Categories
Uncategorized

ಮತ್ತೆ ಮಳೆ: ಕೃಷಿಕರಲ್ಲಿ ಉತ್ಸಾಹ! – ಸೆ.21ರಿಂದ ಮಳೆ ಸಾಧ್ಯತೆ: ಮಳೆಗಾಗಿ ಪ್ರಾರ್ಥನೆ ಶುರು – ಸೆ.25ರವರೆಗೆ ಭಾರೀ ಮಳೆ: ಹಲವೆಡೆ ಒಣಗಿದ ಭೂಮಿ

ಬೆಂಗಳೂರು: ಸೆಪ್ಟೆಂಬರ್ 20ರ ಮುನ್ಸೂಚನೆಯಂತೆ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮವಾಗಿ, ರಾಜ್ಯದಲ್ಲಿ 24ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ತೀವ್ರವಾಗಿರಲಿದೆ. ಅಲ್ಲದೆ ಸೆಪ್ಟೆಂಬರ್ 22ರ ಮಂಗಳವಾರದಿಂದ ರಾಜ್ಯಾದ್ಯಂತ ಮಳೆಯ ಪ್ರಮಾಣ ಅಧಿಕವಾಗಲಿದೆ ಎನ್ನುವ ಮಾಹಿತಿ ಲಭಿಸಿದೆ.
ಸೆಪ್ಟೆಂಬರ್ 21ರ ಸೋಮವಾರದಂದು ದಕ್ಷಿಣಕನ್ನಡ, ಕಾಸರಗೋಡು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದ್ದು, ಕರಾವಳಿಯಲ್ಲಿ ಸೆಪ್ಟೆಂಬರ್ 22ರ ಮಂಗಳವಾರದಂದು ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಮಲೆನಾಡಿನ ಭಾಗಗಳಾದ ಕೊಡಗು, ಸಕಲೇಶಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಜೆಯ ಹೊತ್ತಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 22ರ ಮಂಗಳವಾರದಿಂದ 25ರ ಶುಕ್ರವಾರದವರೆಗೆ ಮೂರು ದಿನಗಳ ಕಾಲ ಮಳೆ ಹೆಚ್ಚಾಗುವ ಲಕ್ಷಣಗಳಿವೆ ಎನ್ನಲಾಗುತ್ತಿದೆ. ಉತ್ತರ ಒಳನಾಡಿನ ಭಾಗಗಳಾದ ಬೆಳಗಾವಿ, ಧಾರವಾಡ, ವಿಜಯಪುರ, ಕಲಬುರ್ಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 22ರ ಮಂಗಳವಾರದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಉತ್ತಮ ಮಳೆಯಾಗಲಿದ್ದು, ಹಾವೇರಿ ಗದಗ ಮತ್ತು ಬಾಗಲಕೋಟೆಗಳಲ್ಲಿ ಸಾಧಾರಣ ಮಳೆ ಸಂಭವಿಸಲಿದೆ. ದಕ್ಷಿಣ ಒಳನಾಡಿನ ಭಾಗಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳ ಹಲವೆಡೆ ಸಂಜೆ ಮತ್ತು ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆ ಉಂಟಾಗಲಿದ್ದು, ಇದು ಸೆಪ್ಟೆಂಬರ್ 25ರ ಶುಕ್ರವಾರದ ತನಕ ಮುಂದುವರಿಯುವ ಸಾಧ್ಯತೆ ಇದೆ ಎನ್ನುವ ಸಂಗತಿ ತಿಳಿದುಬಂದಿದೆ.

Categories
Uncategorized

ರಾಮೇಶ್ವರ ದೇವಸ್ಥಾನದಲ್ಲಿ ಹರಕೆ ತೀರಿಸಿದ ಸಿಎಂ ಡಿಕೆಶಿ! – ದೇವಸ್ಥಾನದಲ್ಲಿ ಸನ್ಮಾನ: 5 ಕೋಟಿ ರೂ. ಅನುದಾನಕ್ಕೆ ಮನವಿ – ಮಲೆನಾಡ ನಾಯಕರ ಸಾಥ್: ಸಿಗುತ್ತಾ ವಿಶೇಷ ಅನುದಾನ..? – ಒಂದು ಕೋಟಿ ಅನುದಾನ ಮಂಜೂರು ಮಾಡಿದ ಡಿಸಿಎಂ

ತೀರ್ಥಹಳ್ಳಿ: ತೀರ್ಥಹಳ್ಳಿಯ ಐತಿಹಾಸಿಕ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ನಾಡಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳಿಗೆ ಕಂಚಿನ ಈಶ್ವರ ದೇವರ ವಿಗ್ರಹವನ್ನು ಶ್ರೀ ರಾಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೀಡಿ ಗೌರವಿಸಿದೆ.
ಚುನಾವಣೆ ಮುನ್ನ ತೀರ್ಥಹಳ್ಳಿ ಪಟ್ಟಣದ ಆರಾಧ್ಯ ದೈವ ಶ್ರೀ ರಾಮೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದ ಸಿಎಂ ಡಿ.ಕೆ.ಶಿವಕುಮಾರ್ ಕಂಬದ ಗಣೇಶ ಮತ್ತು ರಾಮೇಶ್ವರ ದೇವಾಲಯಕ್ಕೆ ಹರಕೆ ಹೇಳಿಕೊಂಡಿದ್ದರು. ಇದೀಗ ಹರಕೆ ತೀರಿಸಿದ್ದಾರೆ.

ದೇವಸ್ಥಾನದಲ್ಲಿ ಸನ್ಮಾನ: 5 ಕೋಟಿ ರೂ. ಅನುದಾನಕ್ಕೆ ಮನವಿ

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹಾಲಿಗೆ ನಾಗರಾಜ್‌ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿಯ ಆಡಳಿತ ಮಂಡಳಿಯ ಸದಸ್ಯರು ಶ್ರೀ ರಾಮೇಶ್ವರ ದೇವಾಲಯಕ್ಕೆ ತಳಿರು ತೋರಣಗಳಿಂದ ಸಿಂಗರಿಸಿ ಮಂಗಳವಾದ್ಯ, ಪೂರ್ಣಕುಂಭದೊಂದಿಗೆ ಸಿ ಎಂ ಗೆ ಸ್ವಾಗತ ಮಾಡಿ ದೇವಸ್ಥಾನಕ್ಕೆ ಕರೆತಂದರು.
ಶ್ರೀ ರಾಮೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ.ಶಿವಕುಮಾರ್ ರವರು ಶ್ರೀ ರಾಮೇಶ್ವರನಿಗೆ ಸಿಎಂ ಹೆಸರಲ್ಲಿ ವಿಶೇಷ ಅರ್ಚನೆ ಮಾಡಲಾಯಿತು. ರಾಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ದೇವಸ್ಥಾನ ಜೀರ್ಣ ಉದ್ಧಾರಕ್ಕೆ ಸುಮಾರು 5 ಕೋಟಿ ರೂಪಾಯಿಗಳ ಅನುದಾನ ಕೋರಿ ಮನವಿ ಪತ್ರವನ್ನು ಸಲ್ಲಿಸಿ ಕಂಚಿನ ಈಶ್ವರ ದೇವರ ವಿಗ್ರಹ ನೀಡಿ ಶಾಲು ಹೊಂದಿಸಿ ಸನ್ಮಾನಿಸಲಾಯಿತು.

