Categories
Uncategorized

ತೀರ್ಥಹಳ್ಳಿ ತಾಲೂಕು ಜನರಿಗೆ ಬೇಕಾದ ಸುದ್ದಿ! – ಪ್ರಧಾನ ಮಂತ್ರಿ ಸೂರ್ಯಘರ್‌ ಯೋಜನೆ: ಮೂರು ದಿನ ಕ್ಯಾಂಪ್ – ತೀರ್ಥಹಳ್ಳಿ ದಸರಾ ವಿವಿಧ ಸ್ಪರ್ಧೆಗಳಿಗೆ ಅವಕಾಶ: ಭಾಗವಹಿಸಿ.. – ಶ್ರೀ ರಾಮೇಶ್ವರ ದೇವಸ್ಥಾನ ದೇವಸ್ಥಾನದಲ್ಲಿ ದಸರಾ ವಿಶೇಷ ಪೂಜೆ

ಪ್ರಧಾನ ಮಂತ್ರಿ ಸೂರ್ಯಘರ್‌ ಮುಫ್ತ್‌ ಬಿಜ್ಲಿ ಯೋಜನೆಯಡಿಯಲ್ಲಿ ಸೋಲಾರ್‌ ಅಳವಡಿಕೆಗೆ ದಿನಾಂಕ 13-10-2026, 14-10-2026 ಹಾಗೂ 15-10-2026 ರಂದು 3 ದಿಗಳಲ್ಲಿ ತೀರ್ಥಹಳ್ಳಿ ಮೆಸ್ಕಾಂ, ಉಪವಿಭಾಗ ಕಛೇರಿಯ ಆವರಣದಲ್ಲಿ ಬೆಳಿಗ್ಗೆ 10.00 ರಿಂದ ಸಾಯಂಕಾಲ 5.30 ರವರೆಗೆ ತಮ್ಮ ತಮ್ಮ ಮನೆಯ ಮೇಲ್ಛಾವಣಿಗೆ ಸೋಲಾರ ಅಳವಡಿಸುವ ಯೋಜನೆಯ ಸಲುವಾಗಿ 3 ದಿನಗಳ ಕ್ಯಾಂಪ್‌ ಹಮ್ಮಿಕೊಂಡಿದ್ದು, ಇದಕ್ಕೆ ಸೋಲಾರ್‌ ಅಳವಡಿಸುವ ವಿವಿಧ ಕಂಪೆನಿಯವರು ಆಗಮಿಸಿ, ಪಿಎಂ ಸೋಲಾರ್‌ ಸೂರ್ಯಘರ್‌ ಯೋಜನೆಯಲ್ಲಿ ಬರುವ ಸಂಪೂರ್ಣ ಮಾಹಿತಿಯನ್ನು ನೀಡಲಿರುತ್ತಾರೆ. ತಾವು ಈ ಕಾರ್ಯಕ್ರಮಕ್ಕೆ ಆಗಮಿಸಿ ಈ ಯೋಜನೆಯ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳುವಂತೆ ತಮ್ಮಲ್ಲಿ ಈ ಮೂಲಕ ಕೋರಲಾಗಿದೆ.

ಶ್ರೀ ರಾಮೇಶ್ವರ ದೇವಸ್ಥಾನ ದೇವಸ್ಥಾನದಲ್ಲಿ ದಸರಾ ವಿಶೇಷ ಪೂಜೆ

ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಅಂಗವಾಗಿ 21-10-2026ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ಸಂಜೆ 5.30 ರಿಂದ ದುರ್ಗಾ ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ ಹಾಗೂ ಇತರೆ ದೇವತಾ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.ದಿನಾಂಕ 21-10-2026ರ ಬುಧವಾರ ವಿಜಯದಶಮಿ ದಿನದಂದು ಬೆಳಿಗ್ಗೆ ದುರ್ಗಾ ಹೋಮ ನೆರವೇರಲಿದೆ.
ಆಸ್ತಿಕ ಭಕ್ತ ಮಹಾಜನರು ಪುಣ್ಯ ಪ್ರದವಾದ ಈ ಶರನ್ನವರಾತ್ರೋತ್ಸವದಲ್ಲಿ ಸೇವೆಗಳನ್ನು ನೆಡೆಸಿ ಶ್ರೀ ಜಗನ್ಮಾತೆ ಹಾಗೂ ಸಪರಿವಾರ ಶ್ರೀ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ.
ವಿಶೇಷ ಸೂಚನೆ: ದುರ್ಗಾ ಪಾರಾಯಣ, ರುದ್ರಾಭಿಷೇಕ, ಕುಂಕುಮಾರ್ಚನೆ ಹಾಗೂ ಇತರೆ ಸೇವೆಗಳನ್ನು ಮಾಡಿಸಲು ಇಚ್ಛಿಸುವ ಭಕ್ತರು ಅರ್ಚಕರಲ್ಲಿ ತಮ್ಮ ಹೆಸರು, ರಾಶಿ ಮತ್ತು ನಕ್ಷತ್ರದ ವಿವರಗಳನ್ನು ನೀಡುವಂತೆ ಕೋರಲಾಗಿದೆ.

Categories
Uncategorized

ಶ್ರೀ ಕ್ಷೇತ್ರ ಹೆಗಲತ್ತಿಯಲ್ಲಿ ನವರಾತ್ರಿ ವಿಶೇಷ ಪೂಜೆ – ಅ.11ರಂದು ನವರಾತ್ರಿ ರಂಗಪೂಜೆ: ಭಕ್ತರಿಗೆ ಆಹ್ವಾನ – ರಾಜ್ಯದಲ್ಲಿ ಪ್ರಸಿದ್ಧ ಕ್ಷೇತ್ರವಾಗುತ್ತಿದೆ ಶ್ರೀ ನಾಗಯಕ್ಷೆ ದೇವಾಲಯ – ಶಾರದಮ್ಮ-ಕಲ್ಪನಮ್ಮ ಅವರ ಪವಾಡದ ಮಹಿಮೆ

ತೀರ್ಥಹಳ್ಳಿ: ನವರಾತ್ರಿಯ ಮೊದಲನೆ ದಿನ 11:10:2026ರ ಭಾನುವಾರ ಸಂಜೆ 06:00 ಘಂಟೆಗೆ ಶ್ರೀ ನಾಗಯಕ್ಷೆ ದೇವಾಲಯ ಶ್ರೀಕ್ಷೇತ್ರ ಹೆಗಲತ್ತಿಯಲ್ಲಿ ರಂಗ ಪೂಜೆ ನಡೆಯಲಿದೆ. ಈ ಪೂಜೆಯಲ್ಲಿ ಭಾಗವಹಿಸಿ ದೇವಿಯ ಪ್ರಸಾದ ಸ್ವೀಕರಿಸಬೇಕಾಗಿ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.
ಶ್ರೀ ನಾಗಯಕ್ಷೆ ದೇವಿಯ ವಂಶ ಪರಂಪರೆಯಲ್ಲಿ ಶ್ರೀ ಮೂಲ ಪಾತ್ರಿಗಳಾದ ಶ್ರೀ ಶಾರದಮ್ಮನವರ ಸ್ಥಾನ ಅತ್ಯಂತ ವಿಶಿಷ್ಟವಾದುದು. ಅವರು ಕೇವಲ ಪಾತ್ರಿಗಳಾಗದೆ ವೈರಾಗ್ಯ, ಆತ್ಮವಿಚಾರ, ಧ್ಯಾನನಿಷ್ಠೆ,ಧಾನ ಧರ್ಮ ಮತ್ತು ಅಪೂರ್ವ ಕರುಣೆಯಿಂದ ಭಕ್ತರ ಹೃದಯದಲ್ಲಿ ಪವಾಡ ಮಾತೆಯಂದು ಶಾಶ್ವತ ಸ್ಥಾನ ಪಡೆದವರು.
ಅವರ ಜೀವನದಲ್ಲಿ ನಡೆದ ಅನೇಕ ಘಟನೆಗಳು ಭಕ್ತರ ನಡುವೆ ಇಂದಿಗೂ ಪವಾಡಸದೃಶವಾಗಿ ಹೇಳಲ್ಪಡುತ್ತವೆ. ಈ ಘಟನೆಗಳಲ್ಲಿ ಕೆಲವು ವಂಶ ಪರಂಪರೆ ಮತ್ತು ಜೀವನಚರಿತ್ರೆಗಳಲ್ಲಿ ಉಲ್ಲೇಖವಾಗಿವೆ. ಇನ್ನು ಕೆಲವು ಘಟನೆಗಳು ಭಕ್ತರ ಅನುಭವ ಮತ್ತು ಮೌಖಿಕ ಪರಂಪರೆಯಲ್ಲಿ ಪ್ರಸಿದ್ಧವಾಗಿವೆ.

ಜನನದ ನಂತರ ದೊರೆತ ದೈವ ಸೂಚನೆ

ಜನನದ ಹಿಂದೆ ಶ್ರೀ ಯಕ್ಷೆ ದೇವಿಯ ಅನುಗ್ರಹವಿತ್ತು ಎಂಬ ನಂಬಿಕೆ ಇಂದು ಪ್ರಸಿದ್ಧವಾಗಿದೆ. ನಂತರ ಅವರಿಗೆ ಒಬ್ಬ ವಿಶೇಷ ಪುತ್ರಿಯ ಜನಿಸುವಳೆಂಬ ಸೂಚನೆ ದೊರೆಯಿತು. ಇದೇ ಸಂದರ್ಭದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಚೌಡೇಶ್ವರಿ ದೇವಿಯ ಆವರಣದಲ್ಲಿ ಎಡನೇ ಬಾಲಕಿಯಾಗಿ ಜನಿಸಿದ ಬಾಲಕಿಯೆ ಈಗಿನ ಪಾತ್ರಿಗಳಾದ ಶ್ರೀ ಕಲ್ಪನಮ್ಮ.

