Categories
Uncategorized

•ಬೆಳ್ತಂಗಡಿ; ಅಡಿಕೆ ಕೊಯ್ಯುವಾಗ ಶಾಕ್: ವ್ಯಕ್ತಿ ಸಾವು •ಸುಳ್ಯ: ತೆರೆದ ಚರಂಡಿಯಲ್ಲಿ ಬಿದ್ದ ಮಗು; ರಕ್ಷಣೆ •ಮಂಗಳೂರು: ಮಾದಕ ವಸ್ತು ಸೇವನೆ; ಐವರ ಬಂಧನ •ಮೂಡಬಿದರೆ: ಸ್ಕೂಟರ್ ಜಾರಿ ವಿದ್ಯಾರ್ಥಿ ಸಾವು

ಬೆಳ್ತಂಗಡಿ: ಮರದ ಮೇಲೆ ಹತ್ತಿ ಅಡಿಕೆಗಳನ್ನು ಕೊಯ್ಯುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೆ ಒಳಗಾದ ಘಟನೆ, ಅಕ್ಟೋಬರ್ 4ರ ಭಾನುವಾರದಂದು ಧರ್ಮಸ್ಥಳದಲ್ಲಿ ನಡೆದಿತ್ತು. ದೋಟಿ ಮೂಲಕವೇ ಜಾಗರೂಕತೆಯಿಂದ ಅಡಿಕೆಗಳನ್ನು ಕೊಯ್ಯುತ್ತಿದ್ದರು ಎನ್ನಲಾಗಿದೆ. ಆದರೆ ಆಕಸ್ಮಿಕವಾಗಿ ದೋಟಿಯು ವಿದ್ಯುತ್ ತಂತಿಗೆ ತಗುಲಿ ವ್ಯಕ್ತಿಯು ಬಲವಾದ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ವ್ಯಕ್ತಿಯನ್ನು ಧರ್ಮಸ್ಥಳದ ಅಜಿಕುರಿ ನಿವಾಸಿ ನಜೀರ್ ಎಂದು ಗುರುತಿಸಲಾಗಿದೆ. ತಕ್ಷಣ ನಜೀರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಜೀರ್ ಅವರು ಗುರುವಾರದಂದು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಸುಳ್ಯ: ತೆರೆದ ಚರಂಡಿಯಲ್ಲಿ ಬಿದ್ದ ಮಗು; ರಕ್ಷಣೆ

ಸುಳ್ಯ: ಕುಡಿಯುವ ನೀರಿನ ಪೈಪ್ ಕಾಮಗಾರಿಯ ಸಲುವಾಗಿ ತೆಗೆದುಹಾಕಲಾಗಿದ್ದ ಚರಂಡಿಗೆ ಮಗುವೊಂದು ಆಕಸ್ಮಿಕವಾಗಿ ಬಿದ್ದಿರುವ ಘಟನೆ, ಶ್ರೀರಾಮ ಪೇಟೆಯ ಮುಳಿಯ ಜ್ಯುವೆಲ್ಲರ್ಸ್ ಮುಂಭಾಗದಲ್ಲಿ ನಡೆದಿದೆ. ಜೆಸಿಬಿ ಮೂಲಕ ಕುಡಿಯುವ ನೀರಿನ ಪೈಪ್ ಕಾಮಗಾರಿಯು ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಪಾದಚಾರಿ ಮಾರ್ಗದಲ್ಲಿದ್ದ ಚರಂಡಿಯ ಸ್ಪ್ಯಾಬ್ ಅನ್ನು ತೆರವುಗೊಳಿಸಲಾಗಿತ್ತು ಎನ್ನಲಾಗಿದೆ. ಆಗ ಮಗುವೊಂದು ತನ್ನ ಕುಟುಂಬದವರೊಂದಿಗೆ ನಡೆದುಕೊಂಡು ಬರುತ್ತಿದ್ದು, ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ವೀಕ್ಷಿಸುತ್ತಾ ಬರುತ್ತಿರುವಾಗ ಆಕಸ್ಮಿಕವಾಗಿ ಸ್ಪ್ಯಾಬ್ ಅನ್ನು ತೆರವುಗೊಳಿಸಿದ್ದ ಚರಂಡಿಗೆ ಬಿದ್ದಿದೆ ಎನ್ನುವ ಮಾಹಿತಿ ಲಭಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಮಗುವಿನ ನೆರವಿಗೆ ಬಂದಿದ್ದು, ಅದನ್ನು ಕೂಡಲೇ ಚರಂಡಿಯಿಂದ ಮೇಲಕ್ಕೆತ್ತುವ ಮೂಲಕ ಪ್ರಾಣಾಪಾಯದಿಂದ ಪಾರುಗೊಳಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಸಾರ್ವಜನಿಕರಿಗೆ ಅಪಾಯವಾಗದ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

•ಮಂಗಳೂರು: ಮಾದಕ ವಸ್ತು ಸೇವನೆ; ಐವರ ಬಂಧನ

ಮಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ, ನಂತೂರು ಮತ್ತು ಉಳ್ಳಾಲದಲ್ಲಿ ನಡೆದಿದೆ. ನಂತೂರು ಬಳಿ ಮಾದಕ ವಸ್ತು ಸೇವಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬೋಳೂರಿನ ರಾಕೇಶ್, ಸುಲ್ತಾನ್ ಬತ್ತೇರಿಯ ಶಾಶ್ವತ್ ಎಸ್ ಮತ್ತು ಮೂಡುಶೆಡ್ಡೆಯ ಆದಿತ್ಯ ಜನಾರ್ದನ ಕೊಟ್ಯಾನ್ ಎನ್ನುವವರನ್ನು ಕದ್ರಿ ಪೊಲೀಸರು ಸೆರೆ ಹಿಡಿದಿದ್ದರೆ, ಸೋಮೇಶ್ವರ ಗ್ರಾಮದ ಕುಂಪಲ ಮೂರುಕಟ್ಟೆ ಬಸ್ ನಿಲ್ದಾಣದ ಬಳಿ ಮಾದಕ ವಸ್ತು ಸೇವಿಸಿ, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದ ಕುಂಪಲ ಮಯೂರ ಗ್ರೌಂಡ್ ಬಳಿಯ ನಿವಾಸಿ ಕಾರ್ಮೆಲ್ ಕಿರಣ್ ಡಿಸೋಜಾ ಮತ್ತು ಹನುಮಾನ್ ನಗರದ ನಿವಾಸಿ ಪ್ರತೀಕ್ ಎನ್ನುವ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಮಾದಕ ವಸ್ತು ಸೇವನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಜನ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಲಾಗಿದೆ.

•ಮೂಡಬಿದರೆ: ಸ್ಕೂಟರ್ ಜಾರಿ ವಿದ್ಯಾರ್ಥಿ ಸಾವು

ಮೂಡಬಿದರೆ: ಸ್ಕೂಟರ್ ಒಂದು ಜಾರಿ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ, ಕೋಟೆಬಾಗಿಲು ವೀರ ಮಾರುತಿ ದೇವಸ್ಥಾನದ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಜೈನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಶ್ವಿತ್ ಎಂದು ಗುರುತಿಸಲಾಗಿದೆ.‌ ಶಿರ್ತಾಡಿ ಕಡೆಯಿಂದ ಕೋಟೆಬಾಗಿಲು ಕಡೆಗೆ ಪ್ರಶ್ವಿತ್ ಮತ್ತು ಆತನ ಸ್ನೇಹಿತ ದೀಕ್ಷಿತ್ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬಿದ್ದ ರಭಸಕ್ಕೆ ಪ್ರಶ್ವಿತ್ ಅವರ ತಲೆಗೆ ಗಂಭೀರ ರೀತಿಯ ಗಾಯವಾಗಿದ್ದು, ದೀಕ್ಷಿತ್ ಅವರ ತಲೆಗೂ ಪೆಟ್ಟಾಗಿದೆ ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಪ್ರಶ್ವಿತ್ ಸಾವನ್ನಪ್ಪಿದನು ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
Uncategorized

