ಹುಲಿವೇಷದ ಅಬ್ಬರ, ಸಾಂಪ್ರದಾಯಿಕ ಕುಣಿತ, ಭಜನಾ ತಂಡಗಳ ಭಕ್ತಿ. ವೈಭವ ಹಾಗೂ ಆಕರ್ಷಕ ಗೊಂಬೆಗಳ ಕುಣಿತ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಐವತ್ತು ವರ್ಷಗಳ ಸುದೀರ್ಘ ಪರಂಪರೆಯನ್ನು ಮೆಲುಕು ಹಾಕಿತು. ತೀರ್ಥಹಳ್ಳಿಯ ಸಾಂಸ್ಕೃತಿಕ ವೈಭವ ಮತ್ತು ಸಾರ್ವಜನಿಕರ ಒಗ್ಗಟ್ಟಿನ ಪ್ರತೀಕವಾಗಿ ಐತಿಹಾಸಿಕ ಪುಟ ಸೇರಿದೆ.

Categories
Uncategorized

ಅ.11ರಿಂದ ಕೊಲ್ಲೂರಿನಲ್ಲಿ ನವರಾತ್ರಿ ಉತ್ಸವ! – ಬೈಂದೂರು ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ – ಪ್ರತಿ ದಿನ ವಿಶೇಷ ಪೂಜೆ: ಪ್ರತಿಯೊಬ್ಬರಿಗೂ ಅನ್ನ ಪ್ರಸಾದ

ಬೈಂದೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯದಲ್ಲಿ ಅಕ್ಟೋಬರ್ 11ರ ಭಾನುವಾರದಿಂದ 21ರ ಬುಧವಾರದವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ.
ದೇವಾಲಯದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಕೆ.ಬಾಬು ಶೆಟ್ಟಿ ಅವರು “ದೇವಸ್ಥಾನದ ಸ್ವರ್ಣಮುಖಿ ರಂಗಮಂದಿರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ನವರಾತ್ರಿಯ ಸಂದರ್ಭದಲ್ಲಿ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಶುದ್ಧವಾದ ಕುಡಿಯುವ ನೀರು, ಭೋಜನ ಪ್ರಸಾದ, ವಸತಿ ವ್ಯವಸ್ಥೆ, ಉಚಿತ ಶೌಚಗೃಹ ವ್ಯವಸ್ಥೆ ಮತ್ತು ವಾಹನಗಳ ನಿಲುಗಡೆಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

Categories
Uncategorized

ರಾಜ್ಯದಲ್ಲಿ ಒಣ ಹವೆ; ಅಬ್ಬಾ.. ಬಿಸಿಲು.. ಬಿಸಿಲು! – ಸೆ.28ರಿಂದ ಮಳೆ ಸಾಧ್ಯತೆ: ಎಲ್ಲೆಡೆ ಬರದ ಎಫೆಕ್ಟ್ – ಮಳೆ ಬರದಿದ್ರೆ ದೇವರೇ ಕಾಪಾಡಬೇಕು…!

ಬೆಂಗಳೂರು: ಪ್ರಸ್ತುತ ರಾಜ್ಯಾದ್ಯಂತ ಒಣಹವೆ ಆವರಿಸಿದ್ದು, ಮಳೆಯ‌ ಪ್ರಮಾಣ ಕಡಿಮೆಯಾಗಿದೆ. ಮುಂಬರುವ ದಿನಗಳಲ್ಲಿ ವಾತಾವರಣದಲ್ಲಿ ಮತ್ತೆ ಬದಲಾವಣೆಯಾಗುವ ನಿರೀಕ್ಷೆ ಇದೆ. ಬಿಸಿಲು ಹೆಚ್ಚಳ ಕಾರಣ ಕೃಷಿ ಚಟುವಟಿಕೆ ಮಾಡಲು ಕಷ್ಟವಾಗಿದೆ. ನೀರಿಲ್ಲದೆ ಬೆಳೆ ಒಣಗುತ್ತಿದೆ.
ಸೆಪ್ಟೆಂಬರ್ 28ರ ಸೋಮವಾರದಂದು ಅರಬ್ಬಿ ಸಮುದ್ರದ ಗಾಳಿಯು, ಶ್ರೀಲಂಕಾದ ದಕ್ಷಿಣ ಕರಾವಳಿಯ ಮೂಲಕ ಬಂಗಾಳಕೊಲ್ಲಿಯನ್ನು ಪ್ರವೇಶಿಸಲಿದ್ದು, ತಮಿಳುನಾಡು ಭಾಗದ ಕರಾವಳಿಯ ಮುಖಾಂತರ ಭೂಭಾಗವನ್ನು ಪ್ರವೇಶಿಸುತ್ತದೆ. ಪರಿಣಾಮವಾಗಿ ಕರ್ನಾಟಕದಲ್ಲಿ ಹಿಂಗಾರು ಮಳೆಯ ರೀತಿಯಲ್ಲಿ ಗುಡುಗು ಸಹಿತ ಮಳೆಯ ವಾತಾವರಣ ನಿರ್ಮಾಣಗೊಳ್ಳುತ್ತದೆ ಎನ್ನಲಾಗಿದೆ.
ಕರ್ನಾಟಕದ ಕರಾವಳಿ ಭಾಗಗಳಲ್ಲಿ ಒಣಹವೆ ಮುಂದುವರಿದಿದ್ದು, ಮಳೆಯು ಸಂಭವಿಸುವ ಸಾಧ್ಯತೆ ಇದ್ದು, ವ್ಯಾಪಕ ಮಳೆಯಾಗುವ ರೀತಿಯಲ್ಲಿ ಯಾವುದೇ ಮುನ್ಸೂಚನೆ ಇಲ್ಲ.
ಕೊಡಗಿನ ಒಂದೆರಡು ಕಡೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ, ಬಾಳೆಹೊನ್ನೂರು ಮತ್ತು ಮೂಡಿಗೆರೆ ಭಾಗಗಳಲ್ಲಿ ತುಂತುರು ಮಳೆಯಾಗಲಿದ್ದು, ಮಲೆನಾಡಿನ ಉಳಿದ ಭಾಗಗಳಲ್ಲಿ ಎಂದಿನಂತೆ ಒಣಹವೆ ಮುಂದುವರೆಯುತ್ತದೆ ಎನ್ನುವ ಮಾಹಿತಿ ಲಭಿಸಿದೆ.
ಉತ್ತರ ಒಳನಾಡಿನಲ್ಲೂ ಕೂಡ ಒಣಹವೆ ಮುಂದುವರೆದಿದ್ದು, ವ್ಯಾಪಕ ಮಳೆಯ ಮುನ್ಸೂಚನೆ ಇಲ್ಲವಾಗಿದ್ದು, ಹವಾಮಾನ ವ್ಯವಸ್ಥೆಯನ್ನು ಆಧರಿಸಿ, ಮಳೆಯ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗಬಹುದು.‌ ದಕ್ಷಿಣ ಒಳನಾಡಿನಲ್ಲೂ ಎಲ್ಲಾ ಕಡೆಗಳಂತೆ ಒಣಹವೆ ಇದ್ದು, ಸೆಪ್ಟಂಬರ್ 28ರ ಸೋಮವಾರದಂದು ಅರಬ್ಬಿ ಸಮುದ್ರದ ಗಾಳಿಯ ಚಲನೆಯಲ್ಲಿ ಬದಲಾವಣೆಯಾಗುವ ಹಿನ್ನೆಲೆಯಿಂದಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.‌ ಗಾಳಿಯ ಚಲನೆ ಮತ್ತು ವಾತಾವರಣದಲ್ಲಿನ ತೇವಾಂಶದ ಬದಲಾವಣೆಯಿಂದಾಗಿ ಕರ್ನಾಟಕದಲ್ಲೂ ಹಿಂಗಾರು ಮಳೆಯ ರೀತಿಯಲ್ಲಿ ಗುಡುಗು ಸಹಿತ ಮಳೆಯ ವಾತಾವರಣ ರೂಪಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Categories
Uncategorized

ಕಾಫಿ, ಟೀ, ಕಾರು ದರ ಏರಿಕೆ! – ಹಾಲಿನ ದರದಲ್ಲಿ ಹೆಚ್ಚಳವಾದರೆ ಕಾಫಿ, ಟೀ ದರ ಏರಿಕೆ! – ಎಸ್ ಯುವಿ ಕಾರು ದರ ಮತ್ತೊಮ್ಮೆ ಹೆಚ್ಚಳ – ಅ.2ಕ್ಕೆ ಯುಪಿಐ ರಹಿತ ದಿನ: ಶುಲ್ಕ ವಿರೋಧಿಸಿ ಹೋರಾಟ!

ಬೆಂಗಳೂರು: ರಾಜ್ಯ ಸರ್ಕಾರವು ನಂದಿನಿ ಹಾಲಿಗೆ 5ರೂಪಾಯಿ ಹೆಚ್ಚಳಗೊಳಿಸುವ ಕುರಿತು ನಿರ್ಧಾರ ಕೈಗೊಂಡಿದ್ದು, ಇದರ ಬೆನ್ನಲ್ಲೇ ಹಾಲಿಗೆ ಸಂಬಂಧಿಸಿದಂತಹ ಪದಾರ್ಥಗಳ ಬೆಲೆ ಕೂಡ ಹೆಚ್ಚಳಗೊಳ್ಳಲಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಂದರೆ ಹಾಲಿನಿಂದ ತಯಾರಾಗುವ ಪದಾರ್ಥಗಳ ಬೆಲೆ ಅನಿವಾರ್ಯವಾಗಿ ಹೆಚ್ಚಳಗೊಳಿಸಬೇಕಾಗುತ್ತದೆ ಎಂದು ಬೆಂಗಳೂರು ಹೊಟೇಲ್ ಗಳ ಸಂಘದ ಗೌರವಾಧ್ಯಕ್ಷರಾದ ಪಿ.ಸಿ.ರಾವ್ ಅವರು ತಿಳಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು “ಪ್ರತಿದಿನ ನಾಲ್ಕು ಲಕ್ಷ ಲೀಟರ್ ನಷ್ಟು ಹಾಲನ್ನು ಹೊಟೇಲ್ ಗಳಲ್ಲಿ ಬಳಸಲಾಗುತ್ತಿದೆ. ಕೆಎಂಎಫ್ ಉತ್ಪಾದಿಸುವ ಶೇಕಡ 40ರಷ್ಟು ಹಾಲನ್ನು ಹೊಟೇಲ್ ನವರೇ ಖರೀದಿಸುತ್ತಾರೆ. ಆದ್ದರಿಂದ ದರ ಏರಿಕೆಯನ್ನು ಲೀಟರ್ ಗೆ 2 ರಿಂದ 3 ರೂಪಾಯಿಗೆ ಸೀಮಿತಗೊಳಿಸಬೇಕು. ಹೈನುಗಾರರಿಗೆ ಆಗುತ್ತಿರುವ ನಷ್ಟಕ್ಕೆ ಸರ್ಕಾರವೇ ಅನುದಾನ ಅಥವಾ ಇನ್ನಿತರ ಬೆಂಬಲ ನೀಡಬೇಕು. ಹೊಟೇಲ್ ಉದ್ಯಮ ರಾಜ್ಯದ ರೈತರ ಪರವಾಗಿದೆ. ಬೆಲೆ ಹೆಚ್ಚಳ ಅಧಿಕವಾದರೆ ಹೊರರಾಜ್ಯಗಳಿಂದ ಬರುವ ಹಾಲಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ನಂದಿನಿ ಹಾಲಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು” ಎಂದು ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಎಸ್ ಯುವಿ ಕಾರು ದರ ಮತ್ತೊಮ್ಮೆ ಹೆಚ್ಚಳ

ನವದೆಹಲಿ: ಕಚ್ಚಾ ವಸ್ತುಗಳ ದರದಲ್ಲಿನ ಹೆಚ್ಚಳದಿಂದಾಗಿ, ವಾಹನಗಳ ದರವನ್ನು ಕೂಡ ಅಧಿಕಗೊಳಿಸುವ ನಿರ್ಧಾರವನ್ನು ವಾಹನ ತಯಾರಿಕಾ ಸಂಸ್ಥೆಯಾದ ಮಹೀದ್ರಾ ಆ್ಯಂಡ್ ಮಹೀಂದ್ರಾ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅದು ತನ್ನ ಎಸ್ ಯುವಿ ಶ್ರೇಣಿಯ ವಾಹನಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲು ಆಲೋಚಿಸಿದ್ದು, ಮುಂದಿನ ಎರಡು ವಾರಗಳಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಹೀಂದ್ರಾ ಗ್ರೂಪ್ ನ ಅಟೋಮೋಟಿವ್ ವಿಭಾಗದ ಸಿಇಒ ನಳಿನಿಕಾಂತ್ ಗೊಲ್ಲಗುಂಟ ಅವರು “ಸಂಸ್ಥೆಯು ಈ ವರ್ಷ ಈಗಾಗಲೇ ಮೂರು ಬಾರಿ ಅಂದರೆ ಜನವರಿ, ಏಪ್ರಿಲ್ ಮತ್ತು ಜುಲೈ ತಿಂಗಳಿನಲ್ಲಿ ದರವನ್ನು ಹೆಚ್ಚಳಗೊಳಿಸಿದೆ. ಅದರಲ್ಲೂ ಜುಲೈ ತಿಂಗಳಿನಲ್ಲಿ ಎಸ್ ಯುವಿಗಳ ಮೇಲೆ ಶೇಕಡ 2.7ರಷ್ಟು ಗಮನಾರ್ಹ ಏರಿಕೆ ಮಾಡಲಾಗಿತ್ತು. ನಾವು ಮಾರುಕಟ್ಟೆಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇತ್ತೀಚಿನ ಕಚ್ಚಾ ವಸ್ತುಗಳ ಬೆಲೆಯ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ದರ ಹೆಚ್ಚಳದ ಅಗತ್ಯವಿದೆಯೇ ಎನ್ನುವುದನ್ನು ಮುಂದಿನ ಎರಡು ವಾರಗಳಲ್ಲಿ ತೀರ್ಮಾನಿಸಲಿದ್ದೇವೆ. ಆಟೋಮೊಬೈಲ್ ಉದ್ಯಮದಲ್ಲಿ ಇತ್ತೀಚೆಗೆ ಬೆಲೆಗಳು ಏರಿಕೆಯಾಗಿದ್ದರೂ ಕೂಡ ವಾಹನಗಳ ವಿಚಾರಣೆ ಮತ್ತು ಮುಂಗಡ ಬುಕಿಂಗ್ ಗಳ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಬೀರಿಲ್ಲ.” ಎಂದು ತಿಳಿಸಿದ್ದಾರೆ.

ಅ.2ಕ್ಕೆ ಯುಪಿಐ ರಹಿತ ದಿನ: ಯುಪಿಐ ಶುಲ್ಕ ವಿರೋಧಿಸಿ ಹೋರಾಟ!

ನವದೆಹಲಿ: ಯುಪಿಐ ವಹಿವಾಟುಗಳ ಮೇಲೆ ವಿಧಿಸಿರುವಂತಹ ಶುಲ್ಕವನ್ನು ವಿರೋಧಿಸಿ ಅಕ್ಟೋಬರ್ 2ರ ಶುಕ್ರವಾರದಂದು ಭಾರತದಾದ್ಯಂತ ಇರುವಂತಹ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿಗಳು ನೋ ಯುಪಿಐ ಡೇ (ಯುಪಿಐ ರಹಿತ ದಿನ) ಅನ್ನು ಆಚರಿಸಲು ತೀರ್ಮಾನ ಕೈಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಉದ್ಯಮ ಸಂಘಟನಾ ಎಐಎಂಆರ್ ನ ಉಪಾಧ್ಯಕ್ಷರಾದ ತರ್ವಿಂದರ್ ಸಿಂಗ್ ಅವರು “ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಂದು ಚಿಲ್ಲರೆ ವ್ಯಾಪಾರಿಗಳು ಸಾಂಕೇತಿಕವಾಗಿ ಯುಪಿಐ ಕ್ಯೂಆರ್ ಕೋಡ್ ಗಳನ್ನು ಕಪ್ಪು ಬಟ್ಟೆಯಿಂದ ಮುಚ್ಚಿಟ್ಟು, ಯುಪಿಐ ಮೂಲಕ ಪಾವತಿಗಳನ್ನು ಸ್ವೀಕರಿಸುವುದರಿಂದ ದೂರವಿರಲಿದ್ದಾರೆ” ಎಂದು ತಿಳಿಸಿದ್ದಾರೆ.

Categories
Uncategorized

ಚಿಕ್ಕಮಗಳೂರು ಪ್ರಮುಖ ಸುದ್ದಿಗಳು ಕಾಫಿನಾಡಿಗೆ ನೂತನ ಸಾರಥಿ! – ಚಿಕ್ಕಮಗಳೂರು ಜಿಪಂ ಸಿಇಒ ಆಗಿ ಮೀನಾಕ್ಷಿ ಆರ್ಯ ನೇಮಕ – ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕ್ಷೇತ್ರ ಮಟ್ಟದ ಕಾರ್ಯಾಧ್ಯಕ್ಷರಾಗಿ ಸತೀಶ್ ಅದ್ದಡ ಆಯ್ಕೆ – ಶಂಕಿತರ ಹಿಟ್ ಲಿಸ್ಟ್‌ನಲ್ಲಿ ಸಿ.ಟಿ. ರವಿ ಹೆಸರು: ಹೆಚ್ಚುವರಿ ಭದ್ರತೆಗೆ ಪಟ್ಟು!

ಚಿಕ್ಕಮಗಳೂರು: ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದು, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ನೂತನ ಸಿಇಒ ಆಗಿ ಮೀನಾಕ್ಷಿ ಆರ್ಯ ಅವರನ್ನು ನೇಮಿಸಿದೆ. ಈ ಹಿಂದೆ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದ ಅವರ ಈ ನೇಮಕಾತಿಯು, ಪ್ರಸ್ತುತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ನಡೆಯುತ್ತಿರುವುದರಿಂದ ಭಾರತೀಯ ಚುನಾವಣಾ ಆಯೋಗದ ಅನುಮೋದನೆಗೆ ಒಳಪಟ್ಟಿರುತ್ತದೆ. ಚಿಕ್ಕಮಗಳೂರಿನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೀರ್ತನಾ ಎಚ್.ಎಸ್. ಅವರನ್ನು ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯೋಜಿಸಲಾಗಿದೆ.

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕ್ಷೇತ್ರ ಮಟ್ಟದ ಕಾರ್ಯಾಧ್ಯಕ್ಷರಾಗಿ ಸತೀಶ್ ಅದ್ದಡ ಆಯ್ಕೆ

ಕೊಪ್ಪ: ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕ್ಷೇತ್ರ ಮಟ್ಟದ ಕಾರ್ಯಾಧ್ಯಕ್ಷರಾಗಿ ಸತೀಶ್ ಅದ್ದಡ ಆಯ್ಕೆ ಆಗಿದ್ದಾರೆ. ಹಿರಿಯ ಬಿಜೆಪಿ ನಾಯಕರು, ಡಿಸಿಸಿ ಬ್ಯಾಂಕ್ ನಿರ್ದೇಶಕರು ಆಗಿರುವ ಸತೀಶ್ ಅವರು
ರೈತರ ಹಕ್ಕುಗಳು ಹಾಗೂ ಬದುಕಿನ ರಕ್ಷಣೆಗಾಗಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ನಡೆಸುತ್ತಿರುವ ಹೋರಾಟಕ್ಕೆ ಇನ್ನಷ್ಟು ಬಲ ತುಂಬಲಿದ್ದಾರೆ.

– ಶಂಕಿತರ ಹಿಟ್ ಲಿಸ್ಟ್‌ನಲ್ಲಿ ಸಿ.ಟಿ. ರವಿ ಹೆಸರು: ಹೆಚ್ಚುವರಿ ಭದ್ರತೆಗೆ ಪಟ್ಟು!

ಚಿಕ್ಕಮಗಳೂರು: ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರರನ್ನು ಚಿಕ್ಕಬಳ್ಳಾಪುರ ಹಾಗೂ ಹಾಸನ ಪೊಲೀಸರು ಬಂಧಿಸಿದ ಬೆನ್ನಲ್ಲೇ, ಪ್ರಮುಖ ಬಿಜೆಪಿ ನಾಯಕರ ಹತ್ಯೆಗೆ ಸ್ಕೆಚ್ ಹಾಕಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ ಎನ್ನಲಾಗಿದ್ದು. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಧಿಕೃತ ಮನವಿ ಸಲ್ಲಿಸಲಾಗಿದೆ.

Categories
Uncategorized

ಬರಪಟ್ಟಿಯಲ್ಲಿ ಸರ್ಕಾರದಿಂದ ಹೊಸ 29 ತಾಲ್ಲೂಕು ಸೇರ್ಪಡೆ – ಮಲೆನಾಡು, ಕರಾವಳಿ ತಾಲೂಕುಗಳು ಬರ ಪಟ್ಟಿಗೆ ಸೇರ್ಪಡೆ – ಕೇಂದ್ರ, ರಾಜ್ಯ ಸರ್ಕಾರದ ವಿಶೇಷ ಸಾಲ ಮನ್ನಾ ಯೋಜನೆ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗದ ಕಾರಣದಿಂದಾಗಿ ರಾಜ್ಯದ ಬಹುತೇಕ ಪ್ರದೇಶಗಳು ಬರಪೀಡಿತ ಪ್ರದೇಶಗಳಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಲೆನಾಡು, ಬಯಲು ಸೀಮೆ ಕೂಡ ಈ ಬಾರಿ ಮಳೆ ಹಿನ್ನಡೆ ಕಂಡಿದೆ. ಬತ್ತದ ಗದ್ದೆಗಳು, ಕೃಷಿ ಭೂಮಿ ಒಣಗುತ್ತಿದೆ. ಈ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶಗಳಿಗೆ ಆರ್ಥಿಕ ನೆರವು ನೀಡಲು ಮತ್ತು ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ರೈತರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಸರ್ಕಾರ ನಿರ್ಣಯ ಕೈಗೊಂಡಿದೆ‌.
ಹೊಸ ಪಟ್ಟಿಯಲ್ಲಿ ಸೇರ್ಪಡೆಯಾದ ತಾಲೂಕುಗಳು: ರಾಜ್ಯ ಸರ್ಕಾರವು ಬರದ ಪಟ್ಟಿಯಲ್ಲಿ ಹೊಸದಾಗಿ ಔರಾದ್, ಗೋಕಾಕ್, ರಾಮದುರ್ಗ, ಸವದತ್ತಿ, ಕಾಗವಾಡ, ಇಂಡಿ ಚಡಚಣ, ಕಲಘಟಗಿ, ಕುಂದಗೋಳ, ಅಳ್ಳಾವರ, ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ, ಸೊರಬ, ತೀರ್ಥಹಳ್ಳಿ, ಚಿಕ್ಕಮಗಳೂರು, ಕಳಸ, ಮಡಿಕೇರಿ, ಕುಶಾಲನಗರ, ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ, ಉಡುಪಿ, ಬೈಂದೂರು, ಅಂಕೋಲ, ಭಟ್ಕಳ, ಹಳಿಯಾಳ, ಶಿರಸಿ ಸೇರಿ ಒಟ್ಟು 29 ತಾಲ್ಲೂಕುಗಳನ್ನು ಸೇರ್ಪಡೆಗೊಳಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರು ಶಿವಮೊಗ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಗಾಲ ಆಗಿರುವುದರಿಂದ‌ ಶಿವಮೊಗ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಸಿಎಂಗೆ ಪತ್ರ ಬರೆದಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕುಗಳಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದ್ದು ರೈತರ ಭಕ್ತ, ಜೋಳ, ಶುಂಠಿ, ಕಬ್ಬು ಬೆಳೆಗಳಿಗೆ ನೀರಿಲ್ಲದೇ ಒಣಗುತ್ತಿವೆ. ಈ ಬಾರಿ ಈ ಬೆಳೆಗಳು ರೈತರಿಗೆ ಲಭಿಸುವುದು ದುರ್ಲಭವಾಗಿದೆ. ಆದ್ದರಿಂದ ಶಿವಮೊಗ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕಾಗಿ ಮನವಿ ಮಾಡಿದ್ದು ಇದೀಗ ಪೂರಕ ಸ್ಪಂದನೆ ವ್ಯಕ್ತವಾಗಿದೆ

Categories
Uncategorized

ಕಾಂಗ್ರೆಸ್ ನಾಯಕ ಸುಂದರೇಶ್ ವಿರುದ್ಧ ಕ್ರಮಕ್ಕೆ ಪಟ್ಟು! – ಅನಾರೋಗ್ಯದಿಂದ ಹಾಗೆ ಮಾತಾಡಿದ್ದಾರೆ ಎಂದ ಮಂಜುನಾಥ ಗೌಡ – ಶಿಸ್ತು ಕ್ರಮಕ್ಕೆ ಕಾರಣ ಕೇಳಿ ನೋಟಿಸ್ ನೀಡಿದ ಹೈಕಮಾಂಡ್ – ಒಬ್ಬ ಸಿಡಿದೆದ್ದಾಗಲೇ ಪಕ್ಷದ ಹುಳುಕು ಗೊತ್ತಾಗೋದು…! – ತೀರ್ಥಹಳ್ಳಿ ರಾಜಕಾರಣದ ಬಗ್ಗೆ ಸುಂದರೇಶ್ ಮಾತನಾಡುವ ನೈತಿಕ ಹಕ್ಕಿದೆಯೇ?: ತುಪ್ಪದಮನೆ ವಿನಾಯಕ್

ಶಿವಮೊಗ್ಗ/ ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಸೂಡಾ ಹಾಲಿ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಇತ್ತೀಚೆಗೆ ಕಾಂಗ್ರೆಸ್ ನಾಯಕರ ವಿರುದ್ಧವೇ ಭಾರೀ ಆರೋಪಗಳ ಹೊಳೆ ಹರಿಸಿದ್ದು ಇಡೀ ಜಿಲ್ಲಾ ಕಾಂಗ್ರೆಸ್ ನಾಯಕರನ್ನು ಇರಿಸು ಮುರಿಸು ಮಾಡಿದೆ. ಈ ನಡುವೆ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಕಾರಣ ಕೇಳಿ ಪಕ್ಷದ ಹೈಕಮಾಂಡ್ ನೋಟೀಸ್ ನೀಡಿದೆ. ಈ ಒಂದು ಘಟನೆಯಿಂದ ಅವರು ಪಕ್ಷಕ್ಕೆ ಮಾಡಿದ ಸೇವೆ ನೀರಲ್ಲಿ ಹೋಮ ಮಾಡಿದಂತಾಗಿದೆ.
ಇತ್ತೀಚಿಗೆ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಂದರೇಶ್ ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ, ಜಿಲ್ಲಾ, ತಾಲೂಕು ನಾಯಕರ ವಿರುದ್ಧ ಅಸಮಾಧಾನದ ಬಾಂಬ್ ಹಾಕಿದ್ದರು. ಇದು ಶಿವಮೊಗ್ಗ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಶೋಕಾಸ್ ನೋಟೀಸು: ಉತ್ತರಿಸುತ್ತಾರಾ ಸುಂದರೇಶ್?

ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್‌. ಸುಂದರೇಶ್‌ ಖಾಸಗಿ ಹೋಟೆಲ್‌ ಒಂದರಲ್ಲಿ ನಡೆಸಿದ ಪತ್ರಿಕಗೋಷ್ಟಿಯಲ್ಲಿ ಆಲ್‌ ಇಂಡಿಯಾ ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ‘ಸಂಘಟನ್ ಸೃಜನ್ ಅಭಿಯಾನ್’ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡಿರುವುದಲ್ಲದೇ, ಕಾಂಗ್ರೆಸ್ ಪಕ್ಷದ ಮುಖಂಡರುಗಳ ಬಗ್ಗೆ ಮಾಡಿರುವ ಟೀಕೆ ಮಾಡಿದ್ದರು. ಈ ಬಗ್ಗೆ ಪಕ್ಷಕ್ಕೆ, ಮುಖಂಡರಿಗೆ ತೀವ್ರ ಮುಜುಗರವಾಗಿದೆ ಎಂದು ಸ್ಥಳೀಯ ಮುಖಂಡರು ಕೆಪಿಸಿಸಿಗೆ ದೂರು ನೀಡಿದ್ದರು. ದೂರಿನಂತೆ ಶಿಸ್ತು ಉಲ್ಲಂಘನೆಯಾಗಿದೆ ಎಂದು ಕೆಪಿಸಿಸಿ ಶೋಕಾಸ್‌ ನೋಟೀಸ್‌ ಜಾರಿ ಮಾಡಿದೆ. ನೋಟೀಸಿಗೆ ಏಳು ದಿನಗಳ ಒಳಗಾಗಿ ಸಮಜಾಯಿಷಿ ನೀಡಲು ಕಾಲಾವಕಾಶ ನೀಡಿದೆ. ತಪ್ಪಿದಲ್ಲಿ ಮುಂದಿನ ಶಿಸ್ತುಕ್ರಮ ಜರುಗಿಸುವುದಾಗಿ ಹೇಳಿದೆ. ಆದರೆ ಸುಂದರೇಶ್ ಉತ್ತರಿಸುತ್ತಾರಾ ಕಾದು ನೋಡಬೇಕಿದೆ.

ಅನಾರೋಗ್ಯ ಇತ್ತು… ಹಾಗಾಗಿ ಒತ್ತಡದಲ್ಲಿ ಮಾತನಾಡಿದ್ದಾರೆ!

ಕಾಂಗ್ರೆಸ್ ಹಾಗೂ ಸಹಕಾರ ನಾಯಕರು ಆದ ಡಾ.ಮಂಜುನಾಥ ಗೌಡ ಮಾತನಾಡಿ, ಸುಂದರೇಶ್ ಅವರು ಅನಾರೋಗ್ಯಕ್ಕೆ ಈಡಾಗಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾಗಿ ಒತ್ತಡದಲ್ಲಿ ಏನೇನೋ ಮಾತನಾಡಿದ್ದಾರೆ. ಅವರು ಕೂಡ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ಹೇಳಿದ್ದಾರೆ.

ಸುಂದರೇಶ್ ವಿರುದ್ಧ ಕ್ರಮಕ್ಕೆ ಪಟ್ಟು!

ಶಿವಮೊಗ್ಗ, ತೀರ್ಥಹಳ್ಳಿ ನಾಯಕರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿರುವ ಆರೋಪ ಮಾಡಿರುವ ಸುಂದರೇಶ್ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಪ್ರಮುಖರು, ಹೊಸನಗರ, ತೀರ್ಥಹಳ್ಳಿ ಕಾಂಗ್ರೆಸ್ ಪ್ರಮುಖರು ಒತ್ತಾಯಿಸಿದ್ದಾರೆ.

ತೀರ್ಥಹಳ್ಳಿ ಕಾಂಗ್ರೆಸ್ ನಾಯಕರ ಬಗ್ಗೆ ಹೇಳಿಕೆ ಬೇಡ: ವಿನಾಯಕ್ ತುಪ್ಪದಮನೆ

ತೀರ್ಥಹಳ್ಳಿ ಕ್ಷೇತ್ರದ ಪಕ್ಷ ಮುಖಂಡರಾದ, ಮಾಜಿ ಸಚಿವ ,ಹಿರಿತನ ಅನುಭವವಿರುವ ಹಿರಿಯ ರಾಜಕಾರಣಿ ಕಿಮ್ಮನೆ ರತ್ನಾಕರ್ ಹಾಗೂ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಮಾಡಿರುವ ಬಹಿರಂಗ ಟೀಕೆಗಳು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ತೀರ್ಥಹಳ್ಳಿಯ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವಲಯದಿಂದಲೂ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸಾಮಾಜಿಕ-ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ತುಪ್ಪದಮನೆ ವಿನಾಯಕ್, ಮಾತನಾಡಿ, ತೀರ್ಥಹಳ್ಳಿಯ ರಾಜಕಾರಣದ ಬಗ್ಗೆ ಮಾತನಾಡುವ ಮುನ್ನ ಇಲ್ಲಿನ ರಾಜಕೀಯ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥಗೌಡರು ಈ ಭಾಗದಲ್ಲಿ ಪಕ್ಷದ ಸಂಘಟನೆಗಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ನಾಯಕರು. ಅವರ ನಾಯಕತ್ವವನ್ನು ಒಪ್ಪಿಕೊಂಡು, ಅವರೊಂದಿಗೆ ಹೆಜ್ಜೆ ಹಾಕುತ್ತಿರುವ ಕಾರ್ಯಕರ್ತರು ಇಂದು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅಂತಹ ಸಂದರ್ಭದಲ್ಲಿ ಹೊರಗಿನಿಂದ ಬಂದು ತೀರ್ಥಹಳ್ಳಿಯ ನಾಯಕರ ರಾಜಕೀಯ ಭವಿಷ್ಯದ ಬಗ್ಗೆ ತೀರ್ಪು ನೀಡುವ ರೀತಿಯಲ್ಲಿ ಮಾತನಾಡುವುದು ಎಷ್ಟು ಸಮಂಜಸ?” ಎಂಬ ಪ್ರಶ್ನೆಯನ್ನು ವಿನಾಯಕ್ ಮುಂದಿಟ್ಟಿದ್ದಾರೆ .ಜಿಲ್ಲಾ ರಾಜಕಾರಣವನ್ನು ತೀರ್ಥಹಳ್ಳಿಯ ಸ್ಥಳೀಯ ರಾಜಕಾರಣವನ್ನು ಎಳೆದು ತಂದು, ಇಲ್ಲಿನ ನಾಯಕರ ಬಗ್ಗೆ ವೈಯಕ್ತಿಕವಾಗಿ ಟೀಕಿಸುವುದು ಸಲ್ಲ. ನಾಯಕತ್ವದ ವಿಚಾರದಲ್ಲಿ ಅಸಮಾಧಾನವಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದು. ಆದರೆ ತೀರ್ಥಹಳ್ಳಿಯ ಇಬ್ಬರು ಪ್ರಮುಖ ನಾಯಕರ ಬಗ್ಗೆ ಸಾರ್ವಜನಿಕವಾಗಿ ಹಗುರವಾಗಿ ಮಾತನಾಡುವುದರಿಂದ, ವರ್ಷಗಳಿಂದ ಪಕ್ಷದ ಸಂಘಟನೆಗಾಗಿ ದುಡಿಯುತ್ತಿರುವ ಸ್ಥಳೀಯ ಕಾರ್ಯಕರ್ತರ ಮನಸ್ಸಿಗೂ ನೋವಾಗುತ್ತದೆ. ಸುಂದರೇಶ್ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಹಲವು ವರ್ಷ ದುಡಿದಿರುವ ಹಿರಿಯ ನಾಯಕರು ಎಂಬುದನ್ನು ಯಾರೂ ನಿರಾಕರಿಸುವಂತಿಲ್ಲ. ಆದರೆ ಅದೇ ಕಾರಣಕ್ಕೆ ತೀರ್ಥಹಳ್ಳಿಯ ಹಾಲಿ ರಾಜಕೀಯದಲ್ಲಿ ಸಕ್ರಿಯವಾಗಿರುವ ನಾಯಕರ ಬಗ್ಗೆ ಬೇಕಾದಂತೆ ಮಾತನಾಡುವ ಹಕ್ಕಿಲ್ಲ ಎಂದು ಹೇಳಿದ್ದಾರೆ.