ರಾಮೇಶ್ವರ ನಿತ್ಯ ಅನ್ನದಾಸೋಹ ಸಮಿತಿ ವತಿಯಿಂದ ಗೌರವ

ಸಿಎಂ ಭೇಟಿ ಸಂದರ್ಭದಲ್ಲಿ ರಾಮೇಶ್ವರ ನಿತ್ಯ ಅನ್ನದಾಸೋಹ ಸಮಿತಿ ವತಿಯಿಂದ ಡಾ. ಜೀವಂದರ್ ಜೈನ್ ನೇತೃತ್ವದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಆ‌ರ್.ಎಂ.ಮಂಜುನಾಥ್ ಗೌಡ, ಡಾ ಜೀವಂದರ್‌ ಜೈನ್, ರಾಮೇಶ್ವರ ದೇವರ ವ್ಯವಸ್ಥಾಪನಾ ಸಮಿತಿ ಸದಸ್ಯರು, ರಾಮೇಶ್ವರ ದೇವರ ನಿತ್ಯ ಅನ್ನ ಸಂತರ್ಪಣ ಸಮಿತಿಯ ಸದಸ್ಯರು ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜಶೇಖರ ಭಟ್, ಮತ್ತು ರಾಕೇಶ್ ಭಟ್, ಹಾಗೂ ಅರ್ಚಕ ವೃಂದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಒಂದು ಕೋಟಿ ಅನುದಾನ ಮಂಜೂರು ಮಾಡಿದ ಡಿಸಿಎಂ

ಸೆಪ್ಟೆಂಬರ್ 19 ರಂದು ತೀರ್ಥಹಳ್ಳಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀ ಹಾಲಿಗೆ ನಾಗರಾಜ್ ಹಾಗೂ ಸದಸ್ಯರು ಮತ್ತು ಶ್ರೀರಾಮೇಶ್ವರ ಅನ್ನದಾಸೋಹ ಸಮಿತಿಯ ಸದಸ್ಯರು ಹಾಜರಿದ್ದು ಮುಖ್ಯಮಂತ್ರಿಗಳಿಗೆ ಗೌರವ ಸಮರ್ಪಿಸಿದರು. ದೇವಸ್ಥಾನದ ಅಭಿವೃದ್ಧಿಗೆ 5 ಕೋಟಿ ರೂಪಾಯಿಗಳ ಅನುದಾನ ಕಲ್ಪಿಸುವಂತೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಸ್ಥಳದಲ್ಲೇ ಒಂದು ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿ ಅಧಿಕಾರಿಗಳಿಗೆ ಈ ವಿಚಾರವನ್ನು ಫಾಲೊ ಅಪ್ ಮಾಡುವಂತೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೆ ಹಣ ಕಲ್ಪಿಸುವುದಾಗಿ ಸಿಎಂ ಹೇಳಿದರು.
ದೇವಸ್ಥಾನದ ಕೆಲಸಕ್ಕೆ ಅನುದಾನ ಕಲ್ಪಿಸಿದ ಮುಖ್ಯಮಂತ್ರಿಗಳನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಲಿಗೆ ನಾಗರಾಜ್ ಹೃತ್ಪೂರ್ವಕವಾಗಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದ್ದಾರೆ..

Categories
Uncategorized

ಸ್ತ್ರೀ ಸ್ವಸಹಾಯ ಸಂಘಗಳಿಗೆ ಸಾಲ ಕೊಡಲು ಸೊಸೈಟಿ! – 3 ಲಕ್ಷಕ್ಕೂ ಅಧಿಕ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ – ಸ್ವಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟಕ್ಕೂ ವ್ಯವಸ್ಥೆ

ಬೆಂಗಳೂರು: ಮಹಿಳಾ ಸ್ವಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುವ ಸಲುವಾಗಿ ಪ್ರತ್ಯೇಕ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸುವ ಕುರಿತು ಸರ್ಕಾರವು ನಿರ್ಧಾರವನ್ನು ಕೈಗೊಂಡಿದೆ.
ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಮಹಿಳಾ ಸ್ವಸಹಾಯ ಸಂಘಗಳಿದ್ದು, ಅವುಗಳ ಸಬಲೀಕರಣಕ್ಕೆ ತಲಾ 1.50 ಲಕ್ಷ ಬಂಡವಾಳ ನಿಧಿಯನ್ನು ಇರಿಸಲು ನಿರ್ಣಯಿಸಿದೆ. ಇದರೊಂದಿಗೆ ಮಹಿಳಾ ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲು ಕೋ-ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸಲು ಈಗಾಗಲೇ ಅದರ ಕುರಿತ ರೂಪುರೇಷೆಯ ರಚನೆ ಸಂಪೂರ್ಣಗೊಂಡಿದೆ ಎನ್ನುವ ಮಾಹಿತಿ ಲಭಿಸಿದೆ.
ಸ್ವಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟಕ್ಕೂ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲು ಆದೇಶವನ್ನು ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ ಅವರು “ಇನ್ನು ಒಂದು ತಿಂಗಳೊಳಗೆ ಈ ಸಹಕಾರ ಸಂಘ ಕಾರ್ಯಾರಂಭ ಮಾಡಲಿದೆ” ಎಂದು ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ.

Categories
Uncategorized

•ಸುಳ್ಯ: ಕಂಟೈನರ್ ಮತ್ತು ಸ್ಕೂಟಿ ನಡುವೆ ಅಪಘಾತ; ಸವಾರನಿಗೆ ಗಂಭೀರ ಗಾಯ •ಕುಂದಾಪುರ: ಲೋಕಾಯುಕ್ತ ದಾಳಿ •ಉಳ್ಳಾಲ: ನಿಯಂತ್ರಣ ತಪ್ಪಿ ಉರುಳಿದ ಕಾರು •ಮಂಗಳೂರು: ಮೆದುಳು ನಿಷ್ಕ್ರಿಯ; ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ •ಸುಳ್ಯ: ಕಂಟೈನರ್ ಮತ್ತು ಸ್ಕೂಟಿ ನಡುವೆ ಅಪಘಾತ; ಸವಾರನಿಗೆ ಗಂಭೀರ ಗಾಯ

ಸ್ಸುಳ್ಯ: ಕಂಟೈನರ್ ಲಾರಿ ಮತ್ತು ಸ್ಕೂಟರ್ ನಡುವೆ ರಸ್ತೆ ಅಪಘಾತ ಸಂಭವಿಸಿದ ಘಟನೆ, ಬೊಳುಬೈಲ್ ಬಳಿ ನಡೆದಿದೆ. ಪರಿಣಾಮವಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುವನ್ನು ಆಲಂಕಲ್ಯ ರಾಮಕೃಷ್ಣ ಎಂದು ಗುರುತಿಸಲಾಗಿದೆ. ರಾಮಕೃಷ್ಣ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

•ಕುಂದಾಪುರ: ಲೋಕಾಯುಕ್ತ ದಾಳಿ

ಕುಂದಾಪುರ: ಲೋಕಾಯುಕ್ತರು ಗ್ರಾಮ ಪಂಚಾಯಿತಿ ಕಛೇರಿಯ ಮೇಲೆ ದಿಢೀರ್ ದಾಳಿ ನಡೆಸಿದ ಘಟನೆ, ಬೇಳೂರಿನಲ್ಲಿ ನಡೆದಿದೆ. ಕಟ್ಟಡ ಪರವಾನಿಗೆಗಳನ್ನು ನೀಡುವಲ್ಲಿ ವಿಳಂಬ ಮಾಡಿರುವುದು ಸೇರಿದಂತೆ ಹಲವಾರು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಈ ಕ್ರಮವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಡಿವೈಎಸ್ ಪಿ ಹಾಲಮೂರ್ತಿ ರಾವ್ ಮತ್ತು ಇನ್ಸ್ಪೆಕ್ಟರ್ ಮಂಜುನಾಥ್ ಅವರ ನೇತೃತ್ವದ ತಂಡವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ, ಮಾಹಿತಿಗಳನ್ನು ಕಲೆಹಾಕಿದರು ಎನ್ನುವ ಸಂಗತಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸರ್ಕಾರಿ ಸೌಲಭ್ಯ ಒದಗಿಸುವುದಾಗಿ ಪಿಡಿಒ ಅವರು ಸುಮಾರು 400 ಅರ್ಜಿಗಳನ್ನು ಪಡೆದುಕೊಂಡಿದ್ದಾರೆ ಎನ್ನುವುದು ಕೂಡ ಬೆಳಕಿಗೆ ಬಂದಿದೆ. ಸಾರ್ವಜನಿಕರ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ತಂಡವು ಗ್ರಾಮ ಪಂಚಾಯಿತಿ ಮತ್ತು ಕಲ್ಲುಕೋರೆಗಳಿಗೂ ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ವಿವಿಧ ದಾಖಲೆಗಳನ್ನು ಪತ್ತೆಹಚ್ಚಿ ಮಾಹಿತಿಗಳನ್ನು ಸಂಗ್ರಹಿಸಿದರು ಎನ್ನುವ ಮಾಹಿತಿ ಲಭಿಸಿದೆ.

•ಉಳ್ಳಾಲ: ನಿಯಂತ್ರಣ ತಪ್ಪಿ ಉರುಳಿದ ಕಾರು

ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿ, ಕಾರೊಂದು ಉರುಳಿದ ಘಟನೆ, ಗುರುವಾರದಂದು ನಾಟೆಕಲ್ ಬಳಿಯ ಪನೀರು ಚರ್ಚ್ ಸಮೀಪದ ತಿರುವಿನಲ್ಲಿ ನಡೆದಿದೆ. ದೇರಳಕಟ್ಟೆಯಿಂದ ಪನೀರ್ ಮಾರ್ಗವಾಗಿ ಬೀರಿ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರು ಸಮೀಪದ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಒರಗಿ ನಿಂತಿದೆ ಎನ್ನುವ ಮಾಹಿತಿ ಲಭಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿದರು. ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ.

•ಮಂಗಳೂರು: ಮೆದುಳು ನಿಷ್ಕ್ರಿಯ; ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ

ಮಂಗಳೂರು: ಸೆಪ್ಟೆಂಬರ್ 14ರ ಸೋಮವಾರದಂದು ಅಂದರೆ ಗಣೇಶ ಚತುರ್ಥಿಯ ದಿನದಂದು ಬೈಕ್ ಮತ್ತು ಸ್ಕೂಟರ್ ಅಪಘಾತ ನಡೆದಿದ್ದು, ಪರಿಣಾಮವಾಗಿ ಯುವಕನ ಮೆದುಳು ನಿಷ್ಕ್ರಿಯಗೊಂಡಿದೆ ಎನ್ನಲಾಗಿದೆ. ಯುವಕನನ್ನು ಕುತ್ತಾರುವಿನ ಆಯೆರೆಬೆಟ್ಟು ನಿವಾಸಿಯಾದ 24 ವರ್ಷದ ವರ್ಷಿತ್ ಕುಲಾಲ್ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಗಂಭೀರವಾಗಿ ಗಾಯಗೊಂಡಿದ್ದ ವರ್ಷಿತ್ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವರ್ಷಿತ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ವೈದ್ಯರ ಸಲಹೆಯ ಮೇರೆಗೆ ಈಗಾಗಲೇ ಬೇಡಿಕೆ ಇರುವಂತಹ ವರ್ಷಿತ್ ಅವರ ಮೂತ್ರಪಿಂಡ, ಯಕೃತ್ತು, ಹೃದಯ ಮತ್ತು ಶ್ವಾಸಕೋಶಗಳನ್ನು ದಾನ ಮಾಡಲು ಮುಂದಾಗಿದ್ದು, ಮಗನನ್ನು ಕಳೆದುಕೊಳ್ಳುತ್ತಿರುವ ನೋವಿನ ಸಂದರ್ಭದಲ್ಲಿಯೂ ಇತರ ಜೀವಗಳ ಬಗ್ಗೆ ಆಲೋಚಿಸಿ, ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿರುವ ವರ್ಷಿತ್ ಅವರ ಕುಟುಂಬಸ್ಥರ ಈ ಉತ್ತಮ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ವರ್ಷಿತ್ ಅವರ ಅಂಗಾಂಗಗಳನ್ನು ಚಿಕಿತ್ಸೆಯನ್ನು ಪಡೆಯುತ್ತಿರುವ ರೋಗಿಗಳಿಗೆ ಅಳವಡಿಸುವ ಸಲುವಾಗಿ ಝೀರೋ ಟ್ರಾಫಿಕ್ ಮೂಲಕ ಸಂಬಂಧಿತ ಆಸ್ಪತ್ರೆಗಳಿಗೆ ರವಾನಿಸುವ ಪ್ರಕ್ರಿಯೆಯನ್ನು ಕೂಡ ಕೈಗೊಳ್ಳಲಾಯಿತು.

Categories
Uncategorized

ರಾಜ್ಯದಲ್ಲಿ ಈಗ ಚೀನಾ ಅಡಿಕೆ ಹುಷಾರ್! – ರಾಜಧಾನಿ ಬಳಿ ವಿಷಕಾರಿ ಚೀನಾ ನಕಲಿ ಅಡಿಕೆ ವಶ – ಅಡಿಕೆ ಮಾನ ತೆಗೆಯುತ್ತಿರುವ ಹೊರ ವ್ಯಾಪಾರಿಗಳು!

ಕೋಲಾರ/ಶಿವಮೊಗ್ಗ: ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುವಂತಹ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಕೃತಕ ಅಡಿಕೆಗಳನ್ನು ವಶಪಡಿಸಿಕೊಂಡ ಘಟನೆ, ಮುಳಬಾಗಿಲು ತಾಲ್ಲೂಕಿನ ಗಡಿಭಾಗದಲ್ಲಿ ನಡೆದಿದೆ. ಇದೀಗ ಚೀನಾ ಅಡಿಕೆಯು ಅಡಿಕೆಯ ಮಾನ ತೆಗೆಯುತ್ತಿದೆ.
ಕೋಲ್ಕತ್ತಾದಿಂದ ಬೆಂಗಳೂರಿಗೆ ಹತ್ತು ಟನ್ ನಷ್ಟು ಕೃತಕ ಅಡಿಕೆಗಳನ್ನು ಸಾಗಿಸುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ಯಾಂಟರ್ ಅನ್ನು ಅಡ್ಡಗಟ್ಟಿ ಪರಿಶೀಲನೆಯನ್ನು ನಡೆಸಿದಾಗ, ಸುಮಾರು 96 ಮೂಟೆಗಳಷ್ಟು ನಕಲಿ ಅಡಿಕೆ ಕಂಡುಬಂದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕ್ಯಾಂಟರ್ ನ ಚಾಲಕ ಮತ್ತು ಕ್ಲೀನರ್ ಅನ್ನು ಬಂಧಿಸಿದ್ದು, ಈ ಸಂದರ್ಭದಲ್ಲಿ ನಕಲಿ ಅಡಿಕೆಗಳ ಮೂಟೆಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಕ್ಯಾಂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಕಲಿ ಅಡಿಕೆಯಿಂದ ಶುದ್ಧ ಅಡಿಕೆ ಮರ್ಯಾದೆ ಹೋಯ್ತು!

ಸಾಮಾನ್ಯ ಅಡಿಕೆಗಳನ್ನು ಕೊಯ್ದು, ಹಂಡೆಯಲ್ಲಿ ಬೇಯಿಸಿ ನೈಸರ್ಗಿಕವಾಗಿ ತಯಾರಿಸಲಾಗುತ್ತದೆ. ಆದರೆ ನಕಲಿ ಅಡಿಕೆಗಳನ್ನು ತಾಳೆ ಬೀಜಗಳು, ಮರದ ರೆಂಬೆ ಅಥವಾ ಕಾಂಡದ ತಿರುಳುಗಳು ಮತ್ತು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ. ಅಲ್ಲದೆ ಇದಕ್ಕೆ ಬಣ್ಣವನ್ನು ನೀಡುವ ಸಲುವಾಗಿ ನೀಲಿ, ಕೆಂಪು ಮತ್ತು ಹಳದಿ ಬಣ್ಣದ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರು “ಕೋಲಾರದಲ್ಲಿ ನಕಲಿ ಅಡಿಕೆಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ಅಡಿಕೆಯ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನು ಎರಡು ವಾರಗಳಲ್ಲಿ ಪರೀಕ್ಷೆಯ ವರದಿ ಲಭ್ಯವಾಗಲಿದ್ದು, ಕಳಪೆ ಗುಣಮಟ್ಟದ ಅಡಿಕೆಯ ಕುರಿತು ಸ್ಪಷ್ಟನೆ ದೊರೆಯಲಿದೆ” ಎಂದು ತಿಳಿಸಿದ್ದಾರೆ.

Categories
Uncategorized

ಸಿಎಂ ರಂಗು: ಸಾವಿರಾರು ಜನರ ಎದುರು ಡಿಕೆಶಿ ಭಾಷಣ – ರೈತರ ರಕ್ಷಣೆಗಾಗಿ ಜನರ ಮನೆ ಬಾಗಿಲಿಗೆ ಬಂದಿದ್ದೇನೆ – ತೀರ್ಥಹಳ್ಳಿಯಲ್ಲಿ 12 ಸಾವಿರಕ್ಕೂ ಹೆಚ್ಚು ಮಂದಿ ಆಗಮನ – ಟಿ. ಎ. ಪಿ. ಸಿ. ಎಂ. ಎಸ್ ಅಮೃತ ಮಹೋತ್ಸವದಲ್ಲೂ ಭಾಗಿ

ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಡಿಕೆಶಿ ಅವರ ಓಡಾಟ ಇಡೀ ಜಿಲ್ಲೆಯಲ್ಲಿ ಮಿಂಚಿನ ಸಂಚಲನ ಮೂಡಿಸಿದೆ. ಮಂಗಳೂರಿಂದ ತೀರ್ಥಹಳ್ಳಿಗೆ ಬಂದಿಳಿದ ಸಿಎಂ ಅವರನ್ನು ಸ್ಥಳೀಯ ನಾಯಕರು ಮತ್ತು ಅಧಿಕಾರಿಗಳು ಸ್ವಾಗತಿಸಿದರು.
ಹೆಲಿಪ್ಯಾಡ್ ಅಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಸಿಎಂ ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದರು.

ಬೃಹತ್ ವೇದಿಕೆ… 10 ಸಾವಿರಕ್ಕೂ ಹೆಚ್ಚು ಜನ… ಮಳೆ..!!

ತೀರ್ಥಹಳ್ಳಿ: ಕಸ್ತೂರಿ ರಂಗನ್‌ ವರದಿ ಕುರಿತ ಸಂವಾದ ಕಾರ್ಯಕ್ರಮಕ್ಕೆ ತೀರ್ಥಹಳ್ಳಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಶನಿವಾರ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸ್ವಾಗತಿಸಿದರು. ನಂತರ ಹೆಲಿಪ್ಯಾಡ್‌ನಲ್ಲಿ ತಮ್ಮನ್ನು ಸ್ವಾಗತಿಸಿದ ವಿದ್ಯಾರ್ಥಿನಿಯರೊಂದಿಗೆ ಮಾತುಕತೆ ನಡೆಸಿದರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ ಜೊತೆಗಿದ್ದರು. ತೀರ್ಥಹಳ್ಳಿಯಲ್ಲಿಂದು ‘ಕಸ್ತೂರಿ ರಂಗನ್ ವರದಿ’ ವಿಚಾರವಾಗಿ ಸಾರ್ವಜನಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಲವು ಮಹತ್ವದ ವಿಷಯಗಳ ಕುರಿತು ಮಾತನಾಡಿದರು. ಈ ಸಂವಾದ ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ಸಂಸದರಾದ ಬಿ.ವೈ. ರಾಘವೇಂದ್ರ, ಶಾಸಕರಾದ ಶ್ರೀ ಬೇಳೂರು ಗೋಪಾಲಕೃಷ್ಣ, ಅರಗ ಜ್ಞಾನೇಂದ್ರ, ಶಾರದಾ ಪೂರ್ಯನಾಯ್ಕ್, ಎಸ್.ಎನ್. ಚನ್ನಬಸಪ್ಪ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮಂಜುನಾಥ ಗೌಡ, ಭದ್ರಾ ಅಚ್ಚುಕಟ್ಟು ಪ್ರದೇಶ ಪ್ರಾಧಿಕಾರದ ಅಧ್ಯಕ್ಷರಾದ ಅಂಶುಮಂತ್ , ಸೂಡಾ ಅಧ್ಯಕ್ಷರಾದ ಹೆಚ್. ಎಸ್. ಸುಂದರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟಿ.ಎ.ಪಿ.ಸಿ.ಎಂ.ಎಸ್ ಅಮೃತ ಮಹೋತ್ಸವದಲ್ಲಿ ಹಾಜರ್

ರೈತರ ಶ್ರಮ, ಸಹಕಾರ ಕ್ಷೇತ್ರದ ಬದ್ಧತೆ ಹಾಗೂ ಜನರ ವಿಶ್ವಾಸದ ಪ್ರತೀಕವಾಗಿ 75 ವರ್ಷಗಳ ಸುದೀರ್ಘ ಪಯಣವನ್ನು ಪೂರ್ಣಗೊಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ನ್ಯಾಯಯುತ ಬೆಲೆ ಹಾಗೂ ಅಗತ್ಯ ಸಹಕಾರ ಒದಗಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಚಿವರಾದ ಮಧು ಬಂಗಾರಪ್ಪ, ಶಾಸಕರಾದಅರಗ ಜ್ಞಾನೇಂದ್ರ, ಬೇಳೂರು ಗೋಪಾಲ ಕೃಷ್ಣ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್‌, ಸಹಕಾರ ನಾಯಕ ಡಾ. ಆರ್. ಎಂ. ಮಂಜುನಾಥ ಗೌಡ, ಸಂಸ್ಥೆಯ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಯೋಗೇಶ್, ರತ್ನಾಕರ್ ಶೆಟ್ಟಿ, ಹುಲ್ಕುಳಿ ಮಹೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶಿವಮೊಗ್ಗ ಶಾಸಕರ ಅಪಸ್ವರ: ಸಮಾಧಾನ!

ಕಸ್ತೂರಿ ರಂಗನ್ ವರದಿ ಕುರಿತು ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡನ್ನ ಸಂಪೂರ್ಣವಾಗಿ ಹಾಡುವಂತೆ ಗಮನಸೆಳೆದ ಶಾಸಕ ಚೆನ್ನಬಸಪ್ಪ ಅವರ ಮಾತಿಗೆ ವಿರೋಧ ವ್ಯಕ್ತವಾಯಿತು.