ರಾಜಧಾನಿಯಲ್ಲಿ ಡಾ.ಶಮಿತಾ ಮಲ್ನಾಡ್ ‘ಸಂಗೀತ ಮತ್ತು ಆಧ್ಯಾತ್ಮ’! – ಅ.9ಕ್ಕೆ ರಾಜಧಾನಿಯಲ್ಲಿ ಸಂಗೀತ ಮತ್ತು ಆಧ್ಯಾತ್ಮ ಕಾರ್ಯಕ್ರಮ – ವಿಶೇಷ ಮಹಿಳಾ ಬ್ಯಾಂಡ್ ‘ಜನನಿ’ ತಂಡದಿಂದ ಕಾರ್ಯಕ್ರಮ

ಬೆಂಗಳೂರು: ಮಲೆನಾಡು ಮೂಲದ ಖ್ಯಾತ ಗಾಯಕಿ ಡಾ.ಶಮಿತಾ ಮಲ್ನಾಡ್ ಅವರ ವಿಶೇಷ ಮಹಿಳಾ ಬ್ಯಾಂಡ್ ‘ಜನನಿ’ ತಂಡದಿಂದ ಅಕ್ಟೋಬರ್ 9ರ ಶುಕ್ರವಾರದಂದು ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕರಾದ ಡಾ.ಟಿ.ಎ.ಶರವಣ ಅವರ ಸಹಯೋಗದೊಂದಿಗೆ ‘ಸಂಗೀತ ಮತ್ತು ಆಧ್ಯಾತ್ಮ’ ಕಾರ್ಯಕ್ರಮವನ್ನು ಸಂಜೆ 5:30ಕ್ಕೆ ಬೆಂಗಳೂರಿನ ಯಡಿಯೂರು ಕೆರೆಯಲ್ಲಿರುವ ಪುನೀತ್ ಆಡಿಟೋರಿಯಂ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಅವಧೂತರಾದ ಶ್ರೀ ಶ್ರೀ ಶ್ರೀ ವಿನಯ್ ಗುರೂಜಿ ಅವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜನನಿ ತಂಡದ ಹಾಡುಗಳ ಬಿಡುಗಡೆ, ಸಂಗೀತ ಮತ್ತು ಸಂವಾದ ನಡೆಯಲಿದೆ.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಡಿ.ಎಸ್.ಮ್ಯಾಕ್ಸ್ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಸ್.ಪಿ.ದಯಾನಂದ್, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಶ್ವನಾಥ್ ಪಿ.ಹಿರೇಮಠ್, ಸಮಾಜ ಸೇವಕರಾದ ನೀಲಕಂಠ ಆರ್. ಗೌಡ, ಬೆಂಗಳೂರು ಮೆಟ್ರೋದ ಕಾರ್ಯನಿರ್ವಾಹಕ ನಿರ್ದೇಶಕರಾದ ಶಾಂತ ಎಲ್ ಹುಲ್ಮನಿ, ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಎನ್. ಆರ್.ರಮೇಶ್, ಬೆಂಗಳೂರು ಇಂಟರ್ನ್ಯಾಷನಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನ ಸಂಸ್ಥಾಪಕರಾದ ಡಾ.ಡಿ.ಮುನಿರಾಜು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಬಾ.ಮಾ‌.ಹರೀಶ್ ಅವರು ಉಪಸ್ಥಿತಲಿರುವರು. ಕಾರ್ಯಕ್ರಮದ ನಿರೂಪಣೆಯನ್ನು ಮನಶಾಸ್ತ್ರಜ್ಞರಾದ ಡಾ.ಪದ್ಮಾಕ್ಷಿ ಲೋಕೇಶ್ ಅವರು ನಡೆಸಿಕೊಡಲಿದ್ದಾರೆ. ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ, ಜಿಕೆಜಿಎಸ್- ಗೆಲುವು ಕನ್ನಡ ಗೆಳೆಯರ ಸಮಿತಿ, ಅಡಿಕೆ ನಾಡು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಮಲೆನಾಡು ಹಿತರಕ್ಷಣಾ ವೇದಿಕೆ, ಮಲೆನಾಡು ಮಿತ್ರ ವೃಂದ, ಸಹ್ಯಾದ್ರಿ ಸಂಘ, ಸುವರ್ಣ ಮಲೆನಾಡು ಸಂಘ ಸಹಕಾರ ನೀಡಲಿದ್ದಾರೆ. ಧ್ವನಿ ಮತ್ತು ಬೆಳಕು ಅನಿಲ್ ಸೌಂಡ್ಸ್ ಮತ್ತು ಮಹೇಶ್ ಕಲಾಧರೆ ತಂಡದವರಿಂದ ನೃತ್ಯ ಪ್ರದರ್ಶನಗೊಳ್ಳಲಿದೆ.

ಸರ್ವರಿಗೂ ಸುಸ್ವಾಗತ

Categories
Uncategorized

ಐಸ್ ಕ್ರೀಮ್ ತಯಾರಿಕೆಯಲ್ಲೂ ನಕಲಿ! – ರಾಜ್ಯದ ಹಲವೆಡೆ ತಯಾರಿಕಾ ಘಟಕಗಳ ಮೇಲೆ ದಾಳಿ – ಕೊಳಕು, ಅವಧಿ ಮೀರಿದ ವಸ್ತುಗಳು ಪತ್ತೆ

ಬೆಂಗಳೂರು: ರಾಜ್ಯದ ಹಲವಾರು ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐಸ್ ಕ್ರೀಮ್ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಅಸಮರ್ಪಕ ಲೇಬಲಿಂಗ್ ಹೊಂದಿರುವಂತಹ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬೇಸಿಗೆ, ಮಳೆ ಮತ್ತು ಚಳಿಗಾಲ ಎನ್ನದೆ ವರ್ಷವಿಡಿ ತಮ್ಮ ನೆಚ್ಚಿನ ಐಸ್ ಕ್ರೀಮ್ ಅನ್ನು ಸವಿಯುವಂತಹ ಐಸ್ ಕ್ರೀಮ್ ಪ್ರಿಯರನ್ನು ಆತಂಕಕ್ಕೆ ಒಳಪಡಿಸುವಂತಹ ಸಂಗತಿಯೊಂದು ಹೊರಬಿದ್ದಿದೆ.
ಆರೋಗ್ಯ ಸಚಿವರ ಸೂಚನೆಯ ಮೇರೆಗೆ ಅಧಿಕಾರಿಗಳು ಸುಮಾರು 45ಕ್ಕೂ ಹೆಚ್ಚು ಐಸ್ ಕ್ರೀಮ್ ಉತ್ಪಾದನಾ ಘಟಕಗಳಲ್ಲಿ ಸಮಗ್ರ ತನಿಖೆಯನ್ನು ಕೈಗೊಂಡಂತಹ ಸಮಯದಲ್ಲಿ ಅವಧಿ ಮೀರಿದ ಕಚ್ಚಾವಸ್ತುಗಳು, ತಯಾರಿಕಾ ಸ್ಥಳಗಳಲ್ಲಿ ನೈರ್ಮಲ್ಯದ ಕೊರತೆ, ಪರವಾನಿಗೆ ರಹಿತವಾಗಿ ಅಕ್ರಮವಾಗಿ ಉತ್ಪಾದನೆ ಮಾಡುತ್ತಿರುವಂತಹ ವಿಚಾರಗಳು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆರೋಗ್ಯವನ್ನು ನಿರ್ಲಕ್ಷಿಸಿ ನಿಯಮ ಮೀರಿದ ಘಟಕಗಳ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದಾರೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ದಾಳಿಗಳು ನಿರಂತರವಾಗಿ ಮುಂದುವರಿಯಲಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಮುಂದೆ ಗ್ರಾಹಕರು ಐಸ್ ಕ್ರೀಮ್ ಮತ್ತು ಇತರ ಸಂಸ್ಕರಿಸಿದ ಆಹಾರದ ಉತ್ಪನ್ನಗಳನ್ನು ಖರೀದಿಸುವಂತಹ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಖರೀದಿಸುವ ಸಂದರ್ಭದಲ್ಲಿ ತಯಾರಿಕೆಯ ದಿನಾಂಕ, ಮುಕ್ತಾಯದ ದಿನಾಂಕ, ಪ್ಯಾಕ್ ಸೀಲ್ ಮತ್ತು ಸೂಕ್ತ ಲೇಬಲ್ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ಕೊಂಡುಕೊಳ್ಳಬೇಕೆನ್ನುವಂತಹ ಎಚ್ಚರಿಕೆಯನ್ನು ಸಹ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಸಾರ್ವಜನಿಕರಿಗೆ ನೀಡಿದೆ.

Categories
Uncategorized

ಕುಂದಾಪುರದ ಶಿರಿಯಾರ ಚರ್ಮದ ಚಪ್ಪಲಿ ಫೇಮಸ್! – ಗೃಹ ಕೈಗಾರಿಕೆಗೆ ಬೇಕು ದೊಡ್ಡ ಮಟ್ಟದ ಅವಕಾಶ, ಸಹಕಾರ – ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಡಿಮ್ಯಾಂಡ್

ಕುಂದಾಪುರ: ಕುಂದಾಪುರ ತಾಲೂಕಿನ ಶಿರಿಯಾರ ಚರ್ಮದ ಚಪ್ಪಲಿ ಎನ್ನುವುದು ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಶಿರಿಯಾರ ಭಾಗದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾಗುವ ಪ್ರಸಿದ್ಧ ಕೈಯಿಂದ ಮಾಡಿದ ಚರ್ಮದ ಚಪ್ಪಲಿಗಳಾಗಿವೆ. ಈ ಬ್ರಾಂಡ್ ಇದೀಗ ನಿಧಾನಕ್ಕೆ ಫೇಮಸ್ ಆಗುತ್ತಿದೆ.
ಅಥಣಿ ಅಥವಾ ನಿಪ್ಪಾಣಿಯ ಕೊಲ್ಲಾಪುರಿ ಚಪ್ಪಲಿಗಳು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಒಣ ಹವೆಯ ನೆಲಕ್ಕೆ ಹೆಸರಾಗಿದ್ದರೆ, ಶಿರಿಯಾರದ ಚಪ್ಪಲಿಗಳು ಕರಾವಳಿ-ಮಲೆನಾಡಿನ ಅತಿಯಾದ ಮಳೆ, ಕೆಸರು ಮತ್ತು ಗುಡ್ಡಗಾಡು ಪ್ರದೇಶಗಳ ಕಠಿಣ ಬಳಕೆಗೆ ಹೇಳಿಮಾಡಿಸಿದ ವಿಶಿಷ್ಟ ವಿನ್ಯಾಸ ಹಾಗೂ ಬಾಳಿಕೆಗೆ ಪ್ರಸಿದ್ಧಿ ಪಡೆದಿವೆ.

ಪಾರಂಪರಿಕೆ ಕುಲ ಕಸುಬು…

ಶಿರಿಯಾರ ಗ್ರಾಮವು ಸಾಂಪ್ರದಾಯಿಕ ಕೈಯಿಂದ ಹೊಲಿಯುವ ಚರ್ಮದ ಚಪ್ಪಲಿಗಳಿಗೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವಿಶೇಷವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಶಿರಿಯಾರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಲೆಮಾರುಗಳಿಂದ ಸಮಗಾರ (ಚಮ್ಮಾರ) ಸಮುದಾಯದ ಕುಟುಂಬಗಳು ಈ ಕರಕುಶಲತೆಯನ್ನು ಜೀವಂತವಾಗಿರಿಸಿಕೊಂಡು ಬಂದಿವೆ. ಈ ಕಸುಬು ಕುಟುಂಬ ಪರಂಪರೆಯಾಗಿ ತಂದೆಯಿಂದ ಮಗನಿಗೆ ಹರಿದುಬಂದಿದೆ.

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಡಿಮ್ಯಾಂಡ್

ಕರಾವಳಿಯ ಮಳೆಗಾಲದಲ್ಲಿ ಸುರಿಯುವ ಧಾರಾಕಾರ ಮಳೆ, ಅಡಿಕೆ-ತೆಂಗಿನ ತೋಟಗಳ ಕೆಸರುಮಣ್ಣು ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಕಲ್ಲು-ಮುಳ್ಳಿನ ಹಾದಿಗಳಲ್ಲಿ ನಡೆಯಲು ಸಾಮಾನ್ಯ ಪಾದರಕ್ಷೆಗಳು ಬಾಳಿಕೆ ಬರುತ್ತಿರಲಿಲ್ಲ. ಇದಕ್ಕೆ ಪರ್ಯಾಯವಾಗಿ ಅತ್ಯಂತ ಗಟ್ಟಿಯಾದ, ನೈಸರ್ಗಿಕವಾಗಿ ಹದಮಾಡಿದ ಚರ್ಮದಿಂದ ಮಾಡಿದ ಪಾದರಕ್ಷೆಗಳನ್ನು ಸ್ಥಳೀಯವಾಗಿ ರೂಪಿಸಲಾಯಿತು.
ಹಿಂದಿನ ಕಾಲದಲ್ಲಿ ಕರಾವಳಿ ಮತ್ತು ಘಟ್ಟದ ಮೇಲಿನ ಊರುಗಳಾದ ತೀರ್ಥಹಳ್ಳಿ, ಸಾಗರ, ಹೊಸನಗರ, ಶೃಂಗೇರಿ ಮುಂತಾದ ಭಾಗದ ಜಮೀನ್ದಾರರು, ಕೃಷಿಕರು ಹಾಗೂ ಕಾಡು-ಮೇಡು ಅಲೆಯುವ ಜನರು ಶಿರಿಯಾರಕ್ಕೆ ಬಂದು ವಿಶೇಷವಾಗಿ ಅಳತೆ ಕೊಟ್ಟು ಚಪ್ಪಲಿ ಹೊಲಿಸಿಕೊಳ್ಳುತ್ತಿದ್ದರು.

ಶಿರಿಯಾರ ಚಪ್ಪಲಿಗಳ ವಿಶಿಷ್ಟತೆಗಳು ವಿಶೇಷತೆ ಏನು..?

ನೈಸರ್ಗಿಕ ಹದಗಾರಿಕೆ,​ರಾಸಾಯನಿಕಗಳ ಬದಲಿಗೆ ಅಕೇಶಿಯಾ (ಬಾಬುಲ್/ಜಾಲಿ) ತೊಗಟೆ, ಆಲದ ಮರದ ತೊಗಟೆ, ಹೀರೇಕಾಯಿ/ನೆಲ್ಲಿಕಾಯಿ ಮುಂತಾದ ನೈಸರ್ಗಿಕ ಅಂಶಗಳನ್ನು ಬಳಸಿ ಚರ್ಮವನ್ನು ತಿಂಗಳುಗಟ್ಟಲೆ ನೀರಿನಲ್ಲಿ ನೆನೆಸಿ ಸಾಂಪ್ರದಾಯಿಕ ವಿಧಾನದಲ್ಲಿ ಹದಮಾಡಲಾಗುತ್ತಿತ್ತು. ಇದರಿಂದ ಚರ್ಮಕ್ಕೆ ನೈಸರ್ಗಿಕ ನಮ್ಯತೆ ಮತ್ತು ದೀರ್ಘಾಯುಷ್ಯ ದೊರೆಯುತ್ತಿತ್ತು,​ಇವುಗಳನ್ನು ಯಾವುದೇ ಆಧುನಿಕ ಹೊಲಿಗೆ ಯಂತ್ರಗಳಿಲ್ಲದೆ, ಬಲವಾದ ನೂಲು ಅಥವಾ ಚರ್ಮದ ಪಟ್ಟಿಗಳಿಂದಲೇ ಕೈಯಿಂದ ಗಟ್ಟಿಯಾಗಿ ಹೆಣೆಯಲಾಗುತ್ತಿತ್ತು.
​ಸೊಗಸಾದ ಮುಳ್ಳು-ವಿನ್ಯಾಸ ಹಾಗೂ ಗಟ್ಟಿ ಸೋಲ್ ಗಳು,
​ಅತಿ ಹೆಚ್ಚು ಪದರಗಳ ದಪ್ಪನೆಯ ಚರ್ಮದ ತಳಭಾಗ ಇರುತ್ತಿದ್ದು, ಮಳೆಗಾಲದ ಕೆಸರಿನಲ್ಲಿ ಜಾರದಂತೆ ಕೆಳಭಾಗದಲ್ಲಿ ಸಣ್ಣ ಚರ್ಮದ ಗುಬುಟುಗಳು ಅಥವಾ ವಿಶಿಷ್ಟ ಹಿಡಿತದ ರಚನೆಗಳನ್ನು ಮಾಡುತ್ತಿದ್ದರು.
​ಚೆನ್ನಾಗಿ ಒಣಗಿದ ಮತ್ತು ಹದಮಾಡಿದ ಚರ್ಮದ ಪದರಗಳ ನಡುವೆ ನೈಸರ್ಗಿಕ ರಾಳ ಅಥವಾ ನಿರ್ದಿಷ್ಟ ಜೋಡಣೆಯಿರುತ್ತಿದ್ದು, ಧರಿಸಿ ನಡೆಯುವಾಗ ವಿಶಿಷ್ಟವಾದ ‘ಚುಟು-ಚುಟು’ ಅಥವಾ ‘ಕರಂ-ಕುರುಂ’ ನಾದ ಬರುವುದು ಈ ಚಪ್ಪಲಿಗಳ ಇನ್ನೊಂದು ಹೆಗ್ಗುರುತಾಗಿತ್ತು.
ಬ್ರಹ್ಮಾವರ, ಬಾರ್ಕೂರು, ಕೋಟ, ಕುಂದಾಪುರ ಹಾಗೂ ಮಲೆನಾಡಿನ ವಾರದ ಸಂತೆಗಳಲ್ಲಿ ಶಿರಿಯಾರದ ಚಪ್ಪಲಿಗಳಿಗೆ ಅಗ್ರಮಾನ್ಯ ಬೇಡಿಕೆಯಿತ್ತು.
ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಸಂಪರ್ಕ, ಆಗುಂಬೆ, ಹೊಸಂಗಡಿ ಘಾಟಿಗಳ ಮೂಲಕ ಮಲೆನಾಡಿಗೆ ವ್ಯಾಪಾರ-ಸಂಪರ್ಕ ಬೆಳೆದಂತೆ, ಮಲೆನಾಡಿನ ತೋಟಗಾರಿಕೆ ರೈತರಿಗೆ ಈ ಚಪ್ಪಲಿಗಳು ಅನಿವಾರ್ಯ ರಕ್ಷಣಾ ಕವಚವಾದವು.
​ಕಳೆದ ಕೆಲವು ದಶಕಗಳಲ್ಲಿ ಆಧುನಿಕ ರಬ್ಬರ್, ಪಿವಿಸಿ ಮತ್ತು ಸಿಂಥೆಟಿಕ್ ಪಾದರಕ್ಷೆಗಳ ಲಗ್ಗೆಯಿಂದಾಗಿ ಶಿರಿಯಾರದ ಸಾಂಪ್ರದಾಯಿಕ ಚರ್ಮದ ಚಪ್ಪಲಿಗಳಿಗೆ ಬೇಡಿಕೆ ಗಣನೀಯವಾಗಿ ಕಡಿಮೆಯಾಗಿದೆ.
ಗುಡಿ ಕೈಗಾರಿಕೆ, ಕರಕುಶಲ, ಸ್ಥಳೀಯ ಉದ್ಯಮ, ಸಣ್ಣ ಕೈಗಾರಿಕೆ, ಸ್ವದೇಸಿ ವಸ್ತುಗಳ ತಯಾರಿಕೆಗೆ ಸರ್ಕಾರಗಳು ಒತ್ತು ನೀಡಬೇಕಿದೆ.
ಇಂತಹ ಉತ್ಪನ್ನಗಳ ಮಾಹಿತಿ ಪಡೆದು ಅವುಗಳಿಗೆ ಬೆಂಬಲ ನೀಡಬೇಕು. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಲಕ್ಷ ಲಕ್ಷ ಸಂಬಳ, ಲಂಚ, ಎಸಿ ಸೌಲಭ್ಯ ಪಡೆದು ಏನೂ ಮಾಡುತ್ತಿಲ್ಲ ಎಂಬುದು ದೇಶಕ್ಕೆ ದೊಡ್ಡ ನಷ್ಟ.

ಮಾಹಿತಿ: ಅರುಣ್ ಪ್ರಸಾದ್

 

 

 

​

​

​

​

Categories
Uncategorized

ಕ್ರಿಕೆಟ್ ಅಲ್ಲೂ ವಾಗ್ದೇವಿ ಶಿಕ್ಷಣ ಸಂಸ್ಥೆ ಸಾಧನೆ! – ವಿಭಾಗೀಯ ಮಟ್ಟಕ್ಕೆ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ಆಯ್ಕೆ – ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಅಭಿನಂದನೆಗಳು

ತೀರ್ಥಹಳ್ಳಿ: ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (SGFI) ವತಿಯಿಂದ ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಕ್ರಿಕೆಟ್ ಕ್ರೀಡಾಕೂಟದಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ, U-17 ವಿಭಾಗದಲ್ಲಿ ವಿಜಯಮಾಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಅದ್ಭುತ ಗೆಲುವಿನ ಮೂಲಕ ವಿದ್ಯಾರ್ಥಿಗಳು ಇದೇ ತಿಂಗಳ 09, 10, ಮತ್ತು 11 ರಂದು ಭದ್ರಾವತಿಯಲ್ಲೇ ನಡೆಯಲಿರುವ ವಿಭಾಗೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಇಡೀ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಆಯ್ಕೆಯಾದ ಹೆಮ್ಮೆಯ ವಿದ್ಯಾರ್ಥಿಗಳು

• ಉತ್ಸವ್ ಗೌಡ (10ನೇ ತರಗತಿ)
• ಪಾರ್ಥ ಕೆ.ವಿ (10ನೇ ತರಗತಿ)
• ವರ್ಚಸ್ (10ನೇ ತರಗತಿ)
• ನೈರುತ್ (9ನೇ ತರಗತಿ)
• ಹೃದಯ್ (9ನೇ ತರಗತಿ)
• ವಿರಾಜ್ (9ನೇ ತರಗತಿ)
• ಅಮಿತ್ (9ನೇ ತರಗತಿ)
• ಅಗಸ್ತ್ಯ (9ನೇ ತರಗತಿ)

ಅಭಿನಂದನೆಗಳು:
ವಿದ್ಯಾರ್ಥಿಗಳ ಈ ಮಹತ್ತರ ಸಾಧನೆಗೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕ ವೃಂದ ಹಾಗೂ ಪೋಷಕರು ಹಾರ್ದಿಕವಾಗಿ ಅಭಿನಂದಿಸಿ, ಮುಂದಿನ ವಿಭಾಗೀಯ ಮಟ್ಟದ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.

Categories
Uncategorized

•ಕೊಪ್ಪ: ಮನೆಯಂಗಳಕ್ಕೆ ಬಂದ ಚಿರತೆ: ಕುತೂಹಲ! •ಸಾಗರ: ಖಾಸಗಿ ಬಸ್ಸಲ್ಲಿ ಆಕಸ್ಮಿಕ ಬೆಂಕಿ: ಅಪಾಯದಿಂದ ಪಾರು! •ಶಿವಮೊಗ್ಗ: ತಾಯಿ ಮಗ ನಾಪತ್ತೆ: ಕಾರಣ ನಿಗೂಢ •ಹೊಸನಗರ: ಸಾಹಿತಿ ಕೆಸಿನಮನೆ ನಾ. ರತ್ನಾಕರ್ ನಿಧನ

ಕೊಪ್ಪ: ಚಿರತೆಯೊಂದು ದಾರಿ ತಪ್ಪಿ ಮನೆಯ ಅಂಗಳಕ್ಕೆ ಬಂದ ಘಟನೆ ಕೊಪ್ಪ ತಾಲೂಕು ಹುಲಿಗರಡಿ ಗ್ರಾಮದಲ್ಲಿ ಬುಧವಾರ ರಾತ್ರಿ
ನಡೆದಿದೆ. ರಾಘವೇಂದ್ರ ಎನ್ನುವವರ ಮನೆಯ ಅಂಗಳಕ್ಕೆ ಆಗಮಿಸಿದ ಚಿರತೆಯ ಚಲನವಲನವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

•ಸಾಗರ: ಖಾಸಗಿ ಬಸ್ ನಲ್ಲಿ ಬೆಂಕಿ: ಅಪಾಯದಿಂದ ಪಾರು!

ಸಾಗರ: ಖಾಸಗಿ ಬಸ್ ವೊಂದರಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ಬೆಳಗಿನ ಜಾವ ಆನಂದಪುರ ಸಮೀಪದಲ್ಲಿ ನಡೆದಿದೆ. ಬೆಂಗಳೂರಿನಿಂದ ಸಾಗರದತ್ತ ತೆರಳುತ್ತಿದ್ದ ಬಸ್ ಆನಂದಪುರ ಸಮೀಪದ ಮುಂಬಾಳು ರೈಲ್ವೆ ಗೇಟ್ ಸಮೀಪ ಆಗಮಿಸುತ್ತಿದ್ದಂತೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಬಸ್ ಚಾಲಕ ಮತ್ತು ನಿರ್ವಾಹಕರು ವಾಹನವನ್ನು ನಿಲ್ಲಿಸಿದ್ದಾರೆ. ಬಳಿಕ ಬಸ್ ನಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿರುವುದರಿಂದ ಚಾಲಕ, ನಿರ್ವಾಹಕ ಮತ್ತು ಇಬ್ಬರು ಪ್ರಯಾಣಿಕರು ಯಾವುದೇ ಅಪಾಯಕ್ಕೆ ಸಿಲುಕದೆ ಸುರಕ್ಷಿತವಾಗಿ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅವರು ಬಸ್ ನಿಂದ ಕೆಳಗಿಳಿದ ಇಳಿದ ಕೆಲವೇ ಕ್ಷಣಗಳಲ್ಲಿ ಅದು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ, ಸುತ್ತಮುತ್ತಲು ವ್ಯಾಪಿಸುವುದನ್ನು ತಡೆಗಟ್ಟಿದ್ದಾರೆ ಎನ್ನಲಾಗಿದೆ.

•ಶಿವಮೊಗ್ಗ: ತಾಯಿ ಮಗ ನಾಪತ್ತೆ

ಶಿವಮೊಗ್ಗ: ಮಹಿಳೆ ಮತ್ತು ಆಕೆಯ ಮಗ ಕಾಣೆಯಾಗಿರುವ ಘಟನೆ, ಕಳೆದೆರಡು ದಿನಗಳ ಹಿಂದೆ ಮಂಜುನಾಥ ಬಡಾವಣೆಯ ಮೊದಲನೇ ತಿರುವಿನಲ್ಲಿ ನಡೆದಿದೆ. ಫಾರೀದಾ ಖಾನಂ ಎನ್ನುವ ಮಹಿಳೆಯರು ಅಕ್ಟೋಬರ್ 5ರ ಸೋಮವಾರದಂದು ಮಗನನ್ನು ಕರೆದುಕೊಂಡು ಬರಲೆಂದು ಶಾಲೆಗೆ ತೆರಳಿದವರು ನಾಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲದೆ ಫಾರೀದಾ ಖಾನಂ ಅವರ ಮಗ 4 ವರ್ಷದ ಉಮೇರ್ ಕೂಡ ಕಾಣೆಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

•ಹೊಸನಗರ: ಕನ್ನಡ ಸಂಘಟಕ ಕೆಸಿನಮನೆ ನಾ. ರತ್ನಾಕರ್ ನಿಧನ

ಹೊಸನಗರ: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಕೆಸಿನಮನೆ ನಾ.ರತ್ನಾಕರ್ ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ದಸರ ಸಂದರ್ಭದಲ್ಲಿ, ಶಾಲೆಯ ಕೆಲಸವನ್ನು ಮುಗಿಸಿಕೊಂಡು, ತಾವು ನೆಲೆಸಿರುವ ಹೊಸನಗರಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಕೆಸಿನಮನೆ ರತ್ನಾಕರ್ ಅವರು, ನಂತರದ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೂ ಕೂಡ ರಿಪ್ಪನ್ ಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಉಪಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದೆರಡು ತಿಂಗಳಿನಿಂದ ಅನಾರೋಗ್ಯ ಮತ್ತಷ್ಟು ಉಲ್ಬಣಗೊಂಡ ಪರಿಣಾಮವಾಗಿ ಅಕ್ಟೋಬರ್ 7ರ ಬುಧವಾರದಂದು ಇಹಲೋಕವನ್ನು ತ್ಯಜಿಸಿದ್ದಾರೆ. ಮೃತರು ಪತ್ನಿ ಮತ್ತು ಓರ್ವ ಪುತ್ರನನ್ನು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ರಿಪ್ಪನ್ ಪೇಟೆ ಪ್ರೌಢಶಾಲಾ ಸಮಿತಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸೇರಿದಂತೆ ಹಲವರು ಕೆಸಿನಮನೆ ನಾ. ರತ್ನಾಕರ್ ಅವರ ಅಂತಿಮ ದರ್ಶನವನ್ನು ಪಡೆದುಕೊಂಡರು.

Categories
Uncategorized

•ಕಾಪು: ಮಲಗಿದ್ದಲ್ಲೇ ವ್ಯಕ್ತಿ ಸಾವು: ಕಾರಣ ನಿಗೂಢ! •ಕಾರ್ಕಳ: ಗೋದಾಮಿನಲ್ಲಿದ್ದ ಅಡಿಕೆ ಕಳುವು •ಪುತ್ತೂರು: ಮಳೆಗೆ ನ್ಯಾಯಾಲಯದ ಕಾಂಪೌಂಡ್ ಕುಸಿತ •ಬೆಳ್ತಂಗಡಿ: ಬಸ್ಸಲ್ಲೇ ತಲೆ ತಿರುಗಿ ಬಿದ್ದ ಮಹಿಳೆ: ಪಾರು

ಕಾಪು: ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಸಾವನ್ನಪ್ಪಿರುವ ಘಟನೆ, ಬುಧವಾರದಂದು ಪಡುಬಿದ್ರಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ವಿನೀಶ್ ಎಂದು ಗುರುತಿಸಲಾಗಿದೆ. ಮಂಗಳೂರಿನ ಆಡಿಟಿಂಗ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ವಿನೀಶ್ ಅವರು ಕಳೆದ ಕೆಲವು ತಿಂಗಳುಗಳಿಂದ ದರ್ಬೆಯ ದಿನಸಿ ಸಾಮಗ್ರಿಗಳ ಅಂಗಡಿಯೊಂದರಲ್ಲಿ ಆಡಿಟಿಂಗ್ ಕಾರ್ಯನಿರ್ವಹಿಸುತ್ತಿದ್ದರು. ಅವಿವಾಹಿತರಾಗಿದ್ದ ವಿನೀಶ್ ಅವರು ಎಪಿಎಂಸಿ ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಅಕ್ಟೋಬರ್ 6ರ ಮಂಗಳವಾರದಂದು ಸಂಜೆ ತಮ್ಮ ಕೆಲಸವನ್ನು ಮುಗಿಸಿಕೊಂಡು ಮನೆಗೆ ಮರಳಿದ ವಿನೀಶ್ ಅವರು ಅಕ್ಟೋಬರ್ 7ರ ಬುಧವಾರದಂದು ಕೆಲಸಕ್ಕೆ ಹೋಗಿರಲಿಲ್ಲ. ಹೀಗಾಗಿ ಅವರಿಗೆ ಕಛೇರಿಯವರು ಎಷ್ಟೇ ಕರೆ ಮಾಡಿದರು ಸ್ವೀಕರಿಸಲಿಲ್ಲ. ಬಳಿಕ ವಿನೀಶ್ ಅವರ ಸಹೋದ್ಯೋಗಿಗಳು ಮಧ್ಯಾಹ್ನ ಊಟದ ಸಮಯ ಮತ್ತೊಮ್ಮೆ ಕರೆ ಮಾಡಿ ನೋಡಿದಾಗ ವಿನೀಶ್ ಅವರು ಕರೆಯನ್ನು ಸ್ವೀಕರಿಸದಿರುವುದಕ್ಕೆ ಅನುಮಾನಗೊಂಡು ಅವರ ಮನೆಯ ಹತ್ತಿರ ಹೋಗಿ ನೋಡಿದಾಗ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಬಳಿಕ ಮನೆಯ ಸ್ಲಾಬ್ ನ ಇನ್ಸುಲೇಟರ್ ಮೂಲಕ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ನೋಡಿದಾಗ ವಿನೀಶ್ ಅವರು ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಕ್ಷಣ ಪೊಲೀಸರಿಗೆ ಮತ್ತು ಮನೆಯವರಿಗೆ ಮಾಹಿತಿ ನೀಡಿದ್ದು, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಬಾಗಿಲನ್ನು ಒಡೆದು, ಪರಿಶೀಲನೆ ನಡೆಸಿ ವಿನೀಶ್ ಅವರು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.

•ಕಾರ್ಕಳ: ಗೋದಾಮಿನಲ್ಲಿದ್ದ ಅಡಿಕೆ ಕಳುವು

ಕಾರ್ಕಳ: ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಗಳನ್ನು ಖದೀಮರು ಲಪಟಾಯಿಸಿರುವ ಘಟನೆ, ಬುಧವಾರದಂದು ಮಿಯ್ಯಾರು ಗ್ರಾಮದ ಮನೆಯೊಂದರಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ರಮೇಶ್ ಶೆಟ್ಟಿ ಎನ್ನುವವರು ಗೋದಾಮಿನಲ್ಲಿ ಕೆಲಸ ಮಾಡಿಕೊಂಡಿದ್ದ ಗಣಪತಿ ಮತ್ತು ಮಂಜುನಾಥ್ ಎನ್ನುವವರು ಆಗಸ್ಟ್ 20 ರಿಂದ ಸೆಪ್ಟೆಂಬರ್ 28ರ ನಡುವೆ ಅಡಿಕೆಯನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಸುಮಾರು 95.000 ರೂಪಾಯಿಗಳಷ್ಟು ಮೌಲ್ಯದ ಅಡಿಕೆ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

•ಪುತ್ತೂರು: ಸಾಧಾರಣ ಮಳೆಗೆ ನ್ಯಾಯಾಲಯದ ಕಾಂಪೌಂಡ್ ಕುಸಿತ

ಪುತ್ತೂರು: ಇದೇ ವರ್ಷ ನಿರ್ಮಾಣಗೊಂಡಂತಹ ನ್ಯಾಯಾಲಯದ ಕಾಂಪೌಂಡ್ ಸಾಧಾರಣ ಮಳೆಗೆ ಧರೆಗೆ ಉರುಳಿರುವ ಘಟನೆ, ಬುಧವಾರದಂದು ಬನ್ನೂರು ಸಮೀಪದ ಆನೆಮಜಲು ಎನ್ನುವಲ್ಲಿ ನಡೆದಿದೆ. ನ್ಯಾಯಾಲಯವು ಜನವರಿ ತಿಂಗಳಿನಲ್ಲಿ ಉದ್ಘಾಟನೆಗೊಂಡಿದ್ದು, ಒಂದು ವರ್ಷ ಮುಗಿಯುವುದರೊಳಗೆ ಅದರ ಕಾಂಪೌಂಡ್ ಸಾಧಾರಣ ಮಳೆಗೆ ಧರೆಗೆ ಉರುಳಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಪೌಂಡ್ ಗುಣಮಟ್ಟವೇ ಈ ರೀತಿ ಇರುವಾಗ, ಇನ್ನು ನ್ಯಾಯಾಲಯದ ಕಟ್ಟಡವನ್ನು ಯಾವ ರೀತಿಯಲ್ಲಿ ನಿರ್ಮಿಸಿರಬಹುದು ಎನ್ನುವ ಆತಂಕ ಮತ್ತು ಅನುಮಾನ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಕಾಂಪೌಂಡ್ ಕುಸಿತದಿಂದ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ.

•ಬೆಳ್ತಂಗಡಿ: ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆ ಪಾರು

ಬೆಳ್ತಂಗಡಿ: ಮಹಿಳೆಯೊಬ್ಬರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಮಹಿಳೆಯು ಬಾಳೆಹೊನ್ನೂರು ಮೂಲದವರಾಗಿದ್ದು, ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ದಾವಣಗೆರೆಯಿಂದ ಮಂಗಳೂರಿಗೆ ಕರ್ತವ್ಯಕ್ಕೆ ತೆರಳುತ್ತಿದ್ದ ಸಮಯದಲ್ಲಿ ಈ ಸನ್ನಿವೇಶ ಎದುರಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಕೆಲವು ಕಾಲ ಮಹಿಳೆಗೆ ಮಾತನಾಡಲು ಮತ್ತು ದೇಹವನ್ನು ಚಲಿಸಲು ಸಹ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಬಸ್ ಚಾಲಕರಾದ ಕಿರಣ್ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ತಕ್ಷಣ ಬಸ್ ಅನ್ನು ಕಕ್ಕಿಂಜೆಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಮಹಿಳೆಯನ್ನು ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕುವಂತೆ ಮಾಡಿದ್ದಾರೆ. ಪರಿಣಾಮವಾಗಿ ಮಹಿಳೆಯು ಚಿಕಿತ್ಸೆಯನ್ನು ಪಡೆದುಕೊಂಡಿದ್ದರಿಂದ ಚೇತರಿಸಿಕೊಳ್ಳುವಂತಾಯಿತು. ಬಸ್ ಚಾಲಕ ಕಿರಣ್ ಅವರ ಸಮಯಪ್ರಜ್ಞೆ ಮತ್ತು ಮಾನವೀಯತೆಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರು ಮತ್ತು ಸಾರ್ವಜನಿಕರು ಅಪಾರ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಆಶ್ರಫ್ ಚಾರ್ಮಾಡಿ, ಫಾರೂಕ್ ಕಕ್ಕಿಂಜೆ ಗಾಂಧಿನಗರ, ನೌಫಲ್ ಕಕ್ಕಿಂಜೆ ಗಾಂಧಿನಗರ ಮತ್ತು ಬಸ್ ನ ನಿರ್ವಾಹಕರಾದ ಸಂತೋಷ್ ಸಂಗಪ್ಪ ಗೌಡ ಅವರು ಸಹಕಾರ ನೀಡಿದರು ಎನ್ನುವ ಸಂಗತಿ ತಿಳಿದುಬಂದಿದೆ.

