Categories
Uncategorized

ಹೊಸ ವರ್ಷಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ! – ಚುನಾವಣಾ ಮೀಸಲಾತಿ ಕರಡು ಸಿದ್ಧ: ಘೋಷಣೆ ಬಾಕಿ – ಮೊದಲಿಗೆ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ – ಗ್ರಾಮ ಪಂಚಾಯತ್ ಚುನಾವಣೆಗೂ ಸಿದ್ಧತೆ

ಬೆಂಗಳೂರು: ಹೊಸ ವರ್ಷಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ ನಿಗದಿಯಾಗುವ ಸಾಧ್ಯತೆ ಇದೆ. ಚುನಾವಣಾ ಮೀಸಲಾತಿ ಕರಡು ಸಿದ್ಧವಾಗಿದ್ದು ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.
ಮೊದಲಿಗೆ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಬಳಿಕ ಗ್ರಾಮ ಪಂಚಾಯತ್ ಚುನಾವಣೆಗೂ ಸಿದ್ಧತೆ ಆಗಲಿದೆ.

ಚುನಾವಣೆಗೆ ಕ್ಯಾಬಿನೆಟ್ ನಿರ್ಧಾರ!

ಅಕ್ಟೋಬರ್ 6ರ ಮಂಗಳವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ. ಈಗಾಗಲೇ ಚುನಾವಣಾ ಮೀಸಲಾತಿ ಕರಡು ಸಿದ್ಧಗೊಂಡಿದ್ದು, ಚುನಾವಣಾ ಪ್ರಕ್ರಿಯೆಯನ್ನು ಅತಿ ಶೀಘ್ರದಲ್ಲಿ ಮತ್ತಷ್ಟು ಚುರುಕುಗೊಳಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎನ್ನುವ ಮಾಹಿತಿ ಲಭಿಸಿದೆ.

ಸಂಕ್ರಾಂತಿ ವೇಳೆಗೆ ಚುನಾವಣೆ… ಡಿಸೆಂಬರ್ ಅಲ್ಲಿ ಘೋಷಣೆ

ರಾಜ್ಯ ಸರ್ಕಾರವು ಮೊದಲಿಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಯನ್ನು ನಡೆಸಲು ನಿರ್ಣಯಿಸಿದ್ದು, ಬಳಿಕ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಡೆಸುವ ಕುರಿತು ಚಿಂತನೆ ನಡೆಸಿದೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಇದರಲ್ಲಿ ಕೊಂಚ ಬದಲಾವಣೆಯಾಗಿದ್ದು, ಜನವರಿ ತಿಂಗಳ ಮೊದಲ ವಾರದಲ್ಲಿ ಸ್ಥಳೀಯ ಚುನಾವಣೆಗಳನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಮೊದಲಿಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳು ನಡೆದ ಬಳಿಕವಷ್ಟೇ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಡೆಸಲಾಗುವುದು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ತಿಂಗಳಿನಲ್ಲಿ ಅಧಿಸೂಚನೆ ಹಾಗೂ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.

Categories
Uncategorized

ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಸಾವು! – ದಸರಾ ರಜೆ ಹಿನ್ನೆಲೆ: ಈಜಲು ಹೋಗಿದ್ದ 6ನೇ ತರಗತಿ ಮಕ್ಕಳು – ಹೊಸನಗರ: ದೇವಸ್ಥಾನಕ್ಕೆ ತೆರಳುತ್ತಿದ್ದ ಅರ್ಚಕ ಅಪಘಾತಕ್ಕೆ ಬಲಿ!

ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋಗಿ ಮೂವರು ಮಕ್ಕಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರದಂದು ಮರ್ಲೆ ಗ್ರಾಮದ ಚಿಕ್ಕಕೆರೆಯಲ್ಲಿ ನಡೆದಿದೆ. ಪರೀಕ್ಷೆಗಳು ಮುಗಿದು, ದಸರ ಪ್ರಯುಕ್ತ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ಈಜಲು ತೆರಳಿದ್ದ ಸಂದರ್ಭದಲ್ಲಿ, ನೀರಿನಲ್ಲಿ ಮುಳುಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೃತ ವಿದ್ಯಾರ್ಥಿಗಳನ್ನು ತರುಣ್, ಭುವನ್ ಮತ್ತು ಲಿಖಿತ್ ಎಂದು ಗುರುತಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದರು ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಹೊಸನಗರ: ದೇವಸ್ಥಾನಕ್ಕೆ ತೆರಳುತ್ತಿದ್ದ ಅರ್ಚಕರ ಸ್ಕೂಟಿ ಪಲ್ಟಿ; ಸಾವು

ಹೊಸನಗರ: ಸ್ಕೂಟಿ ಪಲ್ಟಿ ಹೊಡೆದು ಅರ್ಚಕರೊಬ್ಬರು ಸಾವನ್ನಪ್ಪಿರುವ ಘಟನೆ, ಯಡೂರು ಸಮೀಪದ ಕರಿಗಲ್ಲು ಗ್ರಾಮದಲ್ಲಿ ಸೋಮವಾರದಂದು ನಡೆದಿದೆ. ನವರಾತ್ರಿ ಉತ್ಸವದ ಸಿದ್ಧತೆಗಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ, ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ಉಳ್ತಿಗಾ ಗ್ರಾಮದ ಮೇಲುಸುಂಕ ನಿವಾಸಿ ಶೇಷಾಚಲ ಭಟ್ ಎಂದು ಗುರುತಿಸಲಾಗಿದೆ. ಮಳೆಯು ಸುರಿದ ಪರಿಣಾಮವಾಗಿ ಸ್ಕೂಟಿ ಜಾರಿದೆ. ಪರಿಣಾಮವಾಗಿ ಶೇಷಾಚಲ ಭಟ್ ಅವರು ಕೆಳಗೆ ಬಿದ್ದಿದ್ದು, ತಲೆಗೆ ಬಲವಾಗಿ ಪೆಟ್ಟಾದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
Uncategorized

•ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ಆತ್ಮಹತ್ಯೆ •ಮೂಡಬಿದರೆ: ಮರಗಳ್ಳತನ; ಇಬ್ಬರ ವಿರುದ್ಧ ಕೇಸ್! •ಸುಳ್ಯ: ಶಾಸಕಿ ಭಾಗೀರಥಿ ಕಾರು ಅಪಘಾತ: ಪಾರು

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಮಂಗಳವಾರದಂದು ಕಾರ್ಕಳದ ಜೋಡುರಸ್ತೆ ಸಮೀಪದಲ್ಲಿ ನಡೆದಿದೆ. ಮಂಜುನಾಥ ಪೈ ಅವರು ದೇವಸ್ಥಾನಕ್ಕೆ ತೆರಳಿದ್ದು, ಮನೆಗೆ ಹಿಂತಿರುಗಿದ ನಂತರ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಂಜುನಾಥ ಪೈ ಅವರು ಜೋಡುರಸ್ತೆಯ ಸುತ್ತಮುತ್ತಲೂ ಹಲವಾರು ಫ್ಲಾಟ್ ಗಳನ್ನು ನಿರ್ಮಿಸುವ ಮೂಲಕ ಉದ್ಯಮಿ ಎಂದು ಗುರುತಿಸಿಕೊಂಡಂತವರಾಗಿದ್ದಾರೆ. ಮಂಜುನಾಥ್ ಪೈ ಅವರ ಆತ್ಮಹತ್ಯೆಗೆ ಕಾರಣವೇನೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯ ಮೂಲಕ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

