Categories
ರಾಜ್ಯ

ಎಲ್ಲೆಡೆ ಹೋಳಿ ಹಬ್ಬದ ಆಚರಣೆಗೆ ಸಿದ್ಧತೆ

ಎಲ್ಲೆಡೆ ಹೋಳಿ ಹಬ್ಬದ ಆಚರಣೆಗೆ ಸಿದ್ಧತೆ
– ಹೋಳಿ ಹಬ್ಬವೇ ಬಣ್ಣದ ಹಬ್ಬ, ಬಣ್ಣದ ಬಗ್ಗೆ ಎಚ್ಚರವಿರಲಿ..!!
– ಸಾವಯವ ಬಣ್ಣಗಳ ಬಳಕೆ ಹೆಚ್ಚಲಿ

NAMMUR EXPRESS NEWS
ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಇತಿಹಾಸ ಇದೆ. ಯಾವುದೇ ಜಾತಿ, ಧರ್ಮದ ಬೇಧ ವಿಲ್ಲದೇ ವಿವಿಧ ರೀತಿಯಲ್ಲಿ ಆಚರಿಸುವ ಹೋಳಿ ಹಬ್ಬಕ್ಕೆ ವಿಶೇಷವಾದ ಪ್ರಾಮುಖ್ಯತೆವಿದೆ . ಹೋಳಿ ಎಂದರೆ ಬಣ್ಣದೋಕುಳಿಯ ಹಬ್ಬ, ರಂಗುರಂಗಿನ ಬಣ್ಣ ಎರಚುವುದರೊಂದಿಗೆ ಸ್ನೇಹಿತರು, ನೆರೆಹೊರೆಯವರೊಂದಿಗೆ ಪ್ರೀತಿ ಬೆಸೆಯುವ ಬಂಧದ ಹಬ್ಬ ಎಂದೇ ಹೇಳಬಹುದು. ಈಗಾಗಲೇ ಹೋಳಿ ಹಬ್ಬದ ಸಂಭ್ರಮ ಎಲ್ಲೆಡೆ ಶುರುವಾಗಿದೆ. ಒಂದೆಡೆ ಹೋಳಿ ಹಬ್ಬದ ಸಂಭ್ರಮವಾದರೆ, ಮತ್ತೊಂದೆಡೆ ಹೋಳಿ ಹಬ್ಬದಲ್ಲಿ ಬಳಕೆ ಮಾಡುವ ಬಣ್ಣದ ಬಗ್ಗೆ ಗಮನವಿರಲಿ. ಅನೇಕ ಬಣ್ಣಗಳಿಂದ ಚರ್ಮಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ಲೆಕ್ಕಿಸದೆ ಅನೇಕ ಮಂದಿ ಹೋಳಿ ಆಚರಿಸಲು ಮುಂದಾಗುತ್ತಾರೆ. ಹೋಳಿ ಆಚರಣೆಯಲ್ಲಿ ಬಳಸಲಾಗುವ ಸಿಂಥೆಟಿಕ್ ಬಣ್ಣಗಳು ಆರೋಗ್ಯಕ್ಕೆ ಸಾಕಷ್ಟು ರೀತಿಯ ಪರಿಣಾಮ ಉಂಟುಮಾಡುತ್ತದೆ. ಅದರಲ್ಲೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ನೈಸರ್ಗಿಕ ಬಣ್ಣಗಳಿಂದ ಹೋಳಿ ಹಬ್ಬದ ಆಚರಣೆ ಮಾಡುವುದು ಸೂಕ್ತ. ನೈಸರ್ಗಿಕ ಬಣ್ಣಗಳನ್ನು ಸ್ವಚ್ಛಗೊಳಿಸುವುದು ತುಂಬಾ ಸುಲಭ.

ಸಿಂಥೆಟಿಕ್ ಬಣ್ಣಗಳಿಗೆ ಬದಲಿಯಾಗಿ ಸಾವಯವ ಬಣ್ಣಗಳನ್ನು ಬಳಸುವುದು ಸುರಕ್ಷಿತ. ಈ ಸಾವಯವ ಬಣ್ಣಗಳನ್ನ ಬಳಸುವುದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಹೋಳಿ ಆಚರಣೆಯ ನಂತರ ಆದಷ್ಟು ಬೇಗನೆ ಬಣ್ಣವನ್ನು ನೀರಿನಿಂದ ಸ್ವಚ್ಛಗೊಳಿಸುವುದು ತುಂಬಾ ಮುಖ್ಯ. ಬಣ್ಣವನ್ನು ನೀವು ಬಿಸಿ ನೀರಿನಲ್ಲಿ ತೊಳೆದೆ ತಣ್ಣಗಿರುವ ನೀರಿನಲ್ಲಿ ತೊಳೆಯುವುದು ತುಂಬಾ ಸೂಕ್ತವಾಗಿರುತ್ತದೆ. ಚರ್ಮದ ಕಾಳಜಿ ಮಾಡುವುದು ಉತ್ತಮ ಎಂದೇ ಹೇಳಬಹುದು.
ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಬಣ್ಣಗಳ ಬಗ್ಗೆ ಎಚ್ಚರವಿರಲಿ.

Categories
ಬೆಂಗಳೂರು

ಬೆಂಗಳೂರು : ಬೈಕ್ ವೀಲಿಂಗ್ ಮಾಡುತ್ತಿದ್ದ ಐವರು ಪುಂಡರು ಬಂಧನ

ಟಾಪ್ 5 ನ್ಯೂಸ್ ಕರ್ನಾಟಕ

ಬೆಂಗಳೂರು : ಬೈಕ್ ವೀಲಿಂಗ್ ಮಾಡುತ್ತಿದ್ದ ಐವರು ಪುಂಡರು ಬಂಧನ
– ಹಾಸನ / ತುಮಕೂರು : ಫೈನಾನ್ಸ್ ಕಿರುಕುಳಕ್ಕೆ ಮಹಿಳೆಯರಿಬ್ಬರ ಬಲಿ
– ದೊಡ್ಡಬಳ್ಳಾಪುರ: ಸಾರಿಗೆ ಬಸ್‌ ಡಿಕ್ಕಿಯಾಗಿ ಬೈಕ್‌ ಸವಾರ ಸಾವು..!
– ಹನೂರು : ಬಸ್ ಪಲ್ಟಿಯಾಗಿ ಓರ್ವ ಸಾವು..!
– ಚಿಕ್ಕಬಳ್ಳಾಪುರ : ನಾಲ್ಕು ನಾಟಿ ಕೋಳಿಗಳ ಸಾವು ಹಕ್ಕಿಜ್ವರದ ಶಂಕೆ

