Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರುರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ಉತ್ತಮ ದಿನ. ಕೆಲಸದಲ್ಲಿ ಪ್ರಗತಿ ಸಿಗಲಿದೆ. ಇಂದು ನಿಮಗೆ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಪ್ರೇಮಿಗಳ ಜೀವನದಲ್ಲಿ ಹೊಸ ತಿರುವು ಬರಲಿದೆ. ದಾಂಪತ್ಯ ಜೀವನದಲ್ಲಿ ಪ್ರಣಯ ಹೆಚ್ಚಾಗಲಿದೆ. ನಿಮ್ಮ ಸ್ನೇಹಿತರ ಆರೋಗ್ಯದ ಬಗ್ಗೆ ನೀವು ಚಿಂತೆ ಮಾಡಬೇಕಾಗಬಹುದು. ಅವರಿಗೆ ನೀವು ಧನ ಸಹಾಯ ಮಾಡಬಹುದು. ಯಾವುದೇ ಆಸ್ತಿ ಸಂಬಂಧಿತ ವಿವಾದ ನಡೆಯುತ್ತಿದ್ದರೆ ಇಂದು ಪರಿಹಾರ ಸಿಗಬಹುದು.

** ವೃಷಭ ರಾಶಿ :
ಇಂದು ನಿಮ್ಮನ್ನು ಯಶಸ್ಸು ಹುಡುಕಿ ಬರಲಿದೆ. ಆದರೆ ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡುವುದರಿಂದ ನಿಮ್ಮ ಆತಂಕ ಹೆಚ್ಚಾಗಬಹುದು. ಇಂದು ವ್ಯಾಪಾರಸ್ಥರಿಗೆ ಸ್ವಲ್ಪ ಕಠಿಣ ದಿನ. ಕೌಟುಂಬಿಕ ಜೀವನದಲ್ಲಿ ನಡೆಯುತ್ತಿರುವ ಅಪಶ್ರುತಿಯು ತಲೆನೋವಾಗಿ ಕಾಡಲಿದೆ. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಮನೆಯ ಹಿರಿಯ ಸದಸ್ಯರೊಂದಿಗೆ ಚರ್ಚಿಸುವುದು ಉತ್ತಮ. ಇಂದು ನಿಮ್ಮ ಆರೋಗ್ಯವು ಹದಗೆಡಬಹುದು.

** ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಇಂದು ಸ್ವಲ್ಪ ಸವಾಲಿನ ದಿನವಾಗಿರುತ್ತದೆ. ಉದ್ಯೋಗಿಗಳಿಗೆ ಕೆಲವು ಸವಾಲಿನ ಕೆಲಸ ಎದುರಾಗಬಹುದು. ಇದನ್ನು ಪೂರ್ಣಗೊಳಿಸಲು ಸ್ವಲ್ಪ ತೊಂದರೆ. ಎದುರಿಸಬೇಕಾಗಬಹುದು ಆದರೆ ಸವಾಲನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳ ಆಸೆ ಈಡೇರಬಹುದು. ಇಂದು ನಿಮ್ಮ ಪೋಷಕರೊಂದಿಗೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.

** ಕರ್ಕಾಟಕ ರಾಶಿ :
ಕಟಕ ರಾಶಿಯವರಿಗೆ ಇಂದು ಉತ್ತಮ ದಿನವಾಗಿರುತ್ತದೆ. ಉದ್ಯೋಗಿಗಳು ಇಂದು ನಿಮ್ಮ ಕೆಲಸದಲ್ಲಿ ಅಧಿಕೃತ ಸ್ಥಾನವನ್ನು ಪಡೆಯಬಹುದು, ಜೊತೆಗೆ ಉದ್ಯೋಗ ಬದಲಿಸುವ ಆಲೋಚನೆಯಲ್ಲಿರುವವರಿಗೆ ಸಿಹಿ ಸುದ್ದಿ ಸಿಗಬಹುದು. ನೀವು ಹಣ ಹೂಡಿಕೆ ಮಾಡಲು ಬಯಸುತ್ತಿದ್ದರೆ ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯಿರಿ. ನೀವು ಮತ್ತು ನಿಮ್ಮ ಸಂಗಾತಿ ಇಂದು ಹೊಸ ಕೆಲಸವನ್ನು ಪ್ರಾರಂಭಿಸಬಹುದು.

** ಸಿಂಹ ರಾಶಿ :
ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನ. ವ್ಯಾಪಾರಸ್ಥರಿಗೆ ಧನಲಾಭ. ಇಂದು ನಿಮಗೆ ಅಧ್ಯಯನ ಮತ್ತು ಆಧ್ಯಾತ್ಮಿಕತೆಯ ಕಡೆಗೆ ಆಸಕ್ತಿ ಹೆಚ್ಚಾಗಲಿದೆ. ಇಂದಿನ ಕೆಲಸಗಳನ್ನು ನಾಳೆಗೆ ಮುಂದೂಡುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಸಮಸ್ಯೆಗಳನ್ನು ಎದುರಿಸುತ್ತೀರಿ. ಯಾರನ್ನೂ ಕುರುಡಾಗಿ ನಂಬಬೇಡಿ. ಇಂದು ನೀವು ಸಾಲ ಪಡೆದಿರುವ ಹಣವನ್ನು ಮರುಪಾವತಿ ಮಾಡುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

** ಕನ್ಯಾ ರಾಶಿ :
ಕನ್ಯಾ ರಾಶಿಯವರಿಗೆ ಇಂದು ಬಹಳ ಅದ್ಭುತವಾದ ದಿನವಾಗಿರುತ್ತದೆ. ಉದ್ಯೋಗಸ್ಥರ ಕೆಲವು ಆಸೆಗಳು ಇಂದು ಈಡೇರಲಿವೆ. ನಿಮಗೆ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದೆ. ಉದ್ಯಮಿಗಳು ಇಂದು ತಮ್ಮ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗಬಹುದು. ಇಂದು ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಿ, ಇಲ್ಲದಿದ್ದರೆ ಹಳೆಯ ಕಾಯಿಲೆಗಳು ನಿಮ್ಮನ್ನು ಮತ್ತೆ ಬಾದಿಸಲಿವೆ.

** ತುಲಾ ರಾಶಿ :
ತುಲಾ ರಾಶಿಯವರಿಗೆ ಇಂದು ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಅದೃಷ್ಟ ಕೈ ಹಿಡಿಯಲಿದೆ. ಶೀಘ್ರದಲ್ಲೇ ಯಶಸ್ಸು ಹುಡುಕಿ ಬರಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ, ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ನಿಮ್ಮ ಸ್ವಾಭಿಮಾನ ಹೆಚ್ಚಾದಂತೆ ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಮುನ್ನಡೆಯುತ್ತೀರಿ. ನೀವು ಸಂಬಂಧಿಕರಿಗೆ ಸಾಲ ನೀಡದಿರುವುದು ಒಳಿತು, ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯ ಕಳೆಯಿರಿ.

** ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರಿಗೆ ಇಂದು ಉತ್ತಮ ದಿನವಾಗಿರುತ್ತದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಶುಭವಾಗಲಿದೆ. ನಿಮ್ಮ ಒಳ್ಳೆಯ ಕಾರ್ಯಗಳಿಗೆ ಉನ್ನತ ಸ್ಥಾನ ಸಿಗಲಿದೆ. ಉದ್ಯೋಗಿಗಳು ಕಚೇರಿಯಲ್ಲಿ ಹರಟೆ ಹೊಡೆಯುತ್ತಾ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ. ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾಪಗಳು ಬರಬಹುದು. ನಿಮ್ಮ ಮನಸ್ಸಿನಲ್ಲಿರುವ ಸಮಸ್ಯೆಗಳ ಬಗ್ಗೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಮುಕ್ತವಾಗಿ ಮಾತನಾಡಬೇಕಾಗುತ್ತದೆ.

** ಧನಸ್ಸು ರಾಶಿ :
ಧನು ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಲಿದೆ. ನಿಮ್ಮ ವೃತ್ತಿಜೀವನದ ಬಗ್ಗೆ ಚಿಂತೆ ಹೆಚ್ಚಾಗಬಹುದು. ಆದರೆ ಕೆಲಸದಲ್ಲಿ ಬಡ್ತಿ ಅಥವಾ ಸಂಬಳ ಹೆಚ್ಚಳದಂತಹ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಇದರಿಂದ ನಿಮ್ಮ ಸಂತೋಷ ಇಮ್ಮಡಿಯಾಗಲಿದೆ ಇಂದು ಕೆಲವು ವಿಷಯಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು, ಇದರಿಂದಾಗಿ ನೀವು ಸ್ವಲ್ಪ ಚಿಂತೆ ಮಾಡುತ್ತೀರಿ.

** ಮಕರ ರಾಶಿ :
ಮಕರ ರಾಶಿಯವರಿಗೆ ಇಂದು ಸ್ವಲ್ಪ ತೊಂದರೆ ಎದುರಾಗುವ ಸಾಧ್ಯತೆ ಇದೆ. ಉದ್ಯೋಗಿಗಳು ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಕೆಲವು ರೀತಿಯ ಪಿತೂರಿಯಿಂದ ತೊಂದರೆಗೊಳಗಾಗಬಹುದು, ಆದರೆ ಚಿಂತೆ ಮಾಡುವ ಬದಲು, ಅವರನ್ನು ಸೋಲಿಸಲು ನೀವು ತಂತ್ರವನ್ನು ಸಿದ್ಧಪಡಿಸಿದರೆ, ನೀವು ಈ ಸಮಸ್ಯೆಯಿಂದ ಹೊರಬರಬಹುದು. ನಿಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ.

** ಕುಂಭ ರಾಶಿ :
ಕುಂಭ ರಾಶಿಯವರಿಗೆ ಇಂದು ಅದೃಷ್ಟದ ದಿನವಾಗಲಿದೆ. ನಿಮಗೆ ಆರ್ಥಿಕ ಲಾಭವಿದೆ. ಮಕ್ಕಳಿಂದ ಸಿಹಿ ಸುದ್ದಿ ಸಿಗಲಿದೆ. ಮನೆಯ ಹಿರಿಯರೊಂದಿಗೆ ತಾಳ್ಮೆಯಿಂದ ಮಾತಾನಾಡಿ, ಇಲ್ಲದಿದ್ದರೆ ಅವರು ನಿಮ್ಮ ಮೇಲೆ ಕೋಪಗೊಳ್ಳಬಹುದು. ವ್ಯಾಪಾರಸ್ಥರಿಗೆ ಕೆಲವು ಉತ್ತಮ ಅವಕಾಶಗಳು ಸಿಗಲಿವೆ, ಇದರಿಂದ ಧನಲಾಭವಾಗಲಿದೆ. ವ್ಯಾಪಾರದಲ್ಲಿ ಯಾವುದೇ ವಿವಾದಗಳು ನಡೆಯುತ್ತಿದ್ದರೆ, ಮಾತುಕತೆಯ ಮೂಲಕ ಅದನ್ನು ಬಗೆಹರಿಸಲು ಪ್ರಯತ್ನಿಸಿ.

** ಮೀನ ರಾಶಿ :
ಇಂದು ನಿಮಗೆ ಸಮಸ್ಯೆಗಳಿಂದ ತುಂಬಿರುತ್ತದೆ. ಕುಟುಂಬದ ಸದಸ್ಯರ ನಡುವೆ ಕೆಲವು ವಿಷಯಗಳಿಗೆ ಜಗಳವಾಗಬಹುದು, ಆದರೆ ನೀವು ಎರಡೂ ಕಡೆಯಿಂದ ಅಭಿಪ್ರಾಯಗಳನ್ನು ಪಡೆದ ನಂತರವೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇಂದು ನಿಮ್ಮ ಮನಸ್ಸು ಒತ್ತಡದಿಂದ ತೊಂದರೆಗೊಳಗಾಗುತ್ತದೆ. ಯಾವುದೇ ಆಸ್ತಿ ಸಂಬಂಧಿತ ವಿಷಯವು ನಿಮಗೆ ತೊಂದರೆಯನ್ನು ನೀಡಬಹುದು.

Categories
ಕರಾವಳಿ

ಮಂಗಳೂರಲ್ಲಿ ಬೇಸಿಗೆ ಮಳೆ!

ಮಂಗಳೂರಲ್ಲಿ ಬೇಸಿಗೆ ಮಳೆ!

– ನಗರದ ತಾಪಮಾನ ತಗ್ಗಿಸಿದ ಮಾರ್ಚ್ ತಿಂಗಳ ಮೊದಲ ವರ್ಷಧಾರೆ!
– ಕೆಲವೆಡೆ ಭಾರಿ ಬಿರುಗಾಳಿ ಸೃಷ್ಟಿ

NAMMUR EXPRESS NEWS
ಮಂಗಳೂರು: ಬಿಸಿಲ ಧಗೆಯಿಂದ ಬೇಸತ್ತು ಹೋಗಿದ್ದ ಸ್ಮಾರ್ಟ್ ಸಿಟಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊನೆಗೂ ವರ್ಷಧಾರೆಯಾಗಿದ್ದು, ಮಾ. 12 ಅಂದರೆ ಇಂದು ಸಂಜೆ ಸುರಿದ ಮಾರ್ಚ್ ತಿಂಗಳ ಮೊದಲ ಮಳೆಯಿಂದಾಗಿ ನಗರದ ತಾಪಮಾನ ಗಣನೀಯವಾಗಿ ಇಳಿಕೆಯಾಗಿದೆ.
ಸಂಜೆ 6 ಗಂಟೆ ಹೊತ್ತಿಗೆ ಮಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಹಲವೆಡೆ ಮಳೆಯಾಗಿದೆ. ಅಂತೆಯೇ ಭಾರಿ ಗಾಳಿಯಿಂದಾಗಿ ಮೋಡಗಳಲ್ಲಿಯೂ ಚಲನೆ ಕಂಡುಬಂದಿದ್ದು, ಮಳೆ ಮೋಡಗಳು ಚಲಿಸುತ್ತಿವೆ.

Categories
ಕರಾವಳಿ

ಕಾರ್ಕಳ ಲಯನ್ಸ್‌ ಕ್ಲಬ್ ನಲ್ಲಿ ಜಿಲ್ಲಾ ಗವರ್ನರ್‌ ಮೊಹಮ್ಮದ್‌ ಹನೀಫ್‌ ಭೇಟಿ!

ಕಾರ್ಕಳ ಲಯನ್ಸ್‌ ಕ್ಲಬ್ ನಲ್ಲಿ ಜಿಲ್ಲಾ ಗವರ್ನರ್‌ ಮೊಹಮ್ಮದ್‌ ಹನೀಫ್‌ ಭೇಟಿ!

– ಸಭೆಯಲ್ಲಿ ಸಾಧಕರಿಗೆ ಗೌರವ ಸನ್ಮಾನ!
– ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆಯಾಗಿ ಬೆಳೆದು ನಿಂತ ಸಂಸ್ಥೆ ಅಂತಾರಾಷ್ಟ್ರೀಯ ಲಯನ್ಸ್‌ ಕ್ಲಬ್‌: ಜಿಲ್ಲಾ ಗವರ್ನರ್‌
– ಸಭೆಯ ಬಳಿಕ ಸ್ಥಳೀಯ ಮಕ್ಕಳಿಂದ ನಡೆದ ನೃತ್ಯ ಕಾರ್ಯಕ್ರಮದ ಝಲಕ್

NAMMUR EXPRESS NEWS
ಕಾರ್ಕಳ: ಕಟೀಲ್‌ ಇಂಟರ್‌ ನ್ಯಾಶನಲ್‌ ಹೊಟೇಲಿನಲ್ಲಿ ಮಾ. 11ರಂದು ಲಯನ್ಸ್‌ ಕ್ಲಬ್‌ ಕಾರ್ಕಳ ಅದ್ದೂರಿ ಸಭೆ ಜರುಗಿತು. ಸಭೆಗೆ ಜಿಲ್ಲಾ ಗವರ್ನರ್‌ ಮೊಹಮ್ಮದ್‌ ಹನೀಫ್‌ ಅವರು ಅಧಿಕೃತ ಭೇಟಿ ನೀಡಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು 1917ರಲ್ಲಿ ಆರಂಭವಾದ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್‌ ಇಂದು ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಲಯನ್ಸ್‌ನ ಸೇವಾ ಕಾರ್ಯಗಳನ್ನು ವಿಶ್ವಸಂಸ್ಥೆ ಗುರುತಿಸಿ ಮನ್ನಣೆ ನೀಡಿದ್ದು, ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ನಾವೆಲ್ಲರೂ ಸೇರಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಜಿಲ್ಲಾ ಗವರ್ನರ್‌ ಮೊಹಮ್ಮದ್‌ ಹನೀಫ್‌ ತಿಳಿಸಿದರು.
ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ ಮೂಲಕ ಎಲ್ಲಾ ಸದಸ್ಯರ ಸಹಕಾರದಿಂದ ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಮಾನವೀಯತೆಯನ್ನು ಸಮಾಜದಲ್ಲಿ ಪಸರಿಸಲು ಒಗ್ಗಟ್ಟಾಗಿ ಸೇರಿ ಹಲವಾರು ಕ್ರಿಯಾ ಯೋಜನೆಗಳನ್ನು ರೂಪಿಸಿ ಕಟ್ಟಕಡೆಯ ವ್ಯಕ್ತಿಗೆ ಇದರ ಸಹಾಯ ದೊರಕಲಿ ಎಂಬುವುದೇ ಸಿಟಿ ಕ್ಲಬ್‌ ತಂಡದ ಆಶಯವಾಗಿದೆ.
ಅದೇ ರೀತಿ ಕಳೆದ ನಾಲ್ಕು ವರುಷಗಳಿಂದ ಲಯನ್ಸ್ ಸಂಸ್ಥೆಯಲ್ಲಿ ಭಾಗಿಯಾಗಿ ಇತ್ತೀಚೆಗೆ ಲಿಯೋ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ಎಂಬ ಲಿಯೋ ಕ್ಲಬ್‌ನ್ನು ಜಿಲ್ಲೆಗೆ ನೀಡಿರುವುದು ಈ ತಂಡದ ಸಾಧನೆ ಎಂದು ಹನೀಫ್‌ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರು ಬಹಳಷ್ಟು ಮುಂದುವರಿದಿದ್ದಾರೆ. ಅಡುಗೆಮನೆ ಜೊತೆಗೆ, ಕಚೇರಿಯಲ್ಲಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಓರ್ವ ಮಹಿಳೆ ಲಯನ್ಸ್‌ನ ಚುಕ್ಕಾಣಿ ಹಿಡಿದು ಮುನ್ನಡೆಯುತ್ತಿರುವುದು, ಅದರೊಂದಿಗೆ ನಾಲ್ವರು ಸಮರ್ಥ ಮಹಿಳಾ ಸದಸ್ಯರನ್ನು ಸಂಸ್ಥೆಗೆ ಸೇರಿಸಿರುವುದು ಅಧ್ಯಕ್ಷೆ ಜ್ಯೋತಿ ರಮೇಶ್‌ ಅವರ ಸಾಧನೆಯಾಗಿದೆ ಎಂದು ಜಿಲ್ಲೆಯ ಪ್ರಥಮ ಉಪಜಿಲ್ಲಾ ಗವರ್ನರ್‌ ಸಪ್ನಾ ಸುರೇಶ್‌ ಹೇಳಿದರು.

ಸಭೆಯಲ್ಲಿ ಸಾಧಕರಿಗೆ ಗೌರವ ಸನ್ಮಾನ!

ರಾಜ್ಯಮಟ್ಟದ ಕುಸ್ತಿ ಮತ್ತು ಕರಾಟೆಪಟು ಕಾರ್ಕಳದ ಕ್ರೈಸ್ಟ್‌ಕಿಂಗ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಸಾನ್ವಿ ನಾಯಕ್‌ ಮತ್ತು 33 ವರುಷಗಳಿಂದ ಅಂಗನವಾಡಿ ಸಹಾಯಕಿಯಾಗಿ ಕರ್ತವ್ಯ ನಿಭಾಯಿಸಿದ ಕುಕ್ಕುಂದೂರು ಪರಪು ಅಂಗನವಾಡಿ ಕೇಂದ್ರದ ಲೀಲಾವತಿ ಪೂಜಾರಿ ಮತ್ತು ಸಾಣೂರು ಮುದ್ದಣ್ಣ ನಗರ ಅಂಗನವಾಡಿ ಕೇಂದ್ರದ ಪ್ರೇಮಾ ಪೂಜಾರಿ ಇವರನ್ನು ಗುರುತಿಸಿ ಗೌರವಿಸಲಾಯಿತು.
ಹಾಗೂ ವಿವಿಧ ಕ್ಲಬ್ ಗಳಿಂದ ಆಗಮಿಸಿದ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಈ ಸಭೆಯಲ್ಲಿ ಗೌರವಿಸಲಾಯಿತು.
2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಜನೆಗಾಗಿ ಮೂವರು ಪಿಯುಸಿ ವಿದ್ಯಾರ್ಥಿಗಳಿಗೆ ಸುರಕ್ಷಾ ಸೇವಾಶ್ರಮಕ್ಕೆ ದಾನಿಗಳ ಸಹಕಾರದೊಂದಿಗೆ ಸಹಾಯಧನವನ್ನು ವಿತರಣೆಯನ್ನು ಕಾರ್ಯಕ್ರಮದಲ್ಲಿ ಮಾಡಲಾಯಿತು. ಲಿಯೋ ಕ್ಲಬ್ ಅನ್ನು ಜಿಲ್ಲೆಗೆ ನೀಡಿರುವ ಲಯನ್ಸ್‌ ಸಿಟಿಯ ಅಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ಜಿಲ್ಲಾ ಗವರ್ನರ್‌ ಸನ್ಮಾನಿಸಿದರು. ಸಭೆಯ ಅಧ್ಯಕ್ಷತೆಯನ್ನು ಕ್ಲಬ್‌ ಅಧ್ಯಕ್ಷೆ ಜ್ಯೋತಿ ರಮೇಶ್‌ ವಹಿಸಿದ್ದು, ಕೋಶಾಧಿಕಾರಿ ಟಿ. ಕೆ. ರಘುವೀರ್‌, ಕ್ಯಾಬಿನೆಟ್‌ ಕಾರ್ಯದರ್ಶಿ ಗಿರೀಶ್‌ ರಾವ್‌, ಎಲ್‌ಸಿಎಫ್‌ ಕೋ ಆರ್ಡಿನೇಟರ್‌ ಎಂಜೆಎಫ್‌ ಲಯನ್‌ ಹರಿಪ್ರಸಾದ್‌ ರೈ, ಪ್ರಾಂತೀಯ ಅಧ್ಯಕ್ಷ ಹರೀಶ್‌ ಬೆಳಂಜೆ, ವಲಯಾಧ್ಯಕ್ಷ ಶಾಕೀರ್‌ ಹುಸೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಘುನಾಥ್‌ ಕೆ.ಎಸ್‌. ಕ್ಲಬಿನ ವರದಿಯನ್ನು ಮಂಡಿಸಿದರು. ಸಭೆಯ ಬಳಿಕ ನೃತ್ಯ ಕಾರ್ಯಕ್ರಮ ಸ್ಥಳೀಯ ಮಕ್ಕಳಿಂದ ಜರುಗಿತು.

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್!

ಚಿಕ್ಕಮಗಳೂರು ಟಾಪ್ ನ್ಯೂಸ್!

* ವಿವಾದಿತ ಪ್ರದೇಶದಲ್ಲಿ ನಿಷೇಧಾಜ್ಞೆ ಮುಂದುವರಿಕೆ
* ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ ಕಳ್ಳಭಟ್ಟಿ ವಶಕ್ಕೆ
* ಪ್ರತಿಜ್ಞಾ ವಿಧಿ ಸ್ವೀಕರಿಸಿದ ನಾಗರೀಕ ಬಂದೂಕು ಶಿಬಿರಾರ್ಥಿಗಳು

NAMMUR EXPRESS NEWS

ಚಿಕ್ಕಮಗಳೂರು: ಬಡಾ ಮಕಾನ್ ಹಾಗೂ ನೆಲ್ಲೂರು ಮಠದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 04/03/2025 ರ ಮಧ್ಯರಾತ್ರಿ 12:00 ಗಂಟೆಯಿಂದ 10/03/2025 ರ ಮಧ್ಯ ರಾತ್ರಿ 12.00 ಗಂಟೆವರೆಗೆ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ.
10.03.2025 ರ ಮಧ್ಯರಾತ್ರಿಯಿಂದ 24.03.2025 ರ ಮಧ್ಯರಾತ್ರಿ 12.00 ವರೆಗೆ 14 ದಿವಸಗಳ ಕಾಲ ಬಡಮಕಾನ್ ದರ್ಗಾವನ್ನು ಹೊರತುಪಡಿಸಿ ಅದರ ಪಕ್ಕದಲ್ಲಿ ಇರುವ ವಿವಾದಿತ ಸ್ಥಳದಲ್ಲಿ ಪ್ರವೇಶ/ಕಟ್ಟಡ ನಿರ್ಮಾಣ/ತೆರವು ಮತ್ತು ಪ್ರತಿಭಟನೆ ಹಾಗೂ ಯಾವುದೇ ರೀತಿಯ ಚಟುವಟಿಕೆಯನ್ನು ಮಾಡದಂತೆ ಕಲಂ.163 ಬಿ.ಎನ್.ಎಸ್.ಎಸ್. ರೀತ್ಯಾ ನಿರ್ಭಂಧಕಾಜ್ಞೆಯನ್ನು ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಹಾಗೂ ಸಂರಕ್ಷಣಾ ದೃಷ್ಟಿಯಿಂದ ವಿಸ್ತರಿಸಿ ಚಿಕ್ಕಮಗಳೂರು ತಹಶೀಲ್ದಾ‌ರ್ ಸುಮಂತ್ ಆದೇಶ ಹೊರಡಿಸಿದ್ದಾರೆ.

* ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ ಕಳ್ಳಭಟ್ಟಿ ವಶಕ್ಕೆ

ಕೊಟ್ಟಿಗೆಹಾರ: ಅಬಕಾರಿ ಉಪ ಆಯುಕ್ತರು, ಚಿಕ್ಕಮಗಳೂರು ಜಿಲ್ಲೆ, ಹಾಗೂ ಅಬಕಾರಿ ಅಧೀಕ್ಷಕರು ಇವರ ನಿರ್ದೇಶನದಲ್ಲಿ ಉಪ ಅಧೀಕ್ಷಕರು, ಮೂಡಿಗೆರೆ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಕಣಚೂರು ಗ್ರಾಮದ ನಾಗೇಶ ಶೆಟ್ಟಿ ಬಿನ್ ಈರಶೆಟ್ಟಿ ಎಂಬಾತನ ಮನೆಯಲ್ಲಿ ನಡೆಸಿದ ದಾಳಿಯಲ್ಲಿ 30 ಲೀಟರ್ ಕಳ್ಳಭಟ್ಟಿ ತಯಾರಿಸುವ ಬೆಲ್ಲದ ಕೊಳೆ ವಶಪಡಿಸಿಕೊಳ್ಳಲಾಗಿದೆ.
ಇದೆ ಸಂದರ್ಭದಲ್ಲಿ, ಪುಟ್ಟಸ್ವಾಮಿ ಬಿನ್ ಲೇಟ್ ರಾಮ ಶೆಟ್ಟಿ ಅವರ ವಾಸದ ಮನೆಯಲ್ಲಿ ನಡೆಸಿದ ದಾಳಿಯಲ್ಲಿ 05 ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆಯಾಗಿದೆ. ಸದರಿ ಇಬ್ಬರು ಆರೋಪಿಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ದಾಳಿ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಲೋಕೇಶ್ ಸಿ, ಪೃಥ್ವಿ ಬಿ.ಎಸ್., ಹಾಗೂ ಸಿಬ್ಬಂದಿಗಳಾದ ಶಿವಣ್ಣ, ರಮೇಶ್ ತುಳುಜಣ್ಣನವರ್, ಸುರೇಶ್ ಕಲ್ಯಾಡ್ರ, ರಮೇಶ್ ಹಾಗೂ ವಾಹನ ಚಾಲಕರಾದ ಅನೂಪ್ ಮತ್ತು ಪ್ರವೀಣ್ ಕುಮಾರ್ ಭಾಗಿಯಾಗಿದ್ದರು.
ಅಬಕಾರಿ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಹಾಗೂ ಅಕ್ರಮ ಮದ್ಯ ನಿಷೇಧಿಸಲು ಮುಂದಾಗಿದ್ದು, ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

* ಪ್ರತಿಜ್ಞಾ ವಿಧಿ ಸ್ವೀಕರಿಸಿದ ನಾಗರೀಕ ಬಂದೂಕು ಶಿಬಿರಾರ್ಥಿಗಳು

ಚಿಕ್ಕಮಗಳೂರು : ಜಿಲ್ಲಾ ಪೊಲೀಸ್ ವತಿಯಿಂದ ನಗರದ ಡಿ.ಎ.ಆರ್ ನಲ್ಲಿ ಆಯೋಜಿಸಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ 500ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಚಿಕ್ಕಮಗಳೂರು ಜಿಲ್ಲಾ ಮೀಸಲು ಪಡೆ ಮೀಸಲು ಪಡೆಯ ಇನ್ಸೆಕ್ಟ‌ರ್ ಸಹದೇವ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಜಿಲ್ಲೆಯಲ್ಲಿ ಹಲವು ವರ್ಷಗಳ ಬಳಿಕ ನಾಗರೀಕ ಬಂದೂಕು ತರಬೇತಿ ಆಯೋಜನೆ ಮಾಡಿರುವುದರಿಂದ ಜಿಲ್ಲೆಯ ವಿವಿಧ ತಾಲೂಕುಗಳಿಂದ 500 ಕ್ಕೂ ಹೆಚ್ಚು ಶಿಬಿರಾರ್ತಿಗಳಿಗೆ ತರಬೇತಿಯನ್ನು ನೀಡಲಾಗಿದೆ.
ಶಿಬಿರದಲ್ಲಿ ಮಹಿಳೆಯರು ಭಾಗವಹಿಸಿರುವುದು ವಿಶೇಷವಾಗಿದೆ.

Categories
ಬೆಂಗಳೂರು

ಮಲೆನಾಡ ಹೋಟೆಲ್ ಉದ್ಯಮಿ ಪ್ರದೀಪ್ ಹೆಗ್ಗೋಡು ಅವರಿಗೆ ಪ್ರತಿಷ್ಠಿತ ಪ್ರಶಸ್ತಿ

ಮಲೆನಾಡ ಹೋಟೆಲ್ ಉದ್ಯಮಿ ಪ್ರದೀಪ್ ಹೆಗ್ಗೋಡು ಅವರಿಗೆ ಪ್ರತಿಷ್ಠಿತ ಪ್ರಶಸ್ತಿ

– ಬೆಂಗಳೂರಿನಲ್ಲಿ ನಡೆದ ವಿಜಯ ಕರ್ನಾಟಕದ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ
– ಆಸರೆ ಹೋಟೆಲ್ ಗ್ರೂಪ್ ಮೂಲಕ ಹೋಟೆಲ್ ಉದ್ಯಮದಲ್ಲಿ ಸಾಧನೆ
– 1500ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ಉದ್ಯೋಗದಾತ

ಬೆಂಗಳೂರು: ರಾಜ್ಯದ ಪ್ರಸಿದ್ಧ ಮಾಧ್ಯಮ ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್ ಕೊಡ ಮಾಡುವ ಹೋಟೆಲ್ ಉದ್ಯಮದ ವಿಶೇಷ ಪ್ರಶಸ್ತಿ ವಿಕೆ ಬಿಎಂ ನೈಟ್ ಲೈಫ್ ಸ್ಪೆಷಲ್ -2025 ಪ್ರಶಸ್ತಿಗೆ ತೀರ್ಥಹಳ್ಳಿ ಮೂಲದ ಪ್ರಸಿದ್ಧ ಹೋಟೆಲ್ ಉದ್ಯಮಿ ಪ್ರದೀಪ್ ಹೆಗ್ಗೋಡು ಅವರು ಭಾಜನರಾಗಿದ್ದಾರೆ.
ಉದ್ಯೋಗ ಸೃಷ್ಟಿ ಮತ್ತು ಹೋಟೆಲ್ ಉದ್ಯಮದಲ್ಲಿ 24 ವರ್ಷಗಳಿಂದ ನಿರಂತರವಾದ ಸಾಧನೆಯನ್ನು ಮಾಡುತ್ತ ಬಂದಿದ್ದು,ಇದೀಗ ಇವರ ಸೇವೆಯನ್ನು ಗುರುತಿಸಿ ಪ್ರದೀಪ್ ಹೆಗ್ಗೋಡು ಅವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಅತ್ಯುತ್ತಮ ಹೋಟೆಲ್ ಉದ್ಯಮ ಪ್ರಶಸ್ತಿಯನ್ನು ಅವರ ರಶ್ ರೆಸ್ಟ್ರೋ ಬಾರ್ ಗ್ರೂಪ್ ಪಡೆದಿದೆ.

1500 ಮಂದಿಗೆ ಉದ್ಯೋಗ ನೀಡಿದ ಉದ್ಯಮಿ

ಪ್ರದೀಪ್ ಹೆಗ್ಗೋಡು ಸುಮಾರು 24 ವರ್ಷಗಳ ಹಿಂದೆ ಶುರು ಮಾಡಿದಂತಹ ಹೋಟೆಲ್ ಜೊತೆಗೆ ಅವರ ಇಂದಿನ ಉದ್ಯಮಗಳಾದ ಆಸರೆ ನಾಟಿ ಸ್ಟೈಲ್, ಆಸರೆ ಇನ್ ಹೋಟೆಲ್, ರಶ್ ಬಾರ್ & ರೆಸ್ಟೋರೆಂಟ್ , ಕೊಡಚಾದ್ರಿ ಚೀಟ್ಸ್ ಪ್ರೈವೇಟ್ ಲಿಮಿಟೆಡ್, ಶ್ರೀ ಮಂಜುನಾಥ ಫೈನಾನ್ಸ್ ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲಿ 1500ಕ್ಕೂ ಹೆಚ್ಚು ಮಂದಿಗೆ ಉದ್ಯೋಗವನ್ನು ನೀಡಿದ್ದಾರೆ.

ಹಳ್ಳಿ ಯಿಂದ ಹೋಗಿ ರಾಜಧಾನಿ ಯಲ್ಲಿ ಸಾಧನೆ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಗ್ಗೋಡು ಸಮೀಪದ ಬೋಗರಕೊಪ್ಪದವರು. ತಂದೆ ಮಂಜಪ್ಪ ಗೌಡ, ತಾಯಿ ಲಕ್ಷ್ಮಿ ದಂಪತಿಗಳ ಸುಪುತ್ರರಾಗಿರುವ ಪ್ರದೀಪ್ ಹೆಗ್ಗೋಡು, ಬಡ ರೈತಾಪಿ ಕುಟುಂಬದಲ್ಲಿ ಹುಟ್ಟಿ ಪರಿಶ್ರಮ, ಸಾಧನೆ ಮೂಲಕ ಮಲೆನಾಡು ಮೂಲದ ಉದ್ಯಮಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ.
ಸುಮಾರು 24 ವರ್ಷಗಳ ಕಾಲ ತಮ್ಮ ಶ್ರಮದ ಫಲವಾಗಿ ಇಂದು ಅತ್ಯುತ್ತಮ ಉದ್ಯಮಿಯಾಗಿ ಹೊರಹೊಮ್ಮಿದ್ದು ವಿಜಯ ಕರ್ನಾಟಕ ಪತ್ರಿಕೆ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
ಹೋಟೆಲ್ ಉದ್ಯಮದ ಬಳಿಕ 2005 ರಲ್ಲಿ ಇವರು ಫೈನಾನ್ಸ್ ಹಾಗೂ ಚಿಟ್ಸ್ ಕಂಪನಿಯನ್ನು ಶುರು ಮಾಡಿದ್ದು. ಈಗಾಗಲೇ ಕೊಡಚಾದ್ರಿ ಚಿಟ್ಸ್ ಸಂಸ್ಥೆ ರಾಜ್ಯದ ವಿವಿಧ ಕಡೆ ಸುಮಾರು 50 ಬ್ರಾಂಚ್ ಗಳನ್ನು ಹೊಂದಿದೆ.

ಪ್ರಶಸ್ತಿ ಪಡೆದ ಸಂತೋಷ ಹಂಚಿಕೊಂಡ ಪ್ರದೀಪ್ ಹೆಗ್ಗೋಡು

ಪ್ರಶಸ್ತಿ ಸಿಕ್ಕಿರುವುದು ಖುಷಿಯಾಗಿದೆ. ನನ್ನ ಸಾಧನೆಯನ್ನು ಗುರುತಿಸಿರುವುದು ಮತ್ತಷ್ಟು ಉದ್ಯೋಗ ಸೃಷ್ಟಿ ಹಾಗೂ ಸೇವೆ ಮಾಡಲು ಅವಕಾಶ ಕೊಟ್ಟಿದ್ದೀರಿ. ನನ್ನ ಈ ಸಾಧನೆಗೆ ಕಾರಣರಾದ ಸಂಸ್ಥೆಯ ಎಲ್ಲಾ ಪಾಲುದಾರರು, ಸಿಬ್ಬಂದಿ ಹಾಗೂ ಗ್ರಾಹಕರಿಗೆ ಧನ್ಯವಾದಗಳು ಅರ್ಪಿಸುತ್ತೇನೆ. ಮುಂದೆ ಕೂಡ ನಿಮ್ಮೆಲ್ಲರ ಸೇವೆಗೆ ಸಿದ್ದರಿದ್ದೇನೆ ಎಂದು ಪ್ರದೀಪ್ ಹೆಗ್ಗೋಡು ಹೇಳಿದ್ದಾರೆ.

ಗುರಿ ಮುಟ್ಟಲು ಸ್ಫೂರ್ತಿ

ಪ್ರದೀಪ್ ಹೆಗ್ಗೋಡು ಹಠ ಛಲ ಮಾಡುವ ಕೆಲಸದಲ್ಲಿ ಶ್ರದ್ಧೆ,ಪರಿಶ್ರಮ ಇದ್ದರೆ ಅಂದುಕೊಂಡ ಗುರಿ ಮುಟ್ಟಲು ಸಾಧ್ಯ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ಆಸರೆ ಹೋಟೆಲ್ ಆರಂಭವಾಗಿ 25 ವರ್ಷಗಳು ಕಳೆದಿದೆ. ಸಾಂಪ್ರದಾಯಿಕ ನಾಟಿ ಸ್ಟೈಲ್ ಆಹಾರ ಆಗಿದೆ. ಹತ್ತು ಜನ ಇದ್ದ ಉದ್ಯೋಗಸ್ಥರಿಂದ 300ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ನನಗೂ ಹೆಮ್ಮೆ ಇದೆ ಎಂದು ಪ್ರದೀಪ್ ಪತ್ನಿ ಅಕ್ಷತಾ ಪ್ರದೀಪ್ ಸಂತಸ ಹಂಚಿಕೊಂಡಿದ್ದಾರೆ.

Categories
ಬೆಂಗಳೂರು

ಮಕ್ಕಳಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತಿರುವ ಆತಂಕ

ಮಕ್ಕಳಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತಿರುವ ಆತಂಕ
– ಕರ್ನಾಟಕದಲ್ಲಿ ಪ್ರತಿ ವರ್ಷ 14 ವರ್ಷದೊಳಗಿನ 1533 ಮಕ್ಕಳಲ್ಲಿ ಕ್ಯಾನ್ಸರ್!
– ಗಂಡು ಮಕ್ಕಳಲ್ಲೇ ಹೆಚ್ಚು, ಕಾರಣ ಏನು?

NAMMUR EXPRESS NEWS
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗದ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಈ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ನಮ್ಮ ರಾಜ್ಯದಲ್ಲಿ 14 ವರ್ಷದೊಳಗಿನ ಮಕ್ಕಳಲ್ಲಿ ಪ್ರತಿ ವರ್ಷ 1533 ಕ್ಯಾನ್ಸರ್ ಪ್ರಕರಣಗಳು ಕಂಡು ಬರುತ್ತಿವೆ. ಪ್ರಶ್ನೋತ್ತರ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯೆ ಉಮಾಶ್ರೀ ಅವರು ಈ ಕುರಿತಾಗಿ ಕೇಳಿದ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವರು ಉತ್ತರ ನೀಡಿದ್ದು, ಆತಂಕಕಾರಿ ಅಂಕಿ – ಅಂಶಗಳನ್ನು ನೀಡಿದ್ದಾರೆ. ಜನಸಂಖ್ಯಾ ಆಧಾರಿತ ಕ್ಯಾನ್ಸರ್ ನೋಂದಣಿ ಪ್ರಕಾರ 0-14 ವರ್ಷ ವಯಸ್ಸಿನ ಗಂಡು ಮಕ್ಕಳಲ್ಲಿ ಪ್ರತಿವರ್ಷ ಸುಮಾರು 876 ಪ್ರಕರಣಗಳು ಹಾಗೂ ಹೆಣ್ಣು ಮಕ್ಕಳಲ್ಲಿ 657 ಪ್ರಕರಣಗಳು ಪ್ರತಿ ವರ್ಷ ಕಂಡು ಬರುತ್ತಿವೆ. ಹೆಚ್ಚಿನ ಮಕ್ಕಳಲ್ಲಿ ಬರುವ ಕ್ಯಾನ್ಸರ್‌ಗೆ ಕಾರಣ ಮಾತ್ರ ತಿಳಿದಿಲ್ಲ. ಸಣ್ಣ ಪ್ರಮಾಣವೆಂದರೆ ದೋಷಪೂರಿತ ಜೀನ್‌ಗಳು ಅಥವಾ ಪರಿಸರದ ಕಾರಣ ಎನ್ನಲಾಗಿದೆ.

– ಗಂಡುಮಕ್ಕಳಲ್ಲೇ ಅಧಿಕ

ಗಂಡು ಮಕ್ಕಳಲ್ಲಿ ಸಾಮಾನ್ಯವಾಗಿ ಶೇ 45 ರಕ್ತದ ಕ್ಯಾನ್ಸರ್ ಹಾಗೂ ಶೇ 14.5 ಲಿಂಪೋಮಾ ಕ್ಯಾನ್ಸರ್, ಮೆದುಳು ಹಾಗೂ ನರಗಳಿಗೆ ಸಂಬಂಧಿಸಿದ ಕ್ಯಾನ್ಸರ್ ಶೇ 12.9, ಮೂಳೆಗೆ ಸಂಬಂಧಿಸಿದ ಕ್ಯಾನ್ಸರ್ ಶೇ 5.6, ಮೂತ್ರ ಪಿಂಡದ ಕ್ಯಾನ್ಸರ್ ಶೇ 3.6 ಹಾಗೂ ಕಣ್ಣಿಗೆ ಸಂಬಂಧಪಟ್ಟ ಕ್ಯಾನ್ಸರ್ ಶೇ. 2.6 ರಷ್ಟು ಸಾಮಾನ್ಯವಾಗಿ ಕಂಡ ಬರುತ್ತಿದೆ.

– ಹೆಣ್ಣು ಮಕ್ಕಳಲ್ಲಿ ಯಾವ್ಯಾವ ಕ್ಯಾನ್ಸರ್?

ಇನ್ನು ಹೆಣ್ಣು ಮಕ್ಕಳಲ್ಲಿ ರಕ್ತಕ್ಕೆ ಸಂಬಂಧಿಸಿದ ಕ್ಯಾನ್ಸರ್ 44.6%. ಮೆದುಳು ಹಾಗೂ ನರಗಳಿಗೆ ಸಂಬಂಧಪಟ್ಟ ಕ್ಯಾನ್ಸರ್ ಶೇ 12.1, ದುಗ್ದ ಗ್ರಂಥಿ ಅಥವಾ ಲಿಂಪೋಮಾ ಕ್ಯಾನ್ಸರ್ ಶೇ 5.8 ರಷ್ಟು ಹಾಗೂ ಮೃದು ಅಂಗಾಂಶ ಸಂಬಂಧಿಸಿದ ಕ್ಯಾನ್ಸರ್ ಶೇ 3.4 ರಷ್ಟು ಕಂಡು ಬರುತ್ತದೆ. ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್‌ ಗೆ ಮುಖ್ಯವಾಗಿ ಕಿಮೋಥೆರಪಿ ಚಿಕಿತ್ಸಾ ವಿಧಾನವನ್ನು ಶೇ 73 ರಷ್ಟು ಅನುಸರಿಸಲಾಗುತ್ತಿದೆ. ಶೇ 12 ರಷ್ಟು ರೋಗಿಗಳಿಗೆ ವಿಕಿರಣ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಉತ್ತರ ನೀಡಿದೆ. ಇನ್ನು ಕಿದ್ವಾಯಿ ಸಂಸ್ಥೆಯಲ್ಲಿ ಈವರೆಗೆ 107 ಅಸ್ತಿಮಜ್ಜೆ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ್ದು, ಇವರಲ್ಲಿ 32 ಮಕ್ಕಳಿಗೆ ಅಸ್ತಿಮಜ್ಜೆ ಚಿಕಿತ್ಸೆಯನ್ನು ಒದಗಿಸಲಾಗಿದೆ. ಪ್ರತಿ ತಿಂಗಳು ಅಂದಾಜು 2 ಮಕ್ಕಳಿಗೆ ಅಸ್ತಿಮಜ್ಜೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

Categories
ಕರಾವಳಿ

ಮಂಗಳೂರು: ಐಶರಾಮಿ ಬಂಗಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗ ಅಗ್ನಿ ಅವಘಡ

ಕರಾವಳಿ ಟಾಪ್ ನ್ಯೂಸ್

ಮಂಗಳೂರು: ಐಶರಾಮಿ ಬಂಗಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗ ಅಗ್ನಿ ಅವಘಡ

– ಮೂಡುಬಿದಿರೆ: ಬಾಲಕಿಗೆ ಕಿರುಕುಳ ಪ್ರಕರಣ, ಆರೋಪಿ ಬಂಧನ…!
– ಪುತ್ತೂರು: ದಾರಿ ಕೇಳುವ ನೆಪದಲ್ಲಿ, ಚಿನ್ನ ಎಗರಿಸಿ ಪರಾರಿ!

NAMMUR EXPRESS NEWS
ಮಂಗಳೂರು: ಐಶರಾಮಿ ಬಂಗಲೆಯಲ್ಲಿ ಖಾಸಗಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದ ಘಟನೆ ನಗರದ ಲೇಡಿಹಿಲ್‌ನ ಗಾಂಧಿನಗರ ಬಳಿ ಮಾ.12ರಂದು ಬುಧವಾರ ನಡೆದಿದೆ.
ಬಂಗಲೆಯಲ್ಲಿದ್ದ ಜನ ಅಪಾಯದಿಂದ ಪಾರಾಗಿದ್ದಾರೆ. ಸಮಾರಂಭ ನಡೆಯುತ್ತಿದ್ದಾಗಲೇ ಈ ಅವಘಡ ನಡೆದಿದೆ. ಅಗ್ನಿಶಾಮಕದಳ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕೆಲಸ ನಡೆದಿದೆ.

– ಮೂಡುಬಿದಿರೆ: ಬಾಲಕಿಗೆ ಕಿರುಕುಳ ಪ್ರಕರಣ, ಆರೋಪಿ ಬಂಧನ…!

ಮೂಡುಬಿದಿರೆ: ಪಾಲಡ್ಕ ಗ್ರಾಪಂ ಬಾಲಕನಿಗೆ ಕಿರುಕುಳ ನೀಡಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಮಾ. 11ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೂಡುಬಿದಿರೆ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಅಲಂಗಾರು ನಿವಾಸಿ ಪವನ್ ಕುಮಾರ್ ಎಂದು ಗುರುತಿಸಲಾಗಿದೆ.
ಈತ ಮಾ.8ರಂದು ಸಂಜೆ ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ವಿದ್ಯಾಗಿರಿ ಬಳಿ, ಜನತಾ ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ್ದ ಎಂದು ದೂರವಾಗಿದೆ.
ಬಾಲಕಿ ಆತನಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿದ್ದು, ಈ ವೇಳೆ ಆರೋಪಿ ಪವನ್ ಕುಮಾರ್ ಅಲ್ಲಿಂದ ಪರಾರಿಯಾಗಿದ್ದಾನೆ.
ವಿವಿಧ ಮೂಲಗಳ ಕುರಿತು ಮಾಹಿತಿ ಸಂಗ್ರಹಿಸಿದ ಈ ಅಲಂಗಾರು ಬಳಿ ಈತನನ್ನು ಬಂಧಿಸಲಾಗಿದೆ. ಆರೋಪಿ ಪ ಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

– ಪುತ್ತೂರು: ದಾರಿ ಕೇಳುವ ನೆಪದಲ್ಲಿ, ಚಿನ್ನ ಎಗರಿಸಿ ಪರಾರಿ!