•ಮೂಡಬಿದರೆ: ಮರಗಳ್ಳತನ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಮೂಡಬಿದರೆ: ಸರಕಾರಿ ಜಾಗದಲ್ಲಿ ಮರಗಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಶಿರ್ತಾಡಿಯಲ್ಲಿ ನಡೆದಿದೆ. ಸರ್ಕಾರಿ ಜಾಗದಲ್ಲಿದ್ದ ಮರಗಳನ್ನು ಕಡಿದು, ದೇವಸ್ಥಾನದ ಹೆಸರಿನಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರರಾದ ಸುದತ್ತ ಜೈನ್ ಶಿರ್ತಾಡಿ ಅವರು ಇತ್ತೀಚೆಗೆ ಆರೋಪಿಸಿದ್ದರು ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಮರಗಳ್ಳತನ ಮಾಡುತ್ತಿರುವುದು ದೃಢಪಟ್ಟಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಆರೋಪಿಗಳನ್ನು ಶಿರ್ತಾಡಿಯ ಧರ್ಮರಾಜ ಪೂವಣಿ ಮತ್ತು ಪೂರ್ಣಚಂದ್ರ ಶೆಟ್ಟಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖಾಧಿಕಾರಿಗಳು ಆರೋಪಿಗಳ ವಿರುದ್ಧ ಸ್ವಯಂಪ್ರೇರಿತರಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

•ಸುಳ್ಯ: ಶಾಸಕಿ ಭಾಗೀರಥಿ ಕಾರು ಅಪಘಾತ; ಅಪಾಯದಿಂದ ಪಾರು

ಸುಳ್ಯ: ಕ್ಷೇತ್ರದ ಶಾಸಕಿಯಾದ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾದ ಘಟನೆ, ಮಂಗಳವಾರದಂದು ಕರಿಕ್ಕಳ ನಿಂತಿಕಲ್ಲಿನ ಮುಚ್ಚಿಲ ಎನ್ನುವಲ್ಲಿ ನಡೆದಿದೆ. ಎದುರಿನಿಂದ ಬರುತ್ತಿದ್ದ ಕಾರು ಇದ್ದಕ್ಕಿದ್ದ ಹಾಗೆ ಬ್ರೇಕ್ ಹಾಕಿದ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇದರಿಂದಾಗಿ ಭಾಗೀರಥಿ ಮುರುಳ್ಯ ಅವರ ಕಾರಿನ ಮುಂಭಾಗ ಜಖಂಗೊಂಡಿದ್ದು, ಕಾರಿನಲ್ಲಿದ್ದ ಶಾಸಕಿ ಮತ್ತು ಚಾಲಕರು ಯಾವುದೇ ರೀತಿಯ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

Categories
Uncategorized

ಬರದ ನಡುವೆ ಸಣ್ಣ ಮಳೆ ಸಿಂಚನ.. ಬಿಸಿಲಿನ ಧಗೆ ಹೆಚ್ಚಳ! – ಇನ್ನು 2 ದಿನ ಹಲವೆಡೆ ಮಳೆ ಸಾಧ್ಯತೆ – ಬಿಸಿಲಿಗೆ ಅನಾರೋಗ್ಯ ಹೆಚ್ಚಳ: ಆಸ್ಪತ್ರೆಗಳು ಫುಲ್

ಬೆಂಗಳೂರು: ಬರದ ಛಾಯೆ ನಡುವೆ ಕಳೆದೊಂದು ವಾರದಿಂದ ರಾಜ್ಯದ ಹಲವೆಡೆ ಮಳೆ ಆಗುತ್ತಿದೆ. ಆದರೆ ಬಿಸಿಲಿನ ಧಗೆಗೆ ಆ ಮಳೆ ಲೆಕ್ಕಕ್ಕೆ ಬರುತ್ತಿಲ್ಲ. ಭೂಮಿ ಕಾದ ಬಾಣಲೆಯಂತಾಗಿದೆ.
ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಬುಧವಾರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಕಳೆದ ವಾರದಿಂದ ಕೆಲವು ಕಡೆ ಸಣ್ಣ ಮಳೆ ಆಗಿದೆ.
ದಕ್ಷಿಣ ಒಳನಾಡಿನ ಭಾಗಗಳಾದ ಶಿವಮೊಗ್ಗ, ಕೊಡಗು, ಮೈಸೂರು, ಚಾಮರಾಜನಗರ ಚಿಕ್ಕಮಗಳೂರು, ಹಾಸನ, ಮಂಡ್ಯ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇನ್ನೊಂದು ವಾರ ಅಲ್ಲಲ್ಲಿ ಮಳೆ ಸಂಭವಿಸಲಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಅನ್ನು ಘೋಷಿಸಲಾಗಿದೆ. ಅಲ್ಲದೆ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ. ಅಲ್ಲದೆ ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಬಿಸಿಲಿಗೆ ಅನಾರೋಗ್ಯ ಹೆಚ್ಚಳ: ಆಸ್ಪತ್ರೆಗಳು ಫುಲ್

ಬಿಸಿಲಿಗೆ ಅನೇಕ ಕಡೆ ಅನಾರೋಗ್ಯ ಹೆಚ್ಚಳವಾಗಿದೆ. ಜನ ಆರೋಗ್ಯದ ಬಗ್ಗೆ ಗಮನ ಕೊಡೋದು ಒಳ್ಳೆಯದು. ಇನ್ನು ಆಸ್ಪತ್ರೆಗಳು ಎಲ್ಲಾ ಕಡೆ ಜನರಿಂದ ತುಂಬಿ ಹೋಗಿವೆ.

Categories
Uncategorized

ಮೈ ನವಿರೇಳಿಸಿದ ಮಲೆನಾಡು ಎಕೋ ಡ್ರೈವ್! – ಕೊಪ್ಪದ ಹಳ್ಳಿಯಲ್ಲಿ ಜೀಪುಗಳ ಕಲರವ: ಸಾಹಸ ಕ್ರೀಡೆ ನೋಡಿ ಬೆರಗಾದ ಜನ – ರಾಜ್ಯದ ಮೂಲೆ ಮೂಲೆಗಳಿಂದ ಸಾಹಸ ಪ್ರಿಯರು ಆಗಮನ

ಕೊಪ್ಪ: ಕೊಪ್ಪ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಅವರ ಒಂಬತ್ತನೇ ವರ್ಷದ ಮಲೆನಾಡು ಎಕೋ ಡ್ರೈವ್ ಅತ್ಯಂತ ಯಶಸ್ವಿಯಾಗಿ ನಡೆದಿದೆ. ವಿಕಾಸ್ ಬೇಗಾನೆಯವರ ನಿವಾಸದಲ್ಲಿ ಈ ಒಂದು ಜೀಪ್ ಗಳ ಆಫ್ ರೋಡ್ ರ್ಯಾಲಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಒಟ್ಟು 12 ಕಿಮೀ ಈ ರ್ಯಾಲಿ ನಡೆಸಲಾಗಿದ್ದು ಅತ್ತಿಕುಳಿ ಎಸ್ಟೇಟ್ ನಲ್ಲಿ ಮುಕ್ತಾಯಗೊಳಿಸಲಾಯಿತು.
ಒಟ್ಟು 180ಕ್ಕೂ ಅಧಿಕ ಜೀಪ್ ಗಳು ಆಫ್ ರೋಡ್ ರ್ಯಾಲಿಯಲ್ಲಿ ಬಾಗವಹಿಸಿ ಮಲೆನಾಡು ಎಕೋ ಡ್ರೈವ್ ಅನ್ನು ಯಶಸ್ವಿಗೊಳಿಸಿದರು. ಕಿರಿದಾದ ಟ್ರ್ಯಾಕ್ನಲ್ಲಿ ಜೀಪ್ ಗಳ ಕಲರವ ಹಳ್ಳಕೊಳ್ಳಗಳನ್ನು ದಾಟಿ ಜೀಪುಗಳು ಬರುವುದನ್ನು ನೋಡಿದರೆ ಮೈ ನವಿರೇಳಿಸುತ್ತಿತ್ತು.
ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಕೂಡ ಆಫ್ ರೋಡ್ ರ್ಯಾಲಿಗೆ ಬಂದಿದ್ದು ಅತ್ಯಂತ ವಿಶೇಷವಾಗಿತ್ತು.
ಈ ಒಂದು ಆಫ್ ರೋಡ್ ಡ್ರೈವ್ ಅನ್ನು ಚೇತನ್ ರೆಡ್ಡಿ ಹಾಗೂ ವಿಶ್ವನಾಥ್ ಗದ್ದೆಮನೆ ಅವರ ಪ್ರಾಯೋಜಕತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕೊಪ್ಪ ಮೋಟಾರ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷರಾದ ಸಚಿನ್ ನಂದಿಗೋಡು ,ಶಾಸಕರಾದ ಟಿ ಡಿ ರಾಜೇಗೌಡ, ಕೌರಿ ಪ್ರಕಾಶ್, ಬಿ ಜಿ ಗೋಪಾಲ ಗೌಡ, ವಿಕಾಸ್ ಬೇಗಾನೆ, ಪೃಥಿರಾಜ್ ಕೌರಿ, ರೋಹಿತ್ ಬಾಳೆಗದ್ದೆ, ಸುನೀಲ್ ಇ , ಅನೂಪ್ ನಾರ್ವೆ, ಇಂದ್ರೇಶ್, ವಿಜಯ್ ತನೂಡಿ, ಸತೀಶ್ ಗದ್ದೆಮನೆ, ಕೇಶವ ಗೌಡ ತನೊಡಿ ಉಪಸ್ಥಿತರಿದ್ದರು.
ಕೊಪ್ಪ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದು 2026 ರ ಮಲ್ನಾಡ್ ಎಕೋ ಡ್ರೈವ್ ಅನ್ನು ಯಶಸ್ವಿಗೊಳಿಸಿದರು. ತನುಡಿ, ಮಕ್ಕಿಮನೆ, ಹತ್ತಿಕುಳಿ ಗ್ರಾಮಸ್ಥರು ಸಹಕಾರ ನೀಡಿದ್ದರು.

Categories
Uncategorized

ಗ್ರಾಪಂ, ತಾಪಂ, ಜಿಪಂ ಚುನಾವಣೆಗೆ ಕೌಂಟ್ ಡೌನ್! – ಶೀಘ್ರದಲ್ಲಿ ಮೀಸಲಾತಿ ಪಟ್ಟಿ ಪ್ರಕಟ – ರಾಜಕೀಯ ಬಲಾಬಲಕ್ಕೆ ವೇದಿಕೆ ಸಿದ್ಧ!

ಬೆಂಗಳೂರು: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಹೂರ್ತ ಫಿಕ್ಸ್ ಆಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಇತ್ತೀಚಿಗೆ ರಾಜಕೀಯ ಬೆಳವಣಿಗೆಗಳು ಅದಕ್ಕೆ ಪೂರಕವಾಗಿವೆ.
ರಾಜ್ಯದಲ್ಲಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳ ಚುನಾವಣೆಗಳು ಡಿಸೆಂಬರ್ 15ರ ವೇಳೆಗೆ ನಡೆಸಲು ಎಲ್ಲಾ ತಯಾರಿ ನಡೆಯುತ್ತಿದೆ. ಕೊನೆಗೂ ಹಲವಾರು ವರ್ಷಗಳ ಬಳಿಕ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಕರ್ನಾಟಕ ಸರ್ಕಾರವು ನಿರ್ಧರಿಸಿದೆ.
ಚುನಾವಣೆ ಬಗ್ಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಅವರು “ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳು ಡಿಸೆಂಬರ್ 15ರ ವೇಳೆಗೆ ನಡೆಯಲಿದೆ. ಈ ವಿಚಾರವಾಗಿ ಮುಂದಿನ ಒಂದೆರಡು ದಿನಗಳಲ್ಲಿ ಅಧಿಕೃತ ಮೀಸಲಾತಿ ಪಟ್ಟಿ ಬಿಡುಗಡೆಯಾಗಲಿದೆ” ಎಂದು ಹೇಳಿಕೆ ನೀಡುವ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ಸಂಬಂಧಿತ ಅಧಿಕಾರಿಗಳಿಗೆ ಸಿದ್ಧತೆ ನಡೆಸಲು ಕರೆ ನೀಡಿದ್ದಾರೆ.

ಮೀಸಲಾತಿ ಪ್ರಕ್ರಿಯೆಗಳು ಬಹುತೇಕ ಪೂರ್ಣ..?

ಈಗಾಗಲೇ ಚುನಾವಣೆಯನ್ನು ನಡೆಸಲು ಅಗತ್ಯವಾಗಿರುವಂತಹ ಮೀಸಲಾತಿ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿದ್ದು, ಕಳೆದ ತಿಂಗಳು ನಡೆದಂತಹ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆದಿದ್ದು, ಶಾಸಕರು ನೀಡಿದ ಕೆಲವು ಸಣ್ಣಪುಟ್ಟ ಬದಲಾವಣೆಗಳ ಸಲಹೆಯನ್ನು ಕೂಡ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಅಕ್ಟೋಬರ್ 6ರ ಮಂಗಳವಾರದಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆಯ ದಿನಾಂಕ ಮತ್ತು ಪ್ರಕ್ರಿಯೆಯ ಕುರಿತು ಅಂತಿಮ ಹಂತದ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

ಚುನಾವಣೆ ನಡೆಸಲು ಸಚಿವ ಸಂಪುಟ ಒಪ್ಪಿಗೆ

ಸರಕಾರದಿಂದ ಚುನಾವಣೆಗಳನ್ನು ನಡೆಸಲು ಸಮ್ಮತಿ ದೊರೆಯುತ್ತಿದ್ದಂತೆ ರಾಜ್ಯದ ಚುನಾವಣಾ ಆಯೋಗವು ಅಧಿಸೂಚನೆಯನ್ನು ಹೊರಡಿಸಲು ಟೊಂಕಕಟ್ಟಿ ನಿಂತಿದೆ. ಈ ಬಾರಿಯ ಪಂಚಾಯಿತಿ ಚುನಾವಣೆಗಳು ವಿದ್ಯುನ್ಮಾನ ಮತ ಯಂತ್ರದ ಬದಲಿಗೆ ಬ್ಯಾಲೆಟ್ ಪೇಪರ್ ಗಳ ಮೂಲಕ ನಡೆಯಲಿದ್ದು, ಅದಕ್ಕೆ ತಗಲುವಂತಹ ವೆಚ್ಚಗಳನ್ನು ಭರಿಸಲು ಚುನಾವಣಾ ಆಯೋಗಕ್ಕೆ ಅಗತ್ಯವಾಗಿರುವಂತಹ ಅನುದಾನವನ್ನು ಬಿಡುಗಡೆ ಮಾಡಲು ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕವಾಗಿ ಒಪ್ಪಿಗೆಯನ್ನು ಸಹ ನೀಡಲಾಗಿದೆ.

ರಾಜಕೀಯ ಬಲಾಬಲಕ್ಕೆ ವೇದಿಕೆ ಸಿದ್ಧ!

ಸ್ಥಳೀಯ ಪಂಚಾಯಿತಿ ಚುನಾವಣೆಗಳು ಪ್ರಮುಖ ರಾಜಕೀಯ ಪಕ್ಷಗಳಿಗೆ ಒಂದು ಪ್ರತಿಷ್ಠೆಯ ಕಣವಾಗಿ ರೂಪುಗೊಳ್ಳಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಪಕ್ಷದ ಬಲಾಬಲ ಮತ್ತು ಸಂಘಟನೆಗಿರುವ ಶಕ್ತಿಯನ್ನು ಪ್ರದರ್ಶಿಸಲು ಒಂದು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ ಎನ್ನಲಾಗಿದೆ. ಈಗಾಗಲೇ ಚುನಾವಣಾ ಟಿಕೆಟ್ ನ ಆಕಾಂಕ್ಷಿಗಳು ತೆರೆಮರೆಯಲ್ಲಿಯೇ ಲಾಬಿ ನಡೆಸಲು ಆರಂಭಿಸಿದ್ದಾರೆ.

Categories
Uncategorized

•ಬೆಳ್ತಂಗಡಿ: ಸಮುದ್ರದಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವು •ಉಡುಪಿ: ಅಂಗಡಿ ಮಾಲೀಕನ ಚಿನ್ನದ ಸರ ಸುಲಿಗೆ •ಕಾರ್ಕಳ: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ •ಮೂಲ್ಕಿ: ಹಾಡಹಗಲಲ್ಲೇ ಚಿನ್ನಾಭರಣ, ನಗದು ಕಳುವು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

•ಬೆಳ್ತಂಗಡಿ: ಸಮುದ್ರದಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವು

ಬೆಳ್ತಂಗಡಿ: ಸಮುದ್ರದಲ್ಲಿ ಈಜಲು ತೆರಳಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ, ಭಾನುವಾರದಂದು ಪಣಂಬೂರು ಸಮುದ್ರ ತೀರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಬೆಳ್ತಂಗಡಿ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ, ರೆಂಕೆದಗುತ್ತು ನಿವಾಸಿ ಶ್ರೇಯಸ್ ಎಂದು ಗುರುತಿಸಲಾಗಿದೆ.

•ಉಡುಪಿ: ಅಂಗಡಿ ಮಾಲೀಕನ ಚಿನ್ನದ ಸರ ಸುಲಿಗೆ

ಉಡುಪಿ: ಅಂಗಡಿಗೆ ಗ್ರಾಹಕರಂತೆ ಆಗಮಿಸಿದ ಅಪರಿಚಿತ ವ್ಯಕ್ತಿಗಳು, ಅದರ ಮಾಲೀಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಲಪಟಾಯಿಸಿರುವ ಘಟನೆ, ಭಾನುವಾರದಂದು ಮಲ್ಪೆಯ ಕಡುವಿನ ಬಾಗಿಲ ವಿಠೋಭ ರುಖುಮಾಯಿ ಭಜನಾ ಮಂದಿರದ ಹತ್ತಿರದಲ್ಲಿ ನಡೆದಿದೆ. ವಿಠಲ ಸುವರ್ಣ ಎನ್ನುವವರ ಅಂಗಡಿಗೆ ಬೈಕ್ ನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಆಗಮಿಸಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಬೈಕ್ ನಿಂದ ಇಳಿದು ವಿಠಲ ಸುವರ್ಣ ಅವರ ಅಂಗಡಿಯನ್ನು ಪ್ರವೇಶಿಸಿ, ವಿಮಲ್ ನೀಡುವಂತೆ ಕೇಳಿದ್ದಾನೆ. ಬಳಿಕ ವಿಠಲ ಸುವರ್ಣ ಅವರ ಕತ್ತನ್ನು ಒತ್ತಿ ಹಿಡಿದು, ಕುತ್ತಿಗೆಯಲ್ಲಿದ್ದ ಒಂದೂವರೆ ಪವನ್ ಚಿನ್ನದ ಸರವನ್ನು ಎಳೆದುಕೊಂಡು ಹೋಗಿ ಬೈಕ್ ನಲ್ಲಿ ಕುಳಿತಿದ್ದು ಕೂಡಲೇ ಮತ್ತೊಬ್ಬ ವ್ಯಕ್ತಿ ಬೈಕ್ ಅನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಕಾರ್ಕಳ: 9ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕಾರ್ಕಳ: ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ಕು ಪ್ರಕರಣಗಳ ವಾರೆಂಟ್ ಆರೋಪಿಯಾಗಿದ್ದ ಶಿವಮೊಗ್ಗ ವೆಂಕಟೇಶ್ ಎನ್ನುವ ವ್ಯಕ್ತಿಯು 20೦9ರಲ್ಲಿ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದನು ಎನ್ನಲಾಗಿದೆ. ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವೆಂಕಟೇಶ್ ನನ್ನು 2017ರಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಎನ್ನುವ ಮಾಹಿತಿ ಲಭಿಸಿದೆ. ಅಲ್ಲಿಂದ ಮತ್ತೆ ಜಾಮೀನಿನ ಮೂಲಕ ಬಿಡುಗಡೆ ಹೊಂದಿದ ವೆಂಕಟೇಶ್ ಪುನಃ 9 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರಿಸಿಕೊಂಡಿದ್ದನು ಎನ್ನುವ ಸಂಗತಿ ತಿಳಿದುಬಂದಿದೆ. ಇದೀಗ ಅಕ್ಟೋಬರ್ 3ರ ಶನಿವಾರದಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿದ್ದ ವೆಂಕಟೇಶ್ ನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿ, ಅಕ್ಟೋಬರ್ 4ರ ಭಾನುವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯವು ಆತನಿಗೆ ಅಕ್ಟೋಬರ್ 17ರ ವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸುವಂತೆ ಆದೇಶವನ್ನು ಹೊರಡಿಸಿದೆ.

•ಮುಲ್ಕಿ: ಹಾಡಹಗಲಲ್ಲೇ ಚಿನ್ನಾಭರಣ, ನಗದು ಕಳುವು

ಮುಲ್ಕಿ: ಹಾಡಹಗಲೇ ಚಿನ್ನಾಭರಣ ಮತ್ತು ನಗದು ಕಳುವಾಗಿರುವ ಘಟನೆ, ಕಿಲ್ಪಾಡಿ ಗ್ರಾಮದ ತಿರುಮಲ ಗುತ್ತು ಬಳಿಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಶಕೀಲಾ ಪೂಜಾರಿ ಅವರು ತಮ್ಮ ಪತಿ ಮತ್ತು ಅವರ ಮೇಲಿನ ಮನೆಯಲ್ಲಿ ಬಾಡಿಗೆಗಿದ್ದ ಯುವತಿಯೊಂದಿಗೆ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಈ ಸನ್ನಿವೇಶ ಎದುರಾಗಿದೆ. ಶಕೀಲಾ ಅವರ ಮನೆಗಿದ್ದ ಭಾರವಾದ ಕಬ್ಬಿಣದ ಬಾಗಿಲನ್ನು ಕಳ್ಳರು ಭಾರವಾದ ಸಾಧನದಿಂದ ತುಂಡು ಮಾಡಿ, ಒಳಗೆ ತೆರಳಿದ್ದಾರೆ ಎನ್ನಲಾಗಿದೆ. ಬಳಿಕ ಮನೆಯನ್ನು ಜಾಲಾಡಿದ ಖದೀಮರು ಬಟ್ಟೆಯೊಳಗೆ ಅಡಗಿಸಿಟ್ಟ ಬೀರುವಿನ ಬೀಗದ ಕೈಯನ್ನು ತೆಗೆದುಕೊಂಡು, ಅದನ್ನು ಬಳಸಿ ಬೀರುವಿನ ಬಾಗಿಲು ತೆರೆದು, 321ಗ್ರಾಂ ತೂಕದ ಸುಮಾರು 40.56.000 ರೂಪಾಯಿ ಮೌಲ್ಯದ ಚಿನ್ನಾಭರಣ, 10.000 ರೂಪಾಯಿ ನಗದು ಹಣ ಮತ್ತು 2000 ರೂಪಾಯಿ ನಾಣ್ಯಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳ ಜೊತೆಗೆ ಶಕೀಲಾ ಅವರ ಮಗಳ ಬಟ್ಟೆಗಳನ್ನು ಸಹ ಕಳ್ಳತನ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕಳ್ಳರು ಪರಾರಿಯಾಗುವ ಸಂದರ್ಭದಲ್ಲಿ ಒಂದು ಕರಿಮಣಿ ಸರವನ್ನು ಮನೆಯಲ್ಲಿಯೇ ಬೀಳಿಸಿಕೊಂಡು ಹೋಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಗ್ರಾಮೀಣ ಭಾಗದಲ್ಲಿ ಹಾಡಹಗಲೇ ಈ ರೀತಿ ಕಳ್ಳತನ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶ್ವಾನದಳ, ಬೆರಳಚ್ಚು ತಜ್ಞರು, ಮೂಲ್ಕಿ ಠಾಣೆಯ ಇನ್ಸ್ಪೆಕ್ಟರ್ ಶ್ರೀಕಾಂತ್, ಸಾಮಾಜಿಕ ಕಾರ್ಯಕರ್ತರಾದ ಭೀಮಶಂಕರ್, ಕಾರ್ನಾಡ್ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಕಿರಣ್ ಶಿಮಂತೂರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಶಕೀಲಾ ಅವರು ಹಿಂದಿನ ದಿನ ರಾತ್ರಿ ಅನುಮಾನಾಸ್ಪದವಾಗಿ ವ್ಯಕ್ತಿಗಳು ಮನೆಯ ಸುತ್ತಮುತ್ತ ಓಡಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಅಕ್ಕಪಕ್ಕದಲ್ಲಿ ಯಾವುದೇ ಮನೆಗಳಿಲ್ಲದಿರುವುದು ಮತ್ತು ದಾರಿದೀಪದ ಅವ್ಯವಸ್ಥೆಯಿಂದಾಗಿ ಈ ರೀತಿಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Categories
Uncategorized

ಟಾಪ್ ನ್ಯೂಸ್: ಶಿವಮೊಗ್ಗ & ಚಿಕ್ಕಮಗಳೂರು ಜಿಲ್ಲೆ •ಕಡೂರು: ಆಧಾರ್ ಕಾರ್ಡ್ ವಿಚಾರಕ್ಕೆ ತಂದೆ ಕೊಂದ ಮಗ! •ಸೊರಬ: ಭಾರೀ ಮಳೆ: ಸಿಡಿಲಿಗೆ 8 ಕುರಿಗಳ ಸಾವು •ಭದ್ರಾವತಿ: ವಿಐಎಸ್ಎಲ್ ಡಿಜಿಎಂ ಗೋವಿಂದರಾಜು ಆತ್ಮಹತ್ಯೆ •ಶಿವಮೊಗ್ಗ: ಕೊಲೆ ಪ್ರಕರಣ; ಆರೋಪಿ ಬಂಧನ – ಚಿಕ್ಕಮಗಳೂರು: ಟೈರ್ ಸ್ಫೋಟ: ಕೆರೆಗೆ ಬಿದ್ದ ಕಾರು..! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕಡೂರು: ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ತಂದೆ ಮಗನ ನಡುವೆ ಕಲಹ ಮಿತಿಮೀರಿದ್ದು, ಅದು ತಂದೆಯ ಕೊಲೆಯೊಂದಿಗೆ ಅಂತ್ಯಗೊಂಡ ಘಟನೆ ಬೀರೂರು ಸಮೀಪದ ಕಲ್ಲೂರು ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲ್ಲೂರು ಗ್ರಾಮದ ಲೋಕೇಶಪ್ಪ ಮತ್ತು ಅವರ ಮಗನಾದ ರಮೇಶ್ ಅವರ ನಡುವೆ ಆಧಾರ್ ಕಾರ್ಡ್ ವಿಚಾರವಾಗಿ ರಾತ್ರಿಯ ಹೊತ್ತಿನಲ್ಲಿ ಕಲಹ ಏರ್ಪಟ್ಟಿದೆ. ಬಳಿಕ ಅದು ತಾರಕಕ್ಕೇರಿ ರಮೇಶ್ ಮುದ್ದೆಕೋಲಿನಿಂದ ತನ್ನ ತಂದೆಯಾದ ಲೋಕೇಶಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ಲೋಕೇಶಪ್ಪ ಅವರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯಾದ ರಮೇಶ್ ನನ್ನು ಬಂಧಿಸಿದ್ದಾರೆ. •ಸೊರಬ: ಸಿಡಿಲಿಗೆ 8 ಕುರಿಗಳ ಸಾವು ಸೊರಬ: ತೀವ್ರವಾಗಿ ಸುರಿದ ಮಳೆ ಮತ್ತು ಸಿಡಿಲಿನ ಆರ್ಭಟಕ್ಕೆ 8 ಕುರಿಗಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳವಿ ಹೋಬಳಿಯ ಕಾನಹಳ್ಳಿಯಲ್ಲಿನ ಶೆಡ್ ನಲ್ಲಿ ನಡೆದಿದೆ. ಮಾಲೀಕ ನೋಡಿದಾಗ ಕುರಿಗಳು ಸಿಡಿಲಿನ ಬಡಿತಕ್ಕೆ ಸಿಲುಕಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಸಂಬಂಧಪಟ್ಟ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಇಲಾಖೆಯ ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿದ್ದು, ಬಳಿಕ ವೈದ್ಯರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು. •ಭದ್ರಾವತಿ: ವಿಐಎಸ್ಎಲ್ ಡಿಜಿಎಂ ಗೋವಿಂದರಾಜು ಆತ್ಮಹತ್ಯೆ ಭದ್ರಾವತಿ: ಕಳೆದ 1೦ ರಿಂದ 12 ವರ್ಷಗಳಿಂದ ಇಲ್ಲಿನ ವಿಐಎಸ್ಎಲ್ ಕಾರ್ಖಾನೆಯಲ್ಲಿ ಡಿಜಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದ ಗೋವಿಂದರಾಜು ಎನ್ನುವವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಸೇಲಂ ಮೂಲದ ಗೋವಿಂದರಾಜು ಅವರು ಭಾನುವಾರದಂದು ಮಧ್ಯಾಹ್ನ ತಮ್ಮ ಪತ್ನಿಯನ್ನು ರೈಲಿಗೆ ಕಳುಹಿಸಿದ್ದು, ಬಳಿಕ ರಾತ್ರಿಯ ಹೊತ್ತು ಮನೆಗೆ ಹಿಂತಿರುಗಿದ್ದಾರೆ ಎನ್ನಲಾಗಿದೆ. ಸೋಮವಾರದಂದು ಬೆಳಿಗ್ಗೆ ತಮ್ಮ ಸ್ನೇಹಿತರಿಗೆ ಸಂದೇಶವನ್ನು ಕಳುಹಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಅವರು ಕಾರ್ಖಾನೆಗೆ ತೆರಳಿ ಕೆಲವು ಕಡತಗಳಿಗೆ ಸಹಿ ಹಾಕಬೇಕಾದ ಅಗತ್ಯ ಇದ್ದುದರಿಂದ ಅಧಿಕಾರಿಗಳು ಗೋವಿಂದರಾಜು ಅವರಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ, ಎಷ್ಟೇ ಬಾರಿ ಕರೆ ಮಾಡಿದರೂ ಗೋವಿಂದರಾಜು ಅವರು ಪ್ರತಿಕ್ರಿಯಿಸದಿದ್ದಾಗ ಸಹೋದ್ಯೋಗಿಗಳಿಗೆ ಅನುಮಾನ ಉಂಟಾಗಿದ್ದು, ಮನೆಗೆ ಬಂದು ಬಾಗಿಲು ತಟ್ಟಿದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ನಂತರ ಕಾರ್ಖಾನೆಯ ಅಧಿಕಾರಿಗಳು ಮನೆಯ ಬಾಗಿಲನ್ನು ತೆರೆದು ನೋಡಿದಾಗ, ಗೋವಿಂದರಾಜು ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. •ಶಿವಮೊಗ್ಗ: ಕೊಲೆ ಪ್ರಕರಣ; ಆರೋಪಿ ಬಂಧನ ಶಿವಮೊಗ್ಗ: ಅಕ್ಟೋಬರ್ 3ರ ಶನಿವಾರದಂದು ಅಣ್ಣಾನಗರ ಚಾನೆಲ್ ಏರಿ ರಸ್ತೆಯಲ್ಲಿ ನಡೆದಂತಹ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದು ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿ, ಬಳಿಕ ಶವವನ್ನು ರಸ್ತೆ ಬದಿಯಲ್ಲಿ ಹಾಕಿ ಹೋಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಕಾರ್ಯಾಚರಣೆಯನ್ನು ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಅಶೋಕನಗರದ ಮೂರನೇ ತಿರುವಿನ ನಿವಾಸಿಯಾಗಿರುವ ಮತ್ತು ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಮೊಹಮ್ಮದ್ ಅಲಿ ಎಂದು ಗುರುತಿಸಲಾಗಿದ್ದು, ಸೋಮವಾರದಂದು ಆತನನ್ನು ಬಂಧಿಸಿದ ಬಳಿಕ ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನು ಮತ್ತು ಕೊಲೆಯ ಬಳಿಕ ಪರಾರಿಯಾಗಲು ಉಪಯೋಗಿಸಿದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು: ಟೈರ್ ಸ್ಫೋಟ: ಕೆರೆಗೆ ಬಿದ್ದ ಕಾರು..! ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಕೋಟೆಕೆರೆ ಬಳಿ ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆರೆಗೆ ಬಿದ್ದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಬಳಿಕ ಕಾರು ಕೆರೆಯ ತಡೆಬೇಲಿಯನ್ನು ಮುರಿದು ಕೆರೆಗೆ ಉರುಳಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆತ್ತಿದ್ದಾರೆ.

ಕಡೂರು: ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ತಂದೆ ಮಗನ ನಡುವೆ ಕಲಹ ಮಿತಿಮೀರಿದ್ದು, ಅದು ತಂದೆಯ ಕೊಲೆಯೊಂದಿಗೆ ಅಂತ್ಯಗೊಂಡ ಘಟನೆ ಬೀರೂರು ಸಮೀಪದ ಕಲ್ಲೂರು ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಲ್ಲೂರು ಗ್ರಾಮದ ಲೋಕೇಶಪ್ಪ ಮತ್ತು ಅವರ ಮಗನಾದ ರಮೇಶ್ ಅವರ ನಡುವೆ ಆಧಾರ್ ಕಾರ್ಡ್ ವಿಚಾರವಾಗಿ ರಾತ್ರಿಯ ಹೊತ್ತಿನಲ್ಲಿ ಕಲಹ ಏರ್ಪಟ್ಟಿದೆ. ಬಳಿಕ ಅದು ತಾರಕಕ್ಕೇರಿ ರಮೇಶ್ ಮುದ್ದೆಕೋಲಿನಿಂದ ತನ್ನ ತಂದೆಯಾದ ಲೋಕೇಶಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ಲೋಕೇಶಪ್ಪ ಅವರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯಾದ ರಮೇಶ್ ನನ್ನು ಬಂಧಿಸಿದ್ದಾರೆ.

•ಸೊರಬ: ಸಿಡಿಲಿಗೆ 8 ಕುರಿಗಳ ಸಾವು

ಸೊರಬ: ತೀವ್ರವಾಗಿ ಸುರಿದ ಮಳೆ ಮತ್ತು ಸಿಡಿಲಿನ ಆರ್ಭಟಕ್ಕೆ 8 ಕುರಿಗಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳವಿ ಹೋಬಳಿಯ ಕಾನಹಳ್ಳಿಯಲ್ಲಿನ ಶೆಡ್ ನಲ್ಲಿ ನಡೆದಿದೆ. ಮಾಲೀಕ ನೋಡಿದಾಗ ಕುರಿಗಳು ಸಿಡಿಲಿನ ಬಡಿತಕ್ಕೆ ಸಿಲುಕಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಸಂಬಂಧಪಟ್ಟ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಇಲಾಖೆಯ ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿದ್ದು, ಬಳಿಕ ವೈದ್ಯರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು.

•ಭದ್ರಾವತಿ: ವಿಐಎಸ್ಎಲ್ ಡಿಜಿಎಂ ಗೋವಿಂದರಾಜು ಆತ್ಮಹತ್ಯೆ

ಭದ್ರಾವತಿ: ಕಳೆದ 1೦ ರಿಂದ 12 ವರ್ಷಗಳಿಂದ ಇಲ್ಲಿನ ವಿಐಎಸ್ಎಲ್ ಕಾರ್ಖಾನೆಯಲ್ಲಿ ಡಿಜಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದ ಗೋವಿಂದರಾಜು ಎನ್ನುವವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಸೇಲಂ ಮೂಲದ ಗೋವಿಂದರಾಜು ಅವರು ಭಾನುವಾರದಂದು ಮಧ್ಯಾಹ್ನ ತಮ್ಮ ಪತ್ನಿಯನ್ನು ರೈಲಿಗೆ ಕಳುಹಿಸಿದ್ದು, ಬಳಿಕ ರಾತ್ರಿಯ ಹೊತ್ತು ಮನೆಗೆ ಹಿಂತಿರುಗಿದ್ದಾರೆ ಎನ್ನಲಾಗಿದೆ. ಸೋಮವಾರದಂದು ಬೆಳಿಗ್ಗೆ ತಮ್ಮ ಸ್ನೇಹಿತರಿಗೆ ಸಂದೇಶವನ್ನು ಕಳುಹಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಅವರು ಕಾರ್ಖಾನೆಗೆ ತೆರಳಿ ಕೆಲವು ಕಡತಗಳಿಗೆ ಸಹಿ ಹಾಕಬೇಕಾದ ಅಗತ್ಯ ಇದ್ದುದರಿಂದ ಅಧಿಕಾರಿಗಳು ಗೋವಿಂದರಾಜು ಅವರಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ, ಎಷ್ಟೇ ಬಾರಿ ಕರೆ ಮಾಡಿದರೂ ಗೋವಿಂದರಾಜು ಅವರು ಪ್ರತಿಕ್ರಿಯಿಸದಿದ್ದಾಗ ಸಹೋದ್ಯೋಗಿಗಳಿಗೆ ಅನುಮಾನ ಉಂಟಾಗಿದ್ದು, ಮನೆಗೆ ಬಂದು ಬಾಗಿಲು ತಟ್ಟಿದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ನಂತರ ಕಾರ್ಖಾನೆಯ ಅಧಿಕಾರಿಗಳು ಮನೆಯ ಬಾಗಿಲನ್ನು ತೆರೆದು ನೋಡಿದಾಗ, ಗೋವಿಂದರಾಜು ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

•ಶಿವಮೊಗ್ಗ: ಕೊಲೆ ಪ್ರಕರಣ; ಆರೋಪಿ ಬಂಧನ

ಶಿವಮೊಗ್ಗ: ಅಕ್ಟೋಬರ್ 3ರ ಶನಿವಾರದಂದು ಅಣ್ಣಾನಗರ ಚಾನೆಲ್ ಏರಿ ರಸ್ತೆಯಲ್ಲಿ ನಡೆದಂತಹ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದು ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿ, ಬಳಿಕ ಶವವನ್ನು ರಸ್ತೆ ಬದಿಯಲ್ಲಿ ಹಾಕಿ ಹೋಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಕಾರ್ಯಾಚರಣೆಯನ್ನು ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಅಶೋಕನಗರದ ಮೂರನೇ ತಿರುವಿನ ನಿವಾಸಿಯಾಗಿರುವ ಮತ್ತು ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಮೊಹಮ್ಮದ್ ಅಲಿ ಎಂದು ಗುರುತಿಸಲಾಗಿದ್ದು, ಸೋಮವಾರದಂದು ಆತನನ್ನು ಬಂಧಿಸಿದ ಬಳಿಕ ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನು ಮತ್ತು ಕೊಲೆಯ ಬಳಿಕ ಪರಾರಿಯಾಗಲು ಉಪಯೋಗಿಸಿದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು: ಟೈರ್ ಸ್ಫೋಟ: ಕೆರೆಗೆ ಬಿದ್ದ ಕಾರು..!

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಕೋಟೆಕೆರೆ ಬಳಿ ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆರೆಗೆ ಬಿದ್ದಿದೆ.
ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಬಳಿಕ ಕಾರು ಕೆರೆಯ ತಡೆಬೇಲಿಯನ್ನು ಮುರಿದು ಕೆರೆಗೆ ಉರುಳಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆತ್ತಿದ್ದಾರೆ.

Categories
Uncategorized

ತೀರ್ಥಹಳ್ಳಿ ಗಾಂಧಿ ಚೌಕದಲ್ಲಿ ಬಂತು ಅಶೋಕ ಸ್ತಂಭ! – ಆರಗ, ಆರ್.ಎಂ, ರತ್ನಾಕರ್ ಶೆಟ್ಟಿ ಸಮ್ಮುಖದಲ್ಲಿ ಉದ್ಘಾಟನೆ – ಗಾಂಧಿ ಬಂದು ಹೋಗಿದ್ದ ಜಾಗಕ್ಕೆ ಹೊಸ ಕಳೆ – ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣಕ್ಕೆ ಬಸ್ ಪ್ರವೇಶ ಇಲ್ಲ

ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಗಾಂಧಿಚೌಕದಲ್ಲಿ ಮತ್ತೆ ಮರು ಸ್ಥಾಪನೆಯಾಗಿದೆ. ಪಟ್ಟಣ ಪಂಚಾಯತ್ ಅಧ್ಯಕ್ಷ ರತ್ನಾಕರ್ ಶೆಟ್ಟಿ ನೇತೃತ್ವದಲ್ಲಿ ಕಪ್ಪುಶಿಲೆಯಲ್ಲಿ ಕೆತ್ತಲಾದ ಅಶೋಕ ಸ್ತಂಭವನ್ನು ಸೋಮವಾರ ಸಂಜೆ ಗಣ್ಯರ ಸಮ್ಮುಖದಲ್ಲಿ ಸ್ಥಾಪಿಸಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ತೀರ್ಥಹಳ್ಳಿಗೆ ಭೇಟಿ ನೀಡಿ, 100 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಸದಸ್ಯರು, ಅಧಿಕಾರಿಗಳು ಈ ಮಹತ್ವದ ಕೆಲಸ ಮಾಡಿದ್ದಾರೆ.
ಅಶೋಕ ಸ್ತಂಭವನ್ನು ಅನಾವರಣಗೊಳಿಸಿ ಮಾತನಾಡಿದ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರು “ಹಿಂದೆ ಹಿರಿಯರು ನಮಗೆ ಜಾತ್ರೆಯಾಗಲಿ ಅಥವಾ ಇತರೆ ಯಾವುದೇ ಸಮಯದಲ್ಲಿ ಕಳೆದು ಹೋದರೂ ಸಹ ಗಾಂಧಿಚೌಕದಲ್ಲೇ ಇರು ಎಂದು ಹೇಳುತ್ತಿದ್ದರು.. ಇದೊಂದು ವಿಶೇಷ ಜಾಗ. ಮತ್ತೊಮ್ಮೆ ನಿರ್ಮಾಣಗೊಂಡಿದೆ. ಅಷ್ಟೇ ಅಲ್ಲದೆ ಇದಕ್ಕೆ ರಾಷ್ಟ್ರೀಯ ಲಾಂಛನ ಇರುವುದು ಮತ್ತಷ್ಟು ಮೆರಗನ್ನು ನೀಡುತ್ತಿದೆ. ಸ್ಮಾರಕ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ ಗೌಡ “ಗಾಂಧಿಚೌಕದಲ್ಲಿ ಅಶೋಕ ಸ್ತಂಭವನ್ನು ಮತ್ತೊಮ್ಮೆ ನಿರ್ಮಾಣ ಮಾಡಿರುವುದು ಒಳ್ಳೆಯ ವಿಚಾರ. ಪಟ್ಟಣ ಪಂಚಾಯಿತಿ ಅವಧಿ ಇನ್ನೇನು 15 ದಿನಗಳಲ್ಲೇ ಮುಗಿಯಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿಯವರು ಇಲ್ಲಿಗೆ ಬಂದು ಹೋರಾಟ ಮಾಡಿದ್ದರು. ಅದರ ಸವಿನೆನಪಿಗಾಗಿ ಈ ಅಶೋಕ ಸ್ತಂಭವನ್ನು ನಿರ್ಮಾಣಗೊಳಿಸಲಾಗಿದೆ. ಇದೊಂದು ಹೋರಾಟದ ಜಾಗ ಆಗಲಿದೆ ಎಂದರು. ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಮುಖ್ಯ ಅಧಿಕಾರಿಗಳಾದ ನಾಗರಾಜ್, ಪಟ್ಟಣ ಪಂಚಾಯತ್ ಎಲ್ಲಾ ಸದಸ್ಯರು ಹಾಜರಿದ್ದರು.

ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣಕ್ಕೆ ಬಸ್ ಪ್ರವೇಶ ಇಲ್ಲ

ತೀರ್ಥಹಳ್ಳಿಯಿಂದ ಶಿವಮೊಗ್ಗ ಹೆದ್ದಾರಿ ನಿರ್ಮಾಣ ಕಾರಣ ಮುಖ್ಯ ಬಸ್ ನಿಲ್ದಾಣಕ್ಕೆ ಈಗ ಬಸ್ ಬರುವುದನ್ನು ನಿಷೇಧ ಮಾಡಲಾಗಿದೆ. ರಸ್ತೆಯಲ್ಲಿ ಬಸ್ ನಿಲ್ಲಿಸಲಾಗುತ್ತಿದ್ದು ಭಾರೀ ಕಿರಿಕಿರಿ ಉಂಟಾಗಿದೆ.
ತೀರ್ಥಹಳ್ಳಿ ಅರಣ್ಯ ಇಲಾಖೆ ಜಾಗದಲ್ಲಿ ಬಸ್ ನಿಲ್ದಾಣ ಮಾಡುವ ಚರ್ಚೆ ಜೋರಾಗಿದೆ.

Categories
Uncategorized

ಕೊಪ್ಪಕ್ಕೆ ಏಷ್ಯನ್ ಗೇಮ್ಸ್ ಪದಕ ವಿಜೇತೆ ಸ್ನೇಹ! – ಅ.7ಕ್ಕೆಮನೆಗೆ ಆಗಮನ: ಅದ್ಧೂರಿ ಸ್ವಾಗತಕ್ಕೆ ಸಜ್ಜು – ಮಲೆನಾಡ ಹೆಮ್ಮೆಯ ಕ್ರೀಡಾ ಪ್ರತಿಭೆಗೆ ಶುಭಾಶಯಗಳು

ಕೊಪ್ಪ: ಜಪಾನ್ ದೇಶದ ಐಚಿ- ನಗೋಯಾದಲ್ಲಿ ನಡೆದಂತಹ 2026ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ 4×100 ರಿಲೇ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ, ಕಂಚಿನ ಪದಕಕ್ಕೆ ಕೊರಳೊಡ್ಡಿದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೆಮ್ಮೆಯ ಕ್ರೀಡಾ ಪ್ರತಿಭೆ, ಪ್ರಸಿದ್ಧ ಅಥ್ಲೆಟ್ ಸ್ನೇಹ ಶಾನುವಳ್ಳಿ ಕೊಪ್ಪಕ್ಕೆ ಬುಧವಾರ ಆಗಮಿಸಲಿದ್ದಾರೆ.
ಪಂದ್ಯಾವಳಿ ನಡೆದ ಬಳಿಕ ಇದೇ ಮೊದಲ ಬಾರಿಗೆ ಪದಕದೊಂದಿಗೆ 7 ಅಕ್ಟೋಬರ್ 2026ರ ಬುಧವಾರದಂದು ಬೆಳಿಗ್ಗೆ 9:30ಕ್ಕೆ ತಮ್ಮ ಹುಟ್ಟೂರಿಗೆ ಆಗಮಿಸುತ್ತಿದ್ದು, ತಾಲ್ಲೂಕಿನ ಜನರು ತಮ್ಮ ಹೆಮ್ಮೆಯ ಮನೆಮಗಳನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದಾರೆ.
ಮಾವಿನಕಟ್ಟೆಯಲ್ಲಿರುವ ಜಜಿಕೇಶ್ವರ ದೇವಾಲಯದಿಂದ ಬೈಕ್ ರ಼್ಯಾಲಿಯ ಮೂಲಕ ಸ್ವಾಗತವನ್ನು ಕೋರುವ ಮುಖಾಂತರ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.