Categories
Uncategorized

ಪಶ್ಚಿಮ ಘಟ್ಟ ರೈತ ಸಹಕಾರ ವೇದಿಕೆ ಪಾದಯಾತ್ರೆ – ಡಾ.ಆರ್.ಎಂ.ಮಂಜುನಾಥ್ ಗೌಡ, ಬೇಳೂರು ಗೋಪಾಲಕೃಷ್ಣ ಸೇರಿ ಅನೇಕರು ಹಾಜರ್ – ತೀರ್ಥಹಳ್ಳಿಯಲ್ಲಿ ಸಾವಿರಾರು ರೈತರ ಬೃಹತ್ ಹೋರಾಟ:ಬಹಿರಂಗ ಸಭೆ

ತೀರ್ಥಹಳ್ಳಿ: ರೈತರು, ಕೃಷಿ ಕಾರ್ಮಿಕರ ಬದುಕನ್ನೇ ದುರ್ಬರಗೊಳಿಸುವ ಕಸ್ತೂರಿ ರಂಗನ್ ವರದಿ  ಜಾರಿಯನ್ನು ವಿರೋಧಿಸಿ ಸಹಕಾರ ನಾಯಕರು ಆದ ಡಾ. ಮಂಜುನಾಥ ಗೌಡ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ಬೃಹತ್ ಪಾದಯಾತ್ರೆ ನಡೆದಿದೆ.
ತೀರ್ಥಹಳ್ಳಿಯಲ್ಲಿ ಪಕ್ಷಾತೀತವಾಗಿ ಈ ಹೋರಾಟ ಹಮ್ಮಿಕೊಂಡಿದ್ದು ಪಶ್ಚಿಮ ಘಟ್ಟ ರೈತ ಸಹಕಾರ ವೇದಿಕೆ ತೀರ್ಥಹಳ್ಳಿ ಪಟ್ಟಣದ ಸಮೀಪದ ಉಂಟೂರು ಕಟ್ಟೆ ಕೈಮರದಿಂದ ಪ್ರಾರಂಭಗೊಂಡು ತಾಲೂಕು ಕಚೇರಿಯ ಆವರಣದಲ್ಲಿ ಬೃಹತ್ ಪ್ರತಿಭಟನೆ ಸಭೆ ನಡೆಸಲಾಗುತ್ತಿದೆ.
ಉಂಟೂರುಕಟ್ಟೆ ಕೈಮರದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಹಕಾರಿ‌ ವೇದಿಕೆಯಿಂದ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿದೆ. ಶಾಸಕ ಬೇಳೂರು ಗೋಪಾಲಕೃಷ್ಣ, ಶಿಮುಲ್ ಅಧ್ಯಕ್ಷ ವಿದ್ಯಾಧರ, ವಿಜಯದೇವ್ ಸೇರಿ ನೂರಾರು ನಾಯಕರು, ಮುಖಂಡರು ಪಾಲ್ಗೊಂಡಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ 146 ಗ್ರಾಮಗಳು, ಸಾಗರದ 126 ಗ್ರಾಮಗಳು, ಹೊಸನಗರದ 125 ಗ್ರಾಮಗಳು, ಶಿವಮೊಗ್ಗದ 64 ಗ್ರಾಮಗಳು, ಶಿಕಾರಿಪುರದ 12 ಗ್ರಾಮಗಳು ಭಾದಿತ ಗ್ರಾಮಗಳಾಗಿದ್ದು, ರೈತರ ಬದುಕಿನ ಮೇಲೆ ಪರಿಣಾಮ ಬೀರುವ ಜನವಿರೋಧಿ ಅಧಿಸೂಚನೆಯನ್ನು ಕೈ ಬಿಡಲು ಭಾರೀ ಪ್ರಮಾಣದ ಹೋರಾಟ ನಡೆಯುತ್ತಿದೆ.
ತೀರ್ಥಹಳ್ಳಿ ಹಾಗೂ ಹೊಸನಗರ, ಶಿವಮೊಗ್ಗ ಭಾಗದ ಡಾ. ಸುಂದರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ , ಶಶಿಧರ್ ರೆಹಮತುಲ್ಲಾ ಅಸಾದಿ,ಶಶಾಂಕ್ ಹೆಗಡೆ, ನಾಬಳ ಸಚಿಂದ್ರ ಹೆಗಡೆ, ಜೀನ ವಿಕ್ಟರ್, ರಾಘವೇಂದ್ರ ಶೆಟ್ಟಿ,ಸುಶೀಲ ಶೆಟ್ಟಿ, ಕಟ್ಟೆಹಕ್ಕು ಕಿರಣ್, ಹಾರೋಗೋಳಿಗೆ ಪದ್ಮಾನಾಬ್ ಸೇರಿದಂತೆ ನೂರಾರು ಮುಖಂಡರು ಭಾಗಿಯಾಗಿದ್ದಾರೆ.

Categories
Uncategorized

– ಶೀಘ್ರದಲ್ಲಿ ಬಸ್ ಪ್ರಯಾಣ ದರದಲ್ಲಿ ಹೆಚ್ಚಳ! – ಸಾಲ ಮನ್ನಾಕ್ಕೆ ನೆರವು ಕೇಳಿ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ

ಬೆಂಗಳೂರು: ಸಾರಿಗೆ ನಿಗಮಗಳ ಬಸ್ ಪ್ರಯಾಣದ ದರವನ್ನು ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಹೆಚ್ಚಳಗೊಳಿಸುವ ಕುರಿತು ಇಲಾಖೆಯು ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಾರಿಗೆ ಸಚಿವರಾದ ಭೈರತಿ ಸುರೇಶ್ ಅವರು “ಎಂಟು ತಿಂಗಳಲ್ಲಿ ಕೇಂದ್ರ ಸರ್ಕಾರ ತೈಲೋತ್ಪನ್ನ ದರಗಳನ್ನು ಹಲವು ಬಾರಿ ಹೆಚ್ಚಿಸಿದೆ. ಆದರೂ ಕೂಡ ನಾವು ಬಸ್ ಪ್ರಯಾಣದ ದರವನ್ನು ಹೆಚ್ಚಳ ಮಾಡಿಲ್ಲ. ಪರಿಣಾಮವಾಗಿ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಗೆ ಸಾವಿರಾರು ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ. ನಿವೃತ್ತ ಹಿರಿಯ ಐಎಎಸ್ ಅಧಿಕಾರಿಯಾದ ಅತುಲ್ ತಿವಾರಿ ಅವರ ನೇತೃತ್ವದ ಸಮಿತಿಯು ಪ್ರಯಾಣ ದರದ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಧ್ಯಯನವನ್ನು ನಡೆಸುತ್ತಿದ್ದು, ಅತಿ ಶೀಘ್ರದಲ್ಲೇ ಅಧ್ಯಯನದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಬರದ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗುವುದು. ಇದರಿಂದ ಆಗುವ ಹೊರೆಯನ್ನು ಸರಿದೂಗಿಸಲು ಸರ್ಕಾರದಿಂದಲೂ ಕೂಡ ನೆರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆಯನ್ನು ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