ಜೀರೋ ಟ್ರಾಫಿಕ್… ಕಾಂಗ್ರೆಸ್ ನಾಯಕರ ಬಿಡಲಿಲ್ಲ ಎಂಬ ಗಲಾಟೆ

ತೀರ್ಥಹಳ್ಳಿ ಹೆಲಿಪ್ಯಾಡ್ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ
ಸಿಎಂ ಕಾರ್ಯಕ್ರಮಕ್ಕೆ ಒಳಗೆ ಬಿಡಲ್ಲ ಎಂದ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ ಘಟನೆ ನಡೆದಿದೆ.

Categories
Uncategorized

•ಕಾಪು: ಇನ್ನೋವಾ ಬಿಟ್ಟು ಪರಾರಿ; ಸಗಣಿಯಿಂದ ಪತ್ತೆಯಾದ ಸುಳಿವು •ಬಂಟ್ವಾಳ: ಅಕ್ರಮ ಕೆಂಪುಕಲ್ಲು ಸಾಗಾಟ; ಪ್ರಕರಣ ದಾಖಲು •ಕುಂದಾಪುರ: ಯುವತಿ ಆತ್ಮಹತ್ಯೆ •ಪುತ್ತೂರು: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ; ಗಂಭೀರ ಗಾಯ

ಕಾಪು: ಇನ್ನೋವಾ ಕಾರೊಂದು ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ, ಬುಧವಾರದಂದು ಪೈಯ್ಯಾರು ಮಲೆ ಜುಮಾದಿ ಸಾನದ ಬಳಿ ನಡೆದಿದೆ. ಅಲ್ಲದೆ ಇನ್ನೋವಾ ಕಾರಿನ ಎಡ ಮತ್ತು ಬಲಭಾಗಗಳು ನುಜ್ಜುಗುಜ್ಜಾಗಿದ್ದು, ಕಾರಿನ ಗಾಜುಗಳು ಕೂಡ ಒಡೆದು ಹೋಗಿರುವುದು ಹಾಗೂ ಕಾರಿನ ಮುಂಭಾಗ ಮತ್ತು ಹಿಂಭಾಗದ ನಂಬರ್ ಪ್ಲೇಟ್ ಗಳನ್ನು ಕಳಚಿಡಲಾಗಿದ್ದು, ಢಿಕ್ಕಿಯಲ್ಲಿ ಹೊನ್ನಾವರ ಹಾಗೂ ಮಧ್ಯಭಾಗದ ಸೀಟಿನಲ್ಲಿ ಸಾಗರದ ನೋಂದಣಿಯನ್ನು ಹೊಂದಿರುವಂತಹ ನಂಬರ್ ಪ್ಲೇಟ್ ಗಳು ದೊರಕಿರುವುದು ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ದನಗಳ್ಳತನಕ್ಕೆ ಸಂಬಂಧಿಸಿದಂತೆ ಸುಳಿವು ಬಂದ ಹಿನ್ನೆಲೆಯಲ್ಲಿ ಪೊಲೀಸರು ಶಿರೂರು ಟೋಲ್ ಬಳಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಅವರನ್ನು ತಪ್ಪಿಸಿಕೊಂಡು ಇನ್ನೋವಾ ಕಾರೊಂದು ಮಂಗಳವಾರ ತಡರಾತ್ರಿ ಪರಾರಿಯಾಗಿತ್ತು. ನಿನ್ನೆ ದೊರೆತಿರುವ ಇನ್ನೋವಾ ಕಾರು ಇದೇ ಆಗಿದೆ. ಅಂದರೆ ದನಗಳ್ಳತನ ಮಾಡುತ್ತಿರುವ ಆರೋಪಿಗಳು ಪೈಯ್ಯಾರು, ಬೆಳಪು ಗ್ರಾಮದವರಾಗಿದ್ದಾರೆ. ಆದರೆ, ಶಿರೂರಿನಿಂದ 100 ಕಿಲೋಮೀಟರ್ ಇರುವ ಪೈಯ್ಯಾರಿಗೆ ಹೋಗಲು ಈ ಮಾರ್ಗವನ್ನು ಸೂಚಿಸಿದವರು ಯಾರು ಎನ್ನುವ ಪ್ರಶ್ನೆ ಎದುರಾಗಿದ್ದು, ಸ್ಥಳೀಯರ ಸಹಕಾರವಿಲ್ಲದೆ ಈ ಜಾಗದಲ್ಲಿ ಕಾರನ್ನು ನಿಲ್ಲಿಸಿ ಪರಾರಿಯಾಗಲು ಸಾಧ್ಯವಿಲ್ಲ ಎಂದು ಪೊಲೀಸರು ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕಳತ್ತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ್ ಶೆಟ್ಟಿ ಪೈಯ್ಯಾರು, ಮಾಜಿ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಗುರ್ಮೆ, ರಾಜೇಶ್ ಕುಲಾಲ್, ರಾಜ್ ಕಿರಣ್ ಶೆಟ್ಟಿ, ಸಂತೋಷ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದರು ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಕಾರಿನ ಎಡಭಾಗದ ಹಿಂಬದಿಯ ಚಕ್ರಕ್ಕೆ ಮಾತ್ರ ಸಗಣಿ ತಾಗಿರುವುದು ಇದನ್ನು ದನಗಳ್ಳತನಕ್ಕೆ ಬಳಸಿದ ಕಾರು ಎನ್ನುವುದನ್ನು ಸ್ಪಷ್ಟಪಡಿಸಿದ. ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಬಂಟ್ವಾಳ: ಅಕ್ರಮ ಕೆಂಪುಕಲ್ಲು ಸಾಗಾಟ; ಪ್ರಕರಣ ದಾಖಲು

ಬಂಟ್ವಾಳ: ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ, ಕರೋಪಾಡಿ ಎನ್ನುವಲ್ಲಿ ನಡೆದಿದೆ. ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪುಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ವಿಟ್ಲ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ಅವರ ನೇತೃತ್ವದಲ್ಲಿ ಪೊಲೀಸರ ತಂಡವು ಕರೋಪಾಡಿ ಗ್ರಾಮದ ನೆಲ್ಲಿಕಟ್ಟೆ ಜಂಕ್ಷನ್ ಬಳಿ ಕೇರಳ ಕಡೆಯಿಂದ ಕನ್ಯಾನ ಕಡೆಗೆ ತೆರಳುತ್ತಿದ್ದ ಲಾರಿಯನ್ನು ತಡೆಗಟ್ಟಿದ್ದಾರೆ. ಪರಿಶೀಲನೆಯನ್ನು ನಡೆಸಿದಾಗ ಪರವಾನಿಗೆ ಇಲ್ಲದೆ ಕೆಂಪುಕಲ್ಲುಗಳನ್ನು ಸಾಗಾಟ ಮಾಡುತ್ತಿರುವುದು ದೃಢಪಟ್ಟಿದೆ.