ಬಾಲ್ಯದಲ್ಲಿಯೇ ಕಾಣಿಸಿಕೊಂಡ ಅಸಾಮಾನ್ಯ ವೈರಾಗ್ಯ

ಸಾಮಾನ್ಯವಾಗಿ ಬಾಲ್ಯವೆಂದರೆ ಆಟ, ಮನರಂಜನೆ ಮತ್ತು ಲೌಕಿಕ ವಿಷಯಗಳಲ್ಲಿ ಆಸಕ್ತಿ ತೋರುವ ವಯಸ್ಸು. ಬಾಲ್ಯ ಇದಕ್ಕೆ ಸಂಪೂರ್ಣ ಭಿನ್ನವಾಗಿತ್ತು. ಅವರಿಗೆ ದೇವರು, ಮಂತ್ರ, ಆತ್ಮಚಿಂತನೆಯ ಅವರು ಆಧ್ಯಾತ್ಮಿಕ ವಿಷಯಗಳನ್ನು ಗಂಭೀರವಾಗಿ ಆಲಿಸುತ್ತಿದ್ದರು. ಅವರು ಬೆಳೆದಂತೆ ಅವರ ವಿದ್ಯಾಭ್ಯಾಸವು ವೇಗವಾಗಿ ಮುಂದುವರಿಯಿತು. ಅಧ್ಯಯನದಲ್ಲಿ ಅವರು ಅಸಾಧಾರಣ ಪ್ರತಿಭೆಯನ್ನು ತೋರಿದರು.
ಅವರ ಜ್ಞಾನವು ಕೇವಲ ಪುಸ್ತಕಜ್ಞಾನವಾಗಿರಲಿಲ್ಲ. ಅವರು ಓದಿದ ವಿಷಯವನ್ನು ಆಳವಾಗಿ ಗ್ರಹಿಸಿ, ಅದರ ತಾತ್ಪರ್ಯವನ್ನು ಸುಲಭವಾಗಿ ವಿವರಿಸುವ ಸಾಮರ್ಥ್ಯ ಹೊಂದಿದ್ದರು. ದೇವಾಲಯದ ಆವರಣದಲ್ಲಿ ಹೋಮ ಹವನ ಹಾಗೂ ವಾರ್ಷಿಕೋತ್ಸವದಲ್ಲಿ ಪಲ್ಲಕ್ಕಿ ಜಾತ್ರೆ ನೋಡಲು ಎರಡು ಕಣ್ಣುಗಳು ಸಾಲದು.

ದರ್ಶನದಿಂದ ಮನಸ್ಸಿಗೆ ಶಾಂತಿ

ಪಾತ್ರಿಗಳ ವ್ಯಕ್ತಿತ್ವದಲ್ಲಿ ಅಪೂರ್ವ ಶಾಂತಿ ಇತ್ತು ಎಂದು ಅವರನ್ನು ಕಂಡವರು ಸ್ಮರಿಸಿದ್ದಾರೆ. ಅವರ ಬಳಿ ಬಂದ ಅನೇಕರು ತಮ್ಮ ದುಃಖ, ಆತಂಕ ಮತ್ತು ಮನಸ್ಸಿನ ಗೊಂದಲಗಳನ್ನು ಹೇಳಿಕೊಳ್ಳುತ್ತಿದ್ದರು. ಕೆಲವೊಮ್ಮೆ ದೀರ್ಘವಾಗಿ ಮಾತನಾಡದೆ, ಕೆಲವೇ ಮಾತುಗಳಲ್ಲಿ ಅಥವಾ ಮೌನದಿಂದಲೇ ಅವರಿಗೆ ಧೈರ್ಯ ನೀಡುತ್ತಿದ್ದರು.
ಅವರ ದರ್ಶನದಿಂದಲೇ ಮನಸ್ಸಿಗೆ ನೆಮ್ಮದಿ ದೊರೆಯುತ್ತಿತ್ತು ಎಂಬ ಅನುಭವವನ್ನು ಭಕ್ತರು ವ್ಯಕ್ತಪಡಿಸುತ್ತಿದ್ದರು. ಇದನ್ನು ಭಕ್ತರು “ಅಮ್ಮ ಕೃಪಾದೃಷ್ಟಿ” ಎಂದು ಕರೆಯುತ್ತಿದ್ದರು. ಅವರಲ್ಲಿ ಕಾಣುತ್ತಿದ್ದ ಶಾಂತಿ ಮತ್ತು ಆತ್ಮನಿಷ್ಠೆಯೇ ಇತರರ ಮನಸ್ಸಿನ ಮೇಲೂ ಪರಿಣಾಮ ಬೀರುತ್ತಿತ್ತು. ಒಮ್ಮೆ ಭಕ್ತರು ನೀಡಿದ ನಾಣ್ಯವನ್ನು ಕವಡೆಯಾಗಿದು ಪಾವಡವೆ ಕವಡೆ ಮಾತೆಯಾಗಿ ಪ್ರಸಿದ್ಥಿ.

ಪ್ರಶ್ನೆ ಕೇಳಿದವರಿಗೆ ಸೂಕ್ತ ಉತ್ತರ

ಮೂಲ ಪಾತ್ತಿಗಳು ಒಮ್ಮೆ ಗುತ್ತಿ ಯಡೆಯಳ್ಳಿ ಅಮ್ಮನವರ ಒಡವೆ ಕಳ್ಳುವಾದಗ ಕಳ್ಳರು ಬಚ್ಚಿಟ್ಟಿದ್ದ ಜಾಗ ತೋರಿಸಿದ್ದು ಪವಾಡ. ಮದುವೆ ವಿಚಾರ ಹಾಗೂ ಮಕ್ಕಳಿದವರಿಗೆ ಮಕ್ಕಳ ಭಾಗ್ಯ,ಆರೋಗ್ಯ ವಿಚಾರವಾಗಿ ಅಮ್ಮನವರ ಭಂಡಾರದಿಂದಲೆ ಪರಿಹಾರ. ಜೀವನದ ದುಃಖ, ಕರ್ತವ್ಯ, ಕುಟುಂಬ, ಆತ್ಮಜ್ಞಾನ ಮತ್ತು ಮೋಕ್ಷದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು.ಅವರ ಉತ್ತರಗಳು ಬಹಳ ಸರಳವಾಗಿದ್ದರೂ ಅದರೊಳಗೆ ಆಳವಾದ ಸೂಚನೆ ಅಡಗಿರುತ್ತಿತ್ತು.
ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರು ಪ್ರಶ್ನೆಯನ್ನು ಕೇಳುವ ಮುನ್ನವೇ ಗ್ರಹಿಸಿ, ಅದಕ್ಕೆ ತಕ್ಕಂತೆ ಮಾರ್ಗದರ್ಶನ ನೀಡುತ್ತಿದ್ದರು ಎಂಬ ಭಕ್ತರ ಅನುಭವಗಳೂ ಪ್ರಸಿದ್ಧವಾಗಿವೆ.
ಆದ್ದರಿಂದ ಅವರ ಬಳಿಗೆ ಬಂದವರು, “ನಾವು ಹೇಳಬೇಕೆಂದಿದ್ದುದನ್ನು ಹೇಳುವ ಮುನ್ನವೇ ಅಮ್ಮ ತಿಳಿದುಕೊಂಡರು” ಎಂಬ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದರು. ಭಕ್ತಿಭಾವದಲ್ಲಿ ಇದನ್ನು ಅಂತರ್ ಜ್ಞಾನ ಅಥವಾ ಜ್ಞಾನಿಯ ಕೃಪೆ ಎಂದು ಪರಿಗಣಿಸಲಾಗುತ್ತದೆ.

ಸಂಕಷ್ಟದಲ್ಲಿದ್ದ ಭಕ್ತರಿಗೆ ಧೈರ್ಯ

ಅಮ್ಮ ಬಳಿಗೆ ತಮ್ಮ ವೈಯಕ್ತಿಕ ಸಂಕಷ್ಟಗಳನ್ನು ಹೊತ್ತುಕೊಂಡು ಬಂದ ಅನೇಕ ಭಕ್ತರು ಇದ್ದರು. ಯಾರಿಗಾದರೂ ಕುಟುಂಬದ ಸಮಸ್ಯೆ, ಮತ್ತೊಬ್ಬರಿಗೆ ಆರ್ಥಿಕ ಸಂಕಷ್ಟ, ಇನ್ನೊಬ್ಬರಿಗೆ ಮಾನಸಿಕ ನೋವು—ಹೀಗೆ ವಿವಿಧ ಕಾರಣಗಳಿಂದ ಜನರು ಅಮ್ಮನವರ ಆಶ್ರಯವನ್ನು ಪಡೆಯುತ್ತಿದ್ದರು.ಅವರ ಎಲ್ಲ ಸಮಸ್ಯೆಗಳಿಗೆ ಅದ್ಭುತ ಪರಿಹಾರಗಳನ್ನು ನೀಡುತ್ತಿದ್ದರು ಎಂಬುದಕ್ಕಿಂತಲೂ, ಅವರ ಮಾತುಗಳು ಜನರಲ್ಲಿ ಸಮಸ್ಯೆಯನ್ನು ಎದುರಿಸುವ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸುತ್ತಿದ್ದವು.
“ಎಲ್ಲವೂ ಸಿಗುವುದು ಭಕ್ತಿಯಿಂದ” ಎಂಬ ದೃಷ್ಟಿಯನ್ನು ಅವರು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಭಕ್ತರಿಗೆ ತಿಳಿಸುತ್ತಿದ್ದರು.
ಹೀಗಾಗಿ ಕೆಲವರು ತಮ್ಮ ಸಂಕಷ್ಟದಿಂದ ಹೊರಬಂದ ನಂತರ, “ಅಮ್ಮನವರ ಅನುಗ್ರಹದಿಂದ ನನ್ನ ಜೀವನವೇ ಬದಲಾಯಿತು” ಎಂದು ಭಾವಿಸುತ್ತಿದ್ದರು.