ಸಾಲ ಮನ್ನಾಕ್ಕೆ ನೆರವು ಕೇಳಿ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ

ಬೆಂಗಳೂರು: ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ನೆರವು ಕೇಳುವ ಸಲುವಾಗಿ ಕೇಂದ್ರಕ್ಕೆ ರಾಜ್ಯದಿಂದ ಸರ್ವ ಪಕ್ಷವನ್ನು ನಿಯೋಜಿಸಲಾಗಿದೆ.‌ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದು, ಬಳಿಕ ಬಾಗಲಕೋಟೆಯಲ್ಲಿನ ರೈತರ ಜಮೀನುಗಳಿಗೆ ತೆರಳಿ ಬೆಳೆ ವೀಕ್ಷಣೆಯನ್ನು ಸಹ ಮಾಡಿದ್ದಾರೆ. ಸಮೀಕ್ಷೆಗೆ ಹೊರಡುವ ಮೊದಲು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ರೈತರ 5 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಬೇಕು. ಸಾಲ ಮನ್ನಾ ಬೇಡಿಕೆಯು ಸರಿ ಇದೆ. ರೈತರ ಸಾಲ ಮನ್ನಾಗೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದಿಂದ ಸಾಲ ಮನ್ನಾ ಮಾಡಿಸುವ ಜವಾಬ್ದಾರಿಯನ್ನು ಹೊರಬೇಕಿದೆ. ಬರಗಾಲದ ಕುರಿತು ಪ್ರಧಾನಮಂತ್ರಿಗಳಿಗೆ ಈಗಾಗಲೇ ವಿಚಾರ ತಿಳಿಸಿದ್ದು, ಕೇಂದ್ರ ಸರ್ಕಾರವು ಸಾಲ ಮನ್ನಾ ಮಾಡಲು ಮನಸ್ಸು ಮಾಡಬೇಕಿದೆ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಇತರ ನಾಯಕರು ನಮ್ಮೊಂದಿಗೆ ದೆಹಲಿಗೆ ಆಗಮಿಸಿ, ಕೇಂದ್ರ ಸರ್ಕಾರದಿಂದ ಅನುದಾನವನ್ನು ಬಿಡುಗಡೆಗೊಳಿಸುವ ಮೂಲಕ, ರೈತರ ಸಾಲ ಮನ್ನಾಕ್ಕೆ ಆಗ್ರಹಿಸಬೇಕು” ಎಂದು ತಿಳಿಸಿದರು.

Categories
Uncategorized

•ಚಿಕ್ಕಮಗಳೂರು: ಆನ್ ಲೈನ್ ಟ್ರೇಡಿಂಗ್ ಆಸೆಗೆ ಬಿದ್ದ ವಿದ್ಯಾರ್ಥಿನಿ! – ಲಕ್ಷಾಂತರ ರೂಪಾಯಿ ಕಳೆದುಕೊಂಡ ವಿದ್ಯಾರ್ಥಿನಿ •ಸಾಗರ: ಬೃಹತ್ ಗಾಂಜಾ ಗಿಡ ಪತ್ತೆ •ಸಾಗರ: ಟೈಲ್ಸ್ ಸಾಗಿಸುತ್ತಿದ್ದ ವಾಹನ ಪಲ್ಟಿ; ವ್ಯಕ್ತಿ ಸಾವು •ಸಾಗರ: ಜಿಂಕೆ ಮಾಂಸ ಪಾಲು ಮಾಡುವಾಗ ಖದೀಮರ ಸೆರೆ

ಚಿಕ್ಕಮಗಳೂರು: ಟ್ರೇಡಿಂಗ್ ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಭಾರಿ ಲಾಭ ನೀಡುವುದಾಗಿ ನಂಬಿಸಿ ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಘಟನೆ ನಡೆದಿದೆ.‌ ವಿದ್ಯಾರ್ಥಿನಿಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ವಂಚಕರು ಮೊದಲಿಗೆ 750 ರೂಪಾಯಿ ಹೂಡಿಕೆ ಮಾಡಿದರೆ ಕೇವಲ 15 ನಿಮಿಷದಲ್ಲಿ 14.449 ರೂಪಾಯಿಗಳಷ್ಟು ಲಾಭವನ್ನು ನೀಡುವುದಾಗಿ ನಂಬಿಸಿದ್ದಾರೆ. ಬಳಿಕ ಕ್ಯೂಆರ್ ಕೋಡ್ ಸೇರಿದಂತೆ ವಿವಿಧ ಶುಲ್ಕಗಳ ನೆಪವೊಡ್ಡಿ ತಮ್ಮ ಬ್ಯಾಂಕ್ ಖಾತೆಗಳಿಗೆ ಆಗಸ್ಟ್ 27ರಿಂದ 31ರವರೆಗೆ ಹಂತಹಂತವಾಗಿ ಸುಮಾರು 4.77 ಲಕ್ಷ ರೂಪಾಯಿಗಳಷ್ಟು ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಷ್ಟಾದರೂ ಸುಮ್ಮನಿರದ ವಂಚಕರು ಮತ್ತಷ್ಟು ಹಣದ ಬೇಡಿಕೆ ಇಟ್ಟಾಗ ವಿದ್ಯಾರ್ಥಿನಿಯು ಅನುಮಾನಗೊಂಡು ಕುಟುಂಬದವರಿಗೆ ವಿಚಾರ ತಿಳಿಸಿದ್ದಾರೆ. ನಂತರ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಐಟಿ ಕಾಯ್ದೆ ಮತ್ತು ಬಿಎನ್ಎಸ್ ಅಡಿಯಲ್ಲಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಸಾಗರ: ಬೃಹತ್ ಗಾಂಜಾ ಗಿಡ ಪತ್ತೆ

ಸಾಗರ: ಇತ್ತೀಚಿನ ದಿನಗಳಲ್ಲಿ ಸಾಗರದ ಸುತ್ತಮುತ್ತ ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಇದಕ್ಕೆ ನಿದರ್ಶನ ಎನ್ನುವಂತೆ ಮತ್ತೊಂದು ಘಟನೆ ನಡೆದಿದೆ. ಇಲ್ಲಿನ ಬಿ ಎಚ್ ರಸ್ತೆಯಲ್ಲಿರುವ ಡಿವೈಎಸ್ ಪಿ ಕಛೇರಿಯಿಂದ ಕೆಲವೇ ಮೀಟರ್ ದೂರದಲ್ಲಿ ಬೃಹತ್ ಗಾತ್ರದ ಗಾಂಜಾ ಗಿಡವೊಂದು ಸೊಂಪಾಗಿ ಬೆಳೆದು ನಿಂತಿರುವುದು ಬೆಳಕಿಗೆ ಬಂದಿದೆ. ಇದನ್ನು ಕಂಡ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.‌ ಡಿವೈಎಸ್ ಪಿ ಕಛೇರಿಯ ಮುಂಭಾಗದಲ್ಲಿರುವ ವಾಟರ್ ಸರ್ವಿಸ್ ಸ್ಟೇಷನ್ ಪಕ್ಕದ ಕನ್ಸರ್ವೆನ್ಸಿ ರಸ್ತೆಯಲ್ಲಿ ಈ ಗಿಡ ಕಂಡುಬಂದಿದೆ ಎನ್ನಲಾಗಿದೆ. ಇದು ನಿರ್ಜನ ಪ್ರದೇಶವಾಗಿರುವುದರಿಂದ ದುಷ್ಕರ್ಮಿಗಳು ತಮ್ಮ ಅಡ್ಡೆಯನ್ನಾಗಿಸಿಕೊಂಡು, ಗಾಂಜಾ ಗಿಡವನ್ನು ಬೆಳೆಸುತ್ತಿದ್ದಾರೆಯೇ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ.‌