•ಕುಂದಾಪುರ: ಯುವತಿ ಆತ್ಮಹತ್ಯೆ

ಕುಂದಾಪುರ: ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ಬುಧವಾರದಂದು ವಕ್ವಾಡಿ ಗ್ರಾಮದ ತೆಂಕಬೆಟ್ಟು ಎನ್ನುವಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸವಿತಾ ಎಂದು ಗುರುತಿಸಲಾಗಿದೆ. ಸವಿತಾ ಅವರು ಕಳೆದ ಹತ್ತು ವರ್ಷಗಳಿಂದ ಬೆನ್ನುನೋವು ಮತ್ತು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರೂ ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ ಎನ್ನಲಾಗಿದೆ. ಅನಾರೋಗ್ಯದ ಕಾರಣದಿಂದಾಗಿ ಬೇಸತ್ತ ಸವಿತಾ ಅವರು ಸೆಪ್ಟೆಂಬರ್ 15ರ ನಡುರಾತ್ರಿಯಲ್ಲಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಬುಧವಾರದಂದು ಸವಿತಾ ಅವರು ಎಲ್ಲಿಯೂ ಕಾಣಿಸದಿದ್ದಾಗ ಅವರ ಕುಟುಂಬದವರು ಮನೆಯ ತುಂಬಾ ಹುಡುಕಾಟ ನಡೆಸಿದಾಗ ಮಹಡಿಯ ಕೋಣೆಯೊಂದರಲ್ಲಿ ಮಲಗಿರುವ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸವಿತಾ ಅವರ ಬಾಯಿ ಮತ್ತು ಮೂಗಿನಿಂದ ನೊರೆ ಮಿಶ್ರಿತ ದ್ರವ ಹೊರಬರುತ್ತಿತ್ತು ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಅವರ ಪಕ್ಕದಲ್ಲಿ ವಿಷದ ಬಾಟಲಿ ಇರುವುದನ್ನು ಗಮನಿಸಿದ ಮನೆಯವರು, ಸವಿತಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ದೃಢಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸವಿತಾ ಅವರ ತಂದೆ ಮಂಜಯ್ಯ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದು. ಅದರ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಪುತ್ತೂರು: ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿ; ಗಂಭೀರ ಗಾಯ

ಪುತ್ತೂರು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಘಟನೆ, ಕಬಕ ಗ್ರಾಮದ ಮುರದ ಬಳಿ ನಡೆದಿದೆ. ವ್ಯಕ್ತಿಯನ್ನು ಸಂಪ್ಯ ನಿವಾಸಿ ಶುಭಕರ ನಾಯಕ್ ಎಂದು ಗುರುತಿಸಲಾಗಿದೆ. ಶುಭಕರ ಅವರು ರಸ್ತೆಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಶೇಖರ್ ಎನ್ನುವ ವ್ಯಕ್ತಿಯು ತನ್ನ ಬೈಕ್ ನಲ್ಲಿ ಕಬಕ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದಾಗ ಅವರಿಗೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಶುಭಕರ ಅವರನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರು ಎನ್ನುವ ಮಾಹಿತಿ ಲಭಿಸಿದೆ.‌ ಘಟನೆಗೆ ಸಂಬಂಧಿಸಿದಂತೆ ಶುಭಕರ ಅವರ ಪುತ್ರ ವಿಜಯ್ ನಾಯಕ್ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

Categories
Uncategorized

ನಟ ಅನಂತ್ ನಾಗ್ ಅವರಿಗೆ ಒಲಿದ ದಾದಾ ಸಾಹೇಬ್ ಫಾಲ್ಕೆ – ಕನ್ನಡದ ಹಿರಿಯ ನಟನಿಗೆ ರಾಷ್ಟ್ರ ಮಟ್ಟದ ಗೌರವ – ರಂಗ ಭೂಮಿಯಿಂದ ಸಿನಿಮಾ… ಸಾಧನೆಯ ಪಯಣ

ಬೆಂಗಳೂರು: ಸೌಮ್ಯ ನಟನೆ, ಹಾಸ್ಯದೊಂದಿಗೆ ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದ್ದು, ಕನ್ನಡಕ್ಕೆ ಇದು ದೊಡ್ಡ ಮನ್ನಣೆಯಾಗಿದೆ.
ಸೆಪ್ಟೆಂಬರ್ 16ರ ಬುಧವಾರದಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲೇ ಚಿತ್ರರಂಗದ ಅನುಭವ, ವಿಭಿನ್ನ ಶೈಲಿಯ ಅಭಿನಯ ಮತ್ತು ಅವರ ಕಲಾಸೇವೆಯನ್ನು ಗುರುತಿಸಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಬೇಕೆಂಬ ಆಗ್ರಹ ಹಲವಾರು ಕಡೆಯಿಂದ ಕೇಳಿಬಂದಿತ್ತು. ಇದಕ್ಕೆ ಪ್ರತಿಫಲವಾಗಿ ಇತ್ತೀಚೆಗೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಒಲಿದಿತ್ತು.‌ ಇದೀಗ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಕೂಡ ಅನಂತನಾಗ್ ಅವರಿಗೆ ಸಂದಿರುವುದು ಅವರ ಅಭಿಮಾನಗಳಿಗೆ, ಚಿತ್ರರಸಿಕರಿಗೆ ಅದರಲ್ಲೂ ಕನ್ನಡಿಗರಿಗೆ ಸಂತೋಷವನ್ನುಂಟು ಮಾಡಿದೆ.
1995ರಲ್ಲಿ ವರನಟ, ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ ಈ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇದಾದ 31 ವರ್ಷಗಳ ಬಳಿಕ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿಯು ಒಲಿಯುವ ಮೂಲಕ ಕನ್ನಡಿಗರಲ್ಲಿ ಮತ್ತೊಮ್ಮೆ ಹೆಮ್ಮೆಯನ್ನುಂಟು ಮಾಡಿದೆ. ಇದೇ ತಿಂಗಳ 4ರಂದು ಅವರು ತಮ್ಮ 78ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಗೌರಿ ಗಣೇಶ, ಗಣೇಶನ ಮದುವೆ, ಗಣೇಶ ಸುಬ್ರಹ್ಮಣ್ಯದಂತಹ ಗಣೇಶ ಸರಣಿಯ ಚಿತ್ರಗಳ ನಾಯಕನಟರಾಗಿರುವ ಅನಂತ್ ನಾಗ್ ಅವರಿಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿಯೇ ಅವರ ಕಲಾಸೇವೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದು ಬಂದಿರುವುದು ಕಾಕತಾಳೀಯವಾಗಿದೆ. ಮುಂಬೈನ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಅನಂತ್ ನಾಗ್ ಅವರು ಮೊದಲಿಗೆ ಹಿಂದಿ, ಮರಾಠಿ ನಾಟಕಗಳಲ್ಲಿ ಅಭಿನಯಿಸಿದರು. 1973ರಲ್ಲಿ ಬಿಡುಗಡೆಯಾದ ‘ಸಂಕಲ್ಪ’ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕ ನಟರಾಗಿ ಚಂದನವನವನ್ನು ಪ್ರವೇಶಿಸಿದರು. ಕನ್ನಡ ಅಷ್ಟೇ ಅಲ್ಲದೆ ಹಿಂದಿ ಚಿತ್ರರಂಗದಲ್ಲೂ ತಮ್ಮನ್ನು ಗುರುತಿಸಿಕೊಂಡ ಅನಂತ್ ನಾಗ್ ಅವರು ಶ್ಯಾಮ್ ಬೆನಗಲ್, ಶಬಾನಾ ಆಜ್ಮಿ ಸೇರಿದಂತೆ ಹಲವು ದಿಗ್ಗಜ ನಿರ್ದೇಶಕರೊಟ್ಟಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರದು. ಅವರ ಮೊದಲ ಹಿಂದಿ ಸಿನಿಮಾ ‘ಅಂಕುರ್’ ಗೆ ಮೂರು ರಾಷ್ಟ್ರ ಪ್ರಶಸ್ತಿಗಳು ಲಭಿಸಿತು. ಅನಂತ್ ನಾಗ್ ಅವರು ಕೇವಲ ನಟರಾಗಿ ಅಷ್ಟೇ ಅಲ್ಲದೆ ರಾಜಕಾರಣಿಯಾಗಿ ಕೂಡ ಗುರುತಿಸಿಕೊಂಡಿದ್ದು, 1988ರಿಂದ 1994ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ನಾಮನಿರ್ದೇಶಕ ಸದಸ್ಯರಾಗಿ ಕೂಡ ಗುರುತಿಸಿಕೊಂಡಂತವರು. 1994ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಜಯಗಳಿಸುವ ಮೂಲಕ ವಿಧಾನಸಭೆಯನ್ನು ಪ್ರವೇಶಿಸಿದರು. ಬಳಿಕ ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ಸಚಿವರಾಗಿ ಕೂಡ ಕಾರ್ಯನಿರ್ವಹಿಸಿದರು. ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಕೋಟ್ಯಂತರ ಅಭಿಮಾನಿಗಳನ್ನು ಅನಂತನಾಗ್ ಅವರು ಹೊಂದಿದ್ದಾರೆ.

Categories
Uncategorized

ಸಣ್ಣ ಉದ್ಯಮ ಸಾಯುತ್ತಿದೆ ಹುಷಾರು..! – ಉದ್ಯಮ ಸಾಯಿಸುತ್ತಿರುವ ಕೇಂದ್ರ, ರಾಜ್ಯ ಸರ್ಕಾರಗಳು – ದಿನಕ್ಕೊಂದು ನಿಯಮ: ವ್ಯಾಪಾರಿಗಳ ಕಷ್ಟ ಕೇಳೋರು ಯಾರು…? – ಕೇಂದ್ರ, ರಾಜ್ಯ ಸರ್ಕಾರಗಳ ನಿಯಮಗಳಿಂದ ಉದ್ಯಮ ಕಷ್ಟ ಕಷ್ಟ

ಬೆಂಗಳೂರು: ಕಳೆದ 10 ವರ್ಷಗಳಿಂದ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸಣ್ಣ ಉದ್ಯಮಗಳು ಸಾಯುತ್ತಿವೆ. ಸ್ಟಾರ್ಟ್ ಅಪ್ ಮಾಡಲು ಯುವ ಜನ ಹಿಂದೇಟು ಹಾಕುತ್ತಿದ್ದಾರೆ. ಕಾರಣ ಸರ್ಕಾರಗಳ ಎಡ ಬಿಡಂಗಿ ನಿಯಮಗಳು.
ಯಾರನ್ನೋ ಕಟ್ಟಿ ಹಾಕಲು ಯಾವುದೊ ರಾಜಕೀಯ ತೆವಲಿಗೆ ಸಾವಿರಾರು ಉದ್ಯಮಗಳು ಇದೀಗ ಮುಚ್ಚುವ ಹಂತದಲ್ಲಿವೆ.
ಮೊದಲಿಗೆ 10 ಲಕ್ಷದವರೆಗಿನ ಔದ್ಯಮಿಕ ಸಾಲಕ್ಕೆ CGTMSE ಫೀ ಹಾಕಲಾಯಿತು. ವ್ಯಾಪಾರಸ್ಥರಿಗೆ ಪ್ರತಿ ವರ್ಷ ಹೊರೆ ಅನಿಸಿದರೂ ಗತಿಯಿಲ್ಲದೆ ಸುಧಾರಿಸಿಕೊಂಡರು. ಆಮೇಲೆ GST ಜಾರಿಗೆ ತಂದು ಮತ್ತೊಮ್ಮೆ ಉಸಿರು ನಿಲ್ಲಿಸಲಾಯಿತು. ನ್ಯಾಯಯುತವಾಗಿ ಉದ್ಯಮ ಮಾಡಲು ದಾಖಲಾತಿ ಮಾಡಿ ಮಾಡಿ ಸಾಕಾಗಿ ಹೋಯಿತು. ಹೊಟ್ಟೆಪಾಡಿಗಾಗಿ ಒಂದಷ್ಟು ವ್ಯಾಪಾರಿಗಳು ಉಸಿರಾಟಕ್ಕೂ ತೆರಿಗೆ ಕಟ್ಟತೊಡಗಿದರು. ಉಸಿರಾಡದೆ ಇರಲಾಗುವುದಿಲ್ಲ ಎನ್ನುವವರು ಅಂಗಡಿ ಬಾಗಿಲು ಮುಚ್ಚಿ ಮತ್ತೇನೋ ಕೆಲಸ ಮಾಡಲು ತೊಡಗಿದರು.
ನೋಟ್ ಬ್ಯಾನ್ ಒಂದಷ್ಟು ಆರ್ಥಿಕತೆ ಹಿನ್ನಡೆ ಸಾಧಿಸಿತು.
ಕರೋನಾ ಲಕ್ಷ ಲಕ್ಷ ಉದ್ಯಮಿಗಳ ಅಂಗಡಿಗಳ ಬಾಗಿಲು ಹಾಕಿಸಿತು. ಸಾವಿರಾರು ಜನರ ಜೀವ, ಜೀವನ ತೆಗೆಯಿತು. ಆದರೂ ಸರ್ಕಾರಗಳು ಕಣ್ಣು ತೆರೆಯಲಿಲ್ಲ.
ಈಗ 2000 ರೂಪಾಯಿಗಿಂತ ಮೇಲ್ಪಟ್ಟ UPI ವ್ಯವಹಾರದ ಮೇಲೆ ಮತ್ತೆ ಶುಲ್ಕ ವಿಧಿಸಲಾಗುತ್ತಿದೆ. ಇಲ್ಲಿ 2000 ರೂಪಾಯಿ ವ್ಯವಹಾರದ ಮೊತ್ತವೇ ವಿನಃ ಆ ವ್ಯವಹಾರದಿಂದ ವ್ಯಾಪಾರಿಗೆ ಆಗುತ್ತಿರುವ ಲಾಭ ಅಲ್ಲ ಎಂಬುದನ್ನ ಗಮನಿಸಬೇಕಾದದ್ದು ಮುಖ್ಯ. ಆ ವ್ಯವಹಾರದಿಂದ ಆಗುತ್ತಿರುವ ಲಾಭ 10-20 ರೂಪಾಯಿಯೂ ಇರಬಹುದು, ಅದರಲ್ಲೂ ಮತ್ತೆ ಕಡಿತವಾಗುತ್ತದಾದರೆ ಅದನ್ನ ಗ್ರಾಹಕರ ಮೇಲೆ ಹಾಕದೆ ವ್ಯಾಪಾರಿಗೆ ಬೇರೆ ದಾರಿ ಇರುವುದಿಲ್ಲ. ಆದರೆ ಇದನ್ನು ಪ್ರಶ್ನೆ ಮಾಡದಷ್ಟು ರಾಜಕೀಯ ವ್ಯೂಹಕ್ಕೆ ಜನ ಸಿಲುಕಿದ್ದಾರೆ. ಉದ್ಯಮ ಮುಚ್ಚಿದರೆ ಉದ್ಯೋಗ ಸೃಷ್ಟಿ ಎಲ್ಲಿ ಎಂಬ ಕಾಮನ್ ಸೆನ್ಸ್ ಕೂಡ ಆಳುವರಿಗಿಲ್ಲ.
ಸರ್ಕಾರಗಳ ಎಲ್ಲಾ ನಿಯಮಗಳಿಂದ ಜನಸಾಮಾನ್ಯರಿಗೆ ಯಾವ ನಷ್ಟವೂ ಇಲ್ಲ ಎಂಬ ಸರ್ಕಾರಗಳ ಹಸೀ ಸುಳ್ಳನ್ನ ಜನ ನಂಬಿದ್ದಾರೆ.
ನೇಪಾಳದಂತಹ ದಂಗೆ ಇಲ್ಲಿ ಆದ್ರೂ ಅಚ್ಚರಿ ಇಲ್ಲ. ಯಾವ ಪಕ್ಷ, ಯಾವ ಸರ್ಕಾರ ಅನ್ನೋಕಿಂತ ಇಲ್ಲಿ ಜನ ಹಿತ ಮುಖ್ಯ. ಉದ್ಯಮ ಉಳಿಯಬೇಕು, ಉದ್ಯೋಗ ಸೃಷ್ಟಿ ಆಗಲೇಬೇಕು. ದೇಶದ ಸಂಪತ್ತು ಯುವ ಶಕ್ತಿಯನ್ನು ದೇಶ, ರಾಜ್ಯ ಬಳಸಿಕೊಳ್ಳಲೇಬೇಕು.

Categories
Uncategorized

ಮಳೆ ಇಲ್ಲ.. ಇನ್ನು ಕರೆಂಟು, ನೀರು ಇಲ್ಲ?! – ಮಳೆ ಇಲ್ಲದೆ ಬಿರುಕು ಬಿಡುತ್ತಿರುವ ಭೂಮಿ – ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಶುರು: ವಿದ್ಯುತ್ ಕಟ್ – ರೈತರ ಬದುಕು ಈಗ ಸಂಕಷ್ಟದಲ್ಲಿ… ದೇವರೇ ಕಾಪಾಡು!

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ ಕೊರತೆ ಎದುರಾಗಿದ್ದು ಭರದ ಛಾಯೆ ಆವರಿಸಿದೆ. ಮಳೆಗಾಲದಲ್ಲೇ ಎದುರಾದ ಬಿಸಿಲ ಬೇಗೆ ಕಾರಣ ಮಳೆ ಕೊರತೆಯಿಂದ ನೀರು ಮೂಲ ಸಂಪೂರ್ಣ ಇಳಿಮುಖವಾಗಿದೆ.
ರೈತರಿಗೆ ಮಳೆ ಇಲ್ಲದೆ ಸಾಕಷ್ಟು ಸಂಕಷ್ಟ ಎದುರಾಗಿದ್ದು ಜೀವನ ಅಯೋಮಯವಾಗಿದೆ.
ಮಳೆಗಾಲದಲ್ಲಿ ಈಗ ಬೇಸಿಗೆಯ ಅನುಭವ. ಮಳೆಗಾಲ ಮುಗಿಯುವ ಮುನ್ನವೆ ಚಳಿಗಾಲ ಆರಂಭಕ್ಕೆ ಮೊದಲೇ ಬೇಸಿಗೆ ಎದುರಾಗಿದೆ. ಬರಗಾಲದಲ್ಲಿ ಕೆಂಡದಂತಹ ಬಿಸಿಲು ವಾತಾವರಣದ ಬಿಸಿ ಏರಿಸಿದೆ. ಸಾಮಾನ್ಯವಾಗಿ ಮಲೆನಾಡಿನಲ್ಲಿ ದೀಪಾವಳಿವರೆಗೆ ಜೋರು ಮಳೆ ಸುರಿಯುತ್ತದೆ. ದೀಪಾವಳಿ ಬಳಿಕ ಆರಂಭವಾಗುವ ಅಡಿಕೆ ಕೊಯ್ಲಿಗೂ ಅವಕಾಶ ನೀಡದೆ ಮಳೆ ಸುರಿದ ಉದಾಹರಣೆಗಳಿವೆ. ಹಳ್ಳ ಮತ್ತು ನದಿಗಳಲ್ಲಿ ಡಿಸೆಂಬರ್‌ ವರೆಗೆ ಅಧಿಕ ಹರಿವು ಇರುವುದರಿಂದ ನೀರಿನಮಟ್ಟ ಸ್ಥಿರವಾಗಿರುತ್ತದೆ. ಆದರೆ, ಈ ವರ್ಷ ಗಣೇಶ ಹಬ್ಬಕೂ ಮುನ್ನವೆ ಮಳೆ ಮಾಯವಾಗಿ ನೆಲ ಬಿರಿಯಲಾರಂಭಿಸಿದೆ. ಇನ್ನು ಕರಾವಳಿ, ಮಧ್ಯ ಕರ್ನಾಟಕದಲ್ಲೂ ಇದೆ ವಾತಾವರಣ ಇದೆ.

ರೈತರ ಬದುಕು ಬಿಸಿಲಲ್ಲಿ ಸುಟ್ಟು ಹೋಗುತ್ತಿದೆ…

ಮಳೆಯನ್ನೇ ನಂಬಿ ಭತ್ತ ನಾಟಿ ಮಾಡಿದವರ ಬದುಕು ಈಗ ಆತಂಕಕ್ಕೀಡಾಗಿದೆ. ಡಿಸೆಂಬರ್‌ನಲ್ಲಿ ಕಾಣುತ್ತಿದ್ದ ಪರಿಸ್ಥಿತಿ ಮೂರು ತಿಂಗಳು ಮೊದಲೇ ಸೆಪ್ಟೆಂಬರ್‌ ಮೊದಲ ವಾರವೇ ಕಾಣಿಸಿಕೊಂಡಿದೆ.
ಬೆಳೆ ಬೆಳೆದ ರೈತರು ಆಕಾಶದತ್ತ ನೋಡುವ ಪರಿಸ್ಥಿತಿ ಬಂದಿದೆ.
ಎಲ್ಲ ಬೆಳೆಗಳಿಗೂ ನೀರು ಬೇಕಾಗಿದೆ. ಇನ್ನೊಂದು ವಾರ ಮಳೆ ಬರದೆ ಹೋದಲ್ಲಿ ರೈತರು ಬೆಳೆಗಾಗಿ ಹಾಕಿದ ಶ್ರಮ, ಬಂಡವಾಳ ಎಲ್ಲವೂ ಕೂಡ ಸುಟ್ಟು ಹೋಗುತ್ತದೆ.

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಶುರು: ವಿದ್ಯುತ್ ಕಟ್!

ರಾಜ್ಯದಲ್ಲಿ ಮಳೆ ಕೊರತೆ ನಡುವೆ ಇದೀಗ ವಿದ್ಯುತ್ ಲೋಡ್ ಶೆಡ್ಡಿಂಗ್ ಈಗ ತಲೆ ಬಿಸಿಗೆ ಕಾರಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆಯ ಕೊರತೆಯಿಂದಾಗಿ ರಾಜ್ಯಾದ್ಯಂತ ವಿದ್ಯುತ್ ಬಳಕೆ ಹೆಚ್ಚಾಗಿದ್ದು, ಈಗ ಸರ್ಕಾರ ಉಷ್ಣ ವಿದ್ಯುತ್‌ ಉತ್ಪಾದನೆ ಮೊರೆ ಹೋಗಿದೆ. ಸಮಸ್ಯೆ ಸರಿ ಹೋಗಲು 10 ರಿಂದ 15 ದಿನವಾಗಬಹುದು.ಹಾಗಾಗಿ ಬೆಳಗ್ಗೆ 10:00 AM to 4:00 PM ಸಮಯದಲ್ಲಿ 3 ಫೇಸ್ ವಿದ್ಯುತ್‌ ಪ್ರಸಾರ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದೆ.