Categories
Uncategorized

• ಮೂಡಿಗೆರೆ: ವೃದ್ಧನ ಮೇಲೆ ಕಾಡುಕೋಣ ದಾಳಿ; ಸ್ಥಿತಿ ಗಂಭೀರ • ನರಸಿಂಹರಾಜಪುರ: ಮದ್ಯ ಸೇವಿಸಿ ಈಜಲು ತೆರಳಿದ್ದಯುವಕ ಸಾವು • ಶಿವಮೊಗ್ಗ: ಮಹಿಳೆಯ ಖಾಸಗಿ ವಿಡಿಯೋ ಚಿತ್ರೀಕರಣ; ಕೇಸ್

ಮೂಡಿಗೆರೆ: ವೃದ್ಧರೊಬ್ಬರ ಮೇಲೆ ಕಾಡುಕೋಣವೊಂದು ದಿಢೀರ್ ದಾಳಿ ನಡೆಸಿದ ಘಟನೆ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ. ನಂಜೇಗೌಡ ಎನ್ನುವವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕಾಡುಕೋಣದ ದಾಳಿಯಿಂದಾಗಿ ನಂಜೇಗೌಡ ಅವರ ಕೈ ಕಾಲು ಮತ್ತು ತೊಡೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಬಣಕಲ್ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿದ್ದಾರೆ ಎನ್ನಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸ್ಥಳಾಂತರಿಸಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.

•ನರಸಿಂಹರಾಜಪುರ: ಮದ್ಯ ಸೇವಿಸಿ ಈಜಲು ತೆರಳಿದ್ದ ಯುವಕ ಸಾವು

ನರಸಿಂಹರಾಜಪುರ: ಸ್ನೇಹಿತರೊಂದಿಗೆ ಈಜಲು ತೆರಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ, ಮಂಗಳವಾರದಂದು ಭೈರನಕಟ್ಟೆ ಸಮೀಪದ ಭದ್ರಾ ಹಿನ್ನೀರಿನಲ್ಲಿ ನಡೆದಿದೆ. ಈಜಲು ತೆರಳಿದ್ದ ಸಂದರ್ಭದಲ್ಲಿ ಯುವಕನು ಮದ್ಯಪಾನ ಮಾಡಿರುವುದೇ ಈ ದುರಂತಕ್ಕೆ ಕಾರಣವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಮೃತ ಯುವಕನನ್ನು ಶಿವಮೊಗ್ಗ ಮೂಲದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿ ನಿಖಿಲ್ ಆರ್ ಸಿಂಗ್ ಎಂದು ಗುರುತಿಸಲಾಗಿದೆ. ನಿಖಿಲ್ ಮತ್ತು ಆತನ ಇಬ್ಬರು ಸ್ನೇಹಿತರು ಸಂಜೆಯ ಹೊತ್ತು ಮದ್ಯ ಕೂಟವನ್ನು ನಡೆಸಿದ್ದು, ಬಳಿಕ ಭದ್ರ ಹಿನ್ನೀರಿನಲ್ಲಿ ಈಜಲು ತೆರಳಿದ್ದಾರೆ. ಆಗ ನಿಖಿಲ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿ ನಿಖಿಲ್ ನನ್ನು ಪತ್ತೆಹಚ್ಚಿದ್ದು, ಶವವಾಗಿ ಆತ ಕಂಡು ಬಂದಿದ್ದಾನೆ. ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಶಿವಮೊಗ್ಗ: ಮಹಿಳೆಯ ಖಾಸಗಿ ವಿಡಿಯೋ ಚಿತ್ರೀಕರಣ; ಕೇಸ್!

ಶಿವಮೊಗ್ಗ: ಮಹಿಳೆಯ ವಿಡಿಯೋ ತೆಗೆದು, ಆಕೆಯ ಖಾಸಗಿತನಕ್ಕೆ ಧಕ್ಕೆ ತಂದಿರುವುದಷ್ಟೇ ಅಲ್ಲದೆ, ಲೈಂಗಿಕ ದೌರ್ಜನ್ಯವನ್ನು ನಡೆಸಲು ಯತ್ನಿಸಿರುವ ಘಟನೆ ನಡೆದಿದೆ. ಮಹಿಳೆಯು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ, ಪರಿಚಿತ ವ್ಯಕ್ತಿಯೊಬ್ಬರು ಆಕೆಯ ಮನೆಯೊಳಗೆ ಪ್ರವೇಶಿಸಿದ್ದು, ಮಹಿಳೆಯು ಬಟ್ಟೆಯನ್ನು ಬದಲಾಯಿಸುತ್ತಿರುವ ಸಮಯದಲ್ಲಿ ಆ ವ್ಯಕ್ತಿಯು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿದ್ದಾನೆ.‌ ಬಳಿಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಸಹ ನಡೆಸಲು ಮುಂದಾಗಿದ್ದಾನೆ. ಆಗ ಮಹಿಳೆಯು ಪ್ರತಿರೋಧ ವ್ಯಕ್ತಪಡಿಸಿದಾಗ ಕುಟುಂಬದ ಸದಸ್ಯರಿಗೆ ಸಂಬಂಧಿಸಿದಂತೆ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದಷ್ಟೇ ಅಲ್ಲದೆ ಈ ಸನ್ನಿವೇಶ ನಡೆದ ನಂತರವೂ ವ್ಯಕ್ತಿಯು ಮಹಿಳೆಯನ್ನು ಹಿಂಬಾಲಿಸಿ ತೊಂದರೆ ನೀಡಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಬಳಿಕ ವ್ಯಕ್ತಿಯ ಜೊತೆಗೆ ಇನ್ನಿಬ್ಬರು ಸೇರಿಕೊಂಡು ಮಹಿಳೆಯ ಖಾಸಗಿ ವಿಡಿಯೋವನ್ನು ವಾಟ್ಸಪ್ ಗುಂಪಿನಲ್ಲಿ ಹಂಚಿ, ಆಕೆಯ ಗೌರವಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು. ದೂರಿನ ಆಧಾರದ ಮೇಲೆ ವ್ಯಕ್ತಿ ಮತ್ತು ಆತನ ಜೊತೆಗಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 74, 75, 78, 79, 351(2), 3(5) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(ಇ), 67ರ ಅಡಿಯಲ್ಲಿ ಶಿವಮೊಗ್ಗ ತಾಲ್ಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Categories
Uncategorized

– ತೀರ್ಥಹಳ್ಳಿಯಲ್ಲಿ ಎಲ್ ಐ ಸಿ ಉದ್ಯೋಗಿ ನೇಣಿಗೆ ಶರಣು! – ಸೆ.3ರಂದು ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಸಭೆ – ಹೆಲ್ಮೆಟ್ ಕಳ್ಳರು ಹೆಚ್ಚಳ: ದಿನ ನಿತ್ಯ 5 ಹೆಲ್ಮೆಟ್ ಕಳ್ಳತನ!

ತೀರ್ಥಹಳ್ಳಿ: ತೀರ್ಥಹಳ್ಳಿ ಜೀವ ವಿಮಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಗಳೂರು ಮೂಲದ ಯುವ
ಎಲ್ಐಸಿ ಅಧಿಕಾರಿ ಶಮಿತ್ (40 ವರ್ಷ) ತೀರ್ಥಹಳ್ಳಿ ಬೆಟ್ಟ ಮಕ್ಕಿಯಲ್ಲಿ ತಾವು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೆಪ್ಟೆಂಬರ್ 1 ರ
ಸಂಜೆ 5:00 ವೇಳೆಗೆ ವಿಚಾರ ಮನೆ ಮಾಲೀಕರ ಗಮನಕ್ಕೆ ಬಂದಿದೆ. ಶಮಿತ್ ಅವರ ಕುಟುಂಬದವರು ಮಂಗಳೂರಿನಲ್ಲಿದ್ದು ಮನೆಯಲ್ಲಿ ಅವರೊಬ್ಬರೇ ಇದ್ದರು ಎನ್ನಲಾಗಿದೆ.

ಸೆ.3ರಂದು ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಸಭೆ

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ 157 ಗ್ರಾಮಗಳಿಗೆ ಆತಂಕ ಉಂಟು ಮಾಡಿರುವ ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ತೀರ್ಥಹಳ್ಳಿ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು ಎಲ್ಲಾ ರಾಜಕೀಯ ಪಕ್ಷಗಳು ಸೇರಿ ತಾಲೂಕಿನ ವತಿಯಿಂದ ಈ ವರದಿಯನ್ನು ಖಂಡಿಸುವ ಸಲುವಾಗಿ ಸೆಪ್ಟೆಂಬರ್ 3 ನೇ ತಾರೀಕು ಮಧ್ಯಾಹ್ನ 3 ಘಂಟೆಗೆ ತೀರ್ಥಹಳ್ಳಿ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಸಭೆಯನ್ನು ಕರೆಯಲಾಗಿದೆ
ತಾಲೂಕಿನ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು ಮುಖಂಡರು ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಹಾಗೂ ಸಹಕಾರಿ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು, , ರೈತ ಬಾಂಧವರು ಸಾರ್ವಜನಿಕರನ್ನು ಕಸ್ತೂರಿರಂಗನ್ ವರದಿ ವಿರೋಧಿ ನಿರ್ಣಯವನ್ನು ಮಾಡುವ ಸಲುವಾಗಿ ಪಕ್ಷಾತೀತವಾದ ಈ ಸಭೆಗೆ ಆಗಮಿಸಲು
ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

ಹೆಲ್ಮೆಟ್ ಕಳ್ಳರು ಹೆಚ್ಚಳ: ದಿನ ನಿತ್ಯ 5 ಹೆಲ್ಮೆಟ್ ಕಳ್ಳತನ!

ತೀರ್ಥಹಳ್ಳಿ ಪಟ್ಟಣದಲ್ಲಿ ದಿನ ನಿತ್ಯ 5ಕ್ಕೂ ಹೆಚ್ಚು ಹೆಲ್ಮೆಟ್ ಕಳ್ಳತನವಾಗುತ್ತಿದೆ. ಬೈಕ್ ಕಳ್ಳರನ್ನು ಇನ್ನು ಪೊಲೀಸರು ಹಿಡಿದಿಲ್ಲ. ಆದರೆ ಹೆಲ್ಮೆಟ್ ಕಳ್ಳರು ಹೆಚ್ಚಾಗಿದ್ದಾರೆ.

Categories
Uncategorized

ತೀರ್ಥಹಳ್ಳಿಯಲ್ಲಿ ಡೆಡ್ಲಿ ಆಕ್ಸಿಡೆಂಟ್! – ಬ್ರೇಕ್ ಫೈಲ್ ಆಗಿ 4 ಕಾರಿಗೆ ಬಸ್ ಡಿಕ್ಕಿ – ಅಪಾಯದಿಂದ ಜನ ಪಾಹನ ಪುಡಿ ಪುಡಿ – ಹಳೆ ಬಸ್ಸು… ಜೀವ ಜಸ್ಟ್ ಮಿಸ್ಸು…!ರು: ವಾ

ತೀರ್ಥಹಳ್ಳಿ: ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸು ಏಕಾಏಕಿ ಹಿಮ್ಮುಖವಾಗಿ ಚಳಿಸಿದ ಪರಿಣಾಮ 5ಕ್ಕೂ ಹೆಚ್ಚು ಕಾರುಗಳು ಜಕಂಗೊಂಡ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಬುಧವಾರ ಸಂಜೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ.
ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು ರಾಜಲಕ್ಷ್ಮಿ ಬಸ್ ಡ್ರೈವರ್ ವಿರುದ್ಧ ಆಕ್ರೋಶ ಕೇಳಿ ಬಂದಿದೆ.
ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ನೂರಾರು ಜನ ಸೇರಿದ್ದಾರೆ. ಹಳೆಯ ಬಸ್ ಇದಾಗಿದ್ದು ಭೀಕರ ಅಪಘಾತ ನಡೆಯುವ ಸಾಧ್ಯತೆ ಇತ್ತು. ಪೊಲೀಸರು ಜನರನ್ನು ಚದುರಿಸಿದರು

Categories
Uncategorized

ರೈತರು, ಜನರ ಬದುಕನ್ನು ಉಳಿಸಲು ಹೋರಾಟ – ಇದು ರಾಜಕೀಯ ಹಿತಾಸಕ್ತಿ  ಅಲ್ಲ : ಡಾ.ಆರ್.ಎಂ.ಮಂಜುನಾಥ್ ಗೌಡ – ಕೇಂದ್ರ ಸರ್ಕಾರಕ್ಕೆ ಲಿಖಿತ ತಕರಾರು ಸಲ್ಲಿಸಲು ಕರೆ

ತೀರ್ಥಹಳ್ಳಿ: ರೈತರು, ಕೃಷಿ ಕಾರ್ಮಿಕರ ಬದುಕನ್ನೇ ದುರ್ಬರಗೊಳಿಸುವ ಕಸ್ತೂರಿ ರಂಗನ್ ವರದಿ  ಜಾರಿಯನ್ನು ವಿರೋಧಿಸಿ ಪಾದಯಾತ್ರೆ ಮತ್ತು ಬಹಿರಂಗ ಸಭೆಗೆ ಸಿದ್ಧತೆ ಜೋರಾಗಿದೆ.
ತೀರ್ಥಹಳ್ಳಿಯಲ್ಲಿ ಪಕ್ಷಾತೀತವಾಗಿ ಈ ಹೋರಾಟ ಹಮ್ಮಿಕೊಂಡಿದ್ದು ಪಶ್ಚಿಮ ಘಟ್ಟ ರೈತ ಸಹಕಾರ ವೇದಿಕೆ ವತಿಯಿಂದ ದಿನಾಂಕ: 05-09-2026, ಶನಿವಾರ ಬೆಳಿಗ್ಗೆ 09 ಗಂಟೆಗೆ ಉಂಟೂರು ಕಟ್ಟೆ ಕೈಮರದಿಂದ ಪ್ರಾರಂಭಗೊಂಡು ತಾಲೂಕು ಕಚೇರಿಯ ಆವರಣದಲ್ಲಿ ಬೃಹತ್ ಪ್ರತಿಭಟನೆ ಸಭೆಯನ್ನು ನಡೆಸಿ ತಾಲೂಕು ದಂಡಾಧಿಕಾರಿಗೆ ಮನವಿ ನೀಡಲಾಗುತ್ತದೆ ಎಂದು ಪಶ್ಚಿಮ ಘಟ್ಟ ರೈತ ಸಹಕಾರ ವೇದಿಕೆ
ಅಧ್ಯಕ್ಷರಾದ ಡಾ. ಆರ್. ಎಂ.ಮಂಜುನಾಥ ಗೌಡ ಹೇಳಿದ್ದಾರೆ.
ಬಸವಾನಿ ವಿಜಯದೇವ್ ಸಭಾಂಗಣದಲ್ಲಿ ಡಾ.ಆರ್‌.ಎಂ.ಮಂಜುನಾಥ ಗೌಡ ಮಾತನಾಡಿ, ಎಲ್ಲಾ ಸಹಕಾರಿ ಸಂಸ್ಥೆ ಹಾಗೂ ಸಂಘ ಸಂಸ್ಥೆಗಳನ್ನು ಒಳಗೊಂಡು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯದ 20,668 ಚದುರ ಕಿ.ಮೀ ಮಲೆನಾಡು ಪ್ರದೇಶದ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮವಲಯವೆಂದು ಘೋಷಿಸಲು ಕೇಂದ್ರ ಸರ್ಕಾರ 7ನೇ ಕರಡು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಸಾಗರ, ಶಿಕಾರಿಪುರ ತಾಲ್ಲೂಕಿನ 473 ಗ್ರಾಮಗಳನ್ನು ಸೇರಿಸಲಾಗಿದೆ. ಈ ಅಧಿಸೂಚನೆ ಜಾರಿಗೊಂಡರೆ ಸೂಕ್ಷ್ಮ ವಲಯದ ಕಠೋರ ಕಾಯ್ದೆಗಳಿಂದ ಗ್ರಾಮ ಜೀವನ ಅಸ್ತವ್ಯಸ್ತವಾಗುವ ಆತಂಕ ಉಂಟಾಗಿದೆ. ಹಾಗಾಗಿ ಸರ್ಕಾರಗಳ ಗಮನ ಸೆಳೆಯಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮಲೆನಾಡು ಗ್ರಾಮಗಳ ವಸತಿ ಪ್ರದೇಶ, ಕೃಷಿಭೂಮಿ, ಪಟ್ಟಾಭೂಮಿ, ನೀರಿನ ಮೂಲ, ಗೋಮಾಳ, ಗ್ರಾಮದ ರಸ್ತೆ ಮತ್ತಿತರ ಮೂಲಸೌಕರ್ಯಗಳನ್ನು ಸೂಕ್ಷ್ಮವಲಯದಿಂದ ಹೊರಗಿಡದೇ, ಇಡೀ ಗ್ರಾಮವನ್ನೇ ಸೂಕ್ಷ್ಮವಲಯವೆಂದು ಘೋಷಿಸಲಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಗ್ರಾಮಸಭೆಯಲ್ಲಿ ಚರ್ಚಿಸದೇ, ಗ್ರಾಮದ ಜನರ ವಿಶ್ವಾಸವನ್ನು ಅಲಕ್ಷಿಸಿ, ಅಧಿಸೂಚನೆ ಹೊರಡಿಸಿರುವುದು ಗ್ರಾಮವಾಸಿಗಳ ಆತಂಕವಾಗಿದೆ. ಗ್ರಾಮದ ಜನರೇ ಸೂಕ್ಷ್ಮವಲಯದ ಸರಹದ್ದುಗಳನ್ನು ಗುರುತಿಸಬೇಕು ಮತ್ತು ಸರ್ಕಾರ ಅದನ್ನು ಒಪ್ಪಬೇಕು
ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಡುವ ಜಾಗಗಳಲ್ಲಿ ಹತ್ತಾರು ದಶಕಗಳಿಂದ ಕೃಷಿ ಮಾಡುತ್ತಿರುವ ಸಾವಿರಾರು ರೈತ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ವಾಸವಿರುವ ಮನೆಗಳಿಗೂ ದಾಖಲೆಗಳನ್ನು ನೀಡಲಾಗಿಲ್ಲ. ಅರ್ಜಿ ನಮೂನೆ 50,53,57 ಮತ್ತು ಮನೆಗಳಿಗಾಗಿ 940 ರಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಕಾದಿರುವ ಕುಟುಂಬಗಳು ಸೂಕ್ಷ್ಮ ಪ್ರದೇಶ ಘೋಷಣೆಯಿಂದ ತಾವು ವಾಸವಿರುವ ಮತ್ತು ಕೃಷಿ ಮಾಡುತ್ತಿರುವ ಜಾಗದ ಮೇಲಿನ ಹಕ್ಕು ಕಳೆದು ಕೊಳ್ಳುವ ಆತಂಕದಲ್ಲಿದ್ದಾರೆ ಎಂದಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ 146 ಗ್ರಾಮಗಳು, ಸಾಗರದ 126 ಗ್ರಾಮಗಳು, ಹೊಸನಗರದ 125 ಗ್ರಾಮಗಳು, ಶಿವಮೊಗ್ಗದ 64 ಗ್ರಾಮಗಳು, ಶಿಕಾರಿಪುರದ 12 ಗ್ರಾಮಗಳು ಭಾದಿತ ಗ್ರಾಮಗಳಾಗಿದ್ದು, ಸೂಕ್ಷ್ಮ ವಲಯದ ಗ್ರಾಮಗಳಲ್ಲಿ ಕೃಷಿ ತೋಟಗಾರಿಕೆ ಅಭಿವೃದ್ಧಿ, ರಸ್ತೆ ಮತ್ತಿತರ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅಡೆತಡೆ ಉಂಟಾಗುವ ಆತಂಕವೂ ಇದೆ. ರೈತರ ಬದುಕಿನ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರ ಗ್ರಾಮದ ಜನರ ಬದುಕಿಗೆ ಮಾರಕವಾಗ ಕೂಡದು. ಆದ್ದರಿಂದ ಸೂಕ್ಷ್ಮ ವಲಯದ ಸರಹದ್ದು ಗಡಿ ಅಂತಿಮಗೊಳ್ಳುವ ಮೊದಲು ಗ್ರಾಮಸಭೆ, ರೈತರು, ಸಹಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ತಜ್ಞರ ಭಾಗವಹಿಸುವಿಕೆಯನ್ನು ಸರ್ಕಾರ ಖಚಿತ ಪಡಿಸಬೇಕು, ಒಪ್ಪಬೇಕು. ಜನರ ಆತಂಕಗಳನ್ನು ಪರಿಹರಿಸಬೇಕು. ಅಲ್ಲಿಯವರೆಗೆ ಈ ಜನವಿರೋಧಿ ಅಧಿಸೂಚನೆಯನ್ನು ಒಪ್ಪಲಾಗದು ಎಂದು 25 ಸೆಪ್ಟೆಂಬರ್ 2026ರ ಒಳಗಾಗಿ ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಮಂತ್ರಾಲಯಕ್ಕೆ ಲಿಖಿತ ತಕರಾರುಗಳನ್ನು ವ್ಯಕ್ತಿ, ಸಂಸ್ಥೆಗಳು, ಗ್ರಾಮಗಳು ಸಲ್ಲಿಸಬೇಕೆಂದು ವಿನಂತಿಸುತ್ತೇವೆ ಎಂದು ಮನವಿ ಮಾಡಿದರು. ಜಿಲ್ಲೆಯ ರೈತ ಬಾಂಧವರು, ಸಹಕಾರಿಗಳು, ಕೃಷಿ ಕಾರ್ಮಿಕರು, ಸಾವಿರ ಸಾವಿರ ಸಂಖ್ಯೆಯಲ್ಲಿ ಭಾಗವಹಿಸಿ ಅತ್ಯಂತ ಯಶಸ್ವಿಗೊಳಿಸಬೇಕೆಂದು  ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.
ಸಹಕಾರ ನಾಯಕ ವಿಜಯದೇವ್, ಡಾ. ಸುಂದರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ , ಶಶಿಧರ್ ರೆಹಮತುಲ್ಲಾ ಅಸಾದಿ,ಶಶಾಂಕ್ ಹೆಗಡೆ, ನಾಬಳ ಸಚಿಂದ್ರ ಹೆಗಡೆ, ಜೀನ ವಿಕ್ಟರ್, ರಾಘವೇಂದ್ರ ಶೆಟ್ಟಿ,ಸುಶೀಲ ಶೆಟ್ಟಿ, ಕಟ್ಟೆಹಕ್ಕು ಕಿರಣ್, ಹಾರೋಗೋಳಿಗೆ ಪದ್ಮಾನಾಬ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Categories
Uncategorized

ಪುತ್ತೂರು: ಪೊಲೀಸ್ ಕತೆ ಕಟ್ಟಿ ವಂಚಿಸಿದ ನಟೋರಿಯಸ್ •ಬಂಟ್ವಾಳ: ದನದ ಮಾಂಸ ವಶ •ಮಂಗಳೂರು: ಅಣ್ಣನ ಕೊಲೆ; ತಮ್ಮನ ಬಂಧನ •ಬೆಳ್ತಂಗಡಿ: ಎಸ್ಐಟಿ ಸಬ್ ಇನ್ಸ್ಪೆಕ್ಟರ್ ವಿನೋದ್ ರೆಡ್ಡಿ ಅಮಾನತು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ •ಪುತ್ತೂರು: ಪೊಲೀಸ್ ಕತೆ ಕಟ್ಟಿ ವಂಚಿಸಿದ ನಟೋರಿಯಸ್

ಪುತ್ತೂರು: ವ್ಯಕ್ತಿಯೊಬ್ಬ ಪೊಲೀಸ್ ಕಥೆ ಹೇಳಿ, ಗಾಂಜಾ ಪತ್ತೆ ಹಚ್ಚಲು ಬಂದಿರುವುದಾಗಿ ನಂಬಿಸಿ ಯುವತಿಯನ್ನು ವಂಚಿಸಿದ ಘಟನೆ, ಭಾನುವಾರದಂದು ಕುಂಬ್ರದ ಜ್ಯೂಸ್ ಆ್ಯಂಡ್ ಚಾಟ್ಸ್ ಅಂಗಡಿಯಲ್ಲಿ ನಡೆದಿದೆ. ಅಂಗಡಿಗೆ ಭೇಟಿ ನೀಡಿದ ಅಪರಿಚಿತ ವ್ಯಕ್ತಿ ಜ್ಯೂಸ್ ಆ್ಯಂಡ್ ಚಾಟ್ಸ್ ಅಂಗಡಿಯಲ್ಲಿದ್ದ ಯುವತಿಯನ್ನು ಉದ್ದೇಶಿಸಿ “ಕುಂಬ್ರಕಟ್ಟೆಯ ಬಳಿ ನಮ್ಮ ಪೊಲೀಸ್ ಜೀಪ್ ನಿಂತಿದೆ. ನಾವಿಲ್ಲಿ ಗಾಂಜಾ ದಂಧೆಕೋರರನ್ನು ಹಿಡಿಯಲು ಬಂದಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಗಾಂಜಾ ಸಿಕ್ಕರೆ ನಮಗೆ ಭಾರಿ ಹಣ ಮತ್ತು ಆಕರ್ಷಕ ಐಫೋನ್ ಸಿಗುತ್ತದೆ. ನಮಗೆ ಕಾರ್ಯಾಚರಣೆಯಲ್ಲಿ ಸಹಕಾರ ನೀಡಿದರೆ ನಮ್ಮಲ್ಲಿರುವ ಐಫೋನ್ ನಿಮಗೂ ಕೊಡುವುದಾಗಿ ನಂಬಿಸಿದ್ದಾರೆ”. ಬಳಿಕ ಅವರು ಯುವತಿಯ ಊರು ಮನೆಯ ವಿಳಾಸವನ್ನು ಕೇಳಿ, ನಿಮ್ಮ ತಂದೆ ಎಲ್ಲ ನನಗೆ ಚೆನ್ನಾಗಿ ಗೊತ್ತಿದ್ದಾರೆ ಎಂದು ಪರಿಚಯಸ್ಥನಂತೆ ನಟಿಸಿದ್ದಾನೆ. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯು ನನಗೆ ತುರ್ತಾಗಿ 3500ರೂಪಾಯಿ ಬೇಕೆಂದು ಯುವತಿಯ ಬಳಿ ಕೇಳಿದ್ದಾನೆ. ಅದಕ್ಕೆ ಯುವತಿಯು ಗೂಗಲ್ ಪೇ ಮಾಡುವುದಾಗಿ ಹೇಳಿದಾಗ ವ್ಯಕ್ತಿಯು ನನಗೆ ನಗದು ಹಣದ ಅವಶ್ಯಕತೆ ಇದೆ ಎಂದು ತಿಳಿಸಿ, ಯುವತಿಯ ಬಳಿಯಿಂದ 3500ರೂಪಾಯಿಗಳನ್ನು ಪಡೆದುಕೊಂಡಿದ್ದಾನೆ. ನಂತರ ಅಪರಿಚಿತ ವ್ಯಕ್ತಿಯು ಬೈಕ್ ಏರಿ ಪರಾರಿಯಾಗಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಹಣ ಪಡೆದುಕೊಂಡು ಹೋದ ಪೊಲೀಸ್ ಎಷ್ಟು ಹೊತ್ತಾದರೂ ಬಾರದಿರುವುದನ್ನು ಕಂಡು ಯುವತಿಯು ಕುಂಬ್ರಕಟ್ಟೆಯ ಬಳಿ ಹೋಗಿ ನೋಡಿದಾಗ ನಿಜವಾದ ಸಂಗತಿ ಬೆಳಕಿಗೆ ಬಂದಿದೆ. ಅಲ್ಲಿ ಆ ವ್ಯಕ್ತಿಯಾಗಲಿ, ಪೊಲೀಸ್ ಜೀಪ್ ಆಗಲಿ ಏನೂ ಇರಲಿಲ್ಲ. ಆಗ ಯುವತಿಗೆ ತಾನು ವಂಚನೆಗೆ ಒಳಗಾಗಿರುವುದರ ಅರಿವಾಗಿದೆ.

•ಬಂಟ್ವಾಳ: ದನದ ಮಾಂಸ ವಶ

ಬಂಟ್ವಾಳ: ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 11ಕೆಜಿ ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ, ಕಾವಳಪಡೂರು ಗ್ರಾಮದ ಗುಂಪುಕಲ್ಲು ಎನ್ನುವಲ್ಲಿ ನಡೆದಿದೆ. ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಗುಂಪುಕಲ್ಲು ನಿವಾಸಿಯಾದ ಸಿರಾಜ್ ಅವರ ಮನೆಯ ಹಿಂಬದಿಯ ಶೆಡ್ ಗೆ ತೆರಳಿ ಪರಿಶೀಲನೆಯನ್ನು ನಡೆಸಿದಾಗ, ಫ್ರಿಡ್ಜ್ ನ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಮಾಂಸ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಒಂದು ಕೆಜಿಯಂತೆ ಪಾರದರ್ಶಕ ಕವರ್ ಗಳಲ್ಲಿ 10 ಕೆಜಿ ಮತ್ತು ಕಪ್ಪು ಕವರ್ ಒಂದರಲ್ಲಿ ಒಂದು ಕೆಜಿ ಸೇರಿದಂತೆ ಒಟ್ಟು 2200 ರೂಪಾಯಿ ಬೆಲೆ ಬಾಳುವ ಸುಮಾರು 11ಕೆಜಿ ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯಾದ ಸಿರಾಜ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

•ಮಂಗಳೂರು: ಅಣ್ಣನ ಕೊಲೆ; ತಮ್ಮನ ಬಂಧನ

ಮಂಗಳೂರು: ಮೊಬೈಲ್ ವಿಚಾರವಾಗಿ ಅಣ್ಣತಮ್ಮರ ನಡುವೆ ಕಲಹ ಏರ್ಪಟ್ಟಿದ್ದು, ಅದು ಕೊಲೆಯೊಂದಿಗೆ ಅಂತ್ಯ ಕಂಡಿರುವ ಘಟನೆ, ಭಾನುವಾರದಂದು ಬಿಜೈ ಕೊಟ್ಟಾರ್ ತಿರುವಿನ ಬಳಿ ನಡೆದಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾದ ಅಣ್ಣತಮ್ಮಂದಿರು ಕೊಟ್ಟಾರ್ ತಿರುವಿನ ಸಮೀಪದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದರು. ತಾಯಿ ಗೂಡಂಗಡಿ ನಡೆಸುತ್ತಿದ್ದರು ಎನ್ನುವ ಮಾಹಿತಿ ಲಭಿಸಿದೆ. ಇಬ್ಬರಿಗೂ ಕುಡಿತದ ಚಟವಿದ್ದು, ಇಬ್ಬರ ನಡುವೆ ಮೊಬೈಲ್ ವಿಚಾರವಾಗಿ ಕಲಹ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ತಮ್ಮ ಕುಡಿದ ಮತ್ತಿನಲ್ಲಿ ಅಣ್ಣನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ತಾಯಿ ಅಂಗಡಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಹಿರಿಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ತಕ್ಷಣ ಅವನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಆತ ಸಾವನ್ನಪ್ಪಿದ್ದ ಎನ್ನುವ ಸಂಗತಿ ತಿಳಿದುಬಂದಿದೆ.‌ ಕೊಲೆಯಾದ ವ್ಯಕ್ತಿಯನ್ನು ಅಡಿಯಪ್ಪ ಎಂದು, ಆರೋಪಿಯನ್ನು ರಾಜು ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಬೆಳ್ತಂಗಡಿ: ಎಸ್ಐಟಿ ಸಬ್ ಇನ್ಸ್ಪೆಕ್ಟರ್ ವಿನೋದ್ ರೆಡ್ಡಿ ಅಮಾನತು

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ಪೆಕ್ಟರ್ ವಿನೋದ್ ರೆಡ್ಡಿ ಅವರನ್ನು ಅಮಾನತು ಮಾಡಿರುವ ಘಟನೆ, ಸೋಮವಾರದಂದು ನಡೆದಿದೆ. ಬುರುಡೆ ಪ್ರಕರಣದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳವು ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಇನ್ಸ್ಪೆಕ್ಟರ್ ಆಗಿ, ಬಳಿಕ ಮುಂಡಗೋಡು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದ ವಿನೋದ್ ರೆಡ್ಡಿ ವರ್ಗಾವಣೆ ವಿಚಾರವಾಗಿ ಡೀಲಿಂಗ್ ಹಾಗೂ ತಿಂಗಳ ಮಾಮೂಲಿ ವಿಚಾರವಾಗಿ ಮಾತನಾಡಿದ ಆಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಎಸ್ ಪಿ ದೀಪನ್, ಪಿಎಸ್ಐ ಕಿರಣ್ ಪಾಟೀಲ್ ಮತ್ತು ಪಿಎಸ್ಐ ಕೃಷ್ಣ ಮತ್ತು ವಿನೋದ್ ರೆಡ್ಡಿ ಸೇರಿ ವಿಶೇಷ ತನಿಖಾ ದಳದ ಪ್ರಾಥಮಿಕ ತನಿಖೆಯ ಬಳಿಕ ಅಮಾನತುಗೊಳಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

Categories
Uncategorized

ಇಂಟರೆಸ್ಟ್ ನ್ಯೂಸ್ 74 ವರ್ಷಕ್ಕೆ ಅವಳಿ ಹೆಣ್ಣು ಹೆತ್ತ ತಾಯಿ! – ಮಕ್ಕಳಿಗಾಗಿ 57 ವರ್ಷ ಕಾದಿದ್ದ ದಂಪತಿಗಳು – ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ತಾಯಿ ದಾಖಲೆ

ವೈದ್ಯಕೀಯ ಲೋಕವೇ ಬೆರಗಾಗುವಂತಹ ಘಟನೆಯೊಂದರಲ್ಲಿ ಆಂಧ್ರಪ್ರದೇಶದ 74 ವರ್ಷದ ವೃದ್ಧೆಯೊಬ್ಬರು ಐವಿಎಫ್ (IVF) ತಂತ್ರಜ್ಞಾನದ ನೆರವಿನಿಂದ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
​ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪರ್ತಿಪಡು ಗ್ರಾಮದ ನಿವಾಸಿ ಮಂಗಾಯಮ್ಮ (74) ಹಾಗೂ ಅವರ ಪತಿ ಇ. ರಾಜಾರಾವ್ (82) ಈ ಅಪರೂಪದ ಸಾಧನೆ ಮಾಡಿದ ದಂಪತಿ. 1962ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಮದುವೆಯಾಗಿ 57 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಸಮಾಜದ ನಿಂದನೆಗಳನ್ನು ಮೆಟ್ಟಿ ನಿಂತು ಕೊನೆಗೂ ತಾಯ್ತನದ ಕನಸು ನನಸು ಮಾಡಿಕೊಂಡಿದ್ದಾರೆ. ಗುಂಟೂರಿನ ಅಹಲ್ಯಾ ನರ್ಸಿಂಗ್ ಹೋಮ್‌ನಲ್ಲಿ ಡಾ. ಉಮಾಶಂಕರ್ ಅವರ ನೇತೃತ್ವದ ವೈದ್ಯರ ತಂಡವು ಇವರಿಗೆ ಐವಿಎಫ್ ಚಿಕಿತ್ಸೆ ನೀಡಿತ್ತು. ವಯಸ್ಸಿನ ಕಾರಣದಿಂದಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು, ತಾಯಿ ಮತ್ತು ಇಬ್ಬರೂ ನವಜಾತ ಶಿಶುಗಳು ಸಂಪೂರ್ಣ ಆರೋಗ್ಯವಾಗಿದ್ದಾರೆ.
​ಈ ಹಿಂದೆ 2016ರಲ್ಲಿ ಪಂಜಾಬ್‌ನ 72 ವರ್ಷದ ದಲ್ಜಿಂದರ್ ಕೌರ್ ಎಂಬುವವರು ಮಗುವಿಗೆ ಜನ್ಮ ನೀಡಿದ್ದು ದಾಖಲೆಯಾಗಿತ್ತು. ಈಗ 74ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಮಂಗಾಯಮ್ಮ ಅವರು ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Categories
Uncategorized

•ಶಿವಮೊಗ್ಗ: ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ •ಸಾಗರ: ಮಹಿಳೆ ಮೇಲೆ ಹಲ್ಲೆ; ಚಿನ್ನದ ಸರ ಕಳುವು •ಶಿರಾಳಕೊಪ್ಪ: ಮೆಕ್ಕೆಜೋಳ ಹೊಲದಲ್ಲಿ ಯುವಕನ ಶವ ಪತ್ತೆ

ಶಿವಮೊಗ್ಗ: 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮರಣ ಪತ್ರವನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಭಾನುವಾರದಂದು ಗೋಪಿಶೆಟ್ಟಿಕೊಪ್ಪದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಸೃಷ್ಟಿ ಎಂದು ಗುರುತಿಸಲಾಗಿದೆ. ರಾಘವೇಂದ್ರ ಸ್ವಾಮಿಗಳ ಆರಾಧನೆ ಇದ್ದ ಹಿನ್ನೆಲೆಯಲ್ಲಿ ಸೃಷ್ಟಿಯ ಪೋಷಕರು ರಾಯರ ಮಠಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಸೃಷ್ಟಿ ಮರಣ ಪತ್ರವನ್ನು ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೃಷ್ಟಿಯ ಪೋಷಕರು ಪೂಜೆಯನ್ನು ಮುಗಿಸಿಕೊಂಡು ಮನೆಗೆ ಹಿಂತಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ ಮಾಹಿತಿ ಮತ್ತು ಮರಣ ಪತ್ರದ ಆಧಾರದ ಮೇಲೆ ಪೋಷಕರು ಆಕೆಗೆ ಓದು ಓದು ಎಂದು ಒತ್ತಡ ಹಾಕುತ್ತಿದ್ದುದೆ ಸೃಷ್ಟಿಯ ಆತ್ಮಹತ್ಯೆಗೆ ಕಾರಣವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ನಿಖರವಾದ ಕಾರಣ ಏನೆಂಬುದು ತನಿಖೆಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ. ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡೂರು: ವಾಹನ ಢಿಕ್ಕಿ; ಬೈಕ್ ಸವಾರ ಸಾವು

ಕಡೂರು: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಯುವಕ ಸಾವನ್ನಪ್ಪಿರುವ ಘಟನೆ, ಸೋಮವಾರದಂದು ಸರಸ್ವತಿಪುರ- ಗೋವಿಂದಪುರ ರಸ್ತೆಯಲ್ಲಿ ನಡೆದಿದೆ. ಮೃತ ಯುವಕನನ್ನು ಗೋವಿಂದಪುರ ಗ್ರಾಮದ ವೈಂಡಿಂಗ್ ಕೆಲಸ ಮಾಡಿಕೊಂಡಿದ್ದ ಯಶವಂತ್ ನಾಯ್ಕ ಎಂದು ಗುರುತಿಸಲಾಗಿದೆ. ಯಶವಂತ್ ಅವರು ಕೆಲಸ ಮುಗಿಸಿಕೊಂಡು ಸಖರಾಯಪಟ್ಟಣದಿಂದ ತನ್ನ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಅತಿವೇಗ ಮತ್ತು ಚಾಲಕನ ಅಜಾಗರೂಕತೆಯಿಂದ ಬಂದ ವಾಹನವು ಯಶವಂತ್ ಅವರ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಯಶವಂತ್ ಅವರಿಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅಷ್ಟೇ ಅಲ್ಲದೆ ಚಾಲಕ ವಾಹನವನ್ನು ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಯಶವಂತ್ ಅವರ ತಾಯಿ ಸುಮಿತ್ರಾ ಬಾಯಿ ಅವರು ಪೊಲೀಸರಿಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಸಾಗರ: ಮಹಿಳೆ ಮೇಲೆ ಹಲ್ಲೆ; ಚಿನ್ನದ ಸರ ಕಳುವು

ಸಾಗರ: ಮನೆಯಲ್ಲಿ ಮಹಿಳೆಯೊಬ್ಬರೇ ಇದ್ದ ಸಂದರ್ಭದಲ್ಲಿ ಖದೀಮರು ಆಕೆಯ ಮೇಲೆ ಹಲ್ಲೆ ನಡೆಸಿ, ಚಿನ್ನದ ಸರವನ್ನು ಲಪಟಾಯಿಸಿರುವ ಘಟನೆ, ಭಾನುವಾರದಂದು ಖಂಡಿಕಾ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾದ ಗೀತಾ ಅವರು ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ಅಕ್ರಮವಾಗಿ ಆಕೆಯ ಮನೆಯನ್ನು ಪ್ರವೇಶಿಸಿರುವುದಷ್ಟೇ ಅಲ್ಲದೆ, ಗೀತಾ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಕತ್ತಿನಲ್ಲಿ ಧರಿಸಿದ್ದ ಚಿನ್ನದ ಸರವನ್ನು ಕೂಡ ದೋಚಿಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಗಾಯಗೊಂಡ ಗೀತಾ ಅವರನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಶಿರಾಳಕೊಪ್ಪ: ಮೆಕ್ಕೆಜೋಳ ಹೊಲದಲ್ಲಿ ಯುವಕನ ಶವ ಪತ್ತೆ

ಶಿರಾಳಕೊಪ್ಪ: ಮೆಕ್ಕೆಜೋಳ ಹೊಲದಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ, ಮಳವಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮಳವಳ್ಳಿ ಗ್ರಾಮದ ನಿವಾಸಿ ವಡಕೇಶಪ್ಪ ಎಂದು ಗುರುತಿಸಲಾಗಿದೆ. ವಡಕೇಶಪ್ಪ ಅವರು ಶನಿವಾರದಂದು ಸಂಜೆ ಮೆಕ್ಕೆಜೋಳದ ಹೊಲಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿ, ಅಲ್ಲಿಂದ ತೆರಳಿದ್ದು ಬಳಿಕ ಮನೆಗೆ ಹಿಂತಿರುಗಿ ಬರಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಕುಟುಂಬಸ್ಥರು ಭಾನುವಾರ ಬೆಳಿಗ್ಗೆಯಿಂದ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ವಡಕೇಶಪ್ಪ ಅವರ ಮೃತದೇಹ ಕೈಕಾಲು ಕಟ್ಟಿದ ಭಂಗಿಯಲ್ಲಿ ಅದೇ ಮೆಕ್ಕೆಜೋಳ ಹೊಲದಲ್ಲಿ ಕಂಡುಬಂದಿದೆ. ವಡಕೇಶಪ್ಪ ಅವರ ಮೃತದೇಹದಲ್ಲಿ ಬಾಯಿಯ ಭಾಗದಲ್ಲಿ ವಿಷ ಪದಾರ್ಥ ಇಟ್ಟಿರುವಂತೆ ಕಂಡುಬಂದಿದ್ದು, ಸಾವಿನ ಕುರಿತು ಹಲವು ಬಗೆಯ ಅನುಮಾನದ ಹುತ್ತ ಬೆಳೆದಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಎಸ್ ಪಿಎಜೆ ಕಾರ್ಯಪ್ಪ ಮತ್ತು ಪಿಎಸ್ಐ ಪ್ರಶಾಂತ್ ಕುಮಾರ್ ಅವರು ಪರಿಶೀಲನೆಯನ್ನು ನಡೆಸಿದರು. ತನಿಖೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳದಲ್ಲಿ ಅನೇಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
Uncategorized

ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟ ಜೋರು! – ಮಂಜುನಾಥ ಗೌಡ ನೇತೃತ್ವದಲ್ಲಿ ಕಾರಣಗಿರಿಯಿಂದ ಪಾದಯಾತ್ರೆ – ಸಾವಿರಾರು ರೈತರು ಹಾಜರ್: ಹಚ್ಚಿತು ಹೋರಾಟದ ಕಿಚ್ಚು – ವಿಜಯೇಂದ್ರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಪ್ರಮುಖರ ಸಭೆ – ಕಸ್ತೂರಿ ರಂಗನ್ ವರದಿ ಜಾರಿಗೆ ಡಾ.ಜಿ.ಪರಮೇಶ್ವರ ತೀವ್ರ ಖಂಡನೆ

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿ ನೀತಿಯನ್ನು ವಿರೋಧಿಸಿ ಸಹಕಾರ ನಾಯಕರು ಆದ ಡಾ.ಆರ್ ಎಂ ಮಂಜುನಾಥಗೌಡ ನೇತೃತ್ವದಲ್ಲಿ ಕಾರಣಗಿರಿಯಿಂದ ಹೊಸನಗರದವರೆಗೆ ಪಾದಯಾತ್ರೆಗೆ ಭಾರೀ ಜನ ಸ್ಪಂದನೆ ವ್ಯಕ್ತವಾಗಿದೆ.
ಪ್ರತಿಭಟನೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ,ಎಂಎಡಿಬಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ ಹಲವಾರು ನಾಯಕರು ಭಾಗಿಯಾದರು. ಮಲೆನಾಡಿನ ಈ ಜ್ವಲoತ ಸಮಸ್ಯೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿ ಸೂಚನೆಯನ್ನು ಕುರಿತು ವಿರೋಧ ವ್ಯಕ್ತಪಡಿಸಿ ಹೊಸನಗರ ತಾಲ್ಲೂಕು ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಈ ಪ್ರತಿಭಟನೆಗೆ ಕರೆ ನೀಡಿತ್ತು. ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಶಿವಮೊಗ್ಗದ ಅಧ್ಯಕ್ಷರಾದ ಆರ್.ಎಂ. ಮಂಜುನಾಥಗೌಡ ಮತ್ತು ಸಂಚಾಲಕರಾದ ಬಿ.ಆರ್. ಜಯಂತ್ ಅವರ ನೇತೃತ್ವದಲ್ಲಿ ಮಲೆನಾಡು ಪ್ರದೇಶ ಮತ್ತು ರೈತರ ರಕ್ಷಣೆಯನ್ನು ಒಳಗೊಂಡಂತೆ ಹಲವಾರು ಅಂಶಗಳನ್ನು ಆಧರಿಸಿ ಕಾರಣಗಿರಿ ಶ್ರೀಸಿದ್ಧಿವಿನಾಯಕ ದೇವಸ್ಥಾನದಿಂದ ಪಾದಯಾತ್ರೆ ಮತ್ತು ಬಹಿರಂಗ ಸಭೆ ನಡೆಯಿತು. ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿ, ಕಸ್ತೂರಿ ರಂಗನ್ ವರದಿ ಜಾರಿಯಿಂದ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಗಟ್ಟಿ, ಮಲೆನಾಡಿನ ಹಿತರಕ್ಷಣೆಯನ್ನು ಕಾಪಾಡಬೇಕೆಂದು ಕರೆ ನೀಡಲಾಯಿತು
ಪ್ರಮುಖರಾದ ಕಲಗೋಡು ರತ್ನಾಕರ್, ವಿದ್ಯಾಧರ ಗುರುಶಕ್ತಿ, ಚಂದ್ರ ಮೌಳಿ, ಶ್ವೇತಾ ಬಂಡಿ, ಸುಬ್ರಮಣ್ಯ ಮಾಸ್ತಿಕಟ್ಟೆ, ಮುರಳಿಧರ್ ಸೇರಿ ಅನೇಕರು ಹಾಜರಿದ್ದರು.

ವಿಜಯೇಂದ್ರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಪ್ರಮುಖರ ಸಭೆ

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಕರಡು ಜಾರಿ ಹಾಗೂ ಅದರಿಂದ ಮಲೆನಾಡು ಭಾಗದ ಜನರ ಮೇಲಾಗುವ ಪರಿಣಾಮಗಳ ಕುರಿತು, ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಶಿವಮೊಗ್ಗ ವಿಭಾಗ ಮಟ್ಟದ (ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳು) ಪಕ್ಷದ ಪ್ರಮುಖರ ವಿಶೇಷ ಸಭೆ ನಡೆಯಿತು.
​ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಜೊತೆಗೆ ಮಲೆನಾಡಿನ ಜನರ ಜೀವನೋಪಾಯ, ಮೂಲಭೂತ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ಕಾಯುವುದು ನಮ್ಮ ಮೊದಲ ಆದ್ಯತೆಯಾಗಿದೆ. ಪರಿಸರ ರಕ್ಷಣೆ ಮತ್ತು ಜನರ ಕಲ್ಯಾಣ — ಎರಡಕ್ಕೂ ಸಮತೋಲನದ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಕ್ಷ ಬದ್ಧವಾಗಿದೆ ಎಂದು ನಾಯಕರು ಹೇಳಿದ್ದಾರೆ.

ಕಸ್ತೂರಿ ರಂಗನ್ ವರದಿ ಜಾರಿಗೆ ಡಾ.ಜಿ.ಪರಮೇಶ್ವರ ತೀವ್ರ ಖಂಡನೆ

ಬೆಂಗಳೂರು: ಪಶ್ಚಿಮ ಘಟ್ಟಗಳ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ ಅಧಿಸೂಚನೆಯನ್ನು ರಾಜ್ಯದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು “ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ 1449 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳು ಎಂದು ಘೋಷಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯು ರಾಜ್ಯದ ಲಕ್ಷಾಂತರ ಕುಟುಂಬಗಳಲ್ಲಿ ಗಂಭೀರ ರೀತಿಯ ಆತಂಕವನ್ನು ಮೂಡಿಸಿದೆ. ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಈ ನಿರ್ಧಾರದ ಬಗ್ಗೆ ಚರ್ಚಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ವಿಧಾನಮಂಡಲದ ಒಂದು ದಿನದ ವಿಶೇಷ ಅಧಿಸೂಚನೆಯನ್ನು ಕರೆಯಲು ಸರ್ಕಾರವು ನಿರ್ಧರಿಸಿದೆ. ಶತಮಾನಗಳಿಂದಲೂ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಜನರು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಾ ಪರಿಸರವನ್ನು ಗೌರವಿಸುವ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಮಾನವ ಮತ್ತು ಪ್ರಕೃತಿ ನಡುವಿನ ಈ ನಿಕಟ ಬಾಂಧವ್ಯವೇ ಪಶ್ಚಿಮ ಘಟ್ಟಗಳ ಜೀವಂತಿಕೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ. ಇಂತಹ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಏಕಾಏಕಿ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುವುದು ಜನವಿರೋಧಿ ಹಾಗೂ ಅಮಾನವೀಯ ಘಟನೆಯಾಗಿದೆ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗಳನ್ನು ಕರ್ನಾಟಕ ಸರ್ಕಾರವು ಇದುವರೆಗೆ ಆರು ಬಾರಿ ತಿರಸ್ಕರಿಸಿದೆ ಮತ್ತು ತನ್ನ ಸ್ಪಷ್ಟವಾದ ನಿಲುವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ ಎನ್ನಲಾಗಿದೆ. ಹೀಗಿದ್ದರೂ ಕೂಡ ರಾಜ್ಯ ಸರ್ಕಾರದ ಕಳಕಳಿಯನ್ನು ಲೆಕ್ಕಿಸದೆ ತನ್ನ ನಿರ್ಧಾರವನ್ನು ಕರ್ನಾಟಕದ ಜನರ ಮೇಲೆ ಹೇರಲು ಕೇಂದ್ರ ಸರ್ಕಾರವು ಪದೇಪದೇ ಪ್ರಯತ್ನಿಸುತ್ತಿರುವುದು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಅಲ್ಲದೆ ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರವು ರಾಜ್ಯದ ಜನರ ಬದುಕು ಮತ್ತು ಜೀವನೋಪಾಯದ ಮೇಲೆ ನೇರ ಪರಿಣಾಮ ಬೀರುವ ಅನ್ಯಾಯದ ಹಾದಿ ಹಿಡಿದಿದೆ. ಇದು ಪಕ್ಷ ಸಿದ್ಧಾಂತಗಳು ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ ವಿಷಯವಾಗಿದೆ. ಜನರ ಬದುಕು ಮತ್ತು ಜೀವನೋಪಾಯಕ್ಕಿಂತ ದೊಡ್ಡ ಸಿದ್ಧಾಂತ ಯಾವುದೂ ಇರಲು ಸಾಧ್ಯವಿಲ್ಲ ಎಂದು ನಾನು ಬಲವಾಗಿ ನಂಬಿದ್ದೇನೆ ಎಂದು ಡಾ.ಜಿ.ಪರಮೇಶ್ವರ್ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವರದಿ ಜಾರಿಯಾಗದಂತೆ ಸದನದಲ್ಲಿ ರಾಜ್ಯ ಸರ್ಕಾರವು ಕೈಗೊಳ್ಳುವ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕರು ಬೆಂಬಲ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.