ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ತಹಶೀಲ್ದಾರರ ಬೊಲೆರೋ ವಾಹನಕ್ಕೆ ಐ20 ಕಾರೊಂದು ಡಿಕ್ಕಿ ಹೊಡೆದ ಘಟನೆ ಮಂಗಳವಾರದಂದು ಶಿವಮೊಗ್ಗದ ನೆಹರೂ ರಸ್ತೆಯಲ್ಲಿ ನಡೆದಿದೆ.
ತಹಶೀಲ್ದಾರರ ವಾಹನಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ಐ20 ಕಾರು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದೆ ಎನ್ನಲಾಗಿದೆ. ಆಗ ಸ್ಥಳೀಯರು ಅಲ್ಲಿಗೆ ಧಾವಿಸಿದ್ದು, ಐ20 ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಪರಿಣಾಮವಾಗಿ ಕಾರಿನ ಚಾಲಕನ ಮೂಗಿನಿಂದ ರಕ್ತ ಸುರಿದಿದ್ದು, ಕಾರಿನಿಂದ ಕೆಳಗಿಳಿಯಲು ಒಪ್ಪದೆ ತನ್ನ ಮೇಲೆ ಹಲ್ಲೆ ನಡೆಸಿದವರನ್ನು ಠಾಣೆಗೆ ಕರೆದೊಯ್ಯಬೇಕೆಂದು ಆಗ್ರಹಿಸಿದ್ದಾನೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಐ20 ಕಾರು ಚಾಲಕನನ್ನು ಸಮಾಧಾನಪಡಿಸಿ, ಆತನನ್ನು ಸಮೀಪದ ಜಯನಗರ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ. ಪರಿಶೀಲನೆಯ ಸಂದರ್ಭದಲ್ಲಿ ಕಾರು ಚಾಲಕನು ಕಂಠಪೂರ್ತಿ ಕುಡಿದು ಕಾರು ಚಲಾಯಿಸುತ್ತಿದ್ದ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.
•ಶೃಂಗೇರಿ: ತಾಲ್ಲೂಕು ಪಂಚಾಯಿತಿ ಇಓ ಮೇಲೆ ಮುಖಂಡನ ಹಲ್ಲೆ
ಶೃಂಗೇರಿ: ತಾಲ್ಲೂಕು ಪಂಚಾಯಿತಿಯ ಇಓ ಸುದೀಪ್ ಅವರ ಮೇಲೆ ಕೊಪ್ಪ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಕುಕ್ಕುಡಿಗೆ ರವೀಂದ್ರ ಅವರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸೆಪ್ಟೆಂಬರ್ 19ರ ಶನಿವಾರದಂದು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ, ಸಭೆಯ ಬಳಿಕ ಸುದೀಪ್ ಅವರು ತಮ್ಮ ಕರ್ತವ್ಯವನ್ನು ಮುಗಿಸಿ ಹೇರೂರಿನ ನವರತ್ನ ಗಾರ್ಡನ್ ಹೊಟೇಲ್ ಗೆ ಇತರ ಸಿಬ್ಬಂದಿಗಳೊಂದಿಗೆ ಊಟಕ್ಕೆ ತೆರಳಿದ್ದಾರೆ. ಸುದೀಪ್ ಅವರು ಊಟವನ್ನು ಮುಗಿಸಿ ಹೊಟೇಲ್ ನಿಂದ ಹೊರಬಂದಾಗ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಕುಕ್ಕುಡಿಗೆ ರವೀಂದ್ರ ಅವರು ಸುದೀಪ್ ಅವರನ್ನು ಆಡ್ಡಗಟ್ಟಿ ಹಲ್ಲೆ ನಡೆಸುವುದರ ಜೊತೆಗೆ, ಜೀವ ಬೆದರಿಕೆಯನ್ನು ಸಹ ಹಾಕಿದ್ದಾರೆ ಎನ್ನಲಾಗಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಸುದೀಪ್ ಅವರನ್ನು ಬಾಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುದೀಪ್ ಅವರು ಪೊಲೀಸರಿಗೆ ದೂರು ನೀಡಿದ್ದು ತಾಲ್ಲೂಕು ಪಂಚಾಯಿತಿ ಇಓ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಇಲ್ಲಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿಕೊಳ್ಳುವಂತೆ ಬಲವಂತಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಸುದೀಪ್ ಅವರು ವಿನಾಕಾರಣ ಆರೋಪಿಸಿದ್ದಾರೆ ಎಂದು ಹೇರೂರು ಶಾಂತಿಪುರದ ಕಾಂಗ್ರೆಸ್ ಮುಖಂಡರಾದ ನಾಗೇಶ್ ಅಮೀನ್ ಅವರು ಪ್ರತಿದೂರನ್ನು ನೀಡಿದ್ದಾರೆ. ಎರಡೂ ದೂರುಗಳ ಆಧಾರದ ಮೇಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಶೃಂಗೇರಿ ತಾಲ್ಲೂಕು ಇಓ ಸುದೀಪ್ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲ್ಲೂಕು ಪಂಚಾಯಿತಿಗಳ ಇಓಗಳು, ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಕಾರ್ಯದರ್ಶಿಗಳು ಸೋಮವಾರ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
•ಭದ್ರಾವತಿ: ಗಣಪತಿ ವಿಸರ್ಜನೆಯ ವೇಳೆ ಯುವಕನ ಸಾವು
ಭದ್ರಾವತಿ: ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಯುವಕನೊಬ್ಬ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರದಂದು ದೇವರಹಳ್ಳಿ ಸಮೀಪದಲ್ಲಿ ನಡೆದಿದೆ. ರಂಗನಾಥಪುರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಗಣೇಶೋತ್ಸವ ಆಚರಣೆಯಲ್ಲಿ ಯುವಕನು ಭಾಗವಹಿಸಿದ್ದು, ಸಂಜೆ ರಂಗನಾಥಪುರದಿಂದ ಆರಂಭಗೊಂಡ ಗಣಪತಿ ವಿಸರ್ಜನಾ ಮೆರವಣಿಗೆಯು ರಾತ್ರಿ ಒಂದು ಗಂಟೆಯ ವೇಳೆಗೆ ದೇವರಹಳ್ಳಿಯ ಕೆರೆಯ ಬಳಿ ತಲುಪಿದ್ದು, ಗಣೇಶ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಯುವಕನು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧನಾ ಕಾರ್ಯವನ್ನು ನಡೆಸಿದ್ದು, ಸೋಮವಾರ ಬೆಳಗಿನ ಜಾವ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಮೃತ ಯುವಕನನ್ನು ರಂಗನಾಥಪುರ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ.
•ಶಿವಮೊಗ್ಗ: ಅಡಿಕೆ ಗೋದಾಮುಗಳಲ್ಲಿ ಬಣ್ಣದ ಅಡಿಕೆ!
ಶಿವಮೊಗ್ಗ: ಅಡಿಕೆಗೆ ನಿಷೇಧಿತ ರಾಸಾಯನಿಕ ಬಣ್ಣವನ್ನು ಬಳಸುತ್ತಿರುವ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸೋಮವಾರದಂದು ಡಾ.ಮೈತ್ರಿ ಅವರು ನಗರದ ಹೊರವಲಯದಲ್ಲಿರುವ ಬುಳ್ಳಾಪುರದ ಅಡಿಕೆ ಸಂಸ್ಕರಣಾ ಘಟಕಕ್ಕೆ ಏಕಾಏಕಿ ಭೇಟಿ ನೀಡಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆಯನ್ನು ನಡೆಸಿದ್ದಾರೆ. ಮಾಹಿತಿಯ ಪ್ರಕಾರ ಬುಳ್ಳಾಪುರದಲ್ಲಿರುವ ಘಟಕದಲ್ಲಿ ರೈತರಿಂದ ಖರೀದಿಸಿದ ಅಡಿಕೆಯನ್ನು ಸಂಸ್ಕರಿಸಿ, ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಬಳಿಕ ರಾಜ್ಯದ ವಿವಿಧ ಭಾಗಗಳಿಗೆ ಮತ್ತು ಹೊರರಾಜ್ಯಗಳಿಗೆ ರವಾನಿಸಲಾಗುತ್ತದೆ. ಆಗ ಮಲೆನಾಡು ಭಾಗದಲ್ಲಿ ಕೆಲವರು ಕಣ್ಣಿಗೆ ರಾಚುವಂತಹ ರೊಡಾಮಿನ್ ಬಿ ಮತ್ತು ಸ್ಯೂಡನ್ ಹೆಸರಿನ ಬಣ್ಣಗಳನ್ನು ಬಳಸುತ್ತಾರೆ. ಹೀಗಾಗಿ ಡಾ.ಮೈತ್ರಿಯವರು ಘಟಕಕ್ಕೆ ಭೇಟಿ ನೀಡಿ ಅಡಿಕೆ ಸಂಸ್ಕರಣೆಯ ವಿಧಾನಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಅಡಿಕೆ ಗೋದಾಮುಗಳಲ್ಲಿ ನಿಷೇಧಿತ ಮತ್ತು ರಾಸಾಯನಿಕಯುಕ್ತ ಬಣ್ಣವನ್ನು ಬಳಸುತ್ತಿರುವ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದ್ದು, ಕೃತಕ ಬಣ್ಣ ಬಳಸುತ್ತಿರುವುದು ದೃಢಪಟ್ಟಲ್ಲಿ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆಯನ್ನು ಸಹ ನೀಡಿದರು.
•ಸಾಗರ: ಯುವತಿ ಆತ್ಮಹತ್ಯೆಗೆ ಪ್ರಚೋದನೆ: ಯುವಕನ ಬಂಧನ
ಸಾಗರ: ಬ್ಯಾಕೋಡಿನ ನಿವಾಸಿಯಾದ ವಾಣಿಶ್ರೀ ಅವರಿಗೆ ಆಕೆಯ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿ ಆಕೆಯ ಆತ್ಮಹತ್ಯೆಗೆ ಕಾರಣನಾಗಿದ್ದ ಆರೋಪಿ ಅಭಿಷೇಕ್ ನನ್ನು ಪೊಲೀಸರು ಸೋಮವಾರದಂದು ಬಂಧಿಸಿರುವ ಘಟನೆ ನಡೆದಿದೆ. ಸಾಗರ ತಾಲ್ಲೂಕಿನ ನಿವಾಸಿಯಾಗಿದ್ದ ವಾಣಿಶ್ರೀ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಸೆಕ್ಟರ್ 1ರ ಪಿಜಿಯಲ್ಲಿ ವಾಸವಾಗಿದ್ದು, ಅಲ್ಲಿನ ಆಭರಣ ಮಳಿಗೆಯೊಂದರಲ್ಲಿ ಸೇಲ್ಸ್ಎಕ್ಸಿಕ್ಯೂಟೀವ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆಗ ವಾಣಿಶ್ರೀ ಅವರ ಪಿಯುಸಿ ಸಹಪಾಠಿ ಅಭಿಷೇಕ್ ಆಕೆಯ ಜೀವನದಲ್ಲಿ ಪ್ರವೇಶವನ್ನು ಪಡೆದು, ಮಾನಸಿಕ ಹಿಂಸೆ ನೀಡುವ ಮೂಲಕ ವಾಣಿಶ್ರೀ ಆತ್ಮಹತ್ಯೆ ಮಾಡಿಕೊಳ್ಳಲು ಮೂಲ ಕಾರಣಕರ್ತನಾಗಿದ್ದನು. ವಾಣಿಶ್ರೀ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಅಭಿಷೇಕ್ ಹೆಸರನ್ನು ಉಲ್ಲೇಖಿಸಿ, ನಿರಂತರವಾಗಿ ವಾಟ್ಸಾಪ್ ಮೂಲಕ ಕಿರುಕುಳ ನೀಡುತ್ತಿದ್ದಾನೆ ಎಂದು ತಿಳಿಸಿ ಮರಣಪತ್ರವನ್ನು ಸಹ ಬರೆದಿಟ್ಟಿದ್ದಳು. ಈ ಹಿನ್ನೆಲೆಯಲ್ಲಿ ವಾಣಿಶ್ರೀ ಅವರ ಸಹೋದರಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಅಭಿಷೇಕ್ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಠಾಣೆಯ ಪೊಲೀಸರಿಗೆ ವಕೀಲರ ಮೂಲಕ ಶರಣಾಗಿದ್ದಾನೆ.