ಪ್ರಕೃತಿಯ ಮಧ್ಯೆಯೂ ಅಚಲ ನಿಷ್ಠೆ

ಅಮ್ಮನವರ ದರ್ಶನ ಮತ್ತು ಭಂಡಾರ ಅತ್ಯಂತ ಮಹತ್ವವಿತ್ತು. ಸುತ್ತಮುತ್ತಲಿನ ಪರಿಸ್ಥಿತಿ ಹೇಗಿದ್ದರೂ ಅವರ ಮನಸ್ಸು ಒಳಮುಖವಾಗಿರುತ್ತಿತ್ತು. ದೇಹದ ಸುಖ-ದುಃಖಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರದೆ, ಆತ್ಮಚಿಂತನೆಯಲ್ಲೇ ಅವರು ನಿರತರಾಗುತ್ತಿದ್ದರು.
ಅವರನ್ನು ಸಮೀಪದಿಂದ ಕಂಡವರು ಅವರಲ್ಲಿದ್ದ ಅಚಲ ಶಾಂತಿ ಮತ್ತು ವೈರಾಗ್ಯವನ್ನು ವಿಶೇಷವಾಗಿ ಸ್ಮರಿಸುತ್ತಾರೆ.
ಒಬ್ಬ ಸಾಮಾನ್ಯ ಮನುಷ್ಯನಿಗೆ ಹೊರಗಿನ ಪರಿಸ್ಥಿತಿಗಳು ಮನಸ್ಸನ್ನು ಸುಲಭವಾಗಿ ಅಲುಗಾಡಿಸುತ್ತವೆ. ಆದರೆ ಅಮ್ಮನವರ ಮನಸ್ಸು ಸಂತೋಷದಿಂದ ಸ್ಥಿರವಾಗಿರುತ್ತಿತ್ತು.
ಇದನ್ನೇ ಭಕ್ತರು ಅವರ ದರ್ಶನ ಶಕ್ತಿಯ ಪವಾಡಸದೃಶ ಫಲವೆಂದು ಪರಿಗಣಿಸುತ್ತಾರೆ.

ಮೌನದಲ್ಲಿಯೇ ಉತ್ತರ

ಅಮ್ಮನವರು ಜೀವನದ ಅತ್ಯಂತ ವಿಶಿಷ್ಟ ಅಂಶವೆಂದರೆ ಅವರ ಮೌನ.
ಅವರು ಸದಾ ದೊಡ್ಡ ದೊಡ್ಡ ಉಪನ್ಯಾಸಗಳನ್ನು ನೀಡಬೇಕೆಂದು ಬಯಸುತ್ತಿರಲಿಲ್ಲ. ಅವರ ಜೀವನವೇ ಒಂದು ಉಪದೇಶವಾಗಿತ್ತು.
ಸರಳತೆ, ವೈರಾಗ್ಯ, ಶಾಂತಿ ಮತ್ತು ಆತ್ಮನಿಷ್ಠೆಯ ಮೂಲಕ ಅವರು ಜನರಿಗೆ ತಿಳಿಸುತ್ತಿದರು.
ಅವರ ಸಾನ್ನಿಧ್ಯದಲ್ಲಿದ್ದಾಗಲೇ ಅನೇಕರು ತಮ್ಮ ಮನಸ್ಸಿನ ಗೊಂದಲ ಕಡಿಮೆಯಾಗುವುದನ್ನು ಅನುಭವಿಸುತ್ತಿದ್ದರು ಎಂದು ಹೇಳಲಾಗುತ್ತದೆ.
ಅವರ ಜೀವನ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ:
“ಮಾತಿನಿಂದ ಹೇಳಲಾಗದ ಸತ್ಯವನ್ನು ಜೀವನದಿಂದ ತೋರಿಸಬಹುದು.
ಅವರು ದೇಹವನ್ನು ಆತ್ಮವೆಂದು ಪರಿಗಣಿಸದೆ, ಆತ್ಮಸ್ವರೂಪದಲ್ಲಿ ಸ್ಥಿತರಾಗುವ ಸಾಧನೆಯನ್ನೇ ಜೀವನದ ಗುರಿಯನ್ನಾಗಿ ಮಾಡಿಕೊಂಡಿದ್ದರು.
ಅವರ ಜೀವನ ಸರಳ,ಸುಂದರ,ಪ್ರೀತಿಯಿಂದ ನಡೆಯುತ್ತಿತು.ಅವರು ಅಹಂಕಾರವಿಲ್ಲದೆ ಬದುಕಿದರು.ಭಕ್ತರಿಗೆ ಆಶ್ರಯವಾಗಿದ್ದರೂ ತಮ್ಮನ್ನು ಎಂದಿಗೂ ಕೀರ್ತಿಯ ಕೇಂದ್ರವನ್ನಾಗಿ ಮಾಡಿಕೊಳ್ಳಲಿಲ್ಲ.ಅವರ ಜೀವನದ ನಿಜವಾದ “ಪವಾಡ” ಎಂದರೆ ಅವರ ಮನಸ್ಸಿನ ಸಂಪೂರ್ಣ ಜಯ. ಲೌಕಿಕ ಆಸೆ-ಆಕಾಂಕ್ಷೆಗಳನ್ನು ಮೀರಿ, ಆತ್ಮಸ್ವರೂಪದ ಅರಿವಿನಲ್ಲಿ ಸ್ಥಿರವಾಗಿ ಬದುಕಿದ ಅವರ ಜೀವನವೇ ಪಾತ್ರಿ ಪರಂಪರೆಗೆ ಅಮೂಲ್ಯವಾದ ಆಧ್ಯಾತ್ಮಿಕ ದೀಪವಾಗಿದೆ

Categories
Uncategorized

•ಪುತ್ತೂರು: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು •ಬಂಟ್ವಾಳ: ಯುವಕನ ಆತ್ಮಹತ್ಯೆ •ಮಂಗಳೂರು: 1.58ಕೋಟಿ ಮೌಲ್ಯದ ಎಂಡಿಎಂಎ ವಶ; ಮೂವರ ಬಂಧನ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ •ಪುತ್ತೂರು: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಪುತ್ತೂರು: ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿರುವ ಘಟನೆ, ಶುಕ್ರವಾರದಂದು ಕೋಡಿಂಬಾಡಿಯಲ್ಲಿ ನಡೆದಿದೆ. ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ರಸ್ತೆಯ ಬದಿಯಲ್ಲಿದ್ದ ಕಲ್ಲಿಗೆ ತಾಗಿದ ಪರಿಣಾಮವಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಬಂಟ್ವಾಳ: ಯುವಕನ ಆತ್ಮಹತ್ಯೆ

ಬಂಟ್ವಾಳ: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಶುಕ್ರವಾರದಂದು ಬೊಳ್ಳೆಯಿ ಎನ್ನುವಲ್ಲಿ ನಡೆದಿದೆ. ಮೃತ ಯುವಕನನ್ನು 32ವರ್ಷದ ರಜಿತ್ ಶೆಟ್ಟಿ ಎಂದು ಗುರುತಿಸಲಾಗಿದೆ. ರಜಿತ್ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಮಂಗಳೂರು: 1.58ಕೋಟಿ ಮೌಲ್ಯದ ಎಂಡಿಎಂಎ ವಶ; ಮೂವರ ಬಂಧನ

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.‌ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಉಳ್ಳಾಲ ತಾಲ್ಲೂಕಿನ ಕುಂಪಲದ ಡಿಮಾರ್ಟ್ ಬಳಿ ಕಾರ್ಯಾಚರಣೆ ನಡೆಸಿದಾಗ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ದೃಢಪಟ್ಟಿದೆ. ಆರೋಪಿಗಳನ್ನು ಮಂಗಳ್ಪಾಡಿ ಬೈದಲಾದ ಅನೀಸಾ ಮಂಜಿಲ್ ನಿವಾಸಿ ಅಬ್ದುಲ್ ಹಾಪೀಲ್, ಮಂಗಳೂರಿನ ಕಸಬಾ ಬೆಂಗ್ರೆ ನಿವಾಸಿ ಜಿಯಾವುಲ್ ಹಕ್ ಮತ್ತು ಮಂಗಳೂರಿನ ಪಾಂಡೇಶ್ವರದ ಆಯಿಷಾ ಅಪಾರ್ಟ್ ಮೆಂಟ್ ನಿವಾಸಿ ಅಲ್ತಾಫ್ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ 1ಕೆಜಿ 796.96ಗ್ರಾಂ ತೂಕದ ಎಂಡಿಎಂಎ, 3 ಮೊಬೈಲ್ ಫೋನ್ ಗಳು, ಮಾದಕ ವಸ್ತು ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಆಟೋ, ಕೋರಿಯರ್ ರಟ್ಟಿನ ಬಾಕ್ಸ್, ವಾಟರ್ ಪ್ಯೂರಿಪಾಯರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ವಶಪಡಿಸಿಕೊಂಡ ಸ್ವತ್ತುಗಳ ಬೆಲೆ ಸುಮಾರು 1.63.84.000 ಎಂದು ಅಂದಾಜಿಸಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎ ಮಾದಕ ವಸ್ತುವನ್ನು ಖರೀದಿಸಿ, ಅದನ್ನು ವಾಟರ್ ಪ್ಯೂರಿಪಾಯರ್ ನ ನೀರು ಸಂಗ್ರಹವಾಗುವ ಸ್ಥಳದಲ್ಲಿ ಭದ್ರವಾಗಿ ಇರಿಸಿ, ಬಳಿಕ ಕೋರಿಯರ್ ಮೂಲಕ ಮಂಗಳೂರಿಗೆ ಕಳುಹಿಸಿ, ಅಲ್ಲಿಂದ ಕೇರಳ ಮತ್ತು ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎನ್ನುವುದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
Uncategorized

ಆನ್ ಲೈನ್ ಗೇಮಿಗೆ‌ 13 ವರ್ಷದ ಬಾಲಕ ಬಲಿ! – ಗೇಮ್ ಹುಚ್ಚಿಗೆ 4 ಲಕ್ಷ ಸಾಲ ಮಾಡಿಕೊಂಡಿದ್ದ ಹುಡುಗ – 600 ರೂ. ಲಂಚ ಪಡೆದು ಖೆಡ್ದಾಕ್ಕೆ ಬಿದ್ದ ಅರಣ್ಯಾಧಿಕಾರಿ!