•ಸಾಗರ: ಜಿಂಕೆ ಮಾಂಸ ಪಾಲು ಮಾಡುವಾಗ ಖದೀಮರ ಸೆರೆ

ಸಾಗರ: ಜಿಂಕೆಯ ಮಾಂಸವನ್ನು ಪಾಲು ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಪೊಲೀಸರಿಗೆ ಸೆರೆಸಿಕ್ಕ ಘಟನೆ, ನಾಗವಳ್ಳಿ ಗ್ರಾಮದಲ್ಲಿ ನಡೆದಿದೆ. ಸರ್ವೇ ನಂಬರ್ 72ರಲ್ಲಿ ಷಾಜಿ ಎನ್ನುವವರಿಗೆ ಸೇರಿದ ಜಮೀನಿನ ಬೇಲಿಗೆ ಕರೆಂಟ್ ಕೊಡಲಾಗಿತ್ತು. ಚುಕ್ಕೆಗಳಿರುವ ಎರಡು ಗಂಡು ಜಿಂಕೆಗಳಿಗೆ ಈ ಬೇಲಿಯು ತಗುಲಿ ಸತ್ತು ಹೋಗಿದ್ದವು. ಈ ಹಿನ್ನೆಲೆಯಲ್ಲಿ ಅವುಗಳ ಮಾಂಸವನ್ನು ಜಮೀನಿನಲ್ಲಿಯೇ ಬೇಯಿಸಿ, ಪಾಲು ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ, ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಶರಾವತಿ ವನ್ಯಜೀವಿ ವಲಯದ ಕೋಗಾರ್ ವಲಯ ಅರಣ್ಯಾಧಿಕಾರಿ ಧನಂಜಯ ನಾಯ್ಕ, ಉಪವಲಯ ಅರಣ್ಯಾಧಿಕಾರಿ ಗುರುರಾಜ ತೋಳಬಂದಿ, ಕಿರಣ್ ಬಿದರಳ್ಳಿ, ಸಂಧ್ಯಾ ಎಸ್, ಅರಣ್ಯ ಪಾಲಕರಾದ ದೀಪಕ್ ಪ್ರಭು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಆಗ ಮೂವರು ಆರೋಪಿಗಳು ಪರಾರಿಯಾಗಿದ್ದು, ಇನ್ನು ಮೂವರು ಆರೋಪಿಗಳು ಪೊಲೀಸರಿಗೆ ಸೆರೆ ಸಿಕ್ಕರು. ಕಾರ್ಯಾಚರಣೆಯ ಸಂದರ್ಭದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ, ಜಿಂಕೆಗಳ ಮಾಂಸ, ಬೇಯಿಸಲಾಗಿದ್ದ ಮಾಂಸದ ಅವಶೇಷಗಳು, ಸಾಂಬಾರು ತಯಾರಿಸಲು ಬಳಸಿದ ವಸ್ತುಗಳು ಮತ್ತು ಮಣ್ಣಿನಲ್ಲಿ ಹೂತಿದ್ದ ಜಿಂಕೆಗಳ ಕಳೆಬರಹದ ಕುರುಹುಗಳು ಪತ್ತೆಯಾಗಿದೆ.

Categories
Uncategorized

ಗಾಯತ್ರಿ ಜ್ಯುವೆಲ್ಲರ್ಸಲ್ಲಿ ಶಿಕ್ಷಕರಿಗೆ ಗೌರವ ನಮನ! – ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಾಧಕರು, ಉತ್ತಮ ಆಡಳಿತ ಮಂಡಳಿಗಳಿಗೆ ಗೌರವ  – ಗಾಯತ್ರಿ ಜ್ಯುವೆಲ್ಲರ್ಸ್ ಅಲ್ಲಿ ವಿಶೇಷ ಶಿಕ್ಷಕರ ದಿನಾಚರಣೆ

ತೀರ್ಥಹಳ್ಳಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಲೆನಾಡ ಗ್ರಾಹಕರ ಮೆಚ್ಚಿನ ಚಿನ್ನಾಭರಣ ಮಳಿಗೆ ಗಾಯತ್ರಿ ಜುವೆಲ್ಲರ್ಸ್  ಅಲ್ಲಿ ಉತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನ ಮಾಡಿ ಗೌರವಿಸಲಾಯಿತು.
ಸಾಮಾಜಿಕ ಕೆಲಸದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಿಕ್ಷಣಾಧಿಕಾರಿ ಮಂಜುನಾಥ್ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ 2026-27ನೇ ಸಾಲಿನ ಉತ್ತಮ ಶಿಕ್ಷಕರು ಎಂದು ಸನ್ಮಾನಿಸಿ ಗೌರವಿಸಲಾಯಿತು.
ಸುಮಾರು 13 ಶಿಕ್ಷಕರಿಗೆ ಹಾಗೂ ಪ್ರೌಢಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರು ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಣ ಅಧ್ಯಕ್ಷರು ಸನ್ಮಾನಿಸಲಾಯಿತು.
ಗಾಯತ್ರಿ ಜ್ಯುವೆಲ್ಲರ್ಸ್ ಮಾಲೀಕ ಅನಂತ ಪದ್ಮನಾಭ ಸೇವಾ ಹೆಜ್ಜೆ
ಸನ್ಮಾನದ ನಂತರ ಎಲ್ಲಾ ಶಿಕ್ಷಕರು ತಮ್ಮ ಶಿಕ್ಷಣ ದಿನಾಚರಣೆಯ ಶುಭ ನುಡಿಯನ್ನು ನುಡಿದರು. ಕಾರ್ಯಕ್ರಮ ಆಯೋಜನೆ ಮೂಲಕ ಶಿಕ್ಷಣ ಕ್ಷೇತ್ರದ ಸಾಧಕರನ್ನು ಗೌರವಿಸಿದ ಗಾಯತ್ರಿ ಜ್ಯುವೆಲ್ಲರ್ಸ್ ಮಾಲೀಕರಾದ ಅನಂತ ಪದ್ಮನಾಭ ಆಚಾರ್ಯ ಅವರು, ಸಮಾಜಕ್ಕೆ ಶಿಕ್ಷಕರ ಸೇವೆ ಅಪಾರ. ಮುಂದಿನ ವರ್ಷದಲ್ಲಿ ಉತ್ತಮ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರಿಗೂ ಕೂಡ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಅವರನ್ನು ಕೂಡ ಸನ್ಮಾನಿಸುವ ಗೌರವಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಡಾನ್ ರಾಮಣ್ಣ ಹಾಗೂ ಗಾಯತ್ರಿ ಜ್ಯುವೆಲ್ಲರ್ಸಿನ ಹಿತೈಷಿಗಳು ಹಾಗೂ ಗ್ರಾಹಕರು ಶಿಕ್ಷಕರು ಹಾಗೂ ಗಾಯತ್ರಿ ಜುವೆಲ್ಲರ್ಸಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕಾರ ಮಾಡಿದ ಶಿಕ್ಷಕರು
1. ಶಿವಪ್ಪ – ಸರ್ಕಾರಿ ಪ್ರೌಢಶಾಲೆ ಹೆದ್ದೂರು
2. ಶ್ರೀಧರ್- ಸರ್ಕಾರಿ ಪ್ರೌಢಶಾಲೆ ಮೇಳಿಗೆ
3. ಅನಿತ- ಸರ್ಕಾರಿ ಪ್ರೌಢಶಾಲೆ ಗುಡ್ಡೇಕೊಪ್ಪ
4. ಶಾಹಿದಾ- ಸರ್ಕಾರಿ ಪ್ರೌಢಶಾಲೆ ಕೊಂಡ್ಲೂರು
5. ನಾಗರಾಜ ಕೆ.ಬಿ- ಸರ್ಕಾರಿ ಪ್ರೌಢಶಾಲೆ ಕನ್ನಂಗಿ
6. ವಾಸುದೇವ- ಎಸ್.ವಿ.ಎಸ್ ಪ್ರೌಢಶಾಲೆ ಆಗುಂಬೆ
7. ಮಾರುತಿ- ಸರ್ಕಾರಿ ಪ್ರೌಢಶಾಲೆ ಕಡ್ತೂರು
8. ಮಂಜಣ್ಣ ನಾಯಕ್- ಡಾ.ಯು.ಆರ್. ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ತೀರ್ಥಹಳ್ಳಿ
9. ಜಯಲಕ್ಷ್ಮೀ ಎನ್- ಪಿ.ಎಂ.ಶ್ರೀ ಶಾಲೆ ಹಿರೇಗದ್ದೆ
10.ಪ್ರಕಾಶ್ ಟಿ.ಪಿ- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟೆಹಕ್ಕಲು
11. ಪೂರ್ಣಿಮಾ- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳಗಾರು
12. ಸವಿತಾ ಪಿ.ಎಸ್- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿ
13. ಸುದರ್ಶನ್- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊದಲ
14. ಗಾಯಿತ್ರಿ ಕೆ.ಎಲ್- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತ್ಯಾರಂದೂರು
15. ಗೀತಾ ಎಲ್.ಎಂ- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಂಚದಕಟ್ಟೆ
Categories
Uncategorized

ಶಿಕ್ಷಣ ಕ್ರಾಂತಿ ಮಾಡಿದ ರತ್ನಕುಮಾರಿ ಅವರಿಗೆ ಪ್ರಶಸ್ತಿ ಪ್ರದಾನ – ನವ ದೆಹಲಿಯಲ್ಲಿ ರಾಷ್ಟ್ರ ಪತಿಗಳಿಂದ ಪ್ರಶಸ್ತಿ ಸ್ವೀಕಾರ – 24 ವರ್ಷಗಳಿಂದ ಹಳ್ಳಿಯ ಶಾಲೆಯಲ್ಲಿ ಸೇವೆ

ತೀರ್ಥಹಳ್ಳಿ/ ಹೊಸನಗರ: ಮಲೆನಾಡಿನ ಕುಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಸದ್ದಿಲ್ಲದೆ ಶಿಕ್ಷಣ ಕ್ರಾಂತಿ ಮಾಡುತ್ತಿದ್ದ ಶಿಕ್ಷಕಿಗೆ ಇದೀಗ ದೇಶದ ಅತ್ಯುನ್ನತ ಗೌರವ ಹುಡುಕಿಕೊಂಡು ಬಂದಿದೆ.
2026ನೇ ಸಾಲಿನ ಪ್ರತಿಷ್ಠಿತ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸಮಟಗಾರು ಶಾಲೆಯ ಮುಖ್ಯಶಿಕ್ಷಕಿ ರತ್ನಕುಮಾರಿ ಎಸ್. ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ, ಈ ಬಾರಿ ಇಡೀ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಶಿಕ್ಷಕಿ ಇವರಾಗಿದ್ದಾರೆ.

ಕುಗ್ರಾಮದಲ್ಲಿ ಅಕ್ಷರ ಕ್ರಾಂತಿ ಮಾಡಿದ ಟೀಚರ್!

ಕನಿಷ್ಠ ಬಸ್ ಸೌಲಭ್ಯವೂ ಇಲ್ಲದ, ಸೌಕರ್ಯಗಳ ವಂಚಿತ ಮಲೆನಾಡಿನ ಹೊಸನಗರ ತಾಲೂಕಿನ ಸಮಟಗಾರು ಗ್ರಾಮ. ಈ ಕುಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದೆರಡು ದಶಕಗಳಿಂದ ಅಕ್ಷರ ದಾಸೋಹ ನಡೆಸುತ್ತಿರುವವರು ಮುಖ್ಯಶಿಕ್ಷಕಿ ರತ್ನಕುಮಾರಿ.

24 ವರ್ಷಗಳಿಂದ ಅದೇ ಶಾಲೆಯಲ್ಲಿ ಸೇವೆ

ಪ್ರತಿದಿನ ತೀರ್ಥಹಳ್ಳಿ ಪಟ್ಟಣದಿಂದ ಬಸ್ ಹಿಡಿದು ಶಾಲೆಗೆ ತಲುಪುವ ರತ್ನಕುಮಾರಿ ಅವರು, ಕಳೆದ 24 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 15 ವರ್ಷಗಳಿಂದ ಪ್ರಭಾರಿ ಮುಖ್ಯಶಿಕ್ಷಕಿಯಾಗಿ ಶಾಲೆಯನ್ನು ಮಾದರಿಯಾಗಿ ಮುನ್ನಡೆಸುತ್ತಿದ್ದಾರೆ.
ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟು, ಪ್ರಕೃತಿಯ ಮಡಿಲಲ್ಲಿ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವುದು ಈ ಶಾಲೆಯ ವಿಶೇಷ. ಶಾಲಾ ಆವರಣದಲ್ಲೇ ಸುಂದರ ಉದ್ಯಾನವನ ಹಾಗೂ ಔಷಧೀಯ ಸಸ್ಯವನ ನಿರ್ಮಿಸಲಾಗಿದ್ದು, ಪರಿಸರದೊಂದಿಗೆ ಬೆರೆಯುತ್ತಾ ಮಕ್ಕಳು ವಿಭಿನ್ನವಾಗಿ ಕಲಿಯುತ್ತಿದ್ದಾರೆ. ಶಾಲೆಯ ಉತ್ತಮ ಶಿಕ್ಷಣಕ್ಕೆ ಮಾರುಹೋದ ಸುತ್ತಮುತ್ತಲಿನ ಗ್ರಾಮೀಣ ಪೋಷಕರು, ಸ್ವತಃ ವಾಹನ ವ್ಯವಸ್ಥೆ ಮಾಡಿಕೊಂಡು 42ಕ್ಕೂ ಹೆಚ್ಚು ಮಕ್ಕಳನ್ನು ಈ ಶಾಲೆಗೆ ಕಳುಹಿಸುತ್ತಿದ್ದಾರೆ.

ಕರ್ನಾಟಕದ ಏಕೈಕ ಹಳ್ಳಿ ಶಿಕ್ಷಕಿ…!

ರಾಷ್ಟ್ರ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಶಿಕ್ಷಕಿ, ತೀರ್ಥಹಳ್ಳಿಯ ಶ್ರೀಮತಿ ರತ್ನಕುಮಾರಿಯವರಿಗೆ ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರು ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕಯನ್ನು ವಿತರಣೆ ಮಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೂ ವಿಶೇಷ ಸಂವಾದದಲ್ಲಿ ಹೊಸನಗರದ ಹುಂಚದ ಸಮಟಗಾರು ಶಾಲೆಯ ಶಿಕ್ಷಕಿಯಾಗಿರುವ ರತ್ನಕುಮಾರಿಯವರು ಭಾಗಿಯಾಗಿದ್ದಾರೆ.

Categories
Uncategorized

ಹಣಗೆರೆ ದೇಗುಲಕ್ಕೆ 1 ಕೋಟಿ ರೂ ಕಾಣಿಗೆ! – ಚಿನ್ನ ಹಾಗೂ ಬೆಳ್ಳಿಯ ಆಭರಣಗಳೂ ಕಾಣಿಕೆಯಾಗಿ ಕೊಡುಗೆ – ಐತಿಹಾಸಿಕ ಹಣಗೆರೆಕಟ್ಟೆ ಕ್ಷೇತ್ರ ಅಭಿವೃದ್ಧಿಗೆ ಆಡಳಿತ ಪ್ಲಾನ್!

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಶ್ರೀ ಚೌಡೇಶ್ವರಿ–ಸಯ್ಯಿದ್ ಸಾದತ್ ದರ್ಗಾದಲ್ಲಿ ನಡೆದ ಕಾಣಿಕೆ ಹುಂಡಿ ಎಣಿಕೆ ಕಾರ್ಯದ ನಂತರ ಒಟ್ಟಾರೆ ₹1,01,73,650/- (ಒಂದು ಕೋಟಿ ಒಂದು ಲಕ್ಷದ ಎಪ್ಪತ್ತಮೂರು ಸಾವಿರದ ಆರುನೂರ ಐವತ್ತು ರೂಪಾಯಿಗಳು) ನಗದು ಸಂಗ್ರಹವಾಗಿದೆ. ಜೊತೆಗೆ ಭಕ್ತಾದಿಗಳಿಂದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳೂ ಕಾಣಿಕೆಯಾಗಿ ಸ್ವೀಕೃತಗೊಂಡಿರುತ್ತವೆ. ಸಂಗ್ರಹವಾದ ನಗದು ಮೊತ್ತವನ್ನು ನಿಯಮಾನುಸಾರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಈ ಹುಂಡಿ ಎಣಿಕೆ ಕಾರ್ಯವನ್ನು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್. ಹೇಮಂತ್ ಕುಮಾರ್ ಹಾಗೂ ಡಾ.ಮೈತ್ರಿ, ಉಪವಿಭಾಗಾಧಿಕಾರಿಗಳು ರವರು ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ರಂಜಿತ್, ಮುಜರಾಯಿ ತಹಸೀಲ್ದಾರ್ ಆರ್. ಪ್ರದೀಪ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆರೆಹಳ್ಳಿ ರಾಮಪ್ಪ ಹಾಗೂ ಸಮಿತಿಯ ಸರ್ವ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಗ್ರಾಮ ಸಹಾಯಕರು, ದೇವಸ್ಥಾನದ ಸಿಬ್ಬಂದಿಗಳು, ಬ್ಯಾಂಕ್ ಸಿಬ್ಬಂದಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಹಣಗೆರೆಕಟ್ಟೆ ಕ್ಷೇತ್ರ ಅಭಿವೃದ್ಧಿಗೆ ಆಡಳಿತ ಪ್ಲಾನ್!

ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಣಗೆರೆಕಟ್ಟೆಗೆ ಭೇಟಿ ನೀಡಿ, ಕಂದಾಯ ಇಲಾಖೆ, ವ್ಯವಸ್ಥಾಪನಾ ಸಮಿತಿ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಸೌಲಭ್ಯಗಳ ಕುರಿತು ಚರ್ಚಿಸಿ, ಅಗತ್ಯ ಸೂಚನೆಗಳನ್ನು ನೀಡಿದರು. ದೇಗುಲದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸೂಚನೆ ನೀಡಲಾಯಿತು.

Categories
Uncategorized

•ಉಳ್ಳಾಲ: ಸಮುದ್ರದಲ್ಲಿ ಹಡಗು ಮುಳುಗಡೆ! – ಮಂಗಳೂರು: ಬೈಕ್ ಕಳ್ಳತನ ಹಾವಳಿ ಜೋರು! •ಸುಳ್ಯ: ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಚಿರತೆ

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಹಡಗೊಂದು ಸಮುದ್ರದಲ್ಲಿ ಮುಳುಗಿದ ಘಟನೆ ಮಂಗಳವಾರದಂದು ಅಳಿವೆಬಾಗಿಲುವಿನಲ್ಲಿ ನಡೆದಿದೆ. ಶರೀಫ್ ಎನ್ನುವವರಿಗೆ ಸೇರಿದ ಹಡಗಿನಲ್ಲಿ ಐವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿ ಹಡಗು ಮುಳುಗಿದ್ದು, ಬೇರೆ ಹಡಗಿನಲ್ಲಿದ್ದ ಮೀನುಗಾರರು, ಮುಳುಗಿದ ಹಡಗಿನಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಹಡಗು ಸಮುದ್ರದಲ್ಲಿ ಮುಳುಗಿದ ಪರಿಣಾಮವಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಶರೀಫ್ ಅಳೇಕಲ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

•ಮಂಗಳೂರು: ಬೈಕ್ ಕಳ್ಳತನ ಹಾವಳಿ ಜೋರು

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮಂಗಳೂರು ಭಾಗದಲ್ಲಿ ದ್ವಿಚಕ್ರವಾಹನ ಕಳುವು ಮತ್ತು ಬಸ್ ಗಳಲ್ಲಿ ಪಿಕ್ ಪಾಕೆಟ್ ಗಳು ಹೆಚ್ಚಳಗೊಂಡಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಬೈಕ್ ಗಳಲ್ಲಿ ಕೀ ಅನ್ನು ಬಿಟ್ಟು ಹೋಗುವುದನ್ನೇ ಗುರಿಯನ್ನಾಗಿಸಿಕೊಂಡು ಕಳೆದ ಮೂರು ತಿಂಗಳಿನಲ್ಲಿ ಸುಮಾರು 25ಕ್ಕೂ ಅಧಿಕ ಬೈಕ್ ಮತ್ತು ಸ್ಕೂಟರ್ ಗಳು ಕಳುವಾಗಿವೆ ಎನ್ನುವ ಮಾಹಿತಿ ಲಭಿಸಿದೆ. ಅದೇ ರೀತಿ ಬಸ್ ಗಳಲ್ಲಿ ಜನದಟ್ಟಣೆಯಾಗುವುದನ್ನು ನೋಡಿಕೊಂಡು ಪಿಕ್ ಪಾಕೆಟ್ ಮಾಡಲಾಗುತ್ತಿದೆ. ಅಲ್ಲದೆ ಸಿಟಿ ಬಸ್ ಗಳಲ್ಲಿ ಸಿಸಿಕ್ಯಾಮೆರಾ ಇಲ್ಲದಿರುವುದು ಕಳ್ಳರಿಗೆ ಅನುವು ಮಾಡಿಕೊಟ್ಟಂತಾಗಿದೆ ಎನ್ನಲಾಗಿದೆ. ಹೀಗಾಗಿ ಕೃತ್ಯವನ್ನು ಎಸಗಿದ ಬಳಿಕ ಸಿಕ್ಕಿಬೀಳುವ ಭಯ ಎದುರಾದ ತಕ್ಷಣ ಬಸ್ ನಿಂದ ಇಳಿದು ಪರಾರಿಯಾಗುತ್ತಿದ್ದಾರೆ.‌ ಇದಕ್ಕೆ ಸಂಬಂಧಿಸಿದಂತೆ ಕೋಡಿಕಲ್ ನಲ್ಲಿ ಸ್ಕೂಟರ್ ಎಗರಿಸಿದ್ದ ಉಳ್ಳಾಲದ ಕುಖ್ಯಾತ ಕಳ್ಳ ಮೊಹಮ್ಮದ್ ಫೈಜಲ್ ಅಲಿಯಾಸ್ ತೋಟ ಫೈಜಲ್ ನನ್ನು ಪೊಲೀಸರು ಸಿಸಿಟಿವಿಯ ದೃಶ್ಯಾವಳಿಯನ್ನು ಆಧರಿಸಿ ಸೆರೆ ಹಿಡಿದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದ್ದು, ವಾಹನಗಳನ್ನು ನಿಲ್ಲಿಸುವಾಗ ಕೀ ಅನ್ನು ವಾಹನದಿಂದ ತೆಗೆದು ಹ್ಯಾಂಡ್ ಲಾಕ್ ಬಳಸುವಂತೆ, ಬಸ್ ಗಳಲ್ಲಿ ಪ್ರಯಾಣಿಸುವಾಗ ಪರ್ಸ್ ಮತ್ತು ಮೊಬೈಲ್ ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ಯಾರಾದರೂ ಕಂಡುಬಂದಲ್ಲಿ ಅಥವಾ ಕಳ್ಳತನಕ್ಕೆ ಯತ್ನಿಸಿದಲ್ಲಿ ತಮಗೆ ತಿಳಿಸುವಂತೆ ಸೂಚನೆ ನೀಡಿದ್ದಾರೆ.

•ಸುಳ್ಯ: ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಚಿರತೆ

ಸುಳ್ಯ: ಚಿರತೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ, ಮಂಗಳವಾರದಂದು ಆಲೆಟ್ಟಿ ಗ್ರಾಮದ ಗಡಿ ಪ್ರದೇಶವಾಗಿರುವ ಕಲ್ಲಪಳ್ಳಿ ಎನ್ನುವಲ್ಲಿ ನಡೆದಿದೆ. ಇಲ್ಲಿನ ಪೆರುಮುಂಡ ಗೋಪಾಲಗೌಡ ಎನ್ನುವವರಿಗೆ ಸೇರಿದ ಜಾಗದಲ್ಲಿ ಚಿರತೆ ಸತ್ತು ಬಿದ್ದಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿದ್ದಾರೆ. ಬೇಟೆಯಾಡುವ ಸಂದರ್ಭದಲ್ಲಿ ಯಾವುದೋ ಪ್ರಾಣಿಯನ್ನು ಬೆನ್ನತ್ತಿ ಬಂದ ಚಿರತೆಯು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಬಳಿಕ ಪಶುವೈದ್ಯರು ಚಿರತೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದು, ಅರಣ್ಯ ಇಲಾಖೆಯವರು ಮುಂದಿನ ಕ್ರಮಗಳನ್ನು ಕೈಗೊಂಡರು ಎನ್ನುವ ಸಂಗತಿ ತಿಳಿದುಬಂದಿದೆ.

Categories
Uncategorized

ಪ್ರೀತಿ, ಚೆಲುವು, ತುಂಟತನದ ಪ್ರತೀಕ ಕೃಷ್ಣ! – ಕೃಷ್ಣ ಜನ್ಮ ದಿನದ ಪುರಾಣ ಏನು…? – ಎಲ್ಲೆಡೆ ಕೃಷ್ಣ ಜನ್ಮಾಷ್ಠಮಿಯ ಸಂಭ್ರಮ

ಶ್ರಾವಣ ಮಾಸದಂದು ಬರುವ ಪ್ರಮುಖ ಹಬ್ಬಗಳಲ್ಲಿ ಕೃಷ್ಣಾಷ್ಟಮಿ ಕೂಡ ಒಂದು. ಇದು ಶ್ರೀಕೃಷ್ಣನು ಜನಿಸಿದ ದಿನವಾದ್ದರಿಂದ, ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಕೃಷ್ಣಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿಯನ್ನು ಎರಡು ರೀತಿಯಲ್ಲಿ ಆಚರಿಸಲಾಗುತ್ತದೆ. ಅಂದರೆ ಚಾಂದ್ರಮಾನದ ಪ್ರಕಾರ ಈಗ ಆಚರಿಸುವಂತೆ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಮತ್ತು ಸೌರಮಾನದಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದಂದು ಆಚರಿಸಲ್ಪಡುತ್ತದೆ. ಶ್ರೀಕೃಷ್ಣನು ಮಥುರಾದಲ್ಲಿನ ಕಾರಾಗೃಹವೊಂದರಲ್ಲಿ ದೇವಕಿ ಮತ್ತು ವಸುದೇವರ ಅಷ್ಟಮ ಪುತ್ರನಾಗಿ ಅಂದರೆ ಎಂಟನೇ ಮಗುವಾಗಿ ಮಧ್ಯರಾತ್ರಿಯಲ್ಲಿ ಜನಿಸಿದ ಹಿನ್ನೆಲೆಯಾಗಿ ಈ ಹಬ್ಬವನ್ನು ರಾತ್ರಿ ಸಮಯದಲ್ಲಿ ಆಚರಿಸುವುದು ಇತರ ಹಬ್ಬಗಳಿಗಿಂತ ಒಂದು ವಿಶಿಷ್ಟ ಮತ್ತು ವಿಭಿನ್ನ ರೀತಿಯ ಅನುಭವವನ್ನು ನೀಡುತ್ತದೆ.

ಪುರಾಣ ಏನು ಹೇಳುತ್ತೆ…?

ಇಂದಿನ ಉತ್ತರಪ್ರದೇಶ ರಾಜ್ಯದ ಮಥುರಾ ಹಿಂದೆ ಯಾದವ ಕುಲದ ರಾಜಧಾನಿಯಾಗಿತ್ತು. ಕಂಸನ ಅಟ್ಟಹಾಸದಿಂದ ಮತ್ತು ಸಹೋದರಿಯ ಮಗುವಿನಿಂದಲೇ ತನ್ನ ಸಾವು ಎಂದು ಕಂಸ ತಿಳಿದಿದ್ದರಿಂದ ಆತನ ಸ್ವಂತ ಸಹೋದರಿಯಾದ ತುಂಬು ಗರ್ಭಿಣಿ ದೇವಕಿ ಮತ್ತು ಆಕೆಯ ಪತಿ ವಸುದೇವರಿಗೆ ಕಾರಾಗೃಹದಲ್ಲಿ ಇರಿಸಿದುದರ ಪರಿಣಾಮವಾಗಿ ಶ್ರೀಕೃಷ್ಣನು ಸೆರೆಮನೆಯಲ್ಲಿ ಜನಿಸುವಂತಾಯಿತು.‌ ಕೃಷ್ಣ ಎಂದರೆ ಕಪ್ಪು ಎಂದರ್ಥವಾದರೂ ಆತನ ಮೈಬಣ್ಣ ನೀಲಿವರ್ಣದಿಂದ ಕೂಡಿತ್ತು. ಇದಕ್ಕೆ ಹಲವಾರು ಕಾರಣಗಳಿವೆ ಪೌರಾಣಿಕವಾಗಿ ನೋಡುವುದಾದರೆ ರಾಕ್ಷಸಿಯಾದ ಪೂತನಿಯು ತನ್ನ ಎದೆ ಹಾಲನ್ನು ಉಣಿಸಿದುದರಿಂದ, ವಿಷಪೂರಿತವಾಗಿದ್ದ ಆ ಹಾಲನ್ನು ಸೇವಿಸಿ ಶ್ರೀಕೃಷ್ಣನ ದೇಹವು ನೀಲಿಯಾಯಿತು ಎನ್ನುವುದು ಒಂದು ಕಡೆಯಾದರೆ, ಯಮುನಾ ನದಿಯಲ್ಲಿ ಕಾಳಿಂಗ ಸರ್ಪವನ್ನು ಮರ್ದನ ಮಾಡಿದ ಸಮಯದಲ್ಲಿ ಅದರ ತೀವ್ರವಾದ ವಿಷದ ಜ್ವಾಲೆ ಶ್ರೀಕೃಷ್ಣನ ದೇಹಕ್ಕೆ ತಗುಲಿದ್ದರಿಂದ ಆತ ನೀಲದೇಹಿಯಾದನು. ಆಧ್ಯಾತ್ಮಿಕವಾಗಿ ನೋಡುವುದಾದರೆ ನೀಲಿಯು ಆಕಾಶ ಮತ್ತು ಸಮುದ್ರದ ಸಂಕೇತವಾಗಿದ್ದು, ಶ್ರೀಕೃಷ್ಣನು ಅದರ ಪ್ರತೀಕ ಮತ್ತು ಅಗಾಧತೆಯ ದ್ಯೋತಕವಾಗಿದ್ದಾನೆ. ನೀಲ ಮೇಘ ಶಾಮ ಎಂದರೆ ಮಳೆಗಾಲದ ಕಪ್ಪನೆಯ ಮೋಡ ಎನ್ನುವ ಅರ್ಥ ಕೂಡ ಇದೆ.
ವೈದ್ಯಕೀಯ ಮತ್ತು ವೈಜ್ಞಾನಿಕವಾಗಿ ಶ್ರೀಕೃಷ್ಣನನ್ನು ಕಲ್ಪಿಸಿಕೊಂಡಿದ್ದೇ ಆದಲ್ಲಿ ನವಜಾತ ಶಿಶುಗಳ ರಕ್ತದಲ್ಲಿ ಆಮ್ಲಜನಕದ ಕೊರತೆ ಉಂಟಾದಾಗ ಚರ್ಮ, ತುಟಿ ಮತ್ತು ಉಗುರು ನೀಲಿ ಬಣ್ಣಕ್ಕೆ ತಿರುಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಸೈನೋಸಿಸ್ ಅಥವಾ ಮೆಥೆಮೊಗ್ಲೋಬಿನೆಮಿಯಾ ಎಂದು ಕರೆಯುತ್ತಾರೆ. ಹೀಗೆ ನೋಡುವುದಾದರೆ ಪುರಾಣದ ಶ್ರೀಕೃಷ್ಣನಿಗೂ ಆಧುನಿಕ ವಿಜ್ಞಾನಕ್ಕೂ ಒಂದು ನಂಟಿರುವಂತೆ ತೋರುವುದು ಸಹಜ.

ಈಗ ಆಚರಣೆ ಹೇಗೆ..?

ಶ್ರೀಕೃಷ್ಣನ ಜನ್ಮದಿನವನ್ನು ದೇಶದ ಹಲವೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅಂದು ಮುದ್ದುಕೃಷ್ಣನಿಗೆ ಶತನಾಮಾವಳಿ, ವಿಷ್ಣು ಸಹಸ್ರನಾಮದ ಉಚ್ಚಾರಣೆಯ ಮೂಲಕ ತುಳಸಿದಳಗಳನ್ನು ಅರ್ಪಿಸಿ, ಆತನಿಗೆ ಪ್ರಿಯವಾದ ಅವಲಕ್ಕಿ, ಬೆಣ್ಣೆಯೊಂದಿಗೆ ಹಣ್ಣುಗಳು, ಉಂಡೆ ಪಂಚಕಜ್ಜಾಯದಂತಹ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸಿ ಸಂತೃಪ್ತಿಪಡಿಸಿದರೆ, ಶ್ರೀಕೃಷ್ಣ ದೇವಾಲಯಗಳಲ್ಲಿ ವಿಶೇಷ ರೀತಿಯ ಪೂಜೆಗಳು, ಮಡಿಕೆ ಒಡೆಯುವುದು, ಓಕುಳಿಯಂತಹ ಆಟಗಳನ್ನು ನಡೆಸುವ ಮೂಲಕ ಅದ್ಧೂರಿಯಾಗಿ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಉತ್ತರ ಭಾರತದ ಗೋಕುಲಾಷ್ಟಮಿಗೂ, ದಕ್ಷಿಣಭಾರತದ ಕೃಷ್ಣಜನ್ಮಾಷ್ಟಮಿಯ ಆಚರಣೆಗಳಲ್ಲಿ ಭಿನ್ನತೆ ಇದೆ.

ಎಲ್ಲಾ ಸ್ವಭಾವದ ಕೃಷ್ಣ ಎಲ್ಲರಿಗೂ ಇಷ್ಟ!

ಪ್ರೀತಿಯ ಸಂಕೇತ, ವಿರಹದ ಪ್ರತೀಕ, ಮಗುವಿನ ತುಂಟತನದ ಕುರುಹು, ಸ್ನೇಹಹಸ್ತಕ್ಕೆ ಮಾದರಿ, ಸಹೋದರತ್ವಕ್ಕೆ ದ್ಯೋತಕ ಕೊಂಚ ಪ್ರಮಾಣದ ಕಳ್ಳಬುದ್ಧಿ, ರಸಿಕತೆ ಎಲ್ಲಕ್ಕಿಂತ ಮುಖ್ಯವಾಗಿ ಸ್ನೇಹ, ಪ್ರೀತಿ ಮತ್ತು ಭಕ್ತಿಗೆ ಜಾತಿ, ಅಂತಸ್ತುಗಳು ಮುಖ್ಯವಲ್ಲ ಎನ್ನುವುದನ್ನು, ಆಡಂಬರದ ಭಕ್ತಿಗಿಂತ ನೈಜ ಭಕ್ತಿಗೆ ಒಲಿಯುವೆ ಎಂದು ಕನಕದಾಸರ ಮೂಲಕ ತೋರಿಸಿಕೊಟ್ಟ ಈ ಪರಮಾತ್ಮನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ.

ಸಮಸ್ತ ಜನತೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

Categories
Uncategorized

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ?! – ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಶೀಘ್ರದಲ್ಲಿ ಪ್ರಕಟ – ಮಕ್ಕಳ ಆನ್ ಲೈನ್ ಸುರಕ್ಷತೆ ಬಗ್ಗೆ ಸರ್ಕಾರಗಳ ಚಿಂತನೆ

ನವ ದೆಹಲಿ: ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಇದರ ಪ್ರಕಾರ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿರ್ಬಂಧಿಸುವ ಕುರಿತು ಚಿಂತನೆ ನಡೆಸಿದೆ. ಈ ಪ್ರಸ್ತಾವನೆಯು ವಾಟ್ಸಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಆ್ಯಪ್ ಗಳನ್ನು ಒಳಗೊಂಡಿದ್ದು, ಡಿಜಿಟಲ್ ಜಗತ್ತಿನಲ್ಲಿ ಎಳೆಯ ಬಳಕೆದಾರರನ್ನು ರಕ್ಷಿಸುವ ಉದ್ದೇಶದಿಂದ ಚರ್ಚೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭಿಸಿದೆ.
ಕೇಂದ್ರ ಸರ್ಕಾರದ ಈ ನಿಯಮವು ಒಂದು ವೇಳೆ ಜಾರಿಗೆ ಬಂದಿದ್ದೇ ಆದಲ್ಲಿ ಪ್ರಮುಖ ಸಾಮಾಜಿಕ ಮಾಧ್ಯಮ ಮತ್ತು ಸಂವಹನ ವೇದಿಕೆಗಳನ್ನು ಮಕ್ಕಳು ಬಳಸುವ ವಿಧಾನಗಳಲ್ಲಿ ದೊಡ್ಡ ಬದಲಾವಣೆಗಳು ಬರಲಿವೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ವಯಸ್ಸಿನ ದೃಢೀಕರಣ, ಪೋಷಕರ ಒಳಗೊಳ್ಳುವಿಕೆ ಮತ್ತು ಈ ನಿಯಮವನ್ನು ಹೇಗೆ ಜಾರಿಗೊಳಿಸಬೇಕು ಎನ್ನುವ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಸಹ ನೀಡಬೇಕಾಗುತ್ತದೆ.
ಮಕ್ಕಳ ಆನ್ ಲೈನ್ ಸುರಕ್ಷತೆ ಮತ್ತು ಜವಾಬ್ದಾರಿಯುತ ಡಿಜಿಟಲ್ ಬಳಕೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಪ್ರಸ್ತಾವನೆ ಮುಂಚೂಣಿಯಲ್ಲಿದೆ. ಇದರೊಂದಿಗೆ ಸಾಮಾಜಿಕ ಮಾಧ್ಯಮಗಳು ಯುವ ಬಳಕೆದಾರರನ್ನು ಹೇಗೆ ಉತ್ತಮವಾಗಿ ರಕ್ಷಿಸುತ್ತದೆ ಎನ್ನುವುದನ್ನು ಕೂಡ ಪರಿಶೀಲಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಆಯಾ ದೇಶಗಳ ಸರ್ಕಾರಗಳು ಹೆಚ್ಚಿನ ಸಮೀಕ್ಷೆಯನ್ನು ಕೂಡ ನಡೆಸುತ್ತಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಸಧ್ಯದ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರವು ಇನ್ನೂ ಈ ಆಲೋಚನೆಯ ಆಧಾರದ ಮೇಲೆ ಪರಿಶೀಲನೆಯನ್ನು ನಡೆಸುತ್ತಿದ್ದು, ಯಾವುದೇ ರೀತಿಯ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅಧಿಕೃತವಾಗಿ ಪ್ರಕಟಣೆ ಹೊರಬಿದ್ದ ಮೇಲಷ್ಟೇ ನಿಯಮಕ್ಕೆ ಸಂಬಂಧಿಸಿದಂತೆ ನಿರ್ಧಾರವಾಗುತ್ತದೆ.

Categories
Uncategorized

•ಕುಂದಾಪುರ: ಯುವತಿ ನಾಪತ್ತೆ •ಕಾರ್ಕಳ: ರಬ್ಬರ್ ಟ್ಯಾಪಿಂಗ್ ಕೆಲಸಗಾರ ಸಾವು •ಮೂಡಬಿದರೆ: ವಾರೆಂಟ್ ಆರೋಪಿಯ ಬಂಧನ •ಕಡಬ: ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಸಾವು

ಮಂಗಳೂರು: ಕೇರಳ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನ ಬಂದಿದೆ. ಅದನ್ನು ಪಡೆದುಕೊಳ್ಳಲು ತೆರಿಗೆ ಹಣ ಕಟ್ಟಬೇಕು ಎಂದು ನಂಬಿಸಿ ಅಪರಿಚಿತರು 3 ಲಕ್ಷದ 81 ಸಾವಿರ ರೂ.ಹಣ ವರ್ಗಾಯಿಸಲು ತಿಳಿಸಿ ವಂಚನೆ ಮಾಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
42 ವರ್ಷದ ದೂರುದಾರರಿಗೆ ಆ.14ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಕೇರಳ ಲಾಟರಿಯಲ್ಲಿ 8 ಲಕ್ಷ ರೂ. ಬಂದಿದೆ ಎಂದು ನಂಬಿಸಿ ಹಣವನ್ನು ಪಡೆಯಲು ತೆರಿಗೆ ಕಟ್ಟಬೇಕು ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ದೂರುದಾರರು ಅಪರಿಚಿತ ವ್ಯಕ್ತಿ ಕಳುಹಿಸಿದ ಗೂಗಲ್ ಪೇ, ಫೋನ್ ಪೇ ಸ್ಕ್ಯಾನರ್ ಗಳಿಗೆ ಆ.15ರಿಂದ 26ರ ವರೆಗೆ ಹಂತ ಹಂತವಾಗಿ 3,81,300 ರೂ. ವರ್ಗಾಯಿಸಿದ್ದಾರೆ.
ಮತ್ತೆ ಕರೆ ಮಾಡಿದ ಅಪರಿಚಿತ ಲಾಟರಿ ಹಣ ಡಬಲ್ ಆಗಿದ್ದು, ಪುನಃ ಟ್ಯಾಕ್ಸ್ ಕಟ್ಟಬೇಕು ಎಂದು ಒತ್ತಾಯಿಸಿದ್ದಾನೆ. ಆಗ ದೂರುದಾರರಿಗೆ ಅದೊಂದು ಮೋಸದ ಜಾಲ ಎಂದು ಗೊತ್ತಾಗಿ ಸೈಬರ್ ಹೆಲ್ಪ್ ಲೈನ್ ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ

•ಕುಂದಾಪುರ: ಯುವತಿ ನಾಪತ್ತೆ

ಕುಂದಾಪುರ: ಮಂಗಳೂರಿನ ಕೂಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈಶ್ವರಿ ಎನ್ನುವ ಯುವತಿಯು ನಾಪತ್ತೆಯಾಗಿರುವ ಘಟನೆ, ಕಳೆದ ಕೆಲವು ದಿನಗಳ ಹಿಂದೆ ನಡೆದಿದೆ. ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಯುವತಿಗೆ ಸ್ಥಳ ಬದಲಾವಣೆ ಮಾಡಿದರೆ ಸರಿಯಾಗಬಹುದೆಂದು ಆಲೋಚಿಸಿ ಈಶ್ವರಿಯ ಪೋಷಕರು ಆಕೆಯನ್ನು ಆಗಸ್ಟ್ 25ರಂದು ಕೂಳೂರಿನಿಂದ ಕುಕ್ಕಿಕಟ್ಟೆಗೆ ಕರೆದುಕೊಂಡು ಹೋಗಲೆಂದು ಬಸ್ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ, ಈಶ್ವರಿ ವಾಶ್ ರೂಂ ಗೆ ಹೋಗಿ ಬರುವುದಾಗಿ ಪೋಷಕರಿಗೆ ತಿಳಿಸಿ ತೆರಳಿದವಳು ಮರಳಿಬಾರದೆ ನಾಪತ್ತೆಯಾಗಿದ್ದಾಳೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಕಾರ್ಕಳ: ರಬ್ಬರ್ ಟ್ಯಾಪಿಂಗ್ ಕೆಲಸಗಾರ ಸಾವು

ಕಾರ್ಕಳ: ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ, ಮಾಳ ಅಳಪಳ್ಳಿ ದೇವಸ್ಥಾನದ ಬಳಿಯ ತೋಟವೊಂದರಲ್ಲಿ ನಡೆದಿದೆ. ಶೆಡ್ ನಿಂದ ಶೀಟ್ ಟ್ರೇ ತೆಗೆಯುತ್ತಿದ್ದ ಸಮಯದಲ್ಲಿ ಅವರಿಗೆ ಯಾವುದೋ ಒಂದು ಜಂತು ಕಚ್ಚಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ಸುರೇಂದ್ರ ಪಿ.ಎ ಎಂದು ಗುರುತಿಸಲಾಗಿದೆ. ಜಂತು ಕಡಿದ ತಕ್ಷಣ ಸುರೇಂದ್ರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತಾದರೂ, ಅದು ಫಲಕಾರಿಯಾಗದೆ ಸಾವನ್ನಪ್ಪಿದರು ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಮೂಡಬಿದರೆ: ವಾರೆಂಟ್ ಆರೋಪಿಯ ಬಂಧನ

ಮೂಡಬಿದರೆ: ಆರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಅಬೂಬಕರ್ ಅಲಿಯಾಸ್ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಆಗಸ್ಟ್ 28ರ ಶುಕ್ರವಾರದಂದು ಮೂಡಬಿದರೆ ಪೊಲೀಸ್ ಠಾಣೆಯ ವಾರೆಂಟ್ ಜಾರಿ ಕರ್ತವ್ಯದ ಎಚ್.ಸಿ.ರವೀಂದ್ರ, ಪಿಸಿ ಲಿಂಗೇಶ್ ಮತ್ತು ನ್ಯಾಯಾಲಯದ ಪಿಸಿ ರಮೇಶ್ ಅವರು ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ಮೂಡಬಿದರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ಸೆಪ್ಟೆಂಬರ್ 15ರ ಮಂಗಳವಾರದವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.

•ಕಡಬ: ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಸಾವು

ಕಡಬ: ರಸ್ತೆ ಅಪಘಾತದಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ, ಸೋಮವಾರದಂದು ಕಳಾರದಲ್ಲಿ ನಡೆದಿದೆ.‌ ಉಪ್ಪಿನಂಗಡಿ- ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಸ್ತೆ ಪಕ್ಕದಲ್ಲಿ ವೃದ್ಧೆಯು ನಿಂತಿದ್ದ ಸಂದರ್ಭದಲ್ಲಿ, ಕಡಬ ಕಡೆಯಿಂದ ಆಗಮಿಸಿದ ಬೈಕ್ ವೃದ್ಧೆಗೆ ಢಿಕ್ಕಿ ಹೊಡೆದಿದೆ. ತಕ್ಷಣ ಆಕೆಯನ್ನು ಸ್ಥಳೀಯರು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರದಂದು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಮೃತ ದುರ್ದೈವಿಯನ್ನು ಕಳಾರ ಪೆರ್ಲದಕೆರೆ ನಿವಾಸಿ ವಾರಿಜ ಎಂದು ಗುರುತಿಸಲಾಗಿದೆ. ವಾರಿಜ ಅವರು ಪೆರ್ಲದಕೆರೆಯಲ್ಲಿ ತಮ್ಮ ಅಕ್ಕನ ಮನೆಯ ಪಕ್ಕದಲ್ಲಿ ವಾಸವಾಗಿದ್ದು, ಅಕ್ಕನ ಮಗನಾದ ಧನಂಜಯ ಅವರೇ ವಾರಿಜ ಅವರನ್ನು ನೋಡಿಕೊಳ್ಳುತ್ತಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ.