Categories
Uncategorized

ಸದ್ಯಕ್ಕಿಲ್ವಾ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ? – ಡಿಸೆಂಬರ್ ಅಲ್ಲಿ ಚುನಾವಣೆ: ಶಾಸಕಾಂಗ ಸಭೆಯಲ್ಲಿ ವಿರೋಧ – ರಾಜ್ಯದಲ್ಲಿ ಭೀಕರ ರೀತಿಯಲ್ಲಿ ಕ್ಷಾಮ: ಈಗ ಅನುದಾನ ಇಲ್ಲ – ಚುನಾವಣೆ ಮಾಡಲೇಬೇಕೆಂದ ಮುಖ್ಯಮಂತ್ರಿ ಡಿಕೆಶಿ

ಬೆಂಗಳೂರು: ಮಂಗಳೂರಿನಲ್ಲಿ ನಡೆದ ರಾಜ್ಯದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಅಧಿಕಾರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳ ಒಳಗಾಗಿ ಚುನಾವಣೆಯನ್ನು ನಡೆಸುವ ಕುರಿತು ಘೋಷಣೆ ಮಾಡಲಾಗಿತ್ತು. ಆದರೆ, ಸೋಮವಾರದಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈಗಲೇ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸುವುದು ಬೇಡ ಎಂದು ಕೆಲವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಭೀಕರ ರೀತಿಯಲ್ಲಿ ಕ್ಷಾಮ ಆವರಿಸಿರುವುದು, ಚುನಾವಣೆಗಳನ್ನು ನಡೆಸಲು ಸೂಕ್ತ ಪ್ರಮಾಣದಲ್ಲಿ ಅನುದಾನಗಳು ಲಭಿಸದಿರುವುದರಿಂದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆಗಳನ್ನು ನಡೆಸಿದರೆ ಸ್ಥಳೀಯ ಮಟ್ಟದಲ್ಲಿ ನಿಭಾಯಿಸುವುದು ಅಸಾಧ್ಯವಾಗುತ್ತದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ. ಹೀಗಾಗಿ ಈಗಾಗಲೇ ಡಿಸೆಂಬರ್ ತಿಂಗಳ ಒಳಗೆ ಚುನಾವಣೆಗಳನ್ನು ನಡೆಸುವ ಕುರಿತು ಘೋಷಿಸಿರುವುದನ್ನು ಮುಂದೂಡುವುದು ಸೂಕ್ತ ಎಂದು ಶಾಸಕರು ತಿಳಿಸಿದ್ದಾರೆ.

ಚುನಾವಣೆ ಮಾಡಲೇಬೇಕೆಂದ ಮುಖ್ಯಮಂತ್ರಿ ಡಿಕೆಶಿ

ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು “ಚುನಾವಣೆಯನ್ನು ಮಾಡಲೇಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ ಚುನಾವಣಾ ಸಿದ್ಧತೆ ಆರಂಭಿಸಿ ಎಂದು ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ. ಇದರೊಂದಿಗೆ 30ಕ್ಕೂ ಹೆಚ್ಚು ಶಾಸಕರು ಪಿಡಿಒಗಳು ನಮ್ಮ ಮಾತುಗಳನ್ನು ಕೇಳುತ್ತಿಲ್ಲ. ಆದ್ದರಿಂದ ಪಿಡಿಒಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಬದಲಿಗೆ ಇದಕ್ಕೂ ಮೊದಲು ಇದ್ದ ಪದ್ಧತಿಯಂತೆ ನಡೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಅಂದರೆ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ ಪಿಡಿಒ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ನಡೆಸುವ ಕುರಿತು ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಇದರ ಪರಿಣಾಮದಿಂದ ಸ್ಥಳೀಯ ಶಾಸಕರಿಗೆ ಅನೇಕ ಸಮಸ್ಯೆಗಳು ಎದುರಾಯಿತು ಎಂದು ಹೇಳಲಾಗುತ್ತಿದೆ. ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಗ್ಯಾರೆಂಟಿ ಅನುಷ್ಠಾನ ಸಮಿತಿಗಳಿಗೆ ಕ್ಷೇತ್ರವಾರು ಸದಸ್ಯರನ್ನು ನೇಮಿಸುವ ಕುರಿತು, ಭಾರತ್ ಜೋಡೋ ಸಮಿತಿಗಳಿಗೆ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ ನೂರು ಜನರ ತಂಡವನ್ನು ಕಟ್ಟುವ ಕುರಿತು ಶಾಸಕರಿಗೆ ಸೂಚನೆಯನ್ನು ನೀಡಿದರು ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.

Categories
Uncategorized

ಚಿನ್ನ ಒಂದೇ ದಿನಕ್ಕೆ ಬರೋಬ್ಬರಿ 1520 ರೂ ಇಳಿಕೆ! – ಗ್ರಾಹಕರಿಗೆ ಖರೀದಿಗೆ ಇದು ಸರಿಯಾದ ಸಮಯ – ಬೆಳ್ಳಿ ಬೆಲೆ ಕೂಡ ಇಳಿಕೆ: ಚಿನ್ನ, ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್

ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಬೆಲೆ ಇಂದು ಇಳಿಕೆಯಾಗಿದ್ದು, ಬೆಳ್ಳಿ ಬೆಲೆ 5 ಸಾವಿರ ರೂ ಹಾಗೂ ಚಿನ್ನದ ಬೆಲೆ 13995 ರೂಪಾಯಿಗೆ ಇಳಿದಿದೆ.
ಸೆಪ್ಟೆಂಬರ್ 24, 2026 ಗುರುವಾರದಂದು 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 152 ರೂ ಇಳಿಕೆಯಾಗಿದ್ದು, 1 ಗ್ರಾಂ ಬೆಲೆ ಈಗ 15268 ರೂ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 1520 ರೂ ಇಳಿಕೆಯಾಗಿದ್ದು 1,52,680 ರೂಪಾಯಿಗೆ ಇಂದು ಇಳಿಕೆಯಾಗಿದೆ.

– 22 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು 140 ರೂ ಇಳಿಕೆಯಾಗಿದೆ. 1 ಗ್ರಾಂ ಬೆಲೆ ಈಗ 13995 ರೂ ಆಗಿದ್ದು 10 ಗ್ರಾಂ ಬೆಲೆ 1400 ರೂ ಇಳಿಕೆಯಾಗಿ, ಈಗ ಬೆಲೆ 1,39,950 ರೂಪಾಯಿ ದಾಖಲಾಗಿದೆ.

ಬೆಂಗಳೂರಿನ ಬೆಲೆ ಎಷ್ಟಿದೆ?
ಬೆಂಗಳೂರಲ್ಲಿ ಶುದ್ಧ ಚಿನ್ನದ ಗ್ರಾಂ ಬೆಲೆ 15268 ರೂ ಇದ್ದು, ಬೆಳ್ಳಿ ಬೆಲೆ ಗ್ರಾಂ ಗೆ 245 ರೂ ಇದೆ.

– ಬೆಳ್ಳಿ ಬೆಲೆ ಕೂಡ ಇಳಿಕೆ

ಬೆಳ್ಳಿ ಬೆಲೆ 5 ಸಾವಿರ ರೂ ಇಳಿಕೆಯಾಗಿದೆ. ಗ್ರಾಂ ಬೆಲೆ 245 ರೂ ಆಗಿದ್ದು, ಕೆಜಿ ಬೆಲೆ 2,45,000 ರೂ ಆಗಿದೆ.

Categories
Uncategorized

ಸೆ.27 ಭಾನುವಾರ ಬ್ಯಾಂಕ್ ಓಪನ್ ಇರುತ್ತೆ! – ಕೇಂದ್ರ ಹಣಕಾಸು ಸಚಿವಾಲಯ ಆದೇಶ – ಸತತ 5 ದಿನ ಬ್ಯಾಂಕಿಂಗ್ ಸೇವೆ ಸ್ಥಗಿತ ತಪ್ಪಿಸಲು ಕ್ರಮ

ಹೊಸದಿಲ್ಲಿ: ದೇಶಾದ್ಯಂತ ಬ್ಯಾಂಕ್ ಒಕ್ಕೂಟಗಳು ಕರೆ ನೀಡಿರುವ ಮೂರು ದಿನಗಳ ಮುಷ್ಕರದ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳಲ್ಲಿ ಯಾವುದೇ ತೊಂದರೆಯಾಗದಂತೆ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಮುಂಬರುವ ಸೆಪ್ಟೆಂಬರ್ 27ರ ಭಾನುವಾರದಂದು ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸೆಪ್ಟೆಂಬರ್ 26 ನಾಲ್ಕನೇ ಶನಿವಾರ ಹಾಗೂ ಸೆಪ್ಟೆಂಬರ್ 27 ಭಾನುವಾರದ ರಜಾ ದಿನಗಳಾಗಿವೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ 28, 29 ಮತ್ತು 30 ರಂದು ಬ್ಯಾಂಕ್ ನೌಕರರ ಒಕ್ಕೂಟಗಳು ಮುಷ್ಕರ ನಡೆಸಲು ನಿರ್ಧರಿಸಿವೆ. ಈ ರೀತಿ ಸತತ 5 ದಿನಗಳ ಕಾಲ ಬ್ಯಾಂಕ್ ಶಾಖೆಗಳು ಮುಚ್ಚಲ್ಪಟ್ಟರೆ ಸಾರ್ವಜನಿಕರು, ವ್ಯಾಪಾರಿಗಳು ಹಾಗೂ ತುರ್ತು ಆರ್ಥಿಕ ವಹಿವಾಟು ನಡೆಸುವವರು ತೀವ್ರ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ, ಗ್ರಾಹಕರ ಅನುಕೂಲಕ್ಕಾಗಿ ಸೆಪ್ಟೆಂಬರ್ 27ರಂದು ಶಾಖೆಗಳನ್ನು ತೆರೆದು ಸಾಮಾನ್ಯ ದಿನಗಳಂತೆಯೇ ಸೇವೆ ಒದಗಿಸಲು ಆದೇಶಿಸಲಾಗಿದೆ.

ಸೆಪ್ಟೆಂಬರ್ 27ರಂದು ಎಲ್ಲಾ ಬ್ಯಾಂಕ್ ಶಾಖೆಗಳು, ಆಡಳಿತ ಕಚೇರಿಗಳು, ಎಟಿಎಂ-ಲಿಂಕ್ ಶಾಖೆಗಳು ಹಾಗೂ ಕರೆನ್ಸಿ ಚೆಸ್ಟ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ನೀಡಿದೆ.

– ಡಿಜಿಟಲ್ ಸೇವೆ ಬಳಸಲು ಸಲಹೆ

ಸೆಪ್ಟೆಂಬರ್‌ 28ರಿಂದ 30 ರವರೆಗೆ ನಡೆಸಲು ಉದ್ದೇಶಿಸಿರುವ ಬ್ಯಾಂಕ್‌ ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ತುರ್ತು ಬ್ಯಾಂಕಿಂಗ್‌ ವ್ಯವಹಾರಗಳನ್ನು ಮುಂಚಿತವಾಗಿ ಪೂರ್ಣಗೊಳಿಸುವಂತೆ ಕರ್ನಾಟಕ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ಮನವಿ ಮಾಡಿದೆ. ಮುಷ್ಕರದ ಅವಧಿಯಲ್ಲಿ ಬ್ಯಾಂಕ್‌ಗಳ ಶಾಖೆ ಆಧಾರಿತ ಸೇವೆಗಳಿಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ನಗದು ಹಣ ತೆಗೆಯುವುದು, ನಗದು ಠೇವಣಿ, ಹಣ ವರ್ಗಾವಣೆ, ಚೆಕ್‌ ವ್ಯವಹಾರ, ಬಿಲ್‌ ಪಾವತಿ, ಸರಕಾರಿ ಸಂಬಂಧಿತ ಪಾವತಿಗಳು ಹಾಗೂ ಸಾಲದ ಕಂತು ಪಾವತಿಗಳನ್ನು ಸೆಪ್ಟೆಂಬರ್‌ 28ಕ್ಕೂ ಮುನ್ನವೇ ಪೂರ್ಣಗೊಳಿಸುವಂತೆ ಸಲಹೆ ನೀಡಲಾಗಿದೆ.

ಗ್ರಾಹಕರು ಯುಪಿಐ ಮತ್ತು ಕ್ಯೂ ಆರ್‌ ಕೋಡ್‌ ಆಧಾರಿತ ಪಾವತಿಗಳು, ಮೊಬೈಲ್‌ ಬ್ಯಾಂಕಿಂಗ್‌, ಇಂಟರ್ನೆಟ್‌ ಬ್ಯಾಂಕಿಂಗ್‌, ಎಟಿಎಂಗಳು, ನಗದು ಠೇವಣಿ ಯಂತ್ರಗಳು, ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳು, ಪಾಯಿಂಟ್‌ ಆಫ್‌ ಸೇಲ್‌ ಯಂತ್ರಗಳು ಮತ್ತು ಭಾರತ್‌ ಬಿಲ್‌ ಪೇಮೆಂಟ್‌ ವ್ಯವಸ್ಥೆಗಳನ್ನು ಬಳಸಬಹುದಾಗಿದೆ. ಬಿಸಿನೆಸ್‌ ಕರೆಸ್ಪಾಂಡೆಂಟ್‌ಗಳು ಹಾಗೂ ಗ್ರಾಹಕ ಸೇವಾ ಕೇಂದ್ರಗಳ ಮೂಲಕವೂ ಕೆಲವು ಮೂಲ ಬ್ಯಾಂಕಿಂಗ್‌ ಸೇವೆಗಳು ಲಭ್ಯವಿರಲಿವೆ. ಎಟಿಎಂಗಳು ಮತ್ತು ನಗದು ಠೇವಣಿ ಯಂತ್ರಗಳಲ್ಲಿ ಅಗತ್ಯ ಪ್ರಮಾಣದ ಹಣ ಲಭ್ಯವಾಗುವಂತೆ ಬ್ಯಾಂಕ್‌ಗಳು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಲ್‌ಬಿಸಿ ಸೂಚಿಸಿದೆ. ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌, ಮೊಬೈಲ್‌ ಆ್ಯಪ್‌, ಎಸ್‌ಎಂಎಸ್‌ ಎಚ್ಚರಿಕೆಗಳು ಹಾಗೂ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ಮಾತ್ರ ಗ್ರಾಹಕರು ನಂಬಬೇಕು.

Categories
Uncategorized

ಉಳ್ಳಾಲ: ನೇಣು ಬಿಗಿದುಕೊಂಡು ವಿವಾಹಿತ ಯುವಕ ಆತ್ಮಹತ್ಯೆ •ಬೈಂದೂರು: ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ಮೇಲೆ ದಾಳಿ •ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ •ಉಡುಪಿ: ಮಾದಕ ವಸ್ತು ಮಾರಾಟ; 9 ಮಂದಿ ಬಂಧನ

ಉಳ್ಳಾಲ: ವಿವಾಹಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ, ತಲಪಾಡಿ ನಾರ್ಲಪಡೀಲ್ ಎನ್ನುವಲ್ಲಿ ನಡೆದಿದೆ. ಮೃತ ಯುವಕನನ್ನು ನಾರ್ಲಪಡೀಲ್ ನಿವಾಸಿ 35 ವರ್ಷದ ರಂಜಿತ್ ಎಂದು ಗುರುತಿಸಲಾಗಿದೆ. ತಾಯಿಗೆ ಊಟ ಮಾಡುವಂತೆ ತಿಳಿಸಿದ ರಂಜಿತ್ ತನ್ನ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ರಂಜಿತ್ ಗೆ ಆರು ತಿಂಗಳ ಮಗುವಿತ್ತು ಎನ್ನುವ ಮಾಹಿತಿ ಲಭಿಸಿದೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

•ಬೈಂದೂರು: ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ಮೇಲೆ ದಾಳಿ

ಬೈಂದೂರು: ಅಕ್ರಮ ಕೆಂಪುಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಪೊಲೀಸರು ದಾಳಿ ನಡೆಸಿದ ಘಟನೆ, ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎನ್ನುವಲ್ಲಿ ನಡೆದಿದೆ. ಬೀಟ್ ಅಧಿಕಾರಿಗಳು ನೀಡಿದ ಖಚಿತವಾದ ಮಾಹಿತಿಯ ಹಿನ್ನೆಲೆಯಲ್ಲಿ ಬೈಂದೂರು ಠಾಣೆಯ ಪಿಎಸ್ಐ ಸುನಿಲ್ ಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೆಂಪುಕಲ್ಲು ಗಣಿಗಾರಿಕೆಯ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿಗಳಾದ ರವೀಂದ್ರ ಪೂಜಾರಿ ಮತ್ತು ಸತೀಶ್ ಶೆಟ್ಟಿ ಅವರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಕೆಂಪುಕಲ್ಲುಗಳನ್ನು ತುಂಬಿದ 2 ಟಿಪ್ಪರ್ ಗಳು, ಬ್ಲೇಡ್ ಅಳವಡಿಸಿರುವ 2 ಪವರ್ ಟಿಲ್ಲರ್ ಮಿಷನ್ ಗಳು ಮತ್ತು 2 ಕಲ್ಲುಗಳನ್ನು ಎತ್ತುವ ಟ್ರ್ಯಾಲಿ ಮಿಷನ್ ಗಳು ಸೇರಿ ಸುಮಾರು 16.00.000 ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

•ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಬೆಳ್ತಂಗಡಿ: ವ್ಯಕ್ತಿಯೊಬ್ಬರು ಕಳೆದ ಮೂರು ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇದೀಗ ಶವವಾಗಿ ಕಂಡುಬಂದ ಘಟನೆ, ಬುಧವಾರದಂದು ಶಿಶಿಲ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಗುಂಡಿಕ್ಕಾಡು ನಿವಾಸಿಯಾದ ತನಿಯಪ್ಪ ಗೌಡ ಅವರು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ರಾಧಾಕೃಷ್ಣ ಗುತ್ತು, ಕುಶಾಲಪ್ಪ ಗೌಡ ಬದ್ರಿಜಾಲು, ಸುಬ್ರಾಯ ಗೌಡ ಬದ್ರಿಜಾಲು ಮತ್ತು ಶೀನಪ್ಪ ನಾಯ್ಕ ಮುಚ್ಚಿರಡ್ಕ ಅವರು ಶೋಧನಾ ಕಾರ್ಯ ನಡೆಸಿದಾಗ ಮನೆಯಲ್ಲೇ ತನಿಯಪ್ಪ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 23ರ ಬುಧವಾರದಂದು ಈ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇತ್ತೀಚೆಗೆ ತನಿಯಪ್ಪ ಅವರ ಪತ್ನಿ ಚಿನ್ನಮ್ಮ ಅವರು ಕೂಡ ಸಾವಿಗೀಡಾಗಿದ್ದು, ಜಮೀನಿನ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು ಎನ್ನುವ ಮಾಹಿತಿ ಲಭಿಸಿದೆ.‌ ಆದರೆ, ಚಿನ್ನಮ್ಮ ಅವರ ಸಾವಿಗೆ ಮತ್ತು ತನಿಯಪ್ಪ ಅವರ ಆತ್ಮಹತ್ಯೆಗೆ ಕಾರಣವೇನೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈಗಾಗಲೇ ಚಿನ್ನಮ್ಮ ಅವರ ಸಾವಿಗೆ ಸಂಬಂಧಿಸಿದಂತೆ ಅವರ ಸಹೋದರರಾದ ಗಂಗಾಧರ ಗೌಡ ಅವರು ಸಾವಿನ ಕುರಿತು ಅನುಮಾನವಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮತ್ತು ತನಿಯಪ್ಪ ಅವರ ಆತ್ಮಹತ್ಯೆಯ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಉಡುಪಿ: ಮಾದಕ ವಸ್ತು ಮಾರಾಟ; 9ಮಂದಿ ಬಂಧನ

ಉಡುಪಿ: ಶಿರ್ವ ಮತ್ತು ಉಡುಪಿ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆಯನ್ನು ನಡೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ, ಮಂಗಳವಾರದಂದು ಬೆಳ್ಳೆ ಗ್ರಾಮದ ಪಡುಬೆಳ್ಳೆಯ ಭದ್ರಮ್ಮ ರಸ್ತೆಯಲ್ಲಿ ನಡೆದಿದೆ. ಕೆಲವು ವ್ಯಕ್ತಿಗಳು ಈ ಪ್ರದೇಶದಲ್ಲಿ ಎರಡು ಕಾರುಗಳು ಮತ್ತು ಒಂದು ಸ್ಕೂಟರ್ ನಲ್ಲಿ ಮಾದಕ ವಸ್ತುಗಳನ್ನು ಹೊಂದಿದ್ದು, ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ಕಾಪು ವೃತ್ತ ನಿರೀಕ್ಷಕರಾದ ಅಜ್ಮತ್ ಅಲಿ ಅವರ ನೇತೃತ್ವದಲ್ಲಿ ಶಿರ್ವ ಎಸ್ಐ ಅನಿಲ್, ಕಾಪು ಎಸ್ಐ ಶುಭಕರ್, ಎಎಸ್ಐ ಗಳಾದ ಸುದೇಶ್, ಸುಂದರ ಗೌಡ, ಸಿಬ್ಬಂದಿಗಳಾದ ಮಂಜುನಾಥ್, ಹರ್ಷ, ಅರುಣ್, ನಾಗರಾಜ್, ಶರಣ್, ಕಿಶೋರ್, ಸೆನ್ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಪ್ರವೀಣ್, ದೀಕ್ಷಿತ್, ಮಣಿಪಾಲ್ ಪೊಲೀಸ್ ಠಾಣೆಯ ವಿಶ್ವಜಿತ್, ಉಡುಪಿ ನಗರ ಪೊಲೀಸ್ ಠಾಣೆಯ ಭರತೇಶ ಕಂಕಣವಾಡಿ, ಪ್ರಕಾಶ್, ಠಾಣಾ ಸಿಬ್ಬಂದಿಗಳಾದ ಬಶೀರ್ ಅಹ್ಮದ್, ಆನಂದ ಗಾಣಿಗ, ಸೊಕೊ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಅಲ್ನಾಜ್ ಅನಾಸ್, ಅಲ್ತಾಫ್, ಸ್ಟ್ಯಾನಿ ಸಂದೀಪ್, ಶಾಕೀಬ್, ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್, ಸಂತೋಷ್ ದೇವಾಡಿಗ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶ್ರೀವತ್ಸ ಎಂದು ಗುರುತಿಸಲಾಗಿದ್ದು, ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೇರಳದ ಉಪ್ಪಳ ಎನ್ನುವ ಪ್ರದೇಶದಿಂದ ಗಾಂಜಾವನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