ದಾವಣಗೆರೆ: ಆನ್ ಲೈನ್ ಗೇಮ್ ಫ್ರೀ ಫೈರ್ ಚಟಕ್ಕೆ ಒಳಗಾಗಿ, 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮನೋಜ್ ಎಂದು ಗುರುತಿಸಲಾಗಿದೆ. ಮನೋಜ್ ಗೆ ಮೊಬೈಲ್ ನಲ್ಲಿ ಫ್ರೀ ಫೈರ್ ಆಟವಾಡುವ ವ್ಯಾಮೋಹ ಇತ್ತು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಮನೋಜ್ ನ ಐದು ಜನ ಸ್ನೇಹಿತರು ಆತನಿಗೆ ಫ್ರೀ ಫೈರ್ ಗೇಮ್ ಆಡಲು ಉತ್ತಮ ಗುಣಮಟ್ಟದ ಐಡಿ ಕೊಡಿಸುತ್ತೇವೆ ಎಂದು ನಂಬಿಸಿ, ಆತನಿಂದ ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಮೊದಲಿಗೆ 6೦೦೦ ರೂಪಾಯಿಗಳಷ್ಟು ಹಣವನ್ನು ಪಡೆದಿದ್ದು, ಬಳಿಕ ಆಟದ ಐಡಿ ಅನ್ನು ಅನ್ ಲಾಕ್ ಮಾಡುವ ತಂತ್ರಕ್ಕೆ ಬೇರೆ ಐಡಿ ಕೊಡುತ್ತೇವೆ ಎಂದು ಹೇಳಿ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ, ಜೊತೆಗೆ ಹಣವನ್ನು ಕೊಡದಿದ್ದರೆ ಮನೆಯವರಿಗೆ ವಿಷಯ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಇದರಿಂದ ಆತಂಕಕ್ಕೆ ಒಳಗಾದ ಮನೋಜ್ ತನ್ನ ಪೋಷಕರಿಗೆ ತಿಳಿಯದಂತೆ ಒಟ್ಟು 4.11 ಲಕ್ಷ ರೂಪಾಯಿಗಳಷ್ಟು ಹಣವನ್ನು ನೀಡಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ನಂತರ ಈ ವಿಚಾರ ಮನೋಜ್ ನ ತಂದೆ-ತಾಯಿಗಳಿಗೆ ತಿಳಿಯುತ್ತಿದ್ದಂತೆ ಮಾನಸಿಕವಾಗಿ ಒತ್ತಡಕ್ಕೆ ಒಳಗಾದ ಮನೋಜ್ ಬುಧವಾರದಂದು ಮನೆಯಲ್ಲಿ ಯಾರು ಇಲ್ಲದ ಸಂದರ್ಭವನ್ನು ನೋಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳು ಮೊಬೈಲ್ ಚಟಕ್ಕೆ ದಾಸರಾಗುತ್ತಿದ್ದು, ಅದು ಸಾವಿನಲ್ಲಿ ಅಂತ್ಯ ಕಾಣುತ್ತಿರುವುದು ದುರಂತ. ಮಕ್ಕಳು ಮೊಬೈಲ್ ಅನ್ನು ಬಳಸುವುದನ್ನು ನಿಯಂತ್ರಿಸುವುದು ಮತ್ತು ಮಿತವಾಗಿ ಬಳಸುವಾಗ ಕೂಡ ಪೋಷಕರು ಎಚ್ಚರಿಕೆಯನ್ನು ವಹಿಸುವುದು ಅತ್ಯಗತ್ಯವಾಗಿದೆ.

600 ರೂ. ಲಂಚ ಪಡೆದು ಖೆಡ್ದಾಕ್ಕೆ ಬಿದ್ದ ಅರಣ್ಯಾಧಿಕಾರಿ!

ಹೊಸಪೇಟೆ: ಕಳೆದ ಕೆಲವು ವರ್ಷಗಳ ಹಿಂದೆ 600 ಲಂಚವನ್ನು ಪಡೆದ ಅಧಿಕಾರಿಗೆ ಐದು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿರುವ ಘಟನೆ ನಡೆದಿದೆ. 2014ರಲ್ಲಿ ಕೊಪ್ಪಳದ ಸೈಯದ್ ಶಬ್ಬೀರ್ ಎನ್ನುವವರು ಟಿಪ್ಪರ್ ಲಾರಿಯನ್ನು ಬಿಡುಗಡೆಗೊಳಿಸಲು 1000ರೂಪಾಯಿ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯು ಲೋಕಾಯುಕ್ತರಿಗೆ ದೂರನ್ನು ನೀಡಿದ್ದು, ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಕ್ಕೆ ವ್ಯಕ್ತಿಯಿಂದ ಮೊಬೈಲ್ ಪಡೆದುಕೊಂಡ ಅರಣ್ಯಾಧಿಕಾರಿ, ನಂತರ ಮೊಬೈಲ್ ಅನ್ನು ಹಿಂತಿರುಗಿಸುವಾಗ 600ರೂಪಾಯಿ ಲಂಚವನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆತ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ. ನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಚಾರಣೆಗೆ ಒಳಪಡಿಸಿ, ಬಳಿಕ ಆರೋಪಿಗೆ ಐದು ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಮತ್ತು 6ಲಕ್ಷ ರೂಪಾಯಿಗಳನ್ನು ವಿಧಿಸುವಂತೆ ಆದೇಶವನ್ನು ಹೊರಡಿಸಿದೆ.

Categories
Uncategorized

– ಶಿವಮೊಗ್ಗ: ಮೆಕ್ಕೆಜೋಳ ಕಟಾವಿನ ವೇಳೆ ಹೆಜ್ಜೇನು ದಾಳಿ; ರೈತ ಸಾವು – ಭದ್ರಾವತಿ: ಭದ್ರಾನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ – ಚಿಕ್ಕಮಗಳೂರು: ಎಪಿಕೆ ಲಿಂಕ್ ಒತ್ತಿ ಮಹಿಳೆ – ಚಿಕ್ಕಮಗಳೂರು: ಮಹಿಳೆ ಮೇಲೆ ಅತ್ಯಾಚಾರ; ಕೇಸ್!

ಶಿವಮೊಗ್ಗ: ಹೆಜ್ಜೇನು ದಾಳಿಗೆ ರೈತರೊಬ್ಬರು ಸಾವನ್ನಪ್ಪಿರುವ ಘಟನೆ, ಗುರುವಾರದಂದು ಮಲವಗೊಪ್ಪದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮಲವಗೊಪ್ಪದ ನಿವಾಸಿ ತಿಮ್ಮನಾಯ್ಕ ಎಂದು ಗುರುತಿಸಲಾಗಿದೆ. ಬುಧವಾರದಂದು ತಿಮ್ಮನಾಯ್ಕ ಅವರು ತಮ್ಮದೇ ಹೊಲದಲ್ಲಿ ಮೆಕ್ಕೆಜೋಳ ಕಟಾವಿನಲ್ಲಿ ತೊಡಗಿದಂತಹ ಸಂದರ್ಭದಲ್ಲಿ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ. ಪರಿಣಾಮವಾಗಿ ತಿಮ್ಮನಾಯ್ಕ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತಾದರೂ, ಅದು ಫಲಕಾರಿಯಾಗದೆ ಗುರುವಾರ ಸಂಜೆ ಮೃತಪಟ್ಟಿದ್ದಾರೆ.

•ಭದ್ರಾವತಿ: ಭದ್ರಾನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಭದ್ರಾವತಿ: ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಭದ್ರಾನದಿಯಲ್ಲಿ ಪತ್ತೆಯಾಗಿರುವ ಘಟನೆ, ಮಾಧವಾಚಾರ್ ವೃತ್ತದ ಸಮೀಪದಲ್ಲಿ ನಡೆದಿದೆ. ಇಲ್ಲಿನ ನದಿಯಲ್ಲಿ ಶವ ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ. ಮೃತರ ಕುರಿತು ಯಾವುದೇ ಸುಳಿವು ದೊರೆಯದ ಹಿನ್ನೆಲೆಯಲ್ಲಿ, ತನಿಖೆಯ ಮೂಲಕ ಮಾಹಿತಿಯನ್ನು ಕಲೆ ಹಾಕಲು ಪ್ರಯತ್ನ ನಡೆಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ವ್ಯಕ್ತಿಯು ಭದ್ರಾನದಿಯ ಸಮೀಪದಲ್ಲಿರುವ ಹೊಸ ಸೇತುವೆಯಿಂದ ಹಾರಿ ಮೃತಪಟ್ಟಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಸಂಪೂರ್ಣ ತನಿಖೆಯ ಬಳಿಕವಷ್ಟೇ ಸಾವಿನ ಕುರಿತು ಸ್ಪಷ್ಟವಾದ ಮಾಹಿತಿ ಲಭಿಸಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಚಿಕ್ಕಮಗಳೂರು: ಎಪಿಕೆ ಲಿಂಕ್ ಒತ್ತಿ ಮಹಿಳೆ