NAMMUR EXPRESS NEWS
ಬೆಂಗಳೂರು : ಬೈಕ್ ವೀಲಿಂಗ್ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಓರ್ವ ಅಪ್ರಾಪ್ತ ಸೇರಿ 5 ಮಂದಿಯನ್ನು ಹುಳಿಮಾವು ಸಂಚಾರಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಂಜನಾ ಪುರ ಬಿಡಿಎ ರಸ್ತೆ, ಸಾಯಿಬಾಬಾ ದೇವಸ್ಥಾನದ ರಸ್ತೆ ಹಾಗೂ ಆರ್.ಟಿ.ಓ ರಸ್ತೆಯಲ್ಲಿ ವಾಹನ ದಟ್ಟಣೆ ನಡುವೆಯೂ ಡೆಡ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡರ ಹಾವಳಿಯಿಂದ ಬೇಸತ್ತ ಸ್ಥಳೀಯರು ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಸಿಪಿ ಮಹಾದೇವ್ ಮಾರ್ಗದರ್ಶನದಲ್ಲಿ ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಐವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ವೀಲಿಂಗ್ ಮಾಡುವವರಿಂದ ಪಾದಾಚಾರಿ, ಇತರ ವಾಹನ ಸವಾರರಿಗೆ ತೊಂದರೆ ಆಗುತ್ತದೆ. ಅಲ್ಲದೆ ರಸ್ತೆ ಅಪಘಾತಗಳು ಸಂಭವಿಸುತ್ತವೆ. ವೀಲಿಂಗ್ ಮಾಡುವವರು ವಿರುದ್ಧ ದಂಡ, ಜೈಲು ಹಾಗೂ ಬೈಕ್ ವಶಕ್ಕೆ ಪಡೆಯುವ ಜೊತೆಗೆ ಪರವಾನಿಗೆ ರದ್ದುಗೊಳಿಸಬಹುದಾಗಿದೆ ಎಂದು ಹುಳಿಮಾವು ಸಂಚಾರಿ ಪೋಲಿಸ್ ಠಾಣೆ ಇನ್‌ಸ್ಪೆಕ್ಟರ್ ಪಾರ್ವತಮ್ಮ ತಿಳಿಸಿದರು.

– ಹಾಸನ / ತುಮಕೂರು : ಫೈನಾನ್ಸ್ ಕಿರುಕುಳಕ್ಕೆ ಮಹಿಳೆಯರಿಬ್ಬರ ಬಲಿ

ತುಮಕೂರು/ಹಾಸನ: ಸರ್ಕಾರ ಮೈಕ್ರೋಫೈನಾನ್ಸ್ ಕಿರುಕುಳ ನಿಯಂತ್ರಿಸಲು ಸುಗ್ರೀವಾಜ್ಞೆ ತಂದ ನಂತರವೂ ಕಿರುಕುಳ ನಿಂತಿಲ್ಲ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದಲ್ಲಿ ಲೀಲಾವತಿ (35), ಹಾಸನ ಜಿಲ್ಲೆ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದ ಕೆಂಚಮ್ಮ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲೀಲಾವತಿ ಫೀನ್ಯಾರ್ಪ್ ಸಂಸ್ಥೆಯಲ್ಲಿ ₹5 ಲಕ್ಷ, ಎಲ್-ಟಿನಲ್ಲಿ 1 ಲಕ್ಷ, ಛಲವಾದಿ ಸಂಘದಲ್ಲಿ 1 ಲಕ್ಷ, ಧರ್ಮಸ್ಥಳ ಸಂಘದಲ್ಲಿ ₹1 ಲಕ್ಷ ಸೇರಿ ಒಟ್ಟು 48 ಲಕ್ಷ ಸಾಲ ಮಾಡಿ ದ್ದರು. ಸಾಲ ವಸೂಲಿ ಏಜೆಂಟರ ನಿರಂತರ ಒತ್ತಡ ತಾಳ ಲಾರದೆ ನೇಣು ಬಿಗಿದು ಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿ ನಾಗರಾಜು ಆರೋಪಿಸಿದ್ದಾರೆ. ಅದೇ ರೀತಿ ಕೆಂಚಮ್ಮ ಸುಮಾರು 7-8 ಮೈಕ್ರೋ ಫೈನಾನ್ಸ್‌ಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಸಾಲ ತೆಗೆದುಕೊಂಡಿದ್ದರು. ಪ್ರತಿ ವಾರ ಹತ್ತು ಸಾವಿರಕ್ಕೂ ಹೆಚ್ಚು ಹಣ ಕಟ್ಟಬೇಕಾಗಿತ್ತು. ಇದು ಸಾಧ್ಯವಾಗದೆ ಮರ್ಯಾದೆಗೆ ಅಂಜಿ ಬುಧವಾರ ಬೆಳಗ್ಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ದೊಡ್ಡಬಳ್ಳಾಪುರ: ಸಾರಿಗೆ ಬಸ್‌ ಡಿಕ್ಕಿಯಿಂದ ಬೈಕ್‌ ಸವಾರ ಸಾವು..!!

ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನ ಮತ್ತು ಕೆಎಸ್‌ಆ‌ರ್ ಟಿಸಿ ಬಸ್‌ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ತಾಲೂಕಿನ ಗುಂಡಮಗೆರೆ ಬಳಿ ಸಂಭವಿಸಿದೆ. ಮೃತನನ್ನು ದೊಡ್ಡಬಳ್ಳಾಪುರದ ನಿವಾಸಿ ಪುನಿತ್ (27) ಎಂದು ಗುರುತಿಸಲಾಗಿದೆ. ಮೃತ ಯುವಕ ದ್ವಿಚಕ್ರ ವಾಹನದಲ್ಲಿ ಬಂಕೇನಹಳ್ಳಿ ಕಡೆಯಿಂದ ಬರುವ ವೇಳೆ ವಾಬಸಂದ್ರ ಗುಂಡಮಗೆರೆ ನಡುವಿನ ತಿರುವಿನಲ್ಲಿ ಬಸ್‌ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಏಕಾಏಕಿ ಎದುರಾದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ತಪ್ಪಿಸಲು ಕೆಎಸ್ ಆರ್‌ಟಿಸಿ ಬಸ್‌ ಚಾಲಕ ಪ್ರಯತ್ನಿಸಿದ್ದು ಬಸ್ ರಸ್ತೆ ಬದಿಗೆ ನುಗ್ಗಿದೆ. ಸ್ಥಳಕ್ಕೆ ಹೊಸಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

– ಹನೂರು : ಬಸ್ ಪಲ್ಟಿಯಾಗಿ ಓರ್ವ ಸಾವು..!

ಹನೂರು : ನಿಶ್ಚಿತಾರ್ಥ ಮುಗಿಸಿ ಕೊಂಡು ವಾಪಸ್ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಸಮೀಪ ನಡೆದಿದೆ. ಹನೂರು ತಾಲೂಕಿನ ತೆಳ್ಳನೂರು ಬಂಡಳ್ಳಿ ಮಾರ್ಗ ಮಧ್ಯದ ಅರಣ್ಯದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಕಾಮಗೆರೆಯ ಹೋಲಿ ಕ್ರಾಸ್, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.

– ಚಿಕ್ಕಬಳ್ಳಾಪುರ : ನಾಲ್ಕು ನಾಟಿ ಕೋಳಿಗಳ ಸಾವು ಹಕ್ಕಿಜ್ವರ ಶಂಕೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಎಚ್. ಎಸ್.ಗಾರ್ಡನ್ ನಲ್ಲಿ ನಾಲ್ಕು ನಾಟಿ ಕೋಳಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮತ್ತೆ ಹಕ್ಕಿಜ್ವರದ ಭೀತಿ ಎದುರಾಗಿದೆ. ನಗರದ 21ನೇ ವಾರ್ಡ್ ಎಚ್.ಎಸ್.ಗಾರ್ಡನ್ ಸ್ಮಶಾನದ ಬಳಿ ವಾಸವಾಗಿರುವ ಫಾರುಕ್ ಎಂಬುವರಿಗೆ ಸೇರಿದ ನಾಲ್ಕು ನಾಟಿ ಕೋಳಿಗಳು ಸಾವನಪ್ಪಿವೆ.
ಕಳೆದ ಫೆಬ್ರವರಿ 27ರಂದು ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ದ್ಯಾವಪ್ಪ ಎಂಬುವರಿಗೆ ಸೇರಿದ 28 ಕೋಳಿಗಳು ಹಾಗೂ ರತ್ನಮ್ಮ ಎಂಬುವರಿಗೆ ಸೇರಿದ 5 ಕೋಳಿಗಳು ಪ್ರಾಣಬಿಟ್ಟಿದ್ದವು. ಪ್ರಯೋಗಾಲಯದ ವರದಿಯಲ್ಲಿ ಎರಡು ಕೋಳಿಗಳಲ್ಲಿ ಹಕ್ಕಿಜ್ವರದ ಎಚ್5 ಎನ್1 ವೈರಸ್ ಪತ್ತೆಯಾಗಿರುವುದು ದೃಢಪಟ್ಟಿತ್ತು.

 

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್..!!

ಚಿಕ್ಕಮಗಳೂರು ಟಾಪ್ ನ್ಯೂಸ್..!!

* ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ
* ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಬೆನ್ನಲ್ಲೇ ಕಾಫಿನಾಡಲ್ಲಿ ಪೊಲೀಸರು ಫುಲ್ ಅಲರ್ಟ್
* ಗೋವನ್ನು ರಾಷ್ಟ್ರೀಯ, ಸಾಂಸ್ಕೃತಿಕ ಸಂಪತ್ತು ಎಂದು ಘೋಷಿಸುವಂತೆ ಒತ್ತಾಯ

NAMMUR EXPRESS NEWS

* ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ
ಚಿಕ್ಕಮಗಳೂರು: ರಾಜ್ಯದ ಪ್ರಸಿದ್ದ ಸೀತಾಳಯ್ಯನಗಿರಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ – ಜಾತ್ರಾ ಮಹೋತ್ಸವ ಮತ್ತು ರಥೋತ್ಸವವೂ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಎಂಟೂರು ಗ್ರಾಮಸ್ಥರು ಹಾಗೂ ಎರಡೂರು ಮಠದ ಸಾರಥ್ಯದಲ್ಲಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಯಶಸ್ವಿಗೊಂಡಿತು.
ತಳ್ಳಿಹಳ್ಳ, ಕಟುಮನೆ, ಇಳೆಹೊಳೆ, ಜಕ್ಕನಹಳ್ಳಿ, ಉಳುವಾಗಿಲು, ಕಬ್ಬಿನಹಳ್ಳಿ, ಹಿರೇಕೊಳಲೆ, ಬ್ಯಾಗದಹಳ್ಳಿ, ನರಗನಹಳ್ಳಿ, ಚಿಕ್ಕಕೊಳಲೆ ಗ್ರಾಮಸ್ಥರು ಹಾಗೂ ಮುಳ್ಳಪ್ಪಸ್ವಾಮಿ, ಸೀತಾಳಯ್ಯನಗಿರಿ ಮತ್ತು ಹೊಸಪುರ ನಾರಕಂತೆ ಮಠದ ಸಹಭಾಗಿತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗ್ರಾಮಗಳ ದೇವರ ಅಡ್ಡೆ ಹೊತ್ತಿ ಕುಣಿಸುತ್ತಾ ಗ್ರಾಮಸ್ಥರು ದೇವಾಲಯ ಸುತ್ತಲು ಮೆರವಣಿಗೆ ನಡೆಸಿದರು.
40ಕ್ಕೂ ಹೆಚ್ಚು ಗ್ರಾಮಸ್ಥರು ಪೂರ್ವಿಕರ ಶೈಲಿಯ ಸಾಂಪ್ರದಾಯಿಕ ವಸ್ತ್ರ, ಪಂಚೆ, ಶಲ್ಯ, ಕೋಟು ಹಾಗೂ ಪೇಟಾ ಧರಿಸಿ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮಗಳ ದೇವರನ್ನು ಮೆರವಣಿಗೆ ಬಳಿಕ ಶ್ರೀ ಮಲ್ಲಿಕಾರ್ಜುನ ಸನ್ನಿಧಿಧಾನಕ್ಕೆ ಎಂಟೂರು ಗ್ರಾಮಸ್ಥರು ಗರ್ಭಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ದೂರದಿಂದಲೇ ಭವ್ಯ ರಥದಲ್ಲಿ ಅಲಂಕೃತಗೊಂಡಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಭಕ್ತಿಪೂರ್ವವಾಗಿ ನಮಸ್ಕರಿಸಿದರು. ರಥೋತ್ಸವ ಪೂರ್ಣಗೊಂಡ ನಂತರ ಗ್ರಾಮ ದೇವರುಗಳು ಮರಳಿ ಗ್ರಾಮಕ್ಕೆ ವಾಪಸಾದವು.

* ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಬೆನ್ನಲ್ಲೇ ಕಾಫಿನಾಡಲ್ಲಿ ಪೊಲೀಸರು ಫುಲ್ ಅಲರ್ಟ್

ಚಿಕ್ಕಮಗಳೂರು: ಹಂಪಿಯಲ್ಲಿ ವಿದೇಶಿ ಮಹಿಳೆ ಮತ್ತು
ಹೋಂ ಸ್ಟೇ ಮಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂತಹ ಘಟನೆ ನಡೆಯದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಎಚ್ಚರಿಕೆ ಕೈಗೊಂಡಿದ್ದಾರೆ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪೊಲೀಸರು ಹೋಂಸ್ಟೇ, ರೆಸಾರ್ಟ್ ಮಾಲೀಕರ ಸಭೆಯನ್ನು ನಡೆಸಿದ್ದಾರೆ.
ಹೋಂ ಸ್ಟೇ, ರೆಸಾರ್ಟ್ ಗಳಿಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಯ ಕುರಿತು ಚರ್ಚಿಸಲಾಗಿದ್ದು, ಮುಖ್ಯವಾಗಿ ವಿದೇಶಿ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಪೊಲೀಸರು ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 1300ಕ್ಕೂ ಅಧಿಕ ಹೋಂ ಸ್ಟೇ, ರೆಸಾರ್ಟ್‌ಗಳಿದ್ದು, ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ, ಹೀಗಾಗಿ ವಿದೇಶಿ ಪ್ರವಾಸಿಗರಿಂದ ಸಿ ಫಾರ್ಮ್ ಕಡ್ಡಾಯವಾಗಿ ಪಡೆಯುವಂತೆ ಸೂಚನೆ ನೀಡಲಾಗಿದೆ.

* ಗೋವನ್ನು ರಾಷ್ಟ್ರೀಯ, ಸಾಂಸ್ಕೃತಿಕ ಸಂಪತ್ತು ಎಂದು ಘೋಷಿಸುವಂತೆ ಒತ್ತಾಯ

ಚಿಕ್ಕಮಗಳೂರು: ಭಾರತೀಯ ಗೋ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಗೋ ಮಂತ್ರಾಲಯ ಸ್ಥಾಪನೆ ಮಾಡಬೇಕೆಂಬ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕಾಮಧೇನು ಗೋ ಸೇವಾ ಟ್ರಸ್ಟ್ ನ ಅಧ್ಯಕ್ಷ ನಾಗೇಶ್ ಅಂಗಿರಸ ತಿಳಿಸಿದರು.
ಚಿಕ್ಕಮಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ವಿಶ್ವ ಹಿಂದೂ ಪರಿಷತ್ ಗೋರಕ್ಷಕ ವಿಭಾಗದ ವತಿಯಿಂದ ಫೆಬ್ರವರಿ 20ರಂದು ನಡೆದ ಅಖಿಲ ಭಾರತ ಗೋ ಭಕ್ತ ಅಧಿವೇಶನದಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಗೋವನ್ನು ರಾಷ್ಟ್ರೀಯ ಸಾಂಸ್ಕೃತಿಕ ಸಂಪತ್ತು ಎಂದು ಘೋಷಿಸಬೇಕು, ಗೋಪಾಷ್ಟಮಿಯನ್ನು ರಾಷ್ಟ್ರೀಯ ಉತ್ಸವವೆಂದು ಘೋಷಿಸುವ ಜೊತೆಗೆ ಗೋ ಹತ್ಯೆಯನ್ನು ತಡೆಯಲು ರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು ಅಲ್ಲದೇ ಗೋಮಾಳಗಳನ್ನು ಅತಿಕ್ರಮ ಮಾಡುತ್ತಿರುವುದನ್ನು ತಪ್ಪಿಸಿ ಗೋಮಾಳ ಪ್ರಾಧಿಕಾರವನ್ನು ರಚಿಸಬೇಕು ಎಂದು ಒತ್ತಾಯಿಸಿದರು.

Categories
ಬೆಂಗಳೂರು

ನಂದಿನಿ ತುಪ್ಪಕ್ಕೆ ಬಾರಿ ಡಿಮ್ಯಾಂಡ್…!!

ನಂದಿನಿ ತುಪ್ಪಕ್ಕೆ ಬಾರಿ ಡಿಮ್ಯಾಂಡ್…!!
– 2000 ಮೆಟ್ರಿಕ್ ಟನ್ ನಂದಿನಿ ತುಪ್ಪಕ್ಕೆ ಟಿಟಿಡಿ ಬೇಡಿಕೆ
– ಲಡ್ಡು ಪ್ರಕರಣದ ಬಳಿಕ ನಂದಿನಿ ತುಪ್ಪದ ಖರೀದಿಗೆ ಟಿಟಿಡಿ ಮುಂದಾಗಿದೆ

NAMMUR EXPRESS NEWS
ಬೆಂಗಳೂರು: ನಂದಿನಿ ತುಪಕ್ಕೆ ಬೇಡಿಕೆ ಹೆಚ್ಚಾಗಿದ್ದು, ತಿರುಪತಿ ದೇವಾಲಯದಿಂದಲೂ ಹೆಚ್ಚುವರಿ ತುಪ್ಪವನ್ನು ಕಳುಹಿಸುವಂತೆ ಬೇಡಿಕೆ ಬಂದಿದೆ. ತಿರುಪತಿ ಲಡ್ಡು ತಯಾರಿಕೆಗೆ ಕಳೆದ 20 ವರ್ಷದಿಂದ ನಂದಿನಿ ತುಪ್ಪ ಬಳಕೆ ಮಾಡುತ್ತಿದ್ದು, ಆದರೆ 2022-23 ನೇ ಸಾಲಿನಲ್ಲಿ ದರದ ವಿಚಾರ ದಲ್ಲಿ ನಂದಿನಿ ತುಪ್ಪ ಪೂರೈಕೆ ಸ್ಥಗಿತವಾಗಿತ್ತು. ಹಿಂದಿನ ವರ್ಷ ತಿರುಪತಿಯಲ್ಲಿ ಲಡ್ಡು ವಿವಾದ ಉಂಟಾಗಿದ್ದು, ಲಡ್ಡು ಪ್ರಕರಣದ ಬಳಿಕ ನಂದಿನಿ ತುಪ್ಪದ ಖರೀದಿಗೆ ಟಿಟಿಡಿ ಮುಂದಾಗಿದೆ. ಲಡ್ಡು ತಯಾರಿಕೆಗೆ ಹೆಚ್ಚುವರಿ ತುಪ್ಪ ಪೂರೈಸುವಂತೆ ಮನವಿ ಮಾಡಿದ್ದು, ಟೆಂಡರ್ ಷರತ್ತಿನ ಪ್ರಕಾರ 2000 ಟನ್ ತುಪ್ಪ ಸರಬರಾಜು ಮಾಡಲು ಕೆಎಂಎಫ್ ಆಡಳಿತ ಮಂಡಳಿ ಮುಂದಾಗಿದೆ. ಕಳೆದ ಒಂದು ವರ್ಷದಲ್ಲಿ 3200 ಮೆಟ್ರಿಕ್ ಟನ್ ತುಪ್ಪವನ್ನು ಟಿಟಿಡಿಗೆ ಪೂರೈಕೆ ಮಾಡಲಾಗಿದ್ದು, 200 ಟನ್ ತುಪಕ್ಕೆ ಮತ್ತೆ ಬೇಡಿಕೆಯನ್ನಿಟ್ಟಿದೆ.

ಲಡ್ಡು ತಯಾರಿಕೆಗೆ ಹೆಚ್ಚುವರಿ ತುಪ್ಪ ಪೂರೈಕೆ ಮಾಡುವಂತೆ ಕೆಎಂಎಫ್ ಬಳಿ ಟಿಟಿಡಿ ಮನವಿ ಮಾಡಿಕೊಂಡಿದೆ. ಟೆಂಡರ್ ಷರತ್ತಿನ ಪ್ರಕಾರ 2000 ಟನ್ ತುಪ್ಪ ಸರಬರಾಜು ಮಾಡಲು ಕೆಎಂಎಫ್ ಮುಂದಾಗಿದ್ದು, ಆರು ತಿಂಗಳಿನಲ್ಲಿ 2000 ಟನ್ ತುಪ್ಪವನ್ನು ಪೂರೈಕೆ ಮಾಡುವಂತೆ ಟಿಟಿಡಿ ಬೇಡಿಕೆಯನ್ನಿಟ್ಟಿದೆ. ಈ ಮೊದಲು 3 ತಿಂಗಳಿಗೆ 600 ಟನ್ ಪೂರೈಸುವಂತೆ ಟಿಟಿಡಿ ಬೇಡಿಕೆ ಇಟ್ಟಿತ್ತು. ಕಳೆದೊಂದು ವರುಷ ದಲ್ಲಿ ಟಿಟಿಡಿಗೆ ಬರೋಬ್ಬರಿ 3200 ಮೆಟ್ರಿಕ್ ಟನ್ ತುಪ್ಪ ಪೂರೈಕೆ ಮಾಡಿದ್ದು, ಸದ್ಯ ಟಿಟಿಡಿಗೆ ಕೆಎಂಎಫ್ ಸಿಂಗಲ್ ಸೆಲರ್ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಕಳೆದೊಂದು ವರುಷದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಟನ್ ತುಪ್ಪ ಮಾರಾಟ ಮಾಡಲಾಗಿದ್ದು, ನೆರೆಯ ರಾಜ್ಯಗಳಿಗೆ 500 ಟನ್‌ಗೂ ಹೆಚ್ಚು ತುಪ್ಪ ಪೂರೈಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರುಷ ಶೇ.30ರಷ್ಟು ತುಪ್ಪ ಹೆಚ್ಚುವರಿ ಮಾರಾಟ ಮಾಡಲಾಗಿದ್ದು, ಇದರಲ್ಲಿ ಶೇ.60ರಷ್ಟು ತುಪ್ಪ ಟಿಟಿಡಿಗೆ ಪೂರೈಕೆ ಮಾಡಲಾಗುತ್ತಿದೆ.

Categories
ಕರಾವಳಿ

ಕರಾವಳಿ ವಾತಾವರಣದಲ್ಲಿ ಏರುಪೇರು: ಜನ ಸಂಕಷ್ಟ

ಕರಾವಳಿ ವಾತಾವರಣದಲ್ಲಿ ಏರುಪೇರು: ಜನ ಸಂಕಷ್ಟ

– ಹಗಲು ಬಿಸಿಲಿನ ಧಗೆಗೆ ಇರೋಕೆ ಆಗಲ್ಲ
– ರಾತ್ರಿ ಬೇಸಗೆಯ ನಡುವಿನಲ್ಲೇ ಮಳೆರಾಯನ ಪ್ರತಾಪ
– ಮೀನುಗಾರಿಕೆ ಈಗ ಕಷ್ಟ ಕಷ್ಟ

NAMMUR EXPRESS NEWS
ಮಂಗಳೂರು: ಕರಾವಳಿಯ ಹಲವು ಭಾಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ವಾತಾವರಣ ಕಂಡುಬರುತ್ತಿದ್ದು, ಎಲ್ಲೆಡೆ ಮೋಡ ಕವಿದ ವಾತಾವರಣ ಇದೆ ಹಾಗೂ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಸುಡು ಬಿಸಿಲಿನ ಬೇಗೆಯಲ್ಲಿ ಬೇಸತ್ತಿದ್ದ ಮಂಗಳೂರು ನಗರದಲ್ಲಿ ಬೇಸಗೆಯ ನಡುವಿನಲ್ಲೇ ಮಳೆರಾಯನ ಆರ್ಭಟ ಎಂಟ್ರಿ ಕೊಟ್ಟಿದ್ದಾನೆ. ಮಾ.12ರ ಸಂಜೆಯಿಂದಲೆ ಸಿಡಿಲು ಮಿಂಚು ಆರ್ಭಟಿಸಿದ್ದು ರಾತ್ರಿ 9.30ರ ಬಳಿಕ ಧೋ ಎಂದು ಮಳೆರಾಯ ಸುರಿದು ಬಿಟ್ಟಿದ್ದಾನೆ.
ಕಳೆದ 15 ದಿನಗಳಿಂದ ಅತೀ ಹೆಚ್ಚು ಬಿಸಿಲಿನ ಬೇಗೆಯಿಂದ ಜನ ಕಂಗಾಲಾಗಿದ್ದರು. ಜೊತೆಗೆ ಬಿಸಿಲಿನ ಉರಿ ತಾಳಲಾರದೇ ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು, ಇನ್ನು ಉದ್ಯೋಗ, ವ್ಯವಹಾರದಲ್ಲಿ ಕೂಡ ಕಳೆದ ತಿಂಗಳಿಂದ ವ್ಯಾಪಾರ ಅತ್ಯಂತ ಕಡಿಮೆಯಾಗಿದ್ದು, ಮೀನುಗಾರರಿಗೆ ಕೂಡ ತೊಂದರೆಯಾಗುತ್ತಿತ್ತು. ಇದೀಗ ಮಳೆಯ ವಾತಾವರಣ ಕಂಡುಬಂದಿದ್ದು ಮಲೆನಾಡಿನಲ್ಲಿಯೂ ಮೋಡ ಕವಿದ ವಾತಾವರಣ ಇದೆ.
ಮಂಗಳೂರಲ್ಲಿ ಸಂಜೆ ನಾಲ್ಕರಿಂದ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿಗೆ ಸೀಮಿತವಾಗಿದ್ದ ಮಳೆ ರಾತ್ರಿಯಾಗುತ್ತಿದ್ದಂತೆ ಕರಾವಳಿಗೂ ಮುಖ ಮಾಡಿತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗಿದ್ದು ಬಳಲಿ ಬೆಂಡಾಗಿದ್ದ ಇಳೆ ಚೂರು ಉಸಿರು ಎಳಕೊಂಡಿದೆ.

– ಮೀನುಗಾರಿಕೆ ಈಗ ಕಷ್ಟ ಕಷ್ಟ

ತೀವ್ರ ಬಿಸಿಲಿನಿಂದಾಗಿ ಮೀನುಗಾರಿಕಾ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಮುದ್ರದ ತಾಪಮಾನ ಹೆಚ್ಚಳದಿಂದಾಗಿ ಮೀನುಗಳು ಆಳಕ್ಕೆ ಹೋಗುತ್ತಿರುವುದರಿಂದ ಮೀನುಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಸಾವಿರಾರು ಬೋಟ್‌ಗಳು ಬಂದರಿನಲ್ಲೇ ಲಂಗರು ಹಾಕಿದ್ದು, ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
ಸಮುದ್ರದಲ್ಲಿ ಹೆಚ್ಚಾದ ತಾಪಮಾನದಿಂದ, ಹವಾಮಾನ ವೈಪರೀತ್ಯದಿಂದಾಗಿ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿಲ್ಲ. ಪರಿಣಾಮ ಮೀನುಗಾರಿಕೆಗೆ ತೆರಳುತ್ತಿರುವ ಮೀನುಗಾರರು ಲಕ್ಷಾಂತರ ರೂ. ನಷ್ಟಕ್ಕೊಳಗಾಗುತ್ತಿದ್ದಾರೆ. ಮಂಗಳೂರು ಬಂದರಿನಲ್ಲಿ 1500ಕ್ಕೂ ಹೆಚ್ಚು ಆಳಸಮುದ್ರ ಮೀನುಗಾರಿಕಾ ಬೋಟ್‌ಗಳಿವೆ. ಮೇ ತಿಂಗಳ ಅಂತ್ಯದವರೆಗೆ ಈ ಬೋಟ್‌ಗಳು ನಿರಂತರವಾಗಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತವೆ. ಆದರೆ ಇದೀಗ ಸಾವಿರಕ್ಕೂ ಅಧಿಕ ಬೋಟ್​​ಗಳು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲೇ ಲಂಗರು ಹಾಕಿವೆ.
ಆಳಸಮುದ್ರಕ್ಕೆ ಹೋಗುವ ಮೀನುಗಾರಿಕಾ ಬೋಟ್​​ಗಳು 10 ರಿಂದ 13 ದಿನ ಸಮುದ್ರದಲ್ಲಿ ಮೀನುಗಳ ಭೇಟೆಯಾಡಿ ಮತ್ತೆ ಬಂದರಿಗೆ ಬರುತ್ತವೆ. ಈ ವೇಳೆ ಹೋಗಿ ಬರೋದಕ್ಕೆ ಒಂದು ಬೋಟಿಗೆ 6 ಲಕ್ಷ ರೂ. ಖರ್ಚು ತಗುಲುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಬೋಟ್​​ಗಳಿಗೆ 2 ಲಕ್ಷ ರೂನಷ್ಟು ಮಾತ್ರವೇ ಮೀನುಗಳು ಸಿಗುತ್ತಿವೆ. ಇದರಿಂದಾಗಿ ಅಂದಾಜು 4 ಲಕ್ಷ ರೂ. ವರೆಗೆ ಮತ್ಸೋದ್ಯಮಿಗಳು ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ನಷ್ಟ ಬೇಡ ಎಂದು ಬೋಟ್​​ಗಳನ್ನು ಮೀನುಗಾರಿಕೆಗೆ ಕಳುಹಿಸದೇ ಬಂದರಿನಲ್ಲಿ ಲಂಗರು ಹಾಕುತ್ತಿದ್ದಾರೆ. ಇನ್ನು ಮಾ. 12ಕ್ಕೆ ಅಂದರೆ ನಿನ್ನೆ ಮಳೆರಾಯ ಎಂಟ್ರಿ ಕೊಟ್ಟಿದ್ದು, ಮುಂದಿನ ಪರಿಸ್ಥಿತಿ ಹೇಗೆ ಎಂದು ಕಾದು ನೋಡಬೇಕಿದೆ.

Categories
ಚಿಕ್ಕಮಗಳೂರು

ಯುವ ಜನಾಂಗ ರಾಜಕೀಯಕ್ಕೆ ಬರಬೇಕು – ರಂಭಾಪುರಿ ಶ್ರೀಗಳು

ಯುವ ಜನಾಂಗ ರಾಜಕೀಯಕ್ಕೆ ಬರಬೇಕು – ರಂಭಾಪುರಿ ಶ್ರೀಗಳು

* ವಿಜಯೇಂದ್ರ ಸ್ಥಾನದ ಅಪಸ್ವರಕ್ಕೆ ರಾಷ್ಟ್ರ,ರಾಜ್ಯ ನಾಯಕರು ಕೂತು ಮಾತಾಡೋದು ಒಳಿತು
* ಗ್ಯಾರಂಟಿಗೆ ಹಣ ಖರ್ಚು ಮಾಡಿದ್ರೆ ಆಡಳಿತ ಕಷ್ಟ – ಶ್ರೀಗಳ ಅಸಮಾಧಾನ

NAMMUR EXPRESS NEWS
ಬಾಳೆಹೊನ್ನೂರು: ರಾಜ್ಯದಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತರ ಸಭೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ರಂಭಾಪುರಿ ಶ್ರೀಗಳು ವಿಜಯೇಂದ್ರ ಅಭಿಮಾನಿಗಳು ಸಭೆ ಮಾಡುತ್ತಿರಬಹುದು, ವಿಜಯೇಂದ್ರ ಮಾಡಿಸ್ತಾರೆ ಅನ್ನೋ ಭಾವನೆ ನನಗಿಲ್ಲ. ಅಭಿಮಾನಿಗಳು ತಮ್ಮ ಅಭಿಮಾನದಿಂದ ಮಾಡಬಹುದು, ಒಳ್ಳೆಯ ನಾಯಕತ್ವ ರಾಜ್ಯದ ಹಿತ ಚಿಂತನೆ ಕಾಪಾಡಲು ಜನರ ಸಹಕಾರ ಅವಶ್ಯಕತೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಅಲ್ಲದೇ ಸೈದ್ಧಾಂತಿಕ ನೆಲೆಗಟ್ಟಿನ ಹೋರಾಟಕ್ಕೆ ಮಠ, ಪಕ್ಷ, ಜಾತಿಮೀರಿ ಗಟ್ಟಿ ಧ್ವನಿಯಲ್ಲಿ ತಮ್ಮ ವಿಚಾರ ಹೇಳುತ್ತೆ. ವಿಜಯೇಂದ್ರ ವಿಚಾರದಲ್ಲೂ ಒಳ್ಳೇದು ಮಾಡಿದಾಗ ಹೆಮ್ಮೆಯಿಂದ ಹೇಳ್ತಿವಿ. ಅಲ್ಲದ ಮಾರ್ಗ ತುಳಿದಾಗ ತಿದ್ದಿಕೊಳ್ಳಲು ಸೂಚನೆ ನೀಡೋದಕ್ಕೂ ಹಿಂದೇಟು ಹಾಕೋದಿಲ್ಲ, ಯುವ ಜನಾಂಗ ರಾಜಕೀಯಕ್ಕೆ ಬಂದು ಜನರಿಗೆ ಒಳ್ಳೇದು ಮಾಡಬೇಕು ವಿಜಯೇಂದ್ರ ಸ್ಥಾನದ ಅಪಸ್ವರಕ್ಕೆ ರಾಷ್ಟ್ರ ರಾಜ್ಯ ನಾಯಕರು ಕೂತು ಮಾತಾಡೋದು ಒಳ್ಳೇದು ಎಂದು ರಂಭಾಪುರಿ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

ಗ್ಯಾರಂಟಿಗೆ ಹಣ ಖರ್ಚು ಮಾಡಿದ್ರೆ ಆಡಳಿತ ಕಷ್ಟ – ಶ್ರೀಗಳ ಅಸಮಾಧಾನ
ಗ್ಯಾರಂಟಿಗೆ ಮುಕ್ಕಾಲು ಭಾಗ ಹಣ ಖರ್ಚು ಮಾಡಿದ್ರೆ ಆಡಳಿತ ನಡೆಸುವುದು ಕಷ್ಟ ಎಂದು ರಂಭಾಪುರಿ ಶ್ರೀಗಳು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಹಿಂದಿನ ಸರ್ಕಾರದ ಹಲವು ಯೋಜನೆಗಳನ್ನು ತಡೆಹಿಡಿದಿದ್ದು, ಬಜೆಟ್‌ನಲ್ಲೂ ಮಠ ಮಂದಿರಗಳಿಗೆ ವಿಶೇಷವಾದ ಅನುದಾನ ಕೊಟ್ಟಿಲ್ಲ. ಆಡಳಿತ ಪಕ್ಷದ ಶಾಸಕರು ಕೂಡ ಅಭಿವೃದ್ಧಿಗೆ ಹಣ ಇಲ್ಲದೆ ಕೊರಗುತ್ತಿದ್ದಾರೆ. ಜನರ ಬಳಿ ಹೋಗುವುದು ಕಷ್ಟವಾಗಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಾರೆ ಎಂದಿದ್ದಾರೆ ಸೋಮವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಅನುದಾನದ ಬಗ್ಗೆ ಚರ್ಚೆ ಆಗಿರಬಹುದು. ಜಾಸ್ತಿ ಅಲ್ಲದಿದ್ದರೂ. ಆಯಾ ಕ್ಷೇತ್ರದ ಶಾಸಕರಿಗೆ ವಿಶೇಷ ಅನುದಾನ ಕೊಡಬಹುದು ಎನ್ನುವ ನಂಬಿಕೆ ಇದೆ ಎಂದಿದ್ದಾರೆ.

Categories
ಉಡುಪಿ

ಬೆಳ್ತಂಗಡಿ: ಸುರಿದ ಭಾರೀ ಮಳೆಗೆ ಯುವಕನ ಮೇಲೆ ಬಿದ್ದ ಮರ, ಯುವಕರಿಂದ ರಕ್ಷಣೆ!

ಕರಾವಳಿ ಟಾಪ್ ನ್ಯೂಸ್

ಬೆಳ್ತಂಗಡಿ: ಸುರಿದ ಭಾರೀ ಮಳೆಗೆ ಯುವಕನ ಮೇಲೆ ಬಿದ್ದ ಮರ, ಯುವಕರಿಂದ ರಕ್ಷಣೆ!

– ತುಂಬೆ: ಕಾರು ಟಿಪ್ಪರ್ ಡಿಕ್ಕಿ, ಕಾರಿನ ಹಿಂಭಾಗ ಸಂಪೂರ್ಣ ಜಖಂ!
– ಉಡುಪಿ: ಗರುಡ ಗ್ಯಾಂಗ್‌ನ ಇಸಾಕ್ ಮೇಲೆ ಫೈರಿಂಗ್

NAMMUR EXPRESS NEWS
ಬೆಳ್ತಂಗಡಿ: ಮೂಡಬಿದಿರೆ ರಸ್ತೆಯ ಪದಂಗಡಿ ಎಂಬಲ್ಲಿ ಮಾ. 12ರಂದು ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಯುವಕನೋರ್ವ ಮರವೊಂದು ಬಿದ್ದು ಗಂಭೀರ ಘಟನೆ ಘಟನೆ ನಡೆದಿದೆ.
ಗಂಭೀರ ಯುವಕನನ್ನು ಕೂಡಲೇ ಯುವಕರಾದ ಹರೀಶ್ ಶಾಂತಿಬೆಟ್ಟು ಗರ್ಡಾಡಿ ಸಮಂತ್ ಕುಮಾರ್ ಜೈನ್, ಕೃಷ್ಣಪ್ಪ ಕನ್ನಡಿಕಟ್ಟೆ ಇವರುಗಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ.

– ತುಂಬೆ: ಕಾರು ಟಿಪ್ಪರ್ ಡಿಕ್ಕಿ, ಕಾರಿನ ಹಿಂಭಾಗ ಸ೦ಪೂರ್ಣ ಜಖಂ!

ತುಂಬೆ: ಕಾರು ಹಾಗೂ ಟಿಪ್ಪರ್​ ನಡುವೆ ಅಪಘಾತ ಸಂಭವಿಸಿದ ಘಟನೆ ಮಾ. 12ರಂದು ರಾತ್ರಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ.
ಮಂಗಳೂರಿನಿಂದ ಬಿ. ಸಿ ರೋಡ್ ಕಡೆಗೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಟಿಪ್ಪರ್​ ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಕಾರಿನ ಹಿಂಭಾಗ ಸ೦ಪೂರ್ಣ ಜಖಂಗೊಂಡಿದೆ.ಕಾರಿನ ಸವಾರ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ.

Categories
ಹಾಸನ

ಮೈಕ್ರೋಫೈನ್ಸಾನ್ ಸಿಬ್ಬಂದಿ ಕಿರುಕುಳ : ಮಹಿಳೆ ಆತ್ಮಹತ್ಯೆ

ಮೈಕ್ರೋಫೈನ್ಸಾನ್ ಸಿಬ್ಬಂದಿ ಕಿರುಕುಳ : ಮಹಿಳೆ ಆತ್ಮಹತ್ಯೆ
– ಒಂದು ತಿಂಗಳ ಕಂತು ಕಟ್ಟಿಲ್ಲ ಎಂದು ಕಿರುಕುಳ
– ಇಂದೇ ಕಂತು ಕಟ್ಟಬೇಕು ಎಂದು ಮನೆಯ ಬಳಿಯೇ ಕುಳಿತುಕೊಂಡಿದ್ದ ಸಿಬ್ಬಂದಿ

ಹಾಸನ : ಮೈಕ್ರೋಫೈನ್ಸಾನ್ ಸಿಬ್ಬಂದಿ ಕಿರುಕುಳ ಹಿನ್ನಲೆ ಮಹಿಳೆಯೋರ್ವ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಕೆಂಚಮ್ಮ (50) ಆತ್ಮಹತ್ಯೆಗೆ ಶರಣಾದ ಮಹಿಳೆ. ಜಿಲ್ಲೆಯ ಆಲೂರು ತಾಲ್ಲೂಕಿನ, ಹಳ್ಳಿಯೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಕೆಂಚಮ್ಮ BSS, EIF ಫೈನಾನ್ಸ್ ಕಂಪನಿಯಿಂದ ಎರಡು ಲಕ್ಷ ಸಾಲ ಮಾಡಿದ್ದರು. ಪ್ರತಿ ತಿಂಗಳು ಸರಿಯಾಗಿ ಹಣ ಕಟ್ಟುತ್ತಿದ್ದ ಮಹಿಳೆ ಈ ತಿಂಗಳು ಹಣ ಇಲ್ಲದ ಕಾರಣ ಕಂತು ಕಟ್ಟಿಲ್ಲ. ಮೈಕ್ರೋಫೈನಾನ್ಸ್ ಸಿಬ್ಬಂದಿ ಇಂದೇ ಹಣ ಕಟ್ಟುಬೇಕೆಂದು ಬಿಎಸ್‌ಎಸ್ ಫೈನಾನ್ಸ್ ಸಿಬ್ಬಂದಿ ಪಟ್ಟು ಹಿಡಿದು ಮನೆಯ ಬಳಿಯೇ ಕುಳಿತಿದ್ದ. ಇದರಿಂದ ಮನನೊಂದು ಕೆಂಚಮ್ಮ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.

ಕೆಂಚಮ್ಮ ಸಾವಿನ ಸುದ್ದಿ ತಿಳಿದು ಮೈಕ್ರೋಫೈನಾನ್ಸ್ ಸಿಬ್ಬಂದಿಗಳು ಎಸ್ಕೇಪ್ ಆಗಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Categories
ಉಡುಪಿ

ನಟೋರಿಯಸ್ ಇಸಾಕ್ ಪರಾರಿ ಪ್ರಕರಣ: ಪೊಲೀಸರ ಫೈರಿಂಗ್

ನಟೋರಿಯಸ್ ಇಸಾಕ್ ಪರಾರಿ ಪ್ರಕರಣ: ಪೊಲೀಸರ ಫೈರಿಂಗ್
– ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದ ಘಟನೆ
– ಎಚ್ಚರಿಕೆ ನೀಡಿದರು ಪರಾರಿಯಾಗಲು ಯತ್ನ, ಪೊಲೀಸರಿಂದ ಫೈರಿಂಗ್

NAMMUR EXPRESS

ಉಡುಪಿ: ಗರುಡ ಗ್ಯಾಂಗ್‌ನ ಸದಸ್ಯ ನಟೋರಿಯಸ್ ಇಸಾಕ್ ಮೇಲೆ ಮಣಿಪಾಲ ಇನ್ಸ್‌ಪೆಕ್ಟರ್ ದೇವರಾಜ್ ಫೈರಿಂಗ್ ನಡೆಸಿದ ಘಟನೆ ನಡೆದಿದೆ.

ಮಾ. 12ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಸಾಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಅವರನ್ನು ಮಣಿಪಾಲಕ್ಕೆ ಕರೆದೊಯ್ಯುವ ವೇಳೆ, ಹಿರಿಯಡ್ಕ ಬಳಿ ಇಸಾಕ್ ಮೂತ್ರ ವಿಸರ್ಜನೆಗೆ ಒತ್ತಾಯಿಸಿ ವಾಹನ ನಿಲ್ಲಿಸಿ, ಪೊಲೀಸರನ್ನು ತಳ್ಳಿ ಪರಾರಿಯ ಯತ್ನ ಮಾಡಿದ. ಈ ಸಂದರ್ಭದಲ್ಲಿ ಲೀಡಿಂಗ್ ಚೈನ್‌ ಅನ್ನು ಬಳಸಿ ವಾಹನದ ಗಾಜು ಒಡೆದು, ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯ ಮಾಡಿದ.

ಎಚ್ಚರಿಕೆ ನೀಡಿದರೂ ಕೂಡಾ ಇಸಾಕ್ ಶರಣಾಗದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ, ಮಣಿಪಾಲ ಪೊಲೀಸ್ ಇನ್ಸ್‌ಪೆಕ್ಟರ್ ದೇವರಾಜ್ ಅವನ ಕಾಲಿಗೆ ಗುಂಡು ಹಾರಿಸಿದರು. ಗಾಯಗೊಂಡ ಇಸಾಕ್ ಹಾಗೂ ಪೊಲೀಸರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕೊಲ್ಲೂರು, ಮಲ್ಪೆ, ಪಡುಬಿದ್ರೆ ಮತ್ತು ಮಣಿಪಾಲ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಮಾ. 4ರಂದು ಉಡುಪಿಯಲ್ಲಿ ಥಾರ್ ಜೀಪ್‌ನಲ್ಲಿದ್ದ ಇಸಾಕ್ ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪ್ರೇಯಸಿಯನ್ನೂ ಪೊಲೀಸರು ಬಂಧಿಸಿದ್ದರು.

Categories
ಬೆಂಗಳೂರು

ಕಾಂಗ್ರೆಸ್‌ ಸರ್ಕಾರಕ್ಕೆ 2 ವರ್ಷ, ಸಂಪುಟ ಪುನಾರಚನೆಗೆ ಸಿಎಂ ಸಿದ್ದತೆ

ಕಾಂಗ್ರೆಸ್‌ ಸರ್ಕಾರಕ್ಕೆ 2 ವರ್ಷ, ಸಂಪುಟ ಪುನಾರಚನೆಗೆ ಸಿಎಂ ಸಿದ್ದತೆ

– ನಾಯಕತ್ವ ಬದಲಾವಣೆಗೆ ಇಬ್ಬರ ನಡುವೆ ಮುಸುಕಿನ ಗುದ್ದಾಟ
– ಸರ್ಕಾರಕ್ಕೆ 2 ವರ್ಷ ಪೂರೈಸಿದ ಹಿನ್ನಲೆ, ಬದಲಾವಣೆಯ ನಿರೀಕ್ಷೆಯಲ್ಲಿ ಜನ!

NAMMUR EXPRESS NEWS
ಬೆಂಗಳೂರು: ಮೇ.23, 2025ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸಲಿದೆ. ಎರಡು ವರ್ಷಗಳ ಆಡಳಿತವನ್ನು ಆಚರಿಸಲು ಮತ್ತು ನವೆಂಬರ್‌ನಲ್ಲಿ ಸಿಎಂ ಹುದ್ದೆಗೆ ಹಕ್ಕು ಮಂಡಿಸಲು ಉತ್ಸುಕರಾಗಿರುವ ಡಿ.ಕೆ ಶಿವಕುಮಾ‌ರ್ ಸಂಭ್ರಮಾಚರಣೆ ಮಾಡಲು ಉತ್ಸುಕರಾಗಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಪುನರಾಚನೆ ಮಾಡಲು ತಮ್ಮದೇ ಆದ ಯೋಜನೆಯಲ್ಲಿ ಮುಳುಗಿದ್ದಾರೆ. ಇದು ಅವರು ಸಿಎಂ ಆಗಿ ಮುಂದುವರಿಯಲು ಅನುವು ಮಾಡಿಕೊಡುತ್ತದೆ ಎಂದು ಮೂಲಗಳು ತಿಳಿಸಿವೆ.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ಸಿಎಂ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ಸಂಪುಟ ಪುನರಚನೆ ಆಯ್ಕೆ ಮಾಡಬಹುದು. ಅಕ್ಟೋಬರ್ 2025ಕ್ಕೆ ಅವರು ಸಿಎಂ ಆಗಿ ಎರಡೂವರೆ ವರ್ಷಗಳನ್ನು ಪೂರ್ಣಗೊಳಸುವ ಮೊದಲು ಏನು ಬೇಕಾದರೂ ಆಗಬಹುದು ಎಂದು ಕಾಂಗ್ರೆಸ್‌ನ ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ.
ಸಂಪುಟ ಪುನರಾಚನೆಗೆ ಹೈಕಮಾಂಡ್ ಅನು ಮೋದಿಸಿದರೆ, ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನ ಭದ್ರಪಡಿಸಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ. ಅವರು ಈಗಾಗಲೇ ಪಕ್ಷದ ಹೈಕಮಾಂಡ್ ಮತ್ತು ಶಿವಕುಮಾರ್‌ಗೆ ಪರೋಕ್ಷವಾಗಿ ಸಂದೇಶವನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.
ಶಿವಕುಮಾ‌ರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ಡಿಸಿಎಂ ಆಗಿ ಮುಂದುವರಿಯಲು ಅಭ್ಯಂತರವಿಲ್ಲ, ಅದರಲ್ಲಿ ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಸೇರಿದಂತೆ ಉತ್ತಮ ಖಾತೆ ಅವರ ಬಳಿಯಿವೆ. ತಮ್ಮ ಸಚಿವ ಸಂಪುಟದಿಂದ 15 ಸಚಿವರನ್ನು ಕೈಬಿಡಲು ಅವರು ಸಿದ್ಧರಿದ್ದಾರೆ, ಅವರಲ್ಲಿ ಕೆಲವರು ತಮ್ಮ ಬೆಂಬಲಿಗ ಸಚಿವರು ಇದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ಶಾಸಕರಿಗೆ ಸಚಿವರ ವಿರುದ್ಧ ಅಸಮಾಧಾನವಿದೆ, ಇದನ್ನೇ ನೆಪವಾಗಿಟ್ಟು ಕೊಂಡು ಸಚಿವರನ್ನು ಸಂಪುಟದಿಂದ ಕೈಬಿಡಲು ಸಿಎಂ ಮುಂದಾಗಿದ್ದಾರೆ.. ಇದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಸ್ಪಷ್ಟವಾಗಿತ್ತು.
ಸಚಿವರು ತಮ್ಮ ಪ್ರಸ್ತಾವನೆಗಳಿಗೆ ಸ್ಪಂದಿಸದಿರುವ ವಿಷಯವನ್ನು ಶಾಸಕರು ಬಹಿರಂಗವಾಗಿ ಪ್ರಸ್ತಾಪಿಸಿದರು. ಸಿದ್ದರಾಮಯ್ಯ ಅವರು ಸಚಿವರ ಬಗ್ಗೆ ಚಿಂತಿಸುತ್ತಿಲ್ಲ, ಬದಲಿಗೆ ಸಿಎಂ ಆಗಿ ಮುಂದುವರಿಯಲು ಶಾಸಕರ ಬೆಂಬಲ ಹೆಚ್ಚು ಮುಖ್ಯ ಎಂದು ಅವರು ಚಿಂತಿತರಾಗಿದ್ದಾರೆ ಎಂದು ಎಂ. ಎಲ್‌. ಸಿಯೊಬ್ಬರು ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ
ಡಾ. ಶರಣಪ್ರಕಾಶ್ ಪಾಟೀಲ್ ಮತ್ತು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ನಡುವೆ ಗಲಾಟೆ ನಡೆದಿದೆ. ಸಿಎಲ್‌ಪಿ ಸಭೆಯ ನಂತರ, ರಾಯಚೂರು ಮೂಲದ ಬೋಸರಾಜು, ಅಧಿಕಾರಿಯನ್ನು ವರ್ಗಾವಣೆ ಮಾಡುವ ಬಗ್ಗೆ ಶಾಸಕ ಬಸನಗೌಡ ದದ್ದಲ್‌ಗೆ ಪತ್ರ ನೀಡಿದ್ದಕ್ಕಾಗಿ ಪಾಟೀಲ್‌ ಅವರನ್ನು ಪ್ರಶ್ನಿಸಿದರು. ಇದೇ ವೇಳೆ ಪಾಟೀಲ್ ತಮ್ಮನ್ನು ತಾವು ಸಮರ್ಥಿಸಿಕೊಂಡರು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಾಸಕರ ಕೋರಿಕೆಗೆ ಸ್ಪಂದಿಸಿದ್ದಾರೆ ಎಂದರು. ಹೀಗಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುವ ನಿರೀಕ್ಷೆಯಿದ್ದು, ಯಾವ ರೀತಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.