Categories
Uncategorized

ಎನ್.ಆರ್.ಪುರದಲ್ಲಿ ಕಿಚ್ಚು ಹಚ್ಚಿದ ರೈತರ ಹೋರಾಟ! – ಕಸ್ತೂರಿ ರಂಗನ್, ರೈತರಿಗೆ ಕಿರುಕುಳಕ್ಕೆ ಆಕ್ರೋಶ – ಶೃಂಗೇರಿ ಕ್ಷೇತ್ರದ ರೈತ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ – ಕಾಫಿ ನಾಡಲ್ಲಿ ಈಗ ರೈತ ಕ್ರಾಂತಿ ಶುರು

ಎನ್.ಆರ್.ಪುರ: ಮಲೆನಾಡ ರೈತರ ಸಮಸ್ಯೆಗೆ ಪರಿಹಾರ ನೀಡಲು ಒತ್ತಾಯಿಸಿ ಅಕ್ಟೋಬರ್ 7ರ ಬುಧವಾರದಂದು ತಾಲ್ಲೂಕು ಕಛೇರಿ ಆವರಣದಲ್ಲಿ ಶೃಂಗೇರಿ ಕ್ಷೇತ್ರದ ರೈತ ಒಕ್ಕೂಟದ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಸರ್ಕಾರದ ಸುತ್ತೋಲೆಯಿಂದ ರೈತರ ಮನೆ, ಜಮೀನು ಹಾಗೂ ಬದುಕಿನ ಮೇಲೆ ಉಂಟಾಗಬಹುದಾದ ಪರಿಣಾಮಗಳ ವಿರುದ್ಧ ಈ ಹೋರಾಟ.
ಹಕ್ಕಿಗಾಗಿ ಹೋರಾಟ, ನೆಲಕ್ಕಾಗಿ ಹೋರಾಟ, ರೈತನ ಉಳಿವಿಗಾಗಿ ಹೋರಾಟ ಮಾಡುತ್ತಿದ್ದು ಸುತ್ತೋಲೆ ಹಿಂಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ. ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದೆ.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ ಶ್ರೀಮದಭಿನವಲಕ್ಷ್ಮೀ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಅವರು “ಕೇವಲ ರೈತರ ಕಣ್ಣೊರೆಸುವ ಪ್ರಯತ್ನವನ್ನು ಸರ್ಕಾರ ಮಾಡಬಾರದು. ಮಲೆನಾಡಿನ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಆದರೂ ಸರ್ಕಾರ ಕಂಡರೂ ಕಾಣದಂತೆ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಗುರುವಿಗೆ ಮತ್ತು ರಾಜನಿಗೆ ಗೌರವವನ್ನು ನೀಡಲಾಗುತ್ತದೆ. ಮಲೆನಾಡಿಗರು ಮುಖ್ಯಮಂತ್ರಿಗಳು ಬಂದಂತಹ ಸಂದರ್ಭದಲ್ಲಿ ಅರಮನೆಯಂತಹ ಪೆಂಡಾಲ್ ಹಾಕಿ, ಅವರನ್ನು ಸಿಂಹಾಸನದ ಮೇಲೆ ಕೂರಿಸಿ, ಗೌರವಯುತವಾಗಿ ನೋಡಿಕೊಂಡ ಬಳಿಕ, ತಮ್ಮ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಂಡಿದ್ದಾರೆ. ಆದರೆ ರಾಜನಾದವನು ತನ್ನ ಪ್ರಜೆಗಳನ್ನು ಬೀದಿಯಲ್ಲಿ ನಿಲ್ಲಿಸಬಾರದು. ಸರ್ಕಾರ ಕಷ್ಟದಲ್ಲಿದ್ದಾಗ ತೆರಿಗೆ ಕಟ್ಟುವವರು ರೈತರು. ಆದರೆ ರೈತರಿಗೇ ಕಷ್ಟ ಬಂದಾಗ ರೈತರ ಜಮೀನಿಗೆ ಹಕ್ಕುಪತ್ರ, ಸಂಬಂಧಪಟ್ಟ ಭೂದಾಖಲೆಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಮಲೆನಾಡಿನ ರೈತರು ಈಗಾಗಲೇ ಸಾಕಷ್ಟನ್ನು ಕಳೆದುಕೊಂಡಿದ್ದಾರೆ. ಬಯಲುಸೀಮೆಗೆ ನೀರನ್ನು ಒದಗಿಸಲು ಕೂಡ ತಯಾರಾಗಿದ್ದಾರೆ. ಹೀಗಿರುವಾಗ ಅವರ ಸಮಸ್ಯೆಗಳಿಗೆ ಸರ್ಕಾರವು ಸೂಕ್ತ ಪರಿಹಾರವನ್ನು ನೀಡಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ವಿಶ್ವನಾಥ ಗದ್ದೆಮನೆ ಅವರಿಂದ ಹೋರಾಟಕ್ಕೆ ಕರೆ

ಶೃಂಗೇರಿ ಕ್ಷೇತ್ರದ ರೈತ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ ಗದ್ದೆಮನೆ ಅವರು ಮಾತನಾಡಿ “ಕರ್ನಾಟಕ ಪಂಚಾಯತ್ ರಾಜ್ ಸಚಿವಾಲಯವು ಸರ್ಕಾರಿ ಜಾಗದ ಮನೆ ಕಂದಾಯವನ್ನು ವಜಾ ಮಾಡುವ ಆದೇಶವನ್ನು 30 ದಿನಗಳ ಒಳಗಾಗಿ ರದ್ದು ಮಾಡದಿದ್ದರೆ, ಪ್ರತಿ ಗ್ರಾಮ ಪಂಚಾಯಿತಿ ಕಛೇರಿಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು” ಎನ್ನುವ ಎಚ್ಚರಿಕೆಯನ್ನು ನೀಡಿದರು.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷರಾದ ಶೆಟ್ಟಿಗದ್ದೆ ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಹಂಚಿನಮನೆ ರಾಘವೇಂದ್ರ, ಮಲೆನಾಡು ರೈತ ಹಿತ ರಕ್ಷಣಾ ಸಮಿತಿಯ ಸಂಚಾಲಕರಾದ ರಂಜಿತ್, ರೈತ ಮುಖಂಡರಾದ ದಿಗಂತ್ ಬಿಂಬೈಲ್, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಾರ್ಯಾಧ್ಯಕ್ಷರಾದ ಆದ್ದಡ ಸತೀಶ್ ಮೊದಲಾದವರು ಮಲೆನಾಡಿನ ರೈತರ ಸಮಸ್ಯೆಗಳನ್ನು ಮುಕ್ತವಾಗಿ ಬಿಚ್ಚಿಟ್ಟರು. ಮಲೆನಾಡು ನಾಗರೀಕ ರೈತ ಹಿತ ರಕ್ಷಣಾ ಸಮಿತಿ, ಆಟೋ ಚಾಲಕರ ಸಂಘ, ದಲಿತ ಸಂಘರ್ಷ ಸಮಿತಿ, ವಾಲ್ಮೀಕಿ ಸಂಘ, ರೈತ ಮತ್ತು ಕಾರ್ಮಿಕ ಹಿತ ರಕ್ಷಣಾ ವೇದಿಕೆ, ಲಯನ್ಸ್ ಕ್ಲಬ್, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಪದಾಧಿಕಾರಿಗಳು ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರೈತ ಸಂಘಟನೆಗಳು, ವರ್ತಕರ ಸಂಘ ಸೇರಿ ಹತ್ತಾರು ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿವೆ.
ಜಿಲ್ಲಾಡಳಿತಕ್ಕೆ ಈ ಹೋರಾಟ ದೊಡ್ಡ ಸವಾಲಾಗಿದೆ.
ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅಹೋ ರಾತ್ರಿ ಧರಣಿ ಕೂಡ ನಡೆದಿದೆ.