ಚಿಕ್ಕಮಗಳೂರು: ಮಹಿಳೆಯೊಬ್ಬರು ಅಪರಿಚಿತರು ಕಳುಹಿಸಿದ ಲಿಂಕ್ ಅನ್ನು ಒತ್ತಿ 1ರೂಪಾಯಿಯನ್ನು ಪಾವತಿಸುವ ಮೂಲಕ ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಇದೀಗ ಬೆಳಕಿಗೆ ಬಂದಿದೆ. ವಾಹನದ ಚಲನ್ ಗೆ ಸಂಬಂಧಿಸಿದ ಸಂದೇಶವೆಂದು ಮಹಿಳೆಯು ನಂಬಿ, ಲಿಂಕ್ ಅನ್ನು ತೆರೆದಿರುವುದರಿಂದ ಈ ಸನ್ನಿವೇಶ ಎದುರಾಗಿದೆ. ಸುಚಿತ್ರಕುಮಾರಿ ಎಂಬ ಮಹಿಳೆಯು ಕೆನರಾ ಬ್ಯಾಂಕ್ ನಲ್ಲಿ ಎರಡು ಉಳಿತಾಯ ಖಾತೆಗಳನ್ನು ಹೊಂದಿದ್ದು, ಅಕ್ಟೋಬರ್ 1ರ ಗುರುವಾರದಂದು ಮಧ್ಯಾಹ್ನ ಅವರ ಮೊಬೈಲ್ ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಅದೇ ಅಪರಿಚಿತ ಸಂಖ್ಯೆಯಿಂದ ಬಂದ ಸಂದೇಶವನ್ನು ತೆರೆದು ನೋಡಿದಾಗ ಲಿಂಕ್ ಒಂದು ಬಂದಿದೆ ಎನ್ನಲಾಗಿದೆ. ಆ ಲಿಂಕ್ ಅನ್ನು ತೆರೆದು ಡೌನ್ ಲೋಡ್ ಮಾಡಿದ ಬಳಿಕ ಫೋನ್ ಪೇ ಪುಟ ತೆರೆದುಕೊಂಡಿದ್ದು, 1ರೂಪಾಯಿ ಪಾವತಿಸುವಂತೆ ತಿಳಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಇದು ವಾಹನಕ್ಕೆ ಸಂಬಂಧಿಸಿದ ಎಂ-ಪರಿವಾಹನ್ ಸಂದೇಶವಿರಬಹುದೆಂದು ನಂಬಿದ ಸುಚಿತ್ರ ಕುಮಾರಿ ಅವರು ಫೋನ್ ಪೇ ಇನ್ ಅನ್ನು ನಮೂದಿಸಿ 1ರೂಪಾಯಿಯನ್ನು ಕಳುಹಿಸಿದ್ದಾರೆ. ಬಳಿಕ ಸುಚಿತ್ರ ಕುಮಾರಿಯವರು ಕೆಲಸದ ನಡುವೆ ಅದರತ್ತ ಗಮನಹರಿಸಿಲ್ಲ. ಆದರೆ, ಅಕ್ಟೋಬರ್ 3ರ ಶನಿವಾರದಂದು ಬೆಳಗಿನ ಜಾವ ಸುಚಿತ್ರ ಕುಮಾರಿ ಅವರ ಬ್ಯಾಂಕ್ ನ ಎರಡು ಖಾತೆಗಳಿಂದ ಹಂತಹಂತವಾಗಿ ಸುಮಾರು 1.89.333.21 ರೂಪಾಯಿಗಳಷ್ಟು ಕಡಿತಗೊಂಡಿದೆ. ನಂತರ ಬ್ಯಾಂಕ್ ನವರಿಂದ ಎಚ್ಚರಿಕೆ ಕರೆ ಬಂದಾಗ ಸುಚಿತ್ರ ಕುಮಾರಿಯವರಿಗೆ ತಮ್ಮ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆಗೊಂಡಿರುವುದರ ಕುರಿತು ಅರಿವಾಗಿದೆ. ತಕ್ಷಣ ಸುಚಿತ್ರ ಕುಮಾರಿ ಅವರು ಬ್ಯಾಂಕ್ ನ ಟ್ರೋಲ್ ಫ್ರೀಗೆ ಕರೆ ಮಾಡಿ, ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದು, ಬಳಿಕ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.

•ಚಿಕ್ಕಮಗಳೂರು: ಮಹಿಳೆ ಮೇಲೆ ಅತ್ಯಾಚಾರ; ಕೇಸ್!

ಚಿಕ್ಕಮಗಳೂರು: ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ, ಮಲ್ಲಂದೂರು ಎನ್ನುವಲ್ಲಿ ನಡೆದಿದೆ. ಮಹಿಳೆಯು ಕೇವಲ 15 ದಿನಗಳ ಹಿಂದೆಯಷ್ಟೇ ಪ್ರವೀಣ್ ಎನ್ನುವವರನ್ನು ವಿವಾಹವಾಗಿದ್ದು, ಮಲ್ಲಂದೂರಿನ ಮಸೀದಿ ಸಾಲಿನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಅಲ್ಲದೆ ಆ ಮಹಿಳೆಯು ಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದು, ಅಕ್ಟೋಬರ್ 8ರ ಗುರುವಾರದಂದು ಮನೆಯೊಂದರಲ್ಲಿ ಪಾತ್ರೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಬಸ್ಯಾ ಅಲಿಯಾಸ್ ಬಸವರಾಜ್ ಎನ್ನುವಾತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ‌. ಅಷ್ಟೇ ಅಲ್ಲದೆ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆಯನ್ನೂ ಸಹ ಹಾಕಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
Uncategorized

ಏಷ್ಯನ್ ಗೇಮ್ಸ್‌ ಕಂಚಿನ ಪದಕ ಗೆದ್ದ ಸ್ನೇಹಾ ಅವರಿಗೆ ಶುಭಾಶಯಗಳ ಸುರಿಮಳೆ – ರಂಗಭೂಮಿ ಕಲಾವಿದೆ ಆಶಾ ಡ್ಯಾನಿಯಲ್ ಅವರಿಗೆ ‘ರಾಷ್ಟ್ರೀಯ ಕಲಾ ಕೇಸರಿ’ ಪ್ರಶಸ್ತಿ – ಚೆಸ್ ಅಲ್ಲಿ ಇಂಪನಾ ಹೆಬ್ಬಾರ್ ರಾಜ್ಯ ಮಟ್ಟಕ್ಕೆ ಆಯ್ಕೆ

ಕೊಪ್ಪ: ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಹಾಗೂ ನಮ್ಮ ಮಲೆನಾಡಿಗೆ ಕೀರ್ತಿ ತಂದ ಶಾನುವಳ್ಳಿಯ ಹೆಮ್ಮೆಯ ಪುತ್ರಿ ಸ್ನೇಹಾ ಅವರನ್ನು ಶೃಂಗೇರಿ ಮಾಜಿ ಶಾಸಕ ಜೀವರಾಜ್ ಅವರು ಬಿಜೆಪಿ ಮುಖಂಡರೊಂದಿಗೆ ಅವರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದಿಸಿದರು.

ರಂಗಭೂಮಿ ಕಲಾವಿದೆ ಆಶಾ ಡ್ಯಾನಿಯಲ್ ಅವರಿಗೆ ‘ರಾಷ್ಟ್ರೀಯ ಕಲಾ ಕೇಸರಿ’ ಪ್ರಶಸ್ತಿ.

ತೀರ್ಥಹಳ್ಳಿಯ ‘ನಟ ಮಿತ್ರರು’ ತಂಡದಲ್ಲಿ‌ ಗುರುತಿಸಿ ಕೊಂಡು ಸತತ ಎರಡು ದಶಕಗಳಿಂದ ವೈವಿದ್ಯಮಯ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ರಂಗಸೇವೆಯಲ್ಲಿ ನಿರತರಾಗಿದ್ದು, ಇತ್ತೀಚೆಗೆ ‘ಭಾರತ್ ರಂಗ ಮಹೋತ್ಸವ್’ ನಲ್ಲಿ ಪ್ರದರ್ಶನಗೊಂಡ ‘ಆ ಊರು ಈ ಊರು’ ನಾಟಕದ ಗಂಗಾಬಾಯಿ ಪಾತ್ರದಲ್ಲಿ ಸೈ ಎನಿಸಿಕೊಂಡ ರಂಗಭೂಮಿ ಕಲಾವಿದೆಯಾದ ಶ್ರೀಮತಿ ಆಶಾ ಡ್ಯಾನಿಯಲ್ ಇವರಿಗೆ ‘ಸುರ್ವೆ ಕಲ್ಚರಲ್ ಅಕಾಡೆಮಿ- ಬೆಂಗಳೂರು’ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ 76ನೇ ಸಾಂಸ್ಕೃತಿಕ ಕಲಾಪ್ರತಿಭೋತ್ಸವ ಸಮಾರಂಭದಲ್ಲಿ ‘ರಾಷ್ಟ್ರೀಯ ಕಲಾಕೇಸರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚೆಸ್ ಅಲ್ಲಿ ಇಂಪನಾ ಹೆಬ್ಬಾರ್ ರಾಜ್ಯ ಮಟ್ಟಕ್ಕೆ ಆಯ್ಕೆ

ತೀರ್ಥಹಳ್ಳಿ/ ಕೊಪ್ಪ: ಗಡಿಕಲ್ ಶಾಲೆಯ ಇಂಪನಾ ಹೆಬ್ಬಾರ್ ಅವರು ಚೆಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರಿಗೆ ಶಾಲಾ ಆಡಳಿತ ಮಂಡಳಿ ಶುಭಾಶಯ ಕೋರಿದೆ.

Categories
Uncategorized

ಪ್ರೇಮದ ಊರಲಿ.. ಸಿನಿಮಾಕ್ಕೆ ಮಲೆನಾಡಿಗರು ಫಿದಾ! – ಮಲೆನಾಡ ಹತ್ತಾರು ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್..! – ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರಕ್ಕೆ ಅಭಿಜಿತ್ ಭೇಟಿ

ಮಲೆನಾಡು: ಕನ್ನಡದ ಜನರ ಮನ ಗೆದ್ದ ಸಿನಿಮಾ ಪ್ರೇಮದ ಊರಲಿ ಚಲನಚಿತ್ರವು ಮಲೆನಾಡಿನಲ್ಲಿ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಲ್ಲಾ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನವನ್ನು ನೀಡುತ್ತಿದೆ.
ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಗಡಿಭಾಗವಾಗಿರುವ ಬೇಲೂರು ಮೂಲದ ನಿರ್ದೇಶಕರಾಗಿರುವ ಮನೋಜ್ ಕುಮಾರ್ ಅವರ ನಿರ್ದೇಶನಕ್ಕೆ ಚಿತ್ರರಸಿಕರು ಮಾರುಹೋಗಿದ್ದಾರೆ. ಕಲಾವಿದರ ಅಭಿನಯದಿಂದಲೂ ಸೈ ಎನಿಸಿಕೊಂಡಿರುವ ಈ ಚಿತ್ರವು ಎಲ್ಲೆಡೆ ಉತ್ತಮ ಸ್ಪಂದನೆಯನ್ನು ಪಡೆದುಕೊಂಡಿದೆ.