Categories
Uncategorized

•ಮೂಡಿಗೆರೆ: ಪೊಲೀಸ್ ನೋಡಿ ಪರಾರಿಯಾಗಲು ಯತ್ನ; ಗಾಂಜಾ ಸೇವನೆ! •ಕಡೂರು: ರೌಡಿಶೀಟರ್ ಗಳ ಜೊತೆ ಎಣ್ಣೆ ಪಾರ್ಟಿ:ಎಎಸ್ಐ ಅಮಾನತು •ಶಿವಮೊಗ್ಗ: ಮಕ್ಕಳಿಗೆ ಮೊಬೈಲ್ ನೋಡಲು ಕೊಟ್ಟು ಲಕ್ಷಾಂತರ ರೂಪಾಯಿ ಕಳೆದುಕೊಂಡ ಶಿಕ್ಷಕಿ •ಹೊಸನಗರ: ಬಸ್ ಮತ್ತು ಕಾರಿನ ನಡುವೆ ಡಿಕ್ಕಿ:ಗಾಯ

ಮೂಡಿಗೆರೆ: ಪೊಲೀಸರ ಗಸ್ತು ವಾಹನವನ್ನು ಕಂಡು ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಪರಾರಿಯಾಗಲು ಪ್ರಯತ್ನಿಸಿದ ಘಟನೆ, ಬಣಕಲ್-ಚಕ್ಕಮಕ್ಕಿ ರಸ್ತೆಯಲ್ಲಿನ ಮಸೀದಿಯ ಸಮೀಪದಲ್ಲಿ ನಡೆದಿದೆ. ಕಾರಿನಲ್ಲಿ ಕುಳಿತಿದ್ದ ಸ್ಥಳೀಯ ನಿವಾಸಿಯಾದ ಮೊಹಮ್ಮದ್ ಆಸೀಫ್ ಎನ್ನುವ ವ್ಯಕ್ತಿಯು ಸಮವಸ್ತ್ರದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರನ್ನು ಕಂಡು ಗಾಬರಿಯಾಗಿ ಅನುಮಾನಾಸ್ಪದವಾಗಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಇದರಿಂದ ಸಂದೇಹಗೊಂಡ ಪೊಲೀಸರು ಆತನನ್ನು ಸೆರೆಹಿಡಿದು, ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ಪೊಲೀಸರು ಆತನ ಕಾರನ್ನು ಸಹ ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಕಡೂರು: ರೌಡಿಶೀಟರ್ ಗಳ ಜೊತೆ ಎಣ್ಣೆ ಪಾರ್ಟಿ ಮಾಡಿದ ಎಎಸ್ಐ ಅಮಾನತು

ಕಡೂರು: ಕರ್ತವ್ಯಭ್ರಷ್ಟರಾಗಿ, ಸಾರ್ವಜನಿಕರಿಗೆ ತೊಂದರೆ ನೀಡುವಂತೆ ರೌಡಿಶೀಟರ್ ಗಳ ಜೊತೆಗೆ ಎಣ್ಣೆ ಪಾರ್ಟಿ ನಡೆಸಿದ ಹಿನ್ನೆಲೆಯಲ್ಲಿ ಎಎಸ್ಐ ಅಮಾನತುಗೊಂಡ ಘಟನೆ, ಸಖರಾಯಪಟ್ಟಣದಲ್ಲಿ ನಡೆದಿದೆ.‌ ಇಲ್ಲಿನ ಠಾಣೆಯ ಎಎಸ್ಐ ಆದ ವೀರೇಂದ್ರ ಅವರು ಬಾರ್ ನಲ್ಲಿ ಪಾರ್ಟಿಯನ್ನು ಆಯೋಜಿಸಿ, ಇಡೀ ರಾತ್ರಿ ಜೋರಾಗಿ ಹಾಡನ್ನು ಹಾಕಿಕೊಂಡು ಸ್ಥಳೀಯರಿಗೆ ತೊಂದರೆಯನ್ನುಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನ ಗ್ರಾಮಸ್ಥರು ರಾತ್ರೋರಾತ್ರಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಕಳೆದ ವಾರ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿದ್ದು, ಎಎಸ್ಐ ವಿರುದ್ಧ ನಿರಂತರವಾಗಿ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಅವರು ವೀರೇಂದ್ರ ಅವರನ್ನು ಅಮಾನತುಗೊಳಿಸುವಂತೆ ಆದೇಶವನ್ನು ಹೊರಡಿಸಿದ್ದಾರೆ.

•ಶಿವಮೊಗ್ಗ: ಮಕ್ಕಳಿಗೆ ಮೊಬೈಲ್ ನೋಡಲು ಕೊಟ್ಟು ಲಕ್ಷಾಂತರ ರೂಪಾಯಿ ಕಳೆದುಕೊಂಡ ಶಿಕ್ಷಕಿ!

ಶಿವಮೊಗ್ಗ: ಶಿಕ್ಷಕಿಯೊಬ್ಬರು ಶಾಲಾ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ವಿಡಿಯೋವನ್ನು ನೋಡಲು ತಮ್ಮ ಮೊಬೈಲ್ ಅನ್ನು ಕೊಟ್ಟು, ಲಕ್ಷಾಂತರ ರೂಪಾಯಿ ವಂಚನೆಗೆ ಒಳಗಾದ ಘಟನೆ ನಡೆದಿದೆ. ಶಿವಮೊಗ್ಗದ ಶಾಲೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯು ಶಾಲೆಗೆ ತೆರಳಿದ ಸಮಯದಲ್ಲಿ ವಿದ್ಯಾರ್ಥಿಗಳು ಪಠ್ಯ ಅಥವಾ ಸಾಂಸ್ಕೃತಿಕ ಚಟುವಟಿಕೆಗೆ ಸಂಬಂಧಿಸಿದಂತೆ ಯೂಟ್ಯೂಬ್ ನಲ್ಲಿ ವಿಡಿಯೋ ನೋಡಲು ಅವರ ಬಳಿ ಮೊಬೈಲ್ ಅನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕಿಯ ಮೊಬೈಲ್ ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದ್ದು, ಆರ್ ಟಿಒ ಚಲನ್ ಗೆ ಸಂಬಂಧಿಸಿದಂತೆ ಎಪಿಕೆ ಫೈಲ್ ಅನ್ನು ಡೌನ್ ಲೋಡ್ ಮಾಡುವಂತೆ ಸಂದೇಶದಲ್ಲಿ ತಿಳಿಸಿದೆ ಎನ್ನಲಾಗಿದೆ. ಆರ್ ಟಿಒ ಅಧಿಕಾರಿಗಳಂತೆ ವರ್ತಿಸಿದ ಸೈಬರ್ ವಂಚಕರು ನಕಲಿ ಆರ್ ಟಿಒ ಚಲನ್ ಇರುವ ಎಪಿಕೆ ಫೈಲ್ ಅನ್ನು ಇನ್ ಸ್ಟಾಲ್ ಮಾಡಿಸುವ ಮೂಲಕ ಶಿಕ್ಷಕಿಯ ವೈಯಕ್ತಿಕ ಮಾಹಿತಿಗಳನ್ನು ಹ್ಯಾಕ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಬಳಿಕ ಶಿಕ್ಷಕಿಯ ಗಮನಕ್ಕೆ ಬರದೆ ಹಂತಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಗೊಂಡಿದೆ. ವಿದ್ಯಾರ್ಥಿಗಳಿಂದ ಮೊಬೈಲ್ ಅನ್ನು ಪಡೆದುಕೊಂಡ ಬಳಿಕ ಶಿಕ್ಷಕಿಯು ತನ್ನ ಖಾತೆಯಿಂದ ಹಣ ಹೋಗಿರುವ ಕುರಿತು ಬಂದಿರುವ ಸಂದೇಶವನ್ನು ನೋಡಿ ಅನುಮಾನಗೊಂಡು, ತಮ್ಮ ಖಾತೆ ಇರುವ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ತಾನು ಸೈಬರ್ ವಂಚನೆಗೆ ಒಳಗಾಗಿರುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕಿಯು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರ ಪತ್ತೆಗೆ ಕ್ರಮವನ್ನು ಕೈಗೊಳ್ಳಲಾಗಿದೆ.

•ಹೊಸನಗರ: ಬಸ್ ಮತ್ತು ಕಾರಿನ ನಡುವೆ ಢಿಕ್ಕಿ; ಇಬ್ಬರಿಗೆ ಗಂಭೀರ ಗಾಯ

ಹೊಸನಗರ: ಗಜಾನನ ಸಂಸ್ಥೆಗೆ ಸೇರಿದ ಬಸ್ ಮತ್ತು ಮಾರುತಿ ಆಲ್ಟೊ ಕಾರಿನ ನಡುವೆ ಅಪಘಾತ ಸಂಭವಿಸಿರುವ ಘಟನೆ, ರಿಪ್ಪನ್ ಪೇಟೆ ಸಮೀಪದ ಸೂಡೂರಿನಲ್ಲಿ ನಡೆದಿದೆ. ರಾಜ್ಯ ಹೆದ್ದಾರಿಯಲ್ಲಿ ಗಜಾನನ ಸಂಸ್ಥೆಯ ಬಸ್ ಶಿವಮೊಗ್ಗದಿಂದ ರಿಪ್ಪನ್ ಪೇಟೆ ಕಡೆಗೆ ತೆರಳುತ್ತಿದ್ದು, ಆವಿನಹಳ್ಳಿಯಿಂದ ಶಿವಮೊಗ್ಗದ ಕಡೆಗೆ ಕಾರು ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಢಿಕ್ಕಿಯ ರಭಸದ ಪರಿಣಾಮವಾಗಿ ಆಲ್ಟೊ ಕಾರು ತೀವ್ರವಾಗಿ ಜಖಂಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎನ್ನುವ ಸಂಗತಿ ತಿಳಿದುಬಂದಿದೆ. ಅಪಘಾತವನ್ನು ಗಮನಿಸಿದ ಸ್ಥಳೀಯರು ತಕ್ಷಣ ಗಾಯಾಳುಗಳನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

Categories
Uncategorized

ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ ಮತ್ತು ರೀಲ್ಸ್ ಮಾಡoಗಿಲ್ಲ! – ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳು ಸೆಲ್ಫಿ, ರೀಲ್ಸ್ ನಿಷೇಧ – ಕಾಲೇಜುಗಳಿಗೆ ಮಾರ್ಗಸೂಚಿ ಏನೇನು…?

ಬೆಂಗಳೂರು: ರಾಜ್ಯದ ಕಾಲೇಜು ಶಿಕ್ಷಣ ಇಲಾಖೆಯು ಶೈಕ್ಷಣಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಣಯವನ್ನು ಕೈಗೊಂಡಿದ್ದು, ಅದನ್ನು ಮತ್ತಷ್ಟು ಸುರಕ್ಷಿತವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಸುವ ನಿಟ್ಟಿನಲ್ಲಿ ಮಾರ್ಗಸೂಚಿಯೊಂದನ್ನು ಹೊರಡಿಸಿದೆ.
ಇನ್ನು ಮುಂದೆ ಶೈಕ್ಷಣಿಕ ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳುವುದನ್ನು ಮತ್ತು ರೀಲ್ಸ್ ಮಾಡುತ್ತಾ ಕಾಲಹರಣ ಮಾಡುವುದನ್ನು, ಇದರಿಂದಾಗಿ ಅಪಾಯಕ್ಕೆ ಸಿಲುಕುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಅದರಲ್ಲೂ ಮುಖ್ಯವಾಗಿ ಅಪಾಯಕಾರಿ ಸ್ಥಳಗಳು, ಜಲಾಶಯಗಳು, ಬೆಟ್ಟಗುಡ್ಡಗಳು, ಜಲಪಾತಗಳು ಮತ್ತು ಇತರೆ ಪ್ರವಾಸಿ ಸ್ಥಳಗಳಲ್ಲಿ ಇಂತಹ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಕೈಗೊಳ್ಳಬಾರದೆಂದು ನಿಯಮವನ್ನು ಜಾರಿಗೊಳಿಸಿದೆ.

ಮಾರ್ಗಸೂಚಿಯಲ್ಲಿ ಏನೇನು..?

ಮಾರ್ಗಸೂಚಿಗೆ ಸಂಬಂಧಿಸಿದಂತೆ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳುವ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆಯಿಂದ ಮೊದಲಿಗೆ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕಿದೆ. ಬಳಿಕ ಪ್ರವಾಸವನ್ನು ಕೈಗೊಂಡಿರುವ ಉದ್ದೇಶ, ಸ್ಥಳ, ವಿದ್ಯಾರ್ಥಿಗಳ ಸಂಖ್ಯೆ, ಜೊತೆಗೆ ತೆರಳುವ ಉಪನ್ಯಾಸಕರು ಮತ್ತು ಸಿಬ್ಬಂದಿಗಳ ಅಗತ್ಯ ಮಾಹಿತಿಗಳನ್ನು ನಿಯಮಾನುಸಾರವಾಗಿ ಸಲ್ಲಿಸಬೇಕಿದೆ.
ಪ್ರವಾಸಕ್ಕೂ ಮೊದಲು ವಿದ್ಯಾರ್ಥಿಗಳಿಗೆ ಇಲಾಖೆಯ ಮಾರ್ಗಸೂಚಿಗಳು ಮತ್ತು ಸುರಕ್ಷತಾ ಕ್ರಮಗಳ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಮಾಹಿತಿಯ ಅನುಸಾರವಾಗಿ ಪ್ರವಾಸದ ಸಮಯದಲ್ಲಿ ನಡೆದುಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿಯು ಉಪನ್ಯಾಸಕರು ಮತ್ತು ಸಿಬ್ಬಂದಿಗಳದ್ದಾಗಿರುತ್ತದೆ. ಶೈಕ್ಷಣಿಕ ಪ್ರವಾಸವು ಕೇವಲ ಮನರಂಜನೆಯಾಗಿ ಅಷ್ಟೇ ಅಲ್ಲದೆ ಸುರಕ್ಷಿತವಾಗಿ ಮತ್ತು ಉದ್ದೇಶಪೂರಿತ ಕಲಿಕಾ ಅನುಭವವನ್ನು ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕೆಂದು ಕಾಲೇಜು ಶಿಕ್ಷಣ ಇಲಾಖೆಯು ಈ ಮೂಲಕ ತಿಳಿಸಿದೆ.

Categories
Uncategorized

ಸೊಸೈಟಿ ಸಭೆಯಲ್ಲಿ ಕಸ್ತೂರಿರಂಗನ್ ವರದಿಗೆ ಆಕ್ಷೇಪಣೆ – ಹೊಸನಗರ ತಾಲೂಕು ನಗರದ ಶ್ರೀ ನೀಲಕಂಠೇಶ್ವರ ಸೊಸೈಟಿ ಮಾದರಿ – 764 ಆಕ್ಷೇಪಣೆ ಅರ್ಜಿಗಳನ್ನು ಅಂಚೆ ಮೂಲಕ ರವಾನೆ

ಹೊಸನಗರ: ಹೊಸನಗರ ತಾಲೂಕು ನಗರದ ಶ್ರೀ ನೀಲಕಂಠೇಶ್ವರ ಸೊಸೈಟಿಯ ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಕಸ್ತೂರಿರಂಗನ್ ವರದಿಯ ಕುರಿತು ಚರ್ಚಿಸಿ, ರೈತರ ಹಿತಾಸಕ್ತಿ ಹಾಗೂ ನಮ್ಮ ಪ್ರದೇಶದ ಭವಿಷ್ಯದ ದೃಷ್ಟಿಯಿಂದ ಸರ್ಕಾರದ ಗಮನಕ್ಕೆ ನಮ್ಮ ಆಕ್ಷೇಪಣೆಗಳನ್ನು ತಲುಪಿಸುವ ಉದ್ದೇಶದಿಂದ ಸುಮಾರು 764 ಆಕ್ಷೇಪಣೆ ಅರ್ಜಿಗಳನ್ನು ರೈತರಿಂದ ಸಂಗ್ರಹಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಕೇವಲ ಹೋರಾಟ, ಪ್ರತಿಭಟನೆ ಅಥವಾ ಮನವಿ ಮಾಡುವುದರಿಂದ ಮಾತ್ರ ನಮ್ಮ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತದೆ ಎಂಬುದು ಖಚಿತವಲ್ಲ. ಆದ್ದರಿಂದ ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ನಮ್ಮ ಆಕ್ಷೇಪಣೆಗಳು ದಾಖಲಾಗುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತ್ಯೇಕ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸುವುದು ಅಗತ್ಯ ಎಂಬುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ.
ಮಲೆನಾಡು ಭಾಗದ ಎಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುತ್ತೇವೆಯೋ, ಅಷ್ಟು ಹೆಚ್ಚಿನ ಪ್ರಮಾಣದಲ್ಲಿ ರೈತರ ಅಭಿಪ್ರಾಯ ಮತ್ತು ವಿರೋಧ ಸರ್ಕಾರದ ಗಮನಕ್ಕೆ ಬರುವ ಸಾಧ್ಯತೆ ಇರುತ್ತದೆ. ಇದೇ ಉದ್ದೇಶದಿಂದ ಸಂಘದ ವತಿಯಿಂದ ರೈತರಿಂದ ಸಂಗ್ರಹಿಸಲಾದ ಸುಮಾರು 764 ಆಕ್ಷೇಪಣೆ ಅರ್ಜಿಗಳನ್ನು ಅಂಚೆ ಮೂಲಕ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ.
ಇದು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧದ ಹೋರಾಟವಲ್ಲ. ನಮ್ಮ ರೈತರ ಜಮೀನು, ಜೀವನೋಪಾಯ ಮತ್ತು ನಮ್ಮ ಪ್ರದೇಶದ ಭವಿಷ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಜಾಸತ್ತಾತ್ಮಕ ರೀತಿಯಲ್ಲಿ ಅಭಿಪ್ರಾಯವನ್ನು ದಾಖಲಿಸುವ ಒಂದು ಪ್ರಯತ್ನವಾಗಿದೆ.
ಈ ಪ್ರಯತ್ನ ಮಾಡಿದ ಅಧ್ಯಕ್ಷರು ಹಾಗೂ ನಿರ್ದೇಶಕರು ಶ್ರೀ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ನಗರ ಇವರಿಗೆ ರೈತ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

Categories
Uncategorized

– ನಂದಿನಿ ಹಾಲು; ಲೀಟರ್ ಗೆ 5 ರೂಪಾಯಿ ಹೆಚ್ಚಳ? – ಪಂಪ್ ಸೆಟ್ ಗಳಿಗೆ 7ಗಂಟೆಗಳ ಕಾಲ ವಿದ್ಯುತ್; ಕೆ.ಜೆ.ಜಾರ್ಜ್ ಘೋಷಣೆ – ಯುಪಿಐ ವ್ಯವಹಾರ ಶುಲ್ಕ: ಶೀಘ್ರದಲ್ಲಿ ಬಂದ್?

ಬೆಂಗಳೂರು: ನಂದಿನಿ ಹಾಲಿನ ಬೆಲೆಯನ್ನು ಲೀಟರ್ ಗೆ 5 ರೂಪಾಯಿಗಳಷ್ಟು ಹೆಚ್ಚಳಗೊಳಿಸಲು ರಾಜ್ಯ ಸರ್ಕಾರವು ಸಮ್ಮತಿ ಸೂಚಿಸಿದ್ದು, ಇದರಿಂದಾಗಿ ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸನ್ನಿವೇಶ ಎದುರಾಗಿದೆ. ರಾಜ್ಯದ 16 ಹಾಲು ಒಕ್ಕೂಟಗಳು ಹಾಲು ಉತ್ಪಾದನೆ, ಸಂಗ್ರಹಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ವೆಚ್ಚಗಳು ಅಧಿಕವಾಗಿರುವ ಹಿನ್ನೆಲೆಯಲ್ಲಿ ಹಾಲಿನ ಮಾರಾಟದ ದರವನ್ನು ಪರಿಷ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಮೊದಲಿಗೆ ಒಕ್ಕೂಟಗಳು ಹಾಲಿನ ದರವನ್ನು 10 ರೂಪಾಯಿಗಳಷ್ಟು ಹೆಚ್ಚಳಗೊಳಿಸುವಂತೆ ಬೇಡಿಕೆಯನ್ನಿಟ್ಟಿದ್ದವು. ಅಷ್ಟೇ ಅಲ್ಲದೆ ಹಾಲಿನ ದರದಲ್ಲಿ ಏರಿಕೆ ಮಾಡದಿದ್ದರೆ ವಿಧಾನಸೌಧ ಚಲೋ ನಡೆಸುವ ಎಚ್ಚರಿಕೆಯನ್ನು ಸಹ ಸರ್ಕಾರಕ್ಕೆ ನೀಡಿತ್ತು ಎನ್ನುವ ಮಾಹಿತಿ ಲಭಿಸಿದೆ. ಇದರೊಂದಿಗೆ ಹಾಲು ಉತ್ಪಾದಕರ ಹಿತವನ್ನು ಕಾಪಾಡಲು ದರ ಪರಿಷ್ಕರಣೆಯು ಅಗತ್ಯವಾಗಿದೆ ಎನ್ನುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದವು. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಗ್ರಾಹಕರಿಗೆ ಹೊರೆಯಾಗದಂತೆ ಮತ್ತು ಹಾಲು ಉತ್ಪಾದಕ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಗವನ್ನು ಅನುಸರಿಸಲು ಮುಂದಾಗಿದ್ದು, ಪ್ರತಿ ಲೀಟರ್ ಗೆ 4 ರೂಪಾಯಿಗಳಿಂದ 5 ರೂಪಾಯಿಗಳಿಗೆ ಹೆಚ್ಚಿಸಲು ನಿರ್ಧಾರ ಕೈಗೊಂಡಿದೆ. ದರ ಹೆಚ್ಚಳದ ಕುರಿತು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬಂದರೆ ಗ್ರಾಹಕರ ಮಾಸಿಕ ಖರ್ಚು ಮತ್ತಷ್ಟು ಅಧಿಕಗೊಳ್ಳುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಈ ಬೆಲೆ ಏರಿಕೆ ಯಾವ ದಿನಾಂಕದಂದು ಜಾರಿಯಾಗಲಿದೆ ಮತ್ತು ಯಾವ ಯಾವ ನಂದಿನಿ ಹಾಲಿನ ಉತ್ಪನ್ನಗಳ ಬೆಲೆಗಳಲ್ಲಿ ಬದಲಾವಣೆಗಳು ಬರಲಿವೆ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.

ಪಂಪ್ ಸೆಟ್ ಗಳಿಗೆ 7ಗಂಟೆಗಳ ಕಾಲ ವಿದ್ಯುತ್; ಕೆ.ಜೆ.ಜಾರ್ಜ್ ಘೋಷಣೆ

ಬೆಂಗಳೂರು: ಈಗಾಗಲೇ ಕೃಷಿಗೆ ಸಂಬಂಧಿಸಿದಂತೆ ಪಂಪ್ ಸೆಟ್ ಗಳ ಮೂಲಕ ಕೃಷಿಭೂಮಿಗೆ ನೀರನ್ನು ಪೂರೈಕೆ ಮಾಡಲು ರಾಜ್ಯ ಸರ್ಕಾರದಿಂದ 6:೦೦ಗಂಟೆಗಳ ಕಾಲ ವಿದ್ಯುತ್ ಅನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ಇನ್ನೂ ಮೂರು ನಾಲ್ಕು ದಿನಗಳಲ್ಲಿ ಈ ಸಮಯವು ಒಂದು ಗಂಟೆ ಹೆಚ್ಚಳಗೊಳ್ಳಲಿದ್ದು, ಕೃಷಿ ಪಂಪ್ ಸೆಟ್ ಗಳಿಗೆಂದೇ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಬರ ಪರಿಸ್ಥಿತಿಯ ಕುರಿತು ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ, ಬಿಜೆಪಿ ಪಕ್ಷದ ಸದಸ್ಯರು ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುವ ಕುರಿತು ವಿಷಯ ಪ್ರಸ್ತಾಪಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿರುವ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು “ಈ ಹಿಂದೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ರೈತರ ಪಂಪ್ ಸೆಟ್ ಗಳಿಗೆ ಪ್ರತಿದಿನ ಏಳು ಗಂಟೆಗಳ ಕಾಲ ವಿದ್ಯುತ್ ಅನ್ನು ಪೂರೈಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ, ಸಧ್ಯ ನಿಗದಿಗಿಂತ ಹೆಚ್ಚಿನ ವಿದ್ಯುತ್ ಬೇಡಿಕೆ, ವಿದ್ಯುತ್ ಉತ್ಪಾದನೆಯಲ್ಲಿನ ವ್ಯತ್ಯಯದಿಂದಾಗಿ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಒಂದು ಗಂಟೆ ಕಡಿತಗೊಳಿಸಲಾಗಿದೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಹೆಚ್ಚುವರಿ ಒಂದು ಗಂಟೆ ವಿದ್ಯುತ್ ಪೂರೈಕೆ ಮಾಡುವ ಕ್ರಮವನ್ನು ಮುಂದುವರಿಸಲಾಗುವುದು” ಎಂದು ತಿಳಿಸಿದ್ದಾರೆ.

ಯುಪಿಐ ವ್ಯವಹಾರ ಶುಲ್ಕ: ಶೀಘ್ರದಲ್ಲಿ ಬಂದ್?

ನವದೆಹಲಿ: ಯುಪಿಐ ಮೂಲಕ ನಡೆಸುವ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಶುಲ್ಕವನ್ನು ವಿಧಿಸುವ ಕುರಿತು ನಿರ್ಣಯ ಕೈಗೊಂಡಿದ್ದು, ಅಕ್ಟೋಬರ್ 15ರಿಂದ ಜಾರಿಗೆ ತರಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ, ಇದಕ್ಕೆ ಸಣ್ಣಪುಟ್ಟ ವ್ಯಾಪಾರಸ್ಥರಿಂದ ವಿರೋಧ ವ್ಯಕ್ತವಾಗಿದೆ.‌ ವ್ಯಾಪಾರಸ್ಥರ ಮೇಲೆ ಯಾವುದೇ ತೀವ್ರ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮ್ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಯುಪಿಐ ಮೂಲಕ ತಿಂಗಳಿಗೆ ಒಂದು ಲಕ್ಷ ರೂಪಾಯಿವರೆಗೆ ಹಣವನ್ನು ಸ್ವೀಕರಿಸುವ ವ್ಯಾಪಾರಸ್ಥರನ್ನು ಶುಲ್ಕದ ವ್ಯಾಪ್ತಿಯಿಂದ ಹೊರಗಿಡಲಾಗಿದ್ದು, ಬೀದಿಬದಿಯಲ್ಲಿ ಹಣ್ಣು, ತರಕಾರಿ, ಹೂವು ಮಾಡುವವರಿಗೆ ಮತ್ತು ಸಣ್ಣ ಕಿರಾಣಿ ವ್ಯಾಪಾರಸ್ಥರಿಗೆ ಯಾವುದೇ ಆತಂಕವಿಲ್ಲ. ಜೊತೆಗೆ ವ್ಯಾಪಾರಸ್ಥರು ಎಂಡಿಆರ್ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಸರ್ಕಾರವು ಸೂಚನೆಯನ್ನು ಸಹ ನೀಡಿದೆ. ಆದರೂ ಈ ವಿಚಾರವಾಗಿ ಗ್ರಾಹಕರಿಗೆ ವಿಶ್ವಾಸವಿದ್ದಂತೆ ತೋರುತ್ತಿಲ್ಲ, ಮತ್ತು ದೇಶದ ವರ್ತಕ ಸಮುದಾಯದವರಿಂದ ಕೂಡ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಂದೆಡೆ ಶುಲ್ಕದ ವ್ಯಾಪ್ತಿಯಿಂದ ಸಣ್ಣ ವರ್ತಕರನ್ನು ಹೊರಗಿಟ್ಟಿದ್ದರು ಕೂಡ, ದೊಡ್ಡಮಟ್ಟದ ವ್ಯವಹಾರ ನಡೆಸುವವರು ನಮಗೆ ಇದರಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿ ಈ ಬಗ್ಗೆ ದೊಡ್ಡ ಹೋರಾಟ ಕೂಡ ನಡೆಯುವ ಸಾಧ್ಯತೆ ಇದೆ.

Categories
Uncategorized

ತೀರ್ಥಹಳ್ಳಿಯಲ್ಲಿ ಅಕೌಂಟೆಂಟ್ ಕೆಲಸ ಹುಡುಕುತ್ತಿದ್ದೀರಾ? ACC ಕನ್‌ಸ್ಟ್ರಕ್ಷನ್ ಸಂಸ್ಥೆಯಲ್ಲಿ ನಿಮಗೊಂದು ಉತ್ತಮ ಅವಕಾಶ.

ತೀರ್ಥಹಳ್ಳಿಯಲ್ಲಿ ಅಕೌಂಟೆಂಟ್ ಕೆಲಸ ಹುಡುಕುತ್ತಿದ್ದೀರಾ? ACC ಕನ್‌ಸ್ಟ್ರಕ್ಷನ್ ಸಂಸ್ಥೆಯಲ್ಲಿ ನಿಮಗೊಂದು ಉತ್ತಮ ಅವಕಾಶ.

ಅಕೌಂಟ್ಸ್ ನಿರ್ವಹಣೆ, Tally, GST ಮತ್ತು Income Tax ಜ್ಞಾನವಿರುವ ಅನುಭವಿಗಳಿಗೆ ಆದ್ಯತೆ ನೀಡಲಾಗುವುದು.

ಆಸಕ್ತರು ಕೂಡಲೇ ಕರೆ ಮಾಡಿ: 9880593639

Categories
Uncategorized

– ಯಕ್ಷಗಾನ ಕಿರೀಟ ತೊಟ್ಟ ಪ್ರಧಾನಿ ನರೇಂದ್ರ ಮೋದಿ! – ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಂದ ಗೌರವ ರಾಷ್ಟ್ರ ಪ್ರಶಸ್ತಿ ಪಡೆದ ಕರಾವಳಿ ಮೂವರು! – ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದ ಅತೀಶ್ ಎಸ್. ಶೆಟ್ಟಿ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ರೂಪಾಶ್ರೀ ವಾರ್ಕಡಿ .

ನವದೆಹಲಿ: ನವದೆಹಲಿಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಇಂದ್ರಪ್ರಸ್ಥ ಚಾತುರ್ಮಾಸ ವ್ರತವನ್ನು ಕೈಗೊಂಡಿದ್ದು, ಅದರ ಸಮಾರೋಪವು ಮಂಗಳವಾರದಂದು ನೆರವೇರಿತು. ಈ ಹಿನ್ನೆಲೆಯಲ್ಲಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು 2೦31ರಲ್ಲಿ ನಡೆಯಲಿರುವ ಶ್ರೀವಿಶ್ವೇಶತೀರ್ಥ ಶ್ರೀಪಾದರ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಐದು ವರ್ಷಗಳ ಯೋಜನೆಯ ಲಾಂಛನವನ್ನು ಅನಾವರಣಗೊಳಿಸಿದರು. ಇದಕ್ಕೆ ಪ್ರತಿಯಾಗಿ ಶ್ರೀಗಳು ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಪ್ರಧಾನ ಕಲೆಯಾದ ಯಕ್ಷಗಾನದ ರಾಜವೇಷದ ಕಿರೀಟವನ್ನು ತೊಡಿಸಿ ಗೌರವವನ್ನು ಅರ್ಪಿಸಿದರು. ಇದರೊಂದಿಗೆ ಶಾಲು, ಚಿನ್ನದ ಲೇಪನವುಳ್ಳ ಕಾಳಿಯ ಕೃಷ್ಣನ ವಿಗ್ರಹ, ಹಣ್ಣುಗಳು, ಮಂತ್ರಾಕ್ಷತೆಯನ್ನು, ಜೊತೆಗೆ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ವೇದವ್ಯಾಸ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ಪೂರ್ಣ ನವಗ್ರಹ ಮತ್ತು ರಾಷ್ಟ್ರಸೂಕ್ತ ಹೋಮದ ಪ್ರಸಾದವನ್ನು ಅರ್ಪಿಸಿದರು.

ರಾಷ್ಟ್ರ ಪ್ರಶಸ್ತಿ ಪಡೆದ ಕರಾವಳಿ ಮೂವರು!
– ಉಡುಪಿಯ ಸುಮಂತ್ ಭಟ್, ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದ ಅತೀಶ್ ಎಸ್. ಶೆಟ್ಟಿ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ರೂಪಾಶ್ರೀ ವಾರ್ಕಡಿ

ಉಡುಪಿಯ ಸುಮಂತ್ ಭಟ್ ರಾಷ್ಟ್ರಪತಿಗಳಿಂದ ಕನ್ನಡ ವಿಭಾಗದ ಉತ್ತಮ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. “ಮಿಥ್ಯ” ಸಿನಿಮಾದ ಈ ಸಾಧನೆ ಸುಮಂತ್ ಭಟ್ ಅವರಿಗೆ ಗೌರವ ತಂದು ಕೊಟ್ಟಿದೆ.
ರಕ್ಷಿತ್ ಶೆಟ್ಟಿ ಅವರ ʻಪರಂವಃ ಪಿಕ್ಚರ್ಸ್ʼ ನಿರ್ಮಿಸಿದ ‘ಮಿಥ್ಯ’ ಚಿತ್ರವು ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿತು. ಚಿತ್ರದ ನಿರ್ದೇಶಕ ಸುಮಂತ್ ಭಟ್ ಅವರು ರಾಷ್ಟ್ರಪತಿಗಳಿಂದ ಈ ಗೌರವವನ್ನ ಸ್ವೀಕರಿಸಿದರು. ಇದೇ ‘ಮಿಥ್ಯ’ ಸಿನಿಮಾದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನ ಅತೀಶ್ ಎಸ್. ಶೆಟ್ಟಿ ಪಡೆದುಕೊಂಡರೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನ ರೂಪಾಶ್ರೀ ವಾರ್ಕಡಿ ಸ್ವೀಕರಿಸಿದರು.