ಪುತ್ತೂರು: ದಾರಿ ಕೇಳುವ ನೆಪದಲ್ಲಿ ಚಿನ್ನದ ಉಂಗುರ ಎಳೆದು ಪರಾರಿಯಾಗಿರುವ ಘಟನೆ ಪುತ್ತೂರಿನ ರಾಗಿದಕುಮೇರ್‌ ಬಳಿಯ ಅಂದ್ರಟ್ಟ ಎಂಬಲ್ಲಿ ನಡೆದಿದೆ.
ರಾತ್ರಿ ವೇಳೆ, ಅಪರಿಚಿತ ವ್ಯಕ್ತಿ ದಾರಿ ಕೇಳಿದ್ದಾನೆ. ಆಗ ದಾರಿ ಹೇಳಲು ಬಂದ ಮನೆಯವರ ಕೈಯಲ್ಲಿದ್ದ ಉಂಗುರವನ್ನು ಕಿತ್ತು ಬೈಕ್‌ನಲ್ಲಿ ಬಂದ ವ್ಯಕ್ತಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

Categories
ತೀರ್ಥಹಳ್ಳಿ

ಅದ್ದೂರಿಯಾಗಿ ನಡೆದ ಕರಿಮನೆ ದೇವಾಲಯಗಳ ಯಶಸ್ವಿ ಪುನರ್ ಪ್ರತಿಷ್ಠಾಪನೆ ಮಹೋತ್ಸವ!

ಅದ್ದೂರಿಯಾಗಿ ನಡೆದ ಕರಿಮನೆ ದೇವಾಲಯಗಳ ಯಶಸ್ವಿ ಪುನರ್ ಪ್ರತಿಷ್ಠಾಪನೆ ಮಹೋತ್ಸವ!

– ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ವಿಜೃಂಭಣೆ
– ಪರಿವಾರ ದೈವಗಳ ದೈವಗುಡಿ ಪ್ರತಿಷ್ಠಾಪನೆ
– ಸಾವಿರಾರು ಭಕ್ತರು ಭಾಗಿ!

NAMMUR EXPRESS NEWS
ತೀರ್ಥಹಳ್ಳಿ: ತಾಲೂಕಿನ ಹೊದಲ ಅರಳಾಪುರ ಗ್ರಾ.ಪಂ.ವ್ಯಾಪ್ತಿಯ ಪ್ರತಿಷ್ಠಿತ ಕರಿಮನೆಯ
ಶ್ರೀ ಶಂಕರೇಶ್ವರ, ಶ್ರೀ ಲಕ್ಷ್ಮೀನಾರಾಯಣ,
ಶ್ರೀ ಹನುಮಂತ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿತು.
ಮಾ. 7ರ ಶುಕ್ರವಾರ ಪ್ರತಿಷ್ಠಾನೆಯ ಸಂಬಂಧ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಾ. 8ರ ಶನಿವಾರದಂದು ಪರಿವಾರ ದೈವಗಳಾದ ಬ್ರಹ್ಮ, ಭೂತರಾಜ, ಚೌಡಿ, ಜಟ್ಟಿಗ, ಕ್ಷೇತ್ರಪಾಲ ದೈವಗುಡಿಗಳ ಪ್ರತಿಷ್ಠಾಪನೆ ಆಯೋಜಿಸಲಾಗಿತ್ತು.
ಮಾ.9ರ ಭಾನುವಾರದಂದು ಬೆಳಿಗ್ಗೆ ಕ್ಷೇತ್ರದ
ಶ್ರೀ ಶಂಕರೇಶ್ವರ, ಶ್ರೀ ಲಕ್ಷ್ಮೀನಾರಾಯಣ, ಶ್ರೀ ಹನುಮಂತ ದೇವರುಗಳ ಪುನರ್ ಪ್ರತಿಷ್ಟೆ ಸಮಾರಂಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಶ್ರೀ ಕ್ಷೇತ್ರ ಕರಿಮನೆ ದೇವರುಗಳ ಉತ್ಸವ ಹಂಗಾರುಕೊಡಿಗೆ ಜಲದುರ್ಗಿ ದೇವಸ್ಥಾನದವರೆಗೆ ಮತ್ತು ಸಂಜೆ ಆಶ್ಲೇಷ ಬಲಿ ಸೇವೆ ಏರ್ಪಡಿಸಲಾಗಿತ್ತು.
ಮುಖ್ಯ ಪುರೋಹಿತರಾದ ಬೆಂಗಳೂರಿನ ವೇದಬ್ರಹ್ಮ ಸುಧಾಕರ್ ಶರ್ಮರವರ ತಂಡ ಹಾಗೂ ಮಾರ್ಗದರ್ಶಕರು, ಗುರುಗಳಾದ ರಂಜದಕಟ್ಟೆಯ ವಿಶ್ವನಾಥ ಪೈಗಳ ಸಾರಥ್ಯ,ಶ್ರೀ ಕ್ಷೇತ್ರ ಕರಿಮನೆ ದೇವಾಲಯದ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿತು.

Categories
ಬೆಂಗಳೂರು

ಡ್ರಗ್ ಕೇಸ್‌ನಲ್ಲಿ ಮತ್ತೆ ಜೈಲು ಸೇರ್ತಾರಾ ನಟಿಯರು..!!

ಡ್ರಗ್ ಕೇಸ್‌ನಲ್ಲಿ ಮತ್ತೆ ಜೈಲು ಸೇರ್ತಾರಾ ನಟಿಯರು..!!

* ನಟಿ ರನ್ಯಾ ರಾವ್ ಬೆನ್ನಲ್ಲೇ ಸಂಜನಾ,ರಾಗಿಣಿಗೆ ಬಿಗ್ ಶಾಕ್
* ನಟಿಮಣಿಯರ ಭವಿಷ್ಯ ಸುಪ್ರೀಂ ಅಂಗಳದಲ್ಲಿ

NAMMUR EXPRESS NEWS
ಬೆಂಗಳೂರು : ನಟಿ ರನ್ಯಾ ರಾವ್ ಬೆನ್ನಲ್ಲೇ ಮತ್ತಿಬ್ಬರು ಸ್ಯಾಂಡಲ್‌ವುಡ್ ನಟಿಯರಿಗೆ ಮಾಸ್ಟರ್‌ಸ್ಟೋಕ್ ಹೊಡೆದಿದೆ. ಸ್ಯಾಂಡಲ್‌ವುಡ್ ಡ್ರಗ್ ಕೇಸಲ್ಲಿ ಇಬ್ಬರು ನಟಿಯರಿಗೆ ಸಿಸಿಬಿ ಬಿಗ್‌ಶಾಕ್ ನೀಡಿದೆ.
ನಟಿ ಸಂಜನಾ ಮತ್ತು ರಾಗಿಣಿ ವಿರುದ್ಧ ದಾಖಾಲಾಗಿದ್ದ ಎಫ್ ಐ ಆರ್ ರದ್ದಾಗಿತ್ತು. ಇದನ್ನ ಪ್ರಶ್ನಿಸಿ ಸಿಸಿಬಿ ಅಧಿಕಾರಿಗಳು ಸುಪ್ರೀಂಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಸಿಸಿಬಿ ಡ್ರಗ್ಸ್‌ ಕೇಸಲ್ಲಿ ಎಫ್ ಐ ಆರ್ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ನಟಿಮಣಿಯರು ಅರ್ಜಿ ಸಲ್ಲಿಸಿದ್ದರು.
ನಟಿ ಸಂಜನಾ, ರಾಗಿಣಿ ದ್ವಿವೇದಿ ಹಾಗು ವೀರೇನ್ ಖನ್ನಾ ಮೇಲಿದ್ದ ಎಫ್ ಐ ಆರ್ ರದ್ದು ಮಾಡಿ ಹೈಕೋರ್ಟ್‌ ಆದೇಶಿಸಿತ್ತು.
ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಸಮ್ಮತಿ ಬಳಿಕ ಸುಪ್ರೀಂಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಹೋಗಲು ಕಾನೂನು ಇಲಾಖೆ ಅಸ್ತು ಎಂದಿತ್ತು. ಆ ಬಳಿಕ ಗೃಹ ಇಲಾಖೆಯಿಂದ ಅನುಮತಿ ಪಡೆದು ಸುಪ್ರೀಂಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಸದ್ಯ ನಟಿಮಣಿಯರ ಭವಿಷ್ಯ ಸುಪ್ರೀಂ ಅಂಗಳದಲ್ಲಿದೆ.

Categories
ಹಾಸನ

ಹಾಸನ : ಮೈಕ್ರೋಫೈನ್ಸಾನ್ ಸಿಬ್ಬಂದಿ ಕಿರುಕುಳದಿಂದ ಮಹಿಳೆ ಆತ್ಮಹತ್ಯೆ

ಟಾಪ್ 3 ನ್ಯೂಸ್ ಹಾಸನ

ಹಾಸನ : ಮೈಕ್ರೋಫೈನ್ಸಾನ್ ಸಿಬ್ಬಂದಿ ಕಿರುಕುಳದಿಂದ ಮಹಿಳೆ ಆತ್ಮಹತ್ಯೆ
– ಹಾಸನ : ಗಾಂಜಾ ಸೊಪ್ಪು ಮಾರಾಟಕ್ಕೆ ಯತ್ನ : 10 ಕೆಜಿ ಗಾಂಜಾ ಸೊಪ್ಪು ಸಮೇತ ಇಬ್ಬರ ಬಂಧನ
– ಹಾಸನ : ಕೌಟುಂಬಿಕ ಕಲಹದಿಂದ ಕೆರೆಗೆ ಹಾರಿ ತಾಯಿ ಮಗ ಆತ್ಮಹತ್ಯೆ

NAMMUR EXPRESS NEWS
ಹಾಸನ : ಮೈಕ್ರೋಫೈನ್ಸಾನ್ ಸಿಬ್ಬಂದಿ ಕಿರುಕುಳ ಹಿನ್ನಲೆ ಮಹಿಳೆಯೋರ್ವ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಕೆಂಚಮ್ಮ (50) ಆತ್ಮಹತ್ಯೆಗೆ ಶರಣಾದ ಮಹಿಳೆ. ಜಿಲ್ಲೆಯ ಆಲೂರು ತಾಲ್ಲೂಕಿನ, ಹಳ್ಳಿಯೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಕೆಂಚಮ್ಮ BSS, EIF ಫೈನಾನ್ಸ್ ಕಂಪನಿಯಿಂದ ಎರಡು ಲಕ್ಷ ಸಾಲ ಮಾಡಿದ್ದರು. ಪ್ರತಿ ತಿಂಗಳು ಸರಿಯಾಗಿ ಹಣ ಕಟ್ಟುತ್ತಿದ್ದ ಮಹಿಳೆ ಈ ತಿಂಗಳು ಹಣ ಇಲ್ಲದ ಕಾರಣ ಕಂತು ಕಟ್ಟಿಲ್ಲ. ಮೈಕ್ರೋಫೈನಾನ್ಸ್ ಸಿಬ್ಬಂದಿ ಇಂದೇ ಹಣ ಕಟ್ಟುಬೇಕೆಂದು ಬಿಎಸ್‌ಎಸ್ ಫೈನಾನ್ಸ್ ಸಿಬ್ಬಂದಿ ಪಟ್ಟು ಹಿಡಿದು ಮನೆಯ ಬಳಿಯೇ ಕುಳಿತಿದ್ದ. ಇದರಿಂದ ಮನನೊಂದು ಕೆಂಚಮ್ಮ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಕೆಂಚಮ್ಮ ಸಾವಿನ ಸುದ್ದಿ ತಿಳಿದು ಮೈಕ್ರೋಫೈನಾನ್ಸ್ ಸಿಬ್ಬಂದಿಗಳು ಎಸ್ಕೇಪ್ ಆಗಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

– ಹಾಸನ : ಗಾಂಜಾ ಸೊಪ್ಪು ಮಾರಾಟಕ್ಕೆ ಯತ್ನ : 10 ಕೆಜಿ ಗಾಂಜಾ ಸೊಪ್ಪು ಸಮೇತ ಇಬ್ಬರ ಬಂಧನ

ಹಾಸನ : ಹೊರ ರಾಜ್ಯದಿಂದ ಅಕ್ರಮವಾಗಿ ಗಾಂಜಾ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗಾಂಜಾ ಸಮೇತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಒರಿಸ್ಸಾ ಮೂಲದ ಸಮೀರ್‌ ಪ್ರಧಾನ್‌ (47), ಗೀತಾ ಪ್ರಧಾನ್‌ (25) ಬಂಧಿತ ಆರೋಪಿಗಳು. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ, ರಾಮನಾಥಪುರದ ಐಬಿ ವೃತ್ತದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರು ದೊರೆತ ತಕ್ಷಣವೇ ಕಾರ್ಯ ಪ್ರವೃತರಾದ ಪಿಎಸ್‌ಐ ಗಿರೀಶ್, ಪ್ರಹ್ಲಾದ್, ಸಿಬ್ಬಂದಿಗಳಾದ ಎಸ್. ಅಭಿಷೇಕ್, ಗಿರೀಶ್, ಮಹೇಶ್, ಸೂರ್ಯ, ಅಭಿಷೇಕ್ ರವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ರಾಮನಾಥಪುರ ಪ್ರವಾಸಿ ಮಂದಿರದ ವೃತ್ತದಲ್ಲಿ ಗಾಂಜಾ ಸೊಪ್ಪು ಮಾರುತ್ತಿದ್ದ ಇಬ್ಬರನ್ನು ಮಾಲು ಸಮೇತ ಬಂಧಿಸಿ ೧೦ ಕೆಜಿ ೬೦೦ ಗ್ರಾಂ ತೂಕದಷ್ಟು ಗಾಂಜಾ ವಶಕ್ಕೆ ಪಡೆದು ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

– ಹಾಸನ : ಕೌಟುಂಬಿಕ ಕಲಹದಿಂದ ಕೆರೆಗೆ ಹಾರಿ ತಾಯಿ ಮಗ ಆತ್ಮಹತ್ಯೆ

ಹಾಸನ : ಕೌಟುಂಬಿಕ ಕಲಹ ಹಿನ್ನಲೆ ಕೆರೆಗೆ ಹಾರಿ ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಕಬ್ಬಳಿ ಗ್ರಾಮದಲ್ಲಿ ನಡೆದಿದೆ. ಜಯಂತಿ (60), ಭರತ್ (35) ಆತ್ಮಹತ್ಯೆಗೆ ಶರಣಾದ ತಾಯಿ-ಮಗ. ಭರತ್ ಕಳೆದ ಎಂಟು ತಿಂಗಳ ಹಿಂದಷ್ಟೇ ಅರಸೀಕೆರೆ ತಾಲ್ಲೂಕು, ಬಾಗೂರನಹಳ್ಳಿ ಗ್ರಾಮದ ಗೀತಾ ಎಂಬುವವರ ಜೊತೆ ಮದುವೆಯಾಗಿದ್ದ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇಲ್ಲದೆ ಪದೇ ಪದೇ ಜಗಳ ನಡೆಯುತ್ತಿದ್ದ ಕಾರಣಕ್ಕೆ ಗೀತಾ ಮನೆ ಬಿಟ್ಟು ಹೋಗಿದ್ದರು. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಎರಡು ಬಾರಿ ನಡೆದಿದ್ದ ರಾಜಿ-ಪಂಚಾಯ್ತಿ ಮಾಡಿದ್ದರು ಸಹ ಗೀತಾ ಗಂಡನ ಜೊತೆ ಇರದೆ ತವರು ಮನೆಗೆ ಹೋಗಿದ್ದರು. ಇದರಿಂದ ಮನನೊಂದಿದ್ದ ತಾಯಿ-ಮಗ ಕೆರೆಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದಾರೆ ಎನ್ನಲಾಗಿದೆ. ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.