ಅಭಿಜಿತ್ ತೀರ್ಥಹಳ್ಳಿ ಅವರಿಂದ ಸಿನಿಮಾ ವೀಕ್ಷಣೆ

ತೀರ್ಥಹಳ್ಳಿ ಮೂಲದ ಅಭಿಜಿತ್ ತೀರ್ಥಹಳ್ಳಿ ಅವರ ಸಾಹಿತ್ಯ ಕೂಡ ಜನರ ಮನಸ್ಸನ್ನು ಸೂರೆ ಮಾಡಿದೆ. ಹೀಗಾಗಿ ತಮ್ಮ ಊರಿನ ಪ್ರತಿಭಾವಂತ ಯುವಕನಿಗೆ ತೀರ್ಥಹಳ್ಳಿಯ ವಿನಾಯಕ ಚಿತ್ರಮಂದಿರದಲ್ಲಿ ಅದ್ಧೂರಿ ಸ್ವಾಗತವನ್ನು ಕೋರಲಾಯಿತು.‌ ಈ ಸಂದರ್ಭದಲ್ಲಿ ಅಭಿಜಿತ್ ತೀರ್ಥಹಳ್ಳಿ ಅವರು ತಮ್ಮ ಊರಿನ ಚಿತ್ರಪ್ರೇಮಿಗಳಿಗೆ ಚಿತ್ರವನ್ನು ಯಶಸ್ವಿಗೊಳಿಸಿಕೊಟ್ಟಿರುವ ಕಾರಣಕ್ಕೆ ಮತ್ತು ತಮಗೆ ಅದ್ಧೂರಿ ಸ್ವಾಗತವನ್ನು ಕೋರಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. ಇನ್ನು ಅವರ ಚಿತ್ರಕ್ಕೆ ಸ್ನೇಹಿತರು ಕೂಡ ಒಳ್ಳೆಯ ರೀತಿಯಲ್ಲಿ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಪ್ರತಿ ದಿನ ವಿನಾಯಕ ಚಿತ್ರ ಮಂದಿರದಲ್ಲಿ 4 ಶೋ ಭರ್ತಿ ಆಗುತ್ತಿದೆ.

ಮಲೆನಾಡ ಹತ್ತಾರು ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್..!

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಭಾರತ್ ಸಿನಿಮಾಸ್, ಸಾಗರದ ಶ್ರೀ, ತೀರ್ಥಹಳ್ಳಿಯ ವಿನಾಯಕ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಜೆಎಂಜೆ, ಬಾಳೆಹೊನ್ನೂರಿನ ಸುದರ್ಶನಿ ಚಿತ್ರಮಂದಿರಗಳಲ್ಲಿ ಪ್ರೇಮದ ಊರಲಿ ಚಿತ್ರ ತೆರೆಕಂಡಿದೆ. ಇನ್ನು ಈ ವಾರ ಇನ್ನಷ್ಟು ಚಿತ್ರ ಮಂದಿರಕ್ಕೆ ಲಗ್ಗೆ ಇಡಲಿದೆ.
ಪ್ರೇಮದ ಊರಲಿ ಕೇವಲ ರಾಜ್ಯಾದ್ಯಂತ ಮಾತ್ರವಲ್ಲದೇ ಪರರಾಜ್ಯಗಳು ಮತ್ತು ವಿದೇಶಗಳಲ್ಲೂ ಉತ್ತಮ ರೀತಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.‌

Categories
Uncategorized

ಸೇವೆಯೇ ಉಸಿರಾಗಿದ್ದ ಶ್ರೀರಾಮ್ ಭಟ್ ಇನ್ನಿಲ್ಲ! – ಕುಪ್ಪಳಿ ಸಮೀಪದ ಮುಸ್ಸಿನಕೊಪ್ಪದ ಅರ್ಚಕ ವಿಧಿವಶ – ಶಿಕ್ಷಣ, ಧಾರ್ಮಿಕ, ಸಮಾಜ ಸೇವಕ: ಗ್ರಾಮದಲ್ಲಿ ಶೋಕ ಸಾಗರ: – ತೀರ್ಥಹಳ್ಳಿಯ ಇಬ್ಬರು ಯುವಕರು ಚಿಕ್ಕ ವಯಸ್ಸಿಗೆ ಅನಾರೋಗ್ಯದಿಂದ ಸಾವು

ತೀರ್ಥಹಳ್ಳಿ: ಅರ್ಚಕ ವೃತ್ತಿ ಜತೆಗೆ ಸಮಾಜ ಸೇವೆ ಹಾಗೂ ಕೃಷಿ ಮೂಲಕ ಸಾವಿರಾರು ಜನರಿಗೆ ಪರೋಪಕಾರಿಯಾಗಿದ್ದ ತೀರ್ಥಹಳ್ಳಿ ತಾಲೂಕು ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಕೊಡಿಗೆ ಮುಸ್ಸಿನಕೊಪ್ಪ ಶ್ರೀ ರಾಮ ಭಟ್ ಅವರು ಅನಾರೋಗ್ಯದಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಶ್ರೀರಾಮ್ ಭಟ್ ಅವರಿಗೆ 42 ವರ್ಷ ವಯಸ್ಸಾಗಿದ್ದು. 2 ತಿಂಗಳ ಹಿಂದೆ ತಂದೆ ಚಿದಂಬರ್ ಭಟ್ ಅವರನ್ನ ಕಳೆದುಕೊಂಡ್ಡಿದರು. ಬಳಿಕ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು ಇದೀಗ ಮಣಿಪಾಲ್ ಆಸ್ಪತ್ರೆಯಲ್ಲಿ ಒಂದು ತಿಂಗಳ ಚಿಕಿತ್ಸೆ ಫಲ ನೀಡದೆ ನಿಧನರಾಗಿದ್ದಾರೆ. ಶ್ರೀರಾಮ್ ಅವರ ಸಾವಿಗೆ ಇಡೀ ಊರಿಗೆ ಊರೇ ಅವರ ಸಾವಿಗೆ ಕಂಬನಿ ಮಿಡಿದಿದೆ.
ಶುಕ್ರವಾರ ಸಂಜೆ ಅವರ ಮನೆ ಕುಪ್ಪಳಿ ಸಮೀಪದ ಮುಸ್ಸಿನಕೊಪ್ಪಕ್ಕೆ ಪಾರ್ಥಿವ ಶರೀರ ತರಲಿದ್ದು ಶನಿವಾರ ಅಂತ್ಯ ಕ್ರಿಯೆ ನಡೆಯಲಿದೆ.
ಮೃತ ಶ್ರೀರಾಮ್ ಅವರ ಆರೋಗ್ಯ ವಿಚಾರದಲ್ಲಿ ಕೊಪ್ಪ ಹಾಗೂ ತೀರ್ಥಹಳ್ಳಿಯ ಕೆಲವು ಸ್ಥಳೀಯ ಆಸ್ಪತ್ರೆಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆಂಜನೇಯ ದೇವಸ್ಥಾನದ ಪೂಜೆ ಮೂಲಕ ಸೇವೆ

ಗಡಿಕಲ್ ಆಂಜನೇಯ ದೇವಸ್ಥಾನದ ಅರ್ಚಕರಾಗಿದ್ದ ಶ್ರೀರಾಮ್ ಅಜಾತ ಶತ್ರುವಾಗಿದ್ದರು. ದೇವರ ಸೇವೆಯನ್ನು ಉಚಿತವಾಗಿ ಮಾಡುತ್ತಿದ್ದರು. ಸಾಮಾಜಿಕವಾಗಿ ಅನೇಕ ಶಿಕ್ಷಣ, ಧಾರ್ಮಿಕ ಸಾಮಾಜಿಕ ಸೇವೆಗಳಿಗೆ ಉದಾರವಾಗಿ ದಾನ ನೀಡುತ್ತಾ ಸಮಾಜ ಹಾಗೂ ಜನಪರ ಸೇವೆಗೆ ಹೆಸರಾಗಿದ್ದ ಶ್ರೀರಾಮ್ ಅವರ ಸಾವು ಇದೀಗ ಗ್ರಾಮದಲ್ಲಿ ಶೋಕ ಸಾಗರವನ್ನೇ ನಿರ್ಮಾಣ ಮಾಡಿದೆ. ಕುಟುಂಬದವರಾದ ಪತ್ನಿ, ಮಗು, ಅಕ್ಕ, ತಂಗಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಇವರ ಅಂತಿಮ ಕ್ರಿಯೆ ಶನಿವಾರ ಬೆಳಗ್ಗೆ ನಡೆಯುವ ಸಾಧ್ಯತೆ ಇದೆ.

…..

ಅವಿನಾಶ್‌ ಜಾದವ್‌ ಅಕಾಲಿಕ ನಿಧನ

ತೀರ್ಥಹಳ್ಳಿಯ ರಂಜದಕಟ್ಟೆಯ ಅವಿನಾಶ್‌ ಜಾದವ್‌ (36) ಶುಕ್ರವಾರ ನಿಧನರಾದರು. ಲವಲವಿಕೆ ವ್ಯಕ್ತಿತ್ವದ, ಜೀವನೋಪಾಯಕ್ಕಾಗಿ ಲಾರಿ ಚಲಾಯಿಸುತ್ತಿದ್ದ ಅಪಾರ ಶ್ರಮಜೀವಿಯಾಗಿದ್ದ ಅನಿನಾಶ್‌ ತಮ್ಮ ಅಜಾತಶತ್ರು ವ್ಯಕ್ತಿತ್ವದಿಂದ ಎಲ್ಲರಿಗೂ ಬೇಕಾದವರಾಗಿ ಜನಪ್ರಿಯರಾಗಿ ಅಪಾರ ಸ್ನೇಹ ಬಳಗವನ್ನು ಹೊಂದಿದ್ದರು. ಇತ್ತೀಚೆಗೆ ಅವರಿಗೆ ಜಿಬಿಎಸ್‌ ಎಂಬ ನರಮಂಡಲದ ಮೇಲೆ ತೀವ್ರ ದಾಳಿ ನಡೆಸುವ ಅತಿ ಅಪರೂಪದ ಕಾಯಿಲೆ ಪತ್ತೆಯಾಗಿತ್ತು. ಆರಂಭಿಕ ಹಂತದಲ್ಲಿ ಅವರ ಬಂಧು ಬಳಗ ಸ್ನೇಹಿತರೆಲ್ಲರೂ ಸೇರಿ ಹಣ ಒಗ್ಗೂಡಿಸಿ ಚಿಕಿತ್ಸೆಗೆ ನೆರವಾಗಿದ್ದರು. ಆದರೆ ಅತ್ಯಂತ ದುಬಾರಿ ವೆಚ್ಚದ ಹಾಗೂ ಚಿಕಿತ್ಸೆ ನೀಡಿದರು ಪೂರ್ತಿ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇರದ ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅಂತಿಮವಾಗಿ ಅವರು ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯೇ ಅವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಪತ್ನಿ, ಎರಡು ವರ್ಷದ ಪುಟ್ಟ ಮಗು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

ಭಾವ ಪೂರ್ಣ ಶ್ರದ್ಧಾಂಜಲಿ: ಆತ್ಮಕ್ಕೆ ಶಾಂತಿ ಸಿಗಲಿ…

Categories
Uncategorized

ಅರ್ಚಕರ ಸಮಸ್ಯೆಗಳಿಗೆ ಸ್ಪಂದಿಸಲು ಒಕ್ಕೂಟ ಬದ್ಧ – ತೀರ್ಥಹಳ್ಳಿಯಲ್ಲಿ ಶತರುದ್ರಾಭಿಷೇಕ ಹಾಗೂ ಸರ್ವ ಸದಸ್ಯರ ಸಭೆ – ಅರ್ಚಕರ ವೇತನ ಹೆಚ್ಚಳಕ್ಕೆ ಸರ್ಕಾರಕ್ಕೆ ಒತ್ತಾಯ

ತೀರ್ಥಹಳ್ಳಿ: ಧಾರ್ಮಿಕ ದತ್ತಿ ಇಲಾಖೆಯ ಅರ್ಚಕ, ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟ, ತೀರ್ಥಹಳ್ಳಿ ತಾಲೂಕು ಘಟಕದ ವತಿಯಿಂದ ಪುರಾಧೀಶ್ವರ ಶ್ರೀ ರಾಮೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಗುರುವಾರ ಶತರುದ್ರಾಭಿಷೇಕ ನೆರವೇರಿಸಲಾಯಿತು.
ವೃಷ್ಟಿಯ ಅಸಮತೋಲನದಿಂದ ಉಂಟಾಗುತ್ತಿರುವ ಹಾಗೂ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಉಷ್ಣತೆಯ ಹೆಚ್ಚಳ ಮತ್ತು ಅನಾಹುತಗಳ ಕುರಿತು ಚಿಂತಿಸಿ, ಲೋಕಕಲ್ಯಾಣ, ಉತ್ತಮ ಮಳೆ ಹಾಗೂ ಪ್ರಕೃತಿಯ ಸಮತೋಲನಕ್ಕಾಗಿ ಸಂಕಲ್ಪ ಕೈಗೊಂಡು ಶತರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಶ್ರೀ ಗಾಯತ್ರೀ ಮಂದಿರದಲ್ಲಿ ಒಕ್ಕೂಟದ ಸರ್ವ ಸದಸ್ಯರ ಸಭೆ ಅಧ್ಯಕ್ಷರಾದ ರಾಘವೇಂದ್ರ ಭಟ್ ಕೋಣಂದೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಒಕ್ಕೂಟದ ಕಾರ್ಯಚಟುವಟಿಕೆಗಳ ವರದಿ ಮಂಡಿಸಿ, ಅರ್ಚಕರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಮಾರ್ಗಗಳ ಕುರಿತು ಚರ್ಚಿಸಲಾಯಿತು.
ಉತ್ತರ ಭಾರತದ ದೇವಸ್ಥಾನಗಳ ಪ್ರವಾಸಕ್ಕಾಗಿ ಸರ್ಕಾರದಿಂದ ಏರ್ಪಡಿಸಿರುವ ಉಚಿತ ಭಾರತ್ ಗೌರವ ಯಾತ್ರೆಯ ಸದುಪಯೋಗವನ್ನು ಅರ್ಚಕರು ಪಡೆದುಕೊಳ್ಳಬೇಕು ಎಂದು ಅಧ್ಯಕ್ಷರು ತಿಳಿಸಿದರು. ತಸ್ತಿಕ್ ಹಣ ದೊರೆಯದಿರುವ ಅರ್ಚಕರು ಅಗತ್ಯ ದಾಖಲೆಗಳನ್ನು ತಾಲೂಕು ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಯಿತು.

ತೀರ್ಥಹಳ್ಳಿ ತಾಲೂಕಿನಲ್ಲಿ 160ಕ್ಕೂ ಹೆಚ್ಚು ‘ಸಿ’ ದರ್ಜೆಯ ಮುಜರಾಯಿ
ದೇವಸ್ಥಾನ

ತೀರ್ಥಹಳ್ಳಿ ತಾಲೂಕಿನಲ್ಲಿ 160ಕ್ಕೂ ಹೆಚ್ಚು ‘ಸಿ’ ದರ್ಜೆಯ ಮುಜರಾಯಿ ದೇವಸ್ಥಾನಗಳಿದ್ದು, ಇಲ್ಲಿನ ಅರ್ಚಕರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸಂಘದಿಂದ ಸಾಧ್ಯವಾದಷ್ಟು ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

ಅರ್ಚಕರ ಸಂಘಕ್ಕೆ ಪ್ರಸ್ತುತ ಸೂಕ್ತ ಕಟ್ಟಡ ಅಗತ್ಯ

ಅರ್ಚಕರ ಸಂಘಕ್ಕೆ ಪ್ರಸ್ತುತ ಸೂಕ್ತ ಕಟ್ಟಡ ಹಾಗೂ ಸ್ವಂತ ಸಂಪನ್ಮೂಲಗಳ ಕೊರತೆ ಇದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸೌಲಭ್ಯ ಅಥವಾ ಸ್ಥಳಾವಕಾಶ ದೊರೆತಲ್ಲಿ ಪಡೆಯಲು ಪ್ರಯತ್ನಿಸಲಾಗುವುದು. ಕೆಲ ದೇವಸ್ಥಾನಗಳಲ್ಲಿ ಪೂಜಾ ಸಾಮಗ್ರಿಗಳ ಕೊರತೆ ಇರುವ ಹಿನ್ನೆಲೆಯಲ್ಲಿ ತಾಮ್ರ, ಹಿತ್ತಾಳೆಯ ಆರತಿ ತಟ್ಟೆ, ಹರಿವಾಣ, ಕಲಶ, ಗಂಟೆ, ಶಂಖ ಮುಂತಾದ ಸಾಮಗ್ರಿಗಳನ್ನು ದಾನಿಗಳಿಂದ ಸಂಗ್ರಹಿಸಿ ಅಗತ್ಯವಿರುವ ಅರ್ಚಕರಿಗೆ ವಿತರಿಸುವ ಚಿಂತನೆ ಇದೆ ಎಂದು ತಿಳಿಸಿದರು.

ಅರ್ಚಕರಿಗೆ ಗುರುತಿನ ಚೀಟಿ ವಿತರಣೆ

ತೀರ್ಥಹಳ್ಳಿ ತಾಲೂಕಿನ ಮುಜರಾಯಿ ಅರ್ಚಕರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯ ನಡೆಯುತ್ತಿದ್ದು, ಇದರಿಂದ ಅರ್ಚಕರಿಗೆ ಮಾನ್ಯತೆ ದೊರೆಯುವುದರೊಂದಿಗೆ ಮುಂದಿನ ದಿನಗಳಲ್ಲಿ ವಿವಿಧ ಅವಕಾಶಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.

ವೇತನ ಹೆಚ್ಚಳಕ್ಕೆ ಸರ್ಕಾರಕ್ಕೆ ಒತ್ತಾಯ

ವರ್ಷದ ಎಲ್ಲ ದಿನಗಳಲ್ಲಿಯೂ ಸೇವೆ ಸಲ್ಲಿಸುವ ಅರ್ಚಕರಿಗೆ ದೊರೆಯುತ್ತಿರುವ ವೇತನ ಕನಿಷ್ಠ ಮಟ್ಟದಲ್ಲಿದ್ದು, ಸರ್ಕಾರವು ಹೊಸ ಕಾನೂನು ಹಾಗೂ ನಿಯಮಗಳಿಂದ ಅರ್ಚಕರಿಗೆ ತೊಂದರೆ ನೀಡಬಾರದು. ಈ ಕುರಿತು ಸಂಘದ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಭಕ್ತರ ಏಳಿಗೆ ಹಾಗೂ ಲೋಕಕಲ್ಯಾಣಕ್ಕಾಗಿ ಪ್ರತಿನಿತ್ಯ ತಮ್ಮ ಗ್ರಾಮದ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ “ಸರ್ವೇ ಜನಾಃ ಸುಖಿನೋ ಭವಂತು” ಎಂದು ಪ್ರಾರ್ಥಿಸುವ ಅರ್ಚಕರಿಗೆ ಹಾಗೂ ಸಂಘಕ್ಕೆ ಉದಾರ ಮನಸ್ಸಿನ ದಾನಿಗಳು ಸಾಧ್ಯವಾದಷ್ಟು ನೆರವು ನೀಡಬೇಕೆಂದು ಮನವಿ ಮಾಡಿದರು. ಕಾರ್ಯದರ್ಶಿ ದರ್ಶನ್ ಬಾಯರ್ ಸ್ವಾಗತಿಸಿದರು. ಖಜಾಂಚಿ ಮುರಳೀಧರ್ ವಂದಿಸಿದರು. ಶತರುದ್ರಾಭಿಷೇಕಕ್ಕೆ ಆಗಮಿಸಿದ ಅರ್ಚಕರಿಗೂ, ಶ್ರೀ ರಾಮೇಶ್ವರ ದೇವಸ್ಥಾನದ ಅರ್ಚಕ ಪರಿವಾರ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೂ, ಶ್ರೀ ಗಾಯತ್ರೀ ಮಂದಿರದ ಪದಾಧಿಕಾರಿಗಳಿಗೂ ಒಕ್ಕೂಟದ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.

Categories
Uncategorized

ಕಡೂರು: ರೈತ ಆತ್ಮಹತ್ಯೆಗೆ ಶರಣು •ಮೂಡಿಗೆರೆ: ಮಳೆಗೆ ಹಾರಿ ಹೋದ ಶಾಲೆಯ ಹೆಂಚುಗಳು! •ಶಿವಮೊಗ್ಗ/ಚಿಕ್ಕಮಗಳೂರು: ಬಸ್ ನಲ್ಲಿ ಕೈತಪ್ಪಿ ಹೋಗಿದ್ದ ಚಿನ್ನ ಪತ್ತೆ! •ಶಿವಮೊಗ್ಗ: ಈಜಲು ತೆರಳಿದ್ದ ಯುವಕ ಶವವಾಗಿ ಪತ್ತೆ

ಕಡೂರು: ಸಾಲದ ಬಾದೆಗೆ ಸಿಲುಕಿ ಮನನೊಂದು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಟ್ರ್ಯಾಕ್ಟರ್ ಖರೀದಿಗಾಗಿ ಕಡೂರಿನ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ 4.01ಲಕ್ಷ ರೂಪಾಯಿಗಳಷ್ಟು ಸಾಲವನ್ನು ಮಾಡಿದ್ದು, ಎರಡು ಕಂತುಗಳನ್ನು ಮಾತ್ರ ಪಾವತಿಸಿದ್ದರು ಎನ್ನಲಾಗಿದೆ. ಆದರೆ ಈ ಬಾರಿ ಕಾಲಕ್ಕೆ ತಕ್ಕಂತೆ ಸಮರ್ಪಕವಾಗಿ ಮಳೆಬಾರದ ಹಿನ್ನೆಲೆಯಲ್ಲಿ, ಬೆಳೆ ಕೂಡ ಸರಿಯಾಗಿ ದೊರೆಯದಿದ್ದರೆ ಸಾಲವನ್ನು ಹೇಗೆ ತೀರಿಸುವುದು ಎನ್ನುವ ಚಿಂತೆಗೆ ಒಳಗಾಗಿದ್ದರು. ರೈತ ಪ್ರತಿದಿನ ರಾತ್ರಿ ತೋಟದ ಮನೆಗೆ ತೆರಳಿ, ಅಲ್ಲಿಯೇ ಮಲಗಿಕೊಂಡು ಮರುದಿನ ಬೆಳಿಗ್ಗೆ ಹಾಲು ತೆಗೆದುಕೊಂಡು ಮನೆಗೆ ಬರುತ್ತಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಆದರೆ ಮಾನಸಿಕವಾಗಿ ನೊಂದಿದ್ದ ಅವರು ಎಂದಿನಂತೆ ತೋಟದ ಮನೆಯಿಂದ ಬೆಳಗಿನಜಾವ ಹಿಂತಿರುಗದೇ ಇರುವುದರಿಂದ ಮನೆಯವರು ಮತ್ತು ಅವರ ಸಂಬಂಧಿಕರು ತೋಟದ ಕಡೆಗೆ ತೆರಳಿ ಹುಡುಕಾಟ ನಡೆಸಿದಾಗ, ರೈತ ನರಳಡುತ್ತಾ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಕಡೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗದೆ ಅವರು ಸಾವನ್ನಪ್ಪಿದ್ದಾರೆ.

•ಮೂಡಿಗೆರೆ: ಭಾರಿ ಮಳೆಗೆ ಹಾರಿ ಹೋದ ಶಾಲೆಯ ಹೆಂಚುಗಳು

ಮೂಡಿಗೆರೆ: ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಹಲವಾರು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಪ್ರಮಾಣದ ಮಳೆಯಾಗಿದ್ದು, ಮೂಡಿಗೆರೆ ತಾಲ್ಲೂಕಿನ ಜಾಣಿಗೆ ಗ್ರಾಮದಲ್ಲಿ ಇದರ ಪರಿಣಾಮವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರಾರು ಹೆಂಚುಗಳು ಹಾರಿ ಹೋಗಿರುವ ಘಟನೆ ನಡೆದಿದೆ. ಅಲ್ಲದೆ ಕೊಟ್ಟಿಗೆಹಾರ ಮತ್ತು ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಕೂಡ ಬಿರುಗಾಳಿಯೊಂದಿಗೆ ಮಳೆ ಸಂಭವಿಸುತ್ತಿರುವುದರಿಂದ ಜನ ಜೀವನದ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಬೀರುತ್ತಿದೆ ಎನ್ನಲಾಗಿದೆ.

ಬಸ್ಸಲ್ಲಿ ಕೈತಪ್ಪಿ ಹೋಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಪತ್ತೆ!

ಶಿವಮೊಗ್ಗ: ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳನ್ನು ಒಳಗೊಂಡ ಬ್ಯಾಗ್ ಅನ್ನು ಪೊಲೀಸರು ಪತ್ತೆ ಹಚ್ಚಿ, ಹಿಂತಿರುಗಿಸಿದ ಘಟನೆ ನಡೆದಿದೆ. ಶಿವಮೊಗ್ಗದಿಂದ ತರೀಕೆರೆಗೆ ಖಾಸಗಿ ಬಸ್ ಒಂದರಲ್ಲಿ ಪ್ರಯಾಣಿಸುತ್ತಿದ್ದ ಅಲಸೂರು ಗೇಟ್ ಮೂಲದ ಮಹಿಳೆಯೊಬ್ಬರು, ಇಳಿಯುವಾಗ ತಮ್ಮ ಬ್ಯಾಗ್ ಅನ್ನು ಬಸ್ ನಲ್ಲಿಯೇ ಮರೆತಿದ್ದಾರೆ. ಆ ಬ್ಯಾಗ್ ನಲ್ಲಿ ಸುಮಾರು 2ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ಚಿನ್ನಾಭರಣ, 60.000 ರೂಪಾಯಿ ನಗದು ಹಣ ಹಾಗೂ ಒಂದು ಮೊಬೈಲ್ ಇತ್ತು ಎನ್ನುವ ಮಾಹಿತಿ ಲಭಿಸಿದೆ. ತಮ್ಮ ಸ್ಥಳ ಬಂದೊಡನೆ ಬಸ್ ನಿಂದ ಕೆಳಗೆ ಇಳಿದ ಮಹಿಳೆಗೆ ಕೆಲವೇ ನಿಮಿಷಗಳಲ್ಲಿ ತಾನು ಬ್ಯಾಗ್ ಅನ್ನು ಬಸ್ ನಲ್ಲಿಯೇ ಬಿಟ್ಟು ಬಂದಿದ್ದೇನೆ ಎನ್ನುವ ಅರಿವಾಗಿದೆ. ತಕ್ಷಣ ಅವರು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಿ, ಪೊಲೀಸರ ನೆರವು ಕೋರಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ತಮ್ಮ ಸಿಬ್ಬಂದಿಯಾದ ಮಂಜಪ್ಪ ಚಂದ್ರ ನಾಯ್ಕ ಅವರ ಮೂಲಕ ಖಾಸಗಿ ಬಸ್ ಅನ್ನು ಪತ್ತೆ ಹಚ್ಚಿಸಿ, ಅದರಲ್ಲಿದ್ದ ಬ್ಯಾಗ್ ಅನ್ನು ಸುರಕ್ಷಿತವಾಗಿ ತಮ್ಮ ವಶಕ್ಕೆ ತೆಗೆದುಕೊಂಡು, ಮಹಿಳೆಗೆ ಒಪ್ಪಿಸಿದ್ದಾರೆ.

•ಶಿವಮೊಗ್ಗ: ಈಜಲು ತೆರಳಿದ್ದ ಯುವಕ ಶವವಾಗಿ ಪತ್ತೆ

ಶಿವಮೊಗ್ಗ: ಈಜಲು ತೆರಳಿದ್ದ ಯುವಕನೊಬ್ಬ ಶವವಾಗಿ ತುಂಗಾ ನದಿಯಲ್ಲಿ ಪತ್ತೆಯಾಗಿರುವ ಘಟನೆ, ಬುಧವಾರದಂದು ಪುಟ್ಟಪ್ಪನ ಕ್ಯಾಂಪ್ ನಡೆದಿದೆ. ತುಂಗಾ ನದಿಯ ತೀರದಲ್ಲಿರುವ ಪುಟ್ಟಪ್ಪನ ಕ್ಯಾಂಪ್ ಬಳಿ ಯುವಕರ ತಂಡವೊಂದು ಪಾರ್ಟಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಈ ಸನ್ನಿವೇಶ ಎದುರಾಗಿದೆ. ಪಾರ್ಟಿ ಮುಗಿಸಿದ ಬಳಿಕ ಸಮೀಪದಲ್ಲೇ ಇದ್ದ ತುಂಗಾ ನದಿಗೆ ಫೈಜಾನ್ ಮತ್ತು ಯಾಸಿನ್ ಅರಾಫತ್ ಎನ್ನುವ ಇಬ್ಬರು ಯುವಕರು ಈಜಲು ತೆರಳಿದ್ದಾರೆ. ಆಗ ಯಾಸಿನ್ ಅರಾಫತ್ ಸುರಕ್ಷಿತವಾಗಿ ಈಜಿ ದಡಕ್ಕೆ ಸೇರಿದರೆ, ಫೈಜಾನ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ರಕ್ಷಣಾ ತಂಡದ ಸಿಬ್ಬಂದಿಗಳು ನದಿಯಲ್ಲಿ ಶೋಧನಾ ಕಾರ್ಯವನ್ನು ಕೈಗೊಂಡರು. ಸತತ 8, ಗಂಟೆಗಳ ಕಾಲ ಕಾರ್ಯಾಚರಣೆಯನ್ನು ನಡೆಸಿದರೂ ಫೈಜಾನ್ ಕುರಿತು ಯಾವುದೇ ಸುಳಿವು ಲಭಿಸಿಲ್ಲ. ಬಳಿಕ ಕತ್ತಲಾವರಿಸಿದ ಹಿನ್ನೆಲೆಯಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು ಎನ್ನುವ ಮಾಹಿತಿ ಲಭಿಸಿದೆ.‌ ಗುರುವಾರದಂದು ಬೆಳಿಗ್ಗೆ ಶೋಧನಾ ಕಾರ್ಯವನ್ನು ಮುಂದುವರಿಸಿದಾಗ ಫೈಜಾನ್ ಅವರ ಮೃತದೇಹ ಪತ್ತೆಯಾಗಿದೆ.