Categories
Uncategorized

ಲಾಡ್ಜ್ ನಲ್ಲಿ ಯುವತಿ ಸೇರಿ ಮೂವರ ಗಾಂಜಾ ಗಮ್ಮತ್ತು! – ಯುವಕರ ವಿರುದ್ಧ ಕೇಸ್: ಸಿಗರೇಟ್ ಒಳಗೆ ಗಾಂಜಾ ಹಾಕಿ ಸೇವನೆ – ಎತ್ತ ಸಾಗುತ್ತಿದೆ ಯುವ ಸಮುದಾಯ..?!… ಸಾಗರದಲ್ಲಿ ಘಟನೆ

ಸಾಗರ: ಗಾಂಜಾ ಸೇವನೆ ಮಾಡುತ್ತಿದ್ದ ಯುವತಿಯು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಲಾಡ್ಜ್ ಒಂದರಲ್ಲಿ ಮಂಗಳವಾರದಂದು ನಡೆದಿದೆ. ಅಚ್ಚರಿ ಎಂದ್ರೆ ಪ್ರವಾಸಿ ತಾಣ ಸಾಗರದಲ್ಲಿ ಇಂತಹ ಘಟನೆ ವರದಿಯಾಗಿದೆ.
ಜೋಗ ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಗಾಂಜಾ ಸೇವನೆ ಮಾಡುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪಿಎಸ್ಐ ಶಾಂತರಾಜ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಈ ಸಂದರ್ಭದಲ್ಲಿ ಮೂವರು ಯುವಕರು ಮತ್ತು ಓರ್ವ ಯುವತಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರಿಂದ ಪೊಲೀಸರು ಕೊಠಡಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಮೇಜಿನ ಮೇಲೆ ಇರಿಸಿದ್ದ ಸಿಗರೇಟ್ ಗಳನ್ನು ಕತ್ತರಿಸಿ ನೋಡಿದಾಗ, ಅದರಲ್ಲಿನ ತಂಬಾಕನ್ನು ತೆಗೆದು ಗಾಂಜಾವನ್ನು ತುಂಬಿಸಿ ಸೇವಿಸುತ್ತಿರುವುದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ನಾಲ್ವರನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ನಾಲ್ವರು ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಮೂವರು ಯುವಕರು, ಗಾಂಜಾ ಪೂರೈಸಿದ ಮತ್ತೊಬ್ಬ ಯುವಕ ಹಾಗೂ ಯುವತಿಯ ವಿರುದ್ಧ ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎತ್ತ ಸಾಗುತ್ತಿದೆ ಯುವ ಸಮುದಾಯ..?!

ಇತ್ತೀಚಿಗೆ ಯುವ ಸಮುದಾಯ ಗಾಂಜಾ, ಮದ್ಯ, ಬೈಕ್, ರೀಲ್ಸ್ ಚಟಕ್ಕೆ ದಾಸರಾಗುತ್ತಿರುವುದು ಹೆಚ್ಚಾಗುತ್ತಿದೆ. ಮನೆಯಿಂದ ವಿವಿಧ ಕಾರಣ ಹೇಳಿ ಹೊರಗೆ ಹೋಗುವ ಯುವ ಜನತೆ ಹಾದಿ ತಪ್ಪುತ್ತಿದ್ದಾರೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕಿದೆ.

Categories
Uncategorized

ಹಾಲಿನ ದರ 8 ರೂ. ಹೆಚ್ಚಳ?: ಜನರಿಗೆ ಶಾಕ್! – ಬಸ್ ಟಿಕೆಟ್ ದರ ಸಹ 3 ರೂ. ನಿಂದ 30 ರೂ.ವರೆಗೆ ಏರಿಕೆ? – ದೀಪಾವಳಿ, ದಸರಾ ಹಬ್ಬದ ವೇಳೆ ಎಲ್ಲಾ ಬೆಲೆ ಏರಿಕೆ

ಬೆಂಗಳೂರು: ನಾಡ ಹಬ್ಬ ದಸರ ಮತ್ತು ದೀಪಾವಳಿಗೆ ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಹಾಲಿನ ಬೆಲೆ ಏರಿಕೆಯ ಬಿಸಿಯನ್ನು ಮುಟ್ಟಿಸುವ ಸಿದ್ಧತೆಯನ್ನು ನಡೆಸಿದೆ.
ಸರ್ಕಾರವು ಹಾಲಿನ ದರವನ್ನು ಲೀಟರ್ ಗೆ 8 ರೂಪಾಯಿ ಮತ್ತು ಬಸ್ ಪ್ರಯಾಣದ ದರವನ್ನು ಸಹ ಹೆಚ್ಚಿಸಲು ನಿರ್ಣಯಿಸಿದೆ. ಹಬ್ಬ ಮತ್ತು ರಜೆಯ ಸಂದರ್ಭದಲ್ಲಿ ಹಾಲು ಮತ್ತು ಬಸ್ ಪ್ರಯಾಣ ಎಂದಿಗಿಂತ ತುಸು ಹೆಚ್ಚಾಗಿಯೇ ಬೇಕಾಗಿದ್ದು, ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ.

ರೈತರಿಗೆ 2 ರೂ. ಲಾಭ..!

ಮಂಗಳವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಕುರಿತು ಚಿಂತನೆಯನ್ನು ನಡೆಸಿರುವ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು “ನವೆಂಬರ್ 1ರಿಂದ ಜಾರಿಗೆ ಬರಲಿರುವ ಈ ದರ ಪರಿಷ್ಕರಣೆಯಲ್ಲಿ 80:20 ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಅಂದರೆ, ಹೆಚ್ಚಳವಾಗುವ 8 ರೂಪಾಯಿಗಳಲ್ಲಿ 6 ರೂಪಾಯಿ ನೇರವಾಗಿ ಹಾಲು ಉತ್ಪಾದಕ ರೈತರ ಖಾತೆಗೆ ತಲುಪಲಿದ್ದು, ಉಳಿದ 2 ರೂಪಾಯಿ ಜಿಲ್ಲಾ ಹಾಲು ಒಕ್ಕೂಟಗಳ ನಿರ್ವಹಣೆಗೆ ತಲುಪಲಿದೆ. ಒಕ್ಕೂಟಗಳು 70:30 ಅನುಪಾತಕ್ಕೆ ಮನವಿ ಮಾಡಿದ್ದರೂ, ರೈತರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಬಸ್ ಟಿಕೆಟ್ ದರ ಸಹ 3 ರೂ. ನಿಂದ 30 ರೂ.ವರೆಗೆ ಏರಿಕೆ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಟಿಕೆಟ್ ದರವನ್ನು ಸಹ 3 ರೂಪಾಯಿಯಿಂದ 30 ರೂಪಾಯಿವರೆಗೆ ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ನೀಡಲಾಗಿದ್ದು, ಚುನಾವಣೆಗಳು ಎದುರಾಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆಯ ತೊಡಕನ್ನು ತಪ್ಪಿಸುವ ಸಲುವಾಗಿ ಚುನಾವಣಾ ಆಯೋಗದಿಂದ ಅನುಮತಿ ಪಡೆದ ಬಳಿಕವಷ್ಟೇ ಈ ದರದ ಹೆಚ್ಚಳದ ಕುರಿತು ಅಧಿಕೃತ ಪ್ರಕಟಣೆಯನ್ನು ಹೊರಡಿಸಲಿದೆ ಎಂದು ಸರ್ಕಾರ ತಿಳಿಸಿದೆ.
ಹಾಲಿನ ದರದಲ್ಲಿನ ಏರಿಕೆಯು ರೈತರಿಗೆ ದೊಡ್ಡಮಟ್ಟದ ಆರ್ಥಿಕ ನೆರವು ಮತ್ತು ಪ್ರೋತ್ಸಾಹ ನೀಡಲಿದೆ ಎಂದು ಹೇಳಲಾಗುತ್ತಿದ್ದರೂ ಸಾರಿಗೆ ಮತ್ತು ಹಾಲಿನ ದರದ ಏರಿಕೆಯ ಪರಿಣಾಮವನ್ನು ಸಾಮಾನ್ಯ ಜನರು ಅನುಭವಿಸುವಂತಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ.